ಪ್ರಮಾಣುವೆಂಬುದು ಪ್ರಮಾಣು

ಪ್ರಮಾಣುವೆಂಬುದು ಪ್ರಮಾಣು

ಗಿರಡ್ಡಿ ಗೋವಿಂದರಾಜರ ಹೊಸ ಪುಸ್ತಕ ‘ಪ್ರಮಾಣು’ ನನ್ನ ಮುಂದಿದೆ. ಇದೊಂದು ಲೇಖನಗಳ ಸಂಕಲನ, ಹಂಪಿಯ ಕನ್ನಡ ವಿಶ್ವವಿದ್ಯಾಲಯದವರು ‘ಹೊನ್ನಾರು ಮಾಲೆ’ಯಲ್ಲಿ ಪ್ರಕಟಿಸಿದ್ದು. ಗಿರಡ್ಡಿಯವರು ಆಗಿಂದಾಗ್ಗೆ ಬರೆದು ಈಗಾಗಲೇ ಬೇರೆ ಬೇರೆ ಕಡೆ ಬಿಡಿಯಾಗಿ ಪಕಟಿಸಿದ ಹದಿನೆಂಟು ಲೇಖನಗಳು ಇದರಲ್ಲಿ ಅಡಕವಾಗಿವೆ. ಮೊದಲಿನಿಂದಲೂ ನನಗೆ ಗಿರಡ್ಡಿಯವರ ವಿಮರ್ಶಾ ಲೇಖನಗಳೆಂದರೆ ಇಷ್ಟ. ಅವನ್ನು ಓದುವುದೆಂದರೆ ಅಬ್ಬರ, ಏರಿಳಿತಗಳಿಲ್ಲದೆ ಪ್ರಶಾಂತವಾಗಿ ಹರಿಯುವ ನದೀಗುಂಟ ಸಾಗುವ ಒಂದು ಹಿತಾನುಭವ. ಏನು ಈ ಪ್ರಮಾಣು ಎಂದರೆ? ಪುಸ್ತಕದ ಮೇಲ್ನುಡಿಯಿಂದ ಇದು ಅಲ್ಲಮನ ವಚನವೊಂದರಲ್ಲಿ ಬರುವ ಶಬ್ದವೆಂದು ತಿಳಿಯುತ್ತದೆ.

ನಾನೆಂಬುದು ಪ್ರಮಾಣು, ನೀನೆಂಬುದು ಪ್ರಮಾಣು,
ಸ್ವಯವೆಂಬುದು ಪ್ರಮಾಣು, ಪರವೆಂಬುದು ಪ್ರಮಾಣು,
ಪ್ರಮಾಣುವೆಂಬುದು ಪ್ರಮಾಣು,
ಗುಹೇಶ್ವರನೆಂಬುದು ಅಪ್ರಮಾಣು

ಎನ್ನುತ್ತದೆ ಈ ವಚನ. ಅನುಭಾವಿಗಳ ಮಾತಿಗೆ ಇಂಥದೇ ಅರ್ಥ ಎಂದು ಹೇಳುವುದು ಕಷ್ಪ. ಪ್ರಮಾಣು ಎಂಬ ಪದ ಪ್ರಮಾಣ ‘ಅಳತೆ’ ಎನ್ನುವುದರ ರೂಪಾಂತರ. ಪ್ರಮಾಣ ಎಂದರೆ ಅಳತೆ. ಆದ್ದರಿಂದ ಪ್ರಮಾಣು ಎಂದರೆ ‘ಅಳತೆ’(ಗೊಳಗಾದ್ದು). ಇಲ್ಲಿ ಅಲ್ಲಮ ಸಕಲವೂ ಅಳತೆಗೊಳಪಡುವಂಥದು, ಗುಹೇಶ್ವರ ಮಾತ್ರವೇ ಅದಕ್ಕೆ ಆತೀತ ಎನ್ನುತ್ತಿದ್ದಾನೆ. ವಿಮರ್ಶೆಯ ಪರಿಭಾಷೆಯಲ್ಲಿ ಪ್ರಮಾಣ ಎಂದರೆ ಮೌಲ್ಯಮಾಪನದ ಅಳತೆ. ಗಿರಡ್ಡಿಯವರು ಈ ಪದವನ್ನೇ ತಮ್ಮ ಸಂಕಲನಕ್ಕೆ ಶೀರ್ಷಿಕೆಯಾಗಿ ಇರಿಸುವುದರ ಮೂಲಕ, ತಮ್ಮದೊಂದು ಅಳತೆಯ ಪ್ರಯತ್ನ ಎಂದು ಸೂಚಿಸುವುದರ ಜತೆಗೇ, ಈ ಪ್ರಮಾಣು ಕೂಡಾ ಒಂದು ಪ್ರಮಾಣು ಎಂಬ ವಿನಯವನ್ನೂ ತೋರಿಸಿದ್ದಾರೆ. ಯಾಕೆಂದರೆ ಪ್ರತಿಯೊಂದು ವಿಮರ್ಶೆ ಸಹಾ ವಿಮರ್ಶೆಗೆ ಗುರಿಯಾಗುವಂಥದು. ಇದೇ ಆಧುನಿಕ ವಿಮರ್‍ಶಾಪ್ರಜ್ಞೆ ಎನ್ನಬಹುದು.

ಆಧುನಿಕತೆಯೆನ್ನುವುದು ಹಲವಾರು ಪರಂಪರಾಗತ ಮೌಲ್ಯಗಳನ್ನು ಹಾಗೂ ಆಚರಣೆಗಳನ್ನು ಹಿಂದಕ್ಕೆ ತಳ್ಳಿಕೊಂಡು ಬಂದಂಥ ಒಂದು ಯುಗಧರ್ಮ. ಆದ್ದರಿಂದ ಇದೊಂದು ಪಿತೃಹತ್ಯಾಕಾಂಡದಂತೆ ಕಂಡರೆ ಆಶ್ಚರ್ಯವಿಲ್ಲ. ಆದರೆ ಆಧುನಿಕತೆ ಈಗ ಉತ್ತರಾಧುನಿಕತೆಗೆ ಎಡೆಮಾಡಿದ ಸಂದರ್ಭದಲ್ಲಿ ಇದೊಂದು ಪಿತೃಹತ್ಯೆಯಾಗಿ ಕಾಣಿಸದೆ ಪರಂಪರೆಯೊಂದಿಗೆ ನಡೆಸಿದ ಸೃಷ್ಟ್ಯಾತ್ಮಕ ಅನುಸಂಧಾನವೆಂದೇ ಹೇಳಬಹುದು. ಸಾಹಿತ್ಯದಲ್ಲಾದರೆ ಆಧುನಿಕತೆಯೊಂದಿಗೆ ವಿಮರ್ಶೆಯೆಂಬ ಹೊಸ ಪ್ರಕಾರವೊಂದು ಮೂಡಿಬಂದಿರುವುದು ಗಮನಾರ್ಹ. ಇದೀಗ ಸಾಹಿತ್ಯದ ಜತೆ ಎಂಥ ಅವಿನಾ ಸಂಬಂಧವನ್ನು ಹೊಂದಿದೆಯೆಂದರೆ, ವಿಮರ್ಶೆಯಿಲ್ಲದೆ ಇಂದು ನಾವು ಸಾಹಿತ್ಯದ ಕಲ್ಪನೆಯನ್ನೇ ಮಾಡಲಾರದವರಾಗಿದ್ದೇವೆ. ಇದರಲ್ಲೇನೂ ಆಶ್ಚರ್ಯವಿಲ್ಲ; ಯಾಕೆಂದರೆ, ಆಧುನಿಕತೆಯೆಂದರೆ ಅದೊಂದು ವೈಚಾರಿಕತೆಯ ಮುನ್ನಡೆಯೂ ಹೌದು. ಆಧುನಿಕತೆಯ ಆಗಮನದೊಂದಿಗೆ ರೊಮ್ಯಾಂಟಿಸಿಸಂ ಅರ್ಥಾತ್ ರಮ್ಯತೆ ಕೊನೆಗೊಂಡಿತು; ಕಲೆಗಾಗಿಯೇ ಕಲೆ ಎಂಬ ಕಲ್ಪನೆ ಕೆಟ್ಟುದೆನಿಸಿತು; ಸೌಂದರ್ಯಾರಾಧನೆ ಮುಜುಗರದ ವಿಷಯವಾಯಿತು; ಕತೆ, ಕವಿತೆ ಕಾದಂಬರಿ ಮುಂತಾದ ‘ಸೃಜನಶೀಲ’ ಕೃತಿಗಳನ್ನು ವಿಮರ್ಶೆಯ ಸಹಾಯವಿಲ್ಲದೆ, ಎಂದರೆ ವಿಮರ್ಶಾಪಜ್ಞೆಯಿಲ್ಲದೆ, ನೇರವಾಗಿ ಓದಲಾರೆವು ಎಂದಾಯಿತು; ವಿಮರ್ಶೆಯೆನ್ನುವುದು ಸಾಹಿತ್ಯ ಕಥನವೆನಿಸಿತು. ಆದ್ದರಿಂದಲೇ ಉನ್ನತ ಹಂತದಲ್ಲಿ ಸಾಹಿತ್ಯದ ಪಾಠಪ್ರವಚನಗಳು ಕೂಡಾ ವಿಮರ್ಶೆಯನ್ನು ಅವಲಂಬಿಸಬೇಕಾಯಿತು.

ಕನ್ನಡದಲ್ಲಿ ನವ್ಯವೆಂದು ಕರೆಯಲ್ಪಡುವ ಈ ಆಧುನಿಕತೆಯ ಹೆದ್ದೆರೆ ದಂಡೆಗೆ ತಂದ ಲೇಖಕರಲ್ಲಿ ಗಿರಡ್ಡಿ ಗೋವಿಂದರಾಜರ ಹೆಸರು ಮುಂಚೂಣಿಯಲ್ಲಿ ನಿಲ್ಲುತ್ತದೆ. ಕತೆಗಾರರಾಗಿ ಬರೆಯಲು ಸುರುಮಾಡಿದ ಗಿರಡ್ಡಿ ಕೆಲವು ಒಳ್ಳೆಯ ಕತೆಗಳನ್ನು ಬರೆದು ಹೆಸರು ಮಾಡಿದರು; ಆದರೆ ಆ ಕ್ಷೇತ್ರದಲ್ಲಿ ಮುಂದುವರಿಯದೆ, ವಿಮರ್ಶೆಯನ್ನು ತಮ್ಮ ಪ್ರಧಾನ ಕ್ಷೇತ್ರವನ್ನಾಗಿ ಆರಿಸಿಕೊಂಡರು. ವಿಮರ್ಶೆಯಲ್ಲಿ ಗಿರಡ್ಡಿಯವರು ನೀಡಿದ ಮಹತ್ವದ ಕೊಡುಗೆಯಿಂದಾಗಿಯೇ ಅವರು ನಮಗಿಂದು ಮುಖ್ಯರಾಗಿರುವುದು. ಇದು ಸಣ್ಣ ಕತೆಯ ನಷ್ಟವಾಗಿರಬಹುದು, ಆದರೆ ವಿಮರ್ಶೆಯ ಭಾಗ್ಯವೆಂದೇ ಹೇಳಬೇಕು. ಆಧುನಿಕ ಕತೆ, ಕಾದಂಬರಿ, ಕವಿತೆ ನಾಟಕಗಳಂತೆ ವಿಮರ್ಶೆ ಕೂಡಾ ಕನ್ನಡಕ್ಕೆ ಇಂಗ್ಲಿಷ್ ಸಾಹಿತ್ಯದ ಸಂಪರ್ಕದ ಮೂಲಕವೇ ಬಂತು. ಆದ್ದರಿಂದ ಆಧುನಿಕ ಕಾಲಘಟ್ಟದಲ್ಲಿ ಇಂಗ್ಲಿಷ್ ಅಭ್ಯಾಸ ಮಾಡುತ್ತಿದ್ದವರಿಗೆ ಹಾಗೂ ಅದನ್ನು ಕಲಿಸುತ್ತಿದ್ದವರಿಗೆ ಈ ಎಲ್ಲಾ ಕ್ಷೇತ್ರಗಳಲ್ಲಿ, ಪ್ರಧಾನವಾಗಿ ವಿಮರ್ಶೆಯಲ್ಲಿ, ವಿಶೇಷವಾದ ಸ್ಥಾನವಿದೆ.

ಇಂಥದರಲ್ಲಿ ಕೆಲವೊಮ್ಮೆ ಅತಿರೇಕಗಳಾಗುವ ಸಾಧ್ಯತೆಯಿದೆ. ವಿದೇಶೀಯ ಓದು ಹೆಚ್ಚಾದಷ್ಟೂ ದೇಸೀ ಓದು ಕಡಿಮೆಯಾಗುತ್ತ ಹೋಗುತ್ತದೆ. ಆದರೆ ಕನ್ನಡದ ಅದೃಷ್ಟವೆಂಬಂತೆ ಕುರ್ತಕೋಟಿ, ಆಮೂರ ಮುಂತಾದವರು ಈ ಅತಿರೇಕಕ್ಕೆ ಹೋದವರಲ್ಲ. ಗಿರಡ್ಡಿಯವರು ಇದೇ ಹದವನ್ನು ಕಾಪಾಡಿಕೊಂಡು ಬಂದವರು. ಬಹುಶಃ ಇದೇ ಕಾರಣಕ್ಕೆ ಅವರದು ವಿಮರ್ಶೆಗೆ ಹೇಳಿಮಾಡಿಸಿದ ಮನೋಧರ್ಮ. ಆಸಕ್ತಿ, ಅಧ್ಯಯನ, ಸಂಯಮನ, ವಸ್ತುನಿಷ್ಠತೆ, ಪರಂಪರೆಯ ಪುರೋಗಾಮಿ ದೃಷ್ಟಿ ಇವೆಲ್ಲ ವಿಮರ್ಶಕ ಗುಣಗಳೂ ಗಿರಡ್ಡಿಯವರಲ್ಲಿ ಬಂದು ಸೇರಿವೆ. ಅಷ್ಟೇ ಮುಖ್ಯವಾಗಿ, ಅವರ ಪ್ರಾಧ್ಯಾಪಕ ಗುಣ: ಹಿತಮಿತವಾಗಿ, ಎಲ್ಲರಿಗೂ ಅರ್ಥವಾಗುವಂತೆ, ಪಾಠ ಹೇಳುವ ಗುಣ ಇದು. ಇಲ್ಲಿ ಬೆಂಕಿ ಉರಿಯದು, ಆದರೆ ಬೆಳಕು ಕಾಣಿಸುತ್ತದೆ. ಗಿರಡ್ಡಿಯವರ ಯಾವುದೇ ಲೇಖನವೂ ನಮಗೆ ನಿರಾಸೆಯುಂಟುಮಾಡುವುದಿಲ್ಲ; ನುರಿತ ಅಧ್ಯಾಪಕನ ಪಾಠದಂತೆ ಒಂದೊಂದರಲ್ಲೂ ನಾವು ಕಲಿತುಕೊಳ್ಳುವಂಥದು, ನಮ್ಮನ್ನು ಚಕಿತಗೊಳಿಸುವುದು ಏನಾದರೂ ಇದ್ದೇ ಇರುತ್ತದೆ. ‘ಪ್ರಮಾಣು’ವಿನ ಪ್ರತಿಯೊಂದು ಲೇಖನವೂ ಇದಕ್ಕೆ ಸಾಕ್ಷಿ. ಗಿರಡ್ಡಿಯವರ ವಿಮರ್ಶಾ ವೈಖರಿಗೆ ಕೆಲವೇ ಉದಾಹರಣೆಗಳನ್ನು ಕೊಡುವುದಾದರೆ:

‘ಅವಳ ಉಡುಗೆ ಇವಳಿಗಿಟ್ಟು’ ಎಂಬ ಬಿ. ಎಂ. ಶ್ರೀಯವರ ‘ಇಂಗ್ಲಿಷ್ ಗೀತೆಗಳು’ ಕುರಿತಾದ ಲೇಖನದಲ್ಲಿ ಗಿರಡ್ಡಿ, ಶ್ರೀಯವರ ಈ ಭಾವಗೀತೆಗಳು ಇಂಗ್ಲಿಷ್ ಮೂಲದಿಂದ ಪ್ರೇರಿತವಾಗಿದ್ದರೂ, ಅವುಗಳನ್ನು ಕೇವಲ ಅನುವಾದಗಳೆಂದು ಓದಿದರೆ ಮರೆಯಾಗುವ ಮಹತ್ವಗಳೇನು ಎನ್ನುವುದನ್ನು ಕೂಲಂಕಷವಾಗಿ ವಿಶ್ಲೇಷಿಸುತ್ತಾರೆ. ಅನುವಾದಗಳೆಂದೊಡನೆ ಅವು ಮೂಲಕ್ಕೆ ಎಷ್ಟು ನಿಷ್ಠವಾಗಿವೆ ಎನ್ನುವುದರ ಮೇಲಿಂದ ನಾವು ಅವುಗಳನ್ನು ಅಳೆಯಲು ಹೊರಡುತ್ತೇವೆ; ಇದರಿಂದ ಶ್ರೀಯವರು ಇಲ್ಲಿ ತೋರಿದ ಸೃಜನಶೀಲತೆ ಹಾಗೂ ಆ ಮೂಲಕ ಕನ್ನಡ ಕಾವ್ಯಕ್ಷೇತ್ರದಲ್ಲಿ ಮೂಡಿಸಿದ ಅಲೆಯೊಸಗೆ ಮರೆಯಾಗಿಬಿಡುತ್ತವೆ. ಶ್ರೀಯವರ ಮೂಲ ಕವಿತೆಗಳ ಆಯ್ಕೆಯ ಕುರಿತಾದ ಎಂ. ಜಿ. ಕೃಷ್ಣಮೂರ್ತಿಯಂಥ ಹಿರಿ ವಿಮರ್ಶಕರ ಆಕ್ಷೇಪಕ್ಕೂ ಗಿರಡ್ಡಿಯವರು ತಕ್ಕುದಾದ ಉತ್ತರ ನೀಡುತ್ತಾರೆ. ಈ ವಿಮರ್ಶಕರ ಪಕಾರ, ಶ್ರೀಯವರು ಇಂಗ್ಲಿಷ್‌ನ ಮೆಟಫಿಸಿಕಲ್ ಕವಿಗಳ ರಚನೆಗಳನ್ನು ಕೈಗೆತ್ತಿಕೊಂಡಿದ್ದರೆ, ಅದರಿಂದ ಕನ್ನಡದ ವಚನಕಾರರ ಜತೆ ಅನುಸಂಧಾನ ನಡೆಸುವುದಕ್ಕೆ ಸಾಧ್ಯವಾಗುತ್ತಿತ್ತು. ಗಿರಡ್ಡಿಯವರು ಈ ವಾದದ ಅಸಂಬದ್ಧತೆಯನ್ನು ತೋರಿಸಿಕೊಡಲು ಹಿಂಜರಿಯುವುದಿಲ್ಲ. ಶ್ರೀಯವರು ಕವಿತೆ ರಚಿಸುವ ಸಂದರ್ಭದಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಕೂಡಾ ಈ ಮೆಟಫಿಸಿಕಲ್ ಕವಿಗಳ ಹೆಸರು ಕೇಳಿದವರೇ ವಿರಳ ಎನ್ನುವ, ‘ರಾಜನ ಮೈಯಲ್ಲಿ ವಸ್ತವೇ ಇಲ್ಲ’ ಎಂಬಂಥ ಸತ್ಯ ಅದು. ರೊಮ್ಯಾಂಟಿಕ್ ಕವಿಗಳಲ್ಲಿ ಸಹಾ ಕೀಟ್ಸ್‌ನಂಥವರ ರಚನೆಗಳನ್ನು ಅವರು ಎತ್ತಿಕೊಳ್ಳಲಿಲ್ಲ ಎನ್ನುವ ಟೀಕೆಯನ್ನೂ ಗಿರಡ್ಡಿಯವರು ಅಲ್ಲಗಳೆಯುತ್ತಾರೆ. ‘ಮೂಲಕವಿತೆಗಳ ಗುಣಮಟ್ಟವಾಗಲಿ, ಅನುವಾದದ ನಿಕಟತೆಯಾಗಲಿ ಇಲ್ಲಿ ಮುಖ್ಯವಾಗುವುದಿಲ್ಲ. ಹೊಸ ವಸ್ತುಗಳನ್ನು ಕನ್ನಡ ಕಾವ್ಯಕ್ಕೆ ಪರಿಚಯಿಸಿದ್ದರಲ್ಲಿ, ಹೊಸ ಸಂವೇದನೆಗೆ ಸೂಕ್ತ ಭಾಷೆ-ಶೈಲಿಗಳನ್ನು ರೂಪಿಸಿ ತೋರಿಸಿದ್ದರಲ್ಲಿ, ಛಂದೋರೂಪಗಳ ಪ್ರಯೋಗಶೀಲತೆಯ ಮೂಲಕ ಬಿಡುಗಡೆ ತಂದುದರಲ್ಲಿ ಇದರ ಯಶಸ್ಸಿದೆ’ ಎನ್ನುತ್ತಾರೆ ಗಿರಡ್ಡಿ. ಕೃತಿಯೊಂದರ ಕುರಿತು ವಿಚಾರಿಸುವಾಗ ಅದು ಯಾವ ಪ್ರಕಾರದ್ದು ಎಂದು ಕೇಳುವ ಬದಲು-ಅದು ಏನು ಮಾಡಿದೆ ಎಂದು ಯೋಚಿಸಬೇಕು ಎನ್ನುವ ವಾಲ್ಟರ್ ಬೆಂಜಮಿನ್ನ ಅನುಯಾಯಿ ಗಿರಡ್ಡಿಯವರು. ‘ಕನ್ನಡ ಕಾವ್ಯಪರಂಪರೆ ಮತ್ತು ಬೇಂದ್ರೆಯವರ ಕಾವ್ಯ’ ಎನ್ನುವ ಸುದೀರ್ಘ ಲೇಖನ ತುಂಬಾ ಮೌಲಿಕವಾದ್ದು, ಬೇಂದ್ರೆಯವರ ಕುರಿತಾಗಿ ಕುರ್ತಕೋಟಿಯವರಿಂದ ಮೊದಲಾಗಿ ಸುಮತೀಂದ್ರ ಮತ್ತು ವಿಜಯಶಂಕರವರೆಗೆ ಅನೇಕ ವಿಮರ್ಶಕರು ಬರೆದಿದ್ದಾರೆ; ಪ್ರತಿಯೊಬ್ಬರೂ ಬೇಂದ್ರೆಯವರ ಕೆಲವೊಂದು ಮಗ್ಗಲುಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಆದರೆ ಬೇಂದ್ರೆಯವರ ಕಾವ್ಯ ಕನ್ನಡ ಕಾವ್ಯಪರಂಪರೆಯಲ್ಲಿ ಎಲ್ಲಿ ನಿಲ್ಲುತ್ತದೆ ಎನ್ನುವ ಕುರಿತಾಗಿ ಸಮಗ್ರ ಚಿತ್ರಣವೊಂದನ್ನು ನೋಡಬೇಕಾದರೆ ನಾವು ಗಿರಡ್ಡಿಯವರ ಈ ಲೇಖನ ಓದಬೇಕು. ಲೌಕಿಕ -ಆಗಮಿಕ, ಮಾರ್ಗ-ದೇಸಿ ಎಂಬೀ ಯುಗಳಗಳು ಹೇಗೆ ಇಂದಿಗೂ ಪ್ರಸ್ತುತ, ಬೇಂದ್ರೆಯವರು ಇವನ್ನು ಹೇಗೆ ಬಳಸಿಕೊಂಡರು, ತಮ್ಮ ಸಾಹಿತ್ಯ ಸಂದರ್ಭದ ಜತೆ ಯಾವ ತರದ ಅನುಸಂಧಾನ ಸಾಧಿಸಿದರು ಎನ್ನುವುದನ್ನು ಗಿರಡ್ಡಿಯವರು ತಮ್ಮ ಅಪಾರ ವಿದ್ವತ್ತಿನಿಂದ ವಿಶ್ಲೇಷಿಸುತ್ತಾರೆ. ಇದರಲ್ಲೂ ನನಗೆ ಅತ್ಯಂತ ಇಷ್ಟವಾದ್ದು ಲೇಖನದ ಕೊನೆಯಲ್ಲಿ ಅವರು ಹೇಳುವ ಈ ಮಾತು: ‘ಅಹಹಹಾ ಬಂತು ಶ್ರಾವಣಾ’ … ‘ಅಹಹಹಾ ಮಲ್ಲಿಗೆ! ಬರುವೆನೆ ನಿನ್ನಲ್ಲಿಗೆ’ … ಎಂಬಂಥ ಸಹಜ ತನ್ಮಯತೆಯ ಉದ್ಗಾರಗಳನ್ನು ಇವತ್ತಿನ ಯಾವ ಕವಿಯೂ ಹೊರಡಿಸಲಾರ. ಅನುಭವವನ್ನು ಪ್ರಯೋಗಶಾಲೆಯ ಕಪ್ಪೆಯಂತೆ ಕೊಯ್ದು ನೋಡಬೇಕೆಂಬ ಮನಸ್ಸಿಗೆ, ಕವಿತೆಯೆಂದರೆ ಬುದ್ಧಿಪೂರ್ವಕವಾಗಿ ಸಿದ್ಧಾಂತವೊಂದಕ್ಕೆ ಹೊಂದಿಸಬೇಕಾದ ವಸ್ತುವೆಂಬಂತೆ ನೋಡಬೇಕೆಂಬ ಮನಸ್ಸಿಗೆ ಇದು ಕಷ್ಟಸಾಧ್ಯ. ವೈಚಾರಿಕತೆಯನ್ನೇ ಸಾಧನವಾಗಿ ಉಪಯೋಗಿಸುವ ವಿಮರ್ಶಕ ಗಿರಡ್ಡಿ ಅದನ್ನೂ ತಲೆಕೆಳಗಾಗಿ ನಿಲ್ಲಿಸಬಲ್ಲರು ಎನ್ನುವುದಕ್ಕೆ ಇದೊಂದು ಉದಾಹರಣೆ. ನವ್ಯದ ಆದಿಕಾಲದಿಂದ ಬಹಳ ದೂರ ಸಾಗಿಬಂದವರಲ್ಲಿ ಗಿರಡ್ಡಿಯವರು ಮುಖ್ಯರು ಮಾತ್ರವೇ ಅಲ್ಲ ಈ ಸಾಗುವಿಕೆಗೆ ಕಾರಣರೂ ಹೌದು.

ಈ ತರದ ದೃಷ್ಟಿಪಲ್ಲಟದಿಂದ ಗಿರಡ್ಡಿಯವರು ಹಲವೆಡೆ ನಮ್ಮನ್ನು ಚಕಿತಗೊಳಿಸುವುದಿದೆ. ‘ಆಧುನಿಕತೆ ಮತ್ತು ಕನ್ನಡ ಕಾದಂಬರಿ’ ಎಂಬ ಲೇಖನದಲ್ಲಿ ವಸಾಹತುಶಾಹಿ ಪ್ರಭಾವವನ್ನು ಟೀಕಿಸುತ್ತ ಅವರು ‘ಯಾವಾಗ ಲೇಖನ ಸಂಸ್ಕೃತಿಯೇ ಶ್ರೇಷ್ಠವೆಂಬ ಪಾಶ್ಚಾತ್ಯ ಕಲ್ಪನೆಯನ್ನು ಒಪ್ಪಿಕೊಂಡೆವೊ, ಆ ಕ್ಷಣವೇ ನಾವೆಲ್ಲ ಅಶಿಕ್ಷಿತರೂ ಅಸಂಸ್ಕೃತರೂ ಆಗಿಬಿಟ್ಟೆವು’ ಎನ್ನುತ್ತಾರೆ. ಪಶ್ಚಿಮದ ದಾಖಲೆ ಸಂಸ್ಕೃತಿಯನ್ನೂ ಪೂರ್ವದ ದಂತಕಥೆ ಸಂಸ್ಕೃತಿಯನ್ನೂ ಹೋಲಿಸುವ ಈ ಮಾತುಗಳೂ ಮನನಾರ್ಹ: ‘ಒಂದು ವೇಳೆ ಪಶ್ಚಿಮವೇ ದಂತಕಥೆಗಳನ್ನು ಕಟ್ಟುವ ಸಂಪ್ರದಾಯವನ್ನಿಟ್ಪುಕೊಂಡು, ನಾವು ದಾಖಲೆಗಳ ಬೆನ್ನು ಹತ್ತಿದ್ದರೆ ಏನಾಗುತ್ತಿತ್ತು? ಪಶ್ಚಿಮದ ದಂತಕಥೆಗಳ ಸೃಜನಶೀಲ ಪ್ರತಿಭೆಯನ್ನು ಎತ್ತಿಹಿಡಿಯುವ ಸಿದ್ಧಾಂತಗಳು ಹುಟ್ಟಿಕೊಂಡು, ಭಾರತೀಯರು ಕೇವಲ ದಾಖಲೆಗಳನ್ನಿಡುವ ದರಿದ್ರ ಪ್ರತಿಭೆಯ ಜನವೆಂದು ಹಂಗಿಸಲ್ಲಡುತ್ತಿದ್ದರು. ಆಳುವ ಜನ ಮಾಡಿದ್ದೆಲ್ಲ ಶ್ರೇಷ್ಠವಾಗಿಬಿಡುತ್ತದೆ. ಗುಲಾಮರಿಗೆ ತಮ್ಮ ವಿಶಿಷ್ಟ ಪ್ರತಿಭೆಯನ್ನು ಎತ್ತಿ ಹಿಡಿಯುವ ಆತ್ಮವಿಶ್ವಾಸವೇ ಉಳಿದಿರುವುದಿಲ್ಲ.’ ಅಸ್ತಿತ್ವವಾದದ ಕುರಿತು ಹಲವರು ಪುಟಗಟ್ಟಲೆ ಬರೆದಿದ್ದಾರೆ. ಆದರೆ ಗಿರಡ್ಡಿಯವರು ಕೇವಲ ಒಂದೆರಡು ವಾಕ್ಯಗಳಲ್ಲೇ ಅದನ್ನು ಸಾದೃಶ್ಯಸಮೇತ ಓದುಗರಿಗೆ ಮನದಟ್ಟುಮಾಡಬಲ್ಲರು. ಉದಾಹರಣೆಗೆ, ‘ಸತ್ಯದ ಬಹುತ್ವ: ಶಾಂತಿನಾಥ ದೇಸಾಯಿಯವರ ಸಣ್ಣಕತೆಗಳು’ ಎಂಬ ಲೇಖನದ ಈ ಮಾತುಗಳು: ‘ನವೋದಯ ಕಾಲದಲ್ಲಿ ಪ್ರಧಾನ ಚಿಂತನಕ್ರಮವಾಗಿದ್ದ ಮಾನವತಾವಾದ ಮನುಷ್ಯನನ್ನು ಸಾಮಾಜಿಕ ಸಂಬಂಧಗಳ ಹಿನ್ನೆಲೆಯಲ್ಲಿಟ್ಟು ನೋಡಿದರೆ, ಅಸ್ತಿತ್ವವಾದ ಅವನನ್ನು ಸಾಮಾಜಿಕ ಆವರಣದಿಂದ ಬೇರ್ಪಡಿಸಿ ಏಕಾಂಗಿಯನ್ನಾಗಿ ನೋಡುತ್ತದೆ…. ಆದರೆ ಹಾಗೆ ಹೇಳಿದರೂ ಸಾಮಾಜಿಕ ಪರಿಸರ ಇದ್ದೇ ಇರುತ್ತದೆ. ಅದರಿಂದ ಬೇರ್ಪಡಿಸಿದರೆ ಮನುಷ್ಯನನ್ನು ನಿಲ್ಲಿಸುವುದಾದರೂ ಎಲ್ಲಿ? ದೇಸಾಯಿಯವರು ಅಸ್ತಿತ್ವವಾದಿ ಕಲ್ಪನೆಯನ್ನು ಒಪ್ಪಿಕೊಂಡು ಬರೆದರೂ, ಅವರ ಕತೆಗಳಲ್ಲಿ ಸಮಸ್ಯೆಗಳು ಉದ್ಬವಿಸುವುದು ವಿಶಿಷ್ಟ ಸಾಮಾಜಿಕ ರಚನೆಯಲ್ಲಿ-ಎಂಬುದನ್ನು ಗಮನಿಸಬೇಕು. ಸುಶಿಕ್ಷಿತ ವರ್ಗದ ವ್ಯಕ್ತಿಗಳು, ಹಳ್ಳಿಗಾಡಿನ ಸರಂಜಾಮಿ ವ್ಯವಸ್ಥೆಯಲ್ಲಿ ಬಾಳಿದವರು, ಕಾರ್ಪೊರೇಟ್ ಜಗತ್ತಿನಲ್ಲಿ ಕೆಲಸ ಮಾಡುವವರು-ಇವರೆಲ್ಲ ತಮ್ಮ ಸಾಮಾಜಿಕ ಬದುಕಿಗೆ ಅಂಟಿಕೊಂಡವರು. ಅಲ್ಲಿಂದಲೇ ಅವರ ಸಮಸ್ಯೆಗಳು ಹುಟ್ಟಿಕೊಂಡರೂ ದೇಸಾಯಿಯವರ ಕತೆಗಳಲ್ಲಿ ಆ ಸಾಮಾಜಿಕ ಪರಿಸರ ಸಮಸ್ಯೆಗಳ ಪರಿಹಾರದಲ್ಲಿ ಭಾಗವಹಿಸುವುದಿಲ್ಲ. ಕೊನೆಯ ನಿರ್ಣಯ ವೈಯಕ್ತಿಕವಾಗಿಯೇ ಉಳಿಯುತ್ತದೆ. ಸಮಸ್ಯೆಗಳ ಪರಿಹಾರಕ್ಕಾಗಿ ಸಮಾಜದ ರಚನೆಯನ್ನೇ ಬದಲಿಸಬೇಕೆಂಬ ಹಟ ಇಲ್ಲಿ ಕಾಣುವುದಿಲ್ಲ.’ ಅಸ್ತಿತ್ವವಾದಿ ಕೃತಿಗಳ ಇಷ್ಟು ಸೊಗಸಾದ ವಿವರಣೆ ಅಪರೂಪವೇ ಸರಿ.

’ಪ್ರಮಾಣು’ ವಿನಲ್ಲಿ ಚರ್ಚಾಸ್ಪದವಾದ ಸಂಗತಿಗಳು ಇಲ್ಲವೆಂದಲ್ಲ. ‘ಮಾರ್ಗ ಮತ್ತು ದೇಸಿ’ ಎಂಬ ಲೇಖನದಲ್ಲಿ ‘ಕವಿರಾಜಮಾರ್ಗ’ದ ಕುರಿತಾಗಿ ಅವರು ಸದ್ಯ ಸ್ವೀಕೃತವಾಗಿರುವ ರಾಜಕೀಯವಾಗಿ ಸರಿಯೆನಿಸಿದ ನಿರೂಪಣೆಯನ್ನು ಯಥಾವತ್ತಾಗಿ ಸ್ವೀಕರಿಸಿಕೊಂಡಿದ್ದಾರೆ. “ರಾಜ್ಯಾಡಳಿತದ ಅನುಕೂಲಕ್ಕಾಗಿ ನೃಪತುಂಗನಿಗೆ ಕನ್ನಡ ಭಾಷೆಯನ್ನು ಬಳಸಬೇಕಾಗಿತ್ತು. ಅದಕ್ಕಾಗಿ ಕನ್ನಡ ಭಾಷೆಯನ್ನು ಈ ಉದ್ದೇಶಕ್ಕೆ ತಕ್ಕುದಾಗಿ ಬೆಳೆಸಬೇಕಾದ ಅವಶ್ಯಕತೆಯಿತ್ತು. ಅದಕ್ಕೆ ರಾಜಾಶ್ರಯವನ್ನು ಒದಗಿಸಿ, ಎಲ್ಲ ರೀತಿಯ ಉತ್ತೇಜನ ನೀಡಿ, ಅದಕ್ಕೂ ‘ಮಾರ್ಗ’ದ ಪ್ರತಿಷ್ಠೆಯನ್ನು ಒದಗಿಸಬೇಕಾಗಿತ್ತು.’ ನೃಪತುಂಗ ಮತ್ತು ಶ್ರೀವಿಜಯ ಒಟ್ಟಿಗೆ ಸೇರಿ ಇಂಥ ಒಳ ಉದ್ದೇಶ ಮನಸ್ಸಿನಲ್ಲಿಟ್ಟುಕೊಂಡು ಈ ಕೃತಿಯನ್ನು ರಚಿಸಿದರೇ? ‘ಕವಿರಾಜಮಾರ್ಗ’ ಇಂಥ ಪರಿಣಾಮ ಉಂಟುಮಾಡಿತು ಎನ್ನುವುದು ಬೇರೆ, ಇಂಥ ಉದ್ದೇಶಕ್ಕಾಗಿ ರಚಿಸಲ್ಪಟ್ಟಿತು ಎನ್ನುವುದು ಬೇರೆ. ನಮ್ಮ ರಾಜಕಾರಣವನ್ನು ನೃಪತುಂಗನ ತಲೆಗೆ ಕಟ್ಪುವುದೇ? ಆಧಾರ ರಹಿತವಾದ ಈ ತರದ ತೀರ್ಮಾನಗಳು ರೋಚಕವೆನಿಸುತ್ತವೆ. ಆದರೆ ಇದನ್ನೊಂದು ಸ್ವಾರಸ್ಯಕರ ಊಹೆಯೆಂದು ತಿಳಿದುಕೊಂಡರೆ ತಪ್ಪಿಲ್ಲ. ವಿಮರ್ಶಕನೊಬ್ಬ ಯಾವಾಗಲೂ ತನ್ನ ಮಾತನ್ನು ಅಳೆದು ತೂಗಿ ನುಡಿಯಬೇಕೆಂದು ನಿರೀಕ್ಷಿಸುವುದು ಸರಿಯಾಗದು. ಗಿರಡ್ಡಿಯವರ ಜತೆ ಇಂಥ ಚರ್ಚೆ ಯಾವಾಗಲೂ ಸಾಧ್ಯ. ಬಹುಶಃ ‘ಪ್ರಮಾಣುವೆಂಬುದು ಪ್ರಮಾಣು’ ಎಂದು ಅವರು ನಮ್ಮನ್ನೇ ಎಚ್ಚರಿಸಬಹುದು. ಪ್ರತಿಯೊಂದು ಓದೂ ಮತ್ತೆ ಓದಿಗೆ ಗುರಿಯಾದಾಗಲೇ ವಿಮರ್ಶೆ ಬೆಳೆಯುವುದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗುರು
Next post ಭಾವಗೀತೆಯ ಮೆರಗು

ಸಣ್ಣ ಕತೆ

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

cheap jordans|wholesale air max|wholesale jordans|wholesale jewelry|wholesale jerseys