ಸಂಬಂಧ…..

ಸಂಬಂಧ…..

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಮಗ ಪ್ರದೀಪ್ ನಿಂದ ಆ ಸುದ್ದಿ ತಿಳಿದ ಬಳಿಕ ಪಾರ್ವತಮ್ಮನ ಕಣ್ಣಿಗೆ ನಿದ್ರೆ ಸರಿಯಾಗಿ ಹತ್ತಿರಲಿಲ್ಲ. ಏಕೈಕ ಮಗನ ಮನಸ್ಸು ನೋಯಿಸಲೂ ಆಕೆಗೆ  ಇಷ್ಟವಿರಲಿಲ್ಲ. ಹಾಗಂತ ತನ್ನ ನಂಬಿಕೆಗಳನ್ನು ಬಿಟ್ಟುಬಿಡಲು ಆಕೆ ಸಿದ್ಧಳಿರಲಿಲ್ಲ, ಮತ್ತೆ ಮತ್ತೆ ಮಗನ ಮಾತುಗಳು ಅವಳ ಕಿವಿಗಳಲ್ಲಿ ಅನುರಣಿಸುತ್ತಿದ್ದವು.

ಇಷ್ಟಕ್ಕೂ ವಯಸ್ಸಿಗೆ ಬಂದ ಮಗ ಮದುವೆ ಯಾಗಲು ಹೊರಟಿದ್ದು ತಪ್ಪಲ್ಲ. ಆದರೆ ಮದುವೆ ವಿಷಯ ಬರುವಾಗ ಈ ಮಕ್ಕಳು ಯಾಕೆ ಹೆತ್ತ ಅಮ್ಮನನ್ನೂ ಮರೆತು ಬಿಡುತ್ತಾರೆ? ಒಂಬತ್ತು ತಿಂಗಳು ಹೊತ್ತು ಹೆತ್ತು ತಂದೆ ಸತ್ತ ಬಳಿಕ ಅಪ್ಪನ ಸ್ಥಾನದಲ್ಲಿ ನಿಂತು ಇವನನ್ನು ಬೆಳಿಸಿದ್ದೆನಲ್ಲಾ, ಮದುವೆಯಂತಹ ಪ್ರಮುಖ ತೀರ್ಮಾನವೊಂದನ್ನು ತೆಗೆದುಕೊಳ್ಳುವಾಗ ಅಮ್ಮನನ್ನು ಕೇಳಬೇಕೆಂದು ಇವನಿಗೆ ಏಕೆ ಅನಿಸಲಿಲ್ಲ? ಅಥವಾ ಕಾಲ ಬದಲಾಗಿದೆಯೇ?

ಪಾರ್ವತಮ್ಮನಿಗೆ ತನ್ನ ಪತಿಯ ನೆನಪಾಯಿತು., ತಮ್ಮದು ಹಿರಿಯರು ಒಪ್ಪಿ ನಡೆಸಿಕೊಟ್ಟ ಮದುವೆ. ಶಾಸ್ತ್ರೋಕ್ತವಾಗಿ ಪುರೋಹಿತರು ’ಮಾಂಗಲ್ಯ ತಂತುನಾಹೇನ’ ಹೇಳುವಾಗ ಅವರೆಗೆ ಅಪರಿಚಿತವಾಗಿದ್ದ ಕೈಗಳು ’ನೀನಿನ್ನು ನನ್ನವಳು’ ಎಂದು ಕೊರಳಿಗೊಂದು ತಾಳಿ ಬಿಗಿದು ಬಿಟ್ಟವಲ್ಲಾ, ತನಗೆ ಆ ಕೈಗಳ ಒಡೆಯನನ್ನು ಮುಖ ಎತ್ತಿ ನೋಡಲು ನಾಚಿಕೆ. ತನ್ನ ತಂಗಿ ’ನಿನ್ನ ರಾಜಕುಮಾರ ಚೆನ್ನಾಗಿದ್ದಾನೆ ಕಣೇ,” ಎಂದು ಕಿವಿಯಲ್ಲಿ ಉಸುರಿದಾಗ ಹೊಮಕುಂಡದ ಹೊಗೆಯೆಡೆಯಲ್ಲಿ ತಾನು ಕೆಂಪೇರಿದೆ. ಯಾವುದೋ ತಿಥಿ ನಕ್ಷತ್ರದ ಕಾರಣವೊಡ್ಡಿ ಅಪ್ಪ ’ಪ್ರಸ್ತ’ ವನ್ನು ಒಂದು ವಾರ ಮುಂದೊಡಿದಾಗ ಅದು ಸರಿಯೆಂದೇ ತನಗೆ ಅನಿಸಿತ್ತು . ಪ್ರಸ್ತದಂದು ತನ್ನನ್ನು ಸಿಂಗರಿಸಿ ಕೈಯಲ್ಲಿ ಹಾಲು ಕೊಟ್ಟು ಇವರು ಇರುವ ಕೋಣೆಗೆ ದೊಡಿ ಸುಮಂಗಲೆಯರು ನಗುನಗುತ್ತಾ ಬಾಗಿಲೆಳೆದುಕೊಂಡಾಗ ತಾನು ಸಂಕೋಚದ ಮುದ್ದೆಯಾಗಿ ಹೋಗಿದ್ದೆ. ಆದರೆ ಅಂದು ತಾಳಿ ಕಟ್ಟಿದ ಆ ಬಲಿಷ್ಠ ಕೈಗಳು ಮೈಮೇಲೆಲ್ಲಾ ಹರಿದಾಡಿ ಹಣೆ ಕೆನ್ನೆಗೆ ತುಟಿಗಳಿಗೆ ಪ್ರೇಮದ ಮುದ್ರೆ ಬಿದ್ದಾಗ ಈ ದೇಹ ಎಷ್ಟು ಉಲ್ಲಸಿತವಾಗಿತ್ತು. ಇಂತಹ ಒಂದು ಸಂಭ್ರಮ ಜೀವನದಲ್ಲಿ ಇದೆ ಎನ್ನೋದು ತನಗೆ ಮನವರಿಕೆ ಯಾದದ್ದೇ ಆಗ, ಅಂತಹ ಪತಿಗೆ ಹುಟ್ಟಿದ ಈ ಮಗ ಮದುವೆಯ ತೀರ್ಮಾನ ತಗೊಂಡ ಮೇಲೆ ಹೇಳುತ್ತಿದ್ದಾನಲ್ಲಾ ಇವನಿಗೇನಾಗಿದೆ?

ಪಾರ್ವತಮ್ಮ ತನ್ನ ಪತಿಯೊಡನೆ ಮಗನನ್ನು ಹೋಲಿಸಿ ನೋಡಿದಳು. ಅದೇ ತರ ಅದೇ ಅಂಗಸೌಷ್ಟವ, ಅದೇ ವಿಶಾಲವಾದ ಹಣೆ, ಅದೇ ಉದ್ದನೆಯ ಮೂಗು, ಹೀಗಿದ್ರು ಸ್ವಭಾವದಲ್ಲಿ ಯಾಕೆ ಇಷ್ಟೊಂದು ವ್ಯತ್ಯಾಸ? ತನ್ನ ಪತಿ ರಾಧಾಕೃಷ್ಣರು ಊರಿನವರ ಬಾಯಲ್ಲಿ ಮೇಷ್ಟ್ರು ಎಂದು ಕರೆಸಿಕೊಳ್ಳುತ್ತಿದ್ದರು. ಅದೆಷ್ಟು ಜನ ಅರ್ಜಿ ಬರೆಯಲು ಅಹವಾಲು ತೋಡಿಕೊಳ್ಳಲು ಅವರಲ್ಲಿಗೆ ಬರುತ್ತಿದ್ದರು? ತಾನಾದರೂ ಅವರನ್ನೆಲ್ಲ ಮನೆಯೊಳಗೆ ಸೇರಿಸದೇ ಮಡಿಯನ್ನು ಕಾಯ್ದುಕೊಳ್ಳುತ್ತಿದ್ದಳು. ’ಮನುಷ್ಯರೆಲ್ಲ ಒಂದೇ, ನಿನ್ನದು ತೀರಾ ಅತಿ ಯಾಯಿತು.’ ಎಂದು ಮೇಷ್ಟ್ರು ಎಷ್ಟೋ ಸಲ ಹೇಳಿದ್ದಿದೆ. ಆದರೆ ಆಗಲೂ ಅವರು ಕೋಪಿಸಿಕೊಂಡವರಲ್ಲ. ’ಮೇಷ್ಟ್ರು ಅಂದರೆ ಹೀಗೇ ಇರಬೇಕೇನೋ? ತನ್ನದು ಅಪ್ಪನಿಂದ ಕಲಿತಪಾಠ. ರಾಹುಕಾಲ ಗುಳಿಗ ಕಾಲ ನೋಡಿಯೆ ಕೆಲಸ ಪ್ರಾರಂಭಿಸೋದು. ಬೆಕ್ಕು ಅಡ್ಡ ಬಂದರೆ ನೂರೆಂಟು ಬಾರಿ ಮಹಾವಿಷ್ಣುವೇ ನಮಃ ಹೇಳೋದು. ಬಲಗಣ್ಣು ಅದುರಿದರೆ ದೇವರ ಕೋಣೆಗೆ ಹೋಗಿ ತುಪ್ಪದಾರತಿ ಎತ್ತುವುದು. ತಿಂಗಳ ರಜವೆಂದು ನಾಲ್ಕು ದಿವಸ ಹೊರಗೇ ಕೂರೋದು. ಇದೆಲ್ಲ ತನ್ನ ಪತಿಗೆ ಹಾಸ್ಯದ ವಿಷಯಗಳು. ಹಾಗಂತ ಯಾವುದಕ್ಕೂ ಅಡ್ಡ ಬಂದವರಲ್ಲ.

ಪಾರ್ವತಮ್ಮನಿಗೆ ತನ್ನ ಪತಿಯ ವಿನೋದಗಳ ನೆನಪಾಯಿತು. ಬೆಕ್ಕು ಅಡ್ಡ ಬಂತೆಂದು ತಾನು ನಾಮಸ್ಮರಣೆ ಮಾಡಹೊರಟಾಗ “ಪಾಪ ಆ ಬೆಕ್ಕಿನ ದುರಾದೃಷ್ಟ. ಇಂದು ಅದಕ್ಕೆ ಅದೇನು ಕಾದಿದೆಯೋ ಗ್ರಹಚಾರ”ಎಂದದ್ದುಂಟು. ಬಲಗಣ್ಣು ಅದುರಿತೆಂದು ತುಪ್ಪದ ಆರತಿ ಎತ್ತಹೋದಾಗ ಈ ಹೆಂಗಸರಿಗೆ ಬಲಗಣ್ಣೇ ಇರಬಾರದು ಎಂದು ಛೇಡಿಸಿದ್ದುಂಟು. ತಾನು ರಾಹುಕಾಲ, ಗುಳಿಗೆಕಾಲಗಳ ಮಾತೆತ್ತಿದಾಗ “ಬಡಪಾಯಿಗಳು, ಆ ಅಮೇರಿಕಾನ್ನರಿಗೆ, ಜಪಾನಿಯರಿಗೆ ಇದೆಲ್ಲ ಗೊತ್ತಿಲ್ಲದೆ ಎಷ್ಟು ಹಿಂದುಳಿದು ಬಿಟ್ಟರು” ಎಂದು ರೇಗಿಸುತ್ತಿದ್ದುಂಟು. ಅವರು ಹಾಗೆ ಹೇಳುವಾಗ ತನಗ್ಯಾಕೆ ಕೋಪ ಬರುತ್ತಿರಲಿಲ್ಲ? ಈ ಮಡಿ ಮೈಲಿಗೆ ಶಾಸ್ತ್ರ ಜಾತಕ ಪಂಚಾಂಗ ಎಲ್ಲ ಸುಳ್ಳೇ?

ಪಾರ್ವತಮ್ಮ ಯೋಚಿಸಿ ಯೋಚಿಸಿ ಹೈರಾಣಾದಳು. ಮಗ ಪ್ರದೀಪ್ ಇದ್ದಕ್ಕಿದ್ದಂತೆ ತಾನು ತನ್ನ ಪ್ರೊಫ಼ೆಸರೊಬ್ಬರ ತಂಗಿ ಯನ್ನು ಮದುವೆ ಯಾಗುತ್ತೇನೆಂದು ಹೇಳಿದನಲ್ಲಾ? ಅವಳು ಯಾರು? ಅವಳ ಜಾತಿ ಯಾವುದು? ಗೋತ್ರ ಯಾವುದು? ಅವಳ ಜಾತಕ ಹೇಗಿದೆ? ಈ ಪ್ರಶ್ನೆಗಳಿಗೆಲ್ಲ ಅವನದ್ದು ಮುಗುಳು ನಗೆಯ ಉತ್ತರ. “ಮನುಷ್ಯರದೆಲ್ಲಾ ಒಂದೇ ಜಾತಿಯಮ್ಮಾ, ಸಂತಾನಕ್ಕಾಗಿ ಮಾತ್ರ ಗಂಡು ಹೆಣ್ಣೆಂಬ ಬೇಧ ಎಂದು ಅವನು ನಕ್ಕಿದ್ದ. ಆದರೆ ತನ್ನ ಅಪ್ಪ”ಜಾತಿಗಳನ್ನು ದೇವರು ಸೃಷ್ಟಿಸಿದ್ದು ಜಾತಕಗಳನ್ನು ಮೀರಿ ಹೋಗಬಾರದು.”ಎಂದಿದ್ದರಲ್ಲಾ? ಅವರಷ್ಟು ಇವ ಬುದ್ಧಿವಂತನೇ? ಜಾತಕದ ಬಗ್ಗೆ ಕೇಳಿದಾಗ ಪ್ರದೀಪ್ ನಕ್ಕಿದ್ದ. ಜಾತಕಕ್ಕೆ ಯಾವುದು ಆಧಾರ? ಗರ್ಭದಾನವಾದ ಕಾಲವೇ? ಅಥವಾ ಮಗು ಹುಟ್ಟಿದ ಸಮಯವೇ? ಸಿಸೇರಿಯನ್ ಮಾಡಿ ಮಗುವನ್ನು ಹೊರಗೆ ತೆಗೆಯುತ್ತಾರಲ್ಲಾ ಅವರ ಜಾತಕದ ಗಳಿಗೆ ಯಾವುದು? ಇನ್ ಕ್ಯೂಬರೇಟರ್ ನಲ್ಲಿ ಇಟ್ಟು ಮಗುವಿಗೆ ಜೀವ ಬರಿಸುತ್ತಾರಲ್ಲಾ ಅದರ ಜಾತಕವನ್ನು ಹೇಗೆ ಸೃಷ್ಟಿಸುವುದು ಎಂದು ಕೇಳಿದ್ದ. ತಾನು ಏನೆಂದು ಉತ್ತರಿಸುವುದು? ಹೀಗೂ ಅವನು ಕೇಳಬಹುದೇ?

ಗತಿಸಿಹೋದ ತನ್ನ  ಪತಿಯನ್ನು ನೆನಪಿಸಿ ಪಾರ್ವತಮ್ಮ ವಿಚಲಿತಳಾದಳು. ಅವರಿರುತ್ತಿದ್ದರೆ ಈಗ ಹೀಗಾಗುತ್ತಿತ್ತೇ? ಒಂದು ವೇಳೆ ಇಂತಹ ಪರಿಸ್ಥಿತಿ ಅವರಿಗೆ ಎದುರಾಗಿರುತ್ತಿದ್ದರೆ ಅವರೇನು ಮಾಡುತ್ತಿದ್ದರು? ಬಹುಶ ಒಪ್ಪಿಕೊಂಡು ಬಿಡುತ್ತಿದ್ದರೇನೋ? ತನ್ನ ನಂಬಿಕೆಯನ್ನು ಅವರು ಪರಿಹಾಸ್ಯ ಮಾಡುತ್ತಿರಲಿಲ್ಲವೇ? ತಾನು ತಿಂಗಳ ರಜೆಯೆಂದು ಹೊರಗೆ ಕೂತಾಗ, ’ಮೈಲಿಗೆ ಅನ್ನುವುದು ಮನಸ್ಸಿಗೆ ಮಾತ್ರ ದೇಹಕ್ಕಲ್ಲಾ’ ಎನ್ನುತ್ತಿರಲಿಲ್ಲವೇ? ತಾವಿಬ್ಬರೂ ಜತೆಯಾಗಿ ಮಲ್ಲಿಕಾರ್ಜುನನ ದೇವಸ್ಥಾನಕ್ಕೆ ಮೊದಲ ಬಾರಿಗೆ ಹೋದಾಗ ’ಪಾದರಕ್ಷೆ ಹೊರಗೆ ಬಿಡಿ’ ಎಂಬ ಬೋರ್ಡು ನೋಡಿ ಅವರು ನಕ್ಕಿದ್ದರು. “ನಿನಗೆ ಗೊತ್ತಾ ಪಾರು, ಇವೆಲ್ಲಾ ಮನುಷ್ಯನೇ ಮಾಡಿಕೊಂಡ ರೂಢಿಗಳು. ನಾವು ಕೈ ಕಾಲು ತೊಳೆದು ಮಂದಿರಕ್ಕೂ , ಮಸೀದಿಗೋ ಚರ್ಚಿಗೋ ಹೋಗಬಹುದು. ಆದರೆ ಕ್ಷಣಕ್ಷಣಕ್ಕೂ ದೇಹದೊಳಗೆ ಉತ್ಪತ್ತಿಯಾಗುವ ಮಲ-ಮೂತ್ರ ಹೊತ್ತುಕೊಂಡೇ ಒಳಗೆ ಹೋಗುತ್ತೇವಲ್ಲಾ, ಅದಕ್ಕೇನು ಮಾಡೋದು”? ಅವರ ಪ್ರಶ್ನೆಗೆ ತಾನೇನು ಉತ್ತರಿಸ ಬೇಕೆಂದು ಗೊತ್ತಾಗದೇ ತಬ್ಬಿಬ್ಬಾದಾಗ ಅವರು ನಕ್ಕಿದ್ದರು. “ನಿನ್ನ ಅಪ್ಪ ಶಾಸ್ತ್ರಿಗಳು ನಿನಗೆ ಹೇಳಿಕೊಟ್ಟಿದ್ದೆಲ್ಲಾ ದೇಹದ ಮೈಲಿಗೆಯ ಬಗ್ಗೆ ಮಾತ್ರ. ದಾಸರ ಹಾಡು ಕೇಳಿದ್ದೀಯಾ? ಮಲವ ತೊಳೆಯಬಲ್ಲರಲ್ಲದೇ ಮನವ ತೊಳೆಯಬಲ್ಲರೆ? ಏನು ಹೇಳುತ್ತೀಯಾ?” ತಾನು ಏನು ಹೇಳುವುದಾದರೂ ಹೇಗೆ?” ಎಂದು ಉತ್ತರಿಸಿದ್ದಳು.

ತನ್ನ ಹೃದಯವನ್ನು ಯಾರಲ್ಲಿ ತೋಡಿಕೊಳ್ಳೋದು? ತನಗೆ ಮಾತಾಡಲು ಸಿಗುವವಳು ಸರಸ್ವತಿ ಒಬ್ಬಳೇ. ಅವಳು ಅವಳ ಪುಟಾಣಿ ಮಗಳನ್ನು ಯಾವಾಗಲೋ ಕರಕೊಂಡು ಬಂದದ್ದು. ಅದು ಸೀದಾ ಒಳಗೆ ನುಗ್ಗಿದ್ದು. ಇನ್ನೇನು ತಮ್ಮ ದೇವರಕೋಣೆ ಹೊಕ್ಕುತ್ತದೆ ಎಂದಾದಾಗ ತಾನು ಕಿರಿಚಿದ್ದು. ಸರಸ್ವತಿ ಒಳಗೆ ನುಗ್ಗಲಾರದೆ ಚಡಪಡಿಸಿದ್ದು. ತಾನು ಅಲ್ಲೇ ಇದ್ದ ಕಸಬರಿಕೆಯನ್ನು ಎತ್ತಿ ಮಗುವನ್ನು ಗದರಿಸಿದ್ದು. ಅದು ಜೋಲುಮುಖ ಹಾಕಿ ಅಳುತ್ತಾ ಸರಸ್ವತಿಯಲ್ಲಿಗೆ ಧಾವಿಸಿದಾಗ ಉರುಳಿ ಬಿದ್ದದ್ದು. ಓಡಿ ಬಂದ ಸರಸ್ವತಿ ಅದನ್ನು ಸಂತೈಸುವ ಗಳಿಗೆ ಯಲ್ಲಿ “ತಪ್ಪಾಯ್ತಮ್ಮ” ಎಂದದ್ದು. ಎಂತಹ ಮನಸ್ಸು ಅವಳದ್ದು! ಕೆಲವರನ್ನು ಮುಟ್ಟಬಾರದು ಎಂದು ಯಾರು ನಿಯಮ ರೂಪಿಸಿದರು? ತನ್ನ ಪತಿರಾಯಲ್ಲೊಮ್ಮೆ ಇದನ್ನು ಕೇಳಿದಾಗ ಅವರು ನಕ್ಕಿದ್ದರು. “ನಿನಗೆ ಹುಚ್ಚು ಪಾರು. ನಾಯಿ, ಬೆಕ್ಕುಗಳನ್ನು ಮನೆಯೊಳಗೆ ಬಿಟ್ಟುಕೊಳ್ಳುತ್ತೇವೆ, ಮುಟ್ಟುತ್ತೇವೆ. ಮನುಷ್ಯರನ್ನು ಮುಟ್ಟಬಾರದು ಅಂದರೆ ಏನು? ಅದು ತಪ್ಪು” ಎಂದಿದ್ದರು. ಆದರೆ ತನ್ನಪ್ಪ ಶಾಸ್ತ್ರಿಗಳು ಎಳವೆಯಲ್ಲಿಯೇ ತನಗೆ ಹೇಳಿಕೊಟ್ಟಿದ್ದು ಮಡಿ ಮೈಲಿಗೆಯೆ, ಅಸ್ಪೃಶ್ಯತೆಯ ಆಚರಣೆಯ ಪಾಠ. ಈ ಪ್ರದೀಪ್ ಈಗ ಮದುವೆಯಾಗಲು ಹೊರಟಿದ್ದು ಯಾರನ್ನು?

ಕಳೆದ ಸಂಜೆ ಸರಸ್ವತಿಯೊಡನೆ ಈ ವಿಷಯವನ್ನು ಅವರು ಪ್ರಸ್ತಾಪಿಸಿದ್ದರು. “ಜಾತಿ ಯಾವುದೆಂದು ಹೇಳುವುದಿಲ್ಲ ಮುಂಡೇದು! ಕಡೆ ಕೋಡಿ ಒಂದು ತಿಳಿಯದ ಯಾವಳನ್ನೋ ಸೊಸೆಯೆಂದು ಹೇಗೆ ಒಪ್ಪಿಕೊಳ್ಳೋದು? ದೇವರ ಕೋಣೆಗೆ ಅಡಿಗೆ ಮನೆಗೆ ಹೇಗೆ ಸೇರಿಸೋದು?” ಅದಕ್ಕೆ ಸರಸ್ವತಿ ಅನುನಯದ ಸ್ವರದಲ್ಲಿ ಹೇಳಿದ್ದಳು. “ನನಗೆ ಅದೆಲ್ಲಾ ಗೊತ್ತಾಗುದಿಲ್ಲಮ್ಮ.ಆದರೆ ಸಣ್ಣ ದನಿಗಳು ಓದಿದವರು. ಪ್ರಪಂಚ ಕಂಡವರು. ಅವರು ತಪ್ಪಲಾರರು ಎನಿಸುತ್ತದೆ. ಇಷ್ಟಕ್ಕೂ ಮುಂದೆ ಬಾಳಿಬದುಕಬೇಕಾದವರು ಅವರೇ ತಾನೇ?”

ಪಾರ್ವತಮ್ಮನಿಗೆ ತನ್ನ ಬಗ್ಗೆಯೇ ನಾಚಿಕೆಯಾಯ್ತು. ಹೌದಲ್ಲಾ ಏನೂ ಗೊತ್ತಿಲ್ಲದ ತಾನು. ಮುಟ್ಟಬಾರದ ಹೆಣ್ಣು ಸರಸ್ವತಿ ಹೇಳುತ್ತಿರುವುದು ಎಂತಹ ಲೋಕನ್ಯಾಯ? ಮೆಚ್ಚಿದವನಿಗೆ ಮಸಣ ಸುಖ. ತಾನಿನ್ನು ಹೆಚ್ಚೆಂದರೆ ಎಷ್ಟು ವರ್ಷ ಬದುಕಿಯೇನು? ಮಗನಿಗೆ ಇಷ್ಟ ಆದವಳನ್ನೇ ಮದುವೆಯಾದರೆ ಏನಂತೆ? ಮಗನೇ ಹೇಳಿದ್ದನ್ನಲ್ಲಾ “ಮದುವೆಯಂದರೆ ಮನಸುಗಳ ಮಿಲನ” ಎಂದು. ಗಂಡು ಹೆಣ್ಣು ಪರಸ್ಪರ ಮೆಚ್ಚಿದರೆ ಅದುವೇ ನಿಜವಾದ ಮದುವೆ. ಉಳಿದಿದ್ದೆಲ್ಲಾ ಆಚಾರ ಮಾತ್ರ. ಸರಿ. ಸರಸ್ವತಿ ನನಗೆ ಸರಿಯಾದ ದಾರಿಯನ್ನು ತೋರಿಸಿದ್ದಾಳೆ.

ಒಂದು ಖಚಿತ ತೀರ್ಮಾನಕ್ಕೆ ಬಂದ ಪಾರ್ವತಮ್ಮ ನವರು ಮರುದಿನ ಬೆಳಗ್ಗೆ ಪ್ರದೀಪ್ ನಲ್ಲಿ ಹೇಳಿದರು. “ಮಗು ನಿನ್ನ ಇಚ್ಛೆಗೆ ನಾನು ಅಡ್ಡ ಬರುವುದಿಲ್ಲ. ಅವಳನ್ನೇ ಮದುವೆಯಾಗು. ಎಲ್ಲ ಸಿದ್ಧತೆ ನಡೆಸು.” ಪ್ರದೀಪ್ ತನ್ನ ಕಣ್ಣನ್ನು ತಾನೇ ನಂಬದವ ನಂತೆ ಅಮ್ಮ ನನ್ನೇ ದಿಟ್ಟಿಸಿ ನೋಡಿ ಅಪ್ಪಿಕೊಂಡ.

ಮದುವೆಗೆ ಇನ್ನೇನು ನಾಲ್ಕುದಿನಗಳಿವೆ ಎನ್ನುವಾಗ ಸರಸ್ವತಿ ಪಾರ್ವತಮ್ಮನ ಬಳಿಗೆ ಬಂದು ಹೇಳಿದಳು. “ಅಮ್ಮ ನಿಮಗೆ ಗೊತ್ತುಂಟಾ? ನಮ್ಮ ಚಿಕ್ಕ ದನಿಯವರು ಮದುವೆ ಯಾಗುವ ’ರಮಾ’ನನಗೆ ದೂರದಲ್ಲಿ ಸಂಬಂಧಿ ಯಾಗಬೇಕು.”

ತಲೆ ತಿರುಗಿ ಬಂದಂತಾಗಿ ಪಾರ್ವತಮ್ಮ ಕುಸಿದು ಕೆಳಗೆ ಬಿದ್ದು ಬಿಟ್ಟರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಕ್ಕು ನಾಯಿ ಮೊಲ
Next post ಬೆಳ್ಳಗೆ

ಸಣ್ಣ ಕತೆ

 • ಗೋಪಿ

  ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

 • ಅಮ್ಮ

  ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

 • ಅಹಮ್ ಬ್ರಹ್ಮಾಸ್ಮಿ

  ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

 • ಪತ್ರ ಪ್ರೇಮ

  ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

 • ಬಾಳ ಚಕ್ರ ನಿಲ್ಲಲಿಲ್ಲ

  ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…