ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯನ್ನು ಕಂಡು ಇವನು ಹಲ್ಲೋ ಎಂದು ಜೋರಾಗಿ ಕೂಗಿದ್ದು, ಅವಳು ಇವನನ್ನು ನೋಡಿ ತನ್ನ ಕಾರ್‍ಯದಲ್ಲಿ ತೊಡಗಿದ್ದು, ಅವನು ತನ್ನ ಕಣ್ಣು ಮಿಟುಕಿಸದೇ ಎವೆಯಿಕ್ಕದೆ ಅವಳನ್ನು ನೋಡುತ್ತಿದ್ದದ್ದು, ಅರ್‍ಧ ತಾಸಿನವರೆಗೂ ಆಕೆ ಸರ್‍ಕಸ್ಸು ಮಾಡಿ ಒಳ ಸೇರಿದ್ದು, ಆಕೆಯ ಭ್ರಾಮಾ ಲೋಕದಲ್ಲಿ ಮುಳುಗಿದ್ದ ಅವನನ್ನು ಸರ್‍ಕಸ್ಸಿನ ಮಾಲಿಕ ಬಂದು ಅಲುಗಾಡಿಸಿದಾಗಲೇ ಅವನು ವಾಸ್ತವ ಲೋಕಕ್ಕೆ ಮರಳಿ-
“ಅಂ! ಯಾರು? ಬಿಡಿ ನನ್ನ” ಎಂದ.
“ಅಲ್ಲಯ್ಯ ಸರ್‍ಕಸ್ಸು ಮುಗಿದು ಬಹಳ ಹೊತ್ತಾಯಿತು. ಎರಡನೇ ಷೋ ಕೂಡ ಇನ್ನೇನು ಆರಂಭವಾಗುತ್ತದೆ. ಎದ್ದು ಹೊರಗೆ ಹೋಗು” ಎಂದಾಗ ಆಗಲೇ ಹೊರಗಡೆ ಟಿಕೇಟ್ ಕೊಡುತ್ತಿದ್ದರು. ಅವನು ತಕ್ಷಣ ಹೊರ ನಡೆದು ಎರಡನೇ ಷೋಗೆ ಟಿಕೇಟ್ ತೆಗೆದುಕೊಂಡು ಮತ್ತೊಮ್ಮೆ ಸರ್‍ಕಸ್ಸನ್ನು ನೋಡಲು ಅದೇ ಸ್ಥಳದಲ್ಲಿಯೇ ಬಂದು ಕುಳಿತ.
ಸರ್‍ಕಸು ಆರಂಭವಾಯಿತು ಅವಳು ಯಾವಾಗ ಹೊರ ಬರುವಳೋ ಎಂದು ಇವನು ಚಡಪಡಿಸುತ್ತಿದ್ದಂತೆ ಸರ್‍ಕಸ್ಸಿನ ಅಖಾಡವನ್ನು ಪ್ರವೇಶಿಸಿದಳು. ಅವಳು ಲಾಗಾ ಹಾಕಿ ಅದೇ ಸ್ಥಳಕ್ಕೆ ಬಂದು ನಿಂತಳು. ಇವನು ಪುನಃ ಹಲ್ಲೋ ಎಂದು ಕೈಬೀಸಿ ವಿಷ್ ಮಾಡಿದ, ಅವಳ ದೃಷ್ಟಿ ಇವನ ಮೇಲೆ ಬಿತ್ತು. ಮುಖವರಳಿತು. ಪುಳುಕಿತಗೊಂಡ. ಅವನ ಕಣ್ಣು ಅವಳನ್ನು ನೋಡುತ್ತಲೇ ಇತ್ತು. ಮರಳಿ ಹೋಗುವಾಗ ಒಮ್ಮೆ ತಿರುಗಿ ಆ ಕುಡಿ ಮೀಸೆ ತರುಣನನ್ನು ನೋಡಿ ಅವಳು ಪರದೆಯಾಚೆಗೆ ಮರೆಯಾದಳು. ಇವನಿಗೆ ತಡೆಯಲಾರದಷ್ಟು ಸಂತೋಷವಾಯಿತು. ಸರ್‍ಕಸ್ಸು ಮುಗಿಯಿತು. ಎಲ್ಲರೂ ಹೋದರು. ಒಲ್ಲದ ಮನಸ್ಸಿನಿಂದ ಇವನು ಕೂಡ ಮನೆಗೆ ನಡೆದ.
ಸರಿ ರಾತ್ರಿಯಾಗಿತ್ತು. ಮನೆಯಲ್ಲಿ ಎಲ್ಲರೂ ಮಲಗಿದ್ದರು. ತಾಯಿ ಮಾತ್ರ ಊಟ ಮಾಡದೇ ಮಗನಿಗಾಗಿ ಕಾಯುತ್ತಿದ್ದಳು. ತಾಯಿ ಮಗನಿಗೆ ತಟ್ಟೆ ಇಟ್ಟು ಅನ್ನಸಾರು ಬಡಿಸಿದಳು. ಅವನಿಗೆ ಊಟ ಸೇರದೇ ಅರ್‍ಧಕ್ಕೆ ಕೈತೊಳೆದು ಎದ್ದ. ತಾಯಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸದೇ ಹೋಗಿ ಮಲಗಿದ. ಎತ್ತ ಹೊರಳಿದರೂ ಆಕೆಯದ್ದೇ ನೆನಪು. ಅವಳು ಸರ್‍ಕಸ್ಸಿನ ಅಖಾಡದಲ್ಲಿ ಮೈಮುರಿದು ಮಾಡಿದ ಸರ್‍ಕಸ್ಸು ಅವನ ಕಣ್ಣ ಮುಂದೆ ಒಂದೊಂದಾಗಿ ಬರತೊಡಗಿದವು. ಅವನಮ್ಮ ಬಂದು ಎಚ್ಚರಿಸಿದಾಗಲೇ ಅವನಿಗೆ ಎಚ್ಚರವಾದದ್ದು. ಅವನಿಗೆ ಯಾವಾಗಲೋ ನಿದ್ದೆ ಬಂದದ್ದು ಗೊತ್ತಿರಲಿಲ್ಲ.
ಬೆಳಿಗ್ಗೆ ತನ್ನೆಲ್ಲ ಕೆಲಸ ಮುಗಿಸಿ ಕಾಲೇಜಿಗೆ ನಡೆದ, ಯಾರೊಂದಿಗೂ ಮಾತಿಲ್ಲ. ಮೌನವಾಗಿದ್ದ, ಒಬ್ಬನೇ ಇರಲು ಪ್ರಯತ್ನಿಸುತ್ತಿದ್ದ. ತರಗತಿಗೆ ಹೋದಾಗಲೂ ಪಾಠವೂ ರುಚಿಸಲಿಲ್ಲ. ಅಲ್ಲಿಯೂ ಬಹಳ ಹೊತ್ತು ಕೂರಲಾಗದೇ ಹೊರ ಬಂದು ಕಾಲೇಜು ಕ್ಯಾಂಟೀನಿಗೆ ಹೋಗಿ ಒಂದು ಲೋಟ ಕಾಫಿ ಹೀರಿ ಕಾಲೇಜು ಆವರಣದಲ್ಲಿದ್ದ ಹೊಂಗೆ ಮರದ ನೆರಳಿನಲ್ಲಿ ಕುಳಿತುಕೊಂಡ. ಮತ್ತದೇ ನೆನಪುಗಳು ಸ್ಮೃತಿ ಪಟಲದ ಮೇಲೆ ಬರತೊಡಗಿದವು. ಅಲ್ಲಿಯೂ ಹೆಚ್ಚು ಹೊತ್ತು ಕೂರಲಾಗದೇ ಮನೆಗೆ ಹೋದಾಗ ಸಂಜೆ ನಾಲ್ಕು ಘಂಟೆಯಾಗಿತ್ತು. ಅಮ್ಮ ಊಟ ಹಾಕಿದಳು. ಹೆಚ್ಚು ಊಟ ಮಾಡಲಾರದೇ ಅರ್‍ಧಕ್ಕೆ ಬಿಟ್ಟು ಎದ್ದ. ಏನೋ ರಾತ್ರಿಯೂ ಊಟ ಮಾಡಲಿಲ್ಲ. ಈಗಲೂ ಇಲ್ಲ. ಹೀಗೆ ಊಟ ಬಿಟ್ಟರ ಗತಿ ಏನು? ಎಂದು ಅವನಮ್ಮ ಕೇಳಿದರೆ ಅದಕ್ಕವನು ಮಾತನಾಡದೇ ಹೊರ ನಡೆದ. ಸರ್‍ಕಸ್ಸಿನ ಟೆಂಟಿನ ಬಳಿ ಬಂದ. ಮೊದಲನೇ ಷೋಗೆ ಇನ್ನೂ ಕೊಂಚ ಸಮಯವಿತ್ತು. ಆ ಸಂದರ್‍ಭದಲ್ಲಿ ಟೆಂಟಿನ ಸುತ್ತಲೂ ಓಡಾಡಿದ. ಎಲ್ಲಿಯಾದರೂ ಅವಳ ಮುಖ ಕಂಡಿತೆಂದು ಆಚೀಚೆ ನೋಡಿದ, ಅವಳು ಕಾಣಲಿಲ್ಲ. ಅಲ್ಲಿಯೇ ಇದ್ದ ಹೂವಿನ ಅಂಗಡಿಯಲ್ಲಿ ಅರ್‍ಧ ಅರಳಿದ ಗುಲಾಬಿ ಮೊಗ್ಗೊಂದನ್ನು ಖರೀದಿಸಿದ. ಅಷ್ಟರಲ್ಲಿಯೇ ಟಿಕೇಟ್ ಕೊಡಲಾರಂಭಿಸಿದರು. ತಾನೂ ಟಿಕೇಟ್ ಪಡೆದು ಗುಲಾಬಿ ಹೂವಿನೊಂದಿಗೆ ಒಳನಡೆದು ಹಿಂದೆ ಎಲ್ಲಿ ಕುಳಿತಿದ್ದನೋ ಅದೇ ಸ್ಥಳದಲ್ಲಿಯೇ ಕುಳಿತು ಅವಳಿಗಾಗಿ ಕಾಯತೊಡಗಿದ.
ಸರ್‍ಕಸ್ಸು ಆರಂಭವಾಯಿತು. ಒಬ್ಬೊಬ್ಬರಾಗಿ, ಇಬ್ಬಿಬ್ಬರಾಗಿ, ಮೂರು ಜನರ ತಂಡಗಳಾಗಿ ಬಂದು ತಮ್ಮ ತಮ್ಮ ಸರದಿಯಂತೆ ಸರ್‍ಕಸ್ ಮುಗಿಸಿ ಹೋದರು.
ಈಗ ಜೋಕಾಲಿ ಜೀಕುವುದರೊಂದಿಗೆ ಏಣಿಯಲ್ಲಿ ಸರ್‍ಕಸ್ ಮಾಡುವುದಾಗಿತ್ತು. ಜೋಕಾಲಿ ಕೆಳಗೆ ದೊಡ್ಡದೊಂದು ಬಲೆಯನ್ನು ಕಟ್ಟಿದ್ದರು, ಜೋಕಾಲಿ ಜೀಕಲು ಎಲ್ಲಾ ಅಣಿಯಾಗಿತ್ತು. ಇವನ ಕಣ್ಣು ಯಾರಾರು ಬರುವರೆಂದು ಪರದೆ ಕಡೆಗೆ ಇತ್ತು. ಪರದೆ ಸರಿಸಿ ಬಫೂನ್‌ಗಳು ವಿವಿಧ ವೇಷ ಭೂಷಣಗಳೊಂದಿಗೆ ಸರ್‍ಕಸ್ ಅಖಾಡಕ್ಕೆ ಬಂದರು. ಲಾಗಾ ಹಾಕಿದರು. ಕೇಕೆ ಹಾಕಿ ಕುಣಿದು ಕುಪ್ಪಳಿಸಿದರು. ಒಬ್ಬರನ್ನೊಬ್ಬರು ಒದ್ದುಕೊಂಡರು. ತಮ್ಮ ನೋವನ್ನು ನುಂಗಿಕೊಂಡು ಜನರನ್ನು ನಗಿಸುತ್ತಾ, ಮಕ್ಕಳನ್ನು ನಗೆ ಗಡಲಲ್ಲಿ ತೇಲಿಸುತ್ತಿದ್ದರು. ಅವರು ಮಾಡುತ್ತಿದ್ದ ಜೋಕುಗಳಿಗೆ ಮಕ್ಕಳು ನಗುವುದನ್ನು ನಿಲ್ಲಿಸುತ್ತಲೇ ಇರಲಿಲ್ಲ. ಕೊನೆಗೆ ಈ ಬಫೂನಗಳೆಲ್ಲಾ ಜೋಕಾಲಿ ಜೀಕಿದರು. ಮೇಲಿಂದ ಕೆಳಕ್ಕೆ ನೆಗೆದರು. ಬಿದ್ದರು. ಕೆಳಗಡೆ ಬಲೆ ಕಟ್ಟಿದ್ದರಿಂದ ಪೆಟ್ಟಾಗುತ್ತಿರಲಿಲ್ಲ. ಆದರೆ ಬೀಳಲು ಧೈರ್‍ಯ ಬೇಕಷ್ಟೆ, ಇದ್ಯಾವುದೂ ಅವನಿಗೆ ಬೇಕಾಗಿರಲಿಲ್ಲ. ಅಷ್ಟರಲ್ಲಿಯೇ ವಾದ್ಯದವರು ಮ್ಯೂಜಿಕ್ ಬಾರಿಸುತ್ತಿದ್ದಂತೆ ಪರದೆ ಸರಿಸಿ ಸುಂದರ ಹುಡುಗಿಯೊಬ್ಬಳು ಪ್ರವೇಶಿಸಿದಳು. ಅದೇ ಹುಡುಗಿ. ಇವನಿಗೆ ಸಮಾಧಾನವಾಯಿತು. ಆ ಹುಡುಗಿ ಬರುತ್ತಿದ್ದಂತೆಯೇ ನಿಧಾನವಾಗಿ ಕೈಯಿಂದ ಅವಳಿಗೆ ವಿಷ್ ಮಾಡಿದ, ತಾನು ತಂದ ಗುಲಾಬಿ ಹೂವನ್ನು ತೋರಿಸಿ ಇದು ನಿನಗೆ ಎಂದ. ಆಕೆ ಕಣ್ಸನ್ನೆ ಮಾಡಿ ಸರ್‍ಕಸ್ ಅಖಾಡದ ಸುತ್ತಲೂ ಮಾಡಿದ ವೃತ್ತಾಕಾರದ ಕಟ್ಟೆಯ ಮೇಲೆ ಇರಿಸಲು ಸೂಚಿಸಿದಳು. ಅವನು ಹೂಂ ಎಂದು ತಲೆಯಲ್ಲಾಡಿಸಿ ಅಲ್ಲಿಯೇ ಗುಲಾಬಿ ಹೂವನ್ನು ಇರಿಸಿದ. ಆನಂದದಿಂದ ಕಲ್ಪನಾ ಗೋಪುರ ಕಟ್ಟತೊಡಗಿದ.
ಆಕೆಯೊಬ್ಬಳೇ ಜೋಕಾಲಿ ಜೀಕತೊಡಗಿದಳು. ಆಕೆಯೊಂದಿಗೆ ಒಬ್ಬ ಬಫೂನ್ ಸಹಾಯಕನಾಗಿದ್ದನು. ಅವನಿಗೆ ವಯಸ್ಸಾಗಿತ್ತು. ಬಹುಷಃ ಆಕೆಯ ತಂದೆಯಾಗಿರಬಹುದು. ಬಹಳ ಜಾಗ್ರತೆಯಿಂದ ಆಕೆಯನ್ನು ವೀಕ್ಷಿಸುತ್ತಿದ್ದ. ಆಕೆಗೆ ಏನೇನೋ ಹೇಳುತ್ತಿದ್ದ. ಹುಷಾರು ಮಗಳೇ ಎಂದು ಕಾಣುತ್ತದೆ. ಭಾಷೆ ತಿಳಿಯುತ್ತಿರಲಿಲ್ಲ. ಕೈಸನ್ನೆಯಿಂದ, ಕಣ್ಸನ್ನೆಯಿಂದ ಅರ್‍ಥವಾಗುತ್ತಿತ್ತು. ಆಕೆ ಜೋಕಾಲಿ ಜೀಕುವುದರಲ್ಲಿ ಪರಿಣಿತಳಾಗಿದ್ದಳು. ಎಲ್ಲರೂ ತದೇಕ ಚಿತ್ತದಿಂದ ಜೋಕಾಲಿ ಜೀಕುವುದನ್ನೇ ನೋಡುತ್ತಿದ್ದರು. ಇದಾದ ಬಳಿಕ ಏಣಿ ಮೇಲೆ ಕಸರತ್ತು ಮಾಡುವುದು-ಏಣಿಯನ್ನು ಮೇಲೆ ಕಟ್ಟಿ ತೂಗಿಬಿಟ್ಟಿದ್ದರು. ಅದರ ಮೇಲೆ ಒಂದು ತುದಿಯಲ್ಲಿ ನಿಂತು ಬ್ಯಾಲೆನ್ಸ್ ಮಾಡಿ ಕಪ್ಪು ಬಸಿಗಳನ್ನು ಕಾಲಿನಿಂದ ತಲೆಯ ಮೇಲೆ ಕೂರಿಸಿಕೊಂಡಳು. ನಂತರ ಏಣಿಯ ಒಂದು ತುದಿಯಲ್ಲಿರುವ ತಿರುಗುಣಿಯನ್ನು ಬಾಯಲ್ಲಿ ಕಚ್ಚಿಕೊಂಡು ಯೋಗಾಸನ ಹಾಕುತ್ತಿದ್ದಳು. ಸ್ವಲ್ಪ ಆಯ ತಪ್ಪಿದರೆ ಹಲ್ಲು ಮುರಿದು ಕೆಳಗೆ ಬೀಳುವುದೇ. ಒಂದು ವೇಳೆ ಏಣಿಯ ಬ್ಯಾಲೆನ್ಸ್ ತಪ್ಪಿದರೆ ಅದು ಕೆಳಗೆ ಬಂದು ತಕ್ಷಣ ತಲೆಗೆ ಬಡಿಯುವ ಹಾಗೆ ಇತ್ತು. ಈ ರೀತಿ ಅದನ್ನು ಕಟ್ಟಲಾಗಿತ್ತು. ಅವಳು ತಿರುಗುಣಿಯನ್ನು ಬಾಯಲ್ಲಿ ಕಚ್ಚಿಕೊಂಡು ತಿರುಗಿದಳು. ಹಾಗೆಯೇ ನಾನಾ ಬಗೆಯ ಯೋಗಾಸನಗಳನ್ನು ಹಾಕಿದಳು. ಇದನ್ನು ನೋಡುತ್ತಿದ್ದವರೆಲ್ಲ ಉಸಿರು ಬಿಗಿ ಹಿಡಿದು ಕುಳಿತ್ತಿದ್ದರು. ಇವನಿಗೆ ಮಾತ್ರ ಸಮಾಧಾನವಾಗುತ್ತಿರಲಿಲ್ಲ. ಸರಳವಾಗಿ ಕಸರತ್ತು ಮಾಡಬೇಕೆಂಬ ಅಭಿಲಾಷೆಯಿತ್ತು. ಆದರೆ ಮಾಲೀಕ ಬಿಡಬೇಕಲ್ಲ. ಇದನ್ನು ಜನರಿಗೆ ತೋರಿಸಿ ಹಣ ಮಾಡುತ್ತಿದ್ದ. ಏನು ಮಾಡುವುದು ಎಂದು ಯೋಚಿಸಿ ಆ ಸರ್‍ಕಸ್ಸಿನ ಹುಡುಗಿಯನ್ನು ಹೇಗಾದರೂ ಮಾಡಿ ಮದುವೆಯಾಗಬೇಕೆಂದುಕೊಂಡ. ಸುಂದರ ಮೈಮಾಟದ ಹುಡುಗಿಯನ್ನು ಅಲ್ಲಿಂದ ಯಾವಾಗ ಕರೆದುಕೊಂಡು ಹೋಗಲಿ, ಈ ಬಂಧನದಿಂದ ಹೇಗೆ ಬಿಡಿಸಿಕೊಳ್ಳಲಿ ಎಂದು ಬಾರಿ ಬಾರಿ ಯೋಚಿಸಿದ. ಆಗಲೇ ಅವನು ಆಕೆಯ ಪರವಶನಾಗಿ ಬಿಟ್ಟಿದ್ದ.
ಆಕೆಯ ಕಸರತ್ತು ಮುಗಿಯುತ್ತಿದ್ದಂತೆ ಎಲ್ಲರೂ ನಿಟ್ಟುಸಿರುಬಿಟ್ಟರು. ಸಂತೋಷದಿಂದ ಚಪ್ಪಾಳೆ ತಟ್ಟಿದರು. ಕೆಲವರು ಶೀಳೆ ಹೊಡೆದರು. ಕೇಕೇ ಹಾಕಿದರು. ಇವನು ಆಕೆಯನ್ನು ನೋಡುತ್ತಾ ಮತ್ತೆ ಕಲ್ಪನಾ ಲೋಕದಲ್ಲಿ ಮುಳುಗಿದ್ದ. ಆಕೆ ಮುಂದೆ ಬಂದು ಮೊದಲು ನಿಂತಿದ್ದ ಸ್ಥಳಕ್ಕೆ ಬಂದು ಎಂದಿನಂತೆ ಸಭಿಕರಿಗೆ ವಂದಿಸಿ ಹಿಂದಿರುಗುವಾಗ ಆಕೆಯ ತಲೆಯಲ್ಲಿ ಗುಲಾಬಿ ಹೂ ಮಿಂಚುತಿತ್ತು. ಅಲ್ಲಿಟ್ಟಿದ್ದ ಗುಲಾಬಿ ಹೂ ಅಲ್ಲಿರಲಿಲ್ಲ. ನನ್ನ ಪ್ರೀತಿ ಫಲಿಸಿತು ಎಂದುಕೊಂಡ. ಎರಡು ಮೂರು ಕಸರತ್ತಿನೊಂದಿಗೆ ಅಂದಿನ ಸರ್‍ಕಸ್ಸು ಮುಗಿಯಿತು.
ಇವನು ಮಾತ್ರ ಈ ಸರ್‍ಕಸ್ಸು ಕಂಪನಿ ಇರುವ ತನಕ ಎಲ್ಲಾ ಷೋಗಳನ್ನು ನೋಡಲು ಹೋಗತೊಡಗಿದ. ಅದೇ ತನ್ನ ಖಾಯಂ ಜಾಗದಲ್ಲಿಯೇ ಕುಳಿತುಕೊಳ್ಳುತ್ತಿದ್ದ. ಆಕೆ ಸೂಚಿಸಿದ ಸ್ಥಳದಲ್ಲಿಯೇ ಗುಲಾಬಿ ಹೂವನ್ನು ಇಡುತ್ತಿದ್ದ.
ಅದು ಆಕೆಯ ಮುಡಿಯೇರುತ್ತಿತ್ತು. ಸಾಗರದ ಮಾರಿಕಾಂಬೆಯ ಜಾತ್ರೆಯು ಮುಗಿಯಿತು. ಸರ್‍ಕಸ್ ಕಂಪನಿಯವರು ತಮ್ಮ ಟೆಂಟ್ ಕಿತ್ತರು. ಮುಂದಿನ ಠಿಕಾಣಿ, ಸಿರ್‍ಸಿ ಎಂದು ಹೇಗೋ ತಿಳಿದುಕೊಂಡ. ಅಲ್ಲಿಗೆ ಬಾ ಎಂದು ಆಕೆ ಅವನಿಗೆ ಕಣ್ಸನ್ನೆ ಮಾಡಿ ಹೇಳಿದ್ದಳು. ಅವನಿಗೆ ಸ್ವರ್‍ಗಕ್ಕೆ ಮೂರೇ ಗೇಣು ಉಳಿದಿತ್ತು. ಮನೆಯಲ್ಲಿದ್ದ ಅಲ್ಪಸಲ್ಪ ಹಣವನ್ನು ತೆಗೆದುಕೊಂಡು ಅಲ್ಲಿಗೂ ಹೋದ. ಅಲ್ಲಿಯೂ ಎಲ್ಲಾ ಷೋಗಳನ್ನು ನೋಡತೊಡಗಿದ. ಗುಲಾಬಿ ಹೂವನ್ನು ಅದೇ ಕಟ್ಟೆಯ ಮೇಲೆ ಇಡಲು ಮರೆಯಲಿಲ್ಲ. ಅದೂ ಕೂಡ ಆಕೆಯ ಮುಡಿಯೇರುತ್ತಿತ್ತು. ಅಲ್ಲಿಯೇ ಕುಳಿತ ಅವನನ್ನು ಕಂಡು ಆಕೆಯೂ ಹರ್‍ಷಗೊಂಡಳು. ಆಕೆಯೂ ಕೂಡ ಆತನನ್ನು ಮನಸಾರೆ ಪ್ರೀತಿಸತೊಡಗಿದಳು.
ಒಂದು ದಿನ ಟೆಂಟಿನ ಹಿಂಭಾಗಕ್ಕೆ ಬಾ ಎಂದು ಅವನಿಗೆ ಕಣ್ಸನ್ನೆ ಮಾಡಿದಳು. ಅವಳು ಸೂಚಿಸಿದ್ದೇ ತಡ ಟೆಂಟಿನ ಹಿಂಭಾಗದಲ್ಲಿ ಪ್ರತ್ಯಕ್ಷನಾಗಿದ್ದ. ಆಕೆಯನ್ನು ಹುಡುಕುವುದು ಕಷ್ಟವಾಗಲಿಲ್ಲ. ಆಕೆ ಸರ್‍ಕಸ್ ಉಡುಪಿನಲ್ಲಿಯೇ ಬಂದಿದ್ದಳು. ಅವನು ಆಕೆಯನ್ನು ಬಿಗಿದಪ್ಪಿ ಆ ಸರ್‍ಕಸೆಲ್ಲಾ ಬೇಡ, ನನ್ನೊಂದಿಗೆ ಬಂದು ಬಿಡು. ಜೀವನ ಎಂಬ ಅಖಾಡದಲ್ಲಿ ನಾವಿಬ್ಬರೂ ಸರ್‍ಕಸ್ಸು ಮಾಡೋಣ ಎಂದು ಪಿಸುಗುಟ್ಟಿದ. ಆದರೆ ವಯಸ್ಸಾದ ನಮ್ಮಪ್ಪ ಇದ್ದಾರೆ ಎಂದಾಗ ಇರಲಿ ಅವರನ್ನು ನಮ್ಮೊಂದಿಗೆ ಕರೆದುಕೊಂಡು ಹೋಗೋಣ ಎನ್ನುತ್ತಿದ್ದಂತೆ ಸರ್‍ಕಸ್ಸಿನ ಮ್ಯೂಜಿಕ್ ಆರಂಭವಾಯಿತು. ಒಲ್ಲದ ಮನಸ್ಸಿನಿಂದ ತಕ್ಷಣ ಅವನ ಬಿಗಿ ಹಿಡಿತದಿಂದ ತಪ್ಪಿಸಿಕೊಂಡು ಒಳನಡೆದಳು. ಅವನ ಮನಸ್ಸು ಮಾತ್ರ ಮರುಳುಗಾಡಿನಂತಾಗಿತ್ತು.
ತನ್ನ ಸ್ಥಳಕ್ಕೆ ಹೋಗಿ ಕುಳಿತುಕೊಂಡ. ಸ್ವಲ್ಪ ಸಮಯದ ನಂತರ ಆಕೆ ಸರ್‍ಕಸ್ಸಿನ ಅಖಾಡ ಪ್ರವೇಶಿಸಿದಳು. ಇವನನ್ನು ಕಂಡು ಹಸನ್ಮುಖದಿಂದ ಕಸರತ್ತು
ಮಾಡತೊಡಗಿದಳು. ಆದರೆ ಅವನಿಗೆ ಈ ಸರ್‍ಕಸ್ಸು, ಕಾಮನ ಬಿಲ್ಲಿನಂತೆ ಆಕೆ ಬಾಗುವುದು ಇಷ್ಟವಿರಲಿಲ್ಲ. ಸಾಕು ಒಳನಡೆ ಎಂದು ಕಣ್ಸನ್ನೆ ಮಾಡುತ್ತಿದ್ದ. ಹೊಟ್ಟೆಪಾಡಿಗೆ ಈ ಸರ್‍ಕಸ್ಸನ್ನು ಮಾಡಲೇಬೇಕು ಎಂದು ಆಕೆ ತನ್ನ ಹೊಟ್ಟೆಯನ್ನು ತೋರಿಸುತ್ತಿದ್ದಳು.
ಹತ್ತಾರು ದಿನಗಳು ಕಳೆದವು.
* * *
ಇಲ್ಲಿ ಇರುವ ಒಬ್ಬ ಮಗ ಎಲ್ಲಿ ಹೋದ ಎಂದು ಅವನ ತಾಯಿ ಪರಿತಪಿಸುತ್ತಿದ್ದಳು. ಮಗನಿಲ್ಲದೇ ಅವನ ತಾಯಿಗೆ ಹುಚ್ಚು ಹಿಡಿದಂತಾಗಿತ್ತು. ನಿನ್ನ ಮಗ ಸರ್‍ಕಸ್ ಹುಡುಗಿಯೊಂದಿಗೆ ಓಡಿಹೋಗಿದ್ದಾನೆ ಎಂದು ಹೇಳಿದರು. ನಿಜಕ್ಕೂ ಅವನ ತಾಯಿ ಅರೆ ಹುಚ್ಚಿಯಂತಾಗಿದ್ದಳು. ಅವನನ್ನು ಹುಡುಕಿ ಕರೆ ತರಲು ಸ್ನೇಹಿತರನ್ನು ಕಳಿಸಿದ್ದಳು. ಅವರು ಎಷ್ಟು ಹುಡುಕಿದರೂ ಅವನು ಸಿಗಲಿಲ್ಲ. ಸಿರ್‍ಸಿಯಲ್ಲಿ ಸರ್‍ಕಸ್ಸು ಇರಲಿಲ್ಲ. ಬೇರೆ ಯಾವ ಊರಿಗೆ ಹೋದರೆಂದು ತಿಳಿಯಲಿಲ್ಲ. ಅವರು ವಾಪಾಸ್ಸು ಬಂದರು. ಅವನ ತಾಯಿಗೆ ನಿಮ್ಮ ಮಗ ಅಲ್ಲಿ ಸಿಗಲಿಲ್ಲ. ಅಲ್ಲಿ ಸರ್‍ಕಸ್ಸು ಏನೂ ಇಲ್ಲ ಎಂದು ಕೈಚೆಲ್ಲಿದರು. ತಾಯಿ ಮಾತ್ರ ಮಗನ ನೆನಪಿನಲ್ಲೇ ಹಾಸಿಗೆ ಹಿಡಿದಳು.
ಸರ್‍ಕಸ್ಸಿನ ಹುಡುಗಿಗೆ ಹದಿನೆಂಟು ಮೀರಿದ ವಯಸ್ಸು. ಆಕರ್‍ಷಕ ಮೈಕಟ್ಟು, ವಿದ್ಯುದೀಪದ ಬೆಳಕಿನಲ್ಲಿ ಬಹಳ ಸುಂದರಳಾಗಿ ಕಾಣುತ್ತಿದ್ದಳು. ಆಕೆಯ ತಂದೆ ತಾಯಿ ನೇಪಾಳದಿಂದ ವಲಸೆ ಬಂದವರು. ಅಲ್ಪಸ್ವಲ್ಪ ಕನ್ನಡ ಮಾತನಾಡುತ್ತಿದ್ದರು. ಅವರೂ ಕೂಡ ಸರ್‍ಕಸ್ಸಿನಲ್ಲಿ ಕೆಲಸ ಮಾಡುತ್ತಿದ್ದರು. ಈಕೆ ಚಿಕ್ಕ ಮಗುವಿದ್ದಾಗಲೇ ತಾಯಿ ತೀರಿಕೊಂಡಿದ್ದಳು. ಚಿಕ್ಕಂದಿನಿಂದಲೇ ಆಕೆಯ ತಂದೆ ಆರೈಕೆ ಮಾಡಿ ಮುದ್ದಾಗಿ ಬೆಳೆಸಿದ್ದ. ಈಕೆಯೂ ಕೂಡ ಮಗುವಿದ್ದಾಗಲೇ ಸರ್‍ಕಸ್ಸಿನಲ್ಲಿ ಕಸರತ್ತು ಮಾಡಲು ಅಭ್ಯಾಸ ಮಾಡಿದ್ದಳು. ಸೊಗಸಾಗಿ ಬೆಳೆದಿದ್ದಳು. ಈಕೆಯ ಸುಂದರವಾದ ಮೈಮಾಟ ಕಂಡು ಸರ್‍ಕಸ್ಸಿನ ಮಾಲೀಕ ಈಕೆಯನ್ನು ಸರ್‍ಕಸ್ಸಿನ ಪ್ರಮುಖಳನ್ನಾಗಿ ಮಾಡಿಕೊಂಡಿದ್ದ. ಈಕೆ ಮಾಡುವ ಕಸರತ್ತಿಗಿಂತಲೂ ಈಕೆಯನ್ನು ನೋಡಲೆಂದೇ ಸರ್‍ಕಸ್ಸಿಗೆ ಜನರು ತಂಡ ತಂಡವಾಗಿ ಬರತೊಡಗಿದ್ದರು. ಸರ್‍ಕಸ್ಸಿನ ಮಾಲಿಕನಿಗೆ ಹಣವೂ ಸೇರಿತು. ಸರ್‍ಕಸ್ಸು ಕೂಡಾ ಅಭಿವೃದ್ಧಿಯಾಯಿತು.
ಹೀಗಿರುವಾಗ, ಸಾಗರದಲ್ಲಿ ಮಾರಿಕಾಂಬಾ ಜಾತ್ರೆ ಆರಂಭವಾಗಿತ್ತು. ಈ ಜಾತ್ರೆಗೆ ಗಣಪತಿ ಕೆರೆಯ ಒಂದು ಪಕ್ಕದಲ್ಲಿದ್ದ ಜಾಗದಲ್ಲಿ ಸರ್‍ಕಸ್ಸಿನ ಟೆಂಟನ್ನು ಹಾಕಿದ್ದರು. ಬಹಳ ವರ್‍ಷಗಳ ನಂತರ ಸಾಗರಕ್ಕೆ ಸರ್‍ಕಸ್ಸು ಬಂದಿದ್ದರಿಂದ ಜನ ಕಿಕ್ಕಿರಿಯುತ್ತಿದ್ದರು. ಪ್ರತಿ ಷೋಗಳು ಯಾವಾಗಲೂ ತುಂಬಿರುತ್ತಿದ್ದವು.
ಸರ್‍ಕಸ್ಸನ್ನು ನೋಡಿದ ಮೇಲೆ ಆ ಹುಡುಗಿಯನ್ನು ಪ್ರಶಂಸಿಸುತ್ತಿದ್ದರು. ಇನ್ನೂ ಕೆಲವರು ಟೀಕೆ ಮಾಡುತ್ತಿದ್ದರು. ಮಹಿಳಾ ಮಂಡಳಿಗಳು ಕೆಂಡಾಮಂಡಲವಾಗಿದ್ದವು. ಕಾರಣವಿಷ್ಟೇ, ಮೈಮೇಲೆ ಸಾಕಷ್ಟು ಬಟ್ಟೆ ಇಲ್ಲದೇ ಕಸರತ್ತು ಮಾಡುತ್ತಿರುವುದು ಒಂದು ರೀತಿಯಲ್ಲಿ ಬೆತ್ತಲೇ ಮೈ ಪ್ರದರ್‍ಶನವಾಗಿತ್ತು. ಅವರ ಮೈ ಪ್ರದರ್‍ಶನದಿಂದ ಮಾಲೀಕ ಹಣ ಸುಲಿಯುತ್ತಿದ್ದನೆಂದು ಮಾರನೆ ದಿನ ಪತ್ರಿಕೆಯಲ್ಲಿ ಸುದ್ದಿ ಬಂದವು. ಆದರೆ ಯಾವುದೇ ವಿಚಲತೆ ಹೊಂದದೇ ಸರ್‍ಕಸ್ಸು ನಿಲ್ಲದೇ ಮುಂದುವರೆದಿತ್ತು. ಜನ ಮಾತ್ರ ಕಡಿಮೆಯಾಗಿರಲಿಲ್ಲ. ಒಂದು ತಿಂಗಳ ನಂತರ ಜಾತ್ರೆ ಮುಗಿಯಿತು. ಸಿರ್‍ಸಿಗೆ ಹೋದರು. ಅಲ್ಲಿ ಅವರ ಮುಂದಿನ ಠಿಕಾಣಿಯಾಗಿತ್ತು.
ಸಿರ್‍ಸಿಯಲ್ಲಿ ದಿನಕ್ಕೆ ನಾಲ್ಕು ಷೋಗಳನ್ನು ಏರ್‍ಪಡಿಸಿದ್ದರು. ಅಲ್ಲಿಯೂ ಸಹ ಎಲ್ಲಾ ಷೋಗಳು ಭರ್‍ತಿಯಾಗಿರುತ್ತಿದ್ದವು. ಸುಮಾರು ಹತ್ತು ಹದಿನೈದು ದಿನಗಳು ಕಳೆದಿವೆ. ಆ ಹುಡುಗಿ ಉಳಿದುಕೊಂಡಿದ್ದ ರೂಮಿನ ಹತ್ತಿರ ಇವನು ಹೋಗುತ್ತಿದ್ದ. ಇವರೀರ್‍ವರು ದಿನವೂ ಪರಸ್ಪರ ಭೇಟಿ ಆಗುತ್ತಲೇ ಇದ್ದರು.
“ನೀನು ಈ ಸರ್‍ಕಸ್ಸಿನ ಜಂಜಾಟ ಬಿಟ್ಟುಬಿಡು”
“ನನ್ನ ಜೀವನಕ್ಕೆ, ಇದು ಜೀವಾಳ, ಹೇಗೆ ಬಿಡಲಿ?”
“ವಯಸ್ಸಾದ ಮೇಲೆ ಇದೇ ಸರ್‍ಕಸ್ ಮಾಡುತ್ತೀಯಾ?”
“ಇಲ್ಲ”
“ಈಗಲೇ ಬಿಟ್ಟು ಬಿಡು”
“ಹೇಗೆಬಿಡಲಿ?”
“ಅದಕ್ಕೆ ನಿನ್ನನ್ನು ನಾನು ಪ್ರೀತಿಸುತ್ತೇನೆ. ನೀನು ಕೂಡ ನನ್ನನ್ನು ಪ್ರೀತಿಸುತ್ತೀಯಾ ತಾನೆ?”
“ಇಲ್ಲ ಎಂದವರಾರು? ಈ ಜೀವ ಬೇಕಾದರೆ ಬಿಟ್ಟೇನು? ನಿಮ್ಮನ್ನು ಮಾತ್ರ ಬಿಟ್ಟಿರಲು ಸಾಧ್ಯವೇ ಇಲ್ಲ” ಎಂದಳು ಮೆಲುದನಿಯಲ್ಲಿ.
“ಹಾಗಾದರೆ ನಾವೇಕೆ ಮದುವೆಯಾಗಬಾರದು?”
ಮದುವೆ ಎಂಬ ಪದವು ಕಿವಿಯ ಮೇಲೆ ಬಿದ್ದೊಡನೆ ಆಕೆಯ ಕಣ್ಣುಗಳಲ್ಲಿ ಮಿಂಚು ಹೊಮ್ಮಿತು. ಕಣ್ಣುಗಳಿಂದ ಆನಂದ ಬಾಷ್ಪಗಳು ಉದುರಿದವು. ಆತನನ್ನು ಬಿಗಿದಪ್ಪಿ ಅವನ ಮುಖದ ಮೇಲೆಲ್ಲಾ ಮುತ್ತಿನ ಸುರಿಮಳೆಗೈದು “ಆದಷ್ಟು ಬೇಗ ಈ ಭಾಗ್ಯ ನನ್ನದಾಗಲಿ, ಮದುವೆಯಾದರೆ ಯಾವಾಗಲೂ ಹೀಗೆ ಇರಬಹುದಲ್ಲವೇ” ಎಂದು ಅವನ ಕಿವಿಯಲ್ಲಿ ಪಿಸುಗುಟ್ಟಿ ತನ್ನ ಹಿಡಿತವನ್ನು ಬಿಗಿಗೊಳಿಸಿದಳು. ಅವನಿಗೆ ಹಿತವೆನಿಸಿತು.
ನೀನೇನು ಯೋಚಿಸಬೇಡ. ನಮ್ಮ ಅಪ್ಪಂಗೆ ನಾನೊಬ್ಬನೇ ಮಗ. ಎರಡು ಮನೆಗಳಿವೆ. ಒಂದರಲ್ಲಿ ನಾವಿದ್ದೇವೆ. ಇನ್ನೊಂದನ್ನು ಬಾಡಿಗೆಗೆ ಕೊಟ್ಟಿದ್ದೇವೆ. ಇನ್ನೂ ಅಲ್ಪಸ್ವಲ್ಪ ಗದ್ದೆ ಇದೆ. ಸಾಯೋತನಕ ಕೃಷಿ ಮಾಡಿಕೊಂಡು ಹಾಯಾಗಿರಬಹುದು” ಎಂದ.
“ನಮ್ಮ ಮದುವೆಗೆ ನಿಮ್ಮ ತಂದೆ ತಾಯಿಯರ ವಿರೋಧ ಉಂಟಾದರೆ?”
“ಇಲ್ಲ ಹಾಗೇನು ಆಗಲಾರದು. ನನ್ನ ಮಾತೆ ಕೊನೆ ನಿರ್‍ಧಾರ.”
“ನೀವೇನೇ ಹೇಳಿ ನನಗಂತೂ ಭಯ ಕಣ್ರ್‍ಈ”
“ನೀನೇನು ಭಯ ಪಡುವ ಅಗತ್ಯವೇ ಇಲ್ಲ. ಇಬ್ಬರ ನಿರ್‍ಧಾರಗಳು ಒಂದೇ ಆಗಿರುವಾಗ ಇನ್ನು ತಡವೇಕೆ. ಇಲ್ಲಿಯೇ ಇದ್ದು ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ನಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳೋಣ. ಮಾರಿಗುಡಿಯಲ್ಲಿ ತಾಳಿ ಕಟ್ಟುವ ಸಮಾರಂಭ ಇಟ್ಟುಕೊಳ್ಳೋಣ” ಎಂದು ಅವಳಿಗೆ ಹೇಳಿದ.
ತನ್ನ ಕೊರಳಿಗೆ ತಾಳಿ ಕಟ್ಟುವೆನೆಂದ ಕೂಡಲೇ ಮೋಹಕ ನಗೆಯಿಂದ ಅವಳು ಅವನ ಕೊರಳಿಗೆ ತನ್ನೆರಡು ತೋಳುಗಳಿಂದ ಬರಸೆಳೆದು ಮತ್ತೊಮ್ಮೆ ಬಿಗಿದಪ್ಪಿ ಅವನ ತುಟಿಗೊಂದು ತನ್ನ ಕೆಂಪಾದ ತುಟಿಗಳಿಂದ ಮುತ್ತಿನ ಮುದ್ರೆಯೊತ್ತಿದಳು. “ನೀವು ಹೇಳಿದ ಹಾಗೆ ಆಗಲಿ” ಎಂದು ತನ್ನ ಹೀರು ಕಣ್ಣುಗಳಿಂದ ಸಮ್ಮತಿಸಿದಳು.
ಅಂದು ಅವಳ ಆನಂದಕ್ಕೆ ಮಿತಿಯೇ ಇರಲಿಲ್ಲ. ಬಹಳ ಸಂತಸದಿಂದ ಪರದೆ ಸರಿಸಿ ಅಖಾಡಕ್ಕೆ ಪ್ರವೇಶಿಸುತ್ತಿದ್ದಂತೆ ಸರ್‍ಕಸನ್ನು ನೋಡಲು ಬಂದಿದ್ದ ಜನರು ಅವಳನ್ನು ಕಂಡಾಕ್ಷಣ ಶಿಳ್ಳೆ, ಕೇಕೆ ಹಾಕುತ್ತಲೇ ಅವಳನ್ನು ಸ್ವಾಗತಿಸಿದರು. ಆಕೆಯ ಸರ್‍ಕಸ್ಸಿನ ಉಡುಪಿನಲ್ಲಿ ಮನಮೋಹಕವಾಗಿ ಕಾಣುತ್ತಿದ್ದಳು. ಆಕೆಯ ಕೈ ತೋಳುಗಳು ಮತ್ತು ತೊಡೆ ಕಾಲುಗಳು ಮಿರ ಮಿರನೇ ಹೊಳೆಯುತ್ತಿದ್ದವು. ಅವಳು ಮುಗುಳುನಕ್ಕರಂತೂ ಮುಗಿದೇ ಹೋಯಿತು. ಅವರೆಲ್ಲ ಶಿಳ್ಳೆ ಹಾಕುವುದನ್ನು, ಕೇಕೆ ಹಾಕುವುದನ್ನು ನಿಲ್ಲಿಸದಿದ್ದನ್ನು ಕಂಡು ಇವನು ಕಸಿವಿಸಿಗೊಂಡು ಎದ್ದು ಹೋಗಿ ಆಕೆಯನ್ನು ಒಳಗೆ ಎಳೆದುಕೊಂಡು ಹೋಗಲೇ ಎಂದೆನಿಸಿತ್ತು. ಅಂದು ಅವಳ ಅಂದ ಇಮ್ಮಡಿಯಾಗಿತ್ತು. ನಗುಮುಖದಿಂದ, ಲವಲವಿಕೆಯಿಂದ ಇದ್ದಳು. ಸರ್‍ಕಸ್ಸಿಗೆ ವಿದಾಯ ಹೇಳುವ ದಿನಗಳು ಹತ್ತಿರ ಬಂದಿದ್ದವು. ಆಗಲೇ ಸತಿಪತಿಗಳಾಗಿದ್ದೇವೆ ಎಂಬ ಭ್ರಮಾ ಲೋಕದಲ್ಲಿ ಅವಳು ಮುಳುಗಿದ್ದಳು. ಅವಳ ಮಂದಹಾಸ ಯಾವ ರತಿಗೇನು ಕಡಿಮೆ ಇರಲಿಲ್ಲ. ಜೋಕಾಲಿ ಜೀಕಿದಳು. ಜೀಕಿನ ಸಂಭ್ರಮದಲ್ಲಿ ಆಕೆಯ ಕುಡಿನೋಟ ಇವನ ಮೇಲೆ ಬಿತ್ತು. ಇವನು ಕೂಡ ಆಕೆಯನ್ನು ಪ್ರೀತಿಯ ಕಣ್ಣುಗಳಿಂದ ಹೀರುವಂತೆ ನೋಡುತ್ತಿದ್ದ. ಆಕೆಗೆ ಇವನ ದೃಷ್ಟಿಯಿಂದ ಖುಷಿಯೋ ಖುಷಿ. ಅಂದು ಜೀಕಿನಾಟ ಸೊಗಸಾಗಿತ್ತು. ಏಣಿಯ ಮೇಲೆ ಆಕೆಯ ಸರ್‍ಕಸ್ಸು ಅದ್ಭುತವಾಗಿತ್ತು. ಆಕೆಯ ಸರ್‍ಕಸ್ಸಿನ ಪರಿಯಿಂದ ಇಡೀ ಸರ್‍ಕಸ್ಸ ಸ್ತಬ್ಧವಾಗಿತ್ತು. ಉಸಿರು ಬಿಗಿ ಹಿಡಿದಿತ್ತು.
ಇದ್ದಕ್ಕಿದ್ದಂತೆ ಇವನು ಗಲಿಬಿಲಿಗೊಂಡ. ಏನೋ ಒಂದು ರೀತಿ ಅವನ ಮನಸ್ಸಿನಲ್ಲಿ ತಲ್ಲಣ ಶುರುವಾಯಿತು. ಏಕೋ ಏನೋ ಆ ತಿರುಗುಣಿಯನ್ನು ಬಾಯಲ್ಲಿ ಕಚ್ಚಿಕೊಂಡು ತಿರುಗುವುದೇ ಬೇಡವಾಗಿತ್ತು. ದೇವರ ಮೇಲೆ ಬಾರ ಹಾಕಿ ಕುಳಿತುಕೊಂಡು ದೇವರೇ ಆಕೆಗೆ ಏನೂ ಆಗದಿರಲಿ ಎಂದು ಹರಕೆ ಕಟ್ಟಿಕೊಂಡ. ಸರಿ, ಆಕೆ ಏಣಿಯ ತುದಿಯಲ್ಲಿದ್ದ ತಿರುಗುಣಿಯನ್ನು ಹಲ್ಲಿನಲ್ಲಿ ಕಚ್ಚಿಕೊಂಡು ಯೋಗಾಸನ ಮಾಡಿದಳು. ಎಲ್ಲವೂ ಮುಗಿಯಿತು. ಕೊನೆಯ ಸುತ್ತು, ತಿರುಗುಣಿಯನ್ನು ಹಲ್ಲಿನಿಂದ ಬಿಗಿಯಾಗಿ ಕಚ್ಚಿಕೊಂಡು ತಿರುಗಲು ಆರಂಭಿಸಿದಳು. ಅದು ತಿರುಗಲಿಲ್ಲ. ಪ್ರಯತ್ನಿಸಿದಳು. ಆದರೂ ತಿರುಗುಣಿ ತಿರುಗಲೇ ಇಲ್ಲ. ಎಲ್ಲರೂ ಹೋ ಎಂದು ಕೂಗಿದರು. ಏನೋ ಆಯಿತೆಂದು ಆಕೆ ಹೌಹಾರಿದಳು, ಆಯತಪ್ಪಿದಳು. ಕೆಳಗೆ ಬಿದ್ದುಬಿಟ್ಟಳು. ಕೆಳಗಡೆ ಕಟ್ಟಿದ್ದ ಬಲೆಯಲ್ಲಿ ಬಿದ್ದಾಗ ಏನೂ ಆಗಿಲ್ಲವೆಂದುಕೊಂಡರು. ಐದು ನಿಮಿಷ ಕಳೆಯಿತು, ಹತ್ತು ನಿಮಿಷ ಕಳೆಯಿತು. ಆದರೂ ಆಕೆ ಏಳಲಿಲ್ಲ. ಇವನಿಗಂತೂ ಗಾಬರಿಯಾಯಿತು. ತಾಳದೇ ಆಕೆ ಬಿದ್ದ ಸ್ಥಳಕ್ಕೆ ಓಡಿ ಬಂದ. ಅಲ್ಲಿ ಅವನನ್ನು ತಡೆದರು. ಆಕೆಯ ತಂದೆ, ಎಲ್ಲಾ ಓಡಿ ಬಂದರು. ಆಕೆಯನ್ನು ಹೊತ್ತುಕೊಂಡು ಒಳನಡೆದರು. ಸರ್‍ಕಸ್ಸು ಮಾತ್ರ ನಿಲ್ಲದೇ ಮುಂದುವರೆದಿತ್ತು.
ಅವನು ಆಕೆಯ ಹಿಂದೆಯೇ ಓಡಿದ, ಅಷ್ಟರಲ್ಲಿಯೇ ಆಕೆಯನ್ನು ಆಸ್ಪತ್ರೆಗೆ ಕಾರಿನಲ್ಲಿ ಒಯ್ದಿದ್ದರು. ಅವರು ಬರುವಷ್ಟರಲ್ಲಿಯೇ ವಿಧಿಯು ಆಕೆಯನ್ನು ಅವನಿಂದ ಕಸಿದುಕೊಂಡಿತ್ತು. ಅವನ ತಲೆ ತಿರುಗಿತು. ಎಚ್ಚರ ತಪ್ಪಿದ. ಅಲ್ಲಿಯೇ ಕುಳಿತ. ಅವನು ಎಚ್ಚರವಾದಾಗ ಆಕೆಯ ದೇಹವನ್ನು ಬೊಂಬಾಯಿಗೆ ಒಯ್ದರೆಂದು ತಿಳಿಯಿತು. ಅವರನ್ನು ಹಿಂಬಾಲಿಸಿ ಅಲ್ಲಿಗೂ ಹೋದ.
* * *
ಆಗ ಅಲ್ಲಿ ಆಕೆಯ ಸಮಾಧಿಯ ಬಳಿ ಕುಳಿತು ರೋಧಿಸತೊಡಗಿದ. ಇವನೊಬ್ಬ ಹುಚ್ಚನೆಂದು ಅಲ್ಲಿದ್ದವರೆಲ್ಲ ಅವನನ್ನು ದೂಡಿದರು. ಆಕೆಯ ಪ್ರೇಮಿಯೆಂದು ಅವನ ರೋಧನದಿಂದ ತಿಳಿಯುತ್ತಿತ್ತು. ಹುಚ್ಚನಂತಾಗಿ ಸ್ಮಶಾನದಲ್ಲಿಯೇ ಇರುತ್ತಿದ್ದ. ಒಂದು ದಿನ ಪರಿಚಿತರೊಬ್ಬರು ಕಂಡ ಇವನನ್ನು ಊರಿಗೆ ಕರೆದುಕೊಂಡು ಬಂದಿದ್ದರು. ಮಗ ಮರಳಿ ಮನೆಗೆ ಬಂದನೆಂದು ಅವನ ತಂದೆ ತಾಯಿಗಳು ಸಂಭ್ರಮದಲ್ಲಿದ್ದರು.
ಹರಿದ ಅಂಗಿ, ಕೆದರಿದ ತಲೆ, ಬಾಡಿದ ಮುಖ, ಕುರುಚಲು ಗಡ್ಡ, ಬಡವಾದ ದೇಹ ಕಂಡು ಆತನ ತಾಯಿಯ ಜೀವ ಚುರು ಚುರು ಎಂದಿತು. ಬಂದ ಮಗನನ್ನು ಆಲಿಂಗಿಸಿಕೊಂಡಳು. ಮುದ್ದಾಡಿದಳು. “ಎಷ್ಟೊಂದು ಬಡವಾಗಿದ್ದೀಯಲ್ಲೋ ಮಗನೇ” ಎಂದು ದುಃಖಿಸಿದಳು. ಅಕ್ಕಪಕ್ಕದವರೆಲ್ಲಾ ಈ ಸನ್ನಿವೇಶವನ್ನು ಕಂಡು ತಾಯಿ ಮಗನ ಪ್ರೀತಿಯ ಮಮಕಾರ ಎಷ್ಟು ಎಂದು ಊಹಿಸಿದರು. ಬಣ್ಣಿಸಿದರು. ಮಮ್ಮಲ ಮರುಗಿದರು. ಎಷ್ಟಾದರೂ ಹೆತ್ತ ಕರುಳಲ್ಲವೇ ಎಂದುಕೊಂಡರು.
ಎಷ್ಟೇ ದೊಡ್ಡವರಾದರೂ ತಾಯಿಗೆ ಮಗನೇ ಅಲ್ಲವೇ. ಅವನಿಗೆ ಸ್ನಾನ ಮಾಡಿಸಿದಳು, ಮೈ ಒರೆಸಿದಳು. ಹಾಕಿಕೊಳ್ಳಲು ಬಟ್ಟೆ ಕೊಟ್ಟಳು. ದೇವರ ಕೋಣೆಗೆ ಕರೆದೊಯ್ದು ದೀಪ ಹಚ್ಚಿಸಿದಳು. “ಹೊಟ್ಟೆ ತುಂಬಾ ಉಣ್ಣು ಮಗನೆ, ಎಷ್ಟು ದಿವಸಗಳಾದವು ಉಣ್ಣದೇ” ಎಂದು ಮಾಡಿದ ಎಲ್ಲಾ ಅಡುಗೆಯನ್ನು ತಟ್ಟೆಯಲ್ಲಿ ಬಡಿಸಿದಳು. ಅವನಿಗೆ ಇದ್ಯಾವುದರ ಪರಿವೇ ಇರಲಿಲ್ಲ. ಅವನ ತಲೆಯಲ್ಲಿ ಸರ್‍ಕಸ್ಸಿನ ಹುಡುಗಿಯೇ ತುಂಬಿಕೊಂಡಿದ್ದಳು. ಊಟ ಮಾಡಿದ ಶಾಸ್ತ್ರ ಮುಗಿಸಿ ತನ್ನ ಕೊಠಡಿಗೆ ಹೋಗಿ ಮಲಗಿದ. ಆಕೆಯದ್ದೇ ನೆನಪು. ಆಕೆ ಜೀಕುವ ಪರಿ, ಆಕೆಯ ಮೋಹಕ ನಗು, ಆಕೆಯ ಸುಂದರ ಮುಖ ಕಂಡು ಆತನ ಕರುಳು ಕಿವಿಚಿದಂತಾಯಿತು. ಆಕೆಯ ಮೆಲು ಮಾತುಗಳು ಅವನ ಕಿವಿಯಲ್ಲಿ ಗುಂಯ್ ಗುಡುತ್ತಿದ್ದವು. ಆದರೇನು ಮಾಡುವುದು. ಅವನಿಂದ ಆಕೆಯನ್ನು ವಿಧಿ ಕಸಿದು ಕೊಂಡಿತ್ತು. ನಾನೊಬ್ಬನೇ, ನಾನೊಬ್ಬನೇ, ನಾನು ಒಂಟಿ, ನಾನಿನ್ನು ಒಂಟಿ ಎಂದು ಎಲ್ಲಾ ನೆನಪುಗಳು ಒಮ್ಮೆಗೆ ಅವನ ಮನಸ್ಸಿಗೆ ನುಗ್ಗಿ ಅವನನ್ನು ಕ್ಷಣ ಕ್ಷಣಕ್ಕೂ ಹತಾಶನನ್ನಾಗಿ ಮಾಡುತ್ತಿದ್ದವು. ನಾನು ಇನ್ನಾರಿಗಾಗಿ ಬದುಕಬೇಕು? ನನಗೆ ಬದುಕೇ ಬೇಡ ಎಂದು ಅತ್ತು ಅತ್ತು ಅವನ ಕಣ್ಣುಗಳು ಕೆಂಡವಾಗಿದ್ದವು.
ಬೆಳಗಿನ ಜಾವ ಅವನ ತಾಯಿ ಬೇಗ ಎದ್ದು ಸಂಭ್ರಮದಿಂದ ಮನೆಯಂಗಳ ಗುಡಿಸಿ, ಸಾರಿಸಿ ರಂಗೋಲಿ ಹಾಕಿದಳು. ಇದನ್ನು ಕಂಡು ಮಗ ಮರಳಿ ಬಂದನೆಂದು ಬಹಳ ಸಂತೋಷದಿಂದಿದ್ದಾರೆ ಎಂದು ಅಕ್ಕಪಕ್ಕದವರೆಲ್ಲಾ ಮಾತನಾಡಿಕೊಳ್ಳುತ್ತಿದ್ದರು.
ಬೆಳಿಗ್ಗೆ ಎಷ್ಟು ಹೊತ್ತಾದರೂ ಮಗ ಏಳಲಿಲ್ಲ. ನಿದ್ದೆ ಗೆಟ್ಟಿರಬಹುದು, ಅದಕ್ಕೆ ಇನ್ನೂ ಮಲಗಿದ್ದಾನೆಂದು ತಿಳಿದಿದ್ದರು. ಸ್ವಲ್ಪ ಹೊತ್ತಿನ ಮೇಲೆ ಅವನ ತಂದೆ ಹೋಗಿ ಅವನ ಕೊಠಡಿಯ ಬಾಗಿಲನ್ನು ದೂಡಿದರೂ ತೆಗೆಯಲು ಬರಲಿಲ್ಲ. ಆತ ಬಾಗಿಲನ್ನು ಭದ್ರವಾಗಿ ಹಾಕಿಕೊಂಡಿದ್ದ. ಎಷ್ಟೇ ಕೂಗಿದರೂ ಮಗ ಎದ್ದು ಬಾಗಿಲು ತೆಗೆಯಲಿಲ್ಲ. ಅಕ್ಕ ಪಕ್ಕದವರೆಲ್ಲಾ ನೆರೆದರು. ಅವನ ತಾಯಿಗೆ ದಿಗಿಲಾಯಿತು. ಬಾಗಿಲು ಒಡೆದರು.
ಆದರೇನು ಮಾಡುವುದು ಮಗ ನೇಣಿಗೆ ಶರಣಾಗಿದ್ದ. ಎಲ್ಲರೂ ಸೇರಿ ನೇಣಿನ ಕುಣುಕೆ ಬಿಡಿಸಿ ದೇಹವನ್ನು ಕೆಳಗಿಳಿಸಿ ಮಲಗಿಸಿದರು. ಕೈಕಾಲು ತಿಕ್ಕಿ ಬಿಸಿ ಮಾಡಿದರು. ಆದರೆ ಅವನ ಪ್ರಾಣ ಹಾರಿ ಹೋಗಿತ್ತು. ತನ್ನ ಮಗನ ಅನಿರೀಕ್ಷಿತ ಸಾವಿನಿಂದ ತಾಯಿ ಅರೆಹುಚ್ಚಿಯಾದಳು. ಆತನ ಮೇಲೆ ಬಿದ್ದು ಬಿದ್ದು ಹೊರಳಾಡಿ ಚೀರುವುದು, ಕೂಗುವುದು, ಹೆಚ್ಚಾಯಿತು. ಆಕೆಯನ್ನು ಹಿಡಿಯುವುದೇ ಕಷ್ಟಕರವಾಯಿತು. ನನ್ನ ಮಗನ್ನ ಸರ್‍ಕಸ್ ಹುಡುಗಿ ಹಾಳು ಮಾಡಿಬಿಟ್ಟು, ಕೊಂದು ಹಾಕಿದ್ದು ಎಂದು ಕಿರುಚಾಡುವುದು ಹೆಚ್ಚಾಯಿತು. ಅವರ ಬಂಧುಗಳೆಲ್ಲ ಬಂದ ಮೇಲೆ ಶವದ ಸ್ನಾನ, ಪೂಜೆ, ಅಲಂಕಾರ ಎಲ್ಲಾ ಧಾರ್‍ಮಿಕ ವಿಧಿ ವಿಧಾನಗಳೆಲ್ಲಾ ಮುಗಿದ ಬಳಿಕ ಶವವನ್ನು ತೆಗೆದುಕೊಂಡು ಹೋಗಿ ಅವರ ಗದ್ದೆಯಲ್ಲಿಯೇ ಸಮಾಧಿ ಮಾಡಲಾಯಿತು.
ತಾಯಿಯ ಬುದ್ಧಿ ಭ್ರಮಣೆಯಾಯಿತು. ಮಗನ ಸಮಾಧಿಯ ಮೇಲೆ ಬಿದ್ದು ಬಿದ್ದು ಹೊರಳಾಡುವುದು, ಎದೆ ಬಡಿದುಕೊಂಡು ಅಳುವುದು, ಚೀರಾಡುವುದು ಮಾತ್ರ ನಿಲ್ಲಲೇ ಇಲ್ಲ. ಇದನ್ನು ಕಂಡ ಜನ ಮುದುಕಿಯ ಬಗ್ಗೆ ಮರುಗಿದರು. ಚೀರುತ್ತಾ, ಕೂಗುತ್ತಾ ಊರೆಲ್ಲಾ ಸುತ್ತಾಡೋದು, ಓಡುವುದು, ನಂತರ ಮಗನ ಸಮಾಧಿ ಬಳಿ ಬಂದು ರೋಧಿಸುವುದು ಯಥಾಸ್ಥಿತಿ ನಡೆದೇ ಇತ್ತು.
ಇಷ್ಟೆ ನೋಡಿ ಸ್ವಾಮಿ, ನಮ್ಮನೆ ಹತ್ತಿರವೇ ಈಕೆಯ ಮನೆ. ಗಂಡ ಇದ್ದಾನೆ. ಅವನು ಹಣ್ಣು ಮುದುಕ, ಕಣ್ಣು ಕಾಣಿಸುವುದಿಲ್ಲ. ಯಾರೋ ದೂರದ ಸಂಬಂಧಿಯೊಬ್ಬರು ಅವರನ್ನು ನೋಡಿಕೊಳ್ಳುತ್ತಾ ಇದ್ದಾರೆ. ಏನು ಮಾಡುವುದು? ಎಷ್ಟೇ ಪ್ರಯತ್ನಿಸಿದರು ಈಕೆ ಸರಿಯಾಗಲಿಲ್ಲ, ಎಂದು ಬೆಳಗಿನ ವಾಕಿಂಗಿಗೆ ಬಂದು ತನ್ನ ಜೊತೆಗೂಡಿದ ಸ್ನೇಹಿತ ಈಕೆಯಾರೆಂದು ಕೇಳಿದಾಗ ಆಕೆಯ ಕಥಾವೃತ್ತಾಂತವನ್ನು ವಿವರಿಸಿದಾಗ ಸ್ನೇಹಿತರೆಲ್ಲಾ ನಿಟ್ಟುಸಿರು ಬಿಟ್ಟರು.
*****


















