ಕನ್ನಡದ ಆತಂಕಗಳು ಅಸಂಖ್ಯ. ಇದು ಸಾವಿರ ವರ್ಷಗಳ ಚಾರಿತ್ರಿಕ ಸತ್ಯ. ಅದರಲ್ಲೊಂದು-ಆಂಗ್ಲ ಕಂಪ್ಯೂಟರ್. ಇದು ಈ ಹೊತ್ತಿನ ಆತಂಕ.
ಅಂತರರಾಷ್ಟ್ರೀಯ ವಲಯದಲ್ಲಿ ಕಂಪ್ಯೂಟರ್ ಒಂದು ದೊಡ್ಡ ಉದ್ದಿಮೆಯಾಗಿ ಬೆಳೆಯುತ್ತಿದೆ. ಇದರ ಚಕ್ರಾಧಿಪತ್ಯವನ್ನು ಅಮೆರಿಕಾ ದೇಶವು ಸಾಧಿಸುತ್ತಿದೆ. ಇದರ ವ್ಯಾಪಾರಕ್ಕಾಗಿ ಭಾರತವನ್ನೂ ಒಳಗೊಂಡ ಹಲವು ಹಿಂದುಳಿದ ರಾಷ್ಟ್ರಗಳನ್ನು ತನ್ನ ಆರ್ಥಿಕ ವಸಾಹತುಗಳನ್ನಾಗಿ ಮಾಡಿಕೊಳ್ಳುತ್ತಿದೆ. ಇದು ಮೇಲ್ನೋಟದ ಸತ್ಯ.
ಆದರೆ ಇದು ಆರ್ಥಿಕ ಸ್ವಾಮ್ಯಕ್ಕೆ ಸಂಬಂಧಿಸಿದ ವಿಚಾರ ಮಾತ್ರವಾಗಿರದೆ, ದೇಶದ ಇತರೆ ನೆಲೆಗಳಿಗೂ ಸಹಜವಾಗಿ ಅನ್ವಯವಾಗುವ ಮಾತಾಗುತ್ತದೆ. ಕಾರಣ, ಯಾವುದೇ ಸಂಸ್ಕೃತಿಯಲ್ಲಿ ಆರ್ಥಿಕತೆ ಎಂಬುದು ಸರ್ವ ಸ್ವತಂತ್ರ ಘಟಕವಾಗಿರುವುದಿಲ್ಲ. ಆದ್ದರಿಂದ ಇದರ ಮೇಲಾಗುವ ಪರಿಣಾಮ ದೇಶದ ಇತರೆ ಮುಖಗಳಿಗೂ ಸಹಜವಾಗಿ ವಿಸ್ತರಿಸುತ್ತದೆ. ಈ ಹಿನ್ನೆಲೆಯಲ್ಲಿ ಅಮೇರಿಕಾದ ಆರ್ಥಿಕ ದಾಳಿ ಹಿಂದುಳಿದ ರಾಷ್ಟ್ರಗಳ ಮೇಲೆ ಆಗುವ ಸಾಂಸ್ಕೃತಿಕ ದಾಳಿಯಾಗಿಯೂ ಪರಿಣಮಿಸುತ್ತದೆ. ಈ ನೆಲೆಯಲ್ಲಿ ಅಮೆರಿಕಾದ ಬಗೆಗೆ ತೃತೀಯ ಜಗತ್ತಿನ ರಾಷ್ಟ್ರಗಳಲ್ಲಿ ಸಹಜವಾಗಿಯೇ ಮೇಲರಿಮೆ ಮತ್ತು ತಮ್ಮ ಪರವಾದ ಕೀಳರಿಮೆ ಮೂಡುತ್ತಿದೆ. ಹೀಗಾದಾಗ ದೇಶದ ಸರ್ವತೋಮುಖ ಬೆಳವಣಿಗೆಯ ಗತಿಯಲ್ಲಿ ಗಟ್ಟಿ ಹೆಜ್ಜೆಗಳನ್ನಿಡುವುದು ಸಾಧ್ಯವಾಗುವುದಿಲ್ಲ. ಆಗ ಕೆಲವು ಭೌತಿಕ ಪಲ್ಲಟಗಳ ಪರಿಣಾಮದಲ್ಲಿಯೇ ಹುಸಿ ಪ್ರಶಂಸೆ ಮೂಡುತ್ತದೆ. ಇದು ತಾತ್ಕಾಲಿಕ ನೆಲೆ. ಆದರೆ ದೀರ್ಘಕಾಲದ ಪರಿಣಾಮದಲ್ಲಿ ನಿಟ್ಟುಸಿರೇ ದೇಶದ ಗಾಳಿಯಾಗುತ್ತದೆ. ಈ ಸಂಬಂಧವಾಗಿ ಅನೇಕ ರಾಷ್ಟ್ರಗಳ ಹಿಂಜರಿತವನ್ನೂ ಸಂಸ್ಕೃತಿ ಪರವಾದ ಆತಂಕವನ್ನೂ ಈಗಾಗಲೇ ಅನುಭವಿಸುತ್ತಿವೆ.
ಈ ಹಿನ್ನೆಲೆಯಲ್ಲಿ ಜಾಗತೀಕರಣಕ್ಕೀಡಾಗುತ್ತಿರುವ ಭಾರತವು ಮತ್ತೊಂದು ಬಗೆಯ ಸ್ವಾತಂತ್ರ್ಯ ಹೋರಾಟಕ್ಕೆ ಸೂಕ್ತ ವಾತಾವರಣವನ್ನೂ ನಿರ್ಮಾಣ ಮಾಡಿಕೊಳ್ಳುತ್ತಿದೆ. ೪೭ರ ಪೂರ್ವದಲ್ಲಿ ಒಂದು ಈಸ್ಟ್ ಇಂಡಿಯಾ ಕಂಪೆನಿ ನಮ್ಮನ್ನು ಆಳಿತು. ಈ ವ್ಯಾಪಾರಿ ಸಂಸ್ಥೆ ಸ್ವಯಿಚ್ಫೆಯಿಂದ ಇಲ್ಲಿಗೆ ನುಗ್ಗಿ ಬಂದಿತ್ತು. ಇದರಿಂದ ಪಾಠ ಕಲಿಯದ ಭಾರತವು ಇಂದು ಅಂತಹ ಅನೇಕ ಕಂಪೆನಿಗಳನ್ನು ಕೂಗಿ ಕರೆಯುತ್ತಿದೆ. ಆ ಕೂಗು ಕೇಳದೆ ಇದ್ದಾಗ ಅವುಗಳಿರುವ ಸ್ಥಳಗಳಿಗೇ ಧಾವಿಸಿ, ಕೈ ಹಿಡಿದು ಕರೆದುತರುತ್ತಿದೆ. ಹೀಗೆ ಬರುತ್ತಿರುವ ಕಂಪೆನಿಗಳಿಗೆ ಭಾರತೀಯರು ಮನುಷ್ಯರೂಪಿ ಯಂತ್ರಗಳಾಗಿ, ಇಲ್ಲಿಯ ನಿಸರ್ಗವು ಕಚ್ಚಾ ವಸ್ತುಗಳಾಗಿ, ಇದರ ಸಂಸ್ಕೃತಿಯು ಮಾರುಕಟ್ಟೆಯ ಸರಕಾಗಿ ಮಾತ್ರವೆ ಕಾಣಬರುತ್ತಿದೆ.
ಹೀಗೆ ತಕ್ಕಡಿ ಮೂಲದ ಆರ್ಥಿಕ-ಸಾಂಸ್ಕೃತಿಕ ದಾಳಿಯು ವಿವಿಧ ಬಣ್ಣಗಳ ಭಾರತವನ್ನು ರಕ್ತಹೀನವಾಗಿಸುತ್ತಿದೆ. ಈ ನಿಟ್ಟಿನಲ್ಲಿ ಉಗ್ರ ತಮಿಳತ್ವವನ್ನು ಹೊಂದಿರುವ ತಮಿಳುನಾಡು ಸಹ ತನ್ನ ಭಾಷಿಕ-ಸಂಸ್ಕೃತಿಯ ಪರವಾದ ಹಲವು ಆತಂಕಗಳನ್ನು ಕಾಣಲಾರಂಭಿಸಿದೆ.
ಹೀಗೆ ಜಾಗತೀಕರಣದ ಹೆಸರಿನಲ್ಲಿ ಅಮೆರಿಕಾಕ್ಕೆ ಭಾರತವೂ ಇಂಗ್ಲೀಷಿಗೆ ದೇಶ ಭಾಷೆಗಳೂ ದಾಸರಾಗುತ್ತಲಿವೆ. ಅದರಲ್ಲೊಂದಾದ ಕನ್ನಡ-ಕರ್ನಾಟಕವು ಉಳಿದೆಲ್ಲಾ ಭಾಷಾ-ಸಂಸ್ಕೃತಿಗಳಿಗಿಂತ ಕ್ಷಿಪ್ರವಾಗಿ ‘ಪಶ್ಚಿಮ’ಕ್ಕೆ ಹರಿಯುವ ಸೂರ್ಯನಂತಾಗಿದೆ. ಇದರ ಏಕಾಗ್ರಮುಖಿ ರಸ್ತೆಗಳಲ್ಲೊಂದು ಕಂಪ್ಯೂಟರ್.
ವಾಸ್ತವವಾಗಿ ಕಂಪ್ಯೂಟರ್‌ಗೆ ಸಂಬಂಧಿಸಿದ ತಾಂತ್ರಿಕ ಜ್ಞೆನಕ್ಕಾಗಲೀ ವೈಜ್ಞೆನಿಕ ಫಲಿತಗಳಿಗಾಗಲೀ ಭಾಷಾ ಮೂಲವಾದ ಜಾತಿ ಮತ್ತು ಅದರ ಚೌಕಟ್ಟು ಇಲ್ಲ. ಆದರೆ ಅದರ ಬಗೆಗಿನ ಜ್ಞೆನಕ್ಕೆ ಇಂಗ್ಲೀಷ್ ಭಾಷೆ ಮತ್ತು ಅದರ ಲಿಪಿ ಅನಿವಾರ್ಯ ಎಂಬ ಮೂಢ ನಂಬಿಕೆಯನ್ನು ಇಂದು ಬಿತ್ತಲಾಗುತ್ತಿದೆ. ಇದರ ನಡುವೆ ಕನ್ನಡ ಸಾಫ್ಟ್‌ವೇರ್‌ಗಳು ಬಂದಿದ್ದರೂ ಅವುಗಳು ಹಲವು ಮಿತಿಗಳನ್ನು ಹೊಂದಿದ್ದು, ತಾಂತ್ರಿಕ ಸಮಸ್ಯೆಗಳನ್ನು ಸಹ ವಿಶೇಷವಾಗಿ ಹೊಂದಿವೆ. ಆದ್ದರಿಂದ ಇಂದು ಕಂಪ್ಯೂಟರ್‌ಗಳು ಇಂಗ್ಲಿಷ್ ಮೂಲಕವೇ ಎಲ್ಲರನ್ನೂ ಕೂಡುತ್ತಾ ತಾನು ಇಂಗ್ಲಿಷ್‌ನೊಂದಿಗೆ ಒಂದಾದ ಸಾಂಸ್ಕೃತಿಕ ಧಾಳಿಯಾಗಿ ಕನ್ನಡದ ಮೇಲೆ ಎರಗುತ್ತಿದೆ. ಇದರಿಂದ ಕರ್ನಾಟಕದ ಸಂದರ್ಭದಲ್ಲಿ ಭಾಷಾ ಶ್ರೇಣಿಕರಣವನ್ನೊಳಗೊಂಡ ಹೊಸ ವರ್ಣಾಶ್ರಮ ಧರ್ಮ ಹುಟ್ಟಿಕೊಳ್ಳುತ್ತಿದೆ. ಇಂತಹ ಸಂಸ್ಕೃತಿಶಾಹಿಯ ವಿರುದ್ಧವಾದ ಹೋರಾಟಗಳು ಸ್ಪಷ್ಟಗೊಳ್ಳುತ್ತಿರುವ ಪೂರ್ವದಲ್ಲಿಯೇ ದಮನಕ್ಕೊಳಗಾಗುತ್ತಿರುವುದು ಭಾರತದ ಇತಿಹಾಸವು ನಿಭಿಡೆಯಿಂದ ಹಾಕಿದ ಮುಂದಿನ ಹೆಜ್ಜೆಗಳೆನಿಸುತ್ತದೆ. ಈ ನಿಟ್ಟಿನಲ್ಲಿ ಕಂಪ್ಯೂಟರ್ ಪರವಾದ ಗುಪ್ತಗುಲಾಮಗಿರಿಯು ಕನ್ನಡಿಗರನ್ನು ಭ್ರಮಾತ್ಮಕ ಲೋಕದಲ್ಲಿ ವಿಹರಿಸುವಂತೆ ಮಾಡುತ್ತಿದೆ.
ಇಂದು ದೇಶದ ಜನತೆ ಕಂಪ್ಯೂಟರ್ ಮತ್ತು ಜ್ಞೆನ-ಈ ಎರಡನ್ನು ಅಭಿನ್ನವಾಗಿ ಕಾಣುತ್ತಾ ‘ಕಂಪ್ಯೂಟರ್ ಜ್ಞೆನ’ ಎಂಬ ಹೊಸ ಅರ್ಥ ಲೋಕವೊಂದನ್ನು ಹುಟ್ಟು ಹಾಕಿಕೊಳ್ಳುತ್ತಿದೆ. ಆದರೆ ಕಂಪ್ಯೂಟರ್ ಎಂಬುದೇ ಜ್ಞೆನ ಅಲ್ಲದಿರುವುದರಿಂದ ಈ ಕಲ್ಪನೆ ಹೊಸ ಸಾಂಸ್ಕೃತಿಕ ಮೌಢ್ಯವಾಗಿ ಕಂಡುಬಿಡುತ್ತದೆ. ಹೀಗೆ ಜ್ಞೆನದ ಮೇಲಿನ ಕಂಪ್ಯೂಟರ್‌ನ ಗುತ್ತಿಗೆಯನ್ನು ಬಿಡಿಸಿದಾಗ ಮಾತ್ರ ದೇಶ ಭಾಷಾ ಶಿಕ್ಷಣದ ತೇರು ಕರೆಂಟಿಲ್ಲದ ಹಳ್ಳಿಗಳಿಗೂ ಹೋಗುವುದು ಸಾಧ್ಯವಾಗುತ್ತದೆ.
ದೈವದ ಜನಕ ಮನುಷ್ಯನೆಂಬುದು ಸಾಂಸ್ಕೃತಿಕ ಮಾನವ ಶಾಸ್ತ್ರೀಯವಾದ ಸತ್ಯ. ಇಂತಹ ಕೂಸು ಮನುಷ್ಯನ ಹಣೆಬರಹವನ್ನು ನಿರ್ಧರಿಸಿದ್ದು ಇತಿಹಾಸದ ದುರಂತ. ಇದು ಹೊಸ ಸಹಸ್ರಮಾನಕ್ಕೂ ಮುಂದುವರೆದಿದ್ದು ಪ್ರಗತಿಯ ವ್ಯಂಗ್ಯ. ಈ ಮಾತು ಕಂಪ್ಯೂಟರ್‌ಗೆ ಸಂಬಂಧಿಸಿದಂತೆ ಸಹ ಕಾಣುವುದರಿಂದ ಉದ್ಧರಣೆ ಅನಿವಾರ್ಯವಾಯಿತು. ಈ ಹಿನ್ನೆಲೆಯಲ್ಲಿ ಮನುಷ್ಯ ಸೃಷ್ಟಿಯಾದ ಕಂಪ್ಯೂಟರ್ ಕೂಡ ತನ್ನ ಜನಕರನ್ನಾಳುವುದು ವಿಷಾದವೂ ವಿಚಿತ್ರವೂ ಎನ್ನಿಸುತ್ತದೆ. ಈ ನಿಟ್ಟಿನಲ್ಲಿ ಮತ್ತೊಂದು ದೈವದ ಅವತಾರ ಮತ್ತು ಅದರ ಧರ್ಮವನ್ನು ತಡೆಯಬೇಕಾಗಿದೆ!
ಗಣತಂತ್ರ ಭಾರತದ ಭಾಗವಾಗಿರುವ ಕರ್ನಾಟಕದಲ್ಲಿ ಇಂದಿಗೂ ಅನಕ್ಷರಸ್ಥರೇ ಬಹುಸಂಖ್ಯಾತರಾಗಿದ್ದಾರೆ. ಇವರಿಗೆ ಕನ್ನಡದ ಅಕ್ಷರವೇ ಅಪರಿಚಿತವಾಗಿದೆ. ಹಾಗಾಗಿ ಇಲ್ಲಿ ಅಕ್ಷರ ಸಂಬಂಧಿಯಾದ ವರ್ಣಾಶ್ರಮವೊಂದು ನೆಲೆಯೂರಿದೆ. ಇದರ ತೊಲಗುವಿಕೆಯೆ ದುಸ್ತರವಾಗಿರುವ ದಿನಗಳಲ್ಲಿ ಇಂಗ್ಲೀಷ್ ಸಂಬಂಧಿಯಾದ ಕಂಪ್ಯೂಟರನ್ನು ಆಮದಾಗಿಸಿಕೊಳ್ಳುತ್ತಿರುವುದು ಭಾಷಾ ಸಂಬಂಧಿಯಾದ ಮತ್ತೊಂದು ವರ್ಣಾಶ್ರಮಕ್ಕೆ ದಾರಿಮಾಡಿ ಕೊಟ್ಟಂತಾಗುತ್ತಿದೆ.
ಹೀಗೆ ಹಲವು ವರ್ಣಾಶ್ರಮಗಳನ್ನು ಕಂಡಿರುವ ಭಾರತದ ಭಾಗವಾದ ಕರ್ನಾಟಕವು, ತನ್ನ ಈ ವಿನ್ಯಾಸದ ಇತಿಹಾಸದಿಂದ ಇಂದಾದರೂ ಪಾಠ ಕಲಿಯದಿದ್ದರೆ, ಐವತ್ತು ವರ್ಷಗಳನ್ನು ಕಷ್ಟದಿಂದಲೇ ಕಳೆದಿರುವ ಸಂವಿಧಾನದ ಆಶಯಗಳು ನಮ್ಮನ್ನೆಂದೂ ಕ್ಷಮಿಸುವುದಿಲ್ಲ; ತಾವೂ ಬದುಕುಳಿಯುವುದಿಲ್ಲ.
ಹೀಗೆ ಜಾಗತೀಕರಣದ ಒಂದು ಮುಖವಾದ ಆಂಗ್ಲರೂಪಿ ಕಂಪ್ಯೂಟರ್ ಮತ್ತು ಕಂಪ್ಯೂಟರೀಕರಣವು ಕರ್ನಾಟಕವನ್ನು ಹಳ್ಳಿಯನ್ನಾಗಿಸುತ್ತದೆ. ಈ ಹಳ್ಳಿಯಲ್ಲಿ ಜಗತ್ತನ್ನು ತಂದು ನಿಲ್ಲಿಸುತ್ತದೆ. ಆಗ ಕರ್ನಾಟಕದಲ್ಲಿ ಕನ್ನಡದ ಉತ್ಖನನ ಕಾರ್ಯ ಆಗಬೇಕಾಗುತ್ತದೆ.
ಒಟ್ಟಾರೆ ನನ್ನ ಲೇಖನದ ಆಶಯ ಕಂಪ್ಯೂಟರ್‌ನ ವಿರೋಧವಲ್ಲ. ಇದರ ವೈಜ್ಞೆನಿಕ ಫಲಿತಗಳನ್ನು ನಿರಾಕರಿಸುವುದಲ್ಲ. ಇದರ ತಂತ್ರಜ್ಞೆನದ ಬಳಕೆಯು ನಮ್ಮ ಸಂಸ್ಕೃತಿಯ ವಿಕಾಸದಲ್ಲಿ ಮಹತ್ತರವಾದ ಪರಿಣಾಮವನ್ನು ಉಂಟುಮಾಡಬೇಕು ಎಂಬುದು ನನ್ನ ಆಶಯದ ಭಾಗವಾಗಿರುವುದರಿಂದ ಪ್ರಸ್ತುತ ಚರ್ಚೆ ಈ ಹಿನ್ನೆಲೆ-ಮುನ್ನೆಲೆಗಳನ್ನು ಪಡೆದುಕೊಳ್ಳುತ್ತಿದೆ.
ಇಂದು ಕಂಪ್ಯೂಟರ್ ಎಂಬುದು ಆಂಗ್ಲಮಯವಾಗಿ ತನ್ನ ವಿರಾಟ ರೂಪವನ್ನು ಪ್ರದರ್ಶಿಸುತ್ತಿದೆ. ಇಂತಹ ಇಂಗ್ಲೀಷ್‌ಶಾಹಿ ಧೋರಣೆಯು ಭಾಷಾತೀತವಾದ ಕಂಪ್ಯೂಟರ್ ಎಂಬ ಸಾಧನವನ್ನು ದೇಶ ಭಾಷೆಗಳಿಂದ ದೂರವಿಡುವ ಪ್ರಯತ್ನವನ್ನು ಮಾಡುತ್ತಿದೆ. ಹೀಗಾಗಿ ಕಂಪ್ಯೂಟರ್ ಮತ್ತು ದೇಶೀ ಸಂಸ್ಕೃತಿಗಳ ನಡುವೆ ದೊಡ್ಡ ಕಂದಕ ಉಂಟಾಗುತ್ತಿದೆ. ಪರಿಣಾಮವಾಗಿ ಇಂಗ್ಲೀಷ್ ಕಂಪ್ಯೂಟರ್ ಮತ್ತು ಜ್ಞೆನ; ಇವುಗಳು ಪರಸ್ಪರ ನಿಯತವಾಗಿ ಕಾಣಿಸಿಕೊಂಡು ದೇಶ ಭಾಷಾ ಸಂಸ್ಕೃತಿಗಳಲ್ಲಿ ಗಮನಾರ್ಹ ಪಲ್ಲಟಗಳೂ ಆತಂಕಗಳೂ ತಲೆದೋರುತ್ತಿವೆ. ಇದು ಅನಕ್ಷರತೆ ತೀವ್ರವಾಗಿರುವ ದೇಶಗಳಲ್ಲಿ ಸಹಜವಾದ ಕ್ರಿಯೆಗಳೇ ಆಗಿರುತ್ತವೆ. ಆದ್ದರಿಂದ ಕಂಪ್ಯೂಟರ್‌ಗಳು ಕರ್ನಾಟಕಕ್ಕೆ ಬರುವಾಗ ಭಾರತವನ್ನೂ ವ್ಯಾಪಿಸಲಿ. ಆದರೆ ಅದಕ್ಕೂ ಮುನ್ನ ಅಕ್ಷರ ಎಲ್ಲರಿಗೂ ದಕ್ಕಲಿ. ಆಗ ಮಾತ್ರ ಕಂಪ್ಯೂಟರ್ ಬಗೆಗೆ ಜನಸಾಮಾನ್ಯರಲ್ಲಿ ಭಯ ಮೂಲವಾದ ಭಕ್ತಿ ಅಥವಾ ಭಕ್ತಿ ಮೂಲವಾದ ಭಯ ಹುಟ್ಟದೆ, ನಿಜವಾದ ಆದರ ಹುಟ್ಟುತ್ತದೆ.
ಆದ್ದರಿಂದ ಕಂಪ್ಯೂಟರ್‌ಗಳು ಆಂಗ್ಲಮಯ ಸೆರೆಯಿಂದ ಹೊರ ಬಂದು ಇಂಗ್ಲೆಂಡಿನಲ್ಲಿ ಇಂಗ್ಲಿಷ್ ಆಗಿ, ಮಹಾರಾಷ್ಟ್ರದಲ್ಲಿ ಮರಾಠಿ ಆಗಿ, ತೆಲುಗುನಾಡಿನಲ್ಲಿ ತೆಲುಗು ಆಗಿ ಪರಿವರ್ತನೆಗೊಳ್ಳಲಿ. ಇಂತಹ ಪ್ರಜಾಸತ್ತಾತ್ಮಕವಾದ ತಳಹದಿಯನ್ನು ಪಡೆದಾಗ ಕಂಪ್ಯೂಟರ್ ಸಹಜವಾಗಿಯೆ ಕನ್ನಡೀಕರಣಗೊಳ್ಳುತ್ತದೆ. ಆಗ ಕನ್ನಡದಲ್ಲೊಂದಾದ ಕಂಪ್ಯೂಟರ್ ಕರ್ನಾಟಕದ ವಿಕಾಸದಲ್ಲಿ ಪೂರಕವಾಗಿ ನಿಲ್ಲುತ್ತದೆ.
*****