ಡಿ.ಆರ್. ನಾಗರಾಜ್ ಅವರ ‘ಅಮೃತ ಮತ್ತು ಗರುಡ’ : ಒಂದು ಮರುಚಿಂತನೆ

ಡಿ.ಆರ್. ನಾಗರಾಜ್ ಅವರ ‘ಅಮೃತ ಮತ್ತು ಗರುಡ’ : ಒಂದು ಮರುಚಿಂತನೆ

ಕಿರಿಯ ವಯಸ್ಸಿನಲ್ಲಿಯೇ ‘ಭೂಗೋಳ’ವನ್ನು ಹೊಕ್ಕಿರುವ ಮತ್ತು ‘ಚರಿತ್ರೆ’ಯಲ್ಲಿಯೂ ಉಳಿದಿರುವ ಡಿ.ಆರ್. ನಾಗರಾಜ ಅವರದು ದೈತ್ಯ ವಿಮರ್ಶಾ ಪ್ರತಿಭೆ. ಇವರ ಕೃತಿಗಳಲ್ಲಿ ಹಠ ಮತ್ತು ಪ್ರೀತಿಯಿಂದ ಮಾಡಿದ ಅಪಾರ ಅಧ್ಯಯನ, ಸದಾ ಜಾಗೃತವಾಗಿರಿಸಿಕೊಂಡ ಸೂಕ್ಷ್ಮ ಗ್ರಾಹಿಮನಸ್ಸು, ವಿಮರ್ಶಾ ಪ್ರಕ್ರಿಯೆಯಲ್ಲಿ ಸದಾ ಕಾಯ್ದಿರಿಸಿಕೊಂಡಿದ್ದ ರಸನಿಷ್ಟ ಸಮಾಜವಾದಿ ಪ್ರಜ್ಞೆ: ಇವೆಲ್ಲವೂ ಸಾವಯವ ಸಂಬಂಧವನ್ನು ಸಾಧಿಸಿವೆ. ಇವರ ವಿಮರ್ಶೆ ಅಂತಿಮವಾಗಿ ಅವರೇ ಹೇಳುವಂತೆ ಲೋಕ ವಿಮರ್ಶೆಯೂ ಹೌದು ಆದ್ದರಿಂದಲೇ ಇವರು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಕಂಡ ಮಹತ್ವದ ವಿಮರ್ಶಕರಲ್ಲಿ ಒಬ್ಬರಾಗಿ ನಿಲ್ಲುವುದು. ಇದು ಇವರ ಎಲ್ಲಾ ಕೃತಿಗಳನ್ನು ಆಧರಿಸಿದ ಮಾತಾಗಿದೆ. ಹಾಗಾಗಿ ಇವರ ಕೃತಿಗಳ ಮೂಲಕ ಸಂಸ್ಕೃತಿಯ ಅನೇಕ ಸೂಕ್ಷ್ಮ ಮಗ್ಗುಲುಗಳ ಪರ್ಯಟನವೂ ಸಾಧ್ಯವಾಗುತ್ತದೆ. ಇಂತಹ ಕ್ರಿಯೆ ಕೇವಲ ಸಹೃದಯನೊಬ್ಬನ ಬೌದ್ಧಿಕ ಯಾತ್ರೆಯಲ್ಲ; ಸಾಮಾನ್ಯವಲ್ಲದ ಬೌದ್ಧಿಕ ಯಾತ್ರೆ ಎಂಬುದನ್ನು ಅನೇಕರ ಓದಿನ ಅನುಭವವೂ ಹೇಳುತ್ತದೆ.

ಇಲ್ಲಿ ‘ಯಾತ್ರೆ’ ಎಂಬ ಕಲ್ಪನೆಯ ಪ್ರಸ್ತಾಪವಿದೆ. ಯಾತ್ರೆಗೆ ಧಾರ್ಮಿಕ ಮತ್ತು ಸಾಂಸ್ಥಿಕ ಮೂಲದ ದೈವಿಕ ಆಯಾಮಗಳಿವೆ. ಆದರೆ ಆ ಅರ್ಥದಲ್ಲಿ ಅದನ್ನಿಲ್ಲಿ ನಾನು ಪ್ರಸ್ತಾಪಿಸುತ್ತಿಲ್ಲ. ಆದರೆ ಯಾವುದೇ ಬಗೆಯ ಯಾತ್ರೆಯೊಂದಕ್ಕೆ ಪೂರ್ವಸಿದ್ಧತೆಯೊಂದು ಕಡ್ಡಾಯವಾಗಿ ಇದ್ದೇ ತೀರಿರುತ್ತದೆ. ಹಾಗಿದ್ದಾಗ ಮಾತ್ರ ಆ ಯಾತ್ರೆ ಸುಸೂತ್ರವಾಗಿ ಮತ್ತು ಯಶಸ್ವಿಯಾಗಿ ನಡೆಯಲು ಸಾಧ್ಯವಾಗುತ್ತದೆ. ಅಂತೆಯೇ ಡಿ.ಆರ್. ಅವರ ವಿಮರ್ಶಾ ಜಗತ್ತಿನಲ್ಲಿ ಕೈಗೊಳ್ಳುವ ಯಾತ್ರೆಗೆ ಸಹ ಕನಿಷ್ಟ ಮಟ್ಟದ ಬೌದ್ಧಿಕ ಪರಿಶ್ರಮವು ಪೂರ್ವ ಸಿದ್ಧತೆಯಾಗಿ ಇರಬೇಕು. ಇಲ್ಲವಾದಲ್ಲಿ ಕನ್ನಡದಲ್ಲಿಯೇ Expose ಆಗಿರುವ ಇವರು ಕನ್ನಡಿಗರಿಗೇ ಸಿಗದಂತಾಗುತ್ತಾರೆ. ಅಥವಾ ಆ ಬಗೆಯ ಅನಾಥ ಪ್ರಜ್ಞೆಯೊಂದನ್ನು ಸಹೃದಯರಲ್ಲಿ ಮೂಡಿಸಿಬಿಡುತ್ತಾರೆ. ಆದ್ದರಿಂದ ಡಿ.ಆರ್. ಅವರು ನಿಲ್ಲುವ ಎತ್ತರ ಸ್ವಲ್ಪ ದೂರದ್ದು ಮತ್ತು ಆ ದೂರಕ್ಕೂ ತೀವ್ರ ಪರಿಶ್ರಮದ ಇತಿಹಾಸವೊಂದು ಇದೆ ಎಂಬುದು ಸ್ಪಷ್ಟ. ಆದ್ದರಿಂದಲೇ ನನ್ನ ಗಮನವೀಗ ‘ಅಮೃತ ಮತ್ತು ಗರುಡ’ ದೆಡೆಗೆ.

ಇದು ಡಿ.ಆರ್. ಅವರ ಮೊದಲ (೧೯೮೩) ವಿಮರ್ಶಾ ಲೇಖನಗಳ ಸಂಕಲನವಾಗಿದೆ. ಇದು ಮುಖ್ಯವಾಗಿ ಆಧುನಿಕ ಕನ್ನಡ ಸಾಹಿತ್ಯವನ್ನು ಕೇಂದ್ರೀಕರಿಸಿದೆ. ಇದರಲ್ಲಿ ಕುವೆಂಪು, ಕಾರಂತ, ಮಾಸ್ತಿ ಅವರ ಕಥಾ ಸಾಹಿತ್ಯ, ೨೦ರ ದಶಕದ ಕನ್ನಡ ಕಾವ್ಯ, ಜಿ.ಎಸ್.ಎಸ್. ಅವರ ಸಮಗ್ರ ಕಾವ್ಯ, ಈಚೆಗಿನ ತಲೆಮಾರಿನವರಾದ ಪ್ರಸನ್ನ, ವೈಕುಂಠರಾಜು ಅವರ ನಾಟಕಗಳು ಹಾಗೂ ಅವುಗಳಿಗೆ ಅನುಬಂಧವೆಂಬಂತೆ ಕನ್ನಡ ಜಾನಪದ ಪರಂಪರೆ ಮತ್ತು ಕರಿಭಂಟನಂತಹ ಒಂದೆರಡು ಜಾನಪದ ಪಠ್ಯಗಳನ್ನು ವಿಮರ್ಶೆಗೆ ಒಳಪಡಿಸಲಾಗಿದೆ. ಇಲ್ಲಿ ವಸಾಹತುಶಾಹಿ ಸಂಸ್ಕೃತಿಯು ನಿರ್ಮಿಸಿದ ಹೊಸ ಭೌತಿಕ, ಬೌದ್ಧಿಕ ವಿನ್ಯಾಸಗಳು ಆ ಕಾಲದ ಲೇಖಕರ ಸೃಜನಶೀಲತೆಯ ಆಯಾಮಗಳನ್ನು ಹೆಚ್ಚಿಸಿದ ಮತ್ತು ಅದರ ತೀವ್ರ ಒತ್ತಾಸೆಯಲ್ಲಿ ಅವರ ಸೃಜನಶೀಲತೆಗೆ ಒದಗಿದ ಮಿತಿಗಳ ಬಗ್ಗೆ ತಲಸ್ಪರ್ಶಿಯಾದ ಅಧ್ಯಯನ ನಡೆದಿದೆ. ಇಲ್ಲಿ ಕೇವಲ ಮರಣೋತ್ತರ ಮಾದರಿಯ ಪರೀಕ್ಷಾ ಕ್ರಮ ಇಲ್ಲ ಎಂಬುದು ಹೆಚ್ಚಿನ ಮಾತಾದರೂ ಹೇಳಲೇಬೇಕೆನಿಸುತ್ತದೆ. ಇದು ಕಪಾಟನ್ನು ಸೇರಿ ದೂಳು ಹಿಡಿದ ಅನೇಕ ವಿಮರ್ಶಾ ಬರವಣಿಗೆಗಳ ನಡುವೆ ಮುಖ್ಯ ಎನ್ನಿಸುತ್ತದೆ. ಆದ್ದರಿಂದ ಇವರ ವಿಮರ್ಶೆಗೊಂದು ನಾವೀನ್ಯವೊದಗಿ, ಕನ್ನಡ ಸಾಹಿತ್ಯ ಸಂಸ್ಕೃತಿಯ ವಿಮರ್ಶಾ ಜಗತ್ತಿನಲ್ಲಿ ಇವರಿಗೆ ವಿಶಿಷ್ಟವೂ ಅನನ್ಯವೂ ಆದ ಸ್ಥಾನವೊಂದು ಏರ್ಪಡುತ್ತದೆ.

ಇವರು ಆಧುನಿಕ ಸಂದರ್ಭದ ಕನ್ನಡ ಶಿಷ್ಟ ಸಾಹಿತ್ಯದ ಮೇಲೆ ಸಾಧಿಸಿದ ಹಿಡಿತವನ್ನು ಜಾನಪದ ಸಾಹಿತ್ಯ ಮತ್ತು ಅದರ ಪ್ರಪಂಚದ ಮೇಲೆ ಸಾಧಿಸಲಾಗಿಲ್ಲ ಎಂಬುದನ್ನು ಇಲ್ಲಿಯ ಕೆಲವು ಲೇಖನಗಳು ನಮ್ಮ ಕಿವಿಯಲ್ಲಿ ಪಿಸುಗುಡುತ್ತವೆ.

ಇಡೀ ಕೃತಿಯಲ್ಲಿ ಪ್ರತೀ ಸಾಲಿನಲ್ಲಿಯೂ ಎನ್ನುವಷ್ಟರ ಮಟ್ಟಿಗೆ ಡಿ.ಆರ್. ಅವರ ಸೂಕ್ಷ್ಮ ಗ್ರಾಹಿ ಮನಸ್ಸು ಕ್ರಿಯಾಶೀಲಗೊಂಡಿದೆ. ಈ ಪ್ರಕ್ರಿಯೆಯಲ್ಲಿ ಉನ್ನತ ಮಟ್ಟದ ಪಾಂಡಿತ್ಯ [ಇದು ಹೊಸ ಸಾಹಿತ್ಯ (ಕನ್ನಡ, ಇಂಗ್ಲೀಷ್)ವನ್ನು ಮಾತ್ರ ಆಧರಿಸಿದೆ] ಮತ್ತು ಮೇಲೆ ಪ್ರಸ್ತಾಪಿಸಿದ ಒಳಗಣ್ಣುಗಳ ಸೂಕ್ಷ್ಮ ದೃಷ್ಟಿ: ಇವೆರಡೂ ಬಿಗಿಯಾದ ಭಾಷೆಯಲ್ಲಿ ‘ವಿಮರ್ಶೆ’ಯಾಗಿದೆ. ಇಂತಹ ನೆಲೆಯಲ್ಲಿ ವಿಮರ್ಶೆಗೆ ಒಳಪಡುವ ಪ್ರತೀ ಕೃತಿಯಲ್ಲಿ ಸಂಕೀರ್ಣತೆಯನ್ನು ಅರಸುತ್ತಾರೆ. ಭಾವಕೋಶ, ಬೌದ್ಧಿಕತೆ, ವಸ್ತು, ತಾಂತ್ರಿಕ ನೈಪುಣ್ಯತೆ ಅಥವಾ ಅಭಿವ್ಯಕ್ತಿ – ಇವು ಸಾವಯವ ಸಂಬಂಧವನ್ನು ಸಾಧಿಸಿ, ಕಲಾತ್ಮಕ ನೆಲೆಯಲ್ಲಿ ಅಖಂಡ ಕೃತಿಯಾಗಬೇಕೆಂದು ನಿರೀಕ್ಷಿಸುತ್ತಾರೆ. ಇಂತಹ ಕೃತಿ ಓದುಗನಿಗೆ ಸಂಕೀರ್ಣಾನುಭವವನ್ನು ನೀಡಬೇಕೆಂದು ಅಶಿಸುತ್ತಾರೆ. ಅಂತಹ ಕೃತಿ ಮಾತ್ರ ಉನ್ನತ ದರ್ಜೆಯ ಕೃತಿ ಎಂದು ನಿರ್ಣಯಿಸುತ್ತಾರೆ. ಆದರೆ ಆ ಮಟ್ಟದ ನಿರೀಕ್ಷೆಯನ್ನು ಯಾವ ಕೃತಿಯೂ ಪೂರ್ಣವಾಗಿ ಪೂರೈಸಲಿಲ್ಲ ಎಂಬುದನ್ನು ಈ ಸಂಕಲನದ ಎಲ್ಲಾ ಲೇಖನಗಳು ನಮ್ಮೊಂದಿಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತವೆ. ಈ ಮಾತಿಗೆ ಜಿ.ಎಸ್.ಎಸ್. ಅವರ ಕಾವ್ಯ ಅತೀತವಾಗಿ ನಿಲ್ಲುವ ಕ್ರಮ ಅನೇಕ ಕುತೂಹಲ ಮತ್ತು ಗುಮಾನಿಗಳಿಗೆ ಎಡೆಮಾಡಿಕೊಡುತ್ತದೆ. ಅಂತಿಮವಾಗಿ ಈ ಚೌಕಟ್ಟಿಗೆ ಬಾರದ ಯಾವುದೇ ಕೃತಿ ಪಾಂಪ್ಲೆಟ್ಟಿನಲ್ಲಿರುವ ಗದ್ಯ ಅಥವಾ ಪದ್ಯವಾಗಿಯಷ್ಟೇ ಉಳಿಯುತ್ತದೆ ಮತ್ತು ಅದರಲ್ಲಿ ನಿರ್ಮಾಣಗೊಳ್ಳುವ ಪಾತ್ರಗಳು ಜೀವಂತ ಹೆಣಗಳಾಗಿರುತ್ತವೆ ಎಂಬ ನಿಲುವನ್ನು ತಾಳುತ್ತಾರೆ.

ಕನ್ನಡ ಸಾಹಿತ್ಯ ಪರಿಶೀಲನೆಯ ಈ ಸಾಂಸ್ಕೃತಿಕ ಭಾಷಾ ಪ್ರಕ್ರಿಯೆಯಲ್ಲಿ ಡಿ.ಆರ್. ಅವರು ಸಂಕೀರ್ಣ ಗ್ರಹಿಕೆಯನ್ನು ಸಾಧಿಸುತ್ತಾರೆ ಮತ್ತು ಅದನ್ನು ಸೋಪಜ್ಞವಾದ ಶಕ್ತಿಯುತ ಭಾಷೆಯಲ್ಲಿಯೇ ಅಭಿವ್ಯಕ್ತಿಗೊಳಿಸುತ್ತಾರೆ. ಇಂತಹ ಭಾಷಾ ಸಂಕೀರ್ಣತೆ ಅಂತಿಮವಾಗಿ ಬೌದ್ಧಿಕವಾದ ಗ್ರಹಿಕೆ ಮತ್ತು ಅವುಗಳ ಅಭಿವ್ಯಕ್ತಿಯ ಸಂಕೀರ್ಣತೆಯೇ ಆಗಿದೆ ಎಂಬುದು ಸಹಜವಾದ ವಿಚಾರವಾಗಿದೆ. ಇಂತಹ ಸಂಕೀರ್ಣತೆಯನ್ನು ಕಾದಂಬರಿಯ ಸಂದರ್ಭದಲ್ಲಿ ದೇವನೂರು ಅವರು ಸಾಧಿಸಿದ್ದಾರೆ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.

ಡಿ‌ಆರ್ ಅವರು ತಮ್ಮ ಹರಯದಲ್ಲಿಯೇ ಬರೆದ ಕೃತಿ ಇದು. ಆದ್ದರಿಂದ ಸಹಜವಾಗಿಯೇ ಅಲ್ಲಲ್ಲಿ ವಿರೋಧಕ್ಕಾಗಿ ವಿರೋಧ ಎಂಬಂತಹ ನೆಲೆಗಳು ಸೂಕ್ಷ್ಮವಾಗಿ ನುಸುಳುತ್ತವೆ. ಅಂಥ ಎಡೆಗಳಲ್ಲಿ ಇವರು ನೆಚ್ಚಿದ ವಿಮರ್ಶಾ ಮಾನದಂಡಗಳೇ ಅಂತಿಮವಲ್ಲ ಎಂಬ ತಿಳುವಳಿಕೆ ಗೈರು ಹಾಜರಾಗಿರುತ್ತದೆ. ಆಗ ತೀವ್ರ ಸಾಮಾಜಿಕ ಸಂವೇದನೆಗಳೊಂದಿಗೆ ಮಣ್ಣನ್ನು ಮೈಗೆ ಮೆತ್ತಿಸಿಕೊಂಡು ನೆಲದಿಂದ ಮೂಡಿ ಬರುವ ಬರಗೂರರ ಪಾತ್ರಗಳು ವಿಲಕ್ಷಣವಾಗಿ ಕಾಣುತ್ತವೆ.

ಇಡೀ ಕೃತಿ ಪಾಶ್ಚಾತ್ಯ ಚಿಂತಕರ ಉಲ್ಲೇಖಗಳಿಂದ ಕೂಡಿದೆ. ಅಥವಾ ನಮಗೆ ಇಂಗ್ಲಿಷ್ ಭಾಷೆಯ ಮೂಲಕ ದತ್ತರಾದ ಚಿಂತಕರ ಉಲ್ಲೇಖಗಳಿಂದ ಬಹುವಾಗಿ ತುಂಬಿದೆ. ಲುಜಾಕ್ಸ್, ಪ್ಲೇಟೋ, ಸ್ಟಾಲಿನ್, ಹೆರಾಕ್ಲಿಟಸ್, ನೀಷೆ, ಕಿರ್ಕ್‌ಗಾರ್ಡ್, ಜೋಲಾ….ಹೀಗೆ ಅನೇಕರು. ಉದಾಹರಣೆಗೇ ‘ತನ್ನೊಳಗೇ ತಾನು ಜಗಳವಾಡುವಂಥದಲ್ಲ ಕಾವ್ಯ’ ಎಂಬ ಯೇಟ್ಸನ ವ್ಯಾಖ್ಯಾನ ಇಲ್ಲಿ ಸಲ್ಲುವಂಥದಲ್ಲ- ಇದನ್ನು ಅಡಿಗರ ‘ಮೂಲಕ ಮಹಾಶಯರು’ ಕವನ ಸಂಕಲನದ ಸ್ಥೂಲ ಮತ್ತು ಸಂಕ್ಷಿಪ್ತ ವಿಮರ್ಶೆಯ ಒಂದೆಡೆಯಲ್ಲಿ ಪ್ರತಿಷ್ಠಾಪಿಸುತ್ತಾರೆ. ಇದೇ ರೀತಿಯಲ್ಲಿ ಭಾರತೀಯ ಮತ್ತು ಅದರ ಒಂದು ಭಾಗವಾದ ಅಥವಾ ಭಾರತೀಯವೇ ಆದ ಕನ್ನಡ ಮತ್ತು ಇತರೆ ಚಿಂತಕರು ಇವರನ್ನು ಕಾಡಲೇ ಇಲ್ಲವೇ? ಎಂಬ ಕುತೂಹಲ ಮತ್ತು ಪ್ರಶ್ನೆ ಕೆರಳುತ್ತದೆ. ಆದ್ದರಿಂದ ಈ ಬಗೆಯ ಡ್ರಿಲ್ಲಿಗೆ ಇಂಗ್ಲಿಷ್ ಪರವಾದ ಮೇಲರಿಮೆ ಕಾರಣವೇ? ಅಥವಾ ಇದು ತಮ್ಮ ಚೊಚ್ಚಿಲ ವಿಮರ್ಶಾ ಸಂಕಲನವಾಗುತ್ತಿರುವುದರಿಂದ ಪಾಂಡಿತ್ಯ ಪ್ರದರ್ಶನದ ಒತ್ತಾಸೆಯೇ? ಅಥವಾ ದೊಡ್ಡಬಳ್ಳಾಪುರದಂತಹ ಗ್ರಾಮೀಣ ಪ್ರದೇಶದಿಂದ ಬಂದ ವ್ಯಕ್ತಿ ಈ ರೀತಿ ಮಾತನಾಡಲು ಈ ದೇಶದಲ್ಲಿ ಅನೇಕ ಕಾಲದಿಂದ ಒಟ್ಟೊಟ್ಟಿಗೆ ಇರುವ ಸಾಮಾಜಿಕ ಮತ್ತು ಭಾಷಾ ಶ್ರೇಣಿಕರಣದ ವ್ಯವಸ್ಥೆ ಕಾರಣವೇ?…ತಾಳ್ಮೆಯ ಅಗತ್ಯವಿದೆ.

ಒಟ್ಟಾರೆ ಸೋಪಜ್ಞ ಬೌದ್ಧಿಕ ಶಕ್ತಿಯಾಗಿ ಒಡಮೂಡಿ ಬಂದಿರುವ ‘ಅಮೃತ ಮತ್ತು ಗರುಡ’ವು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಜಗತ್ತಿನಲ್ಲಿ ಡಿ.ಆರ್. ನಾಗರಾಜ್ ಅವರು ವಿಮರ್ಶಕರಾಗಿ ಇಡುವ ದೊಡ್ಡ ಹೆಜ್ಜೆಗಳ ಸ್ಪಷ್ಟ ಸೂಚನೆಗಳನ್ನು ಅಂದೇ ನೀಡುವಲ್ಲಿ ಸಾರ್ಥಕ್ಯವನ್ನು ಕಂಡಿದೆ.
*****
ಜನವಾಹಿನಿ, ೨೩ ಸೆಪ್ಟಂಬರ್ ೨೦೦೧

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನ್ನಡ ಹೆಣ್ಣು
Next post ಯಾತನೆ

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

cheap jordans|wholesale air max|wholesale jordans|wholesale jewelry|wholesale jerseys