ವಾಸ್ತವತೆ ಮತ್ತು ಆದರ್ಶ

ವಾಸ್ತವತೆ ಮತ್ತು ಆದರ್ಶ

ಕವಿ ವರ್ಡ್ಸ್‌ವರ್ತ್‌ ತನ್ನ ಮಿತ್ರ ಕೋಲ್‌ರಿಜ್‌ಗೋಸ್ಕರ ಬರೆದ ಸುದೀರ್ಘ ಕವಿತೆಯೊಂದಿದೆ; Preludes (ಆಲಾಪನೆಗಳು) ಎಂಬ ಹೆಸರಿನಲ್ಲಿ ವರ್ಡ್ಸ್‌ವರ್ತ್‌ನ ಮರಣಾನಂತರ ಇದು ಪ್ರಕಟವಾಯಿತು. ಆತ್ಮಕಥನರೂಪದ ಈ ಕವಿತೆಯಲ್ಲಿ ಕವಿ ತನ್ನ ಬಾಲ್ಯ ಮತ್ತು ಯೌವನದ ಕಾವ್ಯಾನುಭವಗಳನ್ನು ವರ್ಣಿಸುತ್ತಾನೆ. ಇದರ ಆರನೆಯ ಸರ್ಗದಲ್ಲೊಂದು ಘಟನೆ ಬರುತ್ತದೆ: ಲಂಡನಿನ ಜನನಿಬಿಡ ಬೀದಿಯಲ್ಲಿ ಸಾಗುತ್ತ ವರ್ಡ್ಸ್‌ವರ್ತ್‌ಗೆ ಗೋಡೆಬದಿಗೆ ಆತು ನಿಂತ ಕುರುಡ ಭಿಕ್ಷುಕನೊಬ್ಬ ಕಾಣಿಸುತ್ತಾನೆ; ಈ ಭಿಕ್ಷುಕನ ಕುತ್ತಿಗೆಗೆ ಒಂದು ಬರಹ ನೇತು ಹಾಕಿದೆ, ಹಾಗೂ ಅದರಲ್ಲಿ ಆತನ ಕುರಿತಾದ ವಿವರಗಳಿವೆ. ಅವನ ನಿಶ್ಚಲವಾದ ನಿಲುವು, ನೆಟ್ಟ ಮುಖ ಮತ್ತು ದೃಷ್ಪಿಯಿಲ್ಲದ ಕಣ್ಣುಗಳನ್ನು ನೋಡುತ್ತ ಕವಿಗೆ ಬೇರೊಂದು ಲೋಕ ತನ್ನನ್ನು ಛೇಡಿಸುವಂತೆ ಅನಿಸುತ್ತದೆ. ಇದರಲ್ಲೇನು ವಿಶೇಷ ಎಂದು ಕೇಳಬಹುದು. ಯಾಕೆಂದರೆ ಇದು ನಾವು ದಿನವೂ ಕಾಣುವ ದೃಶ್ಯ; ಮತ್ತು ಕೆಲವರಿಗಾದರೂ ಕವಿ ವರ್ಡ್ಸ್‌ವರ್ತ್‌ಗೆ ಅನಿಸಿದಂಥ ಇನ್ನೊಂದು ಲೋಕದ ಛೇಡಿಕೆಯ ಅನುಭವವೂ ಆಗಬಹುದು. ಆದರೆ ಅಷ್ಟಕ್ಕೋಸ್ಕರ ನಮ್ಮ ಕೆಲಸ ಮರೆತು ನಾವು ಅಲ್ಲಿ ನಿಲ್ಲುವುದಕ್ಕಾಗುತ್ತದೆಯೇ? ಎಲ್ಲಾ ಬಡವರನ್ನೂ ಉಣ್ಣಿಸಿದ ಮೇಲೆಯೇ ನಾನೂ ನನ್ನ ಸಂಸಾರವೂ ಉಣ್ಣುವುದು ಎಂದು ಉಪವಾಸ ಕುಳಿತವರು ಇತಿಹಾಸದಲ್ಲಿ ಎಲ್ಲಿಯೂ ಕಾಣಿಸುವುದಿಲ್ಲ. ಆದರೆ ಆದರ್ಶಕ್ಕಾಗಿ ಎಲ್ಲವನ್ನೂ ಕಳಕೊಂಡವರೂ ಪ್ರಾಣತ್ಯಾಗ ಮಾಡಿದವರೂ ಇತರರ ಪ್ರಾಣ ತೆಗೆದವರೂ ಇಲ್ಲದೆಯೂ ಇಲ್ಲ.

ಲೋಕವನ್ನೇ ಪ್ರೀತಿಸುತ್ತಿದ್ದ ಮಹಾತ್ಮಾ ಗಾಂಧಿ ಯಾರನ್ನೂ ನಿಜಕ್ಕೂ ಪ್ರೀತಿಸಲಿಲ್ಲ ಎನ್ನುತ್ತಾನೆ ಎರಿಕ್ ಎರಿಕ್ಸನ್. ಈ ಎರಿಕ್ಸನ್ ಗಾಂಧೀಜಿಯ ಬಗ್ಗೆ ಬೃಹತ್ ಗ್ರಂಥವೊಂದನ್ನು ಬರೆದಾತ. ಗಾಂಧೀಜಿಯನ್ನು ಕಾಣಲು ಭಾರತಕ್ಕೆ ಬಂದು ಸ್ವಲ್ಪ ಕಾಲ ಇದ್ದವ. ಎಲ್ಲರನ್ನೂ ಪ್ರೀತಿಸುವಾತ ಯಾರನ್ನೂ ಪ್ರೀತಿಸುವುದಿಲ್ಲ. ಎನ್ನುವ ಮಾತಿನ ಸಾದೃಶ್ಯ ಇದು. ದಕ್ಷಿಣ ಆಫ್ರಿಕದ ಪ್ರಾಯೋಗಿಕ ಕಾಲೊನಿಯಲ್ಲಿ ಸಾರ್ವಜನಿಕ ಶೌಚಾಲಯವನ್ನು ಶುಚಿಗೊಳಿಸಲು ಒಪ್ಪದ ಕಸ್ತೂರ್ ಬಾ ಅವರ ಮೇಲೆ ಗಾಂಧೀಜಿ ಸಿಟ್ಟುಗೊಂಡು ಆಕೆಯನ್ನು ಹೊರಹಾಕಲೂ ಸಿದ್ದರಾಗಿದ್ದರು. ಇದರ ಅರ್ಥ ಗಾಂಧೀಜಿಗೆ ಬಾ ಅವರ ಮೇಲೆ ಪ್ರೀತಿಯಿರಲಿಲ್ಲ ಎಂದಲ್ಲ; ಆದರೆ ತಮ್ಮ ತತ್ವದ ಮುಂದೆ ಇತರ ಯಾರೂ ಹೆಚ್ಚಿನವರಾಗಿರಲಿಲ್ಲ. ಈ ಅರ್ಥದಲ್ಲಿ ಗಾಂಧೀಜಿ ಒಬ್ಬ ಕಟ್ಟಾವಾದಿಯೇ. ಅವರು ಅಹಿಂಸೆಯನ್ನು ಎತ್ತಿಹಿಡಿದರೂ ಅವರ ತತ್ವನಿಷ್ಠೆಯ ಕಠೋರತೆ ಹಿಂಸೆಯ ಅಂಚನ್ನು ತಲಪುವ ಹಾಗೆ ಕಾಣುತ್ತದೆ. ಯಾಕೆಂದರೆ ಯಾವುದೇ ಕಾರಣಕ್ಕೆ ಇನ್ನೊಬ್ಬನ ಮೇಲೆ ಒತ್ತಾಯ ಹೇರುವುದು ಕೂಡಾ ಕಟ್ಟಾವಾದವೇ ಆಗುತ್ತದೆ. ಧರ್ಮ, ನೀತಿ ಹಾಗೂ ರಾಜಕೀಯಗಳಲ್ಲಿ ಪ್ರವರ್ತಿಸುವ ಮಂದಿಯಲ್ಲಿ ಇಂಥ ಕಠೋರತೆಯನ್ನು ಹೆಚ್ಚಾಗಿ ಕಾಣುತ್ತೇವೆ. ಭಕ್ತಿಯ ನಶೆಯಲ್ಲಿ “ಭಕ್ತ” ಕುಂಬಾರ ತನ್ನ ಕಂದನನ್ನೇ ತುಳಿದು ಕೊಂದ. ಸತ್ಯ ಹರಿಶ್ಚಂದ್ರನೆಂದೇ ಹೆಸರಾದ ರಾಜಾ ಹರಿಶ್ಚಂದ್ರ ಸತ್ಯವನ್ನು ಎತ್ತಿಹಿಡಿಯುವುದಕ್ಕಾಗಿ ರಾಜ್ಯ, ಹೆಂಡತಿ ಮಗನನ್ನು ಒಂದೊಂದಾಗಿ ತೊರೆದ. ಭಾರತೀಯರ ಆದರ್ಶಪುರುಷನಾದ ಶ್ರೀರಾಮ ಕೂಡಾ ಆದರ್ಶವನ್ನು ಪಾಲಿಸುವುದಕ್ಕಾಗಿ ತಾನು ಬಹುವಾಗಿ ಪ್ರೀತಿಸುತ್ತಿದ್ದ ಸೀತೆಯನ್ನೇ ರಾಜ್ಯದಿಂದ ಹೊರಹಾಕಿದ. ಇಂಥ ಆದರ್ಶ ಪರಿಪಾಲನೆ ಕೇವಲ ಭಾರತೀಯ ಸಂಸ್ಕೃತಿಗೆ ಮಾತ್ರವೇ ಸೀಮಿತವಾದ ವಿಚಾರವೂ ಅಲ್ಲ. ಹಳೆ ಒಡಂಬಡಿಕೆಯ ಪ್ರಕಾರ ಅಬ್ರಾಹಂ ದೇವರಿಗಿತ್ತ ಮಾತನ್ನು ಉಳಿಸಲು ತನ್ನ ಮಗನನ್ನೇ ಬಲಿಕೊಡಲು ತಯಾರಾಗುತ್ತಾನೆ. ಇಂಥ ಆದರ್ಶ ಪರಿಪಾಲನೆಯನ್ನು ಕಟ್ಟುನಿಟ್ಟಾಗಿ ಆಚರಿಸುವ ಕತೆಗಳು, ಘಟನೆಗಳು ಇತಿಹಾಸದ ಉದ್ದಕ್ಕೂ ಎಲ್ಲಾ ಸಂಸ್ಕೃತಿಗಳಲ್ಲೂ ಪಚಲಿತವಿರುವುದನ್ನು ಕಾಣಬಹುದು.

ನೈತಿಕತೆಯ ಕುರಿತು ಇಮ್ಮಾನ್ಯುವೆಲ್ ಕಾಂಟ್‌ನ ಸುಪ್ರಸಿದ್ಧವಾದ ಮಾತೊಂದು ಇದೆ: ‘ಇರೋದು ಒಂದೇ ಒಂದು ಪ್ರಮೇಯ; ಅದೆಂದರೆ: ಮನುಷ್ಯ ತಾನು ಯಾವ ತತ್ವದ ಮೇಲೆ ವರ್ತಿಸಬೇಕೆಂದರೆ ಅದೇ ಸಮಯಕ್ಕೆ ಅದೊಂದು ಸಾರ್ವತ್ರಿಕ ನ್ಯಾಯವೂ ಆಗುವುದನ್ನು ಇಚ್ಛಿಸುವಂತೆ.’ ಇದು ನೀನು ನಿನ್ನ ನೆರೆಯವನು ನಿನಗೆ ಏನು ಮಾಡಲು ಬಯಸುವಿಯೋ ಅದನ್ನೇ ಅವನಿಗೂ ಮಾಡು ಎಂಬ ಕ್ರೈಸ್ತವಾಣಿಯ ತಾತ್ವಿಕ ರೂಪ. ಎಂದರೆ ಸರ್ವಸಮನಾದ ಒಂದು ನ್ಯಾಯವೆನ್ನುವುದಿದೆ; ಅದಕ್ಕೆ ಅನುಗುಣವಾಗಿ ಪ್ರತಿಯೊಬ್ಬರೂ ವರ್ತಿಸಬೇಕು ಎಂದು ಅರ್ಥ. ಹಾಗಿದ್ದರೆ ಅಂಥ ಲೋಕದಲ್ಲಿ ಯಾವ ಸಂಘರ್ಷಗಳೂ ಇರುವುದಿಲ್ಲ. ಬಹುಶಃ ದೇವರ ಕಲ್ಪನೆಯಲ್ಲಿ ಇಂಥದೊಂದು ಉದ್ದೇಶವಿತ್ತೆಂದು ತೋರುತ್ತದೆ: ಯಾಕೆಂದರೆ, ದೇವರೆಂದರೆ ಎಲ್ಲಾ ನ್ಯಾಯಧರ್ಮಗಳನ್ನೂ ನೋಡಿಕೊಳ್ಳುವ ಪೂರ್ಣದೃಷ್ಟಿಯ ಪೂರ್‍ಣಪ್ರಜ್ಞಿಯ ಒಂದು ಶಕ್ತಿ. ತಪ್ಪೆಸಗಿದವರಿಗೆ ಶಿಕ್ಷೆಯನ್ನೂ, ನ್ಯಾಯವೆಸಗಿದವರಿಗೆ ಬಹುಮಾನವನ್ನೂ ಆತ ನೀಡುತ್ತಾನೆ-ಈ ಲೋಕದಲ್ಲಲ್ಲದಿದ್ದರೆ ಪರಲೋಕದಲ್ಲಿ. ಆದರೆ ಪರಲೋಕದಲ್ಲಿ ಎಲ್ಲವೂ ಸರಿಯಾದರೆ ಈ ಲೋಕ ಉದ್ಧಾರವಾಯಿತೇ? ಇಲ್ಲವಲ್ಲ. ಆದ್ದರಿಂದಲೇ ಆಗಿಂದಾಗ್ಗೆ ಪ್ರವಾದಿಗಳೂ ಮಹಾತ್ಮರೂ ಈ ಲೋಕಕ್ಕೆ ಬಂದು ಮನುಷ್ಯರನ್ನು ಎಚ್ಚರಿಸುತ್ತಲೇ ಇರುವುದು.

ಆದರೆ ಅಪಾರ ಸಂಖ್ಯೆಯಲ್ಲಿ ಇಂಥ ಮಹಾತ್ಮರು ಬಂದು ಹೋದರೂ ನಾವು ಮಾತ್ರ ಯಾಕೆ ಮಹಾತ್ಮರಾಗಿಲ್ಲ? ಅವರಿಗೆ ಸಾಧ್ಯವಾದುದು ನಮಗೆ ಯಾಕೆ ಸಾಧ್ಯವಾಗಿಲ್ಲ? ಪ್ರತಿಯೊಂದು ಮತವಾಗಲಿ ಧರ್ಮವಾಗಲಿ ಅಸ್ತಿತ್ವಕ್ಕೆ ಬಂದಾಗಲೂ ಅದರ ಬರುವಿಕೆಯ ಕಾರಣ ಮನುಷ್ಯನನ್ನು ಮಹಾತ್ಮನನ್ನಾಗಿ ಮಾಡುವುದೇ ಆಗಿರುತ್ತದೆ; ಆದರೆ ಯಾವುದೇ ಮತವಾಗಲಿ ಧರ್ಮವಾಗಲಿ ಇದನ್ನು ಸಂಪೂರ್ಣವಾಗಿ ಸಾಧಿಸಿಲ್ಲ. ಅದೇ ರೀತಿ ರಾಜಕೀಯ ತತ್ವಗಳು ಕೂಡಾ ಮನುಷ್ಯ ಸಮಾಜದ ಉದ್ಧಾರವನ್ನು ದೃಷ್ಪಿಯಲ್ಲಿಟ್ಟುಕೊಂಡೇ ಅಸ್ತಿತ್ವಕ್ಕೆ ಬರುತ್ತವೆ; ಆದರೆ ಸಮಾಜವಾದವಾಗಲಿ, ಪ್ರಜಾಪಭುತ್ವವಾಗಲಿ, ಕಮ್ಯೂನಿಸಮ್ ಆಗಲಿ ಅಥವಾ ನಮಗೆ ಗೊತ್ತಿರುವ ಯಾವುದೇ ವ್ಯವಸ್ಥೆಯೂ ಮನುಷ್ಯ ಸಮಾಜವನ್ನು ಆದರ್ಶ ಸ್ಥಿತಿಗೆ ಒಯ್ದಂತೆ ಕಂಡುಬರುವುದಿಲ್ಲ. ಇವೆಲ್ಲವೂ ಸೈದ್ಧಾಂತಿಕವಾಗಿ ಆಕರ್ಷಕವೆನಿಸಿದರೂ ವಾಸ್ತವದಲ್ಲಿ ಅವತಾರಕ್ಕೆ ಬಂದಾಗ ಅವುಗಳ ಸ್ವರೂಪವೇ ಬೇರೆಯಾಗಿಬಿಡುತ್ತದೆ. ಇದಕ್ಕೆ ಸಿದ್ಧಾಂತಗಳನ್ನು ದೂರಿ ಪ್ರಯೋಜನವಿಲ್ಲ, ಮನುಷ್ಯರನ್ನೇ ದೂರಬೇಕಾಗುತ್ತದೆ ಎನ್ನುವುದು ಈ ಸಮಸ್ಯೆಗೆ ಉತ್ತರವಾಗುವುದಿಲ್ಲ, ಯಾಕೆಂದರೆ ಮನುಷ್ಯರನ್ನು ಯಾಕೆ ಈ ಸಿದ್ಧಾಂತಗಳು ಬದಲಿಸಿಲ್ಲ ಎನ್ನುವುದೇ ಮೂಲ ಪ್ರಶ್ನೆ.

ಕ್ರೈಸ್ತ ಅಥವಾ ಕಾಂಟ್ ಹೇಳುವ ಆದರ್ಶವನ್ನು ಪಾಲಿಸಿ ಜನಸಾಮಾನ್ಯರು ತಮ್ಮ ಜೀವನ ನಡೆಸುವುದು ಅಸಾಧ್ಯ ಎನ್ನೋಣವೇ? ಉದಾಹರಣೆಗೆ, ಸುಳ್ಳು ಹೇಳದ, ತಪ್ಪು ಮಾಡದ, ಸರಕಾರಕ್ಕೆ ತೆರಿಗೆ ವಂಚನೆ ಮಾಡದ, ಮನೆ ಮಠ, ಹೆಂಡತಿ ಮಕ್ಕಳೆಂಬ ಸ್ವಾರ್ಥವಿರದ ಜನರು ಅಪರೂಪ. ಕ್ರೈಸ್ತನಿಗೆ ಇದು ಗೊತ್ತಿತ್ತು; ಆದ್ದರಿಂದಲೇ ಆತ, ಜನರು ಒಬ್ಬ ಹೆಂಗಸನ್ನು ಜಾರಿಣಿಯೆಂದು ಕಲ್ಲು ಹೊಡೆದು ಸಾಯಿಸಲು ತಯಾರಾದಾಗ, ಯಾವುದೇ ಪಾಪ ಮಾಡದವರು ಮೊದಲು ಕಲ್ಲೆತ್ತಿರಿ ಎಂದದ್ದು. ಇಂಥ ಕಟ್ಟುನಿಟ್ಟಿನ ಅರ್ಹತೆಯನ್ನು ತೆಗೆದುಕೊಂಡರೆ ನಮಗೆ ನ್ಯಾಯಾಧೀಶರೇ ಸಿಗಲಾರರು. ಬಹುಶಃ, ಲಂಕೇಶ್ ಒಂದು ಕತೆಯಲ್ಲಿ ಸೂಚಿಸುವಂತೆ, ತಪ್ಪು ಮಾಡಿದವರೇ ನ್ಯಾಯಾಧೀಶರಾಗಲು ಅರ್ಹರು ಎನ್ನಬೇಕಾಗುತ್ತದೆ!

ಸ್ವಾರ್ಥ ಮತ್ತು ನಿಸ್ವಾರ್ಥದ ನಡುವೆ ನಡೆಯುವ ಸಂಘರ್ಷಕ್ಕೆ ಮನುಷ್ಯನ ಬದುಕು ಕಣವಾಗುತ್ತದೆ. ಆಸ್ತಿ, ಉದ್ಯೋಗ, ಹಣ, ಕೀರ್ತಿ, ಅಧಿಕಾರ ಎಂಬಿತ್ಯಾದಿಯಾಗಿ ಹಲವು ತರದ ಸ್ಪರ್ಧೆಯಲ್ಲಿ ಮನುಷ್ಯ ಯಾವತ್ತೂ ತೊಡಗಿರುತ್ತಾನೆ; ತನಗಲ್ಲದಿದ್ದರೆ ತನ್ನ ಮಕ್ಕಳು ಮರಿಗಳಿಗೋಸ್ಕರ. ಎಲ್ಲಿ ಸ್ಪರ್ಧೆಯಿರುತ್ತದೋ ಅಲ್ಲಿ ಸ್ವಾರ್ಥವಿರುತ್ತದೆ, ಎಲ್ಲಿ ಸ್ವಾರ್ಥವಿರುತ್ತದೋ ಅಲ್ಲಿ ಸ್ಪರ್ಧೆ ಕೂಡಾ. ಸ್ಪರ್ಧಾರಹಿತವಾದ ಸಂಪೂರ್ಣ ಸಹಕಾರದ ವ್ಯವಸ್ಥೆಯೆನ್ನುವುದು ಒಂದು ಆದರ್ಶವಲ್ಲದೆ ವಾಸ್ತವವಲ್ಲ. ಪ್ರೀತಿ ಪ್ರೇಮ ಇತ್ಯಾದಿಗಳಿಗೆ ಕೆಲವೊಮ್ಮೆ ನಾವು ಪ್ರಾಣಿಪ್ರಪಂಚದ ಉದಾಹರಣೆಯನ್ನು ಕೊಡುವುದಿದೆ. ಆದರೆ ವಾಸ್ತವದಲ್ಲಿ ಪ್ರಾಣಿಗಳ ವರ್ತನೆ ಮನುಷ್ಯನಿಗೆ ಯಾವ ಮಾದರಿಯನ್ನೂ ಒದಗಿಸದು. ದನ ತನ್ನ ಕರುವಿನ ಮೈ ನೆಕ್ಕುವುದನ್ನು ನೋಡಿ, ಆಹಾ ದನದ ಮಮತೆಯೇ ಎಂದುಕೊಳ್ಳುತ್ತೇವೆ. ಆದರೆ ದನ ಕರುವಿನ ಮೈನೆಕ್ಕುವುದು ಅದರ ಬೆವರಿನಲ್ಲಿರುವ ಉಪ್ಪಿಗೋಸ್ಕರವಲ್ಲದೆ ಯಾತಕ್ಕೂ ಅಲ್ಲ ಎನ್ನುವುದು ವಾಸ್ತವ. ಇನ್ನು ಡಾರ್ವಿನ್ನ ವಿಕಾಸವಾದವನ್ನೇ ನೋಡಿದರೆ, ಅದರಲ್ಲಿ ಯಾದೃಚ್ಛ ಬದಲಾವಣೆ (random mutation) ಮತ್ತು ಬಲವುಳ್ಳವನು ಬದುಕಿಯಾನು (survival of the fittest) ಎನ್ನುವುದು ಎರಡು ಮೂಲತತ್ವಗಳು. ಇವುಗಳ ಮೇಲೆ ನಾವು ಯಾವ ಕಾರಣಕ್ಕೂ ಅದರ್ಶ ಸಮಾಜವೊಂದನ್ನು ನಿರ್ಮಿಸಲಾರೆವು. ಯಾಕೆಂದರೆ ಇವು ಪ್ರಾಣಿಪರಪಂಚದ ತತ್ವಗಳು. ವಿಕಾಸವಾದದ ಆಧುನಿಕ ನಿರೂಪಣೆಯಲ್ಲಿ ದಂಗುಬಡಿಸುವ ಇತರ ಅಂಶಗಳೂ ಇವೆ. ಉದಾಹರಣೆಗೆ, ಡಾರ್ವಿನನ ಮೂಲತತ್ವದಲ್ಲಿ ಸಮಸ್ಯೆಯೊಂದು ಅಡಗಿದೆ: ಭೂಮಿಯ ವಯಸನ್ನು ತೆಗೆದುಕೊಂಡರೆ, ಇಷ್ಟು ಅಲ್ಪಾವಧಿಯಲ್ಲಿ ಇಂಥ ‘ಹನುಮದ್ವಿಕಾಸ’ ಹೇಗೆ ಸಾಧ್ಯ ಎನ್ನುವುದೇ ಈ ಸಮಸ್ಯೆ. ಇದನ್ನು ವಿವರಿಸುವುದಕ್ಕೆ ಕೆಲವರು “ಹಿಚ್ ಹೈಕಿಂಗ್ ಥಿಯರಿ” (Hitch-hiking Theory) ಎಂಬ ಹೆಸರಿನ ತತ್ವವೊಂದನ್ನು ಮುಂದೊತ್ತುತ್ತಾರೆ. ಹಿಚ್ ಹೈಕ್ ಮಾಡುವುದೆಂದರೆ ದಾರಿಯಲ್ಲಿ ನಿಂತು ಕೈತೋರಿಸಿ ಲಿಫ್ಟ್ ಪಡೆಯುವುದು. ಇದರಿಂದ ಯಾತ್ರಿಕನು ಸುಲಭವಾಗಿ ತನ್ನ ಗುರಿ ಸೇರುವ ಸಾಧ್ಯತೆಯಿದೆ. ಕ್ರಮಪ್ರಕಾರವಾದ ಜೀವವಿಕಾಸ ಒಂದೆಡೆ ಅದರದೇ ಸಾಧಾರಣ ವೇಗದಲ್ಲಿ ನಡೆಯುತ್ತಿರಬೇಕಾದರೆ ಇಂಥ ಸುಲಭ ಯಾತ್ರಿಗಳು ಅದಕ್ಕೆ ಕಾಯದೆ ತಮ್ಮ ದಾರಿ ಹುಡುಕಿಕೊಳ್ಳುತ್ತಿದ್ದುವು. ಎಂದರೆ, ಹಲವಾರು ಪರೋಪಜೀವಿ ವೈರಾಣುಗಳು ತಮ್ಮ ಅತಿಥೇಯರಲ್ಲಿ ಕೂತು ಉಂಡು ಅಲ್ಲಿಂದ ಇನ್ನೊಂದು ಇಂಥದೇ ನೆಲೆಯನ್ನು ಹುಡುಕಿಕೊಂಡು ಹೋಗುತ್ತಿದ್ದುವು; ಅವು ಹೀಗೆ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗುವಾಗ ತಮ್ಮ ಹಿಂದಣ ಅತಿಥೇಯರಿಂದ ಕೆಲವೊಂದು “ಜೈವಿಕ ಗುಣಗಳನ್ನು” ಜತೆಯಲ್ಲಿ ಸಾಗಿಸಿ ಹೊಸ ಎಡೆಗಳಲ್ಲಿ ಪಸರಿಸುತ್ತಿದ್ದುವು. ಜೀವ ವಿಕಾಸ ಇಷ್ಟೊಂದು ವೇಗವಾಗಿ ಮುಂದರಿಯಲು ಈ ‘ವಾಮಮಾರ್ಗ’ವೇ ಕಾರಣ.

೧೫೧೩ರಲ್ಲಿ ಇಟೆಲಿಯ ಕವಿ, ಚಿಂತಕ, ರಾಜಕೀಯ ಪ್ರವೀಣ ಮಾಖಿಯವೆಲ್ಲಿ ರಾಜನೀತಿಯ ಬಗ್ಗೆ ಕೃತಿಯೊಂದನ್ನು ಬರೆದ; ಇದು ಐದು ವರ್ಷಗಳ ನಂತರ ಅವನ ಮರಣಾನಂತರ ‘ರಾಜ’ (II Principe) ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಯಿತು. ಇದು ಹೊಸದಾಗಿ ರಾಜನಾದವನೊಬ್ಬ ಏನೇನು ಮಾಡಬೇಕು, ಹೇಗಿರಬೇಕು ಎಂದು ಹೇಳುವ ಚಾಣಕ್ಯ ತಂತ್ರದಂಥ ಪುಸ್ತಕ. ಇದರ ಪ್ರಕಟಣೆಯ ಬೆನ್ನಲ್ಲೇ ಮಾಖಿಯವೆಲ್ಲಿ ಎಷ್ಟು ಕುಖ್ಯಾತನಾದ ಎಂದರೆ ಇಡೀ ಯುರೋಪಿನಲ್ಲಿ ಅವನ ಹೆಸರು ಕುತಂತ್ರಕ್ಕೆ ಪರ್ಯಾಯನಾಮವಾಯಿತು; ಇಂಗ್ಲಿಷ್ ನಾಟಕಕಾರರಾದ ಶೇಕ್ಸ್‌ಪಿಯರ್, ಕ್ರಿಸ್ಟೊಫರ್ ಮಾರ್ಲೋ ಮುಂತಾದವರ ಕೃತಿಗಳಲ್ಲಿ ಮಾಖಿಯವೆಲ್ಲಿಯ ಚಾರಿತ್ರವಧೆಯನ್ನು ಕಾಣುತ್ತೇವೆ. ಆದರೆ ಮಾಖಿಯವೆಲ್ಲಿ ಇದಕ್ಕೆ ಅರ್ಹನೇ ಎಂಬ ಪ್ರಶ್ನೆಯನ್ನು ನಂತರದವರು ಕೇಳಿದ್ದಾರೆ. ಯಾಕೆಂದರೆ ಆತ ಜಯಪ್ರದ ರಾಜಕೀಯದಲ್ಲಿ ಏನು ನಡೆಯುತ್ತದೋ ಅದನ್ನು ದಾಖಲಿಸಿದ್ದಾನೆ ಅಷ್ಟೆ. ಇಂದು ನಾವು ಮೌಲ್ಯರಹಿತ ರಾಜಕೀಯದ ಬಗ್ಗೆ ಎಲ್ಲೆಲ್ಲೂ ಕೇಳುತ್ತಿದ್ದೇವೆ; ನಮ್ಮ ಕಣ್ಣಮುಂದೆಯೇ ಅದನ್ನು ನೋಡುತ್ತಲೂ ಇದ್ದೇವೆ. ಇಷ್ಟು ವರ್ಷಗಳ ನಂತರವೂ ರಾಜಕೀಯದಲ್ಲಿ ಗೆಲವು ಸಾಧಿಸಬೇಕಾದರೆ ಇಂಥ ವಾಮಮಾರ್ಗಗಳು ಅನಿವಾರ್ಯವೆಂದಾದರೆ ಅದಕ್ಕೆ ಮಾಖಿಯವೆಲ್ಲಿ ಕಾರಣನೆಂದು ಹೇಳಲಾಗದು.

ಇಲ್ಲೆಲ್ಲವೂ ನಾವು ಕಾಣುವುದು ವಾಸ್ತವತೆ ಮತ್ತು ಆದರ್ಶದ ನಡುವಣ ಇಬ್ಬಂದಿತನ. ಮನುಷ್ಯನಿಗೆ ಬದುಕುವುದಕ್ಕೆ ಎರಡೂ ಬೇಕು. ವಾಸ್ತವತೆಯ ಸ್ವಾರ್ಥ ಅವನ ದೈನಂದಿನ ಇರುವಿಕೆಗೆ ಅಗತ್ಯವಾದರೆ, ಇರುವಿಕೆಗೆ ಮೌಲ್ಯ ನೀಡುವುದಕ್ಕೆ ಅದನ್ನು ಮೀರುವ ಆದರ್ಶ ಅನಿವಾರ್ಯವಾಗುತ್ತದೆ. ಇವೆರಡನ್ನೂ ಹೊಂದಿಸಿಕೊಳ್ಳುವುದಕ್ಕೆ ಆತ ಹೆಣಗಬಹುದು; ಅಥವಾ ಸ್ವಾರ್ಥವನ್ನೇ ಆರಿಸಿಕೊಂಡು ಮೌಲ್ಯವನ್ನು ಕೈಬಿಡಬಹುದು. ಆದರೆ ಸ್ವಾರ್ಥವನ್ನು ಬಿಟ್ಟುಕೊಟ್ಟು ಮೌಲ್ಯವನ್ನು ಮಾತ್ರ ಆರಿಸಿಕೊಳ್ಳುವ ಮಹಾತ್ಮರು ಕಡಿಮೆ. ಇಲ್ಲಿ ನಾವು ‘ಸ್ವಾರ್ಥ’ ಎಂಬ ಪದವನ್ನು ಅದರ ಕೆಟ್ಟ ಅರ್ಥದಲ್ಲಿ ತೆಗೆದುಕೊಳ್ಳಬೇಕಾಗಿಲ್ಲ. ತನ್ನ ಮನೆ ಮಠ, ಹೆಂಡತಿ ಮಕ್ಕಳು, ನೌಕರಿ ಹೇಗೆ ಸ್ವಾರ್‍ಥವೋ ಅದೇ ರೀತಿ, ತನ್ನ ದೇಶ, ಭಾಷೆ, ಮತ, ಸಂಸ್ಕೃತಿ, ಪ್ರಾಂತೀಯತೆ ಕೂಡಾ ಸ್ಚಾರ್ಥವೇ. ಸ್ಧಾರ್ಥವೆಂದರೆ ಅದೊಂದು ಮಿತಿ-ಈ ಮಿತಿ ಮನುಷ್ಯನಿಗೊಂದು ಸ್ವಾಯತ್ತತೆ ಒದಗಿಸುವುದರಿಂದ ಅವನ ಕಾರ್ಯ ಸಮರ್ಥತೆಗೆ ಅನಿವಾರ್ಯವೂ ಆಗಿರಬಹುದು.

ವ್ಯಕ್ತಿಯಿಂದ ಸಮಷ್ಟಿಯತ್ತಣ ಚಲನೆಯನ್ನು ನಾವು ಸಮಾಜವೆಂದು ಕರೆಯುತ್ತೇವೆ. ಏಕ ಕಾಲಕ್ಕೆ ಸಾಮಾಜಿಕನಾಗಿರಲೂ ವ್ಯಕ್ತಿಯಾಗಿರಲೂ ಬಯಸುವ ಇಂದಿನ ಮನುಷ್ಯನ ಮೇಲೆ ದೊಡ್ಡದೊಂದು ಜವಾಬ್ದಾರಿಯಿದೆ. ಈ ಸಂದರ್ಭದಲ್ಲಿ ‘ಪಾಸ್ಕಾಲ್‌ನ ಪಣ’ ನೆನಪಾಗುತ್ತದೆ. ದೇವರಿಲ್ಲ ಎನ್ನುವವರಿಗೆ ಆತ ಓಡ್ಡುವ ಸವಾಲು ಇದು: ದೇವರಿಲ್ಲ ಎನ್ನುವುದಕ್ಕಿಂತ ಇದ್ದಾನೆ ಎಂದು ನಂಬುವುದೇ ಒಳ್ಳೆಯದು; ಯಾಕೆಂದರೆ, ಒಂದು ವೇಳೆ ದೇವರಿದ್ದಾನೆ ಎಂದಾದರೆ, ಇಲ್ಲ ಎನ್ನುವವರು ದೇವರನ್ನು ಕಳೆದುಕೊಳ್ಳುತ್ತಾರೆ; ದೇವರಿಲ್ಲ ಎಂದಾದರೆ, ಇದ್ದಾನೆ ಎಂದು ನಂಬಿದವರಿಗೆ ನಷ್ಟವಾಗುವುದಕ್ಕೆ ಏನೂ ಇರುವುದಿಲ್ಲ! ಸಮಷ್ಟಿಯ ಮೇಲಿನ ನಂಬಿಕೆಯೂ ಇದೇ ರೀತಿಯದು. ಕೇವಲ ಸ್ವಾರ್ಥಪರವಾದ ವ್ಯಕ್ತಿ ಸಮಷ್ಟಿಯನ್ನು ಕಳೆದುಕೊಳ್ಳುತ್ತಾನೆ; ಸಮಷ್ಟಿಯಲ್ಲಿ ನಂಬಿಕೆಯಿರುವ ವ್ಯಕ್ತಿ ಪ್ರಾಯಶಃ ತನ್ನತನವನ್ನೂ ಅದರ ಆಶ್ರಯದಲ್ಲಿ ಬೆಳೆಸಿಕೊಳ್ಳುವ ಸಾಧ್ಯತೆಯಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೮೭
Next post ಸಂಭ್ರಮ

ಸಣ್ಣ ಕತೆ

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

cheap jordans|wholesale air max|wholesale jordans|wholesale jewelry|wholesale jerseys