ಲೇಖಕನ ತಡೆಯೂ ಮಾಯಕಸ್ಥಿತಿಯೂ

ಲೇಖಕನ ತಡೆಯೂ ಮಾಯಕಸ್ಥಿತಿಯೂ

ಲೇಖಕನ ತಡೆ (Writer’s block) ಎನ್ನುವುದು ಸಾಮಾನ್ಯವಾಗಿ ಎಲ್ಲಾ ಸೃಜನಶೀಲ ಲೇಖಕರೂ ಒಂದಲ್ಲ ಒಂದು ಕಾಲದಲ್ಲಿ ಅನುಭವಿಸುವ ಸಂಕಟ. ಇಲ್ಲಿ ಲೇಖಕ ಏನೋ ಬರೆಯಬೇಕೆಂದಿದ್ದಾನೆ, ಅಥವಾ ಬರೆದುದನ್ನು ಮುಂದುವರಿಸಬೇಕೆಂದಿರುತ್ತಾನೆ. ಆದರೆ ಹೇಗೆಂದು ಮಾತ್ರ ಆತನಿಗೆ ತಿಳಿಯುವುದಿಲ್ಲ. ಹೇಳಬೇಕೆಂದಿರುವುದನ್ನೆಲ್ಲ ಈಗಾಗಲೇ ತಾನು ಹೇಳಿಯಾಗಿದೆ, ಅಥವಾ ಇತರರು ಹೇಳಿದ್ದಾರೆ ಎಂದು ಆತನಿಗೆ ಅನಿಸಬಹುದು. ಅಥವಾ ತಾನು ಹೇಳಬೇಕೆಂದಿರುವುದು ಅಷ್ಟೇನೂ ಮುಖ್ಯಯವಾಗಿಲ್ಲ ಅನಿಸಬಹುದು. ಹೊಸ ಪ್ರಯೋಗ ಮಾಡಬೇಕು, ಆದರೆ ಹೇಗೆಂದೇ ತಿಳಿಯದೆ ಇರಬಹುದು. ತನ್ನ ಸೃಜನಶೀಲತೆಯ ಬಗ್ಗೆಯೇ ಆತನಿಗೆ ಅನುಮಾನ ಹುಟ್ಟಬಹುದು. ಬರೆದುದನ್ನೆಲ್ಲ ಆತ ಹರಿದು ಕಸದ ಬುಟ್ಟಿಗೆ ಸೇರಿಸಬಹುದು. ಹಾಗೆ ಮಾಡುವುದೇ ಉತ್ತಮಗುಣಮಟ್ಟದ ಕುರಿತಾಗಿರುವ ತನ್ನ ಕಾಳಜಿಗೆ ಸಾಕ್ಷಿ ಎಂದು ಆತ ಭ್ರಮಿಸಬಹುದು ಕೂಡಾ! ಅಮೇರಿಕನ್ ಕಾದಂಬರಿಕಾರ ಬರ್ನಾರ್ಡ್ ಮಲಮೂಡ್‌ನ The Tenants ಎಂಬ ಕಾದಂಬರಿಯಲ್ಲಿ ಒಬ್ಬ ಕಪ್ಪು ಲೇಖಕ ಇನ್ನೊಬ್ಬ ಯೆಹೂದಿ ಲೇಖಕ ಇಬ್ಬರೂ ಕಾದಂಬರಿಕಾರರೆಂದು ಲೆಕ್ಕ. ಆದರೆ ಇವರಿಗೂ ತಾವು ಬರೆದುದರಲ್ಲಿ ವಿಶ್ವಾಸವಿಲ್ಲ. ಆದ್ದರಿಂದ ಪ್ರತಿ ದಿನ ತಾವು ಬರೆದು ಚೂರು ಮಾಡಿದ ಕಾಗದಗಳನ್ನು ಹೊರಗೆ ಕಸದ ಡಬ್ಬಿಯಲ್ಲಿ ತುಂಬುತ್ತ ಇರುತ್ತಾರೆ. ಹಾಗೂ ಪರಸ್ಪರರಿಗೆ ಗೊತ್ತಾಗದಂತೆ, ಒಬ್ಬರು ಇನ್ನೊಬ್ಬರು ಏನು ಬರೆದು ಹರಿದು ಹಾಕಿದ್ದಾರೆ ಎಂದು ಈ ಚೂರುಗಳನ್ನು ಹೆಕ್ಕಿ ನೋಡುತ್ತಲೂ ಇರುತ್ತಾರೆ!

ಲೇಖಕನ ತಡೆ ಎನ್ನುವುದೊಂದು ಮಾನಸಿಕ ಅವಸ್ಥೆ. ಇದು ಕ್ರಮೇಣ ಖಿನ್ನತೆಗೆ ಕಾರಣವೂ ಆಗುತ್ತದೆ. ಹಾಗೂ ಎಲ್ಲ ಖಿನ್ನತೆಯಂತೆ ಇದೂ ಸ್ವಯಂ ಪೋಷಕವಾಗಿದ್ದು ಬೇರೆ ಬೇರೆ ರೀತಿಗಳಲ್ಲಿ ಪ್ರಕಟಗೊಳ್ಳಬಹುದು. ಉದಾಹರಣೆಗೆ, ಇತರ ಲೇಖಕರ ಬರಹಗಳ ಬಗ್ಗೆ ನಿರಾಸಕ್ತಿ, ದ್ವೇಷಾಸೂಯೆ ಅಥವಾ ಕ್ರೋಧ. ತನ್ನನ್ನು ಎಲ್ಲರೂ ಕಡೆಗಣಿಸುತ್ತಿದ್ದಾರೆ ಎಂಬ ಕೇಳರಿಮೆ, ಸಹಲೇಖಕರಿಂದ ಆದಷ್ಟೂ ದೂರವಿರುವುದು, ಯಾವ ಸಭೆ ಸಮಾರಂಭಗಳಿಗೂ ಹೋಗದಿರುವುದು. ತನ್ನ ಕೃತಿಗಳ ಮೇಲೆ ಬಂದಿರುವ ಲೇಖನಗಳನ್ನು ಓದಲು ಭಯವೆನಿಸುವುದು, ಯಾರಾದರೂ ತನ್ನ ಕುರಿತು ಒಳ್ಳೆಯ ಮಾತಾಡಿದರೆ ಅದು ಉದ್ದೇಶಪೂರ್ವಕ ಎಂದು ತಿಳಿದುಕೊಳ್ಳುವುದು. ಜನರೊಡನೆ ಆತ್ಮಾವಹೇಳನದ ಮಾತುಗಳನ್ನು ಆಡುವುದು, ಸಾಹಿತ್ಯದ ಇಂದಿನ ಅವಸ್ಥೆಯನ್ನು ಹಳಿಯುವುದು. ಬೇಕೆಂದೇ ಮೌನವಾಗಿರುವುದು. ‘ಸ್ಫೂರ್ತಿ’ಯನ್ನು ಹುಡುಕಿಕೊಂಡು ಹೋಗುವುದು, ಕುಡಿತ ಸಿಗರೇಟು ಮುಂತಾದ ಚಟಗಳಿಗೆ ತನ್ನನ್ನು ತಾನು ಒಡ್ಡಿಕೊಳ್ಳುವುದು ಇತ್ಯಾದಿ.

ಕೆಲವು ಲೇಖಕರು ದಿನಕ್ಕೆ ಇಂತಿಷ್ಟು ಪುಟಗಳನ್ನು ತಾನು ಬರೆಯಲೇಬೇಕು ಎಂಬ ಶಿಸ್ತನ್ನು ಹೇರಿಕೊಳ್ಳುವುದಿದೆ-ಹೆಚ್ಚಾಗಿ ಕಾದಂಬರಿಕಾರರು. ಬ್ರಿಟಿಷ್ ಕಾದಂಬರಿಕಾರ ಸಾಮರ್ಸೆಟ್ ಮಾಮ್ ದಿನಕ್ಕೆ ಎರಡು ಪುಟಗಳಷ್ಟು ಬರೆಯುತ್ತಿದ್ದನಂತೆ. ಕಾದಂಬರಿಕಾರನಲ್ಲದ ಬರ್ಟೆಂಡ್ ರಸೆಲ್ ಕೂಡಾ ಪ್ರತಿದಿನ ಬರೆಯುತ್ತಿದ್ದ. ವಿಪುಲವಾಗಿ ಬರೆಯುವ ಎಲ್ಲರೂ ಇಂಥ ದೈನಿಕವೊಂದನ್ನು ಆಚರಿಸುತ್ತಿರಲೇಬೇಕು. ಕನ್ನಡದ ಅನಕೃ ಬರವಣಿಗೆಯಿಂದಲೇ ಜೀವಿಸುತ್ತಿದ್ದುದರಿಂದ ಪ್ರತಿದಿನವೂ ಬರೆಯುವುದು ಅವರಿಗೆ ಅನ್ನಾಹಾರದ ಪ್ರಶ್ನೆಯಾಗಿದ್ದಿತು. ಮಾತ್ರವಲ್ಲದೆ ಅವರು ಪ್ರಕಾಶಕರಿಂದ ಮುಂಗಡ ಹಣ ಪಡೆಯುತ್ತಿದ್ದ ಕಾರಣ ಈ ಪ್ರಕಾಶಕರು ಅವರ ಮನೆ ಮುಂದೆ ಬಂದು ಹಸ್ತಪ್ರತಿಗೆ ಕಾಯುತ್ರಿದ್ದರೆಂದೂ ಕೇಳಿದ್ದೇನೆ. ಇಂಥ ಒತ್ತಡದಲ್ಲಿ ಬರೆಯಬೇಕಾಗಿದ್ದ ಅನಕೃ ಎರಡು ಮೂರು ಕಾದಂಬರಿಗಳನ್ನು ಒಟ್ಟೊಟ್ಟಿಗೇ ಬರೆಯುತ್ತಿದ್ದರು ಎಂಬ ವದಂತಿಯೂ ಇದೆ! ಇಂಥ ಕಡೆ ಲೇಖಕನಿಗೆ “ಲೇಖಕನ ತಡೆ” ಎನ್ನುವ ದುಂದುಗಾರಿಕೆ ಸಾಧ್ಯವೇ ಆಗದು. ಗದುಗಿನ ಭಾರತದಂಥ ಬೃಹತ್ ಕೃತಿಯನ್ನು ರಚಿಸಿದ ಕುಮಾರವ್ಯಾಸನಿಗೂ ಇಂಥ ಮಾನಸಿಕ ತೊಳಲು ಎಂದೂ ಬರಲಿಲ್ಲವೇ? ನಿಜ, ಕುಮಾರವ್ಯಾಸನ ಮುಂದಾದರೆ ಒಂದು ಸಿದ್ದ ಕತೆಯೇನೋ ಇತ್ತು. ಆದರೂ ದಿನವೂ ಕೂತು ಕಾವ್ಯ ರಚಿಸಬೇಕಲ್ಲ? ಅವನು ವೀರನಾರಾಯಣ ದೇವಾಲಯದ ಮುಂದಿನ ಕೆರೆಯಲ್ಲಿ ಮಿಂದು ಒದ್ದೆ ಬಟ್ಟೆಯಲ್ಲೇ ಬರೆಯಲು ಕೂತುಕೊಳ್ಳುತ್ತಿದ್ದ ಎಂಬ ಕತೆಯಿದೆ. ಹಾಗೂ ಬಟ್ಟೆ ಆರುವತನಕ ಬರೆಯುತ್ತಿದ್ದನಂತೆ. ಗದಗಿನಂಥ ಒಣಭೂಮಿಯಲ್ಲಿ ಬಟ್ಟೆ ಆರುವುದಕ್ಕೆ ಎಷ್ಟು ವೇಳೆ ಬೇಕು? ಒಂದೆರೆಡು ಗಂಟೆಯಲ್ಲಿ ಬಟ್ಟೆ ಆರುತ್ತದೆ. ಹೀಗೆ ದಿನಕ್ಕೆ ಒಂದೆರಡು ಗಂಟೆ ಬರೆದು ಮುಗಿಸಿದ ಕಾವ್ಯವೇ ಗದುಗಿನ ಭಾರತ? ಕುಮಾರವ್ಯಾಸ ತನ್ನ ಅಗ್ಗಳಿಕೆಗಳನ್ನು ಹೇಳಿಕೊಳ್ಳುವ ಈ ಕೆಳಗಿನ ಪದ್ಯ ಪ್ರಸಿದ್ಧವಾದುದು:

ಹಲಗೆ ಬಳಪವ ಪಿಡಿಯದೊಂದ-
ಗ್ಗಳಿಕೆ ಪದವಿಟ್ಟಳುಪದೊಂದ-
ಗ್ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ
ಬಳಸಿ ಬರೆಯಲು ಕಂಠಪತ್ರದ
ವುಲುಹುಗೆಡದಗ್ಗಳಿಕೆಯೆಂಬೀ
ಬಲುಹು ಗದುಗಿನ ವೀರನಾರಾಯಣನ ಕಿಂಕರಗೆ

ಕುಮಾರವ್ಯಾಸನ ಮುಂದೆ ಸಿದ್ಧ ಕತೆಯಿದ್ದರೂ, ಈ ಮೇಲಣ ನಾಲ್ಕು ‘ಅಗ್ಗಳಿಕೆಗಳ’ ಕಟ್ಟುಪಾಡಿನಲ್ಲಿ ದಿನವೂ ಬರೆಯುವುದೇನೂ ಸಾಮಾನ್ಯ ವಿಚಾರವಲ್ಲ-ಅದೂ ಷಟ್ಪದಿಯ ಪ್ರಾಸ ಲಯ ಮೊದಲಾದ ಛಂದಸ್ಸಿನ ಬಂಧವನ್ನು ಕಾಪಾಡಿಕೊಂಡು!

ಶಿವರಾಮ ಕಾರಂತರ ರೀತಿ ಪ್ರತ್ಯೇಕ. ಅವರು ತಿಂಗಳುಗಟ್ಟಲೆ ಊರೂರು ಅಲೆಯುವವರು. ಶೆಟ್ಟಿ ಬಿಟ್ಟಲ್ಲಿ ಪಟ್ಟಣ ಎಂಬಂತೆ ಸಂಜೆಯಾದಲ್ಲಿ ತಂಗುವವರು. ತಾವು ತಂಗಿದ ಮನೆಯವರ ಜೀವನಕ್ರಮವನ್ನು ಅಭ್ಯಾಸ ಮಾಡಿಕೊಳ್ಳುವವರು- ಪ್ರದೇಶ, ಜಾತಿ, ಮತ, ಕೃಷಿ, ವ್ಯಾಪಾರ, ಕುಟುಂಬದ ಸದಸ್ಯರು ಇತ್ಯಾದಿ ಎಲ್ಲ ವಿವರಗಳನ್ನೂ ಮಾತುಕತೆಯ ಮೂಲಕ ತಿಳಿದುಕೊಳ್ಳುವವರು. ಇದೆಲ್ಲ ಕಾದಂಬರಿ ಬರೆಯಬೇಕೆಂಬ ಉದ್ದೇಶದಿಂದ ಮಾತ್ರವೂ ಅಲ್ಲ; ಜೀವನಾಸಕ್ತಿಯ ಕಾರಣದಿಂದ. ಆದ್ದರಿಂದ ಕಾರಂತರು ಆಡುಮೇದಂತೆ ಮೇಯುವವರು. ಮೇದುದೆಲ್ಲವನ್ನೂ ಅರಗಿಸಿಕೊಳ್ಳುವವರು. ಆವಾಗಲೆಲ್ಲ ಅವರ ಮನಸ್ಸಿನಲ್ಲಿ ಕಾದಂಬರಿಯೊಂದರ ಹಂದರ ಮೂಡುತ್ತಿದ್ದಿರಬೇಕು-ವಸ್ತು, ವಿಚಾರ, ಪದೇಶ, ಪಾತ್ರಗಳು ಇತ್ಯಾದಿ. ಆಮೇಲೆ ತಿಂಗಳೋ ಎರಡು ತಿಂಗಳೋ ಬಿಡುವು ಮಾಡಿಕೊಂಡು ಕಾದಂಬರಿಯನ್ನು ಮಾತಿನಲ್ಲಿ ಹೇಳುವರು, ಅದನ್ನು ಉಕ್ತಲೇಖಕನೋ ಲೇಖಕಿಯೋ ಬರೆದುಕೊಳ್ಳಬೇಕು. ಇಂಥ ಕಡೆಯೂ ಲೇಖಕನ ತಡೆಗೆ ಹೆಚ್ಚು ಆಸ್ಪದವಿಲ್ಲ.

ಆದರೆ ಲೇಖಕನ ತಡೆಯೆನ್ನುವುದೊಂದು ಸತ್ಯ. ಅದು ಹೇಗೆ ಉಂಟಾಗುತ್ತದೋ ಯಾರಿಗೂ ತಿಳಿಯದು. ಲೇಖಕನ ಸೃಜನಶೀಲತೆ ಬತ್ತಿದಾಗ ಎಂದು ಬೇಕಾದರೆ ಹೇಳಬಹುದು. ಆದರೆ ಹೀಗೆ ಬತ್ತುವುದೆಂದರೇನು? ಈ ತಡೆಯ ಸ್ವರೂಪವೂ ಅನೂಹ್ಯವಾದ್ದು. ಇದೊಂದು ತರದ ಮಾನಸಿಕ ಗೊಂದಲ. ಎಲ್ಲವೂ ಅಸ್ಪಷ್ಟವಾಗುವುದು. ಅಥವಾ ಸ್ಪಷ್ಟವಾದರೂ ಅವು ಕ್ಷುಲ್ಲಕವೆನಿಸುವುದು. ಮುಖ್ಯವಾಗಿ ಲೇಖಕನ ಸ್ವಯಂ ಪ್ರಜ್ಞೆ ಜಾಸ್ತಿಯಾಗುವುದು. ಇದರ ಹಿಂದಿನ ಕಾರಣ ಬಹುಶಃ ಶ್ರೇಷ್ಠತೆಯ ವ್ಯಸನ. ಇದಕ್ಕೆ ಇಂಗ್ಲಿಷ್ ಸಾಹಿತ್ಯದಲ್ಲಿನ ಉದಾಹರಣೆಯೊಂದನ್ನು ಕೊಡುವುದಾದರೆ, ಟಿ. ಎಸ್. ಎಲಿಯಟ್ “ವೇಸ್ಟ್ ಲ್ಯಾಂಡ್” ಬರೆದ ಹಿನ್ನೆಲೆ. ಅದು ಸಾವಿರದ ಒಂಬೈನೂರ ಇಪತ್ತರ ಆದಿಕಾಲ. ಎಲಿಯಟ್ ಮತ್ತು ಕೋನ್ರಾಡ್ ಐಕನ್ ಎಂಬ ಇನ್ನೊಬ್ಬ ಕವಿ ಇಬ್ಬರೂ ಲಂಡನ್‌ನಲ್ಲಿ ಬೇರೆ ಬೇರೆ ಕಛೇರಿಗಳಲ್ಲಿ ಕೆಲಸದಲ್ಲಿದ್ದರು. ಎಲಿಯಟ್ ‘ವೇಸ್ಪ್ ಲ್ಯಾಂಡ್’ ಕಾವ್ಯದ ಬಗ್ಗೆ ಇನ್ನೂ ಯೋಚಿಸಿಯೇ ಇರಲಿಲ್ಲ. ಆದರೂ ಅಂಥದೊಂದು ಪ್ರಯತ್ನದ ಕಡೆಗೆ ಅವನ ಮನಸ್ಸು ತುಯ್ಯುತ್ತಿತ್ತು. ಆ ಹೊತ್ತಿಗಾಗಲೇ ಅವನ ಸಮಕಾಲೀನರಾದ ಜೇಮ್ಸ್ ಜಾಯ್ಸ್, ಎಝ್ರಾ ಪೌಂಡ್ ಮುಂತಾದವರು ಪ್ರಾಯೋಗಿಕ ಕೃತಿಗಳನ್ನು ರಚಿಸಿ ಪ್ರಸಿದ್ಧರಾಗಿದ್ದರು. ತಾನೇನೂ ಅಂಥಾ ಮಹತ್ವದ ಪ್ರಯತ್ನವನ್ನು ಇದುವರೆಗೆ ಮಾಡಿಲ್ಲವಲ್ಲ ಎಂಬ ಕೊರಗು ಎಲಿಯಟ್‌ನ ಮನಸ್ಸನ್ನು ಕೊರೆಯುತ್ತಿತ್ತು. ಈ ಮಹತ್ವದ ಕೃತಿಯ ಆಕಾಂಕ್ಷೆಯೇ ಅವನ ಬರವಣಿಗೆಗೊಂದು ತಡೆಯಾಗಿ ಅವನಿಗೆ ಏನನ್ನೂ ಬರೆಯುವುದಕ್ಕೇ ಆಗುತ್ತಿರಲಿಲ್ಲ. ಅವನ ಕೌಟುಂಬಿಕ ಜೀವನವೂ ಕುಸಿದುಬೀಳುತ್ತಿತ್ತು. ಎಲಿಯಟ್ ಮತ್ತು ಐಕನ್ ಇಬ್ಬರೂ ಅಮೇರಿಕದಿಂದ ಬ್ರಿಟನಿಗೆ ಬಂದಿದ್ದವರು. ಮಧ್ಯಾಹ್ನ ಇಬ್ಬರೂ ಲಂಡನಿನ ಖಾನಾವಳಿಯೊಂದರಲ್ಲಿ ಒಟ್ಟಿಗೇ ಊಟಮಾಡುತ್ತಿದ್ದರು. ಎಲಿಯಟ್ ತನ್ನ ಬರೆಯಲಾಗದ ಸಮಸ್ಯೆಯನ್ನು ಐಕನ್‌ನ ಬಳಿ ಹೇಳಿಕೊಳ್ಳುತ್ತಿದ್ದ. ಅದು ಫ್ರಾಯ್ಡಿಯನ್ ಮನೋವಿಶ್ಲೇಷಣೆ ಭಾರೀ ಜೋರಾಗಿ ಸಾಗುತ್ತಿದ್ದ ಕಾಲ. ಕವಿಗಳು, ಕಾದಂಬರಿಕಾರರು, ಕಲಾವಿದರು ಎಲ್ಲರೂ ತಾವು ಮನೋರೋಗಕ್ಕೆ ತುತ್ತಾಗಿದ್ದೇವೆಂದುಕೊಂಡು ಮನಃಶ್ಶಾಸ್ತ್ರಜ್ಞರಿಂದ ವುನೋವಿಶ್ಲೇಷಣೆ ಮಾಡಿಸಿಕೊಳ್ಳುವುದು ಒಂದು ಪ್ಯಾಶನ್ ಆಗಿಬಿಟ್ಟಿತ್ತು. ಕೋನ್ರಾಡ್ ಐಕನ್ ಕೂಡಾ ಇದಕ್ಕೆ ಒಳಪಟ್ಟಿದ್ದ. ಐಕನ್ ಎಲಿಯಟ್‌ಗೆ ತಿಳಿಸದೆಯೆ ತನ್ನ ಮನೋವಿಶ್ಲೇಷಕನಲ್ಲಿ ಗೆಳೆಯನ ಸಮಸ್ಯೆಯನ್ನು ಮುಂದಿಟ್ಟ. ಅದಕ್ಕೆ ವಿಶ್ಲೇಷಕ, ‘ಆತ ತನ್ನನ್ನು ದೇವರೆಂದು ತಿಳಿದುಕೊಂಡಿದ್ದಾನೆ. ಅದೇ ಅವನ ಮುಖ್ಯ ಸಮಸ್ಯೆ’ ಎಂದು ಉತ್ತರಿಸಿದ. ಐಕನ್ ಇದನ್ನು ಎಲಿಯಟ್‌ಗೆ ಹೇಳಿದಾಗ ಮೊದಲು ಅವನಿಗೆ ಬಂದದ್ದು ಸಿಟ್ಟು-ತನ್ನ ಪರವಾನಗಿ ಇಲ್ಲದೆ ತನ್ನ ವಿಚಾರವನ್ನು ಈ ವಿಶ್ಲೇಷಕನಲ್ಲಿ ಹೇಳಿದುದುದಕ್ಕೆ. ಆದರೆ ಎಲಿಯಟ್‌ಗೆ ನಿಜಕ್ಕೂ ಇದರಿಂದ ಲಾಭವೇ ಆಯಿತು. ತಾನು ಬರವಣಿಗೆಯಲ್ಲಿ ಪರಿಪೂರ್ಣತೆಯನ್ನು ಅಪೇಕ್ಷಿಸುತ್ತಿದ್ದೇನೆ, ಇದೇ ತನ್ನ ಸಮಸ್ಯೆ ಎನ್ನುವುದು ಅರ್ಥವಾಯಿತು. ಆಮೇಲೆ ಎಲಿಯಟ್ ರಜೆ ತೆಗೆದು ಸ್ವಿಟ್ಸರ್ಲೆಂಡಿಗೆ ಹೋಗಿ ಅಲ್ಲಿ ತನ್ನ ಅತಿಮುಖ್ಯ ಕಾವ್ಯ ‘ವೇಸ್ಟ್ ಲ್ಯಾಂಡ್’ನ್ನು ರಚಿಸುತ್ತಾನೆ.

ವಾಸ್ತವದಲ್ಲಿ ಲೇಖಕನ ತಡೆ ಕಾಣಿಸಿಕೊಳ್ಳುವುದು ಹೆಚ್ಚಾಗಿ ಇಂಥ ಮಹತ್ವಾಕಾಂಕ್ಷೆಯಿರುವ ಲೇಖಕರಲ್ಲೇ. ಬರೆದುದೆಲ್ಲವೂ ಮಹತ್ವದ್ದಾಗಿರಬೇಕು, ಪ್ರತಿಯೊಂದು ಕೃತಿಯೂ ಹಿಂದಿನದಕಿಂತ ಉತ್ತಮವಾಗಿರಬೇಕು, ಜಾಗತಿಕ ನೆಲೆಯಲ್ಲಿ ಶೋಭಿಸುವಂತಿರಬೇಕು ಎಂದೆಲ್ಲ ಅಪೇಕ್ಷೆಗಳನ್ನು ಇಟ್ಟುಕೊಂಡು ಈ ಗುಂಗಿನಲ್ಲಿ ಬರವಣಿಗೆಯನ್ನು ಸದಾ ಮುಂದಕ್ಕೆ ಹಾಕುತ್ತಿರುವುದೇ ಈ ತಡೆಗೆ ಕಾರಣವಾಗುವುದು. ಬಹುಶಃ ಯಾವ ಕಾಲದ ಯಾವ ಲೇಖಕನೂ ಇದಕ್ಕೆ ಹೊರತಲ್ಲವೆಂದು ತೋರುತ್ತದೆ. ಇದರಿಂದ ಹೊರಬರುವುದಕ್ಕೆ ಒಂದೇ ದಾರಿಯೆಂದರೆ ಈ ಕಾರಣವನ್ನು ಒಪ್ಪಿಕೊಳ್ಳುವುದು. ಯಾವ ಕುಡಿತವಾಗಲಿ, ಉತ್ತೇಜಕಪದಾರ್ಥಗಳ ಸೇವನೆಯಾಗಲಿ ಉಪಯೋಗಕ್ಕೆ ಬರದು. ನಿಜ, ಕೆಲವೊಮ್ಮೆ ಹೊಸ ಯಾತ್ರೆ, ಹೊಸ ಓದು ಮನಸ್ಸಿಗೆ ಬಿಡುಗಡೆ ನೀಡಬಹುದು. ಆದರೆ ಇವೆಲ್ಲ ಪರ್ಯಾಯವಾಗಿ ಮಾತ್ರ ಕೆಲಸ ಮಾಡುವಂಥವು-ನೀನೊಬ್ಬ ಮನುಷ್ಯ, ನಿನ್ನ ಸಾಹಸಗಳಿಗೆ ಮಿತಿಯಿದೆ, ಹೊರಗಿನ ಲೋಕ ನೋಡು, ಅದು ನೀನಿಲ್ಲದೆಯೂ ನಡೆಯುತ್ತದೆ ಎನ್ನುವುದನ್ನು ಲೇಖಕನಿಗೆ ಮನವರಿಕೆ ಮಾಡುವುದರ ಮೂಲಕ. ಪರಿಪೂರ್ಣತೆಗೆ ಕಾಯುವ ಮನುಷ್ಯ ಕಾದುಕೊಂಡೇ ಇರುತ್ತಾನೆ. ಲೋಕ ಅವನನ್ನು ಬಿಟ್ಟು ಮುಂದೆ ಚಲಿಸಿರುತ್ತದೆ. ಇದರರ್ಥ ಲೇಖಕ ಅತಿಯಾದ ಸ್ವಯಂಪ್ರಜ್ಞೆಗೂ ಒಳಪಡಬಾರದು. ಮಗುವಿನ ಮುಗ್ಧತೆ ಬಹುಶಃ ಬೆಳೆದವರಿಗೆ ಸಾಧ್ಯವಾಗಲಾರದು. ಆದರೂ ಆಟದ ತಲ್ಲೀನತೆ, ಅದರಿಂದ ಬರುವ ಆನಂದ ದೊಡ್ಡವರೂ ಗಳಿಸಿಕೊಳ್ಳಬಹುದು. ಕಲೆಗಾರಿಕೆ ಇಂಥ ಮಾಯಕಸ್ಥಿತಿಯನ್ನು ಬಯಸುತ್ತದೆ. ಅದಕ್ಕೆ ಲೇಖಕ ತನ್ನನ್ನು ತಾನು ಒಡ್ಡಿಕೊಳ್ಳುವುದೆಂದರೆ ಅಹಂ ಎನ್ನುವುದನ್ನು ಮೀರುವುದು. ಇದೇ ಕಾರಣಕ್ಕೆ ಕುಮಾರವ್ಯಾಸ ವೀರನಾರಾಯಣನೆ ಕವಿ, ತಾನು ಕೇವಲ ಲಿಪಿಕಾರ ಎಂದುಕೊಂಡದ್ದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೬೭
Next post ನೀರಿನ ತೊಟ್ಟಿ

ಸಣ್ಣ ಕತೆ

 • ರಾಮಿ

  ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

 • ಕರಿಗಾಲಿನ ಗಿರಿರಾಯರು

  ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

 • ನಂಬಿಕೆ

  ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

 • ಜೀವಂತವಾಗಿ…ಸ್ಮಶಾನದಲ್ಲಿ…

  ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

 • ಮೈಥಿಲೀ

  "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…