ಕಾಡುತಾವ ನೆನಪುಗಳು – ೫

ಕಾಡುತಾವ ನೆನಪುಗಳು – ೫

ಚಿನ್ನೂ,

ಆ ಬೇರೆ ಊರಿಗೆ ಬಂದಿದ್ದಾಯಿತು. ನಾನು, ನನ್ನ ತಂಗಿ ಮತ್ತು ಅವ್ವಾ, ನಾವೂ ಮೂವರೇ ಆಸ್ಪತ್ರೆಯ ಕಾಂಪೌಂಡಿನಲ್ಲಿ ಅವ್ವನಿಗಾಗಿ ನೀಡಿದ ವಸತಿ ಗೃಹದಲ್ಲಿದ್ದೆವು. ಅಕ್ಕಪಕ್ಕಗಳಲ್ಲಿ ಆಸ್ಪತ್ರೆಯ ಸಿಬ್ಬಂದಿಯವರೂ ಇದ್ದರು. ಆ ಊರಿನಲ್ಲಿ ಹೈಸ್ಕೂಲಿನಲ್ಲಿ ಇಂಗ್ಲಿಷ್ ಮಾಧ್ಯಮ ಬೇಕಾಗಿದ್ದರೆ, ಹುಡುಗರಿರುವ ಶಾಲೆಗೆ ಸೇರಬೇಕಾಗಿತ್ತು. ಅಂದರೆ ಅದು Co-Education ಆಗಿತ್ತು. ಹುಡುಗಿಯರಿಗೆಂದೇ ಬೇರೆ ಶಾಲೆಯಿದ್ದರೂ ಅವ್ವ ನನ್ನನ್ನು ಹುಡುಗರಿದ್ದ ಶಾಲೆಗೆ ಇಂಗ್ಲೀಷ್ ಮಾಧ್ಯಮ ಬೇಕೆಂದು ಸೇರಿಸಿದ್ದಳು. ನಾವು ಅಂದರೆ ಹುಡುಗಿಯರು ಎಂಟು ಜನ ಮಾತ್ರವಿದ್ದೆವು. ಆಗಲೇ ಅವ್ವ ನನಗೆ ವೈದ್ಯೆಯಾಗಬೇಕೆಂಬ ತನ್ನಾಸೆಯ ಬೀಜವನ್ನು ನನ್ನಲ್ಲಿ ಬಿತ್ತಿದ್ದಳು.

ನಾನೇ ಆ ಶಾಲೆಯಲ್ಲೂ ಚೂಟಿಯಾಗಿದ್ದೆ. ಚೆನ್ನಾಗಿ ಓದುತ್ತಿದ್ದೆ ಮಧುರವಾಗಿ ಹಾಡುತ್ತಿದ್ದೆ. ಎಲ್ಲಾ ಆಟಗಳಲ್ಲೂ ಭಾಗವಹಿಸುತ್ತಿದ್ದೆ. ಎಲ್ಲದರಲ್ಲೂ ನನಗೇ ಮೊದಲ ಬಹುಮಾನ ಕೂಡಾ ಸಿಗುತ್ತಿತ್ತು. ಆದರೆ ಅಲ್ಲಿನ ಹುಡುಗರು ನಾನು ಚಿನ್ನಿ ದಾಂಡು, ಮರಕೋತಿ ಆಡುತ್ತಿದ್ದ ನನ್ನ ಬಾಲ್ಯ ಗೆಳೆಯರಂತಿರಲಿಲ್ಲ ಕಣೆ. ನಿಧಾನವಾಗಿ ಅದು ತಿಳಿಯುವಷ್ಟರಲ್ಲಿ ನನಗೆ ‘ಚೆಲ್ಲು ಹುಡುಗಿ’ ಎಂದು ಅವರೆಲ್ಲಾ ಅಂದುಕೊಂಡಿದ್ದರು.

“ಅವರ ಜೊತೆ ಜಾಸ್ತಿ ಮಾತನಾಡೇಡ. ಹೊಂ ವರ್ಕ್ಸ್ ಅವರ ಹತ್ರ ತಗೋ ಬೇಡಾ, ನಿನ್ನ ಹೋಂ ವರ್ಕ್ಸ್ ನೋಟ್ಸ್ ಕೊಡಲೂ ಬೇಡಾ”-ನನ್ನ ಗೆಳತಿ ನನಗೆ ಯಾವಾಗಲೂ ಎಚ್ಚರಿಸುತ್ತಿದ್ದಳು. ಆದರೆ ಅದೆಲ್ಲಾ ನನಗೆ ಅರ್ಥವಾಗೋವಷ್ಟರಲ್ಲಿ ನನಗೆ “ಚೆಲ್ಲು ಹುಡುಗಿ” ಬಿರುದು ಸಿಕ್ಕಿತ್ತು.

“ಅವರಿಗೆಲ್ಲಾ ಹೊಟ್ಟೆ ಕಿಚ್ಚು ಬಿಡೇ…”-ಎಂದು ತಾತ್ಸಾರ ತಳೆದಿದ್ದೆ.

ಶಾಲೆಯ ವಾರ್ಷಿಕೋತ್ಸವ ಸಂಪುಟದ ಸಂಚಿಕೆ ಮಾಡುವಾಗ ನಾನೇ ಬರೆದುಕೊಟ್ಟಿದ್ದ ಪುಟಗಳಿದ್ದವು. ಅಕ್ಷರಗಳು ದುಂಡಾಗಿ ಎಲ್ಲೂ ಚಿತ್ತು ಹೊಡೆಯದಂತೆ ಬರೆಯುತ್ತಿದ್ದೆ. ಹೀಗಾಗಿ ನನ್ನನ್ನು ಆಯ್ಕೆ ಮಾಡಿಕೊಂಡಿದ್ದರು. ಅಂದು ವಾರ್ಷಿಕೋತ್ಸವಕ್ಕೆ ಅತಿಥಿಯಾಗಿ ಬಂದಿದ್ದ ಶ್ರೀಮತಿ ಯಶೋಧರಾ ದಾಸಪ್ಪನವರು, ಬಹುಮಾನಗಳನ್ನು ನೀಡುವಾಗ ಆಶ್ಚರ್ಯ ವ್ಯಕ್ತಪಡಿಸಿ, ನನ್ನನ್ನು ಪ್ರೀತಿಯಿಂದ ತಬ್ಬಿಕೊಂಡಿದ್ದರು.

“ಕೋತಿ ಕಾಲುಗಳಿರೋ ಈ ಚೋಟು ಹುಡುಗಿ ಎಲ್ಲಾ ಪ್ರಥಮ ಬಹುಮಾನಗಳನ್ನು ಪಡೆದಿರುವುದು ಆಶ್ಚರ್ಯ ಹಾಗೂ ಆನಂದದ ಸಂಗತಿ” ಎಂದು ಹೇಳಿದ್ದರು.

ಒಂದು ದಿನ ನಾನು ತರಗತಿಯಲ್ಲಿರುವಾಗಲೇ ನಮ್ಮ ಹೆಡ್ ಮಾಸ್ಟರ್ ಅವರಿಂದ ಕರೆ ಬಂದಿತು. ನಾನು ಅಲ್ಲಿಗೆ ಹೋದಾಗ ನಾನು ಪೆಚ್ಚಾಗಿ ಹೋದೆ. ಅವ್ವ ಹೆಡ್ ಮಾಸ್ಟರ್ ಮುಂದೆ ಕಾಗದಗಳನ್ನು ಹರಿದು ಹಾಕಿ.

“ನೋಡಿ ತೋರಿಸಿದ ಈ ಪ್ರೇಮ ಪತ್ರಗಳು ಹುಡುಗರು ಅವಳಿಗೆ ಬರೆದಿದ್ದಾಗಿದೆ. ನನ್ನ ಮಗಳು ಯಾರಿಗಾದರೂ ಬರೆದಿದ್ದರೆ ತೋರಿಸಿ. ಆಗ ನಾನು ನನ್ನ ಮಗಳು ತಪ್ಪಿತಸ್ಥಳೆಂದು ಒಪ್ಪಿಕೊಳ್ಳುತ್ತೇನೆ…” ಎಂದು ಖಾರವಾಗಿ ಕೇಳಿದ್ದಳು. ಹೆಡ್ ಮಾಸ್ಟರ್ ಅವರಿಗೆ ತಮ್ಮ ತಪ್ಪಿನ ಅರಿವಾಗಿತ್ತು. ಆದರೂ ಅವರು ಬುದ್ದಿಮಾತುಗಳೆಂಬಂತೆ,

“ಇದು ಬಹಳ ಹುಡುಗರಿರುವ ಶಾಲೆ… ಅತ್ಯಂತ ಚುರುಕಾಗಿದ್ದರೂ ಕಷ್ಟವೇ ಏನಂತೀರಾ?” ಎಂದು ಕೇಳಿದ್ದರು.

“ಇದೇ ನನ್ನ ಉತ್ತರ…” ಎಂಬಂತೆ ಅವ್ವ ಹರಿದ ಕಾಗದಗಳನ್ನು ತೋರಿಸಿ, ಹೊರಟು ಹೋಗಿದ್ದಳು. ತರಗತಿಗೆ ಬಂದು ಕುಳಿತರೂ ನನಗೆ ಕಾಡಿದ್ದು, ‘ನನಗೂ ಪ್ರೇಮ ಪತ್ರ’ಗಳನ್ನು ಬರೆಯುವವರಿದ್ದಾರೆಯೇ? ಒಮ್ಮೆ ನಾನು ಓದಬೇಕಿತ್ತು ಹೇಗಿರುತ್ತದೇಂತ. ಮನೆಗೆ ಹೋದಾಗ ಇನ್ನೇನು ಕಾದಿದೆಯೋ ಎಂದು ಹೆದರಿಕೊಂಡು ಬಂದ ನನಗೆ ಅವ್ವ ಏನೂ ಹೇಳಿರಲಿಲ್ಲ.

“ಹೆಣ್ಣು ಮಕ್ಕಳ ಧೈರ್ಯ, ಜಾಣತನಕ್ಕೇ ಇಂತಹ ಪ್ರಶಸ್ತಿಗಳೇ ಸಿಗುವುದು. ನೀನು ಎಲ್ಲಾ ಆಟಗಳನ್ನು ಬಿಟ್ಟು ಬರೀ ಪಾಠ ಓದ್ಕೋ. ಬೇಜಾರಾದ್ರೆ ಕಾದಂಬರಿ, ಕತೆಗಳನ್ನು ಓದು ಅಷ್ಟೇ…” ಎಂದಿದ್ದಳು. ಆಗೆಲ್ಲಾ ತಲೆಯಾಡಿಸಿದ್ದೆ. ಆದರೂ ಒಮ್ಮೆಯಾದರೂ ನಾನೂ ಆ ಪ್ರೇಮ ಪತ್ರಗಳನ್ನು ಓದಬೇಕಿತ್ತು ಎಂದುಕೊಂಡಿದ್ದೆ.

ಆರನೆಯ ತರಗತಿಯಲ್ಲಿದ್ದಾಗಲೇ ಕತೆ, ಕಾದಂಬರಿಗಳನ್ನು ಓದುತ್ತಿದ್ದೆ. ಅವ್ವ ತುಂಬಾ ಪುಸ್ತಕಗಳನ್ನು ಓದುತ್ತಿದ್ದಳು. ಪೆಟ್ಟಿಗೆಯಲ್ಲಿ ಸಂಗ್ರಹಿಸಿದ್ದಳು. ಕೊಳ್ಳಲಾಗದಿದ್ದಲ್ಲಿ ಲೈಬ್ರರಿಯಿಂದ ತಂದು ಓದುತ್ತಿದ್ದಳು. ಅಂದಿನ ಎಲ್ಲಾ ಲೇಖಕ, ಲೇಖಕಿಯರ ಪುಸ್ತಕಗಳು ಅವಳ ಪೆಟ್ಟಿಗೆಯಲ್ಲಿದ್ದವು. ಆಗೆಲ್ಲಾ ಕದ್ದು ಓದುತ್ತಿದ್ದೆ. ಈಗ ಅನುಮತಿ ಸಿಕ್ಕಿತ್ತು.

ಕೃಷ್ಣಮೂರ್ತಿ ಪುರಾಣಿಕ, ನರೇಂದ್ರಬಾಬು, ನಾಡಿಗೇರ ಕೃಷ್ಣರಾಯ, ಅನಕೃ, ತ.ರಾ.ಸು., ಎನ್. ನರಸಿಂಹಯ್ಯ, ಎಂ.ಕೆ. ಬೀಚಿ, ಜಯಲಕ್ಷ್ಮಿ, ತ್ರಿವೇಣಿ, ವಾಣಿ ಯಂತಹವರ ಕಾದಂಬರಿಗಳಿದ್ದವು. ನನ್ನನ್ನು ಹೆಚ್ಚು ಓದುವಂತೆ, ಕುತೂಹಲ, ಆಸಕ್ತಿ ಮೂಡಿಸಿದ್ದು, ಎನ್ ನರಸಿಂಹಯ್ಯನವರ ಪತ್ತೇದಾರಿ ಕಾದಂಬರಿಗಳು. ಕೃಷ್ಣ ಪುರಾಣಿಕರ ಭಾಗೀರಥ ಓದಿ ರಾತ್ರಿಯಿಡೀ ಅತ್ತಿದ್ದೆ. ಈಗಲೂ ನರೇಂದ್ರ ಬಾಬು ಅವರ ‘ನಾಲ್ಕನೆಯ ಮನೆ’ ನಾಗು ನನಗೆ ಕಾಡುತ್ತಿರುತ್ತಾಳೆ. ಮಾ.ಭಿ. ಶೇಷಗಿರಿಯವರ ಪತ್ತೇದಾರಿ ಪುಸ್ತಕಗಳೂ ಇದ್ದವು. ಜೊತೆ ಜೊತೆಯಾಗಿ ರಾಮಾಯಣ, ಮಹಾಭಾರತ, ಬುದ್ಧನ ಕತೆಗಳು, ಹಾತೀಂಕಾಯ್, ಅರೇಬಿಯನ್ ನೈಟ್ಸ್ ಕತೆಗಳೆಲ್ಲಾ ನೆನಪಿನಲ್ಲಿವೆ. ನನ್ನ ಮೆಚ್ಚಿನ ಪುಸ್ತಕ ಸಾನೆ ಗುರೂಜಿ ಅವರ ‘ಶ್ಯಾಮನ ತಾಯಿ’.

ಚಿನ್ನೂ ಈ ಸಾಹಿತ್ಯದ ಓದು ನನ್ನಲ್ಲಿ ತುಂಬಾ ಬದಲಾವಣೆ ತಂದಿತ್ತು. ಮೊದಲಿನಂತೆ ಹುಡುಗರೊಂದಿಗಾಗಲೀ ಹುಡುಗಿಯರ ಜೊತೆಯಾಗಲೀ ಆಟವಾಡಲು ಹೋಗುವುದನ್ನು ಬಿಟ್ಟಿದ್ದೆ. ಮಾತೂ ಕಡಿಮೆ ಮಾಡಿದ್ದೆ. ಪುಸ್ತಕದ ಹುಳುವಾಗಿಬಿಟ್ಟಿದ್ದೆ.

ಹೀಗಿರುವಾಗ ನನ್ನ ಎಸ್.ಎಸ್.ಎಲ್.ಸಿ.ಯ ಪರೀಕ್ಷೆ ಬಂದೇ ಬಿಟ್ಟಿತ್ತು. ಎಲ್ಲರೂ ಭಯ ಹಾಗೂ ಗಂಭೀರವಾಗಿ ಅಂದು ಪರಿಗಣಿಸುತ್ತಿದ್ದರು. ಪರೀಕ್ಷೆಯ ತಯಾರಿ, ಪಾಸಾಗುವ ಆತಂಕ ನನ್ನನ್ನು ಪಠ್ಯ-ಪುಸ್ತಕಗಳತ್ತ ಸೆಳೆದಿತ್ತು. ಅವ್ವಾ ಕೂಡಾ ತುಂಬಾ ಪ್ರೋತ್ಸಾಹ ನೀಡುತ್ತಿದ್ದಳು… ಇಷ್ಟವಾದದ್ದನ್ನೆಲ್ಲಾ ಮಾಡಿಸಿ ಉಣ್ಣಿಸುತ್ತಿದ್ದಳು.

ಹೀಗಿರುವಾಗ ನನ್ನ ಋತುಚಕ್ರದ ಮೊದಲ ದಿನ ಕಾಣಿಸಿಕೊಂಡಿತ್ತು. ನಾನು ದೊಡ್ಡವಳಾಗಿದ್ದೆ. ಋತುಮತಿಯಾಗಿದ್ದೆ. ಇದುವರೆಗೂ ಲಂಗ-ಜಾಕೀಟಿನಲ್ಲಿ ಓಡಾಡುತ್ತಿದ್ದ ನನಗೆ ದಾವಣಿಯನ್ನು ಉಡುವಂತೆ ಮಾಡಿತ್ತು. ಇನ್ನೂ ಸ್ತನಗಳೇ ಮೂಡದಿದ್ದ ಎದೆಯ ಮೇಲೆ ದಾವಣಿಯ ಸೆರಗು ಹಾಕಿಕೊಳ್ಳುವಂತಾಗಿತ್ತು!

ಹೈಸ್ಕೂಲ್ ನಂತರದಲ್ಲಿ ಆ ಊರಿನಲ್ಲಿ ಮುಂದೆ ಓದುವ, ಕಾಲೇಜುಗಳಿರಲಿಲ್ಲ. ಹೀಗಾಗಿ ಅವ್ವನ ಕೋರಿಕೆಯ ಮೇರೆಗೆ ಪುನಃ ದಾವಣಗೆರೆ ವರ್ಗಾವಣೆಯಾಗಿತ್ತು. ನಾನು ಎಸ್.ಎಸ್.ಎಲ್.ಸಿ.ಯನ್ನು ಪ್ರಥಮ ಶ್ರೇಣಿಯಲ್ಲಿಯೇ ಪಾಸಾಗಿದ್ದು, ಅವ್ವನ ಕನಸಿಗೆ ರೆಕ್ಕೆಗಳು ಮೂಡಿದ್ದವು.

ಮತ್ತೆ ದಾವಣೆಗೆರೆಗೆ ನಮ್ಮ ಪ್ರಯಾಣ ಸಾಗಿತು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗರುಡಪಕ್ಷಿ
Next post ಗೋಪುರ ಗೃಹ

ಸಣ್ಣ ಕತೆ

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…