ಎರಡನೆಯ ಮುಖ

ಎರಡನೆಯ ಮುಖ

ನೋಡಿ ವಿಚಿತ್ರವೆನಿಸಿತು. ನಂಬಲು ಸಾಧ್ಯವಾಗಲಿಲ್ಲ. ನನ್ನ ಕಣ್ಣುಗಳ ಮೇಲೆ ವಿಶ್ವಾಸ ಹುಟ್ಟಲಿಲ್ಲ. ಇಷ್ಟೊಂದು ಹೂಬಹೂ ಮುಖ, ದೇಹ-ಅಂಗಾಂಗಗಳ ಪ್ರತಿಕೃತಿಯನ್ನು ನಾನೆಂದೂ ಕಂಡವನಲ್ಲ. ಕಂಡದ್ದೇ ಇಲ್ಲ ಎಂಬ ಗುಮಾನಿ ಹುಟ್ಟಿಸುವ ಆ ವ್ಯಕ್ತಿಯನ್ನು ಮರೆತು ಬಿಡುವಂತೆಯೂ ಇರಲಿಲ್ಲ. ಮನಸ್ಸು ಮತ್ತು ಬುದ್ದಿಯನ್ನು ಬಲವಂತವಾಗಿ ಪ್ರವೇಶಿಸಲು ಹವಣಿಸುವ ಆ ದೃಶ್ಯದ ವರ್ಚಸ್ಸಿನಿಂದ ಬೇರೆ ಬಗೆ ಕಾಣಲಿಲ್ಲ.

ಏಳು ವರ್ಷಗಳ ನಂತರ-ನನ್ನ ಅಣ್ಣ ಸತ್ತು ಸರಿಯಾಗಿ ಏಳು ವರ್ಷವಾಗಿತ್ತು- ಅವನಂತೆಯೇ ಕಾಣುವ ಇನ್ನೊಬ್ಬ ವ್ಯಕ್ತಿಯನ್ನು ಕಂಡು ಮುಂದೇನು ಮಾಡಬೇಕೆಂದೇ ತಿಳಿಯದೆ ಮಂಕು ಬಡಿಯಿತು. ದಾದರಿನ ಮೂರನೆಯ ನಿಲ್ಮನೆಯಲ್ಲಿ ವೀರಾರ್ ಗಾಡಿಗಾಗಿ ಕಾಯುವ ಅನೇಕ ಮಂದಿಯ ನಡುವೆ ವ್ಯಗ್ರಮುಖದಿಂದ, ಅಸಹನೆಯ ಹೆಜ್ಜೆಗಳನ್ನು ಹಿಂದಕ್ಕೂ ಮುಂದಕ್ಕೂ ಇಡುತ್ತಿದ್ದ ಅವನನ್ನು ನೋಡಿ ಸ್ತಬ್ದನಾದೆ.

ಸದ್ಯ ಮರೆವಿಗೆ ಸಂದ ಅಣ್ಣನ ಸ್ವರೂಪವನ್ನು ನೆನಪಿನ ಎದುರು ತರುವ ಜಟಿಲ ಪ್ರಯತ್ನವನ್ನು ಮಾಡುವಾಗ ವಿಸ್ಮಯವೂ ಆಯಿತು. ಅವನ ಹತ್ತಿರ ಹತ್ತಿರಕ್ಕೆ ಸರಿಯುತ್ತ ಅವನ ಮುಖದ ಹಾವಭಾವಗಳನ್ನು ಇನ್ನಷ್ಟು ಕುತೂಹಲದಿಂದ ನಿರೀಕ್ಷಿಸಿ, ಸುತ್ತಲಿನ ಅನೇಕ ಪ್ರಯಾಣಿಕರನ್ನು ಗಮನಿಸದೆ ಗೊಂದಲಗೊಂಡಿರುವಾಗ ಚರ್ಚ್‌ಗೇಟಿಗೆ ಹೋಗುವ ಗಾಡಿ ಎರಡನೇ ನಂಬರಿನಲ್ಲಿ ಬಂದು ನಿಂತದ್ದು ತಿಳಿಯಲಿಲ್ಲ. ಆ ಗಾಡಿಯಲ್ಲಿ ನನಗೆ ಮುಂಬಯಿ ಕಡೆಗೆ ಹೋಗಬೇಕಿದ್ದರೂ ಎಲ್ಲಿ ನನ್ನ ದೃಷ್ಟಿಯಿಂದ ಆ ವ್ಯಕ್ತಿ ಮಾಯವಾಗುವನೋ ಎಂಬ ಆತಂಕದಿಂದ ದೃಷ್ಟಿಯನ್ನು ಅವನಿಂದ ಕೀಳುವುದಾಗಲಿಲ್ಲ. ಈ ಲೆಕ್ಕಾಚಾರದಲ್ಲಿ ನಾನು ಅವನನ್ನು ಹಿಂಬಾಲಿಸಿ ಅವನು ಹೋದಲ್ಲಿ ಹೋಗುವೆನೋ ಎಂಬ ಭಯವೂ ಆಯಿತು.

೫ ಅಡಿ ೮ ಇಂಚು ಎತ್ತರ, ಪುಷ್ಟ ಶರೀರ, ಕನ್ನಡಕ ಬೋಳುಮುಖ, ಹಿಂದಕ್ಕೆ ಬಾಚಿದ ಕೂದಲು ಎದುರು ಬೋಳು ಕಾಣಿಸುವ ಮುಂದಲೆ, ದಪ್ಪ ಕಿವಿ, ದಪ್ಪ ಮೂಗು, ವಿಶಾಲ ಹಣೆಯಲ್ಲಿ ದಣಿವಿನ ಗೆರೆ, ಕನ್ನಡಕದೊಳಗಿನ ಕಣ್ಣಂಚು ಅಣ್ಣನ ಕಣ್ಣಂಚಿನಂತೆ ಕೆಂಪು, ಮೈ ಬಣ್ಣ ಕೆಂಪಿನ ಹೊಳಪಿನಿಂದ ಹಾಕಿಕೊಂಡ ಶುಭ್ರ ಅಂಗಿಯ ಹೊಳಪನ್ನು ಹೆಚ್ಚಿಸಿತ್ತು. ಚಲ್ಲಣದ ಒಳಗೆ ಅಂಗಿಯನ್ನು ತುರುಕಿಸಿ ಸೊಂಟಪಟ್ಟಿಯನ್ನು ಸುತ್ತಿಕೊಂಡ ರೀತಿಯೂ ಅದೇ. ಅವನ ದೇಹದ ಪ್ರತಿವಸ್ತುವನ್ನು ದಾದರಿನ ಆ ಗಲಭೆಯಲ್ಲಿ ಸೂಕ್ಷ್ಮವಾಗಿ ನೋಡುವ ನನ್ನ ಕಣ್ಣಗಳಿಗೆ ಯಾವಾಗಲೂ ಆಸಹನೆಯನ್ನು ತೋರಿಸುವ ನನ್ನಣ್ಣನ ಪ್ರತ್ಯಕ್ಷ ದರ್ಶನವಾಯಿತು. ಆದರೆ ಅಣ್ಣ ಇಷ್ಟು ಮಡಿವಸ್ತ್ರ, ಸುಂದರ ಚೌಕಟ್ಟಿನ ಕನ್ನಡಕ, ಕೈಯಲ್ಲಿ ವಿ.ಐ.ಪಿ. ಬ್ಯಾಗ್, ಹೊಳೆಯುವ ಬೂಟುಗಳನ್ನು ಎಂದೂ ಹಾಕಿಕೊಂಡವನಲ್ಲ ಎಂದು ನೆನೆದಾಗ ಮತ್ತು ಅಣ್ಣ ಈಗಾಗಲೇ ಸತ್ತು ಏಳು ವರ್ಷವಾಗಿದೆ, ಆ ಮೃತ ಶರೀರವನ್ನು ನೋಡಿದ, ಹೊತ್ತ ಚಿತೆಗಿಟ್ಟು ಬೆಂಕಿಕೊಟ್ಟ ನೆನಪು ಈಗಲೂ ಹಸಿಹಸಿಯಾಗಿರುವಾಗ ನಾನು ನೋಡುತ್ತಿರುವುದು ಅವನಂತೆಯೇ ರೂಪ ಪಡೆದ ಇನ್ನೊಬ್ಬ ವ್ಯಕ್ತಿಯನ್ನೇ ಎಂದು ಭ್ರಮೆಯಾಯಿತು.

ಮದ್ಯಾಹ್ನ ೨-೫೬ ರ ವಿರಾರ್ ಗಾಡಿ ಬರುತ್ತಿರುವುದನ್ನು ಕಂಡ ಜನರೆಲ್ಲ ಒಳಗೆ ನುಗ್ಗಲು ಮೈಸೆಟೆದು ತಯಾರಾದರು. ಎಲ್ಲರೂ ನುಗ್ಗಿದ ನಂತರವೇ ನಾನು ಒಳಹೋಗುವ ನಿಯತ್ತಿನವನಾದುದರಿಂದ ಅವಸರ ಪಡದ ಪ್ರಥಮ ಮತ್ತು ದ್ವಿತೀಯ ದರ್ಜೆಯ ಡಬ್ಬಿಯ ನಡುವೆ ನಿಂತುಕೊಂಡರೂ ಕೆಲವರು ನನಗೆ ಡಿಕ್ಕಿ ಹೊಡೆದು ನನ್ನ ಸ್ಥಿರತೆಯನ್ನು ಕೆಡಿಸಿದರು. ನನ್ನ ಮುಖ ಕಾಳಜಿ ಆ ವ್ಯಕ್ತಿಯ ಕುರಿತೇ ಇದ್ದುದರಿಂದ ಬೇರೆ ಏನನ್ನೂ ಗಮನಿಸದೆ ಅವನು ಯಾವ ಡಬ್ಬಿಗೆ ನುಗ್ಗುವನೆಂಬ ನೋಟದಲ್ಲೇ ವ್ಯಸ್ತನಾಗಿರುವಾಗ ಅವನು ಎರಡನೆಯ ದರ್ಜೆಯ ಡಬ್ಬಿಗೆ ಓಡುವುದು ಕಾಣಿಸಿತು. ಅದೇ ಹೊತ್ತಿಗೆ ತರಕಾರಿಯ ದೊಡ್ಡ ಹೊರೆಯನ್ನು ಹೊತ್ತ ಭಯ್ಯಾ ಮಂದಿ ಅವನ ಸುತ್ತ ಸುಳಿದು ಅವನು ಅಗೋಚರನಾದ ಭಯವನ್ನು ಹುಟ್ಟಿಸಿದರು. ನಾನು ಕೂಡಲೇ ಆ ಡಬ್ಬಿ ಏರುವ ಜನರ ಗುಂಪಿಗೆ ದಾಳಿ ಮಾಡಿ ಒಳಸೇರಿ ಆಧಾರ ಹಿಡಿದು ನಿಂತುಕೊಂಡು ಅವನನ್ನು ಸುತ್ತಲೂ ಹುಡುಕಿದೆ. ಅವನನ್ನು ಕಾಣದೆ ಅತುರದ ಪ್ರಮಾಣ ಕುಸಿಯುತ್ತಿರುವಾಗ ಒಮ್ಮೆಲೆ ಎಡಭಾಗದ ಮೂಲೆಯಲ್ಲಿ ಒರಗಿ ನಿಂತುಕೊಂಡದ್ದನ್ನು ಕಂಡು ಉಸ್ಸೆಂದೆ. ಕೆಲಕ್ಷಣ ಅವನನ್ನೇ ಎದುರು ನಿಂತು ಅಡ್ಡ ನಿಂತಿರುವವರ ಹೆಗಲ ತೂತಿನಿಂದ ನೋಡಿದಾಗ ಅವನು ನಿಶ್ಚಿಂತನಾಗಿ ಮುಖದಲ್ಲಿ ಯಾವ ಭಾವವನೂ ತೋರಿಸದೆ ಬ್ಯಾಗ್ ಕೆಳಗಿಟ್ಟು ನಿಂತಿರುವುದು ಕಂಡಿತು. ಇಷ್ಟರಲ್ಲಿ ಗಾಡಿ ಚಲಿಸತೊಡಗಿತ್ತು. ಅವನಿಳಿಯುವುದು ಎಲ್ಲಿ ಎಂಬ ಕಲ್ಪನೆಯೇ ಇಲ್ಲದೆ ಇನ್ನು ಕೆಲ ಹೊತ್ತು ಅವನನ್ನು ಹೀಗೆ ನೋಡುತ್ತ ಮುಖದ ರಂಗು ಬದಲುವುದನ್ನು ನೋಡಬಹುದೆಂದು ಯೋಚಿಸುತ್ತಿದ್ದಾಗ ಅಣ್ಣನ ಅಸ್ಪಷ್ಟ ಆಕೃತಿ ಕಾಣಿಸಿಕೊಂಡಿತು. ಮುಖದಲ್ಲಿ ಅಸಹ್ಯ ನೋವಿನ ಛಾಯೆ, ಗುಳಿಯಲ್ಲಿ ಹೂತುಹೋದ ಕಣ್ಣಗೊಂಬೆಗಳಲ್ಲಿ ಯಾತನೆ. ಸಾವಿನ ಕರಾಳ ನೆರಳಿನ ಭಯದಿಂದ ತತ್ತರಿಸಿ ಮುದುಡಿದ ಶರೀರ, ನಡುಗುವ ಸ್ವರದಲ್ಲಿ ‘ತಮ್ಮಾ ಏನಾದರೂ ಮಾಡಿ ನನ್ನನ್ನು ಉಳಿಸು, ನಾನು ಸಾಯ ಬಯಸುವುದಿಲ್ಲ. ನನಗೆ ಬದುಕಬೇಕು. ಎಷ್ಟು ದುಷ್ಟ ಈ ದೇವರು ಎನ್ನುವವ. ಹೀಗೆ ನರಳಿಸಿ ಕೊಲ್ಲುವ ರೋಗವನ್ನು ನನ್ನ ಹೊಟ್ಟೆಯೊಳಗೇ ತಂದು ಹಾಕಿದ್ದಾನಲ್ಲ! ಅವನಿಗೆ ನಾನೇನು ಅನ್ಯಾಯ ಮಾಡಿದ್ದೇನೆ. ಈಗೀಗ ಶುರುವಾದ ನನ್ನ ದಾಂಪತ್ಯ ಸುಖ ಜೀವನ, ಮಗು, ನನ್ನ ಚಂದದ ಎಳೆ ಹರೆಯದ ಹೆಂಡತಿ, ಅವಳನ್ನು ಬಿಟ್ಟು ಹೇಗೆ ಸಾಯಲಿ ತಮ್ಮ….. ಸತ್ತರೂ ನಾನವಳನ್ನು ಬಿಡಲಾರೆ, ಇದು ನನ್ನ ಸಾಯುವ ಪ್ರಾಯವಲ್ಲ. ನಾನೇಕೆ ಸಾಯಬೇಕು. ಆದರೆ… ಅಯೋ… ಎಂಥಾ ನೋವಿದು’ ಎಂದು ಯಾತನೆ ಪಡುತ್ತಿದ್ದಂತೆ…. ಅಂಧೇರಿಯಲ್ಲಿ ಒಳನುಗ್ಗಿದ ಜನರ ಗುಂಪು ನನ್ನನ್ನು ಅವನ ಸನಿಹಕ್ಕೆ ಸರಿಸಿತು. ಪಕ್ಕಕ್ಕೆ ನೋಡಿದರೆ ಅವನು ಮಾತ್ರ ಅಲ್ಲಿರಲಿಲ್ಲ. ನಾನು ಆಚೀಚೆ ನೋಡಿ ಕುಳಿತವರ ಕಡೆಗೆ ದೃಷ್ಟಿ ಹಾಯಿಸಿದೆ. ಅಲ್ಲಿ ಅವನು ಸೀಟಿನ ತುದಿಯಲ್ಲಿ ಕುಳಿತು ಕಿಟಕಿಯಾಚೆ ನೋಡುತ್ತಿದ್ದ. ಈಗ ಕಾಣಿಸಿಕೊಂಡ ಅಣ್ಣನ ಮುಖ ಮರೆಯಾಯಿತು. ಕುಳಿತವನ ಮುಖದಲ್ಲಿ ಅದು ವಿಲೀನವಾದಂತೆ ನನಗನಿಸಿತು. ಏಳು ವರ್ಷಗಳ ಹಿಂದೆ ಹೊಟ್ಟೆ ಶೂಲೆಯಿಂದ ಎಳೆಯುವ ಕೊನೆಯುಸಿರಿನಲ್ಲೂ, ಕಂತುವ ದೃಷ್ಟಿಯ ಕುಡಿಯಲ್ಲೂ ಬದುಕುವ ಆಶೆಯನ್ನು ವ್ಯಕ್ತಪಡಿಸುತ್ತಾ ಸಾಯಲು ಇಷ್ಟವಿಲ್ಲದ ಅಸಹಾಯಕತೆ, ಲಾಚಾರಿಯಿಂದ ಎದುರಿನ ಪತ್ನಿಯ, ನನ್ನ ಮುಖಗಳಲ್ಲಿ ಅಂಗಲಾಚುತ್ತ ಇಹಯಾತ್ರೆ ಮುಗಿಸಿದ ಅಣ್ಣನ ಮಾತಿನ ಗುಂಗು ಲಯವಾಯಿತು.

ಅಂಧೇರಿಯಲ್ಲಿ ಇಳಿಯ ಬಹುದೇನೋ ಎಂಬ ಊಹೆ ತಪ್ಪಾಯಿತು. ಅವನು ಜಾಗ ಪಡೆದು ಕುಳಿತು ಕೊಂಡಿದ್ದ. ಇನ್ನು ಬೋರಿವಲಿ ತನಕ ಉತ್ಕಂಠನಾಗಿ ಕಾಯಬೇಕು. ಉದ್ದುದ್ದ ಊರುಗಳು. ಒಮ್ಮೆ ಬೋರೆನಿಸಿತು. ಅವನು ಯಾರೇ ಇರಲಿ. ನಾನು ಅವನ ಹಿಂದೆ ಓಡುವುದರ ಉದ್ದೇಶವೇನೆಂದು ಹೊಳೆಯಲಿಲ್ಲ. ಈ ದಿಕ್ಕಿನ ರೈಲ್ವೆ ತಿಕೇಟನ್ನೂ ಪಡಕೊಂಡಿರಲಿಲ್ಲ. ಟಿ.ಸಿ. ಬಂದರೆ ದಂಡ ತೆರುವ ಸಿದ್ಧತೆಯಲ್ಲಿ ಅವನ ಬೆನ್ನು ಬಿದ್ದಿದ್ದೆ. ಬೊರಿವಲಿಯಲ್ಲೂ ಇಳಿಯದೆ ಮುಂದೆ ಹೋದರೆ ಎಂಬ ಸಂದೇಹದಿಂದ ಮನಸ್ಸು ವಿಚಲಿತಗೊಂಡಿತು. ಯಾವದೋ ಕಡೆಗೆ ಚೆಂಬೂರಿನಿಂದ ಹೊರಟವನು ಬೇರೆ ಯಾವದೋ ದಿಕ್ಕಿನಲ್ಲಿ ಈ ವಿಚಿತ್ರ ವ್ಯಕ್ತಿಯ ಬೆನ್ನಟ್ಟುತ್ತ ಹೊತ್ತನ್ನೂ ಮನಸ್ಸಿನ ಶಿಸ್ತನ್ನೂ ಕಳೆದುಕೊಳ್ಳುವುದು ಯಾವ ಬುದ್ಧಿವಂತಿಕೆ ಎಂದು ತಿಳಿಯಲಿಲ್ಲ. ಅಣ್ಣನನ್ನು ಹೋಲುವ ಈ ವ್ಯಕ್ತಿ ಯಾರು? ಎಲ್ಲಿಗೆ ಹೊರಟಿದ್ದಾನೆ. ಮನುಷ್ಯನೋ, ಭೂತವೋ! ಹಗಲಿನಲ್ಲಿ ಜನರ ಗುಂಪಿನಲ್ಲಿ ಭೂತ ತಿರುಗಾಡುತ್ತದೆಯೆ! ಒಂದೂ ತಿಳಿಯಲಿಲ್ಲ. ಇಲ್ಲಿಯ ಆಶೆಯನ್ನು ಬಿಡದೆ ಸಾಯುವವರು ಮತ್ತೆ ಹುಟ್ಟುತ್ತಾರಂತೆ. ಭೂತವಾಗಿ ಅದೇ ಮನುಷ್ಯನಂತೆ ತಿರುಗುತ್ತಿರುತ್ತಾರಂತೆ. ಹಾಗಿದ್ದರೆ ಇವನು ಅವನೆಯೆ, ಕೈಯಲ್ಲಿ ಬ್ಯಾಗ್ ಹಿಡಿದು ಕೊಂಡು ರೈಲ್ವೆ ಪ್ರಯಾಣ ಮಾಡುತ್ತಿರುವ ಈತನ ಗುರಿಯಾವುದು? ನನ್ನನ್ನು ಮೂರುನಾಲ್ಕು ಸಾರಿ ನೇರ ನೋಟದಿಂದ ನೋಡಿದ್ದಾನೆ. ಆದರೂ ಮಾತಾಡಿಸಲಿಲ್ಲ. ಗುರುತಾಗಲಿಲ್ಲವೆ. ಸತ್ತಮೇಲೆ ಮನುಷ್ಯ ತನ್ನವರನ್ನು ಗುರುತಿಸುವ ಶಕ್ತಿಯನ್ನು ಕಳಕೊಳ್ಳುತ್ತಾನೆಯೇ? ಮರುಹುಟ್ಟಿನಲ್ಲಿ ನನಗೆ ಅಷ್ಟೇನೂ ವಿಶ್ವಾಸವಿಲ್ಲ. ಮನುಷ್ಯ ಏನಿದ್ದರೂ ಈ ಜನ್ಮದಲ್ಲಿಯೇ ಎಲ್ಲವನ್ನು ಮುಗಿಸಿ ಹೊರಟು ಹೋಗುತ್ತಾನೆ. ಯಾವದಾದರೂ ಒಂದು ಉತ್ಕಟ ಆಶೆ ಉಳಿದು ಬಿಟ್ಟಿದ್ದರೆ ಅದಕ್ಕಾಗಿ ಭವ ಸಾಗರದ ಜಂಜಡದಲ್ಲಿ ಸಿಕ್ಕಿಕೊಳ್ಳಲು ಅವನು ಮತ್ತೊಮ್ಮೆ ಹುಟ್ಟಲಾರ. ಅಲ್ಲದೆ ಮರುಹುಟ್ಟಿನಲ್ಲಿ ಹಿಂದಿನ ಇಚ್ಛೆಗಳ ಪೂರ್ತಿಯಾಗುವುದೆಂಬ ಗ್ಯಾರಂಟಿಯಾದರೂ ಏನು? ಆದರೆ ಇಲ್ಲಿ ಮಾತ್ರ ಅವನು, ತಾನು ಆಶಿಸಿದ ಸುಂದರ ಯುವ ಹೆಂಡತಿಯನ್ನು ಮನಸಾರೆ ಅನುಭೋಗಿಸದೆ ಬಿಟ್ಟು ಹೋಗಿದ್ದಾನೆ. ಮನುಷ್ಯನ ಆಶೆಯೆ ಪ್ರಬಲವಲ್ಲವೆ ಬದುಕಿಗೆ… ಅದಕ್ಕಾಗಿಯಾದರೂ ಅವನು ಮರು ಹುಟ್ಟಿದ್ದರೆ… ಇಲ್ಲಿ ಇನ್ನೂ ಒಂದು ತೊಡಕು. ಶಾಸ್ತ್ರ, ಪ್ರಕಾರ ಮರುಹುಟ್ಟು ಮನುಷ್ಯನ ಬಾಳ್ವೆ ಮುಗಿದ ನಂತರ, ಅಣ್ಣ ಸತ್ತು ಆದದ್ದು ಏಳು ವರ್ಷ ಮಾತ್ರ. ಇಷ್ಟರಲ್ಲಿ ಅವನು ಈಗ ಜೀವಂತ ಇದ್ದಿದ್ದರೆ ಹೇಗೆ ಕಾಣಬಹುದಿತ್ತೋ ಅದಕ್ಕಿಂತ ಸ್ವಲ್ಪ ಹೆಚ್ಚು ಕಡಿಮೆ ಕಾಣುವ ಈತ ಅಣ್ಣನಲ್ಲ ಎನ್ನುವ ಯೋಚನೆಯಲ್ಲೆ ಇವನನ್ನು ಹಿಂಬಾಲಿಸಿ ಯಾರೆಂದು ತಿಳಿದು ಕೊಳ್ಳಲೇ ಬೇಕು ಎಂದು ನಿರ್ಧರಿಸುವಾಗ ಮತ್ತೊಂದು ವಿಚಾರ ಸುಳಿಯಿತು. ಗಾಡಿಯ ರಭಸದಲ್ಲಿ ಮನಸ್ಸಿನ ರಭಸವೂ ಹೆಚ್ಚಿತು. ಸಿನೆಮಾದಲ್ಲಿ ಮುಖವಾಡ ಹಾಕಿಕೊಂಡು ತದೇಕವಾಗಿ ಹೋಲುವ ವ್ಯಕ್ತಿಗಳನ್ನು ಕಂಡ ನೆನಪಾಯಿತು. ಆದರೆ ಅಣ್ಣನ ಮುಖವಾಡದಲ್ಲಿ ತಿರುಗಾಡಲು ಈ ವ್ಯಕ್ತಿ ಯಾರು? ಯಾಕೆ ಈ ಮೋಸ? ಈ ವಿಚಾರ ಮಾತ್ರ ಹೆಚ್ಚು ಪುಷ್ಟಿಯನ್ನು ಪಡೆಯದೆ ಅಸಂಭವತೆಯ ದಾರಿ ಹಿಡಿಯಿತು. ಬೋರಿವಲಿಯ ಮೊದಲು ಗಾಡಿ ನಿಂತಿತು. ಕುಳಿತವರು ಎದ್ದು ಬಾಗಿಲ ಹತ್ತಿರ ಬಂದು ಒತ್ತತೊಡಗಿದರು. ಆ ವ್ಯಕ್ತಿಯೂ ಎದ್ದು ಎಲ್ಲರ ಜೊತೆ ಬಂದಿದ್ದ. ನಾನು ನಿಧಾನವಾಗಿ ಎದ್ದು ತುಂಬಾ ಹಿಂದಿನಿಂದಲೆ ನಿಂತುಕೊಂಡೆ. ಬೋರಿವಲಿಯಲ್ಲಿ ವಿರಾರ್ ಪ್ರವಾಸಿಗಳು ಇಳಿಯಲು ಬಿಡುವುದಿಲ್ಲವೆಂದು ಇಳಿಯುವವರು ಕಂಬದ ಹತ್ತಿರದಿಂದ ಹೊರಗೆ ಹಾರುವ ತಯಾರಿಯಲ್ಲಿದ್ದರು. ನನಗೊಂದು ಯೋಚನೆ. ಈ ಮನುಷ್ಯ ಎಲ್ಲಿ ಹೋಗುವನು. ಅವನಿಗೆ ಸಂಶಯಬರದಂತೆ ಹೇಗೆ ಹಿಂಬಾಲಿಸುವುದು. ಮುಂಬಯಿಯಲ್ಲಿ ಯಾವದೇ ಸಂಶಯಾಸ್ಪದ ವ್ಯಕ್ತಿಯ ಬೆನ್ನಟ್ಟಲು ಸುಲಭ, ದಟ್ಟವಾದ ಜನರ ಚಲನವಲನದ ಮಧ್ಯದಲ್ಲಿ ಯಾವ ಮನುಷ್ಯನನ್ನು ಯಾರು ಹಿಂಬಾಲಿಸುತ್ತಿದ್ದಾರೆ ಎಂದು ತಿಳಿಯಲು ಸಾಧ್ಯವಿಲ್ಲ.

ಗಾಡಿ ಚಲಿಸತೊಡಗಿತು. ವೇಗ ಹಿಡಿದು ಬೋರಿವಲಿಯ ತಂಗುದಾಣದಲ್ಲಿ ನಿಂತಾಗಲೆ ಕಿಕ್ಕಿರಿದ ಜನರು ಒಳನುಗ್ಗಿದರು. ನಾನು ಕಾಳಜಿಯಿಂದ ಎಲ್ಲಿ ಆ ಮನುಷ್ಯ ಕಣ್ಮರೆಯಾಗುವನೋ ಎಂಬ ಹೆದರಿಕೆಯಿಂದ ಹೊರತೆಗೆದು ಹೆಜ್ಜೆ ತಪ್ಪಿ ಬೀಳುವವನು ಸುಧಾರಿಸಿಕೊಂಡು ಸುತ್ತಲೂ ನೋಡಿದೆ. ಬ್ರಿಜ್ಜನ್ನು ಏರುತ್ತಾ ದಾರಿ ಮಾಡಿಕೊಂಡು ಆಗಲೇ ಅವನು ಹೋಗುತ್ತಿರುವುದು ಕಾಣಿಸಿ ನಾನು ದ್ರುತಗತಿಯಿಂದ ಅನುಸರಿಸಿದೆ. ಪಶ್ಚಿಮಕ್ಕೆ ಹೋಗಿ ಅವನೊಂದು ರಿಕ್ಷಾ ಹಿಡಿದು ಹೊರಟ. ನಾಲ್ಕರ ಸಮೀಪದ ಆ ಹೊತ್ತಿನಲ್ಲಿ ಬೋರಿವಲಿಯ ಪಶ್ಚಿಮದಲ್ಲಿ ಜನರ ತಿರುಗಾಟ ದಟ್ಟವಾಗಿತ್ತು. ನಾನು ಬೇಗನೆ ಒಂದು ರಿಕ್ಷಾ ಹಿಡಿದು ಮೊದಲಿನ ರಿಕ್ಷಾದ ಹಿಂದಿನಿಂದ ಓಡಿಸಲು ಹೇಳಿದೆ.

ರಿಕ್ಷಾ ಯೋಗಿ ನಗರದ ಒಳಹೊಕ್ಕಿತು. ತಿರುವಿನಲ್ಲಿ ಬಸ್ಸುಗಳ ದೆಸೆಯಿಂದ ಮೊದಲಿನ ರಿಕ್ಷಾ ಕಾಣೆಯಾಗಿ ನಂತರ ನಾಲ್ಕಾರು ರಿಕ್ಷಾಗಳು ಸಾಲಾಗಿ ಓಡುವುದು ಕಾಣಿಸಿತು. ನನ್ನ ರಿಕ್ಷಾವನ್ನು ಅವುಗಳ ಹಿಂದಿನಿಂದ ಓಡಿಸಿ ಆ ವ್ಯಕ್ತಿ ತಪ್ಪಿ ಹೋಗುವ ಸಂಭವ ಹೆಚ್ಚಾದುದಕ್ಕೆ ಬೇಸರವಾಯಿತು. ಯೋಗಿಟವರಕ್ಕೆ ತಿರುಗುವಲ್ಲಿ ನಿಂತ ಒಂದು ರಿಕ್ಷಾದಿಂದ ಅವನು ಇಳಿದು ಎದುರಿನ ವೈನ್‌ಶಾಪಿಗೆ ಹೋಗುವುದು ಕಾಣಿಸಿತು. ನಾನು ಮೆಲ್ಲನೆ ಇಳಿದು ಹತ್ತಿರದ ಬಸ್ ಸ್ಟಾಂಡ್‌ನಲ್ಲಿ ನಿಂತುಕೊಂಡೆ. ಅವನು ಯೋಗಿಟವರಿನ ಕಡೆಗೆಯೆ ಹೊರಟ. ಹತ್ತಾರು ಜನರು, ನಾನು ಆ ಕಡೆಗೆಯೆ ನಡೆದೆವು. ಅದರ ಹತ್ತಿರದ ಬಿಲ್ಡಿಂಗಿನ ಆವರಣ ಹೊಕ್ಕಾಗ ಆಚೀಚೆ ನೋಡಿದ. ನಾನು ಅವನ ಕಣ್ಣಿಗೆ ಬಿದ್ದಿರಬಹುದು. ಆಶ್ಚರ್ಯವೆಂದರೆ ಅವನು ಹೊಕ್ಕ ಕಟ್ಟಡದಲ್ಲಿ ನನ್ನ ಅಣ್ಣನ ಮನೆಯಿದೆ. ನಾಲ್ಕನೆಯ ಮಹಡಿಯಲ್ಲಿ, ಈಗ ನಾಲ್ಕು ವರ್ಷಗಳ ಹಿಂದೆ ನನ್ನ ಅತ್ತಿಗೆ ಅವರ ಚೆಂಬೂರಿನ ಮನೆಯನ್ನು ಮಾರಿ ಮಾಡಿದ ಮನೆಯಿದು. ನಾನು ಮೊದಲ ವರ್ಷದಲ್ಲಿ ಬಹಳ ಸಾರಿ ಬಂದಿದ್ದರೂ ಈಗೆರಡು ವರ್ಷಗಳಲ್ಲಿ ಯಾವುದೋ ವ್ಯಾಜ್ಯದ ಕಾರಣದಿಂದ ಬರುವುದನ್ನೇ ನಿಲ್ಲಿಸಿದ್ದೆ. ಅಲ್ಲದೆ ಅವಳು ನಮ್ಮ ಜಾತಿಯವಳಲ್ಲವೆಂಬ, ಪ್ರೇಮ ವಿವಾಹದ ಫಲವೆಂಬ ಅಸಡ್ಡೆಯೂ ನಮ್ಮ ಸಂಬಂಧ ದೂರವಾದುದಕ್ಕೆ ಹೇತುವಾಗಿತ್ತು. ಪರಿಸ್ಥಿತಿ ಒಮ್ಮೆಲೇ ಗಂಭೀರವಾಗಿ ಆ ವ್ಯಕ್ತಿ ನಿಜವಾಗಿ ಸತ್ತ ನಮ್ಮಣ್ಣನೇ ಇರಬಹುದೆ ಎಂಬ ಭೀತಿಯನ್ನು ಹುಟ್ಟಿಸಿತು. ಆದರೆ…. ಮೊನ್ನೆ ಮೊನ್ನೆ ಸತ್ತವನು ಈ ಮನೆಗೆ ಈ ಜಾಗಕ್ಕೆ ಸಾಯುವ ಮೊದಲೆಂದೂ ಬರದಿದ್ದವನು ಇಂದು ಹೇಗೆ ಬಂದ? ಹೀಗೆ ಪ್ರತಿದಿನವೂ ಬರುತ್ತಿದ್ದಾನೆಯೆ…. ಅವನು ಭೂತವಂತೂ ಅಲ್ಲ. ದುಡಿಮೆ ಮುಗಿಸಿ ಮನೆಮುಟ್ಟಲು ಆತುರದಿಂದ ಧಾವಿಸಿ ಬರುವ ಇತರ ಸಾಮಾನ್ಯ ಮನುಷ್ಯನಂತೆಯೆ ಆಗಿನಿಂದಲೂ ಕಾಣುತ್ತಾನೆ. ಅವನ ಹತ್ತಿರ ಹೋಗಿ ಮಾತಾಡಲೇ ಎಂದು ಯೋಚಿಸಿ ಮುಂದೆ ಬಂದಾಗ ಅವನು ಲಿಫ್ಟ್ ಏರಿ ಚಲಿಸಿಯಾಗಿತ್ತು. ನಾನು ಮೆಟ್ಟಲುಗಳನ್ನು ತುಳಿಯುತ್ತಾ ಜಿನೆಯ ಮೇಲಕ್ಕೆ ಓಡಿದೆ. ನಾಲ್ಕನೆಯ ಜಿನೆಯಲ್ಲಿ ಲಿಪ್ಟ ನಿಂತಾಗ ನಾನು ನಡಿಗೆಯನ್ನು ಸಡಿಸಿಸಿ ಇಳಿದವರು ನೋಡದ ರೀತಿಯಲ್ಲಿ ನಿಂತುಕೊಂಡೆ. ಅವನು ಲಿಫ್ಟ್ ಮುಚ್ಚಿ ಬಲಬದಿಯ ಮನೆಯ ಕರೆಗಂಟೆಯನ್ನು ಒತ್ತಿದ. ಬಾಗಿಲು ತೆರೆದು ಕೊಳ್ಳುವ ತನಕ ಅತ್ತಿತ್ತ ನೋಡಿದ. ಅದು ಅತ್ತಿಗೆಯ ಮನೆಯೇ ಆಗಿತ್ತು. ಈ ಸ್ಥಿತಿಯಲ್ಲಿ ಅವನನ್ನು ಮಾತಾಡಿಸುವುದು ಸರಿಯಲ್ಲ. ಗೂಢವಾಗುತ್ತಿರುವ ಸನ್ನಿವೇಶ ನನ್ನನ್ನು ಮಂಕುಗೊಳಿಸಿತು.

ಬಾಗಿಲು ತೆರೆದದ್ದು ಯಾರೆಂದು ತಿಳಿಯಲಿಲ್ಲ. ಅತ್ತಿಗೆ ಇರಬಹುದೇ? ಅತ್ತಿಗೆ ಇದೇ ಮನೆಯಲ್ಲಿ ತನ್ನೊಬ್ಬ ಹತ್ತು ವರ್ಷದ ಮಗಳ ಜೊತೆಯಲ್ಲಿ ಇರುತ್ತಿದ್ದುದು ನನಗೆ ಗೊತ್ತಿತ್ತು. ಅತ್ತಿಗೆ ಇಷ್ಟರಲ್ಲೇ ಬ್ಯಾಂಕಿನಿಂದ ಬಂದಿರಲಿಕ್ಕಿಲ್ಲ. ಮುನ್ನಿ ಶಾಲೆಗೆ ಹೋಗಿರಬಹುದು. ಈಗ ನನಗೆ ಅವರ ಸಂಪರ್ಕ ಕಳಕೊಂಡದ್ದಕ್ಕೆ ನನ್ನ ಮೇಲೆಯೆ ಸಿಟ್ಟು ಬಂದಿತು.

ಆ ವ್ಯಕ್ತಿ ಹೊರಗೆ ಬರುವ ದಾರಿಯನ್ನು ಕಾದೆ. ಹತ್ತು ಹದಿನೈದು ಭಾರವಾದ ಕ್ಷಣಗಳು, ಕಾತರದ ಎಲ್ಲೆ ಮೀರುವ ಲಕ್ಷಣ ಕಂಡಿತು. ಅಸಹನೆ ಏರಿ‌ಏರಿ ಬರುತ್ತಿತ್ತು. ನಾನು ಬಾಗಿಲ ಕರೆಗಂಟೆಗೆ ಬೆರಳಿಟ್ಟೆ. ಬಾಗಿಲ ತೆರೆದವರು ಅತ್ತಿಗೆ ‘ಅರೇ… ನೀನು’ ಎಂಬ ಉದ್ದಾರದಲ್ಲಿ ಆಶ್ಚರ್ಯ, ಭಯವಿತ್ತೆಂದು ನನಗನಿಸಿತು.

‘ಬಾ..ಬಾ ಒಳಗೆ ಬಾ, ತುಂಬಾ ಅಪರೂಪ, ಹಾಮ, ನಾನು ನಿನಗೇನಾಗಬೇಕು. ಅಣ್ಣ ಹೋದರು. ಎಲ್ಲಾ ಸಂಬಂಧ ಕಡೆದು ಹೋಯಿತು. ಕುಳಿತುಕೋ ಬಾ…’ ಕಣ್ಣಿಂದ ನೀರು ಒಂದೇ ಸವನೆ ಸುರಿಯಿತು. ಅದೇ ಸುಂದರ ಹೊಳೆಯುವ ಕಣ್ಣುಗಳು, ಮೈಕೈಯ ಸೊಬಗು ಮೊದಲಿಗಿಂತ ಹೆಚ್ಚು ತೋರಿತು.

ನಾನು ಕುಳಿತುಕೊಂಡೆ. ‘ಹೀಗೇ… ಒಂದು ಕೆಲಸವಿತ್ತು’ ಎಂದೆ. ಆಗ ‘ಯಾರೆ ಸುಮೀ…’ ಎನ್ನುತ್ತ ಒಬ್ಬ ವ್ಯಕ್ತಿ ಬನಿಯಾನಿನಲ್ಲಿ ಹೆಗಲಿನ ಟರ್ಕಿ ರುಮಾಲಿನಿಂದ ಮುಖ ಒರಸುತ್ತ ಒಳಗಿನಿಂದ ಬಂದ ನನ್ನನ್ನು ನೋಡಿ ಗಕ್ಕನೆ ನಿಂತು ಅತ್ತಿಗೆಯ ಮುಖ ನೋಡಿದ. ಇಲ್ಲಿಯವರೆಗೂ ನಾನು ಹಿಂಬಾಲಿಸಿದ ವ್ಯಕ್ತಿ ಅವನೇ. ಅನುಮಾನವಿಲ್ಲ. ಆದರೆ ನನ್ನ ಅಣ್ಣನಲ್ಲ, ಅವನ ಮುಖವಲ್ಲ, ಬೇರೆಯೆ ಎರಡನೆಯ ಮುಖ. ಯಾರಿವನು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗುಮಾನಿ
Next post ಹೊಂಚು

ಸಣ್ಣ ಕತೆ

 • ಮೃಗಜಲ

  "People are trying to work towards a good quality of life for tomorrow instead of living for today, for many… Read more…

 • ಮೇಷ್ಟ್ರು ರಂಗಪ್ಪ

  ಪ್ರಕರಣ ೫ ರಂಗಣ್ಣ ರೇಂಜಿನಲ್ಲಿ ಅಧಿಕಾರ ವಹಿಸಿ ನಾಲ್ಕು ತಿಂಗಳಾದುವು. ಸುಮಾರು ನಲವತ್ತು ಐವತ್ತು ಪಾಠಶಾಲೆಗಳ ತನಿಖೆ ಮತ್ತು ಭೇಟಿಗಳಿಂದ ಪ್ರಾಥಮಿಕ ವಿದ್ಯಾಭ್ಯಾಸದ ಸ್ಥಿತಿ ತಕ್ಕ ಮಟ್ಟಿಗೆ… Read more…

 • ವರ್ಗಿನೋರು

  ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

 • ಯಿದು ನಿಜದಿ ಕತೀ…

  ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

 • ವಿರೇಚನೆ

  ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…