ನನಗೂ ವಯಸ್ಸಾಯ್ತಲ್ಲ ಚಿನ್ನು… ಜೊತೆಗೆ ಈ ಮಾನಸಿಕ ‘ಖಿನ್ನತೆ’ ಬೇರೆ… ಹೀಗಾಗಿ ನಾನೆಲ್ಲೂ ಹೋಗುವುದೇ ಇಲ್ಲ. ಹೊರಗೊಂದು ಪ್ರಪಂಚವೊಂದಿದೆ ಎಂಬುದನ್ನು ಮರೆಯಲು ಯತ್ನಿಸುತ್ತಿದ್ದೇನೆ… ಯಾರಾದರೂ ನೋಡಲು ಮಾತನಾಡಲು ಬರುತ್ತಾರೆಂದರೆ, ನಾನು ಮುಖ ತಪ್ಪಿಸಿಕೊಳ್ಳುತ್ತೇನೆ. ಈಗ ನನಗೆ ಒಂಟಿತನದ ಭೂತದ ಭಯವಿಲ್ಲ… ನಾನೇ ಅದರೊಳಗೆ ಸೇರಿಕೊಂಡುಬಿಟ್ಟಿದ್ದೇನೆ. ಕೆಳಗಿನ ದೊಡ್ಡಮನೆ ಅವ್ವನ ನೆನಪುಗಳಿಂದ ತುಂಬಿರುವುದರಿಂದ, ತಾರಸಿಯ ಮೇಲೊಂದು ರೂಮು ಕಟ್ಟಿಸಿಕೊಂಡು, ನನ್ನ ಲೈಬ್ರರಿ, ಅವಶ್ಯಕತೆಗಳಿರುವ ಪಾತ್ರೆಗಳೊಂದಿಗೆ Shift ಆಗಿದ್ದೇನೆ. ನನಗೀಗ ಅರಮನೆಯೂ ಈ ಪುಟ್ಟ ಗೂಡು ಒಂದೇ ಆಗಿದೆ. ಆಮೆ ಚಿಪ್ಪಿನೊಳಗೆ ಅಡಗಿಕೊಳ್ಳುವಂತೆ ನನ್ನ ‘ಖಿನ್ನತೆ’ಯ ಚಿಪ್ಪಿನೊಳಗೆ ಅಡಗಿಕೊಂಡಿದ್ದೇನೆ.
ಇನ್ನೇನು ನಿನ್ನ ಮೆಡಿಕಲ್ ಕೋರ್ಸ್ ಮುಗಿಯುತ್ತಾ ಬಂದಿತಲ್ವಾ? ಡಾಕ್ಟರಾಗುವ ನಿನ್ನ ತಾಯಿ-ತಂದೆಯ ನಿನ್ನ ಕನಸು ನನಸಾಗಿದ್ದು, ನನಗೆ ನೆಮ್ಮದಿ, ಸಂತೋಷ ತಂದಿತೆ ಇಷ್ಟೆಲ್ಲಾ ಬರೆದು ತಲೆಕೆಡಿಸಿದೇಂತ ಭಾವಿಸಬೇಡಾ. ನೀನು ಪ್ರಬುದ್ಧ ಹುಡುಗಿ, ತರ್ಕಬದ್ಧವಾಗಿ ಯೋಚಿಸುತ್ತೀಯಾ… ಜಾಣೆ ಕೂಡಾ. ಸಾವು-ಹುಟ್ಟು ನಮ್ಮ ಕೈಲಿಲ್ಲ. ಆದರೆ ಬದುಕು ನಮ್ಮದು… ನಾವೇ ಕಟ್ಟಿಕೊಳ್ಳಬೇಕೆಂದು ಎಲ್ಲರೂ ಬುದ್ದಿ ಹೇಳುತ್ತಾರೆ. ಆದರದು ತುಂಬಾ ಕಷ್ಟ, ಕಠಿಣ ಕಣೆ…! ಬೇವಿನ ಮರದ ಬುಡಕ್ಕೆ ನೀನೂ ದಿನವೂ ಬೆಲ್ಲದ ನೀರು ಸುರಿದು ಬೆಳೆಸಿದರೂ, ದೊಡ್ಡದಾದ ಮೇಲೆ ಅದು ಕೊಡುವುದು, ಬೇವಿನ ಹಣ್ಣನ್ನೇ ಮಾವಿನ ಹಣ್ಣನಲ್ಲ. ನನ್ನನ್ನು ಕಾಡಿದ್ದು ನನ್ನ ವ್ಯಕ್ತಿತ್ವ, ಇದರಲ್ಲಿ ಆನುವಂಶೀಯತೆಯೂ ಕಾರಣವಾಗಿರುತ್ತದೆ. ಆದರೆ ನಾವುಗಳು ಶಿಲೆಯನ್ನು ಉಳಿಯಿಂದ ಕೆತ್ತಿ-ಕೆತ್ತಿ ಸುಂದರ ಮೂರ್ತಿಯನ್ನಾಗಿ ಮಾಡಿಕೊಳ್ಳಬೇಕಾಗುತ್ತದೆ. ಅದೇ ಬದುಕು ಕಟ್ಟಿಕೊಳ್ಳುವ ರೀತಿ ಮಗಳೇ. ಕೆಟ್ಟವುಗಳನ್ನೆಲ್ಲಾ ವರ್ಜಿಸಿ, ಅಧ್ಯಯನ, ಒಳ್ಳೆಯ ಗೆಳತಿಯರು, ಸಜ್ಜನರ ಸಂಗದಿಂದ ನಮ್ಮ ವ್ಯಕ್ತಿತ್ವವನ್ನು ತಿದ್ದಿಕೊಳ್ಳಬಹುದು. ಆದರೆ ನಾನು ಹಾಗೆ ಮಾಡಲಿಲ್ಲ. ಆನೇ ನಡೆದಿದ್ದೇ ದಾರಿಯೆಂಬಂತೆ ನಡೆದಿದ್ದೇನೋ… ಏನೋ… ನಂಗೆ ಗೊತ್ತಿಲ್ಲ…!
ಒಳ್ಳೆಯ ಬದುಕು ಕಟ್ಟಿಕೊಳ್ಳಲು ‘ಡಿಗ್ರಿ’ಗಳು ಬೇಕಾಗಿಲ್ಲ ಚಿನ್ನು. ಜಾಣತನ, ಸಮಯಸ್ಫೂರ್ತಿ, ಸಂಯಮ, ಸಮತೋಲನ, ದೂರದೃಷ್ಟಿ ಮುಖ್ಯವಾಗುತ್ತದೆ. ಅರೇ ನನಗಿರಲಿಲ್ಲಾಂತ ಅನ್ನಿಸುತ್ತದೆ. ಭಾವನೆಗಳೊಂದಿಗೇ ಬದುಕಲು ಆಗದು ಎಂಬುದಕ್ಕೆ ನಾನೇ ಉದಾಹರಣೆ. ತಿರಸ್ಕೃತಳಾಗಿ, ಶಾಪಗ್ರಸ್ತಳಂತೆ, ಬದುಕಿದ ನನ್ನ ಬದುಕೂ ಒಂದು ಬದುಕೇ?
ಏನೂ ಬೇಕೆನ್ನಿಸುವುದಿಲ್ಲ. ಕಾಲನೇಮಿಯ ಕರೆಗಾಗಿ ಕಾಯುತ್ತಾ ಇದ್ದೇನೆ. ಹೋಗಲಿ ಬಿಡು… ನನ್ನ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ. ನಾನು ನನ್ನಂತೆಯೇ ಆರಾಮವಾಗಿದ್ದೇನೆ. ನಿರ್ಭಾವುಕೆ, ನಿರ್ಲಿಪ್ತತೆಯ ಹೊದಿಕೆಯನ್ನು ಹೊದ್ದು ಬದುಕಿದ್ದೇನೆ. ಕಳೆದುಕೊಳ್ಳಲೂ ಏನೂ ಇಲ್ಲ. ಪಡೆದುಕೊಳ್ಳುವಂತಹುದೂ ಯಾವುದೂ ಇಲ್ಲ. ಅಂತಹ ನಿರೀಕ್ಷೆಗಳೂ ಉಳಿದಿಲ್ಲ ಮಗಳೇ.
ಇನ್ನು… ಸಾಕು… ನಿಲ್ಲಿಸುತ್ತೇನೆ. ಬದುಕಿನಲ್ಲಿ ಹೆಕ್ಕಿ ತೆಗೆದ ಕಾಡುತ್ತಿರುವ ನೆನಪುಗಳು. ಅವುಗಳು ನನ್ನವು… ನಿನ್ನವಾಗಬಾರದೆಂದು,
ಹಾರೈಸುವ…
ನಿನ್ನ ಅವ್ವಾ
ಮುಗಿಯಿತು
ಚಿತ್ರಗಳು