ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ ನುಸಿ, ಉಮಿಲಿ, ಕುರ್ಡ ಕಚ್ಚಿಸಿಕೊಂಡು ಪುಳಿಚ್ಚಾರಿನಲ್ಲೇ ಸಂಭ್ರಮಿಸಬೇಕಾಗಿದ್ದವರಿಗೆ ಕೆಸರು ನೀರಲ್ಲಿ ಉಳುತ್ತಾ, ನೇಜಿ ತೆಗೆದು ನೆಡುತ್ತಾ, ಓ ಬೇಲೆ, ರಾವು ಕೊರಂಗು, ದೂಜಿ ಕೆಮ್ಮಯಿರಾ ಹಾಡುತ್ತಾ, ಚೊರಲ್ಲಿ ಓಡಾಡುತ್ತಾ ಒದ್ದೆಯಾಗುವ ರೋಮಾಂಚನ. ಮಳೆ ಹೆಚ್ಚಾದಂತೆ ಮಳೆಯಿಂದ ಇಳಿವ ನೀರು ತಪಸ್ವಿನಿಯನ್ನು ಸೊಕ್ಕಿಸಿ ಗದ್ದೆಗೆ ಉಕ್ಕುವಾಗ ನದಿ ಯಾವುದು, ಹೊಲ ಯಾವುದೆಂದು ತಿಳಿಯದೆ ಗದ್ದೆಗೇರುವ ಒರಂಟೆ ಮೀನುಗಳ ತಲೆಗೆ ಬಾಳು ಕತ್ತಿಯ ಹಿಂಬದಿಯಿಂದ ಠಕ್ಕೆಂದು ಮೊಟಕಿ ಮಧ್ಯಾಹ್ನ ಕುರುಪ್ಪನ ಮನೆಯ ಊಟಕ್ಕೆ ಚಕ್ಕಕ್ಕರಿ, ಕೊಳ್ಳಿಕ್ಕರಿ, ಮಾಂಬಳ ಚಟ್ನಿಯೊಡನೆ ಗಮಗಮಿಸಿ ಪಂಚೇಂದ್ರಿಯಗಳಿಗೆ ಪಸರಿಸುವ ಮೀನು ಸಾರು ಸೇರಿದರೆ ಸ್ವರ್ಗ ಭೂಮಿಗೆ ಇಳಿದುಬಿಡುತ್ತದೆ.
ಕುಂಞಿಕಣ್ಣ ಕುರುಪ್ಪು, ಮಲೆಯಾಳ ದೇಶದ ಉತ್ತರ ಭಾಗದ ಯಾವುದೋ ಹಳ್ಳಿಯಲ್ಲಿ ಬಂಡಸಾರೆ ನಡೆಸುತ್ತಿದ್ದವನು ಕೇಳಿದವರಿಗೆಲ್ಲಾ ಸಾಮಾನು ಕಡಕೊಟ್ಟು ದಿವಾಳಿಯೆದ್ದು ಆದೃಷ್ಟವನ್ನು ಆರಸುತ್ತಾ ಕಪಿಲಳ್ಳಿಗೆ ಬಂದು ಕೃಷಿ ಮಾಡಿ ನೆಲೆಯೂರಲು ತಪಸ್ವಿನಿಯ ತಟದಲ್ಲಿ ಹುಡುಕಾಟ ನಡೆಸುತ್ತಿದ್ದವನನ್ನು ಜನರು ಅನ್ಯಗ್ರಹದ ಅಪಾಯಕಾರೀ ಜಂತುವೆಂಬಂತೆ ಪರಿಗ್ರಹಿಸಿ ಎಷ್ಟು ಸಾಧ್ಯವೋ ಅಷ್ಟು ದೂರ ಇರಿಸಿದ್ದರು. ಎಲ್ಲೂ ಭೂಮಿ ಸಿಗದೆ ಪರದಾಡಿದ ಕುಂಞಿಕಣ್ಣ ಕುರುಪ್ಪು ಕಪಿಲಳ್ಳಿಯಲ್ಲಿ ತಳವೂರಿಯೇ ಸಿದ್ಧವೆಂದು ಭೀಷ್ಮ ಪ್ರತಿಜ್ಞೆ ಮಾಡಿ ಕೊನೆಗೆ ಮಲೆಯಿಂದ ತಪಸ್ವಿನಿಗೆ ಆನೆಗಳು ಸ್ನಾನ ಮಾಡಲು ಬರುವ ಗುಡಿ ಬಾಗಿಲಲ್ಲಿ ಇಪ್ಪತ್ತೆಕರೆಗೆ ಬೇಲಿ ಹಾಕಿ ಏಣೆಲು ಬೆಳೆಗೆ ತೊಡಗಿದಾಗ ಅವನ ಕತೆಯನ್ನು ಕಾಡಾನೆಗಳು ಮುಗಿಸುತ್ತವೆ ಎಂದುಕೊಂಡಿದ್ದರು. ಕುಂಞಿಕಣ್ಣ ಕುರುಪ್ಪು ಗದ್ದೆಯಲ್ಲಿ ಏಣೆಲು, ಹೊಳೆ ಬದಿಯಲ್ಲಿ ಕಂಗು, ಗುಡ್ಡೆಯಲ್ಲಿ ಕೊಳ್ಳಿಕ್ಕಪ್ಪ ಮತ್ತು ಶುಂಠಿ ಬೆಳದು ಅವನ್ನು ರಕ್ಷಿಸಲು ಬೇಲಿಯ ಸುತ್ತ ಅಲ್ಲಲ್ಲಿ ರಾತ್ರಿ ಬೆಂಕಿ ಹಾಕಿ, ಗದ್ದೆ ಮಧ್ಯೆ ಬೆರ್ಚಪ್ಪಗಳನ್ನು, ನೀರು ಬೀಳುವಲ್ಲಿ ನೀರ ಮೊಂಟೆಗಳನ್ನು ನಿಲ್ಲಿಸಿ ಜಾಗದ ಮಧ್ಯೆ ಮಾಡುಕೋಲುಗಳನ್ನು ಎಬ್ಬಿಸಿ ಹಗಲಿರುಳು ಕಾಯುವಾಗ ನೇಜಿ ಕೆಲಸ ಬಲ್ಲವರು ಗುರುತು ಪರಿಚಯ ಮಾಡಿಕೊಂಡು, ಆಡುಗೆ ಮನೆ, ದೇವರ ಕೋಣೆಗಳಿಗೆ ತಮ್ಮನ್ನು ಸೇರಿಸದ ವಿಪ್ರ ಮತ್ತು ಅತಿವಿಪ್ರರಿಗಿಂತ ಈತನು ಉತ್ತಮನೆಂದು ಹತ್ತಿರಾದರು.
ಬೇಸಿಗೆಯಲ್ಲಿ ಕುಂಞಿಕಣ್ಣ ಕುರುಪ್ಪು ಏಣೆಲು ಗದ್ದೆಯಲ್ಲಿ ಹುರುಳಿ, ಎಳ್ಳು, ಕಡಲೆ ಹಾಕಿ, ಬಚ್ಚಂಗಾಯಿ, ಸೌತೆಕಾಯಿ, ಕುಂಬಳಕಾಯಿ ಬೆಳೆದು ಘಟ್ಟದಿಂದ ಗಾಡಿ ತರಿಸಿ ತಾನು ಬೆಳೆದಿದ್ದನ್ನು ಹಸಿರಂಗಡಿ ಸಂತೆಗೆ ಸಾಗಿಸಿ ನಾಲ್ಕು ಕಾಸು ಮಾಡಿ ಕೋಣೆ, ದೊಡ್ಡ ಜಗಲಿಯ ಮಾಡೊಂದನ್ನು ಎಬ್ಬಿಸಿದ್ದಲ್ಲದೆ, ಜಾಗಕ್ಕೆ ಪ್ರವೇಶವಾಗುವಲ್ಲಿ ಪಾಶಾಣಮೂರ್ತಿಯ ಕಲ್ಲೊಂದನ್ನು ಪ್ರತಿಷ್ಠಾಪಿಸಿ ಅಮಾವಾಸ್ಯೆಯಂದು ಅದಕ್ಕೆ ದಾಸವಾಳ ಏರಿಸಿ ಕುಂಕುಮ ಹಚ್ಚಿ ಅಡ್ಡ ಬೀಳುತ್ತಿದ್ದುದು ಅವನ ಬಗ್ಗೆ ನಿಗೂಢ ಭೀತಿಯೊಂದನ್ನು ಕಪಿಲಳ್ಳಿಯಲ್ಲಿ ಪಸರಿಸಿ ಬಿಟ್ಟಿತು. ತನ್ನಲ್ಲಿ ಕೆಲಸಕ್ಕೆ ಬರುವ ಶೂದ್ರರ, ಆತಿಶೂದ್ರರ ಭಯಭೀತ ವದನಾರವಿಂದಗಳ ಹಿನ್ನೆಲೆ ಅವನಿಗೆ ಅರ್ಥವಾಗಿ ಪಾಶಾಣಮೂರ್ತಿ ಮೃದು ಹೃದಯದ, ನಂಬಿದವರಿಗೆ ಸದಾ ಇಂಬು ಕೊಡುವ, ನಂಬದವರನ್ನು ರಕ್ತಕಾರಿ ಸಾಯುವಂತೆ ಮಾಡುವ ಅತಿಶಯ ಕಾರಣಿಕದ ಹೆಣ್ಣುಭೂತವೆಂದು ಹೇಳಿದ್ದೇ ಶೂದ್ರರು ಮತ್ತು ಅತಿಶೂದ್ರರು ಅದರ ಎದುರಿಂದ ಹಾದು ಹೋಗುವಾಗ ಅದಕ್ಕೆ ಕೇವುಳು ಹೂವು ಏರಿಸಿ, ಗಲ್ಲ ಬಡಿದು, ಅಡ್ಡಬಿದ್ದು ತಮ್ಮ ನೋವುಗಳನ್ನು ಮೌನವಾಗಿ ಹೇಳಿಕೊಂಡು ಪುಡಿಗಾಸು ಹಾಕತೊಡಗಿದರು.
ಹಾಗೆ ಕಪಿಲಳ್ಳಿಯಲ್ಲಿ ಸ್ತಾವರನಾಗಿ ಬಿಟ್ಟ ಕುಂಞಿಕಣ್ಣ ಕುರುಪ್ಪು ಮೂರು ವರ್ಷ ಬಿಟ್ಟು ಮಲೆಯಾಳ ದೇಶಕ್ಕೆ ಹೋಗಿ ವಾಪಾಸು ಬರುವಾಗ ಒಟ್ಟಿಗೆ ಏಳೆಂಟು ವರ್ಷದ ಓಮನೆ ಮೋಳು, ಹೆಂಡತಿ ಮಾಧವಿಕುಟ್ಟಿ ಮತ್ತು ತಲೆಯಿಡೀ ಬಿಳಿ ಬಿಳೀ ಕೂದಲು, ಬಿಳಿ ಅಡ್ಡ ಮುಂಡು, ಬಿಳಿ ದೊಗಲೆ ಕುಪ್ಪಸ, ಬಿಳಿ ಬಿಳೀ ಶರೀರ, ಹಣೆಯಲ್ಲಿ ಪಟ್ಟೆ ಚಂದನ ಅಡ್ಡನಾಮದ ಎಪ್ಪತ್ತು ದಾಟಿದ ಮಹಾಶ್ವೇತೆ ರಾಜಯೋಗಿನಿಯಂತಿರುವ ಅಜ್ಜಿಯೊಬ್ಬಳನ್ನು ಕರೆತಂದು ಕಪಿಲಳ್ಳಿಗೆ ಕಪಿಲಳ್ಳಿಯನ್ನೇ ಕುತೂಹಲದಲ್ಲಿ ಕೆಡವಿದ್ದ. ಅಂದು ರಾತ್ರೆ ಕುಂಞಿಕಣ್ಣ ಕುರುಪ್ಪನ ಮನೆಯಿಂದ ರಣರಣಿಸಿದ ಯಕ್ಷಗಾನದ ಚಿಂಡಯ ಅಬ್ಬರ ಮಲೆಯಲ್ಲಿ ಪ್ರತಿಧ್ವನಿಸಿ ಕಪಿಲಳ್ಳಿಯ ಜನರ ಕರ್ಣಪಟಲವನ್ನು ಭೇದಿಸಿ ಹಿಳಹೊಕ್ಕು ವರ್ಷಕ್ಕೊಮ್ಮೆ ಅವರು ದೂರದ ಹಸಿರಂಗಡಿ ಜಾತ್ರೆಯಂದು ರಂಗಸ್ಥಳದಲ್ಲಿ ನೋಡುವ ಕೋಡಂಗಿ, ಬಾಲಗೋಪಾಲ, ವಿದೂಷಕ, ದೇವೇಂದ್ರ, ರಕ್ಕಸ ವೇಷಗಳು ಕಣ್ಣ ಮುಂದೆ ರಿಂಗಿಣ ಹೊಡೆದಂತಾಗಿ ವಿಚಿತ್ರ ಆಮೋದ ಪ್ರಮೋದದಲ್ಲಿ ತೇಲತೊಡಗಿದರು. ಕುಂಞಿಕಣ್ಣ ಕುರುಪ್ಪನ ಮೇಂಚ್ಛ ಮಲೆಯಾಳವು ತಮ್ಮ ಮಡಿ ತುಳು, ಮರಾಟಿ ಭಾಷೆಗಳೊಡನೆ ಸಂಕರವಾಗಲೇಕೂಡದೆಂಬ ಭಗೀರಥ ಸಂಕಲ್ಪ ಮಾಡಿಕೊಂಡಿದ್ದ ವಿಪ್ರಾತಿವಿಪ್ರರು ನಿಧಾನವಾಗಿ ಕುಂಞಿಕಣ್ಣ ಕುರುಪ್ಪನನ್ನು ಸನಾತನ ಸಂಸ್ಕೃತಿಯ ಹರಿಕಾರನನ್ನಾಗಿ ಮತಾಂತರಿಸಿಕೊಂಡು, ಬೇಲಿ ದಾಟಿ ಅಂಗಳಕ್ಕೆ ಬಂದು ಮಾತು ಬೆಳಸಿ, ಅಂಗಳದಲ್ಲಿ ಅವನು ಹಾಕಿದ ಒಲಿಚಾಪೆಯಲ್ಲಿ ಕೂತು ಬೆಲ್ಲ ತಿಂದು ನೀರು ಕುಡಿದು, ಕಥಕ್ಕಳಿಯಿಂದ ತೊಡಗಿ ಯಕ್ಷಗಾನಕ್ಕೆ ಮುಟ್ಟಿ, ಚಂಡೆ ನೋಡುವ ಆಸೆ ವ್ಯಕ್ತಪಡಿಸಿ, ಚಂಡೆಯೊಡನೆ ಅವನು ತಂದಿರಿಸಿದ ಮದ್ದಳೆ, ಹಾರ್ಮನಿ, ತಾಳ ನೋಡಿ ದಂಗುಬಡಿದು ಅವನ ಪೂರ್ವಾಶ್ರಮದ ಬಗ್ಗೆ ವಿಚಾರಿಸಲಾಗಿ, ಅವನೊಂದು ಯಕ್ಷಗಾನ ಬಯಲಾಟ ಮೇಳದ ಚಂಡೆ – ಮದ್ಲೆಗಾರನಾಗಿ ಪಾಂಡವರ ವನವಾಸ, ಅಜ್ಞಾತ ವಾಸದಷ್ಟು ಕಾಲ ತಿರುಗಾಟದಲ್ಲಿ ಕಳೆದು, ರಾತ್ರೆ ನಿದ್ದೆಗೆಟ್ಟು ಹಳದಿರೋಗಕ್ಕೆ ಪದೇ ಪದೇ ತುತ್ತಾಗಿ, ಅದರಿಂದ ಹೇಗೋ ಎದ್ದು ತಿರುಗಾಟಕ್ಕೆ ಎಳ್ಳು ನೀರು ಬಿಟ್ಟು ಕ್ಕಷಿಕನಾಗಿ ವರ್ತಮಾನಾಶ್ರಮದಲ್ಲಿರುವುದನ್ನು ಕೇಳಿ ಅವನ ಶಿಷ್ಯವೃತ್ತಿ ಸ್ವೀಕರಿಸಲು ತಾವು ಸಿದ್ದವಿರುವುದಾಗಿ ಹೇಳಿದ್ದೇ ಕುಂಞಿಕಣ್ಣ ಕುರುಪ್ಪು ಕಪಿಲಳ್ಳಿಯ ವರ್ಣವಸ್ಥೆಯಲ್ಲಿ ತಾನು ಅತಿ ವಿಪ್ರ ವರ್ಗಕ್ಕಿಂತಲೂ ಮೇಲಾಗಿಬಿಟ್ಟನೆಂದು ಒಳಗೊಳಗೇ ಹಿಗ್ಗಿ ಒಪ್ಪಿಕೊಂಡುಬಿಟ್ಟನು.
ಕಪಿಲಳ್ಳಿಯ ಶೂದ್ರರ, ಅತಿಶೂದ್ರರ ಮೆಚ್ಚುಗೆ, ಇದೀಗ ವಿಪ್ರರ ವಿಪ್ರಾತಿವಿಪ್ರರ ಸನ್ನಧಾನದಿಂದ ಗುರುಗಳೇ ಎಂದು ಕರೆಸಿಕೊಳ್ಳುವ ಸೌಭಾಗ್ಯದಿಂದಾಗಿ ಕುಂಞಿಕಣ್ಣ ಕುರುಪ್ಪನ ಖ್ಯಾತಿ ನಾಲ್ದೆಸೆಗಳಲ್ಲಿ ಪಸರಿಸಿ ದೂರದ ಎಮ್ಮೆಹಳ್ಳ, ಮಣ್ಣಗುಡ್ಡೆಗಳಲ್ಲಿ ಕೊಳ್ಳಿಕಪ್ಪ, ರಾಮಚ್ಚ ಹುಲ್ಲು, ಶುಂಠಿ ಬೆಳೆದು ನಾಲ್ಕು ಕಾಸು ಮಾಡಿಕೊಂಡೂ ಖ್ಯಾತಿ ಪಡೆಯಲಾಗದ ಕೊಚ್ಚಿ ಕಿರಿಸ್ತಾನಿಗಳು ಒಂದು ಆದಿತ್ಯವಾರ ಪಳ್ಳಿಗೆ ಹೋಗುವ ಬದಲು ಕುಂಞಿಕಣ್ಣ ಕುರುಪ್ಪುನಲ್ಲಿಗೆ ಬಂದು ಪರಿಚಯ ಹೇಳಿಕೊಂಡು, ಕೃಷಿಯ ಸುಖ ದುಃಖ ವಿನಿಮಯ ಮಾಡಿಕೊಂಡು, ತಪಸ್ವಿನಿ ಯಲ್ಲಿ ಪೀಂಕ ಆಡಿ, ಮೀನು ಸಾರಲ್ಲಿ ಅದ್ದಿ ಕೊಳ್ಳಿಕ್ಕಪ್ಪ ತಿಂದು, ಸಂಜೆ ಕಟ್ಟಂಚಾಯ ಕುಡಿದು, ಚೆಂಡೆ ಪೆಟ್ಟು ಕೇಳಿ, ಅಂಗಳದಲ್ಲಿ ಅಡ್ಡಾದಿಡ್ಡಿ ಕುಣಿದು, ಓಮನೆ ಮೋಳು, ಮಾಧವಿಕುಟ್ಟಿಯರನ್ನು ನಗಿಸಿ, ಮಹಾಶ್ವೇತೆ ರಾಜಯೋಗಿನಿ ಅಜ್ಜಿಯನ್ನು ಮುತ್ತಚ್ಚಿಯೆಂದು ಕರೆದು ಆದರಿಸಿ ಅವರಿಂದ “ಆಗಾಗ ಬರುತ್ತಿರಬೇಕು” ಎಂಬ ಆಜ್ಞಾರೂಪೀ ಆಮಂತ್ರಣ ಪಡೆದು “ಬರುತ್ತೇವೆ ಆಸಾನೇ” ಎಂದು ಬೀಳ್ಕೊಂಡಿದ್ದರು.
ಆ ವರ್ಷ ಕಪಿಲಳ್ಳಿಗೆ ಲಾರಿ ಸರ್ವಿಸ್ಸು, ಬೆನ್ನ ಹಿಂದೆಯೇ ಮಹಾಲಕ್ಷ್ಮಿ ಮೋಟಾರು ಸರ್ವಿಸ್ ಆರಂಭವಾಗಿ ಕುಂಞಿಕಣ್ಣ ಕುರುಪ್ಪು, ಸಾಮಾನು ಸಾಗಿಸಲು ಘಟ್ಟದ ಎತ್ತಿನಗಾಡಿಯನ್ನು ಅವಲಂಬಿಸುವುದು ತಪ್ಪಿಹೋಯಿತು. ಗೂಡ್ಸು ಲಾರಿಗಳು ಈವರೆಗೆ ಘಟ್ಟದ ಎತ್ತಿನ ಗಾಡಿಗಳು ಮಾಡುತ್ತಿದ್ದ ಕೆಲಸವನ್ನು ಮಾಡತೊಡಗಿದುದರಿಂದ ಘಟ್ಟದ ಎತ್ತಿನಗಾಡಿಗಳು ಕಪಿಲಳ್ಳಿಯ ಭವ್ಯ ಇತಿಹಾಸದ ಪುಟಗಳಿಗೆ ಸಂದು ಹೋದವು. ಕುಂಞಿಕಣ್ಣ ಕುರುಪ್ಪನ ಮನೆಯಿಂದ ಕಣ್ಣಳತೆಯ ದೂರದ ಮಣ್ಣರಸ್ತೆಯಲ್ಲಿ ಮಹಾಲಕ್ಷ್ಮಿ ಮೋಟಾರು ಸರ್ವೀಸ್ ತನ್ನ ದೇಹದ ಸಮಸ್ತ ಭಾಗಗಳಿಂದ ಭೀಕರವಾದ ತಾರಸ್ತಾಯೀ ನಾದ ತರಂಗಗಳನ್ನು ಎಬ್ಬಿಸುತ್ತಾ ಡೀಸಲ್ಲು ವಾಸನೆ ಪಸರಿಸಿ ನಿಲ್ಲದೆ ಮುಂದಕ್ಕೆ ಓಡುವಾಗ ಆವರೆಗೆ ಮೈಯೆಲ್ಲಾ ಕಣ್ಣಾಗಿಸಿ ಕಾಯುತ್ತಿದ್ದ ಮುತ್ತಚ್ಚಿ, “ಸ್ವಾಮಿ ಗುರುವಾಯೂರಪ್ಪಾ” ಎಂದು ನಿಟ್ಟುಸಿರುಬಿಟ್ಟು ಒಳಹೋಗಿ ಗುರುವಾಯೂರಪ್ಪ, ಪರಶಿನಕಡವು ಮುತ್ತಪ್ಪ, ಶಬರಿಮಲೆ ಅಯ್ಯಪ್ಪ ಮತ್ತು ಕೊಲ್ಲೂರು ಮೂಕಾಂಬೆಯರಿರುವ ದೇವರ ಕೋಣೆಯಲ್ಲಿ ಹಿತ್ತಾಳೆಯ ಸಣ್ಣ ಕಾಲ್ದೀಪ ಬೆಳಗಿ, ಅದನ್ನು ಹೊರತರುವಾಗ “ದೀಬಂ, ದೀಬಂ” ಎಂದು ಯಾಂತ್ರಿಕವಾಗಿ ಹೇಳುತ್ತಾ ತುಳಸಿಕಟ್ಟೆಯೆದುರು ಅದನ್ನಿಟ್ಟು ಮೂರು ಬಾರಿ ಪ್ರದಕ್ಷಿಣೆ ಬಂದು ಒಳಹೋಗಿ ಚಿಮಣಿ ಬುಡ್ಡಿಗಳನ್ನು ಬೆಳಗಿ ತುಂಬಿರುವ ಕತ್ತಲೆಯನ್ನು ಹೊರದಬ್ಬಲು ಯತ್ನಿಸುತ್ತದೆ. ಕುಂಞಿಕಣ್ಣ ಕುರುಪ್ಪನಲ್ಲಿಗೆ ಕೆಲಸಕ್ಕೆ ಬರುವ ಶೂದ್ರಾತಿಶೂದ್ರರು, ಚೆಂಡೆ ಮದ್ದಲೆ ಕಲಿಯಲು ಬರುವ ವಿಪ್ರಾತಿವಿಪ್ರ ಶಿಷ್ಯಗಣ ಮುತ್ತಚ್ಚಿಯ ಕಾತರದ ಬಸ್ಸು ನಿರೀಕ್ಷಣೆಯ ಕಾರಣ ತಿಳಿಯದೆ, ಅದನ್ನು ಗುರುಗಳಲ್ಲಿ ಕೇಳಲಿಕ್ಕೂ ಆಗದೆ, ಗಂಟಲಲ್ಲಿ ಬೂತಾಯಿ ಮೀನಿನ ಮುಳ್ಳು ಸಿಕ್ಕಿಹಾಕಿಕೊಂಡಂತೆ ಚಡಪಡಿಸುತ್ತಿರಲಾಗಿ, ಒಂದು ಸಂಜೆ ಓಮನೆ ಮೋಳು ಮಹಾಲಕ್ಷ್ಮಿ ಮೋಟಾರು ಸರ್ವೀಸ್ ಮನೆಯೆದುರು ನಿಲ್ಲದಾಗ ನಿಟ್ಟುಸಿರು ಬಿಟ್ಟಿದ್ದೆ ಮುತ್ತಚ್ಚಿಯ ಹತ್ತಿರ ಬಂದು, “ಕರಾಚಿ ಕಾರಣೋರು ಇಂದೂ ಬರಲಿಲ್ಲ ಅಲ್ವಾ, ಮುತ್ತಚ್ಚಿ” ಎಂದು ಕೇಳಿದಾಗ ಅದು ಓಮನೆ ಮೋಳನ್ನು ತಬ್ಬಿಕೊಂಡು “ಗುರುವಾಯೂರಪ್ಪ ರಕ್ಷಿಕಣೇ” ಎಂದು ಕಣ್ಣಮುಚ್ಚಿ ಏನನ್ನೋ ಧ್ಯಾನಿಸಲಾಗಿ ನಿಗೂಢ ರಹಸ್ಯದ ಚಕ್ರವ್ಯೂಹವನ್ನು ಭೇದಿಸಲು ಹೊಂಗಿರಣವೊಂದು ಗೋಚರಿಸಿದಂತಾಗಿ ಕುಂಞಿಕಣ್ ಕುರುಪ್ಪನ ಶಿಷ್ಯಗಣ ಆನಂದೋದ್ರೇಕವನ್ನು ಅನುಭವಿಸಿತು.
ಕರಾಚಿ ಕಾರಣೋರು ಎಂಬ, ಎಂದೆಂದೂ ಕಾಣದ, ಒಂದೇ ಒಂದು ಬಾರಿ ಕೇಳಿದ ಗುಹ್ಯಾತಿಗುಹ್ಯ ಪರಮ ಪುರುಷನ ಬಗ್ಗೆ ಕಪಿಲಳ್ಳಿಗೆ ಕಪಿಲಳ್ಳಿಯೇ ರೋಮಾಂಚನಗೊಂಡು ರಹಸ್ಯ ಛೇದನ ಪ್ರಯತ್ನವಾಗಿ ಕಪಿಲಳ್ಳಿಯ ಏಕೈಕ ಕಿರಿಯ ಪ್ರಾಥಮಿಕ ಸರಕಾರೀ ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯರಲ್ಲಿಗೆ ಹೋಗಿ ಕರಾಚಿಯೆಂದರೇನೆಂದು ಕೇಳಲಾಗಿ ಅವರು ಎರಡು ಪುಸ್ತಕಗಳನ್ನು ತಿರುವಿ ಹಾಕಿ, ಜಾರುತ್ತಿರುವ ಕನ್ನಡಕವನ್ನು ಮೂರು ಬಾರಿ ಸರಿಪಡಿಸಿ ಕೊಂಡು ನಾಲ್ಕು ಬಾರಿ ಕ್ಯಾಕರಿಸಿ ತಾಂಬೂಲದ ರಕ್ತರಸವನ್ನು ಬೆರಳುಗಳ ಮಧ್ಯದಿಂದ ಪಿಚಕ್ಕೆಂದು ದೂರಕ್ಕೆ ಹಾರಿಸಿ, ಕರಾಚಿಯೆಂದರೊಂದು ಊರಾಗಿರಬೇಕೆಂದೂ, ಇದೇ ಸೋಮವಾರ ಖಂಡಿತ ವಾಗಿಯೂ ಅದೆಲ್ಲಿದೆಯೆಂದು ಪತ್ತೆಹಚ್ಚಿ ಹೇಳಿಯೇ ಬಿಡುತ್ತೇನೆಂದೂ ಆಣೆ ಪ್ರಮಾಣದ ಸ್ವರದಲ್ಲಿ ಹೇಳಿದಾಗ ಕಪಿಲಳ್ಳಿಯ ವಿಪ್ರಾತಿವಿಪ್ರರು ತುರೀಯಾವಸ್ತೆಯಲ್ಲಿ ಚಡಪಡಿಸರೊಡಗಿದರು ಶನಿವಾರ ಮಂಗಳೂರಿಗೆ ಹೋದ ಮುಖ್ಯೋಪಾಧ್ಯಾಯರು ಸೋಮವಾರ ಕಪಿಲಳ್ಳಿಗೆ ಬರುವಾಗ ಅವರ ಕೈಯಲ್ಲಿ ಏಶಿಯಾ ಖಂಡದ ದೊಡ್ಡ ಭೂಪಟವೊಂದು ಇರುವುದನ್ನು ನೋಡಿ ಶಾಲೆಗೆ ಧಾವಿಸಿದ ಮಂದಿಗೆ ಕರಾಚಿ ಎಂಬುದು ಪಾಕಿಸ್ತಾನದಲ್ಲಿರುವ ಬಂದರು ನಗರವೆಂದು ಸಾಕ್ಷ್ಯಾಧಾರ ಸಮೇತ ತೋರಿಸಲಾಗಿ ಕುಂಞಿಕಣ್ಣ ಕುರುಪ್ಪನ ಬೇರುಗಳು ಅಷ್ಟು ದೂರದವರೆಗೂ ವ್ಯಾಪಿಸಿರುವುದನ್ನು ತಿಳಿದು ಭೀತರಾಗಿ, ಅವನಿಂದ ದೂರವಿರದಿದ್ದರೆ ಒಂದಲ್ಲ ಒಂದು ದಿನ ಪಾಕೀಸ್ತಾನದಿಂದ ಯಾರಾದರೂ ಬಂದು ತಮ್ಮೆಲ್ಲರನ್ನು ಮ್ಲೇಂಚ್ಚರನ್ನಾಗಿ ಪರಿವರ್ತಿಸುವುದು ಖಚಿತವೆಂದು ಉರಿಡೀ ಹೇಳಿಕೊಂಡು ಬಂದರೂ, ಚೆಂಡೆ ಮದ್ದಲೆ ಕಲಿಯುವವರು, ನೇಜಿ ಕೆಲಸಕ್ಕೆ ಹೋಗುವವರು, ದೂರದಿಂದ ಬಂದು ಆಸಾನೇ ಎಂದು ಕರೆದು ಬಾಯ್ತುಂಬಾ ನಕ್ಕು, ಹೊಟ್ಟೆ ತುಂಬಾ ತಿಂದು ತಪಸ್ವಿನಿಯಲ್ಲಿ ಕಲ್ಲೋಲವೆಬ್ಬಿಸುವ ಕೊಚ್ಚಿಗಳು ಯಾವುದಕ್ಕೂ ಸೊಪ್ಪು ಹಾಕದ್ದನ್ನು ನೋಡಿ ನಾಲ್ಕು ದಿನ ಗೊಣಗಿ ಕರ್ಮಫಲವನ್ನು ತಪ್ಪಿಸಲು ಕಪಿಲೇಶ್ವರನಿಂದಲೂ ಅಸಾಧ್ಯವೆಂದು ತಮ್ಮನ್ನು ತಾವೇ ಸಮಾಧಾನಿಸಿಕೊಂಡು ಸುಮ್ಮನಾದರು.
ಕಪಿಲಳ್ಳಿಯ ಇತಿಹಾಸದಲ್ಲಿ ಮುತ್ತಚ್ಚಿಯ ಪ್ರವೇಶವಾದ ನಂತರ ಏಣೆಲು ನೇಜಿ ಕೆಲಸ ಹೊಸ ಆಯಾಮವನ್ನು ಪಡಕೊಂಡು ಆಕರ್ಷಣೆ ಹೆಚ್ಚಿಸಿಕೊಳ್ಳಲು ಅದು ಹೇಳುತ್ತಿದ್ದ ಮಲೆಯಾಳಿ ನೇಜಿ ಪಾಟುಗಳು, ತಚ್ಚೋಳಿ ಚಂದು, ಕುಯಿಲಾಂಡಿ ಮತ್ತು ಕುಟ್ಟಿಚಾತನ ಕತೆಗಳು, ಕಥಕ್ಕಳಿ ಮತ್ತು ಕಳರಿಪಯಟ್ಟಿನ ಪ್ರಸಂಗಗಳು ಕಾರಣವಾಗಿ ಕೆಲಸಕ್ಕೆ ಅಗತ್ಯಕ್ಕಿಂತ ಹೆಚ್ಚು ಜನ ಬರತೊಡಗಿ ನಿಭಾಯಿಸುವುದೇ ಕಷ್ಟವಾದರೂ ಕುಂಞಿಕಣ್ಣ ಕುರುಪು ತನ್ನಲ್ಲಿಗೆ ಬಂದವರಿಗೆ ಕೈ ತುಂಬಾ ಕೆಲಸ, ಹೊಟ್ಟೆ ತುಂಬಾ ಆಹಾರ ಕೊಡದೆ ಎಂದಿಗೂ ಹಿಂದಕ್ಕೆ ಕಳುಹಿಸಿದವನಲ್ಲ. ಮುತ್ತಚ್ಚಿಯ ಮುಂದೆ ತಾವೇನು ಕಮ್ಮಿಯೆಂದು ನೇಜಿಯ ಹೆಂಗಸರು ಕೋಟಿ – ಚೆನ್ನಯ್ಯ, ದೇವು ಪೂಂಜ, ಅಗೋಳಿ ಮಂಞಣ, ಪೂಮಾಣಿ – ಕಿನ್ನಿಮಾಣಿ, ಕಾಂತಾಬಾರೆ – ಬುದಾಭಾರೆ, ತುಳುನಾಡ ಸಿರಿ, ಅಬ್ಬಗ – ದಾರಗ ಮುಂತಾಗಿ ಪುಂಖಾನುಪುಂಖವಾಗಿ ಕತೆಗಳ ಪೆಟಾರಿಯನ್ನು ಒಡೆದದ್ದೇ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಯಲ್ಲಿ ತುಳು-ಮಲೆಯಳಗಳ ಮಧುರ ಸಂಗಮವಾಗಿ ಈ ವರೆಗಿರದಿದ್ದ ದಿವ್ಯತೆಯ ಅನುಭೂತಿ ಪಸರಿಸತೊಡಗಿತು. ನೇಜಿ ಕೆಲಸದ ಗಂಡಸರು ಬೇಕೆಂದೇ ದಿನಕ್ಕೆರಡು ಬಾರಿ ದೂಜಿ ಕೆಮ್ಮಯಿರಾ ಹಾಡಿ ‘ಕಾಡ ಬರಿಯೆ ಪೋವಡ ಮಗಾ ದೂಜಿ ಕೆಮ್ಮಯಿರಾ, ಕಾಡ ಪಿಲಿಲಾ ಪತ್ತು ಮಗಾ ದೂಜಿ ಕೆಮ್ಮಯಿರಾ’ ಎಂಬ ಅಂತಿಮ ಚರಣ ಬರುವಾಗ ತಮ್ಮನ್ನು ಹುಲಿಯೆಂದೂ ತಮಗೆ ಇಷ್ಟವಿರುವವರನ್ನು ದೂಜಿಕೆಮ್ಮಯಿರ ಎತ್ತೆಂದೂ ಕಲ್ಪಿಸಿಕೊಂಡು ಹಿಂದಿನಿಂದ ತಬ್ಬಿ ಹಿಡಿಯಲು ಸಿಗುವ ಸ್ವಾತಂತ್ರವನ್ನು ಪ್ರಮಿಳಾ ಸಾಮಾಜಕ್ಕೂ ವಿಸ್ತರಿಸಿ, ಜಡಿಮಳೆಯಲ್ಲಿ ಕೆಸರುಗದ್ದೆಯ ಚಳಿಯಲ್ಲಿ ಹೊಸ ಹೊಸ ರೋಮಾಂಚನಕ್ಕೆ ಕಾರಣರಾಗಿ ನೇಜಿಯ ಕೆಲಸವನ್ನು ನೆನಪಿಸಿ ಕೊಂಡಾಗಲೆಲ್ಲಾ ನಾರೀಮಣಿಯರ ಕದಪಲ್ಲಿ ಅರುಣರಾಗ ಮೂಡುವಂತೆ ಮಾಡಿದ್ದು ಸಾಧಾರಣದ ಸಾಧನೆಯೇನಾಗಿರಲಿಲ್ಲ.
ಆ ವರ್ಷ ಮಳೆಗಾಲ ಸಕಾಲಕ್ಕೆ ಆರಂಭವಾಗಿ ಕಪಿಲಳ್ಳಿಯ ಹೊಳೆ, ಹಳ್ಳ, ತೋಡುಗಳು ತುಂಬಿ ಸಮೃದ್ಧವಾಗಿ ಮೀನು, ಏಡಿ, ಆಮೆಗಳು ಕಾಣಿಸಿಕೊಂಡು, ಬೆಳ್ಳಕ್ಕಿಗಳು ಸಾಲಾಗಿ ಕುಂಞಿಕಣ್ಣ ಕುರುಪ್ಪನ ಗದ್ದೆಗಳಿಗೆ ಇಳಿಯತೊಡಗಿದಂತೆ ಸಂಭ್ರಮದ ಏಣೆಲು ಗದ್ದೆಗಳ ನೇಜಿ ಕೆಲಸ ಆರಂಭವಾಗಿಯೇ ಬಿಟ್ಟಿತು. ಮಳೆಗಾಲದಾರಂಭದ ಆಕಾಶದ ಎದೆಯೊಡೆಯು ವಂಥ ಗುಡುಗುಗಳ ಆರ್ಭಟಕ್ಕೆ ಬೆದರಿದ ಭೂಮಿಯಿಂದೆದ್ದ ಆಣಬೆಗಳು, ಮಳೆ ಬೀಳುತ್ತಲೆ ಚಿಗುರೊಡೆದು ವರ್ಣರಂಜಿತವಾಗಿ ನಳನಳಿಸಿದ ಕಣಿಲೆಗಳು, ಮಳೆಗಾಲಕ್ಕೆಂದು ಉಪ್ಪು ನೀರಲ್ಲಿ ಹಾಕಿಟ್ಟಿದ್ದ ಮಾವು, ಹಲಸಿನ ತೊಳೆ, ಮಣ್ಣು ಮೆತ್ತಿ ಸಂರಕ್ಷಿಸಿದ್ದ ಹಲಸಿನ ಬೀಜ, ಕೊಯಿದು, ಉಪ್ಪು ಹಾಕಿ ಬಿಸಿಲಲ್ಲಿ ಒಣಗಿಸಿಟ್ಟಿದ್ದ ಕೊಳ್ಳಿಕ್ಕಪ್ಪ, ಮಾಂಬಳ, ಸಾಂತಾಣಿ, ಎಟ್ಟಿ, ಬಲ್ಯಾರು ಮತ್ತು ನಂಗು, ದೂಜಿ ಕೆಮ್ಮಯಿರಾ ಹಾಡಿ ಬೇರೆ ಬೇರೆಯವರಿಂದ ವೈವಿಧ್ಯ ಮಯವಾಗಿ ತಬ್ಬಿಸಿಕೊಳ್ಳಲಿರುವ ರೋಮಾಂಚನವನ್ನು ನೆನೆದು ಆ ವರ್ಷದ ಆದಿಯಲ್ಲಿ ಮದುವೆಯುಗಿ ಕಪಿಲಳ್ಳಿಯಿಂದ ಯಾವ್ಯಾವುದೋ ಊರುಗಳಿಗೆ ಹೋಗಿದ್ದ ಚಿಕ್ಕ ಪ್ರಾಯದ ಚದುರೆಯರು ಆಟಿಕೂರಲು ಸಾಕಷ್ಟು ಸಮಯವಿದ್ದರೂ ಗಂಡಂದಿರನ್ನು ಮಂಙಣೆ ಮಾಡಿ ಒಪ್ಪಿಸಿ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗಳ ನೇಜಿ ಕೆಲಸಕ್ಕೆ ಸಕಾಲದಲ್ಲಿ ಬಂದುಬಿಟ್ಟರು. ಭೂಮಿ ತಲೆಕೆಳಗಾದರೂ ಆಟಿಗೆ ಮೊದಲು ಅವರು ಕಪಿಲಳ್ಳಿಯಲ್ಲಿ ಕಾಣಸಿಗಲಾರರೆಂದು ನಿರಾಸಕ್ತಯೋಗಿಗಳಾಗಿದ್ದ ಗದ್ದೆ ಕೆಲಸದ ಗಂಡಸರು ಅವರನ್ನು ಬ್ರಹಾನಂದದಿಂದ ಸ್ವಾಗತಿಸಿ ಹಿಂದೆಂದೂ ಇರದಷ್ಟು ಉತ್ಸಾಹದಿಂದ ತಮ್ಮನ್ನು ಕಾಯೇನ, ವಾಚಾ, ಮನಸಾ ಕಾಯಕಕ್ಕೆ ಸಮರ್ಪಿಸಿಕೊಂಡು ಬಿಟ್ಟರು.
ಒಂದು ಮಧ್ಯಾಹ್ನ ಭರ್ಜರಿ ರಸಗವಳ ಮೆದ್ದು ನೇಜಿ ಕೆಲಸ ಆರಂಭವಾಗುತ್ತಿದ್ದಂತೆ ವಾತಕ್ಕೆ ಹೆದರಿ ಕಟ್ಟಪ್ಪುಣಿಯಲ್ಲೇ ನಿರ್ದೆಶನ ನೀಡುತ್ತಾ, ಅತ್ತಿತ್ತ ಹೋಗುತ್ತಾ ಉತ್ಸಾಹ ತುಂಬುತ್ತಿದ್ದ ಮುತ್ತಚ್ಚಿ, “ಈಗ ನಿಮಗೆ ತಚ್ಚೋಳಿ ಚಂದುನ ಕತೆ ಹೇಳುತ್ತೇನೆ” ಎಂದದ್ದೇ ನೇಜಿ ಹೆಂಗಸರು, “ಅದು ಬೇಡವೇ ಬೇಡ. ಎಷ್ಟು ಸಲ ಕೇಳಿದ್ದನ್ನೇ ಕೇಳುವುದು? ಮುತ್ತಚ್ಚಿಗೆ ಮನಸ್ಸಿದ್ದರೆ ಕರಾಚಿ ಕಾರಣೋರ ಕತೆ ಹೇಳಬಾರದಾ?” ಎಂದಾಗ ತಬ್ಬಿಬ್ಬಾದ ಮುತ್ತಚ್ಚಿ “ಗುರುವಾಯೂರಪ್ಪಾ….. ಕರಾಚಿ ಕಾರಣೋರ ವಿಷಯ ನಿಮಗೂ ತಿಳಿದು ಹೋಯ್ತೆ?…. ಆಯಿತು. ಎದೆಯಲ್ಲಿ ಎಷ್ಟೂಂತ ಭಾರ ಇಟ್ಟುಕೊಳ್ಳೋದು. ಹೇಳಿ ಹಗುರಾಗೋದೇ ಮೇಲು” ಎಂದು ಪ್ರಾರಂಭಿಸಿಬಿಟ್ಟಿತು.
“ಆಗಿನ್ನೂ ನಾನು ಚಿಕ್ಕೋಳು. ಚಿಕ್ಕೋಳೂಂದ್ರೆ ನಮ್ಮ ಓಮನೆ ಮೋಳು ಇದ್ದಾಳಲ್ಲಾ ಅವಳಿಗಿಂತಲೂ. ಕಾರಣೋರ ಹೆಸರಿಗೆ ಆಗ ಕರಾಚಿ ಅಂಟಿಕೊಂಡಿರಲಿಲ್ಲ. ನಮ್ಮ ಮನಗೆ ಅವರು ಆಗಾಗ ಬರುತ್ತಿದ್ದರು. ಒಂದು ಸಲವೂ ಖಾಲಿ ಕೈಯಲ್ಲಿ ಬಂದವರಲ್ಲ. ಬರುವಾಗಲೆಲ್ಲಾ ಬಣ್ಣ ಬಣ್ಣದ ರಿಬ್ಬನ್ನು, ಕುಪ್ಪಿ ಬಳೆ, ಪೀಂ ಪೀಂ ತುತ್ತೂರಿ, ಪುಗ್ಗೆ, ಹಳದಿ, ಕೆಂಪು, ಪಚ್ಚೆ, ಹಸಿರು, ಕಪ್ಪು ಮತ್ತು ಬಿಳಿಗೆರೆಗಳ ಇಷ್ಟು ದೊಡ್ಡ ಕುಂಬಳಕಾಯಿ ಪಪ್ಪರಮಿಂಟು ತಂದುಕೊಟ್ಟು ಅಪ್ಪಿಕೊಂಡು ಮುದ್ದಿಸೋರು. ನಾನು, ನನ್ನ ತಮ್ಮ ಉಣ್ಣಿಕೃಷ್ಣ ಹೊರಗೆ ಆಡಿಕೊಂಡಿದ್ದರೆ ಅವರು ಒಳಗೆ ತಾಯಿಯೊಟ್ಟಿಗೆ ಗುಸು ಗುಸು ಮಾತಾಡೋರು. ಅಮ್ಮ ಮುಸಿ ಮುಸಿ ಅಳೋರು. ನನಗೆ ಪ್ರಪಂಚ ಅರ್ಥವಾಗದ ಪ್ರಾಯ. ಕಾರಣೋರು ಹೊರಟು ಹೋಗುವಾಗ ಒಟ್ಟೆ ಮುಕ್ಕಾಲುಗಳನ್ನು ನಮ್ಮ ಕೈತುಂಬಾ ಸುರಿಯೋರು. ನಮ್ಮನ್ನು ತಬ್ಬಿಕೊಂಡು, ‘ಎಂಡ ಪುನ್ನಾರ ಮಕ್ಕಳೇ’ ಎಂದು ಮುತ್ತಿಡೋರು. ಅವರ ಬೆವರು ವಾಸನೆ ಈಗಲೂ ನನ್ನ ಮೈಯಲ್ಲಿ ಉಳಿದುಬಿಟ್ಟಿದೆಯೇನೋ ಎಂದು ಒಮ್ಮೊಮ್ಮೆ ಅನ್ನಿಸೋದುಂಟು. ಅಪ್ಪನ ನನಪೇ ಇಲ್ಲದ ನನಗೆ ಕಾರಣೋರು ಮನೆಯಲ್ಲೇ ನಿಂತು ಬಿಡಬಾರದೇ ಎಂದೆನಿಸುತ್ತಿತ್ತು. ಬಾಯಿಬಿಟ್ಟು ಹೇಳಲು ಮಾತ್ರ ಸಾಧ್ಯವಾಗುತ್ತಿರಲಿಲ್ಲ.”
“ಕಾರಣೋರು ನಿಮಗೆ ನಿಜಕ್ಕೂ ಏನಾಗಬೇಕು ಮುತ್ತಚ್ಚಿ?”
“ಕಾರಣೋರು ಏನಾಗಬೇಕಂದರೆ ಕಾರಣೋರೇ ಆಗಬೇಕು!” ಮುತ್ತಚ್ಚಿ ಜೋರಾಗಿ ನಕ್ಕು ಮುಂದುವರಿಸಿತು. “ಹಿರಿಯರನ್ನು ಗೌರವದಿಂದ ಕಾರಣೋರು ಎಂದು ಕರೆಯೋದು ಮಲೆಯಾಳ ದೇಶದಲ್ಲಿ ಒಂದು ಸಂಪ್ರದಾಯ. ಕಾರಣೋರೆಂದರೆ ಮಾವ ಎಂದಾಗುತ್ತದೆ. ಅವರು ನನಗೇನಾಗಬೇಕೆಂದು ಕೇಳಿದ್ದಕ್ಕೆ ಕಾರಣೋರೇ ಎಂದು ಕರೆಯಬೇಕೆಂದು ಅಮ್ಮನೇ ನನಗೆ ಹೇಳಿಕೊಟ್ಟಿದ್ದು ಎಲ್ಲಾ ಅಮ್ಮಂದಿರೂ ಪರಪುರಷರನ್ನು ಮಾವಾ ಎಂದು ಕರೆಯಲಲ್ಲವೆ ಕಲಿಸಿಕೊಡೋದು! ನಾನು ಅಂಬೆಗಾಲಿಕ್ಕುವ ಮೊದಲೇ ಅಮ್ಮನಲ್ಲಿ ಜಗಳ ತಗೆದು ಮುನಿಸಿ ಕೊಂಡು ಊರುಬಿಟ್ಟು ಹೋದ ಅಪ್ಪ ಮತ್ತೆ ತಿರುಗಿ ಬರಲಿಲ್ಲ. ನಾನು ಬೆಳೆಯುತ್ತಿದ್ದಂತೆ ಕೊಟ್ಟಂಗೋರಿ, ಉಪ್ಪುಚ್ಚೆಟ್ಟಿ ಮಾಡುವ, ಹೆಗಲಲ್ಲಿ ಕೂರಿಸಿ ಕುಣಿಯುವ, ಬೇಕಾದ್ದಲ್ಲ ತೆಗೆದು ಕೊಡುವ, ರಂಪ ಮಾಡುವಾಗ ಸಂತೈಸುವ ಅಪ್ಪ ಬೇಕಿತ್ತೆಂದು ಆಗೋದು. ರಾತ್ರಿ ಮನೆಗೆ ಕಳ್ಳರೋ, ಕತ್ತೆ ಕಿರುಬಗಳೋ, ಪ್ರೇತ ಪಿಶಾಚಿಗಳೋ; ನುಗ್ಗಿದರೆ ಅಮ್ಮನನ್ನು, ತಮ್ಮನನ್ನು, ನನ್ನನ್ನು ಕಾಪಾಡುವ ಒಬ್ಬ ಬಲಿಷ್ಟ ಅಪ್ಪ ಇರಬೇಕಿತ್ತು ಎಂದು ಮನಸ್ಸು ಹಂಬಲಿಸೋದು. ಆಗೆಲ್ಲಾ ಕಾರಣೋರು ನನ್ನ ಆಪ್ಪ ಆಗಬೇಕಿತ್ತೆಂದಾಗೋದು. ಅವರು ಮನೆಯಿಂದ ಹೊರಡುವಾಗ ನನಗೆ ಅಳು ನುಗ್ಗಿ ನುಗ್ಗಿ ಬರೋದು. ನನಗೆ ಎಂದೇನು? ಅಮ್ಮನೂ ಸೆರಗಿನಲ್ಲಿ ಪದೇ ಪದೇ ಕಣ್ಣೊರೆಸಿಕೊಳ್ಳುತ್ತಿದ್ದುದು ಕಣ್ಣಿಗೆ ಕಟ್ಟಿದಂತಿದೆ. ಅವರು ಹೋದ ಮೇಲೆ ಬೇರೇನೂ ತೋಚದೆ ನಾನು ಗೋಡೆಗೊರಗಿ ಕಾಲು ಚಾಚಿ ಕುಳಿತುಬಿಟ್ಟರೆ ಉಣ್ಣಿಕೃಷ್ಣ ನನ್ನ ತೊಡೆಯಲ್ಲಿ ಮುಖ ಹುದುಗಿಸಿ ಚೆನ್ನಾಗಿ ಅತ್ತು ಹಗುರಾಗುತ್ತಿದ್ದ. ಅವನ ಕಣ್ಣೀರು, ಮೂಗಿನ ತುಪ್ಪ ಈಗಲೂ ತೊಡೆಗೆ ಅಂಟಿಕೊಂಡಂತಿದೆ.” ಕುಂಞಿಕಣ್ಣ ಕುರುಪ್ಪು ಈಗ ಬಾಯಿ ತೆರೆದ. “ಸಾಕು ಎಳೆಮೆ ಹೇಳಿದ್ದು. ಎಲ್ಲವನ್ನೂ ಒಟ್ಟಿಗೇ ಮುಗಿಸಿದರೆ ಮತ್ತೆ ನಾಳೆಗೇನುಂಟು?”
ಅವನಿಗೆ ತನ್ನ ಕುಟುಂಬದ ಪೂರ್ವಾಶ್ರಮದ ಕತೆಗಳು ಕಪಿಲಳ್ಳಿಯ ಜನರಿಗೆ ಗೊತ್ತಾಗುವುದು ಇಷ್ಟವಿರಲಿಲ್ಲ. ಹಳ್ಳಿಯ ಜನರ ಸ್ವಭಾವವೇ ಹಾಗೆ. ಒಂದು ಹೇಳಿದರೆ ಇನ್ನೊಂದು ಅರ್ಥ ಮಾಡಿಕೊಂಡು, ಏನೇನೋ ರೆಕ್ಕೆ ಪುಕ್ಕ ಸೇರಿಸಿ ಹೇಳಿಕೊಂಡು ಹೋಗುತ್ತಾರೆ. ಅದನ್ನು ಕೇಳಿಸಿಕೊಂಡವರು ಇಲಿ ಹೋದಲ್ಲಿ ಹುಲಿ ಹೋಯಿತೆಂದು ಕಲ್ಪಿಸಿಕೊಳ್ಳುತ್ತಾರೆ. ಕುಟುಂಬದ ಎಲ್ಲಾ ರಹಸ್ಯ ಬಯಲಿಗೆ ಬಂದರೆ ನಗೆಪಾಟಲಿಗೆ ಈಡಾಗಬೇಕಾಗುತ್ತದೆ. ಆದರೆ ಮುತ್ತಚ್ಚಿಗೆ ಅದಾವುದರ ಬಗ್ಗೆಯೂ ಗಮನವಿರಲಿಲ್ಲ. “ನೀನೊಮ್ಮೆ ಸುಮ್ಮನಿರು ಕುಂಞಿಕಣ್ಣ. ಇವರಿಗೆ ಏನು ಬೇಕೋ ಕೇಳಲಿ. ಕರಾಚಿ ಕಾರಣೋರ ಬಗ್ಗೆ ಒಮ್ಮೆ ಎಲ್ಲವನ್ನೂ ಹೇಳಿ ಹಗುರಾಗಿ ಬಿಡಬೇಕು. ನೀನು ಮಧ್ಯ ಬಾಯಿ ಹಾಕಬೇಡ!”
ಕುಂಞಿಕಣ್ಣ ಕುರುಪ್ಪು ಸುಮ್ಮನಾದಾಗ ನೇಜಿ ಹೆಂಗಸೊಬ್ಬಳು ಮೌನ ಮುರಿದಳು. “ನಿಮಗೊಬ್ಬ ತಮ್ಮನಿದ್ದರೆಂದು ಹೇಳಿದಿರಲ್ಲಾ ಮುತ್ತಚ್ಚಿ? ಅವರೀಗ ಎಲ್ಲಿದ್ದಾರೆ?” “ಅಯ್ಯೋ ಅದನ್ನೇನು ಹೇಳುವುದು ಕುಸುಮಾ? ಆ ಮ್ಮ ತೀರಿಕೊಂಡ ಮೇಲೆ ಈ ಕುಂಞಿಕಣ್ಣನ ಅಪ್ಪನಿಗೆ ನಾನು ಎರಡನೇ ಹೆಂಡತಿಯಾಗಿ ಬಂದೆನೆ? ಇವನನ್ನು ಹೆತ್ತಂದೇ ಕಣ್ಣುಮುಚ್ಚಿದರು ನೋಡು. ಹಣೆಬರಹ ಅಂದರೆ ಇದು. ಆ ಗುರುವಾಯೂರಪ್ಪನೂ ನನ್ನ ಹೊಟ್ಟೆಯಲ್ಲಿ ಒಂದು ಹುಳು ಹುಟ್ಟುವಂತೆ ಕಣ್ತೆರೆಯಲಿಲ್ಲ. ಆದರೆ ಇವನನ್ನು ನನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗುವಿಗಿಂತಲೂ ಹೆಚ್ಚಾಗಿ ನೋಡಿಕೊಂಡಿದ್ದೇನೆ, ಅಲ್ವಾ ಕುಂಞಿಕಣ್ಣ?
ನನ್ನ ತಮ್ಮ ಇದ್ದಾನಲ್ಲಾ ಉಣ್ಣಿಕೃಷ್ಣ, ಅವನು ಆಚೆ ಆಚೆ ತೆಂಕಲಾಗೆ ದೂರಕ್ಕೇ ಹೋಗಿ ದೊಡ್ಡ ಕುರುಪ್ಪು ಕುಟುಂಬದ ಹೆಣ್ಣನ್ನು ಮದುವೆಯಾಗಿ ಆಲ್ಲೇ ಉಳಿದುಬಿಟ್ಟ. ಹೇಗೂ ನಮ್ಮದು ಅಳಿಯ ಕಟ್ಟು ಸಂಪ್ರದಾಯ! ದೊಡ್ಡದೆಂದರೆ ಏನು ತಿಳಕೊಂಡಿದ್ದೀ, ಮೂರು ಆನೆಗಳನ್ನು ಸಾಕುವಷ್ಟು ಶ್ರೀಮಂತಿಕೆ. ಆನೆಗಳೆಂದರೆ ನಮ್ಮ ಕುಂಞಿಕಣ್ಣನಿಗೂ ಭಯವಿಲ್ಲ ಬಿಡು. ಇಲ್ಲದಿದ್ದರೆ ಆನೆ ಜಳಕಕ್ಕೆ ಬರುವ ಗಂಡಿಬಾಗಿಲಲ್ಲೇ ಗದ್ದೆ ಮಾಡುತ್ತಿದ್ದನಾ? ಉಣ್ಣಿಕೃಷ್ಣನ ಹೆಣ್ಣಿನ ಮನೆಗೆ ಇವನ ಅಪ್ಪನೊಟ್ಟಿಗೆ ನಾನೂ ಸಾಕಷ್ಟು ಸಲ ಹೋದವಳೇ. ದೊಡ್ಡ ತರವಾಡು ಮನೆ. ಉದ್ದಕ್ಕೆ ಬೇರೆ ಬೇರೆ ತೆಯ್ಯಂತಾನಗಳು! ಒಂದು ಸಲ ಏನಾಯ್ತೂ ಅಂತಿ? ಮೂರು ಆನೆಗಳಲ್ಲಿ ಒಂದಕ್ಕೆ ಮದವೇರಿದಾಗ ನಿಯಂತ್ರಿಸ ಹೋದ ಮಾವುತನನ್ನು ಸೂಂಡಿಲಿಂದೆತ್ತಿ ಕೆಳಕ್ಕೆ ಹಾಕಿ ತುಳಿದು ಸಿಗಿದು ಹಾಕಿ ಬಿಟ್ಟಿತು. ಈ ಭೀಭತ್ಸ ನೋಡಿ ಕಲ್ಲಾಗಿ ನಿಂತಿದ್ದ ಉಣ್ಣಿಕೃಷ್ಣನನ್ನು ಎತ್ತಿ ಒಗೆದದ್ದೇ ಅವನು ಬೆನ್ನಹುರಿಗೆ ಬಿದ್ದ ಏಟಿನಿಂದ ಚೇತರಿಸಲಾಗದೆ ಮಲಗಿದಲ್ಲಿಯೇ ಆಗಿಬಿಟ್ಟ. ಪ್ರಾಣ ಉಳಿದದ್ದೇ ಗುರುವಾಯೂರಪ್ಪನ ದಯೆಯಿಂದ. ಮಲಗಿದಲ್ಲಿಯೂ ಅವನಿಗೆ ಕರಾಚಿ ಕಾರಣೋರದ್ದೇ ಧ್ಯಾನವಂತೆ!”
“ಇಷ್ಟೊಂದು ಪ್ರೀತಿಸುವ ನಿಮ್ಮನ್ನೆಲ್ಲಾ ಬಿಟ್ಟು ಕರಾಚಿಗೆ ಹೋಗಲು ಕಾರಣೋರಿಗೆ ಮನಸ್ಸಾದರೂ ಹೇಗೆ ಬಂತೊ?”
“ಅದನ್ನೇನು ಹೇಳುವುದು ದೇವಕಿ? ಮನುಷ್ಯ ಹುಟ್ಟಿದಲ್ಲೇ ಬೆಳೆದು ಸಾಯಲು ಅವನೇನು ಕಲ್ಲೇ, ಮರವೇ? ಬದುಕು ಎಲ್ಲಿಗೆ ಒಯ್ಯುತ್ತದೋ ಅಲ್ಲಿಗೆ ಹೋಗಬೇಕಪ್ಪಾ. ಕುಂಞಿಕಣ್ಣನ ಅಪ್ಪ ಉಣ್ಣಿಕೃಷ್ಣನನ್ನು ನೋಡಲೆಂದು ಹೋದವರು ಅವನ ಅವಸ್ಥೆಗೆ ಕರಗಿ ಅಲ್ಲೇ ಅವನ ಸುಶ್ರೂಷೆಗೆ ನಿಂತು ಬಿಡಲಿಲ್ಲವೇ? ನಾವೀಗ ಕಂಡು ಕೇಳರಿಯದ ಈ ಕಪಿಲಳ್ಳಿಗೆ ಬಂದು ಬದುಕುತಿಲ್ಲವೇ, ಹಾಗೆ. ಕಾರಣೋರಿಂದಾಗಿ ಕರಾಚಿ ಬಗ್ಗೆ ನಾವೆಲ್ಲಾ ತಿಳಕೊಳ್ಳುವ ಹಾಗಾಯಿತು. ಒಂದು ಕಾಲದಲ್ಲಿ ಅದು ನಮ್ಮ ದೇಶದ್ದೇ ಒಂದು ತುಣುಕಂತೆ. ಬೊಂಬಾಯಿ ಕೇಳಿದ್ದೀಯಾ, ಅದಕ್ಕೆ ಹತ್ತಿರವಾಗುತ್ತದಂತೆ. ಬೊಂಬಾಯಿಯ ಹಾಗೆ ದೊಡ್ಡ ಬಂದರಂತೆ. ಮೊದಲಿಗೆ ಕಾರಣೋರು ಕೊಚ್ಚಿಯ ಮಂಜಿಯೊಂದರಲ್ಲಿ ಕೆಲಸಕ್ಕೆ ಸೇರಿದವರು ಮತ್ತೆ ಬೊಂಬಾಯಿಗೆ ಹೋಗಿ ಅಲ್ಲಿ ಒಂದೆರಡು ವರ್ಷ ಕೆಲಸ ಮಾಡಿ ಕರಾಚಿಗೆ ಮುಟ್ಟಿಬಿಟ್ಟರು. ಆಗ ಆ ಇಂಗ್ಲಿಷಿನೋರು ದೇಶವನ್ನು ಎರಡು ತುಂಡು ಮಾಡಿ ಬಿಟ್ಟರಲ್ಲಾ? ಆಚೆಯಿಂದ ಈಚೆ ಬರುವವರನ್ನು ಕಡಿದು, ಸುಲಿದು, ಕತ್ತರಿಸಿ ಕತ್ತರಿಸಿ ನರಿ ನಾಯಿ ನದಿಗಳಿಗೆ ಎಸೆಯುವುದನ್ನು ಕೇಳಿ ಕೇಳಿ ಕಾರಣೋರಿಗೆ ಕರಾಚಿ ಬಿಡಲು ಧೈರ್ಯ ಬರಲಿಲ್ಲ. ಕರಾಚಿಯಲ್ಲೂ ಮಲೆಯಾಳ, ತುಳು, ಕನ್ನಡ ಮಾತನಾಡುವವರು ಇದ್ದಾರಂತೆ. ಅವರೆಲ್ಲಾ ಅಲ್ಲಿಂದ ಹೊರಟು ದಾರಿಯಲ್ಲಿ ಏನೇನಾಗಿ ಬಾಯಿಗೊಂದು ತೊಟ್ಟು ನೀರೂ ಇಲ್ಲದೆ ಯಾರ್‍ಯಾರದೋ ಕೈಯಲ್ಲಿ ಸಾಯುವುದಕ್ಕಿಂತ ಅಲ್ಲೇ ಇದ್ದು ಹೇಗೋ ಬದುಕುವುದು ಮೇಲೆಂದು ಕರಾಚಿಯಲ್ಲೇ ಉಳಿದುಬಿಟ್ಟರು. ಏಳೆಂಟು ವರ್ಷಗಳ ಹಿಂದಿನವರೆಗೂ ಕರಾಚಿ ಕಾರಣೋರಿಂದ ಒಂದೋ, ಎರಡೋ ಪತ್ರ ಬರೋದು ಪ್ರತಿವರ್ಷ. ಈಗಲಾದರೂ ಏನಂತೆ? ಅವರ ಮಂಜಿ ಬೊಂಬಾಯಿಗೆ ಒಮ್ಮೆ ಬಂದರೆ ಸಾಕು. ಹೇಗೋ ಕಪಿಲಳ್ಳಿಯ ದಾರಿ ಕೇಳಿಕೊಂಡು ಬಂದು ಬಿಡ್ತಾರೆ. ನಾವು ಮಾತ್ರ ಈಗಲೂ ಕಾಗದ ಬರೆಯುವುದನ್ನು ಬಿಟ್ಟಿಲ್ಲ. ಯಾವತ್ತಾದರೂ ಅವರದಕ್ಕೆ ಉತ್ತರ ಬರೆಯದೆ ಇರಲಿಕ್ಕಿಲ್ಲ.”
ಕುಂಞಿಕಣ್ಣ ಕುರುಪ್ಪನೆಂದ. “ನಮ್ಮ ಎಳೆಮೆಗೆ ಪಿರಾಂದು. ಇಲ್ಲಿಂದ ಹೋಗುವ ಯಾವುದೇ ಕಾಗದವನ್ನು ಆ ನಾಯಿಂಡೆ ಮಕ್ಕ ಯಾರಿಗೂ ಕೊಡದೆ ಹರಿದು ಹಾಕಿಬಿಡುತ್ತಾರಂತೆ. ಸುಮ್ಮನೆ ಕಾಗದ ಬರಿಯೋದು, ಕಾರಣೋರ ಉತ್ತರ ಬರಲೀಂತ ಕಾಯೋದು. ಅಲ್ಲದೇ….?” ಮುಂದೆ ಮಾತು ಬೇಡವೆಂದು ಅವನು ಸುಮ್ಮನಾದ.
ಮುತ್ತಚ್ಚಿ ಅವನತ್ತ ತಿರುಗಿತು. “ಹೇಳಿಬಿಡು ಕುಂಞಿಕಣ್ಣ. ನಿಲ್ಲಿಸಬೇಡ. ಏನೇನು ಹೇಳ ಬೇಕೆಂದು ಕಾಣುತ್ತದೋ ಅದನ್ನೆಲ್ಲಾ ಹೊರಗೆ ಹಾಕು. ಆದೇನು ನೀನು ‘ಆಲ್ಲದೆ’ ಎಂದು ನಿಲ್ಲಿಸಿದ್ದು?”
ಕುಂಞಿಕಣ್ಣ ಕುರುಪು ನಿಧಾನಿಸಿ ನಿಧಾನಿಸಿ ಹೇಳಿದ, “ಹಾಗಲ್ಲ ಎಳೆಮೆ. ನಿನಗೇ ಎಪ್ಪತ್ತು ದಾಟಿತು. ಕಾರಣೋರಿಗೆ ಎಷ್ಟಾಗಿರಬೇಡ? ಅಲ್ಲದೆ, ಕರಾಚಿ ಕೂಡಾ ಬೊಂಬಾಯಿಯ ಹಾಗೆ ಗಲಾಟೆ, ಕೊಲೆ, ದೊಂಬಿಯ ಸ್ಥಳ. ಅಲ್ಲಿ ಏನೇನಾಗಿ ಹೋಗಿದೆಯೋ ಏನೋ?”
ಮುತ್ತಚ್ಚಿ ತಡೆಯಿತು. “ಸುಮ್ಮನಿರು ಕುಂಞಿಕಣ್ಣ ನೀನು. ಅಪಶಕುನ ಮಾತಾಡಿ ನನ್ನ ಜೀವ ಹಿಂಡಬೇಡ. ಕಾರಣೋರೆಂದರೆ ಏನಂದುಕೊಂಡಿದ್ದಿ? ಎಂಥಾ ಜೀವ, ಏನು ಗಟ್ಟಿ! ಅವರು ತಬ್ಬಿಕೊಂಡಾಗ ಎಲುಬೆಲ್ಲಾ ಪುಡಿ ಪುಡಿಯಾದಂತಾಗುತ್ತಿತ್ತು. ಅಂಥವರನ್ನು ಹಾಗೆಲ್ಲಾ ಯಾರಿಂದಲೂ ಏನೂ ಮಾಡೋದಕ್ಕಾಗೋದಿಲ್ಲ ಬಿಡು.”
ಕುಂಞಿಕಣ್ಣ ಕುರುಪ್ಪು ಇಳಿದನಿಯಲ್ಲೆಂದ. “ಆದರೆ ಇಳೆಮೆ ಪ್ರಾಯ ಅಂತ ಒಂದಿರುತ್ತದಲ್ಲಾ? ಸರಿಯಾಗಿ ಲೆಕ್ಕ ಹಾಕಿದರೆ ಕರಾಚಿ ಕಾರಣೋರಿಗೆ ಹತ್ತಿರ ಹತ್ತಿರ ನೂರು ಆಗಿರಬಹುದಲ್ವಾ?”
ಮುತ್ತಚ್ಚಿಯ ಮುಖ ಬಾಡಿತು. ಸಲ್ಪ ಹೊತ್ತು ಸುಮ್ಮನೆ ಕಳೆದುಹೋಯಿತು. ಜೀವವೇ ಇಲ್ಲದ ಸ್ವರದಲ್ಲಿ ಅದು ಹೇಳಿತು. “ಹೌದಲ್ವಾ ಕುಂಞಿಕಣ್ಣ? ಹತ್ತಿರ ಹತ್ತಿರ ನೂರು ಎಂದರೆ ಕಾರಣೋರು ಈಗ ಇಲ್ಲದಿರಲೂಬಹುದಲ್ಯಾ? ನನಗಿದು ಹೊಳಯಲೇ ಇಲ್ಲ ನೋಡು.”
ನೇಜಿಯ ಹೆಂಗಸರು, ಗಂಡಸರು ಥಟ್ಟನೆ ಕೆಲಸ ನಿಲ್ಲಿಸಿ ಮುತ್ತಚ್ಚಿಯನ್ನೇ ನೋಡ ತೊಡಗಿದರು. ಅಷ್ಟು ವರ್ಷಗಳ ಅವಳ ನಿರೀಕ್ಷೆಯನ್ನು ಅರ್ಥಶೂನ್ಯವಾಗಿಸಲು ಕುಂಞಿಕಣ್ಣ ಕುರುಪ್ಪನಿಗೆ ಮನಸ್ಸು ಬರಲಿಲ್ಲ. “ಎಳಮೇ, ಕಾರಣೋರನ್ನು ನಾನು ಕಂಡವನಲ್ಲ. ನೀನು ವರ್ಣಿಸುವ ಹಾಗೇ ಅವರು ಇರೋದಾದ್ರೆ ಕಾರಣೋರಿಗೆ ಆಷ್ಟು ಸುಲಭದಲ್ಲಿ ಏನೂ ಆಗಲಿಕ್ಕಿಲ್ಲ. ಅಲ್ಲದೆ, ಮಂಜಿಯಲ್ಲಿರುವುದರಿಂದ ಕರಾಚಿಯಲ್ಲೇ ತಂಬು ಹೊಡೆದು ಕೂರುವಂತಿಲ್ಲವಲ್ಲಾ? ಒಂದಲ್ಲಾ ಒಂದು ದಿನ ಅವರು ಬಸ್ಸಿಳಿದು ಬರಲೂಬಹುದು. ಆದರೂ ಅವರ ಕಾಗದ ಬರಬೇಕಿತ್ತು.”
ಹೊಸ ಚೈತನ್ಯದಿಂದ ಮುತ್ತಚ್ಚಿ ಒಮ್ಮೆಲೇ ಕೇಳಿತು. “ಬರುವುದು ಹೇಗೆ? ಅವರು ಯಾವ್ಯಾವುದೋ ಊರುಗಳಿಗೆ ಮಂಜಿಯಲ್ಲಿ ಹೋಗಲಿಕ್ಕಾಯಿತು. ಇನ್ನು ಅವರು ಕಟ್ಟಿ ಕೊಂಡವಳಿಗೆ ನಮ್ಮ ಭಾಷೆ ಬರುತ್ತದೇನು?”
ಅಷ್ಟೊಂದು ಕೆಲಸದವರ ಮುಂದೆ ಈ ವಿಷಯ ಎತ್ತಿದ್ದು ಕುಂಞಿಕಣ್ಣ ಕುರುಪ್ಪಿಗೆ ಕಸಿವಿಸಿಯುಗಿ ಮಾತು ನಿಲ್ಲಿಸುವಂತೆ ಮುತ್ತಚ್ಚಿಗೆ ಕೈಸನ್ನೆ ತೋರಿದ. ಎತ್ತಲೋ ನೋಡುತ್ತಿದ್ದ ಮುತ್ತಚ್ಚಿ ಯಾವುದೋ ಧ್ಯಾನದಲ್ಲಿರುವಂತೆ ಮಾತು ಮುಂದುವರಿಸಿತು. “ಅವರದೂ ತಪ್ಪಿಲ್ಲ ಬಿಡು ಕುಂಞಿಕಣ್ಣ. ಅಲ್ಲಿ ಅಷ್ಟು ದೂರದ ಆ ಕರಾಚಿಯಲ್ಲಿ ಇಲ್ಲಂ, ತರವಾಡು ಎಂದೆಲ್ಲಾ ನೋಡಿ ಮದುವೆಯಾಗಲಿಕ್ಕಾಗುತ್ತದೆಯೆ? ಕಷ್ಟಕ್ಕೆ ಒದಗುವವರೇ ನಿಜವಾದ ಬಂಧುಗಳಲ್ವಾ? ಆದರೂ ಕಾರಣೋರು ಇಸ್ಲಾಮು ಆಗಿ ಮದುವೆಯಾಗಬೇಕಾಯಿತಲ್ಲಾ ಎನ್ನುವುದನ್ನು ನೆನಪಿಸಿ ಕೊಳ್ಳುವಾಗ ತುಂಬಾ ದುಃಖವಾಗುತ್ತದೆ.”
ಕುಂಞಿಕಣ್ಣ ಕುರುಪ್ಪು ಯಾವುದು ಕಪಿಲಳ್ಳಿ ಜನಗಳಿಗೆ ತಿಳಿಯಬಾರದಿತ್ತೋ ಅದು ತಿಳಿದುಹೋಯಿತಲ್ಲಾ ಎಂದು ಚಡಪಡಿಸಿದರೆ ನೇಜಿ ಕೆಲಸದವರು ಸ್ತಂಭೀಭೂತರಾಗಿ ನಿಂತುಬಿಟ್ಟರು. ಜಾತಿ ಬದಲಾಯಿಸಲು ಅದೇನು ಅಂಗಿಯಾ, ಸೀರೆಯಾ? ಹಿಂದಿನ ಜನ್ಮದ ಪಾಪಪುಣ್ಯಗಳನ್ನು ಲೆಕ್ಕಹಾಕಿ ಆ ಕಪಿಲೇಶ್ವರನೇ ನಿರ್ಧರಿಸಿಬಿಡುವ ಜಾತಿಯನ್ನು ಬದಲಾಯಿಸಲು ಪಾಷಾಣಮೂರ್ತಿ, ಕಲ್ಲುರ್ಟಿ, ಗುಳಿಗ, ಪಂಜುರ್ಲಿಗಳಿಂದಲೂ ಅಸಾಧ್ಯವಾಗಿರುವಾಗ ಅಬ್ಬಾ ಆ ಕಾರಣೋರ ಸಾಮರ್ಥ್ಯವೇ! ಆದರೆ ಕಾರಣೋರು ಜಾತಿ ಬದಲಾಯಿಸಿದ್ದಾದರೂ ಯಾಕೆ? ತನಗಿಷ್ಟವಾದವಳೊಡನೆ ಸುಖವಾಗಿ ಬದುಕಲಿಕ್ಕಲ್ಲವೇ? ಈ ಯೋಚನೆ ಬರುತ್ತಲೇ ಈಗಾಗಲೇ ಮದುವೆಯಾದವರು ನಿಟ್ಟುಸಿರು ಬಿಟ್ಟರೆ, ಇನ್ನೂ ಮದುವೆಯಾಗದವರು ಹೊಸ ಹೊಸ ಸಾಧ್ಯತೆಗಳನ್ನು ನೆನೆದು ಪುಳಕಿತರಾದರು.
ಮುತ್ತಚ್ಚಿ ಕುಂಞಿಕಣ್ಣ ಕುರುಪ್ಪುನತ್ತ ತಿರುಗಿ ಮಾತು ಮುಂದುವರಿಸಿತು. “ಅಲ್ಲ ಕುಂಞಿಕಣ್ಣ…. ಆದದ್ದು ಆಗಿಹೋಯಿತು. ಕಾಲವನ್ನು ಮತ್ತೆ ಹಿಂದಕ್ಕೆ ತಿರುಗಿಸಲು ಆಗುತ್ತದೆಯೆ? ಊರು ಬಿಡುವಾಗಲೇ ಅವರ ಕುತ್ತಿಗೆಗೊಂದು ನೇತು ಹಾಕುವವರಿರುತ್ತಿದ್ದರೆ ಹೀಗಾಗುತ್ತಿರಲಿಲ್ಲವೇನೊ? ಆದರೆ ಕುಂಞಿಕಣ್ಣ….. ಆಗುವುದೆಲ್ಲಾ ಒಳ್ಳೆಯದಕ್ಕೇ ಇರಬೇಕು. ಇಲ್ಲೇ ಯಾರನ್ನಾದರೂ ಮದುವೆಯಾಗಿ ಗುರುವಾಯುರಪ್ಪನ ದಯೆಯಿಂದ ಐದಾರು ಮಕ್ಕಳಾದ ಮೇಲೆ ಅವರನ್ನೆಲ್ಲಾ ಇಲ್ಲೇ ಬಿಟ್ಟು ಇವರು ಕರಾಚಿ ಸೇರಿಕೊಳ್ಳುತ್ತಿದ್ದರೆ ಆ ಚಿಳ್ಳೆಪಿಳ್ಳೆಗಳ ಗತಿ ಏನಾಗುತ್ತಿತ್ತೋ? ಆ ಗುರುವಾಯೂರಪ್ಪ ಒಳ್ಳೆಯದನ್ನೇ ಮಾಡಿದ”
ನೇಜಿ ಹೆಂಗಸರು ಮುತ್ತಚ್ಚಿಯ ಮಾತಿಗೆ ತಲೆಯಾಡಿಸುತ್ತಿದ್ದರೆ ಕುಂಞಿಕಣ್ಣ ಕುರುಪ್ಪು ಮಾತ್ರ ಬೇರೆಯೇ ಲೆಕ್ಕ ಹಾಕತ್ತಿದ್ದ. “ಆದರೆ ಎಳಮೇ” ಪ್ರಶ್ನೆ ಈಗಲೂ ಮುಗಿಯಲಿಲ್ಲ. ಇವತ್ತಲ್ಲಾ ನಾಳೆ ಕಾರಣೋರನ್ನು ಆ ಗುರುವಾಯೂರಪ್ಪನೇ ಕರೆಸಿಕೊಂಡ ಮೇಲೆ ಎಲ್ಲಾ ಕಾರ್ಣಚ್ಚರಿಗೆ ಬಡಿಸುವ ಹಾಗೆ ಅವರಿಗೂ ನಾವು ಬಡಿಸಬೇಕಾಗುತ್ತದೆ. ಅವರು ಇಸ್ಲಾಮು ಆಗಿರೋದ್ರಿಂದ ಉಳಿದ ಕಾರ್ಣೆಚ್ಚರ ಸಾಲಲ್ಲಿ ಅವರಿಗೆ ನಾವು ಬಡಿಸುವುದು ಸರಿಯಾಗುತ್ತದಾ?.”
ಗಲಿಬಿಲಿಗೊಂಡ ಮುತ್ತಚ್ಚಿ ಏನನ್ನೋ ಧ್ಯಾನಿಸಿ ನಿಧಾನವಾಗಿ ಹೇಳಿತು. “ಅದು ಸತ್ತ ಮೇಲಿನ ಮಾತಲ್ಲವೇ ಕುಂಞಿಕಣ್ಣ? ಬದುಕಿರುವಾಗಲೇ ಜಾತಿ ಬಿಟ್ಟವರನ್ನು ಸತ್ತ ಮೇಲೆ ಜಾತಿ ಅಂಟಿಕೊಳ್ಳುತ್ತದಾ?”
“ಜಾತಿಯನ್ನು ಹಿಡಿಯಲು ಬಿಡಲು ಎಲ್ಲಾಗುತ್ತದೆ ಎಳೆಮೇ? ಬೇಡವೆಂದರೂ ಹುಟ್ಟುತ್ತಲೇ ಅಂಟುವ ಪೀಡೆ ಅದು. ಅವರನ್ನು ಜಾತಿ ಬಿಡಲಿ, ಅಂಟಿಕೊಳ್ಳಲಿ, ನಮಗವರು ಕಾರಣೋರೇ ತಾನೆ? ಅಂದ ಮೇಲೆ ಅವರಿಗೆ ನಾವು ಬಡಿಸಲೇಬೇಕಾಗುತ್ತದೆ. ಈಗ ಪ್ರಶ್ನೆ ಎಂದರೆ ಇಸ್ಲಾಮು ಆದವಾರಿಗೆ ಉಳಿದ ಕಾರ್ಣಚ್ಚರ ಸಾಲಲ್ಲಿ ಎಲೆ ಹಾಕಬಹುದಾ?”
ಮುತ್ತಚ್ಚಿ ನಕ್ಕಿತು. “ನಿನಗೆ ಪಿರಾಂದಲ್ವಾ ಕುಂಞಿಕಣ್ಣ? ನಾನು ಬಡಿಸಿದ್ದನ್ನು ತಿನ್ನಲು ಸತ್ತವರೇನು ಎದ್ದು ಬರುತ್ತಾರಾ? ಬದುಕಿರುವವರ ಸಂತೃಪ್ತಿಗಾಗಿ ಸತ್ತವರಿಗೆ ಬಡಿಸಿ ನಾವೇ ತಿನ್ನುತ್ತೇವೆ. ಹಾಗಾಗಿ ಕಾರಣೋರು ಹಿಂದುವೋ, ಇಸ್ಲಾಮೋ ಎನ್ನುವ ಪ್ರಶ್ನೆ ಮುಖ್ಯವೇ ಆಗುವುದಿಲ್ಲ. ಮತಕ್ಕಿಂತ ಮನುಷ್ಯತ್ವ ಮೇಲಲ್ಲವೇ? ಕಾರಣೋರು ಯಾರಿಗೂ ಅನ್ಯಾಯ ಮಾಡಿದವರಲ್ಲ. ಇಲ್ಲೊಂದು ಮದುವೆ ಅಂತ ಆಗಿರುತ್ತಿದ್ರೆ ಅಲ್ಲಿ ಮದುವೇನೂ ಆಗುತ್ತಿರಲಿಲ್ಲ. ಅವರಿಗೆ ದಿಕ್ಕು ಅಂತಿರೋತು ನಾವು ಮಾತ್ರ. ಈ ಮುದುಕಿಗೆ ನೀನು ಬಡಿಸದಿದ್ದರೂ ಚಿಂತಿಲ್ಲ ಕುಂಞಿಕಣ್ಣ. ಕಾರಣೋರಿಗೆ ಮಾತ್ರ ಉಳಿದ ಕಾರ್ಣಚ್ಚರ ಸಾಲಲ್ಲೇ ಬಡಿಸಬೇಕು.”
ದೂರದಿಂದ ಮಹಾಲಕ್ಷ್ಮಿ ಮೋಟಾರು ಸರ್ವೀಸಿನ ಹಾರನ್ನು ಸ್ವರ ಕೇಳಿದಾಗ ಆ ವರೆಗೆ ಕೆಲಸ ಮರೆತು ನಿಂತಿದ್ದ ಹೆಂಗಸರು, ಗಂಡಸರು “ಓ ಇಷ್ಟನ್ನು ಮುಗಿಸದಿದ್ದರೆ ನಾಳೆಗೆ ಗದ್ದೆ ಗಟ್ಟಿಯಾಗಿ ಮತ್ತೊಮ್ಮೆ ಉಳಬೇಕಾಗುತ್ತದೆ” ಎಂದು ನೇಜಿ ನೆಡತೊಡಗಿದರು. ಮುತ್ತಚ್ಚಿ, “ದೀಪ ಹಚ್ಚುವ ಹೊತ್ತಾಯಿತಲ್ಲಾ ಕುಂಞಿಕಣ್ಣ?” ಎನ್ನುತ್ತಾ ಗಡಬಡಿಸಿ ಮನೆಯ ಕಡೆ ಹೊರಟಾಗ ಕುಂಞಿಕಣ್ಣ ಕುರುಪ್ಪು ಈ ಎಳೆಮೆಯ ಆಸೆಯಂತೆ ಯಾವತ್ತಾದರೊಂದು ದಿನ ಬಸ್ಸು ನಿಂತು ಕರಾಚಿ ಕಾರಣೋರು ಅದರಿಂದ ಇಳಿದು ಬರುವಂತಾಗಲಿ ದೇವರೇ ಎಂದು ಹಾರೈಸಿದ.
*****