ಭ್ರೂಣ ಹೇಳಿದ ಕಥೆ

ಭ್ರೂಣ ಹೇಳಿದ ಕಥೆ

ಅಮ್ಮಾ ಅಮ್ಮಾ, ನಾನೂ ನಿನ್ನ ಹಾಗೇ ಹೆಣ್ಣೇ ಅಲ್ಲವೇನಮ್ಮಾ… ನಿನ್ನ ಮೈಯೊಳಗೆ ಹರಿವ ರಕ್ತವೇ ನನ್ನೊಳಗೂ ಹರಿಯುತ್ತಿರುವುದರಿಂದ, ನೀನು ಉಸಿರಾಡುವ ಗಾಳಿಯನ್ನೇ ನಾನೂ ಉಸಿರಾಡುತ್ತಿರುವುದರಿಂದ, ನೀನು ಉಣ್ಣುವ ಊಟವನ್ನೇ ನಾನೂ ಉಣ್ಣುತ್ತಿರುವುದರಿಂದ, ನಿನ್ನೊಳಗೇ ನೀನೇ ಆಗಿ ನಾನಿರುವುದರಿಂದ ನಿನ್ನ ಎಲ್ಲಾ ಭಾವನೆಗಳು ನನಗೆ ಅರ್ಥವಾಗುತ್ತವೆ.

ಅವತ್ತು ನೀನು ನಿಲ್ಲಬೇಕಾದ ದಿನಕ್ಕೆ ಮುಟ್ಟು ನಿಲ್ಲಲಿಲ್ಲವೆಂದು ಎಷ್ಟೊಂದು ಸಂಭ್ರಮಿಸಿದೆಯಲ್ಲಾ. ಆದರೂ ಗುಟ್ಟನ್ನು ರಟ್ಟು ಮಾಡದೇ ಒಂದು ವಾರ ಕಾದು ನೋಡೋಣ ಅಂತ ಕಾಯುತ್ತಿದ್ದೆಯಲ್ಲಾ. ಈ ಮಧ್ಯೆ ಅಪ್ಪನಿಗೆ ಹೇಳಬೇಕೆಂದು ನಾಲ್ಕೈದು ಸಲ ಬಾಯಿಗೆ ಬಂದದ್ದರೂ ಹೇಳದೇ ಹಾಗೆ ತಡೆದುಕೊಂಡೆಯಲ್ಲಾ. ಅಕಸ್ಮಾತ್ ಮುಟ್ಟು ಜಾರಿ ಬಿಟ್ಟರೆ ಅವಮಾನ ಎಂದು ಸುಮ್ಮನಿದ್ದೆಯಲ್ಲಾ. ವಾರದ ನಂತರ ಒಂದು ದಿನ ಬೆಳಗ್ಗೆ, ಅಪ್ಪ ಆಫೀಸಿಗೆ ಹೋಗುತ್ತಿದ್ದಂತೆಯೇ, ಯಾರಿಗೂ ಹೇಳದೇ ವಾಸವಿ ಲ್ಯಾಬ್‌ಗೆ ಹೋಗಿ ಮೂತ್ರ ಪರೀಕ್ಷೆಗೆ ದುಡ್ಡು ಕಟ್ಟಿ, ಸಣ್ಣ ಖಾಲಿ ಸೀಸೆಯನ್ನು ಹಿಡಿದು ಟಾಯ್ಲೆಟ್‌ಗೆ ಬಂದು ಬಾಗಿಲು ಹಾಕಿಕೊಂಡಾಗ ನಿನ್ನಲ್ಲಿ ಎಂಥ ದುಗುಡ ಇತ್ತು ಗೊತ್ತಾ… ಅಕಸ್ಮಾತ್ ನೆಗೆಟೀವ್ ಅಂತ ಬಂದುಬಿಟ್ಟರೆ ಏನು ಎಂಬ ಆತಂಕ ನಿನ್ನದಾಗಿತ್ತು. ಅಯ್ಯೋ ದೇವರೇ, ಹಾಗಾಗದಿರಲಿ ಅಂತ ಅಪ್ಪನನ್ನು ನೆನೆಸಿಕೊಂಡು, ಸೀರೆ ಕಟ್ಟಿನ ಕೆಳಗೆ ನೀನು ಹೊಟ್ಟೆಯನ್ನು ಸವರಿಕೊಂಡಾಗ ನನಗೆ ನನ್ನ ತಲೆಯನ್ನೇ ಸವರಿದಂತಾಗಿ ರೋಮಾಂಚನವಾಗಿತ್ತು.

`ಅರ್ಧ ಗಂಟೆ ಬಿಟ್ಟು ಬನ್ನಿ’ ಎಂದು ರಿಸೆಪ್ಷನಿಸ್ಟ್ ಹೇಳಿದರೂ, ನೀನು ಮನೆಗೆ ಹೋಗಿ ಮತ್ತೆ ಬರುವವರೆಗಿನ ಧಾವಂತವನ್ನು ತಡೆದುಕೊಳ್ಳಲಾರದೇ, `ಪರವಾಗಿಲ್ಲ. ನನಗೆ ಬೇರೆ ಏನೂ ಕೆಲಸ ಇಲ್ಲ. ಕಾಯ್ತಿರ್‍ತೀನಿ. ರಿಪೋರ್ಟ್ ರೆಡಿಯಾದ ಕೂಡಲೇ ಹೇಳ್ರೀ…’ ಅಂತ ಅಲ್ಲೇ ಕೂತಿದ್ದೆ ಅಲ್ವಾ. ಆಗ ನೆನೆಸಿಕೊಂಡ ದೇವರ ಹೆಸರುಗಳನ್ನೆಲ್ಲಾ ಹೇಳಲಾ ಬೇಕಾದರೆ?

ರಿಪೋರ್ಟ್ ಪಾಸಿಟೀವ್ ಅಂತ ಬಂದಾಗ ನಿನ್ನ ಹೆಸರನ್ನು ಕೂಗಿ ಕರೆದ ಆ ರಿಸೆಪ್ಷನಿಸ್ಟ್, ಅನುಮಾನದಿಂದ ನಿನ್ನ ಕೊರಳಲ್ಲಿ ತಾಳಿ ಇದೆಯಾ ಅಂತ ನೋಡಿದ್ಲು ಗೊತ್ತಾ? ನಿನ್ನ ಸೆರಗಿನೊಳಗಿಂದ ಅದು ಕಾಣದೇ ಇದ್ದಾಗ ರಿಪೋರ್ಟ್‌ನ್ನ ಕೆಳಗೆ ಬೀಳಿಸಿದಂತೆ ಮಾಡಿ ನಿನ್ನ ಕಾಲುಂಗರ ನೋಡಿ ಸುಮ್ಮನಾದಳು. ಒಂದು ಮಗು ಆಗಿ, ಎರಡನೆಯದಕ್ಕೆ ಕಾಲಿಡುತ್ತಿದ್ದರೂ, ನೀನು ಇನ್ನೂ ಕಾಲೇಜು ಹುಡುಗಿ ಥರಾ ಕಾಣುಸ್ತೀಯಾ ಗೊತ್ತಾ. ಬೈಕಲ್ಲಿ ಹೋಗೋ ಹುಡುಗರು ನಿನ್ನನ್ನ ಕಂಡು ಸಿಳ್ಳೆ ಹೊಡೀತಾ ಹೋಗುವಾಗ ನೀನು ಹುಸಿ ಮುನಿಸು ತೋರಿದರೂ ಒಳಗೊಳಗೇ ಖುಷಿ ಪಡ್ತೀಯಾ ಅಂತ ನನಗೆ ಗೊತ್ತು ಬಿಡು.

ಮಧ್ಯಾಹ್ನ ಅಪ್ಪ ಊಟಕ್ಕೇ ಅಂತ ಮನೆಗೆ ಬಂದಾಗ ನೀನು ಒಂಥರಾ ಸಸ್ಪೆನ್ಸ್ ಹೇಳುವವಳ ಹಾಗೆ ಸತಾಯಿಸಿದೆಯಲ್ಲಾ. ಅಕ್ಕನನ್ನ ಬೇಬಿ ಸಿಟ್ಟಿಂಗ್‌ನಿಂದ ಕರಕೊಂಡು ಬರಲು ಹೇಳುವ ನೆಪದಲ್ಲಿ ಇನ್ನು ಮುಂದೆ ಇಬ್ಬರನ್ನ ಕರ್‍ಕೊಂಡು ಬರ್‍ಬೇಕಾಗುತ್ತೆ ಅಂತ ಅಂದಿದ್ದೆ. ಅಪ್ಪ, `ನನ್ನ ಆಫೀಸ್ ಬಿಟ್ಟು ಅಕ್ಕಪಕ್ಕದ ಮನೆಯವರನ್ನೆಲ್ಲಾ ಕರ್‍ಕೊಂಬರಕ್ಕಾಗಲ್ಲ’ ಅಂತ ಸಿಡುಕಿದಾಗ, `ಬೇರೆಯವರ ಮಕ್ಕಳಲ್ಲರೀ, ನಿಮ್ಮ ಮಕ್ಕಳನ್ನೇ…’ ಅಂದಾಗ ಒಂದು ಥರಾ ಪೆದ್ದಾಗಿ ನಿನ್ನ ಮುಖ ನೋಡಿದ್ದರು. ನೀನು ವಾರೆಗಣ್ಣಲ್ಲಿ ಅಪ್ಪನ್ನ ನೋಡ್ತಾ ಸಿನೆಮಾದಲ್ಲಿ ಮಾಡೋ ಹಾಗೆ ಎತ್ತಿ ಸುತ್ತಾಡಿಸಿ ಮುದ್ದಾಡುತ್ತಾರೆ ಅಂತ ಬಯಸಿದ್ದೆ ಅಲ್ಲವಾ. ಆದರೆ ಅಪ್ಪ ಹಾಗೆ ಮಾಡಲಿಲ್ಲ. ಅವರು ತುಂಬಾ ಪ್ರಾಕ್ಟಿಕಲ್ ಮನುಷ್ಯ. `ಹೌದಾ. ನೋಡೋಣ ಬಾ ಹಾಗಾದರೆ’ ಅಂತ ಮಂಚದ ಮೇಲೆ ಬಲವಂತದಿಂದ ನಿನ್ನನ್ನ ಮಲಗಿಸಿ, ನಿನ್ನ ಹೊಟ್ಟೆ ಮೇಲೆ ಕಿವಿಯಿಟ್ಟು ನನ್ನ ಹೃದಯದ ಬಡಿತ ಕೇಳಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಜೋರಾಗಿದ್ದ ನಿನ್ನ ಎದೆಯ ಬಡಿತದ ಮುಂದೆ ನನ್ನ ಎದೆಯ ಬಡಿತ ಎಲ್ಲಿ ಕೇಳಬೇಕು? ಆದರೂ ಅಪ್ಪ ಎಷ್ಟೊಂದು ಒಳ್ಳೆಯವರಲ್ಲವಾ ಅಂತ ಕೇಳಬೇಕೆಂದುಕೊಂಡೆನಾದರೂ ಆಗ ನನಗಿನ್ನೂ ಬಾಯಿ ಬಂದಿರಲಿಲ್ಲ…

ಅಪ್ಪ ಮತ್ತೆ ಆಫೀಸಿಗೆ ಹೋಗುತ್ತಿದ್ದಂತೆಯೇ ಅಜ್ಜಿಗೆ ನೀನು ಫೋನ್ ಮಾಡಿ ಎಲ್ಲಾ ಹೇಳಲಾರಂಭಿಸಿದೆ. ಎಷ್ಟು ಹೊತ್ತು ನೀವಿಬ್ಬರೂ ಮಾತಾಡಿದಿರಿ ಗೊತ್ತಾ. ಅಬ್ಬಾ, ನನಗಂತೂ ಕೇಳಿದ್ದನ್ನೇ ಕೇಳೀ ಕೇಳೀ ನಿದ್ದೆ ಬಂದು ಬಿಡ್ತು. ನಿನ್ನ ಮೊಬೈಲಿನಿಂದ ಅಜ್ಜಿ ಫೋನಿಗೆ ನಿಮಿಷಕ್ಕೆ ಹತ್ತು ಪೈಸೆಯ ಕಾಲ್ ಹಾಕಿಕೊಟ್ಟಿದ್ದರಿಂದ ಅಪ್ಪ ಬಚಾವ್. ಇಲ್ಲಾ ಅಂದಿದ್ರೆ… ಆದರೂ ತಿಂಗಳ ಕೊನೆಗೆ ಎಷ್ಟೊಂದು ಬಿಲ್ಲು ಬಂದಿದೆಯಲ್ಲಾ ಅಂತ ಬೇಜಾರು ಮಾಡಿಕೊಂಡ್ರು ಗೊತ್ತಾ?

ಅಜ್ಜಿ ಹೇಳಿದ್ದರಲ್ಲಿ ಕೆಲವು ಮಾತುಗಳು ಇನ್ನೂ ನನಗೆ ನೆನಪಿನಲ್ಲಿವೆ. ಮದುವೆಯಾದ ತಿಂಗಳಲ್ಲೇ ಇದೇ ರೀತಿ ಗರ್ಭ ಧರಿಸಿದ್ದರೂ ನೀನು ಫ್ರೆಂಡ್ಸ್ ಅವರೂ ಇವರೂ ಅಂತ ಆಟೋದಲ್ಲೆಲ್ಲಾ ಓಡಾಡಿ, ಅದು ರಾಜನಹಳ್ಳಿ ಛತ್ರದ ಎದುರು ಒಂದು ಸಣ್ಣ ಗುಂಡಿಗೆ ದಡಕ್ಕಂತ ಬಿದ್ದು ಮುಂದೆ ಹೋಗಿದ್ದರೂ, ಆ ಕುಲುಕಿಗೇ ನಿನಗೆ ಹೊಟ್ಟೆ ನೋವು ಬಂದು, ಬ್ಲೀಡಿಂಗ್ ಆಗಿ, ಊರಿಂದ ಅಜ್ಜಿ ಬಂದು ಆಸ್ಪತ್ರೆಗೆ ಸೇರಿಸಿದಾಗಲೇ ಅಬಾರ್ಷನ್ ಆಗಿದೆ ಅಂತ ಗೊತ್ತಾಗಿದ್ದಂತೆ! ಅದಕ್ಕೇ ಅಕ್ಕ ಹುಟ್ಟುವಾಗ ಅಪ್ಪನ ಬೈಕಲ್ಲೂ ಕೂರಿಸದೇ ನಡೆಸಿಕೊಂಡೇ ಓಡಾಡಿಸಿದ್ದಂತೆ.

ಅಕ್ಕ ತುಂಬಾ ಲಕ್ಕಿ ಅಲ್ವಾ ಅಮ್ಮಾ… ಅವಳಿಗೆ ಎಷ್ಟೊಂದು ತರಹದ ಚಾಕೋಲೆಟ್‌ಗಳು, ಹಣ್ಣುಗಳು, ಎಷ್ಟೊಂದು ರೀತಿಯ ಆಟದ ಸಾಮಾನುಗಳು, ಎಷ್ಟೊಂದು ಬಟ್ಟೆಗಳು… ಅದರಲ್ಲಿ ಎಷ್ಟೋ ಬಟ್ಟೆಗಳನ್ನು ಅವಳು ಒಂದು ದಿನಕ್ಕೂ ಹಾಕಿಕೊಳ್ಳದೇ ಅವಳು ದೊಡ್ಡವಳಾಗಿ ಬೆಳೆದುಬಿಟ್ಟಳು ಅಂತ ಅಪ್ಪ ಹೇಳೋದ್ರಲ್ಲಿ ಏನೂ ಸುಳ್ಳಿಲ್ಲ ಬಿಡು. ನೀನು ಅದೇ ಬಟ್ಟೆಗಳನ್ನು ಇನ್ನೊಂದು ಮಗುವಾದ್ರೆ ಇರಲಿ ಅಂತ ಎತ್ತಿಟ್ಟಿದ್ದೀಯಂತೆ. ನಾನಂತೂ ಅವನ್ನೆಲ್ಲಾ ಹಾಕ್ಕೊಳಲ್ಲಾ, ನನಗೆ ಹೊಸವನ್ನೇ ಕೊಡುಸ್ಬೇಕು ಅಂತ ಅಪ್ಪನ ಹತ್ರ ಹಠ ಮಾಡ್ತೀನಿ…

ಅಪ್ಪ ಅವತ್ತು ಸಾಯಂಕಾಲ ಮನೆಗೆ ಬಂದಾಗ ಸ್ವೀಟ್ ತಂದಿದ್ದರು. ವೆಂಕಟೇಶ್ವರ ಸ್ವೀಟ್ ಸ್ಟಾಲಿನ ಸ್ಪೆಷಲ್ ಮೈಸೂರು ಪಾಕು ಅಂತ ಹೇಳಿದ್ರು. ನೀನಂತೂ ಇನ್ನೂ ಬಿಸಿಬಿಸಿಯಾಗಿದ್ದ ಅವನ್ನ ಒಂದೂ ಬಿಡದಂಗೆ ತುಂಬಾ ಚೆನ್ನಾಗಿದೆ ಅಂತ ತಿನ್ನುತ್ತಲೇ ಇದ್ದೆ. ನಿಜಕ್ಕೂ ಎಷ್ಟೊಂದು ಸ್ವೀಟಾಗಿತ್ತು ಗೊತ್ತಾ. ನಾನು ರುಚಿ ನೋಡಿದ ಮೊದಲ ಸ್ವೀಟ್ ಅಲ್ಲವಾ ಅದು, ಅದಕ್ಕೇ. ನೀನು ತಿಂದದ್ದರ ರಸ ಎಲ್ಲಾ ನನಗೂ ತಲುಪುತ್ತಿತ್ತಲ್ಲವಾ… ಆದರೂ, ಅಪ್ಪ ಒಂದು ಪೀಸ್ ಕೇಳಿದ್ರೂ ಕೊಡ್ಲಿಲ್ಲ ನೀನು, `ಶುಗರ್ ಜಾಸ್ತಿಯಾಗುತ್ತೆ ಸುಮ್ಮನಿರ್ರೀ’ ಅಂತ ಒಂದೇ ಒಂದು ಗ್ರಾಂ ನಷ್ಟು ಕೊಟ್ಟೆ. ಪಾಪಿ ಅಮ್ಮ ನೀನು. ಪಾಪ ಅಪ್ಪ ಎಷ್ಟು ಬಾಯಿ ನೀರು ಸುರಿಸಿದ್ರೋ.
ಆದರೂ ನೀನು ಅವತ್ತು, ಒಂದು ವಾರ ತವರಿಗೆ ಹೋಗಿ ವಾಪಾಸ್ ಬಂದ ದಿನದ ರಾತ್ರಿಯ ನೆನಪು ಮಾಡಿಕೊಟ್ಟೆ ಅಪ್ಪನಿಗೆ. ಅಕ್ಕ ಮಲಗಿದ ಮೇಲೆ ನೀವಿಬ್ಬರೂ ಬರಗೆಟ್ಟವರಂತೆ ಏನೇನೋ ಆಟ ಆಡಿದಿರಂತೆ. ಅಪ್ಪ ಏನೇನೋ ಪೋಲಿ ಮಾತುಗಳನ್ನು ಆಡುತ್ತಾ ಸ್ವೀಟಿನ ವಿಷಯ ಮರೆತೇ ಬಿಟ್ಟರು ಪಾಪ!

ತಿಂಗಳಿಗೊಂದು ಸಲ ಡಾ. ಶೈಲಜಾ ಹತ್ತಿರ ಅಪ್ಪ ಕರ್‍ಕೊಂಡು ಹೋಗ್ತಾ ಇದ್ರು. ಅವರು ಚೆಕ್‌ಅಪ್ ಮಾಡಿ ಬರೆದುಕೊಡುವ ಎಲ್ಲಾ ಔಷಧಿ ಮಾತ್ರೆಗಳನ್ನೂ ಅಪ್ಪ ತಂದು ಕೊಡ್ತಾ ಇದ್ರು. ನೀನು ಚೌಕಾಸಿ ಮಾಡ್ತಾ, ಇಷ್ಟೊಂದು ಯಾಕೆ ತಂದ್ರಿ, ಅಷ್ಟೊಂದು ಯಾಕೆ ತಂದ್ರಿ, ಎರಡೆರಡು ತಂದಿದ್ರೆ ಸಾಲ್ತಿರಲಿಲ್ಲವಾ ಅಂತೆಲ್ಲಾ ಜಗಳ ಮಾಡ್ತಾ ಇದ್ದೆ. ಅಪ್ಪ ಆಗಿದ್ದಕ್ಕೆ ಪಾಪ ಸುಮ್ಮನೇ ಇರೋರು. ನಾನಾಗಿದ್ದಿದ್ದರೆ…

ಆದ್ರೂ ಒಂದೊಂದು ಸಲ ರಾತ್ರೆ ಹನ್ನೊಂದೂವರೆ ಹನ್ನೆರಡು ಗಂಟೆಗೆ ಆ ಮಾತ್ರೆ ತಂದು ಕೊಟ್ಟಿಲ್ಲಾ, ಈ ಮಾತ್ರೆ ತಂದು ಕೊಟ್ಟಿಲ್ಲಾ ಅಂತ ಜಗಳ ಮಾಡ್ತಿದ್ದೆ. `ಮಾತ್ರೆ ಖಾಲಿ ಆಗಿದೆ ಅಂತ ಮೊದಲೇ ಹೇಳಬಾರದಾ, ನನಗೇನು ಕನಸು ಬಿದ್ದಿರುತ್ತಾ. ಇಷ್ಟೊತ್ತಿಗೆ ಎಲ್ಲಾ ಅಂಗಡೀನೂ ಬಾಗಿಲು ಹಾಕಿರ್‍ತಾವೆ ಗೊತ್ತಾ…’ ಅಂತ ರೇಗೋರು. ಅದೇ ಅವರ ಜೋರು ಮಾತು. ನೀನು ಅದನ್ನೇ ದೊಡ್ಡದು ಮಾಡಿ ಅಜ್ಜಿಗೆ ಫೋನ್ ಮಾಡಿ ಹೀಗೀಗೆಲ್ಲಾ ಬೈತಾರೆ ಅಂತ ಕಂಪ್ಲೆಂಟ್ ಮಾಡ್ತಾ ಇದ್ದೆ. ಅಜ್ಜಿನೂ ನಿನ್ನ ತಾಳಕ್ಕೆ ತಕ್ಕಂತೇ ಕುಣೀತಾ ಇದ್ರೂ. ಆವಾಗ ಅಪ್ಪ ಯಾಕೆ ಸುಮ್ಮನೇ ಇರ್‍ತಿದ್ದರೋ -ನಿನ್ನ ಹೊಟ್ಟೆ ಒಳಗೆ ಇದ್ದಿದ್ರಿಂದ- ನನಗಂತೂ ಗೊತ್ತಾಗ್ತಾ ಇರ್‍ಲಿಲ್ಲ.

ಮೂರನೇ ತಿಂಗಳು ಕಳೀತಿದ್ದಂಗೆ ನೀನು ಡಾ. ಶೈಲಜಾ ಅವರು ಸ್ಕ್ಯಾನಿಂಗ್ ಮಾಡುವಾಗ `ಡಾಕ್ಟ್ರೇ, ಮಗು ಹೆಣ್ಣೋ ಗಂಡೋ?’ ಅಂತ ನೀನು ಕೇಳಿದ್ದಕ್ಕೆ ಡಾಕ್ಟರ್ರು ನಿನಗೆ ಬೈದಿದ್ದರು: `ನಾವು ಸ್ಕ್ಯಾನಿಂಗ್ ಮಾಡೋದು, ಮಗು ಆರೋಗ್ಯವಾಗಿದೆಯೋ ಇಲ್ಲವೋ, ಅಂಗವಿಕಲ ಗಿಂಗವಿಕಲ ಏನಾದರೂ ಆಗಿದೆಯೋ ಇಲ್ಲವೋ ಇಂತ ತಿಳ್ಕೊಳಕ್ಕೇ ಹೊರತು, ಗಂಡೋ ಹೆಣ್ಣೋ ಅಂತ ನೋಡೋಕ್ಕಲ್ಲ…’ ಅಂತ.

`ಇಲ್ಲಾ ಡಾಕ್ಟ್ರೇ, ನನಗೆ ಹೆಣ್ಣು ಮಗು ಅಂದರೆ ತುಂಬಾ ಇಷ್ಟ… ಅವಳಿಗೆ ಎಷ್ಟೊಂದು ರೀತೀಲಿ ತಲೆ ಬಾಚಬಹುದು, ಜಡೆ ಹಾಕಬಹುದು, ಎಷ್ಟೊಂದು ರೀತಿಯ ಬಟ್ಟೆ ಹಾಕಿ ನಲಿಯಬಹುದು. ಆದರೆ ಗಂಡು ಮಗುವಿಗೆ ಅದೇ ಶರ್ಟು, ಅದೇ ಪ್ಯಾಂಟು ಇಲ್ಲ ಚೆಡ್ಡಿ. ಅಷ್ಟಕ್ಕೂ ಹೆಣ್ಣು ಮಕ್ಕಳೇ ತಂದೆ ತಾಯಿ ಅಂತ ನೋಡಿಕೊಳ್ಳೋದು. ಗಂಡು ಮಕ್ಕಳಾದರೆ ಯಾವುದಾದರೂ ಹುಡುಗಿಯ ಬೆನ್ನು ಮೂಸಿಕೊಂಡು ಹೋಗಿಬಿಡ್ತಾರೆ, ಇಲ್ಲ ಮಗ್ಗುಲಿಗೆ ಹೆಂಡತಿ ಬರುತ್ತಿದ್ದಂತೆಯೇ ಎಲ್ಲರನ್ನು ಮರೆತುಬಿಡ್ತಾರೆ… ಯಾಕೆ ಮೊದಲನೇ ಮಗಳು ಹುಟ್ಟಿದಾಗಲೂ ನನಗೆ ಹೆಣ್ಣು ಮಗೂನೇ ಬೇಕು ಅಂತ ನಿಮ್ಮ ಹತ್ರಾನೇ ಹೇಳಿರಲಿಲ್ಲವಾ ಡಾಕ್ಟ್ರೇ… ನೀವೇ ಅವಳ ಹೆರಿಗೆ ಮಾಡಿಸಿದಾಗ ಸ್ವೀಟ್ ಹಂಚಿರಲಿಲ್ಲವಾ…’ ಅಂತ ನಯವಾಗಿ ನೀನು ಅಂದಿದ್ದನ್ನು ಅವರು ನಂಬಿದರು.

ಆದರೂ, `ಅದೆಲ್ಲಾ ಈಗಲೇ ಗೊತ್ತಾಗಲ್ಲಮ್ಮ. ಕನಿಷ್ಟ ನಾಲ್ಕು ತಿಂಗಳಾದರೂ ಆಗಬೇಕು…’ ಅಂದಿದ್ದರು. `ಸರಿ ಡಾಕ್ಟ್ರೇ. ಆವಾಗ ಇನ್ನೊಂದು ಸಲ ಬರ್‍ತೀನಿ’ ಅಂತ ನೀನು ಅಂದದ್ದಕ್ಕೆ, `ಸುಮ್ಮನೇ ಹಣ ಪೋಲಾಗುತ್ತೆ. ಮತ್ತೆ ಬರುವ ಅಗತ್ಯ ಇಲ್ಲ’ ಅಂದಿದ್ದರು. `ದುಡ್ಡಿನ ಪ್ರಶ್ನೆ ಅಲ್ಲಾ ಡಾಕ್ಟ್ರೇ, ಹಾಗೇ ಸುಮ್ಮನೇ… ಕ್ಯೂರಿಯಾಸಿಟೀಗೆ…’ ಅಂತಂದು ನೀನು ಮನೆಗೆ ಬಂದಿದ್ದೆ.

ಅಪ್ಪ ಇದ್ದವರು, ತಿಂಗಳೆರಡು ತಿಂಗಳ ಹಿಂದೆ ಸತ್ತ ಅವರ ಅಮ್ಮನನ್ನು ನೆನೆಸಿಕೊಂಡು, `ಈ ಸಲ ಅಮ್ಮನೇ ಮತ್ತೆ ಹುಟ್ಟಿ ಬರುತ್ತಾಳೆ, ನೋಡುತ್ತಿರು…’ ಅಂದಿದ್ದರು. ನಿನ್ನ ಹೊಟ್ಟೆಯ ಮೇಲೆ ತಲೆಯಿಟ್ಟು, `ಅಮ್ಮ ಹೀಗೆಯೇ ನನ್ನ ಕೆನ್ನೆಗೆ ಹೊಡೆಯುತ್ತಿದ್ದುದು…’ ಎಂದು ನನ್ನ ಕಾಲು ಬಡಿತವನ್ನು ಎಂಜಾಯ್ ಮಾಡುತ್ತಿದ್ದರು. ಆಗಲೂ ನಾನು ನಿನ್ನೊಳಗೇ ಇದ್ದರೂ, ನಿನ್ನ ಒಳಮರ್ಮ ನನಗೆ ಅರ್ಥವಾಗಿರಲಿಲ್ಲ.

ನಾಲ್ಕು ನಾಲ್ಕೂವರೆ ತಿಂಗಳಿಗೆ ಪುನಃ ಡಾಕ್ಟರರ ಬಳಿ ಬಂದು ಸ್ಕ್ಯಾನಿಂಗ್ ಮಾಡಿಸಿಕೊಂಡೆಯಲ್ಲಾ. ಈ ಸಲ ನೀನೊಬ್ಬಳೇ ಬಂದಿದ್ದೆ. ಚೆನ್ನಾಗಿ ಪರಿಚಯವಿದ್ದ ಡಾಕ್ಟರರು ಎರಡು ಮೂರು ಸಾರಿ ಚೆಕ್ ಮಾಡಿ `ಹೆಣ್ಣು ಮಗು’ ಎಂದು ಸಹಜವಾಗಿ ಹೇಳಿ ಬೇರೆ ಕೆಲಸಕ್ಕೆ ಹೊರಟು ಹೋದರು.

ನೀನು ಪ್ರಪಂಚವೇ ತಲೆಯ ಮೇಲೆ ಬಿದ್ದ ಹಾಗೆ, ಡಾಕ್ಟರರ ಬಳಿ ಏನು ಮಾತಾಡಬೇಕೆಂದು ತೋಚದೇ ಸುಮ್ಮನೇ ಎದ್ದು ಮನೆಗೆ ಬಂದಿದ್ದೆ. ಬಂದವಳು ಸುಮಾರು ಎರಡು ಗಂಟೆ ಕಾಲ ಅಜ್ಜಿ ಜೊತೆ ಫೋನಿನಲ್ಲಿ ಮಾತಾಡಿದ್ದೆ. ಸಾಯಂಕಾಲವೇ ಅಜ್ಜಿ ಬಂದಿಳಿದರು. ನೀನು ಮತ್ತೆ ಡಾಕ್ಟರರ ಹತ್ತಿರ ಕೇಳಲು ಹೋದರೆ ಬಯ್ಯುತ್ತಾರೆಂದು ಅಜ್ಜಿಯನ್ನು ಕಳಿಸಿದೆ. ಅವರಿಗೆ, `ಈಗಾಗಲೇ ನಮಗೆ ಒಂದು ಹೆಣ್ಣು ಮಗು ಇದೆ, ಇನ್ನೊಂದು ಹೆಣ್ಣಾದರೆ ಹೇಗೆ ಅಂತ ಕೇಳು’ ಅಂತ ಒತ್ತಿ ಒತ್ತಿ ಹೇಳುತ್ತಿದ್ದೆ. ನನಗೆ ಆತಂಕ ಶುರುವಾಯಿತು.

ವಾಪಸ್ಸು ಬಂದ ಅಜ್ಜಿ ಏನೆಲ್ಲಾ ಹೇಳಿದರೂ ಡಾಕ್ಟರರು ಒಪ್ಪದೇ ಬೈದು ಕಳಿಸಿದರೆಂದರು. ಎಷ್ಟೊಂದು ಒಳ್ಳೆಯವರು ಆ ಡಾಕ್ಟರರು! ಅಪ್ಪ ರಾತ್ರೆ ಆಫೀಸಿನಿಂದ ಮನೆಗೆ ಬರುತ್ತಿದ್ದಂತೆಯೇ, ಬೆಳಗ್ಗೆಯೇ ಬೆಂಗಳೂರಿಗೆ ಕರೆದುಕೊಂಡು ಹೋಗಲು ಬಂದಿರುವುದಾಗಿ ಅಜ್ಜಿಯಿಂದ ಹೇಳಿಸಿದೆ. ಗರ್ಭಿಣಿಯ ಆಸೆಯೆಂದು ಬೇಡವೆನ್ನದೇ, ಸ್ವತಃ ಬಂದು ಬೆಳಗ್ಗಿನ ನಾನ್ ಸ್ಟಾಪ್ ಬಸ್ಸಿಗೆ ಕೂರಿಸಿ ಕಳಿಸಿಕೊಟ್ಟರು.

ಅಜ್ಜಿಯ ಜೊತೆಗೆ ಮಾಮ, ಅತ್ತೆ, ತಾತ ಎಲ್ಲರನ್ನೂ ಕಾರಿನಲ್ಲಿ ಕರಕೊಂಡು ಯಾವುದೋ ಆಸ್ಪತ್ರೆಗೆ ಹೋದೆ. ಹೋಗುವಾಗ ದಾರಿಯುದ್ದಕ್ಕೂ ನೀನು ಯಾರು ಯಾರದೋ ಅಭಿಪ್ರಾಯ ಕೇಳಿದುದಾಗಿಯೂ, ಅವರೆಲ್ಲರೂ ತೆಗೆಸುವುದು ಸೂಕ್ತವೆಂದು ಹೇಳಿದ್ದಾರೆಂದು ನೀನು ಹೇಳುತ್ತಿದ್ದೆ. ಮೊದಮೊದಲು ತೆಗೆಸುವುದು ಎಂದರೆ ಏನು ಎಂಬುದು ನನಗೆ ಗೊತ್ತಾಗುತ್ತಿರಲಿಲ್ಲ. ಆದರೆ ಯಾವಾಗ ನೀನು ಎರಡು ಮೂರು ಆಸ್ಪತ್ರೆಯ ಇಬ್ಬರು ಮೂವರು ಡಾಕ್ಟರರ ಜತೆ ಮಾತನಾಡಿದಾಗಲೂ ಅವರೆಲ್ಲರೂ ಡಾ.ಶೈಲಜಾ ಹೇಳಿದ್ದನ್ನೇ ಹೇಳಿದಾಗ, ಒಂದೊಂದೇ ಸ್ಪಷ್ಟವಾಗಲಾರಂಭಿಸಿತು.

ಕೊನೆಗೊಬ್ಬರು ಡಾಕ್ಟರರಿಗೆ, `ಡಾಕ್ಟರ್ರೇ, ನನಗೆ ಹುಟ್ಟುತ್ತಿರುವ ಮಗು ಅಂಗವಿಕಲವಾಗಿದೆಯಂತೆ. ದಯವಿಟ್ಟು ಅಬಾರ್ಷನ್ ಮಾಡಿ ತೆಗೆದುಬಿಡಿ…’ ಎಂದು ನೀನು ಅಳಲು ಶುರು ಮಾಡಿದಾಗ, ಅವರು ಸ್ಕ್ಯಾನಿಂಗ್ ರಿಪೋರ್ಟ್ ಕೇಳಿದರು. ಆಗ ನೀನು ಹೀಗೆ ಬೇರೆ ಊರಿನಿಂದ ಬಂದಿರುವುದಾಗಿಯೂ, ಬರುವ ಅವಸರದಲ್ಲಿ ರಿಪೋರ್ಟನ್ನು ಮರೆತು ಬಂದಿರುವುದಾಗಿಯೂ ಹೇಳಿದೆ. ಮತ್ತೊಮ್ಮೆ ಸ್ಕ್ಯಾನಿಂಗ್ ಮಾಡುವುದಾಗಿ ಅವರು ಹೇಳಿದಾಗ ಅಷ್ಟೊಂದು ದುಡ್ಡು ತಂದಿಲ್ಲವೆಂತಲೂ, ಈಗಾಗಲೇ ಐದು ತಿಂಗಳಾಗಿರುವುದರಿಂದ ಇನ್ನೂ ತಡವಾದರೆ, ನನ್ನ ಪ್ರಾಣಕ್ಕೇ ಅಪಾಯವಿದೆಯೆಂದು ನಮ್ಮೂರಿನ ಡಾಕ್ಟರರು ಹೇಳಿದುದರಿಂದ ಭಯಪಟ್ಟು ಎಲ್ಲವನ್ನೂ ಬಿಟ್ಟು ಓಡಿ ಬಂದಿರುವುದಾಗಿ ನೀನು ಹೇಳಿದ್ದನ್ನು ಅವರು ನಂಬಿದರು. ಡಾ.ಶೈಲಜಾ ಅವರು ನಿಮ್ಮ ಬಳಿ ಹೋದರೆ ಮಾತ್ರ ಸುರಕ್ಷಿತವಾಗಿ ತೆಗೆಯುತ್ತಾರೆಂದು ಹೇಳಿದುದರಿಂದ ನಿಮ್ಮನ್ನೇ ಹುಡುಕಿಕೊಂಡು ಬಂದುದಾಗಿ ಹೇಳಿದ್ದರಿಂದ ಉಬ್ಬಿಹೋದ ಡಾಕ್ಟರರು ಒಪ್ಪಿ ಅಡ್ಮಿಟ್ ಮಾಡಿಕೊಂಡುಬಿಟ್ಟರು…

ಈಗಲೇ ನನಗೆ ನಿಜವಾದ ಪ್ರಾಣ ಸಂಕಟ ಶುರುವಾದದ್ದು…

ಇಲ್ಲಮ್ಮಾ ಇನ್ನೊಂದು ಸಾರಿ ಅಪ್ಪನ ಪರ ವಹಿಸಿಕೊಂಡು ಮಾತಾಡಲ್ಲ. ನೀನು ಹೇಳಿದ ಹಾಗೇ ಕೇಳುತ್ತೇನೆ. ಅಕ್ಕ ಬಿಟ್ಟ ಆಟದ ಸಾಮಾನಲ್ಲೇ ಆಟವಾಡಿಕೊಳ್ಳುತ್ತೇನೆ; ಅವಳು ಬಿಟ್ಟ ಬಟ್ಟೆಗಳನ್ನೇ ಹಾಕಿಕೊಳ್ಳುತ್ತೇನೆ. ಇದೇ ಬೇಕು ಅದೇ ಬೇಕು ಎಂದು ಹಠ ಮಾಡುವುದಿಲ್ಲಮ್ಮಾ. ಬೇಕಾದರೆ ಪ್ರಾಮಿಸ್ ಮಾಡುತ್ತೇನೆ… ನಾನು ಅಕ್ಕನ ಹಾಗೆ ಘಾಟಿಯಾಗುವುದಿಲ್ಲಮ್ಮ. ಚೆನ್ನಾಗಿ ಓದುತ್ತೇನೆ. ನೀನು ಏನು ಓದಿಸಿದರೂ ಅಕ್ಕನ ಹಾಗೆ ಎದುರು ಮಾತನಾಡದೇ ಓದುತ್ತೇನೆ. ಶಾಲೆಗೆ ಡಿಸ್ಟಿಂಗ್ಷನ್ ಬರುತ್ತೇನೆ. ನನ್ನ ನಂಬು… ಬೇಕಾದರೆ ಕಲ್ಪನಾ ಚಾವ್ಲಾ ಥರಾ, ಸುನೀತಾ ವಿಲಿಯಮ್ಸ್ ಥರಾ ಬಾಹ್ಯಾಕಾಶದಲ್ಲಿ ಹೆಸರು ಮಾಡುತ್ತೇನೆ… ಬೇಕಾದರೆ ಮಾಧುರಿ ತರಾನೋ, ಐಶ್ವರ್ಯ ತರಾನೋ ಸಿನೆಮಾದಲ್ಲೂ ಹೆಸರು ಮಾಡುತ್ತೇನೆ… ವಿಜ್ಞಾನ-ತಂತ್ರಜ್ಞಾನದಲ್ಲಾಗಲೀ, ವೈದ್ಯಕೀಯದಲ್ಲಾಗಲೀ, ಕೊನೆಗೆ ಐ‌ಎ‌ಎಸ್ ಮಾಡಿಯಾದರೂ ನಿನ್ನ, ಅಪ್ಪನ ಹೆಸರುಳಿಸುತ್ತೇನಮ್ಮಾ… ನನ್ನ ನಂಬು… ಪ್ಲೀಸ್…

ಅಷ್ಟರಲ್ಲಿ ಯಾರೋ ನರ್ಸ್ ಬಂದವಳು ಇಂಜೆಕ್ಷನ್ ನೀಡಿದಳು. ಏನೋ ಒಂದು ಥರಾ ಮತ್ತು ಬಂದಂತಾಗಲಾರಂಭಿಸಿತು. ಅಮ್ಮ, ಅಮ್ಮಾ… ಅಪ್ಪನಿಗಾದರೂ ಒಂದು ಮಾತು ಕೇಳಮ್ಮಾ… ನಾನು ಅಂದರೆ ಅವರಿಗೆ ತುಂಬಾ ಇಷ್ಟ… ನಾನು ಹುಟ್ಟುತಿದೀನಿ ಅಂತ ಕೇಳಿದ ದಿನ ಅವರು ಎಷ್ಟು ಸಂತಸ ಪಟ್ಟಿದ್ದರು… ದಯವಿಟ್ಟು ಒಂದೇ ಒಂದು ಮಾತು ಕೇಳಮ್ಮಾ… ಅಪ್ಪ ಆದರೆ ಖಂಡಿತಾ ನನ್ನನ್ನು ಸಾಯಿಸಲು ಒಪ್ಪುವುದಿಲ್ಲ… ಒಂದೇ ಒಂದು ಮಾತು ಕೇಳಮ್ಮಾ ಪ್ಲೀಸ್…

ನಾನು ಹೇಳೋದು ನಿನಗೆ ಕೇಳುಸ್ತಾ ಇಲ್ವಾಮ್ಮ?… ಅಯ್ಯೋ ನಾನು ಏನು ಮಾಡಲೀ… ಅಮ್ಮಾ ನೋಡಮ್ಮಾ, ನಾನೂ ನಿನ್ನ ಹಾಗೆ ಹೆಣ್ಣಲ್ಲವಾ… ನೋಡು ನನಗೂ ನಿನ್ನ ಹಾಗೆ ಮೃದುವಾದ ಮುಖ ಬೆಳೆದಿದೆ. ಕೋಮಲವಾದ ಕಣ್ಣು ಬಂದಿದೆ. ಒಂದು ಇಂಚು ಉದ್ದದ ನಯವಾದ ಕೂದಲೂ ಬಂದಿದೆ. ನೋಡು… ನಿನ್ನದೇ ರಕ್ತ ನನ್ನ ಮೈಯ್ಯಲ್ಲೂ ಹರಿಯುತ್ತಿದೆ. ನಿನ್ನದೇ ಮಾಂಸ ನನ್ನ ಮೈಯ್ಯಲ್ಲೂ ಬೆಳೆಯುತ್ತಿದೆ. ನನ್ನನ್ನು ನೀನು ಕೊಂದರೆ ನಿನ್ನನ್ನೇ ನೀನು ಕೊಂದುಕೊಂಡಂತೆ… ನೀನೇ ಸೃಷ್ಟಿಸಿದ ನನ್ನನ್ನು ಕೊಲ್ಲಲು ನಿನಗೆ ಮನಸಾದರೂ ಹೇಗೆ ಬರುತ್ತದಮ್ಮಾ…

ಅಮ್ಮಾ ಪ್ಲೀಸ್, ಅಪ್ಪನಿಗೆ ಒಂದೇ ಒಂದು ಮಾತು ಕೇಳಮ್ಮಾ… ಅಪ್ಪ `ಎಸ್’ ಅಂದರೆ ನಿಮ್ಮಿಷ್ಟ… ನಾನು ಮತ್ತೆ ಕೇಳುವುದಿಲ್ಲ. ಬೇಕಾದರೆ ನನ್ನ ಅರೆ ಬೆಳೆದ ಅಂಗಾಂಗಗಳನ್ನು ಕೊಯ್ದು ಅಂಗಳಕ್ಕೆ ಬಿಸಾಡಿದರೂ ಸರಿ, ನನ್ನ ಕತ್ತಿಗೆ ಇಕ್ಕಳ ಹಾಕಿ ನಿನ್ನ ಹೊಟ್ಟೆಯಿಂದ ಹೊರಗೆಳೆದು ನಾಯಿ ನರಿಗಳಿಗೆ ಎಸೆದರೂ ಸೈ. ನಾನು ಮಾತಾಡುವುದಿಲ್ಲ… ದಯವಿಟ್ಟು ಅಪ್ಪನಿಗೆ ಒಂದೇ ಒಂದು ಸಾರಿ ಫೋನ್ ಮಾಡಮ್ಮಾ…

ಸದ್ಯ. ನನ್ನ ಮಾತು ಅಮ್ಮನಿಗೆ ಕೇಳಿಸಿದಂತಿದೆ… ಅಪ್ಪನ ಮೊಬೈಲಿಗೆ ಫೋನ್ ಮಾಡಲು ಮಾಮನಿಗೆ ಹೇಳಿದಳು. ಅಪ್ಪ ಮೊದಮೊದಲು ರೇಗಾಡಿದರು. ಇಂಜೆಕ್ಷನ್ನಿನ ಮತ್ತಿನಿಂದಾಗಿ ಅವರು ಏನೇನು ಹೇಳಿದರೆಂದು ನನಗೆ ಸ್ಪಷ್ಟವಾಗಿ ಕೇಳಿಸುತ್ತಿಲ್ಲ. ಆದರೂ ದೂರದಲ್ಲಿರುವ ಅವರು ಈಗಿಂದೀಗಲೇ ಬಂದು ನನ್ನನ್ನು ರಕ್ಷಿಸುವ ಸಾಧ್ಯತೆ ಬಹಳ ಕಡಿಮೆ. ಎಂದೇ ನನ್ನನ್ನು ಬಹುಪಾಲು ಕೊಂದೇ ತೀರುವರೆಂದು ನಿರ್ಧಾರ ಮಾಡಿದೆ. ಆದರೂ ಕೊನೆಯ ಸಲ ಅಪ್ಪನೊಂದಿಗೆ ನಾನಾದರೂ ಮಾತಾಡಿ, ಹೋಗಿಬರುವೆನೆಂದು ವಿದಾಯ ಹೇಳಬೇಕೆಂದುಕೊಂಡೆ… ಆದರೆ ನನಗೆ ಮಾತಾದರೂ ಹೇಗೆ ಬಂದೀತು; ನನ್ನ ಅಳಲು ಅವರಿಗಾದರೂ ಹೇಗೆ ಕೇಳಿಸೀತು? ಅಷ್ಟರಲ್ಲಿ ಬಂದ ಡಾಕ್ಟರರು, ಕನ್ಸೆಂಟ್ ಪತ್ರಕ್ಕೆ ಅಪ್ಪನ ಸಹಿ ಬೇಕೆಂದರು. ಸದ್ಯ ಬಚಾವಾದೆ. ಅಪ್ಪ ಹತ್ತಿರದಲ್ಲಿಲ್ಲ. ಅವರ ಸಹಿ ಇಲ್ಲದೇ ನನ್ನನ್ನು ಕೊಲ್ಲುವುದಿಲ್ಲವಂತೆ! ಓ ಡಾಕ್ಟರರೇ, ನೀವೆಷ್ಟು ಒಳ್ಳೆಯವರು…

ತಾತ ಬಂದವರು, `ಅವರ ಯಜಮಾನರು ಕೆಲಸದ ನಿಮಿತ್ತ ವಿದೇಶಕ್ಕೆ ಹೋಗಿದ್ದಾರೆ. ಬರುವುದು ಇನ್ನೂ ಎರಡು ಮೂರು ತಿಂಗಳಾಗಬಹುದು. ಆಕೆಯ ತಂದೆ, ಕೇರ್ ಟೇಕರ್ ನಾನಿದ್ದೇನೆ. ಕೊಡಿ, ನಾನು ಸಹಿ ಮಾಡುತ್ತೇನೆ…’ ಎಂದು ಸಹಿ ಮಾಡಿಯೇ ಬಿಟ್ಟರು.

ಅಪ್ಪಾ, ಅಪ್ಪಾ… ಕಿರುಚಿಕೊಂಡೆ. ನನ್ನ ಕೂಗು ಅಮ್ಮನ ಹೊಟ್ಟೆಯ ಚರ್ಮ ದಾಟಿ ಹೊರಹೋಗಲೇ ಇಲ್ಲ… ಅಷ್ಟರಲ್ಲಿ ಮೊಬೈಲ್ ರಿಂಗಾದ ಸದ್ದು. ಅಪ್ಪನೇ ತಿರುಗಿ ಫೋನ್ ಮಾಡಿದ್ದರು. ಅಮ್ಮ ಏನೇನೋ ಕನ್ವಿನ್ಸ್ ಮಾಡುತ್ತಿದ್ದಳು. ಎರಡೆರಡು ಹೆಣ್ಣು ಮಕ್ಕಳೇಕೆ ಬೇಕು, ಗಂಡಾಗಿದ್ದರೆ ಇರಲಿ ಅಂತ ಬಯಸಿದ್ದು ನಿಜ. ಹಾಗಂತ ಮನೆ ತುಂಬಾ ಹೆಣ್ಣು ಮಕ್ಕಳನ್ನು ಇಟ್ಟುಕೊಳ್ಳಲು ಸಾಧ್ಯವಾ?… ಅಂತ ಅಮ್ಮ ರೇಗಾಡಿದಳು… ಅಪ್ಪ, ರೋಸಿಹೋಗಿ, `ನಿನ್ನಿಷ್ಟ ಬಂದಂತೆ ಮಾಡಿಕೋ…’ ಎಂದು ಫೋನನ್ನು ಕುಕ್ಕಿದರು.

ನಾನು, `ಅಪ್ಪಾ, ನೀನೂ…’ ಎಂದಂದೆನಾದರೂ ಅದು ಅವರಿಗೆ ಕೇಳಿಸಲೇ ಇಲ್ಲ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೇಳಿರಣ್ಣ ಕೇಳಿರಿ
Next post ದೂರದಲ್ಲಿದ್ದೇನೆ

ಸಣ್ಣ ಕತೆ

 • ನಂಟಿನ ಕೊನೆಯ ಬಲ್ಲವರಾರು?

  ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

 • ರಣಹದ್ದುಗಳು

  ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

 • ನಾಗನ ವರಿಸಿದ ಬಿಂಬಾಲಿ…

  ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

 • ನಿರೀಕ್ಷೆ

  ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

 • ಕನಸುಗಳಿಗೆ ದಡಗಳಿರುದಿಲ್ಲ

  ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

cheap jordans|wholesale air max|wholesale jordans|wholesale jewelry|wholesale jerseys