ಗ್ರಹಣ

ಗ್ರಹಣ

ಚಿತ್ರ: ಜಾನ್ ಹೇನ್
ಚಿತ್ರ: ಜಾನ್ ಹೇನ್

ಮೌಸ್ ಜೊತೆ ಬೆರಳು ಆಡುತ್ತಿದ್ದರೂ ಮನಸ್ಸನ್ನು ಕಂಪ್ಯೂಟರ್ ಕಡೆ ಕೇಂದ್ರಿಕರಿಸಲಾರದೆ ಗಾಯನ್ ಕೊಂಚ ಡಿಸ್ಟರ್ಬ್ ಆಗಿದ್ದ. ಬೆಳಗ್ಗೆಯೇ ಬಂದ ಮಮ್ಮಿ ಫೋನ್ ಅವನನ್ನು ಅಸಹನೆಗೀಡು ಮಾಡಿತ್ತು. ಇವತ್ತು ಸೂರ್ಯ ಗ್ರಹಣ. ಅದು ನೈಸರ್ಗಿಕವಾಗಿ ನಡೆಯೋ ಒಂದು ಕ್ರಿಯೆ. ಸೂರ್ಯ, ಚಂದ್ರ, ಭೂಮಿ ಒಂದೇಸಲಕ್ಕೆ ನೇರವಾಗಿ ಬಂದಾಗ ಆಗುವ ಕ್ರಿಯೆಯೇ ಗ್ರಹಣ ಅನ್ನುವುದನ್ನು ಶಾಲಾ ದಿನಗಳಲ್ಲಿಯೇ ಓದಿದ್ದು, ಗ್ರಹಣ ಅಂದ್ರೆ ಯಾವ ಮಹತ್ವವನ್ನು ನೀಡದೆ ಬೆಳೆದು ಬಂದವನು. ಮಮ್ಮಿ ಕೂಡ ಸೈನ್ಸ್ ಓದಿರುವವಳೇ. ಆದರೆ ಇವತ್ತೇಕೆ ಹಾಗೆ ಮಾತಾಡಿದಳೋ ‘ಗಾಯನ್ ಇವತ್ತು ಆಫೀಸಿಗೆ ಹೋಗಬೇಡ, ಮನೆಯಲ್ಲಿಯೇ ಇರು. ನಿನ್ನ ರಾಶಿಗೆ ಈ ಗ್ರಹಣ ಕೆಟ್ಟದ್ದನ್ನು ಮಾಡುತ್ತದಂತೆ. ಅಪಘಾತ ಅಂತ ಇದೆಯಂತೆ ಕಣೋ ಕಾರು ಹೊರಗೆ ತೆಗೆಯಬೇಡ. ಬೈಕ್ನಲ್ಲಿಯೂ ಹೋಗಬೇಡ. ಇವತ್ತೊಂದು ದಿನ ಮನೆಯಲ್ಲಿಯೇ ಇದ್ದು ಬಿಡೋ’ ಹೆಚ್ಚು ಕಡಿಮೆ ಬೇಡುವಂತೆಯೇ ಹೇಳಿದಾಗ ‘ಓಹ್ ಮಮ್ಮೀ ಸಿಲ್ಲಿಯಾಗಿ ಮಾತಾಡಬೇಡ. ನಿನ್ನ ಮಗ ಸಾಫ್ಟ್‌ವೇರ್ ಎಂಜಿನಿಯರ್. ನೀನೂ ಎಂ ಎಸ್ಸಿ ಮಾಡಿ ಸೈನ್ಸ್ ಪಾಠ ಮಾಡ್ತಾ ಇರೋಳು. ಗ್ರಹಣ ಅಂದ್ರೆ ಏನು ಅಂತ ದಿನ ಬೆಳಗಾದ್ರೆ ನಿನ್ನ ಸ್ಟೂಡೆಂಟ್ಸ್‌ಗೆ ಹೇಳ್ತಾ ಇರೋ ನೀನೇ ಗ್ರಹಣ ಕೆಟ್ಟದ್ದು ಮಾಡುತ್ತದೆ ಅಂತ ಇದ್ದೀಯಲ್ಲ. ಫೋನ್ ಇಡು ಮೊದ್ಲು’ ಅಸಹನೆಯಿಂದ ಮೊಬೈಲ್ ಆಫ್ ಮಾಡಿದ್ದ. ಮಮ್ಮಿಗೆ ಇತ್ತೀಚೆಗೆ ಏನೋ ಆಗಿದೆ. ದೇವರು, ಜೋತಿಷ್ಯ, ಪೂಜೆ, ಹೋಮ ಅಂತೆಲ್ಲ ಯಾಕೋ ವಾಲ್ತಾ ಇದಾಳೆ. ಮಮ್ಮಿ ಮಾಡ್ರನ್ ಥಿಂಕಿಂಗ್ಸ್‌ ಇರೋಳು ಅಂತ ಅಂದ್ಕೊಂಡಿದ್ದು ಸುಳ್ಳಾಗ್ತಾ ಇದೆಯಲ್ಲ. ಸ್ಕ್ರೀನ್ ಮೇಲೆ ಬೇಕಾದುದೊಂದು ಮೂಡದೆ ಇದ್ದಾಗ ಕಂಪ್ಯೂಟರ್ ಆಫ್ ಮಾಡಿ ಟೈಂ ನೋಡಿಕೊಂಡ. ೫ ಗಂಟೆ, ಕುರ್ಚಿ ಬಿಟ್ಟೆದ್ದು ಕಿಟಕಿ ಬಳಿ ನಿಂತುಕೊಂಡ.

ಇಡೀ ರಸ್ತೆ ನಿರ್ಜನವಾಗಿತ್ತು. ಗ್ರಹಣದ ಪ್ರಯುಕ್ತ ಇಡೀ ಬೆಂಗಳೂರಿನ ಜನರು ಕರ್ಫ್ಯೂ ವಿಧಿಸಿಕೊಂಡಂತೆ ಮನೆ ಸೇರಿಕೊಂಡಿದ್ದರು. ಏನು ಜನರೋ ಈ ಜನರಿಗ್ಯಾವಾಗ ಬುದ್ಧಿ ಬರುವುದೋ. ಮನೆಗೆ ಹೋಗೋಣ ಅಂದ್ರೆ ಮಮ್ಮಿ ಮತ್ತೆ ಫೋನ್ ಮಾಡಿ ‘ಆಫೀಸಿಗೆ ಹೋಗ್ಲೇ ಬೇಕು ಅಂದ್ರೆ ಹೋಗು, ಆದ್ರೆ ಗ್ರಹಣ ಬಿಟ್ಟ ಮೇಲೆಯೆ ಆಫೀಸಿನಿಂದ ಹೊರಗೆ ಬರಬೇಕು ನನ್ನ ಮೇಲೆ ಆಣೆ’ ಎಂದು ಹೇಳಿ ತಾನು ಮತ್ತೇನೂ ಮಾತಾಡದಂತೆ ಕರೆ ಕಟ್ ಮಾಡಿದ್ದಳು. ಅವಳನ್ನು ನೋಯಿಸಬಾರದು ಅಂದ್ರೆ ತಾನೀಗ ೭ ಗಂಟೆವರೆಗೆ ಇಲ್ಲೇ ಕೊಳೀಬೇಕು. ಪಾಪ ಮಮ್ಮಿಗೆ ಇರೋ ಒಬ್ಬನೇ ಮಗನ ಮೇಲೆ ವಿಪರೀತ ಕಾಳಜಿ. ‘ಪೂರ್ ಮಮ್ಮಿ’ ಮಮ್ಮಿ ಮೇಲೆ ಅಕ್ಕರೆ ಉಕ್ಕಿ ಬಂದಿತು. ತಕ್ಷಣವೇ ಭವಿಷ್ಯ ನೆನಪಾದಳು. ಕೈಗಳು ಅರಿವಿಲ್ಲದಂತೆ ಅವಳ ನಂಬರನ್ನು ಒತ್ತಿದವು. ಮೊಬೈಲ್ ಕಿವಿಗಿಡಿದರೆ ಕರೆಯಾಗುತ್ತಿರುವುದು ಕೇಳಿಸಿತು. ‘ಹಾಯ್‌ ಮಿಸ್ಟರ್ ಮಗೂ ಹೇಗಿದ್ದೀಯಾ? ೭ ಗಂಟೆಯವರೆಗೂ ಆಫೀಸಲ್ಲೇ ಬಂಧಿ ನೀನು. ನಾನಂತೂ ಮನೆಗೆ ಹೋಗ್ತಾ ಇದ್ದೀನಪ್ಪ’ ಅತ್ತಲಿಂದ ಭವಿಷ್ಯಳ ಧ್ವನಿ ತೂರಿ ಬಂತು.

ಮಗು ಅನ್ನೋದನ್ನ ಇವಳು ಬಿಡಲ್ಲ. ಮಮ್ಮಿ ಜೊತೆ ನನಗಿಂತ ಜಾಸ್ತಿ ಮಾತಾಡ್ತಾಳೆ. ಮಮ್ಮಿ ನನ್ನ ಬಗ್ಗೆ ತಗೊಳ್ಳೊ ಕೇರ್, ಭವಿಷ್ಯಳಿಗೆ ಹಾಸ್ಯದ ವಸ್ತು. ಸದಾ ತಮಾಷೆ ಮಾಡ್ತಾನೇ ಇರ್ತಾಳೆ ‘ಲೇ ಭವಿಷ್ಯ ನಿಂಗೂ ಮಮ್ಮಿ ಫೋನ್ ಮಾಡಿದ್ಲಾ. ಅವಳಿಗಂತೂ ಬುದ್ಧಿ ಇಲ್ಲಾ, ನಿಂಗೂ ಇಲ್ವಾ, ನಾನು ಹೊರಡ್ತಾ ಇದ್ದೀನಿ.’

“ಬೇಡ ಕಣೋ. ನೀನು ಹೋಗ್ತೀಯಾ ಅಂತಾನೇ ಆಂಟಿ ನಂಗೆ ಜವಾಬ್ದಾರಿ ಹೊರಿಸಿದ್ದಾರೆ. ನಾನು ಇನ್ನೂ ಇಲ್ಲೇ ಇದ್ದೀನಿ. ನಿನ್ನ ಕ್ಯಾಬಿನ್‌ಗೆ ಬರ್ತಾ ಇದ್ದೀನಿ. ಹೋಗಬೇಡ ಇರು” ಹಾಗೆಂದ ಮರುಕ್ಷಣವೇ ಬಾಗಿಲು ತಳ್ಳಿಕೊಂಡು ಒಳಬಂದಳು.

“ನೋಡಪ್ಪ ಗಾಯನ್ ಮಕರ ರಾಶಿಯವರಿಗೆ ಈ ಗ್ರಹಣ ತುಂಬಾ ಕೆಟ್ಟದ್ದು ಮಾಡುತ್ತಂತೆ. ಅದರಲ್ಲೂ ಅಪಘಾತ ಆಗುತ್ತಂತೆ. ನಿನ್ನ ೭ ಗಂಟೆವರೆಗೂ ಕಾಯ್ಕೊಂಡು ಆಮೇಲೆ ಸೀದಾ ಆಂಜನೇಯ ಗುಡಿಗೆ ಹೋಗಿ ಪೂಜೆ ಮಾಡಿಸ್ಕೊಂಡು ಬರೋ ಕೆಲಸ ನಂಗೆ ಆಂಟಿ ವಹಿಸಿದ್ದಾರೆ. ಅವರು ನನ್ನ ಮೇಲೆ ಇಟ್ಟಿರೋ ನಂಬಿಕೆನಾ ನಾನು ಉಳಿಸಿಕೊಳ್ಳಬೇಕು” ನಾಟಕೀಯವಾಗಿ ನುಡಿಯುತ್ತ ಗಾಯನ್ ಪಕ್ಕ ಬಂದು ಕುಳಿತಳು. “ಅಯ್ಯೋ ಭವಿಷ್ಯ ನಿಮ್ಮ ಆಂಟಿ ಮಾತು ಕೇಳಿ ನೀನೂ ಹಾಳಾಗ್ತಿ ನನ್ನೂ ಹಾಳು ಮಾಡ್ತೀ” ಮನಸ್ಸಿನಲ್ಲಿಯೇ ಹೇಳಿಕೊಳ್ಳುತ್ತ ದೊಡ್ಡ ನಿಟ್ಟುಸಿರು ಬಿಡುತ್ತ ‘ನೀನು ಪಕ್ಕದಲ್ಲಿದ್ರೆ ನಂಗೆ ಆಕ್ಸಿಡೆಂಟಾಗುವುದಿಲ್ಲವಾ, ಇನ್ನು ದೇವಸ್ಥಾನಕ್ಕೆ ಬೇರೆ ಹೋಗೋ ಶಿಕ್ಷೆ ಕಾದಿದೆ ನಂಗೆ.’

“ಏಯ್ ಶಿಕ್ಷೆ ಅಂತ ಯಾಕೆ ಹೇಳ್ತೀಯೋ; ತಾಯಿ ಹೃದಯ ನಿಂಗೆ ಅರ್ಥವಾಗಲ್ಲ ಕಣೋ. ಆಂಟಿ ಮೊದ್ಲೆ ಹೆದರಿದ್ದಾರೆ. ನಿಮ್ಮ ಅಂಕಲ್ ಸಾವು ಅವರನ್ನು ಧೃತಿ ಕೆಡಿಸಿದೆ. ಅವರನ್ನು ಅರ್ಥಮಾಡಿಕೊ” ಕೈ ಹಿಡಿದು ಹೇಳುತ್ತಿದ್ದರೆ ಕನಿಕರದಿಂದ ಅವಳತ್ತ ನೋಡಿದ. ಈ ಭವಿಷ್ಯ ನನ್ನ ಯಾಕೆ ಇಷ್ಟೊಂದು ಹಚ್ಕೊಂಡಿದ್ದಾಳೆ. ಇವಳಿಗೇನು ಕಡಿಮೆ ಆಗಿದೆ. ಸಾವಿರ ಜನರಲ್ಲೂ ಎದ್ದು ಕಾಣೋ ರೂಪ, ನನಗಿಂತಲೂ ಜಾಸ್ತಿ ಸಂಬಳ, ಮುಂದೆ ಒಳ್ಳೇ ಫ್ಯೂಚರ್ ಇದೆ. ನೂರಾರು ಜನ ಅವಳ ಹಿಂದೆ ಬೀಳ್ತಾ ಇದ್ರೂ ಇವಳು ಮಾತ್ರ ನನ್ನ ಹಿಂದೆ ಬಿದ್ದಿದ್ದಾಳೆ. ಮಮ್ಮಿ ಕಂಡ್ರೆ ತುಂಬಾ ಇಷ್ಟ. ಆದ್ರೆ ಅದೇ ಮಮ್ಮಿ ಇವಳಾಸೆಗೆ ಅಡ್ಡಿಯಾಗಿದ್ದಾಳೆ ಅಂತ ಗೊತ್ತಿದ್ರೂ ಮಮ್ಮಿ ಬಗ್ಗೆ ಪ್ರೀತಿನಾ, ಗೌರವಾನ ಕಳ್ಕೊಂಡಿಲ್ಲ. ರಿಯಲಿ ಗ್ರೇಟ್ ಭವಿಷ್ಯ ನೀನು.

“ಯಾಕೋ ಹಾಗೆ ನೋಡ್ತಾ ಇದ್ದೀಯಾ… ಹೊಸಬರನ್ನ ನೋಡಿದ ಹಾಗೆ” ಎಚ್ಚರಿಸಿದಳು.

“ದಿನಾ ನೀನು ನಂಗೆ ಹೊಸಬಳಂತೆ ಕಾಣ್ತೀಯಾ ಬಿಡು; ಟೈಂ ಆಯ್ತು ಹೊರಡೋಣ ಬಾ” ಹೊರಟು ನಿಂತ.

“ಬೈಕ್ ತಂದಿಲ್ವಾ ಗೊತ್ತು ಬಿಡು, ನನ್ನ ಕಾರಲ್ಲೇ ಬಿಡ್ತೀನಿ ಬಾ. ಮೊದ್ಲು ಆಂಜನೇಯ ಗುಡಿಗೆ ಹೋಗಿ ಪೂಜೆ ಮಾಡಿಸೋಣ” ಎನ್ನುತ್ತ ಕಾರಿನ ಹತ್ತಿರ ಬಂದಳು. ಡ್ರೈವಿಂಗ್ ಸೀಟಿನಲ್ಲಿ ಕುಳಿತ ಅವನನ್ನು ಕಂಡು ‘ನೀನು ಡ್ರೈವ್ ಮಾಡ್ತೀಯಾ. ಅಯ್ಯೋ ಬೇಡಪ್ಪಾ, ಸುಮ್ನೆ ನನ್ನ ಪಕ್ಕ ಕುತ್ಕೋ. ಇವತ್ತು ಸೇಫಾಗಿ ನಿನ್ನ ಕಾಪಾಡ್ಕೋಬೇಕು. ಕಾಪಾಡ್ತೀನಿ ಅಂತ ಆಂಟಿಗೆ ಪ್ರಾಮಿಸ್ ಮಾಡಿದ್ದೀನಿ” ಸ್ಟೇರಿಂಗ್ ಹಿಡಿದವನನ್ನು ಪಕ್ಕಕ್ಕೆ ತಳ್ಳುತ್ತ ಹೇಳಿದಳು.

“ಓಹೋ ದೊಡ್ಡ ಬಾಡಿಗಾರ್ಡ್ ಇವಳು. ಮೊದ್ಲು ನಿನ್ನ ಕಾಪಾಡ್ಕೋಳೋದನ್ನ ನೋಡ್ಕೋ” ರೇಗುತ್ತಲೇ ಪಕ್ಕಕ್ಕೆ ಸರಿದು ಭವಿಷ್ಯ ಡ್ರೈವಿಂಗ್ ಸೀಟಿನಲ್ಲಿ ಕೂರಲು ಅನುವು ಮಾಡಿಕೊಟ್ಟ.

“ಅಲ್ವೋ ಗಾಯು, ಗ್ರಹಣ ಮುಗಿದ ಮೇಲೆ ಸ್ನಾನ ಮಾಡ್ಕೋಬೇಕು ಅಂತಾರಲ್ಲೋ, ಈಗ ನಾವೇನು ಮಾಡೋಣ. ಮನೆಗೆ ಹೋಗಿ ಸ್ನಾನ ಮಾಡಿ ಆಮೇಲೆ ದೇವಸ್ಥಾನಕ್ಕೆ ಹೋಗೋಣ್ವಾ”

“ಅಮ್ಮಾ ತಾಯಿ, ನಾನು ಬೆಳಿಗ್ಗೆನೇ ಸ್ನಾನ ಮಾಡಿದ್ದೀನಿ. ಮೊದ್ಲು ದೇವಸ್ಥಾನಕ್ಕೆ ಹೋಗಿ ನಿನ್ನ ಹರಕೆ ತೀರಿಸಿ, ಯಾವುದಾದ್ರೂ ಹೊಟ್ಲಿಗೆ ಹೋಗಿ ಹೊಟ್ಟೆಗೆ ಹಾಕ್ಕೊಂಡು ಮನೆಗೆ ಹೋಗೋಣ” ಅವಸರಿಸಿದ. ಸರಿ ಎನ್ನುವಂತೆ ಕಾರು ಚಲಾಯಿಸಿದಳು.

ದೇವಸ್ಥಾನ ಸ್ವಲ್ಪ ಮುಂದೆ ಇರುವಾಗಲೆ ಭವಿಷ್ಯ “ಗಾಯು ಇಲ್ಲಿ ಕಾರು ಪಾರ್ಕ್ ಮಾಡೋ ಹಾಗಿಲ್ಲ. ನಾನು ಕಾರನ್ನ ಸ್ಲೋ ಮಾಡ್ತೀನಿ. ಆ ಅಂಗಡಿ ಹತ್ರ ಇಳ್ಕೊಂಡು ಬಿಡು. ಅಂಗಡೀಲಿ ಒಂದರ್ಧ ಕೆಜಿ ಎಳ್ಳೆಣ್ಣೆ ತಗೊಂಡು ಬೇಗ ಬಂದುಬಿಡು. ದೇವಸ್ಥಾನದ ಹತ್ತಿರ ಕಾಯ್ತಾ ಇರ್ತ್ತೀನಿ” ಅಂದಾಗ ಗಾಯನ್‌ಗೆ ಈಗೇಕೆ ಎಳ್ಳೆಣ್ಣೆ, ಹಾಗಂತ ಕೇಳಬೇಕೆಂದು ಕೊಂಡವನು ಕೇಳ್ತಾ ಕೂತ್ಕೊಂಡ್ರೆ ರೇಗ್ತಾಳೆ ಅಂತ ಕಾರು ಸ್ಲೋ ಆದಕೂಡಲೇ ಡೋರ್ ತೆಗೆದು ವೇಗವಾಗಿ ಕಾರಿಂದಿಳಿದ.

ಎಣ್ಣೆ ತೆಗೆದುಕೊಂಡು, ಪೂಜೆಗೆ ಬೇಕಾದ ಕಾಯಿ, ಕರ್ಪೂರ, ಊದುಕಡ್ಡಿ ಎಲ್ಲವನ್ನೂ ಕ್ಯಾರಿಬ್ಯಾಗಿಗೆ ಹಾಕಿಸಿಕೊಂಡು ದೇವಸ್ಥಾನದ ಬಳಿಗೇ ನಡೆದುಕೊಂಡೇ ಬಂದ.
ಹೂವೊಂದು ಸಿಕ್ಕಿರಲಿಲ್ಲ. ದೇವಸ್ಥಾನದ ಮುಂದೆ ಹೂ ಮಾರುವವಳ ಹತ್ತಿರ ಹೂವು ಕೊಂಡುಕೊಂಡು ಬ್ಯಾಗಿನೊಳಗಿರಿಸಿಕೊಂಡು ಭವಿಷ್ಯಳಿಗಾಗಿ ಸುತ್ತ ಹುಡುಕಿದ. ಇವಳೆಲ್ಲಿ ಹೋದಳಪ್ಪ, ಎಷ್ಟೊಂದು ಜನರಪ್ಪ. ಕ್ಯೂ ನಿಲ್ಲಬೇಕಲ್ಲ. ಹಿಂಸೆ ಪಟ್ಟುಕೊಳ್ಳುತ್ತಲೇ ದೇವಾಲಯದ ಮೆಟ್ಟಲೇರಿ ಭವಿಷ್ಯಳಿಗಾಗಿ ಕಣ್ಣು ಹಾಯಿಸಿದ. ಅವಳಾಗಲೇ ಕ್ಯೂನಲ್ಲಿ ನಿಂತಿದ್ದಳು. ಇವನನ್ನು ಕಂಡ ಕೂಡಲೇ ‘ಬಾರೋ ಇಲ್ಲೇ ಇದ್ದೀನಿ’ ಅಂತ ಕೂಗಿದಳು. ಅವಳ ಹಿಂದೆ ಸೇರಿಕೊಂಡ ‘ಅಲ್ವೆ ಈ ಎಣ್ಣೆ ಯಾಕೆ’ ಸಿಡುಕಿದ. ಕಿಸಕ್ಕನೆ ನಕ್ಕವಳೇ “ಎಲ್ಲಾ ನಿಂಗೋಸ್ಕರ. ಪ್ರತಿವಾರ ಎಳ್ಳಣ್ಣೆನ ಗುಡಿಗೆ ಕೊಡಬೇಕಂತೆ. ಇನ್ನು ಮೂರು ತಿಂಗಳು ಈ ಪನಿಷ್ಮೆಂಟ್ ನಿನಗೆ. ಹಾಗಂತ ಆಂಟಿ ಆರ್ಡರ್ ಮಾಡಿಬಿಟ್ಟಿದ್ದಾರೆ” ಎಂದಳು.

“ಏನಾಗಿದೆ ನಿಮ್ಮಿಬ್ಬರಿಗೆ. ಮಮ್ಮಿಗಂತೂ ಬುದ್ಧಿ ಇಲ್ಲಾ, ನಿಂಗೂ ಇಲ್ವಾ ಸ್ಟುಪಿಡ್, ಇವತ್ತೇ ಕೊನೆ ಮತ್ತೆ ಈ ಕಡೆ ತಲೆ ಹಾಕಲ್ಲ” ಧ್ವನಿ ಎತ್ತರಿಸಿದವನು ಸುತ್ತ ಜನರಿರುವುದನ್ನು ಗಮನಿಸಿ ಸಿಟ್ಟನ್ನು ಅಡಗಿಸಿಕೊಳ್ಳಲು ಪ್ರಯತ್ನಿಸಿದ. ನಮ್ಮಮ್ಮಂಗೆ ಮಸ್ಕಾ ಹೂಡೀತಾ ಇದ್ದಾಳೆ. ಅವಳು ಹೇಳಿದಂತೆಲ್ಲ ಕೇಳಿದರೆ ಅವಳು ಇವಳನ್ನು ಒಪ್ಪಿ ಬಿಡ್ತಾಳೆ ಅಂತ… ಆದ್ರೆ ನಾನು ಒಪ್ಕೋಬೇಕಲ್ಲ….. ದುರುದುರು ನೋಡಿದ.

“ಏಯ್ ಸುಮ್ನೆ ಬಾರೋ. ಮುಂದಿನ ಜನ್ಮದಲ್ಲಾದ್ರೂ ಒಳ್ಳೆ ಬುದ್ಧಿ ಕೊಡ್ಲಿ ಅಂತ ಬೇಡ್ಕೋ” ತೋಳನ್ನು ಜಿಗುಟಿದಳು.

‘ರಾಕ್ಷಸಿ’ ಒಳಗೆ ಬೈಯ್ದುಕೊಳ್ಳುತ್ತ ಉರಿಯುತ್ತಿರುವ ತೋಳನ್ನು ಸವರಿಕೊಂಡ.

ಪೂಜೆ ಮುಗಿಸಿ ಹೊರಬಂದು “ಲೋ ಕುತ್ಕೊಂಡು ಹೋಗೋಣ ಬಾ, ದೇವಸ್ಥಾನಕ್ಕೆ ಬಂದ ಮೇಲೆ ಸ್ವಲ್ಪ ಹೊತ್ತು ಕೂತ್ಕೋಬೇಕಂತೆ” ಮೆಟ್ಟಿಲು ಮೇಲೆ ಕೂತ್ಕೊಂಡು ಕವರಿನಲ್ಲಿದ್ದ ಬಾಳೆಹಣ್ಣನ್ನು ತೆಗೆದು ಗಾಯನ್ಗೂ ಕೊಟ್ಟು ‘ಕಣ್ಣಿಗೆ ಒತ್ತಿಕೊಂಡು ತಿನ್ನು, ಇದು ದೇವರ ಪ್ರಸಾದ’ ಎಂದ್ಹೇಳಿ ತಾನೂ ಕಣ್ಣಿಗೊತ್ತಿಕೊಂಡು ಬಾಯಿಗೆ ಹಾಕಿಕೊಂಡಳು.

“ಗಾಯು ಹೋಟೆಲಿಗೆ ಹೋಗೋದು ಬೇಡಾ ಕಡೋ, ಗ್ರಹಣಕ್ಕೂ ಮುಂಚೆ ಮಾಡಿರೋದನ್ನು ಕೊಡ್ತಾರೆ. ಈಗ ಸೀದಾ ನಮ್ಮ ಮನೆಗೇ ಹೋಗೋಣ. ಇಬ್ರೂ ಸೇರಿ ಅಡುಗೆ ಮಾಡೋಣ. ಅಷ್ಟು ಹೊತ್ತಿಗೆ ಜಾನೂನೂ ಬತಾಳೆ. ಇವತ್ತು ನಮ್ಮ ರೂಮಲ್ಲೇ ಉಳ್ಕೊ ಬೆಳಿಗ್ಗೆ ಇಬ್ರೂ ಒಟ್ಟಿಗೆ ಆಫೀಸಿಗೆ ಹೋಗೋಣ” ಎಂದಾಗ ಅಸ್ತು ಎಂದನು.

ಭವಿಷ್ಯ ಪುಟ್ಟ ಮನೆ ಮಾಡಿದ್ದಳು. ಅವಳ ಗೆಳತಿ ಜಾನೂ ಜೊತೆ ಸೇರಿ ಊಟ, ತಿಂಡಿ ಮಾಡಿಕೊಳ್ಳುತ್ತ ಹೋಟೆಲಿನೂಟದಿಂದ ಬಚಾವಾಗಿದ್ದಳು. ಜಾಹ್ನವಿ ಮತ್ತೊಂದು ಕಂಪನಿಯಲ್ಲಿ ಕೆಲಸದಲ್ಲಿದ್ದಳು.

“ಲೋ ಗಾಯು ತುಂಬಾ ಹಸಿವಾಗ್ತಾ ಇದ್ಯಾ. ಬೇಗ ಅಡುಗೆ ಮಾಡ್ತೀನಿ. ಪ್ರಿಜ್ನಲ್ಲಿ ಬೀನ್ಸ್, ಕ್ಯಾರೆಟ್ ಇದೆ. ಅದನ್ನು ತೊಳೆದು ಹೆಚ್ಚಿ ಕೊಡು. ಎಲ್ಲಾ ಒಟ್ಟಿಗೆ ಹಾಕಿ ಬಿಸಿಬೇಳೆಭಾತ್ ಮಾಡಿಬಿಡ್ತೀನಿ. ನಿಂಗೆ ಬಸಿಬೇಳೆಭಾತ್ ಅಂದ್ರೆ ತುಂಬಾ ಇಷ್ಟ ಅಲ್ವಾ” ಬಟ್ಟೆ ಬದಲಿಸಿಕೊಂಡು ಬಂದವಳೇ ಗಾಯನ್‌ಗೆ ಕೆಲಸ ಕೊಟ್ಟಳು.

ಗಾಯ ಅಂತ ಕರಿಬೇಡ್ವೆ ಅನ್ನಬೇಕು ಅಂದುಕೊಂಡವನು ಸುಮ್ಮನಾಗಿಬಿಟ್ಟ. ಎಷ್ಟು ಹೇಳಿದ್ರೂ ಅವಳು ಹಾಗೆ ಕರೆಯುವುದನ್ನು ಬಿಡುವುದಿಲ್ಲ. ಸ್ಕೂಲಿಗೆ ಹೋಗುವಾಗಲೂ ಗೆಳೆಯರೆಲ್ಲ ಗಾಯ ಗಾಯ ಅಂತ ಛೇಡಿಸುತ್ತಿದ್ರು. ‘ನಂಗ್ಯಾಕೆ ಈ ಹೆಸರು ಇಟ್ಟೆ’ ಅಂತ ಮಮ್ಮಿ ಜೊತೆ ಜಗಳ ಮಾಡಿದಾಗಲೆಲ್ಲಾ ‘ಅವರಿಗೇನು ಗೊತ್ತು ಆ ಹೆಸರ ಮಹತ್ವ ಗಾಯನ ಅಂದ್ರೆ ಹಾಡು ಕಣೋ’ ಎನ್ನುತ್ತ ಸಮಾಧಾನಿಸುತ್ತಿದ್ದಳು. ಸಧ್ಯ ಹಾಡು ಅಂತ ಇಡಲಿಲ್ಲವಲ್ಲ. ಹಾಗೇನಾದ್ರೂ ಇಟ್ಟಿದ್ರೆ ಆಡು ಕುರಿ ಅಂತ ಕರೆದು ಆಡಿಕೊಳ್ತಾ ಇದ್ದರೇನೋ ಅಂತ ಗೊಣಗಿಕೊಳ್ಳುತ್ತಿದ್ದೆ.

“ಗಾಯು, ಎಲ್ಲಿ ಕಳೆದು ಹೋಗಿದ್ದೀಯಾ, ಬೇಗ ತರಕಾರಿ ಹೆಚ್ಚಿ ಕೊಡಪ್ಪ. ನಾನು ಟೀ ಮಾಡ್ತೀನಿ ಅಷ್ಟರೊಳಗೆ, ಸಂಜೆಯಿಂದ ಟೀ ಕುಡಿಯದೆ ತಲೆ ಕೆಟ್ಟಂಗೆ ಆಗಿದೆ.” ಮಸ್ಕ ಹೊಡೆಯುತ್ತ ಇದ್ದಾಳೆ ಕೆಲ್ಸ ಮಾಡಿಸಿಕೊಳ್ಳೋಕ್ಕೆ. ಬೈಯ್ದುಕೊಳ್ಳುತ್ತಲೆ ಫ್ರಿಜ್ಜಿನಲ್ಲಿದ್ದ ತರಕಾರಿ ತೆಗೆದು ತೊಳೆದು ಚಾಕುವಿನಿಂದ ಚಕಚಕನೆ ಹೆಚ್ಚತೊಡಗಿದ. ಇವತ್ತು ಗ್ರಹಣ ಇದ್ದಿದ್ರಿಂದ ಅಲ್ವೆ ಈ ಪನಿಷ್ಮೆಂಟ್. ಹಾಯಾಗಿ ಯಾವುದೋ ಹೋಟೆಲಿಗೆ ನುಗ್ಗಿ ಬಿರಿಯಾನಿಯೊ, ಪಲಾವ್ ತಿಂದು ಮನೆಗೆ ಹೋಗಿ ಈ ವೇಳೆಗೆ ಮಲಗಿರಬಹುದಿತ್ತು. ಈ ಭವಿಷ್ಯ ಬೇರೆ ನಕ್ಷತ್ರಕಳಂತೆ ಗಂಟು ಬಿದ್ದಿದ್ದಾಳೆ. ಅಲ್ಲಿ ಮಮ್ಮಿ ಆದ್ರೆ ಇಲ್ಲಿ ಇವಳು.

‘ಆಯ್ತನೋ, ಬೇಗ ಕೊಡು ಆಗಲೇ ೧೦ ಗಂಟೆ ಆಗ್ತಾ ಬಂತು. ಆ ಜಾನು ಇಷ್ಟು ಹೊತ್ತಾದ್ರೂ ಇನ್ನೂ ಬಂದಿಲ್ಲ. ಬೇಗ ಬರಬೇಕು ಅನ್ನೋ ಜ್ಞಾನ ಇಲ್ವಾ. ನಿನ್ನ ಫ್ರೆಂಡಿಂದ್ಲೆ ಹಾಳಾಗಿ ಹೋಗಿದ್ದಾಳೆ. ಬೆಳ್ಳಿಗೆಯೇ ಚಿದೂ ಫೋನ್ ಬಂದಿತ್ತು. ಇಬ್ರೂ ಎಲ್ಲಿಗೋ ಹೋಗಿದ್ದಾರೆ. ಇನ್ನು ಬಂದು ಊಟ ಮಾಡ್ತಾಳೋ ಇಲ್ಲವೊ. ಅವಳಿಗೆ ಅಡುಗೆ ಮಾಡ್ಲೋ ಬೇಡವೋ” ಒಬ್ಬಳೇ ಮಾತಾಡ್ತಾ ಕುಕ್ಕರ್ ಇಟ್ಟು ಒಗ್ಗರಣೆ ಹಾಕಿ ನೀರು, ಬೇಳೆ, ಉಪ್ಪು, ಬಿಸಿಬೇಳೆಭಾತಿನ ಪುಡಿ ಎಲ್ಲಾ ಒಟ್ಟಿಗೆ ಹಾಕಿ ಕುಕ್ಕರ್ ಮುಚ್ಚಿದಳು. ಅದು ವಿಶಲ್ ಹೊರಡಿಸುವಷ್ಟರಲ್ಲಿ ಚಿಪ್ಸ್ ಪ್ಯಾಕೇಟ್ ಒಡೆದು ತಟ್ಟೆಗೆ ಸುರಿದು ಟೇಬಲ್ ಮೇಲೆ ಇರಿಸಿ ಮೊಸರಿಗೆ ಈರುಳ್ಳಿ ಟೊಮೆಟೊ ಹೆಚ್ಚಿ ಹಾಕಿ ಮೊಸರು ಬಜ್ಜಿ ರೆಡಿ ಮಾಡಿದಳು. ಅಷ್ಟರಲ್ಲಿ ಭವಿಷ್ಯಳ ಮೊಬೈಲ್ “ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ” ಅಂತ ಹಾಡತೊಡಗಿತು. ಜಾನೂದೇ ಇರಬೇಕು ಇವತ್ತು ಬತಾಳೋ ಇಲ್ವೊ, ನಿನ್ನ ಬೇರೆ ಇಲ್ಲೇ ಉಳ್ಕೋ ಅಂತ ಕರ್ಕೊಂಡು ಬಂದಿದ್ದೀನಿ. ಅವಳು ಬರ್ದೆ ಇದ್ರೆ ನಾವಿಬ್ರು ಇಡೀ ಮನೆಗೆ. ಪಾಪ ನೀನೇನೋ ಒಳ್ಳೆಯವನೇ ಆದ್ರೆ ನಾಳೆ ಬಂದು ಜಾನು ಸುಮ್ನೆ ರೇಗಿಸ್ತಾಳೆ. ಮಾತಾಡ್ತನೇ ಫೋನ್ ರಿಸೀವ್ ಮಾಡಿದಳು. ‘ಓಹ್ ನೋ’ ಜೋರಾಗಿ ಕೂಗಿಕೊಂಡವಳೇ ಬಿಕ್ಕಿ ಬಿಕ್ಕಿ ಅಳತೊಡಗಿದಳು. ‘ಯಾರದೇ ಫೋನ್, ಏನಾಯ್ತೆ ಭವಿ,’ ಯಾಕೆ ಹೀಗೆ ಅಳ್ತ ಇದ್ದೀಯಾ, ಮಾತಾಡೇ ಭವಿ ಕಂಗಾಲಾದ ಗಾಯನ. ಗಾಯನನ್ನು ತಬ್ಬಿಕೊಂಡು ಅಳುತ್ತಲೇ, ‘ಗಾಯು ಗಾಯು ಜಾನೂ ಚಿದೂ ಬರ್ತಾ ಇದ್ದ ಬೈಕ್‌ಗೆ ಲಾರಿ ಗುದ್ದಿ ಬಿಟ್ಟಿದೆಯಂತೆ. ಬದುಕೋ ಚಾನ್ಸ್ ಇಲ್ಲವಂತೆ’ ಹೇಳಿದಳು.

ಶಾಕ್ ಹೊಡೆದಂತಾಗಿ ಗಾಯನ ಕುರ್ಚಿ ಮೇಲೆ ಕುಸಿದ. ಏನಾಗಿ ಹೋಯ್ತು ಚಿದು ಜಾನೂಗೆ ಆಕ್ಸಿಡೆಂಟೆ. ಮಮ್ಮಿ ಹೇಳೋ ಪ್ರಕಾರ ನನಗೆ ಆಕ್ಸಿಡೆಂಟಾಗಬೇಕಿತ್ತು. ಅದರೆ ಈಗ ಹೀಗಾಗಿದೆಯಲ್ಲ. ಈ ಗ್ರಹಣದ ರಾಶಿ ಭವಿಷ್ಯ ಉಲ್ಟಾ ಆಗಿದೆ. ಅಪಾಯವಿಲ್ಲ ಎಂದವರಿಗೆ ಅಪಾಯವಾಗಿದೆ. ಮೊದ್ಲು ಈ ರೀತಿ ಭವಿಷ್ಯ ಹೇಳೋರನ್ನ, ಹೇಳಿ ಮಮ್ಮಿಯಂತವರನ್ನು ಹೆದರಿಸೋರನ್ನ ಗುಂಡು ಹೊಡೆದು ಕೊಲ್ಲಬೇಕು. ರೋಷ, ದುಃಖ ಒಟ್ಟಿಗೆ ಬಂತು. ಭವಿಯ ಜಾತಕದಲ್ಲಿ ಮದುವೆಯಾದ ಮೇಲೆ ಗಂಡನಿಗೆ ಕಂಟಕ, ಮರಣ ಅಂತ ಇದೆ ಅಂತಲ್ವಾ ಮಮ್ಮಿ ಭವಿಯ ಜೊತೆ ಮದ್ವೆ ಆಗಬಾರದು, ತುಂಬಾ ಒಳ್ಳೆ ಹುಡುಗಿನೇ ಇರಬಹುದು. ಚೆನ್ನಾಗಿಯೇ ಇದ್ದಾಳೆ. ಜಾಸ್ತಿ ಸಂಬಳವೇ ತಗೊಳ್ಳಲಿ. ಅದ್ರೆ ನೀನು ಮಾತ್ರ ಮದ್ವೆವರೆಗೂ ಮುಂದುವರೆಯಬಾರದು. ಬರೀ ಗೆಳೆಯನಂತೆ ಇರಬೇಕು ಅಂತ ಹೇಳಿ ನನ್ನಿಂದ ಪ್ರಾಮಿಸ್ ಮಾಡಿಸಿಕೊಂಡಿರುವುದು. ಅವಳಿಗೆ ನಿರಾಶೆ ಅಗ್ತಾ ಇದೆ ಅಂತ ಗೊತ್ತಾದ್ರೂ ಗೆಳೆಯನಂತೆ ಇರುವುದು. ಅವಳಿಗೆ ಬೇಸರ ಆದ್ರೂ ನನ್ನೊಂದಿಗೆ ತುಂಬಾ ಆತ್ಮೀಯವಾಗಿ ಇದ್ದಾಳೆ. ಒಂದಿನವೂ ತನ್ನ ಪ್ರೀತಿನಾ ಬಾಯಿಬಿಟ್ಟು ಹೇಳಿಲ್ಲ. ಆದ್ರೆ ನಂಗೆ ಚೆನ್ನಾಗಿ ಗೂತ್ತಿದೆ. ಭವಿಷ್ಯ ನನ್ನನ್ನು ಎಷ್ಟೊಂದು ಪ್ರೀತಿಸ್ತಾ ಇದ್ದಾಳೆ ಅಂತ. ಆದ್ರೆ ಈ ಭವಿಷ್ಯ ಜಾತಕ ಎಲ್ಲಾ ಸುಳ್ಳು ಅಂತ ಗೊತ್ತಿದ್ರೂ ಮಮ್ಮಿಗಾಗಿ ಸುಮ್ಮನಾಗಿಬಿಟ್ಟಿದ್ದೆ. ಆದ್ರೆ ಇನ್ನು ಹಾಗೆ ಮಾಡಲ್ಲ. ಭವಿಷ್ಯಳನ್ನು ಮದ್ವೆ ಆಗ್ತೀನಿ. ಅವಳ ಹೂ ಮನಸ್ಸನ್ನು ಇನ್ನು ನೋಯಿಸಲ್ಲ. ಅದೇನು ಆಗುತ್ತೋ ನೋಡೇ ಬಿಡೋಣ. ಆ ಗಳಿಗೆಯಲ್ಲಿ ದೃಢ ನಿರ್ಧಾರ ತೆಗೆದುಕೊಳ್ಳುತ್ತ ಅಳುತ್ತಲೇ ಇದ್ದ ಭವಿಷ್ಯಳನ್ನು ‘ಭವಿ ಅತ್ತದ್ದು ಸಾಕು. ನಡೆ ಹೋಗೋಣ. ಹಣೆಬರಹವನ್ನು ಯಾರಿಂದಲು ತಡೆಯೋಕೆ ಸಾಧ್ಯವಿಲ್ಲ. ನಿನ್ನ ಜೊತೆ ನಾನಿದ್ದೀನಿ. ಯಾವಾಗಲೂ ಇರ್ತೀನಿ ಬಾ’ ಅವಳನ್ನು ತಬ್ಬಿ ಸಂತೈಸುತ್ತ ತನ್ನ ತುಟಿಗಳಿಂದಲೇ ಅವಳ ಕಣ್ಣೀರು ಒರೆಸಿದ.
*****
ಪುಸ್ತಕ:

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೧೧೨
Next post ಹಾಡು ಹಕ್ಕಿ

ಸಣ್ಣ ಕತೆ

 • ಮರೀಚಿಕೆ

  ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

 • ನಾಗನ ವರಿಸಿದ ಬಿಂಬಾಲಿ…

  ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

 • ಬಸವನ ನಾಡಿನಲಿ

  ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

 • ಪಾಠ

  ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

 • ಇರುವುದೆಲ್ಲವ ಬಿಟ್ಟು

  ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

cheap jordans|wholesale air max|wholesale jordans|wholesale jewelry|wholesale jerseys