“ಹಾಯ್ ! ಹಾಯ್ ! ಉಳಿಸೈ ! ಕತ್ತಲೆಯ ಚಲಿಸೈ !
ಕೊತ್ತಳದ ನೆಲಮನೆಯ ಬುಡದಲ್ಲಿ ಬಳಲುವೆನು.
ಕಾಣಲಾರದೆ ಕೇಳಲಾರದೆಯೆ ತೊಳಲುವೆನು !
ಉದ್ಧರಿಸು ! ಈ ಸಮಸ್ಯೆಯನ್ನು ಬಗೆಹರಿಸೈ!”
ಗೋಡೆಯೊಳಮೈಯಣಕವಾಡುತಿದೆ : “ಸೈ! ಸೈ!
ಸೆರೆಸಿಕ್ಕ ಪಾಪಿಗಿಹ ದುರ್‍ದೈವವೈಸೆ!
ಕೊಳೆಯುವದೆ ದಿಟವು. ಉಳಿಯುವದು ಬರಿ ಆಸೆ!”
ಎನುತಿಹದು ಆ ದನಿಯು. ಓ! ಪರಾಂಬರಿಸೈ!

ಆಲಿಸಿದ ದಾರಿಹೋಕನು ಮರುಚಣದಿ ನುಡಿದ:
“ಕೋಟೆಕಟ್ಟುವ ಶಾಸ್ತ್ರವೆಂದುಗನಿಸಿತೊ ಅರಿದು.
ಕೋಟೆಯೊಡೆಯರದಿಂತು ನೆಲಮನೆಯ ಸೆರೆಮನೆಯ
ಮಾಡುವದು ನೀತಿಗಮ್ಯವೊ ಏನೊ ನಾ ತಿಳಿದು
ನಿನ್ನ ನಡತೆಯ ಪರಿಕಿಸುತ ಮೇಲ್ವಿಚಾರಣೆಯ
ಮುಗಿಸಿ ತಿಳುಹುವೆ” ನೆಂದು ಪುಣ್ಯಾತ್ಮನವ ನಡೆದ!
*****