ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು.
ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್ವಾ! ಅವ್ವಾ! ರೊಟ್ಟಿ ಕೊಡಽ; ಹಸಿವಿ ಆಗೇದ” ಎಂದು ಚೀರಹತ್ತಿದವು. ಏನೋ ಧೇನಿಸುತ್ತ ಕಲ್ಲವ್ವ ಕೈಯೂರಿ ಎದ್ದಳು. ಅವಳ ಮುಖದಿಂದ ನಿಟ್ಟುಸಿರೊಂದು ಅವಳಿಗೆ ಗೊತ್ತಿಲ್ಲದೆ ಹೊರಟು ಅದೇ ಬೀಸುತ್ತಿರುವ ಬಿಸಿಗಾಳಿಯಲ್ಲಿ ಬೆರೆದುಹೋಯಿತು. ಮೆಲ್ಲನೆ ಒಳಗೆ ಹೋಗಿ ನೆಲುವಿನ ಮೇಲಿನ ಬುಟ್ಟಿಯನ್ನಿಳಿಸಿ ನೋಡಿದಳು. ಎರಡು ದಿನಗಳ ಹಿಂದಿನ ದುಡ್ಡಿನಳತೆಯ ನಾಲ್ಕಾರು ರೊಟ್ಟಿಯ ತುಣುಕುಗಳು ಬಿದ್ದಿದ್ದವು. ತಂದು ಮಕ್ಕಳ ಕೈಯಲ್ಲಿ ಒಂದೊಂದು ತುಣುಕು ಕೊಟ್ಟಳು. ಆ ಹುಡುಗರು ಅಂಥ ತುಣುಕುಗಳನ್ನು ಆನಂದದಿಂದ ಕಚ್ಚಿ ಕಚ್ಚಿ ತಿನ್ನ ಹತ್ತಿದವು.
ಅಷ್ಟರಲ್ಲಿ ಬಸಪ್ಪನು ಕೆಲಸದಿಂದ ಬಂದ.
“ಬರಲಾಕ ಇಷ್ಟ್ಯಾಕ ವೇಳೆ ಮಾಡ್ದಿ?”
ಕಲ್ಲವ್ವ ಜಗ್ಗಿದ ದನಿಯಿಂದ ಕೇಳಿದಳು.
“ಹಾಂಗಽ ಗೌಡರ ಮನೀಗೆ ಹೋದ್ನಿ; ಕೂಲಿಯ ನಾಲ್ಕಾಣೆ ತಗೊಂಡು ಬರಬೇಕಂತ.”
“ಹುಡ್ಗುರ ಹಸ್ತಿ ದಾರ ಮನ್ಯಾಗ…….. ಜೋಳಾನ ಹಾಕ ಅನ ಬಾರದಿತ್ತ?”
ನಡುವೆಯೇ ಮಾತು ಸೇರಿಸಿದಳು ಕಲ್ಲವ್ವ.
“ಹೂ೦! ಜೋಳಾ ಹಾಕ್ತಾರ ಇಂಥಾ ಧಾರಣಿಯೊಳಗ. ಈ ನಾಲ್ಕಾಣೆ ಕೊಡಬೇಕಾದ್ರ ‘ಜಳಕಾ ಮಾಡಿದ್ನಿ-ಪೆಟ್ಗಿ ಮುಟ್ಟುವ ಹಂಗಿಲ್ಲ. ಊಟಾ ಮಾಡಿ ಕೊಡತೇನ ಕೂಡ’ ಆ೦ತಾ ತಾಸಾನುತಾಸ ಕೂಡಿಸಿದ್ರು” ಸ್ವಲ್ಪ ಕೆರಳಿದ ಕಂಠದಿಂದ ನುಡಿದ ಬಸಪ್ಪ.
“ಇರ್ಲಿ; ಅವರ ಹೊಟ್ಟೆ ತಣ್ಣಗಾಗಲಿ! ಈ ಹೋರಿಯನ್ನರ ಯಾರ ತಗೋತಾರೇನ ಕೇಳ್ರಿ-ಅವ ಇವ ಕೂಡಿಸಿ ಸೇರ ಸೆಜ್ಜಿನಾರ ಬರ್ತಾವೇನ ನೋಡರಿ ಲಗೂನ” ಎಂದು ಹೇಳಿ ಮಣ್ಣಿನ ಕೊಡತಕೊಂಡು ನೀರಿಗೆ ಹೊರಟಳು ಕಲ್ಲವ್ವ.
“ನಿನ್ನಿ೦ದ ತಿನ್ನಾಕ ತುತ್ತ ರೊಟ್ಟಿಲ್ಲ, ಬರಿ ಹೊಟ್ಟಿ೦ದ ಹರಿವತ್ತಿಂದೂ ದುಡಿದ ದುಡಿದ ಕಳ್ವಳ್ಕಿ ಬಿಟ್ಟಿದ. ಬರೀ ಸಜ್ಜೀಯಿಂದ ಏನಾಗ್ತದ, ಹುಡುಗರಿಗೆ ನಮಗ? ಅಚ್ಛೇರ ಬಹಿಮುಕಾಳ ಹಿಂಡೀ ಉಳಿದ ಸಜ್ಜೀ ತರತೇನ.”
ಬಸಪ್ಪ ಹೊರೆ ನೆಗೆಯುತ್ತಾ ಒದರಿ ಹೇಳಿದ.
“ಏನಾರ ಮಾಡ್ಕೊಂಬಾ ಲಗೂನ.”
“ಹತ್ತಿ ಕಟಿಗಿ ಬೇಕ್ಯಾನ್ರಿ.”
ಒಂದು ದೊಡ್ಡ ಬಾಗಿಲ ಮುಂದೆ ನಿಂತು ಕೇಳಿದ ಬಸಪ್ಪ.
“ಹೊತ್ತಿಲ್ಲದ ಹೊತ್ತಿನೊಳಗ ಈಗ್ಯಾಕೋ ಬಸ್ಯಾ?”
ಉಂಡು ದಿಂಬಿಗೊರಗಿ ವೀಳೆಯನ್ನು ಮೆಲ್ಲುತ್ತ ಕುಳಿತ ರಾಯರ ಪ್ರಶ್ನೆಯಿದು!
“ನಮ್ಮಾಕಿ ಅಡವಿಗೆ ಹೋಗಿ ತಂದಳ್ರಿ ಈಗ……..”. ರಾಯರು ಉಗುಳಲೆಂದು ಹೊರಗೆ ಬಂದು, ಹೊರೆಯನ್ನು ನಿರೀಕ್ಷಿಸಿ,-
“ಎಲ್ಲಿಂದ ತಂದಳೋ ಇಂಥಾ ಹೊತ್ತಿನಾಗ? ಕುಲಕರ್ಣೇರ ಊರ ಬಡ್ಡಿ ಹೊಲದಿಂದ ತಂದಳೇನ ಮತ್ತ!” ಎಂದು ಗದರಿಸಿದರು.
“ಇರಲಿಕ್ಕಿಲ್ರಿಯಪ್ಪಾ…….. ಹರಿವತ್ತ ಹೋಗಿದ್ಳು, ಇನ್ನೂ ಹೊತ್ತಿನ ಗೊಂಡಿ ಒಡಿಯೋದಕ್ಕಿಂತ ಮೊದಲ. ದೂರ ಎಲ್ಲಿಂದ ಕಿತ್ತಿ ತಂದಿರಬೇಕ. ಹೊಟ್ಟಿಗೆ ನಿನ್ನಿ೦ದೂ ಏನೂ ಇಲ್ಲ; ಇದನ ಮಾರಿ ಏನ್ರ ಇಟ್ಟ ತಿನ್ನಾಕ ಆದೀತಂತ ತಂದಾಳ್ರಿ….”
“ಅದೆಲ್ಲಾ ಹೌದೋ. ಕುಲಕರ್ಣೇರ ಹೊಲದಾಗ ಇಂದೇ ಹತ್ತಿ ಕಟ್ಗಿ ಕಿತ್ತಿದಾರಂತ. ನನಗೊಂದ ಹತ್ತ ಹೊರಿ ಬೇಕಾದ್ರ ಒಯ್ದು ಒಗಿಸಿಕೊಳ್ರಿ ಅಂತ ಹೇಳಿದ್ರು. ಅದಕ್ಕ ಅಂತೇನಿ.” ಸ್ವಲ್ಪ ಯೋಚಿಸಿ, “ಹೂಂ! ಏನ ಹೇಳಿದಿ ಹೊರಿಗಿ?”
“ಯಪ್ಪ ನೀವಽ ನೋಡಿ ಏನಾದ್ರೂ ಬೇಡ್ರಲ್ಲ!”
“ನನಗೇನ ಈಗ ಉರೋಲ್ದ ಜರೂರಿ ಇಲ್ಲ; ಕುಲಕರ್ಣೇರ ಒಯ್ಯಿರಿ ಅಂತ ಹೇಳಿದಾರ ಅನಲಿಲ್ಲ ಈಗ….? ಆದರ ಮನೆ ಮುಟ್ಟ ಬಂದೀದಿ ಅಂದ ಮ್ಯಾಲ ಮರ ಆಣೆ ಕೊಡತೇನ ಒಗೆ.”
ಅಲ್ರಿ, ದೊಡ್ಡ ಹೊರೆ ಐತಿ. ನಾಲ್ಕ ಆಣೆಯನ್ನರ ಮಾಡ್ರಿ.”
ರಾಯರು ಹಣೆ ಏರಿಸಿ ಏನೋ ಸ್ವಲ್ಪ ವಿಚಾರಿಸಿ- “ಹೂಂ! ಇರ್ಲಿ ಒಗೆ ಹೋಗ. ನೀನಽ ಒಂದ ಆಣೆ ತಿಂದ್ರೂ ತಿನ್ನ ನಮ್ಮವನಽ ಇದ್ದಿದಿ….”
“ಹೌದ್ರಿಯಪ್ಪ ಬಡವನ ಹೊಟ್ಟಿಗೆ ಹಾಕಿದ್ರಿ” ಉಪಕೃತ ಸ್ವರದಲ್ಲಿ ನುಡಿದ ಬಸಪ್ಪ.
ರಾಯರು ಒಳಗೆ ಹೋಗಿ ಕೆಲ ಹೊತ್ತಿನ ಮೇಲೆ ರೊಕ್ಕ ತಕ್ಕೊಂಡು ಬಂದು,-
“ಏನೋ ಬಸ್ಯಾ ಕುಲಕರ್ಣೇರ ಹೊಲದಿಂದ ಹತ್ತೆಂಟ ಹೊರಿ ಹತ್ತಿ ಕಟ್ಗಿ ತಂದ ಒಗಿಯುವಿ ಏನೋ? ಚಹಾಕ್ಕೆ ನಾಲ್ಕ ದುಡ್ಡ ಕೊಡತೇನಿ” ಸಾವಿರ ರೂಪಾಯಿ ದಾನ ಕೊಡುವವರ ಠೀವಿಯಿಂದ ವಾಗ್ದಾನ ಮಾಡಿದರು, ರಾಯರು.
“ಎಲ್ಲಿ ಚಹಾರಿಯಣ್ಣಾ? ಹೊಟ್ಟೆ ಗೇನಾದ್ರ ಕಾಳಗೀಳ ಹಾಕಿ ಸಂಜಿನಾಗ ನಾನೂ ನಮ್ಮಾಕಿನೂ ಬಂದ ತಂದ ಒಗಿತೇವರಿ….”
“ಕಾಳ ಎಲ್ಲಿಂದ ತರಲ್ಯೋ? ರೊಕ್ಕಾನ ಬೇಕಾದರ ಎರಡ ದುಡ್ಡ ಹೆಚ್ಚ ಕೊಡತೇನಂತ…. ಈ ರೊಕ್ಕ ತಗೋ.” ಎಂದು ಮುಟ್ಟಿಗೆಯೊಳಗಿನ ರೊಕ್ಕವನ್ನು ಬಸಪ್ಪನ ಕೈಯಲ್ಲಿ ಮೇಲಿಂದ ಒಗೆದರು, ಬಸಪ್ಪನು ರೊಕ್ಕ ತಕೊಂಡು ನೋಡಿ,-
“ಧಣೇರ…ಮೂರೇ ಆಣೆ ಅವ ಅಲ್ರಿ?” ಅಂಜುತ್ತ ಅಂಜುತ್ತ ಹೀಗೆ ಕೇಳಿದ.
“ಹೌದೋ ನನಗೂ ಗೊತ್ತದ, ಮೂರ ಆಣೆ ಅವ ಅನ್ನೊದು… ಚಿಲ್ಲರೆ ಇಲ್ಲ ಈಗ. ಸಂಜಿಗೆ ಹೊರಿ ಒಗಿಯಲಿಕ್ಕೆ ಬರ್ತಿ ಅಲ್ಲ? ಆಗಽ ಇದೂ ಒಂದಾಣೆ ಕೊಡತೇನಂತ.”
ಬಸಪ್ಪನನ್ನು ಮುಂದಿನ ಕೆಲಸದ ಬಲೆಯಲ್ಲಿ ಹಿಡಿಯುವ ಉದ್ದೇಶದಿಂದ ಈ ಚಿಲ್ಲರೆಯ ಪುರಾಣವನ್ನು ಮುಂದಿಟ್ಟರು, ರಾಯರು.
ಇಲ್ರಿ! ನಿನ್ನಿಂದೂ ಹೊಟ್ಟಿಗೆ ಇಲ್ಲ. ಅದೂ ಒಂದಾಣೆ ಕೊಟ್ರ ಸೇರ ಸೆಜ್ಜಿನಾರ ಕೊಂಡಕೊಂಡ ಹೋಗತೇನ್ರಿ.”
ಎಂದು ಬಸಪ್ಪ ಅಂಗಲಾಚಬೇಕಾಯಿತು. “ಅದೇ ಮೂರ ಆಣೆ ಸಿಕ್ಕದ್ದ ನಿನ್ನ ಪುಣ್ಯ ಹೋಗ-ಈಗ ಚಿಲ್ಲರದ ತಾಪತ್ರಯ ಏಷ್ಟು ಅದ ಗೊತ್ತಿಲ್ಲ ನಿನಗ?” ಎಂದು ಕೇಳುತ್ತ ಒಳಗೆ ಹೋಗಿಬಿಟ್ಟರು, ರಾಯರು. ಬಸಪ್ಪನು ಸ್ವಲ್ಪ ಹೊತ್ತು ಅಲ್ಲೇ ನಿಂತು ರಾಯರು ರೊಕ್ಕ ತಕ್ಕೊಂಡು ಬರುವರೇನೋ ಎಂದು ದಾರಿ ಕಾಯ್ದನು. ಬಹಳ ಹೊತ್ತಾದರೂ ರಾಯರು ಬರದಿರಲು ಅ೦ಜು೦ಜುತ್ತ ಬಾಗಿಲಲ್ಲಿ ಇಣಿಕಿ ನೋಡಿ,-
“ಧಣೇರಽ” ಎಂದು ಕರೆದ ಕರುಣ ಸ್ವರದಿಂದ.
“ಒಗೆ ನಮ್ಮ ರೊಕ್ಕ, ತಗೊಂಡ ಹೋಗ ನಿನ್ನ ಹೊರಿ! ಈಗೇನ ಉರುವಲ ಬೇಕಾದಷ್ಟು ಸಿಗತಾವ” ಎಂದು ವರ್ತಮಾನ ಪತ್ರದಲ್ಲಿ ದೃಷ್ಟಿ ಇಟ್ಟ ರಾಯರು ಗುಡುಗಿದರು.
ಬಸಪ್ಪನ ಕೈಯಲ್ಲಿ ಏಳಾಣೆ, ಒಂದೆರಡು ವಾರಗಳಲ್ಲಿ ಅವನ ಹತ್ತರ ಇಷ್ಟು ಹಣವೆಂದೂ ಆಗಿರಲಿಲ್ಲ. ಇಂದೇನೋ ಸುದೈವ. ಹೊಟ್ಟೆ ತುಂಬ ಅಲ್ಲ- ಹೊಟ್ಟೆಗೆ ಹತ್ತುವಷ್ಟು ತಿನ್ನಲು ಸಿಕ್ಕುವದೆಂದು ಸ್ವಲ್ಪ ಅರಳಿದ ಮುಖದಿಂದಲೇ ಅಂಗಡಿಯಲ್ಲಿ.
“ಅಚ್ಛೇರ ಹಿಂಡಿ ಕೊಡ್ರಿ!”
ಎಂದು ಕೇಳಿದ. ಅಂಗಡಿಕಾರ ಯಾರೊಡನೆಯೇ ಹರಟುವದರಲಿ ಮೈ ಮರೆತಿದ್ದ. ಬಸಪ್ಪ ಬೇಡಿದುದು ಕೇಳಿಸಲಿಲ್ಲವೇನೋ! ಹಾಗೇ ಮಾತು ಮುಂದೊರಿಸಿದ. ಹತ್ತು ನಿಮಿಷಗಳಷ್ಟು ಕಳೆದಿರಬೇಕು, ಬಸಪ್ಪ ಎರಡನೆಯ ಅಂಗಡಿಗೆ ಹೋಗಬೇಕೆಂದು ಒಮ್ಮೆ ವಿಚಾರಿಸಿದ. ಆದರೆ ಆ ಹಳ್ಳಿಯಲ್ಲಿ ಆ ಅಂಗಡಿಯನ್ನುಳಿದರೆ ಬೇರೆ ಕಡೆಗೆ ನೆಲಗಡಲೆಯ ಹಿಂಡಿ ಸಿಕ್ಕುವಂತಿರಲಿಲ್ಲ. ಬರೇ ಸೆಜ್ಜೆಯನ್ನೊಯ್ದರೆ ಹೊಟ್ಟೆಗೆ ಸಾಲುವಂತಿಲ್ಲ. ಏನು ಮಾಡಬೇಕೆಂಬ ಚಿಂತೆಯಲ್ಲಿ ಸ್ವಲ್ಪ ಕಾಲ ಕಳೆಯುವದಕಲ್ಲಿ ಯಾರೋ ಒಬ್ಬರು ಅಂಗಡಿಗೆ ಬಂದರು.
“ಉತ್ತತ್ತಿ ಹ್ಯಾಗ ಕೊಡುತೀರಿ?”
ಬಂದವರು ಕೇಳಿದರು. ಅಂಗಡಿಕಾರನು ಕೂಡಲೆ ಬೆಚ್ಚಿ ಬಿದ್ದವನಂತೆ ಎದ್ದು,-
“ಈಗ್ಯಾಕರೀ ಉತ್ತತ್ತಿ ಗೌಡರ? ಒಂದೂಕಾಲು ರೂಪಾಯಿಗೆ ಸೇರು.” ಎಂದು ಹೇಳಿದ.
“ಎರಡು ಸೇರ ಕೊಳ್ತೇನಿ, ಒಂದು ರೂಪಾಯಿ ಎರಡಾಣೆ ಮಾಡಿ ಕೊಟ್ಟು ಬಿಡೊ?”
ಅಂಗಡಿಕಾರನು ಆರಿಸಿ ತೂಕ ಹಾಕುತ್ತ,-
“ಯಾಕರೀ ಬಹಳ ಒಯ್ಯುತ್ತೀರಿ?” ಎಂದು ಕೇಳಿದ.
“ಏನೋ ನಿನ್ನೆ ತಿರಗಾಡ್ತ ಸ್ಟೇಶನ್ನಿಗೆ ಹೋಗಿದ್ದೆ, ಸಹಜ ತೂಕ ಮಾಡಿಸಿಕೊಂಡೆ. ಮೊದಲಿನಕ್ಕಿಂತ ಎರಡು ಪೌಂಡು ಕಡಿಮೆಯಾಯ್ತು! ಒಂದು ತಿಂಗಳಲ್ಲಿ ಮೊದಲಿನಷ್ಟು ತೂಕ ಏರಿಸೋದು ಎಂದು ನಿಶ್ಚಯಿಸಿದ್ದೇನೆ.”
ಎಂದು ಮಾತು ಮುಗಿಸಿ, ಬಿಂಕದಲ್ಲಿಯೇ ಉತ್ತತ್ತಿ ತಕ್ಕೊಂಡು ಹೋದರು. ಅಂಗಡಿಕಾರನು ಏನೂ ಕೇಳದೆ ಕೀರ್ದಿಯಲ್ಲಿ ಲೆಕ್ಕ ಬರೆದಿಟ್ಟುಕೊಂಡ. ಇದೇ ಸಂಧಿಯೆಂದು ಅರಿತು,-
“ಅಚ್ಛೇರ ಹಿಂಡಿ ಕೊಡ್ರಿ!” ಎಂದು ಬಸಪ್ಪ ದೈನ್ಯದಿಂದ ಮತ್ತೊಮ್ಮೆ ಕೇಳಿದ.
“ಹೊಂ!” ಎಂದು ಅಂಗಡಿಕಾರನು ಆಲಸ್ಯದಿಂದ ಎದ್ದು ಹಿಂಡಿಯನ್ನು ತೂಗಿ ತಂದು,-
“ತಗೋ!” ಎಂದ.
ಬಸಪ್ಪ ಉಟ್ಟ ದೋತರ ಉಡಿಯಲ್ಲಿ ತಕ್ಕೊಂಡು ಚವಲಿಯೊಂದನ್ನು ಕೊಟ್ಟ.
“ನಿನಗೆ ಕೊಡಲಿಕ್ಕೆ ಎರಡು ದುಡ್ಡ ಇಲ್ಲಲೋ? ಮತ್ತೇನಾದರ ತಗೊ!”
ಪೆಟ್ಟಿಗೆಯಲ್ಲಿ ನೋಡದೆ ಅ೦ಗಡಿಕಾರ ಹೇಳಿದ. “ ಸಜ್ಜಿ ಬೇಕರಿಽ”
“ಸಜ್ಜಿ ನಮ್ಮಲ್ಲಿಲ್ಲ. ಬಿಳಿ ಗೋದಿ ಅವ, ತಗೋ ಬೇಕಾದರ, ಸಜ್ಜಿ ಧಾರಣಿ ಗೋದಿ ಧಾರಣಿ ಒಂದೇ ಅದ ಚಪಾತಿ ಮಾಡಿಸಿ ಹೊಡಿಯಲ್ಲ!”
“ಒಲ್ಲಿರಿ! ಹಿಂಡೀ ಹಾಕಿ ಬೀಸಲಿಕ್ಕೆ ಬರೂದಿಲ್ಲ. ಈ ಆಣೆ ತಗೊಳ್ಳಿರಿ. ಆ ಅಂಗಡೀಲಿ ಸಜ್ಜಿ ತಗೊಂಡ ಬರತಾ ಎರಡ ದುಡ್ಡ ಕೊಟ್ಟ ಹೋಗ್ತೇನಿ.” ಎಂದು ಒಂದಾಣೆ ಕೊಟ್ಟ.
“ಇಲ್ಲದ ಒ೦ದ ಮಾಡಲಿಕ್ಕೆ ಹಚ್ಚತಿ, ಬಿಸಿಲ ಹೊತ್ತಿನಾಗ, ಸುರವ ಅಲ್ಲೇ ಕಟ್ಟಿ ಮ್ಯಾಲ, ಬರುವಾಗ ಎರಡ ದುಡ್ಡ ಕೊಟ್ಟ ಒಯ್ಯ೦ತ.”
ಕೆರಳಿ ಕೈಯಲ್ಲಿಯ ಚವಲಿಯನ್ನು ಒಗೆದ ಅಂಗಡಿಕಾರ, ಬಸಪ್ಪ ಸಜ್ಜಿ ಕೊಳ್ಳಲೆಂದು ಮತ್ತೊಂದು ಅಂಗಡಿಗೆ ಹೋದ. ಅಲ್ಲಿಯ ಚಿಲ್ಲರೆ ಇಲ್ಲ ಇಲ್ಲವೆಂದು ಹೇಳಿದ್ದರಿಂದ ಉಪಾಯಗಾಣದೆ, ಆರಾಣೆಯ ಎಲ್ಲ ಸಜ್ಜಿಯನ್ನು ಕೊಂಡು ಹಿಂತಿರುಗಿ ಮೊದಲಿನ ಅಂಗಡಿಗೆ ಬಂದು,-
“ಅಲ್ಲೂ ಇಲ್ರಿ! ಎರಡು ದುಡ್ಡಿನ ಹಿಂಡೀನ ತಕ್ಕೊಳ್ರಿ!” ಎಂದ ನಮ್ರ ಸ್ವರದಿಂದ.
“ಹೂಂ! ಅದಕ್ಕಽ ಅನಲಿಲ್ಲೇನ ಉಪದ್ರವ ಕೊಡುತೀ ಅಂತ.” ಎಂದು ಅರ್ಧಕ್ಕಿಂತ ಹೆಚ್ಚಿಗೇನೇ ಹಿಂಡಿಯನ್ನು ತಕ್ಕೊಂಡು ಒಳಗೆ ಹೋದ ಅಂಗಡಿಕಾರ.
“ಹೀಗ್ಯಾಕ್ರಿ, ಅಷ್ಟಾಕ ತಗಿತೇರಿ?” ಎಂಬ ಹಸಿದ ಹೊಟ್ಟೆಯವನ ಮರುಕ ಕೇಳಲಿಲ್ಲವೇನೋ ಅವನಿಗೆ!
ಹೊತ್ತು ಹೊರಳಿತು. ಮನೆಯಲ್ಲಿ ಮಕ್ಕಳು ಹಸಿದು ಕಳವಳಿಸುತ್ತಿರ ಬೇಕು. ಇದನ್ನು ಬೀಸಿ ಹೊಟ್ಟೆಗೆ ಕೂಳುಗಾಣಬೇಕಾದರೆ ಇನ್ನೂ ಒಂದು ತಾಸು ಬೇಕು. ಎಂದು ಲಗುಬಗೆಯಿಂದ ಹಿಂಡಿಯನ್ನು ಉಡಿಯಲ್ಲಿ ಹಾಕಿ ಕೊಂಡು, ಬಸಪ್ಪ ಮನೆಯ ಹಾದಿ ಹಿಡಿದ. ಮನೆಯ ಸಮೀಪಕ್ಕೆ ಬರುವಷ್ಟರಲ್ಲಿ,-
“ಕಳ್ಳ ಸೂ…ಮಗ ಎಲ್ಲಿ ಹೋದಾ? ಇಷ್ಟ ಲಗೂನೆ ಮಾರಲಿಕ್ಕೆ ಕಳಿಸಿ ಬಿಟ್ಟಿದಿ? ಯಾರ ಕಿತ್ತಿ ತಾ ಅಂದಿದ್ರೂ ನಮ್ಮ ಹೊಲದಿಂದ…….. ಹುಚ್ಚ ಭೋಸ…. ಈಗೇನ ಮೊದಲಿನಂಗ ಅಗ್ಗ ಧಾರಣಿ ಅದ?”
ಎಂದು ಯಾವನೋ ಒಬ್ಬ ರೈತನು ಗುಡಿಸಲಿನ ಮುಂದೆ ನಿಂತು, ಬೈಗಳ ಮಳೆಗರೆಯುವದನ್ನು ಕೇಳಿ ಬಸಪ್ಪನ ಕೈ ಕಾಲೇ ತಣ್ಣಗಾದುವು. ಏಳಲಾರದ ಕಾಲುಗಳನ್ನು ಕಿತ್ತಿಟ್ಟು ಮೆಲ್ಲನೆ ಗುಡಿಸಲಿನ ಕಡೆಗೆ ಬಂದ. ಬಸಪ್ಪನನ್ನು ಕಂಡೊಡನೆಯೇ ರೈತನ ಕೋಪಾಗ್ನಿಗೆ ಸವುದೆ ಸಿಕ್ಕಂತಾಯ್ತು
“ಎಷ್ಟಕ ಮಾರಿ ಮಗನ ಹೊರಿ?”
ಎಂದು ಗದ್ದರಿಸುತ್ತ ಮೈ ಮೇಲೆ ಏರಿಹೋಗಿ ಧೋತರ ಹಿಡಿದು ಎಳೆದ. ಬಸಪ್ಪನು ಉಟ್ಟುಕೊಂಡ ಧೋತರವು ತೀರ ಹಳೆಯದೂ ಕೊಳಕೂ ಆದುದರಿಂದ ಕೂಡಲೆ ಹರಿದು ಕಾಳುಗಳೆಲ್ಲ ನೆಲಕ್ಕೆ ಬಿದ್ದುವು. ಬೈಗುಳಿನಿಂದಲೇ ಬೆಂದು ಬೆಂಡಾದ ಬಸಪ್ಪನ ಮುಖವು ಧೋತರ ಹರಿಯಿತೆಂಬ ಚಿಂತೆಯಿಂದ ಸುಟ್ಟ ಸುಣ್ಣದ ಹರಳಿನಂತಾಯಿತು. ಬಸಪ್ಪನ ನಡುವಿಗೆ ರೊಕ್ಕವಿರಬೇಕು, ಅವನ್ನು ತಕ್ಕೊಳ್ಳಬೇಕೆಂಬ ರೈತನ ಬಯಕೆಯು ಸಫಲ ವಾಗದ್ದರಿಂದ ಅವನ ಕಣ್ಣುಗಳು ಕೆಂಪಗೆ ಕೆಂಡದಂತಾದುವು. ಗಿಡದ ಮರೆಯಲ್ಲಿ ಅಡಗಿನಿಂತ ಚಿಕ್ಕ ಹುಡುಗರು-ಬಸಪ್ಪನ ಮಕ್ಕಳು ಹಸಿವೆಗಾಗಿ ಹೆದರಿಕೆಯನ್ನು ಬಿಟ್ಟು ಓಡಿಬಂದು ನೆಲದಮೇಲೆ ಬಿದ್ದ ಹಿಂಡಿಯ ಚೂರುಗಳನ್ನು ಆರಿಸಿ ತಿನ್ನ ಹತ್ತಿದವು. ಸೆಜ್ಜೆಯೆಲ್ಲ ಮಣ್ಣು ಪಾಲಾದವೆಂದು ಕಲ್ಲವ್ವನು ಗುಡಿಸಲಿನೊಳಗಿಂದ ಹರಕು ಮರವೊಂದನ್ನು ತಂದು ಬಳಿದು ತುಂಬುತ್ತಿದ್ದಳು. ಆಗ ತಮ್ಮ ಅಸಹಾಯ ಸ್ಥಿತಿಯನ್ನು ನೆನೆದು ಅವಳ ಕಣ್ಣು ಕುಣಿಕೆ ಯಲ್ಲಿ೦ದ ಎರದು ದೊಡ್ಡ ಹನಿಗಳು ಗಲ್ಲದ ಮೇಲೆ ಉರುಳಿದವು” ಅದೇ ಮುಳುಗುತ್ತಿರುವ ಸೂರ್ಯನ ಮಂದ ಪ್ರಕಾಶದಲ್ಲಿ ಬಸಪ್ಪನೆಗೆ ಆ ಕಣ್ಣೀರು ರಕ್ತದ ಹನಿಗಳಂತೆ ಕಂಡವು.
*****


















