Home / ಕಥೆ / ಸಣ್ಣ ಕಥೆ / ಒಂದೇ ಗುಂಡಿನ ಎರಡು ಸದ್ದು

ಒಂದೇ ಗುಂಡಿನ ಎರಡು ಸದ್ದು

ಅಮ್ಮಾ! ಹಾಲಿಗೆ ತೊಡಿ ನೀರ ಕಮ್ಮಿ ಹಾಕೇ, ನೀರ ರಾಶಿ ಕುಡಿತಿದೇ ನಿಮ್ಮೆಮ್ಮೆ ಅಂತೇ ಡೇರಿ ಸಾತಕ್ಕ ದಿನಾ ಹೀಂಯಾಳಿಸ್ತಿದ. ಇಲ್ಲದಿರೆ ನಾ ಹಾಲ ಕುಡುಕೆ ಹೋಗುಲಾ ನೋಡ್ ಅಳುಮುಂಜಿ ಮುಖದಲ್ಲಿ ಪರಿಮಳ ಕೂಗುತ್ತಾ ಬರುವುದ ಕಂಡ ಭವಾನಿ, ಸಾಕ್ ಸುಮ್ನೀರೇ! ನಿನ್ನ ನೋಡೆ ಹೇಳ್ತಿದ ಅದ. ಬಾಯ್ಮುಚ್ಚಂಡೇ ಬತ್ತಿಯಲ್ಲಾ, ಬ್ಯಾಸ್ಗೀಗೇ ಹಾಲ ತಿಳುನೇ ಅಂದೇ ಹೇಳ್ಬೇಕಾಗತ. ಮನೀಲೆ ಕಾಯ್ದಿಮಾಡುಕೇ ಬತ್ತಿದ. ಕಂಡೋರ ಕಡೆ ಮಾತಾಡುಕಾಗುಲಾ ಎನ್ನುತ್ತ ಹರಿಹಾಯ್ದಳು.

ಹಾಲಿನ ಡೇರಿ ಸಾತಕ್ಕ, ತನ್ನ ತಾಯಿ ಇಬ್ಬರೂ ತಮ್ಮ ತಪ್ಪಿಗೆ ತನ್ನ ಮೇಲೆ ಹಾರಿ ಬೀಳುವುದ ನೋಡಿ ಪರಿಮಳ ಇನ್ನಷ್ಟು ಉಮ್ಮಳಗೊಂಡಳು. ಶಾಲೆಗೆ ಹೋಗುವಾಗ ತಪ್ಪದೇ ಶಾಲೆ ಚೀಲ ಬಗಲಿಗೆ ಹಾಕಿದರೆ ಕೈಗೊಂದು ಹಾಲಿನ ಕ್ಯಾನು ತನ್ನ ದಿನದ ಸಂಗಾತಿಗಳು. ಅಷ್ಟಕ್ಕೂ ಸಾತಕ್ಕನಿಗೆ ಮಾತ್ರ ಹಾಲು ಕೊಡುವುದಲ್ಲ. ರಸ್ತೆ ಪಕ್ಕವೇ ಇರುವ ಮಂಗಳೂರು ಹೋಟೆಲ್ಲಿಗೆ ಕೂಡಾ ಕೊಡಬೇಕು. ಆದರೆ ಅವರು ಸಾತಕ್ಕನಂತೆ ಸುಮ್ಮನೆ ಕಿರಿಕಿರಿ ಮಾಡುವುದಿಲ್ಲ. ಆದರೆ ತನಗೆ ಅಲ್ಲಿ ನಿಲ್ಲುವ ಲಾರಿಗಳ ಕ್ಲೀನರುಗಳು ನೋಡುವ ಒಂದು ನಮೂನಿ ದೃಷ್ಟಿಗೆ ಇರಿಸುಮುರಿಸಾಗುತ್ತದೆ.. ಈ ಹಾಲು ಮಾರುವ ಕೆಲಸದಿಂದ ಎಂದು ಮುಕ್ತಿ ಎಂದುಕೊಳ್ಳುತ್ತಾ ಕ್ಯಾನು ಕೈಗೆತ್ತಿಕೊಂಡಳು.. ದುಡ್ಡು ತರಲು ಪ್ರತಿವಾರ ತಂದೆ ಹೋಗುತ್ತಾರೆ. ಹಾಗೆ ಹಾಲು ಮಾರಲು ಅಣ್ಣನನ್ನು ಕಳಿಸಿದರೆ ಏನಾಗುತ್ತಿತ್ತು. ಬಾಯಿ ತೆರೆದು ಹೇಳಬೇಕೆಂದುಕೊಂಡಳು. ಆದರೆ ಅಮ್ಮನ ಬೈಗುಳ ನೆನೆದು ಸುಮ್ಮನಾದಳು. ಅಮ್ಮನಂತೆ ಆ ಸಾತಕ್ಕನಿಗೂ ಅಣ್ಣನೆಂದರೆ ಹೆಚ್ಚು ಪ್ರೀತಿ. ತನ್ನಿಂದ ಆಗಾಗ ಅಂಗಳಕ್ಕೆ ಸೆಗಣಿ ಹಾಕಿಸಿಕೊಳ್ಳುವಾಗ ಮಾತ್ರ ತನ್ನ ಕೆಲಸ ಹೊಗಳುವುದ ಬಿಟ್ಟರೆ ಉಳಿದ ದಿನವೆಲ್ಲಾ ಒಂದಲ್ಲಾ ಒಂದು ಕಿರಿಕಿರಿ ಅವಳದು. ಆದರೆ ಅಪರೂಪಕ್ಕೆ ಅಣ್ಣ ಹಾಲು ಕೊಡಲು ಹೋದರೆ ಸಾತಕ್ಕ ಆತನಿಗೆ ಕಡೆದ ಮಜ್ಜಿಗೆ ಕೊಟ್ಟು ಉಪಚರಿಸಿ ಕಳಿಸುತ್ತಾಳೆಂದು ಅಣ್ಣ ಹೇಳುತ್ತಿರುವುದುಂಟು. ತನಗೆ ಮಾತ್ರ ಸಾತಕ್ಕ ಯಾಕೆ ಬೈಯುತ್ತಾಳೆ. ಇದೇ ವಿಚಾರ ಮಾಡುತ್ತಾ ಪರಿಮಳ ಸಾತಕ್ಕನ ಮನೆಯಂಗಳಕೆ ಬಂದು ನಿಂತು ಹತ್ತು ನಿಮಿಷವಾಯ್ತು.

ಸಾತಕ್ಕ.. ಸಾತಕ್ಕ.. ಒಂದೆರಡು ಬಾರಿ ಕರೆದರೂ ಒಳಗಿಂದ ಸದ್ದಿಲ್ಲ. ಗಂಡನಿಂದ ದೂರವಾದ ಆಕೆ ಹಾಲಿನ ಡೇರಿ ಮಾಡಿಕೊಂಡಿದ್ದಳು. ಇದ್ದ ಒಬ್ಬ ಮಗನ ಹೊರಗಿಟ್ಟು ಓದಿಸುತ್ತಿದ್ದಳು. ಬಹಳ ಘಟವಾಳಿ ಎಂದು ಹೆಸರಾದವಳು. ಹಂಚಿನ ಸಣ್ಣ ಮನೆಯಲ್ಲಿ ಮೂರೇ ಮೂರುಕೋಣೆಗಳು. ಮನೆಯಿಂದ ಕೊಂಚ ದೂರ ಹಿತ್ತಲಲ್ಲಿ ತೆಂಗಿನ ಮಡಲುಗಳನ್ನೆ ಕಟ್ಟಿ ಮಾಡಿದ ಸ್ನಾನದ ಮನೆ ಇತ್ತು. ಆಕೆ ಒಬ್ಬಳೆ ಇರುತ್ತಿದ್ದಳು. ಕೆಲವೊಮ್ಮೆ ಸಾತಕ್ಕ ಸ್ನಾನ ಮಾಡಲು ಹೋಗುವುದಿದೆ. ಆಗೆಲ್ಲ ಆಕೆ ಮನೆ ಮುಂದಿನ ಕದ ಮುಚ್ಚಿ ಹೋಗುವ ಯಾವ ಕ್ರಮವನ್ನೂ ಯಾವತ್ತೂ ಅನುಸರಿಸಿದ್ದಿಲ್ಲ. ಸಾತಕ್ಕನ ಹುಡುಕಿ ಬಂದವರಿಗೆ ಮೂಲೆಯಲ್ಲಿ ಬಿದ್ದು ಕೊಂಡ ಸಾತಕ್ಕನ ಪ್ರೀತಿಯ ಹೆಣ್ಣು ನಾಯಿ, ತೆರೆದ ಕದ, ಒಳಗೆ ಕರೆದರೂ ಓಗೊಡದ ಸಾತಕ್ಕ, ಹೀಗೇನಾದರೂ ಅನುಭವಕ್ಕೆ ಬಂತೋ ಅವರೆಲ್ಲ ಹಾಗೇ ತಿರುಗಿ ಹೋಗುವರು. ಇಲ್ಲ ಅಗತ್ಯ ಇತ್ತಾದರೆ, ಹೊರಗೆ ಅಂಗಳದಲ್ಲಿ ಹಾಕಿದ ಒಂದೆರಡು ಮುರುಕು ಬೆಂಚುಗಳ ಮೇಲೆ ಕೂತು ಆಕೆ ಬರೋತನಕವೂ ಕಾಯುತ್ತಾರೆ. ಊರಲ್ಲಿ ಇಂತಹ ಸಹಜ ತಿಳುವಳಿಕೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಒಮ್ಮೊಮ್ಮೆ ಆಕೆ ನಾಣಿಗೆ ಕಲ್ಲಿನ ಮೇಲೆ ನಿಂತೆ ಮನೆಗೆ ಬಂದವರ ಗ್ರಹಿಸುವುದಿದೆ. ಆಕೆ ಸ್ನಾನಕ್ಕೆ ಹೋಗುವುದು ಬಹುತೇಕ ನಡು ಮಧ್ಯಾಹ್ನದ ಹೊತ್ತಿಗೆ. ಆ ಹೊತ್ತಿಗೆ ಅಪರೂಪಕ್ಕೆ ಬರುವವಳು ಎಂಕಮ್ಮ. ಆಕೆ ವಾರಕ್ಕೆರಡು ಬಾರಿ ಕಟ್ಟಿಗೆ ಹೊರೆ ತಂದು ಹಾಕುವುದು ರೂಢಿ. ಇನ್ನು ಸಂಜೆ ಹೊತ್ತಲ್ಲಿ ಪೊಕಳೆ ಹೊಡೆಯಲು ಬರುವ ಮೋನಪ್ಪ, ರಾಕು, ನಾರಾಯಣ, ಹಮ್ಮಣ್ಣ ಹೀಗೆ ನಾಲ್ಕಾರು ಖಾಯಂ ಗಿರಾಕಿಗಳು ಸಾತಕ್ಕಗೆ ಗೊತ್ತು. ಆದರೆ ಬೆಳಿಗ್ಗೆ ಬರುವ ಇಬ್ಬರಲ್ಲಿ ಒಬ್ಬಳು ಹಾಲು ತರುವ ತಾನು, ಇನ್ನೊಬ್ಬಳು ದಿನವೂ ಹೂ ಮಾಲೆ ತರುವ ಗಣಪಿ. ಇದೆಲ್ಲವೂ ಪರಿಮಳಗೆ ಗೊತ್ತು.

ಹೀಗೆ ಯೋಚಿಸುತ್ತಾ ಇದ್ದು ಇಪ್ಪತ್ತು ನಿಮಿಷಗಳಾದರೂ ಸಾತಕ್ಕ ಬರದೇ ಹೋದಾಗ ಏನೂ ಮಾಡಲು ತೋಚದೆ ನಿಧಾನಕ್ಕೆ ಹೆಜ್ಜೆ ಕಿತ್ತಿಟ್ಟು, ಮೊದಲು ಹೋಟೆಲ್ಲಿಗೆ ಹಾಲು ಹಾಕಿ ಬಂದರಾಯ್ತೆಂದು ಪರಿಮಳ ಆ ಕಡೆ ಹೆಜ್ಜೆ ಹಾಕಿದಳು. ರಸ್ತೆ ತುಳಿದು ಹೋಗುವುದು ಬೇಡವೆಂದು ಪಕ್ಕದಲ್ಲಿಯೇ ಇರುವ ಹೋಟೆಲ್ಲಿಗೆ ಹಿಂಬದಿಯಿಂದ ಹೋದರಾಯ್ತೆಂದು ಬಂದವಳಿಗೆ ತನ್ನ ಕಣ್ಣನ್ನೆ ನಂಬಲಾಗಲಿಲ್ಲ. ಹೋಟೆಲ್ ಮಾಲಿಕ ಕಸಮುಸುರೆ ಪಾತ್ರೆ ಬಳಿಯಲು ಬರುತ್ತಿದ್ದ ಮಾದೇವಿಯ ಕೂಡಾ ಆಕೆಯ ಹೆಗಲ ಮೇಲೆ ಕೈಹಾಕಿ ನಿಂತು ಕೋಮಲವಾಗಿ ಮಾತಾಡುತ್ತಿದ್ದ. ಹೋಟೆಲ್ಲಿನ ಮಾಲಿಕ ಒಳ್ಳೆಯನೇ. ಹೆಂಡತಿ ಮಕ್ಕಳೊಂದಿಗೆ ಅಲ್ಲೇ ವಾಸ್ತವ್ಯ ಆತನದು. ಅದರೆ ದಿನನಿತ್ಯವೂ ಹೆಂಡತಿಯನ್ನು ಬೈಯ್ಯುತ್ತಾ ಇರುವುದು ಆತನ ದಿನಚರಿಗಳಲ್ಲಿ ಒಂದೆಂದು ಕಾಣುತ್ತದೆ. ಬೆಳಗ್ಗೆ ತಾನು ಹಾಲು ಹಾಕಲು ಹೋಗುವಾಗಲೆಲ್ಲಾ ಆಕೆಯನ್ನು ಬೈಯುತ್ತಲೇ ಇರುತ್ತಾನೆ. ಇವತ್ತು ಆ ಬೈಗುಳದ ಚಹರೆ ಇಲ್ಲ.

ಪರಿಮಳಗೆ ಈಗ ಹತ್ತಿರ ಹೋಗಲೋ ಬೇಡವೋ ಎನಿಸಿತು. ಮತ್ತೇ ಹಾಲು ಕೊಟ್ಟು ಶಾಲೆಗೆ ಹೋಗಬೇಕು. ಇಲ್ಲಿ ನೋಡಿದರೆ ಛೇ! ಇವರು. ಮಾಲಿಕನ ಹೆಂಡತಿ ಎಲ್ಲಿ?.. ಸುತ್ತಲೂ ನೋಡಿದಳು. ಅವರಿಬ್ಬರಿಗೆ ಈಕೆಯ ಕಡೆ ಒಂದಿಷ್ಟು ಗಮನವಿರಲಿಲ್ಲ. ಆ ಬದಿಯಿಂದ ಯಾರಾದರೂ ಬರುವರೆಂಬ ಗ್ರಹಿಕೆಯೂ ಅವರಿಗಿದ್ದಂತೆ ಕಾಣುತ್ತಿರಲಿಲ್ಲ.

ಪರಿಮಳ ಅಲ್ಲಿಂದೆದ್ದು ಮುಂಭಾಗಕ್ಕೆ ಬಂದಳು. ಜೋರಾಗಿ ಒಮ್ಮೆ ಹಾಲು.. ಎಂದೂ ಕೂಗಿದ ಕೂಗಿಗೆ ಮಾಲಿಕ ಓಡೋಡಿ ಬಂದ. ಆಕೆ ಹೋಟೆಲ್ ಮಾಲಿಕನನ್ನು ’ಅಣ್ಣಾ’ . ಎಂದೇ ಕರೆಯುವುದು. ಇಂದಾತನ ಮುಖದಲ್ಲಿ ಎಂದೂ ಕಾಣದ ಹೊಸ ಕಳೆ. ಬಂದವನೇ ಹಾಲು ಪಡೆದು. ಪರಿಮಳ! ಸಂಜೆ ಅಪ್ಪಗೇ ಬಾ ಹೇಳು. ಹಾಲಿನ ದುಡ್ಡು ಕೊಡುವೆ ಎಂದ. ದುಡ್ಡು ಕೊಡಲು ಸದಾ ಸತಾಯಿಸುತ್ತಿರುತ್ತಾನೆ. ಯಾವಾಗ ನೋಡಿದರೂ ದುಡ್ಡು ಹೊಂದಿಲ್ಲ ಎಂಬುದನ್ನೆ ಬಾಯಿಪಾಠ ಮಾಡಿಕೊಂಡವ. ಇವತ್ತು ತಾನಾಗಿಯೇ ದುಡ್ಡು ನೀಡಲು ಮುಂದೆ ಬಂದದ್ದು. ಪರಿಮಳ ಹೂಂಗುಟ್ಟಿದಳು. ತನ್ನದೇ ತರಗತಿಯಲ್ಲಿ ಕಲಿಯುತ್ತಿದ್ದ ಮಾಲಿಕನ ಮಗ ರೋಹಿತ ಪ್ರತಿದಿನ ಆಚೀಚೆ ಸುಳಿದಾಡುತ್ತಿದ್ದವ ಇವತ್ತು ಅವಳಿಗೆ ಕಾಣಿಸಲಿಲ್ಲ. ಅವನ ತಾಯಿ ಕುಸುಮಕ್ಕ ಕೂಡಾ.

ಶಾಲೆಗೆ ಹೋದವಳಿಗೆ ರೋಹಿತ ಅಲ್ಲಿಯೂ ಕಾಣದಾದಾಗ ಬಹುಶಃ ಅವರು ಊರಿಗೆ ಹೋಗಿರಬಹುದೆಂದುಕೊಂಡಳು. ಮನೆಗೆ ಬಂದಾಗ ಸಂಜೆಯಾಗಿತ್ತು. ಒಂದಿಷ್ಟು ತಿನ್ನಲು ಬೇಕಾಗಿತ್ತು. ಅಮ್ಮ ನೆರೆಮನೆಯ ಪಾರ್ವತಕ್ಕನ ಹತ್ತಿರ ಮಾತಿಗೆ ನಿಂತಿದ್ದರು. ಊಟವನ್ನೆ ಮಾಡಿದರಾಯ್ತೆಂದು ಒಳಹೋಗಿ ಬಡಿಸಿಕೊಂಡಳು. ತಮ್ಮ ಮನೆಯಲ್ಲಿ ತಿನ್ನಲು ಸಿಗುವುದು ಅಪರೂಪ. ಇದ್ದರೂ ಕೂಡಾ ಅಣ್ಣನಿಗೆ ಹೆಚ್ಚು ಪಾಲು. ಅಮ್ಮ ಎಲ್ಲಿ ಕೂತಿದ್ದರೂ, ಇಲ್ಲ ಮಾತಾಡುತ್ತಿದ್ದರೂ ಮಲಗಿದ್ದರೂ ಅಣ್ಣ ಬಂದ ಕೂಡಲೇ ಎದ್ದು ಬಂದು ಆತನ ಬೇಕು ಬೇಡಗಳ ವಿಚಾರಿಸುತ್ತಾಳೆ. ಆದರೆ ತಾನು ಶಾಲೆಯಿಂದ ಬಸವಳಿದು ಬಂದಿದ್ದರೂ, ಒಳಬರುವುದಿರಲೀ ಕೆಲವೊಮ್ಮೆ ಊಟದ ಬಗ್ಗೆ ಕೂಡಾ ಕಿಂಚಿತ್ತೂ ವಿಚಾರಿಸುವುದಿಲ್ಲ. ತಾನಾಗಿಯೇ ಕೇಳಿದರೆ ಬಡಿಸಿಕೊಂಡು ಉಣ್ಣು ಪರಿ. ಈಗಷ್ಟೇ ನಾ ಮಲಗಿ ಎಂದು ಸಬೂಬು ಹೇಳುತ್ತಾಳೆ. ಮಧ್ಯಾಹ್ನ ಊಟ ಮುಗಿಸಿ ಅಮ್ಮ ಅಕ್ಕ ಪಕ್ಕದ ಮನೆಯವರ ಕೂಡಾ ಪಂಚಾಯಿತಿ ಮಾಡಿ, ಸಂಜೆ ತನಗೆ ಶಾಲೆ ಬಿಡುವ ಹೊತ್ತಿಗೆ ಹಾಸಿಗೆಯಲ್ಲಿರುಳಿಕೊಂಡಿರುತ್ತಾಳೆ. ತನಗೋ ವಿಪರೀತ ಹಸಿವು ಈಗೀಗ. ಶಾಲೆಯಲ್ಲಿ ಉಂಡರೂ ಮತ್ತೆ ಹಸಿವು. ಹಾಗಾಗಿ ತಾನು ಅಮ್ಮ ಊಟ ಕೊಡುವಳೆಂದು ಕಾಯುವುದಿಲ್ಲ. ಅಪರೂಪಕ್ಕೆ ಅಮ್ಮ ತನಗೊಬ್ಬಳಿಗೆ ಬಡಿಸುವುದು ಇದೆ. ಆ ದಿನ ಆ ಊಟಕ್ಕೆ ವಿಶೇಷ ರುಚಿ ಇದ್ದ ಹಾಗೇ ಆಕೆಗನ್ನಿಸುತ್ತದೆ.

ಏಳನೇ ತರಗತಿಯಲ್ಲಿ ಓದುತ್ತಿದ್ದರಿಂದ ಓದು ಒಂದಿಷ್ಟು ಹೆಚ್ಚೇ. ಮನೆಗೆಲಸದಲ್ಲಿ ಅಮ್ಮನಿಗೆ ಸಹಾಯ ಮಾಡಿ, ತನ್ನ ಓದು ಎಲ್ಲ ಮುಗಿಸಿ ಮಲಗುವಾಗ ಹನ್ನೊಂದು ಹೊಡೆದಿತ್ತು. ಆಕೆಗೆ ಮರುದಿನ ಎಚ್ಚರವಾದದ್ದು ಅಮ್ಮನ ಸುಪ್ರಭಾತಕ್ಕೆ.

ಏಳೂದಿಲ್ಲೇನೆ ಪರಿಮಳ? ಏಳೇ! ಗಂಟೆ ಆರಾಗುಕೆ ಬಂತ. ಇಷ್ಟುತ್ತ ಮಲ್ಗತಿ. ಏಳ ಬ್ಯಾಗೆ ॒ಮುಖ ತೊಳಕಂಡೇ ಬಾ.. ಅಮ್ಮ ಒಂದೇ ಸಮ ಹಚ್ಚಿಕೊಂಡ ವರಾತ ಕೇಳಲಾಗದೇ ಪರಿಮಳ ಸಣ್ಣದಾಗಿ ಮೈಮುರಿಯುತ್ತಾ ಎದ್ದು ಕುಳಿತಳು. ಕಣ್ಣು ತನ್ನ ಬಲಮಗ್ಗುಲಲ್ಲಿ ಒಂದಿಷ್ಟು ದೂರದಲ್ಲಿ ಇನ್ನೂ ಮಲಗಿ ಸಕ್ಕರೆ ನಿದ್ದೆಯಲ್ಲಿದ್ದ ಅಣ್ಣನ ಕಡೆ ಹೊರಳಿತು. ಕಣ್ಣುಗಳಲ್ಲಿ ತುಂಬಿ ನೀರು ಉಕ್ಕಿತು. ಅದನ್ನು ಒರೆಸಿಕೊಂಡಳು. ನಾಲ್ಕಾರು ವರ್ಷ ದೊಡ್ಡವನಾದ ಅಣ್ಣ ಇದ್ದೂ, ಹನ್ನೆರಡು ವರ್ಷದ ತನ್ನನ್ನೇ ಮೊದಲು ಎಬ್ಬಿಸುವ ಅಮ್ಮನ ಮೇಲೆ ಆಕೆಗೆ ಕೋಪ. ಮುನಿಸು. ಏಳಲಾರದೇ ಹಾಗೇ ಮಲಗಿ ಬಿಡುವ ಹಂಬಲ ಹೆಚ್ಚುತ್ತಲೇ ಮತ್ತೆಲ್ಲಿ ಅಮ್ಮನ ಸುಪ್ರಭಾತ ಕೇಳಬೇಕಾಗುವುದೋ ಎಂದು ತಟ್ಟನೇ ಎದ್ದು ಹಾಸಿಗೆ ಮಡಚಿಟ್ಟು ಬಂದಳು.

ಬ್ಯಾಗೇ ಹಲ್ಲುಜ್ಜಿ ಮುಖ ತೊಳ್ಕಂಡೇ ಬಾ. ಇಂದೇ ಯುಗಾದಿ ಹಬ್ಬ. ಕೊಟ್ಟೆ ಹಾಲು ಮಾಡುವಾ.. ಅಣ್ಣಗೆ ಅದಂದ್ರೇ ಬಾಳ ಇಷ್ಟ ಅಮ್ಮ ಖುಷಿಯಿಂದ ಹೇಳುತ್ತಲೇ ಇದ್ದಳು. ಯುಗಾದಿಗೆ ಹೊಸ ಅಂಗಿ ಕೊಡಿಸೆಂದರೆ ಹಣ ಇಲ್ಲ ಮುಂದಿನ ಸಲ ತೆಗಿಸಿಕೊಡುವೆ ಎಂದ ಅಮ್ಮ ಅಣ್ಣ ಹೇಳಿದ್ದನ್ನು ಕೇಳಿದ್ದನ್ನು ಚಾಚೂ ತಪ್ಪದೇ ಮಾಡುತ್ತಾಳೆ. ಅಪ್ಪ ಹೇಳಿದರೂ ಅಷ್ಟು ಅಕ್ಕರೆಯಿಂದ ಮಾಡದ ಅಮ್ಮ, ಅಣ್ಣ ಹೇಳಿದ್ದನ್ನು ಮಾಡಲು ಇಷ್ಟು ತುದಿಗಾಲಲ್ಲಿ ನಿಲ್ಲುವ ಅಮ್ಮನ ನೋಡಿ ಪರಿಮಳ ಮುಖ ಚಿಕ್ಕದು ಮಾಡಿಕೊಂಡು ಹಲ್ಲುಜ್ಜಲು ಹೊರಟಳು. ಬರುತ್ತಲೂ ಅಮ್ಮ ತೆಂಗಿನಕಾಯಿ ಮತ್ತು ಮೆಟ್ಗತ್ತಿಯನ್ನು ತೆಗೆದಿಟ್ಟು ತಾನು ಕೊಟ್ಟೆಗೆ ಹಿಟ್ಟು ಹೊಯ್ಯತ್ತಿದ್ದಳು. ಪರಿಮಳಗೆ ತನ್ನ ಕೆಲಸದ ಅರಿವಾಯಿತು. ತಾನೀಗ ಕಾಯಿ [ತುರಿದು] ಕಿರಿದು ಕೊಡಬೇಕು.

ಪರಿಮಳ ಕಣ್ಣು ಮುಚ್ಚಿ ಮುಚ್ಚಿ ಬರುತ್ತಿದ್ದರೂ ನಿದ್ದೆ ಹತ್ತಿಕ್ಕಿ ತುರಿಯತೊಡಗಿದಳು. ಬೇಗ ಬೇಗ ಎನ್ನುವ ತಾಯಿಯ ವರಾತಕ್ಕೆ ಜೋರಾಗಿಯೇ ತುರಿಯುತ್ತಿದ್ದಳು. ಒಂದೇ ಸಲಕ್ಕೆ ತೆಂಗಿನಕಾಯಿಯ ಕಡಿ ಸರ್ರನೇ ಜಾರಿ ಕಡಿಯ ಜಾಗೆಯಲ್ಲಿ ಹಸ್ತ ಕೂತಿತು ಅಷ್ಟೇ! ರಕ್ತ ಸುರಿಯಲಾರಂಭಿಸಿತು.

‘ಅಮ್ಮಾ !!!.’ ಕೈ ಹಿಡಿದುಕೊಂಡೇ ಚೀರಿದಳು ಪರಿಮಳ. ಅಲ್ಲೇ ಇದ್ದ ತಾಯಿ ಓಡಿ ಬಂದು ಕೈನೋಡಿ ಮುಖ ಸೊಟ್ಟಗೆ ಮಾಡಿಕೊಂಡು ಒಳಹೋಗಿ ಬಟ್ಟೆ ಚೂರೊಂದನ್ನು ಹರಿದು ತಂದರು. ಅದೇನೂ ಅಂತಹ ದೊಡ್ಡ ಸಂಗತಿಯೇ ಅಲ್ಲವೆಂಬಂತೆ, ಗಾಯಕ್ಕೆ ಒಂದಿಷ್ಟು ಅರಸಿನ ಮೆತ್ತಿ ಕೈಯನ್ನು ಬಟ್ಟೆಯಿಂದ ಕಟ್ಟಿ, ಆಯ್ತ, ಹರಿದಿನ ಮಾಡ್ದೆ. ಉಂದ್ ಕಾಯ ಸರ್‍ಯಾಗೇ ಕಿರಿಯುಕೇ ಬರುದಿಲ್ಲ. ಹನ್ನೆರಡ ಹದಿಮೂರ ವರ್ಷಾತೇ ಬಂತ. ಹಿಂದೆಲ್ಲಾ ಹತ್ತು ಹನ್ನೆರಡ ವರುಷಕ್ಕೆ ಮದ್ವಿ ಮಾಡ್ತದ್ರ. ಗಂಡನ ಮನೀಲೆ ಕೆಲಸ ಮಾಡ್ಕಂಡೇ ಬಿದ್ದಿರಬೇಕಾಗತ. ಇವಕೆ ಸೊಕ್ಕ. ಕೆಲಸ ಕಲಿಯುಕೆ ಆಗುಲಾ ಎನ್ನುತ್ತಾ ಬೈಯತೊಡಗಿದರು. ಒಳಗೆ ಹತ್ತಿದ ಕತ್ತಿ ತುದಿ ಆಳಕ್ಕಿಳಿದ್ದಿದ್ದು, ಆ ನೋವಿಗೆ ಪರಿಮಳಳ ಕಣ್ಣಿಂದ ಧಾರಾಕಾರ ನೀರು. ತಡೆದುಕೊಳ್ಳುವಾ ಎಂದರೆ ಈ ಅಮ್ಮ ಬೇರೆ ಬೈದು ಹೀಯಾಳಿಸಿ, ಮತ್ತಷ್ಟು ನೋಯಿಸುತ್ತಾಳೆ. ಅಪ್ಪನೇ ಎಷ್ಟೋ ವಾಸಿ. ಬೈದರೂ ಅಪರೂಪಕ್ಕೆ ಅಷ್ಟೇ. ಏನಾದರೂ ತಿಂಡಿಗಿಂಡಿ ತಂದರೆ ತನ್ನ ಹೆಸರನ್ನೆ ಮೊದಲು ಕರೆದು ಹೇಳುತ್ತಾರೆ. ಆದರೆ ತಾನು ಹೊರಬಂದು ಅಪ್ಪನ ಕೈಯಿಂದ ತೆಗೆದುಕೊಳ್ಳುವ ಮೊದಲೇ ಅಮ್ಮ ಬಂದು ಪಡೆದುಕೊಳ್ಳುತ್ತಾರೆ. ಅದರಲ್ಲಿ ಅಣ್ಣನಿಗೆ ದೊಡ್ಡ ಪಾಲು. ತನಗೆ ಸ್ವಲ್ಪ. ಕೇಳಿದರೆ ಅವಳದು ಸದಾ ಅಂವ ಗಂಡ ಹುಡ್ಗಾ. ಅಂವಗೆ ರಾಶಿ ತಿನ್ನುಕೆ ಬೇಕಾತೀದ. ನೀ ಸಣ್ಣೋಳ. ಮತ್ತೇ ಹಿಣ್ಣಮಕ್ಳ ರಾಶಿ ಕೊಬ್ಬುಕಿಲ್ಲಾ. ತಿಂದ ತಿಂದ ಕೊಬ್ಬೇ ಕಡಿಗೇ ಮಾತೇ ಕೇಳುಲಾ ಅಂದೆಲ್ಲಾ ಪ್ರವಚನ ಶುರುಮಾಡುವುದಿದೆ. ಅದಕ್ಕೆ ಪರಿಮಳ ಆಕೆ ಕೊಟ್ಟಷ್ಟನ್ನು ತಿಂದು ಬರುತ್ತಾಳೆ.

ಅವಳಿಗಿನ್ನೂ ಕೆಲವು ಅಮ್ಮನ ಸಿದ್ದಾಂತಗಳು ಯಕ್ಷಪ್ರಶ್ನೆಯೇ? ಕೆಲಸ ಮಾಡುವಾಗ ಸಣ್ಣವಳೆಂದು ಎಂದೂ ಹೇಳದ ಅಮ್ಮ ತಿನ್ನುವ, ತೊಡುವ ವಿಚಾರಗಳಲ್ಲಿ ಮಾತ್ರ ಆಕೆಯನ್ನು ಚಿಕ್ಕವಳಂತೆ ಕಾಣುತ್ತಾಳೆ. ಅಮ್ಮ ಆಕೆಯನ್ನು ’ನೀನು ಸಣ್ಣವಳು’ ಎಂದಾಗಲೆಲ್ಲಾ ಪರಿಮಳಗೆ ಖುಷಿ. ಅಮ್ಮನೆಂದರೆ ಆಕೆಗೆ ಪ್ರೀತಿ, ಜೊತೆಗೊಂದಿಷ್ಟು ವಿಪರೀತ ಭಯ.

ನೋವಿನ ಕೈಯನ್ನು ಹಿಡಿದುಕೊಂಡೇ ಅಡುಗೆ ಮನೆಯಿಂದ ಹೊರ ಬಂದು ನಡುಮನೆಯಲ್ಲಿಯ ಕೋಳ್ಬಂಬಕ್ಕೆ ಚಾಚಿ ಕುಳಿತುಕೊಂಡಳು. ಅಪ್ಪ ರೇಡಿಯೋದಲ್ಲಿ ಬೆಳಿಗ್ಗೆಯ ಪ್ರದೇಶ ಸಮಾಚಾರ ಹಚ್ಚಿಕೂತಿದ್ದರು.

ಹೋಗೇ ಹಾಲ ಕೊಟ್ಟಿಕೆ ಬಾ. ಬಂದೆ ಮಿಂದೆ ಚಾ ಕುಡಿಯಕ್ ಅಮ್ಮ ಮತ್ತೆ ಕೂಗಿ ಹೇಳಿದಳು. ಅವಳಿಗೆ ಮನೆಯಲ್ಲಿ ಇದ್ದಷ್ಟು ಹೊತ್ತು ನಿಂತಲ್ಲಿ ನಿಲ್ಲಲು ಕೂತಲ್ಲಿ ಕೂರಲು ಬಿಡುವುದಿಲ್ಲ ಅಮ್ಮ. ಏನಾದರೊಂದು ಕೆಲಸ ಹೇಳುತ್ತಲೇ ಇರುವುದು ಅವರ ಜಾಯಮಾನ.. ಅಣ್ಣನಿಗೆ ಮಾತ್ರ ಯಾವುದೂ ಲಾಗೂ ಇಲ್ಲ. ಬೇಕಾದಷ್ಟು ಹೊತ್ತು ಮಲಗಿರುತ್ತಾನೆ. ಮತ್ತೆ ಡೇರಿಗೆ ಹಾಲು ಹಾಕಲು ನಾನೇ ಹೋಗಬೇಕು. ಅವನಿಗೋ. ಏನೂ ಕೆಲಸವಿಲ್ಲ. ರಜೆಯ ದಿನವಾದರೂ ಆತ ಹೋಗುವುದು ಅಪರೂಪವೇ..ದೂರದ ಪಟ್ಟಣಕ್ಕೆ ಹೈಸ್ಕೂಲು ಓದಲು ಹೋಗುತ್ತಾನೆ, ಹೋಗಿ ಬರುವುದೇ ಅವನಿಗೆ ಸುಸ್ತಾಗುತ್ತದೆ, ಅಂತೆಲ್ಲ ಅಮ್ಮ ಆಗಾಗ ಆಚೀಚೆ ಮನೆಯವರೆದುರು ಹೇಳುತ್ತಿರುತ್ತಾರೆ.

ಇವತ್ತು ಕೂಡಾ ಆಕೆಗೆ ಕುಸುಮಕ್ಕ ಕಾಣಲಿಲ್ಲ. ಹೋಟೆಲ್ಲಿಗೆ ಹಾಲು ಕೊಟ್ಟು ಆನಂತರವೇ ಆಕೆ ಸಾತಕ್ಕನಲ್ಲಿಗೇ ಹೋದದ್ದು. ಸಾತಕ್ಕ ಬೆಳಿಗ್ಗೆಯೇ ಸ್ನಾನ ಮಾಡಿ ತುಳಸಿಗೆ ಸುತ್ತು ಹಾಕುತ್ತಿದ್ದಳು. ತಲೆಗೆ ಸ್ನಾನ ಮಾಡಿ ಹೂ ಮುಡಿದು, ಹಣೆತುಂಬಾ ದೊಡ್ಡ ಕುಂಕುಮ ಧರಿಸಿದ ಆಕೆ ಸುಂದರವಾಗಿ ಕಾಣುತ್ತಿದ್ದಳು. ಬೆಳ್ಳಗಿನ ಬಣ್ಣದ ಸಾತಕ್ಕ ಬಣ್ಣದಲ್ಲಿ ಮಾತ್ರ ಅಲ್ಲ ಗುಣದಲ್ಲೂ ಶುದ್ಧವೇ ಅಂತಾ ಅಮ್ಮ ಆಗಾಗ ಹೇಳುತ್ತಿದ್ದದ್ದು ಆಕೆಗೆ ನೆನಪಾಯ್ತು. ಅದು ಯಾವ ವಿಚಾರಕ್ಕೆಂದು ಆಕೆ ಅಮ್ಮನನ್ನು ಕೇಳಿದ್ದಿಲ್ಲ.

ಸಾತಕ್ಕನ ಕೈಗೆ ಹಾಲಿನ ಕ್ಯಾನನ್ನು ವರ್ಗಾಯಿಸುತ್ತಾ ಪರಿಮಳ ಸಾತಕ್ಕ! ಅಮ್ಮ ನಿಂಗೇ ಉಣ್ಣುಕೇ ನಮ್ಮನಿಗೇ ಬಾ ಅಂದಿದ. ಕರ್ಕಂಡೇ ಬಾ ಅಂದಿದ ಎಂದು ಅಮ್ಮ ಹೇಳಿದ್ದಷ್ಟನ್ನೇ ಊರು ಹೊಡೆದಳು. ಸಾತಕ್ಕನಿಗೆ ಖುಷಿಯಾಗಿರಬೇಕು. ಪರಿಮಳಗೆ ಹಾಗೇ ಅನ್ನಿಸಿತು.

ಹಾ, ಮಗನೇ ಸಂಜಿಗೆ ಬತ್ತಿಯಂದೇ ಹೇಳ ಅಮ್ಮಗೇ ಆಗಾ! ಏಗೇ ಮಾನಿದ ಚೂರಪಾರ ಕೆಲಸ ಎಲ್ಲ ಇದ. ಮುಗಿಸ್ಕಂಡೇ ಬಂದೇ ಬತ್ತಿ ಅಂದೇ ಹೇಳ. ಎಂದು ಹೇಳಿ ತಾ ಮಾಡಿದ ಹೋಳಿಗೆಯನ್ನೆರಡು ಕಟ್ಟಿ ಪರಿಮಳಳ ಕೈಲಿಟ್ಟಳು. ಪರಿಮಳ ಬೇಡವೆನ್ನುತ್ತಲೇ ಕೈ ಮುಂದೆ ಮಾಡಿ ಪಡೆದು ಆಗಿತ್ತು.

ಹಿಂತಿರುಗಿ ಬರುವವರೆಗೆ ಅಪ್ಪ,ಅಮ್ಮ, ಅಣ್ಣ ಎಲ್ಲ ತಿಂಡಿ ತಿಂದು ಹೊರಗೆ ಪಟ್ಟಾಂಗ್ ಹೊಡೆಯುತಿದ್ದರು. ಪರಿಮಳಗೆ ದುಃಖ ಉಮ್ಮಳಿಸಿ ಬಂತು. ಒಳಬಂದವಳೇ ಕ್ಯಾನು ಕುಕ್ಕಿ ಇಟ್ಟದ್ದು ಕೇಳಿ, ಭವಾನಿಗೆ ಮಗಳಿಗೆ ಕೋಪ ಬಂದಿರುವುದು ಅರ್ಥವಾಯ್ತು. ಮಾತಾಡದೇ ಒಳಬಂದು, ಪರಿ, ಬಾ , ಚಾ ಕುಡ್ತಿ, ಅಪ್ಪೋರಿಗೆ ಇಲ್ಲೋ ಹೊರಗೆ ಹೋಗುದಿದ ಕಡಾ. ಅದ್ಕೇ ನಿಂಗೆ ಕಾಯದೇ ನಾವಟ್ಟು ಜನ ಚಾ ಕುಡಿದೇ ತಿಂಡಿ ತಿಂದು. ನೀ ಬರುಕೆ ತಡ ಆಯ್ತಲ್ಲೆ ಮಗನೇ? ಅಂತಾ ಎಂದೂ ಇಲ್ಲದ ಮುದ್ದು ತೋರುತ್ತಲೂ ಪರಿಮಳಗೆ ಎದ್ದ ಕೋಪವೆಲ್ಲ ಕರಗಿ ಅಮ್ಮನ ಮೇಲೆ ಪ್ರೀತಿ ಉಕ್ಕಿ ಹರಿಯಿತು. ಹೋಗುವಾಗ ಬಯ್ದ ಅಮ್ಮ ಈಗ ಪ್ರೀತಿಯಿಂದ ಮಾತಾಡಿಸುತ್ತಲೂ ಆಕೆ ಹಸನ್ಮುಖಿಯಾದಳು. ತಾನೆಷ್ಟು ಅಮ್ಮನನ್ನು ಪ್ರೀತಿಸುತ್ತೇನೆ ಎಂದು ತನ್ನ ತಾನೇ ಕೇಳಿಕೊಂಡಳು.

ಇದಾಗಿ ಎರಡು ಮೂರು ತಿಂಗಳೇ ಕಳೆದಿವೆ. ಪರಿಮಳ ಈಗ ಏಳನೇ ತರಗತಿ ಪಾಸಾಗಿ ಎಂಟಕ್ಕೆ ಹೋಗುತ್ತಿದ್ದಾಳೆ. ಅವಳಣ್ಣ ಹೈಸ್ಕೂಲಿಗೆ ದೂರದ ಪಟ್ಟಣದ ಶಾಲೆಗೆ ಹೋಗುತ್ತಿದ್ದರೆ, ಆಕೆಯನ್ನು ಹಳ್ಳಿಯ ಅದೇ ಶಾಲೆಗೆ ಸೇರಿಸಲಾಗಿದೆ. ಕೈಯಲ್ಲಿಯ ಕ್ಯಾನು ಇನ್ನೂ ಅವಳ ಸಂಗ ಬಿಟ್ಟಿಲ್ಲ. ಶಾಲೆ ಪ್ರಾರಂಭವಾಗಿ ಮೂರು ನಾಲ್ಕು ದಿನಗಳಾಗಿವೆ. ಈ ದಿನವೂ ಶಾಲೆಗೆ ಹೊತ್ತಾಗುತ್ತಿದೆ. ಅಮ್ಮ ನೋಡಿದರೆ ಅಣ್ಣನ ಟಿಫಿನ್ ಸಿದ್ಧಮಾಡುವುದರಲ್ಲಿ ಪೂರಾ ಮಗ್ನರಾಗಿದ್ದಾರೆ. ಹಾಲು ಮಾಪು ಮಾಡಿ ಇನ್ನೂ ಆಗಿಲ್ಲ. ಪರಿಮಳ ತನ್ನ ಪಾಟೀಚೀಲ ಹಿಡಿದು ಹೊರಗೆ ಬಂದು ನಿಂತಳು. ಎರಡು ಫರ್ಲಾಂಗ್ ನಡೆಯಬೇಕಲ್ಲ. ಅದೂ ಹಾಲು ಕೊಡಲು ಹೋದಾಗ ಅಲ್ಲೇ ಹತ್ತು ನಿಮಿಷ ಹೋಗುತ್ತೆ. ಅಮ್ಮಾ.. ಬ್ಯಾಗೇ ಕ್ಯಾನ ಕುಡ. ಸಿಟ್ಟಿನಿಂದ ಚೀರಬೇಕೆನ್ನಿಸಿತು ಆಕೆಗೆ. ಆದರೆ ಚೀರಲಿಲ್ಲ ಆಕೆ. ಪಾಪ.. ಅಮ್ಮ.. ಬೆಳಿಗ್ಗೆ ಎದ್ದು ಹಾಲು ಕರೆದು, ತಿಂಡಿ ಚಾ ಅಂತಾ ಎಲ್ಲ ಮಾಡುವ ಹೊತ್ತಿಗೆ ಹೊತ್ತಾಗುತ್ತೇ. ಎಂದುಕೊಂಡಳು.

ಅಮ್ಮಾ.. ಅದಿಟ್ ಹೊತ್ತು ನಿಂಗೆ? ಬ್ಯಾಗ್ ಡಬ್ಬಿ ಕಟ್ಟುಕೆ ಆಗುಲಾ? ಹೋಗಬೇಕರೆ ನಿಂದ್ ಡಬ್ಬಿ ಕಟ್ಟುದ್. ನಾ ಬಿಟ್ಟಿಕೇ ಹೋತಿ ನೋಡ್ ಪುಸ್ತಕದ ಚೀಲ ಹೆಗಲಿಗೇರಿಸಿಕೊಂಡು ಬಂದ ಅಣ್ಣ ಅಮ್ಮನಿಗೆ ಸಿಡಿಮಿಡಿ ಮಾಡುತ್ತಿರುವುದು ನೋಡಿ ಪರಿಮಳ ಪೆಚ್ಚಾದಳು. ಪಾಪ .. ಅಮ್ಮ .. ಅವಳೆದೆ ತುಂಬಿ ಬಂತು.

ಅವನ ಡಬ್ಬ ಹಿಡಿದು ಹೊರಗೆ ಬಂದ ಅಮ್ಮ ಪರಿಮಳ ಚೀಲ ಹೊತ್ತು ಚಪ್ಪಲಿ ಧರಿಸಿ ನಿಂತಿದ್ದು ನೋಡಿ ಹಾಲು ಮಾಪು ಮಾಡಲು ಹೋದರು. ಗಡಿಬಿಡಿಯಲ್ಲಿ ಹಾಲು ಒಂದಿಷ್ಟು ನೆಲಕ್ಕುರುಳೂತ್ತಲೂ ಅಮ್ಮ ಕೆಂಡವಾದರು. ತೊಳ್ಪಟ್ನಾಯ್ತ. ಈ ಹಿಣ್ಣಿಗೆ ಇಲ್ಲೇ ಶಾಲೆ. ಇದ್ಕೇನ ಗಡಿಬಿಡಿ ಈ ನಮೂನಿ. ಶಾಲಿಗೆ ಹೋಗುದು, ಮನಿಗೆ ಬರೂದೂ ಬಿಟ್ರೇ ಮತ್ತೇನೂ ಗುತ್ತಿಲ್ಲ. ನೋತ್ನ ಮಾಡುದೇ ಆಗಹೋಯ್ತ ಎಂದು ಬೈಯುತ್ತ ಬಿದ್ದ ಹಾಲು ಒರೆಸುತ್ತಾ ಕೂತರು. ಒಂದಿಷ್ಟು ಹೆಚ್ಚೇ ವಿಳಂಬ ಬೇಕೇಂತಲೆ ಮಾಡಿದರು. ಅಂವ ನಿಂಗೆ ಗಡಿಬಿಡಿ ಮಾಡದ್ರೆ ನೀ ನಂಗ್ಯಾಕೆ ಬುಯ್ತಿ ಪರಿಮಳಳ ಕಣ್ಣಿಂದ ಕೋಡಿ ಹೊರಟೇ ಬಿಟ್ಟಿತು. ಎರಡೇ ನಿಮಿಷ. ಮತ್ತೆ ಕಣ್ಣು ಒರೆಸಿಕೊಳ್ಳುತ್ತ ಸುಮ್ಮನೇ ಮಾತಾಡದೇ ಅಮ್ಮನಿಂದ ಕ್ಯಾನು ಪಡೆದಳು. ಕ್ಯಾನು ಕೊಡುತ್ತಲೂ ಅಮ್ಮ ಆರ್ದ್ರವಾಗಿ ಪರಿ, ರೋಡ್ ದಾಟತಾ ಹುಷಾರು, ಮಗಾ ಎಂದಿದ್ದು ಕಿವಿಗೆ ಬಿತ್ತು.

ಆ ಮಾತಿಗೆ ತಟ್ಟನೇ ಹುಟ್ಟುವ ಸಮಾಧಾನಕ್ಕೆ ಅವಳಿಗೆ ಆಶ್ಚರ್ಯ. ಆ ಹುರುಪು ಹಿಡಿದು ಓಡುತ್ತಲೇ ಹಾಲಿನ ಕ್ಯಾನು ಮತ್ತು ಪಾಟೀಚೀಲಗಳ ನಿಭಾಯಿಸುತ್ತಾ ಅರ್ಧ ಫರ್ಲಾಂಗು ಬಂದಿದ್ದಳು. ಟಾರು ರಸ್ತೆಯ ಮೇಲೆ ಓಡುತ್ತಿದ್ದವಳಿಗೆ ಮಳೆಯ ಸುಣುಕು ಸಿಕ್ಕಂತಾಗಿ ಇನ್ನಷ್ಟು ಜೋರಾಗಿ ಪಾದ ಹಾಕಿದಳು. ಮಳೆಗಾಲ ದೇವತೆ ದ್ಯಾವರ ಮನೆಗೆ ಹೋಗುವ ಅಡ್ಡದಾರಿ ಕೂಡಾ ಈ ಟಾರು ರಸ್ತೆಗೆ ಕೂಡುತ್ತಿತ್ತು. ಅಡ್ಡರಸ್ತೆಯಿಂದ ಹತ್ತಿರದಲ್ಲೇ ಕೇಳಿಬರುತ್ತಿದ್ದ ಜೋರು ಜೋರಾದ ದನಿ ಮತ್ತು ಮುಸಿಮುಸಿ ಅಳು ಕೇಳಿದಂತಾಗಿ ಪರಿಚಿತ ದನಿಯೇ ಎನ್ನಿಸಿ ಪರಿಮಳ ನಿಂತು ಹಿಂದೆ ತಿರುಗಿದಳು. ಅಲ್ಲಿ ಹೋಟೆಲ್ಲಿಗೆ ಕೆಲಸಕ್ಕೆ ಬರುತ್ತಿದ್ದ ಮಾದೇವಿ, ಅವಳ ತಂದೆ ಹುಲಿಯನ ಜೊತೆ ಬರುತ್ತಿದ್ದಳು. ಆತ ಆಕೆಯನ್ನು ದನ ಓಡಿಸಿಕೊಂಡು ಬರುವಂತೆ ಓಡಿಸಿಕೊಂಡು ಬರುತ್ತಿದ್ದ. ಆಕೆಯ ಉಬ್ಬಿದ ಹೊಟ್ಟೆ ಓಟಕ್ಕೆ ಒಂದಿಷ್ಟು ಮೇಲೆಕೆಳಗಾಗುತ್ತಿತ್ತು. ಅವಳಿಗೆ ಅಷ್ಟು ದಪ್ಪ ಹೊಟ್ಟೆ ನೋಡಿ ಪರಿಮಳಗೆ ವಿಚಿತ್ರವಾಯ್ತು. ನಿಧಾನಕ್ಕೆ ನಡೆಯತೊಡಗಿದಳು. ಇವಳನ್ನು ಕಂಡರೂ ಹುಲಿಯ ಗುರಾಯಿಸುತ್ತಲೇ ಇದ್ದ. ಏ! ಹಡಬಿ, ಏನಾಗಿತ್ತೇ ನಿಂಗೆ, ಮಾನಗೀನ ಇಲ್ಲಗಿತ್ತೇನೆ. ಮದಿ ಮಾಡು ಅಂದ್ರೆ ಮಾಡುದಿಲ್ಲಾಗಿದ್ವೇ ನಾಮು. ಮದಿ ಆಗ್ದೇ ಹಿಂಗೇ ಹೊಟ್ಟಿ ಹುತ್ತಂಡೇ ತಿರ್‍ಗುಕೆ ಮಳ್ಳ ಹಿಡ್ದಿತೇನೇ? ಲೈಕಾತಿದಾಗುದು. ಆ ಮದಿಯಾಗ್, ಮಕ್ಕ್ಳಾದಂವ್ನ ಕೂಡೇ ಮನಿಕಂಡೀ ಹೊಟ್ಟಿ ಮಾಡ್ಕಂಡಿ, ಮಾನ ಕಳೀತಿದು. ನೆಟ್ಟಗಾಗುಕೇ ನೀನು! ಸತ್ತರೆ ಲೈಕಾಗಿತು. ಇದ್ಕಂಡೇ ಜೀಂವಾ ತಿನ್ತಿ. ಬೋಸಡಿ… ಎನ್ನುತ್ತ ಬರುತ್ತಿದ್ದ. ಪರಿಮಳ ಅವಾಕ್ಕಾದಳು. ಏನಾಯ್ತು ಮಾದೇವಿಗೆ. ಕೇಳಬೇಕೆಂದುಕೊಂಡಳು. ಆತ ಬೈಗುಳದ ಮಾಲೆ ಹಿಡಿದೇ ಇದ್ದ. ನೀನು ಹೋಟೆಲಿ ..ಗೇ ಕೆಲಸಕ್ಕೆ ಹೊದಾಗೇ ಗುತ್ತಾಗಿತು ನಂಗೆ. ಹಿಂಗೇ ಏನಾರು ಎಡವಟ್ಟು ಆತೀದಂದೆ. ನಮಗೇ ತರಾಸು ಕುಡುಕೆ ಹುಟ್ಟಿದ್ಯೇ. ಎನ್ನುತ್ತ ಒಮ್ಮೆ ಆಕೆಯ ಬೆನ್ನಿಗೆ ಗುದ್ದಿದ. ಕುಗ್ಗಿದ ಮನಸ್ಸಿನ ದೇಹ ಹೊತ್ತು ಅಸಹಾಯಕಳಾಗಿ ಬರುತ್ತಿದ್ದ ಮಾದೇವಿ ಆ ಗುದ್ದಿಗೆ ಒಮ್ಮೇಲೆ ಎಡವಿ ಬಿದ್ದಳು. ಅವ್ವಾ.. ನೋವಿನ ದನಿ ಅಲೆ‌ಅಲೆಯಾಗಿ ಬಂದಂತೆ ಪರಿಮಳಗೆ ಕೇಳಿಸಿತು. ಕಾಲ್ಬೆರಳಿಂದ ಒಮ್ಮೆಲೆ ಎದ್ದ ಭಯಕ್ಕೆ ಆಕೆ ಪುನಃ ಓಡತೊಡಗಿದಳು. ಸಾತಕ್ಕನಿಗೆ ಹಾಲು ಕೊಟ್ಟು ಹೋಟೆಲ್ಲಿಗೆ ಬರುವ ಹೊತ್ತಿಗೆ ಹುಲಿಯ ಅಲ್ಲಿ ಕಲ್ಲು ಬೆಂಚಿನ ಮೇಲೆ ಕೂತಿದ್ದ. ಕೈ ಹೊಸಕಿಕೊಳ್ಳುತ್ತಿದ್ದ. ಮಾದೇವಿ ರಸ್ತೆಯ ಪಕ್ಕ ನಿಂತು ಹೋಟೆಲ್ಲಿನ ಕಡೆ ನೋಟ ಕೀಲಿಸಿದ್ದಳು. ಹೋಟೆಲ ಮಾಲಿಕ ಒಳಗಿಂದ ಹೊರಬಂದವನೇ ಆಚೀಚೆ ಕಳ್ಳ ನೋಟ ಬೀರುತ್ತಾ, ಸಭ್ಯಸ್ಥನಂತೆ ಏನೇನೋ ಹೇಳುತ್ತಿದ್ದ. ಒಂದಿಷ್ಟು ನೋಟುಗಳ ಕಟ್ಟು ಹುಲಿಯನ ಕೈಯಲ್ಲಿತ್ತು. ಪರಿಮಳ ಬರುತ್ತಲೇ ಮಾಲಿಕ ಸುಮ್ಮನಾಗಿ ಹಾಲು ತೆಗೆದುಕೊಂಡು ಹೋಗಲು ಪತ್ನಿಯನ್ನು ಕರೆಯತೊಡಗಿದ. ಶಾಲೆ ಬಿಟ್ಟು ಬರುವಾಗ ಕ್ಯಾನು ಕೊಂಡು ಹೋಗುವೆ ಎಂದು ಹೇಳಿ ಪರಿಮಳ ಹೊರಟಳು. ಮತ್ತೆ ರಸ್ತೆಗೆ ಬಂದಾಗ ಮಾದೇವಿ ತೀರಾ ಖಿನ್ನಳಾಗಿ ನಿಸ್ತೇಜವಾಗಿ ಕಂಡಳು.

ಸಂಜೆ ಮನೆಗೆ ಕ್ಯಾನು ಹಿಡಿದು ತೂಗುತ್ತಾ ಬರುತ್ತಿದ್ದವಳ ಕಂಡ ಅವಳಮ್ಮ ಏ! ಹುಚ್ಚಮಳ್ಳಿ. ಅದ್ಯಾಕೇ ಹಂಗೇ ಕ್ಯಾನ ತೂಗ್ತಿ. ಬಿದ್ರೆ ನಗ್ಗೆ ಹೋಗುದಲ್ಲೆ. ಸರ್‍ಯಾಕೇ ಬರುಕೇನಾತಿದೇ. ಗಂಡಬೀರಿ! ಹಿಣ್ಣಮಕ್ಕಳ ಹಿಂಗೆಲ್ಲಾ ಕುಣಿತರೇನೇ? ಎಂದು ಬೈಯ್ದದ್ದು, ಹುಲಿಯ ಮಾದೇವಿಗೆ ಹಾಕಿದ ಗುದ್ದು, ಒಂದೇ ಗುಂಡಿನ ಎರಡು ಸದ್ದಿನಂತೆ ಕೇಳಿತು ಪರಿಮಳಗೆ.

ಅಣ್ಣನ ಮೇಲಿನ ಕೋಪವನ್ನು ತನ್ನ ಮೇಲೆ ತೀರಿಸುವ ಅಮ್ಮನ ಮುಖ , ಹೋಟೆಲು ಮಾಲಿಕನಿಗೆ ಎದುರಾಡದೆ, ಮಗಳನ್ನು ನಾಯಿಗೆ ಬಡಿದಂತೆ ಬಡಿದು ಹೇಯವಾಗಿ ಬೈಯ್ದ ಹುಲಿಯನ ಮುಖ ಒಂದೇ ರೀತಿ ಕಾಣುತ್ತಿರುವಂತಾಗಿ, ಒಳ ಬಂದವಳಿಗೆ ಹಳೆಯ ಕಂಪಾಸಿನಲ್ಲಿ ಹಾಗೇ ಬಿದ್ದ ದುರ್ಬಿನು ಗ್ಲಾಸು ಕೈಗೆ ಸಿಕ್ಕಿದ್ದೇ ತಡ ಪರಿಮಳ ಕಣ್ಣಿಗೆ ಹಿಡಿದುಕೊಂಡು ಏನೋ ಹುಡುಕತೊಡಗಿದಳು.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...