ಸೌಂದರ್ಯದ ಉದ್ಯಮ, ಸೌಂದರ್ಯದ ರಾಜಕೀಯ

ಸೌಂದರ್ಯದ ಉದ್ಯಮ, ಸೌಂದರ್ಯದ ರಾಜಕೀಯ

ಇದೇ ವರ್ಷ ನವೆಂಬರ್ ೨೨ ರಂದು ಪ್ರಸಾರಗೊಂಡ ಸುದ್ದಿ ಇದು. ಆಫ್ರಿಕದ ನೈಜೀರಿಯಾದ ಕಾಡುನಾ ಎಂಬಲ್ಲಿ ವಿಶ್ವಸುಂದರಿ ಸ್ಪರ್‍ಧೆಯ ಪರ-ವಿರುದ್ಧ ಗಲಭೆ ನಡೆಯಿತು. ಗಲಭೆಗೆ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಮತೀಯತೆಯ ರಂಗು ಬಂದಿತ್ತು. ನೂರ ಐದು ಜನ ಪ್ರಾಣಕೆಳದುಕೊಂಡರು. ಇದನ್ನು ಟಿವಿಯಲ್ಲಿ ನೋಡಿದಾಗ, ಓದಿದಾಗ ಮೂಡಿದ ವಿಚಾರಗಳು ಇವು.

‘ಮನದ ಪರಿಣಾಮವೇ ಚೆಲುವ.’ ಹನ್ನೆರಡನೆಯ ಶತಮಾನದಲ್ಲಿದ್ದ ಅಕ್ಕ ಮಹಾದೇವಿಯ ಒಂದು ವಚನದಲ್ಲಿ ಬರುವ ಮಾತು ಇದು. ಇಲ್ಲಿ ಬರುವ ಪರಿಣಾಮ ಎಂಬ ಮಾತು ನನಗೆ ಮೊದಲು ಅರ್ಥವಾಗಿರಲಿಲ್ಲ. ತೀರ ಇತ್ತೀಚೆಗೆ ಅಭಿನವಗುಪ್ತನನ್ನು ಕುರಿತ ಪುಸ್ತಕವೊಂದನ್ನು ಓದುತ್ತಿದ್ದಾಗ ಅಲ್ಲಿದ್ದ ಒಂದು ವಿವರಣೆ ಈ ವಚನದ ಅರ್ಥದ ವಿಸ್ತಾರವನ್ನು ಹೊಳೆಯಿಸಿತು. ಪರಿಣಾಮ ಎಂಬುದು ಬದಲಾವಣೆಯನ್ನು ಸೂಚಿಸುವ ಒಂದು ಪಾರಿಭಾಷಿಕ ಪದ. ಬದಲಾವಣೆಯಲ್ಲಿ ನಾಲ್ಕು ಬಗೆಗಳು ಇವೆಯಂತೆ. ಮೊದಲನೆಯದು ಏನನ್ನಾದರೂ ಸೇರಿಸಿಕೊಳ್ಳುವ, ಕೂಡಿಸಿಕೊಳ್ಳುವ ಮೂಲಕ ಆಗುವ ಬದಲಾವಣೆ. ಅದನ್ನು ‘ಆಗಮ’ವೆನ್ನುತ್ತಾರೆ. ಹೊಸದಾಗಿ ಮನೆಗೆ ಇನ್ನೊಂದು ಕೋಣೆ ಕಟ್ಟಿಸಿಕೊಳ್ಳುವುದು, ಯಾವುಯಾವುದೋ ಹೊಸ ಮಾಹಿತಿಯನ್ನು ಮನಸ್ಸಿಲ್ಲಿ ತುಂಬಿಕೊಳ್ಳುವುದು ಇಂಥವು ಕೂಡ ಬದಲಾವಣೆಯೇ. ಇನ್ನೊಂದು ಈಗಾಗಲೇ ಇರುವುದನ್ನು ‘ನಾಶ’ ಮಾಡುವ ಮುಖಾಂತರ ಆಗುವ ಬದಲಾವಣೆ. ಮನೆಯ ಒಂದು ಭಾಗ ಕೆಡವಿ, ಪುಸ್ತಕದ ಒಂದಷ್ಟು ಹಾಳೆ ಹರಿದು ಇತ್ಯಾದಿ ಕೆಲಸಗಳ ಮೂಲಕವೂ ಬದಲಾವಣೆ ಆದೀತು. ಮೊರನೆಯ ಬದಲಾವಣೆ ‘ವಿಕಾರ’. ಅಂದರೆ ಬದಲಾದಂತೆ ಕಾಣುವ ಆದರೆ ಬದಲಾಗದೆ ಮೂಲ ರೂಪ ಉಳಿಸಿಕೊಂಡಿರುವ ಬದಲಾವಣೆ. ಕೊರಳ ಸರವಾದರೂ ಕೈಯ ಬಳೆಯಾದರೂ ಚಿನ್ನ ಅದೇ ಚಿನ್ನವಾಗಿರುವಂಥ ಬದಲಾವಣೆ. ನಾಲ್ಕನೆಯದು ಪರಿಣಾಮ. ಅಂದರೆ ಮರಳಿ ಪೂರ್‍ವಸ್ಥಿತಿಗೆ ಹಿಂದಿರುಗಲಾಗದಂಥ ಸಂಪೂರ್‍ಣ ಬದಲಾವಣೆ. ತುಪ್ಪವು ಮತ್ತೆ ಹಾಲು ಆಗಲು ಸಾಧ್ಯವಿಲ್ಲದಂತೆ ಬದಲಾಗುವುದೇ ಪರಿಣಾಮ. ಅಕ್ಕ ತನ್ನ ವಚನಗಳಲ್ಲಿ ಪರಿಣಾಮ ಎಂಬ ಮಾತನ್ನು ಮತ್ತೆ ಮತ್ತೆ ಬಳಸುತ್ತಾಳೆ. ಇನ್ನೆಂದೂ ತನ್ನ ಪೂರ್ವಸ್ಥಿತಿಗೆ ಮರಳಲಾಗದಂಥ ಸತತ ಬದಲಾವಣೆಯೇ ಚೆಲುವು ಎಂದು ಅಕ್ಕ ಹೇಳುತ್ತಿರುವಂತಿದೆ. ಸತತವಾಗಿ ಬದಲಾಗುತ್ತಲೇ ಇರುವುದರಿಂದಲೇ, ಸತತ ಹೊಸತಾಗುತ್ತಲೇ ಇರುವುದರಿಂದಲೇ ಚೆಲುವು ಇರಲು ಸಾಧ್ಯ. ಆದರೆ ನಾವು ಯಾವುದನ್ನು ಚೆಲುವು ಎಂದು ತಿಳಿದಿದ್ದೇವೆಯೋ ಅದನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ಹಂಬಲಿಸುತ್ತೇವಲ್ಲ! ಹಾಗೆ ಉಳಿಸಿಕೊಳ್ಳುವ ಹಟದಲ್ಲೇ ಚೆಲುವನ್ನು ಕಳೆದುಕೊಳ್ಳುತ್ತೇವಲ್ಲ!

ಈಗ ನೋಡಿ. ಸೌಂದರ್ಯವೆನ್ನುವುದು ಕೇವಲ ಕವಿಗಳ ವರ್‍ಣನೆಗೆ ಸಂಬಂಧಿಸಿದ ಸಂಗತಿಯಾಗಿ, ಅಥವ ನಿರಪಾಯಕರವಾದ, ಸುಖಕೊಡುವ, ಆಸ್ವಾದಿಸಬೇಕಾದ ಅನುಭವವಾಗಿ ಉಳಿದಿಲ್ಲ. ಸೃಷ್ಪಿಯಲ್ಲಿ ಸತತ ನಾಶಹೊಂದುತ್ತಾ ಹೊಸತಾಗುತ್ತಲೇ ಇರುವ ಚೆಲುವು ಸೌಂದರ್ಯವಿರುವುದು ಬೇರೆ. ಸೌಂದರ್ಯದ ಬಗ್ಗೆ ಸಂಸ್ಕೃತಿಗಳು, ಸಮಾಜಗಳು ರೂಪಿಸಿಕೊಂಡ ಕಲ್ಪನೆಗಳು, ಇಟ್ಟುಕೊಂಡ ನಂಬಿಕೆಗಳು, ಆರೋಪಿಸಿಕೊಂಡ ಮೌಲ್ಯಗಳು ಬದುಕನ್ನು ಆಳುವ ರೀತಿಯೇ ಬೇರೆ. ಸೌಂದರ್ಯ ಎಂಬ ಕಲ್ಪನೆಗೆ ಇಂದು ಹಣಕಾಸಿನ, ಉದ್ಯಮದ, ರಾಜಕೀಯದ ರಂಗುಗಳೆಲ್ಲ ಸೇರಿ ಜಟಿಲವಾದ ಒಂದು ಬಲೆಯನ್ನೇ ಸೃಷ್ಟಿಸಿಕೊಂಡುಬಿಟ್ತದ್ದೇವೆ. ಈ ಬಲೆಯಲ್ಲಿ ಸಿಕ್ಕಿ ನರಳುವುದು ಹೆಣ್ಣೇ ಎಂಬುದು ವಿಪರ್‍ಯಾಸ.

ಬುದ್ಧಿಮಟ್ಟವನ್ನು ಅಳೆಯಲು ಐ.ಕ್ಯು ಎಂಬ ಮಾನದಂಡ ರೂಪಿಸಿಕೊಂಡ ಮನಸ್ಸು ಸೌಂದರ್ಯವನ್ನು ಅಳೆಯಲೂ ಅಳತೆಗೋಲನ್ನು ಕಲ್ಪಿಸಿಕೊಂಡಿದೆ. ಸೌಂದರ್ಯವೆಂದರೆ ಸತ್ಯ, ಸೌಂದರ್ಯವೆಂದರೆ ಆನಂದ, ಸೌಂದರ್ಯವೆಂದರೆ ಸತ್ವ ಎಂಬಂಥ ವ್ಯಾಖ್ಯಾನಗಳು ಕೇವಲ ತಾತ್ವಿಕ ವಿಚಾರಗಳಾಗಿ ಮಾತ್ರ ಕೇಳತೊಡಗಿವೆ. ‘ಮಹಿಳಾ ಸಶಕ್ತೀಕರಣಿದ’ ಬಗ್ಗೆ ಚಳವಳಿಗಳು ನಡೆಯುತ್ತಾ ಎಚ್ಚರ ಮೊಡುತ್ತಿರುವಾಗಲೇ ಸೌಂದರ್ಯೋದ್ಯಮ ಬೆಳೆಯುತ್ತಿರುವ ವಿರೋಧಾಭಾಸವೂ ನಮ್ಮ ಕಣ್ಣಮುಂದಿದೆ. ಸೌಂದರ್ಯ ಮತ್ತು ಸೌಂದರ್ಯದ ಆಕರವೆಂದು ಭಾವಿಸಲಾಗಿರುವ ಹೆಣ್ಣಿನ ಶರೀರ ವಾಣಿಜ್ಯದ ಉಪಕರಣಗಳಾಗಿವೆ. ಸುಂದರಿಯಾಗುವುದೇ, ತನ್ನ ಸೌಂದರ್ಯವನ್ನು ಉಳಿಸಿಕೊಳ್ಳವುದೇ ಬಾಳಿನ ಸಾರ್ಥಕತೆ ಎಂಬ ಒತ್ತಾಯ ಹೆಣ್ಣುಮಕ್ಕಳ ಮನಸ್ಸನ್ನು ಎಂಥ ಒತ್ತಡಗಳಿಗೆ ಸಿಕ್ಕಿಸಿರಬಹುದು!

ಮತ್ತೆ ಹಣ್ಣುಮಕ್ಕಳ ಮೇಲೆ ಇಂಥ ಒತ್ತಡವನ್ನು ನಿರಂತರವಾಗಿ ಕಾಪಾಡಿಕೊಂಡು ಬರುವುದರಲ್ಲಿ ಆಧುನಿಕ ಸಂಸ್ಕೃತಿ ಮಗ್ನವಾಗಿದೆ. ಪ್ರಾಯದಲ್ಲಿ ಸಹಜವಾಗಿ ಮೂಡುವ ಮೊಡವೆ, ಕಾಲ ಕಳೆದಂತೆ ಸಹಜವಾಗಿ ಮುಖದಲ್ಲಿ ಮೂಡುವ ಸುಕ್ಕುಗೆರೆ, ಮನುಷ್ಯ ಸಹಜವಾದ ಬೆವರ ಗಂಧ ಇವಲ್ಲ ಅಸಹ್ಯ; ತುಟಿಗೆ ಉಗುರಿಗೆ ಕೊಡುವ ಕೃತಕ ರಂಗು, ಹುಬ್ಬಿನ, ರೆಪ್ಪೆಯ ಪರಿಷ್ಕರಣ, ನಿರ್ದಿಷ್ಟ ಅಳತೆಯ ದೇಹ ಪ್ರಮಾಣ ಸಂಪಾದನೆ ಇಂಥವೆಲ್ಲ ಅನಿವಾರ್ಯ ಅಗತ್ಯ. ಅಯ್ಯೋ, ಸೌಂದರ್ಯದ ಕಾಲ್ಪಾನಿಕ ಅಳತೆಗೋಲಿಗೆ ತಮ್ಮನ್ನು ಸರಿಯಾಗಿ ಹೊಂದಿಸಿಕೊಳ್ಳುವ ಎಂಥ ಒತ್ತಡ!

ಇವು ನಮ್ಮ ಚೆಲುವಿನ ವ್ಯಾಖ್ಯಾನಗಳೋ ಅಥವ ವ್ಯಾಪಾರ ಬುದ್ಧಿಯ ಕೂಸುಗಳೋ? ನಾನಿರುವ ಬೆಂಗಳೂರಿನ ಅತಿ ಸಾಮಾನ್ಯ ಬೀದಿಯ ಬ್ಯೂಟಿ ಪಾರ್ಲರ್ ತಿಂಗಳಿಗೆ ಕನಿಷ್ಠ ಐವತ್ತು ಸಾವಿರ ರೂಪಾಯಿ ದುಡಿಮೆಯನ್ನು ಮಾಡುತ್ತದೆ. ಇತ್ತೀಚೆಗೆ ಓದಿದ ಒಂದು ಮಾಹಿತಿಯಂತೆ ಮುಂದುವರೆದ, ಮುಂದುವರೆಯುತ್ತಿರುವ ದೇಶಗಳಲ್ಲಿ ಸೌಂದರ್ಯವರ್ಧಕ ವಸ್ತುಗಳ ಉದ್ದಿಮೆಯಲ್ಲಿ ತೊಡಗಿಸಿರುವ ಹಣ, ಆಗುವ ವ್ಯಾಪಾರ ಇವು ಸರಿ ಸುಮಾರಾಗಿ ಅಯಾ ದೇಶದ ರಕ್ಷಣಾವೆಚ್ಚದಷ್ಟೇ ಇರುತ್ತದಂತೆ! ಸೌಂದರ್ಯವೆನ್ನುವುದು ಮಹಾನ್ ಉದ್ಯಮ. ಚೆಲುವಿನ ಬಗ್ಗೆ ತಾತ್ವಿಕವಾಗಿ ಚಿಂತಿಸುವುದು, ಚೆಲುವನ್ನು ಅರಿಯಲು ಅನುಭವಿಸಲು ಯತ್ನಿಸುವುದು ಇವೆಲ್ಲ ಮೂರ್ಖತನವೆಂಬಂತೆ ತೋರಿದರೆ ಆಶ್ಚರ್ಯವೇನು?

ಮನುಷ್ಯರ ಸಹಜ ಚೆಲುವಿನ, ನಿಸರ್ಗದ ಸಹಜ ಸೌಂದರ್ಯದ ಆಸ್ವಾದನೆ ಅಪಾಯಕಾರಿ, ತಿರಸ್ಕಾರ ಯೋಗ್ಯ ಎಂಬ ಧೋರಣೆಯನ್ನೂ ಅನೇಕ ಸ್ಥಾಪಿತ ಧರ್ಮಗಳು ಸಾರಿ ಸಾರಿ ಹೇಳುತ್ತವೆಯಲ್ಲವೇ? ದೇವ ದೇವಿಯರ ಸ್ತುತಿಯಲ್ಲಿ ಸೌಂದರ್ಯದ ಆರಾಧನೆ ಮತ್ತು ಬದುಕಿನಲ್ಲಿ ಸೌಂದರ್ಯದ ನಿರಾಕರಣೆ ಎಂಥ ವೈರುಧ್ಯ! ಧರ್ಮದ ಹೆಸರಿನಲ್ಲೂ ಹೆಣ್ಣು ಒತ್ತಡಕ್ಕೇ ಸಿಕ್ಕಿದವಳು. ವ್ಯಾಖ್ಯಾನದ ಮೂಲಕ, ಆಚರಣೆಗಳ ಮೂಲಕ, ನಂಬಿಕೆಗಳ ಮೂಲಕ ಸೌಂದರ್ಯ ವಿರೋಧದ ಮೂಲಕ ಹೆಣ್ಣನ್ನು ಮತ್ತೆ ಅಧೀನವಾಗಿಟ್ಟುಕೊಳ್ಳುವ ಗಂಡು ಅಸೆ!

ಸೌಂದರ್ಯ ಸ್ಪರ್‍ಧೆ ಎಂಬ ಮಾತೇ ಹಣ್ಣನ್ನು ಮನುಷ್ಯಳನ್ನಾಗಿ ನೋಡದ ಧೋರಣೆ, ಗಂಡು ಚಪಲ ಇತ್ಯಾದಿಯಾಗಿ ವಾದಮಾಡುವುದಿರಲಿ. ಇಂಥ ಸೌಂದರ್ಯ ಸ್ಪರ್ಧೆಗಳು ಆರ್ಥಿಕ ವಿಕಾಸಹೊಂದುತ್ತಿರುವ ದೇಶಗಳಲ್ಲಿ ತಮ್ಮ ಸೌಂದರ್ಯ ಸಾಧಕ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಿಕೊಳ್ಳುವ ವ್ಯಾಪಾರೀ ತಂತ್ರಗಳೆಂಬ ಮಾತೂ ಇರಲಿ. ಧರ್ಮದ ನಂಬಿಕಗಳು ಅಧಿಕಾರ ರಾಜಕಾರಣದ ಮೂಲಧಾತುವಾದಾಗ ಸೌಂದರ್ಯವೂ ಸೌಂದರ್ಯ ಸ್ಪರ್‍ದೆಯೂ ಹಿಂಸೆಯ ಉಪಕರಣವಾಗುವುದರ ಉದಾಹರಣೆಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿವೆ. ಇಂಥವೆಲ್ಲವುಗಳ ಆಳದಲ್ಲಿ ಹೆಣ್ಣನ್ನು ಅಧೀನವಾಗಿಟ್ಟುಕೊಳ್ಳುವ ಗಂಡು ಅಸೆಯೂ ಮುಖ್ಯವಾದ ಪ್ರಚೋದನೆಯಾಗಿರುವಂತೆ ತೋರುತ್ತದೆ. ಈ ಒಂದು ಅಚ್ಚರಿಯನ್ನು ನಾವು ಗಮನಿಸಿಯೇ ಇಲ್ಲ. ಇದು ಅಮೇರಿಕನ್ ಲೇಖಕಿಯೊಬ್ಬಳು ಎತ್ತಿರುವ ಪ್ರಶ್ನೆ. ಮಹಿಳೆಯರು ಬಳಸುವ ವಸ್ತುಗಳೂ ಸೇರಿದಂತೆ ಬಹುತೇಕ ಉತ್ಪನ್ನಗಳನ್ನು ಕುರಿತು ಟಿವಿಯಲ್ಲಿ ಬರುವ ಜಾಹಿರಾತುಗಳಲ್ಲಿ ನೂರಕ್ಕೆ ತೊಂಬತ್ತು ಪಾಲು ಅದೇಕೆ ಪುರುಷ ಧ್ವನಿಯೇ ಕೇಳಿಸುತ್ತದೆ? ಜಾಹಿರಾತು ಕೂಡ ಪುರುಷ ಮೌಲ್ಯಗಳ ಪ್ರತಿಷ್ಠಾಪನೆಯ ಒಂದು ಉಪಕರಣವಾಗಿದೆಯೇ? ಚೆಲುವೆಯೊಬ್ಬಳು ಗಂಡನ್ನು ಆಕರ್ಷಿಸುವಂತೆ ಬದುಕುವುದೇ ಪರಮ ಮೌಲ್ಯವೇ? ಹೆಣ್ಣು ಕೇವಲ ಬಣ್ಣ, ದೇಹ ಪ್ರಮಾಣ, ಚರ್ಮದ ಮೇಲೇಳುವ ಗುಳ್ಳೆ ಇವುಗಳ ಬಗೆಗೆ ಮಾತ್ರವೇ ಅತಂಕಗೊಳ್ಳುತ್ತ, ಗಂಡಿನ ಕಣ್ಣಿಗೆ ಚೆಲುವಾಗಿ ಕಾಣುವುದೇ ಸಾರ್ಥಕ ಬದುಕು ಎಂದುಕೊಳ್ಳುತ್ತ ಬದುಕಬೇಕೇ? ಇದಕ್ಕಿಂತ ಮಹತ್ವದ ಸಂಗತಿಗಳು ಬದುಕಿನಲ್ಲಿ ಏನೂ ಇಲ್ಲವೇ? ಚೆಲುವನ್ನು ಕುರಿತು ನಮ್ಮ ನಂಬಿಕೆಗಳನ್ನು, ಧೋರಣೆಗಳನ್ನು ಪರಿಶೀಲಿಸಿಕೊಳ್ಳುವುದು ಅಗತ್ಯವಲ್ಲವೇ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇವತ್ತು ರಾತ್ರಿ ಬರೆಯಬಹುದು ….
Next post ಮರೀನಾದಲ್ಲಿ ಕವಿ

ಸಣ್ಣ ಕತೆ

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

cheap jordans|wholesale air max|wholesale jordans|wholesale jewelry|wholesale jerseys