ಆರಂಕುಶಮಿಟ್ಟೊಡಂ

ನಾವು ಮಾಂಪಿಲಿಯೇಗೆ ತಲುಪುವಾಗ ಸಂಜೆ ಆರೂವರೆ ದಾಟಿತ್ತು. ಅಂದು ಎಪ್ರಿಲ್‌ ಹತ್ತೊಂಬತ್ತು, ಶನಿವಾರ. ವಾರಾಂತ್ಯದಲ್ಲಿ ಫ್ರೆಂಚರು ತಮ್ಮ ಮನೆಗಳಲ್ಲಿ ಅತಿಥಿಗಳನ್ನು ಇರಿಸಿಕೊಳ್ಳಬಯಸುವುದಿಲ್ಲ ಎನ್ನುವುದು ಈಗಾಗಲೇ ನಮಗೆ ಅನುಭವವೇದ್ಯವಾಗಿತ್ತು. ಕಾರ್ಯಕ್ರಮ ಪಟ್ಟಿಯ ಪ್ರಕಾರ ಹತ್ತೊಂಬತ್ತು ಮತ್ತು ಇಪ್ಪತ್ತರಂದು ನಾವು ಹೋಟೆಲ್‌ ಮರ್ಕ್ಯುರ್‌ನಲ್ಲಿ ಉಳಿದುಕೊಳ್ಳಬೇಕಿತ್ತು. ಆದರೆ ಅಂತಿಮಕ್ಷಣದಲ್ಲಿ ಹೋಟೆಲ್‌ ಬದಲಾವಣೆಯಾಗಿ ನಾವು ಪೆನೆಡ್ಯೂನಲ್ಲಿ ಉಳಕೊಂಡೆವು. ನಮ್ಮನ್ನಲ್ಲಿ ಸ್ವಾಗತಿಸಿದವರಲ್ಲಿ ಜುವಾನ್‌ ಬುಯೋನ ತಂಡದ ಕ್ರಿಸ್ತೋಫರ್‌ ಕೂಡಾ ಒಬ್ಬ. ಒಂದು ಪರಿಚಿತ ಮುಖವನ್ನು ಕಂಡ ಮೇಲೆ ಇಡೀ ಮಾಂಪಿಲಿಯೇ ನಮಗೆ ಆಪ್ತವಾಗಿಬಿಟ್ಟಿತು.

ಅಂದು ರಾತ್ರೆ ಮಾಂಪಿಲಿಯೇ ನಗರದಲ್ಲಿ ಭಾರತೀಯ ಹೋಟೆಲೊಂದರಲ್ಲಿ ನಮಗೆ ಊಟದ ವ್ಯವಸ್ಥೆ. ಅದರ ಯಜಮಾನ ಆಲೀ ರಾಜಸ್ಥಾನದ ಅಜ್‌ಮೀರಿನವ. ಹೋಟೆಲ್‌ ಹೊಕ್ಕಾಗಿ ರಾಜಸ್ಥಾನದಲ್ಲಿ ನಾವಿದ್ದೇವೇನೋ ಎಂಬ ಭಾವನೆ ಬರಬೇಕು. ಕಿಟಕಿ, ಬಾಗಿಲು, ಗೋಡೆ, ಛಾವಣಿ ಎಲ್ಲವೂ ರಾಜಸ್ಥಾನಮಯ. ಗಲ್ಲಾದ ಹಿಂದೆ ಗೋಡೆಯಲ್ಲಿ ರಜಪೂತರ ಕತ್ತಿ ಮತ್ತು ಡಾಲು ತೂಗುತಿದ್ದವು. ಅದರ ಎದುರುಗಡೆ ಗೋಡೆಯ ಮೇಲೆ ಎರಡು ರಾಜಸ್ಥಾನೀ ಡೋಲಕಗಳು. ಸರ್ವ್ ಮಾಡುತ್ತಿದ್ದವರು ಪೈಜಾಮ ಮತ್ತು ಕುರ್ತಾ ತೊಟ್ಟು ಸಂಭ್ರಮದಿಂದ ಓಡಾಡುತ್ತಿದ್ದರು. ಅಲ್ಲಿ ನಮಗೆ ಸಿಕ್ಕಿದ್ದು ಪರೋಟ, ಬಟಾಟೆ ಕುರ್ಮಾ, ಅನ್ನ, ಟೊಮೆಟೋ ಸಾರು, ಕೊನೆಯಲ್ಲಿ ಖೀರು. ನಮ್ಮ ಮಹಿಳಾಮಣಿಯರಿಗೆ ಮತ್ತು ಗುರುವಿಗೆ ಕೋಳಿ ಸಾರು. ಇಷ್ಟು ದಿನ ಸಪ್ಪೆ ಮಾಂಸ ತಿಂದು ನಾಲಗೆ ಜಡ್ಡುಗಟ್ಟಿಸಿಕೊಂಡಿದ್ದ ಅವರು ಪಟ್ಟಾಗಿ ಕೋಳಿ ತಿಂದು ತೇಗಿದರು. ಊಟ ಮುಗಿಸಿ ನಾವು ಉಳಿದುಕೊಂಡಿದ್ದ ಹೋಟೆಲಿನತ್ತ ಬರುವಾಗ ತಿರುವಿನಲ್ಲೊಂದು ಕಾಶ್ಮೀರಿ ಕೆಫೆ ಸಿಗಬೇಕೆ? ಗುರುವನ್ನು ಹಿಂದಿಟ್ಟುಕೊಂಡು ಮಹಿಳಾಮಣಿಯರು ಕೆಫೆಯ ಒಳಹೊಕ್ಕು ಮಾಲಿಕನಲ್ಲಿ ಹಿಂದಿಯಲ್ಲಿ ಅರ್ಧಗಂಟೆ ಪಟ್ಟಾಂಗ ಹೊಡೆದರು. ಮತ್ತೆ ನನ್ನ ಬಳಿಗೆ ಬಂದು ‘ಎಂತಹ ಕಾಫಿ ಕೊಟ್ಟ ಗೊತ್ತಾ? ನಿನಗೆ ಅದೃಷ್ಟವಿರಲಿಲ್ಲ’ ಎಂದರು.

ಮಾಂಪಿಲಿಯೇ ಎಂಬ ವಿದ್ಯಾನಗರಿ

ತುಲೋಸ್‌ನ ಬಳಿಕ ದಕ್ಷಿಣ ಫ್ರಾನ್ಸಿನ ಅತಿದೊಡ್ಡ ವಾಣಿಜ್ಯನಗರಿ ಎಂಬ ಖ್ಯಾತಿಗೆ ಮಾಂಪಿಲಿಯೇ ಪಾತ್ರವಾಗಿದೆ. ಮೆಡಿಟರೇನಿಯನ್ನಿಗೆ ತೀರಾ ಸಮೀಪದಲ್ಲಿರುವುದರಿಂದ ಈ ನಗರ ಏಶಿಯಾ ಮತ್ತು ಆಫ್ರಿಕಾದ ರಾಷ್ಟ್ರಗಳೊಡನೆ ವಿದೇಶೀ ವ್ಯಾರ್ಪಾರಕ್ಕೆ ಅನುವು ಮಾಡಿಕೊಟ್ಟಿದೆ. ಅರಬರು, ತುರ್ಕರು, ಯೆಹೂದ್ಯರು ಮತ್ತು ಆಫ್ರಿಕನ್ನರು, ಮಾಂಪಿಲಿಯೇ ಮೂಲಕ ಫ್ರಾನ್ಸನ್ನು ಪ್ರವೇಶಿಸಿ ಹೊಸ ಇತಿಹಾಸಕ್ಕೆ ಕಾರಣರಾದರು. ಹಾಗೆ ಬಂದವರಲ್ಲಿ ಬಹುತೇಕರು ಇದೇ ಪಟ್ಟಣದಲ್ಲಿ ನೆಲೆನಿಂತು, ಇದನ್ನೊಂದು ವಾಣಿಜ್ಯನಗರಿಯನ್ನಾಗಿ ಪರಿವರ್ತಿಸಿದರು. ಯುರೋಪಿನ ಅತಿ ಪುರಾತನ ವಿಶ್ವವಿದ್ಯಾಲಯ ಇಲ್ಲಿರುವುದರಿಂದ, ಮಾಂಪಿಲಿಯೇ ಒಂದು ವಿದ್ಯಾನಗರಿಯಾಗಿ ಬುದ್ಧಿಜೀವಿಗಳನ್ನು ಆಕರ್ಷಿಸತೊಡಗಿತು. ವಾಣಿಜ್ಯವು ಭೌತಿಕ ಮತ್ತು ವಿಶ್ವವಿದ್ಯಾಲಯವು ಬೌದ್ಧಿಕ ಬೆಳವಣಿಗೆಗೆ ಕಾರಣವಾಗಿ, ಮಾಂಪಿಲಿಯೇ ಪ್ರಸಿದ್ಧಿ ಪಡೆಯಿತು.

ಲ್ಯಾಂಗ್‌ಡಕ್‌  ರೌಸಿಲನ್‌ ಪ್ರಾಂತ್ಯದ ರಾಜಧಾನಿಯಾದ ಮಾಂಪಿಲಿಯೇದ ಜನಸಂಖ್ಯೆ ಸುಮಾರು ಎರಡೂವರೆ ಲಕ್ಷ. ಇದರಲ್ಲಿ ಹೊರಗಿನಿಂದ ಬಂದು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳೂ ಸೇರಿದ್ದಾರೆ. ಎರಡೂವರೆ ಲಕ್ಷ ಫ್ರಾನ್ಸಿನ ಮಟ್ಟಿಗೆ ಬಹುದೊಡ್ಡ ಸಂಖ್ಯೆಯೇ. ಇಪ್ಪತ್ತು ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಪ್ರದೇಶ, ಫ್ರೆಂಚರ ಪಾಲಿಗೆ ಮಹಾನಗರ.  ನನ್ನ ಊರಾದ ಸುಳ್ಯದ ಬಗ್ಗೆ ಹೇಳುವಾಗ ಅದೊಂದು ಪೆತಿತ್‌ವಿಲ್ಲೇ (ಪುಟಾಣಿ ಪಟ್ಟಣ) ಎಂದು ನಾನು ಹೇಳಬೇಕಾಗುತ್ತಿತ್ತು. ಏಕೆಂದರೆ ಫ್ರೆಂಚರು ಭಾರತದ ಭೂಪಟವನ್ನು ನನ್ನ ಮುಖಕ್ಕೊಡ್ಡಿ ‘ಇದರಲ್ಲಿ ನಿನ್ನ ಸುಳ್ಯ ಎಲ್ಲಿದೆ ತೋರಿಸು’ ಎನ್ನುತ್ತಿದ್ದರು. ‘ಮಂಗಳೂರು, ಮೈಸೂರುಗಳ ನಡುವೆ ನನ್ನೂರು. ಅದೊಂದು ಪುಟ್ಟ ಪಟ್ಟಣವಾದುದರಿಂದ ಅದರ ಹೆಸರು ಭೂಪಟದಲ್ಲಿ ಇಲ್ಲ’ ಎನ್ನುತ್ತಿದ್ದೆ. ಆಗ ‘ನಿನ್ನೂರಿನ ಜನಸಂಖ್ಯೆ ಎಷ್ಟು? ‘ಎಂಬ ಪ್ರಶ್ನೆ ನನಗೆದುರಾಗುತ್ತಿತ್ತು. ‘ಇಪ್ಪತ್ತು ಸಾವಿರ ದಾಟಿದೆ’ ಎಂದರೆ ‘ಹಾಗಾದರೆ ಪುಟ್ಟ ಪಟ್ಟಣವೇನು? ಅದೊಂದು ದೊಡ್ಡ ನಗರು ಎಂದು ತೀರ್ಪು ಕೊಟ್ಟುಬಿಡುತ್ತಿದ್ದರು. ಹೆಚ್ಚಾಗಿ ಈ ಬಗ್ಗೆ ನಾನು ಚರ್ಚೆಯನ್ನು ಬೆಳೆಯಗೊಡುತ್ತಿರಲಿಲ್ಲ. ತೀರಾ ಅನಿವಾರ್ಯವಾದಾಗ ಮಂಗಳೂರು, ಬೆಂಗಳೂರುಗಳ ಜನಸಂಖ್ಯೆ ಎಷ್ಟೆಂದು ಹೇಳಿ ನಮ್ಮ ಮಹಾನಗರಗಳ ಕಲ್ಪನೆಯನ್ನು ಅವರಿಗೆ ವಿವರಿಸುತ್ತಿದ್ದೆ. ಆಗೆಲ್ಲಾ ಅವರು ಭಾರತದಲ್ಲಿ ‘ಉತ್ಪಾದನೆ’ಯೆಂದರೆ ಜನಸಂಖ್ಯೆ ಮಾತ್ರವೇ ಇರಬೇಕು ಎಂಬಂತೆ ನನ್ನನ್ನು ವಿಚಿತ್ರವಾಗಿ ನೋಡುತ್ತಿದ್ದರು!

ಮಾಂಪಿಲಿಯೇದ ಪ್ರಧಾನ ಆಕರ್ಷಣೆಯೆಂದರೆ ಅಲ್ಲಿನ ವಿಶ್ವವಿದ್ಯಾಲಯ. ಇದು ಕಾನೂನು, ಅರ್ಥಶಾಸ್ತ್ರ, ವೈದ್ಯಕ್ಷೀಯ, ಔಷಧ ವಿಜ್ಞಾನ, ಪ್ರೊಟಸ್ಟಂಟ್‌ ವೇದಾಂತ, ತಾಂತ್ರಿಕ ಶಿಕ್ಷಣ ಮತ್ತು ಕಲಾವಿಭಾಗಗಳನ್ನು ಹೊಂದಿದ್ದು, ಯುರೋಪಿನಿಂದ ಮಾತ್ರವಲ್ಲದೆ ಆಫ್ರಿಕನ್‌ ರಾಷ್ಟ್ರಗಳಿಂದಲೂ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತದೆ. ಮಾಂಪಿಲಿಯೇದಲ್ಲಿ ಕೆಲವು ವಿಶಿಷ್ಟ ಶೈಕ್ಷಣಿಕ ಸಂಸ್ಥೆಗಳಿವೆ. ಅವುಗಳಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಶಾಲೆ, ಸಾಮಾಜಿಕ ಮತ್ತು ಕೌಟುಂಬಿಕ ಶಾಲೆ, ರಾಷ್ಟ್ರೀಯ ಕೃಷಿ ವಿಜ್ಞಾನ ಶಾಲೆ, ರಾಷ್ಟ್ರೀಯ ರಸಾಯನ ಶಾಲೆ, ರಾಷ್ಟ್ರೀಯ ದಂತ ಶಾಲೆ, ನರ್ಸಿಂಗ್‌ ಶಾಲೆ, ನೋಟರಿ ಪಬ್ಲಿಕ್‌ ಶಾಲೆ, ಪಶು ಆರೈಕೆ ಶಿಕ್ಷಣ ಶಾಲೆ, ವಾಯುದಳ ಶಾಲೆ ಮತ್ತು ರಂಗಕಲೆಗಳನ್ನು ಕಲಿಸುವ ಮ್ಯೂಸಿಕಲ್‌ ಕನ್ಸರ್ವೇಟರಿ ಸ್ಕೂಲ್‌  ಮುಖ್ಯವಾದವುಗಳು. ರಂಗಕಲಾ ಶಾಲೆಯಲ್ಲಿ ಶಿಕ್ಷಣ ಪಡೆಯಲು ವಿಶ್ವದ ಅನೇಕ  ರಾಷ್ಟ್ರಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಮಾಂಪಿಲಿಯೇ ನಗರವನ್ನು ಒಂದು ಪುಟಾಣಿ ವಿಶ್ವವಾಗಿ ಮಾರ್ಪಡಿಸುತ್ತಾರೆ.

ಮಾಂಪಿಲಿಯೇದಲ್ಲಿ ಅನೇಕ ಸಂಶೋಧನಾ ಕೇಂದ್ರಗಳೂ ಇವೆ. ಅವುಗಳ ಪೈಕಿ ನ್ಯಾಶನಲ್‌ ಸೆಂಟರ್‌ ಓಫ್‌ ಸೈಂಟಿಫಿಕ್‌ ರಿಸರ್ಚ್, ನ್ಯಾಶನಲ್‌ ಸೆಂಟರ್‌ ಓಫ್‌ ಮೆಡಿಕಲ್‌ ರಿಸರ್ಚ್‌ ಮತ್ತು ನ್ಯಾಶನಲ್‌ ಸೆಂಟರ್‌ ಓಫ್‌ ಆಗ್ರೋನಾಮಿಕಲ್‌ ರಿಸರ್ಚ್‌ ಅತ್ಯಂತ ಪ್ರಖ್ಯಾತಿ ಗಳಿಸಿವೆ. ಸಮಸ್ತ ಯುರೋಪಿನ ಏಕೈಕ ಸಂಶೋಧನಾ ಕೇಂದ್ರ, ಸೆಂಟರ್‌ ಓಫ್‌ ಸ್ಟಡಿ ಓಫ್‌ ಟ್ರೋಫಿಕಲ್‌ ಪ್ಲಾಂಟ್ಸ್‌ ಅನ್ನು (ಸಮಶೀತೋಷ್ಣ ಗಿಡಗಳ ಅಧ್ಯಯನ ಕೇಂದ್ರ) ಹೊಂದಿರುವ ಹೆಗ್ಗಳಿಕೆ ಕೂಡಾ ಮಾಂಪಿಲಿಯೇಗಿದೆ. ಅಲ್ಲದೆ ಇಲ್ಲಿರುವ ಮಿಲಿಟರಿ ಸ್ಕೂಲ್‌ ಓಫ್‌ ಇನ್‌ಫ್ಯಾಂಟ್ರಿ ಮತ್ತು ಮಿಲಿಟರಿ ಸ್ಕೂಲ್‌ ಓಫ್‌ ಅಡ್ಮಿನಿಸ್ಟ್ಟ್ರೇಶನ್‌ಗಳಿಂದಾಗಿ ಇದೊಂದು ಸೈನಿಕ ಕೇಂದ್ರವೂ ಆಗಿದೆ.
ಮಾಂಪಿಲಿಯೇದ ‘ಲಾ ಕೋರ್ಟು’ ನಗರದ ಸೌಂದರ್ಯಕ್ಷ್ಕೊಂದು ವಿಶಿಷ್ಟ ಶೋಭೆ  ತಂದುಕೊಟ್ಟಿರುವ ಕಟ್ಟಡ. ಹಿಂದೆ ಇದೊಂದು ಅರಮನೆಯಾಗಿತ್ತು. ಅದರ ಮುಖ ಮಂಟಪ ಮತ್ತು ಬೃಹತ್‌ಸ್ತಂಭಗಳು ಅದಕ್ಕೊಂದು ಭೂಮಗಂಭೀರತೆಯನ್ನು ನೀಡಿವೆ. ಫ್ರೆಂಚ್‌ ಕ್ರಾಂತಿಯವರೆಗೆ ಅದರಲ್ಲಿ ಚಕ್ರಾಧಿಪತ್ಯದ ಕೋರ್ಟುಗಳಿದ್ದವು. ಕ್ರಾಂತಿಯ ಸಂದರ್ಭದಲ್ಲಿ ಚಕ್ರಾಧಿಪತ್ಯದ ಕೋರ್ಟುಗಳಿಗೆ ನಿಷೇಧ ಹೇರಲಾಯಿತು. ಆ ಬಳಿಕ ಅದರಲ್ಲಿ ಕ್ರಿಮಿನಲ್‌ ಕೋರ್ಟು, ಇಂಪೀರಿಯಲ್‌ ಕೋರ್ಟು ಮತ್ತು ರಾಯಲ್‌ ಕೋರ್ಟುಗಳು ತಲೆಎತ್ತಿದವು. ಈಗ ಅದರಲ್ಲಿ ಸಿವಿಲ್‌ ಮತ್ತು ಕ್ರಿಮಿನಲ್‌ ಕೋರ್ಟುಗಳಿವೆ. ಕೋರ್ಟಿನ ಒಳಗಡೆ ಮಾಂಪಿಲಿಯೇದ ಮ್ಯಾಜಿಸ್ಟ್ಟ್ರೇಟಾಗಿ ಅರ್ಪಾರ ಕೀರ್ತಿ ಭಾಜನನಾದ ಕಾಂಬಾಸೆರೆಸ್‌ ಮತ್ತು ಹದಿನೈದನೇ ಲೂಯಿಯ ಮಂತ್ರಿಯಾಗಿದ್ದ ಕಾರ್ಡಿನಲ್‌ ಓಫ್‌ಫೂಲರಿಯ ಭವ್ಯ ವಿಗ್ರಹಗಳಿವೆ.

ಲಾ ಕೋರ್ಟಿನಷ್ಟೇ ಪ್ರಮುಖವಾದ ಸ್ಮಾರಕಗಳು ಈ ಮಹಾನಗರದಲ್ಲಿ ಅನೇಕ ಇವೆ. ಪೈನ್ಸ್‌ ಗೋಪುರ, ಬಬೋತ್‌ ಗೋಪುರ, ಸೈಂಟ್‌ ಪಿಯರೆ ಕ್ಯಾಥಡ್ರಲ್‌, ವಿಜಯದ ಕಮಾನು, ಜೆಸ್ಸೂಯಿಟ್ಸ್‌ರ ಪುರಾತನ ಕಾಲೇಜು, ಪುರಾತನ ವೈದ್ಯಕ್ಷೀಯ ಶಿಕ್ಷಣ ಸಂಸ್ಥೆ, ಚೇಂಬರ್‌ ಓಫ್‌ ಕಾರ್ಮಸ್‌, ಕ್ಯನರಾಗ್‌, ಕಾಮೆಡಿ, ಅರ್ಸೆಕ್ಸ್‌, ಗೇಂಜಸ್‌ ಹೋಟೆಲಿನ ಗಾನಮೇಳಸ್ಥಳ ಅವುಗಳಲ್ಲಿ ಪ್ರಮುಖವಾದವುಗಳು. ಸೌಂದರ್ಯ ಪ್ರಿಯರಿಗಾಗಿ ಇಲ್ಲಿ ಹಾರ್ಟಿಕಲ್ಚರ್‌ ಗಾರ್ಡನ್‌, ಪೆರೋ ಗಾರ್ಡನ್‌, ಎಸ್‌ಪ್ಲನೇಡ್‌ ಗಾರ್ಡನ್‌ ಮುಂತಾದ ಉದ್ಯಾನಗಳ ಸಾಲುಸಾಲೇ ಇವೆ. ಹಾಗೆ ನೋಡಿದರೆ ಮಾಂಪಿಲಿಯೇ ಒಂದು ಮ್ಯೂಸಿಯಮ್ಮುಗಳ ನಗರವೂ ಹೌದು. ಫೇಬರ್‌, ಲ್ಯಾಂಗ್‌ಡೆಸ್ಸಿಯನ್‌, ಅತ್‌ಗೆರ್‌, ಆಗ್ರೋಪೋಲೀಸ್‌, ಪ್ಲಾಸ್ಟರ್‌ ಕ್ಯಾಸ್ಟಾ, ಸಬಾಟಿಯರ್‌, ಅನಾಟಮಿ, ಆರ್ಕಿಯೋಲಜಿ, ಫೋಗಾ, ಬಬೋತ್‌, ಮೌಲ್ಡ್‌, ಪುರಾತನ ಮಾಂಪಿಲಿಯೇ, ಫಾರ್ಮಾಸ್ಯೂಟಿಕಲ್ಸ್‌, ಇನ್‌ಫ್ಯಾಂಟರಿ  ಇವೆಲ್ಲಾ ಮ್ಯೂಸಿಯಮ್ಮುಗಳೇ! ಇವುಗಳಲ್ಲಿ ಅಗ್ರೋ ಪೋಲಿಸ್‌ ಮ್ಯೂಸಿಯಮ್ಮು ಬಹಳ ವಿಶಿಷ್ಟವಾದುದು. ಅದು ಜಗತ್ತಿನಾದ್ಯಂತ ಕೃಷಿ ಬೆಳೆದು ಬಂದ ವಿಧಾನವನ್ನು ಮತ್ತು ಕೃಷಿಯೊಡನೆ ಬೆಳೆದ ಸಂಸ್ಕೃತಿಯನ್ನು ತೋರಿಸುತ್ತದೆ. ಇತರ ದೇಶಗಳೊಡನೆ ಭಾರತದ ಬುಡಕಟ್ಟು ಜನಾಂಗಗಳ ಕೃಷಿ ಮತ್ತು ಜೀವನ ವಿಧಾನವನ್ನು ಕೂಡಾ ಬೃಹತ್‌ ವೀಡಿಯೋ ಮೂಲಕ ತೋರಿಸುವ ವ್ಯವಸ್ಥೆ ಇಲ್ಲಿದೆ.

ಮಾಂಪಿಲಿಯೇದ ಕಟ್ಟಡಗಳ ವಾಸ್ತು ಪ್ಯಾರಿಸ್ಸಿನದ್ದೇ. ಎಗ್ಗ್‌ ಬಿಲ್ಡಿಂಗ್‌ ಎಂದು ಕರೆಯಲ್ಪಡುವ, ಭಾಗಶಃ ಮೊಟ್ಟೆಯಾಕಾರದ ಇಲ್ಲಿನ ಒಪೇರಾದಲ್ಲಿ 2000 ಜನರಿಗೆ ಆಸನ ವ್ಯವಸ್ಥೆಯಿದೆ. ವಾಸ್ತುವಿನ ದೃಷ್ಟಿಯಿಂದ ಅಧ್ಯಯನ ಯೋಗ್ಯವಾದ ಅನೇಕ ಕಟ್ಟಡಗಳು ಹಳೇ ಮಾಂಪಿಲಿಯೇದಲ್ಲಿ ಕಾಣಸಿಗುತ್ತವೆ. ಕಟ್ಟಡದಲ್ಲಿ ಅಂತಸ್ತುಗಳು ಎಷ್ಟಿದ್ದರೂ ಮೇಲ್ಢಾವಣಿಯಿಂದ ತಳದವರೆಗೆ ಬೆಳಕು ಬೀಳುವಂತಹ ವ್ಯವಸ್ಥೆ. ಅದಕ್ಕೆ ಪೂರಕವಾದ ಪಾವಟಿಗೆಗಳು. ಎಲ್ಲವೂ ಅಚ್ಚುಕಟ್ಟು. ಹಳೇ ಮಾಂಪಿಲಿಯೇದಲ್ಲಿ ಹನ್ನೊಂದನೇ ಶತಮಾನದ ಯೆಹೂದ್ಯರ ದೇವಾಲಯವೊಂದನ್ನು (ಸೆನಗಾಗ್‌) ಮೂಲ ರೂಪದಲ್ಲಿ ಉಳಿಸಿಕೊಂಡು ಬರಲಾಗಿದೆ. ಅದರೊಳಗೆ ಒಂದೆಡೆ ಸಣ್ಣದಾದ ಪವಿತ್ರಕೊಳವೊಂದಿದೆ. ಹೆಣ್ಣೊಬ್ಬಳ ಶೀಲದ ಬಗ್ಗೆ ಸಂದೇಹ ಉದ್ಭವವಾಗಿ, ದೂರು ದಾಖಲಾದರೆ ಆಕೆಯನ್ನು ಮಹಿಳೆಯರು ಈ ಕೊಳದ ಬಳಿಗೆ ಕರೆ ತರುತ್ತಾರೆ. ಕೊಳದ ಮುಂದುಗಡೆ ಮಹಿಳಾ ನ್ಯಾಯಾದಿಕಾರಿಣಿ ಕೂರುವ ಕೋಣೆಯೊಂದಿದೆ. ಅವಳೆದುರು ಶೀಲಸಂದೇಹಕ್ಕೆ ಒಳಗಾದ ಹೆಣ್ಣು, ನಗ್ನಳಾಗಿ ಮೂರು ಬಾರಿ ಕೊರೆಯುವ ತಣ್ಣನೆಯ ನೀರಲ್ಲಿ ಮುಳುಗಿ ತನ್ನ ಪಾತಿವ್ರತ್ಯವನ್ನು ಸಾಬೀತು ಮಾಡಬೇಕಾಗಿತ್ತು. ಹೆಣ್ಣಿನ ಮುಖಭಾವದಿಂದಲೇ ಆಕೆ ತಪ್ಪಿತಸ್ಥಳೋ, ನಿರ್ದೋಷಳೋ ಎನ್ನುವುದನ್ನು ಕಂಡುಹಿಡಿಯಲಾಗುತ್ತಿತ್ತಂತೆ! ರ್ಪಾತಿವ್ರತ್ಯದ ಪರೀಕ್ಷೆಗೆ ಸೀತೆಯೊಬ್ಬಳು ಮಾತ್ರವೇ ಒಳಪಟ್ಟದ್ದು ಎಂಬ ನನ್ನ ನಂಬಿಕೆ, ಫ್ರಾನ್ಸಿನಲ್ಲಿ ಆ ಕೊಳವನ್ನು ನೋಡಿದ ಬಳಿಕ ಮಾಯವಾಯಿತು. ಸೀತೆಗೆ ಅಗ್ನಿ ಪರೀಕ್ಷೆಯಾದರೆ, ಯೆಹೂದಿ ಹೆಣ್ಣುಗಳಿಗೆ ಜಲಪರೀಕ್ಷ. ‘ಪರೀಕ್ಷೆ’ ಮಾತ್ರ ಎಲ್ಲೆಡೆಯಲ್ಲೂ ಹೆಣ್ಣುಗಳಿಗೆ ಮಾತ್ರ!

ಮಾಂಪಿಲಿಯೇ ನಗರದ ಆರಂಭಿಕ ಬೆಳವಣಿಗೆಗೆ, ಹನ್ನೊಂದನೇ ಶತಮಾನದ ಗುಯ್ಲಯೆಂ  ಕುಟುಂಬ ಕಾರಣವಾಯಿತೆಂದು ಇತಿಹಾಸ ಹೇಳುತ್ತದೆ. ಅವರಲ್ಲಿ ಸಪ್ತಮ ಗುಯ್ಲಯೆಂ, ಬೋರ್ಗೋನೆಯ ಡ್ಯೂಕನ ಮಗಳನ್ನು ಮದುವೆಯಾಗಿ ಮಾಂಪಿಲಿಯೆಗೆ ರಾಜಸಂಬಂಧವನ್ನು ಒದಗಿಸಿದರೆ, ಅಷ್ಟಮ ಗುಯ್ಲಯೆಂ ಕಾನ್‌ಸ್ಟೆಂಟಿನೋಪಲ್‌ನ ಚಕ್ರವರ್ತಿಯ ಮಗಳನ್ನು ಮದುವೆಯಾಗಿ ಮಾಂಪಿಲಿಯೇದ ಪ್ರತಿಷ್ಠೆಯನ್ನು ಹೆಚ್ಚಿಸಿದ. ಈತನ ಮಗಳು ಮುಂದೆ ಮಾಂಪಿಲಿಯೇದ ಮೇರಿ ಎಂದು ಪ್ರಖ್ಯಾತಳಾದಳು. ಕಲೆ ಮತ್ತು ಸಾಹಿತ್ಯಪ್ರೇಮಿಗಳಾದ ಗುಯ್ಲಯೆಂ ಕುಟುಂಬ ಮಾಂಪಿಲಿಯೇದ ಸಾಂಸ್ಕೃತಿಕ ಸಮೃದ್ಧಿಗೆ ಕಾರಣವಾಯಿತು. ಆರಂಭದಿಂದಲೂ ಪೋಪನಿಗೆ ನಿಷ್ಠವಾಗಿದ್ದ ಈ ನಗರ ಕಥಾರರ ವಿರುದ್ಧದ ಕಾರ್ಯಾಚರಣೆಯಲ್ಲಿ ಹಾನಿಗೊಳಗಾಗಲಿಲ್ಲ. ರಿನೈಸೆನ್ಸ್‌ (ಪುನರುಜ್ಜೀವನ) ಕಾಲದಲ್ಲಿ ಮಾಂಪಿಲಿಯೇ ಸುಂದರವಾಗಿ ಅರಳಿತು. ರಬೂಲೆಯಂತಹ ಬರಹಗಾರರು, ನಾಸ್ಟ್ರಡಾಮಸ್‌ನಂತಹ ಜ್ಞಾನಿಗಳು ಇಲ್ಲಿ ಶಿಕ್ಷಣಪಡೆದರು. ಚಿತ್ರಕಾರ ಫ್ರಾಂಸ್ವಾ ಕ್ಸೇವಿಯರ್‌ ಫೇಬರ್‌ (1766 – 1832) ಈ ನಗರದವ. ಫ್ರೆಂಚ್‌ ಕ್ರಾಂತಿಯ ಬಳಿಕಿನ ಬೆಳವಣಿಗೆಗಳು ಇಷ್ಟವಾಗದೆ ಆತ ಇಟೆಲಿಗೆ ಪಲಾಯನ ಮಾಡಿ ಅಲ್ಲಿ 37 ವರ್ಷ ಕಲಾ ತಪಸ್ಸು ಮಾಡಿದ. 1825ರಲ್ಲಿ ತನ್ನೂರ ಮಣ್ಣಿನ ಮೋಹ ಅವನನ್ನು ಮಾಂಪಿಲಿಯೇಗೆ ವಾರ್ಪಾಸಾಗುವಂತೆ ಮಾಡಿತು. 1832ರಲ್ಲಿ ಆತ ನಿಧನನಾದ. ಈಗ ಆತನ ಚಿತ್ರಗಳ ಪ್ರದರ್ಶನಕ್ಕಾಗಿಯೇ ಮಾಂಪಿಲಿಯೇದಲ್ಲಿ ಫೇಬರ್‌ ಮ್ಯೂಸಿಯಮ್ಮನ್ನು ರೂಪಿಸಲಾಗಿದೆ.
ಕಥಾರ್‌ರ ವಿರುದ್ಧದ ಕಾರ್ಯಾಚರಣೆಯಲ್ಲಿ ಬಚಾವಾದರೂ, ನೂರು ವರ್ಷಗಳ ಧಾರ್ಮಿಕ ಯುದ್ಧದ ಅನಾಹುತಗಳಿಂದ ಮಾಂಪಿಲಿಯೇಗೆ ತನ್ನನ್ನು ರಕ್ಷಿಸಿಕೊಳ್ಳು ಸಾಧ್ಯವಾಗಲಿಲ್ಲ. ಆಗ ಮಾಂಪಿಲಿಯೇದ ಅನೇಕ ಮಧ್ಯಕಾಲೀನ ಚರ್ಚುಗಳು ನಾಶಗೊಂಡವು. ಆದರೆ ಕ್ರಿ.ಶ.1364ರಲ್ಲಿ ಪಂಚಮ ಪೋಪ್‌ ಅರ್ಬೈನ್‌ನಿಂದ ನಿರ್ಮಿತವಾದ, ಸೇಂಟ್‌ ಪಿಯರೆ ಕ್ಯಾಥೆಡ್ರಲ್‌ ಮಾತ್ರ ಹಾನಿಗೆ ಒಳಗಾಗಲಿಲ್ಲ. ಕ್ರಿ.ಶ. 1622ರಲ್ಲಿ 13ನೆಯ ಲೂಯಿ, ಪ್ರಾಟೆಸ್ಟೆಂಟ್‌ ಕೋಟೆಯನ್ನು ನಾಶಗೊಳಿಸಿದ. ಹದಿನೇಳನೆಯ ಶತಮಾನದಲ್ಲಿ ಮಾಂಪಿಲಿಯೇವನ್ನು  ಪುನರ್ನಿರ್ಮಿಸಲಾಯಿತು. 14ನೆಯ ಲೂಯಿಯ ಕಾಲದಲ್ಲಿ ಈ ನಗರವು ಲ್ಯಾಂಗ್‌ಡಕ್ಕ್‌ನ ಆಡಳಿತ ರಾಜಧಾನಿಯಾಯಿತು. ಆ ಬಳಿಕ ಮಾಂಪಿಲಿಯೇ ಸುಂದರ ನಗರವಾಗಿ ಅಭಿವೃದ್ಧಿ ಹೊಂದಿತು. ಪುಣ್ಯವಶಾತ್‌ ಫ್ರೆಂಚ್ ಕ್ರಾಂತಿಯ ಸಂದರ್ಭದಲ್ಲಿ, ಮಾಂಪಿಲಿಯೇ ಯಾವುದೇ ಹಾನಿಗೆ ಒಳಗಾಗಲಿಲ್ಲ. ಕ್ರಿ.ಶ. 1790ರಲ್ಲಿ ಲ್ಯಾಂಗ್‌ಡಕ್‌ ಪ್ರಾಂತ್ಯ ವಿಭಜನೆ ಹೊಂದಿದಾಗ ಮಾಂಪಿಲಿಯೇ ಪ್ರಾಂತೀಯ ರಾಜಧಾನಿಯ ಗೌರವವನ್ನು ಕಳೆದುಕೊಂಡು, ವಿಭಾಗವೊಂದರ ಪ್ರಧಾನ ನಗರವಾಯಿತು. ಆದರೆ ಇದರಿಂದ ನಗರದ ಬೆಳವಣಿಗೆಗೆ ತೊಂದರೆ ಏನಾಗಲಿಲ್ಲ. ಮೆಡಿಟರೇನಿಯನ್‌ ಲ್ಯಾಂಗ್‌ಡಕ್ಕಿನ ರಾಜಧಾನಿಯಾಗಿ, ವಾಣಿಜ್ಯ ಕೇಂದ್ರವಾಗಿ, ವಿದ್ಯಾನಗರಿಯಾಗಿ ಅದು ತನ್ನ ಆಕರ್ಷಣೆಯನ್ನು ಹೆಚ್ಚಿಸುತ್ತಲೇ ಹೋಯಿತು. ಇಟೆಲಿಯಿಂದ ಸ್ಪೈನಿಗೆ ಹೋಗುವ ಮಧ್ಯದಾರಿಯಲ್ಲಿ ಸಿಗುವ ಮಾಂಪಿಲಿಯೇ, ಅಂತಾರಾಷ್ಟ್ರೀಯವಾಗಿ ಕೂಡಾ ಮಹತ್ವ ಪಡೆದಿದೆ. ಒಂದೆಡೆ ಮೆಡಿಟರೇನಿಯನ್‌ ಸಮುದ್ರ, ಇನ್ನೊಂದೆಡೆ ರೋನ್‌ ನದಿ ಮತ್ತು ಮತ್ತೊಂದೆಡೆ ಪಿರನಿ ಪರ್ವತಶ್ರೇಣಿ ಮಾಂಪಿಲಿಯೇವನ್ನು ಭೌಗೋಳಿಕವಾಗಿ ಬಹಳ ಆಯಕಟ್ಟಿನ ಸ್ಥಳವಾಗಿ ರೂಪಿಸಿದೆ.

ಮಾಂಪಿಲಿಯೇದ ಮಾತೆ : ಮಾಂಪಿಲಿಯೇ ರೋಟರಿ ಅಧ್ಯಕ್ಷ್ಷ್ಷ ಜುವಾನ್‌ ವಿಲ್ಲೋಟ್‌ನಿಗೆ ಕಡಿಮೆಯೆಂದರೂ ಅರುವತ್ತು ಆದೀತು. ಆದರೆ ಆತನದು ಮಕ್ಕಳ ಸ್ವಭಾವ. ನಾನೂ ಕೂಡಾ ಅವನಿಗೆ ತಕ್ಕಂತೆ ಸ್ಪಂದಿಸಿದುದಕ್ಕೆ ಆತ ನನ್ನನ್ನು ತೀರಾ ಹಚ್ಚಿಕೊಂಡು ಬಿಟ್ಟ. ಎಲ್ಲಾ ಫ್ರೆಂಚರಂತೆ ಅವನಿಗೂ ನನ್ನ ಹೆಸರು ಹೇಳಲು ಕಷ್ಟವಾಗಿ ಕೊನೆಗೆ ‘ಲ’ ನುಂಗಿ ನನ್ನನ್ನು ‘ಶಿಶಿ’ ಎಂದೇ ಕರೆಯುತ್ತಿದ್ದ. ಕ್ರಿ.ಶ.14ನೆಯ ಶತಮಾನದಲ್ಲಿ ಮಾಂಪಿಲಿಯೇ ಫ್ರಾನ್ಸಿನ ರಾಜನಿಗೆ ಮಾರಾಟವಾಗದೆ ಇರುತ್ತಿದ್ದರೆ ಬಹುಶಃ ಅಂದೋರಾ ಅಥವಾ ಮೊನಾಕೋಗಳಂತೆ ಇದೊಂದು ಸ್ವಾಯತ್ತ ರಾಜ್ಯವಾಗಿ ಉಳಿಯುತ್ತಿತ್ತು ಎಂದು ನಮಗೆ ಆತ ಹೇಳಿದ. ಹದಿನಾಲ್ಕನೆಯ ಶತಮಾನದಲ್ಲಿ ಕ್ಯಾಟ್‌ಪಿಲ್ಲರ್‌ ಎಂಬ ಮಿಡತೆಯಂತಹ ಕೀಟದಿಂದ ರೇಶ್ಮೆ ತಯಾರಿಸಲು ಕಲಿತ ಇಲ್ಲಿನ ಉದ್ಯಮಿಗಳು, ಮಾಂಪಿಲಿಯೇದ ಶ್ರೀಮಂತಿಕೆಗೆ ಕಾರಣರಾದರು. ಮಾರ್ಕೋಪೋಲೋನ ಬಳಿಕ ಚೀನಾಕ್ಕೆ ಹೋದ ಯಾತ್ರಿಕರು ರೇಶ್ಮೆ ತಯಾರಿಕೆಯ ಗುಟ್ಟನ್ನು ಅರಿತು ಬಂದು ಯುರೋಪಿಗೆ ತಿಳಿಸದೆ ಇರುತ್ತಿದ್ದರೆ, ಇಡೀ ಯುರೋಪಿನಲ್ಲಿ ಮಾಂಪಿಲಿಯೇ ರೇಶ್ಮೆ ಉತ್ರ್ಪಾದನೆಯ ಏಕೈಕ ಕೇಂದ್ರವಾಗಿಬಿಡುತ್ತಿತ್ತು ಎಂದ ವಿಲ್ಲೋಟ್‌ ನಮಗೆ ತಿಳಿಸಿದ. ಆತ ನಮ್ಮನ್ನು ವಿಚಿತ್ರ ಹೆಸರುಗಳುಳ್ಳ ಹೋಟೆಲುಗಳಿಗೆ ಕರೆದೊಯ್ದು ಮನರಂಜನೆ ಒದಗಿಸುತ್ತಿದ್ದ. ಆತ ನಮ್ಮನ್ನು ಒಂದು ಮಧ್ಯಾಹ್ನ ಊಟಕ್ಕೆ ಕರೆದೊಯ್ದ ಹೋಟೆಲಿನ ಹೆಸರು ‘ನೋ ನೇಮ್’ (ಹೆಸರಿಲ್ಲ!).
ಮಾಂಪಿಲಿಯೇದಲ್ಲಿ ಶನಿವಾರ ಮತ್ತು ಭಾನುವಾರ ನಾವು ಅನಿವಾರ್ಯವಾಗಿ ಹೋಟೆಲೊಂದರಲ್ಲಿ ಉಳಿದುಕೊಂಡಿದ್ದೆವು. ಮತ್ತೆರಡು ದಿನ ಅತಿಥೇಯರುಗಳೊಡನೆ ಕಳೆದೆವು. ಮಾಂಪಿಲಿಯೇದಲ್ಲಿ ನನ್ನ ಅತಿಥೇಯನಾಗಿದ್ದ ಡಾ| ಜುವಾನ್‌ ಎಪ್ಪತ್ತೈದು ದಾಟಿದ ವೃದ್ಧ. ಒಂದು ಕಾಲದಲ್ಲಿ ಮಕ್ಕಳ ರೋಗತಜ್ಞನಾಗಿ ಮಾಂಪಿಲಿಯೇದಲ್ಲಿ ಒಳ್ಳೆಯ ಹೆಸರು ಮತ್ತು ಹಣ ಗಳಿಸಿದ್ದ ಡಾ| ಜುವಾನ್‌ನಿಗೆ, ಕಣ್ಣು ಸರಿಯಾಗಿ ಕಾಣಿಸುತ್ತಿಲ್ಲ. ಕಾಲದೊಂದಿಗೆ ಹೋರಾಡಲಾಗದ ಆತ, ಹೆಚ್ಚು ಕಡಿಮೆ ಮೂಲೆಪಾಲಾಗಿದ್ದಾನೆ.

ಡಾ| ಜುವಾನ್‌ ಮನೆಗೆ ಹೋಗುವ ಹಿಂದಿನ ದಿನ ನನಗೆ ದೂರವಾಣಿ ಸಂದೇಶವೊಂದು ಬಂತು. ‘ನಾಳೆ ಸಂಜೆ ಏಳಕ್ಕೆ ನಿನ್ನನ್ನು ಕರೆದುಕೊಂಡು ಹೋಗಲು ಶ್ರೀಮತಿ ಜುವಾನ್‌ ಬರುತ್ತಾಳೆ. ಸಿದ್ಧನಾಗಿರು.’
ಶ್ರೀಮತಿ ಜುವಾನಳ ಹೆಸರು ಅರ್ಮೆಲ್‌. ಈಕೆಗೆ ಖಂಡಿತಾ ಎಪ್ಪತ್ತು ದಾಟಿದೆ. ಕುಳ್ಳಿ ಅರ್ಮೆಲ್‌ಗೆ ಚೆನ್ನಾಗಿ ಇಂಗ್ಲೀಷ್‌ ಬರುತ್ತದೆ. ವಯಸ್ಸಾದರೂ ಆರೋಗ್ಯಕ್ಕೆ ತೊಂದರೆ ಏನಾಗಿರಲಿಲ್ಲ. ಕಾರಲ್ಲಿ ಅವಳ ಮನೆಗೆ ನನ್ನನ್ನು ಕರೆದೊಯ್ಯುವಾಗ ಗಂಡನ ಬಗ್ಗೆ ಹೇಳಿದಳು. ‘ಅವನಿಗೀಗ ಕಾರು ಬಿಡಲು ಆಗುವುದಿಲ್ಲ. ಹಾಗಾಗಿ ನಾನೇ ಬಂದೆ. ‘ಫ್ರಾನ್ಸಿನಲ್ಲಿ ಮಹಿಳೆಯರ ವಯಸ್ಸು ಕೇಳುವಂತಿಲ್ಲ’ವೆಂದು ತುಲೋಸಿನ ಮ್ಯಾಗಿ ಹೇಳಿಕೊಟ್ಟಿದ್ದಳು. ಇನ್ನೇನು ಕೇಳುವುದೆಂದು ಗೊತ್ತಾಗದೆ ‘ನಿನಗೆಷ್ಟು ಮಕ್ಕಳು?’ ಎಂದು ಕೇಳಿದೆ. ‘ಏಳು ಮಂದಿ. ಫ್ರಾನ್ಸಿನಲ್ಲಿ ಜನಸಂಖ್ಯೆ ಇನ್ನೂ ಒಂದು ಸಮಸ್ಯೆ ಎನಿಸಿಲ್ಲ’ ಎಂದು ನಕ್ಕಳು. ಬೊಚ್ಚುಬಾಯಿ ಅಜ್ಜಿ!’ನಿನ್ನ ದೊಡ್ಡ ಮಗನ ವಯಸ್ಸೆಷ್ಟು?’ ಎಂದು ಇನ್ನೊಂದು ಪ್ರಶ್ನೆ ಹಾಕಿದೆ. ಅಜ್ಜಿ ‘ನಲುವತ್ತೆಂಟು’ ಎಂದು ಉತ್ತರಿಸಿತು. ‘ನನಗೀಗ ನಲ್ವತ್ತೆರಡು. ನಾನು ನಿನ್ನನ್ನು ‘ತಾಯಿ’ ಎಂದು ಕರೆಯಬಹುದಲ್ಲವೆಲು ಎಂದೆ. ಅಜ್ಜಿಯ ಮುಖಭಾವ ಬದಲಾಗಿ ಕಣ್ಣಲ್ಲಿ ಹನಿ ಕಾಣಿಸಿಕೊಂಡಿತು. ‘ನಿಜ ಹೇಳಬೇಕೆಂದರೆ ನನಗೆ ನಿನ್ನನ್ನು ನನ್ನ ಮಗನ ಹಾಗೆ ಆಗ್ತಾ ಇದೆ’ ಎಂದಿತು ಅಜ್ಜಿ.

ಮೂರು ಮಹಡಿಗಳ ಅವಳ ಮನೆ ಚೆನ್ನಾಗಿದೆ. ಮನೆಯಿಂದ ಇಪ್ಪತ್ತು ಮೀಟರ್‌ ದೂರದಲ್ಲಿ ಭದ್ರವಾದ ಎತ್ತರದ ಗೇಟು. ಗೇಟಿನಲ್ಲೊಂದು ಕರೆಗುಂಡಿ ಮತ್ತು ಮೌತ್‌ಪೀಸ್‌. ಕರೆಗುಂಡಿ ಒತ್ತಿದಾಗ ‘ಯಾರು?’ ಎಂಬ ಪ್ರಶ್ನೆ ಕಂಭದ ಗರ್ಭವನ್ನು ಹಾದು ಮೌತ್‌ಪೀಸ್‌ನಲ್ಲಿ ಕೇಳಿಬರುತ್ತದೆ. ಆಗ ನಾವು ಪರಿಚಯವನ್ನು ಹೇಳಿಕೊಳ್ಳಬೇಕು. ಪರಿಚಿತರು ಎನ್ನುವುದು ಖಚಿತವಾದರೆ ಮಾತ್ರ ಗೇಟು ತೆರೆದುಕೊಳ್ಳುತ್ತದೆ. ಮೂರು ಮಹಡಿಯ ಮನೆಯಲ್ಲಿ ಎಪ್ಪತ್ತು ದಾಟಿದ ಇಬ್ಬರು ವೃದ್ಧ  ವೃದ್ಧಿಯರಷ್ಟೇ ವಾಸಿಸುವಾಗ ಇಷ್ಟು ಕನಿಷ್ಠ ಭದ್ರತೆ ಇರಲೇಬೇಕು.

ಅರ್ಮೆಲ್‌ ಡಾ|ಜುವಾನನಿಗೆ ನನ್ನನ್ನು ಪರಿಚಯಿಸಿದಳು. ಆತ ಎತ್ತರಕ್ಕಿದ್ದ. ತಾರುಣ್ಯದಲ್ಲಿ ಅದೆಷ್ಟು ತರುಣಿಯರ ಹೃದಯಕೋಟೆಗೆ ಲಗ್ಗೆ ಇಟ್ಟು ಈತ ಗೆದ್ದಿದ್ದಾನೋ? ಅಂತಹ ರೂಪು! ಆ ಮನೆಯಲ್ಲಿ ನಾಯಿ ಇಲ್ಲ. ಬೆಕ್ಕು ಇಲ್ಲ.’ ನಮ್ಮನ್ನೇ ನಾವು ನೋಡಿಕೊಳ್ಳುವುದು ಕಷ್ಟ. ಇನ್ನು ಆ ಬಡಬಾಯಿ ಪ್ರಾಣಿಗಳಿಗೇಕೆ ಹಿಂಸೆ ಎಂದು ಅವನ್ನು ಸಾಕಿಲ್ಲ’ಎಂದು ಅರ್ಮೆಲ್‌ ಅದಕ್ಕೆ ಕಾರಣ ನೀಡಿದಳು. ‘ಇಷ್ಟು ಕಷ್ಟದಲ್ಲಿರುವ ನೀನು ನನ್ನನ್ನು ಯಾಕೆ ಅತಿಥಿಯಾಗಿಸಿಕೊಂಡೆ?’ ಎಂದು ನಾನು ಕೇಳಿದೆ. ಅದಕ್ಕೆ ಅಜ್ಜಿ ನಗುತ್ತಾ ‘ನಮ್ಮ ಕಷ್ಟ ಯಾವತ್ತೂ ಇದ್ದದ್ದೇ. ನಮಗೂ ಒಂದು ಬದಲಾವಣೆ ಬೇಕಿತ್ತು. ನನ್ನ ಏಳು ಮಕ್ಕಳು ವರ್ಷಕ್ಕೊಮ್ಮೆಯೋ, ಎರಡು ಬಾರಿಯೋ ಬಂದು ಹೋಗುತ್ತಾರೆ. ಆಮೇಲೆ ಇದು ಬಣಗುಟ್ಟುವ ಮನೆ. ಮುದುಕ ಜುವಾನ್‌ ಹೊರಗೆ ಹೋಗೋದು ಕಡಿಮೆ. ನಿನ್ನ ದೇಶದ ಬಗ್ಗೆ ತುಂಬಾ ಓದ್ಕೂಂಡಿದ್ದಾನೆ. ನೀನೊಬ್ಬ ಪ್ರೊಫೆಸರ್‌ ಎನ್ನುವುದು ಗೊತ್ತಾದ ಮೇಲೆ ನಿನ್ನನ್ನೇ ಅತಿದಿಯಾಗಿ ಆರಿಸಿಕೊಂಡಿದ್ದು ಅವನೇ’ ಎಂದಳು. ಆ ಜುವಾನ್‌ ಅನೇಕ ಪ್ರಶ್ನೆ ಕೇಳಿ ನನ್ನನ್ನು ತಲ್ಲಣಗೊಳಿಸಿದ್ದು, ಅದು ಬೇರೆಯೇ ಒಂದು ಕತೆ.
ನನ್ನ ಕುಟುಂಬದ ಬಗ್ಗೆ ಅಜ್ಜಿ ಕೇಳಿದಾಗ ಕುಟುಂಬದ ಫೋಟೋ ಅಜ್ಜಿಗಿತ್ತೆ. ಅವಳದನ್ನು ನೋಡಿ ‘ಇಷ್ಟು ಸಣ್ಣ ಮಗಳು ನಿನಗಿದ್ದಾಳಾ’ ಅವಳು ನಿನ್ನನ್ನು ಅದೆಷ್ಟು ಕಾಯ್ತಿದ್ದಾಳೋ? ಇಲ್ಲಿ ಫೋನ್‌ ಇದೆ. ನೀನು ಎಷ್ಟು ಸಲ ಬೇಕಾದರೂ ಅವಳಲ್ಲಿ ಮಾತಾಡು’ ಎಂದಳು.
ಮ್ಯಾಗಿ, ಫರೆಂಕ್‌, ಮಾರ್ಸೆಲ್‌ ಈ ಉದಾರತೆ ತೋರಿರಲಿಲ್ಲ. ಡಾ| ರಾವತ್‌ ಮತ್ತು ಪೇಜಸ್‌ ಜುವಾನರಲ್ಲಿಂದ ನಾನಾಗಿಯೇ ಕೇಳಿ ಮನೆಗೆ ಫೋನ್‌ ಮಾಡಿದ್ದೆ. ಈಗ ಈ ಅಜ್ಜಿ ತಾನಾಗಿಯೇ ಫೋನ್‌ ಮಾಡಲು ಹೇಳ್ತಿದ್ದಾಳೆ! ಅಜ್ಜಿ ನೀಡಿದ ಅವಕಾಶವನ್ನು ನಾನು ಸಾಕಷ್ಟು ಸದುಪಯೋಗಪಡಿಸಿಕೊಂಡೆ.

ಕ್ಯಾಸ್ತಲ್‌ನೂದರಿಯ ಫ್ಯಾಕ್ಟರಿಯಿಂದ ತಂದಿದ್ದ ಮುಕ್ಕಾಲು ಕೇಜಿ ಭಾರದ ಕ್ಯಾಸುಲೆಯನ್ನು ಅಜ್ಜಿಗೆ ಕೊಟ್ಟೆ. ಅವಳದನ್ನು ನೋಡಿ ‘ನನಗಾಗಿ ತಂದೆಯಾ’ ಎಂದು ಸಂಭ್ರಮಿಸಿ, ಡಾ| ಜುವಾನನ ಕೈಗೆ ಅದನ್ನು ಕೊಟ್ಟಳು. ಕ್ಯಾಸುಲೆ ಎಂದರೆ ಅವರಿಬ್ಬರಿಗೂ ಪ್ರಾಣವಂತೆ. ಅವಳ ಮನೆಯಿಂದ ಹೊರಡುವಾಗ ಆಕೆ ಎರಡು ಬ್ರೋಚರ್‌ಗಳನ್ನು ಸಂಚಿಯೊಂದರಲ್ಲಿ ಕಟ್ಟಿ ನನಗಿತ್ತು ‘ನಿನ್ನ ಮಗಳಿಗೆ ಕೊಡು’ ಎಂದಳು. ಹೊರಡುವ ಮುನ್ನ ಡಾ| ಜುವಾನನನ್ನು  ನೋಡಬೇಕೆಂದೆ. ‘ಅವನು ಯಾವಾಗಲೂ ನಾರ್ಮಲ್‌ ಆಗಿ ಇರುವುದಿಲ್ಲ. ನಿನ್ನೆ ಮಾಂಸ ತಂದಿಲ್ಲವೆಂದು ಆತ ಸಿಡಿಮಿಡಿಗುಟ್ಟುತ್ತಿದ್ದಾನೆ. ಅವನನ್ನು ಈಗ ನೋಡಬೇಡ’ ಅಂದಳು. ಅವನನ್ನು ಇನ್ನೆಂದಿಗೂ ನೋಡಲು ಸಾಧ್ಯವಾಗದೆಂದು ನನಗೆ ಗೊತ್ತು. ಆದರೆ ಅಜ್ಜಿಯೇ ಬೇಡವೆಂದ ಮೇಲೆ ಅದನ್ನು ಉಲ್ಲಂಘಿಸಲು ನನಗೆ ಮನಸ್ಸು ಬರಲಿಲ್ಲ. ಈ ಅಜ್ಜಿ ಪಾಪ ಹೇಗೋ ಎಲ್ಲವನ್ನೂ ಸುಧಾರಿಸಿಕೊಂಡು ಹೋಗುತ್ತಿದ್ದಾಳೆ. ಅಲ್ಲಿಗೆ ದಿನಕ್ಕೆ ಎರಡು ಗಂಟೆ, ಕೆಲಸಕ್ಕೊಬ್ಬಳು ಹೆಂಗಸು ಬರುವುದನ್ನು ಬಿಟ್ಟರೆ ಅಲ್ಲಿನ ಸಮಸ್ತ ಕೆಲಸವನ್ನು ಅಜ್ಜಿಯೇ ಮಾಡಬೇಕು. ಅಂಥಾದ್ದರಲ್ಲಿ ಡಾ| ಜುವಾನ್‌ನ ‘ಗಂಡನ ದರ್ಬಾರು’ ಬೇರೆ!

ಸಮೂಹ ಅಧ್ಯಯನ ಕಾರ್ಯಕ್ರಮವನ್ನು ಮುಗಿಸಿ ತುಲೋಸಿನಿಂದ ನಾನು ಲಂಡನ್ನಿಗೆ ನಿರ್ಗಮಿಸುವ ಮುನ್ನಾದಿನ, ತುಲೋಸಿನಲ್ಲಿ ಭರ್ಜರಿಯಾದ ಬೀಳ್ಕೊಡುವ ಸಮಾರಂಭವೊಂದನ್ನು ಏರ್ಪಡಿಸಲಾಗಿತ್ತು. ಅದಕ್ಕೆ ಮಾಂಪಿಲಿಯೇದ ಅಧ್ಯಕ್ಷ್ಷ್ಷ ವಿಲ್ಲೋಟ್‌ ಹಾಜರಾಗಿದ್ದ. ಆತ ‘ಶಿಶಿ, ನಿನ್ನ ತಾಯಿ ನಿನ್ನನ್ನು ಆಗಾಗ ನೆನಪಿಸುತ್ತಾ ಇರ್ತಾಳೆ’ ಎಂದು ಅರ್ಮೆಲ್‌ ಬಗ್ಗೆ ಹೇಳಿದ. ನಾನು ಅರ್ದ್ರನಾಗಿಬಿಟ್ಟೆ.

ಸೆತ್ತ್‌ ಎಂಬ ಮೋಹಕ ಬಂದರು : ಮಾಂಪಿಲಿಯೇ ವಾಣಿಜ್ಯನಗರಿಗೆ ಸಮುದ್ರ ಮೂಲಕ ಬರುವವರು ಸೆತ್ತ್‌ ಬಂದರದಿಂದಲೇ ಬರಬೇಕು. ಕ್ರಿ.ಶ.1666ರಲ್ಲಿ ನಿರ್ಮಾಣಗೊಂಡ ಸೆತ್ತ್‌ ಒಂದು  ಮೋಹಕ ಬಂದರು. ಸೇಂಟ್‌ ಕ್ಲೇರ್‌ ಪರ್ವತ ಪ್ರಧಾನ ಭೂಮಿಕೆಯಾಗಿ, ಸುತ್ತಲೂ ಹಬ್ಬಿರುವ ಸೆತ್ತ್‌ ದ್ವೀಪವನ್ನು ಎರಡು ಮರಳ ದಿಬ್ಬಗಳು ಭೂಭಾಗಕ್ಕೆ ಸಂಪರ್ಕಿಸುತ್ತವೆ. ಹತ್ತೊಂಬತ್ತನೆಯ ಶತಮಾನದಲ್ಲಿ ಕಟ್ಟಲಾದ ಲಾ ಪೆರೆಡೆ ಎಂಬ 52 ಕಮಾನುಗಳ ಸೇತುವೆ, ಫ್ರಂಟಿನನ್‌ ಭೂಭಾಗಕ್ಕೂ ಸೆತ್ತ್‌ಗೂ ಸಂಪರ್ಕ ಕಲ್ಪಿಸುತ್ತದೆ. ಕ್ರಿ.ಶ.1950ರಲ್ಲಿ ನಿರ್ಮಾಣವಾದ ತಂಗುದಾಣ ಮತ್ತು ಅರುವತ್ತರ ದಶಕದ ಕೊನೆಯಲ್ಲಿ ನಿರ್ಮಾಣವಾದ ಬಂದರುಗಳು, ಸೆತ್ತ್‌ನ್ನು ಫ್ರಾನ್ಸಿನ ಅತ್ಯಂತ ದೊಡ್ಡ ಬಂದರುಗಳಲ್ಲಿ ಒಂದನ್ನಾಗಿ ಮಾಡಿವೆ.
ಸೆತ್ತ್‌ ಒಂದು ಮೀನುಗಾರಿಕಾ ಬಂದರವೂ ಹೌದು. ಮೀನುಗಾರರ ಬಗೆಗಿನ ನನ್ನ ಸಂಶೋಧನಾ ಕಾರ್ಯನಿಮಿತ್ತ ನಾನು ಕರ್ನಾಟಕದ ಕರಾವಳಿಯುದ್ದಕ್ಕೂ ಸಂಚರಿಸಿದ್ದೆ. ಮೀನುಗಾರಿಕಾ ಬಂದರುಗಳಲ್ಲಿ ಎಂತಹ ವಾಸನೆ ಇಡುಗಿರುತ್ತದೆ ಮತ್ತು ಎಂತಹ ಗದ್ದಲ ತುಂಬಿರುತ್ತದೆ ಎನ್ನುವುದನ್ನು ಚೆನ್ನಾಗಿ ಅರಿತಿದ್ದ ನನ್ನ ಪಾಲಿಗೆ ಸೆತ್ತ್‌ನ ವಾಸನಾರಹಿತ, ಸದ್ದುಗದ್ದಲವಿಲ್ಲದ ಮೀನುಗಾರಿಕಾ ಬಂದರು ಪರಮಾಶ್ಚರ್ಯವನ್ನುಂಟು ಮಾಡಿತ್ತು. ಮೀನುಗಾರಿಕಾ ಬಂದರಿನಿಂದೀಚೆಗೆ ಮೆಡಿಟರೇನಿಯನ್‌ ಸಮುದ್ರದಲ್ಲಿ ಸಾಹಸಕ್ರೀಡೆಗಳಿಗೆ ವಿಪುಲ ಅವಕಾಶವಿದೆ. ಇಲ್ಲಿ ವೈವಿಧ್ಯಮಯವಾದ ಬೋಟುಗಳು ಸೌಂದರ್ಯದ ಸಾಕ್ಷಾತ್ಕಾರಕ್ಕಾಗಿ ಮೆಡಿಟರೇನಿಯನ್ನ್‌ ವಿಹಾರಕ್ಕೆ ಪ್ರವಾಸಿಗರನ್ನು ಒಯ್ಯಲು ಸಿದ್ಧವಾಗಿರುತ್ತವೆ. ಅಧ್ಯಕ್ಷ್ಷ್ಷ ವಿಲೋಟ್‌ ನಮ್ಮನ್ನು ಬೋಟೊಂದರಲ್ಲಿ ವಿಹಾರಕ್ಕೆ ಒಯ್ಯುವ ಯೋಜನೆ ಹಾಕಿದ.  ನಮ್ಮೊಡನೆ ಸೆತ್ತ್‌ಗೆ ಬಂದಿದ್ದ ಮೇಡಂ ಜೋಸೆಟ್ಟ್‌ ಗಿರಾರ್ಡ್‌ ಅದಕ್ಕೆ ಸಹಮತಿ ಸೂಚಿಸಿದಳು. ಅರುವತ್ತರ ಆಜೂಬಾಜಿನಲ್ಲಿರುವ ಗಿರಾರ್ಡ್‌ಳದ್ದು ಥೇಟ್‌ ನಮ್ಮ ಕಮಲಾದೇವಿ ಚಟ್ಟೋರ್ಪಾಧ್ಯಾಯರ ದೇಖಿ! ಆಕೆಯ ಮಗ ಮುಂಬಯಿಯಲ್ಲಿ ಎಂಜಿನಿಯರ್‌. ಹಾಗಾಗಿ ಈಕೆ ಎರಡು ಬಾರಿ ಮುಂಬಯಿಗೆ ಬಂದಿದ್ದಳು. ಇನ್ನೇನು ನಾವು ಬೋಟಿನತ್ತ ಹೋಗಬೇಕು ಅನ್ನುವಷ್ಟರಲ್ಲಿ ವಿಲೋಟನ ಮುದಿ ಹೆಂಡತಿ ಅದೇನೋ ಫ್ರೆಂಚ್‌ನಲ್ಲಿ ಹೇಳಿದಳು. ‘ಇಷ್ಟು ಜನರಿಗಾಗಿ ನೀನೊಬ್ಬನೇ ಯಾಕೆ ಖರ್ಚು ಮಾಡ್ತೀಯ?’ ಎಂದವಳು ಗಂಡನನ್ನು ದಬಾಯಿಸಿರಬೇಕು. ಫ್ರಾನ್ಸಿನಲ್ಲೂ ಅಮ್ಯಾವ್ರ ಗಂಡ ಅನಿಸಿಕೊಳ್ಳುವವರಿಗೆ ಕೊರತೆಯಿಲ್ಲ. ಕೆಂಪು ಮುಖದ ವಿಲೋಟ್‌ ಇನ್ನಷ್ಟು ಕೆಂಪಗಾಗಿ ‘ಸಮುದ್ರ ಪ್ರಯಾಣ ಮಾಡಲು ಸಮಯ ಸಾಲದು ಶಿಶಿ’ ಅಂದ ದೈನೇಸಿ ಸ್ವರದಲ್ಲಿ. ‘ಈ ಕಂಜೂಸ್‌ ಬುಡ್ಡಿ ಎಲ್ಲಾ ಹಾಳುಮಾಡಿಬಿಟ್ಟಳು’ ಎಂದು ನಾನು ಹಿಂದಿಗನ್ನಡದಲ್ಲಿ ಬೈದೆ. ನಮ್ಮ ತಂಡದವರೆಲ್ಲರೂ ನಕ್ಕರು. ಮತ್ತೆ ನಾವು ಫ್ರಾನ್ಸ್‌ ಬಿಡುವವರೆಗೂ ಆ ಕಂಜೂಸ್‌ ಬುಡ್ಡಿಯನ್ನು ಆಗಾಗ ನೆನಪಿಸಿಕೊಳ್ಳುತ್ತಿದ್ದೆವು.

ಸೆತ್ತ್‌ ಬಂದರದಿಂದ ಸಮದ್ರತೀರದ ರಸ್ತೆಯಲ್ಲೇ ಮೇಲಕ್ಕೆ ಹೋದರೆ, 569 ಅಡಿ ಎತ್ತರದ ಸೇಂಟ್‌ ಕ್ಲೇರ್‌ ಗುಡ್ಡ ಸಿಗುತ್ತದೆ. ಸೇಂಟ್‌ ಕ್ಲೇರ್‌ ಕುರುಡರ ಒಳಿತಿಗಾಗಿ ತನ್ನ ಜೀವನವನ್ನು ಪೂರ್ತಿಯಾಗಿ ಸವೆಸಿದ ಮಹಾನ್‌ ಸಂತ. ಈತನ ಹೆಸರಿನಲ್ಲಿ ವರ್ಷಂಪ್ರತಿ ಸೆಪ್ಟೆಂಬರ್‌ 19ರಂದು, ಸೆತ್ತ್‌ನಲ್ಲಿ ಹಬ್ಬ ಆಚರಿಸಲಾಗುತ್ತದೆ. ಸೇಂಟ್‌ ಕ್ಲೇರ್‌ ಗುಡ್ಡದಿಂದ ಕಾಣುವ ಸೆತ್ತ್‌ನ ಸುತ್ತಮುತ್ತಣ ನೋಟ ನಯನ ಮನೋಹರವಾದುದು. ವಸ್ತುಶಃ ವರ್ಣನಾತೀತ! ಗುಡ್ಡದ ಬಲಭಾಗಕ್ಕಿರುವ ಥಾವು ಸರೋವರದ ಆಯಿಸ್ಟರ್‌ ಬೆಳೆ, ದೂರದ ಸೆವೆನೀಸ್‌ ಬೆಟ್ಟ ಮತ್ತು ವಾತಾವರಣ ತಿಳಿಯಾಗಿದ್ದರೆ ಅದರ ಹಿಂದೆ ಕಾಣುವ ಪಿರೆನಿ ಪರ್ವತ ಸಾಲು, ಎಡಭಾಗದಲ್ಲಿ ಸಮುದ್ರದೊಳಕ್ಕೆ ಚಾಚಿರುವ ಭೂಭಾಗಗಳು, ಕಣ್ಣು ಹಾಯಿಸಿದಲ್ಲೆಲ್ಲಾ ಕಾಣುವ ಮೆಡಿಟರೇನಿಯನ್‌ನ ದಟ್ಟ ನೀಲಿ ನೀರು ಎಲ್ಲವೂ ಕಣ್ಣಿಗೆ ಹಬ್ಬ.

ಸೆತ್ತ್‌ನ ಪ್ರಸಿದ್ಧ ಗಾಯಕ್ಷ ಜಾರ್ಜೆಸ್‌ ಬ್ರಾಸೆನ್ಸ್‌ ತನ್ನ ಬಾಲ್ಯದ ಬಹುಕಾಲವನ್ನು ಸುಂದರವಾದ ಮೆಡಿಟರೇನಿಯನ್ನಿನಲ್ಲಿ ಈಜುತ್ತಾ ಕಳೆಯುತ್ತಿದ್ದ. ತಾನು ಪ್ರೀತಿಸಿದ ಸಮುದ್ರದ ಬಗ್ಗೆ ಹಾಡುಕಟ್ಟಿ ಹಾಡಿ, ಜನರನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತಿದ್ದ. ಖ್ಯಾತ ಕವಿ ಪೌಲ್‌ ವಲೇರಿ, 1922ರಲ್ಲಿ ಸೆತ್ತ್‌ನ ಬಗೆ ಬರೆದಿರುವ ಚಾರ್ಮಿಸ್‌ (ಷಯಿಮೀ) ಎಂಬ ಕವನ, ಸಮುದ್ರಪ್ರಿಯ ಫ್ರೆಂಚರ ನಾಲಿಗೆಯಲ್ಲಿ ಈಗಲೂ ನರ್ತಿಸುತ್ತಿರುತ್ತದೆ. ಫ್ರಾನ್ಸಿನ ಪ್ರಸಿದ್ಧ ಗಿಟಾರ್‌ ವಾದಕ ಮಾನಿತಾಸ್‌ ಡಿ ಪ್ಲಾಟಾ ಹುಟ್ಟಿದ್ದು ಇಲ್ಲೇ. 1944ರಲ್ಲಿ ಅಗಾಖಾನನನ್ನು ಮದುವೆಯಾಗಿ ವಿಶ್ವದಲ್ಲಿ ಸುದ್ದಿ ಮಾಡಿದ ವೆತ್ತ್‌ ಲಾಬ್ರೋಸ್‌, ಸೆತ್ತ್‌ನ ಮಣ್ಣಲ್ಲಿ ಅರಳಿದ ಕೋಮಲ ಕುಸುಮ.

ಸೆತ್ತ್‌ನಲ್ಲೂ, ಮಾಂಪಿಲಿಯೇದಲ್ಲಿರುವ ಹಾಗೆ, ಅಂಡಾಕಾರದ ಒಪೇರಾ ಒಂದಿದೆ. ಅದರೊಳಗೆ 1200 ಜನರಿಗೆ ಆಸನದ ವ್ಯವಸ್ಥೆ ಇದೆ. ಭೋಗದಕ್ಕರದ ಗೇಯದ ಗೊಟ್ಟಿಯ ಅಲಂಪಿನ  ಇಂಪುಗಳ್ಗೆ ಆಗರಮಾದ ಫ್ರೆಂಚರ ವೈಶಿಷ್ಟ್ಯ ಇರುವುದೇ ಇಂತಹ ಒಪೇರಾಗಳಲ್ಲಿ. ತಮ್ಮ ಪಟ್ಟಣ ಸಣ್ಣದಿರಲಿ, ದೊಡ್ಡದಿರಲಿ, ಅಲ್ಲೊಂದು ಒಪೇರಾ ಇಲ್ಲದೆ, ಅಂದರೆ ಹಾಡು  ಕುಣಿತಗಳಿಲ್ಲದೆ, ಅವರ ಜೀವನವೇ ಇಲ್ಲ!

ಎಗ್‌ ಮೋರ್ಟ್ ಕೋಟೆ : ಎಗ್‌ ಮೋರ್ಟ್ (AIGUES MORTES) ಮಾಂಪಿಲಿಯೇದಿಂದ ಸುಮಾರು ಮೂವತ್ತು ಕಿ.ಮೀ. ದೂರದಲ್ಲಿರುವ ಪ್ರದೇಶ. ಎಗ್‌ಮೋರ್ಟ್‌ ಎಂದರೆ ನೀರು ನಿಂತ ಪ್ರದೇಶ ಎಂದರ್ಥ. ಅದೊಂದು ಜವುಗು ಮತ್ತು ಲಗೂನು ಪ್ರದೇಶ. ಸೆತ್ತ್‌ಗಿಂತ ಮೊದಲು ಅದು ಪ್ರಸಿದ್ಧ ಬಂದರಾಗಿತ್ತು. ಸೆತ್ತ್‌ನಲ್ಲಿ ಬಂದರು ನಿರ್ಮಾಣವಾದ ಬಳಿಕ ಎಗ್‌ ಮೋರ್ಟಿನ ಮಹತ್ವ ಕಡಿಮೆಯಾಯಿತು. ಆದರೆ ಅಲ್ಲಿನ ಕೋಟೆಯಿಂದಾಗಿ ಅದೊಂದು ಪ್ರವಾಸೀ ತಾಣವಾಗಿ ಪ್ರಸಿದ್ಧಿಯನ್ನು ಉಳಿಸಿಕೊಂಡಿತು.

ಅಲ್ಲೊಂದು ಬಂದರು ನಿರ್ಮಾಣವಾದುದರ ಹಿಂದೊಂದು ಚರಿತ್ರೆಯಿದೆ. ಬೆತ್ಲೆಹ್ಯಾಮಿನ ಪುಣ್ಯಭೂಮಿಯಲ್ಲಿ ಧರ್ಮಯುದ್ಧ ಮಾಡಲು ಹೊರಟ ಫ್ರೆಂಚ್‌ ಮಹಾರಾಜ ಒಂಬತ್ತನೆಯ ಲೂಯಿಗೆ, ಮೆಡಿಟರೇನಿಯನ್‌ ತೀರದಲ್ಲೊಂದು ಬಂದರು ನಿರ್ಮಿಸುವ ಅಗತ್ಯ ಕಂಡುಬಂತು. ಮೆಡಿಟರೇನಿಯನ್‌ ತೀರದ ನಾಬೋನ್‌ ಬಂದರಲ್ಲಿ ಹೂಳು ತುಂಬಿ ಅದು ಬಳಕೆಗೆ ಯೋಗ್ಯವಾಗಿರಲಿಲ್ಲ. ಈಗ ಫ್ರಾನ್ಸಿಗೆ ಸೇರಿರುವ ಮಾರ್ಸೈಲ್‌ ಬಂದರು, ಆಗ ಫ್ರಾನ್ಸಿನ ಪ್ರದೇಶವಾಗಿರಲಿಲ್ಲ. ಸೆತ್ತ್‌ ಬಂದರು ಇನ್ನೂ ನಿರ್ಮಾಣಗೊಂಡಿರಲಿಲ್ಲ. ಆದುದರಿಂದ ಕ್ರಿ.ಶ.1237ರಲ್ಲಿ ಒಂಬತ್ತನೆಯ ಲೂಯಿಯು ಎಗ್‌ ಮೋರ್ಟೆ ಗ್ರಾಮವನ್ನು, ಸಾಲ್ಮೋಡಿ ಎಂಬ ಕ್ರೈಸ್ತ ಮಠದವರಿಂದ ಕ್ರಯಕ್ಕೆ ಪಡೆದ. ಆತನಿಂದಾಗಿ ಕೋಟೆಯ ನಿರ್ಮಾಣಕಾರ್ಯ ಆರಂಭವಾಯಿತು. ಅಲ್ಲಿ ಬಂದರವೊಂದನ್ನು ಮತ್ತು ಮೆಡಿಟರೇನಿಯನ್ನಿಗೊಂದು ಕಾಲುವೆಯನ್ನು ಕೂಡಾ ಆತ ನಿರ್ಮಿಸಿದ. ಕ್ರಿ.ಶ.1248ರ ಜುಲೈ 28ರಂದು ಆ ಬಂದರಿನಿಂದ 5000 ಸೈನಿಕರು ಏಳನೆಯ ಧರ್ಮ ಯುದ್ಧಕ್ಕಾಗಿ ಈಜಿಪ್ಟಿಗೆ ಹೊರಟರು. ಕ್ರಿ.ಶ.1270ರಲ್ಲಿ ಅದೇ ಲೂಯಿ ತನ್ನ ಅಂತಿಮ ಯುದ್ಧಯಾತ್ರೆಯನ್ನು ಅಲ್ಲಿಂದಲೇ ಆರಂಭಿಸಿದ.

ಎಗ್‌ಮೋರ್ಟ್‌ ಕೋಟೆಯ ಕೆಲಸವನ್ನು ಪೂರ್ತಿಗೊಳಿಸಿದವನು ಸಾಣೆ ಮಂಡೆ ಫಿಲಿಪ್ಪನ (Philip the bold) ಮಗ ಸೇಂಟ್‌ ಲೂಯಿ. 540 ಗಜ ಉದ್ದ ಮತ್ತು 325 ಗಜ ಅಗಲದ ಆಯತಾಕಾರದ ಬುರುಜನ್ನು ಮತ್ತು ಕೋಟೆಯ ಒಂಬತ್ತು ಮಹಾದ್ವಾರಗಳ ವಿನ್ಯಾಸವನ್ನು ಜೆನೋವಾದ ಶಿಲ್ಪಿ ಬೋಸಾನೆಗ್ರಾ ಎಂಬಾತ ರೂಪಿಸಿದ.

ಎಗ್‌ಮೋರ್ಟ್‌ ಸುಮಾರು ನೂರು ವರ್ಷಗಳ ಕಾಲ ಬಂದರವಾಗಿ ಕಾರ್ಯನಿರ್ವಹಿಸಿತು. ಆದರೆ ಕಾಲಕ್ರಮೇಣ ಕಾಲುವೆಗಳಲ್ಲಿ ಉಪ್ಪುನೀರು ತುಂಬಿ, ಅವು ಸಂಚಾರಕ್ಕೆ ಅಯೋಗ್ಯವಾದವು. ನೂರು ವರ್ಷಗಳ ಯುದ್ಧವು ಈ ಕೋಟೆಗೆ ಸಾಕಷ್ಟು ಹಾನಿಯುಂಟುಮಾಡಿತು. ಕ್ರಿ.ಶ.1418ರಲ್ಲಿ ಅರ್ಮೋನಾಕ್‌ ಸೈನಿಕರು ಬರ್ಗುಂಡಿಯನ್‌ ಸೈನಿಕರನ್ನು ಸಾಮೂಹಿಕ ಹತ್ಯೆ ಮಾಡಿ, ಹೆಣಗಳಿಗೆ ಉಪ್ಪು ಲೇಪಿಸಿ ಅವರನ್ನು ಕೋಟೆಯ ಗೋಪುರದೊಳಕ್ಕೆ ಎಸೆದರೆಂದು ಇತಿಹಾಸ ಹೇಳುತ್ತದೆ. ಅಲ್ಲಿಯವರೆಗೆ ಕಾನ್‌ಸ್ಟಂಟ್‌ ಗೋಪುರವಾಗಿದ್ದದ್ದು, ಆ ಬಳಿಕ ಬರ್ಗುಂಡಿಯನ್‌ ಗೋಪುರವಾಯಿತು. ಕ್ರಿ.ಶ.1666ರಲ್ಲಿ ಸೆತ್ತ್‌ನಲ್ಲಿ ಬಂದರು ನಿರ್ಮಾಣ ಕಾರ್ಯ ಆರಂಭವಾಗುವುದರೊಂದಿಗೆ, ಎಗ್‌ಮೋರ್ಟೆಯ ಪ್ರಾಮುಖ್ಯತೆ ಹೊರಟುಹೋಯಿತು. ಅದೊಂದು ಚಾಲನಾರಹಿತ ಮಧ್ಯಯುಗೀನ ಮರೀಚಿಕೆಯಾಗಿ ಉಳಿದುಕೊಂಡಿತು.

ಅಲ್ಲಿ ಪ್ರತಿವರ್ಷ ಅಗೋಸ್ತು ಕೊನೆಯಲ್ಲಿ ಸೇಂಟ್‌ ಲೂಯಿ ಉತ್ಸವವನ್ನು ಆಚರಿಸಲಾಗುತ್ತದೆ. ಆಗ ಸೇಂಟ್‌ ಲೂಯಿ ಧರ್ಮಯುದ್ಧಕ್ಕಾಗಿ ತೆರಳಿದ ಸಂದರ್ಭಗಳನ್ನು ದೃಶ್ಯರೂಪಕವಾಗಿ, ಹಾಡುಗಬ್ಬವಾಗಿ ಪುನರ್‌ಸೃಷ್ಟಿಸಲಾಗುತ್ತದೆ. ಆ ಸಂದರ್ಭದಲ್ಲಿ ಇಡೀ ಕೋಟೆ ದೀರ್ಪಾಲಂಕೃತವಾಗಿ ದೇದೀಪ್ಯಮಾನವಾಗಿ ಕಂಗೊಳಿಸುತ್ತದೆ. ಅಕ್ಟೋಬರ ತಿಂಗಳಲ್ಲಿ ಅಲ್ಲಿ ಸ್ಥಳೀಯ ಹಬ್ಬವೊಂದನ್ನು ಆಚರಿಸಲಾಗುತ್ತದೆ. ಆಗ ನಾಟಕ, ವಾದ್ಯಗೋಷ್ಠಿ, ಪ್ರದರ್ಶನಗಳು, ಗೂಳಿಗಳ ಮೆರವಣಿಗೆ, ಗೂಳಿ ಓಟದ ಸ್ಪರ್ಧೆ, ಗೂಳಿ ಕಾಳಗ ಮುಂತಾದವುಗಳು ನಡೆಯುತ್ತವೆ.

ಎಗ್‌ಮೋರ್ಟೆಯಲ್ಲಿ ಈಗ ಸಾಕಷ್ಟು ದ್ರಾಕ್ಷಿ ತೋಟಗಳಿವೆ. ವೈನ್‌ ಉತತ್ಪಾದನೆ ಅಲ್ಲಿನ  ಪ್ರಮುಖ ವೃತ್ತಿಯಾಗಿದೆ. ಎಗ್‌ಮೋರ್ಟೆಯ ಆಸ್ಪರಗಸ್‌ ಬಹಳ ಪ್ರಖ್ಯಾತವಾದುದು. ಇದೊಂದು ಬಗೆಯ ಸಸ್ಯ. ಬೇಯಿಸಿದಾಗ ಬಹಳ ರುಚಿಕರವಾಗಿರುವ ಆಸ್ಪರಗಸ್‌ ಪೌಷ್ಟಿಕಾಂಶಗಳ ಕಣಜ ಎಂದು ಕರೆಯಲ್ಪಡುತ್ತದೆ. ಸಲೇನ್‌ ದ್ಯುಮಿದಿ ಎಂಬ ಉಪ್ಪಿನ ಕಾರ್ಖಾನೆಯೊಂದು ಇಲ್ಲಿದೆ. ಕುದುರೆ ಸಾಕಣೆ ಇಲ್ಲಿನ ಜನರ ಪ್ರಮುಖ ವೃತ್ತಿಗಳಲ್ಲಿ ಒಂದು. ಬೇಸಿಗೆ ಬಂತೆಂದರೆ ಸಮುದ್ರದತ್ತ ಧಾವಿಸುವ ಯುರೋಪಿಯನ್ನರಿಂದಾಗಿ ಇಲ್ಲಿ ಕುದುರೆ ಸಾಕಣೆ ಒಂದು ಲಾಭಕರ ಉದ್ಯಮವಾಗಿಬಿಟ್ಟಿದೆ. ಎಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ಜೀವಕಳೆ ತುಂಬಿ ತುಳುಕುವ ಎಗ್‌ ಮೋರ್ಟೆಯಲ್ಲಿ ಸಾಹಸಕ್ಕೆ ಆಸ್ಪದವಿದೆ. ಸೌಂದರ್ಯ ನಿಸರ್ಗದತ್ತವಾಗಿದೆ. ಮನೋರಂಜನೆಗೆ ಬೇಕಾದುದೆಲ್ಲವೂ ಯಥೇಚ್ಛವಾಗಿ ದೊರೆಯುತ್ತವೆ.

ಉಪ್ಪಿನ ಎವರೆಸ್ಟು : ಗೋಕರ್ಣದ ಬಳಿಯ ತದಡಿಯ ವಿಶಾಲ ಗದ್ದೆಗಳಲ್ಲಿ ಉಪ್ಪು ಮಾಡುವುದನ್ನು ನಾನು ನೋಡಿದ್ದೆ. ಆಗ ಉಪ್ಪಿನ ಪರ್ವತವೊಂದರ ಕಲ್ಪನೆ ನನಗಿರಲಿಲ್ಲ. ಎಗ್‌ ಮೋರ್ಟೆಯ ಸಲೇನ್‌ ದ್ಯುಮಿದಿ ಉಪ್ಪಿನ ಕಾರ್ಖಾನೆಗೆ ಭೇಟಿ ಕೊಡುವಾಗ, ಉಪ್ಪಿನ ಎವರೆಸ್ಟೊಂದನ್ನು ನಾವು ಕಂಡೆವು. ಐನೂರು ಮೀಟರು ಉದ್ದದ ಮತ್ತು ಐವತ್ತು ಮೀಟರ್‌ ಎತ್ತರದ ಈ ಉಪ್ಪಿನ ರಾಶಿಯ ಅಗಾಧತೆ, ಅದರ ಮೇಲೇರಿ ಉಪ್ಪನ್ನು ಸೆಲ್ಫ್‌ಲೋಡ್‌ ಮಾಡಿಕೊಳ್ಳುವ ಲಾರಿಗಳ ಚಾಕಚಕ್ಯತೆ, ನಮ್ಮನ್ನು ದುಂಗುಬಡಿಸಿದ್ದವು.

ಸಲೇನ್‌ ದ್ಯುಮಿದಿ ಉಪ್ಪಿನ ಕಾರ್ಖಾನೆಯನ್ನು ಜಿಪ್‌ಲಾಕ್‌ ಸಂಸ್ಥೆ ನಿಯಂತ್ರಿಸುತ್ತದೆ. ಎಗ್‌ಮೋರ್ಟ್‌ ವಾಸ್ತವಿಕವಾಗಿ ಸಮುದ್ರ ಹಿಂದೆ ಹೋದುದರಿಂದ ನಿರ್ಮಾಣವಾದ ಭೂಮಿ. ಅದರ ಒಟ್ಟು ವಿಸ್ತೀರ್ಣ ಹದಿನೇಳು ಸಾವಿರ ಹೆಕ್ಟೇರುಗಳು. ಏಳು ಸಾವಿರ ಹೆಕ್ಟೇರು ಭೂಮಿಯಲ್ಲಿ ಜನರು ದ್ರಾಕ್ಷಿ ಬೆಳೆಸುತ್ತಾರೆ. ಹತ್ತು ಸಾವಿರ ಹೆಕ್ಟೇರು ಭೂಮಿ ಕಂಪೆನಿಯ ಸುಪರ್ದಿಯಲ್ಲಿದೆ. ಕಂಪೆನಿ ಹೊಂದಿರುವ ಭೂಮಿಯ ವ್ಯಾಪ್ತಿ, ಉತ್ತರ ದಿಂದ ದಕ್ಷಿಣಕ್ಕೆ 14 ಕಿಲೋ ಮೀಟರುಗಳು ಎಂದರೆ ಅದರ ಅಗಾಧತೆಯ ಕಲ್ಪನೆ ಯಾರಿಗೂ ಆದೀತು. ವರ್ಷಕ್ಕೆ ಐದು ಕೋಟಿ ಟನ್ನು ಉಪ್ಪು ಇಲ್ಲಿ ಉತ್ಪಾದನೆಯಾಗುತ್ತದೆ. ಇಲ್ಲಿನ ಉಪ್ಪಿಗೆ ಫ್ರಾನ್ಸಿನಲ್ಲಿ ಮಾತ್ರವಲ್ಲದೆ ಬೆಲ್ಜಿಯಂ ಮತ್ತು ಇಟೆಲಿಗಳಲ್ಲೂ ಬೇಡಿಕೆಯಿದೆ.

ಎಗ್‌ಮೋರ್ಟೆಯ ಉಪ್ಪಿನ ಗದ್ದೆಗಳಲ್ಲಿ ಅಲ್ಲಲ್ಲಿ ಕಾಣಸಿಗುವ ಫ್ಲೆಮೆಂಟ್‌ ಹಕ್ಕಿಗಳದ್ದೇ ಒಂದು ಸೊಬಗು. ಹಕ್ಕಿಗಳಿರುವುದು ತಿಂದು ತೇಗುವುದಕ್ಕಲ್ಲ, ಎನ್ನುವುದನ್ನು ಬಲ್ಲ ಇಲ್ಲಿನ ಜನ ಅವನ್ನು ಬೇಟೆಯಾಡುವುದಿಲ್ಲ. ಅವುಗಳ ಬಗ್ಗೆ ಅಪಾರ ಪ್ರೀತಿ ಬೆಳೆಸಿಕೊಂಡಿರುವ ಜನರು, ಊರ ಪ್ರವೇಶದ್ವಾರದಲ್ಲಿ, ಫ್ಲೆಮೆಂಟ್‌ ಹಕ್ಕಿಯ ದೈತ್ಯಾಕಾರದ ವಿಗ್ರವೊಂದನ್ನು ಕಡೆದಿರಿಸಿದ್ದಾರೆ. ನೀರಲ್ಲಿ ಆಹಾರ ಹುಡುಕುವ ಫ್ಲೆಮೆಂಟು ಹಕ್ಕಿಗಳು, ಶಿಸ್ತಿನ ಸಿರ್ಪಾಯಿಗಳಂತೆ ಸಾಲಾಗಿ ಸಂಚರಿಸುತ್ತವೆ. ಸುಂದರ ಗುಲಾಬಿ ವರ್ಣದದೇಹ, ಗುಲಾಬಿ ಮಿಶ್ರಿತ ಬಿಳಿ ಬಣ್ಣದ ರೆಕ್ಕೆಗಳ ಫ್ಲೆಮೆಂಟ್‌ ಹಕ್ಕಿಗಳು, ಆಕಾಶದಲ್ಲಿ ಸಾಲುಗಟ್ಟಿ ಹಾರುವಾಗ ಬಾನಿಗೊಂದು ಗುಲಾಬಿಹೂವಿನ ಸುಂದರ ಮಾಲೆ ತೊಡಿಸಿದಂತೆ ಕಾಣಿಸುತ್ತದೆ.

ಯುಕಾ ಎಂಬ ಜಪಾನೀ ಹೆಣ್ಣು : ಎಗ್‌ ಮೋರ್ಟ್‌ ಕೋಟೆ ಸುತ್ತಿದಂದು ನಮ್ಮ ಜತೆಗೆ ಜಪಾನೀ ಹೆಣ್ಣೊಬ್ಬಳಿದ್ದಳು. ಸುಮಾರು ಇಪ್ಪತ್ತಮೂರರ ಹರೆಯದ ಆಕೆಯ ಹೆಸರು ಯುಕಾ. ಫ್ರೆಂಚ್‌ ಸಿನಿಮಾಗಳ ಬಗ್ಗೆ ವಿಶೇಷ ಅಧ್ಯಯನಕ್ಕೆಂದು ವಿದ್ಯಾರ್ಥಿ ವೇತನವೊಂದನ್ನು ಪಡೆದುಕೊಂಡು ಆಕೆ ಬಂದಿದ್ದಳು. ಜರ್ಪಾನ್‌ನಲ್ಲಿ ಪದವಿ ಮುಗಿಸಿರುವ ಆಕೆ, ಜರ್ಪಾನ್‌ ವಿಶ್ವವಿದ್ಯಾಲಯದಲ್ಲಿರುವ ಓರ್ವ ಅಮೇರಿಕನ್‌ ಪ್ರೊಫೆಸರ್‌ನನ್ನು ಮುಂದಿನ ವರ್ಷ ಮದುವೆಯಾಗಲಿದ್ದಾಳೆ. ಇಬ್ಬರಿಗೂ ಅಮೇರಿಕಾದಲ್ಲೇ ಕೆಲಸ ಸಿಗಲಿದೆಯಂತೆ. ಅಲ್ಲೇ ಶಾಶ್ವತವಾಗಿ ನೆಲೆನಿಲ್ಲುವ ಯೋಚನೆ ಆಕೆಯದು.
ಮಾಂಪಿಲಿಯೇದಲ್ಲಿ ಎರಡು ದಿನ ಆಕೆ ನಮ್ಮ ಜತೆಗಿದ್ದಳು. ಅವಳಿಗೆ ತಕ್ಕ ಮಟ್ಟಿಗೆ ಫ್ರೆಂಚ್‌ ಬರುತ್ತಿತ್ತು. ನಮ್ಮನ್ನು ಕಂಡಾಗ ಥೇಟ್‌ ಫ್ರೆಂಚಳಂತೆ ಕೆನ್ನೆಗೆ ಮುತ್ತು ಕೊಟ್ಟು ಬಿಡುವಷ್ಟು ಆಕೆ ಬದಲಾಗಿದ್ದಳು. ಕುಳ್ಳಿ ಯುಕಾ, ನಮ್ಮ ತಂಡದ ಕುಳ್ಳ ಗುರುವಿಗೆ ತಕ್ಕ ಜೋಡಿ. ಅವರಿಬ್ಬರೂ ಅದೇನನ್ನೋ ಚರ್ಚಿಸುತ್ತಿದ್ದಾಗ ಎಲೈನ್‌ ಈ ಭಲೇಜೋಡಿಯ ಫೋಟೋ ಹೊಡೆದಳು. ಆಗ ಯುಕಾ ಸರಿಯಾಗಿ ನಿಂತು ಗುರುವನ್ನು ಒಂದು ಕೈಯಿಂದ ಬಳಸಿ ‘ಈಗ ಫೋಟೋ ತೆಗೆಯಿರಿ’ ಎಂದು ನಮಗೆಲ್ಲರಿಗೂ ಸವಾಲೆಸೆದುಬಿಟ್ಟಳು.

ಫ್ರಾನ್ಸಿಗೆ ಬಂದ ಹೊಸದರಲ್ಲಿ ಆಕೆಗೆ ತುಂಬಾ ಕಷ್ಟವಾಗುತ್ತಿತ್ತಂತೆ. ಅವಳ ದೇಶದಲ್ಲಿ ರಾತ್ರೆ 10 ಗಂಟೆಯಾದಾಗ ಫ್ರಾನ್ಸಿನಲ್ಲಿ ಅಪರಾಹ್ನದ 1 ಗಂಟೆ!’ ಈ ಸಮಯದ ಹೊಂದಾಣಿಕೆಯೇ  ಬಲುದೊಡ್ಡ ತೊಂದರೆ. ಆಹಾರ ಪದಾರ್ಥಗಳಾದರೆ ಹೇಗೋ ಹೊಂದಿಕೊಂಡು ಹೋಗಬಹುದು. ನಾನು ಗಮನಿಸಿದ ಹಾಗೆ ಫ್ರೆಂಚರು ಒಳ್ಳೆಯವರು. ನೇರ ನಡೆ  ನುಡಿಯವರು. ನನಗಿಲ್ಲಿ ಯಾವ ತೊಂದರೆಯೂ ಆಗುತ್ತಿಲ್ಲ’ ಎಂದಳು.

ನಾವು ಮಾಂಪಿಲಿಯೇ ಬಿಡುವ ಹೊತ್ತಿಗೆ ಯುಕಾ ಹಾಜರಿದ್ದಳು. ‘ನನ್ನ ಮದುವೆ ಟೋಕ್ಯಯೋದಲ್ಲಾಗುತ್ತದೆ. ನೀವೆಲ್ಲಾ ಬರಬೇಕು’ ಎಂದು ಆಮಂತ್ರಣ ನೀಡಿದಾಗ ಅನಿತಾ ‘ನೀನು ವಿಮಾನದ ಟಿಕೆಟ್ಟು ಕಳುಹಿಸಿಕೊಟ್ಟರೆ ಖಂಡಿತಾ ಬರುತ್ತೇವೆ!’ ಎಂದು ಧಾರಾಳವಾಗಿ ಭರವಸೆ ನೀಡಿದಳು. ಎರಡು ದಿನ ನಮ್ಮೊಟ್ಟಿಗೆ ಲವಲವಿಕೆಯಿಂದಿದ್ದ ಯುಕಾ ನಾವು ಹೊರಡುವಾಗ ಮಂಕಾಗಿದ್ದಳು. ಕಾರಣ ಕೇಳಿದ್ದಕ್ಕೆ ‘ನಾವು ಜಪಾನೀಯರು ಭಾರತದವರನ್ನು ಪ್ರೀತಿಸುತ್ತೇವೆ. ಪಾಶ್ಚಾತ್ಯರು ಪೌರ್ವಾತ್ಯರಾಗಲು ಸಾಧ್ಯವೇ ಇಲ್ಲ ಅಲ್ವಾ?’ ಎಂದಳು.  ‘ಹೀಗೆ ಹೇಳುವ ನೀನು ಅದು ಹೇಗೆ ಅಮೇರಿಕನ್ನನನ್ನು ಮದುವೆಯಾಗುತ್ತಿರುವೆ?’ ಎಂಬ ಗುರುವಿನ ಪ್ರಶ್ನೆಗೆ ಎಲ್ಲರೂ ನಕ್ಕರು. ಆಗ ಹೆಬ್ಬಾರರು ಯುಕಾಳ ಸಹಾಯಕ್ಷ್ಕೆ ಬಂದು ‘ಮದುವೆಗಳು ಸ್ವರ್ಗದಲ್ಲಿ ನಡೆದಿರುತ್ತವೆ’ ಎಂದರು.

ಟಿ.ವಿ.ಯಲ್ಲಿ ನಾವು ! : ಎಪ್ರಿಲ್‌ 20ರಂದು ಮಾಂಪಿಲಿಯೇದಲ್ಲಿ ನಮಗೊಂದು ವಿಶಿಷ್ಟ ಅನುಭವವಾಯ್ತು. ನಾವು ಅಧ್ಯಕ್ಷ್ಷ್ಷ ವಿಲ್ಲೋಟ್‌ ಜತೆ ಮಾಂಪಿಲಿಯೇ ಸುತ್ತುತ್ತಿದ್ದಾಗ ನಮಗೊಬ್ಬ ಕೌದಿ ಹೊಲಿಯುವವ ಕಾಣಸಿಕ್ಕಿದ. ಅವನನ್ನು ಟಿ.ವಿ.ಯ ಮಂದಿ ಇಂಟರ್‌ವೂಯ  ಮಾಡುತ್ತಿದ್ದರು. ಆಸಕ್ತಿಯಿಂದ ನಾವು ಅವನ ಬಳಿಗೆ ಹೋದೆವು. ಆತನ ಹೆಸರು ಕೊಪ್ರೊವೆರ್‌. ಮೂಲತಃ ಈತ ಕ್ಯಾಸ್ಟ್ರದವ. ಬಟ್ಟೆ ತಯಾರಿಕೆ ಆತನ ಉದ್ಯಮ. ಒಮ್ಮೆ ಕೂತವ ಎಡೆಬಿಡದೆ 75 ಅಡಿ ಉದ್ದದ ಕೌದಿಗೆ ಕಸೂತಿ ಹಾಕಿದ್ದು ಆತನ ದಾಖಲೆ. ಅದಕ್ಕಾಗಿ ಆತನ ಹೆಸರು ಗಿನ್ನಿಸ್‌ ಪುಸ್ತಕದಲ್ಲಿ ದಾಖಲಾಗಿದೆ. ಈಗ 80 ಅಡಿಯ ಕಸೂತಿ ಹಾಕಿ ತನ್ನ ದಾಖಲೆಯನ್ನು ತಾನೇ ಮುರಿಯಲು ಆತ ಹೊರಟಿದ್ದಾನೆ.

ಅವನ ಜತೆಗೆ ಒಂದು ಸುಂದರವಾದ ಬೆಕ್ಕು. ಯಾವಾಗಲೂ ಅವನ ಮೈಮೇಲೇರಿ ಲಲ್ಲೆಗೆರೆಯುವುದೇ ಅದರ ಕೆಲಸ. ಅದನ್ನು ನಾನು ಎತ್ತಿಕೊಂಡೆ. ಅದು ನನ್ನೊಡನೆ ಲಲ್ಲೆಗೆರೆಯಲು ಶುರು ಮಾಡಿತು. ಟಿ.ವಿ.ಯ ಮಂದಿ ನಮ್ಮೆಲ್ಲರನ್ನೂ ಮಾತಾಡಿಸಿದರು. ಅಂದೇ ಸಂಜೆ 6 ಗಂಟೆಗೆ ಸರಿಯಾಗಿ ಚಾನೆಲ್‌ 7ರಲ್ಲಿ ಇದು ಬಿತ್ತರಗೊಳ್ಳುವುದು ಎಂದು ನಮಗೆ ಅವರು ತಿಳಿಸಿದರು. ನಾವು ಈ ವಿಷಯವನ್ನು ವಿಲ್ಲೋಟ್‌ ಮೂಲಕ ಮಾಂಪಿಲಿಯೇದ ಎಲ್ಲಾ ಮಿತ್ರರಿಗೆ ತಿಳಿಸಿದೆವು. ಸಂಜೆ ಆರಕ್ಕೆ ಸರಿಯಾಗಿ ಐದು ಮಿನಿಟುಗಳ ಕಾರ್ಯಕ್ಷ್ರಮದಲ್ಲಿ ಕೊಪ್ರೊವೆರ್‌ ಜತೆ ನಾವೆಲ್ಲಾ ಕಾಣಿಸಿಕೊಂಡು ಟಿ.ವಿ.ಸ್ಟಾರ್‌ಗಳಾಗಿ ಬಿಟ್ಟೆವು. ಹೂವಿನೊಡನೆ ನಾರು!

ನಾವು ಮಾಂಪಿಲಿಯೇದಿಂದ ಹೊರಡುವ ಮುನ್ನಾ ದಿನ ಸೋಶಿಯಲ್‌ ಅಡ್ಮಿನಿಸ್ಟ್ಟ್ರೇಶನ್ನಿಗೆ ಭೇಟಿ ನೀಡಿದೆವು. ಅದು ಸಾಮಾಜಿಕ ಭದ್ರತಾ ಸಂಸ್ಥೆ. ವಿಲ್ಲೋಟ್‌ ಅದರ ನಿರ್ದೇಶಕರಲ್ಲೊಬ್ಬನಾದುದರಿಂದ ವಿಶೇಷ ಮುತುವರ್ಜಿ ವಹಿಸಿ ಆ ಭೇಟಿಯನ್ನು ಏರ್ಪಡಿಸಿದ್ದ. ನಮಗೆ ಇಂಗ್ಲೀಷ್‌ ಬಲ್ಲ ಒಬ್ಬಾಕೆಯಿಂದ ಕಂಪೆನಿಯ ಬಗೆಗಿನ ವಿವರಗಳನ್ನು ಒದಗಿಸಲು ವಿಲ್ಲೋಟ್‌ ವ್ಯವಸ್ಥೆ ಮಾಡಿದ್ದ. ಕೊನೆಗೆ ಭಾರತದ ಇನ್ಶೂರೆನ್ಸ್‌ ಮತ್ತು ಸೋಶಿಯಲ್‌ ಸೆಕ್ಯೂರಿಟಿಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿದಾಗ ನಾನದಕ್ಕೆ ಉತ್ತರಿಸಿದೆ.’ನಮ್ಮಲ್ಲಿ ಲೈಫ್‌ ಮತ್ತು ಜನರಲ್‌ ಇನ್ಶೂರೆನ್ಸ್‌ಗಳಿವೆ. ಆದರೆ ಬೆವರಿಜನ ಮೂಲ ಯೋಜನೆಗಳಾದ ನಿರುದ್ಯೋಗ ಭತ್ಯೆ, ಮೆಟರ್ನಿಟಿ ಸೌಲಭ್ಯ ಮತ್ತು ಪಿಂಚಣಿ ವ್ಯವಸ್ಥೆಗಳಲ್ಲಿ ಆರಂಭದ್ದು ಒಂದಿಲ್ಲ. ಸುಮಾರು ನೂರು ಕೋಟಿ ಜನರಿರುವ ದೇಶದಲ್ಲಿ, ನಿರುದ್ಯೋಗ ಭತ್ಯೆ ನೀಡುವುದು ಈಗಿನ ವ್ಯವಸ್ಥೆಯಲ್ಲಿ ಸಾಧ್ಯವೇ ಇಲ್ಲ.’

ಆ ಕಂಪೆನಿಯ ಭೇಟಿಯ ನೆನಪಿಗಾಗಿ ಪೋಟೋ ಕಾರ್ಯಕ್ರಮ ಇರಿಸಿಕೊಳ್ಳಲಾಗಿತ್ತು. ತೆಗೆದ ತಕ್ಷಣವೇ ಕ್ಯಾಮೆರಾದಿಂದ ಹೊರಬರುವ ಫೋಟೋಗಳ ಪ್ರತಿಯನ್ನು ನಮಗೆಲ್ಲರಿಗೂ ನೀಡಲಾಯಿತು. ಅಂದು ರಾತ್ರೆ ಕ್ರಿಸ್ಟೋಫರನ ಕೋಣೆಯಲ್ಲಿ ನಮಗೆ ರಾತ್ರಿಯೂಟ  ನೀಡುವಾಗ, ನಾವು ಆ ಕಂಪೆನಿಯ ವ್ಯವಸ್ಥೆಯ ಬಗ್ಗೆಯೇ ಹೆಚ್ಚಾಗಿ ಮಾತಾಡಿದ್ದು.

ಮಾಂಪಿಲಿಯೇ ನಮಗೆಲ್ಲರಿಗೂ ತುಂಬಾ ಹಿಡಿಸಿದ ನಗರ. ಭಾರತಕ್ಕೆ ಬಂದಿದ್ದ ಕ್ರಿಸ್ಟೋಫರ್‌, ಮಕ್ಕಳ ಸ್ವಭಾವದ ವಿಲ್ಲೋಟ್‌, ಮಾತೆಯ ಮಮತೆ ತೋರಿದ ಅರ್ಮೆಲ್‌, ಕಮಲಾದೇವಿ ಚಟ್ಟೋರ್ಪಾಧ್ಯಾಯ ಎಂದು ನಾನು ಹೆಸರಿಟ್ಟ ಗಿರಾರ್ಡ್‌, ಜಪಾನಿನ ಹುಡುಗಿ ಯುಕಾ  ನಮ್ಮನ್ನು ಪ್ರೀತಿಯಿಂದ ಬಂಧಿಸಿದ್ದರು. ಹಾಗಾಗಿ ಮಾಂಪಿಲಿಯೇದಿಂದ ಪರ್ಪಿನ್ಯಾಕ್ಕೆ ಹೋಗುವಾಗ ನಮ್ಮೆಲ್ಲರ ಹೃದಯ ಭಾರವಾಗಿತ್ತು.

ಸ್ಪ್ಯಾನಿಷ್‌ ಸಂಸ್ಕೃತಿಯ ಪರ್ಪಿನ್ಯಾ
ಫ್ರಾನ್ಸಿನ ಪೂರ್ವ ಕರಾವಳಿಯಲ್ಲಿ ಸ್ಪೈನಿಗೆ ಅತಿಸಮೀಪದಲ್ಲಿರುವ ದೊಡ್ಡ ಪಟ್ಟಣ ಪರ್ಪಿನ್ಯಾಕ್ಕೆ ಮಾಂಪಿಲಿಯೇದಿಂದ ಮೂರು ಗಂಟೆಗಳ ಪಯಣ. ಮಾಂಪಿಲಿಯೇದಿಂದ ಪರ್ಪಿನ್ಯಾಕ್ಕೆ ನಾಬೋನನ್ನು ಹಾದೇ ಹೋಗಬೇಕು. ಮಾಂಪಿಲಿಯೇದಿಂದ ಸ್ಪೇನಿನ ಬಾರ್ಸಿಲೋನಾಕ್ಕೆ ಹೋಗುವ ಅಂತಾರಾಷ್ಟ್ರೀಯ ಹೆದ್ದಾರಿ ಎ 9 ಪರ್ಪಿನ್ಯಾವನ್ನು ಹಾದು ಹೋಗುತ್ತದೆ. ಈ ಹೆದ್ದಾರಿ ಉತ್ತರ ಯುರೋಪಿನ ಇತರ ರಾಷ್ಟ್ರಗಳೊಡನೆ ಸ್ಪೈನನ್ನು ಜೋಡಿಸುತ್ತದೆ. ಯುರೋಪಿನಲ್ಲಿ ಅಸಾಧ್ಯ ಚಳಿ ಇರುವಾಗ ದಕ್ಷಿಣದ ಸ್ಪೈನ್‌ ಸ್ವಲ್ಪ ಬೆಚ್ಚಗಿರುತ್ತದೆ. ಆಗ ಯುರೋಪಿಯನ್ನರು ಸ್ಪೈನಿಗೆ ಬರುತ್ತಾರೆ. ಮಾರ್ಗ ಮಧ್ಯದಲ್ಲಿ ಮಾಂಪಿಲಿಯೇ ಮತ್ತು ಪರ್ಪಿನ್ಯಾ ಎರಡು ಪ್ರಮುಖ ತಂಗುದಾಣಗಳು. ಆದುದರಿಂದ ಮಾಂಪಿಲಿಯೇ ನಗರಿಯ ಹಾಗೆ, ಪರ್ಪಿನ್ಯಾದ ಅರ್ಥವ್ಯವಸ್ಥೆಯಲ್ಲೂ ಪ್ರವಾಸೋದ್ಯಮ ಪ್ರಮುಖ ಪಾತ್ರ ವಹಿಸುತ್ತದೆ.

ಪರ್ಪಿನ್ಯಾ ಫ್ರಾನ್ಸಿನ ರೌಸಿಲನ್‌ ಪ್ರಾಂತ್ಯದ ಅತಿದೊಡ್ಡ ನಗರ. ಕ್ರಿ.ಶ.13 ಮತ್ತು 14ನೇ ಶತಮಾನಗಳಲ್ಲಿ ಇದು ಮಜೋರ್ಕಾ ಸಾಮ್ಯಾಜ್ಯದ ರಾಜಧಾನಿಯಾಗಿತ್ತು. ಕೇವಲ ಎರಡು ಶತಮಾನ ಮಾತ್ರ ಬಾಳಿದ ಸಾಮ್ಯಾಜ್ಯವದು. ಕ್ರಿ.ಶ.1659ರಲ್ಲಿ ಇದು ಫ್ರಾನ್ಸಿನ ಒಂದು ಭಾಗವಾಯಿತು. ಫ್ರಾನ್ಸಿನಲ್ಲಿದ್ದರೂ ಪರ್ಪಿನ್ಯಾ ಸ್ರ್ಪಾನಿಷ್‌ ಸಂಸ್ಕೃತಿಯನ್ನೇ ಹೆಚ್ಚು ರೂಢಿಸಿಕೊಂಡಿದೆ. ಪರ್ಪಿನ್ಯಾ ಮತ್ತು ಬಾರ್ಸಿಲೋನಗಳಲ್ಲಿರುವುದು ಕ್ಯಾಟಲನ್‌ ಸಂಸ್ಕೃತಿ. ಬಾರ್ಸಿಲೋನಾದ ಬಳಿಕ ಇದುವೇ ಕ್ಯಾಟಲೋನಿಯಾದ ಅತ್ಯಂತ ದೊಡ್ಡ ನಗರ. ಆದುದರಿಂದ ಪರ್ಪಿನ್ಯಾದ ಮಂದಿಗಳು ಪ್ಯಾರಿಸ್ಸಿಗಿಂತ ಬಾರ್ಸಿಲೋನಾವನ್ನು ಹೆಚ್ಚು ಇಷ್ಟಪಡುತ್ತಾರೆ. ಇಲ್ಲಿಯವರು ಫ್ರೆಂಚ್‌ ಮತ್ತು ಸ್ರ್ಪಾನಿಷ್‌ ಭಾಷೆಗಳನ್ನು ನಿರರ್ಗಳವಾಗಿ ಬಳಸಬಲ್ಲವರು.

ಇತಿಹಾಸವನ್ನು ಸಂರಕ್ಷಿಸುವ ಕೆಲಸವನ್ನು ಪರ್ಪಿನ್ಯಾದ ಜನ ಬಹಳ ಆಸ್ಥೆಯಿಂದ ಮಾಡುತ್ತಿದ್ದಾರೆ. ಆ ಪಟ್ಟಣದಲ್ಲಿ ನೋಡಲೇಬೇಕಾದ ಚಾರಿತ್ರಿಕ ಸೌಧಗಳಲ್ಲಿ ಸೇಂಟ್‌ ಜಾನ್ಸ್‌ ಕ್ಯಾಥೆಡ್ರಲ್‌, ಮಜೋರ್ಕಾ ಅರಮನೆ, ಸ್ಯಾಂಚೆ ಕೋಟೆ ಮತ್ತು ಲಾಗ್‌ ಡಿ ಮೆರ್‌ ಎಂಬ ನೌಕಾಯಾನ ಕಾರ್ಯಾಲಯ ಅತ್ಯಂತ ಪ್ರಮುಖವಾದವುಗಳು. ಸೇಂಟ್‌ ಜಾನ್ಸ್‌ ಕ್ಯಾಥೆಡ್ರಲ್ಲು 14ನೇ ಶತಮಾನದಲ್ಲಿ ಕಟ್ಟಲಾದ ಒಂದು ಸಂಕೀರ್ಣ ದೇಗುಲ. ಅದು ಅನೇಕ ಹಳೆಯ ಚರ್ಚುಗಳನ್ನು ಒಳಗೊಂಡಿದ್ದು, ಅವುಗಳ ಪೈಕಿ ಅವರ್‌ ಲೇಡಿ ಓಫ್‌ ರೇವಿನ್‌ ಚರ್ಚು ತುಂಬಾ ಆಕರ್ಷಕವಾಗಿದೆ. ಅದರೊಳಗೆ ಕ್ರಿ.ಶ.11ನೇ ಶತಮಾನದ ಮೇರಿಯ ವಿಗ್ರಹವಿದೆ. ಸೇಂಟ್‌ ಜಾನನ ಕೈಯೊಂದನ್ನು ಸಂರಕ್ಷಿಸಿ ಇಡಲಾಗಿದೆ. ರೊಮೆನೆಸ್ಕ್‌ ಚರ್ಚಿನಲ್ಲಿ ವಿಸಿಗೋಥರ ಕಾಲದ ಪುರಾತನ ಜ್ಞಾನಸ್ನಾನದ ತೊಟ್ಟಿಯಿದೆ. ತೊಟ್ಟಿಯ ಸಮೀಪ ಅಮೃತಶಿಲಾ ಫಲಕದಲ್ಲಿ ‘ಈ ಪವಿತ್ರ ಚಿಲುಮೆಯ ನೀರು ದುಷ್ಟ ಸರ್ಪವು ಬುಸುಗುಟ್ಟುವಂತೆ ಉಸಿರುಗಟ್ಟಿಸುತ್ತದೆ’ ಎಂದು ಬರೆಯಲಾಗಿದೆ. ಕ್ಯಾಥೆಡ್ರಲ್ಲಿನಲ್ಲಿ ಕ್ರಿ.ಶ. 1307ರದ್ದೆಂದು ನಂಬಲಾಗುವ ಏಸುವಿನ ಮರದ ವಿಗ್ರಹವೊಂದಿದೆ. ಒಂದು ಹೇಳಿಕೆಯಂತೆ ಆ ವಿಗ್ರಹದ ತಲೆಯು ಎದೆಯತ್ತ ವಾಲುತ್ತಿದೆ. ವಿಗ್ರಹದ ಗಲ್ಲವು ಎದೆಗೆ ತಾಗಿದಂದು ಈ ವಿಶ್ವದ ಅಂತ್ಯವಾಗಲಿದೆ!

ಪರ್ಪಿನ್ಯಾದಲ್ಲಿರುವ ಮಜೋರ್ಕಾ ಮಹಾರಾಜನ ಅರಮನೆಯು ಕ್ಯಟಲೋನಿಯನ್‌ ವಾಸ್ತುಶಿಲ್ಪದ ವೈಭವಕ್ಕೆ ಸಾಕ್ಷಿಯಾಗಿದೆ. ಕ್ರಿ.ಶ.1276ರಲ್ಲಿ ಎರಡನೇ ಜೇಮ್ಮನಿಂದ ಕಟ್ಟಲ್ಪಟ್ಟ ಅರಮನೆಯದು. ಅದರೊಳಗೆ ಸೇಂಟ್‌ ಮ್ಯಾಗ್ದಲಿನ್ನಳ ಮತ್ತು ಪವಿತ್ರಶಿಲುಬೆಯ ದೇಗುಲಗಳಿವೆ. ಅರಮನೆಯ ಒಂದನೇ ಅಂತಸ್ತಿನ ದಕ್ಷಿಣ ಭಾಗದಲ್ಲಿ ರಾಜನ ಕೊಠಡಿಯಿದೆ. ಉತ್ತರ ಭಾಗದಲ್ಲಿ ರಾಣೀವಾಸವಿದೆ. ಅರಮನೆಯ ಹೊರಗಡೆ ಐದನೇ ಚಾರ್ಲ್ಸ್‌‌ ಚಕ್ರವರ್ತಿ ಕಟ್ಟಿದ ಬೃಹತ್‌ ಗೋಡೆಯಿದೆ. ಕಾವಲು ಗೋಪುರಗಳು, ಬೃಹತ್‌ ಗೋಡೆಗಳು, ಮಹಾದ್ವಾರಗಳು ಮತ್ತು ತಳರ್ಪಾಯ ಆ ಅರಮನೆಗೆ ಒಂದು ಮಿಲಿಟರಿ ಸಂಕೀರ್ಣದ ಸ್ವರೂಪವನ್ನು ನೀಡಿವೆ. ಅರಮನೆಗೆ ನೀರು ಪೂರೈಕೆ ಮಾಡುತ್ತಿದ್ದ ಸೇಂಟ್‌ ಫ್ಲೋರಿನ್ಸ್‌ ಬಾವಿ 130 ಅಡಿ ಆಳವಿದೆ.

ಮಜೋರ್ಕಾ ಮನೆತನದ ಎರಡನೇ ಮಹಾರಾಜ ಸ್ಯಾಂಚೆ, ಕ್ರಿ.ಶ. 1368ರಲ್ಲಿ ಕಟ್ಟಿಸಿದ ಎತ್ತರದ ದುರ್ಗ ಒಂದು ಕಾಲದಲ್ಲಿ ಭಯಾನಕ ಕಾರಾಗೃಹವಾಗಿತ್ತು. ಈಗ ಅದೊಂದು ವಸ್ತುಸಂಗ್ರಹಾಲಯವಾಗಿದ್ದು, ಅದಕ್ಕೆ ಕ್ಯಾಟಲ್‌ ಮ್ಯೂಸಿಯಂ ಆಫ್‌ ಪಾಪ್ಯುಲರ್‌ ಆರ್ಟ್ಸ್ ಏಂಡ್‌ ಸೈನ್ಸ್‌ ಎಂಬ ಹೆಸರಿಡಲಾಗಿದೆ. ನಗರ ಮಧ್ಯದ ನೌಕಾಯಾನ ಕಾರ್ಯಾಲಯ (Loge de mer) ಕ್ರಿ.ಶ.1397ರಲ್ಲಿ ನಿರ್ಮಾಣವಾದುದು. ಕ್ರಿ.ಶ.16ನೆಯ ಶತಮಾನದಲ್ಲಿ ವಿಸ್ತೃತಗೊಂಡ ಈ ಕಾರ್ಯಾಲಯ, ಹಿಸ್ರ್ಪಾನೋ  ಮೂರಿಷ್‌ ವಾಸ್ತುವಿಗೊಂದು ಅದ್ಭುತ ನಿದರ್ಶನವೆನಿಸಿದೆ. ಅದರ ಸಮೀಪದಲ್ಲಿ ಡೆಪ್ಯುಟೇಶನ್‌ ಅರಮನೆ ಮತ್ತು ಟೌನ್‌ಹಾಲ್‌ ಇವೆ. ಟೌನ್‌ಹಾಲಿನ ಪ್ರವೇಶದ್ವಾರದ ಬಳಿ ಶಿಲ್ಪಿ ಅರಿಸ್ಟೈಡ್‌ ಮೈಲೋಲ್‌ ನಿರ್ಮಿಸಿದ ನಗ್ನ ಸುಂದರಿಯೊಬ್ಬಳ ಕಂಚಿನ ವಿಗ್ರಹವಿದೆ. ಗಹನವಾಗಿ ಯೋಚಿಸುವ ಭಂಗಿಯಲ್ಲಿರುವ ಆ ವಿಗ್ರಹದ ಹೆಸರು ಥಾಟ್‌! ಮಜೋರ್ಕಾ ಅರಮನೆಯ ಪದತಲದಲ್ಲಿ ಕ್ರಿ.ಶ.13 ಮತ್ತು 14ನೇ ಶತಮಾನಗಳಿಗೆ ಸೇರಿದ ಅನೇಕ ಸೌಧಗಳಿವೆ. ರಿಯಲ್‌ ಚರ್ಚು, ಸೇಂಟ್‌ ಜೇವುಸ್‌ ಚರ್ಚು, ಕಾಮೈಲೈಟ್‌ ಚರ್ಚು, ಬ್ಲಾ್ಯಕ್ಷ್‌ ಮೊನಾಸ್ಟ್ರಿ  ಇತ್ಯಾದಿಗಳು ಅವುಗಳಲ್ಲಿ ಉಲ್ಲೇಖಾರ್ಹವಾದವುಗಳು. ರಿನೈಸೆನ್ಸ್‌ ಕಾಲದಲ್ಲಿ ನಿರ್ಮಾಣಗೊಂಡ ಪರ್ಪಿನ್ಯಾದ ಸುಂದರ ಸೌಧಗಳು, ಪಟ್ಟಣಕ್ಕೆ ವಿಶೇಷ ಶೋಭೆಯನ್ನು ನೀಡಿವೆ. ಹಳೇ ಪರ್ಪಿನ್ಯಾದ ಇಕ್ಕಟ್ಟಾದ ಬೀದಿಗಳಲ್ಲಿ, ಸೂರ್ಯನ ಎಳೆಬಿಸಿಲಿಗೆ ತಾರುಣ್ಯದ ತಮ್ಮ ದೇಹಸಿರಿಯನ್ನೊಡ್ಡಿ ಕುಣಿಯುವ, ಹದಿಹರೆಯದ ಬೆಡಗಿಯರು ಪರ್ಪಿನ್ಯಾದ ಚೆಲುವನ್ನು ಇನ್ನಷ್ಟು ಹೆಚ್ಚಿಸುತ್ತಾರೆ.

ಪರ್ಪಿನ್ಯಾ ಕೋಟೆಯಲ್ಲಿ ಈಗಲೂ ಕ್ಯಾಟಲನ್‌ ಧ್ವಜ ಹಾರಾಡುತ್ತಿದೆ. ಹಳದಿ ಬಣ್ಣದ ಕ್ಯಾಟಲನ್‌ ಧ್ವಜದಲ್ಲಿ ನಾಲ್ಕು ಕೆಂಪು ಗೆರೆಗಳಿವೆ. ಅದರ ಬಗ್ಗೆ ನಮ್ಮ ಗೈಡ್‌ ಸಮಿಯಾ ಕತೆಯೊಂದನ್ನು ಹೇಳಿದಳು. ಪರ್ಪಿನ್ಯಾವನ್ನು ಕ್ರಿ.ಶ.8 ರಿಂದ 11ನೇ ಶತಮಾನದವರೆಗೆ ಅರೆಗಾನಿನ ಅರಸರು ಆಳುತ್ತಿದ್ದರು. ಈ ಅವಧಿಯಲ್ಲೊಮ್ಮೆ ಬೇರೊಬ್ಬ ಅರಸ ಪರ್ಪಿನ್ಯಾದ ಮೇಲೆ ದಂಡೆತ್ತಿ ಬಂದ. ಅರೆಗಾನಿನ ಅರಸ ಪ್ರಬಲ ಸೇನೆಯನ್ನು ಸಂಘಟಿಸಬೇಕಾಗಿ ಬಂತು. ಆದರೆ ಬೊಕ್ಕಸದಲ್ಲಿ ಸಾಕಷ್ಟು ಹಣವಿರಲಿಲ್ಲ. ಅದು ಗೊತ್ತಾಗಿ ಪರ್ಪಿನ್ಯಾದ ಸೇನೆಯ ಆತ್ಮಸ್ಥೈರ್ಯ ಉಡುಗತೊಡಗಿತು. ತಕ್ಷಣ ಅರೆಗಾನಿನ ಅರಸ ತನ್ನ ಒರೆಯಿಂದ ಖಡ್ಗವನ್ನು ಸೆಳೆದು, ತನ್ನ ಎಡಗೈಗೆ ಗಾಯಮಾಡಿಕೊಂಡು, ಅದರಲ್ಲಿ ತನ್ನ ಬಲಗೈಯ ನಾಲ್ಕು ಬೆರಳುಗಳನ್ನು ಅದ್ದಿ, ತನ್ನ ಹಳದಿ ಧ್ವಜದ ಮೇಲೆ ಅಡ್ಡಲಾಗಿ ನಾಲ್ಕು ಗೆರೆ ಎಳೆದು ಧೈರ್ಯ ತುಂಬಿದ ಗಟ್ಟಿದನಿಯಲ್ಲಿ ಹೇಳಿದ. ‘ನನ್ನಲ್ಲಿ ಹಣವಿಲ್ಲದಿದ್ದರೇನಂತೆ? ಎಷ್ಟು ಹಣ ಬೇಕಾದರೂ ಗಳಿಸಬಲ್ಲಷ್ಟು ರಕ್ತವಿದೆ!’ ಅರಸನ ಈ ಮಾತುಗಳಿಂದ ಸ್ಫೂರ್ತಿಗೊಂಡ ಸೈನಿಕರು, ಶತ್ರು ಸೈನ್ಯದ ಮೇಲೆ ಮುಗಿಬಿದ್ದು ಕೆಚ್ಚೆದೆಯಿಂದ ಹೋರಾಡಿ, ಅದನ್ನು ಸೋಲಿಸಿ ಓಡಿಸಿಬಿಟ್ಟರು. ಬರಿದಾಗಿದ್ದ ಬೊಕ್ಕಸ ತುಂಬಿತು. ಈ ಅದ್ಭುತ ಘಟನೆಯ ನೆನಪಿಗಾಗಿ ಹಳದಿಧ್ವಜದಲ್ಲಿ ಕೆಂಪು ಗೆರೆ ಉಳಿದುಕೊಂಡಿತು.

ಪರ್ಪಿನ್ಯಾದಲ್ಲಿ ರಾಜರಿದ್ದದ್ದು ನಿಜ. ಆದರೆ ಕ್ರಿ.ಶ.1197ರಲ್ಲಿ ರಾಜರ ನೇರ ಆಡಳಿತಕ್ರಮ ಕೊನೆಗೊಂಡು ಜನರೇ ಆಡಳಿತ ನಡೆಸುವ ಕ್ರಮ ಜಾರಿಗೆ ಬಂದದ್ದೂ ಅಷ್ಟೇ ನಿಜ. ಆ ಬಳಿಕ ಅಂತಿಮವಾಗಿ ತೀರ್ಪು ನೀಡುವ ಅಥವಾ ತೀರ್ಮಾನ ಕೈಗೊಳ್ಳುವ ಕಾರ್ಯದೊಂದಿಗೆ, ಜನರ ಸೊತ್ತು ಮತ್ತು ಪ್ರಾಣರಕ್ಷಣೆಯ ಕೆಲಸಗಳನ್ನು ಮಾಡುವಷ್ಟಕ್ಕೇ ರಾಜನ ಕರ್ತವ್ಯ ಸೀಮಿತವಾಗಿತ್ತು. ಪರ್ಪಿನ್ಯಾದ ಜನರು ಕೌನ್ಸಿಲ್ಲುಗಳನ್ನು ರಚಿಸಿಕೊಂಡು ಸ್ವಯಮಾಡಳಿತ ನಡೆಸುತ್ತಿದ್ದರೂ, ರಾಜರಿಗೆ ನಿಷ್ಠರಾಗಿದ್ದರು. ನಾವು ಪರ್ಪಿನ್ಯಾಕ್ಕೆ ಭೇಟಿ ನೀಡಿದ್ದು 1997ರ ಎಪ್ರಿಲ್‌ 23ರಂದು. ಆಗ ಜನತಂತ್ರ ವ್ಯವಸ್ಥೆ ಅಸ್ತಿತ್ವಕ್ಕೆ ಬಂದ ಎಂಟುನೂರನೇ ವರ್ಷವನ್ನು ಆಚರಿಸುವ ಸಿದ್ಧತೆಯ ಸಂಭ್ರಮದ ಪುಳಕ, ಪರ್ಪಿನ್ಯಾದ ಎಲ್ಲೆಡೆ ಕಂಡು ಬರುತ್ತಿತ್ತು.

ನಮಗೆ ಪರ್ಪಿನ್ಯಾ ದರ್ಶನ ಮಾಡಿಸಿದ ಗೈಡ್‌ ಸಮಿಯಾ, ಸುಮಾರು ನಲ್ವತ್ತರ ಹರೆಯದ ಕುಳ್ಳಿ. ಸ್ಪ್ಯಾನಿಷ್‌ ಮೂಲದ ಈ ಹೆಣ್ಣು, ನಗರದ ಬಗ್ಗೆ ವಿವರಣೆ ನೀಡುವಾಗ ಒಂದು ಮಾತು ಹೇಳಿದಳು. ‘ನಾವೆಲ್ಲಾ ಅಫಿಶಿಯಲ್ಲಾಗಿ ಕ್ಯಾಥಲಿಕ್ಕರು. ಆದರೆ ಸ್ಥಳೀಯ ಕ್ಯಾಟಲನ್‌ ಸಂಸ್ಕೃತಿ ಎಂದರೆ ನಮಗೆ ಇಷ್ಟ. ಯುರೋಪಿನಾದ್ಯಂತ ಕ್ರೈಸ್ತ ಧರ್ಮ ಉಳಿದೆಲ್ಲಾ ಸಂಸ್ಕೃತಿಗಳನ್ನು ಆಪೋಶನ ತೆಗೆದುಕೊಂಡಿದೆ. ಆ ಚಂಡಮಾರುತದೆದುರು ನಿಲ್ಲುವ ತ್ರಾಣ ನಮಗೆ  ಬಂದಿರಲಿಲ್ಲ. ಆದರೆ ಈಗ ನಮಗೆ ಅರ್ಥವಾಗುತ್ತಿದೆ ನಾವು ಕಳೆದುಕೊಂಡದ್ದು ಏನನ್ನು ಎನ್ನುವುದು. ಹಾಗಾಗಿ ಈಗ ಪರ್ಪಿನ್ಯಾದಿಂದ ಬಾರ್ಸಿಲೋನಾದವರೆಗೆ ಕ್ಯಾಟಲನ್‌ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಯತ್ನ ಸಾಗಿದೆ. ಹೋಟೆಲುಗಳಲ್ಲಿ ಕ್ಯಾಟಲನ್‌ ತಿಂಡಿ  ತಿನಿಸುಗಳು ಜನಪ್ರಿಯವಾಗುತ್ತಿವೆ. ಕ್ಯಾಟಲನ್‌ ಮಾದರಿಯ ಟೊಪ್ಪಿಗಳನ್ನು ಧರಿಸಿ ಓಡಾಡುವವರನ್ನು ನೀವು ಇಲ್ಲೆಲ್ಲಾ ಕಾಣುತ್ತೀರಿ.

ಇಲ್ಲಿಪಾಪ್‌ಗಿಂತ ಕ್ಯಾಟಲನ್‌ ಜಾನಪದ ಹಾಡುಗಳಿಗೆ ಹೆಚ್ಚು ಬೇಡಿಕೆ. ಯಾವತ್ತೂ ಆಗ್ನೇಯದ ಫ್ರೆಂಚರಿಗೆ ಪ್ಯಾರಿಸ್ಸ್‌  ರೋಂಗಳಿಗಿಂತ ಬಾರ್ಸಿಲೋನಾ ಹೆಚ್ಚು ಇಷ್ಟ!’

ಆಕೆ ಹೇಳಿದ್ದಕ್ಕೆ ಸಮರ್ಥನೆ ಸಾಕಷ್ಟು ಸಿಕ್ಕಿತು. ಪರ್ಪಿನ್ಯಾದಲ್ಲಿ ಕ್ಯಾಟಲನ್‌ ಟೊಪ್ಪಿ ಇಟ್ಟುಕೊಂಡು ಸಂಭ್ರಮದಿಂದ ಓಡಾಡುವವರು ಬೇಕಾದಷ್ಟು ಕಾಣಸಿಕ್ಕರು. ಮೊದಲಬಾರಿಗೆ ಫ್ರೆಂಚ್‌ ನೆಲದಲ್ಲಿ ನಾವೊಂದು ಬೀದಿ ನಾಟಕವನ್ನು ಕಂಡೆವು. ಅದರಲ್ಲಿ ಒಬ್ಬ ಗಂಡು, ಒಬ್ಬಾಕೆ ಹೆಣ್ಣು  ಇಬ್ಬರೇ ಇಬ್ಬರು ಕಲಾವಿದರು. ಅವರು ಕ್ಯಾಟಲನ್‌ ಭಾಷೆಯಲ್ಲಿ ಸಂಭಾಷಿಸುತ್ತಿದ್ದರು. ಪರ್ಪಿನ್ಯಾದಲ್ಲಿ ನನ್ನ ಅತಿಥೇಯನಾಗಿದ್ದ ಕೃಷಿ ಉದ್ಯಮಿ ಫಿಲಿಪ್‌, ನನಗೆ ಒಂದು ಕ್ಯಾಸೆಟ್ಟು ಉಡುಗೊರೆಯಾಗಿ ನೀಡಿ ಹೇಳಿದ್ದ. ‘ಇದರಲ್ಲಿ ಅತ್ಯುತ್ತಮ ಕ್ಯಾಟಲನ್‌ ಹಾಡುಗಳ ಸಂಗ್ರಹವಿದೆ. ಇದನ್ನು ಹಾಡಿದ್ದು ಅತ್ಯುತ್ತಮ ಕ್ಯಾಟಲನ್‌ ಹಾಡುಗಾರ. ಈ ಹಾಡುಗಳೆಂದರೆ ಪರ್ಪಿನ್ಯಾದವರು ಮತ್ತು ಬಾರ್ಸಿಲೋನಾದವರು ಹುಚ್ಚುಗಟ್ಟುತ್ತಾರೆ. ನೀನಿದನ್ನು ಕೇಳಿದರೆ ಕುಣಿದುಬಿಡುತ್ತಿ.’

ಅದೊಂದು ದುಂಡನೆಯ ಡಿಸ್ಕ್‌. ನನ್ನ ಟೇಪ್‌ರೆಕಾರ್ಡಿಗೆ ಅದು ಸರಿಹೊಂದಲೇ ಇಲ್ಲ. ಬೇರೊಂದೆಡೆ ಒಯ್ದು ಅದರಲ್ಲಿನ ಹಾಡುಗಳನ್ನು ಹೇಗೋ ಕೇಳಿದೆ. ಆದರೆ ಶಬ್ದಗಳೇ ಅರ್ಥವಾಗದಿರುವಾಗ ಬರಿಯ ರಾಗಕ್ಕೆ ಅರ್ಥ ಕಲ್ಪಿಸಲು, ಅಲ್ಪ ಸಂಗೀತಜ್ಞಾನಿಯಾದ ನನ್ನಿಂದ ಸಾಧ್ಯವಾಗಲಿಲ್ಲ.

ಸಮುದ್ರದ ತಡಿಯಲ್ಲಿ ಮನೆಯ ಮಾಡಿ
ಪರ್ಪಿನ್ಯಾದ ದಕ್ಷಿಣಕ್ಕೆ, ಮೆಡಿಟರೇನಿಯನ್‌ ತೀರದುದ್ದಕ್ಕೂ ನಡೆಯುತ್ತಾ ಹೋದರೆ ಸ್ಪೈನ್‌ ಸಿಗುತ್ತದೆ. ಸ್ಪೈನಿಗೆ ಮೊದಲು ಸುಮಾರು ಹತ್ತು ಕಿಲೋಮೀಟರುಗಳ ಅಂತರದಲ್ಲಿ ಕೊಲಿಯೋ (Collioure), ವೆಂದ್ರ್‌ (Vendre), ಮತ್ತು ಸೆರೆಬ್ರೆ (Cerebre) ಎಂಬ ಮೂರು ಸಮುದ್ರ ನಗರಿಗಳು ಸಿಗುತ್ತವೆ. ಅವುಗಳ ನಡುವೆ ಸೌಂದರ್ಯ ಸ್ಪರ್ಧೆ ನಡೆಸಿದರೆ, ಯಾವುದಕ್ಕೆ ಪ್ರಥಮ ಸ್ಥಾನ ಎಂದು ನಿರ್ಣಯಿಸಲು ಎಂತಹ ಸೌಂದರ್ಯ ತಜ್ಞರಿಗೂ ಕಷ್ಟವಾದೀತು. ಅವುಗಳಲ್ಲಿ ಕೊಲಿಯೂರ್‌ ಜಲಕ್ರೀಡೆಗಳಿಗೆ ಪ್ರಸಿದ್ಧ. ವೆಂದ್ರ್‌ ಒಂದು ಪ್ರಖ್ಯಾತ ಬಂದರ, ವ್ಯಾರ್ಪಾರ ಮತ್ತು ಮೀನುಗಾರಿಕಾ ಕೇಂದ್ರ. ಸ್ಪೈನಿನ ಗಡಿಗೆ ಮುತ್ತಿಡುವ ಸೆರೆಬ್ರೆ ವಿಲಾಸಿಗಳಿಗೆ ಒಂದು ಮೋಹಕ ವಿಶ್ರಾಂತಿ ಧಾಮ.

ವೆಂದರನ್ನು ಗುರಿಯಾಗಿರಿಸಿಕೊಂಡು ನಾವು ಎಪ್ರಿಲ್‌ 24ರಂದು ಪರ್ಪಿನ್ಯಾದಿಂದ ಹೊರಟಾಗ, ನಮಗೆ ಮೊದಲು ಎದುರಾದದ್ದು ಅಲ್ಬಿರಸ್‌ ಕ್ಯಾಂಪು. ರಜಾಕಾಲದ ಕ್ಯಾರವಾನ್‌ ಶಿಬಿರವದು. ಆದರೆ ಅಲ್ಲಿ ಕ್ಯಾರವಾನ್‌ಗಳನ್ನೇ ಶಾಶ್ವತ ನೆಲೆಯಾಗಿಸಿಕೊಂಡವರು ಸಾಕಷ್ಟು ಮಂದಿ ಇದ್ದಾರೆ ಎನ್ನುವುದು ವಿಚಿತ್ರವಾದರೂ ನಿಜ. ಕ್ಯಾರವಾನ್‌ಗಳೆಂದರೆ ಗಾಲಿಗಳಿರುವ ವಾಸದ ಮನೆಗಳು. ಇವನ್ನು ವಾಹನವೊಂದಕ್ಕೆಸಿಕ್ಕಿಸಿ ಎಲ್ಲಿಗೆ ಬೇಕಾದರೂ ಒಯ್ಯಬಹುದು. ಅಲ್ಬಿರಸ್‌  ಕ್ಯಾಂಪಿನಲ್ಲಿ ಬೇರೆ ಬೇರೆ ದೇಶಗಳ ಬೇರೆ ಬೇರೆ ಕಂಪೆನಿಗಳಿಗೆ ಸೇರಿದ ಕ್ಯಾರವಾನ್‌ಗಳಿವೆ. ಕ್ಯಾರವಾನ್‌ಗಳ ನಡುವೆ ಅಲ್ಲಲ್ಲಿ ಗಾಲಿಗಳಿಲ್ಲದ ಕಾಟೇಜುಗಳೂ ಕೂಡಾ ಇವೆ. ಮುಂಚಿತವಾಗಿ ತಿಳಿಸಿ ಅವನ್ನು ಯಾರು ಬೇಕಾದರೂ ನಿರ್ದಿಷ್ಟ ಅವಧಿಗೆ ಬಾಡಿಗೆಗೆ ಪಡೆಯಬಹುದು. ಅಲ್ಲಿನ ಕ್ಯಾರವಾನ್‌ಗಳಿಗೆ ವಿದ್ಯುತ್‌ ಮತ್ತು ದೂರವಾಣಿ ಸಂಪರ್ಕಗಳಿವೆ.  ನಾಲ್ಕು ಚಾನೆಲ್‌ನ ಟಿ.ವಿ. ಸಂಪರ್ಕ ವ್ಯವಸ್ಥೆ ಕೂಡಾ ಇದೆ.

ಅಲ್ಬಿರಸ್‌ ಕ್ಯಾಂಪಿನ ರಿಸೆಪ್ಶನ್‌ ಸೆಂಟರ್‌ ಅತ್ಯಾಧುನಿಕವಾಗಿದ್ದು ಎಲ್ಲಾ ಬಗೆಯ ಸಂಪರ್ಕ ವ್ಯವಸ್ಥೆಗಳೂ ಅಲ್ಲಿವೆ. ಇ  ಮೇಲ್‌, ದೂರವಾಣಿ, ಝೆರಾಕ್ಸ್‌, ಫ್ಯಾಕ್ಸ್‌ ಎಲ್ಲವೂ! ಅದರ ಎಡಗಡೆಯಲ್ಲಿ ಸುಸಜ್ಜಿತ ಬಾರ್‌, ಕೆಫೆಟೇರಿಯಾ ಮತ್ತು ಕ್ಲಬ್ಬುಗಳಿವೆ. ಅದರಿಂದಾಚೆಗೆ ವಿಶಾಲವಾದ ಈಜುಕೊಳ. ಅಲ್ಲಿ ಮಕ್ಕಳಿಗೆ ಮತ್ತು ಹಿರಿಯರಿಗೆ ಪ್ರತ್ಯೇಕ ವ್ಯವಸ್ಥೆಗಳಿವೆ. ಮಕ್ಕಳಿಗೆ ನೀರಲ್ಲಿ ಜಾರುಬಂಡಿಯ ಆಟ ಆಡಲು ಅನುಕೂಲ ಕಲ್ಪಿಸಲಾಗಿದೆ. ಎತ್ತರದ ಪ್ರದೇಶದಿಂದ ಟ್ಯೂಬಿನೊಳಗೆ ಜಾರಿ ನೀರಿಗೆ ಬೀಳುವ ಮಕ್ಕಳ ಮೋಜನ್ನು ಅಲ್ಲಿ ನೋಡಬೇಕು! ಈಜು ಕೊಳದಲ್ಲಿ ಅಲ್ಲಲ್ಲಿ ಬಂಡೆಕಲ್ಲುಗಳಿದ್ದು ಅದೊಂದು ಸ್ವಾಭಾವಿಕ ಸರೋವರ ಎಂಬ ಭ್ರಮೆಯನ್ನು ಮೂಡಿಸಲಾಗಿದೆ. ನಾವು ಕ್ಯಾಂಪು ಸುತ್ತಿ ಬರುವಾಗ ಕ್ಯಾಂಪಿನ ಯಜಮಾನರಿಗೆ ರಿಸೆಪ್ಶನಿಸ್ಟ್‌, ಭಾರತೀಯರು ಬಂದಿರುವ ವಾರ್ತೆ ತಿಳಿಸಿದಳು. ಕಾಲಚಿ ಎಂಬ ಕುಟುಂಬದ ಸ್ವಾಮ್ಮಕ್ಕೆ ಒಳಪಟ್ಟ ಕ್ಯಾಂಪದು. ನಾವು ಹೊರಡಲಿಕ್ಕಾಗುವಾಗ ರಿಸೆಪ್ಶನಿಸ್ಟ್‌ ಕಾಲಚಿ ಕುಟುಂಬದ ಪರವಾಗಿ ನಮಗೊಂದೊಂದು ಬಾಟಲಿ ವೈನ್‌ ಉಡುಗೊರೆಯಾಗಿ ನೀಡಿದಳು. ಅದನ್ನು ಪರ್ಪಿನ್ಯಾದ ನನ್ನ ಅತಿಥೇಯ ಫಿಲಿಪ್ಪನಿಗೆ ಅದು ಸಂಜೆ ನಾನು ಉಡುಗೊರೆ ಯಾಗಿ ನೀಡಿದಾಗ ಗುಂಡುಪ್ರಿಯ ಫಿಲಿಪ್ಪನ ಮುಖಾರವಿಂದ ಅರಳಿದ್ದನ್ನು ನೋಡಬೇಕಿತ್ತು!

ಅಲ್ಬಿರಸ್‌ ಕ್ಯಾಂಪಿನ ಬಳಿಕ ನಮಗೆ ಎದುರಾದದ್ದು ಕಡಿದಾದ ಅಲ್ಬಿರಸ್‌ ಗುಡ್ಡಗಳು. ಗುಡ್ಡಗಳ ಇಳಿಜಾರಿನಲ್ಲೆಲ್ಲಾ ತಟ್ಟುಗಳನ್ನು ನಿರ್ಮಿಸಿ ದ್ರಾಕ್ಷಿ ತೋಟ ಮಾಡಿದ್ದಾರೆ. ಅವನ್ನು ನೋಡುವಾಗ ಕಳಸ  ಸಂಸೆಗಳ ಚಾ ತೋಟಗಳ ನೆನರ್ಪಾಗುತ್ತದೆ. ಅಲ್ಬಿರಸ್‌ ಗುಡ್ಡ ಸಾಲುಗಳ ತುತ್ತ ತುದಿಯಲ್ಲಿ ಕೆಲವೆಡೆ ಕಾವಲು ಗೋಪುರಗಳಿವೆ. ಈಗ ಅವು ಇತಿಹಾಸವನ್ನಷ್ಟೇ ನೆನಪಿಸುತ್ತವೆ.

ಅಲ್ಬಿರಸ್‌ ಗುಡ್ಡ ಬಳಸಿ ಮೆಡಿಟರೇನಿಯನ್‌ ಕಡೆಗಿಳಿದಾಗ ಸಿಗುವುದು ಕೊಲಿಯೋ ರೇವುಪಟ್ಟಣ. ಕೊಲಿಯೋ ಎಡಗಡೆ ಮೆಡಿಟರೇನಿಯನ್‌ ಸಮುದ್ರ. ಬಲಗಡೆಯಲ್ಲಿ ಬೆನಿಯೂಲ್ಸಿನ ದ್ರಾಕ್ಷಿ ತೋಟಗಳು. ಹಾಗಾಗಿ ‘ಕೊಲಿಯೋನ ಜನರ ಒಂದು ಕಾಲು ಸಮುದ್ರದಲ್ಲಿ, ಇನ್ನೊಂದು ಕಾಲು ದ್ರಾಕ್ಷಿ ತೋಟದಲ್ಲಿ’ ಎಂಬ ಮಾತು ಇಲ್ಲಿ ಜನಜನಿತವಾಗಿದೆ. ಕೊಲಿಯೋವನ್ನು ಪ್ರಖ್ಯಾತ ಚಿತ್ರಕಲಾವಿದರಾದ ಪಿಕಾಸೋ ಮತ್ತು ಮಾಟಿಸ್‌ ತುಂಬಾ ಮೆಚ್ಚಿಕೊಂಡಿದ್ದರು. ಅವರ ಅನೇಕ ಕಲಾಕೃತಿಗಳ ಜನ್ಮಭೂಮಿ ಈ ಕೊಲಿಯೂರು. ಕೊಲಿಯೋನಿಂದ ಕಾಣುವ ಸೇಂಟ್‌ ವಿನ್ಸೆಂಟ್‌ ದ್ವೀಪದ ಮತ್ತು ಕ್ರಿ.ಶ. 17ನೇ ಶತಮಾನದ ಚರ್ಚು ಇರುವ ಸಮುದ್ರ ಕಿನಾರೆಯ ಸೌಂದರ್ಯ ಅನುಪಮವಾದುದು. ಇಲ್ಲಿನ ಹನ್ನೆರಡನೇ ಶತಮಾನದ ನೈಟ್‌ಗಳ ಕೋಟೆಯನ್ನು ಮಜೋರ್ಕಾ ಅರಸರು ಬೇಸಿಗೆಯ ಅರಮನೆಯನ್ನಾಗಿ ಪರಿರ್ತಿಸಿದ್ದರು.

ಕೊಲಿಯೋನಿಂದ ನಡೆಯುತ್ತಾ ಹೋದರೆ ಒಳಪ್ರದೇಶದಲ್ಲಿರುವ ಅವರ್‌ ಲೇಡಿ ಓಫ್‌ ಕನ್ಸೋಲೇಶನ್‌ ಎಂಬ ದೇವಾಲಯ ಸಿಗುತ್ತದೆ. ಮತ್ತೂ ಮುಂದುವರಿದರೆ ಮೆಡೆಲೋಕ್‌ ಕಾವಲು ಗೋಪುರ ಸಿಗುತ್ತದೆ. ಸಮುದ್ರ ಕಳ್ಳರ ಬಗ್ಗೆ ನಿಗಾ ಇಡಲು ಕಟ್ಟಲಾದ ಗೋಪುರವಿದು. ಅದರ ತುದಿಯಿಂದ ಕೊರಕಲುಗಳು ಮತ್ತು ಭೂಶಿರಗಳು, ನೀಲಿ ಮೆಡಿಟರೇನಿಯನ್ನಿನ ನೀಳವಾದ ಸೀಳುಗಳ ಹಾಗೆ ಕಾಣುತ್ತವೆ. ಇವನ್ನು ನೋಡಿದ ಕಲಾವಿದನ ಕುಂಚ ಸುಮ್ಮನಿರಲು ಸಾಧ್ಯವೇ ಇಲ್ಲ.

ಪರಮಾತ್ಮ ಆಡಿಸಿದಂತೆ :  ಕೊಲಿಯೋನಲ್ಲಿರುವ ಬೆನಿಯೂಲ್ಸಿನ ವೈನ್‌ ಬೆಳೆಗಾರರ ಸಂಘಕ್ಕೆ ನಮ್ಮ ಭೇಟಿ ಅವಿಸ್ಮರಣೀಯವಾದುದು. ಒಂದು ಸಾವಿರ ಮಂದಿ ಸದಸ್ಯರ ದೊಡ್ಡ ಸಹಕಾರೀ ಸಂಘವದು. ಸಂಘ ವೈನ್‌ ಉತ್ಪಾದನೆ ಮತ್ತು ವಿತರಣೆಯ ಕಾರ್ಯವನ್ನು ನಿಭಾಯಿಸುತ್ತದೆ. ಅಲ್ಲಿ ಅತ್ಯಾಧುನಿಕ ಇಟೆಲಿ ನಿರ್ಮಿತ ಬೃಹತ್‌ ಯಂತ್ರಗಳು, ಅವುಗಳ ಕಿವಿಗಡಚಿಕ್ಕುವ ಶಬ್ದ, ಸದಾ ಬೆಳಕನ್ನು ಚಿಮ್ಮಮಿಸುವ ಹಸಿರು  ಕೆಂಪು ದೀಪಗಳು, ಭಯಾನಕ ವಾತಾವರಣವೊಂದನ್ನು ನಿರ್ಮಿಸುತ್ತವೆ. ಸ್ವಯಂಚಾಲೀ ಯಂತ್ರಗಳಲ್ಲಿ ಹಾದು ಬರುವ ಒಗರು ರಸವನ್ನು ಬಾಟಲಿಗೆ ತುಂಬಿ, ಬಿರಡೆ ಬಿಗಿಯುವುದು ಕೂಡಾ ಯಂತ್ರಗಳೇ. ರಸ ತುಂಬಿದ ಬಾಟಲಿಗಳನ್ನು ದೊಡ್ಡ ಡೋಲಕದಂತಹ ಪೀರ್ಪಾಯಿಗಳಲ್ಲಿ ತುಂಬಿಸಿ ಇಡಲಾಗುತ್ತದೆ. ಅಂತಹ ನೂರಾರು ಪೀಪಾಯಿಗಳನ್ನು ಸಾಲಾಗಿ ಜೋಡಿಸಿಟ್ಟಿರುವುದನ್ನು ಕಂಡಾಗ ಆಲಿಬಾಬ ಮತ್ತು ನಲುವತ್ತು ಮಂದಿ ಕಳ್ಳರ ನೆನಪಾಗದೆ ಇರದು. ಒಂದು ಪೀರ್ಪಾಯಿಯಲ್ಲಿ 600 ಲೀಟರ್‌ ವೈನ್‌ ಹಿಡಿಯುತ್ತದೆ. 15 ವರ್ಷಗಳ ವರೆಗೆ ಈ ಪೀರ್ಪಾಯಿಗಳು ವೈನನ್ನು ಸಂರಕ್ಷಿಸಿ ಇಡಬಲ್ಲವು.

ಸಂಘದ ಪ್ರವೇಶದ್ವಾರದ ಬಳಿಯ ವಿಶಾಲವಾದ ಕೋಣೆಯಲ್ಲಿ, ದ್ರಾಕ್ಷಿ ಬೆಳೆಯುವಲ್ಲಿಂದ ಆರಂಭಿಸಿ, ದ್ರಾಕ್ಷಾರಸ ತಯಾರಿಸಿ, ಪೀರ್ಪಾಯಿಗಳಲ್ಲಿತುಂಬಿ ಲಾರಿಗಳಿಗೆ ಲೋಡು ಮಾಡುವಲ್ಲಿಯವರೆಗಿನ ಪ್ರಕ್ರಿಯೆಗಳ ವಿಡಿಯೋ ಪ್ರದರ್ಶನ ವ್ಯವಸ್ಥೆ ಇದೆ. ಬೃಹದಾಕಾರದ ತೆರೆಯ ಮೇಲೆ ಸುಮಾರು ನಲುವತ್ತು ನಿಮಿಷಗಳ ಕಾಲ ನಡೆಯುವ ಈ ಪ್ರದರ್ಶನವನ್ನು ನೋಡಲು ಜನರು ಕಿಕ್ಕಿರಿದು ನೆರೆದಿರುತ್ತಾರೆ. ಅದಕ್ಕೆ ತಾಗಿಕೊಂಡೇ ವಿಶಾಲವಾದ ಮಾರಾಟ ವಿಭಾಗವಿದೆ. ಅಲ್ಲಿ ವೈನಿನ ರುಚಿ ನೋಡಿ ಆರ್ಡರ್‌ ಬುಕ್‌ ಮಾಡಬಹುದು. ವೈನ್‌ ಹಳೆಯದಾದಷ್ಟೂ ಅದರ ಬೆಲೆ ಜಾಸ್ತಿ. ಓಲ್ಡ್‌ ಈಸ್‌ ಗೋಲ್ಡ್‌! ಸಂಘದ ಅಧ್ಯಕ್ಷ್ಯರು ಮೊದಲು ನಮಗೆ 1995ರ ವೈನನ್ನು ಕುಡಿಯಲು ಕೊಟ್ಟರು. ಅದರ ಬೆಲೆ ಬಾಟಲಿಯೊಂದಕ್ಕೆ 80 ಫ್ರಾಂಕುಗಳು. (ರೂ. 560) ಅದು ಒಗರಾಗಿತ್ತು. ಈಗ ಅಧ್ಯಕ್ಷ್ಷ್ಷರು 160 ಫ್ರಾಂಕು (ರೂ. 1120) ಬೆಲೆಯ1982ರ ವೈನ್‌ ಬಾಟಲಿಯೊಂದರ ಬಿರಡೆಬಿಚ್ಚಿ, ಅವರ ಅತ್ಯಂತ ಗೌರವಾನ್ವಿತ ಅತಿಥಿಗಳಾದ ನಮ್ಮ ಗ್ಲಾಸಿಗೆ ಸ್ವಲ್ಪ ಸ್ವಲ್ಪ ಸುರಿದರು. ನಾನು ಎರಡು ಗುಟುಕು ಕುಡಿದಿರಬಹುದಷ್ಟೇ. ಆಗ ನನ್ನ ಸುತ್ತಮುತ್ತಲಿನವರು ಯಾಕೆ ಗಿರ್ರನೆ ತಿರುಗುತ್ತಿದ್ದಾರೆ, ಎಂದು ನನಗೆ ಅರ್ಥವಾಗಲೇ ಇಲ್ಲ. ಅರ್ಥವಾದಾಗ ವೈನ್‌ಗ್ಲಾಸನ್ನು ಅಲ್ಲೇ ಇಟ್ಟು ಪಕ್ಕದ ಸೋಫಾದ ಮೇಲೆ ಕುಳಿತುಕೊಂಡೆ. ಆಮೇಲೆ ಹೇಗೋ ಸಾವರಿಸಿಕೊಂಡು ನಡೆದು ಬಂದು ವಾಹನದಲ್ಲಿ ಕೂತೆ. ನಾನು ಮಾಮೂಲು ಸ್ಥತಿಗೆ ಬರಲು ಮತ್ತೆ ಒಂದು ಗಂಟೆ ಹಿಡಿಯಿತು.  ಆಮೇಲೆ ಕೇಳಿದರೆ ಹೆಬ್ಬಾರ್‌, ಅನಿತಾ, ಎಲೈನ್‌ರಿಗೂ ಹಾಗೇ ಆಗಿತ್ತು. ಆದರೆ ಗುರು ಮಾತ್ರ ‘ನೀವೆಲ್ಲಾ ಈ ವಿಷಯದಲ್ಲಿ ನಾಲಾಯಕ್ಕು. ನಾನು ಅದನ್ನು ನೀರಿನಂತೆ ಕುಡಿದುಬಿಟ್ಟೆ’ ಎಂದ.  ನಮ್ಮೊಟ್ಟಿಗಿದ್ದ ಪರ್ಪಿನ್ಯಾದ ಇಬ್ಬರು ರೊಟೇರಿಯನ್ನರು, ಗುರು ಹೇಳಿದ್ದು ನಿಜವೆಂದು ಸಾಕ್ಷಿ ನುಡಿದು ಆತನ ಸಾಧನೆಗೆ ಮೆಚ್ಚುಗೆ ಸೂಚಿಸಿದರು!

ಕೊಲಿಯೋನಿಂದ ಮುಂದಕ್ಕೆ ಸಿಗುವುದು ವೆಂದರ್‌ ಎಂಬ ಬಂದರು. ಅದನ್ನು ಫ್ರೆಂಚರು ಸೌಂದರ್ಯ ದೇವತೆಯ (ವೀನಸ್‌) ಬಂದರು ಎಂದು ಕರೆಯುತ್ತಾರೆ. ವೆಂದರಿನ ಸಮುದ್ರ ತೀರ ತುಂಬಾ ಮೋಹಕ. ಅಲ್ಲಲ್ಲಿ ಕರಿಯ ಹೆಬ್ಬಂಡೆಗಳು, ತರಹೇವಾರಿ ಮಳಲುಕಲ್ಲುಗಳು, ಶುಭ್ರ ಸ್ಫಟಿಕ ಸದೃಶ ಸಮುದ್ರೋದಕ, ಮಳಲಿನ ಮೇಲೆ ಗುಪ್ತಾಂಗವನ್ನಷ್ಟೇ ಮುಚ್ಚಿ ಸೂರ್ಯಸ್ನಾನ ಮಾಡುವ ಹದಿಹರೆಯದ ಯುವಕ  ಯುವತಿಯರು, ಅದನ್ನು ಅಕ್ಷರಶಃ ಸೌಂದರ್ಯದೇವತೆಯ ಬಂದರನ್ನಾಗಿ ಮಾಡಿದ್ದಾರೆ. ವೆಂದರ್‌ನಿಂದ ಫ್ರಾನ್ಸ್‌ನ ಇತರ ರೇವುಪಟ್ಟಣಗಳಿಗೆ ಮತ್ತು ಬಾರ್ಸಿಲೋನಾಕ್ಕೆಸಮುದ್ರ ಸಾರಿಗೆ ವ್ಯವಸ್ಥೆಯಿದೆ. ಅಲ್ಲೊಂದು ಸುಸಜ್ಜಿತ ಮೀನುಗಾರಿಕಾ ಬಂದರವಿದೆ. ಮೆಡಿಟರೇನಿಯನ್ನಿನ ನೀಲಿ ಜಲರಾಶಿಯಲ್ಲಿ ಸಾಹಸದ ಆಟಗಳಿಗೆ ಅವಕಾಶವಿದೆ. ಆದುದರಿಂದ ವೆಂದರ್‌ನಲ್ಲಿ ಯಾವಾಗಲೂ ಹಬ್ಬದ ವಾತಾವರಣವಿರುತ್ತದೆ.

ವೆಂದರ್‌ನಿಂದ ದಕ್ಷಿಣಕ್ಕೆ ಮುಂದುವರಿದರೆ ಬೇರ್‌, ಅಬೀಲ್‌, ಸೆರೆಬ್ರೆ ಭೂಶಿರಗಳು ಸಿಗುತ್ತವೆ. ಸೆರೆಬ್ರೆ ಸ್ಪೈನಿಗೆ ತಾಗಿಕೋಂಡೇ ಇರುವ ಫ್ರಾನ್ಸಿನ ಕೊನೆಯ ಸಮುದ್ರ ನಗರಿ. ಅಲ್ಲಿನ ಹೋಟೇಲುಗಳಲ್ಲಿ ಎಲ್ಲವೂ ಕ್ಯಾಟಲನ್‌ಮಯ. ಸೆರೆಬ್ರೆಯಿಂದ ಒಂದು ಕಿ.ಮೀ. ಗುಡ್ಡಹತ್ತಿದರೆ ಫ್ರಾನ್ಸ್‌  ಸ್ಪೈನ್‌ ಗಡಿ ಸಿಗುತ್ತದೆ. ಗಡಿಯ ಈಚೆ ಬದಿಯಲ್ಲಿ ಫ್ರೆಂಚ್‌ ತಪಾಸಣಾ ಠಾಣೆಯಿದ್ದರೆ ಆಚೆ ಬದಿಯಲ್ಲಿ ಸ್ಪ್ಯಾನಿಷ್‌ ತಪಾಸಣಾ ಠಾಣೆಯಿದೆ. ಹೇಗೂ ಗಡಿಯವರೆಗೆ ಬಂದಾಗಿದೆ. ಸ್ರ್ಪಾನಿಷ್‌ ಮಣ್ಣನ್ನು ಸ್ಪರ್ಶಿಸಿ ಬರೋಣವೆಂದು ಗುಡ್ಡಹತ್ತಿದೆವು. ಗಡಿಯ ಇಕ್ಕೆಲಗಳಲ್ಲಿ ನಮ್ಮನ್ನು ಭದ್ರತಾ ಸಿಬ್ಬಂದಿ ತಪಾಸಣೆಗೆ ಒಳಪಡಿಸಲಿಲ್ಲ. ಸ್ಪೈನ್‌ ಗಡಿ ದಾಟಿ ಗುಡ್ಡದಿಂದ ಕಣ್ಣು ನಿಲುಕುವಷ್ಟು ದೂರದವರಗೆ ದ್ರಾಕ್ಷಿತೋಟ ಮತ್ತು ಮೆಡಿಟರೇನಿಯನ್ನಿನ ನೀಲ ಸೌಂದರ್ಯವನ್ನು ನೋಡಿ, ಅಲ್ಲೊಂದು ಸಾಮೂಹಿಕ ಫೋಟೋ ಹೊಡೆಯಿಸಿಕೊಂಡೆವು. ನಾವಾಗ ಸ್ಪೈನಿನೊಳಗಿದ್ದರೂ ನಮಗೆ ವ್ಯತ್ಯಾಸವೇನೂ ಗೊತ್ತಾಗಲಿಲ್ಲ. ನೆಲ, ಜಲ, ಮುಗಿಲಿಗೆ ಫ್ರಾನ್ಸೇನು. ಸ್ಪೈನೇನು!

ನಾವು ವಾಹನದಲ್ಲಿ ವಾಪಸಾಗುವಾಗಲೂ ತಪಾಸಣೆ ಇರಲಿಲ್ಲ. ತಪಾಸಣೆ ಇರುತ್ತಿದ್ದರೆ ನಮ್ಮ ಅತಿಥೇಯರ ಮನೆಗಳಲ್ಲಿ ರ್ಪಾಸ್‌ಪೋರ್ಟು ಮತ್ತು ವೀಸಾ ಬಿಟ್ಟು ಬಂದಿದ್ದ ನಾವು ತೊಂದರೆಗೆ ಸಿಕ್ಕಿಕೊಳ್ಳುತ್ತಿದ್ದೆವೇನೋ! ಆದರೆ ನಾವು ಭಾರತೀಯ ಅತಿಥಿಗಳು ಎಂದು ನಮ್ಮ ಅತಿಥೇಯರುಗಳು ಹೇಳುತ್ತಿದ್ದರು. ಅಲ್ಲದೆ ಯಾವನೇ ವಿದೇಶೀ ಅಧಿಕಾರಿಯನ್ನು ಭೇಟಿಯಾದಾಗ ಅವನಿಗೊಂದು ರಾಖಿ ಕಟ್ಟಿ ಅದರ ಮಹತ್ವ ತಿಳಿಸಿ, ಭಾರತದ ತ್ರಿವರ್ಣ ಧ್ವಜ ನೀಡಿ ಮಾತಾಡಿಸುವ ನಮ್ಮನ್ನು ತರಾಟೆಗೆ ತೆಗೆದುಕೊಳ್ಳಲು ಯಾವ ಅಧಿಕಾರಿಗೆ ತಾನೇ ಮನಸ್ಸು ಬಂದೀತು!

ಫಿಲಿಪ್ಪನ ವೀಡಿಯೋ
ಪರ್ಪಿನ್ಯಾದಲ್ಲಿ ನನ್ನ ಅತಿಥೇಯನಾಗಿದ್ದ ಫಿಲಿಪ್ಪ್‌ ಬಹಳ ಮೋಜಿನ ವ್ಯಕ್ತಿ. ಹಣ್ಣು  ತರಕಾರಿ ಮಾರಾಟ ಸಂಸ್ಥೆಯೊಂದರ ಮುಖ್ಯಸ್ಥನಾದ ಆತನಿಗೆ ವಿಶ್ವದ ಪ್ರಮುಖ ದೇಶಗಳ ಟಿ.ವಿ. ಚಾನೆಲ್‌ಗಳನ್ನು ತನ್ನ ಮನೆಯ ಟಿ.ವಿ.ಗೆ ಸಂಪರ್ಕಿಸುವುದು ಒಂದು ಹವ್ಯಾಸ. ಆತ ತನ್ನ ಟಿ.ವಿ.ಯಲ್ಲಿ 1200 ಕೇಂದ್ರಗಳ ಕಾರ್ಯಕ್ರಮಗಳನ್ನು ಪಡೆಯುತ್ತಾನೆ. ‘ನನ್ನ ಮನೆಯಲ್ಲಿ “ಅಸಾಧ್ಯ” ಎಂಬುದೇ ಇಲ್ಲ. ನೋಡು ನಿನ್ನ ದೇಶದ ಒಂದು ಚಾನೆಲ್‌ ತೋರಿಸುತ್ತೇನೆ’ ಎಂದು ಎರಡು ನಿಮಿಷ ರಿಮೋಟ್‌ ಕಂಟ್ರೋಲರಲ್ಲಿ ಕೆಲಸ ಮಾಡಿ, ನನಗೆ ಝೀ ಟೀವಿ ತೋರಿಸಿದ. ಅದರಲ್ಲಿ ಅಮಿತಾಭನ ಸಿನಿಮಾವೊಂದು ಬರುತ್ತಿತ್ತು. ಫಿಲಿಪ್‌ ಅಮಿತಾಭನ ಅಭಿಮಾನಿ! ನಾನವನಿಗೆ ಹಿಂದಿಯ ಬಗ್ಗೆ, ಅಮಿತಾಭನ ಬಗ್ಗೆ ತುಂಬಾ ಹೇಳಬೇಕಾಯಿತು.

ಫಿಲಿಪ್ಪ್‌ ಸಾದಾ ಎತ್ತರದ, ದುಂಡನೆಯ ಕೆಂಪು ಬಣ್ಣದ ಅಸಾಮಿ. ಆತನ ಕೂದಲು ಬಿಳಿಬಣ್ಣಕ್ಕೆ ತಿರುಗುತ್ತಿತ್ತು. ಫ್ರೆಂಚರು ತಲೆಕೂದಲ ಬಣ್ಣದ ಬಗ್ಗೆ ಕಳವಳ ಪಡಬೇಕಾದ್ದಿಲ್ಲ.  ಅಲ್ಲಿ ಸಣ್ಣ ಹುಡುಗನ ತಲೆಕೂದಲು ಪೂರ್ತಿ ಬೆಳ್ಳಗಿರಬಹುದು. ಮುತ್ತ ಮುದುಕರ ತಲೆಕೂದಲು ಕಪ್ಪಗಿರಬಹುದು. ಭಾರತದಲ್ಲಿ ಬೆಳ್ಳಿಕೂದಲು ವಯಸ್ಸು ಜಾರುತ್ತಿರುವುದರ ಆತಂಕವನ್ನುಂಟು ಮಾಡಿದಂತೆ, ಫ್ರಾನ್ಸಿನಲ್ಲಿ ಮಾಡುವುದಿಲ್ಲ. ಅಲ್ಲಿ ತಲೆಗೂದಲನ್ನು ನೋಡಿ ವಯಸ್ಸನ್ನು ಅಂದಾಜಿಸುವಂತೆಯೂ ಇಲ್ಲ. ಅವನ ಹೆಂಡತಿ ಲಾರೆನ್ಸ್‌ ಬೆಳ್ಳನೆಯ, ತೆಳ್ಳನೆಯ ಚೆಲುವೆ. ರ್ಪಾರ್ಕಿನ್‌ಸನ್‌ ಕಾಯಿಲೆಯಿಂದ ಅವಳ ಎರಡೂ ಕೈಗಳೂ ನಡುಗುತ್ತವೆ.  ಆದರೆ ಅದರಿಂದ ಗಂಟೆಗೆ 120 ಕಿ.ಮೀ. ವೇಗದಲ್ಲಿ ಕಾರು ಚಲಾಯಿಸಲು ಆಕೆಗೆ ತೊಂದರೆಯೇನೂ ಆಗುತ್ತಿಲ್ಲ! ಅವರ ಹನ್ನೆರಡು ವರ್ಷದ ಮಗ ಈಗಾಗಲೇ ಜೂನಿಯರ್‌ ಹಂತದ ಗಾಲ್ಫ್‌ ಆಟಗಾರನಾಗಿ ಕೆಲವು ಕಪ್ಪ್‌ಗಳನ್ನು ಗೆದ್ದಿದ್ದಾನೆ. ಅಷ್ಟೇ ವರ್ಷದ ಪುಟಾಣಿ ನಾಯಿ ಡಾರ್ವಿನ್‌ನ ಉದ್ದ ಒಂದು ಅಡಿ. ಎತ್ತರ ಸುಮಾರು ಅರ್ಧ ಅಡಿ. ಆರಂಭದಲ್ಲಿ ಅದನ್ನು ನಾನು ಬೆಕ್ಕು ಎಂದುಕೊಂಡಿದ್ದೆ. ‘ಅದು ಹನ್ನೆರಡು ವರ್ಷದ ಗಂಡುನಾಯಿ’ ಎಂದು ಅದನ್ನು ತನ್ನ ಮಗನಿಗಿಂತಲೂ ಹೆಚ್ಚು ಪ್ರೀತಿಸುವ ಫಿಲಿಪ್ಪ್‌ ಹೇಳಿದಾಗ ನನಗೆ ಆಶ್ಚರ್ಯವಾಯಿತು. ಫಿಲಿಪ್ಪನ ಮನೆಯಲ್ಲಿ ನಾನು ಕಳೆದ ಎರಡು ರಾತ್ರಿಗಳಲ್ಲೂ ಅದು ಹಾಸಿಗೆಯಲ್ಲಿ ನನ್ನ ಸಂಗಾತಿಯಾಗಿತ್ತು!

‘ನೀನು ಯೋಗಾಸನ ಬಲ್ಲವನೆಂದೇ ನಿನ್ನನ್ನು ನನ್ನ ಅತಿಥಿಯನ್ನಾಗಿ ಆರಿಸಿಕೊಂಡದ್ದು.  ಯೋಗ ಮಾಡಿ ತೋರಿಸುತ್ತೀಯಾ’ ಎಂದು ನಾನು ಅವನ ಮನೆಗೆ ಹೋದಂದೇ ಯಾವ ಸಂಕೋಚವೂ ಇಲ್ಲದೆ ಫಿಲಿಪ್‌ ಕೇಳಿದ. ಸಾಕಷ್ಟು ಗುಂಡು ಹಾಕಿ ಒಳ್ಳೆಯ ಮೂಡಿನಲ್ಲಿದ್ದ ಫಿಲಿಪ್ಪ್‌ ‘ಯೋಗ ಕಲಿಯಬೇಕು ಮಾರಾಯ. ಆದರೆ ನಾನೀಗ ಮಾತ್ರ ಯೋಗ ಮಾಡುವ ಸ್ಥಿತಿಯಲ್ಲಿಲ್ಲ’ ಎಂದ. ಅವನ ಹೆಂಡತಿ ಲಾರೆನ್ಸ್‌ ‘ನಾನು ಏರೋಬೆಕ್ಸ್‌ ಕಲಿತಿದ್ದೇನೆ.  ಯೋಗಕ್ಕೂ ಅದಕ್ಕೂ ಏನು ವ್ಯತ್ಯಾಸ ಎನ್ನುವುದನ್ನು ತಿಳಿಯಬೇಕು’ ಎಂದಳು. ಗಾಲ್ಫ್‌ ಆಟಗಾರ ಮಗ ತನ್ನ ಆಟಕ್ಕೆ ಪ್ರಯೋಜನವಾಗುವುದಾದರೆ ಆಗಲಿ ಎಂದು ಚಡ್ಡಿ ಹಾಕಿ ಯೋಗಾಸನ ಮಾಡಲು ಸಿದ್ಧನಾದ. ನಾನು ಪ್ರದರ್ಶನಕ್ಕೆ ಸಿದ್ಧನಾಗುತ್ತಿದ್ದಂತೆ ಫಿಲಿಪ್‌ ತಡೆದ. ‘ನಿಲ್ಲು. ನೀನಿಲ್ಲಿಂದ ಹೋದ ಮೇಲೂ ನಾನಿದನ್ನು ಅಭ್ಯಾಸ ಮಾಡಬೇಕು’ ಎಂದು ಮಾಳಿಗೆಗೆ ಓಡಿ ವೀಡಿಯೋ ಕ್ಯಾಮರಾ ತಂದ. ‘ಹೂಂ, ಇನ್ನು ಶುರು ಮಾಡು’ ಎಂದು ಚಿತ್ರೀಕರಣ ಆರಂಭಿಸಿಯೇ ಬಿಟ್ಟ.

ನಾನು ನನಗೆ ಗೊತ್ತಿರುವ ಆಸನಗಳ ಹೆಸರು, ಅವನ್ನು ಮಾಡುವ ಕ್ರಮ ಮತ್ತು ಅವುಗಳ ಪ್ರಯೋಜನವನ್ನು ಇಂಗ್ಲೀಷಲ್ಲಿ ವಿವರಿಸಿ, ಆ ಬಳಿಕ ಅವನ್ನು ಮಾಡಿ ತೋರಿಸಬೇಕಿತ್ತು.  ಬಿಡುವೇ ಇಲ್ಲದೆ ನನಗೆ ಕೊನೆಕೊನೆಗೆ ತೀರಾ ಕಷ್ಟವಾಗತೊಡಗಿತು. ಬೇರೆ ಮಾತಾಡುವಂತಿಲ್ಲ. ಅದು ರೆಕಾರ್ಡ್‌ ಆಗುತ್ತದಲ್ಲಾ! ಆದುದರಿಂದ ಚಿತ್ರೀಕರಣ ನಿಲ್ಲಿಸುವಂತೆ ಕೈ ಸನ್ನೆ ಮಾಡಿದೆ. ಪರಮಾತ್ಮನ ಪ್ರಭಾವದಿಂದಾಗಿ ಫಿಲಿಪ್‌ ನನ್ನ ಕೈ ಸನ್ನೆ ಯೋಗಾಸನದ ಒಂದು ಭಾಗವೇ ಇರಬೇಕೆಂದುಕೊಂಡು, ಮುಂದುವರಿಸಲು ನನಗೆ ಕೈ ಸನ್ನೆ ಮಾಡಿ ಚಿತ್ರೀಕರಣ ಮುಂದುವರಿಸಿದ. ಸುಸ್ತಾದ ಸ್ಥತಿಯಲ್ಲೆ ನಾನು ಪ್ರಾಣಾಯಾಮ ಮತ್ತು ಧ್ಯಾನ ಮಾಡಬೇಕಾಯಿತು. ಕೊನೆಗೆ ‘ಮುಗಿಯಿತು’ ಎಂದು ಹೇಳಿ ನಾನು ಎದ್ದ ಮೇಲೂ ಫಿಲಿಪ್ಪ್‌ ಎರಡು ನಿಮಿಷ ಚಿತ್ರೀಕರಣ ಮಾಡಿದ!

ಅಂದು ನಮ್ಮ ತಂಡಕ್ಕೆ ಫಿಲಿಪ್ಪನ ಮನೆಯಲ್ಲಿ ಔತಣದ ಏರ್ಪಾಡಾಗಿತ್ತು. ‘ನಿನಗೆ ಅಡುಗೆ ಮಾಡುತ್ತಿದ್ದೇನೆ’ ಎಂದು ಅವನ ಹೆಂಡತಿ ಲಾರೆನ್ಸ್‌, ಅದೊಂದು ಮಹಾನ್‌ ಸಾಧನೆ ಎಂಬಂತೆ, ನಾಲ್ಕೈದು ಬಾರಿ ಹೇಳಿದಳು. ನಮ್ಮ ತಂಡ ಮನೆಗೆ ಬಂದಾಗ, ಪರಮಾತ್ಮನ ಪ್ರಭಾವದಿಂದ ಮುಕ್ತನಾಗದ ಫಿಲಿಪ್‌, ತನ್ನ ಟಿ.ವಿ. ಮತ್ತು ರೇಡಿಯೋ ಚಾನೆಲ್‌ಗಳನ್ನು ತೋರಿಸುತ್ತಾ, ಅವುಗಳ ಬಗ್ಗೆ ಕೊರೆಯತೊಡಗಿದ. ಆ ಬಳಿಕ ನಾನಾ ನಮೂನೆಯ ಮದ್ಯದ ಬಾಟಲುಗಳನ್ನು ಡೈನಿಂಗ್‌ ಟೇಬಲ್‌ ಮೇಲೆ ಹರಡಿ ‘ಚೈೕಸ್‌ ಈಸ್‌ ಯುವರ್ಸ್‌’ ಎಂದು ಉದಾರತೆ ತೋರಿದ. ಈ ವಿಷಯದಲ್ಲಿ ತನಗೆ ಸಮದಂಡಿಯಾಗಿ ನಿಲ್ಲಬಲ್ಲ ಗುರುವನ್ನು ತಬ್ಬಿಕೊಂಡು ‘ಇದ್ದಾಗ ಅನುಭವಿಸಬೇಕಪ್ಪಾ’ ಎಂದು ನನಗೆ ಉಪದೇಶಿಸಿದ.

ಊಟದ ಬಳಿಕವೂ ಅವನ ಕೊರೆತ ನಿಲ್ಲುವಂತೆ ಕಾಣಲಿಲ್ಲ. ನಾನು ಸುಮ್ಮನೆ ಮೂಕ ಪ್ರೇಕ್ಷಕನಾಗಿ ಎಲ್ಲವನ್ನೂ ನೋಡುತ್ತಿದ್ದೆ. ಆ ಅವಸ್ಥೆಯಲ್ಲೂ ನನ್ನನ್ನು ಗಮನಿಸಿದ ಫಿಲಿಪ್‌ ‘ಪ್ರಭಾ ಈಸ್‌ ಮೈ ಗುರು. ಅವನು ಕುಡಿಯೋಲ್ಲ. ಮಾಂಸ ತಿನ್ನೋಲ್ಲ. ಭಾರತದ ಸಂಸ್ಕೃತಿಯ ತಿರುಳನ್ನೇ ನನಗೆ ಕಲಿಸಿಕೊಟ್ಟಿದ್ದಾನೆ ನೋಡಿ’ ಎಂದು ಅವನೇ ಚಿತ್ರೀಕರಿಸಿದ ನನ್ನ ಯೋಗಾಸನಗಳ ವೀಡಿಯೋ ಹಾಕಿ ತೋರಿಸಿದ. ‘ಬೇಗದಲ್ಲಿ ಭಾರತಕ್ಕೆ ಬರಲಿದ್ದೇನೆ. ಆಗ ಇದನ್ನೆಲ್ಲಾ ನಿನಗೆ ತೋರಿಸಿ ದಂಗುಬಡಿಸುತ್ತೇನೆ ನೋಡ್ತಿರು’ ಎಂದು ನನ್ನ ಭುಜದ ಸುತ್ತ ಕೈಬಳಸಿ ನನ್ನನ್ನು ಹತ್ತಿರಕ್ಕೆ ಎಳೆದುಕೊಂಡ.

ಫಿಲಿಪ್ಪನ ಗೆಳೆಯ : ಮರುದಿನ ಸಂಜೆ ಫಿಲಿಪ್ಪನ ಮನೆಗೆ ಆತನ ಮಿತ್ರ ಮಾರ್ಟಿನ್‌ ಬಂದಿದ್ದ. ಆತ ಪಾರ್ಶ್ವವಾಯು ಪೀಡಿತ. ಗಾಲಿಕುರ್ಚಿಯಲ್ಲಿದ್ದ ಅವನನ್ನು ಅನಾಮತ್ತಾಗಿ ಎತ್ತಿ, ಸೋಫಾದಲ್ಲಿ ಕುಳ್ಳಿರಿಸಿ ಪ್ರೀತಿಯಿಂದ ‘ನನ್ನ ಮುದ್ದು ಬಂಗಾರ ಮಾರ್ಟಿನ್‌’ ಎಂದು ಫಿಲಿಪ್ಪ್‌ ಅವನ ಕೆನ್ನೆಗೆರಡು ಮುತ್ತುಕೊಟ್ಟ. ಮಾರ್ಟಿನ್‌ ‘ಇವನದ್ದು ಯಾವಾಗಲೂ ಹೀಗೇ. ನಾವಿಬ್ಬರೂ ಒಂದೇ ವಯಸ್ಸಿನವರು, ಆದರೆ ಇವನ ದೃಷ್ಟಿಯಲ್ಲಿ ನಾನಿನ್ನೂ ಮಗು’ ಎಂದು ನನ್ನಲ್ಲಿ ದೂರಿದ. ಫಿಲಿಪ್ಪನ ನಾಯಿ ಡಾರ್ವಿನ್ಸ್‌ ಮಾರ್ಟಿನ್ನನ ದೇಹದ ಮೇಲೆಲ್ಲಾ ಓಡಾಡಿ ಮುಖವನ್ನು ನೆಕ್ಕಿತು. ಮಾರ್ಟಿನ್‌ ಅದನ್ನು ದೂರ ತಳ್ಳಲಿಲ್ಲ.

‘ಭಾರತದ ಬಗ್ಗೆ ಓದಿದ್ದೇನೆ. ಒಂದು ಸಲ ಭಾರತಕ್ಕೆ ಬರಬೇಕೆಂದಿದ್ದೇನೆ.’ ನಾನು ಈವರೆಗೆ ಭೇಟಿಯಾದ ಎಲ್ಲಾ ಫ್ರೆಂಚರಂತೆ, ಈ ಪಾರ್ಶ್ವವಾಯು ಪೀಡಿತ ಮಾರ್ಟಿನ್‌ ಕೂಡಾ ಹೇಳುವಾಗ ಅವನ ಅಪಾರ ಆತ್ಮವಿಶ್ವಾಸಕ್ಕೆ ನಾನು ದಂಗಾಗಿ ಹೋದೆ. ನನಗೆ ಕನ್ನಡದ ಪ್ರಸಿದ್ಧ ಕಾದಂಬರಿಕಾರಿ ನಿರಂಜನರ ನೆನಪಾಯಿತು. ಮೂಲತಃ ಸುಳ್ಯದವರಾದ ಅವರನ್ನು ನಾನು, ಬೆಂಗಳೂರಿಗೆ ಹೋದಾಗಲೆಲ್ಲಾ ಕಂಡು ಮಾತಾಡಿಸಿ ಬರುತ್ತಿದ್ದೆ. ಪಾರ್ಶ್ವವಾಯು ಪೀಡಿತರಾಗಿ ಅದೆಷ್ಟೋ ವರ್ಷಗಳಾಗಿದ್ದರೂ ಅವರು ಆತ್ಮವಿಶ್ವಾಸ ಕಳಕೊಂಡವರಲ್ಲ. ಆ ಸ್ಥತಿಯಲ್ಲೂ ಸುಳ್ಯದ ಮಣ್ಣಿನ ವ್ಯಾಮೋಹ ಅವರನ್ನು ಬಿಡಲಿಲ್ಲ. ಹಾಗೊಮ್ಮೆ ಸುಳ್ಯಕ್ಕೆ ಪತ್ನಿ ಅನುಪಮಾರೊಡನೆ ಬಂದಿದ್ದ ನಿರಂಜನರಿಗೆ, ಅವರ ಸಹಪಾಠಿಯೊಬ್ಬರ ಮನೆಯಲ್ಲಿ ರಾತ್ರಿಯೂಟಕ್ಕೆ ಹೋಗಲು ಜೀಪಿನ ಏರ್ಪಾಡಾಗಿತ್ತು. ನಿರಂಜನರು ಜೀಪಿನ ಸೀಟಲ್ಲಿ ಕೂರಲು ಎರಡು ಬಾರಿ ವಿಫಲ ಯತ್ನ ನಡೆಸಿದರು. ಬಳಿಕ ಅದನ್ನು ನೋಡುತ್ತಿದ್ದ ನಮ್ಮತ್ತ ನೋಡಿ ‘ಮುಂದಿನ ಸಲ ಖಂಡಿತಾ ಆಗುತ್ತೆ’ ಎಂದು ಅಪರಿಮಿತ ಆತ್ಮವಿಶ್ವಾಸ ಪ್ರದರ್ಶಿಸಿ ಕೊನೆಗೆ ಮಾರುತಿ ಕಾರಲ್ಲಿ ಹೊರಟು ಹೋದರು. ನಿರಂಜನರ ಹಾಗೇ ಈ ಮಾರ್ಟಿನ್‌ ಮಾತಾಡಿದ್ದ!

ಹೆಚ್ಚು ಮಾತಾಡದ ಮಾರ್ಟಿನ್‌ಗೆ, ಸದಾ ಮಾತಾಡುತ್ತಲೇ ಇರುವ ಫಿಲಿಪ್‌ ಒಳ್ಳೆಯ ಸ್ನೇಹಿತ. ರಾತ್ರಿ ಊಟವಾಗಿ ಮಾರ್ಟಿನ್‌ ಹೊರಟಾಗ ಫಿಲಿಪ್‌ ಅವನ ಗಾಲಿಕುರ್ಚಿಯನ್ನು ತಳ್ಳಿಕೊಂಡು ಮಾರ್ಟಿನ್‌ನ ಕಾರಿನವರೆಗೂ ಬಂದ. ಮಾರ್ಟಿನ್‌ಗೊಬ್ಬ ಡ್ರೈವರ್‌ ಇರಬಹುದೆಂದು ಅತ್ತಿತ್ತ ನೋಡಿದೆ. ಯಾರೂ ಕಾಣಿಸಲಿಲ್ಲ. ತಳ್ಳು ಕುರ್ಚಿಯಿಂದಲೇ ರಿಮೋಟ್‌ ಕಂಟ್ರೋಲರ್‌ ಮೂಲಕ ಮಾರ್ಟಿನ್‌, ತನ್ನ ಅಟೋಮ್ಯಾಟಿಕ್‌ ಕಾರಿನ ಬಾಗಿಲು ತೆರೆದ. ಆ ಬಳಿಕ ತಾನೇ ಡ್ರೈವರ್‌ ಸೀಟಿನತ್ತ ಜಾರಿಕೊಂಡ.

ಅಷ್ಟು ಹೊತ್ತಿಗೆ, ಆವರೆಗೆ ಅವನ ಕಾರಿನಲ್ಲೇ ಬಂಧಿಯಾಗಿದ್ದ ಮಾರ್ಟಿನ್ನನ ದೊಡ್ಡ ಕರಿ ಹೆಣ್ಣು ನಾಯಿ ಲ್ಯೂಸಿ, ಚಂಗನೆ ಫ್ರಂಟ್‌ ಸೀಟಿಗೆ ನೆಗೆದು ಓಪನ್‌ ಆದ ಬಾಗಿಲ ಮೂಲಕ ಹೊರಗೋಡಿತು. ಅಲ್ಲಿ ಡಾರ್ವಿನ್‌ ಇತ್ತು! ಮೂರೂವರೆ ಅಡಿ ಎತ್ತರದ ಮಾರ್ಟಿನ್ನನ ಹೆಣ್ಣು ನಾಯಿ ಲೂಸಿ, ಅರ್ಧ ಅಡಿ ಎತ್ತರದ ಫಿಲಿಪ್ಪನ ಗಂಡು ನಾಯಿ ಡಾರ್ವಿನ್ನನ್ನು ಅಟ್ಟಿಸಿಕೊಂಡು ಹೋಯಿತು. ಮಾರ್ಟಿನ್ನಿಗೆ ಗಾಬರಿಯಾಯಿತು. ಡಾರ್ವಿನ್ನನ ಕತೆ ಮುಗಿಯಿತು ಅಂದುಕೊಂಡೆ ನಾನು. ಸ್ವಲ್ಪ ಹೊತ್ತಲ್ಲಿ ಹೆಣ್ಣು ನಾಯಿಗೆ ಸಹಜವಾದ ಒನಪು ವಯಯ್ಯರಗಳಿಂದ ಲೂಸಿ ಡಾರ್ವಿನ್ನನ ಪಾದದಡಿಯಲ್ಲಿ ಹೊರಳಾಡತೊಡಗಿತು. ಅರ್ಧ ಅಡಿ ಎತ್ತರದ ಕುಳ್ಳ ಡಾರ್ವಿನ್‌ ಗಂಡಿನ ಗತ್ತು ಪ್ರದರ್ಶಿಸತೊಡಗಿದಾಗ ನಮಗೆಲ್ಲಾ ನಗುವೋ ನಗು. ಕೊನೆಗೆ ಫಿಲಿಪ್‌ ಡಾರ್ವಿನ್ನನನ್ನು ಎತ್ತಿಕೊಂಡ. ಅವನಿಗೊಂದು ಸುತ್ತು ಬಂದು ಲೂಸಿ ನಿರಾಶೆಯಿಂದ ಮಾರ್ಟಿನ್ನನ ಕಾರು ಹತ್ತಿತು.

ಡ್ರೈವರ್‌ ಸೀಟಲ್ಲಿ ಕೂತುಕೊಂಡ ಮಾರ್ಟಿನ್‌ ಬೆಲ್ಟು ಬಿಗಿದು, ಬಾಗಿಲು ಭದ್ರಪಡಿಸಿಕೊಂಡು ನಮ್ಮೆಲ್ಲರಿಗೆ ಶುಭ ರಾತ್ರಿ ಹೇಳಿ ಭರ್ರನೆ ಕಾರು ಚಲಾಯಿಸಿಕೊಂಡು ಹೋದ. ಅವನ ಅಂಗವಿಕಲತೆ ಅದಕ್ಕೆ ಒಂದಿಷ್ಟೂ ಅಡ್ಡಿಯಾಗಲಿಲ್ಲ!

ಫಿಲಿಪ್ಪನ ಉಡುಗೊರೆ : ಫಿಲಿಪ್ಪಿಗೆ ನಾನು ಯಕ್ಷ್ಷಗಾನದ ಮುಖವಾಡ ಉಡುಗೊರೆಯಾಗಿ ನೀಡಿದ್ದೆ. ಧ್ವಜ, ರಾಖಿ, ಬಿಂದಿಗಳನ್ನು ಲಾರೆನ್ಸಳಿಗೆ ಕೊಟ್ಟಿದ್ದೆ. ಸಹಜ ಕುತೂಹಲಿಯಾದ ಫಿಲಿಪ್ಪ್‌ ಯಕ್ಷ್ಷಗಾನದ ಬಗ್ಗೆ ಸಾಕಷ್ಟು ಕೇಳಿ ತಿಳಿದುಕೊಂಡ. ಆ ಬಳಿಕ ಒಳಹೋಗಿ, ಕೆಂಪನೆಯ ಪ್ಯಾಕಲ್ಲಿ ಉದ್ದನೆಯ ವೈನ್‌ ಬಾಟಲಿಯೊಂದನ್ನು ತಂದು ನನಗಿತ್ತು ‘ಇದು ಇಡೀ ಯುರೋಪಿನಲ್ಲೇ ಅತ್ಯುತ್ಕೃಷ್ಟವಾದ ವೈನ್‌’ ಎಂದ. ‘ಮಹಾರಾಯಾ… ನಾನು ಕುಡುಕನಲ್ಲ. ಕೊಡಲೇಬೇಕೆಂದಿದ್ದರೆ, ಕಲೆ  ಸಾಹಿತ್ಯಕ್ಷ್ಕೆ ಸಂಬಂಧಿಸಿದ್ದನ್ನು ಏನನ್ನಾದರೂ ಕೊಡು. ಇದು ಬೇಡು ಎಂದೆ. ಅವನಿಗೆ ಇರಿಸುಮುರಿಸಾಯಿತು. ‘ಕೊಟ್ಟದ್ದನ್ನು ದಯವಿಟ್ಟು ಹಿಂದಿರುಗಿಸ ಬೇಡ. ನಿನಗೆ ಇನ್ನೂ ಏನನ್ನಾದರೂ ಕೊಡಬೇಕು ನಾನು. ಸಂಜೆ ನೋಡೋಣ’ ಎಂದ.
ಅಂದು ಬೆನಿಯೂಲ್ಸ್‌ ಸೊಸೈಟಿಯಿಂದ ನನಗೆ ಉಡುಗೊರೆಯಾಗಿ ಸಿಕ್ಕ ವೈನನ್ನು ಫಿಲಿಪ್ಪನಿಗೆ ಅರ್ಪಿಸಿದಾಗ ಆತ ಆನಂದ ತುಂದಿಲನಾಗಿ ‘ಆಹಾ! ಹತ್ತು ವರ್ಷದ ಹಳೆಯ ವೈನನ್ನು ತಂದಿದ್ದೀಯಾ ಗುಡ್‌! ಎಂದ. ಆ ಬಳಿಕ ಅಲ್ಲೇ ಟೀಪಾಯಿ ಮೇಲಿರಿಸಿದ್ದ ಅಟ್ಲಾಸಿನಂತಹ ದೊಡ್ಡ ಪುಸ್ತಕವೊಂದನ್ನು ನೀಡಿ ‘ಇದರಲ್ಲಿ ಲ್ಯಾಂಗ್‌ಡಕ್ಕ್‌  ರೌಸಿಲಿನ್‌ ಪ್ರಾಂತ್ಯಗಳ ಸಮಗ್ರ ವಿಷಯಗಳಿವೆ. ನಿನ್ನ ಮಕ್ಕಳ, ಮೊಮ್ಮಕ್ಕಳ ಮತ್ತು ಮರಿಮಕ್ಕಳ ಕಾಲದವರೆಗೂ ಬಾಳಿಕೆ ಬರುತ್ತೆ. ಹೇಗಿದೆ ನನ್ನ ಉಡುಗೊರೆ?’ ಎಂದು ಕೇಳಿದ. ಪುಸ್ತಕವೆಂದಾಗ ಮುಖ ಅರಳುವ ನನಗೆ ಆ ಉಡುಗೊರೆ ತುಂಬಾ ಇಷ್ಟವಾಯಿತು. ಒಳ್ಳೆಯ ಕಾಗದ ಮತ್ತು ಅತ್ಯಾಕರ್ಷಕ ಚಿತ್ರಗಳ ಆ ಪುಸ್ತಕ ಫ್ರೆಂಚ್‌ ಭಾಷೆಯದ್ದು! ‘ಅಯ್ಯಯೋ ಮಾರಾಯ, ಇದೇನು ಮಾಡಿದೆ ನೀನು? ನಾನಿದನ್ನು ಹೇಗೆ ಅರ್ಥಮಾಡಿಕೊಳ್ಳಲಿ?’ ಎಂದು ಫಿಲಿಪ್ಪನನ್ನು ಪ್ರಶ್ನಿಸಿದೆ. ಅವನದಕ್ಕೆ ‘ಫ್ರಾನ್ಸಿಗೆ ಬಂದ ನೆನಪಿಗೆ ಫ್ರೆಂಚನ್ನು ಚೆನ್ನಾಗಿ ಕಲಿತು ಅದನ್ನು ಓದು. ಇದುವೇ ನಿಜವಾದ ಸಾಂಸ್ಕೃತಿಕ ವಿನಿಮಯ’ ಎಂದು ಗಹಗಹಿಸಿದ.

ಶವ ನೀನೆ : ಪರ್ಪಿನ್ಯಾದ ಹೋಟೆಲ್‌ ಲೆ ಬಲಾಡಿನ್ಸ್‌ನಲ್ಲಿ ನಮ್ಮನ್ನು ರೋಟರಿಯವರು ಎಪ್ರಿಲ್‌ 23ರಂದು ಬೆಳಿಗ್ಗೆ ಸ್ವಾಗತಿಸಿದ್ದರೆ, ಅಲ್ಲೇ ಎಪ್ರಿಲ್‌ 25 ರಂದು ಬೆಳಿಗ್ಗೆ ಬೀಳ್ಕೊಡುಗೆಗಾಗಿ ಕಾದಿದ್ದರು. ಅವರ ಅಧ್ಯಕ್ಷ್ಷ್ಷ ಕ್ರಿಶ್ಚಿಯನ್‌ ಸೌಬಿರಾ 23ರಂದು ಒಮ್ಮೆ ಮೂತಿ ತೋರಿಸಿದವ, ಆ ಬಳಿಕ 24ರಂದು ರಾತ್ರೆಯ ಭೋಜನಕೂಟದಲ್ಲೊಮ್ಮೆ ದೂರದಿಂದ ನಮ್ಮನ್ನು ನೋಡಿ ನಕ್ಕಿದ್ದ. ಅದಷ್ಟೇ ಅವನ ಆತಿಥ್ಯ. ನರಪೇತಲ ಹಿಜಡಾನಂತಿರುವ ಆತನಿಗೆ ಇಂಗ್ಲೀಷ್‌ ಬಾರದೆ ಇದ್ದದ್ದೂ ಒಂದು ಸಮಸ್ಯೆಯಾಗಿತ್ತು. ಎಪ್ರಿಲ್‌ 25ರಂದು ಬೆಳಿಗ್ಗೆ ನಮ್ಮನ್ನು ಪರ್ಪಿನ್ಯಾದಿಂದ ಕಳುಹಿಸಿಕೊಡಲು ಆತ ಬಂದಿದ್ದ. ಹಾಗೆ ಬಂದವ ನಮ್ಮನ್ನು ನೋಡಿ ನಕ್ಕು “ಸವಾಲ” (ಚೆನ್ನಾಗಿದ್ದೀರಾ?) ಎಂದು ಕೇಳಿದ. ಅಧ್ಯಕ್ಷ್ಷ್ಷನಾಗಿದ್ದುಕೊಂಡೂ ಆತ ನಮ್ಮ ಬಗ್ಗೆ ತೋರಿದ ನಿರ್ಲಕ್ಷ್ಯದಿಂದ ಬೇಸತ್ತಿದ್ದ ನಾನು ತಕ್ಷಣ “ಶವ ನೀನೆ” ಅಂದುಬಿಟ್ಟೆ. ನಮ್ಮ ತಂಡದವರೆಲ್ಲಾ ಗಹಗಹಿಸಿ ನಕ್ಕುಬಿಟ್ಟರು. ಫ್ರೆಂಚ್‌ ಬಾರದ ನಾನು ನನ್ನ ಭಾಷೆಯಲ್ಲಿ ಅದೇನೋ ಒಳ್ಳೆಯ ಜೋಕು ಹೇಳಿರಬೇಕೆಂದು ಭಾವಿಸಿದ ಸೌಬಿರಾ ಪೆಚ್ಚುಪೆಚ್ಚಾಗಿ ನಕ್ಕ.

ಅಪ್ಪಟ ಸ್ಪ್ಯಾನಿಷ್‌  ಕ್ಯಾಟಲನ್‌ ನೆಲವಾದ ಪರ್ಪಿನ್ಯಾದಿಂದ ಬೆಳಗ್ಗಿನ ಒಂಬತ್ತಕ್ಕೆ ಸರಿಯಾಗಿ ನಾವು ಹೊರಟೆವು. ಅಂದು ಸಂಜೆ ಐದಕ್ಕೆ ನಾವು ಪರ್ಪಿನ್ಯಾದಿಂದ ಸುಮಾರು ನಾನೂರು ಕಿ.ಮೀ. ದೂರದ ಕ್ರೈಸ್ತರ ಪವಿತ್ರ ಕ್ಷೇತ್ರ ಲೂರ್ದ್‌ನಲ್ಲಿರಬೇಕಾಗಿತ್ತು. ತುಲೋಸಿಗೆ ಹೋಗಿಯೇ ಲೂರ್ದ್‌ಗೆ ನಮ್ಮ ಪಯಣ. ನಮ್ಮ ಮಿನಿಬಸ್ಸು ಪರ್ಪಿನ್ಯಾದಿಂದ ಹೊರಟು ನಾಬೋನ್‌, ಕರ್ಕಸೋನ್‌ಗಳನ್ನು ಹಾದು ತುಲೋಸಿನ ರಾಮೋನ್‌ವಿಲ್ಲೆಯ ಹೋಟೆಲ್‌ ಕಂಫರ್ಟ್‌ ಇನ್ನ್‌ಗೆ ಮುಟ್ಟುವಾಗ ಮಧ್ಯಾಹ್ನ ಹನ್ನೆರಡು ಗಂಟೆ. ಅಲ್ಲಿ ದಕ್ಷಿಣ ತುಲೋಸ್‌ ರೋಟರಿ ನಮಗೆ ಭೋಜನ ಕೂಟವನ್ನು ಏರ್ಪಡಿಸಿತ್ತು. ಮ್ಯಾಗಿ ಮತ್ತು ಜಾರ್ಜ್‌ ಭೋಜನಕೂಟಕ್ಕೆ ಬಂದವರು, ನನ್ನನ್ನು ಆಲಂಗಿಸಿಕೊಂಡು ಆರಂಭದಲ್ಲಿ ಅವರ ಮನೆಯಲ್ಲಿ ತೆಗೆದ ಫೋಟೋಗಳನ್ನು ಕೈಗಿತ್ತರು. ಜುವಾನ್‌ ಬುಯೋ ಆತ್ಮೀಯವಾಗಿ ಆಲಿಂಗಿಸಿಕೊಂಡ. ಆ ಕ್ಷಣಕ್ಕೆ ತುಲೋಸ್‌ ನನಗೆ ತುಂಬಾ ಆಪ್ತವಾಯಿತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೈವ ತಂತ್ರಜ್ಞಾನದಿಂದ ರಕ್ತದ ಸೃಷ್ಟಿ
Next post ಪಾಕಶಾಸ್ತ್ರದ ಪಾಠಶಾಲೆ

ಸಣ್ಣ ಕತೆ

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…