ಜಾಣಗೆರೆಯವರ ‘ಅವತಾರ ಪುರುಷ’

ಜಾಣಗೆರೆಯವರ ‘ಅವತಾರ ಪುರುಷ’

ಗೆಳೆಯ ಜಾಣಗೆರೆ ವೆಂಕಟರಾಮಯ್ಯನವರು ಇತ್ತೀಚೆಗೆ ಬರವಣಿಗೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ. ಕೆಲವು ಉತ್ತಮ ಕತೆ, ಕಾದಂಬರಿಗಳನ್ನು ಕೊಟ್ಟಿರುವ ಜಾಣಗೆರೆಯವರು ಕನ್ನಡ ಚಳವಳಿಯಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದ ಲೇಖಕರು. ಸಾಮಾಜಿಕ ಕಾಳಜಿಯನ್ನು ಹೃದಯದಲ್ಲಿಟ್ಟುಕೊಂಡ ವ್ಯಕ್ತಿತ್ವವುಳ್ಳವರು. ಹೀಗಾಗಿಯೇ ಅವರು ಹೆಚ್ಚು ಬರೆಯಬೇಕು, ತಮ್ಮ ವಿಶಿಷ್ಟ ಅನುಭವಗಳ ರೂಪಕಗಳನ್ನು ಕೊಡಬೇಕು ಎಂದು ಬಯಸಿದವನು ನಾನು. ಬರವಣಿಗೆಯೊಂದೇ ಬದುಕಿನ ‘ಮೋಕ್ಷಸ್ಥಲ’ವಲ್ಲವೆಂದು ನನಗೆ ಗೊತ್ತು. ಹೋರಾಟದ ಬದುಕನ್ನು ರೂಪಿಸಿಕೊಂಡವರ ಅಕ್ಷರ ರೂಪಕಕ್ಕೆ ವಿಶಿಷ್ಟತೆಯೊಂದು ಲಭ್ಯವಾಗುತ್ತದೆಯೆಂಬ ನಿರೀಕ್ಷೆಯಿಂದ ನಾನು ಜಾಣಗೆರೆಯವರು ಹೆಚ್ಚು ಬರೆಯಬೇಕೆಂದು ಹೇಳುತ್ತಾ ಬಂದಿದ್ದೇನೇ ಹೊರತು ಬೇರಾವ ಕಾರಣದಿಂದಲೂ ಅಲ್ಲ.

‘ಅವತಾರ ಪುರುಷ’ ಎಂಬ ಈ ಕಾದಂಬರಿಯಲ್ಲಿ ಸಮಕಾಲೀನ ಸಂದರ್ಭದ ಕನ್ನಡ ಚಳವಳಿಯ ನಾಯಕರೊಬ್ಬರನ್ನು ಕೇಂದ್ರವಾಗಿಟ್ಟುಕೊಂಡಿರುವ ಜಾಣಗೆರೆಯವರು ಈ ಕಾರಣಕ್ಕಾಗಿ ಸೃಜನೇತರ ಮತ್ತು ಸೃಜನಶೀಲ ಸವಾಲನ್ನು ಏಕಕಾಲಕ್ಕೆ ಎದುರು ಹಾಕಿಕೊಂಡಿದ್ದಾರೆ. ಶತಮಾನಗಳ ಹಿಂದಿನ ಚರಿತ್ರೆಗೆ ಹೋಗಿ ಅಲ್ಲಿನ ವ್ಯಕ್ತಿ ಮತ್ತು ಸಂದರ್ಭಗಳನ್ನು ನಮ್ಮ ಕಾಲದಲ್ಲಿ ನಿಂತು ನೋಡುವ, ಬೆಳಗು ಮಾಡಿಕೊಳ್ಳುವ ವ್ಯಾಖ್ಯಾನಿಸುವ ಮತ್ತು ಸೃಜನಶೀಲ ಬರವಣಿಗೆಯನ್ನಾಗಿಸುವ ಪ್ರಕ್ರಿಯೆ, ಒಂದು ಸವಾಲಿನದಾಗಿರುವಾಗ, ನಮ್ಮ ಕಾಲದಲ್ಲಿ ಅದರಲ್ಲೂ ಬದುಕಿರುವ ವ್ಯಕ್ತಿಗಳ ಬದುಕನ್ನು ಕಾದಂಬರಿಯಾಗಿಸುವ ಕೆಲಸ ತುಂಬಾ ಸಾಹಸಮಯವಾದುದು.

ಹಾಗೆ ನೋಡಿದರೆ, ಭೂತಕಾಲದ ಇತಿಹಾಸವನ್ನು ಕಾದಂಬರಿಯಾಗಿಸುವ ಕೆಲಸವೂ ಸುಲಭವಲ್ಲ. ಸುಲಭವಾಗಿಸಿಕೊಂಡವರ ವೈಭವೀಕರಣ ಅಥವಾ ನಿರಾಕರಣೆಗಳ ನೆಲೆಯಲ್ಲಿ ತಮಗೆ ತಾವೇ ವೈಭವೀಕರಿಸಿಕೊಳ್ಳುತ್ತಾರೆ. ಚರಿತ್ರೆಯ ವಾಸ್ತವವನ್ನು ಮರೆಯುತ್ತಾರೆ ಅಥವಾ ಮರೆಮಾಚುತ್ತಾರೆ. ಸಮಕಾಲೀನ ತಿಳುವಳಿಕೆಯ ಹಿನ್ನೆಲೆಯಲ್ಲಿ ವರ್ತಮಾನದ ವಾಸ್ತವಕ್ಕೆ ಭೂತಕಾಲದ ಇತಿಹಾಸವನ್ನು ತಂದು ಪುನರ್ ವ್ಯಾಖ್ಯಾನಿಸುವವರು ಇತಿಹಾಸದ ಜೀವಂತಿಕೆಯನ್ನು ಗೌರವಿಸುತ್ತಾರೆ. ಇದು ಇತಿಹಾಸವನ್ನು ಅರ್ಥಮಾಡಿಕೊಳ್ಳುವ ಮತ್ತು ಕಟ್ಟಿಕೊಡುವ ಒಂದು ಬಗೆ. ಸೃಜನಶೀಲ ಕೃತಿ ನಿರ್ಮಿತಿಗೆ ಈ ಬಗೆಯ ಬರವಣಿಗೆ ಹೊಸ ಆಯಾಮ ನೀಡುತ್ತದೆ. ಇತಿಹಾಸದ ಘಟನೆಗಳ ಪುನರ್ ಸಂಯೋಜನೆಯಷ್ಟೇ ಮುಖ್ಯವಾದರೆ, ಅದು ಸಮಕಾಲೀನ ಎರಕದಲ್ಲಿ ಕಟ್ಟಿಕೊಂಡಂತಾಗುವುದಿಲ್ಲ. ಪುನರ್ ಸಂಯೋಜನೆಯೊಳಗೆ ಪುನರ್ ವ್ಯಾಖ್ಯಾನದ ಒಳವಾಹಿನಿಯೊಂದು ಹರಿಯುತ್ತ ಬಂದಾಗ ಕೃತಿಯೊಂದು ಹೊಮ್ಮಿಸುವ ಬೆಳಕಿನ ಪರಿಯೇ ಬೇರೆ ರೀತಿಯದು. ಅದೊಂದು ವಿಶಿಷ್ಟ ಅನುಭವವಾಗುವುದರೊಂದಿಗೆ ಹೊಸ ಹೊಳಹುಗಳ ಚಾರಿತ್ರಿಕ ಕೃತಿಯಾಗುತ್ತದೆ. ಇದು ಹಿಂದಿನ ಇತಿಹಾಸವನ್ನು ಕೃತಿಯಾಗಿಸುವ ಕ್ರಮಕ್ಕೆ ಸಂಬಂಧಿಸಿದ ಮಾತು. ಆದರೆ ಸಮಕಾಲೀನ ಚರಿತ್ರೆಯನ್ನು ಸಮಕಾಲೀನ ಸಂದರ್ಭದಲ್ಲೇ ನೋಡುತ್ತ ನಿಜವಾದ ಕೃತಿಯನ್ನು ಕಟ್ಟುವ ಕೆಲಸ ಕಷ್ಟಸಾಧ್ಯವಾದದ್ದು. ಅದರಲ್ಲೂ ವ್ಯಕ್ತಿ ಕೇಂದ್ರಿತ ಕೃತಿಯನ್ನು ಕಟ್ಟುವಾಗ ಎದುರಾಗುವ ಸೃಜನಶೀಲ ಸಮಸ್ಯೆ ವಿಭಿನ್ನವಾದದ್ದು. ಕೃತಿಯ ‘ನಾಯಕ’ ಎದುರಿಗೇ ಇರುವುದು ಮತ್ತು ಈ ಸಂದರ್ಭದಿಂದ ಕೃತಿಕಾರರು ಭೌತಿಕ ದೂರ ಸಾಧಿಸುವುದು ಸಾಧ್ಯವಿಲ್ಲವಾಗುವುದು ಮುಖ್ಯ ಸಮಸ್ಯೆ. ಕಾವ್ಯ ಮೀಮಾಂಸಕಾರರು ಹೇಳುವ ‘ಮಾನಸಿಕ ದೂರ’ದ (Physical distance) ನಿಜವಾದ ಸತ್ವ ಪರೀಕ್ಷೆ ಆಗುವುದು ಇಂತಹ ಸಂದರ್ಭದಲ್ಲೇ. ಆದ್ದರಿಂದಲೇ ನಾನು ಆರಂಭದಲ್ಲಿ – ‘ಸೃಜನೇತರ ಸವಾಲನ್ನು ಏಕಕಾಲಕ್ಕೆ ಎದುರು ಹಾಕಿಕೊಂಡಿದ್ದಾರೆ’ – ಎಂದು ಜಾಣಗೆರೆಯವರ ಬಗ್ಗೆ ಹೇಳಿದ್ದು.

ಸಮಕಾಲೀನ ವ್ಯಕ್ತಿಗಳನ್ನು ಕುರಿತು ಬರೆಯುವಾಗ ವ್ಯಕ್ತಿ ವಿವರಗಳ ಜೊತೆಗೆ ಒಟ್ಟು ಸಾಮಾಜಿಕ ಸಂದರ್ಭವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದೂ ಅಗತ್ಯ. ವ್ಯಕ್ತಿ ಕೇಂದ್ರಿತ ಕೃತಿಗಳಿಗೆ ಸಾಮಾಜಿಕ ಆಯಾಮವೂ ಲಭ್ಯವಾದಾಗ ಸಂಭವಿಸುವ ಅಭಿವ್ಯಕ್ತಿ ಸ್ವರೂಪಕ್ಕೂ ಕೇವಲ ವ್ಯಕ್ತಿ ವಿವರಗಳನ್ನು ಕಟ್ಟಿಕೊಡುವಲ್ಲಿ ಮುಕ್ತಾಯಗೊಳ್ಳುವ ಅಭಿವ್ಯಕ್ತಿ ವಿಧಾನಕ್ಕೂ ಅಗಾಧ ವ್ಯತ್ಯಾಸವಿದೆ. ವ್ಯಕ್ತಿ ಮತ್ತು ಸಾಮಾಜಿಕ ಸಂದರ್ಭಗಳ ಅನುಸಂಧಾನದಲ್ಲಿ ಅಭಿವ್ಯಕ್ತಗೊಂಡ ಕೃತಿಯು ಅಸಾಧಾರಣವಾಗುವ ಸಾಧ್ಯತೆಯನ್ನು ಒಳಗೊಂಡಿರುತ್ತದೆ. ಸಾಮಾಜಿಕ ಸಂದರ್ಭವೊಂದು ಏಕಕಾಲಕ್ಕೆ ಆರ್ಥಿಕ, ರಾಜಕೀಯ, ಸಾಮಾಜಿಕ ಮುಂತಾದ ಆಯಾಮಗಳು ಹದಗೊಂಡು ಪ್ರಕಟಗೊಳ್ಳುವುದರಿಂದ, ಈ ಸಂದರ್ಭದೊಳಗೆ ವ್ಯಕ್ತಿ ವಿವರಗಳನ್ನು ಎರಕ ಹೊಯ್ಯುವ ಕಲೆಗೆ ವಿಶೇಷ ಸತ್ವ ಒದಗಿಬರುತ್ತದೆ. ಗೆಳೆಯ ಜಾಣಗೆರೆ ವೆಂಕಟರಾಮಯ್ಯನವರ ಈ ಕೃತಿಯ ಸತ್ವಪರಿಶೀಲನೆಗೆ ಈ ಅಂಶವೇ ಮುಖ್ಯ ಮಾನದಂಡವೆಂದು ನಾನು ಭಾವಿಸುತ್ತೇನೆ.

ಈ ಕಾದಂಬರಿಯ ನಾಯಕ ಪಾತ್ರ ‘ರಾಜಪ್ಪ’ನ ಹೋರಾಟದ ಬದುಕನ್ನು ಓದುತ್ತ ಹೋದಂತೆ ಇಂದಿಗೂ ನಮ್ಮೊಂದಿಗಿರುವ ಕನ್ನಡ ಚಳವಳಿಯ ನಾಯಕರೊಬ್ಬರು ಆ ಪಾತ್ರದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಾರೆ. ಹೀಗಾಗಿಯೇ ಇಲ್ಲಿ ಬರುವ ವಿವರಗಳು, ಘಟನೆಗಳು ನಿಜವಾಗಿ ನಡೆದವುಗಳೇ ಅಥವಾ ಕಥಾವಸ್ತುವಿಗೆ ಪೂರಕವಾಗಿ ಕೆಲವನ್ನು ಊಹಿಸಿಕೊಳ್ಳಲಾಗಿದೆಯೆ ಎಂಬ ಪ್ರಶ್ನೆ ಓದುಗರಿಗೆ ಎದುರಾದರೆ ಆಶ್ಚರ್ಯಪಡಬೇಕಿಲ್ಲ. ಇದು ಜೀವನ ಚರಿತ್ರೆಯಲ್ಲ, ಕಾದಂಬರಿ. ಆದ್ದರಿಂದ, ಸಮಕಾಲೀನ ವ್ಯಕ್ತಿಯನ್ನು ನೆನಪಿಸುವ ಕೇಂದ್ರಪಾತ್ರವಿದ್ದಾಗಲೂ ಎಲ್ಲ ವಿವರಗಳೂ ಎಲ್ಲ ಘಟನೆಗಳೂ, ಚಾಚೂ ತಪ್ಪದೆ ಕಾದಂಬರಿಯಲ್ಲಿರುವಂತೆಯೇ ನಡೆದವುಗಳೆಂದು ಭಾವಿಸುವ ಬದಲು ‘ಆಶಯ’ಗಳ ಹಂತದಲ್ಲಿ ‘ಸತ್ಯ’ವಾದವು ಎಂದು ನಾನು ಭಾಪಿಸುತ್ತೇನೆ. ಅವು ನಡೆದ ಘಟನೆಗಳಿರಬಹುದು ಅಲ್ಲದೆಯೂ ಇರಬಹುದು; ನಾನು ಓದುತ್ತಿರುವುದು ಒಂದು ಕಾದಂಬರಿ ಎನ್ನುವುದು ನನಗೆ ಮುಖ್ಯ. ಸಮಕಾಲೀನ ವ್ಯಕ್ತಿ ಚರಿತ್ರೆಯನ್ನು ಒಳಗೊಂಡಿದೆ ಎಂಬ ವಿಷಯ ಅನಂತರದ್ದು.

ಕನ್ನಡ ಚಳವಳಿ ಅನೇಕ ಹಂತಗಳನ್ನು ಹಾದು ಬಂದಿದೆ. ಹಾಗೆ ನೋಡಿದರೆ, ಸಂಸ್ಕೃತದ ಪ್ರಭಾವದಿಂದ ವಿಮೋಚನೆಗೊಳ್ಳುವ ಪ್ರಾಚೀನ ಕನ್ನಡ ಸಾಹಿತ್ಯ ಸೃಷ್ಟಿಯಲ್ಲೇ ಚಳವಳಿಯ ಸತ್ವವು ಅಂತರ್ ವಾಹಿನಿಯಾಗಿ ಮೂಡಿದೆ. ಪಂಪ ಮಹಾಕವಿಯ ದೇಸಿ ಪ್ರಯೋಗದಿಂದ ಆರಂಭಿಸಿ ನಯಸೇನ, ಆಂಡಯ್ಯ, ಮಹಲಿಂಗರಂಗರ ನೇರ ಕನ್ನಡ ಪ್ರೀತಿ, ವಚನಸಾಹಿತ್ಯ ಮತ್ತು ದಾಸಸಾಹಿತ್ಯಗಳ ಕನ್ನಡಾಭಿವ್ಯಕ್ತಿಯ ರೀತಿ, ಕುಮಾರವ್ಯಾಸನಂತಹ ಕವಿಗಳ ಕನ್ನಡ ಪ್ರಯೋಗಾತ್ಮಕತೆಗಳೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಕನ್ನಡವನ್ನು ಭಾಷಿಕವಾಗಿ ಕಟ್ಟುವ ಕ್ರಿಯೆಗಳು, ಚಳವಳಿಯ ಅಂತರ್‌ ಶಕ್ತಿಗಳು.

ಸ್ವಾತಂತ್ರ್ಯೋತ್ತರ ಕಾಲದ ಕನ್ನಡ ಚಳವಳಿಯಲ್ಲಿ ಅ.ನ.ಕೃ; ಮ. ರಾಮಮೂರ್ತಿ ಮುಂತಾದ ಲೇಖಕರು ಆರಂಭಿಕ ಹಂತದ ರೂವಾರಿಗಳು. ಅಲ್ಲಿಂದ ಇಲ್ಲಿಯವರೆಗೆ ನೇರ ಚಳವಳಿಯ ವಿವಿಧ ರೂಪ ಹಾಗೂ ಸ್ಥಿತ್ಯಂತರಗಳನ್ನು ನಾವು ಕಾಣಬಹುದಾಗಿದೆ. ಕನ್ನಡ ಸಂಗೀತಗಾರರಿಗೆ ಅವಕಾಶ ಬೇಕು, ಕೆಂಪೇಗೌಡ ರಸ್ತೆಯ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾ ಪ್ರದರ್ಶಿಸಬೇಕು ಎಂಬ ಅಂಶಗಳಿಂದ ಆರಂಭವಾದ ಕನ್ನಡ ಪರ ಹೋರಾಟವು ಆನಂತರ ಅನೇಕ ಹೋರಾಟಗಳಾಗಿ ವಿಸ್ತಾರಗೊಂಡಿದೆ. ಅದಕ್ಕನುಗುಣವಾಗಿ ಕನ್ನಡ ಪರ ನಾಯಕರೂ ಅನೇಕರಿದ್ದಾರೆ.

ನಮ್ಮ ಕಾಲದ ಕನ್ನಡ ಚಳವಳಿಯ ಆರಂಭಿಕ ಹಂತದಲ್ಲೇ ಈ ಕಾದಂಬರಿಯ ನಾಯಕ ರಾಜಪ್ಪ ಕಾಣಿಸಿಕೊಳ್ಳುತ್ತಾನೆ. ಅಲ್ಲಿಂದ ಆರಂಭವಾದ ಆತನ ಹೋರಾಟದ ಬದುಕಿನ ಏರಿಳಿತಗಳನ್ನು ಜಾಣಗೆರೆಯವರು ಅಧಿಕೃತವೆಂಬಂತೆ ನಿರೂಪಿಸುತ್ತಾರೆ. ಈ ಮೂಲಕ ಕನ್ನಡ ಚಳವಳಿಯ ಆಂತರಿಕ ತುಮುಲಗಳನ್ನು ತೆರೆದಿಡುತ್ತಾರೆ. ನಾಯಕನ ದಿಟ್ಟ ಹೆಜ್ಜೆಗಳನ್ನು ದಟ್ಟವಾಗಿ ಕಟ್ಟಿ ಕೊಡುತ್ತಲೇ ಸ್ವಕೇಂದ್ರಿತ ಆಕಾಂಕ್ಷೆಗಳನ್ನು ಅನಾವರಣಗೊಳಿಸುತ್ತಾರೆ. ಕನ್ನಡ ಚಳವಳಿಯಲ್ಲಿ ತೊಡಗಿಸಿಕೊಂಡ ನಾಯಕನ ಗೆಳೆಯರ ಬಳಗದ ಅಂತರಂಗ- ಬಹಿರಂಗಗಳನ್ನು ಮುಚ್ಚುಮರೆಯಿಲ್ಲದೆ ಬಿಚ್ಚಿಡುತ್ತಾರೆ.

ಜಾಣಗೆರೆಯವರದು ಮುಚ್ಚುಮರೆಯಿಲ್ಲದ ಬಿಚ್ಚು ಬರವಣಿಗೆ. ಇಂತಹ ಬರವಣಿಗೆಯಲ್ಲಿ ಸ್ವಲ್ಪ ಆಯ ತಪ್ಪಿದರೂ ಅಪಕ್ವವಾಗುವ ಅಪಾಯವಿದೆ. ಜಾಣಗೆರೆಯವರ ಈ ಕಾದಂಬರಿಯು ಇಂತಹ ಅಪಾಯದಿಂದ ಪಾರಾಗಿರುವುದೇ ಒಂದು ವಿಶೇಷ. ನಾಯಕ ಮತ್ತು ಆತನ ಗೆಳೆಯರ ಬಳಗವನ್ನು ಏಕಕಾಲಕ್ಕೆ ಸಮೀಪ ಮತ್ತು ದೂರದಿಂದ ನೋಡುವ ರೀತಿಯಿಂದ ಕಾದಂಬರಿಯು ಪೂರ್ವಾಗ್ರಹ ಪ್ರೇರಿತ ಸರಳ ರೇಖಾಭಿವ್ಯಕ್ತಿಯಿಂದ ಪಾರಾಗಿದೆ. ನಾಯಕನ ಬಗ್ಗೆಯಾಗಲಿ, ಆತನ ಗೆಳೆಯರ ಗುಂಪಿನ ಬಗ್ಗೆಯಾಗಲಿ, ಹೊಗಳುವ ಅಥವಾ ತೆಗಳುವ ಪ್ರವೃತ್ತಿಗೆ ಬರವಣಿಗೆಯನ್ನು ಬಲಿಕೊಡದೆ ಸನ್ನಿವೇಶಗಳನ್ನು ನಿರೂಪಿಸಲಾಗಿದೆ. ಹೀಗಾಗಿ ನಾಯಕನಾಗಿ ಎತ್ತರಕ್ಕೆ ಬೆಳೆಯುವ ಸ್ವಂತ ಹಿತ ಬಂದಾಗ ಸಾಮಾನ್ಯ ಸೆಳೆತಗಳಲ್ಲಿ ಕುಬ್ಜನಾಗುವ ಮತ್ತೆ ಸ್ವಕೇಂದ್ರಿತ ಸೆಳೆತಗಳನ್ನು ಮೀರಿ ಮುಂದುವರೆಯುವ ‘ಮನುಷ್ಯ’ನೊಬ್ಬನನ್ನು ಜಾಣಗೆರೆಯವರು ಕಾದಂಬರಿಯುದ್ದಕ್ಕೂ ಕಟ್ಟುತ್ತಾ ಹೋಗುತ್ತಾರೆ. ಇದೇ ಮಾತುಗಳನ್ನು ನಾಯಕ ರಾಜಪ್ಪನ ಗೆಳೆಯರ ಗುಂಪಿಗೂ ಅನ್ವಯಿಸಬಹುದು. ಇಂತಹ ಚಿತ್ರಣದ ಮೂಲಕ ಲೇಖಕರು ವ್ಯಕ್ತಿಯನ್ನು ಮೀರಿ ಕನ್ನಡ ಚಳವಳಿಯ ಆಂತರಿಕ ತೊಳಲಾಟಗಳನ್ನು ತೆರೆದಿಡುತ್ತಾರೆ. ಕನ್ನಡ ಪರ ಪ್ರಾಮಾಣಿಕತೆಯಿಂದ ಪ್ರಾರಂಭವಾದ ಚಳವಳಿ ಮತ್ತು ಅದರ ನಾಯಕರು ಅಧಿಕಾರ ಕೇಂದ್ರಿತ ರಾಜಕಾರಣಕ್ಕೆ ಆಕರ್ಷಿತರಾಗುತ್ತ ಹೋದಂತೆ ಉಂಟಾದ ಬಿರುಕುಗಳು ಕಾದಂಬರಿಯಲ್ಲಿ ಬಯಲಾಗುತ್ತ ಹೋಗುತ್ತವೆ. ಪ್ರಜಾಪ್ರಭುತ್ವದಲ್ಲಿ ಅಧಿಕಾರಕ್ಕೆ ಬರುವುದನ್ನು ಕುರುಡಾಗಿ ನಿರಾಕರಿಸಲಾಗದು. ಆದರೆ ಅಧಿಕಾರವೇ ಮುಖ್ಯವಾಗಿ ಮಿಕ್ಕೆಲ್ಲದಕ್ಕೆ ಕುರುಡಾಗಬಾರದು. ಚಳವಳಿಗಾರರಿಗೆ ಚಳವಳಿ ಮುಖ್ಯವಾಗಬೇಕೇ ಹೊರತು, ಅದು ಅಧಿಕಾರಕ್ಕಾಗಿ ಕಟ್ಟಿದ ಏಣಿಯಾಗಬಾರದು. ಈ ಎಚ್ಚರ ಮತ್ತು ಸೂಕ್ಷ್ಮತೆಗಳು ವಿರಳವಾಗುವುದೇ ಹೆಚ್ಚು. ಆದ್ದರಿಂದ ಅಧಿಕಾರವು ಚಳವಳಿಯ ಆಶಯಗಳ ಅನುಷ್ಠಾನದ ಸಾಧನವಾಗಬೇಕೇ ಹೊರತು ಚಳವಳಿಯೇ ಅಧಿಕಾರಕ್ಕೆ ಅಧೀನ ಸಾಧನವಾಗಬಾರದು.

ಈ ಕಾದಂಬರಿ ಚಳವಳಿ ಮತ್ತು ಅಧಿಕಾರ – ಎರಡರ ಸೆಳೆತದಲ್ಲಿ ಅರಳುವ, ನರಳುವ ವ್ಯಕ್ತಿ ವೈಚಿತ್ರಗಳನ್ನು ನಿರೂಪಿಸುತ್ತಲೇ ಕನ್ನಡ ಚಳವಳಿಯ ಉತ್ಕರ್ಷ ಮತ್ತು ಪತನದ ಸಂದರ್ಭಗಳನ್ನು ಒಳಗೊಳ್ಳುತ್ತದೆ; ವ್ಯಕ್ತಿ ಕೇಂದ್ರಿತ ನೆಲೆಯಿಂದ ಚಳವಳಿ ಕೇಂದ್ರಿತ ವಿವರಗಳಿಗೆ ವಿಸ್ತಾರಗೊಳ್ಳುತ್ತದೆ. ನಾಯಕ ‘ರಾಜಪ್ಪ’ನ ಚರಿತ್ರೆಯನ್ನು ಪ್ರಧಾನ ಪಾತಳಿಯಲ್ಲಿ ನಿಲ್ಲಿಸುವ ಪ್ರಯತ್ನವಿದ್ದರೂ ನಾಯಕನನ್ನೂ ಒಳಗೊಂಡಂತೆ ಎಲ್ಲರ ಎಲ್ಲ ಮುಖಗಳು ಮತ್ತು ಮುಖವಾಡಗಳನ್ನು ಘಟನಾವಳಿಯ ಮೂಲಕ ಚಿತ್ರಿಸುವ ರೀತಿ ಚೆನ್ನಾಗಿದೆ. ಅಬ್ಬರವಿಲ್ಲದ ಹಳ್ಳದಂತೆ ಸಾಗಿದೆ ಇಲ್ಲಿನ ಬರವಣಿಗೆ.

ರಾಜಪ್ಪನ ಪರಿವಾರದಲ್ಲೇ ವಿಶಿಷ್ಟವಾದ ಪಾತ್ರ ರಾಜಪ್ಪನ ಡ್ರೈವರ್ ರಹೀಮನದು. ತನ್ನ ಯಜಮಾನನನ್ನೂ ಮೀರಿದ ಕಾಮನ್ ಸೆನ್ಸ್‌ನಿಂದ ಕಂಗೊಳಿಸುವ ಪಾತ್ರವಿದು. ವೈಯುಕ್ತಿಕ ಕಾಮನೆಗಳನ್ನು ಹತ್ತಿಕ್ಕಲಾಗದ, ನಾಯಕ ನಿಷ್ಠೆಯನ್ನು ಬದಲಾಯಿಸದ ರಹೀಮ್‌ನ ಪಾತ್ರವು ರಾಜಪ್ಪನ ಸಾಕ್ಷಿ ಪ್ರಜ್ಞೆಯಾಗುವ ಸಾಧ್ಯತೆಯನ್ನು ಒಳಗೊಂಡಿದೆ. ರಾಜಪ್ಪನ ರಭಸಮತಿಗೆ ನಿಲುಕದ ಸಂಗತಿಗಳು ಚಾಲಕ ರಹೀಮನಿಗೆ ನಿಲುಕುವುದು ಸಾಂಕೇತಿಕವಾಗಿದೆ. ರಹೀಮನ ಪಾತ್ರವಿಲ್ಲದೆ ಹೋಗಿದ್ದರೆ ಬಹುಶಃ ಕಾದಂಬರಿಗೆ ಇನ್ನೊಂದು ಮಗ್ಗುಲು ಇಲ್ಲವಾಗುತ್ತಿತ್ತೇನೋ ಎನ್ನುವಷ್ಟರ ಮಟ್ಟಿಗೆ ಈ ಪಾತ್ರವನ್ನು ಬೆಳೆಸಲಾಗಿದೆ. ಆದರೆ ಈ ‘ಪುಣ್ಯ’ ಎಲ್ಲ ಪಾತ್ರಗಳಿಗೂ ಲಭ್ಯವಾಗಿಲ್ಲ. ನಾರಾಯಣ, ಪ್ರಭಾಕರ ಮುಂತಾದ ಮುಖ್ಯ ಪಾತ್ರಗಳು ರಾಜಪ್ಪನ ‘ಚರಿತ್ರೆ’ಗೆ ಬೇಕಾದಷ್ಟು ಮಾತ್ರ ಬೆಳೆಯುತ್ತವೆ. ನಾಯಕ ಕೇಂದ್ರಿತ ನೆಲೆಯಿಂದ ಚಳವಳಿಯನ್ನು ನಿರೂಪಿಸುವ ಬರವಣಿಗೆಯ ಕ್ರಮದಿಂದ ಹೀಗಾಗುತ್ತದೆ. ಚಳವಳಿ ಕೇಂದ್ರಿತ ನೆಲೆಯಿಂದ ನಾಯಕರನ್ನು ನೋಡುವ ಬರವಣಿಗೆಯ ಕ್ರಮವು ಇದಕ್ಕಿಂತ ಭಿನ್ನವಾಗಿರುತ್ತದೆ. ಆದರೂ ಜಾಣಗೆರೆಯವರು ತಮ್ಮ ಈ ಬರವಣಿಗೆಯನ್ನು ವ್ಯಕ್ತಿ ಕೇಂದ್ರಿತ ಚರಿತ್ರೆಗೆ ಮಾತ್ರ ಮಿತಿಗೊಳಿಸಿಕೊಳ್ಳದೆ ಇರುವುದು, ಅದರಾಚೆಗಿನ ಮೇಲ್ನೋಟಕ್ಕೆ ಅವಕಾಶ ಒದಗಿಸಿದೆ. ರಾಜಪ್ಪನ ವ್ಯಕ್ತಿತ್ವವನ್ನು ಸೊಗಸಾಗಿ ಕಟ್ಟಿಕೊಟ್ಟಿರುವುದು ಕಾದಂಬರಿಯ ಶಕ್ತಿಯಾಗಿದೆ. ಇಂದು ಅಧಿಕಾರಸ್ಥರು, ಚಳವಳಿಗಾರರು ಮಠಾಧೀಶರ ಮೊರೆಹೋಗುತ್ತಿರುವುದನ್ನು ನೋಡಿದಾಗ ಕಾದಂಬರಿಯ ಚಳವಳಿನಾಯಕ ಮರೆತಾದರೂ ಮತ್ತೂರು ಮಠದ ಮೇಲೆ ಹೋಗದೆ ರಾಜಕೀಯ ತೊಡಕುಗಳನ್ನು ಎದುರಿಸುವುದು, ನಿಜಕ್ಕೂ ಒಂದು ಆದರ್ಶವಾಗಿದೆ. ರಾಜಪ್ಪ ಏಳುತ್ತ, ಬೀಳುತ್ತ, ಬೆಳೆಯುತ್ತ ಬಂದ ರೀತಿ ಸಮಕಾಲೀನ ಚಳವಳಿ ಚರಿತ್ರೆಯ ಒಂದು ಭಾಗವಾಗಿದೆ.

ರಾಜಪ್ಪ ಮತ್ತು ಕನ್ನಡ ಚಳವಳಿಯ ಸಂಬಂಧಾಂತರಗಳ ಜೊತೆಗೆ ಆ ಕಾಲದ ರಾಜಕೀಯವೂ ಈ ಕಾದಂಬರಿಯಲ್ಲಿ ಪ್ರಸ್ತಾಪವಾಗುತ್ತದೆ. ಆದರೆ ಅದು ರಾಜಕೀಯ ಧುರೀಣರ ಅಥವಾ ಮುಖ್ಯಮಂತ್ರಿಗಳ ಹೆಸರು ಮತ್ತು ಅವರೊಂದಿಗೆ ರಾಜಪ್ಪನಿಗಿರುವ ಸಂಬಂಧದ ಸಣ್ಣ ವಿವರಗಳಿಗೆ ಸೀಮಿತವಾಗುತ್ತದೆ. ಹೀಗಾಗಿ ರಾಜಪ್ಪನ ಗುಂಪಿನಾಚೆಗೆ ಬರುವ ವ್ಯಕ್ತಿಗಳು ಮತ್ತು ಸನ್ನಿವೇಶಗಳು ಪ್ರಸ್ತಾಪದ ಹಂತದಲ್ಲಷ್ಟೇ ಕಾಣುತ್ತವೆ. ಲೇಖಕರು ನೀಡುವ ವಿಶೇಷಣಗಳ ನಿಯಂತ್ರಣದಲ್ಲಿ ನಿಲ್ಲುತ್ತವೆ. ವೀರಪ್ಪ, ಬಂಕಪ್ಪ, ರಾಮಚಂದ್ರಪ್ಪ, ಪಾಟೀಲ, ನಟವರ ನಟರಾಜ, ಗುಂಡಣ್ಣ- ಈ ಪಾತ್ರಗಳು ನಿರ್ದಿಷ್ಟ ಸಂದರ್ಭದ ಪ್ರತಿನಿಧಿಗಳೆನ್ನುವುದನ್ನು ಗಮನಿಸಿದಾಗ ಕೇವಲ ಪ್ರಸ್ತಾಪದಲ್ಲಿ ಪರ್‍ಯಾವಸಾನಗೊಳ್ಳುವುದು ಲೇಖಕರೇ ನಿರೂಪಣೆಯಲ್ಲಿ ನೇರವಾಗಿ ಈ ಪಾತ್ರಗಳ ಸ್ವಭಾವ ತಿಳಿಸುವುದು ಕಾದಂಬರಿಗಿದ್ದ ಮತ್ತೊಂದು ಸಾಧ್ಯತೆಯನ್ನು ತಪ್ಪಿಸಿದೆ. ಈ ಪಾತ್ರಗಳನ್ನು ಅಂದಿನ ರಾಜಕೀಯ ಹಾಗೂ ಸಾಮಾಜಿಕ ಸಂದರ್ಭದಲ್ಲಿಟ್ಟು ಸ್ವಲ್ಪವಾದರೂ ಬೆಳೆಸಿ ನಾಯಕ ರಾಜಪ್ಪ ಮತ್ತು ಕನ್ನಡ ಚಳವಳಿಯನ್ನು ನಿಕಷಕ್ಕೊಡ್ಡಿದ್ದರೆ ಕಾದಂಬರಿಯ ವ್ಯಾಪ್ತಿ ತುಂಬಾ ಹಿರಿದಾಗುತ್ತಿತ್ತು. ಜಾಣಗೆರೆಯವರ ಉದ್ದೇಶ ಕನ್ನಡ ಚಳವಳಿ ಮತ್ತು ನಾಯಕ ಮಾತ್ರವಾಗಿದ್ದರಿಂದ ಅಂದಿನ ಸಾಮಾಜಿಕ-ರಾಜಕೀಯ ಸಂದರ್ಭಗಳು ಪ್ರಾಸಂಗಿಕ ಪ್ರಸ್ತಾಪ ಮಾತ್ರವಾಗಿ ಬಿಟ್ಟಿವೆ.

ಜಾಣಗೆರೆಯವರ ಉದ್ದೇಶವನ್ನು ನಾನು ಅರ್ಥಮಾಡಿಕೊಂಡಿದ್ದೇನೆಂದು ಭಾವಿಸಿದ್ದೇನೆ. ಇಷ್ಟಾದರೂ ಕೆಲವು ಪ್ರಶ್ನೆಗಳು ಏಳುತ್ತವೆ. ವೀರಪ್ಪ ಮತ್ತು ಪಾಟೀಲರೊಂದಿಗೆ ನಾಯಕ ರಾಜಪ್ಪನಿಗಿದ್ದ ನಿಕಟ ಸಂಬಂಧಕ್ಕೆ ಮೂಲ ಕಾರಣ ಯಾವುದು ? ಮುಖ್ಯಮಂತ್ರಿಗಳಾದ ರಾಮಚಂದ್ರಪ್ಪ ವೀರಪ್ಪ, ಪಾಟೀಲ ಇವರ ಬಗ್ಗೆ ಲೇಖಕರಲ್ಲಿ ಕಂಡುಬರುವ ಸದಭಿಪ್ರಾಯ ಬಂಕಪ್ಪನ ಬಗ್ಗೆ ಯಾಕಿಲ್ಲ? ಹಾಗೆ ನೋಡಿದರೆ ಇವರೆಲ್ಲರ ಭ್ರಷ್ಟಾಚಾರದ ಪ್ರಮಾಣ ಮತ್ತು ರೀತಿನೀತಿಗಳಲ್ಲಿ ವ್ಯತ್ಯಾಸವಿದೆಯೇ ಹೊರತು ಯಾರೊಬ್ಬರೂ ನೂರಕ್ಕೆ ನೂರು ಪ್ರಾಮಾಣಿಕರಲ್ಲ. ಇನ್ನು ನಟವರ ನಟರಾಜನನ್ನು ಕುರಿತು ಕನ್ನಡ ಪರವಾಗಿ ಅಭಿನಯದಲ್ಲಿ ಮಾತ್ರ ಪೋಜು ಕೊಡುತ್ತಿದ್ದಾತನೆಂದೂ ಈಗ ಏಕಾ‌ಏಕಿ ಸಾರ್ವಜನಿಕ ಕ್ಷೇತ್ರದಲ್ಲೂ ಪೋಜು ಕೊಡಲು ಬಂದಿದ್ದಾನೆಂದೂ ತೀರ್ಮಾನದ ಮಾತುಗಳನ್ನಾಡುವುದು ಸಾಮಾಜಿಕ ಸಾಂಸ್ಕೃತಿಕ ಚರಿತ್ರೆಯ ಸರಿಯಾದ ಗ್ರಹಿಕೆಯಲ್ಲ. ಕನ್ನಡ ಚಿತ್ರಗಳಲ್ಲಿ ಮಾತ್ರ ಅಭಿನಯಿಸುವ ಸಂಕಲ್ಪ ಮಾಡಿ ಅದರಂತೆ ನಡೆದುಕೊಂಡದ್ದು, ಪ್ರವಾಹ ಪರಿಹಾರ ನಿಧಿ ಸಂಗ್ರಹಣೆಗೆ ರಾಜ್ಯ ಸುತ್ತಿದ್ದು, ಡಬ್ಬಿಂಗ್ ಚಿತ್ರ ವಿರೋಧಿ ಚಳವಳಿಗೆ ಬೆಂಬಲವಾಗಿ ನಿಂತದ್ದು, ಅಂದು ಮದ್ರಾಸಿನಲ್ಲಿ ನೆಲೆಯೂರಿದ್ದ ಕನ್ನಡ ಚಿತ್ರರಂಗವು ಸಿನಿಮಾಗಳಲ್ಲಿ ಕನ್ನಡ ಪ್ರೇಮ ಪ್ರಕಟಿಸಿ ಚರಿತ್ರೆಯಾದದ್ದು, ಇಂತಹ ಚಾರಿತ್ರಿಕ ಸಂಗತಿಗಳನ್ನು ಮರೆಯಬಾರದು. ಅಂತೆಯೇ ಮುಖ್ಯಮಂತ್ರಿಗಳಾಗಿದ್ದ ಕೆಲವರು ಮೇಲ್ನೋಟಕ್ಕೆ ಮೇಧಾವಿಗಳಂತೆ ನಡೆದುಕೊಳ್ಳುತ್ತಲೇ ಜಾತಿವಾದಿಗಳಾದದ್ದನ್ನು ಮರೆಯುವಂತಿಲ್ಲ. ಹೈಕಮಾಂಡ್ ವೀರಪ್ಪನನ್ನು ಏಕಾ‌ಏಕಿ ಬದಲಾಯಿಸಿದ ರೀತಿ ಹೇಗೆ ಸರಿಯಲ್ಲವೊ, ನಡೆದಾಡಲೂ ಸಾಧ್ಯವಾಗದ ಸ್ಥಿತಿಯಲ್ಲಿ ಅಧಿಕಾರದಲ್ಲೇ ಇರಲು ಆಸೆಪಟ್ಟ ವೀರಪ್ಪನ ನಡವಳಿಕೆಯೂ ಸರಿಯಲ್ಲವೆಂಬುದನ್ನು ಮರೆಮಾಚುವಂತಿಲ್ಲ. ವ್ಯಕ್ತಿಗಳನ್ನು ಮೀರಿದ ಚಾರಿತ್ರಿಕ ನೋಟದಿಂದ ಅನೇಕ ಸಾಮಾಜಿಕ -ರಾಜಕೀಯ ಸತ್ಯಗಳು ಗೋಚರಿಸುತ್ತವೆ. ಲೇಖಕರ ‘ನೇರನೋಟ’ವಷ್ಟೇ ಇಲ್ಲಿ ಕೆಲಸ ಮಾಡಿರುವುದರಿಂದ, ನಾನು ಹೆಸರಿಸಿದ ಪಾತ್ರಗಳು ಪ್ರಾಸಂಗಿಕ ಪ್ರಸ್ತಾಪದಲ್ಲೇ ನಿಲ್ಲುವುದರಿಂದ, ಕಾದಂಬರಿಯು ಮತ್ತಷ್ಟು ಸಾಧ್ಯತೆಗಳಿಂದ ದೂರವುಳಿದಿದೆ. ಆದರೆ ನಾಯಕ ರಾಜಪ್ಪ ಮತ್ತು ಕನ್ನಡ ಚಳವಳಿಯ ಒಳಸುಳಿಗಳ ಸಾಧ್ಯತೆಗಳನ್ನು ಕಾದಂಬರಿಯು ಸಮರ್ಥವಾಗಿ ಒಳಗೊಂಡಿದೆ.

ಅದೇನೇ ಇರಲಿ, ಜಾಣಗೆರೆ ವೆಂಕಟರಾಮಯ್ಯನವರು ನಮ್ಮೆದುರಿನ ಕನ್ನಡ ಚಳವಳಿ ನಾಯಕರ ಬದುಕನ್ನು ಕಾದಂಬರಿಯಾಗಿಸುವ ಸವಾಲನ್ನು ಸಮರ್ಥವಾಗಿ ಎದುರಿಸಿದ್ದಾರೆ. ಕಷ್ಟವಾದ ಕೆಲಸವನ್ನು ದಿಟ್ಟವಾಗಿ ಸಾಧ್ಯಗೊಳಿಸಿದ್ದಾರೆ. ಸಮಕಾಲೀನ ವ್ಯಕ್ತಿ ಚರಿತ್ರೆಯನ್ನು ಕಟ್ಟಿಕೊಡುವ ಇಂತಹ ಕೃತಿಗಳ ಸಮಸ್ಯೆ, ಸವಾಲು, ವ್ಯಾಪ್ತಿ ಮತ್ತು ಮಿತಿಗಳನ್ನು ಕುರಿತು ಗಂಭೀರ ಚರ್ಚೆಗಳು ನಡೆಯುವ ಅಗತ್ಯವಿದೆ. ಆ ಮೂಲಕ ಅಭಿವ್ಯಕ್ತಿಯ ಹಾದಿ ನಿಚ್ಚಳವಾಗ ಬಹುದಾಗಿದೆ.
*****
(ಏಪ್ರಿಲ್ – ೨೦೦೯)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೭೬
Next post ನನ್ನೊಳಗೆ

ಸಣ್ಣ ಕತೆ

 • ಮುಗ್ಧ

  ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

 • ರಣಹದ್ದುಗಳು

  ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

 • ಕಲ್ಪನಾ

  ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

 • ನಾಗನ ವರಿಸಿದ ಬಿಂಬಾಲಿ…

  ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

 • ಡಿಪೋದೊಳಗಣ ಕಿಚ್ಚು…

  ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…