ಕನಸುಗಳಿಗೆ ದಡಗಳಿರುದಿಲ್ಲ

ಕನಸುಗಳಿಗೆ ದಡಗಳಿರುದಿಲ್ಲ

ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ – ಮನ ಒಮ್ಮೆ ಪುಲಕಿತವಾಯಿತು. ಯಾವಾಗಲೂ ಹೀಗೆ ಆಗದ ಮನ ಇವತ್ತೇಕೆ ಹೀಗೆ ಸ್ಥಿಮಿತ ಕಳಕೊಳ್ಳುತ್ತದೆ ಎಂದು ಅವಳಿಗೆ ಆಶ್ಚರ್ಯವಾದರೂ ಇದಕ್ಕೂ ಒಂದು ಕಾರಣ ಇದೆ ಎಂದು ಅವಳು ಮಾತ್ರ ತಿಳಿದಿದ್ದಳು. ಹಳೆಯ ಸಿನಿಮಾ ಹಾಡನ್ನು ಮೆಲ್ಲನೆ ಮೆಲುಕು ಹಾಕುತ್ತಾ ಅವಳು ಡ್ರೆಸ್ ಮಾಡಿಕೊಂಡಳು. ಆಗಾಗ್ಗೆ ಗೋಡೆ ಗಡಿಯಾರವನ್ನು ನೋಡ ತೊಡಗಿದಳು. ಎಂದಿನಂತೆ ಅಡುಗೆ ಕೋಣೆಯಿಂದ ಅಮ್ಮನ ಕೂಗು ಕೇಳಿ ಬಂತು.

“ವೃಂದಾ, ಬಾ, ತಿಂಡಿ ರೆಡಿಯಾಗಿದೆ” ಅಮ್ಮನ ಕರೆಗೆ ಓಗೊಡುತ್ತಾ ಅಡುಗೆ ಕೋಣೆಗೆ ನಡೆದ ವೃಂದಾ ತಾಯಿಯನ್ನು ಒಮ್ಮೆ ಅಕ್ಕರೆಯಿಂದ ನೋಡಿ ತಬ್ಬಿಕೊಂಡಳು. ನನ್ನ ಮಗಳಲ್ಲಿ ಆದ ಈ ತ್ವರಿತ ಬದಲಾವಣೆಯಿಂದ ಒಮ್ಮೆ ತಬ್ಬಿಬ್ಬಾದ ವೃಂದಾಳ ತಾಯಿ ಖುಷಿಯಿಂದ ಮಗಳ ತಲೆ ನೇವರಿಸಿದಳು.

“ಏನೇ, ಬಹಳ ಖುಷಿಯಲ್ಲಿದ್ದೀಯಾ? ಏನು ವಿಶೇಷ?” ತಾಯಿ ಸಂತೋಷದಿಂದ ಮಗಳ ಗಲ್ಲ ಹಿಡಿದೆತ್ತಿ ಕೇಳಿದಳು.

‘ಏನಿಲ್ಲಮ್ಮಾ, ಇವತ್ತು ಸಂಬಳದ ದಿನ ತಾನೇ? ಅದಕ್ಕೆ ಈ ಸಂತೋಷ’. ವೃಂದಾ ಅಮ್ಮನನ್ನು ಮತ್ತೊಮ್ಮೆ ತಬ್ಬಿಕೊಂಡಳು.

ಯೌವನದಲ್ಲೇ ಗಂಡನನ್ನು ಕಳೆದು ಕೊಂಡಾಗ ವೃಂದಾ ಮೂರು ವರ್ಷದ ಹಸುಳೆ. ಇಪ್ಪತ್ತೆರಡು ವರ್ಷ ಸಾಕಿ ಸಲಹಿದ ತಾಯಿಗೆ ಮಗಳ ಬುದ್ದಿವಂತಿಕೆ, ದೌರ್ಬಲ್ಯ ಎಲ್ಲಾ ಗೊತ್ತು. ಮಗಳು ತನ್ನೊಡನೆ ಏನೋ ಬಚ್ಚಿಡುತ್ತಿದ್ದಾಳೆ ಎಂದು ಅವಳಿಗೆ ಸ್ಪಷ್ಟವಾಯಿತು.

“ಏ ಕಳ್ಳಿ…. ನನ್ನೊಡನೆ ನಿನ್ನ ಸುಳ್ಳು ನಡೆಯೋದಿಲ್ಲ ನೋಡು. ನಾನು ನಿನ್ನ ತಾಯಿ. ಇರಲಿ ಬಿಡು, ನೀನು ಹೀಗೆ ನಗು -ನಗುತ್ತಾ ಇರಬೇಕು. ನನಗೆ ಎಷ್ಟು ಸಂತೋಷವಾಗುತ್ತಿದೆ ನೋಡು. ಮುಖ ಗಂಟಿಕ್ಕಿ ಕೊಂಡು ಇದ್ದರೆ ಆಯುಷ್ಯ ಕಮ್ಮಿಯಾಗುತ್ತಿದೆಯಂತೆ.” ವೃಂದಾಳ ತಾಯಿ ಮಗಳ ಉತ್ತರಕ್ಕೂ ಕಾಯದೆ ಬಿಸಿ ಬಿಸಿ ತಿಂಡಿ ಕಾಫಿ ತಂದಿಟ್ಟಳು. ಮಗಳು ತಿನ್ನುವುದನ್ನೇ ನೋಡುತ್ತಾ ನೋಡುತ್ತಾ ಅವಳ ಕಣ್ಣಾಲಿಗಳು ತುಂಬಿ ಕೊಂಡವು. “ಏನಮ್ಮಾ… ಏಕೆ ಕಣ್ಣೀರು”? ವೃಂದಾ ಕಾಫಿ ಲೋಟವನ್ನು ಕೆಳಗಿಡುತ್ತಾ ತಾಯಿಯ ಬಳಿಗೆ ಬಂದು ಅವಳ ಕಣ್ಣೀರು ಒರಸುತ್ತಾ ಕೇಳಿದಳು.

“ಇದು ಸಂತೋಷದ ಕಣ್ಣೀರು ವೃಂದಾ, ನಿನ್ನ ಮುಖ ನೋಡುವಾಗ ನನಗೆ ನಿನ್ನ ತಂದೆಯ ನೆನಪಾಗುತ್ತಿದೆ. ಅವರದೇ ಪಡಿಯಚ್ಚು ನೀನು. ಯಾವಾಗಲೂ ನೀನು ಆಲೋಚಿಸುತ್ತಾ ಗುಡ್ಡ ಜರಿದು ತಲೆಮೇಲೆ ಬಿದ್ದ ಹಾಗೇ ಮಾಡುತ್ತಿದ್ದೀ. ಇವತ್ತು ನಿನ್ನ ಮುಖದಲ್ಲಿ ನಗೆ ಕಂಡು ಬರುತ್ತಿದೆ. ಅದಕ್ಕೆ ಸಂತೋಷದಲ್ಲಿ ಕಣ್ಣೀರು ಹಾಕಿದೆ. ದೇವರು ಒಳ್ಳೇದು ಮಾಡಲಿ ಮಗಳೇ, ಇನ್ನು ನಿನ್ನ ಒಂದು ಮದುವೆ ನಡೆದು ಹೋದರೆ ನನ್ನ ಜವಾಬ್ದಾರಿ ಮುಗಿದಂತೆ. ಆರಾಮದಲ್ಲಿ ಹೊರಟು ಹೋಗುತ್ತೇನೆ.” ಮಗಳ ಕೈ ನೇವರಿಸುತ್ತಾ ತಾಯಿ ಅಂದಾಗ ವೃಂದಾ ಮುಗಳ್ನಕ್ಕಳು. ವೃಂದಾ ತಾಯಿಯನ್ನೊಮ್ಮೆ ಓರೆ ಕಣ್ಣಲ್ಲಿ ನೋಡಿ ತನ್ನ ರೂಮಿಗೆ ನಡೆದಳು.

ವೃಂದಾ ರೂಮಿಗೆ ಬಂದು ತಾನು ತಿದ್ದಿ ಇಟ್ಟ ಮಕ್ಕಳ ಹೋಂ ವರ್ಕ್ ಪುಸ್ತಕಗಳನ್ನು ಒಂದೇ ಕಡೆ ಎತ್ತಿ ಇಟ್ಟಳು. ಭಾರತದ ಭೂಪಟವನ್ನು ಮಡಚಿ ಪುಸ್ತಕಗಳ ಮೇಲಿಟ್ಟು ಕೊಂಡು ತನ್ನ ಟಿಪಿನ್ ಕ್ಯಾರಿಯರ್‌ನ್ನು ಹೆಗಲಿಗೆ ಹಾಕಿಕೊಂಡಳು. ಎಡಗೈಯಲ್ಲಿ ಪುಸ್ತಕಗಳನ್ನು ಎತ್ತಿ ಕೊಂಡಳು. ಬಲಗೈಯಲ್ಲಿ ಮಡಚಿದ ಭೂಪಟವನ್ನು ಹಿಡಿದುಕೊಂಡು ಮತ್ತೊಮ್ಮೆ ಗೋಡೆಗಡಿಯಾರ ನೋಡಿದಳು. ಸಮಯ ಸರಿಯಾಗಿದೆ. ಇನ್ನು ಸ್ವಲ್ಪ ವಿಳಂಬ ಮಾಡಿದರೂ ಆ ಸಂತೋಷ ಸಿಗದೆ ಹೋಗಬಹುದು. ಅವಳು ಆ ಸಂತೋಷವನ್ನು ಕಳೆದು ಕೊಳ್ಳಲು ತಯಾರಿರಲಿಲ್ಲ. ರೂಮಿನ ಬಾಗಿಲು ಎಳೆದು ಚಪ್ಪಲಿ ಸಿಕ್ಕಿಸಿಕೊಂಡು “ಅಮ್ಮಾ ಬರುತ್ತೇನೆ” ಎಂದು ಜೋರಾಗಿ ಹೇಳಿಕೊಂಡು ಅಮ್ಮನ ಉತ್ತರಕ್ಕೂ ಕಾಯದೆ ಗೇಟಿನ ಬಳಿ ನಡೆದಳು. ಗೇಟನ್ನು ತೆರೆದು ಹೊರಬಂದು ಗೇಟು ಹಾಕಿ ಒಮ್ಮೆ ಎಡಕ್ಕೆ ತಿರುಗಿ ನೋಡಿದಳು. ಹೌದು, ಅವನು ಬರುತ್ತಿದ್ದಾನೆ. ಅದೇ ನಿಧಾನ ನಡಿಗೆ, ಅದೇ ಗಾಂಭೀರ್ಯ. ಅವಳು ಲಘುವಾಗಿ ಕಂಪಿಸಿದಳು. ಅವಳ ಮನಸ್ಸು ಉಯ್ಯಾಲೆಯಾಡತೊಡಗಿತು. ಅವಳು ಮೆಲ್ಲನೆ ನಡೆದು ಬಸ್-ಸ್ಟಾಂಡಿಗೆ ಬಂದು ನಿಂತಳು. ಮತ್ತೊಮ್ಮೆ ತಿರುಗಿ ನೋಡಲು ಮನಸ್ಸಾದರೂ ಅದು ಸಭ್ಯತೆಯ ಲಕ್ಷಣವಲ್ಲವೆಂದರಿತು ಸುಮ್ಮನಾದಳು. ತಾನು ಮಾಮೂಲಿ ನಿಲ್ಲುವ ಸ್ಥಳದಲ್ಲಿ ನಿಂತು ಕೊಂಡು ಒಮ್ಮೆ ಸುತ್ತಲೂ ಕಣ್ಣಾಡಿಸಿದಳು. ಅದೇ ಚಿರಪರಿಚಿತ ಜನರು, ಕೆಲವು ಹಿರಿಯರು, ಕೆಲವು ಕಿರಿಯರು ಹಿರಿಯರು ಮುಗಳ್ನಗೆಯ ಸ್ವಾಗತ ಕೋರಿದರೆ ಕೆಲವರು ನಮಸ್ತೇ ಅಂದರು. ಇನ್ನು ಕೆಲವರಿಗೆ ತಾನೇ ನಮಸ್ತೆ ಅಂದಳು. ಶಾಲಾ ಮಕ್ಕಳು “ನಮಸ್ತೆ ಟೀಚರ್” ಅಂದಾಗ ಅವಳಿಗೆ ಎಂದಿನಂತೆ ಸ್ವಲ್ಪ ಮುಜುಗರವಾಯಿತು. ಮಕ್ಕಳ ನಮಸ್ಕಾರವನ್ನು ಗಂಭೀರವಾಗಿಯೇ ಸ್ವೀಕರಿಸಿದಳು. ಅವಳು ಓರೆ ಕಣ್ಣಿನಿಂದ ಅವನು ಬರುವುದನ್ನೇ ನೋಡತೊಡಗಿದಳು. ಕೆಲವೇ ಸೆಕೆಂಡಿನಲ್ಲಿ ಅವನು ಕೂಡಾ ಬಸ್-ಸ್ಟಾಂಡ್ಗೆ ಬಂದ. ಅವನದೂ ಒಂದು ಮಾಮೂಲಿ ಸ್ಥಳವಿದೆ. ಅಲ್ಲಿ ಯಾರೂ ನಿಂತಿಲ್ಲ. ಹೌದು. ಅವನು ಅಲ್ಲಿಯೇ ನಿಲ್ಲುತ್ತಾನೆ ಎಂದು ಅವಳಿಗೆ ಖಾತ್ರಿಯಾಗಿತ್ತು. ಅವನು ನಿಲ್ಲುವ ಸ್ಥಳಕ್ಕೂ ಅವಳು ನಿಂತ ಸ್ಥಳಕ್ಕೂ ಕೆಲವೇ ಮೀಟರಿನ ಅಂತರವಿತ್ತು. ಅವನು ಸಮೀಪಿಸುತ್ತಿದ್ದಂತೆ ಅವಳ ಎದೆ ಢವ ಢವ ಶಬ್ದ ಮಾಡತೊಡಗಿತು. ಹಣೆಯಲ್ಲಿ ಒಂದೆರಡು ಬೆವರ ಹನಿ ಮೂಡಿತು.

ಅವನು ನಿಧಾನವಾಗಿ ನಡೆದು ಬಂದ. ಅದೇ ಗಾಂಭೀರ್ಯ ನಡಿಗೆ, ಕ್ಲೀನಾಗಿ ಶೇವ್ ಮಾಡಿದ ಮುಖ, ಮಲೆಯಾಳಿ ಸಿನಿಮಾ ಹೀರೊಗಳ ತರಹದ ಪೊದರು ಮೀಸೆ, ಆ ದುಂಡು ಬಿಳಿ ಮುಖಕ್ಕೆ ಬಹಳ ಚಂದ ಕಾಣುತಿತ್ತು. ಎಡ ಬದಿಗೆ ಬೈತಲೆ ಹಾಕಿ ಅಡ್ಡ ಬಾಚಿದ ಗುಂಗುರು ತಲೆ ಕೂದಲು. ಒಂದೆರಡು ಸಣ್ಣ ಗುಂಗುರು ಕೂದಲು ಅವನ ಹಣೆಯ ಮೇಲೆ ಲಾಸ್ಯವಾಡುತಿತ್ತು. ಹಣೆ ಬದಿಯಲ್ಲಿ ಒಂದೆರಡು ಸಣ್ಣ ಸಣ್ಣ ಬೆವರ ಹನಿಗಳು. ಪಿಂಕ್ ಕಲರಿನ ಅರ್ಧ ತೋಳಿನ ಶರ್ಟನ್ನು ಇನ್ಶರ್ಟ್ ಮಾಡಿದ್ದು ಆ ಕಂದು ಪ್ಯಾಂಟಿಗೆ ಮ್ಯಾಚ್ ಆಗುತಿತ್ತು. ಪಳ ಪಳ ಮಿನುಗುವ ಸೊಂಟಕ್ಕೆ ಕಟ್ಟಿದ ಕಪ್ಪು ಬೆಲ್ಟ್, ಈಗ ತಾನೇ ಪಾಲಿಶ್ ಮಾಡಿದ ಮಿರುಗುವ ಕಪ್ಪು ಶೂ, ಹೆಗಲಿಗೆ ಹಾಕಿಕೊಂಡ ಕ್ಯಾರಿಯರ್ ಬ್ಯಾಗ್ ನಿಂದಾಗಿ ಅವನು ಉದ್ಯೋಗಿ ಎಂಬುದು ಸ್ಪಷ್ಟವಾಗಿತ್ತು. ಎಲ್ಲವೂ ಚಂದ. ಅವನ ನಡಿಗೆ, ರೂಪ, ಡ್ರೆಸ್ ಎಲ್ಲದರಲ್ಲೂ ಒಂದು ಶಿಸ್ತು ಎದ್ದು ಕಾಣುತಿತ್ತು. ಬಹುಶಃ ಈ ಊರಿಗೆ ಹೊಸಬನಿರಬೇಕು. ಈಗ ತಾನೇ ಒಂದು ವಾರದಿಂದ ಅವನನ್ನು ನೋಡುತಿದ್ದೇನೆ. ನಮ್ಮ ಮನೆಯ ಎದುರಿನಿಂದಲೇ ಹಾದು ಹೋಗುತಿದ್ದಾನೆ. ಯಾರಿರಬಹುದು? ಇಷ್ಟೊಂದು ಮಂದಿ ಚಿರಪರಿಚಿತರ ಮಧ್ಯೆ ಅವನೊಬ್ಬನೇ ಅಪರಿಚಿತ. ಬೇರೆ ಯಾರನ್ನಾದರೂ ವಿಚಾರಿಸಿದರೆ ಹೇಗೆ? ಆದರೆ ಅದು ಅಪಾರ್ಥಕ್ಕೆ ಕಾರಣವಾದರೆ? ಬೇಡ, ನಾನೊಬ್ಬಳು ಮದುವೆಯಾಗದ ಹೆಣ್ಣು ಮಗಳು, ಮೇಲಾಗಿ ಒಂದು ಸರಕಾರಿ ಶಾಲೆಯ ಟೀಚರ್. ನನಗೆ ನನ್ನದೇ ಆದ ಚೌಕಟ್ಟಿದೆ, ನಿಯಮವಿದೆ, ಶಿಸ್ತಿದೆ, ಜವಾಬ್ದಾರಿ ಕೂಡಾ ಇದೆ. ನಾನೇಕೆ ಅಷ್ಟು ಲಘುವಾಗಿ ಹೋಗುವುದು. ನನಗೆ ಕೂಡಾ ನನ್ನದೇ ಆದ ಮರ್ಯಾದೆ, ಅಂತಸ್ತು ಇದೆ.

ಬಸ್ಸಿನ ಹಾರ್ನ್ ಕೇಳಿಸುತ್ತಲೇ ಅವಳ ಯೋಚನೆಗೆ ಕತ್ತರಿ ಬಿತ್ತು. ಅವಳು ಚುರುಕಾದಳು. ಬಸ್ಸು ಬಂದು ನಿಂತೊಡನೆ ಅವಳು ಬಸ್ಸಿನ ಮುಂಬಾಗಿಲಿಗೆ ಬಂದು ನಿಂತಳು, ಕೆಲವು ಗಂಡಸರು ಎದುರಿನ ಬಾಗಿಲಲ್ಲೇ ಬಸ್ಸು ಹತ್ತುತಿದ್ದರೆ ಅವನು ಒಂದು ದಿನವೂ ಎದುರಿನ ಬಾಗಿಲಿಗೆ ಬಂದವನಲ್ಲ. ಯಾವಾಗಲೂ ಹಿಂದಿನ ಬಾಗಿಲಲ್ಲೇ ಹತ್ತಿ ಗಂಡಸರ ಸೀಟಿನಲ್ಲೇ ಕುಳಿತು ಕೊಳ್ಳುತ್ತಿದ್ದ. ಹೆಂಗಸರ ಸೀಟು ಖಾಲಿಯಿದ್ದರೂ ಅವನು ಅಪ್ಪಿತಪ್ಪಿಯೂ ಕೂರುತ್ತಿರಲಿಲ್ಲ. ತನ್ನ ಪಕ್ಕದಲ್ಲೇ ಕುಳಿತುಕೊಳ್ಳುವ ಅವಕಾಶ ಇದ್ದರೂ ಅವನು ಕುಳಿತು ಕೊಂಡಿಲ್ಲ. ಬಹುಶಃ ಜಂಭವೋ ಅಲ್ಲ ಅತಿಯಾದ ಶಿಸ್ತು ಇರಬೇಕು. ಅವಳ ಊರಿಗೆ ಲಿಮಿಟೆಡ್ ಬಸ್ಸುಗಳಿರುವುದರಿಂದ ಡ್ರೈವರ್, ಕಂಡಕ್ಟರ್ ಅವಳಿಗೆ ಚಿರಪರಿಚಿತರು, ಅವನಿಗಿಂತ ಮೊದಲು ವೃಂದಾ ಇಳಿದು ಹೋಗುವುದರಿಂದ ಅವನು ಎಲ್ಲಿಗೆ ಹೋಗುತ್ತಾನೆ, ಎಲ್ಲಿ ಇಳಿಯುತ್ತಾನೆ ಎಂಬುದು ಮಾತ್ರ ಅವಳಿಗೆ ತಿಳಿಯದು. ತಾನು ಇಳಿಯುವಾಗ ತನ್ನನ್ನು ಬಹಳಷ್ಟು ಜನ ನೋಡುತ್ತಾರೆ ಎಂದು ವೃಂದಾಳಿಗೆ ತಿಳಿದಿತ್ತು. ಇಳಿದು ಮುಂದೆ ನಡೆದಂತೆ ಅವಳೊಮ್ಮೆ ಅವನ ಕಡೆಗೆ ಕದ್ದು ಕಣ್ಣೋಡಿಸುತ್ತಿದ್ದಳು. ಆದರೆ ಅವನು ಬೇರೆ ಎಲ್ಲಿಯೋ ನೋಡುತ್ತಿದ್ದ. ಅವಳಿಗೆ ನಿರಾಶೆಯಾಗುತಿತ್ತು. ಏನು ಹುಡುಗ ಇವನು. ಬಹುಶಃ ಬುದ್ಧನ ವಂಶಜ ಇರಬೇಕು ಎಂದು ತನ್ನಲ್ಲಿಯೇ ಅಂದು ಕೊಂಡಳು.

ಒಂದು ದಿನ ವೃಂದಾ ಬಸ್ಸಿನಲ್ಲಿ ಗಂಡಸರ ಸೀಟಿನಲ್ಲಿ ಬೇಕೆಂತಲೇ ಕುಳಿತುಕೊಂಡಳು. ಅವನು ಸೀಟಿಲ್ಲದೆ ಪರದಾಡುತ್ತಿದ್ದ. ಹೆಂಗಸರ ಸೀಟು ಖಾಲಿ ಇದ್ದರೂ ಅವನು ಕುಳಿತು ಕೊಳ್ಳಲಿಲ್ಲ. ಅದರಲ್ಲಿ ಬೇರೆಯವರು ಕುಳಿತು ಕೊಂಡರು. ಕೊನೆಗೆ ಉಪಾಯವಿಲ್ಲದೆ ಅವಳ ಬಳಿಯೇ ಬಹಳ ದಾಕ್ಷಿಣ್ಯದಿಂದ ಕುಳಿತುಕೊಂಡ. ಮೈ ಕೈ ತಾಗಬಾರದೆಂದು ತನ್ನ ಎರಡೂ ಕೈಗಳಿಂದ ಎದುರಿನ ಸೀಟಿನ ಬದಿಯನ್ನು ಹಿಡಿದು ಕೊಂಡು ಸೀಟಿಗೆ ಒರಗದೆ ಸ್ವಲ್ಪ ಮುಂದಾಗಿ ಕುಳಿತುಕೊಂಡ ಅವನ ಪರದಾಟ ನೋಡಿ ಅವಳಿಗೆ ನಗು ಬಂತು. ಅವಳ ಕೈಯಲ್ಲಿದ್ದ ಒಂದು ನೋಟ್ಸ್ ಬುಕ್ ಅವನ ಕಾಲ ಮೇಲೆ ಬಿದ್ದು ಬಿಟ್ಟಿತು. ಅವನು ಬಾಗಿ ಹೆಕ್ಕಿ ಕೊಟ್ಟ, ವೃಂದಾ “ಥ್ಯಾಂಕ್ಸ್” ಅಂದಳು. ಅವನು ನಕ್ಕ ಅಷ್ಟೇ, ಆ ನಿಷ್ಕಳಂಕ ನಗು ನೋಡಿ ವೃಂದಾಳಿಗೆ ಮನಸ್ಸು ಡೋಲಾಯ ಮಾನವಾಯಿತು. ಅವನ ಶರ್ಟಿನಿಂದ ಬರುತ್ತಿದ್ದ ವಿದೇಶಿ ಪರ್ಪ್ಯೂಮಿನ ಪರಿಮಳ ಅವಳಿಗೆ ಹಿತವಾದ ಆನಂದ ನೀಡುತ್ತಿತ್ತು. ಅವನನ್ನು ಮಾತಾಡಿಸಲು ಅವಳ ಮನಸ್ಸು ಹಾತೊರೆಯುತಿತ್ತು. ಆದರೆ “ಮರ್ಯಾದೆ” ಅವಳನ್ನು ತಡೆಯುತಿತ್ತು. ಈ ಡೋಲಾಯಮಾನ ಮನಸ್ಸಿನಿಂದ ಹೊರ ಬರಲಾರದೆ ಕೊನೆಗೂ ಅವಳು ಮೌನಕ್ಕೆ ಶರಣಾದಳು. ಆದರೆ ಹಿಡಿತವಿಲ್ಲದ ಲಗಾಮು ಇಲ್ಲದ ಅವಳ ಮನಸ್ಸು ಮಾತ್ರ ಮೈಲುದ್ದ ಓಡುತಿತ್ತು.

ಒಂದು ದಿನ ವೃಂದಾ ಗೇಟಿನಿಂದ ಹೊರಡುವಾಗ ಅವನು ಅವಳ ಗೇಟಿನ ಬಳಿ ತಲುಪಿದ್ದ. ವಿದೇಶಿ ಸೆಂಟಿನ ಪರಿಮಳ ರಸ್ತೆಯನ್ನು ಆಕ್ರಮಿಸಿತ್ತು. ಕಣ್ಣುಗಳು ಒಂದಾದಾಗ ಅವನು ನಕ್ಕ. ಆ ನಗುವಿನಲ್ಲಿ ಒಂದು ಆತ್ಮೀಯಂತೆಯ ಸೆಳೆತವಿತ್ತು. ನಗುವಿನ ವಿನಿಮಯ ಮುಂದುವರಿಯ ತೊಡಗಿತು. ಬೆಳಗ್ಗಿನ ಬಸ್ಸು ವರೆಗಿನ ದಾರಿ, ನಂತರ ಬಸ್ಸಿನಲ್ಲಿ ಕುಳಿತು ಕೊಂಡು ಹೋಗುವವರೆಗಿನ ಅವಧಿ ವೃಂದಾಳಿಗೆ ಬಹಳ ಮುಖ್ಯವಾಗ ತೊಡಗಿತು. ಹಿತವಾದ ಅವನ ಸಣ್ಣ ನಗು, ಆ ನಡಿಗೆಯಲ್ಲಿ ಇರುವ ಗಾಂಭೀರ್ಯತೆ ಅವಳನ್ನು ಆಕರ್ಷಿಸಿತು. ಪ್ರತೀ ದಿನವೂ ಅವಳ ಬಾಳಿಗೆ ವಸಂತವೇ. ಅವನು ಬಾರದ ದಿನ ಅವಳಿಗೆ ಜೀವನ ಬರುಡಾಗಿ ಕಾಣುತಿತ್ತು. ಅವಳು ನೀರಿನಿಂದ ಹೊರ ತೆಗೆದ ಮೀನಿನಂತೆ ವಿಲವಿಲನೆ ಒದ್ದಾಡುತ್ತಿದ್ದಳು.

ವೃಂದಾಳಲ್ಲಿನ ಬದಲಾವಣೆಯನ್ನು ಅವಳ ತಾಯಿ ಸೂಕ್ಷ್ಮವಾಗಿ ಅವಲೋಕಿಸಿದಳು. ಯಾವಾಗಲೂ ಅಳು ಬುರುಕಿಯಂತೆ ಮುಖ ಗಂಟಿಕ್ಕಿಕೊಂಡಿರುವ ತನ್ನ ಮಗಳನ್ನು ಸರಿಪಡಿಸಲಾರದೆ ಅವಳ ತಾಯಿ ಅವಳನ್ನು ಅವಳಷ್ಟಕ್ಕೇ ಬಿಟ್ಟಿದ್ದಳು. ಬಹುಶಃ ತಂದೆಯಿಲ್ಲದ ತಬ್ಬಲಿತನ ಅವಳನ್ನು ಕಾಡುತ್ತಿರಬಹುದು. ಆದರೆ ಇತ್ತೀಚೆಗೆ ಅವಳಲ್ಲಿ ವಿಶೇಷ ಲವಲವಿಕೆ, ಉತ್ಸಾಹ, ಉಲ್ಲಾಸ, ಚುರುಕುತನ ಕಂಡು ಬರುತ್ತಿತ್ತು. ಇದು ವೃಂದಾಳ ತಾಯಿಗೆ ಖುಷಿ ಕೊಟ್ಟರೂ ಇದರ ಒಳಗಿನ ಮರ್ಮವೇನೆಂದು ಅವಳು ಆಲೋಚಿಸ ತೊಡಗಿದಳು. ತಾನು ಮದುವೆ ಬಗ್ಗೆ ಪ್ರಸ್ತಾಪ ತೆಗೆದಾಗ ಅವಳು ಆಕ್ಷೇಪಣೆ ತೆಗೆಯದೆ ಸುಮ್ಮನೆ ನಕ್ಕಿದ್ದಳು. ಬಹುಶಃ ಯಾರನ್ನೋ ಪ್ರೀತಿಸುತ್ತಿದ್ದಾಳೆಯೇ ಎಂಬ ಅನುಮಾನ ವೃಂದಾಳ ತಾಯಿಯನ್ನು ಕಾಡ ತೊಡಗಿತು. ಇವತ್ತು ರಾತ್ರಿ ಊಟದ ಸಮಯ ಪೀಠಿಕೆ ಹಾಕಬೇಕು ಎಂದು ಅಂದು ಕೊಂಡಳು.

ರಾತ್ರಿ ಊಟದ ಸಮಯ. ಮದುವೆ ವಿಷಯವನ್ನು ಹೇಗೆ ಪ್ರಸ್ತಾಪಿಸುವುದು ಎಂದು ವೃಂದಾಳ ತಾಯಿ ಆಲೋಚಿಸುತ್ತಿರುವಾಗಲೇ ವೃಂದಾ ಮಾತಿಗೆ ಶುರುಮಾಡಿದಳು.

“ಅಮ್ಮಾ, ನಮ್ಮ ಮನೆ ಗೇಟಿನ ಎದುರಿಂದ ದಿನಾಲೂ ಒಬ್ಬ ಯುವಕ ಹೋಗುತ್ತಿದ್ದಾನೆ. ಹೊಸ ಮುಖ. ಬಹುಶಃ ಅಗ್ರಹಾರದಿಂದ ಬರುತ್ತಿರಬೇಕು. ಎಲ್ಲಿಯೋ ಉದ್ಯೋಗದಲ್ಲಿರಬೇಕು. ದಿನಾಲೂ ನನ್ನದೇ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಾರೆ. ತುಂಬಾ ಸಂಭಾವಿತರಂತೆ ಕಾಣುತ್ತಾರೆ.”

ವೃಂದಾಳ ತಾಯಿ ಮಗಳ ಮುಖ ನೋಡಿದಳು. ಅವಳು ಹುರುಪಿನಿಂದ ಹೇಳುತ್ತಿರುವುದನ್ನು ನೋಡಿದರೆ ತೀರಾ ಪರಿಚಿತರ ಬಗ್ಗೆ ಮಾತಾಡಿದಂತೆ ಕಂಡು ಬರುತ್ತಿತ್ತು. ಎಂದೂ ಕಾಣದ ಸಂತಸ ಮಗಳ ಮುಖದಲ್ಲಿ ಕಂಡು ವೃಂದಾಳ ತಾಯಿಗೆ ಒಳಗಿಂದ ಒಳಗೆ ಸಂತೋಷವಾಯಿತು. ಆದರೆ ಅದನ್ನು ಮುಖದಲ್ಲಿ ಹೊರಗೆ ತೋರ್ಪಡಿಸಲಿಲ್ಲ.

“ಯಾವ ಹುತ್ತದಲ್ಲಿ ಏನು ಹಾವಿದೆಯೋ? ಈಗಿನ ಕಾಲದಲ್ಲಿ ಯಾರನ್ನೂ ನಂಬಲಾಗುದಿಲ್ಲ. ತುಂಬಾ ಹುಷಾರಾಗಿರ ಬೇಕಮ್ಮಾ.” ತಾಯಿ ಮಗಳ ಮನಸ್ಸನ್ನು ಕೆದಕ ತೊಡಗಿದಳು.

“ಇಲ್ಲಮಾ, ನಾನು ಕೆಲವು ವಾರಗಳಿಂದ ನೋಡುತ್ತಿದ್ದೇನೆ. ತುಂಬಾ ಒಳ್ಳೆಯವರಂತೆ ಕಾಣುತ್ತಾರೆ. ವೃಂದಾ ಪಟ ಪಟನೆ ಉತ್ತರಿಸಿದಾಗ ಅವಳ ತಾಯಿಗೆ ಆಶ್ಚರ್ಯವಾಯಿತು. ಯಾವಾಗಲೂ ಪುರುಷರನ್ನು ದ್ವೇಷಿಸಿಯೇ ಮಾತಾಡುವ ವೃಂದಾ ಇಂದು ತನ್ನ ವರಸೆ ಬದಲು ಮಾಡಿಕೊಂಡಿದ್ದಾಳೆ. ಇರಲಿ, ಎಲ್ಲಾ ಒಳ್ಳೇದಕ್ಕೆ ಎಂದು ತನ್ನ ಮನಸ್ಸಿನಲ್ಲೇ ಅಂದು ಕೊಳ್ಳುತ್ತಾ ಖುಷಿ ಪಟ್ಟಳು.

“ಅಲ್ಲಾ ವೃಂದಾ, ಆ ಹುಡುಗ ಅಗ್ರಹಾರದಿಂದ ಬರುವುದಾದರೆ ನಮ್ಮ ಸಂಬಂಧಿಕರಾದ ಶ್ಯಾಮ್ ಭಟ್ಟರ ಬಾಡಿಗೆ ಮನೆಗಳಿವೆಯಲ್ಲಾ, ಅಲ್ಲಿಯೇ ಮನೆ ಮಾಡಿರಬೇಕು. ಅವರು ನಮ್ಮವರಿಗಲ್ಲದೆ, ಬೇರೆಯವರಿಗೆ ಮನೆ ಬಾಡಿಗೆಗೆ ಕೊಡುವುದಿಲ್ಲ. ಬೇಕಾದರೆ ಶ್ಯಾಮ್ ಭಟ್ಟರನ್ನೇ ಒಂದು ಮಾತು ವಿಚಾರಿಸಿದರೆ ಆಯಿತು ಬಿಡು.” ತಾಯಿ ಅಕ್ಕರೆಯಿಂದ ಹೇಳಿದಾಗ ವೃಂದಾ ನಕ್ಕು ಸುಮ್ಮನಾದಳು. ವಿಚಾರಿಸಿದರೆ ಒಳ್ಳೇದಿತ್ತು ಎಂದು ಅಮ್ಮನಿಗೆ ಹೇಗೆ ಹೇಳುವುದು ಎಂದು ಮನಸ್ಸಿನಲ್ಲೇ ಅಂದು ಕೊಂಡಳು.

ದಿನಗಳು ಉರುಳಿದುವು. ಪರಿಚಯ ಸ್ನೇಹಕ್ಕೆ ತಿರುಗಲಿಲ್ಲ. ಯಾಕೆಂದರೆ ಮಧುಕರ ಬಹಳ ಸಂಕೋಚ ಸ್ವಭಾವದ ವ್ಯಕ್ತಿಯಾಗಿದ್ದ. ವೃಂದಾಳಿಗೆ ಅವನು ಒಗಟಾಗಿ ಕಾಣ ತೊಡಗಿದ. ಈಗಿನ ಕಾಲದಲ್ಲಿ ಹುಡುಗರು ಬೆರಳು ತೋರಿಸಿದರೆ ಸಾಕು, ಇಡೀ ದೇಹವನ್ನೇ ನುಂಗುತ್ತಾರೆ. ಅಂಥದರಲ್ಲಿ ಈ ಹುಡುಗ ಜಾಸ್ತಿ ಮಾತಾಡುವ ಪ್ರಯತ್ನವನ್ನೇ ಮಾಡಲಿಲ್ಲ. ನಕ್ಕರೆ ನಗುತ್ತಾನೆ. ಇಲ್ಲದಿದ್ದರೆ ಸುಮ್ಮನಿದ್ದು ಬಿಡುತ್ತಾನೆ. ಬೆಳಿಗ್ಗೆ ಮನೆಯಿಂದ ಹೊರಡುವಾಗ ಅವನೊಂದಿಗೆ ಮಾತಾಡಬೇಕು ಎಂದು ಲೆಕ್ಕ ಹಾಕಿ ಕೊಂಡು ಉಲ್ಲಾಸದಿಂದ ವೃಂದಾ ಹೊರಟರೆ ಅವನ ನಿರ್ಲಿಪ್ತತೆ ಅವಳನ್ನು ಮಂಕುಗೊಳಿಸುತ್ತಿತ್ತು.

ಕೆಲವು ದಿವಸಗಳಿಂದ ಅವನು ಬೆಳಗ್ಗಿನ ಬಸ್ಸಿಗೆ ಬರಲಿಲ್ಲ. ಅವನ ಗೈರು ಹಾಜರಿಯಿಂದ ವೃಂದಾಳಿಗೆ ಕಸಿವಿಸಿಯಾಯಿತು. ಏನಾದರೂ ಜ್ವರ ಬಂದಿರಬಹುದೇ? ಇಲ್ಲಾ ಕೆಲಸಕ್ಕೆ ರಾಜಿನಾಮೆ ನೀಡಿರಬಹುದೇ? ಎಂದೆಲ್ಲಾ ಆಲೋಚನೆಯಿಂದ ಅವಳು ಕುಗ್ಗಿ ಹೋದಳು. ಅವಳಿಗೆ ಊಟ ಸೇರಲಿಲ್ಲ. ನಿದ್ರೆ ಸರಿಯಾಗಿ ಬರುತ್ತಿರಲಿಲ್ಲ. ರಾತ್ರಿ ಎಚ್ಚರವಾದಾಗಲೆಲ್ಲಾ ಅವಳಿಗೆ ಆ ಹುಡುಗನ ಮುಖವೇ ಕಾಣುತಿತ್ತು. ಯಾಕೆ ತನಗೆ ಹೀಗಾಗುತ್ತದೆ? ತನಗೆ ಸಂಬಂಧವಿಲ್ಲದ ತನ್ನೊಂದಿಗೆ ಹೆಚ್ಚು ಬೆರೆಯದ ಈ “ಬುದ್ಧ”ನ ಬಗ್ಗೆ ತನಗೆ ಯಾಕೆ ಈ ಮಮಕಾರ? ಅವನಿಗೆ ಏನಾಗಿರಬಹುದು? ಏನಾದರೂ ಅವಘಡವಾಗಿ ಆಸ್ಪತ್ರೆ ಸೇರಿರಬಹುದೇ? ಛೇ! ಏನು ಕೆಟ್ಟ ಆಲೋಚನೆ! ಹಾಗಾಗದಿರಲಿ, ಅವನು ಸುಖವಾಗಿರಲಿ. ವೃಂದಾ ಮನಸ್ಸಿನಲ್ಲೇ ದೇವರನ್ನು ಸ್ತುತಿಸಿ ಕೊಂಡಳು.

ಅಂದು ಭಾನುವಾರ, ಆದರೆ ವೃಂದಾಳಿಗೆ ಸ್ಕೂಲಿನಲ್ಲಿ “ಶಿಕ್ಷಕರ ವಿಶೇಷ ಸಭೆ” ಇದ್ದುದರಿಂದ ಬೆಳಿಗ್ಗೆನೇ ಸ್ಕೂಲಿಗೆ ಹೋಗಿದ್ದಳು. ಅಂದೇ ಆ ಹುಡುಗ ವೃಂದಾಳ ಮನೆಯ ಗೇಟಿನ ಹತ್ತಿರ ಪ್ರತ್ಯಕ್ಷನಾದ. ಗೇಟು ದಾಟಿ ಮನೆಯ ಅಂಗಳಕ್ಕೆ ಕಾಲಿಟ್ಟ ಅಪರಿಚಿತ ವ್ಯಕ್ತಿಯನ್ನು ನೋಡಿದ ವೃಂದಾಳ ತಾಯಿಗೆ ಆಶ್ಚರ್ಯವಾಯಿತು. ಬಹುಶಃ ವೃಂದಾ ಹೊಗಳುತ್ತಿದ್ದ ಹುಡುಗ ಇವನಿರಬಹುದೇ ಎಂದು ವೃಂದಾಳ ತಾಯಿಗೆ ಆಲೋಚನೆ ಬರದೆ ಇರಲಿಲ್ಲ. “ಏನು ಎಂಬಂತೆ ಕಣ್ಣಲ್ಲೇ ಪ್ರಶ್ನಿಸಿದಳು.

“ನಾನು ಇಲ್ಲೇ ಅಗ್ರಹಾರದಲ್ಲಿ ವಾಸಿಸುತ್ತಿದ್ದೇನೆ. ಅವರೊಂದಿಗೆ ಸ್ವಲ್ಪ ಮಾತಾಡಬೇಕಿತ್ತು. ಅವನು ಬಹಳ ನಯ ವಿನಯದಿಂದ ಹೇಳಿದಾಗ ವೃಂದಾಳ ತಾಯಿಗೆ ಅವನು ಅದೇ ಹುಡುಗ ಎಂಬುದರಲ್ಲಿ ಸಂಶಯ ಉಳಿಯಲಿಲ್ಲ. ಅವನನ್ನು ಆಪಾದಮಸ್ತಕ ನೋಡಿದ ಅವಳಿಗೆ ಈ ಹುಡುಗ ವೃಂದಾಳಿಗೆ ಸರಿಯಾದ ಜೋಡಿ ಎಂದು ಭಾವಿಸಿ ತೃಪ್ತಿ ಪಟ್ಟಳು. ಪರವಾಗಿಲ್ಲ. ನನ್ನ ಮಗಳು ಸರಿಯಾದ ಆಯ್ಕೆಯನ್ನೇ ಮಾಡಿದ್ದಾಳೆ ಎಂದು ಕೊಂಡು ಅವನನ್ನು ಮನೆಯೊಳಗೆ ಸ್ವಾಗತಿಸಿದಳು. “ಅವಳಿಲ್ಲ, ಸ್ಕೂಲಿಗೆ ಹೋಗಿದ್ದಾಳೆ, ಸಂಜೆ ಬರಬಹುದು, ಒಳಗೆ ಬನ್ನಿ.” ವೃಂದಾಳ ತಾಯಿ ಆಗುಂತಕನನ್ನು ಉಪಚರಿಸಿದಳು.

“ಇಲ್ಲಮ್ಮಾ, ನನಗೆ ತುಂಬಾ ಕೆಲಸವಿದೆ. ಸಂಜೆ ಬರುತ್ತೇನೆ.” ಅವನು ವೃಂದಾಳ ತಾಯಿಯ ಉತ್ತರಕ್ಕೂ ಕಾಯದೆ ಹಿಂತಿರುಗಿ ಹೊರಟು ಹೋದ. ಅವನಂದ “ಅಮ್ಮಾ” ಶಬ್ದ ಅವಳ ಮನಸ್ಸನ್ನು ಹೊಕ್ಕಿತು. ಎಂತಹ ಸಂಸ್ಕಾರವಂತ. ವೃಂದಾ ಮಧ್ಯಾಹ್ನ ಊಟಕ್ಕ ಬರುತ್ತೇನೆ ಅಂದಿದ್ದಳು. ಸಂಜೆಗೆ ಆ ಹುಡುಗ ಬರುತ್ತಾನೆ. ಸಂಜೆಯ ಚಹಾಕ್ಕೆ ಏನಾದರೂ ವಿಶೇಷ ತಿಂಡಿ ಮಾಡಬೇಕು, ಎಂದುಕೊಂಡು ಅವಳು ಅಡುಗೆ ಕೋಣೆಗೆ ಹೊಕ್ಕಳು.

ಮಧ್ಯಾಹ್ನ ಮನೆಗೆ ಬಂದ ವೃಂದಾಳಿಗೆ ಅವನು ಬಂದ ಸುದ್ದಿ ತಿಳಿದು ಸಂತೋಷವಾಯಿತು. ಅವಳು ಅವಸರದಲ್ಲಿ ಊಟ ಮುಗಿಸಿ, ತನ್ನ ರೂಮಿಗೆ ಹೋಗಿ ಅಲಂಕಾರ ಮಾಡ ತೊಡಗಿದಳು. ಅವಳಿಗೆ ಅವನ ಆಗಮನ ಆಶ್ಚರ್ಯವಾಗಿತ್ತು, ತನಗೆ ಅತೀ ಇಷ್ಟವಾದ ಉಡುಗೆಯನ್ನು ತೊಟ್ಟು ಕೊಂಡಳು. ಕನ್ನಡಿಯ ಮುಂದೆ ನಿಂತು ಕೊಂಡು ತನ್ನ ಸೌಂದರ್ಯವನ್ನು ತಾನೇ ನೋಡಿಕೊಂಡು ಸಂತೋಷ ಪಟ್ಟುಕೊಂಡಳು. ಅವನು ಅಚಾನಕ್ ನನ್ನ ಮನೆಗೆ ಯಾಕ ಬರುತಿದ್ದಾನೆ? ಇಷ್ಟು ದಿನ ಎಲ್ಲಿ ಹೋಗಿದ್ದ? ಬಹುಶಃ ನನ್ನ ಕುಟುಂಬದ ಬಗ್ಗೆ ಅರಿತುಕೊಳ್ಳಲು ಬರುತ್ತಿರಬೇಕು. ತುಂಬಾ ನಾಚಿಕೆ ಸ್ವಭಾವದವನು. ಇಲ್ಲದಿದ್ದರೆ ಇದನ್ನೆಲ್ಲಾ ನೇರವಾಗಿ ನನ್ನ ಹತ್ತಿರವೇ ಕೇಳಬಹುದಿತ್ತಲ್ಲಾ? ಇಲ್ಲ, ಅವನು ಕೇಳುವುದಿರಲಿ, ಮಾತೇ ಆಡಲಿಲ್ಲವೆಂದ ಮೇಲೆ ವೈಯಕ್ತಿಕ ವಿಚಾರಕ್ಕೆ ಕೈ ಹಾಕುವುದು ಸಾಧ್ಯವಿಲ್ಲದ ಮಾತು. ನಾನು ಕೂಡಾ ಅವನನ್ನು ಕಂಡು ಒಂದು ಮುಗಳ್ನಗು ಕೊಡುವುದು ಬಿಟ್ಟರೆ ಮತ್ತೇನು ಮಾಡಿರುತ್ತೇನೆ? ಸುಮ್ಮನೆ ಮನಸ್ಸಿನಲ್ಲೇ ಮಂಡಿಗೆ ತಿಂದದ್ದು ಜಾಸ್ತಿಯಾಯಿತು. ಇಲ್ಲ, ಇವತ್ತು ಹಾಗಾಗ ಬಾರದು. ಅವನ ಬಗ್ಗೆ, ಅವನ ಕುಟುಂಬದ ಬಗ್ಗೆ ಎಲ್ಲಾ ವಿಚಾರಿಸಬೇಕು. ಅವನ ಮನೆಯವರನ್ನು ನಮ್ಮ ಮನೆಗೆ ಆಮಂತ್ರಿಸಬೇಕು. ಅವನ ಹವ್ಯಾಸ, ಉದ್ಯೋಗ ಇತ್ಯಾದಿಗಳ ಬಗ್ಗೆ ವಿಚಾರಿಸಬೇಕು. ಮನ ಬಿಚ್ಚಿ ಮಾತಾಡಬೇಕು. ನೀವು ಶ್ಯಾಮ್ ಭಟ್ಟರ ಬಾಡಿಗೆ ಮನೆಯಲ್ಲಿರುದಲ್ಲಾ ಎಂದು ಕೇಳಬೇಕು. ಹೌದು ಅಂದರೆ ಮತ್ತೆ ಸಂಶಯವೇ ಇಲ್ಲ, ನಮ್ಮವರೇ. ಛೇ! ಅಮ್ಮ ಸ್ವಲ್ಪ ವಿಚಾರಿಸಬೇಕಿತ್ತು.

ವೃಂದಾ ಅಡುಗೆ ಕೋಣೆಗೆ ಬಂದು ಅಮ್ಮನ ಹತ್ತಿರ ನಿಂತು ಕೊಂಡಳು. ಮಗಳು ಅಲಂಕಾರಗೊಂಡು ವಿಶೇಷವಾದ ಉಡುಗೆ – ತೊಡುಗೆ ತೊಟ್ಟಿದ್ದನ್ನು ಕಂಡು ತಾಯಿ ಒಳಗಿಂದಲೇ ಖುಷಿಗೊಂಡಳು. ಅವಳ ಕನಸು ನೆರವೇರಲಿ ದೇವರೇ ಎಂದು ಮನಸ್ಸಿನಲ್ಲೇ ದೇವರನ್ನು ಬೇಡಿ ಕೊಂಡಳು.

“ಏನಮ್ಮಾ, ಅವರು ಅಗ್ರಹಾರದಲ್ಲಿ ಎಲ್ಲಿ ಮನೆ ಮಾಡಿದ್ದು ಎಂದು ವಿಚಾರಿಸ ಬಹುದಿತ್ತಲ್ಲಾ? ಏನು ವಿಷಯ ಮಾತಾಡಲಿಕ್ಕಿದೆ ಎಂದು ಕೂಡಾ ಕೇಳಬಹುದಿತ್ತು. ವೃಂದಾ ಬಹಳ ಮುಜುಗರದಿಂದ ತಾಯಿಯನ್ನು ಕೇಳಿದಳು.

“ಇಲ್ಲ ಮಗೂ, ನಾನೂ ಹಳೇ ಕಾಲದವಳು, ಅಪರಿಚಿತರೊಂದಿಗೆ ಅಷ್ಟೆಲ್ಲಾ ವಿಷಯವನ್ನು ಹೇಗೆ ಮಾತಾಡುವುದು? ಮೇಲಾಗಿ ಆ ಹುಡುಗ ಮನೆ ಒಳಗೆ ಬರಲೇ ಇಲ್ಲ. ಹೇಗೂ ನಿನ್ನನ್ನು ವಿಚಾರಿಸಲು ಬರುತಿದ್ದಾನಲ್ಲಾ, ನೀನೇ ಎಲ್ಲಾ ವಿಚಾರಿಸಿಕೋ.” ತಾಯಿ ನಗುತ್ತಾ ಅಡುಗೆ ಕೋಣೆಗೆ ನಡೆದಳು. ವೃಂದಾ ನಗುತ್ತಾ ಮನೆಯ ವರಾಂಡದಲ್ಲಿ ನಡೆದಾಡ ತೊಡಗಿದಳು. ನಿಮಿಷಕೊಮ್ಮೆ ಗೇಟಿನ ಕಡೆಗೆ ಕಣ್ಣಾಡಿಸುತ್ತಿದ್ದಳು. ಅವನೊಡನೆ ಹೇಗೆ ಮಾತಾಡುವುದು? ಏನನ್ನು ಕೇಳುವುದು? ಬಹಳ ಜಾಗರೂಕತೆಯಿಂದ ಮಾತಾಡಬೇಕು. ಅವಸರ ಮಾಡಬಾರದು. ಅವನ ಪ್ರಶ್ನೆಯನ್ನು ಅಳೆದಳೆದು, ನಿಧಾನವಾಗಿ ಆಲೋಚಿಸಿ ಉತ್ತರಿಸಬೇಕು. ಅವನು ಬಂದ ಕೂಡಲೇ ನಾನೇ ಅವನನ್ನು ಸ್ವಾಗತಿಸಬೇಕು. ಅಮ್ಮ ಆ ಮೇಲೆ ಬರಲಿ. ವೃಂದಾಳ ತಲೆ ತುಂಬಾ ಏನೇನೋ ಸಾವಿರ ಆಲೋಚನೆಗಳು. ಈ ಆಲೋಚನೆಗಳೊಂದಿಗೆ ಅವಳು ವರಾಂಡದ ಸುತ್ತಲೂ ನಡೆದಾಡುತ್ತಿದ್ದಳು.

ಗೇಟಿನ ಶಬ್ದವಾಯಿತು. ಹೌದು, ಅವನು, ಗೇಟಿನ ಬಳಿ ಪ್ರತ್ಯಕ್ಷನಾದ. ವೃಂದಾಳ ಎದೆ ಬಡಿತ ಜಾಸ್ತಿಯಾಯಿತು. ತಾನೊಬ್ಬಳು ಶಿಕ್ಷಕಿಯಾಗಿ ಯಾಕೆ ಈ ರೀತಿ “ನರ್ವಸ್” ಆಗುತ್ತಿದ್ದೇನೆ ಎಂದುಕೊಂಡು ಧೈರ್ಯ ತೆಗೆದು ಕೊಂಡಳು. ವರಾಂಡದ ಕೆಳಗಿಳಿದು ನಗುತ್ತಾ ಅವನನ್ನು ಸ್ವಾಗತಿಸಿದಳು.

“ಬನ್ನಿ…. ಬನ್ನಿ…. ಕುಳಿತು ಕೊಳ್ಳಿ” ವೃಂದಾ ತಡವರಿಸುತ್ತಾ ಅಂದಳು. ಅವನೆದರು ವೃಂದಾ ಮೊದಲ ಬಾರಿ ಮಾತಾಡುವುದಾಗಿತ್ತು.

ಅವನು ಕುಳಿತು ಕೊಂಡ. ವೃಂದಾ ಅವನ ಪಕ್ಕದಲ್ಲೇ ನಿಂತು ಕೊಂಡಳು. ವರಾಂಡದ ಒಳಗೆಲ್ಲಾ ವಿದೇಶಿ ಸೆಂಟಿನ ವಾಸನೆ, ವೃಂದಾ ಅವನನ್ನೊಮ್ಮೆ ಗಮನಿಸಿದಳು. ಎಡಕ್ಕೆ ಬೈತಲೆ ಹಾಕಿ ಅಡ್ಡ ಬಾಚಿದ ಗುಂಗುರು ತಲೆಕೂದಲು, ಕ್ಲೀನ್ ಶೇವ್ ಮಾಡಿದ ದುಂಡಗಿನ ಬಿಳಿಮುಖ, ಬಲ ಕನ್ನೆಯಲ್ಲೊಂದು ಸಣ್ಣ ಗುಳಿ, ಇನ್ಶರ್ಟ್ ಮಾಡಿದ ತಿಳಿ ನೀಲಿ ಬಣ್ಣದ ಶರ್ಟು, ಅದಕ್ಕೊಪ್ಪುವ ಗರಿಗರಿಯಾದ ಪ್ಯಾಂಟು, ಕಪ್ಪು ಬೆಲ್ಟ್, ಬೆಲೆಬಾಳುವ ಮಿರಿಮಿರಿ ಮಿರುಗುವ ಶೂ, ಎಲ್ಲವೂ ಅವನಿಗೆ ಒಪ್ಪುತಿತ್ತು. ಅವನು ತನ್ನ ಪ್ಯಾಂಟಿನಿಂದ ಕರ್ಚಿಪು ಹೊರ ತೆಗೆದು ತನ್ನ ಹಣೆಯ ಮೇಲಿನ ಬೆವರನ್ನು ಒರಸಿಕೊಂಡ. ಸ್ವಲ್ಪ
ಹೊತ್ತು ಮೌನ.

“ನಾನು ಮಧುಕರ. ಇಲ್ಲಿಯೇ ಅಗ್ರಹಾರದ ಶ್ಯಾಮ್ ಭಟ್ಟರ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇನೆ.

ವೃಂದಾ ಸಂತೋಷ ತಡೆಯಲಾರದೆ ಒಮ್ಮೆಲೇ ಅಂದು ಬಿಟ್ಟಳು.

“ಹೌದೌದು. ಶ್ಯಾಮ್ ಭಟ್ಟರು ನಮ್ಮ ಸಂಬಂಧಿಕರು, ಅವರು ನಮ್ಮವರಿಗಲ್ಲದೆ ಬೇರೆ ಯಾರಿಗೂ ಮನೆ ಬಾಡಿಗೆಗೆ ಕೊಡುವುದಿಲ್ಲ.”

“ಹಾಗಾದರೆ ನಾವೆಲ್ಲಾ ಸಂಬಂಧಿಕರಾದೆವು” ಅವನು ನಗುತ್ತಾ ಅಂದಾಗ ವೃಂದಾ ನಾಚಿಕೊಂಡಳು. ಸಮಯ ಬಂದಾಗ ಅದೃಷ್ಟ ಮನೆ ಬಾಗಿಲಿಗೇ ಬರುತ್ತದೆ ಎಂದು ಅಮ್ಮ ಆಗಾಗ್ಗೆ ಹೇಳುವ ಮಾತು ಅವಳಿಗೆ ನೆನಪಾಯಿತು.

“ನಿಮಗೆ ಕುಡಿಯಲು ಟೀ, ಕಾಫಿ ಏನು ತರಲಿ?” ಬಹಳ ವಿನಯದಿಂದ ವೃಂದಾ ಕೇಳಿದಳು.

“ಬೇಡ, ನಾನು ಟೀ, ಕಾಫೀ ಕುಡಿಯುದಿಲ್ಲ.” ಅವನಂದ. ವೃಂದಾಳಿಗೆ ಆಶ್ಚರ್ಯವಾಯಿತು. ನಾನು ಕೂಡಾ ಟೀ, ಕಾಫಿ ಕುಡಿಯುವುದಿಲ್ಲ. ನಮ್ಮಿಬ್ಬರ ಸ್ವಭಾವವೂ ತಾಳ ಹೊಂದುತ್ತದೆ ಎಂದು ನೆನೆದು ಸಂತೋಷಗೊಂಡಳು. ಸ್ವಲ್ಪ ಹೊತ್ತು ಮೌನ, ಅವನು ಮೌನ ಮುರಿದನು.

“ನಿಮ್ಮಿಂದ ನನಗೊಂದು ಉಪಕಾರವಾಗಬೇಕು.” ಅವನು ಬಹಳ ವಿನಮ್ರತೆಯಿಂದ ಅವಳ ಮುಖ ನೋಡಿದ. ವೃಂದಾ “ಏನು” ಎಂಬಂತೆ ಅವನನ್ನು ದೃಷ್ಟಿಸಿದಳು. ಒಂದು ಉಪಕಾರವೇಕೆ, ತನ್ನ ಜೀವವನ್ನೇ ಕೊಡಲು ತಯಾರಿದ್ದೇನೆ ಎಂದು ಅವಳ ಮನಸ್ಸು ಹೇಳುತಿತ್ತು.

“ನನ್ನ ಮಗಳು ಎರಡನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ಆದರೆ ಓದು ಬರಹದಲ್ಲಿ ಸ್ವಲ್ಪ ಹಿಂದಿದ್ದಾಳೆ. ನನ್ನ ಹೆಂಡತಿ ಎರಡನೇ ಹೆರಿಗೆಗೆ ತಾಯಿ-ಮನೆಗೆ ಹೋಗಿದ್ದಾಳೆ. ನನಗಂತೂ ಕಂಪನಿ ಕೆಲಸದಲ್ಲಿ ತಿರುಗಾಟವೇ ಜಾಸ್ತಿಯಾಗುತ್ತದೆ. ದಯವಿಟ್ಟು ನಿಮ್ಮ ಬಿಡುವಿನ ಸಮಯದಲ್ಲಿ ಇಂಗ್ಲೀಷ್ ಮತ್ತು ಲೆಕ್ಕ ಪಾಠವನ್ನು ಅವಳಿಗೆ ಹೇಳಿಕೊಡಬಹುದೇ? ಎಂದು ಕೇಳಲು ಬಂದೆ.”

ವೃಂದಾ ತಲೆ ಸುತ್ತು ಬಂದಂತಾಗಿ ಅಲ್ಲಿಯೇ ಇದ್ದ ಕುರ್ಚಿ ಮೇಲೆ ದಿಢೀರನೆ ಕುಳಿತಳು. ಅಡುಗೆ ಕೋಣೆಯಿಂದ ಇವರ ಮಾತುಗಳನ್ನು ಕೇಳಿಸಿಕೊಂಡ ವೃಂದಾಳ ತಾಯಿ ಗರಬಡಿದವರಂತೆ ಸೌಟು ಕೈಯಲ್ಲೇ ಹಿಡಿದುಕೊಂಡು ನಿಂತು ಬಿಟ್ಟರು.

ವಡೆ ಕರಿದು ಹೋದ ವಾಸನೆ ನಿಧಾನವಾಗಿ ವರಾಂಡವನ್ನು ಆವರಿಸಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಸ್ತಕ್ಷೇಪ
Next post ಸಿರಿಗೊಂಬೆ

ಸಣ್ಣ ಕತೆ

 • ಅಜ್ಜಿಯ ಪ್ರೇಮ

  ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

 • ಆ ರಾಮ!

  ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

 • ದಿನಚರಿಯ ಪುಟದಿಂದ

  ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

 • ದಾರಿ ಯಾವುದಯ್ಯಾ?

  ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

 • ಸಿಹಿಸುದ್ದಿ

  ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

cheap jordans|wholesale air max|wholesale jordans|wholesale jewelry|wholesale jerseys