ಸಾವ ಕೊಂದ ಮಗು

ಸಾವ ಕೊಂದ ಮಗು

ಚಿತ್ರ: ಪ್ರಮೋದ್ ಪಿ ಟಿ
ಚಿತ್ರ: ಪ್ರಮೋದ್ ಪಿ ಟಿ

ಮಗುವೊಂದರ ಎಲ್ಲಾ ಸುಖಗಳನ್ನು ಅನುಭವಿಸಿದ ನಾಲ್ಕೈದು ವರ್ಷಗಳ ನಂತರ ಒಬ್ಬ ಮಗನೂ ಹುಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎಂದು ನನ್ನ ಹೆಂಡತಿಗೆ ಅನ್ನಿಸಲಾರಂಭಿಸಿ, ದಿನವೂ ಪೀಡಿಸಲಾರಂಭಿಸಿದ್ದಳು. ಕಂಡಕಂಡ ದೇವರುಗಳಿಗೆಲ್ಲಾ ಹರಕೆಹೊತ್ತು, ತಿಂಗಳಾಗುವ ಮೊದಲೇ ಇನ್ನೇನು ತನಗೆ ಗಂಡು ಮಗು ಹುಟ್ಟೇಬಿಟ್ಟಿತೆನ್ನುವಂತೆ ಸಂಭ್ರಮಿಸುತ್ತಿದ್ದಳು. ‘ಪಕ್ಕದ ಮನೆಯ ಲತಾಗೆ ಎರಡೂ ಹೆಣ್ಣು ಮಕ್ಕಳು.. ಅವರಪ್ಪಗೆ ಬಹಳ ದುರಾಸೆ, ಅದಕ್ಕೇ ಎರಡೂ ಹೆಣ್ಣು ಆಗಿದ್ದಾವೆ ಅಂತ ಜನ ಆಡಿಕೊಳ್ಳುತ್ತಿದ್ದಾರೆ ರೀ..’ ಎಂದು ಸುತ್ತಮುತ್ತಲಿನವರ ಪ್ರವರಗಳನ್ನು ವರ್ಣಿಸುತ್ತಾ, ಈಗಾಗಲೇ ಒಬ್ಬ ಹೆಣ್ಣು ಮಗಳ ಅಪ್ಪನಾಗಿರುವ ನನಗೆ ಇನ್ನೊಂದು ಹೆಣ್ಣುಮಗು ಆಗದಂತಿರಲಿ ಎಂದು ನನಗೇ ಅಸಿಬಿಡಬೇಕೆನ್ನುವಂತೆ ಮಾಡುತ್ತಿದ್ದಳು.

ಅವಳ ಯಾವ ಪೂಜೆಗೆ ಅದ್ಯಾವ ಭಗವಂತ ಒಲಿದನೋ ಕಾಣೆ. ಐದು ತಿಂಗಳಾಗುತ್ತಿದ್ದಂತೆಯೇ ಯಾವ ಡಾಕ್ಟರರಿಗೋ ಓಲೈಸಿ ತನಗೂ ಗಂಡು ಮಗು ಹುಟ್ಟುತ್ತಿದೆಯೆಂಬ ಸತ್ಯವನ್ನು ತಿಳಿದುಕೊಂಡು ಸಂಭ್ರಮಿಸಲಾರಂಭಿಸಿದ್ದಳು. ಅವಳ ಖುಷಿ, ಉದ್ವೇಗ ಎಷ್ಟಿತ್ತೆಂದರೆ, ಈ ಪ್ರಪಂಚದಲ್ಲಿ ಈ ವಿಷಯ ಬಿಟ್ಟು ಬೇರೆ ಏನೂ ಇಲ್ಲವೇನೋ ಅನ್ನಿಸಿಬಿಟ್ಟಿತ್ತು. ಒಂದು ವೇಳೆ ಡಾಕ್ಟರರ ಭವಿಷ್ಯ ಸುಳ್ಳಾಗಿ -ತನ್ನ ಕಾಟ ತಪ್ಪಿಸಿಕೊಳ್ಳಬೇಕೆಂದು ಸುಳ್ಳು ಹೇಳಿದ್ದಾರೇನೋ ಅನ್ನಿಸಿ- ಎಲ್ಲಿ ತನಗೆ ಹೆಣ್ಣು ಮಗು ಆಗಿಬಿಡುತ್ತದೋ ಎಂದು ತನ್ನಷ್ಟಕ್ಕೆ ತಾನೇ ಆತಂಕಪಟ್ಟುಕೊಳ್ಳುತ್ತ ಚಡಪಡಿಸಲಾರಂಭಿಸಿದ್ದಳು. ಅವಳ ತಳಮಳವನ್ನು ಅವಳೇ ತಾಳಲಾರದೇ ಒಂದು ದಿನ ರಾತ್ರೆ ಮೂರೂವರೆ ಗಂಟೆಗೆ ಹೆರಿಗೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ಸೇರಿಸಬೇಕಾಯಿತು!

ಆ ಅಪರಾತ್ರಿಯಲ್ಲಿ ಫೋನು ಮಾಡಿ ಡಾಕ್ಟರರನ್ನು ಎಬ್ಬಿಸಿ ಆಸ್ಪತ್ರೆಗೆ ಕರೆಸಿಕೊಂಡದ್ದಾಯಿತು. ಏಳು ತಿಂಗಳಲ್ಲಿ ಮಗು ಹುಟ್ಟಿದರೆ ಅದರ ಅಂಗಾಂಗಗಳು ಪೂರ್ಣವಾಗಿ ಬೆಳವಣಿಗೆಯಾಗಿರದೇ ತಾಯಿ ಮಕ್ಕಳಿಬ್ಬರ ಜೀವಕ್ಕೂ ಅಪಾಯವಾಗಲೂಬಹುದು ಎಂದು ಡಾಕ್ಟರರು ಮಗುವಿನ ಹುಟ್ಟನ್ನೇ ಮುಂದಕ್ಕೆ ಹಾಕಲು ಏನೆಲ್ಲಾ ಪ್ರಯತ್ನ ಬೇಕೋ ಅದನ್ನೆಲ್ಲಾ ಮಾಡಲಾರಂಭಿಸಿದ್ದರು. ಎಷ್ಟು ಹೇಳಿದರೂ ಕೇಳದೇ, ತನ್ನಿಂದ ಇನ್ನು ತಡೆದುಕೊಳ್ಳಲಾಗುತ್ತಿಲ್ಲ, ದಯವಿಟ್ಟು ಸಿಜೇರಿಯನ್ ಮಾಡಿ ತೆಗೆದುಬಿಡಿ ಡಾಕ್ಟರರೇ ಎಂದು ಬಡಬಡಾಯಿಸಲಾರಂಭಿಸಿದ್ದಳು. ಅವರಾದರೂ ಇನ್ನೇನು ಮಾಡಿಯಾರು? ಇದುವರೆಗೂ ಲೇಬರ್ ಪೇನ್ ಬರದಂತೆ ಕೊಟ್ಟಿದ್ದ ಇಂಜೆಕ್ಷನ ಬದಲಾಗಿ ಹೆರಿಗೆನೋವು ಬರುವಂತಹ ಇಂಜೆಕ್ಷನ್ ಕೊಟ್ಟರು!

‘ಸುಮ್ಮನೆ ಕೂರಬಾರದು.. ಒಂದಷ್ಟು ಚೆನ್ನಾಗಿ ಓಡಾಡಬೇಕು..’ ಅಂತ ಹೇಳಿ ಹೋದ ಡಾಕ್ಟರರು ಗಂಟೆಯಾದರೂ ತಿರುಗಿ ನೋಡಲೇ ಇಲ್ಲ. ಅದು ಕೆಲಸ ಮಾಡಲು ಇನ್ನೆಷ್ಟು ಹೊತ್ತು ಬೇಕೆಂದು ಅವರಿಗೆ ಗೊತ್ತಿರಬೇಕು. ಆದರೆ ಈಕೆ ಸುಮ್ಮರಬೇಕಲ್ಲ.. ನನ್ನ ಜೀವ ತಿನ್ನಲಾರಂಭಿಸಿದಳು. ‘ಎಂಥ ಆಸ್ಪತ್ರೆ ಅಂತ ತಂದು ಸೇಸಿದ್ರೋ.. ನಾನು ಇಂಗಾದ್ರೂ ಸಾಯ್ಲಿ, ಬೇರೆಯವಳನ್ನ ಕಟ್ಟಿಕೊಳ್ಳಬಹುದು ಅಂತ ಕಾದಿದೀರೇನೋ.. ಹಾಳಾಗೋಗ್ಲಿ, ನನ್ನನ್ನ ಸಾಯ್ಸಾದ್ರೂ ಸಾಯಿಸ್ಬಿಡ್ರೀ.. ನಂಗೆ ತಡೆಯಕ್ಕಾಗ್ತಾಯಿಲ್ಲ..’ ಅನ್ನುವುದರ ಜೊತೆಗೆ ಕೈಯ್ಯಿಂದ ಹೊಟ್ಟೆಯೊಳಗಿರುವ ಮಗುವಿನ ಜುಟ್ಟು ಹಿಡಿದು ಹೊರಕ್ಕೆಸೆದುಬಿಡುವವಳಂತೆ ಆರ್ಭಟಿಸಲಾರಂಭಿಸಿದಳು..

ನಾನಾದರೋ ಅವಳ ಸಂಕಟ ನೋಡಲಾರದೇ, ಡಾಕ್ಟರರನ್ನ ಹುಡುಕಿಕೊಂಡು ಹೋಗಿ, ಅವಳ ನೋವನ್ನ ನನ್ನದೇ ನೋವು ಎನ್ನುವಂತೆ ವಿವರಿಸಿ ಏನಾದರೂ ಪರಿಹಾರ ನೀಡಿ ಅಂತ ಕೋರಿಕೊಂಡೆ. ಕ್ಯೂ ನಿಂತಿದ್ದ ಹತ್ತಾರು ಜನ ಗರ್ಭಿಣಿಯರ ನೋವನ್ನೆಲ್ಲಾ ತನ್ನದೇ ಎನ್ನುವಂತೆ ಹಾಗೂ ಇದೆಲ್ಲಾ ಸಹಜ ಎನ್ನುವಂತೆ ಅವರನ್ನೆಲ್ಲಾ ಸಮಾಧಾನಿಸುತ್ತಿದ್ದ ಡಾಕ್ಟರರು, ನನ್ನ ಕಡೆ ನೋಡಿ ಒಂದು ತಿಳಿನಗೆ ಬೀರಿ ಸುಮ್ಮನಾದರು.

ನನಗೋ ಮತ್ತೆ ಮತ್ತೆ ಪೀಡಿಸಲು ಸಂಕೋಚವಾಗಿ ಸುಮ್ಮನೇ ನಿಂತೆ. ಹೆಂಗಸರ ಈ ಲಿಂಗಸಂಬಂಧೀ ಸಮಸ್ಯೆಗಳನ್ನು ಗಂಡಸಾದ ಆ ಡಾಕ್ಟರರು ಹೇಗೆ ನಿಭಾಯಿಸುತ್ತಾರೋ ಎಂದು ನೋಡುತ್ತಾ ನಿಂತಿದ್ದೆ. ಒಬ್ಬೊಬ್ಬರದೂ ಒಂದೊಂದು ತರಹದ ನೋವು.. ಕೆಲವರನ್ನ ಒಳ ರೂಮಿಗೆ ಕರಕೊಂಡು ಹೋಗಿ ಪರಿಶೀಲಿಸಿ, ಹೊರಬಂದು ಅರ್ಥವಾಗದ ಭಾಷೆಯ ಪದಗಳನ್ನು ಹೇಳಿ ಏನೇನೋ ಬರೆದುಕೊಡುತ್ತಿದ್ದರು.

ನಾನು ಮತ್ತೂ ಸುಮ್ಮನೆ ನಿಂತಿರುವುದನ್ನು ನೋಡಿ -ಮೌನ ಪ್ರತಿಭಟನೆಯ ರೀತಿ ನಿಂತಿರಬಹುದೆಂದು ಭಾವಿಸಿ- ‘ಬಾ ನೋಡೋಣ’ ಎಂದು ಹೊರಟವರನ್ನು ಹಿಂಬಾಲಿಸಿದೆ. ಹೊಟ್ಟೆಯನ್ನೆಲ್ಲಾ ಹಿಚುಕಿ ನೋಡಿದ ಅವರಿಗೆ ಅದೇನು ಅರ್ಥವಾಯಿತೋ, ‘ಇನ್ನೂ ಎರಡು-ಎರಡೂವರೆ ಗಂಟೆ ಬೇಕು.. ಕೀಲುಗಳೆಲ್ಲಾ ಸಡಿಲಾಗಬೇಕು.. ಚೆನ್ನಾಗಿ ವಾಕ್ ಮಾಡಿಸಿ ಅಂದರೆ ಸುಮ್ಮನೇ ಇದ್ದೀರಲ್ಲಾ..’ ಎಂದು -ಮತ್ತೆ ಅಲ್ಲಿಗೆ ಬರಬೇಡ ಎನ್ನುವಂತೆ- ನನ್ನನ್ನ ಬೈದು ಹೋದರು.

ನಾನು ಅವಳಿಗೆ ಬೈದು -ಕಾಲು ಮುರಿದುಕೊಂಡವರನ್ನು ನಡೆಸುವಂತೆ- ಕೈಹಿಡಿದು ಓಡಾಡಿಸಲಾರಂಭಿಸಿದೆ, ಆಕೆಯ ಹಿಡಿ ಶಾಪದ ಜೊತೆಗೇ. ಅಷ್ಟರಲ್ಲಿ ಊರಿಂದ ಅವರಮ್ಮ ನೇರವಾಗಿ ಆಸ್ಪತ್ರೆಗೆ ಬಂದವರೇ -ಆಸ್ಪತ್ರೆ ಅಂತ ಇರುವುದೇ ಮಲಗಿ ವಿಶ್ರಮಿಸಲಿಕ್ಕೆ ಎನ್ನುವಂತೆ- ಯಾಕೆ ಹೀಗೆ ಹಿಂಸೆ ಕೊಡುತ್ತಿದ್ದೀರಾ ಎಂದು ಮುಖ ಕಿವುಚಿಕೊಂಡು ಅಸಹನೆ ತೋರುತ್ತಾ, ‘ಇಂಥ ಎಷ್ಟು ಹೆರಿಗೆ ಮಾಡಿಸಿಲ್ಲ, ಮೊದ್ಲು ಕಕಂಬಂದು ಮಲುಗುಸ್ರೀ.. ಅದೇನೋ ಹೇಳ್ತಾರಲ್ಲ, ಆರು ಹೆತ್ತೋಳ್ಮುಂದೆ ಮೂರು ಹೆತ್ತೋಳು ಏನೋ ಹೇಳುದ್ಲಂತೆ ಹಂಗೆ.. ಹೆಂಗಸರ ನೋವು ಆ ಗಂಡಸು ಡಾಕ್ಟ್ರಿಗೇನು ಗೊತ್ತಾಗುತ್ತೆ?’ ಅಂದವರೇ, ‘ಬೇರೆ ಯಾರೂ ಹೆಂಗ್ಸ್ರು ಡಾಕ್ಟ್ರು ಇರ್ಲಿಲ್ವ ಈ ಊರಲ್ಲಿ..’ ಅಂತ ನನ್ನ ಮುಖ ನೋಡದೇ, ಮುಖದ ಮೇಲೆ ಚಚ್ಚಿದಂತೆ ಮಾತಾಡುತ್ತಾ, ಮಾತೃಪ್ರೀತಿಯಿಂದ ಆಕೆಯನ್ನು ಕರಕೊಂಡು ಹೋಗಿ ಮಲಗಿಸಿ ಯಾವಯಾವುದೋ ಅಂಗಗಳನ್ನ ನೀವಲಾರಂಭಿಸಿದರು.

ಅಂತೂ ಇಂತೂ ಗಂಟೆಯಾದ ಮೇಲೆ ಹುಟ್ಟಿದ ರೆಟ್ಟೆಗಾತ್ರದ ಮಗು ಗಂಡು ಎಂದು ಖಾತ್ರಿಯಾಗುತ್ತಿದ್ದಂತೆಯೇ ಕ್ಷಣಾರ್ಧದಲ್ಲಿ ಎಲ್ಲವನ್ನೂ ಮರೆತು ನಿರಾಳಳಾದಳು. ಆದರೆ ನನ್ನ ಕೊರಳಿಗೆ ಬಿದ್ದ ಆ ಮಗುವಿನ ಜೀವದ ಕುರಿತು ನನಗೆ ಆತಂಕ ಶುರುವಾಯಿತು. ನರ್ಸ್‌ಗಳು ಮಗುವನ್ನು ಇನ್‌ಕ್ಯುಬೇಟರ್‌ನಲ್ಲಿ ಇಟ್ಟು ನೀಲಿ ಬಣ್ಣದ ಲೈಟ್ ಹಾಕಿ ಸುಮ್ಮನೇ ಕುಂತುಬಿಟ್ಟಿದ್ದರು. ಅದಕ್ಕೆ ಏನಾಗಿದೆ ಎಂದೂ ಹೇಳದೇ, ತಮಗೆ ಗೊತ್ತಿರುವ ವಿದ್ಯೆ ಇಷ್ಟೆ, ಮುಂದಿನದನ್ನು ನೋಡಿಕೊಳ್ಳಲು ಮಕ್ಕಳ ಡಾಕ್ಟರರೇ ಬರಬೇಕು ಎಂದುಬಿಟ್ಟರು.

***

ತನ್ನೆಲ್ಲಾ ತೀಟೆಗಳನ್ನು ತೀರಿಸಿಕೊಂಡಂತೆ ಹೊತ್ತು ಮುಳುಗುವ ಹೊತ್ತಿಗೆ ಬಂದ ಮಕ್ಕಳ ಡಾಕ್ಟರರು, ಮಗುವಿನ ಶ್ವಾಸಕೋಶಗಳು ಇನ್ನೂ ಸರಿಯಾಗಿ ಬೆಳೆಯದೇ ಇರುವ ಕಾರಣ ಉಸಿರಾಟಕ್ಕೆ ತುಂಬಾ ತೊಂದರೆಯಾಗಿದೆ, ಈಗಿಂದೀಗಲೇ ರಾಜಧಾನಿಗೆ ಕರಕೊಂಡು ಹೋಗಬೇಕೆಂದು ಬರೆದುಕೊಟ್ಟರು. ಅದಕ್ಕೆಲ್ಲಾ ಎಷ್ಟು ಖರ್ಚಾಗುತ್ತೋ ಗೊತ್ತಿಲ್ಲ, ಜೇಬಲ್ಲಿ ನೋಡಿದರೆ ಅಷ್ಟೊಂದು ದುಡ್ಡಿಲ್ಲ.. ಆದಾಗ್ಯೂ, ‘ಯಾಕೆ ಇಷ್ಟೊಂದು ತಡ ಮಾಡುತ್ತಿದ್ದೀರಿ, ನಿಧಾನ ಆದರೆ ಮಗುವಿನ ಜೀವಕ್ಕೇ ಅಪಾಯವಿದೆ.. ಇದರ ಮೇಲೆ ನಿಮ್ಮಿಷ್ಟ..’ ಎಂದು ನಮ್ಮ ಮೇಲೆಯೇ ತಪ್ಪನ್ನು ಹೊರಿಸಿ ಹೊರಟುಬಿಟ್ಟರು.

ಆ ಆಸ್ಪತ್ರೆಯ ಆಂಬುಲೆನ್ಸ್ ಒಂದೇಸಮನೇ ಸೈರನ್ ಕೂಗಿಸುತ್ತಾ, ಮುಂದಿದ್ದ ಲಾರಿ ಬಸ್ಸುಗಳಿಂದೆಲ್ಲ ದಾರಿ ಬಿಡಿಸಿಕೊಂಡು ಗಂಟೆಯೊಳಗೆ ಮುಂದಿನ ಆಸ್ಪತ್ರೆ ಸೇರಲು ತವಕಿಸುತ್ತಿತ್ತು. ಇನ್ನೇನು ಐದು ಮಿಷದ ದಾರಿ ಬಾಕಿ ಇದೆ ಅನ್ನುವ ಹೊತ್ತಿಗೆ, ಹೆದ್ದಾರಿಯಿಂದ ಹೊರಳಿ ಊರಕಡೆಗೆ ತಿರುಗುತ್ತಿದ್ದಂತೆಯೇ, ರಸ್ತೆಯ ಪಕ್ಕದ ಯಾವುದೋ ಗುಂಡಿಗೆ ದಬಕ್ಕೆಂದು ಬಿದ್ದ ರಭಸಕ್ಕೆ ಆಕ್ಸಿಜನ ಸಿಲಿಂಡರ್ ವಾಲಾಡಿ ಏನೋ ಏರುಪೇರಾಗಿ ಮಗುವಿನ ಮೂಗಿಂದ ಬರುತ್ತಿದ್ದ ಗೂರಲು ಸದ್ದೂ ಇಲ್ಲವಾಗಿ ಮತ್ತಷ್ಟು ಆತಂಕಕ್ಕೊಳಗಾದೆ. ನನಗರಿವಿಲ್ಲದೇ ಗಂಟಲ ನರದ ತುಂಬಾ ದುಃಖ ಎಂಬುದು ಉಕ್ಕಿಬಂದು ಉಸಿರಾಡಲೂ ಕಷ್ಟವೆನಿಸಿ, ಕಣ್ಣಂಚಿನಲ್ಲೂ ನೀರು ಇಣುಕಿತು.

ಯಾರದಾದರೂ ಮಕ್ಕಳು ಸತ್ತಾಗ, ‘ಅದಕ್ಯಾಕೆ ಇಷ್ಟೊಂದು ಅಳಬೇಕು, ಒಂದೆರಡು ವರ್ಷದಲ್ಲೇ ಅಂತಹುದೇ ಇನ್ನೊಂದು ಮಗುವನ್ನು ಪಡೆಯುವುದಕ್ಕಾಗುವುದಿಲ್ಲವೇ?…’ ಅನ್ನುತ್ತಿದ್ದ ನನಗೆ, ಮಗುವೊಂದಕ್ಕೆ ಜೀವ ಕೊಡುವುದೂ ಎಷ್ಟೊಂದು ಕಷ್ಟದ ಕೆಲಸ ಎಂಬ ಸತ್ಯದ ಅರಿವಾದದ್ದು ಆಗಲೇ. ಈ ಜಗದ ಒಂದೊಂದು ಜೀವಿಯೂ ಒಂದೊಂದು ಆಂಟಿಕ್ ಪೀಸ್‌ಗಳಿದ್ದಂತೆ. ಆ ಒಂದು ಕ್ಷಣದಲ್ಲಿ, ೧೦೦% ಅಂತಹದೇ ಇನ್ನೊಂದು ಜೀವಿ ಈ ಭೂಮಿಯ ಮೇಲೆ ಇರಲು ಸಾಧ್ಯವಿಲ್ಲ! ಕ್ಲೋನಿಂಗ್ ಮೂಲಕವೂ ಅಸಾಧ್ಯ! ಸೃಷ್ಟಿ ಎಂಬುದು ಎಂತಹ ವಿಚಿತ್ರ ಅಲ್ಲವಾ!

ರಾತ್ರಿ ಹತ್ತು ಗಂಟೆಯ ವೇಳೆಗೆ ಮಕ್ಕಳ ಆ ಆಸ್ಪತ್ರೆಗೆ ಸೇರಿಸುತ್ತಿದ್ದಂತೆಯೇ ಮಗುವನ್ನು ಒಳಗೆ ಎಳೆದುಕೊಂಡು, ಅದಕ್ಕೆ ‘ಬೇಬಿ ಆಫ್…’ ಎಂದು ತಾಯಿಯ ಹೆಸರನ್ನು ಬರೆದ ಒಂದು ಚೀಟಿಯನ್ನು ಅಂಟಿಸಿ ನಮ್ಮಿಂದ ಬೇರ್ಪಡಿಸಿದರು. ಕಂಡೀಷನ್ ಹೇಗಿದೆ ಡಾಕ್ಟರ್‌ರೇ ಎಂದರೆ, ಮತ್ತೇನೂ ಕೇಳದಂತೆ, ‘ಡೋಂಟ್ ವರಿ, ಇಲ್ಲಿಗೆ ಬರುವವರೆಗೆ ಜೀವ ಇದ್ದರೆ ಸಾಕು, ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ’ ಎಂದುಬಿಟ್ಟರು.

ದಿನ ಬೆಳಗ್ಗೆ ಒಂದು ಸಲ, ಸಂಜೆ ಒಂದು ಸಲ ಗಾಜಿನ ಕಿಟಕಿಯ ಪರದೆಯನ್ನು ಸರಿಸುವ ಮೂಲಕ -ಪ್ರಯೋಗ ಶಾಲೆಯಲ್ಲಿ ಸಲ್ಯೂಷನ್ ಟ್ಯೂಬ್‌ನಲ್ಲಿ ಇಟ್ಟಿರುವ ಪಿಂಡಗಳನ್ನು ತೋರಿಸುವಂತೆ- ತೋರಿಸುತ್ತಿದ್ದರು. ಅಗೋ ಆ ನಂಬರಿನ ಮಗು ನಮ್ಮದೇ ಎಂದು ಯಾರಾದರೂ ನೆಂಟರು ಬಂದಿದ್ದವರಿಗೆ ತೋರಿಸಬಹುದಾಗಿತ್ತು. ಆ ಒಂದೂವರೆ ಅಡಿ ಉದ್ದದ ದೇಹಕ್ಕೆ ಎಲ್ಲೆಲ್ಲಿಂದಲೋ ಹರಿದು ಬಂದಿರುವ ಕೆಂಪು ಹಳದಿ ನೀಲಿ ಬಣ್ಣದ ನರಗಳಂತಹ ವಿದ್ಯುತ್ ವೈರುಗಳು ಜೀವ ನೀಡುವ ಮಾಂತ್ರಿಕನ ಪ್ರಯೋಗದಂತೆ ಕಂಡುಬರುತ್ತಿದ್ದವು.

***

ಮಾರನೆಯ ದಿನ ಮಗುವಿನ ತಾಯಿಯನ್ನು ಕರೆಸಬಹುದೆಂದಾಗ, ಒಂದು ಆಶಾಕಿರಣ ಚಿಗುರಿತು -ಮಗುವಿಗೆ ಹಾಲು ಕುಡಿಸಲೆಂದೇ ಇರಬೇಕೆಂದು. ಹಾಗೆಂದು ಹೆಂಡತಿಗೆ ಹೇಳಿದಾಕ್ಷಣ ಆಕೆ ಖುಷಿಯಾಗಿ ಹೋದಳು. ತನ್ನ ಮಗುವಿಗೆ ಏನೂ ಆಗಿಲ್ಲವೆಂಬ ಭರವಸೆ ಆಕೆಗೆ ಬಂದು ಹೋಯಿತು. ಕೂಡಲೇ ಹೆರಿಗೆ ಆಸ್ಪತ್ರೆಯಿಂದ ಡಿಸ್‌ಛಾರ್ಜ್ ಮಾಡಿಸಿಕೊಂಡು ಬಂದುಬಿಟ್ಟಳು. ಆವರೆಗೂ ಮಗುವನ್ನೇ ನೋಡಿರದಿದ್ದ ಆಕೆ ಕೂಡಲೇ ಮಗುವನ್ನು ನೋಡಬೇಕೆಂದು ಹಠ ಹಿಡಿದು ಕುಂತಳು. ಆದರೆ ಈಕೆ ಬಂದಿರುವಳೆಂದ ತಕ್ಷಣ ಒಳಗೆ ಕರೆದುಕೊಂಡು ಹೋಗಿ ತೋರಿಸಲು ಆಕೆಯೇನೂ ವಿ.ವಿ.ಐ.ಪಿ. ಅಲ್ಲವಲ್ಲ. ಆದರೆ ಆಕೆಯ ಕಾಟ ತಡೆಯಲಾರದೇ ದೊಡ್ಡ ಡಾಕ್ಟರರ ಬಳಿ ಹೋಗಿ ಹೀಗೆ ತಾಯಿಯನ್ನು ಕರೆಸಿರುವುದಾಗಿ ಹೇಳಿ ಬಂದೆ. ಅವರದೇ ಆದ ಲೋಕದಲ್ಲಿದ್ದ ಅವರು ಕೇಳಿಸಿಕೊಂಡರೋ ಇಲ್ಲವೋ. ಆದರೂ, ‘ಸರಿ..’ ಎಂದರಷ್ಟೇ. ಹಾಗೆಂದು ಬಂದು ಹೆಂಡತಿಗೆ ಹೇಳಿ ಸಮಾಧಾನ ಮಾಡಿದೆ. ಅವರಿಗೆ ಬೇಕೆಂದಾಗ ಕರೆಸುವರೆಂದೆ. ಆದರೆ ಎಷ್ಟು ಹೊತ್ತಾದರೂ ಯಾರೂ ಬಂದು ಕರೆಯದಿದ್ದಾಗ ಮತ್ತೆ ನನ್ನನ್ನು ಕಾಡಲು ಶುರುಮಾಡಿದಳು. ಮತ್ತೊಮ್ಮೆ ಹೋಗಿ ಹೇಳಿ ಬರುವಂತೆ ಪೀಡಿಸಲಾರಂಭಿಸಿದಳು. ಇಲ್ಲದಿದ್ದರೆ ತಾನೇ ಇನ್‌ಕ್ಯುಬೇಟರ್ ರೂಮಿಗೆ ನುಗ್ಗಿಹೋಗಿ ಮಗುವಿಗೆ ಹಾಲು ಕುಡಿಸುವುದಾಗಿ ಬೆದರಿಸಿದಳು.

ಆದಾಗ್ಯೂ ನರ್ಸ್ ಒಬ್ಬರನ್ನು ಕಂಡು, ಎರಡು-ಮೂರು ದಿನದಿಂದ ಎದೆಹಾಲು ತುಂಬಿಕೊಂಡು ಆಕೆ ತುಂಬಾ ನೋವು ಅನುಭವಿಸುತ್ತಿದ್ದಾಳೆಂದು ವಿವರಿಸಿ, ಮಗುವಿಗೆ ಹಾಲು ಕುಡಿಸಲು ಅವಕಾಶ ಕೊಡಬೇಕೆಂದು ಕೋರಿಕೊಂಡೆ -ಹೆಣ್ಣಿನ ಕಷ್ಟ ಇನ್ನೊಂದು ಹೆಣ್ಣಿಗೆ ತಾನೇ ಅರ್ಥವಾಗುವುದೆಂದು. ಆದರೆ ಆಕೆ ‘ಒಂದು ಲೋಟದಲ್ಲಿ ಕರೆದುಕೊಡಿ, ಕುಡಿಸುತ್ತೇವೆ. ಒಂದು ವಾರದವರೆಗೂ ಮಗುವನ್ನು ಮುಟ್ಟಲು ಯಾರಿಗೂ ಅವಕಾಶ ಕೊಡುವುದಿಲ್ಲ, ಇನ್‌ಫೆಕ್ಷನ್ ಆಗುತ್ತದೆ’ ಎಂದುಬಿಟ್ಟಳು.
ಹಾಗೆಂದು ಹೆಂಡತಿಗೆ ಹೇಳುವುದು ಹೇಗೆ? ಅವಳ ಅಮ್ಮನ ಮೂಲಕ ಹೇಳಿಸಿದೆ. ‘ದೊಡ್ಡ ಡಾಕ್ಟರರ ಅಪ್ಪ, ಇವರ ಆಫೀಸಿನಲ್ಲೇ ಕೆಲಸ ಮಾಡುವುದಂತೆ. ಅವರ ಮೂಲಕ ಹೇಳಿಸುವಂತೆ ಆಜ್ಞಾಪಿಸಿದಳು. ಅದುವರೆಗೂ ಕಛೇರಿಯ ಕೆಲಸಕ್ಕೆ ಸಂಬಂಧಿಸಿದಂತೆ ಯಾವುಯಾವುದಕ್ಕೋ ಇನ್‌ಫ್ಲುಯೆನ್ಸ್ ಮಾಡಿಸಬಹುದೆಂದು ತಿಳಿದಿದ್ದ ನನಗೆ ಇದು ಹೊಳೆದೇ ಇರಲಿಲ್ಲ. ಅದೊಂದನ್ನೂ ಪರೀಕ್ಷಿಸಿಬಿಡೋಣವೆಂದು, ನನ್ನ ಮೇಲಾಧಿಕಾರಿಯಾಗಿದ್ದ ಅವರ ಮನೆಯನ್ನು ಹುಡುಕಿಕೊಂಡು ಹೋಗಿ ಹೀಗೆಹೀಗೆಂದು ವಿವರಿಸಿದೆ. ತಾಯಿ ಕರುಳಿನ ಆಕೆಗೆ ಆಸ್ಪತ್ರೆಯ ಈ ಫಾರ್ಮಾಲಿಟೀಸ್‌ಗಳೆಲ್ಲಾ ಅರ್ಥವಾಗುವುದಿಲ್ಲವೆಂದು ಆರೋಪಿಸಿದೆ -ನನ್ನದೇನೂ ತಪ್ಪಿಲ್ಲ- ಎನ್ನುವಂತೆ. ನನ್ನ ಅಹವಾಲನ್ನು ಕೇಳಿದ ಅವರು ನಕ್ಕುಬಿಡುವರೆಂದೇ ಭಾವಿಸಿ ಅಳುಕಿನಲ್ಲೇ ವೇದಿಸುತ್ತಿದ್ದೆ. ಆದರೆ ಅವರು ನಗಲಿಲ್ಲ. ತನ್ನ ಮಗನಿಗೆ ಫೋನ್ ತೆಗೆದುಕೊಂಡು, ಬೇಬಿ ಆಫ್ ಸೋ ಅಂಡ್ ಸೋ ಎಂಬ ಮಗು ನನಗೆ ತುಂಬಾ ಬೇಕಾದವರದು, ಸ್ವಲ್ಪ ಹೆಚ್ಚು ಕೇರ್ ತೊಗೋ ಎಂದಷ್ಟೇ ಹೇಳಿ ಸುಮ್ಮನಾದರು.

ನಾನು ಹೇಳಿದ್ದೇನು, ಅವರು ಮಾಡಿದ್ದೇನು.. ಎಂದು ನಾನು ಮುಖ ಮುಖ ನೋಡುತ್ತಿದ್ದಂತೆಯೇ, ‘ನನ್ನ ಮಗ ಇವತ್ತು ನೂರಾರು ಮಕ್ಕಳನ್ನು ಉಳಿಸುವ ಶಕ್ತಿ ಹೊಂದಿರುವ ಕರ್ನಾಟಕದ ಕೆಲವೇ ಕೆಲವು ಡಾಕ್ಟರರಲ್ಲಿ ಒಬ್ಬನಾಗಿರುವುದಕ್ಕೆ ಕಾರಣ, ಅವನೂ ಹುಟ್ಟಿದಾಗ ನಿಮ್ಮ ಮಗುವಿನಂತೆಯೇ ಇದ್ದದ್ದು..’ ಎಂದಂದು ಒಂದು ಕ್ಷಣ ಅಂತರ್ಮುಖಿಯಾದರು. ‘ನನ್ನ ಹೆಂಡತಿಯೂ ಹದಿನೈದು ದಿನಗಳ ಕಾಲ ಹೀಗೆಯೇ ಪರಿತಪಿಸಿದ್ದಳು..’ ಎಂದು ತಮ್ಮಷ್ಟಕ್ಕೆ ತಾನೆ ಎನ್ನುವಂತೆ ಹೇಳಿಕೊಂಡರು.

ಮತ್ತೊಂದು ಕ್ಷಣದಲ್ಲಿ ಧ್ಯಾನದಿಂದ ಹೊರಬಂದವರಂತೆ, ‘ಅದಕ್ಕೇ ಅವನನ್ನು ಮಕ್ಕಳ ಡಾಕ್ಟರರನ್ನೇ ಮಾಡಬೇಕೆಂದು ಹಠ ಹಿಡಿದೆ.. ಓದಿಸಿದೆ.. ಇವತ್ತು ಅವನಂತೆಯೇ ಪ್ರಿಮೆಚೂರ್ ಆಗಿ ಹುಟ್ಟಿರುವ ಸಾವಿರಾರು ಮಕ್ಕಳನ್ನು ಉಳಿಸಿದ ಸಾರ್ಥಕ್ಯತೆ ನನ್ನದು..’ ಎಂದು ಒಂದು ನಿರಾಳ ಉಸಿರುಬಿಟ್ಟರು. ‘ನೀವೇನೂ ಯೋಚನೆ ಮಾಡಬೇಡಿ. ನನ್ನ ಮಗನ ಕೈಗೆ ಜೀವ ಇರುವ ಒಂದು ಭ್ರೂಣ ಕೊಟ್ಟರೂ ಬದುಕಿಸಿಬಿಡುವಷ್ಟು ಶಕ್ತಿಯನ್ನು ಆ ಭಗವಂತ ಕೊಟ್ಟಿದ್ದಾನೆ…’ ಎಂದು ಧೈರ್ಯ ತುಂಬಿದರು.

ಡಾಕ್ಟರರಿಗೆ ಅವರ ತಂದೆ ಫೋನು ಮಾಡಿದ್ದರು ಎಂಬ ಕಾರಣಕ್ಕೋ ಏನೋ ವಿಚಾರಿಸಿಕೊಳ್ಳಲು ಬಂದರು. ಕೇವಲ ಐದು-ಐದೂಕಾಲು ಅಡಿ ಎತ್ತರದ ಪೀಚಲು ದೇಹ. ಒಂದು ಕ್ಷಣ ನನ್ನ ಮಗನೇ ದೊಡ್ಡವನಾಗಿ ಎದುರು ಬಂದು ನಿಂತಿರುವನೇನೋ ಎನ್ನುವಂತಿದ್ದರು. ನನ್ನ ಮಗ ಹುಟ್ಟತ್ತಲೇ ಸಾವಿನ ಜತೆಗೆ ಮಾಡುತ್ತಿರುವ ಈ ಹೋರಾಟದಲ್ಲಿ ಗೆದ್ದುಬಿಟ್ಟರೆ ಅವನನ್ನೂ ಹೀಗೆ ಜೀವ ಉಳಿಸಬಲ್ಲಂತಹ ಡಾಕ್ಟರರನ್ನಾಗಿಯೇ ಮಾಡಬೇಕೆಂಬ ಆಲೋಚನೆಯೊಂದು ಮನಃಪಟಲದ ಮುಂದಿನಿಂದ ಹಾದುಹೋಯಿತು. ಆದರೆ ಯಾರಿಗೆ ಗೊತ್ತು, ದಿನತ್ಯವೂ ಕೊಲ್ಲುವ ಕಾಯಕವೇ ಮಹಾಪ್ರಧಾನವೆಂದುಕೊಂಡಿರುವ ಈ ದರಿದ್ರ ಪ್ರಪಂಚದಲ್ಲಿ ಅವನು ಏನಾಗಬಯಸುತ್ತಾನೋ?

ಖುಷಿಯಿಂದ ನನ್ನ ಸಹೋದ್ಯೋಗಿಯ ಹೆಸರು ಹೇಳಿ ಪರಿಚಯ ಮಾಡಿಕೊಂಡೆ. ಹೆಂಡತಿಯನ್ನೂ ಪರಿಚಯ ಮಾಡಿಕೊಟ್ಟೆ. ಆಕೆ, ‘ನನ್ನ ಮಗನನ್ನ ಉಳಿಸಿಕೊಡಿ ಡಾಕ್ಟರರೇ.. ಅವನಿಗೆ ನಿಮ್ಮ ಹೆಸರನ್ನೇ ಇಡುತ್ತೇನೆ..’ ಎಂದು ಆಮಿಷ ತೋರಿದಳು. ಆದರೆ ಅವರು ಬುದ್ಧನಂತೆ, ಸ್ಥಿತಪ್ರಜ್ಞನಂತೆ ಒಂದು ಸಲ ಮುಗುಳ್ನಕ್ಕರು. ಪುಣ್ಯ, ಸಾವಿರದ ಮನೆಯಿಂದ ಸಾಸಿವೆ ಕಾಳು ತರಲು ಹೇಳಲಿಲ್ಲ; ಅಥವಾ ದಿನನಿತ್ಯ ಯಾವುಯಾವುದೋ ಕಾರಣಕ್ಕೆ ದುಡಿಯುತ್ತಿರುವವರೆ ಮಡಿಯುತ್ತಿರುವ ದುರಂತದ ಬಗ್ಗೆ ಹೇಳಲಿಲ್ಲ. ‘ನನ್ನ ಮೇಲೆ ಆ ವಿಶ್ವಾಸವೊಂದಿದ್ದರೆ ಸಾಕು, ನನ್ನ ಪ್ರಯತ್ನ ನಾನು ಮಾಡುತ್ತೇನೆ..’ ಎಂಬ ಒಂದು ಆಶ್ವಾಸನೆಯನ್ನು ಮಾತ್ರ ಕೊಟ್ಟು ಹೊರಟುಹೋದರು.

ಎಷ್ಟು ಹೊತ್ತೆಂದು ಹೀಗೆ ಚಾತಕ ಪಕ್ಷಿಯಂತೆ ಕಾಯುತ್ತಾ ಕೂರುವುದು. ಆಕೆಯ ಮನಸ್ಸನ್ನ ಬೇರೆಡೆಗೆ ಸೆಳೆಯಬೇಕೆಂದು, ಸ್ನೇಹಿತ ರಂಜನನನ್ನು ಮಾತಾಡಿಸಿಕೊಂಡು ಬರೋಣ ಎಂಬ ನೆಪ ಹಾಕಿ ಕರೆದುಕೊಂಡು ಹೋದೆ. ಹತ್ತಿರವಿದ್ದೂ ದೂರವಿರುವ ಆ ಮಗುವಿನ ಬಳಿ ಇರದಿದ್ದರೆ ಅವಳಿಗೂ ನೆಮ್ಮದಿ ಸಿಗುತ್ತಿತ್ತು.

ಗೆಳೆಯನ ಹೆಂಡತಿ ಹಾಗೂ ಅವರ ಆರು ತಿಂಗಳ ಮಗುವಿನೊಂದಿಗೆ ಅವಳು ಬೆರೆಯಲಾರಂಭಿಸಿದಳು. ನಾನು, ನನ್ನ ಗೆಳೆಯ ಬೇರೆ ಬದುಕು ಇಲ್ಲದೆ ಸಂಜೆಯ ಒಂದು ಸುತ್ತನ್ನು ಹಾಕಿಬರೋಣವೆಂದು ಹೊರಗೆ ಹೋದೆವು. ಈವತ್ತಿನ ನಮ್ಮ ಮಗುವಿನ ಸ್ಥಿತಿಯ ಬಗೆಗೆ ಮಾತನಾಡುವಾಗ, ಹುಟ್ಟಿದ ವಾರದೊಳಗೆ ಜಾಂಡೀಸು ಬಂದಿದ್ದ ತಮ್ಮ ಮಗುವನ್ನೂ ಆ ಡಾಕ್ಟರರೇ ಉಳಿಸಿಕೊಟ್ಟಿದ್ದು ಎಂದ. ಅವರ ಕೈಗುಣದ ಬಗ್ಗೆ ಗುಣಗಾನ ಮಾಡಿದ. ಅವರು ಮುಟ್ಟಿದ್ದಾರೆಂದ ಮೇಲೆ ನಿಮ್ಮ ಮಗು ಬದುಕೇ ಬದುಕುತ್ತದೆ, ಡೋಂಟ್ ವರಿ ಎಂದು ಸಮಾಧಾನ ಮಾಡಿದ. ಆದರೆ ನಾನಂತೂ, ಆ ಮಗುವನ್ನು ಬದುಕಿಸಲು ನನ್ನ ಕೈಲಾದ ಪ್ರಯತ್ನ ಮಾಡುವುದನ್ನು ಬಿಟ್ಟರೆ ಉಳಿದಂತೆ ನಿರ್ಲಿಪ್ತನಾಗಿಹೋಗಿದ್ದೆ. ನಾಳೆ ಹೆಚ್ಚುಕಡಿಮೆಯಾದರೆ, ಒಂದು ಸಣ್ಣ ಪ್ರಯತ್ನ ಮಾಡಿದ್ದರೆ ಬದುಕುತ್ತಿತ್ತೇನೋ ಎಂಬ ಒಂದು ಕಳಂಕ ಮನಸ್ಸಿನಲ್ಲಿ ಇರಬಾರದಲ್ಲ.. ಆದರೆ ಗೆಳೆಯರು ಪಾಪ, ಬಾಯಿಮಾತಿಗಾದರೂ ಸಮಾಧಾನ ಹೇಳಬೇಕಲ್ಲ, ಹೇಳುತ್ತಾರೆ. ನಾನಾಗಿದ್ದರೂ ಬೇರೆಯವರಿಗೆ ಹಾಗೆಯೇ ಧೈರ್ಯ ಹೇಳುತ್ತಿದ್ದೆ ತಾನೆ ಎಂದುಕೊಂಡು ಅದರಿಂದ ಸಂತೋಷವೂ ಇಲ್ಲ; ದುಃಖವೂ ಇಲ್ಲ ಎಂಬಂತೆ ಸುಮ್ಮನಿರುತ್ತಿದ್ದೆ.

ಮನೆಗೆ ಹಿಂದಿರುತ್ತಿದ್ದಂತೆ ನಡುಮನೆಯಲ್ಲಿ ರಂಜನನ ಮಗುವನ್ನು ತೊಡೆಯ ಮಲಗಿಸಿಕೊಂಡು ನನ್ನ ಹೆಂಡತಿ ಹಾಲು ಕುಡಿಸುತ್ತಿದ್ದಳು! ನಮ್ಮನ್ನು ಕಂಡೊಡನೆ ಆಕೆಗೆ ಅದೇನು ಕಸಿವಿಸಿ ಅನಿಸಿತೋ, ತಟ್ಟನೆ ಎದೆಬಿಡಿಸಿ ಮಗುವನ್ನು ಎತ್ತಿಕೊಂಡು ಅಡುಗೆ ಮನೆಯಲ್ಲಿದ್ದ ಅದರ ತಾಯಿಯ ಬಳಿಗೆ ಓಡಿದಳು. ಆದರೆ ಮಗು ಮಾತ್ರ ಇನ್ನೂ ಹಾಲು ಬೇಕೆನ್ನುವಂತೆ ರಚ್ಚೆ ಹಿಡಿದು ಚೀರಾಡಲಾರಂಭಿಸಿತು. ರಂಜನನ ಮುಖ ನೋಡಿದೆ. ಸದ್ಯ, ಪೂತಿನಿಯಂತೆ ವಿಷದ ಹಾಲು ಕುಡಿಸಲು ಬಂದಿರುವ ತಾಯಿಯೆನ್ನುವಂತೆ ಅನುಮಾನಿಸದೇ ಸುಮ್ಮನಿದ್ದದ್ದು ಸಮಾಧಾನವೆಸಿತು. ಆದರೆ ನನ್ನ ಹೆಂಡತಿ, ಅದರ ತಾಯಿ ಅಡುಗೆ ಮಾಡಲು ತೊಂದರೆ ಮಾಡುತ್ತಿದ್ದುದರಿಂದ ತಾನು ಎತ್ತುಕೊಂಡಿದ್ದಾಗಿ ಏನೋ ಸಮಜಾಯಿಷಿ ನೀಡಲು ಬಂದಳು. ನಾನು ಏನೋ ಸಮರ್ಥನೆ ಹೇಳಲು ಉಪಕ್ರಮಿಸಿದಾಗ ತನಗೆಲ್ಲ ಅರ್ಥವಾಗುತ್ತದೆಯೆನ್ನುವಂತೆ ಗೆಳೆಯ ಭುಜವನ್ನು ಅದುಮಿ ಸುಮ್ಮನಿರಿಸಿದ.

ರಾತ್ರಿಯ ಊಟ ಮುಗಿಸಿಕೊಂಡು ಆಸ್ಪತ್ರೆಗೆ ಬರುತ್ತಿದ್ದಂತೆಯೇ ನರ್ಸ್ ಒಬ್ಬಳು ‘ಇಲ್ಲಿವರೆಗೆ ಎಲ್ಲಿ ಹೋಗಿದ್ದಿರಿ?’ ಎಂದು ಆಕ್ಷೇಪಿಸಿದಳು. ನಾನು ಮಗುವಿಗೆ ಏನಾಯಿತೋ ಎಂದು ಗಾಬರಿಗೊಂಡೆ. ‘ಮಗುವಿಗೆ ಹಾಲುಣಿಸಬೇಕು, ತಾಯಿಯನ್ನು ಕರೆಸಿರಿ..’ ಎಂದಾಗ ನೆಮ್ಮದಿಯ ನಿಟ್ಟುಸಿರುಬಿಟ್ಟೆ. ತಾಯಿಯರ ಕೋಣೆಗೆ ಹೋಗಿ ಆಕೆಯನ್ನು ಕರೆದು ಹಾಗೆಂದು ಹೇಳಿದಾಗ ಬಾಣಂತಿಯೆಂಬುದನ್ನೂ ಮರೆತು ಕುಣಿದು ಕುಪ್ಪಳಿಸುವವಳಂತೆ ಓಡೋಡಿಬಂದಳು.

ಮುಖದ ಸುತ್ತ ಮಾಂಸವೇ ಇಲ್ಲದ ಬರಿಯ ಚರ್ಮ ಅಂಟಿಸಿದಂತಿರುವ ತಲೆ.. ಮೂಳೆಬಿಟ್ಟುಕೊಂಡ ನೀಳ ಮೈ.. ಬಿಳಿಯ ಬಟ್ಟೆಯಲ್ಲಿ ಸುತ್ತಿದ ಸಣ್ಣಗೊಂಬೆಯಂತಿದ್ದ ಆ ಮಗುವನ್ನು ನೀಡಿದಾಗ, ಅದರ ಆಕಾರ ನೋಡಿ, ಇದು ತನ್ನ ಮಗುವೇ ಅಲ್ಲವೇನೋ ಎನ್ನುವಂತೆ ಎಲ್ಲಿ ಹಠಹಿಡಿಯುವಳೋ ಎಂದು ಭಯವಾಯಿತು. ಹುಟ್ಟುತ್ತಲೇ ಸಾವಿನ ಮನೆ ಹೊಕ್ಕು ಹೋರಾಡಿ ಜಯಿಸಿ ಬಂದ ಮಗುವಿಗೆ ಆಗ ಜೀವ ಮುಖ್ಯವಾಗಿತ್ತೇ ವಿನಃ ಲಕ್ಷಣವಲ್ಲ..

ಆದರೆ ಆಕೆ ಅದೇನನ್ನೂ ಯೋಚಿಸಲೇ ಇಲ್ಲ. ನೆಲದಲ್ಲಿ ಕುಳಿತು ಎದೆ ತೆರೆದು ಹಾಲು ಕುಡಿಸಲಾರಂಭಿಸಿದಳು. ರಾಜಾ ರವಿವರ್ಮನ ಚಿತ್ರದಲ್ಲಿ ಹಾಲು ಕುಡಿಸುತ್ತಿರುವ ತಾಯಿಯಂತೆ, ಅದು ಹಾಲು ಕುಡಿಯುವುದರಿಂದ ಪಡುತ್ತಿರುವ ಸಂತೋಷವನ್ನು ಅನುಭವಿಸುತ್ತಿದ್ದಳು..
*****

* (ವಿಜಯ ಕರ್ನಾಟಕ ೨-೮-೨೦೦೯)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೊಂಬೆಳಕು
Next post ಸಂಜೆಯ ಸ್ವಗತ

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…