ಯಾಕೆನ್ನ ಕಾವ್ಯ ಹೊಸ ಮಿಂಚಿರದೆ ಬರಡಾಯ್ತು ?
ಯಾಕಾಯ್ತು ದೂರ ವೈವಿಧ್ಯ ನಾವೀನ್ಯಕ್ಕೆ ?
ಹೊಸ ಕಾಲಗತಿಗೆ ಧೋರಣೆಗೆ ಶ್ರುತಿಗೊಡದಾಯ್ತು,
ಹೊಸ ಶೈಲಿ ತಂತ್ರ ಗಮನಿಸಲಿಲ್ಲ ಯಾತಕ್ಕೆ ?
ಇಂದಿಗೂ ಹಿಂದಿನಂತೊಂದೆ ಥರ ಹಾಡುವುದು.
ಹೊಸ ಕಾಣ್ಕೆಗೂ ಹಳೆಯ ಮಾತುಗಳೆ ಯಾಕಿಷ್ಟ ?
ಪದಪದದಲೂ ನನ್ನ ಹೆಸರು ಬಯಲಾಗುವುದು,
ಹುಟ್ಟು ನೆಲ ಹೊರಟುದೆಲ್ಲಿಂದ ಎಲ್ಲಾ ಸ್ಪಷ್ಟ.
ನನ್ನೊಲವೆ ನನ್ನೆಲ್ಲ ಕವಿತೆಯಲಿ ನೀನಷ್ಟೆ,
ನೀನು ಪ್ರೇಮ ಇವೆರಡೆ ನನ್ನ ಕಾವ್ಯದ ವಸ್ತು
ಹಳೆಯದನೆ ಹೊಸಹೆಣಿಗೆಯಲ್ಲಿ ಹೂಡುವುದಷ್ಟೆ,
ಬಳಸಿದ್ದುದನ್ನೆ ಬಳಸುವುದು ಮತ್ತೂ ಮತ್ತೂ,
ಸೂರ್ಯ ದಿನ ದಿನ ಹಳಬ ಹೊಸಬ ಎರಡೂ ಹೇಗೆ,
ಹಾಡಿದ್ದೆ ಹಾಡುವುದು ನನ್ನ ಒಲವೂ ಹಾಗೆ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 76
Why is my verse so barren of new pride