ಗಣ್ಯರು ಯಾರು ?

ಪ್ರಿಯ ಸಖಿ,
ಅವರ ಕಾರು ಭರ್ರನೆ ಓಡುತ್ತಿದೆ. ರಸ್ತೆ ಮಧ್ಯದಲ್ಲಿ ಸೌದೆ ಹೊರೆ ಕಟ್ಟು ಬಿಚ್ಚಿಕೊಂಡು ಚೆಲ್ಲಾಪಿಲ್ಲಿಯಾಗಿಬಿಟ್ಟಿದೆ. ಇದನ್ನು ಕಂಡ ಅವರು ಗಕ್ಕನೆ ನಿಲ್ಲಿಸುತ್ತಾರೆ. ಕಾರಿನಿಂದಿಳಿದ ಅವರು ಆ ಮುದುಕನಿಗೆ ಸೌದೆಯನ್ನು ಆಯ್ದು ಹೊರೆ ಕಟ್ಟಲು ಸಹಾಯ ಮಾಡುತ್ತಾರೆ. ಆ ಹೊರೆಯನ್ನು ತಮ್ಮ ಡಿಕ್ಕಿಯಲ್ಲಿರಿಸಿ ಆ ಮುದುಕನನ್ನು ಅವನು ಬೇಡವೆನ್ನುತ್ತಿದ್ದರೂ ಕೇಳದೆ ಕಾರಿನಲ್ಲಿ ಕೂರಿಸಿಕೊಂಡು ಅವನ ಗಮ್ಯವನ್ನು ತಲುಪಿಸಿ ಅವರು ತಮ್ಮ ಕೆಲಸಕ್ಕೆ ಹೋಗುತ್ತಾರೆ.

ಅವರು ಆ ಊರಿನ ಅತ್ಯಂತ ಗಣ್ಯವ್ಯಕ್ತಿ ಸರ್ಕಾರದಲ್ಲಿ ಮಂತ್ರಿ ಪದವಿಯನ್ನು ನಿರ್ವಹಿಸುತ್ತಿರುವವರು. ಆದರೆ ಅವರಿಗೆ ಅದರ ಬಗ್ಗೆ ಯಾವುದೇ ಅಹಂಕಾರ, ಗರ್ವಗಳಿಲ್ಲ. ಸಭೆಯಿರಲಿ, ಸಮಾರಂಭವಿರಲಿ, ಮನೆಯಲ್ಲಾಗಲಿ ಅತ್ಯಂತ ಸಾಮಾನ್ಯ ಮನುಷ್ಯನಂತೆ ಅವರ ವೇಷಭೂಷಣ ಹಾಗೇ ಅವರ ಅವಶ್ಯಕತೆಗಳೂ ತೀರ ಅಲ್ಪವಾದವು. ಸರ್ಕಾರದಿಂದ ಮಂತ್ರಿಯೊಬ್ಬನಿಗೆ ದೊರೆಯುವ ಎಲ್ಲ ಸವಲತ್ತುಗಳನ್ನು ನಿರಾಕರಿಸಿದ್ದಾರೆ. ಜೊತೆಗೆ ದೀನದಲಿತರಿಗೆ ತಮ್ಮಿಂದಾಗುವ ಎಲ್ಲಾ ಸಹಾಯ, ಸಹಕಾರಗಳನ್ನು ಮಾಡುತ್ತಾ ಬಂದಿದ್ದಾರೆ. ತನ್ನದೆನ್ನುವ ಪ್ರತಿ ಪೈಸೆಯಲ್ಲಿಯೂ ಸಮಾಜದ ಋಣವಿದೆ ಎಂದು ನಂಬಿದವರಿವರು. ಊರಿನಿಂದ ಪೇಟೆಗೆ ಒಬ್ಬರೇ ಕಾರಿನಲ್ಲಿ ಹೊರಟರೂ ದಾರಿಯಲ್ಲಿ ಪೇಟೆಗೆ ಹೋಗಲು ಸಿಕ್ಕವರನ್ನೆಲ್ಲಾ ಕಾರಿನಲ್ಲಿ ತುಂಬಿಸಿಕೊಂಡು  ಪೇಟೆ ತಲುಪಿಸಿದರೇ ಇವರಿಗೆ ಸಮಾಧಾನ.

ಸಖಿ, ಇದ್ಯಾವುದೋ ಕನಸೋ, ಕಲ್ಪನೆಯ ಬಗ್ಗೆಯೋ ನಾನು ಹೇಳುತ್ತಿದ್ದೇನೆ ಎಂದು ನೀನು ಅಂದುಕೊಂಡಿದ್ದರೆ ಅದು ತಪ್ಪು. ಇಂತಹ ಸರಳ ಮಾನವೀಯ ವ್ಯಕ್ತಿ ನಿಜವಾಗಿಯೂ ಇದ್ದಾರೆ. ತನ್ನ ಸ್ಥಾನದ ಬಗ್ಗೆ ಗರ್ವ ಪಡದೇ ಊರಿನ ಎಲ್ಲರಿಗೂ ಬೇಕಾಗಿರುವ ಎಲ್ಲರ ಕಷ್ಟ ನೋವುಗಳಿಗೆ ಸ್ಪಂದಿಸುವ ಈ ವ್ಯಕ್ತಿ ತನ್ನ ಅಧಿಕಾರ, ಅಂತಸ್ತು, ವಿದ್ಯೆ ಸ್ಥಾನಮಾನದಿಂದಲ್ಲ. ಗಣ್ಯರಾಗಿರುವುದು, ತಮ್ಮ ಮಾನವೀಯ ಸ್ಪಂದನೆಗಳಿಂದ.

ಒಬ್ಬ ವ್ಯಕ್ತಿ ಗಣ್ಯನೆನಿಸಿಕೊಳ್ಳಲು ಅವನಿಗೆ ಹಿರಿದಾದ ಅಧಿಕಾರ, ಸ್ಥಾನ ಅಂತಸ್ತು, ಅಪರಿಮಿತ ವಿದ್ಯೆ, ಹಿರಿಯ ವಯಸ್ಸು ಇತ್ಯಾದಿಗಳನ್ನು ನಾವು ಮಾನದಂಡವಾಗಿ ಬಳಸುತ್ತೇವೆ. ಆದರೆ ಇವೆಲ್ಲಾ ಇದ್ದೂ ಅವನಿಗೆ ಇತರ ವ್ಯಕ್ತಿಗಳ ದುಃಖ, ನೋವುಗಳ ಬಗೆಗೆ ಸ್ಪಂದನೆಯಿಲ್ಲದಿದ್ದರೆ ಅವನು ಗಣ್ಯ ಅಥವಾ ಹಿರಿಯ ಹೇಗಾಗುತ್ತಾನೆ ? ತನ್ನ ಸ್ಥಾನ, ಅಂತಸ್ತು, ವಿದ್ಯೆ ವಯಸ್ಸುಗಳಿಗೆ ಇತರರು ಗೌರವಕೊಡಬೇಕೆಂದು ಬಯಸುವ ವ್ಯಕ್ತಿ ಅವುಗಳನ್ನು ಹೊಂದಿರುವುದರ ಬಗೆಗೆ ಗರ್ವಪಡದೇ ತನ್ನ ಸುತ್ತಲಿನವರ ನೋವು, ದುಃಖಗಳಿಗೆ ಸ್ಪಂದಿಸಿದಾಗ ಸಮಾಜದಲ್ಲಿ ಗೌರವವನ್ನು ಪಡೆಯುತ್ತಾನೆ. ಹಿರಿಯನೆನಿಸುತ್ತಾನೆ, ಗಣ್ಯನಾಗುತ್ತಾನೆ ಅಲ್ಲವೇ ಸಖಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತುಂಟ
Next post ನಿನ್ನೊಳಗನಿಣುಕಿದವರೆಷ್ಟು ಮಂದಿ

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

cheap jordans|wholesale air max|wholesale jordans|wholesale jewelry|wholesale jerseys