ಜೀವನದ ಮುಸ್ಸಂಜೆಯಲಿ
ಜವಾಬ್ದಾರಿಗಳೆಲ್ಲವ ಕಳೆದು
ನಾವೇ ನಾವಾಗಿರಬೇಕೆಂದು
ನಾವೇ ಕಟ್ಟಿದ ಗೂಡಲ್ಲಿ ನೆಲೆಯೂರಿದಾಗ
ನಮ್ಮನ್ನು ನಾವು ಕಳಕೊಂಡಿದ್ದೆವು.
ಎದುರಿಗಿದ್ದ ಮರುಭೂಮಿಯಲಿ
ಹುಡುಕಹೊರಟಾಗ ಸಿಕ್ಕಿದ್ದೆಲ್ಲ ಬರೆ ಮರುಳು!
ಪ್ರೀತಿಯ ಹಸಿರಿರಲಿಲ್ಲ
ಒಲವಿನ ಹೂವಿರಲಿಲ್ಲ
ಅರಿವಿನ ಸಿಂಚನವಿರಲಿಲ್ಲ
ದುಡಿಮೆಯ ಹೋರಾಟದಲ್ಲಿ ಸರಿದಾಗಿತ್ತು
ನಾನೊಂದು ಕಡೆ ಅವನೊಂದು ಕಡೆ.
ಸಮಾನಾಂತರ ರೇಖೆಗಳಂತೆ!
ಬರೇ ಒಂದು ನೂಲೆಳೆಯ ಅಂತರ
ಆದರೆ ಒಂದಕ್ಕೊಂದು ಸೇರಲಾಗದ ದೂರ.
ಹೇಗಾಯ್ತು ಹೀಗೆ ಹತ್ತಿರವಿದ್ದರೂ ದೂರ?
ಒಸರುವುದೇ ಮರುಭೂಮಿಯಲ್ಲಿ ಒಯಸಿಸ್
ಉಕ್ಕಿ ಹರಿಯುವುದೇ ಪ್ರೀತಿ?
ಕೂಡುವವೇ ಸಮಾನಾಂತರ ರೇಖೆಗಳು
ಎಂದಾದರೂ ಒಂದು ದಿನ?
*****