ದೇವರ ನಾಡಿನಲಿ

ದೇವರ ನಾಡಿನಲಿ

೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ…. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ… ಹರ್ಷದಿ, ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ, ವರದಿ ಮಾಡಿಕೊಂಡೆ.

ಹುಬ್ಬಳ್ಳಿ ಜೈಲಿನಲ್ಲಿ ಮೂರು ವರ್‍ಷವಿದ್ದು ಬಿಡುಗಡೆ ಹೊಂದಿದ್ದ ಜೈಲು ಪಕ್ಷಿಯಂತೆ ಸಂತಸದಲ್ಲಿದ್ದೆ! ಆಹಾ… ಪುಟಿ ಪುಟಿವ ಚೆಂಡಿನಂತೇ… ಹುರುಪು, ಉತ್ಸಾಹ, ಉಲ್ಲಾಸದಲ್ಲಿದ್ದೆ. ಕನಿಷ್ಠ ಎರಡು ವರ್‍ಷ ಇಲ್ಲಿರಲು ಸಾಧ್ಯವಾದರೆ ಇಲ್ಲೇ ಬಡ್ತಿ ಹೊಂದಿ ಮುಂದುವರೆಯಲು ಏನೆಲ್ಲ… ಆಶಿಸಿದೆ. ಅದು ಸಹಜವಾದುದ್ದು… ಬಯಕೆ ಬದುಕಿನ ಮಧ್ಯೆ ಸಾಮರಸ್ಯವಿತ್ತು. ಹೀಗಾಗಿ ಕನಸು ಕಂಡೆ. ಕನಸು ಕಾಣುವುದಕ್ಕೂ ಯೋಗ್ಯತೆ, ಅರ್‍ಹತೆಬೇಕಿಲ್ಲ. ಇಲ್ಲವಾದರೆ ತಿರುಕನ ಕನಸ್ಸಾಗುವುದು.

ನಾ… ವರದಿ ಮಾಡಿಕೊಂಡ ದಿನವೇ ವಿಭಾಗೀಯ ನಿಯಂತ್ರಣಾಧಿಕಾರಿಗಳು ಒಂದು ನೆಲಬಾಂಬೊಂದು ಮೆಲ್ಲಗೆ ನಗು ನಗುತ್ತಾ… ‘ನೀವಿನ್ನು ಇಲ್ಲಿಗೆ ಬಂದು ವರದಿ ಮಾಡಿಕೊಂಡಿಲ್ಲ! ಆಗ್ಲೆ ಬೆಂಗಳೂರಿನ ಕೇಂದ್ರ ಕಛೇರಿಯ ಉನ್ನತಾಧಿಕಾರಿಗಳು ಯಲ್ಲಪ್ಪ ಎಲ್ಲದರಲ್ಲಿ ಓಕೇ… ಪುಸ್ತಕ, ಚಿತ್ರಲೇಖನ, ಕತೆ, ಕಾದಂಬರಿ, ಕವಿತೆ… ಬರೆಯುವುದು ಯಾಕೆ? ಒಂದ್ ಕಣ್ ಇಡಿ’ ಎಂದು ನಿಮ್ಮ ಬಗ್ಗೆ ಆಕ್ಷೇಪಣೆ ಎತ್ತಿದ್ದಾರೆಂದು ನನ್ನ ಅಲ್ಲೇ ಚುಚ್ಚಿದರು. ಮಾತಿನಲ್ಲೇ ಕೊಲ್ಲುವ ವೀರರೂ ಶೂರರೂ ನಮ್ಮಲ್ಲಿ ಬಹಳಿಲ್ಲಿ. ಯಿಡೀ ವಿಭಾಗದ ಗುತ್ತಿಗೆದಾರರಂಗೆ ವಾರಸುದಾರರಂಗೆ ಇದ್ದರು!

ನಾನೀಗಾಗ್ಲೆ ಬಡ್ತಿ ಹೊಂದಿ ೨-೩ ವರ್‍ಷ ಹರ್‍ಷದಿ ಕಾಲ ಕಳೆಯಬೇಕಾಗಿತ್ತು! ಆದರೆ ನನ್ನ ತಿಥಿ ಕಾಣಿಸಲು ಸಂಚು, ಹೊಂಚು ಹಾಕಿರುವುದು ನನಗೆ ಖೇದ ತಂತು! ಇಲ್ಲಿಗೆ ಅರಬ್ಬಿ ಸಮುದ್ರಕ್ಕೆ ಬಂದು ಬಿದ್ದರೂ ಮೊಣಕಾಲುದ್ದ ನೀರು ಎಂದು ಲೋಚಗುಟ್ಟಿದೆ. ಆದರೂ ನನ್ ಧೈರ್‍ಯ ನನಗೆ. ಅದೇ ಈಗ ಇಲ್ಲಿವರೆಗೆ ತೇಲಿಸಿರುವುದು!

ಹೌದು… ನಾ ಹೊಗಳಿಕೆಗೆ ಉಬ್ಬಲ್ಲ! ತೆಗಳಿಕೆಗೆ ಕುಗ್ಗಲ್ಲ. ನನ್ನ ಕೆಲಸ ನಾ ಬಿಡಲ್ಲ…. ದಟ್ಸ್ ಯಲ್ಲಪ್ಪ ಕೆಕೆ ಪುರ! ಹೀಗೆ… ಎಂದೂ ತಲೆ ಕೆಡಿಸಿಕೊಳ್ಳಲಿಲ್ಲ. ಗಾಡ್‌ಫಾದರ್ ಯಿಲ್ಲವೆಂದು ಎಂದೂ ಕೊರಗಲಿಲ್ಲ….

ಅಂದು-ಮಂಗಳೂರಿನಲ್ಲಿರುವ ಮಂಗಳದೇವಿ ದೇವಸ್ಥಾನಕ್ಕೆ ಭೇಟಿ ನೀಡಿದೆ ಅಲ್ಲಿ ನನ್ನಮ್ಮ ದುರುಗಮ್ಮನ ಕಂಡೆ… ಭಯ ಭಕ್ತಿಲಿ ಪೂಜೆ ಸಲ್ಲಿಸಿದೆ.

ನಂತರ ಹಂತ ಹಂತವಾಗಿ ಬಿಡುವು ಮಾಡಿಕೊಂಡು… ಕದ್ರಿ… ಮಂಜುನಾಥ ಟೆಂಪಲ್, ಕುದ್ರೋಳಿ ಗೋಕರ್‍ಣನಾಥ ಟೆಂಪಲ್, ಸಂತ ಅಲೋಶಿಯಸ್ ಚರ್ಚ್, ಕಟೀಲು ಶ್ರೀ ದುರ್‍ಗಪರಮೇಶ್ವರಿ ಟೆಂಪಲ್, ಪಣಂಬೂರು ಬೀಚ್, ತಣ್ಣೀರು ಬಾವಿ ಬೀಚ್, ಮಿಲಗ್ರಸ್ ಚರ್ಚ್, ಶರವೋ ಮಹಾಗಣಪತಿ ಟೆಂಪಲ್, ಸಂತ ಮೇರಿಯಾಸ್, ಪಿಲಿಕುಳ ನಿಸರ್ಗಧಾಮ, ಸೂರತ್ಕಲ್, ಮಲ್ಪೆ ಸುಂದರ ಬಂದರು… ಮಂಗಳೂರು ಬೀಚ್, ಮರವಂತೆ ಬೀಚ್, ರೋಚೋರಾಯ ಚರ್ಚ್, ಪೊಳಲಿ ರಾಜರಾಜೇಶ್ವರಿ ಟೆಂಪಲ್, ಮಾನಸ ಅಮ್ಹಜ್‌ಮೆಂಟ್ ವಾಟರ್ ಪಾರ್ಕ್, ಕುಡುಪು ಅನಂತ ಪದ್ಮನಾಭ ಟೆಂಪಲ್, ಮಹಾತ್ಮಗಾಂಧಿ ಮ್ಯೂಸಿಯಂ, ಬಿಜೈ ಮ್ಯೂಸಿಯಂ, ನ್ಯೂ ಮಂಗಳೂರು ಫೋರ್ಟ್, ಇತ್ಯಾದಿ ಇತ್ಯಾದಿ… ಸ್ಥಳಗಳನ್ನು ಪ್ರತಿ ರವಿವಾರ, ಸಾರ್ವತ್ರಿಕ ರಜೆ, ಹಬ್ಬಗಳ ದಿನಗಳಂದು ಹೆಂಡತಿ ಮಕ್ಕಳೊಟ್ಟಿಗೆ ಭೇಟಿ ನೀಡಿ ಅಮಿತಾನಂದವನ್ನು ಹೊಂದಿದೆ.

ಪ್ರಾಮಾಣಿಕರಿಗೆ ಸೂಕ್ಷ್ಮ ಮನಸ್ಸಿಗರಿಗೆ ಇವೇ ಆಸ್ತಿ ಪಾಸ್ತಿ. ಇವುಗಳಲ್ಲಿ ಅಪ್ಪ ಅಮ್ಮರ ಕಾಣುವುದು ಇವೆಲ್ಲವುಗಳನ್ನು ನೋಡಲು ಎರಡು ಕಣ್ಣು ಸಾಲವಲ್ಲೋ ಎಂದು ಅದೆಷ್ಟೋ ಸಲ ಅಂದುಕೊಂಡಿದ್ದುಂಟು. ಇಲ್ಲಿ ದೇವರಿದ್ದಾನೆ. ಅದಕ್ಕೆ ನಾನು ದೇವರನಾಡೆಂದು ಕರೆಯುವುದು. ಜಲ ನೆಲ ಜನ ಮಾತು, ಕ್ರ್‍ತಿ ಎಲ್ಲ ದೇವರ ರೂಪ. ಇಲ್ಲಿ ನೋಡುವುದು, ಕಲಿಯುವುದು ಬಹಳಿದೆ ಅನಿಸಿತು. ಇಲ್ಲೆಲ್ಲ ದೇವರಿರುವುದರಿಂದ ಇವರಿಗೆಲ್ಲ ಕೊಟ್ಟು ಇವರ ಮೂಲಕ ಧಾನ, ಧರ್‍ಮ, ಪೂಜೆ, ಪ್ರಸಾದದ ಆಟ ಆಡುತ್ತಿದ್ದಾನೆ ಅನಿಸಿತು.

ಅಬ್ಬಾ! ಹುಟ್ಟಿದರೆ ಮಂಗಳೂರಿನಲ್ಲಿ ಹುಟ್ಟಬೇಕೆನಿಸಿತು. ಎಷ್ಟೊಂದು ಸುಂದರವಾದ ನಾಡು! ಯಿಲ್ಲಿ ಹೆಜ್ಜೆ ಹೆಜ್ಜೆಗೂ ಕಣ್ಣು ಹಾಯಿಸಿದಷ್ಟು ಪ್ರಕೃತಿ ಸಂಪತ್ತು! ಗೆಜ್ಜೆ ಕಟ್ಟಿಕೊಂಡು ಲಜ್ಜೆಯಲ್ಲಿ ಹೆಜ್ಜೆ ಹಾಕುವ ಹಚ್ಚ ಹಸಿರಿನ ಸಿರಿ. ನೆಲ, ಜಲ, ಜನ ನಯ ನಾಜೂಕಿನವರು, ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಮಾತು-ಕತೆ-ಜನ ನೋಡಲು ತುಂಬಾ ವಿಶಿಷ್ಟ ಬಲು ಬುದ್ಧಿವಂತರೆನಿಸಿದರು. ಯಿಲ್ಲಿ ಏನೆಲ್ಲ ಇದೆ ಅನಿಸಿತು. ಸೃಷ್ಟಿಯ ವೈಚಿತ್ರವಿಲ್ಲಿ ನಿತ್ಯ ಹೊಸ ರೂಪು, ಹೊಸತಾನ… ನವಗಾನ, ಸರ್ವ‌ಋತು ವಸಂತ ಮೇಳವೆನಿಸಿತು. ದೇವರನಾಡು ಎನಿಸಿತು! ಆಹಾ!… ಅರಬ್ಬಿ ಸಮುದ್ರದ ಕೆನ್ನೀರಿನ ಮೈಸಿರಿ… ಭಟ್ಕಳ, ಹೊನ್ನಾವರ, ಉಡುಪಿ, ಕುಂದಾಪುರ, ಮಲ್ಪೆ, ಮರವಂತೆ, ಮಂಗಳೂರು… ಹೀಗೆ ಕಡಲ ಸುಂದರಿಯರ ತೋಳತೆಕ್ಕೆಯಲಿ ಕಂಗೊಳಿಸುವ ಸ್ಥಳ ನಾಮಗಳು ಸೌಂದರ್ಯದ ಖಣಿಗಳಂತೆ ನನಗೆ ಕಂಡುಬಂದವು! ಇಲ್ಲೆಲ್ಲ ದೇವರ ಕಂಡೆ…

ಹೆಜ್ಜೆ ಹೆಜ್ಜೆಗೂ ಮಾವು, ತೆಂಗು, ಕೊಂಗು, ಬಾಳೆ, ಅಡಿಕೆ, ಮೆಣಸು, ಏಲಕ್ಕಿ, ಹಲಸು, ಗೋಡಂಬಿ, ಕಿತ್ತಲೆ, ಚಕ್ಕೋತ, ಪಪ್ಪಾಯಿ, ಸೊಪ್ಪು, ತರಕಾರಿ, ಗೆಡ್ಡೆ, ಗೆಣಸು, ಹಚ್ಚ ಹರಿಸಿನ ಹೊಲ ಗದ್ದೆಗಳ ವಿಹಂಗಮ ನೋಟ ಅಬ್ಬಾ! ಹಣ್ಣು ಹಂಪಲುಗಳ ಬಗೆ ಬಗೆಯ ಮೀನು-ಏಡಿ-ಕಾಡು ಕೋಳಿಗಳು.. ಸಮೃದ್ಧಿ ನನ್ನ ಮನಸೆಳೆದವು.

ಇಲ್ಲಿ ಹುಟ್ಟಬೇಕೆಂದರೆ ಪುಣ್ಯ ಮಾಡಿರಬೇಕು… ಏಳೇಳು ಜನ್ಮ ಕಾಯಬೇಕು. ಹೌದು… ಬಳ್ಳಾರಿಯ ಬಿಸಿಲ ನಾಡಿನ ಕಡೆಯಿಂದ ಬಂದವನು ನಾ! ಸೀಮೆಜಾಲಿ, ಮರಳು ತಗ್ಗು ದಿನ್ನೆ ಕಲ್ಲು ಕುಟರೆ, ಕಳ್ಳಿ ಜಾಲಿಗಿಡ ಬಯಲು ಸೀಮೆಯ ಬೆಂಗಾಡು ಸುಡುಗಾಡಿನಿಂದ ಹಿಡಿದು ಬೀದರ್, ಗುಲ್ಬರ್‍ಗ, ರಾಯಚೂರು, ಯಾದಗಿರಿ, ಕೊಪ್ಪಳ, ಈ ಭಾಗದಲ್ಲಿ ಎರಡು ವರ್ಷ ಐದು ವರ್ಷ ಡ್ಯೂಟಿ ಮಾಡಿ ಬಂದಿದ್ದವನಿಗೆ ನಂದನವನ, ಭೂಕೈಲಾಸ, ದೈವಗಳ ನಾಡಾಗಿ, ಸುಂದರ ಬೀಡಾಗಿ, ದೇವೇಂದ್ರನ ವನವಾಗಿ ನಿತ್ಯ ಸುಮಂಗಲಿಯಾಗಿ ಕಂಗೊಳಿಸಿತು. ಬಲು ಆಕರ್‍ಷಿತನಾದೆ.

ದೇವರ ಸೃಷ್ಟಿಯ ಮುಂದೆ ಮನುಜರ ಕೆಟ್ಟ ದುರಾಲೋಚನೆಯು ಕೃತಕವೆನಿಸತೊಡಗಿತು. ನನ್ನ ಮೂರು ಜನ ಮಕ್ಕಳ ಡೊನೇಷನ್, ಫೀ, ಸ್ಕೂಲ್ ಸಮವಸ್ತ್ರ, ಪುಸ್ತಕ, ಪೆನ್ನು, ಹಾಳೆ, ಬೂಟ್ಟು, ಶ್ಯಾಕ್ಸ್, ಟೈ… ಕರವಸ್ತ್ರ, ಕ್ಯಾರಿಯರ್, ಇತ್ಯಾದಿಗೆಂದು ಖರ್ಚಿಟ್ಟಿದ್ದ ನೋವು ನಲಿವು ಇಲ್ಲಿ ಕ್ಷಣ ಮೈ ಮರೆಯಲು ನನಗೆ ಅನುವಾಗಿತ್ತು! ಎಲ್ಲಿ ನೋಡಿದರೂ ಎತ್ತೆತ್ತ ಕೆತ್ತೆತ್ತಿ ನೋಡಿದರಲ್ಲಿ ಸೊಗಸು ಇತ್ತು, ವನಸಿರಿಯಿತ್ತು. ಇಲ್ಲಿನ ಜನರೇ ಹಾಗೇ ಕೈಲಾಸದ ಮುಕ್ಕೋಟಿ ದೇವಾನುದೇವತೆಗಳಾ ಹಾಗೇ….

ಮೇಲಿಂದ ಮೇಲೆ ವರ್‍ಗಾವಣೆಯ ದಾಳಿಗೆ ತುತ್ತಾಗಿ ಮಕ್ಕಳ ಸ್ಕೂಲಿಗೆ ತೊತ್ತಾಗಿ ಪ್ರಾಮಾಣಿಕತೆಗೆ ಮೆತ್ತಗಾಗಿ ನೀತಿ ನಿಯತ್ತಾಗಿ ಹಗಲು ಇರುಳು ದುಡಿಮೆಗೆ ಹೆಗಲು ಕೊಟ್ಟೆ. ಇದಿಲ್ಲಿ ಅನಿವಾರ್‍ಯವಾಗಿತ್ತು. ಇಲ್ಲಿನ ಸ್ಫೂರ್ತಿ ಅಂಥಾದ್ದು… ದುಡಿಮೆಯೇ ದೇವರೆನ್ನುವವರು.

ಮಂಗಳೂರೊಂದು ಪುಣ್ಯಭೂಮಿ, ಸಿರಿನಾಡು ‘ಕರುನಾಡು’ ವರನಾಡು ನಮ್ಮ ಕಾರ್‍ಯ ವ್ಯಾಪ್ತಿಗೆ ಕುಂದಾಪುರ ಡಿಪೋ… ಇಲ್ಲಿಗೆ ವಾರದಲ್ಲಿ ಮೂರು ಸಲ ಹೋಗಲೇಬೇಕಾಗಿತ್ತು. ಹೋಗುವಾಗ ಉಡುಪಿ ಬಸ್ ನಿಲ್ದಾಣದ ಮೂಲಕ ಹೋಗಲೇ ಬೇಕಾಗಿತ್ತು!

ಅಲ್ಲಿ ಶ್ರೀ ಕೃಷ್ಣಪರಮಾತ್ಮನ ದಿವ್ಯ ಸನ್ನಿಧಿ ಕಂಡು, ದರ್ಶನ ಪಡೆದು, ಪ್ರಸಾದ ಸ್ವೀಕರಿಸಿ, ಪೂಜಾರಿಗಳ ಮಾತನಾಡಿಸಿಕೊಂಡು ಆಯಪ್ಪನ ರೂಪ ಲಾವಣ್ಯ ದರ್ಶನ ಭಾಗ್ಯ ಕಣ್ಣಲ್ಲಿ ತುಂಬಿಕೊಂಡು ಹೋಗುವ ಅವಕಾಶವನ್ನು ನಮ್ಮ ಸಿಬ್ಬಂದಿ ವ್ಯವಸ್ಥೆ ಮಾಡುತ್ತಿದ್ದರು! ಇದಕ್ಕಿಂತಾ ಭಾಗ್ಯನಿಧಿ ಜೀವನದಲ್ಲಿ ಇನ್ನೇನಿದೆ? ಶ್ರೀಕೃಷ್ಣ ಪರಮಾತ್ಮ ಜೈಲಲ್ಲಿ ಯಾದವಕುಲದಲ್ಲಿ ಹುಟ್ಟಿ ಯೀಗ ಪೂಜೆಗೊಳ್ಳುವುದ ಕಂಡು ಸೋಜಿಗಗೊಂಡೆ ಕನಕನಿಗೊಲಿದಿದ್ದಾನೆ! ಅದೃಷ್ಟವಂತನಿದ್ದಾನೆ. ಅನಿಸುತಿತ್ತು… ಹಾಗೇ ಇನ್ನು ಮುಂದೆ ಮಲ್ಪೆ ಬಂದರು! ಅಲ್ಲಿನ ಜನ ಜೀವನ ಕಡಲ ತೀರದ ಸುಂದರ ಅಲೆಗಳ ಲೀಲೆ ನಾನಾ ವಿಧದ ಮೀನು, ಏಡಿಗಳ ಕಂಡು ನನ್ನೆಲ್ಲ ನೋವು ನಲಿವು ಅಲ್ಲಿ ಮರೆತು, ಮುಂದೆ ಮರವಂತೆಯ ಸೂರ್‍ಯಾಸ್ತಮಾನ ಅಲ್ಲಿನ ರಮಣಿಯತೆ ಪ್ರಶಾಂತತೆ ತಣ್ಣನೇ… ಆಹ್ಲಾದಕರ ವಾತಾವರಣ ನನಗೆ ಅಚ್ಚು ಮೆಚ್ಚಾಗುತ್ತಿತ್ತು. ಒಂದು ಕಡೆ ಕರ್‍ತವ್ಯದಕರೆ ಇನ್ನೊಂದೆಡೆ ಉಲ್ಲಾಸದಸೆಲೆ ಸ್ವಾಮಿ ಕಾರ್‍ಯ ಸ್ವಕಾರ್‍ಯದ ಮಧ್ಯೆ ಸ್ವರ್‍ಗ ಮೂರೇ ಗೇಣು ಎಂಬಂತೆ ಜೀವನ ನೌಕೆ ಸಾಗ ತೊಡಗಿತು. ಸುಖ ಬಂದಾಗ ಯಾರನು ಹೊಗಳದೆ, ಕಷ್ಟ ಬಂದಾಗ ದೈವವನ್ನು ಹಳಿಯದೆ, ನಗುವಿನಲ್ಲಿ ದೇವರ ಕಂಡೆ.

ಹೀಗೆ ಸಾಗುವಾಗಲೆಲ್ಲ ನನ್ನೊಳಗಿನ ಬರಹಗಾರ ನನ್ನ ಅಣುಕಿಸುತ್ತಲೇ ಇದ್ದ! ಓದಿದಾ ಓದೆಲ್ಲ ಬೂದಿಯಾಗಿ ನನ್ನ ಆಗಾಗ ಅಣಕಿಸುತ್ತಲೇ ಇದ್ದ. ಬರೆಯಲು ಪ್ರೇರೇಪಿಸುತ್ತಿದ್ದ. ಅಧಿಕ ಕೆಲಸ ಕಾರ್‍ಯಗಳ ಒತ್ತಡದ ಮಧ್ಯೆ ಬರೆಯಲಾಗುತಿರಲಿಲ್ಲ….

ಅಲ್ಲಿಂದ ಕುಂದಾಪುರ ಡಿಪೋ ಹೊಕ್ಕರೆ ಅಲ್ಲಿ ಮೂರು ತಾಸು ಮೇಲೇಳದ ಕೆಲಸ ಕಾರ್‍ಯ, ಚರ್‍ಚೆ, ಕಾರ್‍ಮಿಕರ ಕುರಿತು ತಿಳುವಳಿಕೆಯ ಭಾಷಣ, ವಿಚಾರ ವಿನಿಮಯ, ಸಭೆ, ಸಮಾರಂಭ, ಹೀಗೆ… ಪರಿವೀಕ್ಷಣೆಯಲ್ಲಿ ಮಗ್ನನಾಗುತ್ತಿದ್ದೆ!

ಅಲ್ಲಿ – ಅರಾಧ್ಯ ಡಿಪೋ ಮ್ಯಾನೇಜರ್, ಬೆಂಗಳೂರಿನವರು! ಹೆಸರಿಗೆ ತಕ್ಕಂತೆ ಆರಾಧ್ಯ ದೈವ. ಸರಳ, ಸಜ್ಜನ, ಅರಿತವರು, ನುರಿತವರು, ಹಳಬರು! ಕೆಳಗಿನಿಂದ ಮೇಲೆ ಬಂದವರು. ಹೃದಯವಂತ! ಇಷ್ಟಕ್ಕಿಂತ ಇನ್ನೆಷ್ಟು ಬೇಕು? ತಿಂಗಳಿಗೊಮ್ಮೆ ನನ್ನದು ಇಲ್ಲೇ ವಿಶ್ರಾಂತಿ ಗೃಹದಲ್ಲಿ ಗ್ರಹಣ ಹಿಡಿಯುತಿತ್ತು! ನಿಗಮದ ಸಲುವಾಗಿ ರಾತ್ರಿ ಉಳಿದು ರಾತ್ರಿ ಹೊತ್ತು ಡಿಪೋಗೆ ಹೋಗಿ ದುರಸ್ಥಿ ಕಾರ್‍ಯವನ್ನು ಗಮನಿಸಿ; ತಾಂತ್ರಿಕ ಸಿಬ್ಬಂದಿಗೆ ನೈತಿಕ ಧೈರ್‍ಯ ತುಂಬುವ ಕೆಲಸವನ್ನು ಡಿಪೋ ಮ್ಯಾನೇಜರ್ ಒಟ್ಟಿಗೆ ಮಾಡುತ್ತಿದ್ದುದು ನೆಮ್ಮದಿ ತರುತಿತ್ತು. ಒಮ್ಮಮ್ಮೆ ರಾತ್ರಿ ಸಾರಿಗೆಗಳ ತಪಾಸಣೆ ಕೈಗೊಳ್ಳುತ್ತಿದ್ದೆ, ಶ್ರಮಿಸುತ್ತಿದ್ದೆ.

ಬೆಳಿಗ್ಗೆ ಬಸ್ ನಿಲ್ದಾಣದ ಕೆಲಸ, ಡಿಪೋದ ಕಾರ್‍ಯ ವೈಖರಿ ಗಮನಿಸಿ, ಮತ್ತೆ ಉಡುಪಿ ಮಾರ್‍ಗವಾಗಿ ನನ್ನ ಮಂಗಳೂರು ಕಛೇರಿಗೆ ಹಾಜರಾಗುತ್ತಿದ್ದೆ!

II

ಕಛೇರಿ ಕೆಲಸ ದೇವರ ಕೆಲಸ! ಬಸ್ ನಿಲ್ದಾಣದ ಮೇಲೆ ನಮ್ಮಯ ಕಛೇರಿ! ಸಂತೆಯೊಳಗೊಂದು ಮನೆಯ ಮಾಡಿದಂತೇ ಜನ್ರೇ ದೇವರು ಪ್ರಯಾಣಿಕರೇ ದೈವ, ಪ್ರಭುಗಳು ಅನ್ನದಾತರು… ಅವರ ತೃಪ್ತಿಯೇ ನಮ್ಮಯ ಸಂತೃಪ್ತಿ. ಅವರ ಬೇಡಿಕೆಗೆ ಸ್ಪಂದಿಸುವುದು. ಸಭೆ, ಸಮಾರಂಭ, ಆರ್.ಟಿ.ಓ ಮೀಟಿಂಗ್, ತನಿಖಾ ಕೆಲಸ, ಅಪಘಾತಗಳತ್ತ ಲಕ್ಷ್ಯ… ಸಾರಿಗೆ ಆದಾಯ, ಕಿಲೋಮೀಟರ್ ರದ್ಧತಿ, ಪಾರ್‍ಟ್ಲಿ ಅಪರೇಷನ್ಸ್, ಹೆಚ್ಚಿನ ಕಿಲೋಮೀಟರ್, ಹೆಚ್ಚಿನ ಆದಾಯಗಳಿಕೆ, ಒಪ್ಪಂದದ ಸಾರಿಗೆಗಳಿಂದ ಬಂದ ಆದಾಯ, ವಾಣಿಜ್ಯ ಶಾಖೆಯ ವಿವರ, ವಿಚಾರಣೆಗಳನ್ನು ನಡೆಸುವುದು, ಅದರ ಮುಕ್ತಾಯದ ಸಾರಾಂಶ ನೀಡುವುದು… ನಾಳೆಯ ಸಾರಿಗೆ ಕಾರ್‍ಯಾಚರಣೆ, ಲೋಕಲ್ ಮೀಟಿಂಗ್‌ಗಳು, ಸಿಬ್ಬಂದಿಯ ಗೈರು ಹಾಜರಿ ವಿವರ… ಅಬ್ಬಬ್ಬಾ… ಇತ್ಯಾದಿ ದೈನಂದಿನ ಕೆಲಸದ ಒತ್ತಡವನ್ನು ನಿರ್‍ವಹಿಸುತ್ತಾ ಬಾಳ ಬಂಡಿ ಸಾಗಿತ್ತು.

ಮಂಗಳೂರಿನಲ್ಲೇ ಎರಡು ಡಿಪೋಗಳು ಒಂದರಲ್ಲಿ ಹಿರೇಮಠ ಡಿಪೋ ಮ್ಯಾನೇಜರಾಗಿದ್ದರು. ಇನ್ನೊಂದರಲ್ಲಿ ಶ್ರೀಹರಿಬಾಬು ಡಿಪೋ ಮ್ಯಾನೇಜರ್ ಇದ್ದರು.

ಇನ್ನು ಮಂಗಳೂರು ವಿಭಾಗದ ವ್ಯಾಪ್ತಿಯಲ್ಲಿ ಧರ್‍ಮಸ್ಥಳ ಡಿಪೋ ಬರುತ್ತಿತ್ತು. ಬಿ.ಸಿ. ರೋಡ್ ಉಜಿರೆ ಮಾರ್‍ಗವಾಗಿ ಧರ್‍ಮಸ್ಥಳ ಡಿಪೋಗೆ ಹೋಗಬೇಕಾಗಿತ್ತು. ಹಾದಿ ಬೀದಿಯ ತುಂಬೆಲ್ಲ ಚೆಲುವಿನ ಚಿತ್ತಾರದ ಹೂಮಳೆ. ಸದಾ ಝಳು ಝುಳು ಹರಿವ ಹಳ್ಳಕೊಳ್ಳ ಝರಿ ತಪ್ಪಲು ಪ್ರದೇಶದ ಗುಂಟಾ ದಾರಿ ಸವೆಯುವುದೇ ಗೊತ್ತಾಗುತ್ತಿರಲಿಲ್ಲ… ಹಚ್ಚ ಹರಿಸಿನ ನೆಲೆ ಬೀಡು, ಬಿದರು, ರಬ್ಬರು, ಹೊನ್ನೆ, ಬೀಟೆ, ಮತ್ತಿ, ಹಲಸು, ತೆಂಗು, ಬಾಳೆ, ಅಡಿಕೆ, ಮೆಣಸು, ಏಲಕ್ಕಿಯ ತೋಟಗದ್ದೆ ಪೈರು ಪಚ್ಚೆಯ ಸುಂದರ ತಾಣದ ಮಡಿಲಲ್ಲಿ ಧರ್‍ಮಸ್ಥಳ.

ಧರ್‍ಮಸ್ಥಳ ಕನ್ನಡ ನಾಡಿನ ಹೆಮ್ಮೆಯ ಪುಣ್ಯಸ್ಥಳ ‘ಸ್ಥಳನಾಮದ ಮಹಿಮೆನೇ ಅಪಾರ’ ಝಳು ಝುಳು ಹರಿವ ನೇತ್ರಾವತಿ ನದಿಯೊಂದು ಮಂಗಳಧಾಮ, ಪುಣ್ಯಾಭಿರಾಮ. ಇದೊಂದು ಶಾಂತಿಧಾಮ, ವರದಾನ, ನಿತ್ಯ ನೂತನೆ… ನಾನಂತೂ ಡಿಪೋಕ್ಕೆ ಬಂದಾಗಲೆಲ್ಲ ಶ್ರೀಮಂಜುನಾಥನ ದಿವ್ಯ ದರ್‍ಶನ ಪಡೆದು ಹೋಗುವುದನ್ನು ಮರೆಯುತ್ತಿರಲಿಲ್ಲ. ಯಿಲ್ಲಿ ನನ್ನಪ್ಪ ಯಲ್ಲಪ್ಪ ತಾತ ಬಬ್ಲೆಪ್ಪನ ನೆನಪು. ಎಲ್ಲರ ಅಣ್ಣ ನಮ್ಮ ಅಣ್ಣಪ್ಪಸ್ವಾಮಿಯನ್ನು ನೋಡಿ ಮಾತನಾಡಿಸಿ ಹೋಗತೊಡಗಿದೆ. ಕೆಲಸ ಮಾಡಲು ಇವೆಲ್ಲ ಸ್ಫೂರ್‍ತಿಯ ಸೆಲೆಯಾಗಿದ್ದವು. ನನ್ನ ಬಾಳಿಗೆ ಉತ್ತಮ ನೆಲೆಯಾಗಿತ್ತು. ಯಿಲ್ಲದ ಅಪ್ಪ, ತಾತ, ಮುತ್ತಾತರು ನೆನಪಾಗುತ್ತಿದ್ದರು. ನನಗೆ ಶಾಂತಿ ಸಮಾಧಾನ ತಂದು ಕೊಡುತ್ತಿದ್ದರು. ಜೀವನದ ಜಂಜಾಟಗಳನ್ನೆಲ್ಲ ಮರೆಯಲು ಇಂಥಾ ತಾಣಗಳು ಬೇಕು. ಇಲ್ಲಿ ನಮ್ಮ ಆಪ್ತರು ಇರುವರೆಂಬ ನಂಬಿಕೆ ನನ್ನದು.

ಆಗ ಧರ್‍ಮಸ್ಥಳದ ಡಿಪೋ ಮ್ಯಾನೇಜರ್ ಆಗಿ ವೆಂಕಟೇಶ್ ಇದ್ದರು. ಡಿಪೋದ ಬಗ್ಗೆ ತುಂಬಾ ಆಸಕ್ತಿವುಳ್ಳವರಾಗಿದ್ದರು. ಡಿಪೋದ ಪರಿವೀಕ್ಷಣೆ ಮುಗಿದ ನಂತರ ಮಠದಲ್ಲಿ ಉಚಿತ ಪ್ರಸಾದ ಸ್ವೀಕರಿಸಿ, ಮಠದ ರೂಮಿನಲ್ಲಿರುವುದೇ ಮಹಾದಾನಂದವಾಗುತ್ತಿತ್ತು. ಒಳ್ಳೆಯ ಗಾಳಿ, ಬೆಳಕು, ನೀರು, ಅನ್ನ ಸಾರು, ನಿದ್ರೆ, ನೆಮ್ಮದಿ ಉಚಿತವಾಗಿ ದೊರೆಯುತ್ತಿತ್ತು. ಇಲ್ಲಿ ದೇವರಿದ್ದಾನೆಂದು ನನ್ನಾತ್ಮಕ್ಕೆ ಹೊಳೆಯುತ್ತಿತ್ತು. ಇಲ್ಲಿ ಪ್ರಾಮಾಣಿಕತೆ ಪ್ರತಿಯೊಂದರಲ್ಲಿ ಎದ್ದು ಕಾಣುತ್ತಿತ್ತು. ನಮ್ಮ ಹಿರಿಯ ಅಧಿಕಾರಿಗಳು ಬಂದಾಗ ಅಷ್ಟೇ ಏಕೆ ನಮ್ಮ ಸಾರಿಗೆ ಸಚಿವರು ಪಿ.ಜಿ.ಆರ್. ಸಿಂಧ್ಯರವರು ಬಂದಾಗ ಅವರೊಂದಿಗೆ ಇಲ್ಲಿಗೆ ಬಂದು ವಿಶೇಷ ಮನ್ನಣೆ ಹೊಂದಿದ್ದನ್ನು ಪದೆ ಪದೆ ನೆನಪಾಗುತ್ತಿತ್ತು…

III

ಈ ಹಿಂದೆ ನಾ ಹಳಿಯಾಳದಲ್ಲಿ ಡಿಪೋ ಮ್ಯಾನೇಜರ್ ಆಗಿದ್ದಾಗ ೧೯೮೭ ರಲ್ಲಿ ನನ್ನಮ್ಮ ನನ್ನ ಮನೆಯವರು ಹಾಗೇ ನನ್ನ ದೊಡ್ಡ ಮಗಳು ಅರುಣಾಶ್ರೀಯ ಜವಳ ಕಾಠ್ಯಕ್ರಮವನ್ನು ಇಲ್ಲೇ ನೆರವೇರಿಸಿದ್ದು. ಯಿಲ್ಲದ ಕರುಳ ಬಳ್ಳಿ ಇಲ್ಲಿತ್ತು. ಇದೆಲ್ಲ ನಮ್ಮ ಪೂರ್‍ವಜರ ಸ್ವತ್ತು. ಗತ್ತಿಲಿ ಇಲ್ಲಿಗೆ ಬಂದು ಹೋಗುತಿದ್ದೆ! ಆಗಿದ್ದ ಉತ್ಸಾಹ, ಲವಲವಿಕೆ, ಉಲ್ಲಾಸ, ಈಗಲೂ ಹಾಗೇ ಇತ್ತು. ದೈವ ಸನ್ನಿಧಿಯೆಂದರೆ ಹಾಗೇನೇ ಏನೋ ಖುಷಿ ಖುಷಿ ಅಲ್ಲಿ ಶಕ್ತಿ ಸಂತೃಪ್ತಿ ಅನ್ಯಥಾ ಭಾವನೆಗಳಿಗೆ ಮನಸು ಹರಿಹಾಯುವುದಿಲ್ಲ. ಖುಷಿಯಾಗಲು ಪ್ರೇರಣೆಯಾಯಿತು, ಸಂಬಂಧಗಳ ಬೆಸೆಯಲು ಇದೆಲ್ಲ ಬೇಕೆನಿಸಿತು!

ಬೆಳಿಗ್ಗೆ ಎದ್ದು ನೇತ್ರಾವತಿ ನದಿಯಲ್ಲಿ ಮೈತೊಳೆದಾಗ ಆಗುವ ಅನುಭೂತಿ ಅಷ್ಟಿಷ್ಟಲ್ಲ. ನಾನು ಯಾವುದೋ ಕೈಲಾಸ ಪರ್‍ವತದಲ್ಲಿದ್ದೇನೋ ಏನೋ ಎನಿಸುತ್ತಿತ್ತು. ಸ್ಥಳ ಮಹಿಮೆಯಂಥದ್ದು. ಜನರಿಗೆ ಸದ್ಭುದ್ಧಿ ನೀಡುವ ಮಂದಿರಗಳು, ವಿವೇಕ ಹೆಚ್ಚಿಸುವ ತಾಣಗಳು. ಸನ್ಮಾರ್‍ಗದತ್ತ ಕೊಂಡೊಯ್ಯುವ ತಾಣಗಳೆಂದು ನಂಬಿದ್ದೆ.

ಡಿಪೋ ಹಾಗೂ ಬಸ್ ನಿಲ್ದಾಣದ ಕಾರ್‍ಯ ವೈಖರಿಯನ್ನು ಮತ್ತೊಮ್ಮೆ ಪರಿಶೀಲಿಸಿ, ಕುಕ್ಕೆ ಸುಬ್ರಮ್ಮಣ್ಯ ಬಸ್ ನಿಲ್ದಾಣಕ್ಕೆ ಭೇಟಿ ಕೊಟ್ಟು ಅಲ್ಲಿನ ಸಾರಿಗೆ ಕಾರ್‍ಯಚರಣೆಯನ್ನು ಪರಿಶೀಲಿಸಿ, ಗುಡಿಗೆ ಹೋಗಿ ಕರಮುಗಿದು ಶಿರಬಾಗಿ ಶರಣೆಂದು ಅಲ್ಲೇ ಪ್ರಸಾದ ಸ್ವೀಕರಿಸಿ ಮಂಗಳೂರು ತಲುಪುತಿದ್ದುದುಂಟು. ಇಂಥಾ ನೋವು ನಲಿವು ಖಷಿಯೆಲ್ಲ ನನಗೆ ಮಾತ್ರವಿತ್ತು.

IV

ಇಲ್ಲೇ ನಿಮಗೊಂದು ಆಸಕ್ತಿದಾಯಕ ಸಂಗತಿ ಹೇಳಿ, ನನ್ನ ಹೃದಯದ ಭಾರವನ್ನು ಕಡಿಮೆ ಮಾಡಿಕೊಳ್ಳುವೆ… ಪ್ರತಿ ವಟ್ಷ ಆಕ್ಟೋಬರ್ ಮಾಹೆಯಲ್ಲಿ ಹರ್‍ಷದಿ ಮಡಿಕೇರಿಯ ಭಾಗಮಂಡಲದಲ್ಲಿ ಅಮ್ಮ ಕಾವೇರಮ್ಮನ ಜಾತ್ರೆ ಮೂರು ದಿನ. ಜನ ಗಿಜಿ ಗಿಜಿ…. ರಾತ್ರಿ ಹನ್ನೆರೆಡು ಗಂಟೆಗೆ ತೀರ್ಥೋದ್ಭವ. ನೂರಾರು ವಾಹನಗಳ ಕಾರ್‍ಯಾಚರಣೆ. ಅಂದು ನಾ ಡಿಪೋ ಮ್ಯಾನೇಜರ್, ಎಟಿ‌ಎಸ್, ಸಾರಿಗೆ ನಿಯಂತ್ರಕರೆಲ್ಲ ನಿದ್ದೆಗೆಟ್ಟು ಜಿಟಿ ಜಿಟಿ ಮಳೆ ಗಾಳಿ ಛಳಿ ಜಿಗಣಿಗಳ ಮಧ್ಯ ಸಾರಿಗೆ ಕಾರ್‍ಯಾಚರಣೆಯನ್ನು ಯಶಸ್ವಿಗೊಳಿಸಿದೆವಲ್ಲದೆ, ಟು ಇನ್ ಒನ್ ಎಂಬಂತೇ… ಒಂದು ಅದ್ಭುತವಾದ ಕೇಸನ್ನು ಮಡಿಕೇರಿ ಡಿಪೋದ ಕಂಡಕ್ಟರ್‌ಗೆ ನಾನೇ ಬಿಡದೆ ತಾಸು ಗಟ್ಟಲೆ ಶ್ರಮಿಸಿ ತಲೆಕೆಡಿಸಿಗಂಡು… ಹಳೆ ಟಿಕೇಟ್, ವೇ-ಬಿಲ್ಲು, ಹೆಚ್ಚುವರಿ ಕ್ಯಾಶ್… ಎ.ಸಿ. ಸೀಟುಗಳ ಪ್ರಕರಣ ದಾಖಲಿಸಿದೆ!.

ಇದು ಡಿ.ಸಿ ಡಿಪೋ ಮ್ಯಾನೇಜರ್ ನಿರ್‍ವಾಹಕರಿಗೆಲ್ಲ ಅಸಂತೋಷ… ಅಸಂತೃಪ್ತಿ… ಇದಕ್ಕೆಲ್ಲ ಬೇರೆ ಬೇರೆ ಕಾರಣಗಳಿದ್ದವು. ಈ ಪ್ರಕರಣದಲ್ಲಿ ಸೂಕ್ತ ಬಹುಮಾನ ಪ್ರಶಂಸೆ ನಿರೀಕ್ಷಿಸಿದ್ದೆ. ಆದರೆ ನನ್ನ ಮೇಲಿನವರು ನನಗೆ ಉಲ್ಟಾ ಹೊಡೆದು, ಟೀಕೆ, ಟಿಪ್ಪಣಿ, ಸರಿಯಾಗಿ ಜಾತ್ರೆ ಕಾರ್‍ಯಾಚರಣೆಯಾಗಿಲ್ಲ! ನೀವೆಲ್ಲ ಬೆಚ್ಚಗೆ ವಿಶ್ರಾಂತಿಗೃಹದಲ್ಲಿ ವಿಶ್ರಾಂತಿ ಪಡೆದಿರುವುದು ನನಗೆ ಗೊತ್ತಂದು ನೆಲಬಾಂಬು ಸಿಡಿಸಿ, ನಮ್ಮ ಪ್ರಾಮಾಣಿಕತೆಯನ್ನು ಸಂಶಯಿಸಿದರು! ಸೀಮೆಗಿಲ್ಲದ ಅಧಿಕಾರಿ ತಾನು ಕುಣಿವಲ್ಲ… ಕುಣಿದ ನಮ್ಮನ್ನು ಒಪ್ಪಿಕೊಳ್ಳಲಿಲ್ಲ. ಹೀಗೆ ಪ್ರಶಂಸಯನೀಯ ಕೆಲಸಗಳು ನಮ್ಮಿಂದಾದವು! ಅದರಲ್ಲಿ ಉಡುಪಿ ನಿಲ್ದಾಣದ ಡಿಪೋದ ಜಾಗೆಯನ್ನು ಖಾಸಗಿಯವರಿಂದ ಖಾಲಿ ಮಾಡಿಸಿದ್ದೂ ಇದೆ. ಹೀಗೆ ನನ್ನ ಕೆಲಸ ಹಿರಿದಾದರೂ ಅದನ್ನು ಕಿರಿದೆಂದು ಕಾಲಕಸವೆಂದು ಭಾವಿಸಿದ ಅಧಿಕಾರಿ ಬಗ್ಗೆ ಜಿಗುಪ್ಸೆ ಮೂಡಿತು. ಯೀಗೀಗ ಶ್ರದ್ಧಾ ಭಕ್ತಿಲಿ ಮೈಯೆಲ್ಲ ಕಣ್ಣಾಗಿ ನೌಕರಿಗಾಗಿ ನೌಕರಿ ಮಾಡತೊಡಗಿದೆ. ಆದರೂ ನನ್ನ ಕಂಡ್ರೆ ಬೆಂಕಿ ಕಂಡಂತಾಡುತ್ತಿದ್ದರು.

ಡಿಪೋಗಳಲ್ಲಿ ಇಂಧನ ಉಳಿತಾಯದ ಸಪ್ತಾಹ, ಸಾರಿಗೆ ಆದಾಯ ಸಪ್ತಾಹ, ಅಪಘಾತ ರಹಿತ ಮಾಸ, ನಿವೃತ್ತಿ ನೌಕರರ ಸಮಾರಂಭ, ಗಣಪತಿ ಮಹೋತ್ಸವ, ಕನ್ನಡ ರಾಜ್ಯೋತ್ಸವದ ಸಮಯ ಸಂದರ್‍ಭಗಳಲ್ಲಿ ನನ್ನ ಭಾಷಣವನ್ನು ಅಧಿಕಾರಿಗಳು, ಕಾರ್‍ಮಿಕ ಮುಖಂಡರು… ಹಾಗೂ ನೌಕರರೆಲ್ಲರೂ ಮೆಚ್ಚಿಕೊಂಡು ತಲೆದೂಗಿದರಲ್ಲದೆ, ತರಂಗದಲ್ಲಿ ಸುಧಾದಲ್ಲಿ ಪುನುಗು ಬೆಕ್ಕಿನ ಬಗ್ಗೆ – ಬಿದರಿನ ಬಗ್ಗೆ – ಗುಡ್ಡ ಕುಸಿದ ಚಿತ್ರಲೇಖನ ಬರೆದು ಹೆಸರೂ ಗಳಿಸಿದ್ದು ಕೆಲವರಿಗೆ ಹಿತವೆನಿಸಲಿಲ್ಲ. ಮೆಲ್ಲಗೆ ವೃತ್ತಿ, ಜಾತಿ, ಮತ, ಧರ್‍ಮ ಮತ್ಸರ ಶುರುವಾಗಿತ್ತು. ಇಲಿಯಾಗಿರಲು ನನಗೆ ಇಷ್ಟವಾಗುತ್ತಿರಲಿಲ್ಲ. ಹುಲಿ, ಸಿಂಹದಂಗೆ ಒಂಟಿಯಾಗಿ ನುಗ್ಗುವುದೇ ನನಗೆ ಖುಷಿಕೊಡುತ್ತಿತ್ತು. ಹನ್ನೆರಡು ಅವತಾರ ಪ್ರದರ್‍ಶಿಸಿ ಬಿಡುತ್ತಿದ್ದೆ… ಇದೇ… ಇದು ಬಹಳಷ್ಟು ಜನರಿಗೆ ಇಷ್ಟವಾಗುತ್ತಿರಲಿಲ್ಲ.

ಚಿಕ್ಕಂದಿನಲ್ಲಿ ಕಲಿತ ವಿದ್ಯೆ ಬಾಳಿನಲ್ಲಿ ರೂಢಿಸಿಗೊಂಡ ತತ್ವ ಆದರ್ಶ, ಮೌಲ್ಯಗಳು, ಸಿದ್ಧಾಂತಗಳು ನಮ್ಮ ನೆರವಿಗೆ ಬಂದೇ ಬರುತ್ತವೆ. ನಮ್ಮಮ್ಮ ಭೂಮಿ ತಾಯಿನ ಹೆತ್ತ ಮಕ್ಕಳನ ನಂಬಿದವರೆಂದೂ… ಹಾಳಾಗಿಲ್ಲ. ಕಷ್ಟಪಟ್ಟು ಕಲಿತಿದ್ದು ಇಷ್ಟಪಟ್ಟಾಗ ಅಷ್ಟಷ್ಟೇ ಉಪಯೋಗಕ್ಕೆ ಬರುತ್ತದೆಂಬುದಕ್ಕೆ ನಾನೇ ನಿದರ್ಶನವಾಗಿದ್ದೆ!

ನಾ ನಿಗಮಕ್ಕೆ ಸೇರಿದಂದಿನಿಂದ ಸಾಹಿತ್ಯ, ಸಂಗೀತ, ಸಿನಿಮಾ, ನಾಟಕ, ಮನೋರಂಜನೆ ಕಾರ್‍ಯಕ್ರಮಗಳು ತಲೆ ತುಂಬಿ, ಎದೆ ತುಂಬಿ, ಮನ ತುಂಬಿರುವಾಗ ಸಾಹಿತ್ಯದ ಗಂಧಗಾಳಿ ಇವರಿಗೆ ನಿಗಮದಲ್ಲಿ ಎಲ್ಲಿಂದ ಬರಬೇಕು? ಕಲಿತಿದ್ದು, ಓದಿದ್ದು, ಏನೆಲ್ಲ ನನಗೇ ಮರೆತು ಹೋಗಿರುವಾಗ, ನೆನಪಿಗೆ ಬಂದಷ್ಟು ಮಾತ್ರ ಮಾತನಾಡಿದರೆ, ಸಭೆ ಸಮಾರಂಭಗಳಲ್ಲಿ ಜನ ಬೆಕ್ಕಸ ಬೆರಗಾಗುತ್ತಿದ್ದರು. ಅಗಾಧವಾದ ನೆನಪಿನ ಶಕ್ತಿ ನನ್ನದಾಗಿತ್ತು.

ನಾವು ಬದುಕುವುದಕ್ಕೂ ಬಾಳಿನಲ್ಲಿ ಕಲಿತಿರುವುದಕ್ಕೂ ಈಗ ನೌಕರಿ ಮಾಡುತ್ತಿರುವುದಕ್ಕೂ ಏನಾದರೊಂದಿಷ್ಟು ಸಂಬಂಧ ಸೂತ್ರ ಇದೆಯಾ? ಎಂದು ನಾನು ಅದೆಷ್ಟೋ ಸಲ ಚಿಂತಿಸಿದ್ದುಂಟು!

ಹೌದು… ನಮ್ಮ ದೇಶದ ಪ್ರಗತಿಗೆ ಇದು ಮಾರಕ, ಒಂದು ವರ್ಷದ ತನಕ ಕಲಿಯುತ್ತೇವೆ. ಮೂರು ತಾಸಿನಲ್ಲಿ ಪರೀಕ್ಷೆ ಬರೆಯುತ್ತೇವೆ. ಅದನ್ನು ಮೂವತ್ತು ನಿಮಿಷದಲ್ಲಿ ಮೌಲ್ಯಮಾಪನ ಮಾಡುತ್ತಾರೆ. ಇದೂ ಯಾವ ಕ್ರಮನೋ…?!

ಆದರೆ ಬದುಕಿನಲ್ಲಿ ಅಗ್ನಿ ಪರೀಕ್ಷೆಗಳು ಎದುರಾಗುತ್ತವೆ. ಅವು ನಮಗೆ ಮೇಲಿಂದ ಮೇಲೆ ಗುಣಪಾಠ ಕಲಿಸುತ್ತಾ… ಸಾಗುತ್ತವೆ. ಸವಾಲುಗಳೇ ಜವಾಬುಗಳನ್ನು ನೀಡುತ್ತವೆ. ಬದುಕಿನ ಪಾಠಬೇರೆ ಪರೀಕ್ಷೆ ಪಾಠ ಬೇರೆ. ಬದುಕಿನಲ್ಲಿ ಸಾಗುತ್ತಾ ಸಾಗುತ್ತಾ ಪರೀಕ್ಷೆಗಳು ಎದುರಾಗುತ್ತವೆ. ಇಲ್ಲಿ ಆಯ್ಕೆಗಳಿರುವುದಿಲ್ಲ. ಕಡ್ಡಾಯವಿರುತ್ತೆ… ಪಾಸು ಫೇಲು ಮೌಲ್ಯಮಾಪನವಿರುತ್ತೆ… ಜೀವನ ಉತ್ತರವಾದರೆ, ಕಲಿತಿದ್ದು ದಕ್ಷಿಣ ಮುಖವನಿಸಿತು.

ನಾಲ್ಕು ಗೋಡೆಗಳ ಮಧ್ಯೆ ಕಲಿತಿದ್ದಕ್ಕಿನ್ನ ನಾಲ್ಕು ಜನರ ಮಧ್ಯೆ ಕಲಿತಿದ್ದು ಉಪಯೋಗಕ್ಕೆ ಬರುವುದು. ಅನುಭವದ ಪಾಠ ಬಲು ದೊಡ್ಡದ್ದು! ಬದುಕು ಕಲಿಸುವ ಪಾಠ ಬೇರೆ. ಅದರ ಅನುಭವ, ಅನುಭಾವ ಬೇರೆ…

V

ವಿಭಾಗೀಯ ನಿಯಂತ್ರಣಾಧಿಕಾರಿಗಳ ಸುತ್ತ ಮುತ್ತ ಇದ್ದ ಒಂದಿಬ್ರು ಅವರಿಗೆ ಇಲ್ಲ ಸಲ್ಲದ್ದು ನನ್ನ ಬಗ್ಗೆ ಹೇಳಿದ್ದಾರೆ. ನನ್ನೊಂದಿಗೆ ಆರಂಭದಲ್ಲಿ ಚೆನ್ನಾಗಿದ್ದವರು ಮೆಲ್ಲಗೆ ದೂರ ದೂರ ಆಗಲು ಯತ್ನಿಸಿದರು. ಅಧಿಕಾರದ ಮದದಿಂದ ಈಗೀಗ ಮಾತು ಒರಟಾಗತೊಡಗಿದ್ದವು. ಇದೇ ಟೈಮಿನಲ್ಲಿ ಸೂರತ್ಕಲ್ ಇಂಜಿನಿಯರಿಂಗ್ ಕಾಲೇಜು ವತಿಯಿಂದ ನನಗೆ ಮುಖ್ಯ ಅತಿಥಿಯಾಗಿ ಡಾ|| ಬಾಬಾ ಸಾಹೇಬ ಅಂಬೇಡ್ಕರ್ ಅವರ ಕಾರ್‍ಯಕ್ರಮಕ್ಕೆ ಅಹ್ವಾನಿಸಿ, ಪ್ರತಿಕೆನೂ ಅಚ್ಚು ಹಾಕಿಸಿದ್ದರು. ನಾನು ಒಪ್ಪಿಯೂ ಇದ್ದೆ. ನನಗೆ ಖುಷಿಯೋ ಖುಷಿ… ಇದೇ ಸಂತಸದಲ್ಲಿ ನಾನು ನಮ್ಮ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಈ ವಿಷಯವನ್ನು ಹಂಚಿಕೊಂಡ ಅವರಿಗೆ ಸಹಿಸಲಾಗಲಿಲ್ಲ. ಮೊದಲು ಕೆಲಸ ನೋಡಿ ಆಮೇಲೆ ನಿಮ್ಮ ವೈಯಕ್ತಿಕದ ಬಗ್ಗೆ ಮಾತನಾಡೋಣ… ಎಂದು ಮುಖ ತಿರಿವಿಕೊಂಡರು. ನನಗಾಗ ಹೇಮರಾಜು ಅವರು ಗಕ್ಕನೆ ನೆಪ್ಪಿಗೆ ಬಂದರು. ೧೯೯೧ ರಲ್ಲಿ ಅವರು ಮೈಸೂರಿನಲ್ಲಿ ಡಿ.ಸಿ. ಅಲ್ಲಿ ನಾನಾಗ ಡಿ.ಟಿ.ಓ ಆಕಾಶವಾಣಿಯ ಕಾರ್‍ಯಕ್ರಮಕ್ಕೆ ಆಗವರು ಅವರ ಕಾರು ಕಳಿಸಿ ಕೋಟಿಗೊಬ್ಬರೆನಿಸಿದ್ದರು! ಈಗೀವರು ಕೋತಿಯಲ್ಲೊಬ್ಬರಾದರು!!

ನಾ ಸೆಡವಿಲಿ ಎದ್ದು ಕಛೇರಿಯಿಂದ ಹೊರಬಿದ್ದೆ. ಅಧಿಕಾರ- ಹಣವಿದ್ದರೆ ಇನ್ನೇನು ಬೇಡ ಎಂಬ ಹುಂಬರಿಗೆ ಏನೆನ್ನ ಬೇಕೋ..?! ಭಾರವಾದ ಹೃದಯದೊಂದಿಗೆ ಹೊರಬಿದ್ದೆನಾದರೂ ಮನಸ್ಸೆಲ್ಲ ಅಲ್ಲೇ ಸುತ್ತಿ ಸುಳಿಯುತ್ತಿತ್ತು. ಖಂಡಿತವಾಗಿ ಸಮಾರಂಭದ ದಿನ ಏನಾದರೊಂದು ಸಮಸ್ಯೆ ತಂದೊಡ್ಡುವರೆಂದು ನನಗಂದೇ… ಗ್ಯಾರಂಟಿಯಾಗಿತು. ಕಳ್ಳರ ಮನಸು ಉಳ್ಳು ಉಳ್ಳುಗೆ ಎಂಬಂತೆ ನಮ್ಮ ನಿಗಮದ ಅಧಿಕಾರಿಗಳ ಸತ್ಯ ಯೋಗ್ಯತೆಯೇನೆಂಬುದು ನನಗೆ ಗೊತ್ತಿತ್ತು. ನಮ್ಮಲ್ಲಿ ಖಾಲಿ ಖಾಲಿ ತಲೆಯವರೇ ಬಹಳಷ್ಟೆಂದು ಅರಿತಿದ್ದೆ. ಅದರಂತೆ ಅಲ್ಲೊಬ್ಬರು ಇಲ್ಲೊಬ್ಬರು ರಾವಣರಂಗೆ ಭಾರೀ ಭಾರೀ ಮೆರೆಯುತ್ತಿದ್ದರು. ಇವರಿಗೆ ಕುಮ್ಮಕ್ಕು… ಎಂದು ನೊಂದುಕೊಂಡೆ.

ನಮ್ಮ ನಿಗಮದಲ್ಲಿ ಹೃದಯ ವೈಶಾಲ್ಯವುಳ್ಳ ಅಧಿಕಾರಿಗಳು ತೀರಾ ಕಡಿಮೆಯೆನಿಸಿತು. ಇಂಥಾ ಸಭೆ, ಸಮಾರಂಭಗಳಲ್ಲಿ ನಮ್ಮ ಅಧಿಕಾರಿಗಳು ಪಾಲ್ಗೊಳ್ಳುವುದರಿಂದ ಸಂಸ್ಥೆಯ ಇಮೇಜ್ ವೃದ್ಧಿಸುವುದು ನಿಗಮದ ಬಗ್ಗೆ ಇರುವ ತಪ್ಪು ಅಭಿಪ್ರಾಯ ಹೋಗಲಾಡಿಸಲು ಸಹಕಾರಿಯಾಗುವುದು. ಭಾಷಣ ಕಲೆ ಎಲ್ಲರಿಗೆ ಸಿದ್ಧಿಸುವುದಿಲ್ಲ ನನಗೆ ಬೆನ್ನು ತಟ್ಟುವ ಅಧಿಕಾರಿಗಳು ಇಲ್ಲವಲ್ಲಾ…. ಎಂದು ವಿಲ ವಿಲ ಒದ್ದಾಡಿದೆ.

ಸಮಾರಂಭದ ದಿನ ಬಂದೇ ಬಿಟ್ಟಿತು. ಸಂಜೆ ನಾಲ್ಕು ಗಂಟೆಗೆಲ್ಲ ಸೂರತ್‌ಕಲ್ಲು ಇಂಜಿನಿಯರಿಂಗ್ ಕಾಲೇಜಿನಲ್ಲಿ ನಾನಿರಬೇಕಾಗಿತ್ತು. ಅಂದು – ನನ್ನ ಜೀಪು ಕಿತ್ತಿ ಬೇರೆ ಅಧಿಕಾರಿಗೆ ಬೇಕಂತಲೇ… ಕೊಟ್ಟು ಡಿಪೋದ ಸಿವಿಲ್ ಕೆಲಸ ಇತ್ಯಾದಿಗೆಂದು ಕಳಿಸಿದರು. ನನಗೆ ವಾಣಿಜ್ಯ ಮತ್ತು ಬಿ.ಸಿ.ರೋಡಿನ ಸಾರಿಗೆ ವೇಳಾಪಟ್ಟಿ ಇತ್ಯಾದಿ ಪರಿಷ್ಕರಣೆ ಚರ್‍ಚೆ ಎಂದು ಜವಾಬ್ದಾರಿ ಹೊರಿಸಿದರು.

ನನಗೆ ಅಂದೇ ಅರ್‍ಥವಾಗಿತ್ತು! ಊಹಿಸಿಯೂ ಇದ್ದೇ… ಇಷ್ಟೆಲ್ಲ ಮನಸ್ಸಿನಲ್ಲಿಟ್ಟುಗೊಂಡವರ ಮಧ್ಯೆ ಹೇಗೆ ಬಾಳುವುದೆಂದು ಚಿಂತಿಸತೊಡಗಿದೆ. ಕೆಲವರು ನೋಡಲು ಅರಬ್ಬಿಸಮುದ್ರದಂತೇ ನೀರು ನೀರು… ಆದರೆ ನೀರ ದಾಹ ಕಳಿಯಲೊಲ್ಲರೆಂಬಾ ನೋವು ನನ್ನ ಕ್ಷಣ ಮುತ್ತಿತು. ಕೆಲವರು ತೆಂಗಿನ ಎಳೆ ನೀರಿನಂತೇ… ಇನ್ನು ಹಲವರು ಹಾಲಾಹಲದಂತೆ ಬಾಯಿ ಬಿಟ್ಟರೆ ಬಣ್ಣಗೇಡು! ದೇವರ ತೀರ್‍ಪಿನಿಂದ ಇಂಥವರು ಹೇಗೆ ತಪ್ಪಿಸಿಕೊಳ್ಳಲು ಸಾಧ್ಯ?! ಎಂದು ಅಲ್ಲೇ ತೊಡೆ, ಅವುಡುಗಚ್ಚಿ ನಾನೂ ನೋಡ್ತೀನಿ ಎಂದು ಜೋರಾಗಿ ಕೂಗಿಕೊಂಡೆ… ನೋ ಆಸ್ಕರ್, ನೋ ಟೆಲ್ಲರ್… ಏಕಾಂಗಿ…

ಆಹಾ…. ದೇವರು ಎಷ್ಟೊಂದು ಕರುಣಾಮಯಿ. ಮನುಶ್ಯನಿಗೆ ಏನೆಲ್ಲ ಕೊಟ್ಟು ಕಣ್ಣಿಂದ ನೋಡುತ್ತಿದ್ದಾನೆ. ಖುಷಿ ಪಡುತ್ತಿದ್ದಾನೆ. ಆದರೆ ಮನುಶ್ಯನೇ ಮನುಶ್ಯನನ್ನು ಕಂಡರೆ.. ಸಹಿಸುತ್ತಿಲ್ಲ! ಜಾತಿ ಮತ ಧರ್‍ಮ ಎನ್ನುತ್ತಾನೆ. ಕಾಡಿಸುತ್ತಾನೆ. ಪೀಡಿಸುತ್ತಾನೆ. ಕೆಡಕು ಬಯಸುತ್ತಾನೆ. ಅಸೂಯೆ ಹೊಟ್ಟೆಕಿಚ್ಚುಪಡುತ್ತಾನೆ. ತೊಂದರೆ ಕೊಡುತ್ತಿದ್ದಾನೆಂದು ಮಧ್ಯಾಹ್ನದ ತನಕ ಚಿಂತಿಸುತ್ತಲೇ ಬಾಕಿ ಇದ್ದ ಕೆಲಸ ಕಾರ್‍ಯಗಳನ್ನೆಲ್ಲ ಮಾಡಿ ಮುಗಿಸಿದೆ. ಕಡತಗಳಿಗೆ ರುಜು ಮಾಡಿದೆ. ಮನಸ್ಸೆಲ್ಲ ಕಾರ್‍ಯಕ್ರಮದತ್ತ ಹರಿದಿತ್ತು. ಡಿಂಬಾ ಮಾತ್ರ ಇಲ್ಲಿ ಕುಂತಿತ್ತು. ನನ್ನನ್ನು ಜೈಲಲ್ಲಿ ಕೂಡಿಡಲು ತಂತ್ರ ರೂಪಿಸಿದ್ದರು! ನನ್ನನ್ನು ಸಮಾರಂಭಕ್ಕೆ ಹೋಗದಂತೆ ತಡಿಯಲು ಇದೆಲ್ಲ ಕುತಂತ್ರವೆಂದು ಅರಿತು ಚಡಪಡಿಸಿದೆ. ಒಪ್ಪಿಗೊಂಡು ತಪ್ಪು ಮಾಡಿದೆನೆಸಿತು…

ಅಂದು-ಊಟವನ್ನು ಬದಿಗೊತ್ತಿ ದುಡಿಯುತ್ತಲೇ ಮೆಲ್ಲಗೆ ಎದ್ದೆ! ಅಲ್ಲೇ ಐದು ನೂರು ಮೀಟರ್ ಅಂತರದಲ್ಲಿ ಪ್ರತಿ ಐದು ನಿಮಿಷಕೊಂದು ಖಾಸಗಿ ಬಸ್ಸುಗಳ ಓಡಾಟ. ಸೀದಾ ಹೋಗಿ ಹತ್ತಿ ಕುಳಿತೆ. ಅರ್‍ಧ ತಾಸು ಬಾಬಾ ಸಾಹೇಬ ಡಾ|| ಅಂಬೇಡ್ಕರ್ ಬಗ್ಗೆ ಮನದಲ್ಲಿ ಧ್ಯಾನಿಸಿದೆ. ಕುರಿ ತೋದದೆಯಂ ಕಾವ್ಯ ಪರಿಣಿತ ಮತಿಗಳ್ ಎಂಬ ಸಾಲಿಗೆ ನಾನೂ ಸೇರಿದೆ! ನನ್ನ ತಲೆಯಲ್ಲಿ ಕೂದಲಿರುವಷ್ಟು ಅಂಬೇಡ್ಕರ್ ಬಗ್ಗೆ ತಿಳಿದು, ಮಾತನಾಡಿ ಅವರ ಸ್ಫೂರ್ತಿ, ಆಶೀರ್ವಾದ, ಹುರುಪು, ಹುಮ್ಮಸ್ಸಿನ ಮೇಲೆ ಮುಂದೆ ಬಂದವನು ಅವರ ಬಗ್ಗೆ ತಾಸು ಮಾತನಾಡಲು ಯಾವುದೇ ಆಧಾರ ಗ್ರಂಥ, ಊರುಗೋಲು ಬೇಡವೆಂಬ ಆತ್ಮವಿಶ್ವಾಸ, ಭರವಸೆ, ನಂಬಿಕೆಯ ಮೇಲೆ ಎದೆಯುಬ್ಬಿಸಿ ಹೋದೆ… ಇವನೇ ನಿಜವಾದ ಯಲ್ಲಪ್ಪ ಕೆಕೆ ಪುರ. ಏನು ಯಿಲ್ಲದಾಗ ನಾನಾಗಿರುತ್ತೇನಲ್ಲ ತಾಳ್ಮೆ, ಸಹನೆ, ವಿವೇಕ ಮೆರೆಯುತ್ತೇನಲ್ಲಾ…. ಅದೇ ನಾನು…. ಇಂಥವು ಹತ್ತು ಬಂದಿವೆ ಎದುರಿಸಿ ಮುಂದೆ ಬಂದೀನಿ….

ಹೌದು! ನನ್ನ ಹಾದಿನೇ ಅಲ್ಲಿ ಎಲ್ಲರೂ ಕಾಯುತ್ತಿದ್ದರು! ನಾನು ಬಸ್ಸಿನಿಂದ ಇಳಿದೆ. ವೇದಿಕೆ ಮೇಲೆ ಕರೆದೊಯ್ದುರು! ನಾ ಭಾವಪರವಶನಾಗಿ, ಎದುರಿಗಿದ್ದವರಿಗೆ ನಾಟುವಂತೆ, ಆಯಸ್ಕಾಂತದಂತೆ ಬರಸೆಳೆದು ಮಾತಿಗಾರಂಭಿಸಿದೆ. ತುಸು ಆವೇಶವಿತ್ತು. ಸ್ವಲ್ಪ ರೋಷವಿತ್ತು ಕೆಚ್ಚು ಇತ್ತು… ಸೂಜಿಗಲ್ಲಿನಂತೆ ನನ್ನತ್ತ ಆಕರ್‍ಷಿತರಾದರು. ನಲವತ್ತೈದು ನಿಮಿಷ ಆಲಿಕಲ್ಲಿನಂತೆ ರಪರಪನೆ ಚಪ್ಪಾಳೆಗಳ ಸುರಿಮಳೆಗರೆದರು. ಕೆಲವರು ಕಣ್ಣೀರಿಟ್ಟರು! ನೋವು ನಲಿವುಗಳ ಸಂಗಮವಾಗಿತ್ತು ನನ್ನ ಭಾಷಣ!! ಬಾಬಾ ಸಾಹೇಬ ಡಾ|| ಬಿ.ಆರ್. ಅಂಬೇಡ್ಕರ್ ಬಗೆಗೆ ಈಗಾಗಲೇ ನೂರಾರು ಸಲ ನೂರಾರು ಮಾತುಗಳನ್ನಾಡಿ ಬೆನ್ನು ತಟ್ಟಿಸಿಗೊಂಡಿರುವ ನನಗೆ ಈ ರೀತಿಯ ಮೆಚ್ಚುಗೆ ನನಗೇನು ಹೊಸದಲ್ಲ. ನನಗೆ ಖುಷಿ ಕೊಡುವುದಿರಲಿ, ಅಲ್ಲಿದ್ದವರೆಲ್ಲ ಖುಷಿ ಖುಷಿಯಾದರು. ನನಗೇನು ಯಾರಿಗಾದರೂ ಇದೆಯಲ್ಲವೇ ಬೇಕಾಗಿರುವುದು?!… ಮಾತು ಒಂದು ಕಲೆ. ಈ ಕಲೆಗೆ ಬೆಲೆ ಬರುವುದು ಹೆಚ್ಚೆಚ್ಚು ಅಧ್ಯಯನ ಮಾಡಿದಾಗಲೇ… ಬರೀ ರೀಲು ಬಿಡಲು ಸಾಧ್ಯವಿಲ್ಲ! ಸಮಾರಂಭ ಮುಗಿಸಿಕೊಂಡು ಖಾಸಗಿ ಬಸ್ಸು ಹತ್ತಿ, ಮಂಗಳೂರು ತಲುಪಿದೆ. ಏನೋ ಸಾಧಿಸಿದ ಗೆಲವು ನನ್ನಲ್ಲಿತ್ತು! ಒಳ್ಳೆಯದು ಮಾಡಲಾಗಲಿಲ್ಲವೆಂದಾ ಮೇಲೆ ಜೀವಿಸಿದ್ದು ಫಲವೇನು?!

ನಾ ಭಾಷಣಕ್ಕೆ ಹೋಗಿ ಬಂದ ವಿಷಯ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಗೊತ್ತಾಗಿತು. ನಾ ಆ ಬಗ್ಗೆ ಚಕಾರವೆತ್ತಲಿಲ್ಲ. ಅವರು ಮಾತ್ರ ಗರಂ ಆಗಿದ್ದರು. ಮೆಲ್ಲಗೆ ನಮ್ಮಿಬ್ಬರ ಮಧ್ಯೆ… ಸೀತಲ ಸಮರ ಶುರುವಾಗಿತ್ತು. ಗಂಡ ಹೆಂಡಿರ ಜಗಳವಾದರೆ ಉಂಡು ಮಲಗುವ ತನಕ! ಆದರೆ ನಾವು ಗಂಡ ಹೆಂಡಿರಲ್ಲವಲ್ಲವೇ? ಅಧಿಕಾರಿಗಳು…. ಖಾರ ಖಾರವಾಗಿರುವವರಲ್ಲವೇ?! ನೂರು, ಇನ್ನೂರು ವರ್‍ಷ ಯೀ ನೆಲದಲ್ಲಿರುತ್ತೇವೆ ಅಂದಂಗೆ ಇವರೆಲ್ಲ ಆಡುತ್ತಿರುವುದು ಯಾಕಾಗಿ?! ಸಾಕು ಸಾಕಾಗಿ ಹೋಗಿತ್ತು….

VI

ನನಗೆ ಮಡಿಕೇರಿ ಡಿಪೋ ತುಂಬಾ ಇಷ್ಟವಾದ ಡಿಪೋ… ಏಕೆಂದರೆ ನಾ ಮಡಿಕೇರಿಯಲ್ಲಿ ಸರ್‍ಕಾರಿ ಪ್ರಥಮದರ್‍ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿ ೧೯೮೩-೮೪ ರಲ್ಲಿ ಕಾಲೇಜು ರೋಡಿನಲ್ಲಿ ರೂಮು ಮಾಡಿಕೊಂಡು ಬಾಳ ಹೆಸರು ಮಾಡಿದ್ದವನು. ಅದರ ಸವಿ ಸವಿ ನೆನಪು ಹಸಿ ಹಸಿಯಾಗಿ ನನ್ನೆದೆಯಲ್ಲಿ ಬೆಚ್ಚಗೆ ಅಡಗಿ ಕುಳಿತಿತ್ತು. ಆ ದಿನಗಳು ಮತ್ತೊಮ್ಮೆ ಬಂದಾವೇ…?! ಮೈ ತುಂಬಾ ಬಡತನವಿದ್ದರೂ ಆ ಕಲಿಕೆ, ಓದು, ಬರಹ, ಬದುಕು… ಸಂತೋಷ, ಹುರುಪು, ಉತ್ಸಾಹ ಲವಲವಿಕೆ, ಆತ್ಮವಿಶ್ವಾಸ, ಎದೆಗಾರಿಕೆ, ಛಲ, ಹಠಮಾರಿತನ, ಕೆಚ್ಚು, ಸಾಚಾತನ, ಏನೆಲ್ಲ… ನನ್ನ ಕಣ್ಣ ಮುಂದೆ ಮೇಲಿಂದ ಮೇಲೆ ಸುತ್ತಿ ಸುಳಿದು ನನ್ನನ್ನು ಈಗಲೂ ಭಾವಪರವಶ ನನ್ನಾಗಿಸುತ್ತಿತ್ತು. ಆ ಒಳ್ಳೆಯ ದಿನಗಳೆಲ್ಲ ಅಳಿದು, ಕೆಟ್ಟ ದಿನಗಳು, ಕೆಟ್ಟ ಕನಸುಗಳೇ ಬೆನ್ನತ್ತಿದ ಬೇತಾಳವಾಗಿ ಕಾಡತೊಡಗಿದವು. ಯಾಕೋ ಆಯ್ಕೇನೇ ಸರಿ ಹೊಂದಲಿಲ್ಲವೆಂದು ವಿಲ ವಿಲ ನಿತ್ಯಾ ಒದ್ದಾಡುತ್ತಲೇ ಕಾಲ ನೂಕಿಯೂ ಇದ್ದೇ…

ಮಡಿಕೇರಿ ಒಂದು ಸುಂದರನಾಡು! ಆ ಜನ, ಜಲ, ನೆಲ, ಚಿನ್ನ, ಶಿಸ್ತಿಗೆ ಹೆಸರುವಾಸಿ. ಕನ್ನಡನಾಡಿನ ಕಾಶ್ಮೀರ ಕಾವೇರಿ ತಾಯಿಯ ಉಗಮಸ್ಥಾನ! ಶಕ್ತಿ, ಭಕ್ತಿ, ಮುಕ್ತಿ, ಯುಕ್ತಿಯ ತಾಣ. ಒಮ್ಮೆ ನೋಡಿದರೆ, ಮತ್ತೊಮ್ಮೆ ಮಗದೊಮ್ಮೆ ನೋಡಲೇಬೇಕೆಂಬ ತವಕ, ತಲ್ಲಣ, ಆಸೆ ಚಿಗುರುವುದು. ಅಂಥಪ್ಪ ನೆಲದಲ್ಲಿ ಎರಡೆರಡು ಬಾರಿ ಕರ್‍ತವ್ಯ ನಿರ್‍ವಹಿಸುವ ಭಾಗ್ಯ ಲಭಿಸಿದ್ದಕ್ಕೇ ಪುಲಕಿತಗೊಂಡೆ. ಹರ್‍ಷಗೊಳ್ಳುವುದಕ್ಕೆ ವರ್ಷಗಳು ಬೇಕಿಲ್ಲ. ಅರೆ ನಿಮಿಷ ಸಾಕು.

ಏನಾದರೇನಂತೆ? ನಾ ಯಿಂಥಪ್ಪ… ಸುಂದರ ಕನ್ನಡ ನಾಡಿನಲ್ಲಿ ಹುಟ್ಟಿರುವನೆಂಬ ಸಂತೃಪ್ತಿ ಸಂತೋಷ ನನಗಿತ್ತು! ಇದಕ್ಕಿಂತ ಹಿಗ್ಗಿನ ಸಂಗತಿಯೆಂದರೆ… ಸಾರಿಗೆ ನಿಗಮದಲ್ಲಿ ಹಗಲಿರುಳು ಕೆಲಸ ಮಾಡುವ ಯೋಗ ಲಭಿಸಿರುವ ಜೊತೆಗೆ ಮಡಿಕೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಪುಣ್ಯ ಮತ್ತೊಮ್ಮೆ ಮಗದೊಮ್ಮೆ… ಲಭಿಸಿದೆಯಲ್ಲಾ ಎಂದು ಹಿರಿ ಹಿರಿ ಹಿಗ್ಗಿದೆ. ಬಂದ ಭಾಗ್ಯವ ಕಾಲಿಲಿ ಒದ್ದು ಬಾರದಿರುವ ಸಾರಿಗೆ ನಿಗಮದ ಅನ್ನ ಸಾರಿಗೆ ಸಾರಿ ಸಾರಿ ಬೇಡುತಿರುವುದಕ್ಕೆ ನಗು ಬಂತು!

ಒಬ್ಬನೇ ಮೀಸೆ ಮರೆಯಲಿ… ನಕ್ಕೆ…. ಮಡಿಕೇರಿಯಲ್ಲಿ ರಘುನಾಥ ಡಿಸೋ ಮ್ಯಾನೇಜರ್ ಆಗಿದ್ದರು. ಹಳಬರು. ಅಲ್ಲೇ ಮನೆ ಮಠ ಸಂಸಾರ ಹೊಂದಿ ಹಗಲಿರುಳು ಡಿಪೋದ ಪ್ರಗತಿಗೆ ಶ್ರಮಿಸುತ್ತಿದ್ದರು. ಇವರ ಕೆಲಸ ಕಾರ್‍ಯಗಳ ಬಗ್ಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಅತೃಪ್ತಿ ಇತ್ತು. ಮೊದಲಿಂದಲೂ ಇವರಿಬ್ಬರದೂ ಮುಸುಕಿನ ಗುದ್ದಾಟ… ಹಲವು ಭಾರೀ ಸೂಕ್ತ ಶಿಸ್ತಿನ ಕ್ರಮ ಜರುಗಿಸಿದ್ದರು. ಬಡ್ತಿಗೆ ಎಳ್ಳು ನೀರು ಬಿಟ್ಟು ಬರೀ ಎಳನೀರು ಕುಡಿದು ಜೀವನ ಸಾಗಿದ್ದರೂ ಮಾರಿಕಣ್ಣು ಹೋರಿ ಮ್ಯಾಲೆ ಎಂಬಂತೆ, ಇವರ ಮೇಲೆ ನಮ್ಮ ಡಿ.ಸಿ.ಯವರದ್ದು ಹದ್ದಿನ ಕಣ್ಣು ಸುಮಾರು ಒಂದು ನೂರು ಆಪಾದನಾ ಪತ್ರಗಳನ್ನು ನೀಡಿ, ಚಿತ್ರ ಹಿಂಸೆ ನೀಡಿ, ನೆಲಕಚ್ಚುವಂತೆ ಮಾಡಿದ್ದರು! ಭಪ್ಪರೇ… ಹೆಂಡ ಕುಡಿಯುವ ದೇವರಿಗೆ ಹೇಲು ತಿನ್ನೋ ಪೂಜಾರಿ ಕತೆಯಂತೆ ಇವರಿಬ್ಬರ ಕತೆ ಮುಗಿಯದ ವ್ಯಥೆ ಅತ್ತೆ ಸೊಸೆಯ ಬಂಧ ಅನುಬಂಧ ಮರೆಯಲಾಗದ ಬಂಧವಾಗಿತ್ತು!

ಇನ್ನು ಪುತ್ತೂರು ಡಿಪೋದಲ್ಲಿ ಸಂತೋಷ್ ಕುಮಾರ್ ಶೆಟ್ರು ಡಿಪೋ ಮ್ಯಾನೇಜರ್ ಆಗಿದ್ದರು. ಯಾಕೋ ಎರಡು ಮೂರು ತಿಂಗಳುಗಳಲ್ಲಿ ಅವರು ವರ್‍ಗ ಮಾಡಿಸಿಕೊಂಡು ಹೋದರು. ಅವರು ಬದಲಿಯಾದ ಜಾಗದಲ್ಲಿ ಬಡ್ತಿ ಹೊಂದಿ ಕನಕಪುರದ ಬಸವರಾಜಪ್ಪ ಬಂದರು. ಇವರು ಹಳಬರು, ಪಾತಾಳದಿಂದ ಬಂದವರು.

ಪುತ್ತೂರು ಅಂದರೆ… ಅಂಥಾ ಸಿದ್ದಿ ಪ್ರಸಿದ್ದಿ ಇರಲಿಲ್ಲ. ನಮ್ಮ ಡಿಪೋ ಇರುವುದರಿಂದ ಪುತ್ತೂರು ಹೆಸರುವಾಸಿಯೆನಿಸಿತ್ತು. ಜನದಟ್ಟಣೆ ತೀರಾ ವಿರಳವಾದ ತಾಲ್ಲೂಕು ಕೇಂದ್ರ.

ಇಲ್ಲೇ ಒಂದಂಶವೊಂದನ್ನು ಸ್ಪಷ್ಟಪಡಿಸಬೇಕೆಂದಿದ್ದೇನೆ. ನನಗೆ ಮಂಗಳೂರು ಹೇಗೋ ಹಾಗೆಯೇ ಇಲ್ಲಿನ ಅಧಿಕಾರಿಗಳು ಸಿಬ್ಬಂದಿ ಜನ ಎಲ್ಲಾ ಹೊಸಬರೇ… ಬಂದಾಗ ಇದ್ದ ಲವಲವಿಕೆ, ಉತ್ತೇಜನ, ಬರು ಬರುತ್ತಾ… ಕಡಿಮೆಯಾಗಿತ್ತು ಎನ್ನುವುದಕ್ಕಿಂತ ಜೊತೆ ಜೊತೆಯಲಿ ಇದ್ದ ಅಧಿಕಾರಿಗಳೂ ಜನ್ರು ಸಿಬ್ಬಂದಿಯೆಲ್ಲಾ… ಮೊಸರಲ್ಲಿ ಕಲ್ಲು ಹುಡುಕಲು ಕಾಲು ಹಿಡಿದು ಎಳೆಯಲು ನನ್ನಿಂದೆ ಬಿದ್ದರೆಂಬುದು ನನ್ನ ಗಮನಕ್ಕೆ ಬಂತು. ಇದೂ ಬೇಸರದ ಸಂಗತಿಯಾಗಿತ್ತು. ಬೇಸರಕ್ಕೆ ನಮ್ಮಲ್ಲಿ ಬಹಳಷ್ಟು ಕಾರಣಗಳಿವೆ. ನಾನು ಮಾತ್ರ ಬೇಸರಗೊಳ್ಳುತ್ತಿರಲಿಲ್ಲ. ಒಬ್ಬರ ಕಂಡ್ರೆ ಒಬ್ಬರಿಗೆ ಆಗಲ್ಲ. ಬರೀ ಹಿತ್ತಾಳೆ ಕಿವಿಗಳು, ಕಿವಿ ಕಚ್ಚುವ ಅಧಿಕಾರಿಗಳು ಹಾಗಲಕಾಯಿ, ಬೇವಿನ ಕಾಯಿಗಳು. ಊಸರವಳ್ಳಿಗಳು, ಕೊಳಕಮಂಡಲಗಳು, ಎರಡು ತಲೆ ಹಾವಿನಂತವರು…

VII

ಇದೇ ವೇಳೆಯಲ್ಲಿ ಕೇಂದ್ರ ಕಛೇರಿ ಬೆಂಗಳೂರಿನ ಉನ್ನತಾಧಿಕಾರಿಗಳೊಬ್ಬರು ನಮ್ಮ ವಿಭಾಗದ ಪರಿವೀಕ್ಷಣೆಗೆಂದು ಬಂದರು. ಬರುವಾಗ ಕುಡುಗೋಲು ಕುಂಬಳ ಕಾಯಿ ಎರಡೂ ಜೊತೆಗೆ ತಂದಿದ್ದರು. ಅವರು ಮಂಗಳೂರು ಡಿಪೋದಲ್ಲಿ ಪರಿವೀಕ್ಷಣೆ ಕೈಗೊಂಡರು.

ನಾ ಪ್ರತಿ ತಿಂಗಳು ಡಿಪೋ ಪರಿವೀಕ್ಷಣೆ ಕೈಗೊಂಡು ಕಡಿಮೆ ಸಾರಿಗೆ ಆದಾಯ ತರುವ ನಿರ್‍ವಾಹಕರ ಹೆಸರು, ನಂಬರು, ಮಾರ್‍ಗದ ಹೆಸರು, ಸಂಖ್ಯೆ, ಇಪಿಕೆ‌ಎಂ, ಕಿಲೋ ಮೀಟರ್ ಇತ್ಯಾದಿ ವಿವರಗಳ ಯಾದಿಯನ್ನು ಪರಿವೀಕ್ಷಣೆ ಪುಸ್ತಕದಲ್ಲಿ ದುಂಡಗೆ ಷರಾ ಬರೆದು ಘಟಕ ವ್ಯವಸ್ಥಾಪಕರಿಗೆ, ಸಾರಿಗೆ ನಿರೀಕ್ಷಕರಿಗೆ ಕರೆದು ಮಾತನಾಡಿ, ಸೂಕ್ತ ಶಿಸ್ತಿನ ಕ್ರಮ ಜರುಗಿಸಲು ಹಾಗೂ ಕೈಗೊಂಡ ಕ್ರಮದ ಬಗ್ಗೆ ವರದಿಯನ್ನು ಮರು ಟಪಾಲಿನಲ್ಲಿ ಕಳಿಸಲು ಸೂಚಿಸಿ ಬರುತ್ತಿದ್ದೆ. ಯಿದು ನನ್ನ ಕರ್ತವ್ಯಗಳಲ್ಲಿ ಒಂದು ನೀತಿ, ನಿಯಮ, ಶಿಸ್ತಿಗೆ ಹೆಸರಾದವ… ನಾನೆಂದೂ ಮೈಗಳ್ಳನಾಗಿರಲಿಲ್ಲ. ಕರ್ತವ್ಯ ಮೊದಲು ಹಕ್ಕು ಆಮೇಲೆ ಫಲಿತಾಂಶ ನಂತರ ಎಂದು ನಂಬಿದವನು… ಒನ್ ಮ್ಯಾನ್ ಆರ್‍ಮಿಯಂತೆ ನನ್ನ ಬದುಕು, ಬರಹವಾಗಿತ್ತು ಮೃದು ಸ್ವಭಾವದವರು ಹೆಚ್ಚೆಚ್ಚು ಕಷ್ಟ ನಷ್ಟಗಳನ್ನು ಎದುರಿಸಬೇಕಾಗುತ್ತದೆ.

ಈ ಅಧಿಕಾರಿಯವರು ನನ್ನ ಪರಿವೀಕ್ಷಣೆ ಬಗ್ಗೆ ಗುಮಾನಿ ವ್ಯಕ್ತಪಡಿಸಿ, ಮೊಸರಲ್ಲಿ ಕಲ್ಲು ಹುಡುಕಲು… ನೀರಿನಲ್ಲಿ ಮೀನಿನ ಹೆಜ್ಜೆ ಹಿಡಿಯಲು, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಡಲು ಹೊರಟರು. ಇವರೊಬ್ಬ ವಾಮನನ ಪ್ರತಿ ರೂಪ. ಹೆಸರಿಗೆ ತಕ್ಕಂತೆ ನಡೆಯದಿದ್ದರೆ, ಹುಟ್ಟು ಹೇಗೆ ಸಾರ್ಥಕವಾಗಬೇಕೆಂಬಾ ಛಾಲತಿ ಇವರದು!

“ನೀವು ನಿರಂತರವಾಗಿ ಮೂರು ತಿಂಗಳಿಂದ ಈ ಕಂಡಕ್ಟರ್‌ನ ಬಗ್ಗೆ ಷರಾ ಬರೆದಿರುವಿರಲ್ಲಾ… ಏಕೆ? ಇದರ ರಹಸ್ಯ… ಉದ್ದೇಶವೇನು?” ಎಂದು ನನ್ನ ಪ್ರಶ್ನಿಸಿದರು. ಸಾರ್ ಇದರಲ್ಲಿ ದುರುದ್ದೇಶವಿಲ್ಲ. ನಾ ಸಹಜವಾಗಿ ಕಂಡಕ್ಟರ್‌ನ ಸುಧಾರಣೆಗಾಗಿ ಈ ರೀತಿ ಬರೆದಿರುವೆ! ಇದರಲ್ಲಿ ರಹಸ್ಯವೇನಿಲ್ಲ ಎಂದೆ. ಅವರು ಕೇಳುವುದಿರಲಿ, ಜೊತೆಗಿದ್ದ ಅಧಿಕಾರಿಗಳು ನಿಗಮದ ನಿಯಮವಿರುವುದೇ ಹಾಗೆಂದು ಹೇಳಲು ಅವರಿಗೆ ಮನಸ್ಸಿರಲಿಲ್ಲ….

ಒಂದು ವಾಹನ ಕೊಟ್ಟು ಮಂಗಳೂರಿನಲ್ಲಿ ಹುಡುಕಿಸಿ ಅದೇ ಕಂಡಕ್ಟರ್‌ನ ಹಿಡಿದು ತರಿಸಿದರು. ಆ ಕಂಡಕ್ಟರ್‌ನಿಗೆ ಇದೆಲ್ಲ ಹೊಸತು. ಅವನು ಬೆವತು ಹೋದ! ತೊದಲು ಬದಲು ಆದ. ಏನಾದರೇನು? ಅವನಿಗೊಂದು ಮನಃ ಸಾಕ್ಷಿಯಿದೆಯಲ್ಲವೇ? ಸತ್ಯ ಹೊರಗಿಟ್ಟ…

“ಏ ನೀ ಅಂಜದೆ ಅಳಕದೆ ಏನು ಜರುಗಿದೆಯೋ ಅದನ್ನು ಬರೆದು ಕೊಡು! ನಿನಗೆ ರಕ್ಷಣೆ ನಾನು ಕೊಡುತ್ತೇನೆ! ಈ ಯಲ್ಲಪ್ಪ ಕೆಕೆ ಪುರ ನಿನಗೆ ಭೇಟಿಯಾಗಲು, ಹಣ ಕೊಡಲು ಒತ್ತಾಯಿಸಿದ್ದಾನಲ್ಲವೇ? ಇಲ್ಲ ನಿನ್ನ ಹೆಸರು ಮೇಲಿಂದ ಮೇಲೆ ಈ ಪುಸ್ತಕದಲ್ಲಿ ಬರೆದು ನಿನ್ನ ಮರ್‍ಯಾದೆ ಹರಾಜು ಹಾಕುತ್ತೇನೆಂದು ಅಂಜಿಸಿರುವನಲ್ಲವೇ?” ಉನ್ನತಾಧಿಕಾರಿಗಳು ಪ್ರಶ್ನಿಸಿದರು.

‘ಅಬ್ಬಾ! ‘ಎಂಥಾ ಕಾಲ ಬಂತಲ್ಲಪ್ಪಾ?!” ಎಂದು ನಾ ತಲೆ ತಲೆ ಚಚ್ಚಿಗಂಡೆ. ಉಳಿದೆಲ್ಲ ಅಧಿಕಾರಿಗಳು ಗೊಂಬೆಯಂಗೆ ಕುಳಿತಿದ್ದರು. ಇವರಿಗೆಲ್ಲ ನನ್ನ ಸಾವು ಬೇಕಾಗಿತ್ತು! ನಾ ಕೆಟ್ಟರೆ ಕಣ್ಣೀಲಿ ನೋಡಬೇಕೆಂಬಾಸೆಯಲಿ ಕಾದು ಕುಳಿತಿದ್ದರು!

“ಸಾರ್ ನಾನವರನ ಈವತ್ತೇ ನೋಡಿರಾದು! ಅವರು ನನ್ನ ಎಂದೂ ಮಾತನಾಡಿಸಿಲ್ಲ. ನಾ ಅದೇ ಮಾರ್‍ಗವನ್ನು ಫಿಕ್ಸ್ ಮಾಡುತ್ತೇನೆ. ವಿದ್ಯಾರ್ಥಿಗಳ ಪಾಸು, ವೀಕ್ಲಿ ಪಾಸು, ಮಂಥ್ಲಿ ಪಾಸು… ಜಾಸ್ತಿ ಹೀಗಾಗಿ ಅದು ‘ಸಿ’ ಮಾರ್ಗವಾಗಿದೆ. ಅದಕ್ಕೆ ನನ್ನ ಹೆಸರು ರೆಡ್ ಜೋನ್‌ನಲ್ಲಿದೆ. ನಾ ಅಂಥವನಲ್ಲ. ನಾ ಯಾರಿಗೂ ಟೀ, ಕಾಫಿ ಕುಡಿಸುವನಲ್ಲ! ನನ್ನ ನಂಬಿ’ ಎಂದು ಕಂಡಕ್ಟರ್ ಕೈ ಜೋಡಿಸಿದ.

ಉಳಿದವರಿಗಿಷ್ಟೇ ಬೇಕಾಗಿತ್ತು! ಕ್ಷಣ ಯಾರಿಗೇ ಬೇಡಾದೆ! ನನ್ನನ್ನು ವಕ್ರ ದೃಷ್ಟಿಯಿಂದ ನೋಡಲು ಮೊದಲಾಗಿತ್ತು! ನನ್ನನ್ನು ಅಲ್ಲೇ ಬಿಟ್ಟು ಎದ್ದೆದ್ದು… ವಿಶ್ರಾಂತಿ ಗೃಹಕ್ಕೆ ಊಟ ಮಾಡಲು ಎಲ್ಲರೂ ಹೋದರು. ಯಿದೊಂದು ರೀತಿಯ ಅಸ್ಪೃಶ್ಯತಾಚಾರಣೆ ಜಮೀನ್ದಾರಿ ಪದ್ಧತಿ ಅಮಾನವೀಯ ಕೃತ್ಯ ಹೃದಯ ಹೀನರ ನಡಾವಳಿಕೆ ಬ್ರಿಟೀಶ್ ದಬ್ಬಾಳಿಕೆ… ಹೋಗುವಾಗ “ನೀನು ಬಾ” ಎಂದು ಹೇಳದೇ… ನಾಳೇ ಎಂಟು ಗಂಟೆಗೆಲ್ಲ ಇಲ್ಲೇ ಡಿಪೋದಲ್ಲಿರಲು ನನಗೆ ತಿಳಿಸಿ ಎಲ್ಲರೂ ಹೊರಟರು. ಕಂಬಳಿಯಲ್ಲಿ ಕಾಲ್ಮರಿಯಿಟ್ಟು ಹೊಡೆದಂಗೇ… ಇದಕ್ಕಿಂತ ಅವಮಾನ ಜೀವನದಲ್ಲಿ ಮತ್ತೊಂದಿರಲಾರದು! ಎಷ್ಟು ಕಲಿತರೇನು ಏನು ಪಾಸು ಮಾಡಿದರೇನು? ಏನಿದ್ದರೇನು? ಮನುಷ್ಯತ್ವವಿಲ್ಲದಾ ಮೇಲೆ… “ಛೀ ಛೀ” ಎಂದು ಉಗಿದೆ!. ಹ್ಯಾಪೆ ಮೊರೆ ಹೊತ್ತು ಮನೆ ತಲುಪಿದೆ.

VIII

ನನ್ನ ಮುಖ ನೋಡಿ ನನ್ನವಳು ‘ಏನಾಯ್ತು ರೀ?! ಮುಖವೆಲ್ಲ ಕಪ್ಪಿಡಿದು ಹೋಗಿದೆ. ಕಣ್ಣುಗಳು ಹಿಂಗಿ ಹೋಗಿವೆ. ತುಟಿಯೆಲ್ಲ ಒಣಗಿ ಲೊಟ್ಟೆಕಾಯಿಯಾಗಿದೆ. ಯಾಕ್ರೀ?’ ಎಂದಳು!

ಮೂವರು ಮಕ್ಕಳು ಗಾಬರಿ ಬಿದ್ದು ಓದಾದು ಬಿಟ್ಟು ಎದ್ದು ನನ್ನ ಹತ್ತಿರ ಬಂದರು. ನನಗೆ ಯಿದೆಲ್ಲ ಮಾಮೂಲಿನೇ… ದಿನಾ ಸಾಯೋರಿಗೆ ಚಿಂತಿಸಿ ಫಲವೇನೆಂದು ಅಂದುಕೊಳ್ಳಲು ಧೈರ್‍ಯ ಬರದೆ, ಅಳುವುದೊಂದೇ ಬಾಕಿ ಉಳಿದಿತ್ತು. ನಾನು ನಡೆದ ಕತೆಯೆನ್ನೆಲ್ಲ ವಿವರಿಸಿದೆ. ಕ್ಷಣ-ಎಲ್ಲರೂ ದಂಗು ಬಡಿದು ಕುಳಿತರು! ತುಸು ಸಮಯದ ಮೇಲೆ ನನ್ನವಳು…

‘ಥೂ ದರಿದ್ರಾ…! ನಿಮ್ ಡಿಪಾರ್ಟ್‌ಮೆಂಟೆಂದ್ರೆ ಮೆಂಟಲ್ ಹಾಸ್ಪಿಟಲ್ ಯಿಲ್ಲಿ ಅಧಿಕಾರಿಗಳೇ ಸರಿಯಿಲ್ಲ. ಏನಾದ್ರು ಇದ್ದದ್ದೇ…! ಛೀ ಛೀ… ತಪ್ಪಲ್ಲ… ಕತ್ತೆನೂ, ಕುದ್ರೆನೂ ಒಂದೇ… ಏನ್ ಬಂದಾತೋ ಹಾಳಾದವಿಗೆ…’ ಎಂದು ನಿಟ್ಟಿಕ್ಕಿಬಟ್ಟಿ ಸಾಪ್ಸಿದ್ಲು!

ತಿನ್ನಲು ಉಣ್ಣಲು ಮನಸು ಬರಲಿಲ್ಲ. ರಾತ್ರಿಯೆಲ್ಲ ನಿದ್ದೆಯಿಲ್ಲದೆ ಹಸಿವಿನಿಂದ ವಿಲವಿಲ ಒದ್ದಾಡಿದೆ. ನಮ್ಮಲ್ಲಿನ ಜನ ಜನರನ್ನು ಜನವೆಂದು ಕಾಣುತ್ತಿಲ್ಲ. ತಾವು ಕಳ್ಳರು ಸುಳ್ಳರು! ಬೇರೆಯವರನ್ನು ನಂಬರು! ಮೇಲೊಬ್ಬ ಕುಳಿತು ನೋಡುತ್ತಿರುವನೆಂಬ ಕನಿಷ್ಟ ಪಾಪ ಪ್ರಜ್ಞೆ ಕೂಡಾ ಇವರಿಗಿರಲಿಲ್ಲ…. ಹೀಗೆ ಏನೇನೋ… ಎಷ್ಟು ಹೊತ್ತು ಯೋಚಿಸಿ ಯೋಚಿಸಿ… ಸಿಕ್ಕಾಬಟ್ಟೆ ಪಕ್ಕೆ ಬದಲಿಸಿ ಬದಲಿಸಿ… ಸುಸ್ತಾಗಿ ಹೋದೆ.

ಯಾವಾಗ ನಿದ್ರೆ ಬಂತೋ… ಗೊತ್ತಿಲ್ಲ! ಅಂತೂ ಬೆಳಿಗ್ಗೆ ಬೇಗ ಎದ್ದು ನಿತ್ಯ ಕರ್‍ಮ ಪೂರೈಸಿ, ಒತ್ತಡದಲಿ ಜಳಕ ಮುಗಿಸಿ… ಹೊಟ್ಟೆಗೆ ಒಂದಿಷ್ಟು ತುರುಕಿ, ಅವಸರ ಅವಸರದಲಿ… ಬಸ್ ನಿಲ್ದಾಣಕ್ಕೆ ಭೇಟಿ ಕೊಟ್ಟೆ, ಅಲ್ಲಿನ ಸ್ವಚ್ಛತೆ, ಸಾರಿಗೆ ಕಾರ್‍ಯಾಚರಣೆಯನ್ನು ಗಮನಿಸಿ, ಅಲ್ಲೇ ಇದ್ದ ಡಿಪೋಕ್ಕೆ ಭೇಟಿ ನೀಡಿ, ಡಿಪೋ ಮ್ಯಾನೇಜರ್ ಒಂದಿಗೆ ಮಾತನಾಡಿ, ಸಾರಿಗೆ ಆದಾಯ, ಕಿಲೋ ಮೀಟರ್ ಕಾರ್ಯಚರಣೆ, ಇಪಿಕೆ‌ಎಂ, ಹೆಚ್ಚಿನ ಸಾರಿಗೆ ಆದಾಯವನ್ನು ಬರೆದಿಟ್ಟುಕೊಂಡು ಮತ್ತೊಮ್ಮೆ ಮಗದೊಮ್ಮೆ ಘಟಕ ವ್ಯವಸ್ಥಾಪಕರೊಂದಿಗೆ ಸೂಕ್ತ ವಿವರವಾಗಿ ಚರ್ಚಿಸಿ ಡಿಪೋದಲ್ಲೇ ಕಾಯುತ್ತಾ ಕಾಯುತ್ತಾ ತುದಿಗಾಲಲ್ಲಿ ಉಳಿದೆವು….

ಉನ್ನತಾಧಿಕಾರಿಗಳೂ ವಿಭಾಗೀಯ ನಿಯಂತ್ರಣಾಧಿಕಾರಿಗಳೂ ಡಿಪೋದತ್ತ ಬರಲೇ ಇಲ್ಲ! ನಾವೆಲ್ಲ ಡಿಪೋದಲ್ಲಿ ಅವರ ಆಗಮನಕ್ಕಾಗಿ ತುದಿಗಾಲಲ್ಲಿ ಬಕ ಪಕ್ಷಿಯಂಗೆ ನಿಂತು ಕಾಯುತ್ತಿದ್ದೆವು! ಬಂದರು ಬಂದರು…. ಹೋದರು ಹೋದರು… ಇದನ್ನೆಲ್ಲ ನೋಡುತ್ತಿದ್ದ ನಮಗೆಲ್ಲ… ಹುಲಿನ ತೋರಿಸಿ, ಇಲಿನ ಭೇಟೆಯಾಡಿದಂಗಿತ್ತು! ವೈಯಕ್ತಿಕ ಬೇಳೆ ಬೇಯಿಸಿಕೊಳ್ಳುವುದರಲ್ಲಿ ಇವರ ಆಸಕ್ತಿ ವಿನಹ ನಿಗಮದ ಪ್ರಗತಿ ಮಾತ್ರ ಯಾರಿಗೇ ಬೇಕಿರಲಿಲ್ಲ!

ನೌಕರಿಯೆಂದರೆ… ನಡೆದರೆ ಛಲೋ ನಡೆಯುತ್ತೇ… ಆಹಾ ನಡಿಲಿಲ್ಲ… ಬಕ್ಕು ಬಾರ್‍ಲು ಬಿದ್ದು, ಮಧ್ಯಾಹ್ನದಾಗೆ ಬಾನ ತೋಡಿ ದಂಗೇ… ಗೊನಿಗಿಕ್ಯಾಂತಲೇ ವಿಭಾಗೀಯ ಕಛೇರಿಗೆ ನಡೆದು ಅಲ್ಲಿ ಹಾಜರಾದೆ. ಅಷ್ಟರಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಕಛೇರಿಯಲ್ಲಿದ್ದರು! ಉನ್ನತಾಧಿಕಾರಿಗಳು ಯಾವಾಗಲೋ ರಸ್ತೆ ಮೂಲಕ ಬೆಂಗಳೂರಿಗೆ ಪ್ರಯಾಣಿಸಿದ್ದರು.

ಅಂಗೆ ಇಂಗೆ ಮಾಡಿ ವಾರ ಉರುಳಿತು!

X

ಒಂದು ದಿನ-ಮಡಿಕೇರಿ ಡಿಪೋದಲ್ಲಿದ್ದೆ. ವಿಭಾಗೀಯ ನಿಯಂತ್ರಣಾಧಿಕಾರಿಗಳಿಂದ ಫೋನು ‘ರೀ ಬರುವಾಗ ಸೂಳ್ಯ ಬಸ್ ನಿಲ್ದಾಣದಲ್ಲಿನ ಕ್ಯಾಂಟೀನ್‌ನ್ನು ಪರಿವೀಕ್ಷಣೆ ಮಾಡಿಕೊಂಡು ಬಾ’ ಎಂದರು.

ಮೇಲಾಧಿಕಾರಿಗಳ ಆದೇಶವೆಂದರೆ ನನಗೆ ಆರಂಭದಿಂದಲೂ… ಸ್ವರ್‍ಗಸಮಾನ. ವೇದ ಸಮಾನ.

ನಾ ಸೂಳ್ಯ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದೆ. ಕ್ಯಾಂಟೀನ್ ನಡೆಸುವ ಮಾಲೀಕರು ನಾ ನಿಮ್ಮ ಡಿ.ಸಿ.ಯವರಿಗೆ ಬಾಳ ಬೇಕಾದವನು, ಅವರಿಗೆ ತಿಳಿಸೇ ನಾ ಅಕ್ಕ ಪಕ್ಕ ಅಲ್ಪ ಸ್ವಲ್ಪ ಜಾಗೆಯನ್ನು ವಿಸ್ತರಿಸಿಕೊಂಡು ನಿಲ್ದಾಣದ ಘನತೆ ಗೌರವಕ್ಕೆ ತಕ್ಕಂತೆ ಲುಕ್ ಬರುವಂತೆ ಹೀಗೆ ನಾ ಚೆಂದ ಕಾಣಿಸಿದ್ದೇನೆ…! ಸುಮಾರು ಎರಡು ಲಕ್ಷ ಹೆಚ್ಚುವರಿಯಾಗಿ ಅಲಂಕಾರಗೊಳಿಸಿದ್ದೇನೆ. ನಿಮ್ಮ ನಿಯಮದಂತೆ ಹೆಚ್ಚುವರಿ ಮಾಸಿಕ ಹಣ ಭರಿಸಲು ಸಿದ್ಧನಿದ್ದೇನೆಂದು’ ವಿನಂತಿಸಿಕೊಂಡರು.

ನನಗೆ ಇದೆಲ್ಲ ದಿಗ್ಭ್ರಮೆ ಮೂಡಿಸಿತು . ನನ್ನ ಒಳ್ಳೆಯತನ, ಮುಗ್ಧತನ ಇಲ್ಲಿ ಹಿಂದಿನಂತೇ… ಕೆಲಸಕ್ಕೆ ಬರದಂತಾಗಿತು!

ತಿಳಿದೋ ತಿಳಿಯದೋ… ನಾನಿಲ್ಲಿ ತಪ್ಪು ಮಾಡಿದೆ. ತಕ್ಷಣ ಫೋನು ಮಾಡಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸಾರ್ ನಿಮ್ಮ ಹೆಸರು ಹೇಳುತ್ತಿದ್ದಾರೆ. ನಿಮ್ಮ ಹತ್ರ ಮಾತನಾಡಿರುವರಂತೆ ಹೆಚ್ಚುವರಿ ಹಣ ನಿಗಮಕ್ಕೆ ಸಂದಾಯಿಸುವುದಾಗಿ ಹೇಳುವರು! ಈಗ ನಾನೇನು ಮಾಡಲಿ?! ಇಲ್ಲಿಂದ ಹೊರಟು ನಾ ಬರಲೇ….?! ಎಂದು ಮಾತನಾಡಿದೆ.

ಇದು ಇವರಿಗೆ ಸರಿ ಬರಲಿಲ್ಲ. ನನ್ನ ನೇರ, ದಿಟ್ಟ, ಮಾತುಗಳಿಂದಾಗಿ ನನ್ನ ಮೇಲೆ ಮುನಿಸಿಗೊಂಡರು! ತಕ್ಷಣನೇ… ಫೈಲ್‌ನಲ್ಲಿ ನೀವು ಹಾಗಂತಾ ವಿವರವಾಗಿ ಮಂಡಿಸಿ ಆರ್‍ಡರ್ ಮಾಡೋಣವೆಂದು ಯಿಲ್ಲಿಗೆ ಬನ್ನಿಯೆಂದು ನನಗೆ ಅಂದರು.

ನಾ ನಂಬಿದೆ ದೊಡ್ಡವರ ಸಹವಾಸವೆಂದು ತೆಪ್ಪಗಾದೆ. ವೇಗವಾಗಿ ಮಂಗಳೂರಿನತ್ತಾ… ಪ್ರಯಾಣ ಬೆಳೆಸಿದೆ.

ನಾ ಮಂಗಳೂರಿಗೆ ಬಂದೆ! ಬಂದವನೇ… ವಿಭಾಗೀಯ ನಿಯಂತ್ರಣಾಧಿಕಾರಿಗಳ ಅವರ ಮನೆಯಲ್ಲಿ ಕಂಡು, ಸತ್ಯ ಸಂಗತಿಯನ್ನು ಮತ್ತೊಮ್ಮೆ ವರದಿ ಮಾಡಿದೆ.

ಅವರು ಮುಖ ತಿರಿವಿ… ‘ಆಯ್ತು ನಾಳೆ ಫೈಲ್ ಮೂವ್ ಮಾಡಿ’ ಎಂದರು! ನಾ ಮಾರನೆಯ ದಿನ ಕಛೇರಿಯಲ್ಲಿ… ಸಂಕ್ಷಿಪ್ತವಾಗಿ ಷರಾ ಬರೆದು ಆದೇಶ ಕೋರಿದೆ. ಅದೇನಾಯ್ತೋ ಏನೋ… ಫೈಲ್ ಅವರೇ ಇಟ್ಟುಕೊಂಡು ‘ಇದೆಲ್ಲದ್ದಕ್ಕೆ ನೀವೇ ಕಾರಣರು. ನೀವು ಮಡಿಕೇರಿಗೆ ಹೋಗಿ ಬರುವಾಗ ಕ್ಯಾಂಟೀನ್ ಬೆಳವಣಿಗೆಯನ್ನು ಕಂಡೂ ಕಾಣದಂತೇ ಇದ್ದು ನೀವು ಅವರೊಂದಿಗೆ ಷಾಮೀಲಾಗಿ, ನಿಗಮಕ್ಕೆ ನಷ್ಟ, ಕಳಂಕ ತರುವಲ್ಲಿ ನಿಮ್ಮ ಪಾತ್ರವಿದೆ. ನಿಮ್ಮ ಮೇಲೆ ಏಕೆ ಶಿಸ್ತಿನ ಕ್ರಮ ಜರುಗಿಸಲು ವರದಿ ನೀಡಬಾರದು?’ ಎಂದು ಏಕದಮ್ಮಾಗಿ ಕಾರಣ ಕೇಳುವ ನೋಟೀಸ್ ನೀಡಿ ಪ್ರಚಾರ, ಅಪ ಪ್ರಚಾರದಲ್ಲಿ ತೊಡಗಿದರು.

ನಾ ಅವಕ್ಕಾಗಿ ಹೋದೆ. ಇದೆಲ್ಲ ನನಗೆ ಹೊಸದು. ನನ್ನ ಒಳ್ಳೆಯತನ ನನಗೆ ಮುಳುವಾಗಿತ್ತು. ನನ್ನನ್ನು ಬಕರ ಮಾಡಿ, ಕೋತಿ ಮಾಡಿ, ಕುಣಿಸ ತೊಡಗಿದರು. ‘ಯಲ್ಲಪ್ಪನವರು ಇದರಲ್ಲಿ ಸಸ್ಪೆಂಡ್ ಅಲ್ಲ ಡಿಸ್ಮಿಸ್ ಆಗಿಬಿಡ್ತಾರೆಂದು’ ಸುದ್ದಿನೂ ಹಬ್ಬಿಸಿದರು!

ಇದಕ್ಕಿಂತ ಚಿತ್ರ ಹಿಂಸೆ, ನರಕ, ಬೇರಿಲ್ಲ ಅನಿಸಿತು. ಕಂಡೋರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡೋ ಜನರಿರುವಾಗ ನನ್ನಂಥ ಮುಗ್ಧ, ಅಮಾಯಾಕ, ಪಾಪದವನು ಬಲಿಯಾಗದೆ ಇನ್ನೇನು?! ನನ್ನನ್ನು ಹರಕೆಯ ಕುರಿ ಮಾಡಿದರಲ್ಲಾ.. ಎಂದು ದುಃಖಿಸತೊಡಗಿದೆ.

ಸೂಳ್ಯ ಬಸ್ ನಿಲ್ದಾಣದಲ್ಲಿ ಸಾರಿಗೆ ನಿಯಂತ್ರಕರಿರುತ್ತಾರೆ. ಅದು ಪುತ್ತೂರು ಡಿಪೋ ಮ್ಯಾನೇಜರ್ ವ್ಯಾಪ್ತಿಗೆ ಬರುವ ತಾಣ. ಅವರನ್ನೆಲ್ಲ ಬಿಟ್ಟು ಈಗ ನನ್ನ ಹಿಡುಕೊಂಡ್ರು…

ಈ ನಮ್ಮ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸ್ವಂತಿಕೆಯಿರಲಿಲ್ಲ ಅನುಭವವಿರಲಿಲ್ಲ!! ಅವರಿವರು ಹೇಳಿದಂತೆ ಕುಣಿಯುತ್ತಿದ್ದರು. ಸೂಸು ಮಾಡಲು ಮೇಲಿನವರನ್ನು ಕೇಳುತಿದ್ದರು. ಡಿಪೋ ಮ್ಯಾನೇಜರ್ ಆಗಿ ಕೆಲಸ ಮಾಡಿರಲಿಲ್ಲ. ಎಲ್ಲಾ ವಿಚಾರಗಳಲ್ಲಿ ಬಿಗ್ ಜೀರೋ… ಕೇಂದ್ರ ಕಛೇರಿಯಲ್ಲಿನ ಬೆಂಗಳೂರಿನ ಒಂದಿಬ್ಬರು ಅಧಿಕಾರಿಗಳ ಕುಮ್ಮಕ್ಕಿನಿಂದಾಗಿ…. ಕಾಗದದ ಕುದುರೆ ಓಡಿಸಿ… ಓಡಿಸಿ ಅಡ್ಡಾದಿಡ್ಡಿಯಾಗಿ ಅಧಿಕಾರ ಚಲಾಯಿಸುತ್ತಿರುವುದು ಸಿಬುರು ಕೆತ್ತು ಕೆಲಸ… ನನ್ನ ಗಮನಕ್ಕೆ ಯಾವಾಗಲೋ… ಬಂದಿತ್ತು!! ಇವರು ಚಲಾವಣೆಯ ನಾಣ್ಯವೆಂದು ಕಂಡು ಕಾಣದಂತೆ ಸಮ್ಮನಿದ್ದೆ.

ನಾ ನಮ್ಮ ನಿರ್ದೇಶಕರು ಸಂಚಾರ, ಮುಖ್ಯ ಸಂಚಾರ ವ್ಯವಸ್ಥಾಪಕರು, ಉಪಮುಖ್ಯ ಸಂಚಾರ ವ್ಯವಸ್ಥಾಪಕರಿಗೆ ಸತ್ಯ ಸಂಗತಿಯನ್ನು ತಿಳಿಸಿದೆ. ಕೋತಿ ತಿಂದು ಮೇಕೆ ಮೂತಿಗೆ ಒರೆಸಿದ ಕಹಿಯನ್ನು ನಿರೂಪಣೆ ಮಾಡಿ ಕಣ್ಣೀರಿಟ್ಟೆ.

ನರಿಯ ಕೂಗು ಗಿರಿಗೆ ಮುಟ್ಟಲಿಲ್ಲ. ಯಾರಿಗೆ ಯಾರಿಲ್ಲ ಎರವಿನ ಸಂಸಾರ! ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ… ಎಂದು ಹಗಲು ಇರುಳು ಚಿಂತಿಸಿ ಚಿಂತಿಸಿ ಊಟ, ತಿಂಡಿ, ನಿದ್ರೆ ದೂರವಾದವು. ಇದರಲ್ಲಿ ಏನೋ ಸಂಚು ಇದೆ. ಇದನ್ನು ನನ್ನ ತಲೆಗೆ ಕಟ್ಟುವರೆಂಬ ಗುಮಾನಿ ನನಗೆ ಬಂತು!

ಉಪ ಮುಖ್ಯ ಸಂಚಾರ ವ್ಯವಸ್ಥಾಪಕರು, ವಾಣಿಜ್ಯ ಶಾಖೆ ಕೇಂದ್ರ ಕಛೇರಿ ಬೆಂಗಳೂರು ಇವರು ಸೂಳ್ಯ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ, ನನ್ನ ವಿರುದ್ಧವಾಗಿಯೇ ಸಖತ್ತಾಗಿ ಪೋಣಿಸಿ ಕೈ ಬಿಟ್ಟ. ವಾಣಿಜ್ಯ ಮಳಿಗೆಗಳ ಸಂಪೂರ್ಣ ಉಸ್ತುವಾರಿ, ನಿರ್ವಹಣೆ ವಿಭಾಗೀಯ ಸಾರಿಗೆ ಅಧಿಕಾರಿಯವರಾದ ಯಲ್ಲಪ್ಪ ಕೆಕೆ ಪುರ ಅವರದ್ದು. ಅವರು ಸಮರ್ಪಕವಾಗಿ ಕಾರನಿರ್ವಹಿಸಿಲ್ಲ. ಇದರ ನಷ್ಟಕ್ಕೆ ಇಷ್ಟೆಲ್ಲ ಗೊಂದಲಕ್ಕೆ ಇವರೇ ಹೊಣೆಗಾರರು ಜವಾಬ್ದಾರರು ಇವರ ಮೇಲೆ ಶಿಸ್ತಿನ ಕ್ರಮ ಜರುಗಿಸಲು ಕೋರಲಾಗಿದೆಯೆಂದು ವಿವರವಾದ ವರದಿಯನ್ನು ವ್ಯವಸ್ಥಾಪಕ ನಿರ್ದೇಶಕರಿಗೆ ಸಲ್ಲಿಸಿದರು.

ಈ ಮನುಷ್ಯ ನನಗೆ ಬೇಕಾದವ, ಬಳ್ಳಾರಿ ಕಡೆಯವ… ಜೊತೆ ಜೊತೆಗೆ ಕರ್ತವ್ಯ ನಿರ್ವಹಿಸಿ, ಆತ್ಮೀಯರಾಗಿದ್ದವರು. ಇವನಿಗಿಂತ ನಾನು ಮೊದಲು ಡಿ.ಟಿ.ಓ. ಆದವನನ್ನು ಹಿಂದೆ ತಳ್ಳಿ ನನಗೇ ಈಗ ಬತ್ತಿ ಇಟ್ಟ! ಇಲ್ಲಿ ವೃತ್ತಿ ಮತ್ಸರವಿತ್ತು. ಸಂಚು, ಜಾತಿಯತೆ ಇತ್ತು.

ನನಗಂತೂ ಆಕಾಶವೇ ಕಳಚಿ ತಲೆ ಮೇಲೆ ಬಿತ್ತು. ವಿಪರೀತ ಒತ್ತಡಕ್ಕೆ, ಮಾನಸಿಕ ತುಮುಲಕ್ಕೆ ಸಿಲುಕಿದೆ. ನನ್ನ ಪರವಾಗಿ ಯಾರೊಬ್ಬರೂ ಇಲ್ಲವಾಗಿತ್ತು. ಏಕಾಂಗಿಯಾಗಿ ಸಮರ ಸಾರಿದೆ. ನನಗೆ ಸಮಾಧಾನ ಹೇಳೋರು ಇಲ್ಲ. ದಾರಿ ತೋರಾರೂ ಇಲ್ಲ. ಸೋಲು ಕೂಡಾ ನನಗೆ ಪಾಠ ಮಾಡತೊಡಗಿತು.

ಒಂದು ದಿನ-ವಿಭಾಗೀಯ ನಿಯಂತ್ರಣಾಧಿಕಾರಿಗಳು ಕಛೇರಿಯಲ್ಲಿ ಗುಪ್ತವಾಗಿ ತುರ್ತಾಗಿ ಅಧಿಕಾರಿಗಳ ಸಭೆ ಕರೆದು ಇವತ್ತು ರಾತ್ರಿ ಹನ್ನೆರೆಡು ಘಂಟೆಗೆ ಸೂಳ್ಯದಲ್ಲಿರುವ ಕ್ಯಾಂಟೀನ್‌ ಅನ್ನು ಧ್ವಂಸಮಾಡಿ ಬರಬೇಕು. ಒಂದ್ ಚೂರು ಮೆಸೇಜ್ ಲಿಕೇಜ್ ಆಯ್ತೋ ನಾ ಬಿಡಲ್ಲ… ಯೀಗ ಇದರ ನೇತೃತ್ವವನ್ನು ಯಲ್ಲಪ್ಪ ಕ್ಕೆ ಪುರ ವಹಿಸಿಕೊಳ್ಳಬೇಕು. ಇದೆಲ್ಲ ಅಚಾತೂರ್‍ಯ ಇವರಿಂದಲೇ ಆಗಿರುವುದೆಂದು ಎಲ್ಲರ ಎದುರಿಗೆ ಮತ್ತೆ ಮತ್ತೇ ವಾದಿಸತೊಡಗಿದರು! ಗರಗಸದಂತೇ… ಆಡಿದ್ದೇ ಆಡೋ ಕಿಸ್‌ಬಾಯಿ ದಾಸನಂತೇ… ಭೈರಿಗೆ ಹಿಡಿದರು! ಉಳಿದ ಅಧಿಕಾರಿಗಳೂ ಅವರ ಕಡೆಗೇ… ಇದ್ದರು! ಅಧಿಕಾರ, ಹಣ, ಜನ ಬಲವಿರುವರ ಕಡೆಗಾದರು! ಗೆದ್ದೆತ್ತಿನ ಬಾಲ…

ದೇವರ ನಾಡಿನಲ್ಲಿ ಕೆಲವರು ದೆವ್ವಗಳ ರೂಪದಲ್ಲಿ ಸೇರಿಕೊಂಡಿದ್ದರು. ಜೀವಂತ ಜನರ ಜೀವ ಹಿಂಡಿ ಹಿಂಡಿ ಹಿಪ್ಪೆ ಮಾಡುತಿದ್ದರು. ಹುಚ್ಚರ ಸಂತೆಯಲಿ ಹೆಚ್ಚಿಗೆ ಜೀವ ತೆಗೆದವರೇ ಶೂರರು ಧೀರರೆಂಬಂತಾಗಿತ್ತು!

ರಾತ್ರಿ ಊಟ ತಿಂಡಿ ನಿದ್ರೆ ಬಿಟ್ಟು… ಐದಾರು ಜನ ಅಧಿಕಾರಿಗಳು ಡಿಪೋ ಮ್ಯಾನೇಜರ್ ಪುತ್ತೂರು ಅವರೆಲ್ಲ ಸೇರಿಕೊಂಡು ಸೂಳ್ಯ ಬಸ್ ನಿಲ್ದಾಣಕ್ಕೆ ಕಳ್ಳರಂತೆ ಹೋಗಿ ಕ್ಯಾಂಟಿನ್‌ನ್ನು ನೆಲ ಸಮ ಮಾಡಿ, ಇನ್ನೇನು ಹೊರಡಬೇಕು! ಅಷ್ಟರಲ್ಲಿ ಕ್ಯಾಂಟಿನ್ ಕಡೆಯವರಿಗೆ ತಿಳಿದಿದೆ… ಆವತ್ತು ಅಲ್ಲಿ ಯಕ್ಷಗಾನ ಮೇಳವಿತ್ತು ಅಲ್ಲಿಂದ ಬಂದರು… ಗುಂಪು ಸೇರಲು ನಮ್ಮನ್ನು ಎದುರಿಸಲು – ಹಿಡಿಯಲು ಓಡೋಡಿ…. ಮುಂದಾದರು. ನಾವೆಲ್ಲ “ಭರ್” ಎಂದೂ ಮಂಗಳೂರಿನತ್ತ ಬಂದೇ ಬಿಟ್ಟೆವು! ಬೈ ಚಾನ್ಸ್ ಸಿಕ್ಕಿದ್ರೆ ನಮ್ಗು ಹೆಣ ಬೀಳುತ್ತಿತ್ತು… ಅವರೆಲ್ಲ ಸ್ಥಳೀಯ ಜನರು ಕೋಟ್ಯಾಧಿಪತಿಗಳು! ಪ್ರಭಾವಶಾಲಿಗಳಿದ್ದರು! ಹೊಸದಾಗಿ ನಿರ್ಮಾಣವಾಗಿದ್ದ ಕ್ಯಾಂಟಿನ್ ನಿರ್‍ನಾಮಕ್ಕೆ ನಾನೇ ಕಾರಣವೆಂದು ಎಲ್ಲರಿಗೆ ಡಿ.ಸಿ.ಯವರೇ ಸಾರಿದರು.

ನ್ಯಾಯವಾಗಿ ಯೀ ಪ್ರಕರಣವನ್ನು ಇಷ್ಟಕ್ಕೆ ಮುಗಿಸಬಹುದಿತ್ತು. ಆದರೆ ಬೇಕಂತಲೇ ಇದನ್ನು ಹನುಮನ ಬಾಲದಂತೆ ಬೆಳೆಸಿದರು.

ಇದು ಇಷ್ಟಕ್ಕೆ ಮುಗಿಲಿಲ್ಲ! ಒಳ ಒಳಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ವರದಿಯನ್ನು ವಿವರವಾಗಿ ತಯಾರಿಸಿ, ಅದಕ್ಕೆ ಉಪ್ಪು, ಸೊಪ್ಪು, ಎಣ್ಣೆ, ಬೆಣ್ಣೆ, ಸುಣ್ಣ ಸೇರಿಸಿ ಒಗ್ಗರಣೆ ಕೊಟ್ಟು… ಒಂದಿಬ್ಬರು ಅಧಿಕಾರಿಗಳ ಸಾಕ್ಷಿ, ಪುರಾವೆ, ಬೆಂಬಲವಾಗಿ ಹೇಳಿಕೆ ಪಡೆದು, ಲಕ್ಷಾಂತರ ರೂಪಾಯಿಯ ವಾಣಿಜ್ಯ ಶಾಖೆಯ ಹಣ ಬರುವುದನ್ನು ತಪ್ಪಿಸಿರುವರೆಂದೂ… ಇವೆಲ್ಲ ಅನಾಹುತದ ಬೆಳವಣಿಗೆಗೆ ಯಲ್ಲಪ್ಪ ಕೆಕೆ ಪುರ ಅವರೇ ಹೊಣೆಗಾರರು, ಇವರನ್ನು ಅಮಾನತ್ತುಗೊಳಿಸಲು ಕೋರಿದೆಯೆಂದು ವರದಿ ಬೆಂಗಳೂರಿಗೆ ಹೋಗಿತು! ಎಲ್ಲ ಹಂದಾಗುಂದಿ ದರ್ಬಾರ್! ದಿಲ್ಲಿ ತೊಘಲಕ್ ದರ್ಬಾರ್. ಆನೆ ತುಳಿದದ್ದೇ ದಾರಿ, ಅಧಿಕಾರ, ಹಣ, ಧರ್ಮ ಇದ್ದವರ ಮಾತೇ ಮಾತು…. ಬೆಂಗಳೂರಿನಲ್ಲಿ ಇವರ ಮಾತು ನಡೆಯುತ್ತಿತ್ತು… ಇತ್ತ-ಎಲ್ಲ ಅಧಿಕಾರಿಗಳು ನನ್ನ ಅಮಾನತ್ತು ಆಜ್ಞೆಗಾಗಿ ತುದಿಗಾಲಲ್ಲಿ ಕಾಯುತ್ತಾ ನಿಂತರು. ತಿನ್ಲಿಲ್ಲ ಉಣ್ಣಲಿಲ್ಲ ತಲೆದಂಡ ಗ್ಯಾರಂಟಿ ಅನಿಸಿತು. ಇಷ್ಟು ದಿನ ಶ್ರಮಿಸಿದ್ದು ವೇಸ್ಟ್ ಅನಿಸ್ತು!

ಅವರವರಲ್ಲೇ… ಯಲ್ಲಪ್ಪ ಕೆಕೆ ಪುರ ಅವರು ಅಮಾನತ್ತೇನು…?! ಯೀ ಪ್ರಕರಣದಲ್ಲಿ ವಜಾನೇ ಆಗುವರು…! ಎಂದು ಚಪ್ಪಾಳೆತಟ್ಟಿ ನಕ್ಕರು.

ಒಂದು ವಿಶ್ವವಿದ್ಯಾಲಯದಿಂದ ಬಹಳ ಕಷ್ಟಪಟ್ಟು, ಬಲು ಇಷ್ಟಪಟ್ಟು, ಬೆನ್ನು ಕಳಕೊಂಡು, ಹಂಗೇ ಕಣ್ಣು ಕಳಕೊಂಡು, ಡಾಕ್ಟರ್ ಪದವಿ ಪಡೆದಿರುವನನ್ನು ಅಪರಾಧಿ, ತಪ್ಪಿತಸ್ಥ…. ಕೆಲಸಕ್ಕೆ ಬರದವನೆಂದೂ… ಅಪ್ರಮಾಣಿಕನೆಂದೂ… ಸಾಬೀತು ಪಡಿಸಲು ಇವರೆಲ್ಲ ಹೊಂಚು ಸಂಚು ಮಿಂಚು… ಕುತಂತ್ರ ರೂಪಿಸಿರುವುದಕ್ಕೆ ಮಮ್ಮಲ ಮರುಗಿದೆ. ನನಗೆ ಯಾರು ದಿಕ್ಕು ತಾಯಿ, ಸಾಕ್ಷಿ ಪುರಾವೆ… ಇಲ್ಲವಪ್ಪೋ ಎಂದು ನನ್ನಷ್ಟಕ್ಕೆ ನಾನು ಕೂಗಿಕೊಂಡೆ!

ನಾ ಯಾರನ್ನು ದೈವವನ್ನು ಹಳಿಯಲಿಲ್ಲ. ನನ್ನೊಂದಿಗೆ ದೇವರೆಂಬಂತೆ ನಗುವಿತ್ತು. ಆ ನಗು ಮಾಸಲಿಲ್ಲ! ಆ ದೇವರೆಂದೂ ನನ್ನ ಕೈಬಿಡಲಿಲ್ಲ. ಬೆಂಗಳೂರು ಕೇಂದ್ರ ಕಛೇರಿಯಿಂದ ಆಪಾಧನಾ ಪತ್ರ ಮಾತ್ರ ಬಂದಿತು! ನಾನು ಸತ್ಯ ಸಂಗತಿಯನ್ನು ವಿವರಿಸಿ ಲಿಖಿತವಾಗಿ ಅಹವಾಲು ಸಲ್ಲಿಸಿದೆ. ನಾನೇನೋ… ಮಾಡಬಾರದ ಮಹಾಪರಾಧವನ್ನು ಮಾಡಿರುವೆನೆಂಬಂತೇ ನನ್ನ ಎಲ್ಲರೂ ಬಿಂಬಿಸಿದರು. ಬಹಿಷ್ಕರಿಸಿದರು. ಅಸ್ಪೃಶ್ಯನಂತೆ ದೂರ ಬಹುದೂರವಿಟ್ಟರು! ಯೀ ಜನ ಎಷ್ಟು ದೊಡ್ಡ ನೌಕರಿಯಲ್ಲಿದ್ದರೇನು? ದೊಡ್ಡ ಸಂಬಳ ಪಡೆದರೇನು? ಮನುಶ್ಯತ್ವವಿರಲಿಲ್ಲ. ಹೆಬ್ಬಟ್ಟಿನ ಗುರುಗಳಂತೆ ವರ್ತಿಸುತ್ತಾ ಇರುವುದಾ ಕಂಡೆ.

ನಾ ಏಕಾಂಗಿಯಾದೆ. ಮಮ್ಮಲ ಮರುಗಿದೆ. ಹಗಲು ರಾತ್ರಿ ಊಟ, ತಿಂಡಿ, ನಿದ್ರೆ ದೂರವಾದವು.

ಹೌದು! ನನಗೆ ಬಡ್ತಿ ಪತ್ರ ಬರಬೇಕಾಗಿತ್ತು. ಆದರೆ ಗ್ರಹಚಾರ… ದೋಷಾರೋಪಣ ಪತ್ರ ಸ್ವೀಕರಿಸಿದೆ. ಸದ್ಯ ಅಮಾನತ್ತು ಆದೇಶ ಬರಲಿಲ್ಲವಲ್ಲಾ ಪುಣ್ಯ ಅಲ್ಪ ಸ್ವಲ್ಪ ಮರ್‍ಯಾದೆ, ಘನತೆ, ಗೌರವ ಮಿಗಿಲಿತೆಂದೇ ನಾನು ತರ್ಕಿಸಿದೆ.

ಯಿಲ್ಲಿ ಯೀ ನೆಲದಲ್ಲಿ ನಾವು ತಪ್ಪು ಮಾಡಲೇಬೇಕಂತಿಲ್ಲ. ತಪ್ಪು ಮಾಡದಿದ್ದರೂ ಶಿಕ್ಷೆ ಅನುಭವಿಸಲು ನಾವೆಲ್ಲ ಸಾಧ್ಯವೆಂದು ಖಾತರಿಸಿಕೊಂಡೆ ಹಸಿಕಟ್ಟಿಗೆ ಬಿಸಿ ಕಟ್ಟಿಗೆ ಎರಡೂ ಸುಡುವಂತೆ, ನನಗೆ ಶಿಕ್ಷೆ! ಆಹಾ ಏನೋ ಗ್ರಹಚಾರ ಕಾದಿದೆಯೆಂದೂ ಟೈಮು ಸರಿಯಿಲ್ಲವೆಂದೂ… ತರ್ಕಿಸಿದೆ. ನನ್ನನ್ನು ವ್ಯವಸ್ಥಿತವಾಗಿ ಖೆಡ್ಡಕ್ಕೆ ಕೆಡವಿದರು! ನನಗಿಂತಾ ಗತಿ ಬರುತ್ತದೆಂದು, ಪಾತಾಳಕ್ಕಿಳಿಸಿ ಕಣ್ಣೀರು ತರಿಸಿ ಅಟ್ಟ ಹಾಸದಿ ಮೆರೆಯುವರೆಂದೂ ನಾನು ಭಾವಿಸಿರಲಿಲ್ಲ.

ಆದರೂ ನಾನು ಧೈರ್‍ಯದಿ… ದಾಖಲೆ ಸಮೇತವಾಗಿ, ಸಾಕ್ಷಿ, ಪುರಾವೆ ಮಾಹಿತಿಯೊಂದಿಗೆ ಪ್ರಾಮಾಣಿಕತೆಯೊಂದಿಗೆ ವಿವರಿಸಿ, ಹತ್ತು ಪುಟಗಳ ವಿವರಣೆ ಸಲ್ಲಿಸಿದೆ.

ಯೀ ವೇಳೆಯಲ್ಲಿ ಅಧಿಕಾರಿಗಳಿಗೆ ಅದರಲ್ಲೂ ನಮ್ಮಂಥಾ ದೀನ ದುರ್ಬಲರಿಗೆ ಬಲು ಕೆಟ್ಟ ಕಾಲವಾಗಿತ್ತು… ಬೆಂಗಳೂರಿನ ಕೇಂದ್ರ ಕಛೇರಿಯ ಉನ್ನತಾಧಿಕಾರಿಗಳು ಬಲು ಕ್ರೂರವಾಗಿ ನಡೆದುಕೊಳ್ಳುತ್ತಿದ್ದರು. ಸರ್ವಾಧಿಕಾರ ಧೋರಣೆ ಇತ್ತು. ನಾಲ್ಕು ವರ್ಷ ನರಕ ಕಾಣಿಸಿದ್ದರು. ಪ್ರಗತಿ ಶೂನ್ಯ. ನಾನೇನೋ ಭಾರೀ ತಪ್ಪು ಎಸಗಿರುವನೆಂಬಂತೆ ನನ್ನನ್ನು ದೂರೀಕರಿಸಿ ದೂಷಿಸತೊಡಗಿದರು. ದಿನದ ೧೪ ಗಂಟೆ ದುಡಿದೆ, ತಲೆ ದಂಡ ತಪ್ಪಲಿಲ್ಲ. ಸಾರಿಗೆ ನಿಗಮದಲ್ಲಿ ಡಾಕ್ಟರ್‌ರೇಟ್ ಪಡೆದವನು ನಾನೊಬ್ಬನೇ ಆಗಿದ್ದೂ ಇವರಿಗೆಲ್ಲ ಬೇಸರವನ್ನುಂಟು ಮಾಡಿತ್ತು!

ನಾ ಕಳಿಸಿದ ಸಮಜಾಯಿಷಿ ಸೂಕ್ತವಿಲ್ಲವೆಂದೂ ನಿವೃತ್ತ ನ್ಯಾಯಾಧೀಶರ ಸಮ್ಮುಖದಲ್ಲಿ ವಿಚಾರಣೆಗೆ ಹಾಜರಾಗುವುದೆಂದು ಬೆಂಗಳೂರಿನ ವ್ಯವಸ್ಥಾಪಕ ನಿರ್ದೇಶಕರು ನನಗೊಂದು ಜ್ಞಾಪನಾ ಪತ್ರ ಜಾರಿಗೊಳಿಸಿದರು. ಅಬ್ಬಾ! ಅಂಥಾ ತಲೆ ತಲೆ ಕೊಡವಿಕೊಂಡೆ. ಕಡ್ಡಿನಾ ಗುಡ್ಡ ಮಾಡಲು, ಬಡ್ತಿನ ಮುಂದೂಡಲು ತಂತ್ರ ರೂಪಿಸಿದರು. ಎಲ್ಲರೂ ಆಗ ಹಂಗಿದ್ದರು. ಬಲು ಕೆಟ್ಟದಾಗಿ ನನ್ನನೇನು… ಯಿಡಿ ಸಾರಿಗೆ ನಿಗಮವನ್ನು ಹಾಗೆ… ನಡೆಸಿಕೊಂಡರು! ದುಷ್ಟ ಕೂಟವಿತ್ತು! ದುಂಡು ಮೇಜಿನ ಪರೀಕ್ಷೆಯಿತ್ತು…

ಕೋಣ ಈದೈತಿ ಎಂದರೆ… ಕೊಟ್ಟಿಗೆಗೆ ಕಟ್ಟು ಎಂಬಂತೆ ನನ್ನ ನ್ಯಾಯಪರತೆ, ಕಾರ್‍ಯ ವೈಖರಿ, ಪ್ರಾಮಾಣಿಕತೆ, ಶ್ರಮದಾನ, ಕಾರ್‍ಯ ತತ್ಪರತೆ ಏನನ್ನೂ ನೋಡದೆ, ಬಲಿಪಶುವನ್ನಾಗಿಸಿ ಆದೇಶ ಜಾರಿಗೊಳಿಸಿದರು. ನನ್ನ ಹಿನ್ನಡೆಗೆ, ಬಡ್ತಿಗೆ, ಕೊಡಲಿಪೆಟ್ಟು ಬಿತ್ತು ನೆಮ್ಮದಿ ಎಕ್ಕುಟ್ಟಿ ಹೋಗಿತ್ತು. ತಲೆಕೆಟ್ಟು ಕೊಟ್ಟಿಗೆ ಗೊಬ್ರವಾಗಿತ್ತು!!

ಯಿಷ್ಟು ಅವಮಾನ ಸಾಲದೆಂಬಂತೆ ಬೇಕಂತಲೇ… ನನ್ನನ್ನು ಮಂಗಳೂರಿನಿಂದ ಮೈಸೂರು ನಿಲ್ದಾಣಕ್ಕೆ ಜೂನ್ ೧೯೯೯ ರಲ್ಲಿ ತುರ್ತಾಗಿ ತೊಂದರೆ ಕೊಡಲು ಅವಮಾನ ಮಾಡಲು… ವರ್ಗಾವಣೆಯಲ್ಲದ ಅಕಾಲದಲ್ಲಿ ವರ್ಗಾಯಿಸಿದರು. ನನಗೆ ಭಾರೀ ಭಾರೀ ಲಾಸ್ ಆಗಿತು. ಸಹನೆ ತಾಳ್ಮೆ ಬಹಳಿತ್ತು ಸಂಸಾರ ಸಮೇತನಾಗಿ ನಾನು ಮತ್ತೊಮ್ಮೆ… ಅದೇ ಮೈಸೂರಿಗೆ ಬಸ್‌ನಿಲ್ದಾಣದ ಕಸ ಗುಡಿಸುವ ಉಸ್ತವಾರಿಗೆ ಬಂದು ಬಿದ್ದೆ!

ನಾ ಇಂಗು ತಿಂದ ಮಂಗನಂತೆ, ಕಡತಗಳ ಹೊತ್ತು ಮೂರು ಜೊತೆ ಬೂಟುಗಳ ಸವೆಸಿ ಒಟ್ಟು ಐದು ವರ್ಷ ವರ್ಗಾವಣೆಯ ದಾಳಿಗೆ ಬಲಿಯಾಗಿ… ಮೈಸೂರಿನಿಂದ, ಬೆಂಗಳೂರಿನಿಂದ, ಗುಲ್ಬರ್ಗದಿಂದ – ಬಾಗಲಕೋಟೆಯಿಂದ – ಪ್ರತಿ ತಿಂಗಳಿಗೆ ಒಮ್ಮೆ… ಎರಡು, ಮೂರು ಸಲ… ಅಂತೆಲೆದೆ. ಚಿತ್ರ ಹಿಂಸೆ, ನರಕ… ಅನುಭವಿಸಿದೆ.

XI

ಹೀಗೆ ವಿಚಾರಣೆಗಾಗಿ ಅಲೆಯುವಾಗ… ಒಮ್ಮೆ ೨೦೦೨ ರಲ್ಲಿ ಆಕ್ಟೋಬರ್ ಕೊನೇ ವಾರದಲ್ಲಿ… ನಾನು ಬೆಂಗಳೂರಿನಿಂದ ಇದೇ ವಿಚಾರಣೆಯನ್ನು ಮುಗಿಸಿಕೊಂಡು ರಾಜಹಂಸದಲ್ಲಿ ಬಾಗಲಕೋಟೆಗೆ ಬರುವಾಗ ಹೊಸಪೇಟೆ – ಇಲಕಲ್ ರಸ್ತೆಯ ಆರಂಭದಲ್ಲೇ ಬೆಳಗಿನ ಜಾವ ೦೬:೪೫ ರ ಸುಮಾರಿಗೆ ಇಂಧನ (ಗ್ಯಾಸ್) ಟ್ಯಾಂಕರಿಗೆ ನಮ್ಮ ಬಸ್ಸಿಗೇ ಡಿಕ್ಕಿಯಾಯಿತು. ಸ್ಥಳದಲ್ಲೇ ನಾಲ್ಕು ಜನ ಸತ್ತರು. ನಾಲ್ಕು ಜನರಿಗೆ ಕೈ ಕಾಲು ಹಲ್ಲು ಮುರಿದವು. ಇಪ್ಪತ್ತು ಜನರಿಗೆ ಗಾಯಗಳಾದವು. ನಾನು ಚಾಲಕರ ಹಿಂದುಗಡೆಯ ಎರಡನೆಯ ಸೀಟಿನಲ್ಲಿ ಕುಳಿತಿದ್ದೆ. ನನಗೆ ಮೂಗಿಗೆ ಪೆಟ್ಟಾಗಿ ಎರಡು ಕಾಲುಗಳು ಜಖಂ ಆಗಿ ವಿಪರೀತ ರಕ್ತ ಸುರಿದು ಮೂರ್ಛೆ ಹೋದೆ.

ಇಡೀ ಬಸ್ಸಿಗೆ ಬಸ್ಸೇ ಜಾಮ್ ಆಗಿ ಕಿಟಕಿ, ಗ್ಲಾಸು ಒಡೆದು ನಮ್ಮನ್ನೆಲ್ಲ ಗಾಳಿಗೆ ಎಳೆ ಎಳೆದು ಆರಿ ಹಾಕಿದಾಗ ನನ್ನ ಉಸಿರು ನಿಂತಿರುವುದು ಗ್ಯಾರಂಟಿ ಮಾಡಿಕೊಂಡಿರುವರು!

ಯಾರಿಗೆ ಯಾರು? ಯಿತ್ತ ಟ್ಯಾಂಕರ್ ಡ್ರೈವರ್ ನಮ್ಮ ಡ್ರೈವರ್ ಹಾಗೂ ನನ್ನ ಸೀಟಿನ ಮುಂದಿದ್ದ ಸತಿ ಪತಿಗಳು ಸ್ಥಳದಲ್ಲೇ ಶಿವನ ಪಾದ ಸೇರಿದರು.

ಅಪಘಾತವೆಂದರೆ ಯಿಷ್ಟು ಭಯಂಕರವಿರುತ್ತದೆಂದು ಯೀ ಮೊದಲು ನನಗೆ ಗೊತ್ತೇ ಇರಲಿಲ್ಲ! ಎದೆ ಗುಂಡಿಗೆ ಝಲ್ಲೆಂದಿತು! ಜೀವನದಲ್ಲಿ ಬಾಳ ಕಷ್ಟಪಟ್ಟು ಮೇಲೆ ಬಂದವನು, ಸುಖ ಪಡದೆ ಸಾಯುತಿರುವೆ ಅನಿಸಿತು! ಅಬ್ಬಾ… ನಿರ್ವಾಹಕ ಮುಂದಿನ ದೊಡ್ಡ ಗ್ಲಾಸಿನಿಂದ ಆಚೆ ಎಸೆಯಲ್ಪಟ್ಟು ಕಾಲು ಕೈ ಮುರಿದು ಕೋಮದಲ್ಲಿ ಹುಬ್ಬಳ್ಳಿ ಕೆ.ಎಂ.ಸಿ.ಯಲ್ಲಿ ವಾರದ ಬಳಿಕ ಮೃತನಾದ, ಜೆ.ಟಿ. ಪಾಟೀಲರು ಹಾಲಿ ವಿಧಾನ ಸಭೆ ಸದಸ್ಯರು ಜಮಖಂಡಿಯವರ ಕಾಲು ಮುರಿಯಿತು. ಅವರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋದರು.

ನನ್ನ ನೌಕರಿ ಹಾರಿ ಹೋಗುವುದಿರಲಿ, ಯೀಗ ಪ್ರಾಣಪಕ್ಷಿ ಹಾರಿ ಹೋಗುವ ಸ್ಥಿತಿಗತಿಯಲ್ಲಿ ಬಿದ್ದಿದ್ದೆ.

ನಮ್ಮ ಬಾಗಲಕೋಟೆ ಡಿಪೋದ ರಾಜಹಂಸ ಬಸ್ಸು ನುಜ್ಜುಗುಜ್ಜಾಗಿ ಗುಜರಿಗೆ ಮಾರಾಟವಾಗಿತೆಂದರೆ… ಅಪಘಾತದ ತೀವ್ರತೆ ಎಷ್ಟೆಂಬುದು ಊಹಿಸಬೇಕು!

‘ಯೇ ಅಪಘಾತಕ್ಕೆ ಡಾ.ಯಲ್ಲಪ್ಪ ಕೆಕೆ ಪುರ ಅವರೇ ಕಾರಣಕರ್‍ತರು! ಅವರು ಎಂ.ಎಲ್.ಎ. ಅವರ ಮಾತು ಕೇಳಿ, ಬಸ್ಸು ತಡವಾಗಿತ್ತು. ರಾತ್ರಿ ಬೆಂಗಳೂರಿನಲ್ಲಿ ಹಾದಿ ಬಿಟ್ಟು ಹಾದಿ ನಡೆಸಿ, ತಡಮಾಡಿದನೆಂದೂ ಬೆಳಿಗ್ಗೆ ಆರು ಗಂಟೆಗೆಲ್ಲ ಬಾಗಲಕೋಟೆಯಲ್ಲಿರಬೇಕಾಗಿತ್ತು. ಇನ್ನು ಹೊಸಪೇಟೆಯಲ್ಲಿರುವನೆಂದು ಹೇಳಿದರೆಂದೂ… ಅವರ ಮಾತು ಕೇಳಿ, ಚಾಲಕರಿಗೆ ಜೋರು ಮಾಡಿದ್ದರಿಂದ ಚಾಲಕರಿಗೆ ಮಾನಸಿಕ ಅಘಾತವಾಗಿ ಅಪಘಾತವೆಸಗಿದರೆಂದೂ…’ ಸುದ್ದಿ ಹರಡಿತು! ಕೆಟ್ಟ ಸುದ್ದಿಗೆ ರೆಕ್ಕೆ ಪುಕ್ಕ ವೇಗ ಆವೇಗ ಜಾಸ್ತಿ! ಅದೇ ಒಳ್ಳೇ ಸುದ್ದಿಗೆ ಬಾಯಿಲ್ಲ. ಕಾಲಿಲ್ಲದಾ ಮೊಂಡ…

ನನಗೆ ಅದೆಲ್ಲಿಂದ ಉಸಿರು ತಿರುಗಿತೋ… ಹಾಗೆ ಗಾಳಿ ಆಡಿದೆ. ನನ್ನ ಕುಷ್ಟಗಿ ಆಸ್ಪತ್ರೆಯಲ್ಲಿ ಸೇರಿಸಿ, ಶುಶ್ರೂಷೆ ಮಾಡಿದಾಗ ನನಗೆ ಎಚ್ಚರವಾಗಿತು! ನನ್ನ ಪಾಪ ಬಗೆ ಹರಿದಿಲ್ಲವೆಂದ ಮೇಲೆ ನಾನೇಗೆ ಅಷ್ಟು ಬೇಗ ಕಣ್ಣುಮುಚ್ಚಿ ಗೊಟಕ್ ಅನ್ನಲು ಸಾಧ್ಯ?! ಜೀವವಿತ್ತು ಆಗ ಅಲ್ಲಿಂದ ಬಾಗಲಕೋಟೆಗೆ ಸ್ಥಳಾಂತರಿಸಿದರು! ನನಗೆ ಮೂಗಿಗೆ ಕಾಲುಗಳಿಗೆ ಪೆಟ್ಟಾಗಿತ್ತು ಮೂರು ದಿನಗಳಲ್ಲಿ ಕುಂಟುತ್ತಾ ಕಛೇರಿ ಕೆಲಸಕ್ಕೆ ಹಾಜರಾದೆ. ನನಗೆ ಆಗ ಗೊತ್ತಾಗಿತ್ತು. ನನಗೆ ಜೋಡು ಗುಂಡಿಗೆಗಳಿವೆ ಎಂದು… ಅಂತಾ ಕಸಿಯಿದೆಯಾದ್ದರಿಂದ ಮರು ಹುಟ್ಟು ಪಡೆದೆ, ಕೆಲವರಿಗೆ ಸಂಕಟ ಶುರುವಾಗಿತ್ತು!

ಡಾ.ಯಲ್ಲಪ್ಪ ಕೆಕೆ ಪುರ ಅನುಮತಿಯಿಲ್ಲದೆ ಕೇಂದ್ರ ಸ್ಥಾನ ತ್ಯಜಿಸಿರುವರೆಂದೂ ಅನಧಿಕೃತವಾಗಿ ಬಸ್ಸಿನಲ್ಲಿ ಪ್ರಯಾಣಿಸಿರುವರೆಂದೂ ವದಂತಿ ಹಬ್ಬಿತಲ್ಲದೆ, ನನ್ನನ್ನು ನೋಡಲು ನನ್ನ ಹೆಸರು ಅಪಘಾತ ಪ್ರಥಮ ವರದಿಯಲ್ಲಿ ಸೇರಿಸದೆ ಉದ್ದೇಶಪೂರ್‍ವಕವಾಗಿ ಕೈಬಿಟ್ಟಿರುವುದು ವಾರದ ಬಳಿಕ ನನಗೆ ತಿಳಿಯಿತು! ಯೀ ಅಪಘಾತಕ್ಕಿಂತ ಹೆಚ್ಚಿನ ಆಘಾತವಾಗಿತ್ತು. ಕೆಲವು ಜನ ತೊಂದರೆ ಮಾಡುವುದಕ್ಕಾಗಿಯೇ ಬದುಕಿರುವರೆನಿಸಿತು. ಸಹಾಯ ಮಾಡಲು ಜೀವಿಸಿ, ಜೀವಿಸಲು ತೊಂದರೆ ಮಾಡಬೇಡಿ ಎಂದು ಬೇಡಿದೆ. ಕೇಳುವವರಾರು? ದಪ್ಪ ಚರ್‍ಮದ ದಪ್ಪ ಕುಂಡಿಯ ಕೊಬ್ಬಿದ ಮದಗಜದಂಥಾ ಅಧಿಕಾರಿಗಳಿಗೆ ಹೇಗೆ ಗೊತ್ತಾಗುವುದು?! ನಾನಂತೂ ನಿತ್ಯ ಚಡಪಡಿಸತೊಡಗಿದೆ…

ಒಂದು ಘಟನೆ, ಒಂದು ಕಾರ್‍ಯ ಕಾರಣ ಸಂಬಂಧ, ನನ್ನ ಜೀವವನ್ನೇ ಬಲಿ ತೆಗೆದುಕೊಳ್ಳಲು ಹೇಗೆ ಸಾಧ್ಯವಾಗಿತೆಂಬುದನ್ನು ನಾ ಚಿಂತಿಸುತ್ತಾ ಹೋದೆ. ಒಂದೇ ಎರಡೇ.. ಒಂದು ಸಮಸ್ಯೆ ಮೆಟ್ಟಿ ನಿಂತರೆ, ಮತ್ತೊಂದು, ಮಗದೊಂದು ನನ್ನ ಬೇತಾಳದಂತೆ ಹೆಗಲೇರುತ್ತಿದ್ದವು…. ಬಲ ಹೋದ ಕಾಲಕ್ಕೆ ನೆಲವೆದ್ದು ಎಲ್ಲಿ ಹೊಡವದೋ ಎಂದು ಕಣ್ಣೀರಿಟ್ಟೆ!

ಯೀ ಮಧ್ಯೆ ಆಗಾಗ ಏನ್ ಬಂದರೂ ಎಷ್ಟು ತಲೆ ಬಿಸಿಯಾದರೂ ನಿರುಮ್ಮಳಾಗಿ ಒಂದಿಷ್ಟು ಓದುವುದೂ ಬರೆಯುವುದೂ ನಿತ್ಯ ವ್ರತದಿ ಮಾಡುತ್ತಿರುವುದರಿಂದಲೇ ನನಗೆ ಬಿ.ಪಿ, ಶುಗರ್, ಒತ್ತಡ, ಖಿನ್ನತೆ, ನಿದ್ರಾಹೀನತೆ, ತಲೆ ಶೂಲೆ ಇತ್ಯಾದಿ ಬರುತ್ತಿರಲಿಲ್ಲ.

ನನ್ನ ಸಮಸ್ಯೆಗಳಿಗೆಲ್ಲ ಸಾಹಿತ್ಯ ಪರಿಹಾರ ಸೂಚಿಸುವುದೆಂದು ನಾ ಬಾಲ್ಯದಿಂದಲೂ ಗ್ರಹಿಸಿದ್ದೆ. ಚಿಂತೆ ಮರೆಯಲು ಚಿಂತಿಸುವುದು ಕವಿತೆ, ಕತೆ ಬರೆಯುವುದ ಕಲಿತೆ. ಹಾಳಾಗಲು ದುಶ್ಚಟಗಳ ಕಲಿಯಲು ತುಂಬಾ ತುಂಬಾ ಅವಕಾಶವಿತ್ತು. ಅದನ್ನು ಸಾಹಿತ್ಯ ಕೃಷಿಗೆ ತಿರುಗಿಸಿ ಋಷಿಯಾದೆ. ಖುಷಿಗೊಂಡೆ. ಗಟ್ಟಿಗೊಂಡೆ…

ವರ್‍ಷ ಹಲವು ವರ್‍ಷ ಉರುಳಿದರೂ ಒಂದು ಮಾತ್ರೆ, ಔಷಧಿ, ಸೂಜಿ ಏನು ಇಲ್ಲ ಎಂದು ನಾನು ಒಮ್ಮೆ ನನ್ನ ಆಪ್ತ ಮಿತ್ರರಾದ ವೀರಯ್ಯ, ನಾಗರಾಜು, ನರಸಿಂಹಯ್ಯ, ಬಿ. ಶಿವಮೂರ್‍ತಿ ಸ್ವಾಮಿ, ರಾಂಪುರದ ಪರಮೇಶ್ವರಪ್ಪ… ಡಾ| ಜಿ.ಪಿ. ಸುಧಾಕರರೆಡ್ಡಿ, ಎಸ್.ಬಿ. ಪ್ರಹ್ಲಾದರೆಡ್ಡಿ, ರಂಗಾರೆಡ್ಡಿ… ಇವರಿಗೆ ಹೇಳಿದೆ.

ಇವರೆಲ್ಲ ‘ಏ ಬಿಡಯ್ಯ ನೀ ಮನುಶ್ಯನೇ ಅಲ್ಲ!’ ಎಂದು ಒಮ್ಮೆಲೇ ನಕ್ಕರು. ನಾನವರ ಮಕ ನೋಡಿದೆ. ಆಗ ಅವರು ನಿನ್ನ ದಿನಚರಿ, ಆಹಾರ ಪದ್ಧತಿ, ಚಿಕ್ಕಂದಿನಿಂದ ಬಂದಿರುವ ಹವ್ಯಾಸ ನಿನ್ನ ನಿರ್‍ಲಿಪ್ತತೆ ನಿನ್ನ ರಕ್ಷಿಸಿದೆ’ ಎಂದು ಸೇರಿಸಿದರು.

ವಿಚಾರಣೆಗೆ ಬೆಂಗಳೂರಿಗೆ ನಿರಂತರವಾಗಿ ಹಾಜರಾದೆ. ನನ್ನ ಪ್ರಕರಣ ನನ್ನ ನೋವು, ಸಂಕಟವಾದ್ದರಿಂದ ನನ್ನ ವಾದ ನನಗೆ ಸರಿ ಎನಿಸಿತು! ನಾನೇ ಪ್ರಕರಣ ವಾದಿಸಲು ಸಿದ್ದನಾದೆ!, ಪ್ರಶ್ನೆಗಳಿಗೆ ಬದ್ಧನಾದೆ!

‘ಸಾರ್ ಇಷ್ಟು ದೊಡ್ಡ ಕಡತ ಸಾಕ್ಷಿ ಪುರಾವೆ ಹೇಳಿಕೆಗಳು ಅದಕ್ಕೆ ಪೂರಕ ಪ್ರೇರಕ ಕಾರಕ ಮಾಹಿತಿಗಳನ್ನು ಕಳಿಸಿ ಲಕ್ಷಾಂತರ ರೂಪಾಯಿಗಳ ನಷ್ಟಕ್ಕೆ ವಾಣಿಜ್ಯ ಶಾಖೆಯ ಕೆಲಸ ನಿರ್ವಹಿಸುವಲ್ಲಿ ವಿಫಲತೆಯ ಬಗ್ಗೆ ನಾನೇ ಕಾರಣರೆಂದಿರುವಿರಿ! ನೀವು ನಿಮ್ಮ ಮಕ್ಕಳ ಮೇಲೆ ಆಣೆ ಮಾಡಿ ನಾನೇ ತಪ್ಪಿತಸ್ಥನೂ ಇದರಲ್ಲಿ ನಿಮ್ಮದು ತಪ್ಪಿಲ್ಲವೆಂದು ಕಾರಣನಲ್ಲನೆಂದೂ… ಪ್ರಾಮಾಣ ಆಣೆ… ಭಾಷೆ… ಮಾಡಿ! ಇದೇ ಕೊನೇ…. ಎಂದು’ ಒಂದೇ ಪ್ರಶ್ನೆ ಕೇಳಿದೆ!

ವಿಭಾಗೀಯ ನಿಯಂತ್ರಣಾಧಿಕಾರಿಗಳು ಸುಸ್ತಾಗಿ ಕುಂತರು! ‘ಸಾರ್, ಸಾರ್….. ಇಂಥಾ ಪ್ರಶ್ನೆ ಹೇಗೆ ಅಲೋ ಮಾಡುವಿರಿ?’ ನ್ಯಾಯಾಮೂರ್‍ತಿಗೆ ಅವರು ವಿನಂತಿಸಿದರು.

ನ್ಯಾಯ ದೇವರು ನನ್ನ ಮುಖ, ತಳಮಳ, ಬೇಗುದಿಯನ್ನು ಗಮನಿಸುತ್ತಿದ್ದವರು ಏಕ್ದಮ್ಮಾಗಿ…

‘ಮಿಸ್ಟರ್‌ ಯಲ್ಲಪ್ಪ ನಿಮ್ಮ ಪೆಯಿನ್, ಸಂಕಟ ನನಗೆ ಅರ್‍ಥವಾಗುತ್ತಿದೆ! ಆದರೆ ನಿಮ್ಮ ನಿಮ್ಮ ಜಗಳದಲ್ಲಿ ವೃತ್ತಿ ಪರ ದ್ವೇಷದಲ್ಲಿ ದೇವರು, ಧರ್‍ಮ, ಜಾತಿ, ಮತ, ತಂದೆ, ತಾಯಿ, ಮಕ್ಕಳ ಪ್ರಸ್ತಾಪವಿಲ್ಲಿ ಕೂಡದು’ ಎಂದರು.

ಅವರ ಮಾತಲ್ಲಿ ಕರುಣೆ, ದಯೆ, ಸಹಾನುಭೂತಿ ಇತ್ತು! ನಾನೂ ಅರಿತೆ!

‘ಸಾರ್… ಹತ್ತು ಪ್ರಶ್ನೆ ಕೇಳಲ್ಲ! ನನಗೆ ಇದೊಂದೇ ಪ್ರಶ್ನೆಗೆ ಉತ್ತರಿಸಲಿ! ನನಗೇ ಸಾಕು ಸಾಕಾಗೈತಿ’ ಎಂದು ನೊಂದು ನುಡಿದೆ.

ನನ್ನ ಮಾತಲ್ಲಿ ಅಸಹಾಯಕತೆ, ಅಮಾಯಕತೆ, ಅಸಹನೆ ಇತ್ತು!

‘ಇಲ್ಲ! ಬೇರೆ ಪ್ರಶ್ನೆ ಕೇಳಿ!’ ಎಂದರು… ನ್ಯಾಯ ಮೂರ್ತಿಗಳು.

ನಾ ಇಪ್ಪತ್ತರ ಮೇಲೆ ಪ್ರಶ್ನೆ ಕೇಳಿದೆ. ಎಲ್ಲ ಪ್ರಶ್ನೆಗಳಲ್ಲಿ ನನ್ನ ಉಳಿವಿತ್ತು ಪ್ರಾಮಾಣಿಕತೆಯಿತ್ತು. ರಕ್ಷಣೆಯಿತ್ತು, ಮುಕ್ತ ಮನಸ್ಸಿತ್ತು, ಹೌದು… ನನ್ನ ಹತ್ತಿರ ರಾಜಿನೇ ಇಲ್ಲ. ಒಮ್ಮೆ ಕುಸ್ತಿ ಒಗೆದರೆ ಎಂಥಾವರನ್ನು ಯೀತಾ ಬಿಟ್ಟಿಲ್ಲ! ಹೀಗಾಗಿ ನಾ ಯೀತನ್ಕಾ ಉದ್ಧಾರವಾಗಿಲ್ಲ. ಸುಖ-ಶಾಂತಿ-ನೆಮ್ಮದಿನೇ ಕಂಡಿಲ್ಲ. ಎಲ್ಲಿ ನೆಲೆ ನಿಂತಿಲ್ಲ. ಕಾಲ್ಚೆಂಡಿನಂತೆ ನೌಕರಿ! ಒಂದು ಹತ್ತಿರ ಇಲ್ಲ. ವೃತ್ತಿ ಮತ್ಸರದಿಂದಾಗಿ ಶತ್ರು ಪಡೆ ಜಾಸ್ತಿಯಾಗಿತ್ತು ಅನುಮಾನದಿ, ಸಂಶಯದಿ, ಎಡಶಿರದ ಮೇಲೆ ನನ್ನ ನೋಡುವುದು ಈಗೀಗ ಮೊದಲಾಗಿತು. ವ್ಯವಸ್ಥೆಯೊಂದಿಗೆ ರಾಜಿಯಾಗದೆ, ಪ್ರವಾಹದ-ವಿರುದ್ಧವಾಗಿ ಈಜಲು ಹೋದರೆ… ಹೀಗೆನೇ ಕಟಕಟೆಯಲ್ಲಿ ನಿಲ್ಲಬೇಕಾಗುತ್ತದೆಂದು ನೊಂದೆ, ಬೆಂದೆ, ಅಂದುಕೊಂಡೆ ನನ್ನನ್ನು ನಾನು ಕೊಂದು ಕೊಂಡೆ.

ನಾ ಎಲ್ಲಾ ಸಾಕ್ಷಿ, ಪುರಾವೆಗಳನ್ನು ಪ್ರಶ್ನಿಸಿ, ಸತ್ಯದ ಒರೆಗಲ್ಲಿಗೆ ಹಚ್ಚಿದೆ. ನನ್ನ ವಾದ ಮಂಡಿಸಿದೆ. ನ್ಯಾಯಮೂರ್ತಿಗಳು ದೈವಸಮಾನರು ಅವರು ನನ್ನನ್ನು ನಿರ್ದೋಷಿ ಎಂದು ತೀರ್‍ಪಿತ್ತರು.

ನಮ್ಮ ನಿಗಮದ ಅಧಿಕಾರಿಗಳಾಗಿದ್ದರೆ ನನಗೆ ಮತ್ತೆ ಇಲ್ಲಿ ಖಂಡಿತವಾಗಿಯೂ ನ್ಯಾಯ ನೀಡುತ್ತಿರಲಿಲ್ಲ. ನನ್ನನ್ನು ಬೇಕಂತಲೇ ದೋಷಿ ಎಂದು ರುಜುವಾತು ಗೊಳಿಸುತ್ತಿದ್ದರು! ಆದರೆ ಹೊರಗಿನವರು ನ್ಯಾಯವನ್ನು ತೂಗುತ್ತಾರೆ. ಹೃದಯದಿಂದ ತೀರ್ಪು ನೀಡುತ್ತಾರೆಂಬುದಕ್ಕೆ ನನ್ನ ಪ್ರಕರಣವೇ ಹಿರಿಸಾಕ್ಷಿಯಾಗಿತ್ತು. ಈ ಜಗತ್ತು ಕೆಟ್ಟದಿಲ್ಲ. ಕೆಲ ಜನರು ನೀಚ, ಪರಮ ನೀಚರಿದ್ದಾರೆ. ನಿಜವಾದ ಹೊಲೆ ಮಾದಿಗರಿದ್ದಾರೆ… ಕೊಲೆಗಡುಕರಿದ್ದಾರೆ… ಚಂಡಾಲರಿದ್ದಾರೆ. ಇಡೀ ಮನುಷ್ಯರನ್ನೇ ಅಡ್ಡಾಡ್ಡ ಉದ್ದೂದ್ದ ತಿನ್ನುವವರಿದ್ದಾರೆ! ಅವರನ್ನು ಇಂಥವರನ್ನು ಬಲಿ ಹಾಕಲು ದೇವರ ರೂಪದಲ್ಲಿ ನ್ಯಾಯ ಮೂರ್ತಿಗಳಿದ್ದಾರೆನಿಸಿತು. ಅವರಿಗೆ ವಂದಿಸಿದೆ, ಮನದಲ್ಲೇ ಅಭಿನಂದಿಸಿದೆ.

ಗುಡಿಯಲಿರುವ ಯಾವ ದೇವರೂ ಎದ್ದು ಬಂದು ಎಂದೂ ನಮಗೆ ಸಹಾಯ ಮಾಡುವುದಿಲ್ಲ. ಇಂಥಾ ನ್ಯಾಯಮೂರ್ತಿಗಳ ಕಡೆಯಿಂದ ದೇವರಿದ್ದಾನೆಂದು ನಿರೂಪಿಸುವುದಿದೆಯಲ್ಲ ಅದೇ ದೇವರು! ದೇವರು ನ್ಯಾಯ ಮೂರ್ತಿಗಳ ರೂಪ, ಮನುಶ್ಯರ ಪ್ರತಿರೂಪ.

ನನ್ನನ್ನು ಕೊಲ್ಲಲು ವ್ಯವಸ್ಥಿತವಾಗಿ ಸಂಚು ರೂಪಿಸಿದರು. ಅದಕ್ಕೆ ಬೆಂಗಾವಲಾಗಿ ಅನೇಕಾನೇಕ ಅಧಿಕಾರಿಗಳು, ಸಿಬ್ಬಂದಿಗಳು ನಿಂತರು! ಮಂಕು ಬೂದಿ ಎರಚಿದರು. ಮೇಲಿನವರ ಮರಳು ಮಾಡಿದ್ದರು. ಕೆಲವರು ಅಪಘಾತದಲ್ಲಿ ಮೃತರಾದರು. ಇನ್ನು ಕೆಲವರು ಅಗಲಿದ್ದಾರೆ! ದೇವರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ?!… ಕಾಯುವೆ… ಕಾಯುತಿರುವೆ!! ದೇವರ ಮುಂದೆ ಸತ್ಯ, ಧರ್ಮ, ನ್ಯಾಯದ ಮುಂದೆ ಬೂದಿ ಯಾಗುವುದ…! ಕೆಲವರು ಸತ್ತರೂ… ಅವರ ಮಕ್ಕಳಿಗೆ ಮೊಮ್ಮಕ್ಕಳಿಗೆ ನನ್ನ ಶಾಪ, ನೋವು, ಬಿಸಿ ಉಸಿರು, ನಷ್ಟ, ಅವಮಾನ ತಟ್ಟದೆ ಇರುವುದೇ? ಆ ದೇವರು ಬಾಯಿ ಬಿಡುವತನಕ ನಾನು ಬಾಯಿ, ಮೂಗು, ಕಿವಿ… ನವದ್ವಾರಗಳನ್ನು ಅದುಮಿಟ್ಟುಗೊಳ್ಳುತ್ತೇನೆ. ಆಗಬಹುದೇ? ಕಾಯುವೆ ಒಂಟಿ ಕಾಲ ಪಕ್ಷಿಯಂಗೆ ಏಳೇಳೂ ಜನ್ಮಕೂ…. ವೈರಿ ಪಡೆಗೆ ಶಿಕ್ಷೆಯಾಗುವ ತನಕ… ದೇವರ ತೀರ್ಪು ಬರುವತನಕ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯುಗದ ಹಾದಿಯಲಿ
Next post ಎದೆ ತುಂಬಿದ ಹಾಡು

ಸಣ್ಣ ಕತೆ

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…