ಆರ್ಥಿಕ ನಾಯಕತ್ವದ ಅಪಾಯ

ಆರ್ಥಿಕ ನಾಯಕತ್ವದ ಅಪಾಯ

ನಮ್ಮ ಪ್ರಜಾಪ್ರಭುತ್ವದ ಉಳಿವಿಗಾಗಿ ಪ್ರಬುದ್ಧ ರಾಜಕೀಯ ನಾಯಕತ್ವ ಬೇಕೆಂದು ಬಯಸುತ್ತೇವೆ. ಸಂಸ್ಕೃತಿಯ ಚಲನಶೀಲತೆಗಾಗಿ ಮುನ್ನೋಟದ ಸಾಂಸ್ಕೃತಿಕ ನಾಯಕತ್ವವನ್ನು ನಿರೀಕ್ಷಿಸುತ್ತೇವೆ. ದ್ವೇಷರಹಿತ ಸಮಾಜಕ್ಕಾಗಿ ಮಾನವೀಯ ಧಾರ್ಮಿಕ ನಾಯಕತ್ವವಿರಲಿ ಎಂದು ಆಶಿಸುತ್ತೇವೆ. ಸಾಮಾಜಿಕ ನ್ಯಾಯಕ್ಕಾಗಿ ಸಂಕುಚಿತವಾಗದ ಸಾಮಾಜಿಕ ನಾಯಕತ್ವವನ್ನು ಅಪೇಕ್ಷಿಸುತ್ತೇವೆ. ಈ ಎಲ್ಲ ನಾಯಕತ್ವಗಳಿಗೂ ಜನಮುಖೀ ದರ್ಶನ ಮತ್ತು ಜನರ ತೊಡಗುವಿಕೆ ಮುಖ್ಯ.

ಆದರೆ ಇಂದು ಆಗುತ್ತಿರುವುದೇನು ? ನಾಯಕತ್ವದ ಆದರ್ಶ ಮಾದರಿಗಳು ಪಲ್ಲಟಗೊಳ್ಳುತ್ತಿವೆ. ರಾಜಕೀಯ ಪ್ರಬುದ್ಧತೆಯೆನ್ನುವುದು ಸಮಯಸಾಧಕ ಚದುರಂಗದಾಟಕ್ಕೆ ಸೀಮಿತವಾಗುತ್ತಿದೆ. ಸಾಂಪ್ರದಾಯಿಕತೆಯನ್ನೇ ಸಂಸ್ಕೃತಿಯೆಂದು ಪ್ರಚುರಪಡಿಸುವ ಸಾಂಸ್ಕೃತಿಕ ಪ್ರಾತಿನಿಧ್ಯ ಪ್ರಭಾವಿಯಾಗತೊಡಗಿದೆ. ಅನ್ಯಧರ್ಮ ದ್ವೇಷವನ್ನು ಅಂತರಂಗದಲ್ಲಿಟ್ಟುಕೊಂಡ ಜಾಣತನ ಮತ್ತು ಬಹಿರಂಗಗೊಳಿಸುವ ಭಂಡತನಗಳೆರಡೂ ಪ್ರಭಾವಿ ಧಾರ್ಮಿಕ ನಾಯಕತ್ವದ ಒಡಲ ದನಿಗಳಾಗಿವೆ. ಸಾಮಾಜಿಕ ನಾಯಕತ್ವಕ್ಕೆ ಜಾತಿಮಿತಿ ಕಾಡುತ್ತಿದೆ.

ಪ್ರಜಾಪ್ರಭುತ್ವದ ಬಹುಮುಖ್ಯ ಸಾಧನವೆಂದು ಚುನಾವಣೆಗಳನ್ನು ಬಿಂಬಿಸಲಾಗುತ್ತದೆ. ನಿಜ; ಚುನಾವಣೆ ಪ್ರಜಾಪ್ರಭುತ್ವದ ಒಂದು ಮುಖ್ಯ ಸಾಧನ; ಆದರೆ ಅಂತಿಮ ಸಾಧನವಲ್ಲ. ಪ್ರಜಾಸತ್ತಾತ್ಮಕ ರಾಜಕೀಯ ವ್ಯವಸ್ಥೆಗಾಗಿ ದುಡಿದ ರೂಸೋ ಅವರಂಥವರು ಹೇಳಿದ್ದೇನು ?

“ಮಾನವರು ಜನ್ಮತಃ ಸ್ವತಂತ್ರರು. ಅನಿರ್ಬಂಧಿತರಾಗಿ ಬಾಳುವ ಹಕ್ಕು ಅವರಿಗಿದೆ… ಯಾರನ್ನು ನಾವು ನಿರ್ಲಕ್ಷಿಸಿದ್ದೇವೆಯೊ, ಯಾರು ತನ್ನ ಹಕ್ಕುಗಳಿಂದ ವಂಚಿತನಾಗಿದ್ದಾನೊ, ಯಾರು ತುಳಿತಕ್ಕೊಳಗಾಗಿದ್ದಾನೊ ಆ ಶ್ರೀಸಾಮಾನ್ಯನೇ ಸಾಮಾಜಿಕ ಕ್ರಮಬದ್ಧತೆಯ ನಿಜವಾದ ನಿರ್ಮಾತೃ.

ಯಾರನ್ನು ನಾವು ಬಡವ ಎನ್ನುತ್ತೇವೊ, ಯಾರಿಗೆ ಈ ಭಾಗಶಃ ನಿರ್ಮಿತ ಸಮಾಜದಲ್ಲಿ ಸ್ಥಾನವಿಲ್ಲವೊ ಆತನೇ ಸಮಾಜದ ಬೆನ್ನೆಲುಬು. ರಾಷ್ಟ್ರದ ಸತ್ವ.” – ರೂಸೋ ಅವರ ಆಶಯಕ್ಕನುಗುಣವಾಗಿ ಪ್ರಜಾಪ್ರಭುತ್ವ ಬೆಳೆದಿದೆಯೆ ? ನಮ್ಮ ರಾಜಕೀಯ ನಾಯಕತ್ವ ಪ್ರಜಾಪ್ರಭುತ್ವದ ಅಂತಃಸತ್ವವನ್ನು ಅರ್ಥಮಾಡಿಕೊಂಡಿದೆಯೆ ? ಬರ್ನಾರ್ಡ್ ಶಾ ಅವರ ಒಂದು ಅನಿಸಿಕೆಯಲ್ಲಿ ಈ ಪ್ರಶ್ನೆಗಳಿಗೆ ಭಾಗಶಃ ಉತ್ತರವಿದೆ : “ಪ್ರಜಾಪ್ರಭುತ್ವವೆನ್ನುವುದು ಬಿಸಿಗಾಳಿ ತುಂಬಿದ ಬಣ್ಣದ ಬೆಲೂನು, ಜನಸಾಮಾನ್ಯರು ಬೆರಗಾಗಿ ಅದನ್ನು ನೋಡುತ್ತಿರುವಾಗ ಪುಡಾರಿಗಳು ಕಿಸೆಗೆ ಕತ್ತರಿ ಹಾಕಿರುತ್ತಾರೆ” – ಇದು ಪ್ರಜಾಪ್ರಭುತ್ವದ ಭ್ರಮೆಯಲ್ಲಿ ವಾಸ್ತವವನ್ನು ಮರೆಯಬಾರದೆಂಬ ಎಚ್ಚರ. ಹಾಗೆಂದ ಕೂಡಲೇ ಪ್ರಜಾಪ್ರಭುತ್ವ ಬೇಡವೆಂದಲ್ಲ. ಬರ್ನಾರ್ಡ್ ಶಾ ಅವರು ರಾಜಕೀಯ ನಾಯಕತ್ವದ ನೈತಿಕ ಅಧಃಪತನವನ್ನು ಹೇಳುತ್ತಿದ್ದಾರೆ. ನಮ್ಮ ದೇಶದ ಬಹುಪಾಲು ರಾಜಕೀಯ ನಾಯಕರಿಗೆ ಒಪ್ಪುವ ವ್ಯಾಖ್ಯಾನವಿದು. ಸ್ವಾರ್ಥ ಕೇಂದ್ರಿತ ನಾಯಕತ್ವವು ಜನರನ್ನು ಪ್ರಜಾಪ್ರಭುತ್ವದ ಬಣ್ಣದಲ್ಲಿ ಬೆರಗಾಗುವಂತೆ ಮಾಡಿ ತಾನು ಮಾತ್ರ ಬೆಳೆಯುತ್ತದೆ. ಆಗ ‘ರಾಜಕೀಯ’ ನಡೆಯುತ್ತದೆ. ‘ನಾಯಕತ್ವ’ ನಿಲ್ಲುತ್ತದೆ. ನಿಂತ ನಿಲುವಿಗೆ ಸುಖಸಂಪತ್ತು ಸುರಿಯುತ್ತದೆ. ಪ್ರಜಾಪ್ರಭುತ್ವ ಕೇವಲ ತಾಂತ್ರಿಕವಾಗುತ್ತದೆ; ಚುನಾವಣೆಯು ತಾಂತ್ರಿಕ ಸಾಧನ ವಾಗುತ್ತದೆ. ಪ್ರಜಾಪ್ರಭುತ್ವದ ಅಂತಃಸತ್ವವಾಗಬೇಕಾದ ಸಮಾನತೆ ದೂರವೇ ಉಳಿಯುತ್ತದೆ. ಪ್ರಬುದ್ಧ ರಾಜಕೀಯ ನಾಯಕತ್ವ ಹಿಂದೆ ಸರಿದು ಪೊಳ್ಳು ರಾಜಕೀಯ ನಾಯಕತ್ವ ಪ್ರಭಾವಶಾಲಿಯಾಗುತ್ತದೆ. ಕೆಲವು ಅಪವಾದಗಳನ್ನು ಹೊರತುಪಡಿಸಿದರೆ ನಮ್ಮ ರಾಜಕೀಯ ನಾಯಕತ್ವದ ಸ್ವರೂಪ ಇದೇ ಮಾದರಿಯದು.

ಸಾಂಸ್ಕೃತಿಕ ಕ್ಷೇತ್ರಕ್ಕೆ ಬರೋಣ. ಎಪ್ಪತ್ತರ ದಶಕದ ಆರಂಭದಿಂದ ಕಾಲು ಶತಮಾನ ಕಾಲ ಪರಿಣಾಮಕಾರಿಯಾಗಿದ್ದ ಚಳವಳಿಗಳ ಶಕ್ತಿ ಈಗ ಕ್ಷೀಣಿಸಿದೆ. ಅಂದರೆ ಆತ್ಮಶಕ್ತಿ ಕ್ಷೀಣಿಸಿದೆ ಎಂದು ಅರ್ಥ. ಸಾಮಾಜಿಕ ಚಳವಳಿಗಳ ‘ಆತ್ಮ’ದಿಂದ ಸಾಂಸ್ಕೃತಿಕ ಕ್ಷೇತ್ರವು ಪಡೆದ ‘ಶಕ್ತಿ’ ಯನ್ನು ಎಲ್ಲ ವಲಯಗಳೂ ಮಾನ್ಯ ಮಾಡಲಿಲ್ಲ. ಸಾಂಸ್ಕೃತಿಕ ಕ್ಷೇತ್ರದ ಅಭಿವ್ಯಕ್ತಿ ರೂಪಗಳಾದ ಸಾಹಿತ್ಯ, ಚಿತ್ರಕಲೆ, ಸಿನಿಮಾ, ಸಂಗೀತ – ಎಲ್ಲದರಲ್ಲೂ ಸಿದ್ಧ ಮಾದರಿಯ ಶ್ರೇಷ್ಠತೆಯನ್ನು ಹುಡುಕಿ, ಚಳವಳಿಯ ಅಬ್ಬರದಲ್ಲಿ ಸೃಜನಶೀಲತೆ ಸೊರಗಿದೆಯೆಂದು ಷರಾ ಬರೆಯದೆ ಬಿಡಲಿಲ್ಲ. ಆದರೆ ಕಾಲು ಶತಮಾನದ ಸಾಂಸ್ಕೃತಿಕ ನಾಯಕತ್ವದಲ್ಲಿ ತುಂಬಿ ಹರಿದ ಸಾಮಾಜಿಕ ಕಾಳಜಿ ಮತ್ತು ಸಮಾನತೆಯ ಸತ್ವಗಳನ್ನು ಅಲ್ಲಗಳೆಯಲು ಸಾಧ್ಯವಿಲ್ಲ; ಅಂತೆಯೇ ಸಾಂಸ್ಕೃತಿಕ ಚಿಂತನಾಕ್ರಮದಲ್ಲಾದ ಪಲ್ಲಟಗಳನ್ನು ಪರಿಗಣಿಸದೆ ಇರಲೂ ಸಾಧ್ಯವಿಲ್ಲ. ಇದನ್ನು ಇಲ್ಲೀವರೆಗಿನ ಪ್ರಬುದ್ಧ ಚಿಂತನಾವಲಯ ತನಗೆ ತಾನೇ ತೋರಿಸಿಕೊಟ್ಟಿದೆ. ನೇರವಾಗಿ ಚಳವಳಿಗಳಲ್ಲಿ ಇಲ್ಲದೆ ಇರುವ ಕೆಲವು ಸಾಂಸ್ಕೃತಿಕ ವ್ಯಕ್ತಿ ಮತ್ತು ವಲಯಗಳು ಸಹ ಚಿಂತನಾಕ್ರಮದ ಪಲ್ಲಟ ಮತ್ತು ವಿಕಾಸವನ್ನು ಸರಿಯಾಗಿ ಗುರುತಿಸಿ ಸಹಯಾನ ಮಾಡಿದ್ದಾರೆ. ಅಬ್ಬರದಲ್ಲಿ ‘ಆತ್ಮ’ ಅಡಗಿ ಹೋಗಬಾರದೆಂಬ ಎಚ್ಚರದ ಮಾತುಗಳನ್ನು ಆಡಿದವರೂ ಇದ್ದಾರೆ. ಇದೆಲ್ಲಾ ಸರಿ. ಆದರೆ ಇನ್ನು ಕೆಲವರು ಅಬ್ಬರವಷ್ಟೇ ಈ ಚಳವಳಿಗಳ ಆತ್ಮವೆಂದು ಹೀಗಳೆದದ್ದು ಉಂಟು. ಹೀಗೆ ಹೀಗಳೆಯುತ್ತ ಬಂದ ಅನೇಕರ ‘ಆತ್ಮ’ ಈಗ ಆಧ್ಯಾತ್ಮದ ಆಸರೆ ಹಿಡಿದು ಜಾತಿವಾದ ಮತ್ತು ಕೋಮುವಾದಗಳನ್ನು ಆದರ್ಶದ ಮಾದರಿಗಳೆಂಬಂತೆ ಬಿಂಬಿಸುತ್ತದೆ. ಇದರಲ್ಲಿ ಎರಡು ಮಾದರಿಗಳಿವೆ. ಒಂದು : ಅಲಿಪ್ತ ನೀತಿಯ ನಿರ್ಲಿಪ್ತರಂತೆ ಕಾಣುತ್ತ ಕೋಮುವಾದವನ್ನು ಕರುಳಲ್ಲೇ ಕಲಾತ್ಮಕವಾಗಿ ಕಟ್ಟಿಕೊಂಡವರ ಮಾದರಿ. ಇಂಥವರು ಮಾತಾಡುವಾಗ ಅನ್ಯಧರ್ಮದ್ವೇಷ ಕಾಣಿಸದೇ ಇರಬಹುದು. ಆದರೆ ಅನ್ಯಧರ್ಮ ದ್ವೇಷವನ್ನು ಖಂಡಿಸುವ ಉಸಾಬರಿ ತಮಗೇಕೆಂದು ‘ನಿರ್ಲಿಪ್ತ’ರಾಗಬಹುದು; ಸೃಜನಶೀಲತೆಗೆ ಈ ಸೋಂಕುಗಳು ಬೇಡ ಎಂದು ವಾದಿಸಬಹುದು. ಎರಡು : ತಮ್ಮ ಭಾವನೆಗಳನ್ನು ಮುಚ್ಚಿಡದೆ ತಮ್ಮ ಕಾಣ್ಕೆಯೇ ಅಂತಿಮ ಸತ್ಯ ಮತ್ತು ತಾವು ನಡೆಸುವುದೆಲ್ಲವೂ ಸತ್ಯಶೋಧನೆ ಮಾತ್ರವೆಂದು ಹೇಳುತ್ತಲೇ ‘ಸತ್ಯ’ದ ಹೆಸರಲ್ಲಿ ದ್ವೇಷ ಬಿತ್ತುವ ಮಾದರಿ. ಜಡಮೌಲ್ಯಗಳನ್ನೇ ಸಂಸ್ಕೃತಿಯೆಂದು ಬಿಂಬಿಸುವ ಈ ಮಾದರಿಯು ಧರ್ಮ, ದೇಶ, ಸಂಸ್ಕೃತಿ – ಎಲ್ಲವೂ ಒಂದೇ ಎಂದು ಪ್ರಚುರಪಡಿಸುತ್ತದೆ. ಧರ್ಮ ಮತ್ತು ಸಂಸ್ಕೃತಿಗಳು ದೇಶವೊಂದರ ಭಾಗವೇ ಹೊರತು ಅವೇ ದೇಶವಲ್ಲ ಎಂಬ ಸಾಮಾನ್ಯ ಸಂಗತಿಯನ್ನೂ ಈ ಮಾದರಿಯವರು ಮನಗಾಣುವುದಿಲ್ಲ.

ನಾನು ವಿವರಿಸಿದ ಮಾದರಿಗಳನ್ನು ವಿರೋಧಿಸಿ ಜಾತಿವಾದ ಮತ್ತು ಕೋಮುವಾದಕ್ಕೆ ಎದುರಾಗಿ ನಿಂತ ಅನೇಕ ಸಾಂಸ್ಕೃತಿಕ ವ್ಯಕ್ತಿಗಳು ನಮ್ಮಲ್ಲಿದ್ದಾರೆ. ಆದರೆ ಹೀಗೆ ಚಿಂತಿಸುವ ಸಾಂಸ್ಕೃತಿಕ ವ್ಯಕ್ತಿಗಳು ‘ಶಕ್ತಿ’ಯಾಗುವ ವಾತಾವರಣ ಕಾಣುತ್ತಿಲ್ಲ. ಯಾಕೆಂದರೆ ಪ್ರಗತಿಪರ ಚಿಂತನೆಯುಳ್ಳ ಇವರೆಲ್ಲ (ಅಥವಾ ನಾವೆಲ್ಲ) ವಿವಿಧ ವಾದಗಳ ಹಿನ್ನೆಲೆಯುಳ್ಳವರು. ನಮ್ಮ ನಂಬಿಕೆಯ ‘ವಾದ’ಗಳನ್ನಿಟ್ಟುಕೊಂಡೇ ಸಮಾನ ಅಂಶಗಳ ಆಧಾರದಲ್ಲಿ ಸಂಘಟನೆಯ ಸ್ವರೂಪ ಪಡೆಯಲು ಸಾಧ್ಯ. ಆದರೆ ಅದು ಆಗಿಲ್ಲ. ಸಂಘಟನೆಯ ಹಂತದಿಂದ ವಿಘಟನೆಯ ಹಂತಕ್ಕೆ ಬಂದಿರುವ ನಾವು ಮರುಚಿಂತನೆ ಮಾಡಬೇಕಾಗಿದೆ.

ಇನ್ನು ಧಾರ್ಮಿಕ ವಲಯದತ್ತ ನೋಡಿದರೆ, ಜಾತಿವಾದ ಮತ್ತು ಕೋಮುವಾದಗಳನ್ನು ವಿವಿಧ ಪ್ರಮಾಣದಲ್ಲಿ ಪ್ರತಿನಿಧಿಸುವವರೇ ಹೆಚ್ಚಾಗಿದ್ದಾರೆ. ಬಹುಪಾಲು ಮಠಮಾನ್ಯಗಳು ಧಾರ್ಮಿಕತೆಯ ಬದಲು ಜಾತೀಯತೆಯ ತಾಣವಾಗುತ್ತಿವೆ. ಕೋಮುವಾದವನ್ನೇ ಧರ್ಮವೆಂದು ಬಿಂಬಿಸುತ್ತಿವೆ. ಕೆಲವರು ಕೋಮುವಾದವನ್ನು ವಿರೋಧಿಸಿದರೂ ತಮ್ಮ ಜಾತಿಪ್ರೀತಿಯನ್ನು ಮರೆಯುವುದಿಲ್ಲ. ಮಂದಿರ-ಮಸೀದಿ ಜಗಳ ಆರಂಭವಾಗಿ ಬಾಬರಿ ಮಸೀದಿ ಧ್ವಂಸವಾದ ಮೇಲೆ ನಮ್ಮ ಧಾರ್ಮಿಕ ನಾಯಕತ್ವದ ಚಹರೆಗಳೇ ಬದಲಾಗಿವೆ. ಮನುಷ್ಯ ದ್ವೇಷವನ್ನು ಬಿತ್ತುವ ಮಾದರಿಗಳ ಮೂಲಕ ‘ಮನುಷ್ಯ ಜಾತಿ ತಾನೊಂದೆ ವಲಂ’ (ಪಂಪ ಮಹಾಕವಿಯ ಮಾತು) ಎಂಬ ಆದರ್ಶವನ್ನು ನಾಶ ಮಾಡಲಾಗುತ್ತಿದೆ. ಹಿಂದೂಧರ್ಮಕ್ಕೆ ಗೋಡ್ಸೆ, ಇಸ್ಲಾಂಗೆ ಬಿನ್‌ಲಾಡೆನ್, ಕ್ರೈಸ್ತ ಧರ್ಮಕ್ಕೆ ಬೆನ್ನಿಡಿನ್ ಮಾದರಿಯಾದರೆ ಆಯಾ ಧರ್ಮದವರಿಗೆ ಮಾಡುವ ಅವಮಾನವಾಗುತ್ತದೆ. ಗಾಂಧೀಜಿ, ವಿವೇಕಾನಂದರಂಥವರು ನಂಬಿದ ಹಿಂದೂ ಧರ್ಮವೇ ಬೇರೆ, ಗೋಡೈ, ತೊಗಾಡಿಯಾ, ಮೋದಿ ಮಾದರಿಯ ಹಿಂದೂಧರ್ಮವೇ ಬೇರೆ. ಜನರಿಗೆ ಬೇಕಾದ್ದು ಗಾಂಧಿ, ವಿವೇಕಾನಂದರ ಹಿಂದೂಧರ್ಮ. ಅಂತೆಯೇ ಪೈಗಂಬರ್ ಇಸ್ಲಾಂ ಇರಲಿ; ಮದರ್ ತೆರೇಸಾ ಕ್ರೈಸ್ತ ಧರ್ಮಿಯತೆ ಇರಲಿ. ಆದರೆ ಈ ದೇಶದಲ್ಲಿ ಏಕ ಸಂಸ್ಕೃತಿ, ಏಕಧರ್ಮ ಸ್ಥಾಪನೆಯ ಜನವಿರೋಧಿ ‘ಸಿದ್ದಾಂತ’ದಿಂದ ಸಾಮರಸ್ಯಕ್ಕೆ ಧಕ್ಕೆ ತರಲಾಗುತ್ತಿದೆ. ಧಾರ್ಮಿಕ ನಾಯಕತ್ವವು ಅಧಾರ್ಮಿಕ ಮಾದರಿಗಳಲ್ಲಿ ಮಿಂಚುತ್ತಿದೆ.

ನಮ್ಮ ಸಾಮಾಜಿಕ ನಾಯಕತ್ವವೂ ಅನೇಕ ಮಿತಿಗಳಲ್ಲಿ ಸೊರಗುತ್ತಿದೆ. ಜಾತಿಗೊಂದು ಮಠ ಮತ್ತು ಮಂತ್ರಿಗಿರಿ ಸಿಕ್ಕರೆ ಸಾಕೆಂಬ ಸ್ಥಿತಿಗೆ ತಲಪುತ್ತಿದೆ. ಜಾತಿಘಟಕ ಮುಖ್ಯವಾದಂತೆ ಉಪಜಾತಿ ಪ್ರಶ್ನೆ ಎದುರಾಗುತ್ತಿದೆ. ವಿಘಟನೆಯ ವಿಷಾದ ಕಾಡಿಸುತ್ತಿದೆ. ಸಾಮಾಜಿಕ ನಾಯಕತ್ವ ಸ್ವಜಾತಿ ಮಿತಿಗಳನ್ನು ಮೀರಬೇಕಾಗಿದೆ.

ಆತ್ಮವಿಲ್ಲದ ಸಾಂಸ್ಕೃತಿಕ ನಾಯಕತ್ವ, ಆತ್ಮಸಾಕ್ಷಿಯಿಲ್ಲದ ರಾಜಕೀಯ ನಾಯಕತ್ವ ಆತ್ಮ ನಿರೀಕ್ಷೆಯಿಲ್ಲದ ಧಾರ್ಮಿಕ ನಾಯಕತ್ವ, ಮತ್ತು ಸಂಕುಚಿತ ಸಾಮಾಜಿಕ ನಾಯಕತ್ವಗಳು, ಜನ ವಿರೋಧಿಯಾಗುತ್ತವೆ. ಜನರನ್ನು ಹಾದಿ ತಪ್ಪಿಸಿ ತಮ್ಮ ಬದಿಯಲ್ಲಿ ಬಂಧಿಯಾಗಿಸಿ ಕೊಳ್ಳುತ್ತವೆ. ಇಂತಹ ಸಂಕಷ್ಟ ಸನ್ನಿವೇಶದಲ್ಲಿ ತಲೆಯೆತ್ತಿರುವ ಆರ್ಥಿಕ ನಾಯಕತ್ವವು ಈ ಎಲ್ಲ ನಾಯಕತ್ವಗಳನ್ನು ನುಂಗಿ ನೊಣೆಯುವಂತೆ ಬೆಳೆಯುತ್ತಿದೆ.

ಆರ್ಥಿಕ ಸುಧಾರಣೆಯ ಹೆಸರಿನಲ್ಲಿ ಅಮೇರಿಕದ ಆರ್ಥಿಕ ಮಾದರಿಗಳನ್ನು ನಮ್ಮ ದೇಶದಲ್ಲಿ ಯಥಾವತ್ತಾಗಿ ಅನ್ವಯಿಸಿಕೊಂಡ ವಿಧಾನದಿಂದ ಆದ ಪರಿಣಾಮಗಳೇನು ? ವಿದೇಶಿ ಬಂಡವಾಳ ಹೆಚ್ಚು ಬಂದಿದೆ. ಅನೇಕರಿಗೆ ಉದ್ಯೋಗ ಸಿಕ್ಕಿದೆ. ಇದೆಲ್ಲ ನಿಜ. ಆದರೆ ನಮ್ಮ ದೇಶದ ಸಂವಿಧಾನಾತ್ಮಕ ಕಾನೂನು ಮತ್ತು ಆದರ್ಶಗಳನ್ನು ಗಾಳಿಗೆ ತೂರಿ ಖಾಸಗಿಯವರಿಗಾಗಿಯೇ ಉದಾರತೆ ತೋರುವ ನಿಯಮಗಳನ್ನು ರೂಪಿಸಿದ್ದು, ಖಾಸಗಿ ಕಂಪನಿಗಳ ಆರ್ಥಿಕ ನಾಯಕರೇ ದೇಶೋದ್ದಾರಕರೆಂಬಂತೆ ಬಿಂಬಿಸಿ ಸರ್ವವ್ಯಾಪಿ ‘ಆರ್ಥಿಕ ನಾಯಕತ್ವ’ವನ್ನು ಬೆಳೆಸಿದ್ದು ಎಷ್ಟು ಸರಿ ಎಂದು ಆರ್ಥಿಕ ಹಿಂಜರಿತದ ಈ ಸಂದರ್ಭದಲ್ಲಾದರೂ ಪ್ರಶ್ನಿಸಬೇಕಾಗಿದೆ. ಮಾನವೀಯ ಮೌಲ್ಯವನ್ನು ಮೂಲೆಗೆ ತಳ್ಳಿ ಮಾರುಕಟ್ಟೆ ಮೌಲ್ಯವನ್ನು ಮುಂದೆ ತಂದು ಮನಸ್ಸನ್ನು ಮಾರುಕಟ್ಟೆಯಾಗಿ ಪರಿವರ್ತಿಸುವ ಆರ್ಥಿಕ ನಾಯಕತ್ವದ ಅಪಾಯಗಳನ್ನು ನಾವು ಮನಗಾಣಬೇಕಾಗಿದೆ.

ನಿಜ; ಬಂಡವಾಳ ಬೇಕು; ಉದ್ಯೋಗ ಬೇಕು. ನಮ್ಮ ದೇಶವು ಒಪ್ಪಿಕೊಂಡು ಬಂದ ಮಿಶ್ರ ಆರ್ಥಿಕ ಪದ್ಧತಿಯಲ್ಲೂ ಇದನ್ನು ಸಾಧಿಸಬಹುದಿತ್ತಲ್ಲ? ತಮ್ಮ ಸ್ವಂತಿಕೆಯನ್ನು ಬಿಟ್ಟು ಕೊಡದೆ ವಿದೇಶಿ ಬಂಡವಾಳವನ್ನು ಆಕರ್ಷಿಸಿ ಅಭಿವೃದ್ದಿ ಹೊಂದಿದ ಚೀನಾ, ಜಪಾನ್, ಜರ್ಮನಿ ಮುಂತಾದ ಮಾದರಿಗಳು ಎದುರಿಗೇ ಇವೆಯಲ್ಲ? ಭಾರತೀಕರಣದ ಮಾತಾಡುತ್ತಲೇ ಅಮೇರಿಕೀಕರಣಕ್ಕೆ ಒಪ್ಪಿಸಿಕೊಂಡ ಮುಕ್ತ ಆರ್ಥಿಕ ಪದ್ಧತಿಯು ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ. ಸಂವಿಧಾನಕ್ಕೆ ಧಕ್ಕೆ ತಂದಿದೆ. ಹರ್ಬರ್ಟ್ ಅಪ್ತೇಕರ್ ಅವರು ಮುಕ್ತ ಆರ್ಥಿಕ ಪದ್ಧತಿ ಕುರಿತು ಹೇಳುವ ಮಾತು ಮನನೀಯವಾಗಿದೆ. ಅವರ ಪ್ರಕಾರ – “ಮುಕ್ತ ಆರ್ಥಿಕ ಪದ್ಧತಿಯಲ್ಲಿ ಸರ್ಕಾರ ಹೇಳಿದಂತೆ ಬಂಡವಾಳಗಾರರು ಕೇಳುವುದಿಲ್ಲ. ಬಂಡವಾಳಗಾರರು ಹೇಳಿದಂತೆ ಸರ್ಕಾರ ಕೇಳುತ್ತದೆ; ಮುಕ್ತ ಆರ್ಥಿಕ ನೀತಿಯ ಹರಿಕಾರರ ಪ್ರಕಾರ ಜನರಿಗೆ ರಾಜಕೀಯ ಸ್ವಾತಂತ್ರ್ಯವಿರುತ್ತದೆ; ಆರ್ಥಿಕ ಸ್ವಾತಂತ್ರ್ಯ ಇರುವುದಿಲ್ಲ. ಆರ್ಥಿಕ ಅಸಮಾನತೆಯು ಸ್ವಾಭಾವಿಕ ನೆಲೆಯಾಗಿರುತ್ತದೆ.”

ಹರ್ಬರ್ಟ್ ಅಪ್ತೇಕರ್‌ ಅವರು ಹೇಳಿದ ಮಾತುಗಳು ನಮ್ಮ ದೇಶದಲ್ಲಿ ನಿಜವಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಅಂದರೆ ಅಸಮಾನತೆಯನ್ನು ಸಹಜವೆಂದು ಒಪ್ಪಿ ಮುಕ್ತ ಆರ್ಥಿಕ ಪದ್ಧತಿಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದನ್ನು ಮರೆಮಾಚಲು ಆರ್ಥಿಕ ಸುಧಾರಣೆಗೆ ಮಾನವೀಯ ಮುಖ’ ಎಂಬ ಹೊಸ ಪರಿಭಾಷೆಯನ್ನು ಬಳಸಲಾಗುತ್ತಿದೆ.

ಎಲ್ಲಕ್ಕಿಂತ ಅಪಾಯಕಾರಿಯಾದ ಅಂಶವೆಂದರೆ ಬಂಡವಾಳಗಾರರು ಸರ್ಕಾರವನ್ನು ನಿಯಂತ್ರಿಸುವುದು; ಬಂಡವಾಳವೇ ಭಗವಂತನಾಗುವುದು. ಈ ಮೂಲಕ ಆರ್ಥಿಕ ನಾಯಕತ್ವವೇ ಆದರ್ಶದ ಮಾದರಿಯಾಗುವುದು.

ಆರ್ಥಿಕ ನಾಯಕತ್ವವು ನಾಯಕತ್ವದ ಇತರೆ ಮಾದರಿಗಳನ್ನು ಮಸುಕು ಮಾಡಿಬಿಡುತ್ತದೆ. ಗಾಂಧಿ, ಅಂಬೇಡ್ಕರ್, ವಿವೇಕಾನಂದರಂತಹ ಸಮಾಜ ಸುಧಾರಕರ ಸ್ಥಾನವನ್ನು ಆರ್ಥಿಕ ಸುಧಾರಕರು ಆಕ್ರಮಿಸಿಕೊಳ್ಳುತ್ತಾರೆ. ಟಾಗೂರ್, ಪ್ರೇಮಚಂದ್, ಕುವೆಂಪು, ಕಾರಂತ, ಬೇಂದ್ರೆ, ಗುಬ್ಬಿ ವೀರಣ್ಣ, ರಾಜಕುಮಾರ್ – ಮುಂತಾದ ಸಾಂಸ್ಕೃತಿಕ ಮಾದರಿಗಳು ಯುವಕರ ಮನಸ್ಸಿನಲ್ಲಿ ಬೇರೂರುವುದು ಕಷ್ಟವಾಗುತ್ತದೆ. ಜಾಗತೀಕರಣದ ಹೆಸರಲ್ಲಿ ಬಂದ ಆರ್ಥಿಕ ಪದ್ಧತಿಯು ರಾಜಕೀಯ ನಾಯಕತ್ವವನ್ನು ಬಂಡವಾಳದಿಂದ ಬಗ್ಗಿಸಿದರೆ, ಧಾರ್ಮಿಕ ನಾಯಕತ್ವವನ್ನು ಅದೇ ಮಾದರಿಯಿಂದ ಗೆಲ್ಲುತ್ತದೆ. ಹೀಗಾಗಿ ಆರ್ಥಿಕ ನಾಯಕತ್ವವು ಉದ್ಯಮಕ್ಷೇತ್ರಕ್ಕೆ ಮಾತ್ರ ನಾಯಕತ್ವವನ್ನು ಸೀಮಿತಗೊಳಿಸಿಕೊಳ್ಳುವುದಿಲ್ಲ. ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ – ಹೀಗೆ ಎಲ್ಲ ಕ್ಷೇತ್ರಗಳಿಗೂ ವ್ಯಾಪಿಸುತ್ತ ತನ್ನ ಮೌಲ್ಯಗಳನ್ನೇ ಅಂತಿಮವೆಂಬಂತೆ ಸ್ಥಾಪಿಸುತ್ತ, ಮನುಕುಲದ ಮನೋಧರ್ಮವನ್ನೇ ಬದಲಾಯಿಸತೊಡಗುತ್ತದೆ. ನಮ್ಮ ದೇಶ ಇಂಥ ಪ್ರಕ್ರಿಯೆಯ ಭಾಗವಾಗಿ ಬಿಟ್ಟಿದೆ :

ಕೃಷಿ ಪ್ರಧಾನ ದೇಶವು ಉದ್ಯಮ ಪ್ರಧಾನವಾಗುತ್ತಿದೆ. ಕೋಮು ಸಾಮರಸ್ಯದ ಸ್ಥಾನಕ್ಕೆ ಕೋಮು ಸಂಘರ್ಷ ಬಂದು ನಿಂತಿದೆ. ಸಾಮಾಜಿಕ ಕಾಳಜಿಯ ಬದಲು ಸಂಪತ್ತಿನ ಕಾಳಜಿ ಮುಖ್ಯವಾಗುತ್ತಿದೆ. ಇದು ಆರ್ಥಿಕ ನಾಯಕತ್ವಕ್ಕೆ ಅಪರಿಮಿತ ಆದ್ಯತೆ ನೀಡಿದ್ದರಿಂದಾಗುತ್ತಿರುವ ಅಪಾಯ. ಇಂಥ ಸಂದರ್ಭದಲ್ಲಿ ವಿವಿಧ ನಾಯಕತ್ವಗಳು ಜಾಗೃತವಾಗಬೇಕು. ಕಾಲದೊಳಗಿದ್ದೂ ಕಾಲವನ್ನು ಮೀರುವ ಸಾಂಸ್ಕೃತಿಕ ನಾಯಕತ್ವ; ಜಾತಿಯ ವಾಸ್ತವದೊಳಗಿದ್ದೂ ಜಾತಿಯನ್ನು ಮೀರುವ ಸಾಮಾಜಿಕ ನಾಯಕತ್ವ, ಧರ್ಮದೊಳಗಿದ್ದೂ ಧರ್ಮವನ್ನು ಮೀರುವ ಧಾರ್ಮಿಕ ನಾಯಕತ್ವ, ಪಕ್ಷದೊಳಗಿದ್ದೂ ಪಕ್ಷವನ್ನು ಮೀರುವ ರಾಜಕೀಯ ನಾಯಕತ್ವ ನಮಗೆ ದೊರೆತೀತೆ ? ಆರ್ಥಿಕ ನಾಯಕತ್ವದ ಆಕ್ರಮಣಶೀಲತೆ ನಿಂತೀತೆ ? ಈ ಹಂತದಲ್ಲಿ ಖಲೀನ್ ಗಿಬ್ರಾನ್ ತನ್ನ ಸಂದರ್ಭದಲ್ಲಿ ಹೇಳಿದ ಮಾತು ನೆನಪಿಗೆ ಬರುತ್ತಿದೆ :

“ತಮಟೆ ಬಡಿದು ಆಕ್ರಮಣಕಾರರನ್ನು ಬರಮಾಡಿಕೊಳ್ಳುವ ನಾಡಿನ ಬಗೆಗೆ ದುಃಖವಾಗುತ್ತಿದೆ ನನಗೆ; ನಿದ್ರೆಯಲ್ಲಿ ಮಾತ್ರ ಆಕ್ರಮಣಕಾರರನ್ನು ದ್ವೇಷಿಸುತ್ತ ಎಚ್ಚರದಲ್ಲಿ ಒಪ್ಪಿಕೊಳ್ಳುವ ನಾಡಿನ ಬಗೆಗೆ ದುಃಖವಾಗುತ್ತಿದೆ ನನಗೆ; ಬಲಿಗಂಬದ ಮೇಲೆ ಕೊರಳನ್ನಿಡುವ ತನಕ ದಂಗೆಯೇಳದ ನಾಡನ್ನು ಕಂಡು ದುಃಖವಾಗುತ್ತಿದೆ ನನಗೆ.” – ಇನ್ನೇನು ಹೇಳಲಿ ? ಈ ದುಃಖ ದಿಟ್ಟದನಿಯಾಗಿ ಹೊರಹೊಮ್ಮಲಿ.

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಥದ ಕಥೆ
Next post ಸಂಜೆಯ ಸೂರ್‍ಯ

ಸಣ್ಣ ಕತೆ

 • ಕತೆಗಾಗಿ ಜತೆ

  ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

 • ಮಂಜುಳ ಗಾನ

  ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

 • ಮನೆ “ಮಗಳು” ಗರ್ಭಿಣಿಯಾದಾಗ

  ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

 • ಅಮ್ಮ

  ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

 • ಸ್ವಯಂಪ್ರಕಾಶ

  ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…