ಗೋಕಾಕ್ ವರದಿ – ಭಾಗ ೧

ಗೋಕಾಕ್ ವರದಿ – ಭಾಗ ೧

ಭಾಷಾ ಸಮಿತಿಯ ವರದಿ

(ಡಾ| ಗೋಕಾಕ್ ಸಮಿತಿ ವರದಿ)

ಸನ್ಮಾನ್ಯ ಶಿಕ್ಷಣ ಸಚಿವರಿಗೆ,
ಸಂಸ್ಕೃತವನ್ನು ಪ್ರಥಮಭಾಷೆಗಳ ಪಟ್ಟಿಯಿಂದ ತೆಗೆಯಲು ೧೯೭೯ನೇ ಅಕ್ಟೋಬರ್ ತಿಂಗಳಲ್ಲಿ ಸರ್ಕಾರ ಆದೇಶ ಹೊರಡಿಸಿದುದರಿಂದ ಉಂಟಾದ ವಿವಾದವನ್ನು ತಜ್ಞರ ಸಮಿತಿಗೆ ವಹಿಸಲು ನಿರ್ಧರಿಸಿ ಸಮಿತಿ ರಚಿಸಿ ಸರ್ಕಾರ ಕ್ರಮಾಂಕ ಇಡಿ-೧೧೩ ಎಸ್‌ಒಹೆಚ್-೭೯, ಬೆಂಗಳೂರು, ದಿನಾಂಕ ೫ನೆ ಜುಲೈ ೧೯೮೦ರ ಆದೇಶ ಹೊರಡಿಸಿತು.

೧ ಡಾ || ವಿ. ಕೃ. ಗೋಕಾಕರು ಅಧ್ಯಕ್ಷರು ೫೨೫, ರಾಜಾಮಹಲ್ ವಿಲಾಸ ಬಡಾವಣೆ,ಬೆಂಗಳೂರು-೫೬.
೨ ಶ್ರೀ ಜಿ. ನಾರಾಯಣ ಸದಸ್ಯರು ಮಾಜಿ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್, ೩, ೧೦ನೇ ಕ್ರಾಸ್, ಹನುಮಂತನಗರ, ಬೆಂಗಳೂರು-೧೯.
೩ ಶ್ರೀ ಎಸ್. ಕೆ. ರಾಮಚಂದ್ರರಾಯರು ಸದಸ್ಯರು ೩೦೫, ೬ನೇ ಕ್ರಾಸ್, ೧ನೇ ಬ್ಲಾಕ್, ಜಯನಗರ, ಬೆಂಗಳೂರು-೧೧.
೪ ಶ್ರೀ ತ. ಸು. ಶಾಮರಾಯರು ಸದಸ್ಯರು ನಿವೃತ್ತ ಕನ್ನಡ ಪ್ರಾಧ್ಯಾಪಕರು, ಚಿದಂಬರ ಆಶ್ರಮ, ಗುಬ್ಬಿ ಪೋಸ್ಟ್, ತುಮಕೂರು ಜಿಲ್ಲೆ.
೫ ಡಾ|| ಕೆ. ಕೃಷ್ಣಮೂರ್ತಿ ಸದಸ್ಯರು ಪ್ರಾಧ್ಯಾಪಕರು, ಸಂಸ್ಕೃತ ವಿಭಾಗ, ಕರ್ನಾಟಕ ವಿಶ್ವವಿದ್ಯಾನಿಲಯ, ಧಾರವಾರ.
೬ ಡಾ|| ಎಚ್. ಪಿ. ಮಲ್ಲೇದೇವರು ಸದಸ್ಯರು ಪ್ರಾಧ್ಯಾಪಕರು, ಸಂಸ್ಕೃತ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ, ಮಾನಸಗಂಗೋತ್ರಿ, ಮೈಸೂರು.
೭ ಶ್ರೀ ಸಾ. ಮಂಚಯ್ಯ ಸದಸ್ಯ-ಕಾರ್ಯದರ್ಶಿ ಅಡಿಷನಲ್ ಕಾರ್ಯದರ್ಶಿ, ಶಿಕ್ಷಣ ಮತ್ತು ಯುವಜನ ಸೇವಾ ಇಲಾಖೆ, ಕರ್ನಾಟಕ ಸರ್ಕಾರ, ವಿಧಾನಸೌಧ, ಬೆಂಗಳೂರು.

ಸಮಿತಿಯ ಪರಿಶೀಲನೆಗೆ ವಹಿಸಿದ ಸಮಸ್ಯೆಗಳು ಸಮಿತಿಯ ರಚನೆಯ ಸಂಬಂಧ ಹೊರಡಿಸಿದ ಸರ್ಕಾರಿ ಆಜ್ಞೆಯಲ್ಲಿ ಉಕ್ತವಾಗಿವೆ. ಈ ಆಜ್ಞೆಯಂತೆ ಸಮಿತಿ ಮೂರು ತಿಂಗಳ ಅವಧಿಯಲ್ಲಿ ಸರ್ಕಾರಕ್ಕೆ ವರದಿ ಕೊಡಬೇಕಾಗಿತ್ತು. ಆದರೆ ಸಮಸ್ಯೆಯ ಗಂಭೀರತೆಯನ್ನು ಮನಗಂಡ ಅಧ್ಯಕ್ಷರು ಮತ್ತು ಸದಸ್ಯರು ಪ್ರತಿಯೊಂದು ಅಂಶವನ್ನೂ ಕೂಲಂಕಷವಾಗಿ ಪರಿಶೀಲಿಸಿ ನಿರ್ಧಾರಕ್ಕೆ ಬರುವುದು ಉಚಿತವೆಂದು ನಿರ್ಧರಿಸಿದುದರಿಂದ ಆ ಅವಧಿಯೊಳಗೆ ವರದಿ ತಯಾರಿಸಲು ಸಾಧ್ಯವಾಗಲಿಲ್ಲ. ಆದರೂ ಹೆಚ್ಚು ವಿಳಂಬ ಮಾಡದೆ ವರದಿಯನ್ನು ತಯಾರಿಸಿದೆ. ಈ ವರದಿಯಲ್ಲಿ ಮಾಡಿರುವ ಸಲಹೆಗಳನ್ನು ಸರ್ಕಾರ ಪರಿಶೀಲಿಸಿ ಎಲ್ಲಾ ಸಲಹೆಗಳನ್ನೂ ಕಾರ್ಯರೂಪಕ್ಕೆ ತರುವ ನಿರ್ಧಾರ ಕೈಗೊಳ್ಳುವುದೆಂದು ಆಶಿಸಿದ್ದೇವೆ.

ಈ ಗಂಭೀರ ಸಮಸ್ಯೆ ಬಗ್ಗೆ ಆಲೋಚಿಸಿ ಸೂಕ್ತಪರಿಹಾರ ಸಲಹೆಮಾಡುವ ಅವಕಾಶ ಈ ಸಮಿತಿಯ ಸದಸ್ಯರಿಗೆ ಒದಗಿಸಿಕೊಟ್ಟಿದ್ದಕ್ಕೆ ಸರ್ಕಾರಕ್ಕೆ ನಾವು ಕೃತಜ್ಞರಾಗಿದ್ದೇವೆ.

ಅಧ್ಯಕ್ಷರು ಮತ್ತು ಸದಸ್ಯರುಗಳು ಹಾಗೂ ಸದಸ್ಯ-ಕಾರ್ಯದರ್ಶಿ,
ಭಾಷಾ ಸಮಿತಿ.
ಸರ್ಕಾರಿ ಆದೇಶ
ವಿಷಯ: ಪ್ರೌಢ್) ಸರ್ಕಾರಿ ಆದೇಶ ಕ್ರಮಾಂಕ ಇಡಿ ೧೧೩ ಎಸಎಚ್-೭೯,

ದಿನಾಂಕ ೨೦ನೇ ಅಕ್ಟೋಬರ್ ೧೯೭೯

ಪ್ರಸ್ತಾವನೆ:
ಸ್ವಾತಂತ್ರ್ಯ ಪೂರ್ವದಿಂದಲೂ ಸಂಸ್ಕೃತವನ್ನು ಪ್ರಥಮಭಾಷೆಯಾಗಿ ಅಭ್ಯಸಿಸಲು ಪ್ರೌಢಶಾಲಾ ಪಠ್ಯವಸ್ತುವಿನಲ್ಲಿ ಅವಕಾಶವಿತ್ತು. ತ್ರಿಭಾಷಾಸೂತ್ರ ಒಪ್ಪಿಕೊಂಡಮೇಲೂ ಈ ವ್ಯವಸ್ಥೆ ಮುಂದುವರಿಯಿತು. ಆದರೆ ಮೇಲೆ ಉಲ್ಲೇಖಿಸಿರುವ ಸರ್ಕಾರಿ ಆದೇಶದಂತೆ ಸಂಸ್ಕೃತ ಭಾಷೆಯನ್ನು ಪ್ರಥಮಭಾಷೆಗಳ ಪಟ್ಟಿಯಿಂದ ತೆಗೆದು ಸಂಯೋಜಿತ ಭಾಷೆಯಾಗಿ ಅಂದರೆ, ಹಿಂದಿ, ಮರಾಠಿ, ತಮಿಳು ಮತ್ತು ತೆಲುಗು, ಭಾಷೆಗಳನ್ನು ಪ್ರಥಮಭಾಷೆಯಾಗಿ ಅಭ್ಯಸಿಸಲು ಅವಕಾಶ ಕಲ್ಪಿಸಿದೆ. ಈ ನೀತಿ ಸಂಸ್ಕೃತ ಪ್ರೇಮಿಗಳ ವಿರೋಧವನ್ನು ಎದುರಿಸಬೇಕಾಯಿತು. ಅನೇಕ ವಿದ್ವಾಂಸರು, ಶಿಕ್ಷಣ ತಜ್ಞರು ಸರ್ಕಾರಕ್ಕೆ ಮನವಿ ಸಲ್ಲಿಸಿ ಸಂಸ್ಕೃತವನ್ನು ಪ್ರಥಮಭಾಷೆಯಾಗಿ ಉಳಿಸಲು ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಬಗ್ಗೆ ಸಾಕಷ್ಟು ವಿವಾದವೆದ್ದಿದೆ.

ಈ ವಿವಾದಾತ್ಮಕವಾದ ಸಮಸ್ಯೆಯನ್ನು ತಜ್ಞರ ಸಮಿತಿಯ ಪರಿಶೀಲನೆಗೆ ವಹಿಸಲು ನಿರ್ಧರಿಸಿದೆ.
ಸರ್ಕಾರಿ ಆದೇಶ ಕ್ರಮಾಂಕ ಇಡಿ ೧೧೩ ಎಸ್‌ಒಹೆಚ್ ೭೯, ಬೆಂಗಳೂರು ದಿನಾಂಕ ೫ನೇ ಜುಲೈ ೧೯೮೦
ಮೇಲಿನ ನಿರ್ಧಾರದಂತೆ ;

ಈ ಕೆಳಗೆ ಹೆಸರಿಸಿರುವವರನ್ನೊಳಗೊಂಡ ಸಮಿತಿಯನ್ನು ರಚಿಸಿದೆ.

೧ ಡಾ || ವಿ. ಕೃ. ಗೋಕಾಕರು ಅಧ್ಯಕ್ಷರು
೨ ಶ್ರೀ ಜಿ. ನಾರಾಯಣ ಸದಸ್ಯರು
೩ ಶ್ರೀ ಎಸ್. ಕೆ. ರಾಮಚಂದ್ರರಾಯರು ಸದಸ್ಯರು
೪ ಶ್ರೀ ತ. ಸು. ಶಾಮರಾಯರು ಸದಸ್ಯರು
೫ ಡಾ|| ಕೆ. ಕೃಷ್ಣಮೂರ್ತಿ ಸದಸ್ಯರು
೬ ಡಾ|| ಎಚ್. ಪಿ. ಮಲ್ಲೇದೇವರು ಸದಸ್ಯರು
೭ ಶ್ರೀ ಸಾ. ಮಂಚಯ್ಯ ಸದಸ್ಯ-ಕಾರ್ಯದರ್ಶಿ

ಈ ಸಮಿತಿಯು ಕೆಳಕಂಡ ಪ್ಯಾರಾದಲ್ಲಿ ಉಕ್ತವಾಗಿರುವ ಸಮಸ್ಯೆಗಳನ್ನು ಪರಿಶೀಲಿಸಿ ಮೂರು ತಿಂಗಳೊಳಗೆ ಸರ್ಕಾರಕ್ಕೆ ವರದಿ ಒಪ್ಪಿಸಬೇಕೆಂದು ಕೋರಿದೆ.

೧. ಸಂಸ್ಕೃತ ಶಾಲಾ ಪಠ್ಯವಸ್ತುವಿನಲ್ಲಿ ಅಭ್ಯಾಸ ವಿಷಯವಾಗಿ ಉಳಿಯಬೇಕೆ?
೨. ಉಳಿಯಬೇಕಾದರೆ, ಕನ್ನಡಕ್ಕೆ ಪರ್ಯಾಯ ಭಾಷೆಯಾಗದೆ ಉಳಿಸುವುದು ಹೇಗೆ?
೩. ತ್ರಿಭಾಷಾ ಸೂತ್ರದಂತೆ ಕನ್ನಡ ಕಡ್ಡಾಯಮಾಡಿ ಉಳಿದೆರಡು ಭಾಷೆಗಳ ಆಯ್ಕೆಯ ಸ್ವಾತಂತ್ರ್ಯವನ್ನು ವಿದ್ಯಾರ್ಥಿ-ವಿಧ್ಯಾರ್ಥಿನಿಯರಿಗೆ ಬಿಡುವುದು ಸೂಕ್ತವೆ?

ಮೇಲಿನ ವಿಷಯಗಳನ್ನು ಪರಿಶೀಲಿಸಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪಠ್ಯವಸ್ತುವಿನಲ್ಲಿ ಭಾಷೆಗಳ ಸ್ಥಾನದ ಬಗ್ಗೆ ಉಚಿತವೂ, ಕಾರ್ಯರೂಪಕ್ಕೆ ತರುವಂತಹುದೂ ಆದ ನೀತಿಯನ್ನು ನಿರ್ಣಯಿಸಲು ಸಹಾಯಕವಾಗುವಂತೆ ಸಲಹೆಗಳನ್ನೊಳಗೊಂಡ ವರದಿಯನ್ನು ಸರ್ಕಾರಕ್ಕೆ ಮೂರು ತಿಂಗಳ ಅವಧಿಯಲ್ಲಿ ಸಲ್ಲಿಸಬೇಕು.

ಮೇಲ್ಕಂಡ ಸಮಿತಿಯ ಅಧಿಕಾರೇತೇರ ಸದಸ್ಯರ ಪ್ರಮಾಣ ಮತ್ತು ದಿನಬಥ್ಯದ ವೆಚ್ಚವನ್ನೂ “೨೭೭ ವಿದ್ಯಾಭ್ಯಾಸ-೪-ಸಾಮಾನ್ಯ-೮-ಇತರ ವೆಚ್ಚ-೧-ಸಾಮಾನ್ಯ ಶಿಕ್ಷಣ ಸಮಿತಿಗಳು ಮತ್ತು ಮಂಡಳಿಗಳು” ಲೆಕ್ಕ ಶೀರ್ಷಿಕೆಯಲ್ಲಿ ಭರಿಸಬಹುದು. ಈ ಸದಸ್ಯರು ಪ್ರಯಾಣ ಮತ್ತು ದಿನಭತ್ಯಗಳ ಸಲುವಾಗಿ ಕರ್ನಾಟಕ ಸರ್ಕಾರ ಸೇವಾ ನಿಯಮಗಳ ಅನುಬಂಧ ‘ಎ’ ಅಡಿಯಲ್ಲಿ ‘ಎ’ ದರ್ಜೆಯವರೆಂದು ಪರಿಗಣಿಸಬೇಕು.

ಮೇಲ್ಕಂಡ ಆಜ್ಞೆಯು ಟಿಪ್ಪಣಿ ಸಂಖ್ಯೆ ಅ. ಕಾ. ೨೦೦೭ ದಿನಾಂಕ ೨೩ನೇ ಜೂನ್ ೧೯೮೦ರಲ್ಲಿ ಉಕ್ತವಾಗಿರುವ ಆರ್ಥಿಕ ಇಲಾಖೆಯ ಒಪ್ಪಿಗೆಯ ಮೇರೆಗೆ ಹೊರಡಿಸಲ್ಪಟ್ಟಿದೆ.

ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಸಹಿ
(ಲೀಲಾ ಜಾರ್ಜ)

ಪ್ರಚಾರ ಅಧೀನ ಕಾರ್ಯದರ್ಶಿ,
ಶಿಕ್ಷಣ ಮತ್ತು ಯುವಜನ ಸೇವಾ ಇಲಾಖೆ.

ಗೆ,
ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು.
ಸಮಿತಿಯ ಎಲ್ಲಾ ಸದಸ್ಯರುಗಳಿಗೂ
‘ಪ್ರತಿ’
ಸಮಿತಿಯ ಮೊದಲ ಮಾತು

ಭಾಷಾ ಶಿಕ್ಷಣವು ಶಿಕ್ಷಣದ ಉಳಿದ ಭಾಗಗಳಿಗಿಂತ ಒಂದು ದೃಷ್ಟಿಯಿಂದ ಹೆಚ್ಚು ಮಹತ್ವದ್ದಾಗಿದೆ. ಏಕೆಂದರೆ ಎಲ್ಲಾ ಜ್ಞಾನ ವಿಜ್ಞಾನದ ಬೋಧನೆಗೆ ಭಾಷೆಯೇ ಮಾಧ್ಯಮವಾಗಿದೆ. ಅಲ್ಲದೆ ಭಾಷೆಗಳನ್ನು ಹೇಗೆ ಕಲಿಸಬೇಕೆಂಬ ಒಂದು ಶಾಸ್ತ್ರವೇ ಪ್ರತ್ಯೇಕವಾಗಿದೆ. ಭಾರತದಲ್ಲಿಯ ಹಾಗೂ ಕರ್ನಾಟಕ ರಾಜ್ಯದಲ್ಲಿಯ ವಿಶೇಷ ಸ್ಥಿತಿಯನ್ನು ಅನುಲಕ್ಷಿಸಿ ಇಲ್ಲಿ ಶಿಕ್ಷಣದ ಇಂದಿನ ಆಗು_ಹೋಗುಗಳನ್ನು ವಿಮರ್ಶಿಸಿ, ಆ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಇಂದಿನ ಭಾಷಾಶಿಕ್ಷಣದ ಗೊತ್ತುಗುರಿಗಳನ್ನು ನಿರ್ಣಯಿಸಬೇಕಾಗಿದೆ.

ಮಾಧ್ಯಮಿಕ ಹಂತದಲ್ಲಿಯ ಭಾಷಾಶಿಕ್ಷಣ ಕ್ರಮವು ಈಗೊಂದೆರಡು ವರ್ಷಗಳಿಂದ ತೀವ್ರ ಚರ್ಚೆಗೆ ಹಾಗೂ ವಾದಕ್ಕೆ ಗುರಿಯಾಗಿದೆ. ಈ ಸಮಸ್ಯೆಯು ಅಲ್ಲಲ್ಲಿ ಭಾವನಾವೇಶಕ್ಕೂ ಎಡೆಮಾಡಿಕೊಟ್ಟಿದೆ. ಸಮಾಜದಲ್ಲಿರಬಹುದಾದ ಸಂಕುಚಿತ ಭಾವನೆಗಳ ಪರಿಸ್ಪುರಣಕ್ಕೂ ಅದು ಈಗೀಗ ಕಾರಣವಾಗಿದೆ. ಮಂತ್ರಿಮಂಡಲದ ಕೆಲವು ಮಾನ್ಯ ಸದಸ್ಯರೂ ಕನ್ನಡ_ಸಂಸ್ಕೃತಗಳನ್ನು ಕುರಿತು ತಮ್ಮ ಅಭಿಪ್ರಾಯಗಳನ್ನು ಸಾರ್ವಜನಿಕ ವೇದಿಕೆಗಳಿಂದ ವ್ಯಕ್ತಪಡಿಸಿದ್ದಾರೆ. ಸಮಾಜದಲ್ಲಿಯ ಕೆಲವೊಂದು ವೃತ್ತ_ಪಂಗಡಗಳಿಂದ ಅಭಿಪ್ರಾಯ_ವಿರೋಧ_ಎಚ್ಚರಿಕೆಗಳು ವ್ಯಕ್ತವಾಗಿವೆ. ಕನ್ನಡದ ಹಿತಕ್ಕೆ ವಿರೋಧವಾದ ಸಮಿತಿ ಇದೆಂದು ಒಂದು ಗುಂಪು ಸಾರಿದರೆ, ಸಂಸ್ಕೃತಕ್ಕೆ ವಿರೋಧವಾದ ಸಮಿತಿ ಇದೆಂದು ಇನ್ನೊಂದು ವೃತ್ತ ಎಚ್ಚರಿಕೆ ನೀಡಿದೆ. ಒಂದು ಶೈಕ್ಷಣಿಕ ಸಮಸ್ಯೆ ಭಾವನೆಗಳನ್ನು ಇಷ್ಟೊಂದು ಕೆರಳಿಸಿರಬೇಕಾದರೆ ಅದರಿಂದ ಎಷ್ಟು ತರಹದ ವಿವಿಧ ಸ್ಪಂದನಗಳು ಹೊರಟಿವೆಯೆಂಬುದೂ, ಅದು ಎಷ್ಟೊಂದು ಜೀವಂತ ಹಾಗೂ ಗಂಭೀರ ಪ್ರಶ್ನೆಯಾಗಿದೆಯೆಂದೂ ತನಗೆ ತಾನೇ ಸ್ಪಷ್ಟವಾಗುತ್ತದೆ.

ಕೆಲವರು ಸಮಿತಿಯ ಜಟಿಲ ಕಾರ್ಯವನ್ನು ಕುರಿತು ಕರುಣಾಭಾವವನ್ನು ತಾಳಿದ್ದಾರೆ. ಹಲವರು ಸಮಿತಿಯು ಭಯಗೊಂಡಿದೆಯೆಂದು ಗ್ರಹಿಸಿ ಅದರ ವರದಿಯೂ ಒಂದು ಭಯಗ್ರಸ್ತ ವರದಿಯಾಗುವುದೆಂದು ನಂಬಿದ್ದಾರೆ. ಆದರೆ ಏನೆಂದು ಭಯಗೊಳ್ಳುವುದು? ಸಮಿತಿಯ ಸದಸ್ಯರಿಗೆ ಯಾವ ಆಸೆ-ಆಕಾಂಕ್ಷೆಗಳೂ ಇಲ್ಲ. ಅವರೆಲ್ಲ ತಮ್ಮ ತಮ್ಮ ಕಾರ್ಯಕ್ಷೇತ್ರಗಳನ್ನು ಎಂದೋ ಕಂಡುಕೊಂಡಿದ್ದು ತಾವು ಮಾಡಬೇಕಾದ ಕಾರ್ಯ ಯಾವುದೆಂಬುದನ್ನು ನಿರ್ದಿಷ್ಟಗೊಳಿಸಿ, ಆ ಕಾರ್ಯದಲ್ಲಿ ನಿರತರಾಗಿದ್ದಾರೆ. ಸಮಿತಿಗಾಗಿ ಕರೆಬಂದಾಗ ಇದೊಂದು ಜನತೆಯ ಸೇವೆಯೆಂದು ಅದನ್ನು ಸ್ವೀಕರಿಸಿದ್ದಾರೆ. ಅಲ್ಲದೆ ಅಲ್ಲಲ್ಲಿ ವ್ಯಕ್ತವಾದ ಒಂದು ಅಭಿಪ್ರಾಯ-ವಿರೋಧ-ಎಚ್ಚರಿಕೆಯನ್ನು ಇನ್ನೊಂದು ಅಭಿಪ್ರಾಯ-ವಿರೋಧ-ಎಚ್ಚರಿಕೆಯು ತನಗೆ ತಾನೇ ಎದುರಿಸುವುದರಲ್ಲಿ ತೊಡಗಿದೆ. ಸಮಿತಿಯು ಯಾವ ಪೂರ್ವಗ್ರಹಗಳಿಲ್ಲದೆ ತನ್ನ ಕಾರ್ಯಕಲಾಪಗಳನ್ನು ಪ್ರಾರಂಭಿಸಿ ಕನ್ನಡ ಜನತೆಯ ಕಲ್ಯಾಣವೂ ಭಾಷಾ ಶಿಕ್ಷಣದ ಮೂಲತತ್ವಗಳೂ ತನ್ನ ಅಡಿಗಲ್ಲೆಂದು ಭದ್ರವಾಗಿ ಸ್ವೀಕರಿಸಿದೆ. ಈ ಕಲ್ಯಾಣ ಹಾಗೂ ಈ ತತ್ವಗಳು ಸಮಿತಿಯ ಕಾರ್ಯವ್ಯಾಪ್ತಿಯ ಉತ್ತರ-ದಕ್ಷಿಣ ಧ್ರುವಗಳಾಗಿವೆ. ಅಲ್ಲದೆ ಈ ಎರಡು ಧ್ರುವಗಳೆಂದರೂ ಒಂದೇ ಧ್ರುವನಕ್ಷತ್ರ. ಏಕೆಂದರೆ ಎಲ್ಲ ಮೂಲತತ್ವಗಳ ಬೇರೂ ಜನತೆಯ ಕಲ್ಯಾಣದಲ್ಲಿದೆ. ಅದೇ ಎಲ್ಲ ತತ್ವದ ಉಗಮಸ್ಥಾನವೆಂದರೂ ಸಲ್ಲುವುದು. ಈ ವರದಿಯಲ್ಲಿ ಗುಣಗಳಿರಲಿ, ದೋಷಗಳಿರಲಿ, ಹೊರಗಿನ ಯಾವ ಅಭಿಪ್ರಾಯವಾಗಲಿ ವಿರೋಧವಾಗಲಿ ಅವುಗಳಿಗೆ ಕಾರಣವಾಗಿಲ್ಲ. ಆ ಗುಣ-ದೋಷಗಳ ಹೊಣೆ ನೇರವಾಗಿ ಸಮಿತಿಯ ತಲೆಯ ಮೇಲೆಯೇ ಇದೆ.
*
*
*
ಶಿಕ್ಷಣ ಪದ್ಧತಿಗೆ, ಪಠ್ಯಕ್ರಮ ಮತ್ತು ಪಠ್ಯವಸ್ತುವಿಗೆ ಸಂಬಂಧಿಸಿದ ವಿಚಾರಗಳನ್ನು ಪರಿಶೀಲಿಸಿ ಪ್ರಚಲಿತ ಕಾಲದ ಮೌಲ್ಯಗಳು, ಅವಶ್ಯಕತೆಗಳು ಮತ್ತು ಕಿರಿಯ ಪೀಳಿಗೆಯ ಭವಿಷ್ಯ-ಇವುಗಳನ್ನು ಗಮನಿಸಿ ಉದ್ವೇಗಕ್ಕೆ ಎಡೆಗೊಡದೆ ಸಮಾಧಾನವಾಗಿ ಆಲೋಚಿಸಿ ಸೂಕ್ತವೂ ಅಗತ್ಯವೂ ಆದ ನಿರ್ಣಯಗಳನ್ನು ಕೈಗೊಳ್ಳುವುದು ಅವಶ್ಯಕ. ಪೂರ್ವಗ್ರಹ ಪೀಡಿತ ದೃಷ್ಟಿಯಿಂದ ಯಾವುದೇ ನಿರ್ಣಯ ಕೈಗೊಂಡರೂ ಅದು ಉದ್ದೇಶಿತ ಗುರಿ ಮುಟ್ಟಲು ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸುವುದು ಅನಾವಶ್ಯಕವೆಂದು ಭಾವಿಸುತ್ತೇವೆ.

ಸಂಸ್ಕೃತ ಪ್ರಥಮಭಾಷೆಯಾಗಿ ಉಳಿಯಬೇಕೆ? ಇಲ್ಲವೇ ಅದು ಶಾಲಾ ಪಠ್ಯವಸ್ತುವಿನಿಂದಲೇ ಜಾರಿಹೋಗಬೇಕೆ? ಎಂಬ ವಾದವನ್ನು ಈ ಹಿನ್ನೆಲೆಯಲ್ಲಿಯೇ ಪರಿಶೀಲಿಸಬೇಕಾಗುತ್ತದೆ. ಸಂಸ್ಕೃತ ಪ್ರಥಮಭಾಷೆಗಳ ಗುಂಪಿನಲ್ಲಿ ಉಳಿದುಕೊಂಡು ಬಂದುದು ಹೇಗೆ ಎಂಬುದರ ಅರಿವು ಬರಬೇಕಾದರೆ ಈ ಪರಿಸ್ಥಿತಿ ಹೇಗೆ ಉಂಟಾಯಿತು ಎಂಬುದನ್ನು ತಿಳಿಯುವುದು ಅವಶ್ಯ.

ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಾಥಮಿಕ ಐದನೆಯ ತರಗತಿಯಿಂದ ಎಂಟನೇ ತರಗತಿಯವರೆಗೆ ವಿಜ್ಞಾನ ಬೋಧನೆ ಇರಲಿಲ್ಲ. ಅದರ ಬದಲು ಶಾರೀರ ಶಾಸ್ತ್ರ ಅಭ್ಯಸಿಸುತ್ತಿದ್ದರು. ಇದೂ ಕಡ್ಡಾಯವಾಗಿರಲಿಲ್ಲ. ಈ ವಿಷಯಕ್ಕೆ ಬದಲಾಗಿ ಯಾವುದಾದರೂ ಒಂದು ವೃತ್ತಿ ಇಲ್ಲವೇ ಸಂಸ್ಕೃತವನ್ನು ತೆಗೆದುಕೊಂಡು ಅಭ್ಯಾಸ ಮಾಡಲು ಅವಕಾಶವಿತ್ತು. ಈ ವ್ಯವಸ್ಥೆ ಹಳೇ ಮೈಸೂರಿನ ಪ್ರದೇಶದಲ್ಲಿ ಮಾತ್ರ ಇತ್ತು. ಹೀಗೆ ಮಾಧ್ಯಮಿಕ ಶಾಲೆಗಳಲ್ಲಿ ನಾಲ್ಕು ವರ್ಷಗಳ ಕಾಲ ಸಂಸ್ಕೃತವನ್ನು ಐಚ್ಛಿಕ ವಿಷಯವಾಗಿ ಆಯ್ದುಕೊಂಡು ಕಲಿತವರು ಪ್ರೌಢಶಾಲೆಗಳಲ್ಲಿ ಸಂಸ್ಕೃತವನ್ನು ದ್ವಿತೀಯ ಭಾಷೆಯಾಗಿ ಅಭ್ಯಸಿಸಲು ಅವಕಾಶವಿತ್ತು. ಕನ್ನಡ, ಉರ್ದು, ತೆಲುಗು, ತಮಿಳು, ಮುಂತಾದ ದ್ವಿತೀಯಭಾಷೆಗಳ ಗುಂಪಿನಲ್ಲಿ ಸಂಸ್ಕೃತವೂ ಒಂದಾಗಿತ್ತು. ಈ ವ್ಯವಸ್ಥೆ ಪ್ರಾಥಮಿಕ ಶಾಲೆಗಳ ಪಠ್ಯವಸ್ತು ಪರಿಷ್ಕಾರಗೊಂಡು, ಸಾಮಾನ್ಯ ವಿಜ್ಞಾನ ಬೋಧನೆ ಪ್ರಾಥಮಿಕ ಶಾಲೆಗಳಲ್ಲಿ ಕಡ್ಡಾಯವಾಗುವವರೆಗೆ ಮುಂದುವರೆದುಕೊಂಡು ಬಂದಿತು.
ಅಂದೂ ಕೂಡ ಸಂಸ್ಕೃತದ ಪಠ್ಯವಸ್ತುವಿನ ಮಟ್ಟ ಇತರ ದ್ವಿತೀಯ ಭಾಷೆಗಳ ಮಟ್ಟಕ್ಕೆ ಸರಿಸಮನಾಗಿರಲಿಲ್ಲ. ಎಂಟು ವರ್ಷಗಳ ಕಾಲ ತಮ್ಮ ಮಾತೃಭಾಷೆಯನ್ನು ದ್ವಿತೀಯ ಭಾಷೆಯಾಗಿ ಅಭ್ಯಸಿಸಿದವರ ಮಟ್ಟದಲ್ಲಿ ನಾಲ್ಕುವರ್ಷಗಳ ಕಾಲ ಸಂಸ್ಕೃತ ಅಭ್ಯಸಿಸಿದವರು ಪ್ರೌಢಶಾಲೆಗಳಲ್ಲಿ ಸಂಸ್ಕೃತ ಕಲಿಯುವುದು ಕಠಿಣವೆಂಬುದು ಆಗಲೂ ಸ್ಪಷ್ಟವಾಗಿತ್ತು.

ಮುಂಬಯಿ ರಾಜ್ಯದ ಕನ್ನಡ ಮಾತನಾಡುವ ಪ್ರದೇಶದಲ್ಲಿ ಬೇರೆ ವ್ಯವಸ್ಥೆಯೇ ಇತ್ತು. ಆ ಪ್ರದೇಶದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಅನಂತರ ರಾಜ್ಯ ಪುನರ್ವಿಂಗಡಣೆಯವರೆಗೆ ಸಂಸ್ಕೃತವನ್ನು ಒಂದು ಪೂರ್ಣ ಸ್ವತಂತ್ರ ವಿಷಯವಾಗಿ ಅಭ್ಯಸಿಸಲು ಅವಕಾಶವಿತ್ತು. ಅಲ್ಲಿನ ವ್ಯವಸ್ಥೆಯಂತೆ ಪ್ರಾಥಮಿಕ ಶಿಕ್ಷಣದ ಅವಧಿ ನಾಲ್ಕು ವರ್ಷಗಳು. ಅನಂತರ ಮಾಧ್ಯಮಿಕ ಶಿಕ್ಷಣ ಪ್ರಾರಂಭವಾಗುತ್ತಿತ್ತು. ಐದನೆಯ ತರಗತಿಯಿಂದ ಇಂಗ್ಲಿಷು ಕಲಿಸುವ ವ್ಯವಸ್ಥೆ ಇತ್ತು. ಸಂಸ್ಕೃತವನ್ನು ಮಾಧ್ಯಮಿಕ ಶಾಲೆಯ ನಾಲ್ಕನೆಯ ತರಗತಿಯಿಂದ ಪ್ರಾರಂಭಿಸಿ ಎಸ್.ಎಸ್.ಎಲ್.ಸಿ.ಯವರೆಗೆ ಅಂದರೆ ನಾಲ್ಕು ವರ್ಷಗಳು ಕಲಿಸುವ ಏರ್ಪಾಟಿತ್ತು. ಇಂಗ್ಲಿಷು, ಕನ್ನಡ ಮತ್ತು ಸಂಸ್ಕೃತಗಳಿಗೆ ಸಮಾನ ಸ್ಥಾನವಿದ್ದು ಮೂರಕ್ಕೂ ನೂರು ನೂರು ಅಂಕಗಳಿದ್ದುವು.

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಓರಿಯಂಟಲ್ ಶಾಲೆಗಳಿದ್ದುವು. ಈ ಶಾಲೆಗಳಲ್ಲಿ ಸಾಮಾನ್ಯ ಶಾಲೆಗಳಲ್ಲಿ ಕಲಿಸುವ ವಿಷಯಗಳ ಜೊತೆಗೆ ಸಂಸ್ಕೃತವನ್ನು ಉಚ್ಛಮಟ್ಟದಲ್ಲಿ ಕಲಿಸುವ ವ್ಯವಸ್ಥೆ ಇತ್ತು. ಈ ಶಾಲೆಗಳು ಇನ್ನೂ ಉಳಿದುಕೊಂಡಿವೆ. ಅವುಗಳಲ್ಲಿ ಸಂಸ್ಕೃತವನ್ನು ಒಂದು ಭಾಷೆಯಾಗಿ ಕಲಿಸುತ್ತಿದ್ದಾರೆ.

ಮೇಲೆ ತಿಳಿಸಿದ ವ್ಯವಸ್ಥೆ ರಾಜ್ಯಪುನರ್ವಿಂಗಡಣೆಗೆ ಮೊದಲು ಈಗ ಕರ್ನಾಟಕದಲ್ಲಿ ವಿಲೀನಗೊಂಡಿರುವ ಬೇರೆ ಬೇರೆ ಪ್ರದೇಶಗಳಲ್ಲಿ ಸಂಸ್ಕೃತ ಅಭ್ಯಾಸಕ್ಕೆ ಇದ್ದ ಅವಕಾಶಗಳು.

ಇಂದಿನ ವಿಶಾಲ ಕರ್ನಾಟಕ ಮುಂಬಯಿ ಪ್ರಾಂತದ ಕನ್ನಡ ಮಾತನಾಡುವ ಪ್ರದೇಶಗಳು, ಹೈದರಾಬಾದ್ ರಾಜ್ಯದ ಕನ್ನಡ ಮಾತನಾಡುವ ಪ್ರದೇಶಗಳು, ಕೊಡಗು ಮತ್ತು ಮದರಾಸು ರಾಜ್ಯದಿಂದ ಬಳ್ಳಾರಿ ಜಿಲ್ಲೆ, ದಕ್ಷಿಣಕನ್ನಡ ಜಿಲ್ಲೆ ಮತ್ತು ಕೊಳ್ಳೆಗಾಲ ತಾಲ್ಲೂಕುಗಳನ್ನೊಳಗೊಂಡಿದೆ. ೧೯೫೬ರ ನವೆಂಬರ್ ಒಂದರಂದು ವಿಶಾಲ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದಿತು.

ರಾಜ್ಯ ಪುನರ್ವಿಂಗಡಣೆ ಹಲವು ಹೊಸ ಸಮಸ್ಯೆಗಳನ್ನು ಉಂಟುಮಾಡಿತು. ಆಡಳಿತ ವ್ಯವಸ್ಥೆ, ಶಿಕ್ಷಣ ಪದ್ಧತಿ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆಯಾಗಿತ್ತು. ಈ ಎಲ್ಲಾ ಕ್ಷೇತ್ರಗಳಲ್ಲಿ ಎಕರೂಪತೆಯನ್ನು ಸಾಧಿಸುವುದು ಅವಶ್ಯಕವೂ, ಅನಿವಾರ್ಯವೂ ಆಗಿತ್ತು. ಆದುದರಿಂದ ಈ ಉದ್ದೇಶ ಸಾಧನೆಗಾಗಿ ಬೇರೆ ಬೇರೆ ಪ್ರದೇಶದಲ್ಲಿ ಅಂದು ಅಸ್ತಿತ್ವದಲ್ಲಿದ್ದ ಶಿಕ್ಷಣ ವ್ಯವಸ್ಥೆಯನ್ನು ಪರಿಶೀಲಿಸಿ ಎಕರೂಪವಾದ ಶಿಕ್ಷಣ ಪದ್ಧತಿಯನ್ನು ನಿರ್ಧರಿಸಲು ರಾಜ್ಯಮಟ್ಟದಲ್ಲಿ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ‘ಶಿಕ್ಷಣ ಏಕತಾ ಸಮಿತಿಯ’ ರಚನೆಯಾಯಿತು. ರಾಜ್ಯದಲ್ಲಿ ಶಿಕ್ಷಣ ಪದ್ಧತಿಯಲ್ಲಿದ್ದ ಭಿನ್ನತೆಯನ್ನು ನಿವಾರಿಸಿ ಏಕತೆಯನ್ನು ರೂಪಿಸುವುದೇ ಸಮಿತಿಯ ಉದ್ದೇಶ.

ಶಿಕ್ಷಣ ಏಕತಾ ಸಮಿತಿಯು ರಾಜ್ಯ ಪುನರ್ವಿಂಗಡಣೆಯ ಪರಿಣಾಮವಾಗಿ ಬೇರೆಬೇರೆ ಪ್ರಾಂತಗಳಿಂದ ಬಂದ ಪ್ರದೇಶಗಳಲ್ಲಿದ್ದ ಶಿಕ್ಷಣ ಪದ್ಧತಿಯನ್ನು ಪರಿಶೀಲಿಸಿ ಏಕರೂಪವಾದ ಶಿಕ್ಷಣ ಪದ್ಧತಿಯ ವ್ಯವಸ್ಥೆಯನ್ನು ಸಲಹೆ ಮಾಡಿತು. ಆ ಸಲಹೆಗಳಲ್ಲಿ ಅತಿ ಮುಖ್ಯವಾದುದು ಭಾಷಾಭ್ಯಾಸಕ್ಕೆ ಸಂಬಂಧಿಸಿದುದು ಈ ವಿಷಯದಲ್ಲಿ ವಿಪುಲವಾಗಿ ಚರ್ಚೆ ನಡೆದು ಸಂಸ್ಕೃತವನ್ನು ಎರಡು ಹಂತಗಳಲ್ಲಿ ಅಭ್ಯಾಸಮಾಡುವ ಅವಕಾಶ ಕಲ್ಪಿಸಿಕೊಡುವ ನಿರ್ಧಾರವಾಯಿತು. ಅದರಂತೆ ಸಂಸ್ಕೃತವನ್ನು ಪ್ರಥಮಭಾಷೆಗಳ ಪಟ್ಟಿಯಲ್ಲಿ ಸೇರಿಸಿದುದಲ್ಲದೆ ಸಂಯೋಜಿತ ಭಾಷೆಯಾಗಿ ಆಯ್ಕೆಮಾಡಿಕೊಂಡು ತಮ್ಮ ಮಾತೃಭಾಷೆಯ ಜೊತೆಗೆ ಅಭ್ಯಸಿಸಲೂ ಅವಕಾಶ ಕಲ್ಪಿಸಿದರು. ಈ ನಿರ್ಧಾರದಂತೆ ಕನ್ನಡ, ತೆಲುಗು, ಮರಾಠಿ, ಹಿಂದಿ, ತಮಿಳು ಮಾತೃಭಾಷೆಯಗಿರುವವರೂ ಸಂಸ್ಕೃತವನ್ನು ಪ್ರಥಮಭಾಷೆಯಾಗಿ ಅಭ್ಯಸಿಸುತ್ತಿದ್ದರು. ಹಾಗೆಯೇ ತಮ್ಮ ಮಾತೃಭಾಷೆಯನ್ನು ವಾರಕ್ಕೆ ಮೂರು ಅವಧಿಗಳು ಮತ್ತು ಸಂಸ್ಕೃತವನ್ನು ಎರಡು ಅವಧಿಗಳೂ ಅಭ್ಯಾಸಮಾಡಲು ಅವಕಾಶವಿತ್ತು.

ಮೇಲೆ ವಿವರಿಸಿದ ವ್ಯವಸ್ಥೆ ೧೯೬೩ ಮತ್ತು ೧೯೬೯ರಲ್ಲಿ ಪ್ರೌಢಶಾಲಾ ಪಠ್ಯವಸ್ತುವನ್ನು ಪರಿಷ್ಕರಿಸಿದಾಗಲೂ ಉಳಿದುಕೊಂಡಿತು. ಪ್ರಾಥಮಿಕ ಶಾಲೆಗಳಲ್ಲಿ ಸಂಸ್ಕೃತ ಕಲಿಯಲು ಅವಕಾಶವಿಲ್ಲದೆ ಅದನ್ನು ಪ್ರೌಢಶಾಲೆಯಲ್ಲಿ ಪ್ರಥಮಭಾಷೆಯಾಗಿ ಆರಿಸಿಕೊಂಡ ವಿದ್ಯಾರ್ಥಿಗಳು ಅಕ್ಷಾರಾಭ್ಯಾಸದಿಂದ ಸಂಸ್ಕೃತದ ಅಭ್ಯಾಸವನ್ನು ಪ್ರಾರಂಭಿಸಬೇಕಾಗಿದ್ದುದರಿಂದ ಸಂಸ್ಕೃತದ ಪಠ್ಯವಸ್ತು ಬೇರೆ ಪ್ರಥಮಭಾಷೆಗಳ ಪಠ್ಯವಸ್ತುವಿಗೆ ಹೋಲಿಸಿದಾಗ ಅತಿ ಸುಲಭವಾಗಿತ್ತು. ಬೇರೆ ಭಾಷೆಗಳನ್ನು ಪ್ರಥಮಭಾಷೆಯಾಗಿ ಆರಿಸಿಕೊಂಡ ವಿದ್ಯಾರ್ಥಿಗಳಿಗೆ ಆಯಾ ಭಾಷೆಗಳ ಪಠ್ಯವಸ್ತು ಸಾಕಷ್ಟು ಕಠಿಣವಾಗಿದ್ದು ಅವರು ನಿರೀಕ್ಷಿತ ಗುರಿ ಮುಟ್ಟಬೇಕಾದರೆ ಸಾಕಷ್ಟು ಶ್ರಮಪಡಬೇಕಾಗಿತ್ತು. ಸಂಸ್ಕೃತವನ್ನು ಪ್ರಥಮಭಾಷೆಯಾಗಿ ಆರಿಸಿಕೊಂಡವರು ಅಷ್ಟು ಶ್ರಮಪಡಬೇಕಾಗಿರಲಿಲ್ಲ. ಅಲ್ಲದೆ ಅವರು ಪರೀಕ್ಷೆಗಳಲ್ಲಿ ಸಂಸ್ಕೃತ ಭಾಷೆಯಲ್ಲಿ ಉತ್ತರ ಬರೆಯುವ ಪ್ರಮೇಯವೂ ಇರಲಿಲ್ಲ. ಉತ್ತರಗಳನ್ನು ತಮ್ಮ ಮಾತೃಭಾಷೆ ಇಲ್ಲವೆ ಇಂಗ್ಲಿಷ್‌ನಲ್ಲಿ ಬರೆಯುತ್ತಿದ್ದರು. ಈ ಕಾರಣಗಳಿಂದಾಗಿ ಸಂಸ್ಕೃತ ಆರಿಸಿಕೊಂಡವರು ಪರೀಕ್ಷೆಯಲ್ಲಿ ಇತರ ಭಾಷೆಗಳನ್ನು ಆಯ್ದುಕೊಂಡ ವಿದ್ಯಾರ್ಥಿಗಳಿಗಿಂತ ಹೆಚ್ಚು ಅಂಕಗಳನ್ನು ಗಳಿಸುವುದು ಸಾಧ್ಯ ಎಂಬ ಅಭಿಪ್ರಾಯ ಅಲ್ಲಲ್ಲಿ ಪ್ರಚಲಿತವಾಗಿತ್ತು. ಈ ವಿಷಯ ವಿದ್ಯಾರ್ಥಿಗಳಲ್ಲಿ, ಪೋಷಕರಲ್ಲಿ ಮತ್ತು ಶಿಕ್ಷಣ ತಜ್ಞರಲ್ಲಿ ಕಿರಿಕಿರಿಯನ್ನು ಉಂಟುಮಾಡಿತು. ಸಂಸ್ಕೃತದ ಪಠ್ಯವಸ್ತು ಅತ್ಯಂತ ಸುಲಭವಾಗಿರುವುದರಿಂದಲೂ ಮತ್ತು ಆ ವಿಷಯದಲ್ಲಿ ಹೆಚ್ಚು ಅಂಕಗಳನ್ನು ಪಡೆಯುವ ಅವಕಾಶವಿರುವುದರಿಂದ ಕನ್ನಡ ಮಾತೃಭಾಷೆಯಾಗಿರುವ ವಿದ್ಯಾರ್ಥಿಗಳು ಕನ್ನಡವನ್ನು ಮಾತೃಭಾಷೆಯಾಗಿ ಆಯ್ಕೆ ಮಾಡುವುದನ್ನು ಬಿಟ್ಟು ಅಧಿಕ ಸಂಖ್ಯೆಯಲ್ಲಿ ಸಂಸ್ಕೃತವನ್ನು ಪ್ರಥಮಭಾಷೆಯಾಗಿ ಆಯ್ಕೆ ಮಾಡುವುದರಿಂದ ಕನ್ನಡಕ್ಕೆ ಧಕ್ಕೆ ಬರುವುದೆಂಬ ಭೀತಿಯನ್ನು ವ್ಯಕ್ತಪಡಿಸಿದರು. ಅಲ್ಲದೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಿದವರಲ್ಲಿ ಹೆಚ್ಚು ಜನರು ಸಂಸ್ಕೃತವನ್ನು ಪ್ರಥಮಭಾಷೆಯಾಗಿ ಆಯ್ಕೆಮಾಡಿಕೊಂಡು ಪರೀಕ್ಷೆಗೆ ಕುಳಿತವರೆ ಆಗಿದ್ದರು. ಕನ್ನದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಸ್ಕೃತದ ಕಡೆಗೆ ಆಕರ್ಷಿತರಾಗಲು ಇದೂ ಒಂದು ಕಾರಣವೆಂದು ಭಾವಿಸಿದರು. ಅಲ್ಲಲ್ಲಿ ಇದರ ಬಗ್ಗೆ ಟೀಕೆ ಟಿಪ್ಪಣಿಗಳು ಪ್ರಾರಂಭವಾಗಿ ೧೯೭೬ರಲ್ಲಿ ಶಿವಮೊಗ್ಗದಲ್ಲಿ ನಡೆದ ೪೯ನೆಯ ಸಾಹಿತ್ಯ ಸಮ್ಮೇಳನದಲ್ಲಿ ಈ ವಿಷಯ ಬಹಿರಂಗವಾಗಿ ಸಾಹಿತ್ಯ ಸಮ್ಮೇಳನದ ವೇದಿಕೆಯ ಮೇಲೆ ಚರ್ಚೆಗೆ ಬಂದಿತು.

ಶಿವಮೊಗ್ಗ ಸಾಹಿತ್ಯ ಸಮ್ಮೇಳನದಲ್ಲಿ ಸಂಸ್ಕೃತವನ್ನು ಪ್ರಥಮ ಭಾಷೆಗಳ ಪಟ್ಟಿಯಿಂದ ಕೈಬಿಡಬೇಕೆಂದೂ, ಕನ್ನಡ ಭಾಷೆಯನ್ನು ಕನ್ನಡೇತರರ ಮಕ್ಕಳಿಗೆ ಕಡ್ಡಾಯ ಮಾಡಬೇಕೆಂದೂ ಠರಾವು ಮಂಡಿಸಿ ಆ ಠರಾವು ಅಂಗೀಕೃತವಾಯಿತು. ಆ ಠರಾವನ್ನು ಕನ್ನಡ ಸಾಹಿತ್ಯ ಪರಿಷತ್ತು ಸರ್ಕಾರಕ್ಕೆ ಕಳುಹಿಸಿ ಸಂಸ್ಕೃತವನ್ನು ಪ್ರಥಮಭಾಷೆಗಳ ಪಟ್ಟಿಯಿಂದ ಕೈಬಿಡಬೇಕೆಂದೂ, ಪ್ರಾದೇಶಿಕ ಭಾಷೆಯೂ, ಆಡಳಿತ ಭಾಷೆಯೂ ಆದ ಕನ್ನಡ ಅಭ್ಯಾಸವನ್ನು ಎಲ್ಲರಿಗೂ ಕಡ್ಡಾಯ ಮಾಡಬೇಕೆಂದೂ ಪ್ರಾರ್ಥಿಸಿತು.

ಸಂಸ್ಕೃತದ ಬಗ್ಗೆ ಮಾಡಿದ ಆರೋಪಗಳ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳುವ ಉದ್ದೇಶದಿಂದ ಸರ್ಕಾರ ಈ ವಿಷಯವನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾಮಂಡಳಿಗೆ ಕಳುಹಿಸಿ ವರದಿ ಕೊಡುವಂತೆ ಕೇಳಿತು. ಮಂಡಳಿಯ ವರದಿಯೂ ಈ ಆರೋಪಗಳನ್ನು ಪುಷ್ಟೀಕರಿಸಿತು. ಈ ವರದಿ ಸಂಸ್ಕೃತವನ್ನು ಪ್ರಥಮಭಾಷೆಯಾಗಿ ಮುಂದುವರಿಸಬಾರದೆಂಬ ವಾದಕ್ಕೆ ಮತ್ತಷ್ಟು ಪುಷ್ಟಿ ಕೊಟ್ಟಿತು. ಸಂಸ್ಕೃತದ ಪರ ಮತ್ತು ವಿರೋಧವಾದ ವಾದವಿವಾದಗಳು ಮುಂದುವರಿಯುತ್ತಲೇ ಇದ್ದುವು.

ಆಗಿದ್ದ ಶಿಕ್ಷಣ ವ್ಯವಸ್ಥೆಯಂತೆ ಯಾವ ಹಂತದಲ್ಲಿಯೂ ಭಾಷಾ ಅಲ್ಪಸಂಖ್ಯಾತರ ಮಕ್ಕಳು ಕನ್ನಡ ಕಲಿಯದೆ ಶಾಲಾಶಿಕ್ಷಣ ಮುಗಿಸಬಹುದಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡಿಗರು ಈ ವ್ಯವಸ್ಥೆಯನ್ನು ವಿರೋಧಿಸಿ ಎಲ್ಲರಿಗೂ ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಲು ಪ್ರಾರಂಭಿಸಿದರು. ರಾಜ್ಯ ಸರ್ಕಾರ ರಾಜ್ಯದಲ್ಲಿ ಎಲ್ಲಾ ಹಂತದಲ್ಲೂ ಕನ್ನಡ ಆಡಳಿತಭಾಷೆ ಆಗಬೇಕೆಂದು ಘೋಷಿಸಿದ ಮೇಲೆ ಈ ಒತ್ತಾಯಕ್ಕೆ ಮತ್ತಷ್ಟು ಚಾಲನೆ ದೊರಕಿತು. ಕನ್ನಡಿಗರ ಈ ಒತ್ತಾಯ ಅಸ್ವಾಭಾವಿಕವಲ್ಲವೆಂದು ಹೇಳಬೇಕಾಗಿಲ್ಲ. ಅದು ಸ್ವಯಂವಿದಿತ.

ಮೇಲಿನ ವಾದವಿವಾದಗಳು ಪ್ರಾರಂಭವಾದಾಗಲೇ ಸರ್ಕಾರ ಅದುವರೆಗೂ ಒಂದು ವರ್ಷದ ಅವಧಿಯದಿದ್ದ ಸ್ನಾತಕ ಪೂರ್ವ ಶಿಕ್ಷಣವನ್ನು ಪುನರ್‌ರಚಿಸಿ ಎರಡು ವರ್ಷಗಳ ಅವಧಿಯ ವ್ಯಾಸಂಗ ವ್ಯವಸ್ಥೆಯನ್ನು ೧೯೭೨ರಲ್ಲಿ ಅನುಷ್ಠಾನಕ್ಕೆ ತಂದಿತು. ಈ ಬದಲಾವಣೆಯಿಂದ ಮತ್ತೊಮ್ಮೆ ಪ್ರೌಢಶಾಲಾ ಪಠ್ಯವಸ್ತುವನ್ನು ಪರಿಷ್ಕರಿಸುವುದು ಅಗತ್ಯವಾಯಿತು. ಅದರಂತೆ ಸರ್ಕಾರ ಪಠ್ಯವಸ್ತುರಚನಾಸಮಿತಿಯನ್ನು ರಚಿಸಿತು. ಸಮಿತಿ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯವರು ರಚಿಸಿದ್ದ ಪಠ್ಯವಸ್ತುವನ್ನು ಅಧಾರವಾಗಿಟ್ಟುಕೊಂಡು ಪಠ್ಯವಸ್ತುವಿನ ಪರಿಷ್ಕರಣ ಕಾರ್ಯ ಪ್ರಾರಂಭಿಸಿತು. ಇದರಿಂದ ಪ್ರೌಢಶಾಲೆಗಳಲ್ಲಿ ಅಭ್ಯಸಿಸಬೇಕಾದ ವಿಷಯಗಳ ಪಠ್ಯವಸ್ತುವಿನ ವ್ಯಾಪ್ತಿ ಹೆಚ್ಚಾಯಿತು.

ಹೀಗೆ ಪರಿಷ್ಕರಿಸಿದ ಪಠ್ಯವಸ್ತುವನ್ನು ಅನುಷ್ಠಾನಕ್ಕೆ ತರುವುದಕ್ಕೆ ಮೊದಲು ಅನುಮೋದನೆಗಾಗಿ ರಾಜ್ಯ ಶಿಕ್ಷಣ ಸಲಹಾಮಂಡಳಿಯ ಮುಂದೆ ತರಲಾಯಿತು. ಈ ಮಂಡಳಿ ಶಿಕ್ಷಣತಜ್ಞರಿಂದ ಕೂಡಿದೆ. ಸದಸ್ಯರು ಪ್ರತಿಯೊಂದು ಅಂಶವನ್ನು ಕೂಲಂಕುಷವಾಗಿ ಪರಿಶೀಲಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸಂಸ್ಕೃತದ ಬಗ್ಗೆ ಚರ್ಚೆ ಪ್ರಾರಂಭವಾದಾಗ ಪರ ಮತ್ತು ವಿರೋಧವಾಗಿ ಅಭಿಪ್ರಾಯಗಳು ವ್ಯಕ್ತಪಟ್ಟುವು. ಸಂಸ್ಕೃತವನ್ನು ಪ್ರಥಮಭಾಷೆಗಳ ಪಟ್ಟಿಯಿಂದ ಕೈಬಿಡಬೇಕೆಂಬುದು ಕೆಲವರ ವಾದವಾದರೆ ಅದು ಎಂದೂ ಕನ್ನಡದ ಬೆಳವಣಿಗೆಗೆ ಧಕ್ಕೆಯುಂಟು ಮಾಡುವುದಿಲ್ಲವಾದುದರಿಂದ ಪ್ರಥಮಭಾಷೆಗಳ ಪಟ್ಟಿಯಲ್ಲಿ ಉಳಿಯಬೇಕೆಂದು ಕೆಲವರು ವಾದಿಸಿದರು. ಪ್ರಥಮ ಘಟ್ಟದಲ್ಲಿ ಸಂಶ್ಕೃತವನ್ನು ಪ್ರಥಮಭಾಷೆಗಳ ಪಟ್ಟಿಯಿಂದ ಕೈಬಿಡಬೇಕೆಂದು ನಿರ್ಣಯ ಆಯಿತು. ಆದರೆ ಮರು ಚರ್ಚೆಯಾಗಿ ಆ ನಿರ್ಣಯ ಬದಲಾಗಿ ಸಂಸ್ಕೃತ ಹಿಂದಿನಂತೆಯೇ ಪ್ರಥಮಭಾಷೆಯಾಗಿ ಉಳಿಯಬೇಕೆಂದೂ, ಅದರ ಮಟ್ಟ ಉಳಿದ ಪ್ರಥಮಭಾಷೆಗಳ ಮಟ್ಟಕ್ಕೆ ಸರಿಸಮನಾಗಿರಬೇಕೆಂದೂ ನಿರ್ಣಯ ಆಯಿತು. ಪರಿಷ್ಕೃತ ಪಠ್ಯವಸ್ತು ೧೯೭೮-೧೯೭೯ನೇ ಶೈಕ್ಷಣಿಕ ವರ್ಷದಿಂದ ಅನುಷ್ಠಾನಕ್ಕೆ ಬಂದಿತು.

ಮಂಡಳಿಯ ಸಲಹೆಯಂತೆ ಸಂಸ್ಕೃತದ ಪಠ್ಯವಸ್ತುವನ್ನು ಸಾಕಷ್ಟು ಕಠಿಣಮಾಡಿ ಇತರ ಪ್ರಥಮಭಾಷೆಗಳ ಮಟ್ಟಕ್ಕೆ ಸರಿಸಮನಾಗಿ ಮಾಡಲು ಪ್ರಯತ್ನಿಸಿದರೂ ಆ ಪ್ರಯತ್ನ ಸಫಲವಾಗಲಿಲ್ಲ. ಆದರೆ ಹಿಂದಿನ ಪಠ್ಯವಸ್ತುವಿಗಿಂತ ಪರಿಷ್ಕೃತ ಪಠ್ಯವಸ್ತು ಸ್ವಲ್ಪಮಟ್ಟಿಗೆ ಕಠಿಣವಾಯಿತು.

ಅಲ್ಲದೆ ಅಲ್ಲಿಯವರೆಗೂ ಅಸ್ತಿತ್ವದಲ್ಲಿಲ್ಲದ ಒಂದು ಹೊಸ ವ್ಯವಸ್ಥೆ ಪರಿಷ್ಕೃತ ಪಠ್ಯವಸ್ತುವಿನಲ್ಲಿ ಅಳವಡಿಸಲಾಯಿತು. ೧೯೭೮ ರವರೆಗೆ ತ್ರಿಭಾಷಾ ಸೂತ್ರದಂತೆ ಹಿಂದಿಯನ್ನು ತೃತೀಯ ಭಾಷೆಯಾಗಿ ಅಭ್ಯಸಿಸುತ್ತಿದ್ದರು. ಆದರೆ ಹಿಂದಿ ಭಾಷೆಯ ಅಭ್ಯಾಸ ಕಡ್ಡಾಯವಾಗಿರಲಿಲ್ಲ ಮತ್ತು ವಿದ್ಯಾರ್ಥಿಗಳು ಆ ವಿಷಯದಲ್ಲಿ ಸ್ವಇಚ್ಛೆಯಿಂದ ಪರೀಕ್ಷೆಗೆ ಕೂಡಬಹುದಾಗಿತ್ತು. ಅಂತಹವರಿಗೆ ಕೆಲವು ರಿಯಾಯತಿ ದೊರೆಯುತ್ತಿತ್ತು. ಅವು ಯಾವುವೆಂದರೆ: ಯಾವುದೇ ವಿದ್ಯಾರ್ಥಿ ಸ್ವಇಚ್ಛೆಯಿಂದ ಹಿಂದಿಯಲ್ಲಿ ಪರೀಕ್ಷೆಗೆ ಕುಳಿತು ಆ ವಿಷಯದಲ್ಲಿ ಶೇಕಡ ೨೫ ಅಂಕಗಳನ್ನು ಗಳಿಸಿದರೆ ಅಂತಹ ವಿದ್ಯಾರ್ಥಿ ಉಳಿದ ವಿಷಯಗಳಲ್ಲಿ ಪ್ರತಿ ವಿಷಯದಲ್ಲೂ ಶೇಕಡ ೩೦ ಅಂಕಗಳಿಗಿಂತ ಕಡಮೆಯಿಲ್ಲದಂತೆ ಅಂಕಗಳನ್ನು ಗಳಿಸಿ ಎಲ್ಲಾ ವಿಷಯಗಳ ಅಂಕಗಳೂ ಒಟ್ಟಾಗಿ ಶೇಕಡ ೩೫ ಅಂಕಗಳು ಸರಾಸರಿ ಬಂದಿದ್ದರೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅಹರಾಗುತ್ಫ್ತಿದ್ಫ್ದ್ರು. ಹಿಂದಿಯಲ್ಫ್ಲಿ ಪರೀಕ್ಫೆಯನ್ಫ್ನು ತೆಗೆದುಕೊಳ್ಫ್ಳ್ದ್ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಪ್ರತಿ ವಿಷಯದಲ್ಲೂ ಶೇಕಡ ೩೫ ಅಂಕಗಳನ್ನು ಪಡೆಯಬೇಕಾಗಿತ್ತು. ಹಿಂದೀ ವಿಷಯದಲ್ಲಿ ಪರೀಕ್ಷೆ ತೆಗೆದುಕೊಂಡವರು ಆ ವಿಷಯದಲ್ಲಿ ನಿಗದಿಮಾಡಿದ ಅಂಕಗಳನ್ನು ಗಳಿಸದೆ ಉಳಿದ ವಿಷಯಗಳಲ್ಲಿ ಪ್ರತಿ ವಿಷಯದಲ್ಲೂ ಶೇಕಡ ೩೫ ಅಂಕಗಳನ್ನು ಗಳಿಸಿದ್ದರೆ ಅವರೂ ಉತ್ತೀರ್ಣರಾಗಲು ಅಱರಾಗುತ್ತಿದ್ದರು. ಅಂದರೆ ಹಿಂದಿಯನ್ನು ತೃತೀಯ ಭಾಷೆಯಾಗಿ ಕಡ್ಡಾಯವಾಗಿ ಅಭ್ಯಾಸಮಾಡುವ ಅವಕಾಶವನ್ನು ಪಾಠಕ್ರಮದಲ್ಲಿ ಅಳವಡಿಸಿದ್ದರೂ ವಾಸ್ತವವಾಗಿ ಅದು ಪರೀಕ್ಷೆಗೆ ಕಡ್ಡಾಯದ ವಿಷಯವಾಗಿರಲಿಲ್ಲ. ಮಕ್ಕಳ ಭಾಷೆಯಲ್ಲಿ ಹೇಳುವುದಾದರೆ ಅದರ ಸ್ಥಿತಿ “ಆಟಕ್ಕುಂಟು, ಲೆಕ್ಕಕ್ಕಿಲ್ಲ” ಎಂಬಂತಿತ್ತು.

ಪರಿಷ್ಕೃತ ಪಠ್ಯವಸ್ತು ೧೯೭೮-೧೯೭೯ನೇ ಶೈಕ್ಷಣಿಕ ವರ್ಷದಲ್ಲಿ ಅನುಷ್ಠಾನಕ್ಕೆ ಬಂದಾಗ ಮೇಲಿನ ಸೂತ್ರವನ್ನು ಕನ್ನಡಕ್ಕೂ ಅನ್ವಯಿಸಿ ಕನ್ನಡೇತರ ವಿದ್ಯಾರ್ಥಿಗಳು ಕನ್ನಡವನ್ನು ತೃತೀಯ ಭಾಷೆಯಾಗಿ ಅಭ್ಯಸಿಸಲು ಅವಕಾಶಮಾಡಿಕೊಟ್ಟಿದೆ. ಆದರೆ ಇದರಲ್ಲಿ ಕಡ್ಡಾಯವಿಲ್ಲ. ಸ್ವಇಚ್ಛೆಯಿಂದ ಅಭ್ಯಸಿಸಬಹುದು. ಇದೊಂದು ಕನ್ನಡಿಗರ ಕಣ್ಣೊರೆಸುವ ವ್ಯವಸ್ಥೆ. ಇದು ಈಗ ಅನುಷ್ಠಾನದಲ್ಲಿರುವ ವ್ಯವಸ್ಥೆ ಒಟ್ಟಿನಲ್ಲಿ ಕನ್ನಡೇತರರ ಮಕ್ಕಳಿಗೆ ಯಾವ ಹಂತದಲ್ಲೂ ಕನ್ನಡ ಕಡ್ಡಾಯದ ಅಭ್ಯಾಸದ ವಿಷಯವಾಗಿಲ್ಲ.

ಮೇಲಿನ ವ್ಯವಸ್ಥೆಗೆ ಕನ್ನಡಿಗರು ತೀವ್ರವಿರೋಧ ವ್ಯಕ್ತಪಡಿಸಿದುದಲ್ಲದೆ ಕನ್ನಡೇತರರ ಮಕ್ಕಳಿಗೆ ಕನ್ನಡ ಕಡ್ಡಾಯಮಾಡಬೇಕೆಂದು ಸಾರ್ವಜನಿಕ ವೇದಿಕೆಗಳಲ್ಲಿ, ಪತ್ರಿಕೆಗಳಲ್ಲಿ ಮತ್ತು ಮನವಿಗಳ ಮೂಲಕ ಸರ್ಕಾರವನ್ನು ಒತ್ತಾಯಿಸಲು ಪ್ರಾರಂಭಿಸಿದರು. ಕನ್ನಡ ಆಡಳಿತದ ಎಲ್ಲಾ ಹಂತದಲ್ಲೂ ಆಡಳಿತ ಭಾಷೆಯಾಗಬೇಕೆಂಬ ಸರ್ಕಾರದ ನಿಲುವು ಯಶಸ್ವಿಯಾಗಬೇಕಾದರೆ ವಿವಿಧ ಕ್ಷೇತ್ರಗಳಲ್ಲಿ, ವಿವಿಧ ಹಂತಗಳಲ್ಲಿ ಜವಾಬ್ದಾರಿ ನಿರ್ವಹಿಸುತ್ತಿರುವ ಸರ್ಕಾರಿ ಅಧಿಕಾರಿಗಳು ಶ್ರೀ ಸಾಮಾನ್ಯರ ಭಾಷೆಯಲ್ಲಿ ವ್ಯವಹರಿಸುವ ಶಕ್ತಿ ಪಡೆದಿರಬೇಕು. ಇಲ್ಲದಿದ್ದರೆ ಅವರ ಸಮಸ್ಯೆಗಳನ್ನು ಅರಿತುಕೊಳ್ಳುವುದು ಕಷ್ಟ. ಅಧಿಕಾರಿಗಳ ಮತ್ತು ಶ್ರೀಸಾಮಾನ್ಯರ ಸಂಬಂಧವನ್ನು ಮಧುರಗೊಳಿಸಿ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯಲು ಸಹಕಾರಿಯಾಗುವ ಸಾಧನ ಭಾಶೆ. ಈ ದೃಷ್ಟಿಯಿಂದ ಕನ್ನಡ ಎಲ್ಲರಿಗೂ ಕಡ್ಡಾಯವಾಗಬೇಕೆಂಬ ಕನ್ನಡಿಗರ ಒತ್ತಾಯ ಅಂಧಾಭಿಮನದಿಂದ ಮೂಡಿಬಂದದ್ದಲ್ಲವೆಂದು ಸ್ಪಷ್ಟವಾಗುತ್ತದೆ. ಈ ಒತ್ತಾಯ ದಿನೇದಿನೇ ತೀವ್ರರೂಪ ತಾಳುತ್ತಿದೆ.

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಹನಗಳು
Next post ಕಾಲ

ಸಣ್ಣ ಕತೆ

 • ಎರಡು ಮದುವೆಗಳು

  ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

 • ಒಲವೆ ನಮ್ಮ ಬದುಕು

  "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

 • ಅವಳೇ ಅವಳು

  ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

 • ಲೋಕೋಪಕಾರ!

  ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

 • ಅಹಮ್ ಬ್ರಹ್ಮಾಸ್ಮಿ

  ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys