Home / ಕಥೆ / ಸಣ್ಣ ಕಥೆ / ಕಾರುಗಹಳ್ಳಿ ವೀರಾಜಯ್ಯ

ಕಾರುಗಹಳ್ಳಿ ವೀರಾಜಯ್ಯ

ಹೆಸರುವಾಸಿಯಾದ ರಾಜ ಒಡೆಯರವರು ಶ್ರೀಕಂಠೇಶ್ವರ ಸ್ವಾಮಿಯ ರಥೋತ್ಸವಕ್ಕೆ ನಂಜನಗೂಡಿನಲ್ಲಿ ಬೀಡನ್ನು ಬಿಟ್ಟಿದ್ದರು. ಆ ಸಮಯದಲ್ಲಿ ಇವರ ಜ್ಞಾತಿಯೂ ಗರ್ವಿಷ್ಠನೂ ಆಗಿದ್ದ ಕಾರುಗಹಳ್ಳಿ ಪಾಳೆಯಗಾರ ವೀರಾಜಯ್ಯನೆಂಬಾತನು ರಾಜರೆದುರಿಗೆ ತನ್ನ ಅಟ್ಟಹಾಸವನ್ನು ತೋರಬೇಕೆಂಬ ದುರ್ಬುದ್ಧಿಗೊಳಗಾಗಿ ಪಲ್ಲಕ್ಕಿಯಲ್ಲಿ ಕುಳಿತ ಓಲಗ ತಾಳ ಮೇಳಗಳೊಡನೆ ಅಹಂಕಾರದಿಂದ ಬರುತ್ತ ಎದುರಾದರು. ಅವರನ್ನು ದೂರದಲ್ಲಿ ಕಂಡ ಕೂಡಲೇ ಮೈಸೂರಿನ ಸೈನಿಕರು ಕೆಲವರು “ಎಲಾ, ಈ ವೀರಾಜಯ್ಯನು ನಮ್ಮ ರಾಜರ ಬಳಿ ವಿನೀತನಾಗಿ ಬಾರದೆ ಕಡಕೊಬ್ಬಿನಿಂದ ಬರುತ್ತಿದ್ದಾನಲಾ! ಇವನಿಗೆ ಸ್ವಲ್ಪ ಬುದ್ದಿ ಹೇಳಿಸುವಾ!” ಎಂದುಕೊಂಡು ತಾವೇ ಮುಂದೆಬಿದ್ದು ವೀರಾಜಯ್ಯನ ಪರಿವಾರದವರನ್ನು ಹೊಡೆದೋಡಿಸಿ, ಪಲ್ಲಕ್ಕಿಯನ್ನು ನಿಲ್ಲಿಸಿ ಹಿಡಿದು, ವೀರಾಜಯ್ಯನನ್ನು ಬಲವಂತದಿಂದ ನೂಕಿಬಿಟ್ಟು, ಪಲ್ಲಕ್ಕಿಯನ್ನು ತೆಗೆದುಕೊಂಡು ಬಂದು ಬಿಟ್ಟರು.

ವೀರಾಜಯ್ಯನಿಗೆ ತೇಜೋವಧೆಯಾಯಿತು. ಆದರೆ ಬುದ್ಧಿಬರಲಿಲ್ಲ. ಏನಾದರೂ ಮಾಡಿ ತನಗಾದ ಅಪಮಾನಕ್ಕೆ ಪ್ರತೀಕಾರವನ್ನು ಮಾಡಬೇಕೆಂದು ಮನಸ್ಸಿನಲ್ಲಿ ನಿಶ್ಚಯಮಾಡಿಕೊಂಡು ಸಮಯವನ್ನು ಹೊಂಚಲು ಮೊದಲಿಟ್ಟನು. ನೀಚರನ್ನು ಹತ್ತಿರ ಸೇರಿಸಿಕೊಂಡು ನೀಚವಾದ ಆಲೋಚನೆಯನ್ನು ಮಾಡಿದನು. ಇವನು ಯೋಚಿಸಿದ್ದೇನು? ರಾಜರಿಗೆ ವಿಷ ಕೊಡಿಸಬೇಕೆಂದು! ಅರಮನೆಯಲ್ಲಿ ಪ್ರಯತ್ನ ಪಡುವುದಕ್ಕಿಂತ ರಾಜರು ತಪ್ಪದೆ ಹೋಗಿಬರುತ್ತಿದ್ದ ಲಕ್ಷ್ಮೀರಮಣ ಸ್ವಾಮಿಯು ದೇವಾಲಯದಲ್ಲಿ ಪ್ರಯತ್ನ ಪಡುವದೇ ಲೇಸೆಂದು ಅಂದುಕೊಂಡು ವೀರಾಜಯ್ಯನು ಆ ಗುಡಿಯ ಆರ್ಚಕನಾಗಿದ್ದ ಶ್ರೀನಿವಾಸಯ್ಯನೆಂಬಾತನನ್ನು ಕರೆಯಿಸಿ “ಏನಯ್ಯ! ದೊರೆಗಳಿಗೆ ನೀನು ತೀರ್ಥ ಕೊಡುವಾಗ ಇಗೋ! ನಾವು ಕೊಡುವ ದ್ರಾವಕವನ್ನು ಮಿಶ್ರಮಾಡಿ ಕೊಡಬೇಕು. ಇದಕ್ಕಾಗಿ ಇಗೋ! ಜೀವಾವಧಿ ಸುಖವಾಗಿರುವಂತೆ ಈ ಹಣವನ್ನು ನಿನಗೆ ಕೊಡುತ್ತೇವೆ!” ಎಂದು ಹೇಳಿದನು. ಶ್ರೀನಿವಾಸಯ್ಯನು ಈ ದರ್ಪವನ್ನ ಕಾಣದವನು; ಕತ್ತಿಯನ್ನು ದೂರದಿಂದ ನೋಡಿದ ಮಾತ್ರಕ್ಕೆ ನಡುವಂತಹವನು, ಪ್ರತಿಯಾಗಿ ಏನ ಹೇಳುವುದಕ್ಕೂ ತೋಚದೆ ಈ ಬಡ ಅರ್ಚಕನು ಆ ದ್ರಾವಕವನ್ನು ತೆಗೆದುಕೊಂಡು ಬಂದನು. ವೀರಾಜಯ್ಯನ ಕಡೆಯವರಿಬ್ಬರು ಭಟರು ಅವನ ಹಿಂದೆಯೇ ಬಂದು ಒಬ್ಬರಲ್ಲದಿದ್ದರೆ ಇನ್ನೊಬ್ಬರು ಆತನ ಬಳಿಯಲ್ಲಿಯೇ ಇರುತ್ತ ಅವನ ಮೇಲೆ ಪಹರೆಯಿದ್ದರು.

ಕಡೆಗೆ ರಾಜರು ಬರುವ ಸಮಯ ಸನ್ನಿಹಿತವಾಯಿತು. ಶ್ರೀನಿವಾಸಯ್ಯನಿಗೆ ಆಗ ಪೂಜೆ ಮಾಡವುದೇ ಕಷ್ಟವಾಯಿತು. ಮಂತ್ರಗಳನ್ನ ಹೇಳಲಿಲ್ಲ -ಮಣಮಣ ಓದುಬಿಟ್ಟನು. ಮಂಗಳಾರತಿಯ ವೇಳೆಗೆ ರಾಜರು ಬಂದು ಅಂಜಲಿಬದ್ಧರಾಗಿ ನಿಂತರು. ತೀರ್ಥ ಕೊಡುವ ಕಾಲ ಬಂತು. ಗಿಂಡಿಯಲ್ಲಿ ತಿರ್ಥವನ್ನು ತುಂಬಿಕೊಂಡು ಉದ್ದರಣೆಯನ್ನು ಕೈಲಿ ಹಿಡಿದು ಶ್ರೀನಿವಾಸಯ್ಯನು ಗರ್ಭಗುಡಿಯ ಹೊಸ್ತಿಲನ್ನು ದಾಟಿ ಹೆಜ್ಜೆ ಹಾಕತ್ತಾನೆ. ಕೈಕಾಲೆಲ್ಲವೂ ನಡುಗುತ್ತದೆ; ಮುಖವೆಲ್ಲ ಒಣಗಿ ವಿವರ್ಣವಾಗಿ ತುಟಿಗಳು ಅದರುತ್ತಲಿವೆ. ಕಣ್ಣುಗಳಲ್ಲಿ ಬೆಪ್ಪೂ ಅಲ್ಲ, ಭಯವೂ ಅಲ್ಲ, ಏನೋ ಒಂದು ಬಗೆಯ ನೋಟ; ರಾಜರ ಮುಖವ ನೋಡಲಾರದವನಾಗಿದ್ದಾನೆ. ಇದನ್ನು ಕಂಡು ರಾಜಒಡೆಯರು ಸ್ವಲ್ಪ ನಗುತ್ತ “ನೀನು ಎಂದಿನಂತೆ ಇಲ್ಲ! ದೇಹಾಲಸ್ಯವೇ! ಏನು ವಿಷಯ? ಭಯಪಡದೆ ಹೇಳು. ಏನು ವಿಷಯವಾಗಿದ್ದರೂ ನಾವು, ನಿನ್ನನ್ನು ಸಂರಕ್ಷಿಸುತ್ತಿದ್ದೇವೆ. ಧೈರ್ಯದಿಂದ ಹೇಳು” ಎಂದರು. ಆಗ ಆ ಬಡ ಹಾರವನು “ಮಹಾ ಸ್ವಾಮೀ! ಏನು ಹೇಳಲಿ!” ಎಂದು ಸುತ್ತ ಮುತ್ತ ನೋಡಿ ತಮ್ಮ ಜ್ಞಾತಿ ಆ ಕಾರುಗಹಳ್ಳಿ ವೀರಾಜಯ್ಯನು ನಿಮಗೆ ವಿರೋಧವನ್ನು ಚಿಂತಿಸಿ ನನ್ನ ಕೈಲಿ ವಿಷವನ್ನು ಕೊಟ್ಟು ತೀರ್ಥದಲ್ಲಿ ಕೊಡಬೇಕೆಂದು ನನ್ನನ್ನು ಬಲವಂತ ಪಡಿಸಿದ್ದಾನೆ. ಆ ತೀರ್ಥವನ್ನು ನಾನು ಹೇಗೆ ಕೊಡಲಿ!” ಎಂದನು. ಆಗ ಒಡೆಯರು ಸುತ್ತಮುತ್ತಲಿದ್ದವರು ಹಾಹಾಕಾರ ಮಾಡದಂತೆ ಅವರಮೇಲೆ ಕಣ್ಣುಬಿಟ್ಟು, “ಒಳ್ಳೆದು, ನೀನು ಇದನ್ನು ವಿಷವೆಂದು ತಂದಿರುವೆಯೋ, ದೇವರ ತೀರ್ಥವೆಂದು ತಂಗಿರುವೆಯೋ!” ಎಂದು ಕೇಳಿದರು. “ತೀರ್ಥವೆಂದು ತಂದಿದ್ದೇನೆ” ಎನ್ನಲು ರಾಜರು! “ತೀರ್ಥವನ್ನು ಇಲ್ಲಿ ಹಾಕು” ಎಂದು ಒಂದು ಉದ್ದರಣೆಯನ್ನು ಬಡಿಸಿಕೊಂಡು ಕುಡಿದರು.

ಒಡೆಯರಿಗೆ ಇದರಿಂದ ಏನೂ ಆಗದಾಯಿತು. ಮರುದಿವಸ ಒಡೆಯರು ವೀರಾಜಯ್ಯನನ್ನು ಶಿಕ್ಷಿಸಬೇಕೆಂದು ನಿಶ್ಚಯಮಾಡಿ ಅವನನ್ನು ಹಿಡಿತರಿಸಿ, ಕಿವಿ ಮೂಗುಗಳನ್ನು ಕುಯ್ಯಿಸಿ “ಇನ್ನು ನೀನು ದೇಶವನ್ನು ಬಿಟ್ಟು ಭ್ರಷ್ಟನಾಗಿ ಭಿಕಾರಿಯಾಗು ಹೋಗು” ಎಂದು ಓಡಿಸಿದರು ಅವನ ಸ್ವತ್ತೆಲ್ಲವನ್ನು ತರಿಸಿ ದೇವರಿಗೆ ಸಮರ್ಪಿಸಿ, ಕಾರುಗಹಳ್ಳಿಯ ಕೋಟೆಯನ್ನು ಕೆಡವಿಸಿ ಹರಳು ಬಿತ್ತಿಸಿದರು. ಅನಂತರ ಅರ್ಚಕ ಶ್ರೀನಿವಾಸಯ್ಯನನ್ನು ಕರೆಸಿ “ವೀರಾಜಯ್ಯನು ನಿನಗೆ ದುರ್ಬೋಧೆ ಮಾಡಿದಾಗ ನೀನು ನಿನ್ನ ಪ್ರಾಣಕ್ಕೆ ಹೆದರಿದವನಾದೆ. ನಾವೇನೋ ನಿನಗೆ ಅಭಯವನ್ನು ಕೊಟ್ಟಿದ್ದೇವೆ ಆದ್ದರಿಂದ ನಿನಗೆ ಶಿಕ್ಷೆಯೇನೂ ಇಲ್ಲ. ಆದರೆ ಇನ್ನು ನೀನು ನಮ್ಮ ಬಳಿ ಇರುವುದು ಸರಿಯಲ್ಲ. ಇನ್ನು ಮೇಲೆ ನೀನು ಕನ್ನಂಬಾಡಿ ಗೋಪಾಲಕೃಷ್ಣಸ್ವಾಮಿ ದೇವಾಲಯದ ಆರ್ಚಕತನ ಮಾಡತಕ್ಕದ್ದು. ಹೋಗು” ಎಂದು ಕಳುಹಿಸಿ ಮೈಸೂರಿನ ಲಕ್ಷ್ಮೀರಮಣ ಸ್ವಾಮಿಯ ದೇವಸ್ಥಾನಕ್ಕೆ ಮತ್ತೊಬ್ಬ ಅರ್ಚಕನನ್ನು ಗೊತ್ತು ಮಾಡಿದರು.
*****
[ವಂಶರತ್ನಾಕರ-ಪುಟ ೨೩,೨೪; ವಂಶಾವಳಿ ಸಂ.೧ಪುಟ ೨೯, ೩೦]

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...