“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?”
“ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು”
“ಪ್ರೀತಿಯ ವಿಷಯವೇನೇ ಇರಲಿ; ಪ್ರತಿನಿತ್ಯದ ಈ ತೊಂದರೆಗಳಿಗಾಗಿಯಾದರೂ ನೀನು ಮದುವೆಯಾಗುವದು ಹಿತ”
“ಮನಸ್ಸು ಒಪ್ಪುವದಿಲ್ಲ”
“ಮನೆಯಲ್ಲೊಮ್ಮೆ ವ್ಯವಸ್ಥೆ “ಶಿಸ್ತು-ಸಿಂಗಾರ ಆಯಿತೆಂದರೆ ಮನಸ್ಸೂ ಸರಿಯಾಗುತ್ತದೆ”
“ಅಂದರೆ ಮಡಿದವಳು ಮರೆವಿನಲ್ಲಿ ಬಿದ್ದು ಹೋಗುತ್ತಾಳೆಂದೇ?”
“ಹೌದು, ಒಂದುವೇಳೆ ಮರೆತು ಹೋಗದಿದ್ದರೆ ಪ್ರಯತ್ನ ಪಟ್ಟಾದರೂ ಮರೆಯಬೇಕು.”
“ಹೇಳುವದೇನೋ ಸುಲಭ.”
“ಈಗ ಎರಡನೆಯ ಮದುವೆಯಾದವರು ಜಗತ್ತಿನಲ್ಲಿ ಇಲ್ಲದೆ ಹಾಗಾದರೆ?”
“ಬೇಕಾದಷ್ಟು ಇದ್ದಾರೆ. ಆದರೆ ನನ್ನ ಪ್ರೇಮಪ್ರಪಂಚ ಅವರಂತೆಯೇ ಅಲ್ಲ.”
ಅರ್ಧತಾಸಿನವರೆಗೆ ಅವನು ತನ್ನ ಪ್ರೇಮದ ಕತೆಯನ್ನು ಹೇಳಿ ಅದು ದಿವ್ಯವೆಂದೂ ಅದರ ಸ್ಥಾನದಲ್ಲಿ ಇನ್ನೊಂದನ್ನು ತಂದಿರಿಸುವದು ಅಸಾಧ್ಯವೆಂದೂ ಹೇಳಿದನು.
“ಸೂರ್ಯ ಚಂದ್ರರಿ ಸಾಕ್ಷಿಯಲ್ಲಿ ನನ್ನನ್ನು ಅವಳಿಗರ್ಪಿಸಿದೆ. ಅವಳು ಮಡಿದಂದಿನಿಂದ ‘ನಾನು’ ಎನ್ನುವದು ಈ ದೇಹ ಮಾತ್ರ”
“ಈ ದೇಹ, ಈ ಮಕ್ಕಳ ದೇಹಗಳ ಪಾಲನೆ ಪೋಷಣೆಗಳಿಗಾಗಿಯಾದರೂ ಇನ್ನೊಂದು ದೇಹವನ್ನು ನೀನು ತರಬೇಕು ಮೂರ್ತಿ”
ಅವನು ನಸುನಕ್ಕು ಹೇಳಿದ “ದೇಹಕ್ಕಿಂತ ಮನಸ್ಸು ಕೋಮಲ. ಮನಸ್ಸಿನಿಂದಲೇ ದೇಹದ ಉಳಿವು, ಬೆಳವಣಿಗೆ ಎಲ್ಲ”
“ಅದಕ್ಕೇ ನಾನು ಹೇಳುವದು. ದೇಹವನ್ನು ಉಳಿಸಿ, ಬೆಳಿಸಿ, ಕಾಪಾಡಿಕೊಂಡರೆ ಮನಸ್ಸೂ ಆರೋಗ್ಯ ಪಡೆಯುವದು ಎಂದು”
“ಮಾತಿನಲ್ಲಿ ಇದೆಲ್ಲ ಸರಿ. ಆದರೆ ಮನಸ್ಸಿನ ರೀತಿಯೇ ಬೇರೆ”
ಅಂದು ಮೂರ್ತಿಯೊಡನೆ ಬಹಳಷ್ಟು ವಾದಿಸಿದೆ. ಆದರೆ ಅವನು ಮಾತ್ರ ಅಚಲನಾಗಿಯೇ ಉಳಿದ. ಪ್ರೇಮಕ್ಕಾಗಿ ಅವನ ತ್ಯಾಗ ಕಂಡು ನನಗೆ ಆಶ್ಚರ್ಯವಾಯಿತು.
+ + + +
“ಏನು ಮೂರ್ತಿ, ನಮಗೆ ಸಿಹಿಕಾಣಿಸದೆ, ಒಂದು ಕಪ್ಪು ಚಹ ತೋರಿಸದೆ ಮದುವೆ ಹೊಡಿಸಿಬಿಟ್ಟೆ! ಹೌದಪ್ಪ, ಇಂಥ ಸಮಯದಲ್ಲಿ ನಮ್ಮ ನೆನಪೆಲ್ಲಿ ಆಗಬೇಕು ?”
ನಾವು ಮೂವರೂ ಮೂರ್ತಿಯ ಮನೆಗೆ ಧಾಳಿ ಮಾಡಿದೆವು. ಮೂರ್ತಿಯು ಸೋತು ಉಪ್ಪಿಟ್ಟು ಚಹಗಳ ಕಪ್ಪ ಕಾಣಿಕೆಗಳನ್ನು ಒಪ್ಪಿಸಿದ. ಧ್ವಂಸಮಾಡಿ, ಆಶೀರ್ವದಿಸಿ ಬಂದೆವು.
ಅಂದೇ ಸಂಜೆ ಮೂರ್ತಿಯ ಭೆಟ್ಟಿಯಾಯಿತು ನನಗೆ. “ಏನಪ್ಪ, ಅಂತೂ ಎರಡನೆಯ ಮದುವೆಯನ್ನು ಮಾಡಿಕೊಂಡೆ ಹೌದೋ ಅಲ್ಲೊ? ಒಳ್ಳೆಯದಾಯಿತು. ನಾನು ಎಂದೋ ಹೇಳಿಲ್ಲವೇ? ಆಗುವದಿಲ್ಲ ಅಂದರೆ ಹೇಗೆ?”
“ಹೌದು, ನನ್ನ ದಿವ್ಯ ಪ್ರೇಮಕ್ಕಾಗಿ ಮಕ್ಕಳು ಸರಿಯಾಗಿ ಅನ್ನ ಕಾಣದೆ ಸಾಯಬೇಕೆಂದಿದೆಯೇ? ಮನಸ್ಸಿರಲಿ ಬಿಡಲಿ, ಅವರಿಗಾಗಿ ಆಗಲೇ ಬೇಕಾಯಿತು.”
“ಯಾರಿಗಾಗಿಯೇ ಆಗಲಿ, ಮಾಡಿಕೊಂಡು ಒಳ್ಳೆಯದು ಮಾಡಿದಿ.”
“ಒಳ್ಳೆಯದೇನು? ನನಗೆ ನಿಮಿಷ ನಿಮಿಷಕ್ಕೂ ಮಡಿದವಳ ನೆನಪೇ. ಮಕ್ಕಳು ಬಂದು `ಅಪ್ಪಾ, ಯಾಕೆ ಹೀಂಗೆ ಸುಮ್ಮನೆ ಕುಳಿತಿದ್ದೀ’ ಅನ್ನುತ್ತಾರೆ. ಹೊಸದಾಗಿ ಬಂದ ಪ್ರಾಣಿಗೂ ನಾನು ಮಡಿದವಳ ಫೋಟೋಕ್ಕೆ ಹೂವೇರಿಸುವದು ಇವೆಲ್ಲ ಸೇರುವದಿಲ್ಲ. ಏನೇ ಆದರೂ ಮಕ್ಕಳಿಗೊಂದು ತುತ್ತು ಅನ್ನ ಸರಿಯಾಗಿ ಬೀಳುತ್ತದೆ. ನೋಡು, ನಾವು ಪ್ರೀತಿಸುವ ವಸ್ತು ಇಲ್ಲವಾದಮೇಲೆ, ಆ ವಸ್ತುವಿಗೆ ಸಂಬಂಧಿಸಿದ್ದೆಲ್ಲ ನಮಗೆ ಪ್ರಿಯವಾಗುತ್ತದೆ. ನನಗೂ ಮಕ್ಕಳ ವಿಷಯದಲ್ಲಿ ಹಾಗೇ ಆಗಿದೆ. ನಮ್ಮ ಸರಸಿಯಂತೂ ಥೇಟು ತಾಯಿಯಹಾಗೇ, ಹೀಗಾಗಿ ಅವಳಲ್ಲಿದ್ದ ನನ್ನ ಪ್ರೇಮವೆಲ್ಲ ಈ ಮಕ್ಕಳಲ್ಲಿ ಮೂರ್ತಿಗೊಂಡಿದೆ.”
“ಸರಿ, ಸರಿ, ಸಹಜ ಅದು. ಆದರೆ ನಿನ್ನ ಹೊಸ ಹೆಂಡತಿಯ ಕಡೆಗೆ ನೀನು ಎಳ್ಳಷ್ಟೂ ದುರ್ಲಕ್ಷ್ಯ ಮಾಡಕೂಡದು.”
“ಲಕ್ಷವೂ ಇಲ್ಲ. ದುರ್ಲಕ್ಷ್ಯವೂ ಇಲ್ಲ. ಅವಳಷ್ಟಕ್ಕೆ ಅವಳು ಇರುತ್ತಾಳೆ.”
“ಹಾಗೆ ಅವಳಷ್ಟಕ್ಕೇ ಅವಳನ್ನು ಬಿಡಬಾರದು ಮೂರ್ತಿ, ಅವಳೂ ಒಂದು ಜೀವಿಯಲ್ಲವೇ?”
“ಆದರೆ ಅವಳಂತೆ ಇವಳನ್ನು ನಡಿಸಿಕೊಳ್ಳುವದು ಸಾಧ್ಯವಿಲ್ಲ. ಒಲಿದು ಕೂಡಿದ ಹೆಣ್ಣಿಗೂ ಹೀಗೆ ಮನೆಯ ವ್ಯವಸ್ಥೆಗೆ ತಂದ ಹೆಣ್ಣಿಗೂ ಹೆಚ್ಚು ಕಡಿಮೆ ಇದ್ದೇ ಇರುತ್ತದೆ.”
“ಇದ್ದೇ ಇರುತ್ತದೆ ಅನ್ನು, ಆದರೂ ಅದನ್ನು ತೋರಿಸಬಾರದು ಮೂರ್ತಿ. ಒಮ್ಮೊಮ್ಮೆ ಕೂಡಿದಮೇಲೆ ಒಲುಮೆ ಚಿಗಿತು ಜೀವನ ಸುಂದರವಾಗುತ್ತದೆ.”
“ಹು. ಅದೆಲ್ಲ ಹಳೆಯಕಾಲದ ಮಾತು.”
ನಾನು ಮಾತು ಬೆಳಿಸಲಿಲ್ಲ. ಅವನ ಆತ್ಮೀಯ ಮಿತ್ರನಾದ ನನಗೆ ಇದಕ್ಕೂ ಹೆಚ್ಚು ನುಡಿಯುವದು ಉಚಿತವೆಂದು ತೋರಲಿಲ್ಲ. ಇಷ್ಟು ಆಡಿದ್ದೇ ಅಧಿಕಪ್ರಸಂಗವಾಯಿತೋ ಎಂದು ಚಿಂತೆ. ಆದರೆ ಅವನ ಮಕ್ಕಳ ಮೇಲಿನ ಪ್ರೀತಿಯಿಂದ ನನಗೆ ಆನಂದವಾಗದೇ ಹೋಗಲಿಲ್ಲ.
+ + + +
“ಈಗ ಮನೆತುಂಬಿತು ನೋಡು ಮೂರ್ತಿ.”
“ಏನು ತುಂಬುವದೋ! ಕಸದ ಬುಟ್ಟಿಯೂ ತುಂಬುತ್ತದೆ.”
“ಛೇ, ಹಾಗೆ ಹೇಳಬಾರದು. ಮಕ್ಕಳು ಮರಿಗಳು ಇದ್ದರೆ ಮನೆಗೊಂದು ಕಳೆ ಬರುತ್ತದೆ.”
“ಕೊಳೆಯೂ ಬರುತ್ತದೆ. ಏನೇ ಬಂದರೂ ಅಡ್ಡಿಯಿಲ್ಲ. ಆಡಲಿಕ್ಕಾಗಿ ನೆರೆಮನೆಯ ಮಕ್ಕಳನ್ನೇ ಅವಲಂಬಿಸುವದು ತಪ್ಪಿತು ಈ ಗೋಪು, ಸರಸಿಯರಿಗೆ. ಮನೆಯಲ್ಲೇ ಮೂರು ನಾಲ್ಕು ಚಿಕ್ಕವರಾದರು. ಅಲ್ಲದಿದ್ದರೆ ನೋಡು, ಇಬ್ಬರೇ ಆಗುತ್ತಿದ್ದರು. ನಾನು ಎಲ್ಲಾದರೂ ಹೊರಗೆ ಹೋಗ ಬೇಕಾದರೆ ನೆರೆಮನೆಯ ಹುಡುಗರನ್ನು ಕರೆದು ತಂದೋ, ನೆರೆಮನೆಗೆ ಇವರನ್ನೊಯ್ದು ಬಿಟ್ಟೋ ಹೋಗಬೇಕಾಗುತ್ತಿತ್ತು. ಮಕ್ಕಳು ಅಂದರೇ ಹಾಗೆ : ಹಿಂಡಾಗಿ ಆಡುತ್ತಿದ್ದರೇ ಅವರು ಸುಮ್ಮನಿರುತ್ತಾರೆ.”
ಮಕ್ಕಳ ಮೇಲಿನ ಪ್ರೀತಿಯಿಂದ ಅವರಿಗಾಗಿ ಮಕ್ಕಳನ್ನು ಒದಗಿಸಿ ಕೊಡುವ ಅವನ ನಿಷ್ಠೆಗೆ ನಾನು ಬೆಪ್ಪಾದೆ.
X X X
ಈಗ ಮೂರ್ತಿಯ ಮನೆಯಲ್ಲಿ ಆನಂದ ನೆಲಸಿದೆ. ಅದನ್ನು ಕಂಡು ನನಗೂ ಹಿಗ್ಗು. ಆದರೂ ಹಿಂದಿನದೇ ಧಾಟಿಯಲ್ಲಿ ಮೂರಿಯೊಡನೆ ನಾಲ್ಕು ಮಾತು ಆಡಲೇಬೇಕೆಂದು ನನ್ನ ನಾಲಿಗೆ ಕುಣಿಯಹತ್ತಿತು.
ಮರುದಿನ ಅವನ ಭೆಟ್ಟಿಯಾಯಿತು. “ಏನಪ್ಪಾ ಮೂರ್ತಿ, ಎಲ್ಲಾ ಕ್ಷೇಮವೇ?” ರೂಢಿಯಂತೆ ಕೇಳಿದೆ.
“ಕ್ಷೇಮವೇ, ಸಂಸಾರ ಅಂದಮೇಲೆ ನೋಡು ಎಲ್ಲಾ ಇದ್ದುದೇ.”
“ಹಾಗೆಂದರೆ ಹೇಗೆ? ನಿನ್ನ ಹಾಗೆ ಮಾಟಾಗಿ ಇರುವ ಭಾಗ್ಯ ನನಗಿದ್ದಿದ್ದರೆ….”
ಏನು ಮಾಟವಾಗಿರುವದೋ? ಇದ್ದುದರಲ್ಲೇ ಶಿಸ್ತಾಗಿ ನಡಿಸಿಕೊಂಡು ಹೋಗುತ್ತಾಳೆಂದು ನಡೆದಿದೆ. ಅಲ್ಲದಿದ್ದರೆ ನನ್ನ ಫಜೀತಿ ದೇವರೇ ಬಲ್ಲ.”
“ಅದು ಮುಖ್ಯ ನೋಡು. ಮನೆಯ ಕಾರಭಾರವನ್ನೊಂದು ಹೆಂಗಸರು ಸರಿಯಾಗಿ ನೋಡಿಕೊಂಡು ಹೋಗಿಬಿಟ್ಟರೆ ನಮಗೆ ಎಷ್ಟೋ ಆಧಾರ. ನಮ್ಮ ಮನೆಯಲ್ಲಿ ಅದೇ ಇಲ್ಲ. ”
“ದೇವರ ದಯೆಯಿಂದ ನಮ್ಮ ಮನೆಯವಳು ಮಾತ್ರ ಚೆನ್ನಾಗಿ ನೋಡಿಕೊಳ್ಳುತ್ತಾಳೆ. ಏನೋ ಅವಳ ಮಕ್ಕಳ ಪುಣ್ಯ. ಇವಳು ಯೋಗ್ಯವಾಗಿ ಸಂಬಾಳಿಸಿಕೊಳ್ಳುತ್ತಾಳೆ. ಮತ್ತೆ ನೋಡು, ನಮ್ಮ ಗೋಪು, ಸರಸಿ ಬಹಳ ತುಂಟರು. ಇವಳು ಅಲ್ಲದಿದ್ದರೆ ಬೇರೆ ಯಾರಿಂದಲೂ ನಡಿಸಿಕೊಳ್ಳಲು ಸಾಧ್ಯವಿಲ್ಲ. ಅವಳೇ ಇದ್ದಿದ್ದರೂ ಇಷ್ಟು ಮಕ್ಕಳನ್ನು ಕಾಪಾಡುವದು ಹೇಗಾಗುತ್ತಿತ್ತೋ”
“ಒಬ್ಬೊಬ್ಬರ ಶಕ್ತಿ ಅದು. ಎಷ್ಟೇ ಮಕ್ಕಳು ಮರಿಗಳು ಇದ್ದರೂ ಸಮಾಧಾನದಿಂದ ನೋಡಿಕೊಳ್ಳುತ್ತಾರೆ. ನಮ್ಮ ಮನೆಯವಳಿಗಂತೂ ಮಕ್ಕಳು ಕುಯ್ ಅಂದರೆ ಸಿಟ್ಟು ಬರುತ್ತದೆ.”
“ಅವಳಿಗೆ ಸಿಟ್ಟು, ಬಂದದ್ದನ್ನೇ ನಾನು ಕಾಣಲಿಲ್ಲ. ತನ್ನ ಮಕ್ಕಳು ಬೇರೆಯವರ ಮಕ್ಕಳು ಎಂಬ ಒಡಕಿಲ್ಲ. ಆದರೆ ಒಂದು. ನಾನು ಅವಳ ನೆನಪು ಮಾಡಿಕೊಂಡು ಏನಾದರೂ ಆಡಿದರೆ ಇವಳಿಗೆ ಆಗುವದಿಲ್ಲ. ದಿನಾ ದಿನಾ ಅವಳ ಫೋಟೋಕ್ಕೆ ಹೂವೇರಿಸುವದೂ ಇವಳಿಗೆ ಸೇರುವದಿಲ್ಲ. ಇದೊಂದು ವಿಷಯದಲ್ಲಿ ಇವಳಿಗೆ ಮೂಗು ಕೆಂಪಾಗುತ್ತದೆ. ಹೆಣ್ಣು ಹೃದಯ ವನ್ನು ಯಾಕೆ ನೋಯಿಸಬೇಕು ಅಂತ ನಾನು ಅವಳ ಫೋಟೋ ಕಿತ್ತು ಇಟ್ಟು ಬಿಟ್ಟೆ. ಅವಳೂ ಹೆಣ್ಣು. ಇವಳೂ ಹೆಣ್ಣು, ತನ್ನ ಮತ್ತು ಅವಳ ಮಕ್ಕಳಲ್ಲಿ ಭೇದಭಾವ ಇಟ್ಟುಕೊಳ್ಳದ ಇವಳಲ್ಲಿ ನಾನೇಕೆ ಭೇದ ಮಾಡ ಬೇಕು? ಆದರೂ ಅವಳ ನೆನಪಾದಾಗ ಪ್ರಪಂಚವೇ ಶೂನ್ಯವೆನಿಸುತ್ತದೆ.”
ನನಗೆ ಒಳಗೊಳಗೆ ನಗುಬಂತು. ಏನು ಹೇಳಬೇಕೆಂಬುದು ತಿಳಿಯದೆ “ಪ್ರಪಂಚ ಶೂನ್ಯವೇ ಇದೆ ಮೂರ್ತಿ, ಆದರೂ ನಾವು ಹಾಗೆ ಆನಿಸಿಕೊಳ್ಳಕೂಡದು” ಎಂದು ಗಂಭೀರವಾಗಿ ನುಡಿದೆ.
ತೋರಿಕೆಗಾಗಿ ಮಡಿದವಳ ಬಗ್ಗೆ ತನ್ನ ‘ದಿವ್ಯಪ್ರೇಮ’ ವನ್ನು ನುಡಿಯುವ ಅವನಿಗೆ ನನ್ನ ಗುಟ್ಟು ಹತ್ತಲಿಲ್ಲ. ಜಗತ್ತಿಗೆ ತನ್ನ ‘ದಿವ್ಯಪ್ರೇಮ’ವನ್ನು ಸಾರಲು ಅವನಿಗೊಬ್ಬ ಆತ್ಮೀಯ ಪ್ರಾಣಿ ಬೇಕಿತ್ತು. ಮಾನವನ ಹೃದಯದ ಸೂಕ್ಷ್ಮ ಅಭ್ಯಾಸ ಮಾಡುವ ಕುತೂಹಲವುಳ್ಳ ನನಗೆ ಪ್ರಯೋಗಕ್ಕಾಗಿ ಒಂದು ಅರ್ಧ ಚತುಷ್ಪಾದ ಬೇಕಿತ್ತು!
*****


















