ನೋಡು ಉಷೆ !

ನೋಡು ಉಷೆ! ಸುತ್ತೆಲ್ಲ ಬೆಡಗು ಸೂಸಿದೆ ತುಂಬಿ,
ಚಂದ್ರಮನ ಎಳಗಿರಣಗಳ ತೋಳತೆಕ್ಕೆಯಲಿ
ಮುದ್ದು ಮೋಡವು ನಕ್ಕು ನಲಿಯುತಿರೆ, ಮರಿದುಂಬಿ
ಹೂಹೃದಯದೊಲವಿನಲಿ ಕುಣಿದಾಡುವಂದದಲಿ!
ತಂಗಾಳಿ ಮರದೆಲೆಯ ಮುಟ್ಟಿಯೂ ಮುಟ್ಟದೊಲು,
ಮೃದುವಾಗಿ ಮುತ್ತಿಟ್ಟು, ಮುಂದೆ ಸಾಗುತ್ತಲಿದೆ.
ಆ ಗಿರಿಯ ಶಿಖರವನು ಬಾಚಿ ತಬ್ಬಿದ ಹೊನಲು
ಬೆಳ್ಳಿ ಬೆಳಕಿನ ಒಲವು ಪಿಸುನಗೆಯ ಬೀರುತಿದೆ!
ಎಲ್ಲೆಡೆಯು ಹಿರಿ ಬೆಡಗು, ಇಲ್ಲಿ ನೀ ಸುಖದ ಸಿರಿ!
ಹೃದಯ ಕಂಗಳಲಿರಿಸಿ, ಕಂಗಳನೆ ಮನೆಮಾಡಿ
ಅದರೊಳಿರು ಬಾರೆಂದು ಕರೆಯುತಿಹೆ ಮಿಂಚುಮರಿ!
ಈ ರಾತ್ರಿ ಪ್ರೇಮಿಗಳ ಮಿಲನದೊಲವಿನ ಮೋಡಿ
ಹಾಸುತಿದೆ; ಬಾ ಬಳಿಗೆ, ಇರ್ವರೊಂದಾಗೋಣ,
ನಾಳೆ ನಿನ್ನೆಗಳಳಲ ದೂರ ದೂರಿರಿಸೋಣ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕರಾಚಿ ಕಾರಣೋರು
Next post ಅಮ್ಮ – ಬೆಂಕಿ

ಸಣ್ಣ ಕತೆ