ಕನ್ನಡ ನಾಡು ಸುವರ್ಣ ಬೀಡು
ಮುತ್ತು ಹರಿವ ಜಾಡು
ಕನ್ನಡ ನಾಡಿನ ಚೆಲುವಿಗೆ ಒಲಿದು
ಹಾಡುವೆ ನಾ ಹಾಡು – ಎದೆ
ತುಂಬಿ ಬಂದ ಹಾಡು
ಬೇಲೂರಿನ ಶಿಲೆ ಶಿಲ್ಪಿಗಳಾ ಕಲೆ
ಸಮ್ಮೋಹನವಾಗಿ
ಮಲೆನಾಡಿನ ಸಿರಿ ಜಲಪಾತದ ಝರಿ
ಸಂಕೀರ್ತನವಾಗಿ
ಹಾಡಿದೆ ಜುಳುಜುಳು ಮಂಜುಳ ಗೀತೆಯ
ಸ್ಫೂರ್ತಿಯ ಸೆಲೆಯಾಗಿ
ಕರುನಾಡಿನ ಈ ಕಣ ಕಣವನ್ನು
ಮಾಡಿದೆ ಕಿವಿಯಾಗಿ
ಕಾವೇರಿಯ ಹೊಳೆ ನೀಡುತ ಹೊಂಬೆಳೆ
ಎಲ್ಲರ ಉಸಿರಾಗಿ
ಸಹ್ಯಾದ್ರಿಯ ಮಲೆ ಗೊಮ್ಮಟನಾ ಶಿಲೆ
ನಮಗಾಶ್ರಯವಾಗಿ
ಉಳಿಸಿದೆ ಬೆಳೆಸಿದೆ ಕನ್ನಡ ಸತ್ವವ
ಚಿರನೂತನವಾಗಿ
ದಿಕ್ಕು ದಿಕ್ಕುಗು ಕನ್ನಡ ತೇರನು
ಹರಿಸಿದೆ ಜತೆಯಾಗಿ!
*****