ದೀಪದ ಕಂಬ – ೬ (ಜೀವನ ಚಿತ್ರ)

ವಿಶೇಷ ಉತ್ಸವಗಳು:
ಸಾರ್ವಭೌಮನ ಉತ್ಸವ (ಮಳೆಗಾಲ ಬಿಟ್ಟು) ಪ್ರತಿ ಸೋಮವಾರ ಸಾಯಂಕಾಲ ಶ್ರೀ ವೆಂಕಟರಮಣ ದೇವಾಲಯದವರೆಗೆ ಬರುತ್ತದೆ. ಶ್ರೀ ದೇವರು ಕೂರುವ ಜಾಗಕ್ಕೆ ’ಸೋಮವಾರ ಪೌಳಿ’ ಎನ್ನುವರು. ಉತ್ಸವ ಹೋಗುವಾಗ ಮನೆಯವರು ದೇವರಿಗೆ ಆರತಿ ಕೊಡುವರು. ಆರತಿಗಳ ಸ್ವೀಕರಿಸಿ ಉತ್ಸವ ಮೂರ್ತಿ ಪುನಃ ದೇವಾಲಯಕ್ಕೆ ಹೋಗುವುದು.

ನಾಗರ ಪಂಚಮಿ: ಶ್ರೀ ದೇವರ ಓಲಗ ಮೊದಲ ಬಾರಿ ಮಳೆಗಾಲದಲ್ಲಿ ದೇವಾಲಯದ ಹೊರಗೆ ಬಂದು ಶ್ರೀ ನಾಗೇಶ್ವರನಲ್ಲಿ ಮಹಾಮಂಗಳಾರತಿ ಕಾಲದಲ್ಲಿ ಮೊಳಗುವುದು.

ಶ್ರೀಕೃಷ್ಣ ಜನ್ಮಾಷ್ಟಮಿ: ಶ್ರೀ ದೇವರ ಮೊದಲ ಉತ್ಸವ ಸಂಜೆ ಎಂಟು ಗಂಟೆಗೆ ರಥಬೀದಿ ಮೂಲಕ ಕೋಟಿತೀರ್ಥಕಟ್ಟೆ ಸುತ್ತು ಹಾಕಿ ಶ್ರೀಕೃಷ್ಣನ ದೇವಾಲಯ ’ಕೃಷ್ಣಾಪುರ’ಕ್ಕೆ ಬರುವುದು. ಮಂಗಳಾರತಿ ನಡೆಯುವಾಗ ಓಲಗದ ಸೇವೆ ನಡೆದು ಕೋಟಿ ತೀರ್ಥಕ್ಕೆ ಸುತ್ತು ಹಾಕಿ ರಥಬೀದಿಯ ಮುಖಾಂತರ ದೇವಾಲಯಕ್ಕೆ ಬರುತ್ತದೆ.

ಗಂಗಾಷ್ಟಮಿ:
ಶ್ರೀ ದೇವರ ಉತ್ಸವ ರಾತ್ರಿ ಹತ್ತೂ ಮೂವತ್ತಕ್ಕೆ ಶ್ರೀ ದೇವಾಲಯದಿಂದ ಸಮುದ್ರ ಬೇಲೆಗುಂಟ ಗಂಗಾಕೊಳ್ಳ (ಗಂಗಾವಳಿ) ಇರುವ ಗಂಗಾಂಬಾ ದೇವಾಲಯಕ್ಕೆ ಮೃಗಬೇಟೆ ಆಡುತ್ತಾ ಹೋಗುತ್ತದೆ. ಅಲ್ಲಿ ದಕ್ಷಿಣಗಂಗೆಯಲ್ಲಿ (ಗಂಗಾವಳಿ) ಮಿಂದು ಶ್ರೀದೇವಿಯ ಮನೆಗೆ ಹೋದರೆ ಗಂಗಾಮಾತೆ ಈಶ್ವರನಿಗೆ ಬಾಗಿಲು ತೆರೆಯುವುದಿಲ್ಲ. ಈಶ್ವರನಿಗೂ, ಗಂಗೆಗೂ ಬಹು ಸ್ವಾರಸ್ಯಕರವಾದ ವಾಗ್ವಾದ ನಡೆಯುತ್ತದೆ. ಕೇಳಿಯೇ ಸಂತೋಷ ಪಡಬೇಕು. ನಂತರ ಗಂಗಾಮಾತೆ ಬಾಗಿಲು ತೆರೆಯುತ್ತಾಳೆ. ಗಂಗೆಯ ಲಗ್ನ ಈಶ್ವರನೊಂದಿಗೆ ಅದೇ ಅಮಾವಾಸ್ಯೆಗೆ ನಡೆಯಬೇಕೆಂದೂ, ಲಗ್ನಮಂಟಪವನ್ನು ರುದ್ರಪಾದದಲ್ಲಿ ಕಟ್ಟಬೇಕೆಂದೂ (ಗೋಕರ್ಣ-ಗಂಗಾವಳಿಗಳ ನಡುವಿನ ಶಿವಕ್ಷೇತ್ರ)} ನಿರ್ಣಯವಾಗುತ್ತದೆ. ಈಶ್ವರ ಆನಂದದಿಂದ ಪುನಃ ತನ್ನ ದೇವಾಲಯಕ್ಕೆ ಹರ್ಷಚಿತ್ತನಾಗಿ ಬರುತ್ತಾನೆ. ಹಾದಿಯುದ್ದಕ್ಕೂ ಹಾಲಕ್ಕಿ ಒಕ್ಕಲ ಮನೆಯವರು ನೂತನ ಫಲ,ಆರತಿ ಎಲ್ಲಾ ಒಪ್ಪಿಸಿ ಆರತಿ ಬೆಳಗುತ್ತಾರೆ. ಬರುವಾಗ ರಾತ್ರಿ ಹತ್ತು,ಹನ್ನೊಂದಕ್ಕೆ ಶ್ರೀ ದೇವರ ಮೂರ್ತಿ ಆಶ್ರಮದಲ್ಲಿ ತಂಗುತ್ತದೆ. ಈ ಆಶ್ರಮವೇ ಮುಂದೆ ದೈವರಾತರ ಆಶ್ರಮವಾಯ್ತು. ಮಹರ್ಷಿಗಳು ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಮಹಾಬಲನ ಎದುರು ಭಕ್ತಿ ಪರವಶರಾಗಿ ನಾಟ್ಯ ಮಾಡುತ್ತಿದ್ದರು. ಅದು ನೋಡಲು ನಯನಾನಂದಕರವಾಗಿರುತ್ತದೆ.

ದೀಪಾವಳಿ:
ಲಗ್ನ ಮಹೋತ್ಸವ: ಆಶ್ವಯುಜ ಬಹುಳ ಅಮಾವಾಸ್ಯೆ ಸಾರ್ವಭೌಮನ ಲಗ್ನದುತ್ಸವ – ಶ್ರೀ ದೇವರ ಉತ್ಸವ, ಡಮರು ಡಾಮರ…… ಪತಾಕೆಗಳೊಂದಿಗೆ ದಿಬ್ಬಣ ಸಮೇತ ೩.೩೦ – ೪ಕ್ಕೆ ಹೊರಡುತ್ತದೆ. ಸಮುದ್ರ ಬೇಲೆಯ ಮುಖಾಂತರ ರುದ್ರಪಾದ ಮಂಟಪಕ್ಕೆ.ಅಲ್ಲಿಗೆ ಆಗಲೇ ಗಂಗಾಮಾತೆಯ ಉತ್ಸವ ವಿಜೃಂಭಣೆಯಿಂದ ದೊಡ್ಡ ಸಂಖ್ಯೆಯ ಭಕ್ತರೊಂದಿಗೆ ಬಂದಿರುತ್ತದೆ. ಶುಭಮುಹೂರ್ತದಲ್ಲಿ ಲಗ್ನ ನಡೆಯುತ್ತದೆ. ಕಣ್ಣಿಗೆ ಹಬ್ಬವದು. ನಂತರ ಸಣ್ಣ ಹುಸಿ ಜಗಳವಾಗುತ್ತದೆ. ಲಗ್ನಮಂಟಪದ ಮಾವಿನ ಸೊಪ್ಪು ಪ್ರಸಾದರೂಪದಲ್ಲಿ ತಮಗೆ ಸಲ್ಲಬೇಕೆಂದು ಹೆಣ್ಣಿನ ಕಡೆಯವರಿಗೂ, ಅದು ಗಂಡಿಗೇ ಸೇರಬೇಕೆಂದು ಗಂಡಿನ ಕಡೆಯವರಿಗೂ ಜಗಳ! ಮರಳಿನಲ್ಲಿ ಹೂತ ಮಂಟಪವನ್ನು ಸುಲಭವಾಗಿ ಕಿತ್ತುಕೊಂಡು ಇಬ್ಬರೂ ಓಡಿ ಬರುತ್ತಾರೆ. ಹೆಣ್ಣಿನ ಕಡೆಯವರು ಓಡಿ ಹೋಗುತ್ತಾರೆ!

ಈಶ್ವರ ಗಂಗಾಧರನಾಗಿ ನವವಧುವಿನೊಂದಿಗೆ ದೇವಾಲಯ ಪ್ರವೇಶಕ್ಕಾಗಿ ಹೋಗುವುದು ಮುಂದಿನ ಕಾರ್ಯಕ್ರಮ. ಎರಡು ಮೂರು ಮೈಲಿ ದೂರವನ್ನು ಸಾವಕಾಶ ಕ್ರಮಿಸಿ ದೇವಾಲಯಕ್ಕೆ ೧೦:೧೦ಕ್ಕೆ ಪ್ರವೇಶ ಮಾಡುತ್ತಾರೆ. ಊರಿನ ಜನರೆಲ್ಲಾ ಶುಭ್ರಬಟ್ಟೆಗಳೊಡನೆ, ಹೆಂಗೆಳೆಯರು ದಿಬ್ಬಣದ ಪೋಷಾಕಿನಲ್ಲಿ ಬರುತ್ತಾರೆ. ಮಕ್ಕಳು, ಬಲ್ಲಿದರು ಪಟಾಕಿ, ಬಾಣ,ಬತ್ತಾಸುಗಳನ್ನು ಸಿಡಿಸುತ್ತಾರೆ. ದೇವಾಲಯದ ಶಿಖರಕ್ಕೆ ದೀಪ ಹಚ್ಚುತ್ತಾರೆ. ದೇವರ ಮೈಲಿ ಸುತ್ತ ಜನರ ಸಡಗರವೋ ಸಡಗರ. ದೇವಾಲಯಕ್ಕೆ ಮೂರು ಸುತ್ತು ಹಾಕಿ ವಧೂವರರು ಗರ್ಭಗುಡಿ ಪ್ರವೇಶಿಸುತ್ತಾರೆ. ಮಹಾಮಂಗಳಾರತಿ ನಡೆಯುತ್ತದೆ. ನಂತರ ಊರವರು ಮನೆಗೆ ಹೋಗುವಾಗ ಲಗ್ನಮಂಟಪದ ತೋರಣದ ಸೊಪ್ಪನ್ನು ಪ್ರಸಾದವೆಂದು ಮನೆಗೆ ಒಯ್ಯುತ್ತಾರೆ. ಜನಗಳು ಹೂವು, ಮಾವಿನಸೊಪ್ಪಿನ ತೋರಣದೊಂದಿಗೆ ಮನೆಗೆ ಹಿಂತಿರುಗುತ್ತಾರೆ. ಉತ್ಸವಕ್ಕೆ ಬಂದವರಿಗೆ ಪ್ರಸಾದ ಹಂಚುತ್ತಾರೆ. ಮಾರನೇ ದಿನವೇ ಕಾರ್ತಿಕಮಾಸ ಪ್ರಾರಂಭ. ಕಾರ್ತಿಕ ದೀಪೋತ್ಸವ – ಬೇಂದ್ರೆಯವರ ಕವಿತೆಯ ’ಕೋಟಿಕಾರ್ತಿಕೋತ್ಸವ’ ನೆನಪಾಗುತ್ತದೆ.

ಹಬ್ಬಗಾಣಿಕೆ: ಪಾಡ್ಯದ ದಿನ ಶ್ರೀ ಮಹಾಬಲೇಶ್ವರನಿಗೆ ಪ್ರತಿಮನೆಯವರು ಹಬ್ಬಗಾಣಿಕೆ ಎಂದು ಒಂದು,ಎರಡು ಕಾಯಿ ಅರ್ಪಿಸುತ್ತಾರೆ. ಅರ್ಪಿಸುವ ಮೊದಲು ಕಾಯಿಗಳನ್ನು ಗಣಪತಿ, ಪಾರ್ವತಿ ದೇವರಿಗೆ ಇಟ್ಟು ನಮಸ್ಕರಿಸಿ ನಂತರ ಒಪ್ಪಿಸುತ್ತಾರೆ.
ಕಾರ್ತಿಕ ಹುಣ್ಣಿಮೆ : ಶಿವರಾತ್ರಿಯ ನಂತರ ಇದೇ ಎರಡನೆಯ ಮಹತ್ವದ ಹಬ್ಬ. ಕಾರ್ತಿಕ ಶುದ್ಧ ಹುಣ್ಣಿಮೆಯಂದು ಬಿಲ್ವಾರ್ಚನೆ ಅತಿ ಮಹತ್ವದ ಪೂಜೆ. ಅತಿ ಮಹತ್ವದ ಪರ್ವಕಾಲ. ಪ್ರತಿ ಮನೆಯಿಂದಲೂ ಬಿಲ್ವಪತ್ರ ಪೂಜೆ, ನಂತರ ಬಿಲ್ವಪತ್ರೆ ಸಂಗ್ರಹ ಪ್ರಸಾದರೂಪದಲ್ಲಿ. ೧೧-೧೨ ಗಂಟೆಯೊಳಗೆ ಮುಗಿಯುತ್ತದೆ. ನಂತರ ದೇವರ ಉತ್ಸವ ಭೀಮನಕೊಂಡಕ್ಕೆ ಹೋಗಿ ಅಲ್ಲಿ ಧಾತ್ರಿಹವನ ನಡೆಯುತ್ತದೆ. ಇದು ರಾತ್ರಿಯ ಉತ್ಸವದ ಅಂಗವಾಗಿ ನಡೆಯುತ್ತದೆ. ಪ್ರತಿ ದೇವಸ್ಥಾನದ ಉತ್ಸವಕ್ಕೆ ಮೊದಲು ಈ ಧಾರ್ಮಿಕ ವಿಧಿ ನಡೆಯಲೇಬೇಕು. ನಂತರ ಮೂರು ಸಂಜೆಗೆ ಶ್ರೀದೇವರ ಸರ್ವಾಂಗಭೂಷಣ ಅಲಂಕಾರದೊಡನೆ ಕಾರ್ತಿಕ ಹುಣ್ಣಿಮೆ ಉತ್ಸವ ಪ್ರಾರಂಭವಾಗುತ್ತದೆ. ಉತ್ಸವ ಕೋಟಿತೀರ್ಥಕ್ಕೆ ಸುತ್ತು ಹಾಕಿ ವೆಂಕಟರಮಣ ದೇವಸ್ಥಾನಕ್ಕೆ ಬರುತ್ತದೆ. ಅಲ್ಲಿಂದ ಪಲ್ಲಕ್ಕಿ, ಅಲ್ಲ, ಲಾಲಕ್ಕಿ ಉತ್ಸವ.

ಲಾಲಕ್ಕಿ ಎಂದರೆ ದೇವರ ಬಾಡದ ಮಂಟಪಕ್ಕೆ ಎರಡು ಮರದ ಎಳೆಗಳನ್ನು ಸಮಾಂತರವಾಗಿ ಜೋಡಿಸುತ್ತಾರೆ, ನಾಲ್ಕು ಜನ ಹೊರುತ್ತಾರೆ. ಪಲ್ಲಕ್ಕಿಗಿಂತ ಶೋಭಾಯಮಾನವಾಗಿ ಕಾಣುತ್ತದೆ. ಅಂಗಡಿ ಮನೆಗಳ ಮುಂದೆ ದೊಡ್ಡ ದೊಡ್ಡ ತೋರಣ ಹಾಕುತ್ತಾರೆ. ಕೆಲವೆಡೆ ಮಕರ ತೋರಣ ಹಾಕುತ್ತಾರೆ. ಆ ಕಡೆ, ಈ ಕಡೆ ಕಂಬ ಹುಗಿದು ಬಿದಿರನ್ನು ಕಮಾನಾಗಿ ಬಗ್ಗಿಸಿ ಮಾವಿನ ಸೊಪ್ಪು, ಅಡಿಕೆ ಕೊನೆ ಕಟ್ಟುತ್ತಾರೆ. ನೋಡಲು ನಯನ ಮನೋಹರವಾಗಿರುತ್ತದೆ. ಈ ಉತ್ಸವವು ದೇವಸ್ಥಾನ ತಲುಪಲು ಎರಡು-ಮೂರು ಗಂಟೆ ಬೇಕಾಗುತ್ತದೆ. ಉದ್ದಕ್ಕೂ ನೆಲ ಚಕ್ರ, ಬಾಣ, ಕೊಡೆ, ಚಕ್ರ, ಬಾಣ ಬಿರುಸು, ಗರ್ನಾಲು, ಒಬ್ಬೊಬ್ಬರೂ ನೂರಿನ್ನೂರು ಹೊಡೆಯುತ್ತಾರೆ.

ಇಟ್ಲಪಿಂಡಿ ಉತ್ಸವ: ಇದೇ ಕಾರ್ತಿಕ ಹುಣ್ಣಿಮೆಯ ದಿನ ಗೌಡ ಸಾರಸ್ವತರ ಮಠದಿಂದ ಉತ್ಸವ ಮಧ್ಯಾಹ್ನ ರಾಮತೀರ್ಥಕ್ಕೆ ಹೋಗಿ ಅಲ್ಲಿ ಧಾತ್ರಿಹವನ, ಊಟ ನಡೆಯುತ್ತವೆ. ನಂತರ ಲಾಲಕ್ಕಿ ಉತ್ಸವ, ನೆಲ್ಲಿಕಾಯಿಯಿಂದ ವಿಶೇಷವಾಗಿ ಸಿಂಗರಿಸಿಕೊಂಡು ಅವರ ಮಠದ ಕಡೆ ಹೊರಡುತ್ತದೆ. ಈ ಉತ್ಸವವೂ ವಿಜೃಂಭಣೆಯಿಂದ ನಡೆಯುತ್ತದೆ.

ಶ್ರೀಮಹಾಬಲೇಶ್ವರ ದೇವರ ಉತ್ಸವ ಗುಡಿ ಪ್ರವೇಶದ ಹೊತ್ತಿನಲ್ಲಿ ಶಿಖರದ ತುಂಬಾ ಹಣತೆ ದೀಪ ಹಚ್ಚುತ್ತಾರೆ. ಈಗ ವಿದ್ಯುದ್ದೀಪ. ನೋಡಲು ಎರಡು ಕಣ್ಣು ಸಾಲದು. ದೇವಾಲಯದ ಸುತ್ತ ನಾಲ್ಕು ಪೌಳಿಯಲ್ಲೂ ಜನಸ್ತೋಮ ನೆರೆದಿರುತ್ತದೆ. ಪೌಳಿಯನ್ನು ದೀಪಗಳಿಂದ ಶೃಂಗರಿಸಿರುತ್ತಾರೆ. ದೀಪಾವಳಿ ಎಂದರೆ ಅಕ್ಷರಶಃ ದೀಪಗಳ ಮೆರವಣಿಗೆ – ಕೆಳೆಯರ ಕೂಟದವರು ಹೇಳಿದಂತೆ ಸೊಡರು ಸಾಲಿನ ಹಬ್ಬ.

ಇಂದಿನಿಂದ ಮೊದಲುಗೊಂಡು ಮುಂದೆ ಹತ್ತು ದಿನಗಳು ಊರ ದೇವರುಗಳ ಉತ್ಸವ ಊರಿನ ಸುತ್ತ ನಡೆಯುತ್ತದೆ. ಶೃಂಗೇರಿಮಠದ ಉತ್ಸವ, ಬಟ್ಟೆ ಗಣಪತಿ ಉತ್ಸವ, ಹಿತ್ತಲ ಗಣಪತಿ ಉತ್ಸವ, ಶಾರದಮ್ಮನವರ ಉತ್ಸವ, ಬಂಡಿಕೇರಿ ಮಠದ ಉತ್ಸವ, ರಾಮ ದೇವರ ಉತ್ಸವ, ಕೋದಂಡರಾಮ ಉತ್ಸವ, ವೆಂಕಟರಮಣ ದೇವರ ಉತ್ಸವ, ಮಂಕಾಳಮ್ಮನವರ ಉತ್ಸವ,ಮುಂದೆ ಮಾರ್ಗಶೀರ್ಷದಲ್ಲಿ ಚಂಪಾಷಷ್ಠಿ ಉತ್ಸವ. ಇವುಗಳಲ್ಲಿ ಹೆಚ್ಚು ಜನ ಮಹತ್ವ ಪಡೆದ ಉತ್ಸವಗಳು ಅಮ್ನೋರ ಉತ್ಸವ, ವೆಂಕಟರಮಣ ದೇವರ ಉತ್ಸವ, ಇತ್ತಲಾಗಿ ಬಟ್ಟೆ ಗಣಪತಿ ಉತ್ಸವ.

ಅಮ್ನೋರ ಉತ್ಸವಕ್ಕೆ ಸುತ್ತಮುತ್ತಲಿನ ಊರಿನ ಜನರೆಲ್ಲಾ ಬರುತ್ತಾರೆ. ಬಾಣಬಿರುಸು ಗರ್ನಾಲು ಲೆಕ್ಕಕ್ಕೆ ಇಲ್ಲ. ಏಳಕ್ಕೆ ಹೊರಟ ಉತ್ಸವ ರಾತ್ರೆ ಹನ್ನೊಂದಕ್ಕೆ ಗುಡಿ ತಲುಪುತ್ತದೆ. ವೆಂಕಟರಮಣ ದೇವರ ಉತ್ಸವಕ್ಕೂ ಸುತ್ತಮುತ್ತಲಿನ ಊರಿನವರು ಬರುತ್ತಾರೆ. ಅದೇ ರೀತಿ ಬಾಣ ಬಿರುಸು. ರಸ್ತೆ ಉದ್ದಕ್ಕೂ ಮಕರ ತೋರಣ. ಈ ಎರಡೂ ಉತ್ಸವಗಳೂ ಸಮಾನ ಜನಾದರಣೆ ಪಡೆದಿವೆ. ಭಕ್ತರ ಸಮೂಹ ನೆರೆದಿರುತ್ತದೆ. ಬಟ್ಟೆ ಗಣಪತಿ ಉತ್ಸವದ ನಯನ ಮನೋಹರ ನೋಟ ಇತ್ತಲಾಗಿನದು. ಯುವಕರೆಲ್ಲಾ ಉತ್ಸಹದಿಂದ ಕೋಟಿತೀರ್ಥಕ್ಕೆ ಏಳೆಂಟು ಸಾಲಿನಲ್ಲಿ ಮೇಣದಬತ್ತಿ ದೀಪ ಹಚ್ಚುತ್ತಾರೆ. ಅದರ ಪ್ರತಿಫಲನ ನೀರಿನಲ್ಲಿ. ಅದ್ಭುತರಮ್ಯ, ನಂತರ ಯಕ್ಷಗಾನವೂ ನಡೆಯುತ್ತದೆ.

ಹೀಗೆ ಕಾರ್ತಿಕಮಾಸದಲ್ಲಿ ಕೋಟಿ ಕಾರ್ತಿಕೋತ್ಸವದಲ್ಲಿ ತಾರೆಗಳು ಮಿನುಗುತ್ತವೆ.

ನವರಾತ್ರಿ ಮತ್ತು ವಿಜಯದಶಮಿ ಉತ್ಸವ: ಇದು ಅಶ್ವಯುಜ ಶುದ್ಧ ಪಾಡ್ಯದಿಂದ ಶುದ್ಧ ನವಮಿಯವರೆಗೆ ನಡೆಯುತ್ತದೆ. ಹತ್ತನೇ ದಿನ ವಿಜಯದಶಮಿ. ಇದು ಮಂಕಾಳಮ್ಮನವರ ಮನೆಯಲ್ಲಿ, ಭದ್ರಕಾಳಿ ದೇವಾಲಯದಲ್ಲಿ – ಬಹು ಸಂಭ್ರಮದಿಂದ ನಡೆಯುತ್ತದೆ. ಊರ ಸುಮಂಗಲಿಯರು ದಿನಾ ಪಂಚಾಮೃತವನ್ನು ಶ್ರೀದೇವಿಗೆ ಅರ್ಪಿಸಿ ಬರುತ್ತಾರೆ. ದೇವಾಲಯ ಊರಿನ ತುದಿಯಲ್ಲಿರುವುದರಿಂದ ಎದುರಾಗುವ ಮುತ್ತೈದೆಯರು ಅರಿಸಿನ, ಕುಂಕುಮ ಹಣೆಗೆ ಹಚ್ಚುತ್ತಾರೆ. ಒಬ್ಬೊಬ್ಬರೂ ಪ್ರತ್ಯಕ್ಷ ಅಮ್ನೋರಂತೆ ಕಾಣುತ್ತಾರೆ. ಒಂಬತ್ತೂ ದಿನ ಈ ದೃಶ್ಯ ಕಾಣಸಿಗುತ್ತದೆ. ಪ್ರತಿ ಸಂಜೆ ೦೭:೩೦ ರಿಂದ ಮಂಗಳಾರತಿವರೆಗೆ ಯಕ್ಷಗಾನ ಬೈಠಕ್ ಆಗುತ್ತದೆ. ಪ್ರಧಾನವಾಗಿ ಭದ್ರಕಾಳಿ ಯಕ್ಷಗಾನ ಮೇಳದವರು ಏರ್ಪಡಿಸುತ್ತಾರೆ. ಊರ ಕಲಾವಿದರೂ, ಪಕ್ಕದ ಊರಿನವರೂ ಭಾಗವಹಿಸುತ್ತಾರೆ. ದಶಮಿಯಿಂದ ಯಕ್ಷಗಾನ ನಡೆಯುತ್ತದೆ.

ದಸರಾ ಉತ್ಸವ: ವಿಜಯದಶಮಿ ದಿವಸ ಶ್ರೀ ದೇವರು ಸೀಮೋಲ್ಲಂಘನ ಮಾಡುತ್ತಾರೆ. ಮಹಾಬಲೇಶ್ವರ ದೇವಾಲಯದಿಂದ ಉತ್ಸವ ಹೊರಟು ಊರ ಹೊರಗೆ ಚೌಡಗೇರಿಯಲ್ಲಿ ಒಂದು ಕಟ್ಟೆ ಇದೆ. ಅಲ್ಲಿ ದೇವರು ಕೂಡ್ರುತ್ತಾರೆ. ಕಟ್ಟೆಯನ್ನು ಶೃಂಗರಿಸುತ್ತಾರೆ. ಅಷ್ಟಾವಧಾನ ಸೇವೆ ಆಗುತ್ತದೆ. ನಂತರ ದೇವರು ಭದ್ರಕಾಳಿ ದೇವಾಲಯಕ್ಕೆ ಹೋಗುತ್ತದೆ. ಅಲ್ಲಿ ಜನಸಾಗರವೇ ನೆರೆದಿರುತ್ತದೆ. ಉಭಯ ದೇವರಿಗೂ ಮಂಗಳಾರತಿ ಮಾಡುತ್ತಾರೆ. ಶಮೀಪತ್ರದ ವಿನಿಮಯವಾಗುತ್ತದೆ. ನಂತರ ಮಹಾಬಲೇಶ್ವರ ದೇವರು ಪಲ್ಲಕ್ಕಿಯಲ್ಲಿ ಒಂದು ಮೈಲಿ ಉದ್ದದ ರಸ್ತೆಯನ್ನು ಕ್ರಮಿಸಿ ರಾತ್ರಿ ಹತ್ತಕ್ಕೆ ಮರಳಿ ದೇವಾಲಯಕ್ಕೆ ಬರುವ. ಇದು ವಿಜಯಯಾತ್ರೆ, ಸೀಮೋಲ್ಲಂಘನ,ಬನ್ನಿಬಂಗಾರದ ವಿನಿಮಯ.

ವಿದ್ಯಾದಶಮಿ: ವಿಜಯದಶಮಿ, ವಿದ್ಯಾದಶಮಿ-ಎರಡೂ ಒಂದೇ. ಊರ ಬಾಲಕರು ಶೃಂಗೇರಿ ಶಾರದಾಂಬಾ ದೇವಾಲಯಕ್ಕೆ, ಅವರವರ ಪುರೋಹಿತರ ಮನೆಗೆ ಹೋಗಿ ವಿದ್ಯಾಭ್ಯಾಸ ಪ್ರಾರಂಭಿಸುತ್ತಾರೆ. “ಶ್ರೀಗಣೇಶಾಯ ನಮಃ”, “ಸರಸ್ವತಿ ನಮಸ್ತುಭ್ಯಂ” “ಗುರುಬ್ರಹ್ಮಾ ಗುರುರ್ವಿಷ್ಣು” ಶ್ಲೋಕಗಳನ್ನು ಹೇಳಿಸಿಕೊಂಡು ಬರುತ್ತಾರೆ. ಪ್ರಾಜ್ಞರು ತರ್ಕ, ಮೀಮಾಂಸೆ ಮೊದಲಾದವುಗಳ ಅಧ್ಯಯನ ಆರಂಭಿಸುತ್ತಾರೆ.” ಶಮೀ ಶಮಯತೇ ಪಾಪಂ! ಶಮೋರ್ ಶತ್ರು ವಿನಾಶನಂ! ಅರ್ಜುನಸ್ಯ ಧನುರ್ಧಾರಿ ರಾಮಸ್ಯಪ್ರಿಯ ದರ್ಶನಂ…… ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣೀಂ! ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ……

ಸುಗ್ಗಿಹಬ್ಬ, ಬಂಡಿಹಬ್ಬ:

ಇದೊಂದು ವಿಶೇಷ ಸುಗ್ಗಿಹಬ್ಬ. ಎಲ್ಲೆಡೆ ಫಾಲ್ಗುಣ ಶುದ್ಧ ಹುಣ್ಣಿಮೆಗೆ ಸುಗ್ಗಿ ಹುಣ್ಣಿಮೆ. ಆದರೆ ಗಂಗಾವಳಿ ನದಿಯಿಂದ ಅಘನಾಶಿನಿ ನದಿಯವರೆಗಿನ ಊರುಗಳಲ್ಲಿ ಚೈತ್ರ ಶುದ್ಧ ಹುಣ್ಣಿಮೆಗೆ ಸುಗ್ಗಿ. ಮೊದಲ ದಿನ ರಾತ್ರಿ ಕಾಮನ ಮೂರ್ತಿ ಮಾಡಿ ಸುಡುವರು. ಮಾರನೇ ದಿನ ಸ್ನಾನ-ಸಂಜೆಗೆ ಶ್ರೀದೇವರ ಉತ್ಸವ ವೆಂಕಟರಮಣ ದೇವಸ್ಥಾನದವರೆಗೆ ಬರುತ್ತದೆ. ಪೂರ್ಣಚಂದ್ರ ದಿಗಂತದಲ್ಲಿ ಕಾಣುತ್ತಾನೆ. ಆಗ ಹಾಲಕ್ಕಿ ಸಮಾಜದ ಸುಗ್ಗಿ. ಕೈಯಲ್ಲಿ ಬೆಂಡಿನ ಕುಂಚ. ತಲೆಗೆ ಬಣ್ಣದ ಬೆಂಡಿನ ಅಂದವಾದ ಶಿರಸ್ತ್ರಾಣ, ನೋಡಲು ಬಲು ಸೊಗಸಾಗಿರುತ್ತದೆ. ಸುಗ್ಗಿ ಮಕ್ಕಳು ಕುಣಿಯುತ್ತಾ “ಹೋ ಹೋ ಚೋ ಜಂಗಮ ಜಕ್ಕಮ ಹೋ ಹೋ ಚೋ” ಎಂದು ಅರಸುಗೌಡನ ಮುಖಂಡತ್ವದಲ್ಲಿ ದೇವಸ್ಥಾನಕ್ಕೆ ಹೋಗಿ ಮರ್ಯಾದೆ ಪಡೆದು ಪುನಃ ತಮ್ಮ ಸುಗ್ಗಿಮನೆಗೆ ಕುಣಿಯುತ್ತಾ ಹೋಗುತ್ತಾರೆ. ಮಾರನೇ ದಿನ ಊರಿನ ಪ್ರಮುಖರ ಅಂಗಳದಲ್ಲಿ ಸುಗ್ಗಿ ಕುಣಿತವಾಗುತ್ತದೆ. ನಂತರ ಸಂಜೆ ಹಗಣ (ಹಗರಣ). ದೇವಸ್ಥಾನದಲ್ಲಿ ಕುಣಿತ ಮುಗಿಸಿ ರಥಬೀದಿಗೆ ಬರುತ್ತಾರೆ. ಅಲ್ಲಿ ನಾನಾ ಬಣ್ಣದ ವೇಷಗಳು ಜನರಿಗೆ ಮೋದ ಉಂಟು ಮಾಡುತ್ತವೆ. ಪೌರಾಣಿಕ, ಸಾಮಾಜಿಕ ಟೀಕೆ ಟಿಪ್ಪಣಿಗಳನ್ನು ಪ್ರದರ್ಶಿಸುತ್ತಾರೆ. ಆ ವರ್ಷದ ಸಾಮಾಜಿಕ ವಿಷಯಗಳ ಬಗೆಗೆ ಕಟು ಟಿಪ್ಪಣಿಗಳ ಪ್ರದರ್ಶನ – ಹಾಲಕ್ಕಿಗಳ ಸಾಮಾಜಿಕ ಪ್ರಜ್ಞೆಯನ್ನು ತೋರಿಸುತ್ತದೆ. ಇದೇ ರೀತಿ ಇನ್ನೊಂದು ತಂಡದವರು (ಹುಳಸೀರೆ ಬಿಜ್ಜೂರು) ಮಾರನೇ ದಿನ ರಥ ಬೀದಿಯಲ್ಲಿ ಹಗಣ ಪ್ರದರ್ಶಿಸುವರು. “ಜಂಗಮ ಜಕ್ಕಮ ಚೋಹೋಚೋ” ಕೊನೆಯಲ್ಲಿ “ದೋದಯ ದಕದಯ ದೋದಯ ದಕದಯ..”. ಮಾರನೇ ದಿನ ಎರಡೂ ಮೇಳದವರದು ಹಗಲು ಹಗಣ ನಡೆಯುತ್ತದೆ.

ಬಂಡಿಹಬ್ಬ : ಇದು ಕರಾವಳಿಯ ಎಲ್ಲ ಊರುಗಳಲ್ಲಿ ನಡೆದಂತೆ ನಮ್ಮ ಊರಿನಲ್ಲೂ ನಡೆಯುತ್ತದೆ.

ಗೋಕರ್ಣದಲ್ಲಿ ಮೂರುಸಂಜೆ:
“ಸುಬ್ಬೀ, ಮೂರುಸಂಜ್ಯಾತು. ಮಕ್ಳಿನ್ನೂ ಬಂಜ್ವಿಲ್ಲೆ. ಏನ್ ಬೇಲೆಯೊ, ಏನ್ ಗೋಲೆಯೋ” ತಾತಮ್ಮ ಧ್ವನಿ ಎತ್ತಿದಳು. ಅಬ್ಬೆ “ಹೌದೇ, ದಿನಾ ಇದೇ ಹಾಡು, ಬರಲಿ” ಎಂದು ಸಿಟ್ಟು ಮಾಡುತ್ತಾ ಗಂಜಿ ಒಲೆ ಸೌದಿಗೆ ನೀರು ಹಾಕಿದಳು. ಸರಿ, ಶಿವರಾಮ ಬಂದ, ಬೈಸಿಕೊಂಡ. ಗಜಣ್ಣನಿಗೂ ಬೈಗುಳು. ನನಗೆ ಕಿವಿಹಿಂಡಿ “ನಾಳೆ ಹೊತ್ತ ಮಾಡಿದ್ರೆ ನೋಡು” ಎಂದು ಗದರಿಸಿದಳು. ಶಾಲೆ ಬಿಟ್ಟವರೇ ಹೋದವರು ನಾವು. “ಆಟ ಆಡಿದ್ರೊ, ಹೊಡೆದಾಟ ಮಾಡಿದ್ರೋ, ಇದೆ, ತಲೆ ತುಂಬಾ ಹೊಂಯ್ಗೆ” ಎಂದು ಅಬ್ಬೆ ಇನ್ನೊಮ್ಮೆ ಕಿವಿ ಹಿಂಡಿದಳು. ಕೈಕಾಲು ತೊಳೆದು, ಬಾಯಿಪಾಠ ಹೇಳಿ, ದೇವರಿಗೆ ನಮಸ್ಕರಿಸಿ, ಗಂಜಿ ಊಟಕ್ಕೆ ಹೋದೆವು. ಬಿಸಿ ಬಿಸಿ ಗಂಜಿ, ಹಾಲು, ತುಪ್ಪ, ಕಚ್ಚುಲೆ ಹಪ್ಪಳ, ಕಾಯಿಚೂರು, ಒಂದೊಂದು ದಿನ ಉಳ್ಳಾಗಡ್ಡೆ ಹೋಳು. ಊಟ ಮಾಡಿ ಓದಲು ಕುಳಿತೆವು.

ಗೋಕರ್ಣದಲ್ಲಿ ಮೂರು ಸಂಜೆ ಎಂದೆ. ಬೇಲೆ ತುಂಬಾ ಜನ. ಸಂಜೆ ಐದರಿಂದ ಶುರು : ಮೇಲಿನಕೇರಿ, ತಾರಮಕ್ಕಿ, ಬಿಜ್ಜೂರು, ಸಾಣಿಕಟ್ಟೆ ಎಲ್ಲಾ ಕಡೆಯಿಂದ ಬೀಚಿಗೆ ಜನ ಒಳ್ಳೆ ಬಟ್ಟೆ ಹಾಕಿಕೊಂಡು ಬರುವರು. ಸೂರ್ಯಾಸ್ತದ ಹೊತ್ತಿನ ಸಮುದ್ರ ನೋಡಬೇಕು. ಸೂರ್ಯನ ಬಣ್ಣದಿಂದ ನೀರು ಥಳಥಳಿಸುತ್ತದೆ. ಹುಣ್ಣಿಮೆ ಸಮೀಪದಲ್ಲಂತೂ ಬೆಳದಿಂಗಳಿನ ಸೊಬಗು ಜೊತೆಜೊತೆಗೆ. ಕೆಲವರು ಸೇಂಗಾ, ಮಂಡಕ್ಕಿ, ಉಳ್ಳಾಗಡ್ಡೆ, ಟೊಮಾಟೊ, ಮೆಣಸು ಹಾಕಿ ಕಲಸಿದ ಭೇಲಪುರಿ ಇವುಗಳನ್ನು ತಿನ್ನುತ್ತಾರೆ. ಮೊದಲು ಚಹಾ ಇರಲಿಲ್ಲ. ನೀರು ಈಗ ಸಮೃದ್ಧಿ. ಮನೆಲಿದ್ದ ಪನ್ನಿತಾತಿಗೆ ಈ ಪಾಟಿ ಜನರ ಕಲ್ಪನೆ ಇಲ್ಲ. ಅಬ್ಬೆಗೂ ಅಷ್ಟೆ. “ಅಬ್ಬೆನೂ ಒಂದು ದಿವಸ ಕರಕಂಡು ಬಪ್ಪೊ” ನಾನೆಂದೆ. “ಅಕ್ಕು, ಮನೆಲಿ ಇದ್ದು ನೀನು ಗಂಜಿ ಮಾಡು” ಎಂದ ದೊಡ್ಡಣ್ಣ.

ಬೇಲೆಯಲ್ಲಿ ನೀರು ಬೇಲೆ ಇದ್ದಾಗ ತಳ್ಳಿ ಆಟ. ಈಗ ಈ ಆಟವೇ ಇಲ್ಲ. ಖೋ ಖೋ ಆಟ,ಒಣ ಬೇಲೆಯಲ್ಲಿ ಹುಡುದೀ ಆಟ ಆಡುತ್ತಾರೆ. ನೋಡಲು ಬಲುಚೆನ್ನ. ಎಷ್ಟು ತಂಡ ಬೇಕಾದರೂ ಆಡಬಹುದು. ವಿಶಾಲ ಬೇಲೆ, ಪ್ರೇಕ್ಷಕರೂ ಇರುತ್ತಾರೆ. ಅಕ್ಕಪಕ್ಕದ ಊರಿನವರೂ ಪ್ರತ್ಯೇಕ ಆಡುತ್ತಾರೆ, ಇಲ್ಲವೇ ಊರಿನವರೊಡನೆ ಸೇರಿ ಆಡುತ್ತಾರೆ.

ಆದರೆ ಕಡು ಬೇಸಿಗೆಯಲ್ಲಿ ಸಾಮಾನ್ಯ ಏಪ್ರಿಲ್ ೧೫ ರಿಂದ ಮಳೆ ಬರುವವರೆಗೂ ಸಾಮಾನ್ಯವಾಗಿ ಮನೆಯ ಗಂಡಸರೆಲ್ಲಾ ಮಲಗಲು ಬೇಲೆಗೆ ಹೋಗುತ್ತಾರೆ. ಒಂದು ಚಾಪೆ, ಒಂದು ಚಾದರ ತೆಗೆದುಕೊಂಡು ಬೇಲೆಗೆ ಹೋಗುತ್ತಾರೆ. ಆಗ ರಾತ್ರಿ ಹತ್ತರಿಂದ ಬೆಳಿಗ್ಗೆ ಆರು,ಆರೂವರೆವರೆಗೆ ನೂರಾರು ಹಾಸಿಗೆಗಳು ಇರುತ್ತವೆ. ತಲೆದಿಂಬಿನ ಅವಶ್ಯಕತೆ ಇಲ್ಲ. ಹೊಂಯ್ಗೆ ಗುಪ್ಪೆ ಮಾಡುತ್ತಾರೆ. ಸುತ್ತಲೂ ಹೊಂಯಿಗೆ ಕಟ್ಟು ಕಟ್ಟುತ್ತಾರೆ. ಗಾಳಿಗೆ ಹೊಂಯ್ಗೆ ಹಾರಿ ಬರದಿರಲೆಂದು ಈ ವ್ಯವಸ್ಥೆ. ರಾತ್ರಿ ಹನ್ನೊಂದರವರೆಗೂ ಪಟ್ಟಾಂಗ, ಪೊಕ್ಕೆ ಕೊಚ್ಚುವುದು! “ಇನ್ನು ಮನಿಕಂಬನೋ” ಎಂಬಷ್ಟರಲ್ಲೇ ಕೆಲವರು ನಿದ್ದೆ ಹೋಗಿರುತ್ತಾರೆ.ಬಸ್ಸಿಗೆ ಹೋಗುವವರು ಬೇಗ ಎದ್ದು ಆಚೆ ಈಚೆಯವರಿಗೆ ಹೊಂಯ್ಗೆ ಹಾರಿಸಿ ಬೈಸಿಕೊಂಡು ಹೋಗುತ್ತಾರೆ.

ಹೆಂಗಸರೂ ಸಹ ರಾಮತೀರ್ಥ ಸ್ನಾನಕ್ಕೆ ಮಧ್ಯಾಹ್ನ ೨-೪ರ ಒಳಗೆ ಹೋಗುತ್ತಾರೆ. ಆಗ ಆ ಕಡೆ ಜನರ ಸಂಚಾರ ಕಡಿಮೆ. ಅವರದು ಕಂಬಳ. ಅವಲಕ್ಕಿ, ಸಾಂಬಾರ್ ಅವಲಕ್ಕಿ, ಸ್ಟವ್ ತೆಗೆದುಕೊಂಡು ಹೋಗುತ್ತಾರೆ. ಚಹಾ ಮಾಡುತ್ತಾರೆ. ಇವೆಲ್ಲ ಮೇಲೆ ರಾಮತೀರ್ಥದಲ್ಲಿ. ಗಂಡಸರು ಬರದಂತೆ ಮೂರು ನಾಲ್ಕು ಜನ ಹೊಂಡದಾಚೆ ಇರುತ್ತಾರೆ. ಅಟ್ಲಕಾಯಿ, ಸೀಗೆಕಾಯಿ, ಯಥೇಚ್ಛ ನೀರು ಅವರಿಗೆ ಮಹದಾನಂದ. ಇವರ ಸ್ನಾನಾನಂತರ ಕಾವಲುಗಾರರ ಪಾಳಿ. ಸ್ನಾನ ಆದವರು ತಲೆಗೂದಲು ಒಣಗಿಸುತ್ತ ನಿಂತಿರುತ್ತಾರೆ. ಸಾಮಾನ್ಯವಾಗಿ ಹೆಂಗಸರು ಸ್ನಾನ ಮಾಡುತ್ತಾರೆ ಎಂದಾಗ ಯಾವ ಗಂಡಸೂ ಬರುವುದಿಲ್ಲ. ಆದರೂ ಧೈರ್ಯಕ್ಕೆ. ಎಲ್ಲರದೂ ಸ್ನಾನ ಆದ ಮೇಲೆ ಚಹಾ,ಸಾಂಬಾರವಲಕ್ಕಿ, ಹಪ್ಪಳ ತಯಾರಿ. ಕೆಲವೊಮ್ಮೆ ಪಾಲು ಸಾಧುಗಳಿಗೂ ಕೊಡುವುದುಂಟು. ಹೆಂಗಸರಲ್ಲಿ ಕೆಲವು ಸಶಕ್ತರು ಪುನಃ ನೂರೊಂದು ಮೆಟ್ಟಿಲು ಏರಿ ಭರತನಗುಡಿಗೆ ಹೋಗುತ್ತಾರೆ. ಅಲ್ಲಿ ಬಾಲಭರತನ ವಿಗ್ರಹವುಂಟು. ಅಲ್ಲೇ ಕೆಳಗೆ ಪಾಂಡವರ ಗುಹೆ ಇದೆ. ಸಾಧುಗಳು ಸ್ವಚ್ಛಮಾಡಿಟ್ಟಿರುತ್ತಾರೆ. ಗುಹೆಯೊಳಗೆ ಕಾಶಿ, ರಾಮೇಶ್ವರಗಳಿಗೆ ಗುಹಾ ಮಾರ್ಗವಿದೆ ಎನ್ನುತ್ತಾರೆ, ನಾವು ಕೇಳುತ್ತೇವೆ. ಮಳೆಗಾಲವಾದುದರಿಂದ ಮಂದಗಮನೆಯರು ಬಲು ಮೆಲ್ಲಗೆ ನಡೆಯಬೇಕು. ಹೋದವರೆಲ್ಲಾ ಬಂದ ಮೇಲೆ “ದನ ಮನೆ ಕಡೆ ಬಪ್ಪು ಹೊತ್ತಾತು” ಎನ್ನುತ್ತಾ ಮನೆ ಸೇರಿಕೊಳ್ಳುತ್ತಾರೆ. ಆದರೂ ಗೋಪಾಲಭಟ್ಟರಿಗೆ ರಾಮತೀರ್ಥ ತಿರುಗಾಟ ತಪ್ಪಲಿಲ್ಲ. ಅವರ ಹೆಂಡತಿ ಒದ್ದೆ ಸೀರೆ ಬಿಟ್ಟು ಬಂದಿದ್ದಾಳೆ. ಹೋಗಿ ತರಬೇಕು. ಜೊತೆಗೆ ಗೋವಿಂದಭಟ್ಟರೆ ಹೆಂಡತಿ ಯಮುನಕ್ಕೆ ಹಿತ್ತಾಳೆ ಕರಡಿಗೆ, ಉಪ್ಪಿಟ್ಟು ಒಯ್ದುದನ್ನು ಬಿಟ್ಟು ಬಂದಿದ್ದಾಳೆ. ಒದ್ದೆ ಸೀರೆ ಸಿಕ್ಕಿತು. ಹಿತ್ತಾಳೆ ಕರಡಿಗೆ ಸಿಗಲಿಲ್ಲ. ಗೋವಿಂದಭಟ್ಟರು ಮನೆಗೆ ಬರುವ ಹೊತ್ತಿಗೆ ಬಾಗಿಲಲ್ಲಿ ನಿಂತು ’ಸಿಕ್ಕಿದ್ದಿಲ್ಲೆ ಅಲ್ದಾ?” ಎಂದಳು. “ನಿನಗೆ ಹೆಂಗೆ ಗೊತ್ತಾತು?” ಎಂದಾಗ “ಆ ಕರಡಿಗೆಯನ್ನು ರಮಕ್ಕ ತಂದಿದ್ದಾಳೆ,ನೀವು ಆ ಕಡೆ ಹೋದ ಮೇಲೆ ತಂದುಕೊಟ್ಟಳು” ಎಂದಳು. “ಸರಿ, ರಮಕ್ಕಾನೋ, ಭೀಮಕ್ಕಾನೋ, ನಿನ್ನ ಕರಡಿಗೆ ಕರಕರೆ ಪರಿಹಾರವಾಯ್ತಲ್ಲ, ಮಾರಾಯ್ತಿ” ಎಂದ ಮಹರಾಯ!

ಮಳೆಗಾಲದಲ್ಲಿ ಗಂಡಸರು ಸ್ನಾನಕ್ಕೆ ರಾಮತೀರ್ಥಕ್ಕೆ ಹೋಗುತ್ತಾರೆ. ಅಲ್ಲಿ ಹತ್ತರಿಂದ ಹನ್ನೆರಡು ಫೂಟು ಎತ್ತರದಿಂದ ರಾಮತೀರ್ಥದ ನೀರು ದಪ್ಪಕ್ಕೆ ನುಗ್ಗಿ ಕೆಳಗಿನ ಕೆರೆಯಲ್ಲಿ ಬೀಳುತ್ತದೆ. ಆಗ ಅಲ್ಲಿ ತಲೆ ಕೊಟ್ಟು ನಿಂತರೆ ಹಾ ಹಾ ಎನಿಸುತ್ತದೆ. ಬೆಳಿಗ್ಗೆ ಎಂಟರಿಂದ ಹನ್ನೆರಡು, ಒಂದು ಗಂಟೆಯವರೆಗೂ ಜನರು ಸ್ನಾನ ಮಾಡುತ್ತಿರುತ್ತಾರೆ. ಪುಂಡ ಹುಡುಗರು ಮೇಲೆ ಹೋಗಿ ಕಾಲುವೆ ನೀರನ್ನು ಮಣ್ಣಿನಿಂದ ಕರಡುತ್ತಾರೆ. ಕೆಳಗಿರುವವರಿಗೆ ಮಣ್ಣು ನೀರು! ತಲೆಗೂ, ಪಂಚೆಗೂ ಮಣ್ಣರಾಡಿ. ಹುಡುಗರನ್ನು ಬೈದು ಓಡಿಸುವಷ್ಟರಲ್ಲಿ ನೀರು ತಿಳಿಯಾಗಿರುತ್ತದೆ. ಲಕ್ಷ್ಮಣತೀರ್ಥ, ಸೀತಾತೀರ್ಥದಲ್ಲಿ ನೀರು ಧುಮಿಕ್ಕುತ್ತದೆ. ಆದರೆ ಎತ್ತರ ಕಡಿಮೆ, ನೀರಿನ ಪ್ರಮಾಣ ಕಡಿಮೆ. ಈ ಕೆರೆಗೂ, ಸಮುದ್ರಕ್ಕೂ ನಡುವೆ ಮಹಾ ದೊಡ್ಡ ಕಲ್ಲುಗಳ ಗೋಡೆ ಇರುತ್ತದೆ. ಇದನ್ನು ಶಾಂಡಿಲ್ಯರೆಂಬ ಅವಧೂತರು ಮುಂದಾಗಿ ನಿರ್ಮಿಸಿದರು ಎಂದು ಪ್ರತೀತಿ. ಕೆಳಗಿನ ಕೆರೆಯಿಂದ ೨೫-೩೦ ಮೆಟ್ಟಿಲು ಎತ್ತರದಲ್ಲಿ ರಾಮದೇವಸ್ಥಾನ ಉಂಟು. ಇಲ್ಲೇ ಶ್ರೀಶಾಂಡಿಲ್ಯ ಮಹರ್ಷಿಗಳ ಸ್ಮಾರಕ ಸಮಾಧಿ ಉಂಟು. ಈ ದೇವಸ್ಥಾನದ ಸುತ್ತ ಸಮುದ್ರದ ಹಿಂದುಗಡೆ ಹೋಗಿ ನೋಡಿದರೆ ಸಮುದ್ರದ ವಿಸ್ತಾರ, ಕಣ್ಮನವನ್ನು ತಣಿಸುತ್ತದೆ. ಸಾಮಾನ್ಯವಾಗಿ ಈ ಭಾಗದಲ್ಲಿ ಸಮುದ್ರದಲ್ಲಿ ಸೌದೆ ತೇಲಿ ಬರುತ್ತದೆ. ಸಾಹಸಿಗಳು ಅದನ್ನು ಹಿಡಿಯುತ್ತಾರೆ. ನಾನು ಸಣ್ಣವನಿರುವಾಗ ಬಟ್ಟೆಯ ಟಾಕಿ ಒಮ್ಮೆ ಬಳಿದು ಬಂದಿತ್ತು. ಎಲ್ಲೋ ಬಟ್ಟೆ ಹಡಗು ತೂಫಾನಿಗೆ ಸಿಕ್ಕು ಒಡೆದಿರಬೇಕು. ಅದು ಸಣ್ಣಣ್ಣ ಶಂಕರಲಿಂಗಭಟ್ಟರ ಕಣ್ಣಿಗೆ ಬಿತ್ತು. ಸರಸರನೆ ಕೆಳಗೆ ಧುಮುಕಿ ಅದರ ಒಂದು ತುದಿ ಹಿಡಿದರು, ಸಾವಕಾಶ ಮೇಲಕ್ಕೆ ಕೊಟ್ಟರು, ನಾವು ನಾಲ್ಕೈದು ಜನ ಮೇಲೆಳೆದು ಹಾಕಿದೆವು. ಸುಮಾರು ಎರಡು ಟಾಕಿ ಇರಬಹುದು. ನಮ್ಮನ್ನೆಲ್ಲ ಮನೆಗೆ ಕರೆದೊಯ್ದು ಹಪ್ಪಳ, ಮಜ್ಜಿಗೆ ಕೊಟ್ಟರು. ಆದರೆ ಇಷ್ಟಕ್ಕೆ ಮುಗಿಸಲಿಲ್ಲ. ಹುಡುಗರಿಗೆಲ್ಲಾ ಒಂದು ಪೈರಾಣಿಗೆ ಬೇಕಷ್ಟು ಬಟ್ಟೆ ಕತ್ತರಿಸಿ ಮನೆಗೆ ತಂದುಕೊಟ್ಟರು. ಕೆಳಗೆ ಇಳಿದವರದು ಅಪಾಯಕಾರಿ ಕೆಲಸ. ಕಟ್ಟಿಗೆ, ಸಾಗವಾನಿ, ಹಲಸು ಎಲ್ಲಾ ತೇಲಿ ಬರುತ್ತದೆ. ಅದನ್ನು ದಡದಲ್ಲಿರುವವರು ಹಿಡಿಯುತ್ತಾರೆ. ಜಗ್ಗೆ, ಪಗ್ಗೆ ಹೆಂಗಸರೂ ಒಟ್ಟು ಮಾಡುತ್ತಾರೆ. ಕೆಲವರ ಕೆಲಸ ಸುಲಭ. ಮೇಲೆ ಕಟ್ಟಿಗೆ ತಂದು ಹಾಕಿದವರ ರಾಶಿಯಿಂದ ಲಪಟಾಯಿಸುವುದು!

ರುದ್ರಪಾದಯಾತ್ರೆ: ಅವರಿಗೆ ಹತ್ತು ಹನ್ನೆರಡು ಜನರಿಗೆ ಪುರುಸೊತ್ತಿದ್ದಾಗ ರುದ್ರಪಾದಕ್ಕೆ ಹೋಗುವುದುಂಟು. ಅಲ್ಲಿ ಒಂದು ರಾತ್ರೆ ಉಳಿದು ವಿವಿಧ ಮನೋರಂಜನೆಗಳನ್ನು ಮಾಡಿ ರಾತ್ರಿ ಕಳೆದು, ಬೆಳಿಗ್ಗೆ ರುದ್ರಪಾದ ಕೆರೆಯಲ್ಲಿ ಸ್ನಾನ ಮಾಡಿ, ಚಹಾ ಕುಡಿದು ಬರುವುದು – ಚಾಕ್ಕೆ ಅಲ್ಲಿಯ ನಿವಾಸಿಗಳು, ಹಾಲಕ್ಕಿ ಗೌಡರು ಹಾಲು ತಂದುಕೊಡುತ್ತಿದ್ದರಂತೆ. ಒಂದು ಗುಂಪಿನವರು ರಾತ್ರಿ ಭೈಠಕ್ (ಯಕ್ಷಗಾನ ಪ್ರಸಂಗ) ಮಾಡಿದರು. ಹೆಂಗಸರಲ್ಲೇ, ಕೌರವ, ಕೃಷ್ಣ, ವಿದುರ, ಕೃಷ್ಣ ಸಂಧಾನವಂತೆ. ದ್ರೌಪದಿಯನ್ನು ಶರಾವತಕ್ಕ, ಭೀಮನ ಪಾರ್ಟನ್ನು ಭೀಮಕ್ಕನೇ ಮಾಡಿದರಂತೆ. ಇದನ್ನೆಲ್ಲಾ ನನಗೆ ಹೇಳಿದ್ದು ಪಂಡಿತರ ಮನೆ ಸುಬ್ಬಮ್ಮ. ಸ್ವತಃ ಅವಳೇ ಭಾಗವತಳು. ಮೃದಂಗ ಎಂದಾಗ ಮಂದಾಕಿನಿ ಕೊಡಪಾನ ಬಾರಿಸಿದಳು. ಇಷ್ಟಾದ ಮೇಲೆ ಮನೆಯಲ್ಲೇ ನಾಲ್ಕಾರು ಪದ್ಯಗಳನ್ನು ಹೇಳಿಸಿದೆವು. ಪದ್ಯ ಕೇಳಿದ ಪದ್ಮಕ್ಕ “ಗಂಡು ಭಾಗವತರನ್ನು ಸುಡೋ” ಎಂದಳು. ರಾಘಣ್ಣನಿಗೆ ಸಿಟ್ಟು ಬಂತು. “ನಿಂಗ್ಳು ಹೆಂಗಸರು – ಸುಡುವವರು, ಹಪ್ಪಳಸುಡಿ” ಎಂದು ಹೇಳಿ ಸಭಾತ್ಯಾಗ ಮಾಡಿದನು.

ತೊಟ್ಟಿಲು ತೂಗುವ ಹಬ್ಬ: ಇದು ಸಹ ಮುಖ್ಯವಾಗಿ ಹೆಂಗಸರದೇ ಕಾರ್ಯಕ್ರಮ. ಶ್ರೀವೆಂಕಟರಮಣ ದೇವಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ದಿನ ಸಾಮಾನ್ಯ ಎಲ್ಲ ಹೆಂಗಸರೂ ಶ್ರೀ ದೇವಸ್ಥಾನದಲ್ಲಿ ಸೇರುವರು. ಬೆಳ್ಳಿಯ ತೊಟ್ಟಿಲಲ್ಲಿ ಚಿನ್ನದ ಶ್ರೀಕೃಷ್ಣನ ಬಾಲ ಶಿಶುವನ್ನು ರಾತ್ರಿ ಹನ್ನೆರಡಕ್ಕೆ ಇಟ್ಟು ತೊಟ್ಟಿಲು ತೂಗಿದರು. ಎಲ್ಲ ಹೆಂಗಸರೂ ಹಾಡುವರು. “ಜೋ ಜೋ ಶ್ರೀಕೃಷ್ಣಲಾಲಿ”. ಇನ್ನೂ ಬಹಳಷ್ಟು ಪದ್ಯ ಹಾಡುವರು. ಸಂತಾನವಿಲ್ಲದ ಹೆಂಗಸರೂ ತೊಟ್ಟಿಲು ತೂಗಿದರೆ ಅವರಿಗೆ ಸಂತಾನ ಪ್ರಾಪ್ತಿಯಾಗುವುದೆಂಬ ಬಲವಾದ ನಂಬಿಕೆ. ಸಂತಾನ ಪ್ರಾಪ್ತಿಯಾದ ಉದಾಹರಣೆ ಬೇಕಷ್ಟಿದೆ. ರಾತ್ರಿ ೦೧೩೦ರವರೆಗೆ ಈ ಕಾರ್ಯಕ್ರಮ ನಡೆದು ಮಂಗಲ ಹಾಡುತ್ತಾರೆ.

ಸುತ್ತಾಯಾತ್ರೆ: ಕಾರ್ತಿಕ ಶುದ್ಧ ಏಕಾದಶಿ ದೊಡ್ಡ ಏಕಾದಶಿ, ಶಯನ ಏಕಾದಶಿ. ಮಾರನೆದಿನ ತುಳಸಿ ವಿವಾಹ. ಅಂದು ಕೆಲ ಹೆಂಗಸರು ಸೇರಿ ಗುಡ್ಡೆ ಮೇಲಣ ದೇವಸ್ಥಾನಗಳಿಗೆ ಪೂಜೆ ಸಲ್ಲಿಸುವರು. ಮೊದಲು ಹನ್ನೊಂದಕ್ಕೆ ಬಟ್ಟೆ ಗಣಪತಿ ದರ್ಶನ ಮಾಡುತ್ತಾರೆ. ಅರ್ಚಕರು ಮಹಾಮಂಗಳಾರತಿ ಮಾಡಿಸುತ್ತಾ ಯಾತ್ರೆಗೆ ಶುಭ ಕೋರುವರು. ನಂತರ ಯಾತ್ರಿಕರು ಭೀಮನಕೊಂಡಕ್ಕೆ ಹೋಗಿ ತೀರ್ಥ ಪ್ರೋಕ್ಷಣ್ಯ ಮಾಡಿಕೊಂಡು ಯಾತ್ರೆ ಮುಂದುವರಿಸಿ ೧.೩೦ – ೨ರ ಹಾಗೆ ಉಮಾ ಮಹೇಶ್ವರಕ್ಕೆ ಬರುತ್ತಾರೆ. ಇಲ್ಲಿ ಫಲಾಹಾರ ಮಾಡುತ್ತಾರೆ. ಸಾಮಾನ್ಯವಾಗಿ ಮೊಗೆಕಾಯಿ, ಬೆಲ್ಲ, ಅವಲಕ್ಕಿ, ಮೊಸರು, ಅಲ್ಲಿ ಸ್ವಲ್ಪ ವಿಶ್ರಮಿಸಿ ತಮ್ಮ ಪ್ರಯಾಣ ಮುಂದುವರಿಸುವರು. ಜಟಾಯು ತೀರ್ಥ, ಬಲ್ಲಾಳು ತೀರ್ಥ..ಬಲ್ಲಾಳು ತೀರ್ಥದಲ್ಲಿ ಸಾಲಿಗ್ರಾಮ ಶಿಲೆಯನ್ನು ಸಂಗ್ರಹಿಸುವರು. ಅದನ್ನು ಊರಿನಲ್ಲಿ ಕೇಳಿದವರಿಗೆ ಕೊಡುವರು. ಅದೇ ಸಾಲಿಗ್ರಾಮ ನಮ್ಮ ತುಳಸಿವಿವಾಹಕ್ಕೆ ವಿಷ್ಣುರೂಪ. ಆ ಹೊತ್ತು ಸಾಯಂಕಾಲ ನಾಲ್ಕರಿಂದ ರಾತ್ರಿ ಹನ್ನೆರಡರವರೆಗೆ ತುಳಸಿಪೂಜೆ ಮಾಡುತ್ತಾರೆ. ಅದನ್ನೇ ಕೆಲವರು ತುಳಸಿ ವಿವಾಹ ಎನ್ನುತ್ತಾರೆ. ತುಳಸಿಕಟ್ಟೆಯನ್ನು ಮುಂಚಿನದಿನವೇ ಶೃಂಗರಿಸುತ್ತಾರೆ. ಕಬ್ಬು, ಮಾವಿನ ತೋರಣ, ತುಳಸಿ ಕಟ್ಟೆಗೆ ಬಣ್ಣ ಬಣ್ಣದ ಚಿತ್ತಾರಗಳಿಂದ ಶೃಂಗರಿಸುತ್ತಾರೆ. ತುಳಸಿಕಟ್ಟೆ ಇಲ್ಲದವರು ಅಂದಿನ ದಿನಕ್ಕೆ ಒಂದು ಗಿಡವನ್ನಾದರೂ ನೆಟ್ಟು ಪೂಜೆ ಸಲ್ಲಿಸುತ್ತಾರೆ. ಮದುವೆಗೆ ಆಚೀಚೆ ಮನೆಯವರು ಬರುತ್ತಾರೆ. ಅವರ ಮನೆಗೆ ನಾವು.ಮಂಗಳಾರತಿ ಸಮಯದಲ್ಲಿ ಪಟಾಕಿ, ಧಡಾಕಿ ಹೊಡೆಯುತ್ತಾರೆ. ನೈವೇದ್ಯಕ್ಕೆ ಕಬ್ಬು, ಅವಲಕ್ಕಿ, ಕಾಯಿ, ಬೆಲ್ಲ.ಆರತಿ ಆಗಬೇಕಾದರೆ “ಗೋವಿಂದಾನು ಗೋವಿಂದಾ ಗೋವಿಂದಾ’ ಎನ್ನುತ್ತೇವೆ. ಅಂದೇ ಉತ್ಥಾನ ದ್ವಾದಶಿ. ಕೃಷ್ಣನಿಗೆ, ತುಲಸಿಗೆ, ನವವಿವಾಹಿತರಿಗೆ ಕ್ಷೀರಾಭಿಷೇಕ ಮಾಡುತ್ತಾರೆ. ಬಂದವರಿಗೆಲ್ಲಾ ಅವಲಕ್ಕಿ ಬೆಲ್ಲ, ಕಬ್ಬಿನ ಹೋಳು ಹಂಚುತ್ತಾರೆ. ವಟುಗಳಿಗೆ ಮದುವೆ ದಕ್ಷಿಣೆ. ಪುರೋಹಿತರಿಗೆ ಮರ್ಯಾದೆ ಸಲ್ಲಿಸುತ್ತಾರೆ. ನಾವೆಲ್ಲಾ ನಮ್ಮ ಕೇರಿಯ ಹಬ್ಬ ಮುಗಿಸಿ ಜಿ.ಎಸ್.ಬಿ.ಕೇರಿ, ವಿಶ್ವಕರ್ಮರ ಓಣಿ, ಸೊನಗಾರ ಕೇರಿ ಪೂಜೆಗಳನ್ನು ಮುಗಿಸಿ ಚೀಲ ತುಂಬಾ ಅವಲಕ್ಕಿ, ಮಂಡಕ್ಕಿ, ದಕ್ಷಿಣೆಯ ಹಣ (ಚೀಲಗಟ್ಟಲೆ ಅಲ್ಲ!) – ರಾತ್ರಿ ಹನ್ನೆರಡೂವರೆ-ಒಂದು ಗಂಟೆ ಹೊತ್ತಿಗೆ ಮನೆಗೆ ಬರುತ್ತಿದ್ದೆವು. ಮಾರನೇ ದಿನ ಬಾಯ್ಬೇಡಿ ಹೊತ್ತಿಗೆ ತಿನ್ನುತ್ತಿದ್ದೆವು.

ಕೆಲವರಿಗೆ ಶುದ್ಧ ಹುಣ್ಣಿಮೆಗೆ ತುಳಸಿ ಮದುವೆ. ಮುಖ್ಯವಾಗಿ ಹಾಲಕ್ಕಿ ಗೌಡರ ಕೇರಿ. ತುಳಸಿಕಟ್ಟೆ ಅಂದವಾಗಿ ಶೃಂಗರಿಸುತ್ತಾರೆ. ಅಡಿಕೆ ಕೊನೆ, ಸಿಂಗಾರ, ತೆಂಗಿನ ಸಿಹಿಯಾಳ, ನೈವೇದ್ಯಕ್ಕೆ ಅವಲಕ್ಕಿ ಬೆಲ್ಲ, ದಕ್ಷಿಣೆ……

**************

ನನಗೆ ಸಾಹಿತ್ಯಕ್ಷೇತ್ರದಲ್ಲಿ ಅಭಿರುಚಿ ಹುಟ್ಟಿಸಿದ ಅಧ್ಯಾಪಕವೃಂದ ಮತ್ತು ಪುಸ್ತಕಗಳು.

ಕರಾವಳಿಯವರಾದ ನಮಗೆ ಸಾಹಿತ್ಯದಲ್ಲಿ ಯಕ್ಷಗಾನ ಮೊದಲ ಗುರು. ನಮ್ಮ ಮನೆಯ ಕೈಮೇಜಿನಲ್ಲಿ ಎರಡು ಪ್ರಸಂಗ ಪಟ್ಟಿಗಳಿದ್ದವು. ಒಂದು ದ್ರೋಣಪರ್ವ ಹಾಗೂ ಇನ್ನೊಂದು ದ್ರೌಪದಿ ವಸ್ತ್ರಾಪಹರಣ. ಇದನ್ನು ಬರೆದವರು ವಿಚಿತ್ರ ಎಂದರೆ ಕರಾವಳಿಯವರಲ್ಲ. ಸಾಗರ ತಾಲೂಕು ಹೊಸಬಾಳೆ ಗ್ರಾಮದ ಹೊಸಬಾಳೆ ರಾಮಪ್ಪನವರ ಮಗ ಪುಟ್ಟಪ್ಪನವರು. ಅವರು ಹೆಸರು ಹೇಳಿಕೊಂಡ ರೀತಿ ಆಕರ್ಷಣೀಯವಾಗಿತ್ತು. “ನವಕದಳಿಪುರದ ರಾಮಾಖ್ಯನ ತರಳ ಪುಟ್ಟಪ್ಪ”. ನನಗೆ ಇದರಲ್ಲಿ ಹೊಸತನ ಕಂಡಿತು. ನಾನೂ “ದನಗಿವಿಪುರದ ಅನಂತ ಪುತ್ರ ಮಹಾಬಲ” ಎಂದು ಹೇಳಿ ನನ್ನ ಸ್ನೇಹಿತರಿಗೆ ಆಶ್ಚರ್ಯ ಉಂಟುಮಾಡಿದೆ! ನನಗೆ ಈ ಪ್ರಸಂಗದಲ್ಲಿ ಬರುವ ಸಂವಾದ ತುಂಬಾ ಆಕರ್ಷಣೀಯವಾಗಿತ್ತು. ರಾಜಸೂಯಯಾಗಕ್ಕೆ ಶಿಶುಪಾಲ ಹೋಗಿ ಶತಾಪರಾಧ ಮಾಡಿ ಕೃಷ್ಣನ ಚಕ್ರಕ್ಕೆ ಆಹುತಿಯಾಗುತ್ತಾನೆ. ಅವನ ತಮ್ಮ ದಂತವಕ್ತ್ರನಿಗೆ ಇದು ಗೊತ್ತಿಲ್ಲ. ’ಪುರವನ್ನು ಶೃಂಗರಿಸು’ ಅನ್ನುತ್ತಾನೆ. “ಮೊನ್ನೆದಿನವೇ ಯಾಗ ಮುಗಿದು ಅಣ್ಣನೀದಿನ ಬರುವನು’ ಎಂದು ತಮ್ಮನ ಊಹೆ. ಆದರೆ ಚೈದ್ಯನ (ಶಿಶುಪಾಲ) ಜೊತೆಗೆ ತೆರಳಿದ ಭಟ್ಟರು ಶಿಶುಪಾಲ ಕೃಷ್ಣನ ಚಕ್ರಕ್ಕೆ ಬಲಿಯಾದ ಸುದ್ದಿ ಹೇಳಿದಾಗ ತಮ್ಮ ಕೆಂಡಾಮಂಡಲವಾಗುತ್ತಾನೆ. ಇಂದ್ರಪ್ರಸ್ಥಕ್ಕೆ ಬರುತ್ತಾನೆ – ಕೃಷ್ಣನನ್ನು ಸಂಹರಿಸಬೇಕೆಂದು! ಇಲ್ಲಿ ನಡೆಯುವ ಸಂಭಾಷಣೆ ಚತುರತೆಯಿಂದ ಕೂಡಿದೆ. ಕೃಷ್ಣ ಮತ್ತು ಶಿಶುಪಾಲ (ಹಾಗೂ ದಂತವಕ್ತ್ರ) ಭಾವಂದಿರು (ಭಾಮೈದುನರು).

ಕೃಷ್ಣಭಾವ; ಏನು, ಕೋಪಭಾವದಿಂದ ನನ್ನ ಕೊಲ್ವ ಮಾತಿದೇನು?” – ಕೃಷ್ಣನ ಚೋದ್ಯ. ಅದಕ್ಕೆ ದಂತವಕ್ತ್ರ “ಭಾವಗೀವನೆಂಬ ನಗೆಯ ಠೀವಿ ಮಾತು ಹಿಂದಕಾಯ್ತು. ಮಾವನನ್ನು ತರಿದ ನಿನ್ನ ಬಿಡುವುದುಚಿತವೇ?”

ಕೃಷ್ಣ: “ತನಗೆ ಸೊಕ್ಕು ಇರುವುದೆಂಬ ಬಿಂಕದಿಂದ ಸಾಧುನೃಪರ ಸೆರೆಯೊಳಿಟ್ಟ ಪಾಪ ಹನನಗೈದಿತು” (ಅವನ ಪಾಪವೇ ಅವನನ್ನು ಕೊಂದಿತು).

ಚೈದ್ಯ: ಕೇಳು ಕಂಸನಿರಲಿ ಪಿಂದೆ ಕಾಳರಾತ್ರಿಯೊಳಗೆ ಪೋಗಿ ಶೀಲಮಗಧ ಪತಿಯ ಸೀಳಿ ಕೊಂದ ಪಾತಕಿ.

ಕೃಷ್ಣ: ಅವನ ಕ್ರೌರ್ಯದಿಂದಲೇ ಅವನು ಸತ್ತ, ನಾನು ಕಾರಣನಲ್ಲ.

ಚೈದ್ಯ: ಹಾಲನುಣಿಸಲು ಬಂದ ವೀರ ನಾರಿ ಅಸಮಶೂರ ರಕ್ಕಸಿ ಸಾಧ್ವಿ ಪೂತನಿಯ ತನುವನ್ನು ಸಾಯಿಸಿದೆ.

ಕೃಷ್ಣ: ಮಕ್ಕಳಿಗೆ ಮೋಸದಿಂದ ವಿಷಮನುಣಿಸಲು ಬಂದ ಪೂತನಿಯ ಅಸುವ ಹೀರಿ ಮಕ್ಕಳನ್ನು ಸಲುಹಿಕೊಂಡೆನು.

ನನಗೆ ಈ ಸಂವಾದ ಈಗಲೂ ನೆನಪಿರುವಂತೆ ಅಚ್ಚೊತ್ತಿದೆ. ಹೀಗೆಯೇ ದ್ರೌಪದಿ ಪ್ರತಾಪದಲ್ಲಿಯೂ ಸೊಗಸಾದ ಸಂವಾದವಿದೆ.

ದ್ರೋಣಾಚಾರ್ಯರಿಗೂ, ಅರ್ಜುನನಿಗೂ ನಡೆದ ಸಂವಾದವಿದು:

ದ್ರೋಣ: ಗುರುವಾಗಿ ನಾನು ಶಿಷ್ಯನೊಡನೆ ಯುದ್ಧ ಮಾಡುವುದು ಯಾವ ನ್ಯಾಯ?

ಅರ್ಜುನ: ಈ ಹಿಂದೆ ಭೀಷ್ಮಾಚಾರ್ಯರು ಗುರು ಪರಶುರಾಮನೊಂದಿಗೆ ಅಂಬೆಯ ವಿವಾಹದ ವಿಷಯವಾಗಿ ಯುದ್ಧ ಮಾಡಿರಲಿಲ್ಲವೇ ಗುರುಗಳೆ? ಆದರೆ ದ್ವಿಜರಾಗಿ ನೀವು ರಾಜರನ್ನು ಸಂಹರಿಸುತ್ತಿರುವುದು ಸರಿಯೇ?

ದ್ರೋಣ: ಹಿಂದೆ ಭಾರ್ಗವಾಖ್ಯ ಇಪ್ಪತ್ತೊಂದು ಬಾರಿ ಕ್ಷತ್ರಿಯರನ್ನು ಕೊಂದನವಗೆ ಜಾತಿ ಪೋಯ್ತೆ, ಎಲೆ ಕಿರೀಟಿಯೇ?

ಈ ರೀತಿಯ ಸಂವಾದಗಳು ಇತ್ತಲಾಗಿನ ಆಟಗಳಲ್ಲಿ ಚಿಟ್ಟಾಣಿಯವರ ’ಸದ್ದಿಲ್ಲದೇ ಮದ್ದರೆವೆನು’ ಇವೆಲ್ಲ ನನ್ನ ನೆನಪಿನಲ್ಲಿ ಸದ್ದಿಲ್ಲದೇ ವಾಸಿಸಿವೆ. ಇವು ನನ್ನ ಸಾಹಿತ್ಯ ದಿಗಂತದಲ್ಲಿ ಪ್ರಥಮಗುರು ಸ್ಥಾನದಲ್ಲಿವೆ. ಇನ್ನು ನಾಟಕದ ಕೆಲ ಉಕ್ತಿಗಳು – ಶಕಾರನ ವಕ್ರ ಬುದ್ಧಿಗೆ: ಯಾರು? ಜಮದಗ್ನಿಯ ಪುತ್ರನಾದ ಭೀಮಸೇನನೇ, ಕುಂತಿಯ ಮಗನಾದ ರಾವಣನೇ ಬುದ್ಧಿ…… ಅಪರವತಾರಗಳು.

ಚಾರುದತ್ತನ ಎರಡು ಶ್ಲೋಕಗಳು: “ಅಪಾಪಾನಾಂ ಕುಲೇ ಜಾತೇ…… “(ನಾನು ಅಪಾಪಿಗಳ ಕುಲದಲ್ಲಿ ಹುಟ್ಟಿದವನು..) ಎಂಬ ಪದ್ಯ ಆಗಲೇ ನನ್ನ ಮನ ಸೆಳೆದಿತ್ತು. “ಚಾರುದತ್ತ ನಿರ್ದೋಷಿ ಎಂದಾಗಿ ಘಾಸಿಗೆ ಹಾಕಿದರೆ ಅದು ಪುತ್ರಜನ್ಮಕ್ಕೆ ಸಮಾನ ಎಂದು ತಿಳಿಯುತ್ತೇನೆ” ಎಂಥ ಶುದ್ಧ ಹೃದಯ!

ಇನ್ನು ಸಾಮಾಜಿಕ, ಪೌರಾಣಿಕ ನಾಟಕಗಳನ್ನು ತೆಗೆದುಕೊಂಡರೆ ಕೈಲಾಸಂರವರ ’ಪರ್ಪಸ್’- ಏಕಲವ್ಯನಿಗೆ ಸಂಬಂಧಿಸಿದ ನಾಟಕ. ದ್ರೋಣಾಚಾರ್ಯರು ಅರ್ಜುನನಿಗೆ ವಿದ್ಯಾರ್ಥಿಯಾಗಲು ಈ ಐದು ಎಲಿಮೆಂಟ್ಸ್ ಇರಬೇಕು ಎನ್ನುತ್ತಾರೆ: (೧) ಗುರುವಿನಲ್ಲಿ ವಿದ್ಯಾರ್ಥಿಗೆ ಪ್ರೀತಿ. (೨) ಗುರುವಿಗೆ ವಿದ್ಯಾರ್ಥಿಯಲ್ಲಿ ಅಕ್ಕರೆ (೩) ತಾನು ಓದುತ್ತಿರುವ ವಿಷಯದ ಬಗೆಗೆ ಪ್ರೀತಿ. (೪) ಒಳ್ಳೆಯ ಉದ್ದೇಶ. (೫)ಏಕಾಗ್ರತೆ ಎಂದು ಹೇಳುತ್ತಾರೆ. ನಂತರ ವಿದ್ಯಾರ್ಥಿಗಳನ್ನು ಸಂಧ್ಯಾವಂದನೆಗೆ ಕಳಿಸುತ್ತಾರೆ. ಆಗ ಏಕಲವ್ಯ ಬಂದು ದ್ರೋಣರಿಗೆ ಎರಗಿ ವಿದ್ಯಾಭಿಕ್ಷೆಯನ್ನು ಯಾಚಿಸುತ್ತಾನೆ. ತನ್ನ ಪರಿಚಯ ಮಾಡಿಕೊಳ್ಳುತ್ತಾನೆ. ಆಗ ದ್ರೋಣ “ಇಲ್ಲ, ಆಗುವುದಿಲ್ಲ. ಈಗ ನಾನು ರಾಜಕುಮಾರರಿಗೆ ವಿದ್ಯೆ ಹೇಳಿಕೊಡುತ್ತಿದ್ದೇನೆ” ಎಂದಾಗ ಏಕಲವ್ಯ “ಹೇ ಗುರು, ಹಾಗೆ ಅನ್ನಬೇಡಿ. ಈಗ ನೀವು ಹೇಳಿದ, ವಿದ್ಯಾರ್ಥಿಗಳಲ್ಲಿರಬೇಕಾದ ಮೂಲಭೂತ ಗುಣಗಳು ನನ್ನಲ್ಲಿವೆ. ಮೊದಲನೆಯದಾಗಿ ನನಗೆ ವಿದ್ಯೆಯಲ್ಲಿ ಪ್ರೀತಿ ಉಂಟು. ಅದಕ್ಕಾಗಿ ದೂರದ ಹಿರಣ್ಯಧನಸ್ಸಿನ ಕಾಡಿನಿಂದ ಇಲ್ಲಿಗೆ ಬಂದಿದ್ದೇನೆ. ತಮ್ಮಲ್ಲಿ ಪ್ರೀತಿ, ಗೌರವ ಇದ್ದುದರಿಂದಲೇ ಅಬ್ಬೆ ಮಾತಿಗೆ ಹೂಂಗುಟ್ಟು ಒಂದೇ ಮನಸಿನಿಂದ ಬಂದಿದ್ದೇನೆ. ನನ್ನ ಉದ್ದೇಶ ನಿನ್ನ ಅರ್ಜುನನ ಉದ್ದೇಶಕ್ಕಿಂತಲೂ ಉಚ್ಚವಾದದ್ದು. ಅರ್ಜುನನ ಉದ್ದೇಶ ಏಕೈಕ ಬಿಲ್ಲುವಿದ್ಯೆಗಾರನಾಗಿ ಪಾಪದ ರಾಜರ ಮೇಲೆ ಯುದ್ಧ ಸಾರಿ ಭಂಡಾರ ಲೂಟಿ ಮಾಡುವುದು. ನನ್ನದು ಅದಲ್ಲ. ನನ್ನ ಪಕ್ಕದ ಕಾಡಿನಲ್ಲಿ ಒಬ್ಬ ತಪಸ್ವಿ ಇದ್ದಾನೆ. ಅವನ ಆಶ್ರಮದಲ್ಲಿ ಹಿಂಸ್ರ ಪಶುಗಳು, ಸಾಧುಪ್ರಾಣಿಗಳು ಒಟ್ಟಿಗೆ ಆಡುತ್ತವೆ. ಅದು ಅವನ ತಪಸ್ಸಿನ ಪ್ರಭಾವ. ಶೂದ್ರನಾದ ನಾನು ತಪಸ್ಸು ಮಾಡಲಾರೆ. ನನ್ನ ಉದ್ದೇಶ ಬಿಲ್ವಿದ್ಯೆಯಿಂದ ಹಿಂಸ್ರ ಪಶುಗಳನ್ನು ಹತೋಟಿಯಲ್ಲಿಡುವುದು. ಹಿಂಸೆಯನ್ನು ಅಹಿಂಸೆಯಿಂದ ನಿಗ್ರಹಿಸುವುದು. ಇನ್ನು ಏಕಾಗ್ರತೆ. ಬಿಲ್ಲುಗಾರಿಕೆಯಲ್ಲಿ ಹುಟ್ಟು ಬೇಟೆಗಾರನಾದ ನನಗಿರುವ ಬಿಲ್ವಿದ್ಯೆಯ ಏಕಾಗ್ರತೆ ಅರ್ಜುನನಿಗೆ ಬರಲು ಸಾಧ್ಯವೇ? ಇನ್ನು ಗುರು ಶಿಷ್ಯನ ಬಗೆಗೆ ತೋರುವ ಅಕ್ಕರೆಯ ಅಂಶ. ಅದು ತಾವು ಹೇಳಬೇಕು – ಎಂದು ಕೈಕಟ್ಟಿ ನಿಲ್ಲುತ್ತಾನೆ. ಕೈಲಾಸಂ ಹೇಳಿರುವ (ದ್ರೋಣರಿಂದ ಹೇಳಿಸಿರುವ) ಈ ಐದು ಅಂಶಗಳನ್ನು ನನ್ನ ವೃತ್ತಿಯ ಮೂವತ್ತೇಳು ವರ್ಷಗಳೂ ಹೇಳುತ್ತ ಬಂದಿದ್ದೇನೆ. ಮಕ್ಕಳೂ ಲಕ್ಷ್ಯಕೊಟ್ಟು ಕೇಳುತ್ತಿದ್ದರು. ನನ್ನಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಹುಟ್ಟಿಸಿದ ಪುಸ್ತಕಗಳ ಬಗೆ ಅದು.

೨. ಕೆ.ವಿ.ಅಯ್ಯರ್‌ರ “ರೂಪದರ್ಶಿ” ಕಾದಂಬರಿ. ಅಥೆನ್ಸ್ ನಗರದ ಸೌಂದರ್ಯವನ್ನು ಹೆಚ್ಚಿಸಿದ ದೇವಸ್ಥಾನಗಳ ಬಗೆಗೆ ಬರೆಯುತ್ತ ಕಾದಂಬರಿಕಾರರು ಮೊದಲನೇ ವಾಕ್ಯವನ್ನು ಬಹು ಸುಂದರವಾಗಿ ಮನಂಬುಗುವಂತೆ ಬರೆದಿದ್ದಾರೆ. ನಗರ ಸೌಂದರ್ಯವನ್ನು ಹೆಚ್ಚಿಸಲು ಅಥೆನ್ಸ್‌ನವರು ಲಕ್ಷಾಂತರ ರೂಪಾಯಿಗಳನ್ನು “ಸಾರ್ಥಕಗೊಳಿಸಿದರು” ಎಂಬ ಪ್ರಯೋಗವಿದೆ. ಬೇರೆ ಯಾವ ಲೇಖಕರಾದರೂ ವ್ಯಯ ಮಾಡಿದರು, ಖರ್ಚುಮಾಡಿದರು ಎಂದು ಬರೆಯುತ್ತಿದ್ದರೇನೋ! ಆದರೆ ಸಾರ್ಥಕ ಪದವನ್ನು ಎತ್ತಿ ಹಿಡಿದು, ಅದರ ಔಚಿತ್ಯವನ್ನೂ ಎತ್ತಿ ಹಿಡಿದು ಇಡೀ ಬಿ.ಎಸ್.ಸಿ ಕನ್ನಡ ಎರಡನೇ ಭಾಷಾ ವಿದ್ಯಾರ್ಥಿಗಳ ಸಂತೋಷಕ್ಕೆ ಪಾತ್ರರಾದವರು ರಾಜರತ್ನಂ,ನಮ್ಮ ಪ್ರಿಯ ಶಿಕ್ಷಕರು. ಕನ್ನಡದ ಎರಡು ರತ್ನಗಳಾದ ಶ್ರೀ.ವಿ.ಸೀ ಹಾಗೂ ಶ್ರೀ ಜಿ.ಪಿ.ರಾಜರತ್ನಂ- ನಾವು ಅವರನ್ನು ಕನ್ನಡ ಪ್ರೊಫೆಸರ್ ಆಗಿ ಪಡೆದು ಧನ್ಯರು.

೩. ಬಿ.ಎಂ.ಶ್ರೀ.ಯವರ “ಅಶ್ವತ್ಥಾಮನ್” ನಾಟಕವನ್ನು ಮನಸಿಗೆ ನಾಟುವಂತೆ ಪಾಠ ಮಾಡಿದವರು ವಿ.ಸೀ.ಅವರು.ಅಶ್ವತ್ಥಾಮನ್‌ನ ಕ್ರೌರ್ಯವನ್ನು (ಉಪಪಾಂಡವರ ವಧೆಯ ಕಾಲದಲ್ಲಿ), ಕ್ರೋಧಾನ್ವಿತ ಭೀಮಸೇನನನ್ನು ಬಲು ಚೆನ್ನಾಗಿ ವರ್ಣಿಸಿದ್ದಾರೆ. ಶ್ರೀಕೃಷ್ಣನನ್ನೂ,ಪಾಂಡವರನ್ನೂ ಕೊಲ್ಲುವೆನೆಂದು ಹೊರಟ ಅಶ್ವತ್ಥಾಮನು ರುದ್ರ ಬೀಸಿದ ಭ್ರಮೆಗೆ ಒಳಗಾಗುತ್ತಾನೆ. ಶ್ರೀಕೃಷ್ಣ ಎಂದು ಭಾವಿಸಿ ಒಂದು ಕುರಿಯನ್ನು ಹಿಡಿದು “ಬಾ ಕೃಷ್ಣ,ಯುದ್ಧಮನ್ ಪೊತ್ತಿಸಿದ ಮಾಯಾವಿ,ಫಲಮನ್ ಉಣ್,ಬಾರ……ಎನುತೆ ಬೀಡಿಂಗುಯ್ದು ಹಿಂಸಿಸುತ್ತಿರ್ಪನ್”.ಇವೆಲ್ಲಾ ನಡೆದದ್ದು ಪಾಂಡವರ ಪಾಳಯದಲ್ಲಿ, ನಡುರಾತ್ರಿಯಲ್ಲಿ. ಬುದ್ಧಿಗೆ ಮಂಕು ಕವಿದು ಮಾಡಿದ ಕ್ರೌರ್ಯದ ಕಾರ್ಯಗಳು ಎಂಥ ಕ್ರೂರಿಗೂ ಅಯ್ಯೋ ಅನಿಸಬೇಕು – ಹಾಗಿವೆ. ಮುಂದೆ ಅಶ್ವತ್ಥಾಮ ಆತ್ಮಹತ್ಯೆ ಮಾಡಿಕೊಳ್ಳುವಾಗ ಅವನ ಆತ್ಮಗತ ವಾಕ್ಯಗಳು ಎಂಥವರಿಗೂ ಮರುಕ ಹುಟ್ಟಿಸುವಂತಹವು.ಖಡ್ಗ ನೆಲದಲ್ಲೂರಿ ಅವನು ಹೇಳುವ ಮಾತುಗಳು:
“ನಿಶ್ಚಲಂ ನಿಂದುದೀ ಕಟುಕನ್.ನಂಬತಕ್ಕುದು-ಮಗುಳ್ದು ಕೊಲ್ಗುಂ.
……………………… ಮೊದಲೆ ಇದು ಆ ಶತ್ರುಮಿತ್ರನ್
ಅಭಿಮನ್ಯು,ಎನ್ನ ಕರುಬಾದವನ್,ಸಮಯುದ್ಧದೊಳ್ ಮೆಚ್ಚುಗೊಟ್ಟ
ಕೊಡುಗೆ ತಾನ್;……………………..ಪೊಸತು ಮಸೆದೀಗಳ್
ಮೊನೆಗೊಂಡ ಕೂರ್ಪಿನದು;ನೋಡಿ ನಟ್ಟೆನ್ ನಾನೆ,ಒಡನೆ ಸಾವೀಯಲ್…”

ಎನ್ನುತ್ತ ಆ ಖಡ್ಗದ ಮೇಲೆ ಬಿದ್ದು ಸಾಯುತ್ತಾನೆ. ಬೇಟೆಗೆ ಹೋದ ಏಕಲವ್ಯ ಬರುತ್ತಾನೆ “ಹೇ ಗುರುಪುತ್ರ, ಏನು ಮಾಡಿದೆ! ನಿನ್ನ ಕುಲಕಿದು ಜಸಮೇ?” ಎಂದು ಭೂಮಿಯಲ್ಲಿ ಹೊರಳಾಡುತ್ತಾನೆ.

ಬಿ.ಎಂ.ಶ್ರೀ ಸೃಷ್ಟಿಸಿದ ಪಾತ್ರಗಳಲ್ಲೆಲ್ಲಾ ಅತ್ಯಂತ ದೈನ್ಯಭಾವ ಹುಟ್ಟಿಸುವ ಪಾತ್ರ ಭಾರ್ಗವಿಯದು. ಕೃಷ್ಣ ಒಮ್ಮೆ ಅವಳಿಗೆ ಹೇಳುತ್ತಾನೆ. “ಕಲಿಗಳನ್ ಬಳಯಿಪುದೆ ನಿನ್ ಪಾಲ್ ನಲಿವು”. ಭಾರ್ಗವಿಯ ದೀರ್ಘ ಆತ್ಮಕಥನ: “ಅಯ್ಯನ್ ಎನ್ನನ್ ಆ ಋಷಿ ಭಾರದ್ವಾಜಂಗೆ ಕೊಟ್ಟನ್… ಆ ಬೀರಸಿರಿಯ ಮಂಗಳದ ಕಳಶಮೆನೆ… ಲೋಕೈಕ ಬಾಣನನ್ ದ್ರೋಣನನ್ ಪೊತ್ತೆನ್. ಮೊಗಗಾಣ್ಬ ಮುನ್ನಮೇ ಯಮನ್ ಉಯ್ದನ್ ಇನಿಯನನ್.ಪೊತ್ತನನ್ ಪೆತ್ತೆನ್.ನಡಪಿದೆನ್.ಒರ್ವನಾಳ್ ಮಾಡಿದೆನ್.ಬಡತನದೊಳ್ ಎತ್ತಲುಂ ತಿರಿದು ಬಾಳ್ವಂಗೆ ನೀನ್ ಮೂಡಿ,ತಾಯನ್ ಅಂದೇ ತಿಂದೊಕೊಂಡಯ್.ಮಗುಗೆ ಪಾಲ್ಗಿಲ್ಲ.ರಾಜರೊಳ್ ಕೆಳೆತನಂ…ಕಣ್ಗೆಟ್ಟ ಮಕ್ಕಳನ್ ಕುರುಧರೆಗೆ ಕರೆತಂದೆನ್.ದ್ರೋಣನನ್ ರಾಜಗುರುವನ್ ಮಾಡಿದೆನ್. ಅರಸರೊಳ್ ಗುರುತನದ ಮನ್ನಣೆಯನ್ ಉಂಡನ್….

******************
ಅನಂತದೆಡೆಗೆ
“ಅಶ್ವತ್ಥಾಮನ್” ಕೃತಿಯ ಪರಿಚ್ಛೇದಗಳ ಉಲ್ಲೇಖದೊಂದಿಗೆ ತಂದೆಯವರ ಬರವಣಿಗೆ ನಿಂತಿದೆ. ಆ ರವಿವಾರ ರಾತ್ರಿ ಅವರು ಈ ಭಾಗ ಬರೆದು ಬರವಣಿಗೆ ನಿಲ್ಲಿಸಿದರು. ಮರುದಿನ ಬರಹ ಮುಂದುವರಿಸುವರೆಂಬ ನಿರೀಕ್ಷೆಯಲ್ಲೇ ನಾವಿದ್ದೆವು.ಕಗ್ಗ,ಒಸಗೆ,ಹರಿಶ್ಚಂದ್ರ ಕಾವ್ಯ….. ಇವೆಲ್ಲದರ ಕುರಿತು ಅವರು ಬರೆಯುವುದಿತ್ತು. ಆದರೆ ಅವರಿಗೆ ಸೋಮವಾರ ಮಧ್ಯಾಹ್ನದ ಹೊತ್ತಿಗೆ ರಕ್ತವಾಂತಿಯಾಯಿತು. ಅಂದು ಅವರನ್ನು ಬೆಂಗಳೂರಿನ ಜಯನಗರದಲ್ಲಿರುವ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಸೇರಿಸಲಾಯಿತು. ಒಂದು ವಾರ ಹಾಗೆ ಐ.ಸಿ.ಯು.ದಲ್ಲಿದ್ದಾಗಲೂ ಪ್ರಜ್ಞಾಸ್ಥಿತಿಯಲ್ಲಿದ್ದರು.ಬಂಧು ಬಾಂಧವರೆಲ್ಲರನ್ನೂ ಗುರುತಿಸಿದರು, ಮಾತನಾಡಿದರು. ಮುಂದಿನ ಸೋಮವಾರ ಬೆಳಿಗ್ಗೆ ಅವರ ಉಸಿರಾಟ ಕ್ಷೀಣಿಸಿತು. ಕೃತಕ ಉಸಿರಾಟದ ವ್ಯವಸ್ಥೆ ಅಳವಡಿಸಿದ್ದರಿಂದ ಕೆಲ ಗಂಟೆಗಳ ಕಾಲ ಉಸಿರಾಟ ಮುಂದುವರಿಯಿತು. ಅಂದು ರಾತ್ರಿ ಸುಮಾರು ಹನ್ನೊಂದು ಗಂಟೆಯ ಹೊತ್ತಿಗೆ ಅವರು ಕೊನೆಯುಸಿರೆಳೆದರು. (೪-೧೦-೨೦೧೦, ಸೋಮವಾರ).ಅದಕ್ಕೂ ಮುನ್ನ ಇಡೀ ದಿನ ಪರಿಚಯದ ಅನೇಕ ಪ್ರಿಯರು ಅವರ ದರ್ಶನ ಪಡೆದರು. ಕಡೇಕ್ಷಣದಲ್ಲಿ ಸಂಪ್ರದಾಯದಂತೆ ಗಂಗಾಜಲವನ್ನು ಅವರ ತುದಿನಾಲಗೆಯ ಮೇಲೆ ಸಮರ್ಪಿಸಿದೆ. ಅವರು ತನ್ನ ಬಾಳಿನುದ್ದಕ್ಕೂ ಅಭಿಮಾನದಿಂದ, ವಾತ್ಸಲ್ಯದಿಂದ ಕಂಡ ವಿದ್ಯಾರ್ಥಿಗಳು, ಎಳೆಯರು, ಸಮಕಾಲೀನರು,ಹಿರಿಯರು ಎಲ್ಲರನ್ನೂ ನೆನೆಯುತ್ತ ಅವರ ಮುಂದಿನ ಪ್ರಯಾಣಕ್ಕೆ ಶುಭ ಕೋರಿ ಕೆಲವು ಗಳಿಗೆ ಮೌನವಾಗಿ ನಿಂತುಕೊಂಡೆ. ಆಸ್ಪತ್ರೆಯ ಸಿಬ್ಬಂದಿ ನಮಗೆ ಹೊರಗಿರಲು ಸೂಚಿಸಿದರು. ಕೆಲ ನಿಮಿಷಗಳ ಬಳಿಕ ಡಾಕ್ಟರು ಹೊರಗೆ ಬಂದು ತಂದೆಯವರ ಮರಣವನ್ನು ಪ್ರಕಟಿಸಿದರು. ಅಶೋಕಭಾವ, ಗಪ್ಪತಿ ಮಾವ,ರಾಮು…ಎಲ್ಲರೂ ಅಲ್ಲಿದ್ದೆವು.ಅಪ್ಪ ಹೊರಟು ಹೋಗಿದ್ದರು…

ಮನುಷ್ಯ ಅಳಿದ ಮೇಲೆ ಉಳಿಯುವುದು ಏನು? ಇದು ಬಾಳಿನ ರಹಸ್ಯಮಯ ಪ್ರಶ್ನೆ. ತನ್ನ ಸುತ್ತುಮುತ್ತಲಿನ ಬಾಳನ್ನು ಗಾಢವಾಗಿ ಪ್ರೀತಿಸಿದ, ಪ್ರಭಾವಿಸಿದ ವ್ಯಕ್ತಿಗಳ ಕುರಿತಾಗಿ ಈ ಮಾತು ಕೇಳಿಕೊಂಡಾಗ ಭಾವೋದ್ವೇಗದಿಂದ ಪ್ರಶ್ನೆ ಇನ್ನಷ್ಟು ಜಟಿಲವಾಗುತ್ತದೆ. ಬಾಳಿನ ಕಡೆಯ ನೂರು,ನೂರಿಪ್ಪತ್ತು ದಿನಗಳಲ್ಲಿ ತಂದೆಯವರು ಬರೆದ ಈ ಪುಟಗಳು ಇಲ್ಲಿ ಉಲ್ಲೇಖಿತವಾದ ಎಲ್ಲ ಸಂಗತಿಗಳಿಗೂ ಅವರ ಅಸಾಧಾರಣ ನೆನಪಿನ ಶಕ್ತಿಯನ್ನೇ ಆಧರಿಸಿವೆ.ಅಲ್ಲಿ ಇಲ್ಲಿ ವಿವರಗಳು ಕಿಂಚಿತ್ತು ಬದಲಾಗಿರಲೂಬಹುದೇನೋ.ಆದರೆ ಈ ಕೃತಿಯನ್ನು ಓದಬೇಕಾದುದು ಒಂದು “ಜೀವನಚಿತ್ರ”ವಾಗಿ,ಇತಿಹಾಸದಂತೆ ಅಲ್ಲ.ಗೋಕರ್ಣದ ಸಂಪ್ರದಾಯಸ್ಥ ಕುಟುಂಬ ಒಂದರಲ್ಲಿ ಹುಟ್ಟಿದ ಹುಡುಗ, ಗೋಕರ್ಣ,ತೀರ್ಥಹಳ್ಳಿ,ಬೆಂಗಳೂರು ಇಲ್ಲೆಲ್ಲ ಆಧುನಿಕ ಶಿಕ್ಷಣ ಪಡೆದು ಮಾಧ್ಯಮಿಕ ಶಾಲಾ ಶಿಕ್ಷಕರಾಗಿ, ಮುಖ್ಯಾಧ್ಯಾಪಕರಾಗಿ, ಜೀವನವನ್ನು ಅಖಂಡವಾಗಿ ಪ್ರೀತಿಸಿದ ರಸಿಕನಾಗಿ, ಬಾಳನ್ನು ಕಲೆಯಾಗಿಸಿಕೊಂಡ ಅಪ್ಪಟ ಕಲಾವಿದನಾಗಿ ಬೆಳೆದ, ಮಾಗಿದ ಚಿತ್ರ ಅದು. ಅವರ ಬರವಣಿಗೆ ನೆನಪಿನ ಅಲೆಗಳ ಮಾದರಿಯನ್ನೇ ಅನುಸರಿಸಿದೆ.ಯಾವುದೋ ವಿಷಯ ಎಷ್ಟೋ ಹೇಳಿ, ಇನ್ನಾವುದೋ ವಿಷಯಕ್ಕೆ ಸಾರಿ, ಮತ್ತೆ ಮೂಲಸಂಗತಿಗೆ ವಾಪಸಾಗುವ ಪಲ್ಲಟಗಳ ಮಾದರಿಯನ್ನು ಹಾಗೇ ಉಳಿಸಿಕೊಂಡಿದ್ದೇವೆ.

ಅವರು ಬರೆಯಬಹುದಾದ ಮತ್ತು ಬರೆಯಬೇಕಾದ ಸಂಗತಿಗಳು ಇನ್ನೂ ಹಲವು ಇದ್ದವು. ಮುಖ್ಯವಾಗಿ ಹೇಳಬೇಕೆಂದರೆ ಕಳೆದ ಇಪ್ಪತ್ತು ವರ್ಷಗಳಿಂದ ಅವರು ವಾಸಿಸಿದ ಅಘನಾಶಿನಿಯ ಕುರಿತೇ ಹೆಚ್ಚೇನೂ ಬರೆದಿಲ್ಲ! ಅವರ ಇಳಿವಯಸಿನಲ್ಲಿ ಹಿರಿಯ ಮಗನಂತೆ ಅವರನ್ನು ನೋಡಿಕೊಂಡ ನಾಣುಮಾವ(ಎನ್.ವಿ.ಸಭಾಹಿತ), ಅವರ ಪ್ರೀತಿಯ ಹಿತ್ತಿಲು, ಬಾವಿ-ಕೆರೆ, ವಾಕಿಂಗ್, ದೇವಸ್ಥಾನ,ಗಪ್ಪತಿಮಾವ,ಎಲ್ಲ ಬಂಧು-ಬಾಂಧವರು,ಸ್ನೇಹಿತರು…. ಇವರನ್ನೆಲ್ಲ,ಇವನ್ನೆಲ್ಲ ಅವರು ನೆನೆಯದ ದಿನವಿರಲಿಲ್ಲ.ಅಘನಾಶಿನಿಯಿಂದ ಒಂದು ದೂರವಾಣಿ ಕರೆ ಬಂದರೂ ಸಾಕು, ಅತ್ತುಬಿಡುತ್ತಿದ್ದರು.ಹಿರೇಗುತ್ತಿಯಲ್ಲಿ ಸಹೋದ್ಯೋಗಿಗಳ ಕುರಿತು ಬರೆಯುವಾಗಲೂ ಅವರಿಗೆ ಎಲ್ಲರ ಕುರಿತು ಬರೆಯಲು ಸಾಧ್ಯವಾಗಲಿಲ್ಲ. ಆದರೆ ಈ ಕೃತಿಯಲ್ಲಿ ಅವರಿಗೆ ಬೇಕಾದವರೆಲ್ಲರೂ ಯಾವುದೋ ರೂಪದಲ್ಲಿ ಇದ್ದೇ ಇದ್ದಾರೆ-ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ! ಹಾಗೂ ಅವರಿಗೆ ಬೇಡವಾದವರು ಯಾರೂ ಇರಲಿಲ್ಲ! ಅವರ ಬಾಳಲ್ಲಿ ಬೆಳಕು ತುಂಬಿದ ಹಾಗೂ ಅವರಿಂದ ಬಾಳಲ್ಲಿ ಬೆಳಕನ್ನು ಕಂಡ ಎಲ್ಲ ಮಹನೀಯರಿಗೂ ಎರಡೂ ಕೈ ಜೋಡಿಸಿ ವಂದನೆ ಸಲ್ಲಿಸುತ್ತೇವೆ.

ಈ ಜೀವನಚಿತ್ರ ಅಪೂರ್ಣ ಎಂದೆನೆ?ಹಾಗೆ ಹೇಳಲಾಗದು ಎಂದು ಈಗ ತೋರುತ್ತಿದೆ. ಒಂದು ಜೀವದ ಚಿತ್ರ, ಬಾಳಿನ ಚಿತ್ರ ಅದರೊಡನೆ ಬದುಕಿದವರ ಮಾತು, ನೆನಹುಗಳಲ್ಲಿ ಮುಂದುವರಿಯುತ್ತಲೇ ಇರುತ್ತದೆ. ಸಾರ್ಥಕವಾದ ಒಂದೊಂದು ಜೀವಿತವೂ ಭೂಮಿಯಲ್ಲಿ ತನ್ನ ಪರಿಮಳ ಉಳಿಸಿಹೋಗಿರುತ್ತದೆ. ಅದಕ್ಕೆ ಸಾಕ್ಷಿ ಎಂಬಂತೆ ಅವರೊಡನೆ ಬಾಳಿದ ಅನೇಕರು ತಮ್ಮ ನೆನಪುಗಳನ್ನು ಹಂಚಿಕೊಂಡು ಈ ಜೀವನ ಚಿತ್ರಕ್ಕೊಂದು ವಿಶಿಷ್ಟ ಆಯಾಮ ಒದಗಿಸಿದ್ದಾರೆ.ಬರೆದವರು ಕೆಲವರು.ಬರೆಯಬೇಕಾಗಿದ್ದ ಇನ್ನೂ ಅನೇಕರು ಅನಿವಾರ್ಯ ಕಾರಣಗಳಿಂದ ಕ್ಷಿಪ್ರವಾಗಿ ಪ್ರತಿಕ್ರಿಯಿಸಲು ಆಗಲಿಲ್ಲ. ಮುಂದೆ ಬರೆಯಬಹುದು.

ಗಣಿತ ಶಿಕ್ಷಕರಾಗಿದ್ದ ತಂದೆಯವರು ’ಅನಂತ’ತತ್ತ್ವದ ಕುರಿತು (ಇನ್‌ಫ಼ಿನಿಟಿ) ಚೆನ್ನಾಗಿ ತಿಳಿದಿದ್ದರು.ಅವರು ತರಗತಿಯಲ್ಲಿ ಅನಂತದ ಪರಿಕಲ್ಪನೆ ಮೂಡಿಸುತ್ತಿದ್ದ ಪರಿ ಅನನ್ಯ. ಛೇದ ಚಿಕ್ಕದಾದಂತೆ (೧/೧=೧, ೧/೦.೧=೧೦, ೧/.೦೦೧=೧೦೦……..೧/೦= ಅನಂತ) ಭಾಗಲಬ್ಧ ಅನಂತದತ್ತ ಸಾಗುವುದನ್ನು ಅವರು ಚೆನ್ನಾಗಿ ಮನಗಾಣಿಸಿ ಕೊಡುತ್ತಿದ್ದರು.ಹಾಗೆಯೇ ಅವರ ತಂದೆಯವರ ಹೆಸರೂ ’ಅನಂತ’. ಅಘನಾಶಿನಿಯಲ್ಲಿ ಕಟ್ಟಿದ ಮನೆಯ ಹೆಸರೂ ’ಅನಂತ’. ಬ್ರಹ್ಮವೂ ಅನಾದಿ,’ಅನಂತ’.ತನ್ನ ಜೀವನಚಿತ್ರವನ್ನೂ ಅವರು ಅಂತ್ಯಗೊಳಿಸದೆ ಅನಂತದೊಳಗೆ ಸೇರಿಸಿಬಿಟ್ಟಿದ್ದಾರೆ!

ದೀಪದ ಕಂಬವು ಬರುವ ನಾಳೆಗಳಿಗೂ ಬೆಳಕಿನ ಹಾದಿಯನ್ನು ತೋರುತ್ತ ತಣ್ಣಗೆ ನಿಲ್ಲುವುದು…..

(ಚಿಂತಾಮಣಿ-ಕುಟುಂಬದ ಎಲ್ಲರ ಪರವಾಗಿ)

(ಮುಕ್ತಾಯ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶ್ರೀ ದೇವಿ ದಂಡಕ
Next post ಶ್ರೀಕೃಷ್ಣ ದಂಡಕ

ಸಣ್ಣ ಕತೆ

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

cheap jordans|wholesale air max|wholesale jordans|wholesale jewelry|wholesale jerseys