ಅಮ್ಮಾ!
ನಿನ್ನ ಕಥೆಯ ಕೀರ್ತಿಸುತ ನಿಂತವರು ಬಹಳ,
ನಿನ್ನ ಮೈಯಂದವ ಅಂದಗೆಡುವಷ್ಟು ಹಾಡಿ ಹೊಗಳಿದವರು ಬಹಳ,
ಕಲ್ಪನೆಯ ಕುಂಚದಲಿ ಬಣ್ಣಿಸಿದವರು ಬಹಳ
ನಿನ್ನ ಗುಡಿಯ ಸಾಲು ಸಾಲಭಂಜಿಕೆಗಳ, ಮದನಿಕೆಗಳ
ಕುಸುರಿಗೆಲಸಗಳ ನೋಡಿ ಮರುಳಾಗಿ
ಬಾಯ್ತೆರೆದು ಅಲ್ಲೇ ಕುಳಿತವರು ಬಹಳ
ನಿನ್ನ ಸಮೀಪಿಸಿದವರು ನಿನ್ನೊಡವೆ ತೊಡುವೆಗಳ
ಬೆಡಗಿಗೆ ದಡಬಡಿಸಿ ದಂಗಾಗಿ, ನಿನ್ನ ಮೈಕಾಂತಿಗೆ ಕಣ್ಕುಕ್ಕಿ
ಆ ಚೆಲುಬಲೆಯಲ್ಲಿ ಸಿಲುಕಿ ಒದ್ದಾಡಿದವರು ಬಹಳ,
ನಿನ್ನ ಮಾತನಾಲಿಸಿದವರು, ಅದರಿಂಪು ಸೊಂಪಿಗೆ
ಒಗಟು ಜಿಗುಟುಗಳಿಗೆ, ಕಿವಿಯಗಲಿಸಿ ಬೆಪ್ಪಾದವರು ಬಹಳ,
ನಿನ್ನೊಂದೊಂದು ಬೆರಳ ಸನ್ನೆಗಳಿಗೆ ತಮತಮಗೆ ಕಂಡಂತೆ
ಅರ್ಥಗಳ ಹಚ್ಚಿ ಅನರ್ಥವುಂಡವರು ಬಹಳ
ನಿನ್ನ ಮನೆಯಿಂದಾಯ್ದ ಆಣಿಮುತ್ತೆಂದು
ಹಗಲೆಲ್ಲ ಬಾಯಲುರುಳಾಡಿಸಿ ಸವೆಸಿದವರು ಬಹಳ
ನಿನ್ನ ಹೊತ್ತಿಗೆಗಳ ಹೊತ್ತು ಮೆರೆಸಿ ತಾವು ಮೆರೆದವರು ಬಹಳ
ನಿನ್ನೆದೆ ಮಾತನಾಲಿಸುವ ಭ್ರಮೆಯಿಂದ ಮಾಯೆಲೀಲೆಗಳಲಿ
ಮುಳುಗಿದವರು ಬಹಳ
ನಿನ್ನ ಹೃದಯವ ಮುಟ್ಟಿದವರೆಷ್ಟು ಮಂದಿ ತಾಯಿ?
ನಿನ್ನೊಳಮರ್ಮವ ಅರಿತವರೆಷ್ಟು ಮಂದಿ?
ನಿನ್ನ ನಡೆಯ ನಡೆದವರೆಷ್ಟು?
ನಿನ್ನ ಮಾತಿನ ಜ್ಯೋತಿಯಿಂದ ತಮ್ಮ
ಅಂತರಂಗ ಬಹಿರಂಗಗಳ ಬೆಳಗಿದವರೆಷ್ಟು ಮಂದಿ?
ನಿನ್ನೊಳಗಿನೊಳಗೆ ಇಣುಕಿದವರೆಷ್ಟು ಮಂದಿ?
ನಿನ್ನಲಿ ಲೀನವಾಗಿ ನಿನಗೆ ತಮ್ಮನೊಪ್ಪಿಸಿಕೊಂಡವರೆಷ್ಟು ಮಂದಿ
ತಾಯಿ?
*****