ಅವಳೇ ಅವಳು

ಅವಳೇ ಅವಳು

ಚಿತ್ರ: ಅಲೆಕ್ಸಾಂಡರ್‍ ಇವಾನೊ

ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ, ಸಾರ್ವಜನಿಕವಾಗಿ, ಸಾಮಾಜಿಕವಾಗಿ ಬಹಳಷ್ಟು ಬದಲಾವಣೆಗಳೂ ಆಗಿ ಹೋಗಿವೆ. ಹರಿಯುವ ನೀರನ್ನು ತಡೆಯುವವರಾರು? ಅವಳೂ ಹರಿಯುವ ನೀರಿನ ಹಾಗೆ, ನದಿಯಾದರೂ ಬತ್ತುತ್ತದೆ. ಎಂದೂ ಬತ್ತದ ನದಿ ಅವಳು. ಅವಳ ಮಾತು ನಗೆ, ಚರ್ಚೆ” ವಿಚಾರವಾದ, ಉತ್ಕಟ ಪ್ರೇಮ ನನ್ನ ಮನಸ್ಸಿನಲ್ಲಿ ಹಾಗೆ ಉಳಿದು ಬಿಟ್ಟಿದೆ. ಹತ್ತು ತಿಂಗಳಾಚೆಗಿದ್ದಿರಬಹುದು, ಬೆಂಗಳೂರಲ್ಲಿ ಅಕಸ್ಮಾತ್ ಎನ್ನುವಂತೆ ರವೀಂದ್ರ ಕಲಾಕ್ಷೇತ್ರದಿಂದ ಹೊರಬರುವಾಗಲೇ ಕಂಡಿದ್ದಳು. ಗುರುತಿಸಿದ್ದು ನಾನೆ. ಯಾಕೆಂದರೆ ಅವಳದು ಮಾಸದ ಚೆಲುವು ಮಿಂಚಿನ ನಗೆ, ನೀಳಕಾಯ, ಆದರೆ ನನ್ನನ್ನವಳು ಗುರುತಿಸುವುದು ತಡವಾಯಿತು ಅಥವಾ ಹಾಗೆ ನಟಿಸಿದಳೋ.

“ನೀನೇನೇನೋ ಗೋಪಾಲಿ! ಗುರುತೇ ಹತ್ತಲಿಲ್ವೆ ನನ್ಗೆ” ಅಂತ ಇಷ್ಟಗಲ ನಕ್ಕ ಕಣ್ಣುಗಳಲ್ಲಿ ಮೊದಲಿನದೆ ಮಿಂಚು. ನನ್ನನ್ನು ನೋಡಿದ್ದರಿಂದಾಗಿ ಬಹಳಷ್ಟು ಖುಷಿಯಾಗಿದ್ದಾಳೆಂಬ ಊಹೆಯೇ ಪಕ್ಕೆಗೆ ರೆಕ್ಕೆಗಳನ್ನು ಮೂಡಿಸಿದ್ದವು. ತುಂಬಾ ಬಿಡು ಬೀಸಾಗಿ ವರ್ತಿಸಿದಳು. ನನ್ನ ಬಳಿ ಮೊಬೈಲ್ ಇಲ್ಲದಿರುವ ಬಗ್ಗೆ ತಮಾಷೆ ಮಾಡಿದಳು.

“ಮೊದಲು ಒಂದು ಮೊಬೈಲ್ ತಗೋ ಮಾರಾಯಾ” ಪೀಡಿಸಿದಳು.

“ನೀನೆಂಥ ಗುಗ್ಗುನೋ! ನೀನು ಬದಲಾಗೋಲ್ಲ ಬಿಡು” ಅಂತ ಚಿಲಿಪಿಲಿ ನಕ್ಕಳು.

ನಾನು ಬದಲಾಗಿರಲಿಲ್ಲ ನಿಜ- ಆರಕ್ಕೇರದ ಮೂರಕ್ಕಿಳಿಯದ ಮಧ್ಯಮ ವರ್ಗದವರ ಜೀವನದ ಗತಿಯ ಸ್ಥಿತಿಯೇ ಹಾಗೆ. ಆವಳು ತನ್ನ ಭೇಟಿಯಲ್ಲಿ ಮತ್ತೆ ನನ್ನಲ್ಲಿ ಹೊಸ ಆಸೆಗಳನ್ನು ಕನಸುಗಳನ್ನು ಬಿತ್ತಿಹೋದಳು. ದುರ್ಗದ ಕಾಲೇಜಲ್ಲಿ ಜೊತೆಗೇ ಓದಿದವರು. ನನ್ನಲ್ಲಿ ಅದೇನನ್ನು ಕಂಡು ಆಕರ್ಷಿತಳಾದಳೋ ತಿಳಿಯದು. ನಾನು ಸುಂದರಾಂಗನಲ್ಲ ಓದಿನಲ್ಲೂ ಆವರೇಜು. ಕಾಡುತ್ತಿದ್ದ ಬಡತನ ಬೇರೆ. ನನ್ನಪ್ಪ ಪ್ರೈಮರಿ ಸ್ಕೂಲ್ ಮಾಸ್ತರ, ಇದೆಲ್ಲಾ ತಿಳಿದೂ ಆ ಹುಡುಗಿ ನನ್ನನ್ನೇಕೆ ಅಷ್ಟೊಂದು ಹಚ್ಚಿಕೊಂಡಳೋ! ಬಡತನದಲ್ಲೂ ಎಷ್ಟೊಂದು ಸ್ಪೋರ್ಟಿವ್ ಆಗಿರ್ತಿಯೋ ಅಂತ ಬೆರಗಾಗುತ್ತಿದ್ದಳು. ವಾಚು, ಬೂಟು ತೊಡದೆ ಹರಕು ಚಪ್ಪಲಿ, ಪೈಜಾಮ ಜುಬ್ಬದಲ್ಲಿ ಕಾಲೇಜಿಗೆ ಬರುವ ನನ್ನನ್ನವಳೆಂದೂ ಉಪೇಕ್ಷೆ ಮಾಡಲಿಲ್ಲ. ಪ್ರಾಯಶಃ ಅದಕ್ಕೆ ಕಾರಣ ನನ್ನ ಬರವಣಿಗೆ. ಅದಕ್ಕೊಂದಕ್ಕೆ ಮಾತ್ರ ಅವಳ ಮೇಲೆ ಪ್ರಭಾವ ಬೀರುವ ಶಕ್ತಿ ಇತ್ತೇನೋ. ನಾನಾಗಲೇ ಕಥೆ, ಕವನಗಳನ್ನು ಬರೆಯುತ್ತಿದ್ದೆ. ಅವುಗಳು ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದವೆಂಬುದೇ ಹೆಚ್ಚುಗಾರಿಕೆ. ಆಗ ಬಂಡಾಯದ ಕಾಲ- ಬ್ರಾಹ್ಮಣರನ್ನು ಅಲ್ಲಗೆಳೆದು ದಲಿತರ ನೋವು ನಲಿವುಗಳನ್ನು ಬಿಂಬಿಸುವ ಕಥೆ ಕಾದಂಬರಿಗಳಿಗೇ’ ಪ್ರಾಧಾನ್ಯ. ನಾನು ಆರಿಸಿಕೊಳ್ಳುತ್ತಿದ್ದ ವಸ್ತುಗಳೂ ಅವೇ ಆಗಿರುತ್ತಿದ್ದವು. ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನಗಳನ್ನು ಬೇರೆ ತಂದು ಕೊಟ್ಟಿದ್ದವು. ಆ ಕಾರಣಕ್ಕಾಗಿಯೇ ಕಾಲೇಜಿನಲ್ಲಿ ಎಲ್ಲರ ಪಾಲಿನ ಕುತೂಹಲದ ವಸ್ತು ನಾನು. ಲೆಕ್ಚರರ್‌ರಳು ಸಹ ಪ್ರೀತಿಯಿಂದ ಕಾಣುತ್ತಿದ್ದರು. ಬರಹದ ಬಗ್ಗೆ ಚರ್ಚಿಸುತ್ತಿದ್ದರು. ನನ್ನ ಸುತ್ತ ಆರಾಧಿಸುವ ಗೆಳೆಯರದ್ದೇ ಗುಂಪಿತ್ತು. ಬಡತನದಲ್ಲೂ ಸ್ಪೋರ್ಟಿವ್ ಆಗಿರಲು ಇವೆಲ್ಲಾ ಇಂಬು ನೀಡಿರಬಹುದು.

ಅವಳಿಗೆ ನನ್ನ ಕಥೆ-ಕವನಗಳೆಂದರೆ ಪ್ರಾಣ. ನಮ್ಮ ಮನೆಗೆ ಎಲ್ಲಾ ಪತ್ರಿಕೆಗಳನ್ನು ತರಿಸುವಷ್ಟು ಅನುಕೂಲತೆಯಿರಲಿಲ್ಲ. ಯಾರಾದ್ರೂ ಗೋಪಾಲಿ, ನಿಮ್ಮ ಕಥೇ ಬಂದಿದೆಯಲ್ರಿ ಅಂದಾಗ ಮಾತ್ರ ಆ ಪತ್ರಿಕೆಕೊಳ್ಳಲು ಸಿದ್ಧವಾಗಬೇಕಿತ್ತು. ಇದನ್ನರಿತ ಅವಳು ತನ್ನ ಮನೆಗೆ ಎಲ್ಲ ಪತ್ರಿಕೆಗಳನ್ನು ತರಿಸುತ್ತಿದ್ದಳು. ಎಕ್ಸಿಕ್ಯೂಟಿವ್ ಎಂಜಿನಿಯರ್ ಮಗಳು, ದೊಡ್ಡಸ್ತಿಕೆ ತುಂಬಿದ ಮನೆ. ನನ್ನ ಬರಹಗಳು ಪ್ರಕಟವಾದ ಸುದ್ದಿ ಮೊದಲು ನನಗೆ ಮುಟ್ಟಿಸುತ್ತಿದ್ದುದೇ ಅವಳು, ಅದು ಪತ್ರಿಕೆ ಹಿಡಿದೇ ಬರುತ್ತಿದ್ದಳು. ಕಥೆ, ಕವನಗಳ ಬಗ್ಗೆ ನಮ್ಮ ಮಧ್ಯೆ ಚರ್ಚೆ ನಡೆದು ಜಗಳಕ್ಕೆ ತಿರುಗುತ್ತಿದ್ದುದುಂಟು. “ಬ್ರಾಹ್ಮಣರನ್ನು ಬರಿ ಗೇಲಿ ಮಾಡಿದರಷ್ಟೇ ಸಾಲದು, ನೀವೆಲ್ಲಾ ಬ್ರಾಹ್ಮಣರ ಹುಡುಗಿಯರನ್ನು ಮದುವೆಯಾಗಿ ಸಾಮಾಜಿಕ ಪರಿವರ್ತನೆ ಮಾಡಬೇಕು ಕಣೋ. ಅದು ನಿಜವಾದ ಬಂಡಾಯ” ಅಂತ ಛೇಡಿಸುತ್ತಿದ್ದಳು.

“ನಿಮ್ಮ ಮನೇಲಿ ನನ್ನ ಕಥೆ ಓದ್ತಾರೇನೆ?” ನನ್ನದು ಕ್ಯೂರಿಯಾಸಿಟಿ.

“ಓದ್ತಾರೇನೋ ಅಪ್ಪಾ. ಶೂದ್ರ ಮುಂಡೇ ಗಂಡ ಅವನೇನು ಬರಿತಾನೆ, ಅವನ ಪಿಂಡ. ಭಾಷೆ ಮೇಲೆ ಹಿಡಿತವಿಲ್ಲ ವ್ಯಾಕರಣ ಗೊತ್ತಿಲ್ಲ ಅಂತ ಬೈತಿರ್ತಾರಪ್ಪಾ ಇದರರ್ಥ ಓದಿ ಹೊಟ್ಟೆ ಉರಿಸ್ಕೋತಿದಾರೆ ಅಂತಲ್ವೆ” ಅಂದವಳು ನಗೆಯಾಡುತ್ತಿದ್ದಳು.

“ನಿನಗೇನೂ ಬೇಸರ ಇಲ್ವಾ?” ನನ್ನ ಎದೆಗುದಿ,

“ನೀನು ಒಬ್ಬನೇನಾ ನಮ್ಮೋರನ್ನ ತೆಗಳಿ ಬರೆಯೋದು. ದೊಡ್ಡ ಸಾಹಿತಿಗಳಿಗೂ ಅದು ಫ್ಯಾಷನ್ ಆಗಿ ಹೋಗಿದೆ… ಅಷ್ಟಕ್ಕೂ ನನಗೇಕಪ್ಪಾ ಬೇಸರ. ಬ್ರಾಹ್ಮಣರು ವಿದ್ಯೆಬಚ್ಚಿಟ್ಟರು. ಮನುಷ್ಯರನ್ನು ದೂರ ಅಟ್ಟಿದರು, ಅಸ್ಪೃಶ್ಯತೆನಾ ಪೋಷಿಸುತ್ತಾ ಮಡಿ ಅಂತ ಎಲ್ಲರಿಂದ ಅವರೇ ದೂರ ಉಳಿದು ಬಿಟ್ಟರು. ಗೇಲಿ ಮಾಡಿ ನಕ್ಕರು. ಈಗದು ಶಾಪವಾಗಿ ನಗೆಪಾಟಲಿಗೀಡಾಗುವ ಸರದಿ ಅವರದ್ದಾಗಿದೆ” ಅಂತ ನಕ್ಕು ಬಿಡುತ್ತಿದ್ದಳು.

ಶೃಂಗಾರ ಭರಿತ ಕಥೆ, ಕವನಗಳನ್ನು ನಾನು ಬರೆದಾಗ ಅಲ್ಲಿನ ನಾಯಕಿಯರ ಸೊಬಗಿನಲ್ಲಿ ಅವಳಿರುತ್ತಿದ್ದಳು. ಅದು ಅವಳಿಗೂ ಗೊತ್ತು. ಇಡೀ ಕಾಲೇಜಿಗೆ ಗೊತ್ತು. “ಅಯ್ಯೊ ಬೆಪ್ಪೆ ನನಗಿಂತ ಚೆಲುವೆಯರನ್ನು ನೀನು ನೋಡೇಯಿಲ್ಲ ಅಂತ ಕಾಣುತ್ತೆ ಪಾಪ’ ಎಂದವಳು ಕನಿಕರಿಸುತ್ತಿದ್ದ ಬಿಂಕದ ಹಿಂದೆ ಅವಿತಿರುತ್ತಿದ್ದ ಹೆಮ್ಮೆಯನ್ನವಳ ಮೊಗ ಮುಚ್ಚಿಡುವಲ್ಲಿ ಸೋಲುತ್ತಿತ್ತು. ಆ ಜಮಾನದಲ್ಲೇ ಆವಳು ಸ್ಕರ್ಟ್ ಹಾಕುತ್ತಿದ್ದಳು. ಈಗಿನ ಚೂಡಿದಾರ್ ಆಗ ಸಲ್ವಾರ್ ಕಮೀಜಾಗಿತ್ತು. ಅದವಳಿಗೆ ಪ್ರಿಯ. ಮಾಮುಲಾಗಿ ಲಂಗ, ದಾವಣಿ ಹುಡುಗಿ. ಹಬ್ಬ-ಹರಿದಿನ, ಕಾಲೇಜಿನ ಸಮಾರಂಭಗಳಲ್ಲಿ ಸೀರೆ ಉಟ್ಟರಂತೂ ಅದ್ಭುತ. ಲೆಕ್ಚರರ್ಗಳಲ್ಲಿ ಕೂಡ ಅವಳನ್ನು ಇಷ್ಟಪಡುವವರಿದ್ದಾರೆಂಬ ಗುಮಾನಿ ಹುಡುಗರಲ್ಲಿತ್ತು. ಅವಳೂ ಎಲ್ಲರೊಡನೆ ಒಂದಾಗಿ ಬಿಡುತ್ತಿದ್ದಳು. ಮುಗಿಯದ ಮಾತು, ತೀರದ ಹರಟೆ, ನಿಲ್ಲದ ನಗು ಹೀಗಾಗಿ ಅವಳು ಎಲ್ಲರಿಗಿಂತ ಸೆಂಟ್‌ಪರ್ಸೆಂಟ್ ನನ್ನನ್ನೇ ಹಚ್ಚಿಕೊಂಡಿದ್ದಾಳೆಂಬ ಬಗ್ಗೆ ನನಗೇ ಖಾತರಿ ಇರಲಿಲ್ಲ. ಆದರೆ ನನ್ನನ್ನು ಕಂಡಾಗ ಅವಳ ಕಂಗಳಲ್ಲಿ ಮಿಂಚುತ್ತಿದ್ದ ಸಂಭ್ರಮ. ಬಿರಿಯುವ ತುಟಿಗಳ ನಡುವಿನ ಹಿಗ್ಗು ಮಾತುಗಳಲ್ಲಿ ಮೂಡುವ ಪ್ರೀತಿಯ ಇಬ್ಬನಿಯನ್ನೇ ನಂಬಿಕೊಂಡಿದ್ದೆನಾದರೂ ಸಿನಿಮಾ ಹೀರೋಗಳಂತೆ, ‘ಐ ಲವ್ ಯು’ ಎಂದು ಹೇಳುವ ಧೈರ್ಯ ನನ್ನಲ್ಲಿ ಮೊಳಕೆಯೊಡೆಯಲು ತಿಣುಕಾಡುತ್ತಿತ್ತು. ನಮ್ಮ ಕಾಲದ ಸಿನಿಮಾ ಹೀರೋಗಳಿಗೂ ಅಂಥ ಧೈರ್ಯವಿರಲಿಲ್ಲವೆನ್ನಿ. ರಾಜ್‌ಕುಮಾರ್ ಸಿನಿಮಾ ನೋಡಿ ಹಿರಿಯರನ್ನು ಗೌರವಿಸುವ, ಕಿರಿಯರ ಬಗ್ಗೆ ಕನಿಕರಿಸುವ, ಹೆತ್ತವರನ್ನು ಪ್ರೀತಿಸುವ, ಒಡಹುಟ್ಟಿದವರಲ್ಲಿ ಅಂತಃಕರಣ ಸೂಸುವುದನ್ನು ಕಲಿತವರು ನಾವು ಎಂಬುದು ನನ್ನ ನಂಬುಗೆ. ಎರಡು ವರ್ಷ ಕಾಲೇಜಲ್ಲಿ ಒಡನಾಡಿ ದುರ್ಗದ ಕೋಟೆ ಹತ್ತಿಳಿದರೂ ಮನಸ್ಸುಗಳು ವಟವಟ ಅಂದವೇ ವಿನಾ ಪಿಸು ಮಾತು ಆಡಲೇಯಿಲ್ಲ. ಇನ್ನೇನು ಓದು ಒಂದು ವರ್ಷ ಬಾಕಿ ಉಳಿದಿರುವಾಗ ಅವಳ ಫುಲ್ ಹೆಸರಿನ ಅರ್ಧ ಭಾಗ ಬಳಸಿಕೊಂಡು ಪ್ರೇಮಪತ್ರದ ಧಾಟಿಯಲ್ಲಿ ಕಥೆಯೊಂದನ್ನು ಬರೆದು ಪತ್ರಿಕೆಗೆ ಕಳಿಸಿದೆ. ಎರಡು ತಿಂಗಳಾದರೂ ಪ್ರಕಟವಾಗಲಿಲ್ಲ ವಿಷಾದ ಕಾರ್ಡೂ ಇಲ್ಲ ಸುಮಾರು ಐವತ್ತು ಕಥೆಗಳ ಮೇಲೆ ಬರೆದು ಸಾಕಷ್ಟು, ನೇಮು-ಫೇಮು ಪಡೆದಿದ್ದರೂ ಹೀಗಾಯಿತಲ್ಲ ಎಂಬ ಒಳಗುದಿ. ಈವರೆಗೆ ಪ್ರಕಟವಾದವು ನನ್ನ ಕಥೆಗಳೇ ಆಲ್ಲ ಮತ್ತೆಂದೂ ಬರೆಯೋದೇ ಇಲ್ಲ ಎಂದು ದುರ್ಗದ ಬಂಡೆಕಲ್ಲುಗಳ ಎದುರು ಕೂಗಾಡಿ ಕಣ್ಣೀರಿಟ್ಟೆ. ನನ್ನ ಮೋರೆ ಮಂಕಾಗಿದ್ದುದನ್ನಾಗಲೇ ಅವಳು ಗ್ರಹಿಸಿದ್ದಳು. ನನಗೊಂದಿಷ್ಟು ಬೇಸರವಾದರೂ ಪತ್ತೆ ಹಚ್ಚಿ ಬಿಡುವಷ್ಟು ಸೂಕ್ಷ್ಮಗ್ರಾಹಿ. “ಯಾಕೋ ಡಲ್ಲಾಗಿದಿ? ಇತ್ತೀಚೆಗೆ ಏನೂ ಬರೆಯಲೇಯಿಲ್ವ ತಲೆ ಖಾಲಿನಾ?” ಅಂತ ರೇಗಿಸಿದಳು. ಮನೆಯಲ್ಲಿ ನನ್ನ ಅನ್ಯ ಮನಸ್ಕತೆ ತಂಗಿಯರ ಗೇಲಿಗೆ ಗುರಿಯಾಗಿತ್ತು. “ಏನಣ್ಣಾ ಆ ಬಾಂಬ್ರ ಹುಡುಗಿ ಏನಾರ ಮುನಿಸ್ಕೊಂಡವ್ಳಾ… ಮಾತು ಬಿಟ್ಟಾಳ ಹೆಂಗೆ?” ಅವರ ಹುಡುಗಾಟಿಕೆ.

“ಅವಳ್ಯಾರೆ? ನನಗೆ- ಅವಳಿಗೆ ಏನೇ ಸಂಬಂಧ ಕತ್ತೆಗಳೇ” ಅಂತ ಕೂಗಾಡುವಾಗ ಅಮ್ಮ ಕೂಡ ನಗೆಯಾಡಬೇಕೆ!

ನಿರ್ವಿಣ್ಣನಾಗಿ ಕಾಲೇಜಿನತ್ತ ಹೆಜ್ಜೆ ಹಾಕಿದೆ. ಶರಭ ಗೇಟಿಗೆ ಓಡಿ ಬಂದ. “ನಿನ್ನ ಕಥೆ ಬಂದೇತೆ ಕಣಲೆ” ಅಂತ ಪ್ರಜಾವಾಣಿ ತೆರೆದ. ಹೃದಯದಲ್ಲಿ ಕಾರಂಜಿ ಚಿಮ್ಮಿತು. “ಆಲ್ಲಲೆ, ಇದೇನು ಸ್ಟೋರಿನೋ! ಲವ್ವು ಲೆಟರೋ?” ಶಾಂತರಾಜನ ದನಿಯಲ್ಲಿ ಗಾಬರಿಯಿತ್ತು ಚಿಮ್ಮುವ ಕಾರಂಜಿ ಥಟ್ಟನೆ ನಿಂತಿತು. ಎದೆಯಲ್ಲಿ ತಮಟೆ. ಕಥೆ ನೋಡಿದಳೋ ಹೆಂಗೆ. ಮೊದಲಿಗೆ ಅವಳೇ ತಂದು ಕೊಡಬೇಕಿತ್ತಲ್ಲ. ಕಥೇ ಓದಿ ಗರಂ ಆದಳೆ? ಸಣ್ಣಗೆ ಬೆವರಿದೆ. ಕ್ಲಾಸ್ ರೂಮಲ್ಲೂ ಅವಳಿಲ್ಲ ಬಾಟನಿ ತಲೆಯ ಒಳಗೇ ತೂರಲಿಲ್ಲ. ಜಿಯಾಲಜಿ ಪ್ರಾಕ್ಟಿಕಲ್‌ನಲ್ಲಿ ಕಪ್ಪೆಯ ಏಳನೆಯ ನರ ಸಿಗಲೇ ಇಲ್ಲ. ಲೆಕ್ಚರರ್ರೂ ಗರಂ ಆದರು. ಅವಳು ಎರಡು ದಿನ ಕಾಲೇಜಿಗೆ ಬರಲಿಲ್ಲ ನಾನು ಮನುಷ್ಯನಾಗುಳಿದಿರಲಿಲ್ಲ. ಊಟ, ತಿಂಡಿ, ಮಾತು, ಗೆಳೆಯರು ಯಾವುದೂ ಹಿತ ನೀಡಲಿಲ್ಲ ಅಂತೂ ಮರು ದಿನ ಚಿತ್ತೈಸಿದಳು. ಮಾತನಾಡಿಸುವ ಧೈರ್ಯವಾಗಲಿಲ್ಲ ಅವಳೂ ಗೆಳತಿಯರೊಡನೆ ಇದ್ದು ಬಿಟ್ಟಳು. ಒಮ್ಮೆಯೂ ನನ್ನತ್ತ ನೋಡದ್ದರಿಂದ ಕುಸಿದುಹೋಗಿದ್ದೆ. ಎಂಥ ಅಪರಾಧವಾಯಿತು. ಕನಿಷ್ಟ ಅವಳು ಸ್ನೇಹಿತೆಯಾಗಾದರೂ ಕೊನೆಯವರೆಗೂ ಉಳಿಯುತ್ತಿದ್ದಳೇನೋ? ಅದಕ್ಕೂ ಕಲ್ಲು ಬಿತ್ತಲ್ಲ ಮೊದಲ ಬಾರಿಗೆ ಸಾಯಬೇಕೆನಿಸಿತು. ಕೃಷ್ಣರಾಜೇಂದ್ರ ಲೈಬ್ರರಿ ಪಾರ್ಕಿನ ಬಳಿ ಬೈಸಿಕಲ್ ನಿಲ್ಲಿಸಿಕೊಂಡು ನಿಂತಿದ್ದ ಅವಳು ಕಂಡಳು. ಭಯವಾಯಿತು. ಅವಳೇ ಸನ್ನೆ ಮಾಡಿ ಕರೆದಳು. ಒಳಹೋದೆವು. ಒಂದೆಡೆ ಅವಳು ಕುಳಿತಳು, ನಾನು ನಿಂತೇ ಇದ್ದೆ. ಸನ್ನೆ ಮಾಡಿದಳು, ಕೂತೆ.

“ಯಾಕೆ ಮಾತಾಡ್ತಾ ಇಲ್ಲ?” ದುರುಗುಟ್ಟಿದಳು.

“ಮಾತಾಡೋದೇಕೆ ಎಲ್ಲಾ ಕಥೆನಲ್ಲೇ ಬರೆದುಬಿಡೋಣ, ಊರುಕೇರಿಯಲ್ಲೆಲ್ಲಾ ಸುದ್ದಿಯಾಗ್ಲಿ ಅಂತ ಪ್ಲಾನಾ?” ವ್ಯಂಗ್ಯದ ಚಾವಟಿ ಬಾರಿಸಿದಳು.

“ಅದು ಆಕ್ಚ್ಯುವಲಿ ಸ್ಟೋರಿ… ಕಥೆನಾ ಕಥೆ ಅಂತಲೇ ತಿಳಿಬೇಕು” ಉಗುಳು ನುಂಗಿದೆ.

“ಮತ್ತೆ ನನ್ನ ಹೆಸರೇಕೆ ಬಳಸಿಕೊಂಡೆ?” ಇರಿಯುವ ಪರಿ ನೋಡಿದಳು.

“ಮಿಸ್ಟೇಕ್ ಮಾಡ್ಕೋಬೇಡ್ವೆ ನಿನ್ನ ಹೆಸರಿನೋರು ಎಷ್ಟು ಜನ ಇಲ್ಲ ಹೇಳು” ಅಂದೆ. ಅವಳು ಮೈ ಚಳಿ ಬಿಟ್ಟು ನಕ್ಕಳು. ನನಗೆ ದಿಗಿಲಾಯಿತು.

“ಅಯ್ಯೋ ಪಾಪಿ. ಹೌದು ನಿನ್ನ ಹೆಸರೇ ಬರ್‍ದೆ ಕಣೆ… ಏನೀಗ? ಇಷ್ಟ ಇದ್ದರೆ ಒಪ್ಕೋ ಇಲ್ಲ ಅದನ್ನ ಕಥೆ ಅಂತ ತಿಳ್ಕೋ ಎಂದೆಲ್ಲಾ ದಬಾಯಿಸ್ತೀಯಾ ಅನ್ನೊಂಡಿದ್ನಲ್ಲೋ… ಥೂ ನಿನ್ನ. ನಿನ್ನಂಥ ಡರ್ ಪೋಕ್‌ಗಳಿಗೆಲ್ಲ ಲವ್ವು. ಅದಕ್ಕೂ ದಮ್ಮಿರಬೇಕು” ತಲೆಗೆ ಪಟ್ಟನೆ ಹೊಡೆದಳು-

ಅವಮಾನವೆನಿಸಿತಾದರೂ ಅವಳ ನಾನ್‌ಸ್ಟಾಪ್ ನಗೆಯಿಂದಾಗಿ ಧೈರ್ಯ ತಂದುಕೊಂಡೆ.

“ಪ್ರೇಮ ಒನ್ ವೇ ಟ್ರಾಫಿಕ್ ಆಗಿರಬಾರ್‍ದು. ನೀನು ಹೂಂ ಅನ್ನು, ಇಡೀ ಜಗತ್ತಿಗೆ ಸವಾಲ್ ಹಾತ್ತೀನಿ” ಅಂದೆ.

“ಅಲ್ಲಪ್ಪ ಗೋಪಾಲಿ. ನೇರವಾಗಿ ಹೇಳೋದು ಬಿಟ್ಟು ಕಥೇ ಬರೆದು ರಂಪ ಮಾಡೋ ಅಗತ್ಯವಿತ್ತಾ? ನನ್ನ ಮನೆಯವರಾಗಲೆ ನನ್ನನ್ನು ಕಸ್ಟಡಿಗೆ ತಗೊಂಡಾಯ್ತು. ಮನೆಯವರಿಗೀಗ ನಮ್ಮ ಮೇಲೆ ಗುಮಾನಿ. ಇನ್ನು ಮುಂದೆ ನಮ್ಮ ಭೇಟಿ ಮೊದಲಿನಂತೆ ಸುಲಭವಲ್ಲ ನಮ್ಮಪ್ಪ ಅಣ್ಣಂದಿರ ಕಣ್ಣು ಸದಾ ನನ್ನ ಸುತ್ತ ಗಿರ್ಕಿ ಹೊಡೆಯೋದು ಗ್ಯಾರಂಟಿ… ನಿನ್ನ ಕತೆ ಅಷ್ಟರ ಮಟ್ಟಿಗೆ ಯಶಸ್ವಿ” ನಿಡುಸುಯ್ದಳು. ನನಗೇನು ಹೇಳಬೇಕೋ ತೋಚಲಿಲ್ಲ. ‘ನೀನು ಮೊದಲು ಹೋಗು. ನಾನೊಂದಿಷ್ಟು ಲೇಟಾಗಿ ಬರ್ತೀನಿ’ ಎಂದವಳೇ ಲೈಬ್ರರಿಯತ್ತ ನಡೆದಳು. ಪರಿಸ್ಥಿತಿಯ ಗಾಢತೆ ಅರಿವಾಗಿ ಖಿನ್ನನಾದೆ.

ಮನೆಗೆ ಬಂದೆ. ಅಮ್ಮ ಕಾಫಿ ತಂದಿಟ್ಟಳು. ಪ್ರಜಾವಾಣಿ ಹಿಡಿದು ಕೂತ ತಂದೆ ಕಂಡರು. ಗಂಟಲಲ್ಲಿ ಕಾಫಿ ಇಳಿಯಲಿಲ್ಲ. ಹೊರಗೆದ್ದು ಓಡಬೇಕೆನಿಸಿತು. “ಕಥೆ ತುಂಬಾ ಚೆನ್ನಾಗಿದೆ ಕಣೋ ಮಗನೆ” ಯಾವತ್ತೂ ನನ್ನ ಕಥೆ ಬಗ್ಗೆ ಮಾತನಾಡದ ಅಪ್ಪ ಬಾಯಿಬಿಟ್ಟರು.

“ಇದೇನು ಕಥೇನಯ್ಯಾ? ಕಥೆಯ ಹೆಸರಿನಲ್ಲಿ ಪ್ರೇಮಪತ್ರಬರೆಯೋದೂ ಒಂಥರಾ ಅಕ್ಷರ ವ್ಯಭಿಚಾರ ಕಣಯ್ಯ, ಆ ಹುಡುಗಿ ಮನೆಯವರೇನಂದುಕೊಂಡಾರು? ದೊಡ್ಡ ಕುಲಸ್ಥರು. ನಮ್ಮನ್ನ ಮುಟ್ಟೋಕೆ ಅಸಹ್ಯ ಪಡ್ತಾರೆ. ಏನಲೆ ಇದು ಹುಡುಗಾಟ. ಮಾನ ಹೋಗೋದು ನಿಂದಲ್ಲ ಅವರದ್ದು. ಅರಿವು ಗೇಡಿ ತಂದು” ಒರಟಾಗಿ ಅಂದು ಪತ್ರಿಕೆ ಬಿಸಾಕಿ ಅವರೇ ಎದ್ದು ಹೋಗಿ ಬಿಟ್ಟರು. ಅಮ್ಮ ಕಣ್ಣೀರಾಗಿದ್ದಳು. ಹಾದಿಯಲ್ಲಿ ಹೋಗುವಾಗ ಅವಳ ಅಣ್ಣಂದಿರು ನನ್ನನ್ನು ಬೆದರಿಸುವಂತೆ ನೋಡುತ್ತಿದ್ದರು. ನಾನೇನು ತಲೆ ಕೆಡಿಸಿಕೊಳ್ಳಲಿಲ್ಲ. ಪರೀಕ್ಷೆಯಲ್ಲಿ ಇಬ್ಬರೂ ಪಣತೊಟ್ಟು ಓದಿದೆವು

ನಿಜವಾದ ಸಮಸ್ಯೆ ಶುರುವಾಗಿದ್ದು ಕಾಲೇಜು ಮುಗಿಸಿದ ಮೇಲೆಯೇ. ಒಬ್ಬರನ್ನೊಬ್ಬರು ನೋಡುವುದೇ ಹರಸಾಹಸ. ಹಬ್ಬ ಹರಿದಿನ ಜಾತ್ರೆಗಳನ್ನೇ ಕಾಯುವಂತಾಯಿತು. ಅಪರಿಚಿತರಂತೆ ಮನೆಯವರ ಮುಂದೆ ವರ್ತಿಸಬೇಕಿತ್ತು. ಭೇಟಿ ಮಾಡಲು ದೇವಸ್ಥಾನಗಳ ಮೊರೆ ಹೋಗಬೇಕಿತ್ತು. ದಿನ ಕಳೆಯುವುದೇ ದುಸ್ತರ. ನನ್ನ ಕಥೆ, ಕವನಗಳು ಪ್ರಕಟವಾದರೂ ಪತ್ರಿಕೆ ಹಿಡಿದವಳು ಮೊದಲಿನಂತೆ ಓಡಿಬರುತ್ತಿರಲಿಲ್ಲ.

“ಎಂಥ ಸಂತೋಷವಾಗಿ ಪೇಪರ್ ತಗೊಂಡು ಓಡಿ ಬರೋದಾ ಹುಡ್ಗಿ. ಚೆಂದನಾದ ಹುಡ್ಗಿ ದೊಡ್ಡ ಗುಣ, ನಮ್ಮಂತೋರ ಮನೆಯಾಗೆ ಕಾಫಿ ಕುಡಿಯೋದು ಪಾಪ” ಅಮ್ಮನ ಪೇಚಾಟ. ‘ಯಾಕಮ್ಮ ಚಿಂತೆ ಮಾಡ್ತಿ. ಒಂದೇ ಸಲ ಸೊಸೆಯಾಗಿ ಬರ್ತಾಳೆ ಬಿಡು’ ಎಂದೆನ್ನಬೇಕೆನಿಸಿದರೂ ನಕ್ಕು ಬಿಡುತ್ತಿದ್ದೆ. ಪರೀಕ್ಷೆ ಪಲಿತಾಂಶವೂ ಬಂತು. ನನ್ನದು ಸೆಕೆಂಡ್ ಕ್ಲಾಸ್. ಅವಳದು ಸೆವೆಂತ್ ರ್‍ಯಾಂಕ್. ಪತ್ರಿಕೆಗಳಲ್ಲವಳ ಫೋಟೋ ಬೇರೆ. ಬೇಕೆಂದೇ ಎಲ್ಲರಂತೆ ನಾವೂ ಕಾಲೇಜಿಗೆ ಹೋದೆವು. ರಿಸಲ್ಟ್ ಅನೌನ್ಸ್ ಮಾಡಿದ್ದರು. ನಾನು, ಆವಳು ಕ್ಯಾಂಟೀನ್ ಸೇರಿ ಮೂಲೆ ಹಿಡಿದು ಕೂತೆವು. ನಾನೇ ಐಸ್ ಕ್ರೀಮ್ ತರಿಸಿದ ನೆನಪು.

“ಮುಂದೇನು ಮಾಡಬೇಕಂತಿದಿಯೋ?” ಪ್ರಶ್ನಿಸಿದಳು.

“ಮದುವೆ ಆಗೋಣ ಅಂತಿದೀನಿ” ನಕ್ಕೆ.

“ಬಿ ಸೀರಿಯಸ್…” ದೊಡ್ಡದಾಗಿ ಕಣ್ಣರಳಿಸಿದಳು.

“ಮುಂದೆ ಓದಿಸೋ ತಾಕತ್ತು ಅಪ್ಪನಿಗಿಲ್ಲ ಎಲ್ಲಾದ್ರೂ ನೌಕರಿ ಹಿಡೀಬೇಕು” ಅಂದೆ.

“ನಿಮಗೇನು, ಸಿಗುತ್ತೆ ಬಿಡಪ್ಪ ಮೀಸಲಾತಿ ವೀರರು” ನಕ್ಕಳು, ನಾನು ನಗಲಿಲ್ಲ

“ಯಾಕೆ ಮೀಸಲಾತಿ, ಮೊದ್ಲುನಿಮಗಿರಲಿಲ್ವೆ ರಾಜ ಮಹಾರಾಜರ ಕಾಲದಲ್ಲಿ” ರೇಗಿಸಿದೆ.

“ಹೋಗ್ಲಿ ಬಿಡಪ್ಪ. ಜಾತಿ ಇರೋವರ್ಗೂ ಮೀಸಲಾತಿ ಇರ್‍ಲಿ. ನಿನ್ನನ್ನು ಪ್ರೀತಿಸ್ತೀನಿ ಅಂದ್ಮೇಲೆ ಮೀಸಲಾತಿ ದ್ವೇಷಿಸ್ತೀನಾ?” ಅವಳ ಮಾತುಗಳಲ್ಲಿ ಭವಿಷ್ಯವನ್ನು ರೂಪಿಸುವ ಕಾತರವಿತ್ತು.

“ನೀನೇನ್ ಮಾಡ್ಬೇಕು ಅಂತಿದ್ದಿ?” ಕೇಳಿದೆ.

“ಎಂ.ಎಸ್ಸಿ. ಓದೋಕೆ ಮೈಸೂರಿಗೆ ಓಡಿಸ್ತಾರೆ ನನ್ನ. ಜಾಸ್ತಿ ಓದಿದ್ರೆ ನಿನಗಿಂತ ಜಾಸ್ತಿ ಓದಿದವರನ್ನೆಲ್ಲಿ ತರೋದೆ? ಡಿಗ್ರಿ ಮುಗಿಸು ಸಾಕು ಅಂತ ರಾಗ ಎಳೀತಿದ್ದ ಜನ ರಾಗ ಬದಲಾಯಿಸಿ ಬಿಟ್ಟರು ಕಣೋ.

“ನನಗಂತೂ ಇಷ್ಟವೇ ಇಲ್ಲ ಕಣೋ”

“ಯಾಕೆ? ನೀನು ಲಕ್ಕಿ ಗರ್ಲ್ ಕಣೆ.”

“ನಿನ್ನನ್ನು ಬಿಟ್ಟು ಇರಬೇಕಲ್ವೋ.”

“ಈಗ ನಾವೇನ್ ಜೊತೆಗಿದ್ವಾ?”

“ಒಂದೇ ಊರಲ್ಲಿ ಇದ್ದೇವೆ ಅನ್ನೋ ಭಾವನೆಯೇ ಸಾಕು. ಅದೆಂಥ ಕಾನ್ಫಿಡೆನ್ಸ್ ತಂದು ಕೊಡುತ್ತೆ ಗೊತ್ತಾ” ಅತ್ತೇ ಬಿಟ್ಟಳು. ಮುಂದೆಲ್ಲಾ ನೋಟವೇ ಮಾತಾಯಿತು.

ಅವಳು ಎಂ.ಎಸ್ಸಿ. ಓದಲು ಮೈಸೂರು ಸೇರಿದಳು. ನಾನು ಕೆಲಸಕ್ಕೆ ಅರ್ಜಿ ಗುಜರಾಯಿಸುತ್ತಾ ಬಂದ ಇಂಟರ್‍ವ್ಯೂಗಳನ್ನು ಫೇಸ್ ಮಾಡುತ್ತಾ ಜೀವನದ ಜತೆ ಚೇಸ್ಗೆ ನಿಂತೆ. ಆಗಾಗ ಅವಳಿಂದ ಬರುತ್ತಿದ್ದ ಪತ್ರಗಳೇ ನನ್ನಲ್ಲಿ ಚೈತನ್ಯ ಮೂಡಿಸುತ್ತಿದ್ದವು. ಅವಳು ರಜಾಕ್ಕೆ ಬಂದರೂ ಭೇಟಿ ಕಷ್ಟವಾಗುತ್ತಿತ್ತು. ಒಂದೆರಡು ಸಲ ಕದ್ದು ಕೋಟೆಯಲ್ಲಿ ಭೇಟಿಯಾದಾಗ ಗೋಪಾಲಕ್ಟಷ್ಣಸ್ವಾಮಿ ದೇವಸ್ಥಾನದ ಹಿನ್ನೆಲೆಯಲ್ಲಿನ ಕೋಡುಗಲ್ಲುಗಳ ಹಿಂಬದಿ ಸೇರಿಬಿಟ್ಟ ನಾವು ಸಂಜೆಗೇ ಇಳಿದಿದ್ದು. ಅದಷ್ಟೂ ಹೊತ್ತು ಅದೇನು ಮಾತಾಡಿದೆವೋ ಅದೆಷ್ಟು ನೋಟದಲ್ಲೇ ಆಪೋಶನ ತೆಗೆದುಕೊಂಡೆವೋ ಕೆಳಗಿಳಿದು ಬರುವಾಗ ಸಂಜೆ ಗತ್ತಲು. ಟೀಕಿನ ಬಾಗಿಲ ಬಳಿ ನಿಂತ ಅವಳೇ ಅಪ್ಪಿಕೊಂಡಳು, ಮುತ್ತಿಟ್ಟಳು. ನಾನು ಹೆಬ್ಬಾವಿನಂತಾದೆ, ಜಾಗೃತಳಾಗಿ ಅಪ್ಪುಗೆ ಸಡಿಲಿಸಿದಳು. ಆಮೇಲೆ ಒಂದೆರಡು ಸಲ ಚಂದ್ರವಳ್ಳಿ ಹಿಮವದ್ ಕೇದಾರದಲ್ಲಿ ಸಿಹಿಮುತ್ತುಗಳ ವಿನಿಮಯವಾದಷ್ಟೇ. ಅವಳು ಮತ್ತೆ ಮೈಸೂರು. ಕೆಲಸ ಸಿಗದೆ ನನ್ನದು ಬೇಸೂರು. ಎಂ.ಎಸ್ಸಿಯನ್ನು ಅವಳು ಫಸ್ಟ್ ಕ್ಲಾಸಿನಲ್ಲಿ ಮುಗಿಸಿದ್ದಳು. ಅದರ ಸಂತೋಷ ಅರಗಿಸಿಕೊಳ್ಳುವ ಮುನ್ನವೇ ಅವಳ ಮದುವೆ ಫಿಕ್ಸ್ ಆದ ಸುದ್ದಿ ದುರ್ಗದ ಗಾಳಿಯಲ್ಲಿ ದುರ್ನಾತ ಹಬ್ಬಿಸಿತು. ಅವಳನ್ನು ಮೀಟ್ ಮಾಡಲು ಹೆಣಗಾಡಿದೆ. ಕೊನೆಗೆ ಶರಭನ ಮನೇಲಿ ಫ್ರೆಂಡ್ಲಿ ಮೀಟ್ ಅಂತ ಸೇರಿದೆವು. ಅವನ ಹೆಂಡತಿಗೆ ಅನುಮಾನ ಬಾರದಂತೆ ವರ್ತಿಸಬೇಕಿತ್ತು. ನಿಂಬೆ ಹಣ್ಣು ತರುವ ನೆವ ಮಾಡಿ ಅವನೇನೋ ಏಕಾಂತ ಒದಗಿಸಿದ.

“ನಾನು ಕೇಳಿದ ಸುದ್ದಿ ನಿಜವೇ?” ಕೇಳಿದ ನನ್ನ ಕಣ್ಣಲ್ಲಾಗಲೇ ನೀರು, ತಲೆಯಾಡಿಸಿದಳು.

“ಜಾತಿವಾದಿಗಳಿಗೆ ಬುದ್ದಿ ಕಲಿಸಬೇಕು. ಎಲ್ಲಿಯಾದರೂ ಓಡಿಹೋಗೋಣ ನಡಿ” ಅಂತ ಒದರಿದೆ.

“ಕಲಿಯಬೇಕಾದದ್ದು ನೀನು, ಎಲ್ಲಿಗಪ್ಪಾ ಓಡಿಹೋಗ್ತಿ? ಓಡಿ ಹೋಗಿ ಏನ್ ಸಾಧಿಸ್ತೀಯಾ?”

“ಏನೇ ಹಂಗಂದ್ರೆ?”. ಚೀರಿದೆ.

“ನಿನಗೊಂದು ಕೆಲಸವಿಲ್ಲ, ಓಡಿಹೋದ್ರೆ ಬದುಕೋದು ಹೇಗೆ?”

“ಬದುಕೋಕೆ ಆಗದಿದ್ರೆ ಸಾಯೋಣ” ಅವಳ ಕೈಗಳನ್ನು ಹಿಡಿದೆ. ನಿಧಾನವಾಗಿ ಬಿಡಿಸಿಕೊಂಡಳು.

“ಯಾವಾಗಲೂ ಪ್ಯೂಚರ್ ಬಗ್ಗೆ ಪ್ರಾಕ್ಟಿಕಲ್ ಆಗಿ ಯೋಚನೆ ಮಾಡಬೇಕೋ.”

“ಹಾಗಾದ್ರೆ ನಾವಿಬ್ಬರೂ ಪ್ರೇಮಿಸಿದ್ದು ಸುಳ್ಳಾ?” ರೇಗಿದೆ.

“ಡೋಂಟ್ ಶೌಟ್. ಆಗ ಅದು ನಿಜ. ಈಗ ಬೇರೊಬ್ಬನ ಜೊತೆ ಮದುವೆಯಾಗ್ತಿರೋದು ನಿಜ”

“ಇವೆರಡರಲ್ಲಿ ಒಂದು ಸುಳ್ಳಾಗಿರಬೇಕಲ್ಲ?” ಚುಚ್ಚಿದೆ.

“ಕಳೆದು ಹೋದ ದಿನಗಳು ಸುಳ್ಳಲ್ಲ. ಅವೆಲ್ಲಾ ಸವಿ ನೆನಪು. ಮುಂಬರುವ ದಿನಗಳೂ ಸುಳ್ಳಲ್ಲ. ಉತ್ತಮ ಭವಿಷ್ಯ ಕಲ್ಪಿಸುವ ಶಕ್ತಿ ಯಾವುದಕ್ಕಿದೆಯೋ ಅದನ್ನೇ ಆರಿಸ್ಕೋಬೇಕು ಕಣೋ.”

“ಪ್ರೇಮ ಒಬ್ಬನ ಜತೆ, ಮದುವೆ ಒಬ್ಬನ ಜತೆನಾ? ಇದು ವ್ಯಭಿಚಾರ ಆಲ್ವಾ?”

“ಗುಡ್ ಓಲ್ಡ್ ಡೈಲಾಗ್. ದೇಹ ಇನ್ನೊಬ್ಬನದಾಗಬಹುದು. ಮನಸ್ಸು ಮಾತ್ರ ಯಾವತ್ತೂ ನಿನ್ನದೇ ಕಣೋ. ದೇಹವನ್ನು ಪ್ರೀತಿಸೋದು ಕಾಮ. ಮನಸ್ಸುಗಳ ಪ್ರೀತಿ ನಿಷ್ಕಾಮ ಪ್ರೇಮ. ಸಾಯೋವರೆಗೂ ನಾವು ಪ್ರೇಮಿಗಳೆ” ವಾದ ಮಾಡಿ ಬಾಯಿ ಮುಚ್ಚಿಸಲು ಪ್ರಯತ್ನಿಸಿದಳು.

“ಹಾಗಾದರೆ ನಾನು ಮದುವೇನೇ ಆಗೋಲ್ಲ.. ನಿನ್ನ ನೆನಪೇ ಸಾಕು” ಅಂದೆ.

“ಅದು ನಿನ್ನಿಷ್ಟ.. ಆದರೆ ಆವೇಷದ ಮಾತುಗಳಿಗೆ ಆಯಸ್ಸಿಲ್ಲ ಕಣೋ” ಅಂದಳು.

“ಛಾಲೆಂಜ್?” ಸವಾಲು ಹಾಕದೆ ತಲೆ ತಗ್ಗಿಸಿದಳು.

ಅಂದು ಮೌನವಾದವನು ನಾನು ಮತ್ತೆಂದೂ ಅವಳ ಬಗ್ಗೆ ಮಾತಾಡುವ ಗೊಡವೆಗೇ ಹೋಗಲಿಲ್ಲ. ಇಂಜಿನಿಯರ್ ಒಬ್ಬನ ಜತೆ ಮದುವೆಯಾದ ಅವಳು ರಾಜಧಾನಿ ಸೇರಿಕೊಂಡಳು. ಒಂದೆರಡು ವರ್ಷಗಳಲ್ಲೇ ಅವರಪ್ಪನಿಗೆ ವರ್ಗವಾಗಿ ದುರ್ಗ ಬಿಟ್ಟ. ಕಥೆ ಕವನಗಳನ್ನು ಗೀಚುತ್ತಾ ನಾನವಳನ್ನು ಮರೆಯಲು ಯತ್ನಿಸಿದೆ. ಕಡೆಗೆ ಹೈಸ್ಕೂಲ್ ಕೆಲಸ ಸಿಕ್ಕಿದ್ದೇ ಪುಣ್ಯವೆನಿಸಿತು. ಇಷ್ಟು ವರ್ಷ ಅವಳು ನನಗಾಗಿ ಕಾಯಲು ಸಾಧ್ಯವಿತ್ತೇ? ಅವಳು ಮಾಡಿದ್ದು ಅವಳ ಭವಿಷ್ಯದ ದೃಷ್ಠಿಯಿಂದ ಸರಿ ಅನ್ನಿಸಿತ್ತು. ನೆನಪುಗಳು ಮಾತ್ರ ನೆರಳಿನಂತೆ ಬೆನ್ನಟ್ಟಿದ್ದವು. ನನ್ನ ಒಂದು ಕಥೆಯೋ ಕಾದಂಬರಿಯೋ ಪ್ರಕಟವಾದಾಗ ಅವಳು ನೋಡಿರಬಹುದೇ ಮೆಚ್ಚಿರಬಹುದೇ ಎಂಬ ತಹತಹ ಮೂವತ್ತು ವರ್ಷಗಳಾದರೂ ಕೊಂಚವೂ ಹಿಂಗಿರಲಿಲ್ಲ. ಬೆಂಗಳೂರಿನಲ್ಲಿನ ಕಛೇರಿಗಳಿಗೆ ಕೆಲಸದ ನಿಮಿತ್ತ ಎಡತಾಕಿದರೂ ನಾನವಳನ್ನೆಂದೂ ಹುಡುಕಿಕೊಂಡು ಹೋಗಿ ಮಾತನಾಡಿಸುವ ಸಾಹಸ ಮಾಡಲಿಲ್ಲ. ಭೂಮಿ ದುಂಡಾಗಿದೆ ಅನ್ನುವಂತೆ ಮತ್ತೆ ಸಿಕ್ಕಿದ್ದು ಆವಳೇ. ರವೀಂದ್ರ ಕಲಾಕ್ಷೇತ್ರದ ಸನಿಹದ ಹೋಟೆಲ್‌ನಲ್ಲೇ ಕಾಫಿ ಕುಡಿದೆವು.

“ಹೇಗಿದ್ದೀಯೋ?” ದಿಟ್ಟಿಸಿದಳು. ಸುಮ್ಮನೆ ನಕ್ಕೆ.

“ಏನ್ ಮಾಡ್ತಿದಿಯಾ?” ಕೇಳಿದಳು, ಹೇಳಿದೆ.

“ನಿನ್ನ ಕಥೆ ಏನೇ! ಕಾರು-ಗೀರು ಇಟ್ಕೊಂಡು ಜಂ ಅಂತ ಇದೀಯಾ?” ತಮಾಷೆ ಧಾಟಿಯಲ್ಲಿ ಮಾತನಾಡಲೆತ್ನಿಸಿದರೂ ದನಿಯಲ್ಲಿ ಗಾಂಭೀರ್ಯವಿತ್ತು. ಸಣ್ಣಗೆ ನಕ್ಕಳು.

“ಗಂಡ-ಮಕ್ಕಳ ಬಗ್ಗೆ ಏನೂ ಹೇಳಲ್ವಾ?” ಕೇಳಿದೆ.

“ಇಬ್ಬರು ಹೆಣ್ಣು ಮಕ್ಕಳು ಸಾಫ್ಟ್‌ವೇರ್ ಮಾಡಿದ್ದಾರೆ. ಕೆನಡಾದಲ್ಲಿದ್ದಾರೆ. ಅಲ್ಲೇ ಮದುವೆಯಾಗಿ ಸೆಟ್ಲ್ ಆಗಿದಾರೆ”

“ವೆರಿಗುಡ್. ಇಲ್ಲಿ ನೀನು, ನಿನ್ನ ಯಜಮಾನರು ಅಷ್ಟೇ?” ಕಣ್ಣಲ್ಲಿ ಕಣ್ಣಿಟ್ಟೆ.

“ಸಧ್ಯಕ್ಕೆ ನಾನೊಬ್ಬಳೇ ಕಣೋ. ಅವರು ಹೋದ ನವೆಂಬರ್‌ನಲ್ಲಿ ತೀರಿಕೊಂಡರು” ಶಾಕ್ ಹೊಡೆದಿದ್ದು ಐದೇ ನಿಮಿಷ. ಅನಂತರ ದೇಹದಲ್ಲೆಂತದೋ ಲವಲವಿಕೆ. ಅವಳೇ ಆರಾಮವಾಗಿರುವಾಗ ನನ್ನನ್ನಾದರೂ ವಿಷಾದವೆಲ್ಲಿಂದ ಆವರಿಸೀತು?

“ವೆರಿಬ್ಯಾಡ್…” ಕ್ಷಣ ಮೌನ ಶ್ರದ್ಧಾಂಜಲಿಯ ಅನಂತರ, ಎರಡು ಮಕ್ಕಳಿಗೆ ಮದುವೆ ಮಾಡಿದೆ ಅಂತಿಯಾ. ಈಗಲೂ ನೀನು ಮದುವೆ ಹೆಣ್ಣಿನ ತರಾನೇ ಇದ್ದೀಯಲ್ಲೇ? ನಗಿಸಿದೆ.

“ಮದುವೆ ಆಗ್ತಿಯೇನೋ ನನ್ನ?” ಎಂದವಳು ಗೊಳ್ಳನೆ ನಕ್ಕಳು.

ರೋಮಾಂಚನಗೊಂಡೆ. ವಿಸಿಟಂಗ್ ಕಾರ್ಡ್ ಕೊಟ್ಟಳು. ಬೆಂಗಳೂರಿಗೆ ಬಂದಾಗ ಮನೆಗೆ ಬಾರೋ ಅಂದಳು. ಫೋನ್ ಮಾಡು ಅಂದಳು. ದುರ್ಗದ ಬಂಡೆಗಳು, ಕೋಡಗಲ್ಲುಗಳು, ಬುರುಜು ಬತೇರಿ ದೇವಸ್ಥಾನ, ಧರ್ಮಶಾಲಾ ರಸ್ತೆಯ ಗಲ್ಲಿಗಳು, ಅಂಕಳಿಗುಹೆ, ಜೋಗಿ ಮರಡಿ ಫಾರೆಸ್ಟ್, ಎಲ್ಲಾ ನೆನಪು ಮಾಡಿಕೊಂಡು ಹಗುರಾದಳು. ಗಂಡನನ್ನು ಕಳೆದುಕೊಂಡ ಅಭದ್ರತೆ, ದುಃಖದ ಛಾಯೆ ದೇಹದ ಯಾವ ಮೂಲೆಯಲ್ಲೂ ಕಾಣಲಿಲ್ಲ. ದೊಡ್ಡ ಕುಂಕುಮ, ಹೂವು, ಕಾಲುಂಗುರ ಎಲ್ಲಾ ಇದ್ದಲ್ಲೇ ಇದ್ದವು. ಸಂತೋಷವೆನಿಸಿತು. ‘ಮತ್ತೆ ಬೇಗ ಮೀಟಾಗೋಣ’ ಅಂದವಳೇ ಹಸ್ತವನ್ನು ಪ್ರೀತಿಯಿಂದ ಅಮುಕಿ ಕಾರು ಏರಿದಳು.

ಆಮೇಲೆ ಬೆಂಗಳೂರಿಗೆ ಹೋಗಲಾಗಿರಲಿಲ್ಲ ಹೋದರೂ ಅವಳ ಮನೆ ಹುಡುಕಿಕೊಂಡು ಹೋಗುವಷ್ಟು ವ್ಯವಧಾನವಿರಲಿಲ್ಲ ಒಂಥರಾ ಮುಜುಗರ. ಇಷ್ಟಾದರೂ ಅವಳು ಸಿಕ್ಕ ಅನಂತರ ನಾನು ನಾನಾಗಿರಲಿಲ್ಲ ಈ ವಾರದಲ್ಲೇ ಬೆಂಗಳೂರಿಗೆ ಹೋಗಿಬಿಡೋಣ ಅಂದುಕೊಳ್ಳತ್ತಿರುವಾಗಲೇ ಅವಳಿಂದ ಫೋನ್ ಬಂದಿತ್ತು. “ನಾಳೆ ದುರ್ಗಕ್ಕೆ ಬರ್ತಾ ಇದೀನಿ ಕಣೋ… ಯಾವುದಾದ್ರೂ ಒಳ್ಳೆ ಹೋಟೆಲ್‍ಲ್ಲಿ ರೂಮ್ ರಿಸರ್ವ್ ಮಾಡ್ಸು” ಅಪ್ಪಣಿಸಿದಳು. ಐಶ್ವರ್ಯ ಫೋ‍ರ್ಟ್‍ ಗೆ ಓಡಿ ಎಸಿ ರೂಮ್ ಬುಕ್ ಮಾಡಿಸಿದೆ. ಅಂದು ಎರೆಡೆರಡು ಸಲ ಶೇವ್ ಮಾಡಿಕೊಂಡೆ. ಮೀಸೆಗೆ ತಲೆ ಗೂದಲಿಗೆ ಗಾಡ್ರೆಜ್ ಲೇಪಿಸಿದೆ. ಜೀನ್ಸ್ ಪ್ಯಾಂಟ್, ಟೀ ಶರ್ಟ್ ಹಾಕಿ ಸ್ಕೂಟರ್ ಏರಿದೆ. ದಡದಡನೆ ಮೆಟ್ಟಿಲುಗಳನ್ನು ಏರಿ ರೂಮ್ ಬಾಗಿಲು ಬಡಿದೆ. ಬಾಗಿಲು ತೆರೆದ ಅವಳು ಕಣ್ಣು ಕುಕ್ಕಿದಳು. ಮಿಂಚುವ ನಯನಗಳು, ಲಿಪ್‍ಸ್ಟಿಕ್ ಲೇಪಿಸಿದ ತುಂಬಿ ತುಳುಕುವ ಅಧರಗಳು, ಸೇಬುಗಲ್ಲ ಮೈ ತುಂಬಾ ಮಿನುಗುವ ಆಭರಣಗಳು, ಹೊಕ್ಕುಳ ಕೆಳಗಿನ ಸೀರೆ ಬ್ರಾದಷ್ಟೇ ಇರುವ ರವಿಕೆಯಲ್ಲಿ ಉಬ್ಬಿದ ಮೊಲೆಗಳು, ನೀಳ ಕಾಯಗಳನ್ನು ನಾಚಿಸುವಂತೆ ಹರಡಿಕೊಂಡ ನಿತಂಬಗಳು ಏನೆಲ್ಲಾ ಕಂಡವು. ಗಟ್ಟಿಯಾಗಿ ಅಪ್ಪಿ ಮುತ್ತಿಡಬೇಕೆನಿಸಿತು. ಆಯ ತಪ್ಪಲಿಲ್ಲ “ಕೂತ್ಕೋ ಬಾರೋ” ಕೈ ಹಿಡಿದೆಳೆದು ಮಂಚದ ಮೇಲೆಯೇ ಕೂರಿಸಿದಳು.

“ನಮಗಿಬ್ಬರಿಗೆ ವಯಸ್ಸೇ ಆಗಿಲ್ಲವಲ್ಲೋ… ಹಾಗೆ ಇದ್ದೀವಿ” ಎಂದವಳು ಚಿಲಿಪಿಲಿ ನಕ್ಕಾಗ ಗಂಡಸುತನ ಗಡುಸಾಯಿತು. ಅವಳನ್ನೇ ನುಂಗುವಂತೆ ನೋಡುವಾಗಲೇ ಬಾತ್ ರೂಮಲ್ಲಿ ಶಬ್ಬ ಕೇಳುವಾಗ ವಿಚಲಿತನಾಗಿ ಅವಳತ್ತ ನೋಡಿದೆ.

“ನನ್ನ ಜೊತೆ ಒಬ್ಬರು ಬಂದಿದ್ದಾರೆ. ಇಂಟ್ರಡ್ಯೂಸ್ ಮಾಡ್ತೀನಿ ತಾಳು…” ಅಂದಳು. ಹೊರ ಬಂದವರನ್ನು ನೋಡಿ ಅವಾಕ್ಕಾದೆ.

“ನಾನು ಹೇಳ್ತಿದ್ನಲ್ಲರೀ… ಕಥೆಗಾರ ಗೋಪಾಲಿ ಇವನೇ ಕಣ್ರೀ” ಪರಿಚಯ ಮಾಡಿಸಿದಳು. ಕೈ ಮುಗಿದೆ, ಆತ ಗೋಣು ಆಡಿಸಿದ.

“ನಾನು ಕನ್ನಡ ಪೇಪರ್ಸ್ ಓದೋದಿಲ್ಲಯ್ಯ… ಸಾರಿ” ಅಂತ ನಕ್ಕ.

“ಬೇಗ ರೆಡಿಯಾಗ್ರಿ, ಬಿಸಿಲು ಹೆಚ್ಚಾದರೆ ಬೆಟ್ಟ ಏರೋಕೆ ಆಗಲ್ಲ” ಅಂದಳು. ಅವನು ಡ್ರೆಸ್ಸಿಂಗ್ ರೂಮ್ ಸೇರಿದ. ನೈತಿಕವೋ ಅನೈತಿಕವೋ, ಮತ್ತೆ ಇವಳು ನನಗೆ ಸಿಕ್ಕಳಲ್ಲ. ಸಂಬಂಧ ಕುದುರಿಸಬೇಕೆಂದು ತುದಿಗಾಲ ಮೇಲೆ ನಿಂತಿದ್ದ ನನ್ನ ಆಸೆಯ ಬಲೂನಿಗೆ ಸೂಜಿ ತಾಕಿತ್ತು.

“ಮದುವೆ ಆಯ್ತೇನೋ ನಿಂದು? ಮಕ್ಕಳೆಷ್ಟೋ?” ಕೀಟಲೆ ಮಾಡಿದಳು.

“ನಂದು ಹಾಳಾಗೋಗ್ಲಿ ಬಿಡು. ನಿಂದೇನೇ ಇದು ಹೊಸ ಕಥೆ?” ಅಸಹನೆಗೊಂಡೆ.

“ಒಂಟಿ ಜೀವನ ವರ್ಷತುಂಬೋದ್ರಲ್ಲೇ ಬೋರ್ ಆಯ್ತು. ಇವರು ಇನ್‌ಫೋಸಿಸ್ನಲ್ಲಿ ಅಧಿಕಾರಿ. ದುಡ್ಡು ಅಂದರೆ ಕಾಲ ಕಸ. ನಮ್ಮವರ ಬೆಸ್ಟ್ ಫ್ರೆಂಡ್ಸಲ್ಲಿ ಒಬ್ಬರು. ಸಣ್ಣ ವಯಸ್ಸಲ್ಲೇ ಹೆಂಡತಿಯನ್ನು ಕಳ್ಕೊಂಡವರು. ಪ್ರೊಪೋಸಲ್ ತಾವೇ ಮುಂದಿಟ್ಟರು… ಐ ಆಯಾಮ್ ವೆರಿ ಪ್ರಾಕ್ಟಕಲ್ ಯೂ ನೋ… ಒಪ್ಕೊಂಡೆ” ಎಕ್ಸ್‌ಪ್ಲನೇಷನ್ ಸಬ್‍ಮಿಟ್ ಮಾಡಿದಳು.

‘ನಾನು ನಿನಗೆ ನೆನಪೇ ಆಗಲಿಲ್ಲವೇ?’ ತುಟಿಯ ತುದಿಗೆ ಬಂದ ಮಾತನ್ನು ತಡೆ ಹಿಡಿದರೂ “ಮದುವೆಯ ಆನಂತರದ ಸಂಬಂಧ ಇಲ್ಲೀಗಲ್ ಅನ್ನಿಸೋದಿಲ್ಲವೇನೆ?” ಅಸೂಯೆ ಬಾಯ್ದೆರೆದಿತ್ತು.

“ಲೀಗಲ್ ಮಾಡಿಕೊಂಡ್ರಾಯ್ತು ಬಿಡಪ್ಪಾ” ನಕ್ಕ ಅವಳು, “ಕೋಟೆನಾ ನೀನೇ ನಮಗೆ ತೋರಿಬ್ಕೇಕು ಕಣೋ. ಹ್ಯಾಗಿದೆಯೋ ಕೋಟೆ?” ಉಬ್ಬು ಕುಣಿಸಿದಳು.

ಇದ್ದ ಹಾಗೆ‌ಇದೆ, ಬದಲಾಗೋಕೆ ಅದೇನ್ ನಾನು ನೀನು ಕೆಟ್ಟುಹೋದ್ವೆ” ಬೇಕೆಂದೇ ಹಂಗಿಸಿದೆ.

“ಇವರು ಚಿಕ್ಕವರಿದ್ದಾಗ ತ.ರಾ.ಸು. ಕಾದಂಬರಿ ಓದಿದ್ದರಂತೆ. ಕೋಟೆ ನೋಡಬೇಕಂತ ಹಠ ಹಿಡಿದರಪ್ಪ ಕರ್ಕೊಂಡ್ ಬಂದೆ. ತ.ರಾ.ಸು. ಹೋದ್ಮೇಲೆ ಯಾರೂ ಇತಿಹಾಸ ಆಧರಿಸಿ ಕಾದಂಬರಿ ಬರಿಲೇಯಿಲ್ಲ ನೋಡು” ಅಂದಳು.

“ಆಮೇಲೆ, ನೀನು ಸಾಹಿತ್ಯ ಓದ್ಕೊಂಡೇ ಇಲ್ಲ ಅಂತ ಕಾಣುತ್ತೆ. ಚಿತ್ರದುರ್ಗ ಬಂಜೆಯಲ್ಲ ಕಣೆ. ತುಂಬಾ ಒಳ್ಳೆಯ ಬರಹಗಾರರು ಇಲ್ಲಿದ್ದಾರೆ.” ಅಜ್ಞಾನಿ ನೀನು ಎಂಬಂತೆ ಅವಳನ್ನು ಕನಿಕರದಿಂದ ನೋಡಿದೆ.

“ನೀನು ಇನ್ನೂ ಬರೀತಾ ಇದ್ದಿಯೇನೋ!?” ಅಚ್ಚರಿ ಪಟ್ಟಳು. “ನನಗೆ ಬೇರೆ ಕೆಲ್ಸ ಇದೆ ಹೇಳು” ಬರುವ ಕೋಪವನ್ನು ತಡೆದುಕೊಂಡೆ.

“ಏನ್ ಬರಿತೀಯೋ ಅಪ್ಪಾ ಒಂದಾದ್ರೂ ಫಿಲಂ ಆಗಲಿಲ್ಲ ಅಕಾಡೆಮಿ ಅವಾರ್ಡ್, ರಾಜ್ಯ ಪ್ರಶಸ್ತಿ ಗಿಟ್ಟಿಸಲಿಲ್ಲ ಅಟ್‌ಲೀಸ್ಟ್ ಟಿವಿ ಸೀರಿಯಲ್ಲೂ ಮಿಂಚಲಿಲ್ಲ, ಅಂದ್ಮೇಲೆ ಯಾತಕ್ಕೆ ಬರಿತಿಯೋ? ನೀವು ಬರೆದಿದ್ದನ್ನು ಓದೋಕೆ ಓದುಗರಾದರೂ ಎಲ್ಲಿದಾರೀಗ? ಫಿಲ್ಮ್ ಗೋ ಟಿವಿಗೋ ಬರೆಯೋ. ಬೇಗ ನೇಮು-ಫೇಮು ಮನಿ ಎಲ್ಲಾ ಟೋಟಲ್ಲಾಗಿ ಸಿಗುತ್ತೋ ಭಾಷಣ ಬಿಗಿಯಲಾರಂಭಿಸಿದಳು.

“ನಾನು ನನ್ನ ಸಂತೋಷಕ್ಕೆ ಬರಿತೀನ್ಯೆ” ಎಂದವಳ ಮಾತನ್ನು ತುಂಡರಿಸಿದೆ. ಅಷ್ಟರಲ್ಲಿ ಆ ಧಡೂತಿ ಮನುಷ್ಯ ಚುಟ್ಟ ಸೇದುತ್ತಾ ಪುಲ್ ಸೂಟಲ್ಲಿ ಹೊರಬಂದ. ‘ಹೋಗೊಣ್ವಾ’ ಅಂತ ಹೊರಟೇಬಿಟ್ಟ.

“ಇದೆಲ್ಲಾ ಎತ್ಕಳೋ” ನೀರಿನ ಬಾಟಲಿಗಳು, ತಿಂಡಿಯ ದೊಡ್ಡ ಬ್ಯಾಗ್‌ಗಳನ್ನು ತೋರಿಸಿದಳು. ಎತ್ತಿ ಹೆಗಲಿಗೇರಿಸಿಕೊಂಡೆ. ಐಶ್ವರ್ಯ ಫೋರ್ಟ್‌ನ ಅರುಣಕುಮಾರ, ನಿನ್ನ ಲಾಡ್ಜ್‍ಗೆ ಒಂದು ಲಿಫ್ಟ್ ಹಾಕಿಸಬಾರ್ದೆ ಪುಣ್ಯಾತ್ಮ ಎಂದು ಶಾಪ ಹಾಕುತ್ತಾ ಹೇರನ್ನೊತ್ತ ಕತ್ತೆಯಂತೆ ಮೆಟ್ಟಿಲುಗಳನ್ನು ಇಳಿದೆ. ಅವರು ಕಾರಿನ ಬಳಿಹೋದರು. ಹಿಂಬಾಲಿಸಿದೆ. ಕಾರಿನ ಹಿಂಬದಿ ಹೊತ್ತು ತಂದಿದ್ದನ್ನೆಲ್ಲಾ ಸುರಿದೆ. “ಹಿಂದೆ ಕೂತ್ಕೊಳೋ. ಕೋಟೆ ತೋರಿಸು ಬಾರೋ ಪ್ಲೀಸ್” ಕಣ್ಣಲ್ಲೇ ಲಲ್ಲೆಗೆರೆದಳು.

“ನೀನು ನೋಡದ ಕೋಟೆ ಏನೆ ಅದು? ಅದೇ ಹಳೇ ಕೋಟೆ, ನೀವು ಹೊಸಬರಷ್ಟೇ. ನಿಮ್ಮಿಬ್ಬರ ಮಧ್ಯೆ ನಾನ್ ಯಾಕೆ… ಸಾರಿನಮ್ಮ” ನುಣುಚಿಕೊಂಡೆ.

“ದೆನ್ ಇಟ್ ಈಸ್ ಆಲ್ ರೈಟ್… ನೋ ಪ್ರಾಬ್ಲಮ್ ಮ್ಯಾನ್… ಯು ಕೆನ್ ಗೋ ನೌ… ಬಟ್ ಮೀಲ್ಸ್‌ಗೆ ಮಾತ್ರ ಇಲ್ಲಿಗೇ ಬಂದು ಬಿಡಯ್ಯಾ” ಬಣ್ಣದ ಮೀಸೆಯಲ್ಲೇ ನಕ್ಕು ಕೈ ಆಡಿಸಿದೆ. ಸಾಂಟಾ ತೇಲುತ್ತಾ ಹೋಯಿತು. ‘ರೋಗ್ಸ್’ ಬೈದುಕೊಂಡೆ. ಮೈಯೊಳಗೆ ಬೆಂಕಿ ಹತ್ತಿಕೊಂಡಿತ್ತು. ಸ್ಕೂಟರ್ ಏರಿದೆ. ಸ್ಕೂಲ್‌ಗೆ ಹೋಗೋಣವೆಂದರೆ ರಜಾ ಹಾಕಿದ ನೆನಪಾಯಿತು. ಅದೂ ಬರೋಬ್ಬರಿ ಒಂದು ವಾರ! ನಗು ಬಂತು. ನಾಳೆಯೇ ಹೋಗಿ ಕ್ಯಾನ್ಸಲೇಶನ್ಗೆ ಬರೆದು ಕೊಡಬೇಕು ಅಂದುಕೊಂಡೆ. ತಣ್ಣಗೆ ಗಾಳಿ ಬೀಸುವಾಗ ವೃಥಾ ಅವಳ ಮೇಲೆ ರೇಗಿದೆನೇನೋ ಅನಿಸಿತು. ನೇರವಾಗಿ ಮನೆಗೆ ಬಂದೆ.

ರತ್ನಾ ಬಾಗಿಲು ತೆರೆದಳು. ಒಂದು ಅಂದವೇ-ಚಂದವೆ, ಕಸ ಮಸುರೆ ಹೆಂಗಸಿನ ತರಹ ಕಂಡಳು. ಅವಳು ಇರುತ್ತಿದ್ದುದೇ ಹಾಗೆ. ಮಕ್ಕಳು ಕಾನ್ವೆಂಟ್ಗೆ ಹೊರಟಿದ್ದರು. “ಏನ್ರಿ ಇದು! ನಿಮ್ಮ ಫ್ರೆಂಡ್ಸ್ ಯಾರ್‍ನೋ ಕರ್ಕೊಂಡ್ ಬರ್ತೀನಿ ಅಂದಿದ್ದಿರಿ. ಲೇಡಿ ಸ್ಪೆಷಲ್ ಗೆಸ್ಟ್ ಅಂತಿರಾ. ಮನೆಗೆ ಕರ್ಕೊಂಡು ಬರ್ದೆ ಲಾಡ್ಜ್‌ಗಳಲ್ಲಿ ಬಿಡೋದೇನು ಚೆಂದ ಹೇಳಿ” ರತ್ನಳ ಪೇಚಾಟ ಕೇಳಿ ನಗು ಬಂತು. ‘ಇವಳನ್ನೇನಾ ನಾನು ಗೂಬೆ… ಒಂದಿಷ್ಟೂ ಸಂಸ್ಕಾರ ಇಲ್ಲದ ಕತ್ತೆ’ ಎಂತೆಲ್ಲಾ ಬಯ್ಯೋದು! ನೆನಪಾಗಿ ಒಳಗೆ ಹುಳ್ಳಗಾದೆ. ಯಾಕೆ ಒಂಥರಾ ಇದಿರಾ? ಬೆವರ್ತಾ ಇದೀರಾ ಅನ್ನುತ್ತಾ ಒಳ ಹೋಗಿ ನಿಂಬೆ ಶರಬತ್ ಮಾಡಿ ತಂದಳು. ಇವಳು ಅಷ್ಟೇನೂ ಕೊಳಕಾಗಿಲ್ಲ ಸಾಮಾನ್ಯ ಗೃಹಿಣಿಯರು ಇರೋದೆ ಹೀಗೇನೋ ಅನ್ನಿಸಿತು.
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಿಗಳಿ
Next post ಮಿಂಚುಳ್ಳಿ ಬೆಳಕಿಂಡಿ – ೫೬

ಸಣ್ಣ ಕತೆ

 • ನಾಗನ ವರಿಸಿದ ಬಿಂಬಾಲಿ…

  ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

 • ಎರಡು ಮದುವೆಗಳು

  ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

 • ಜಡ

  ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

 • ಲೋಕೋಪಕಾರ!

  ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

 • ಗಿಣಿಯ ಸಾಕ್ಷಿ

  ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys