ಮೂಲ: ಟಿ ಎಸ್ ಎಲಿಯಟ್
ಕರುಳು ಕೊರೆಯುವ ಎಂಥ ಚಳಿಗಾಲ ಆ ಮಾಘ!
ಇಡಿ ವರ್ಷದಲ್ಲೇ ಅತಿ ಕೆಟ್ಟ ಕಾಲ
ಆಳದಾರಿಗಳಲ್ಲಿ ಇರಿವ ಹವೆಯಲ್ಲಿ
ಪ್ರಯಾಣಕ್ಕೆ, ಅದರಲ್ಲೂ ಅಷ್ಟು ದೂರದ್ದಕ್ಕೆ
ಎಷ್ಟೂ ಸರಿಯಲ್ಲ ಆ ಮಾಗಿಕಾಲ.
ಹೆಜ್ಜೆ ಹುಣ್ಣಾದ ಒಂಟೆ ನೋವಿಂದ ನರಳುತ್ತ
ನಡೆಯಲೊಪ್ಪದೆ ಹಿಮದ ನೆಲದಲ್ಲೆ ಮಲಗಿದುವು.
ಎಷ್ಟೊ ಸಲ ನಾವೂ ಪಶ್ಚಾತ್ತಾಪಪಟ್ಟದ್ದುಂಟು ಬಿಟ್ಟು ಬಂದದ್ದಕ್ಕೆ
ಬೆಟ್ಟದ ದಿಬ್ಬದಲ್ಲಿ ಕಟ್ಟಿದರಮನೆಯನ್ನ,
ತಂಪು ತಾರಸಿಯನ್ನ, ತಣ್ಣನೆಯ ಶರಬತ್ತು
ತಂದು ಕೈಗಿಡುತ್ತಿದ್ದ ರೇಶ್ಮೆ ಚೆಲುವೆಯರನ್ನ.
ಒಂಟೆಗಳ ಸವಾರರೋ ಶಪಿಸುತ್ತ ಗೊಣಗುತ್ತ,
ಹೆಂಡ ಹೆಣ್ಣುಗಳನ್ನು ನೆನೆದು ಹುಚ್ಚಾಗುತ್ತ
ಓಡಿ ಹೋದದ್ದುಂಟು ಹಿಂದಕ್ಕೆ. ಇರುಳಲ್ಲಿ
ಹಚ್ಚಿದ್ದ ಉರಿ ಆರಿ, ನಿಲ್ಲಲಾಸರೆಯಿರದೆ,
ಹೋಗೆನುವ ನಗರಗಳ, ಬಾ ಎನದ ಊರುಗಳ,
ಒಂದಕ್ಕೆ ಹತ್ತು ಬೆಲೆ ಇಟ್ಟು ಮಾರುವ ಸುಟ್ಟ ಸುಡುಗಾಡು ಹಳ್ಳಿಗಳ
ಹಾದು ಬಂದೆವು: ಅದೆಂಥ ಕೆಟ್ಟಕಾಲ!
ಇರುಳೆಲ್ಲ ನಡೆಯುತ್ತ ನಡುನಡುವೆ ಆಗೀಗ
ಯಾವಾಗಲೋ ಸಣ್ಣದಾಗಿ ಜೊಂಪೆಳೆಯುತ್ತ
ಸಾಗಲು ನಿರ್ಧರಿಸಿದೆವು ಅಂತೂ ಕಡೆಗೆ
ನಾವು ಮಾಡಿದ್ದು ಭಾರಿ ತಪ್ಪೆಂದು ದನಿಗಳು
ನಮ್ಮ ಕಿವಿಯಲ್ಲಿ ಒಂದೇ ಸಮನೆ ಗುಣುಗುಣಿಸುತ್ತ.
ಹೇಗೋ ಬಂದೆವು ಕಡೆಗೆ ಬೆಳಗಿನ ಜಾವದಲ್ಲಿ
ಹಿತವಾದ ಹವೆಯಿದ್ದ ಹಿಮದ ಗೆರೆ ಕೆಳಗಿದ್ದ
ಹಸಿರು ಮುರಿಯುತ್ತಿದ್ದ ಕಣಿವೆ ಕಡೆಗೆ.೧
ದಡದಡನೆ ಹರಿವ ತೊರೆ, ನೀರ ಬೀಳಿನ ಕೆಳಗೆ,
ಸುತ್ತ ತಿರುಗುತ್ತ ಕತ್ತಲನ್ನು ಬಡಿಯುವ ಯಂತ್ರ,
ದೂರ ಕ್ಷಿತಿಜಕ್ಕೆ ಹತ್ತಿ ಬೆಳೆದಿದ್ದ ಮೂರು ಮರ,
ಹುಲ್ಲುಗಾವಲಿನಲ್ಲಿ ಎಲ್ಲಿಗೋ ದೌಡಾಯಿಸುತ್ತಿದ್ದ ಬಿಳಿಕುದುರೆ.೨
ಹಣೆ ಮೇಲೆ ದ್ರಾಕ್ಷಿ ಬಳ್ಳಿಗಳ ಎಲೆ ಹಬ್ಬಿರುವ ಯಾವುದೋ ಛತ್ರ
ತೆರೆದ ಬಾಗಿಲಿನತ್ತ ಬೆಳ್ಳಿ ನಾಣ್ಯಕ್ಕಾಗಿ ದಾಳ ಉರುಳಿಸುತ್ತಿರುವ ಆರು ಕೈ೩
ಖಾಲಿ ಹೆಂಡದ ಬುಂಡೆಯನ್ನೊದೆವ ಕಾಲುಗಳು.
ಸುದ್ದಿ ಬಂದಿರಲಿಲ್ಲ ಅಲ್ಲಿಗೂ, ಅದಕ್ಕೆಂದೆ
ಮುಂದುವರಿದೆವು ಮತ್ತೆ, ಅಂತೂ ಹೇಗೋ ಸಂಜೆ
ಬಂದು ಊರನ್ನು ಸೇರಿದೆವಲ್ಲ ಎಂಥ ನೆಮ್ಮದಿ.
ನನಗೆ ನೆನಪಿದೆ, ಇವೆಲ್ಲ ಬಹಳ ಹಿಂದಿನದು.
ಅಂಥ ಪ್ರಯಾಣಕ್ಕೆ ಇನ್ನೂ ಒಮ್ಮೆ ಸಿದ್ದ.
ಆದರೂ ಬರೆದುಕೊ, ಬರೆದುಕೊ ಇದನ್ನು:೪
ಹಾಗೆಲ್ಲ ನಮ್ಮನ್ನು ಆ ಪಾಟಿ ಅಲೆಸಿದ್ದು ಹುಟ್ಟಿಗೋ ಸಾವಿಗೋ?೫
ಹುಟ್ಟು ಇದ್ದದ್ದು ನಿಜವೇ, ಸಾಕ್ಷ್ಯವಿತ್ತು ನಮಗೆ, ಇಲ್ಲ ಅನುಮಾನ.
ಹುಟ್ಟು ಸಾವುಗಳನ್ನು ನಾನು ಕಂಡವನೆ
ಆದರೂ ಅವು ಭಿನ್ನವೆಂದು ತಿಳಿದಿದ್ದೆ.೬
ಈ ಹುಟ್ಟು ಮಾತ್ರ ಸಾವಿನ ಹಾಗೆಯೇ ಥೇಟು,
ನಮ್ಮ ಸಾವಿನ ಹಾಗೆ ಕಠಿಣ, ಯಮಯಾತನೆ.
ನಮ್ಮದೇ ನೆಲೆಗಳಿಗೆ ನಮ್ಮದೇ ರಾಜ್ಯಕ್ಕೆ
ಹಿಂದಿರುಗಿದೆವು ನಿಜ, ಆದರೂ ಏಕೋ
ಹಿಂದಿನ ನೆಮ್ಮದಿ ಇಲ್ಲ ಹಳೆಯ ಆಡಳಿತದಲ್ಲಿ,೭
ತಮ್ಮ ದೇವರನ್ನಪ್ಪಿ ನಿಂತ ಪರಕೀಯ ಜನ.
ಇನ್ನೊಂದು ಸಾವೂ ನನಗೆ ನೆಮ್ಮದಿಯೆನ್ನಿಸುವ ಸ್ಥಿತಿ.
*****
೧೯೨೭
ಜಾನ್ ಪರ್ಸೆ ಎಂಬ ಫ್ರೆಂಚ್ ಕವಿಯ ‘ಅನಬೇಸ್’ ಎಂಬ ಪದ್ಯವನ್ನು ಎಲಿಯಟ್ ‘ಅನಬೇಸಿಸ್’ ಎಂಬ ಹೆಸರಿನಲ್ಲಿ ಅನುವಾದಿಸಿ ೧೯೩೦ರಲ್ಲಿ ಪ್ರಕಟಿಸಿದ. ಆ ಪದ್ಯದ ಮೊದಲ ಭಾಗದ ಪ್ರಭಾವ ‘ಜ್ಞಾನಿಗಳ ಪಯಣ’ ಕವನದ ರಚನೆಯಲ್ಲಿ ಕಾಣುತ್ತದೆ. ಜೀನ್ ಪೌಲನ್ನನಿಗೆ ಬರೆದ ಪತ್ರದಲ್ಲಿ ಸ್ವತಃ ಎಲಿಯಟ್ ಈ ವಿಷಯವನ್ನು ಪ್ರಸ್ತಾಪಿಸಿದ್ದಾನೆ. ‘ಪರ್ಸೆಯ ಪದ್ಯವನ್ನು ಅನುವಾದಿಸಿದ ನಂತರ ನಾನು ಬರೆದ ಹಲವು ಕವನಗಳ ಮೇಲೆ ಆ ಪದ್ಯದ ಪ್ರತಿಮೆಗಳ ಮತ್ತು ಲಯದ ಪ್ರಭಾವವಿದೆ’ ಎಂದು ಹೇಳಿದ್ದಾನೆ. ಆ ಕವನದಲ್ಲಿ ಬರುವ ಮರುಭೂಮಿ, ಒಂಟೆಗಳ ಮೇಲೆ ಕೂತು ಮಾಡುವ ಪ್ರಯಾಣ, ಉಪಚರಿಸುವ ಸೇವಕಿಯರು ಇಲ್ಲಿಯೂ ಕಾಣಿಸಿಕೊಳ್ಳುತ್ತಾರೆ. ರಿಚರ್ಡ್ ಅಬೆಲ್ ತಾನು ಬರೆದ ‘ಕಾಂಟೆಂಪರರಿ ಲಿಟರೇಚರ್’ ಎಂಬ ಪುಸ್ತಕದಲ್ಲಿ ಎರಡೂ ಪದ್ಯಗಳ ನಡುವಿನ ಸಮಾನಾಂಶಗಳ ದೀರ್ಘವಿಶ್ಲೇಷಣೆ ಮಾಡಿದ್ದಾನೆ.
ಮ್ಯಾಥ್ಯ (II, ೧-೧೨) ನಲ್ಲಿ, ಆಗಷ್ಟೇ ಜನಿಸಿರುವ ಶಿಶುಕ್ರಿಸ್ತನನ್ನು ನೋಡಲು ಬಂದ ಮೂವರು ಜ್ಞಾನಿಗಳ ಪ್ರಸ್ತಾಪವಿದೆ. ಚಾಲ್ತಿಯಾದ ರಾಜ ಬಾಲ್ತಜಾರ್, ಇಥಿಯೋಪಿಯಾದ ರಾಜ ತಾರ್ಷಿಪ್ ಮತ್ತು ನ್ಯೂಬಿಯಾದ ರಾಜ ಮೆಲ್‌ಷಿಯರ್ – ಇವರೇ ಆ ಮೂವರು ಜ್ಞಾನಿಗಳೆಂದು ನಂತರದ ಪರಂಪರೆ ಗುರುತಿಸಿದೆ.
ಲ್ಯಾನ್ಸೆಲಾಟ್ ಆ್ಯಂಡ್ರಸ್ ಉಪದೇಶವೊಂದರಲ್ಲಿ ಬರುವ ಕೆಲವು ಪದಪುಂಜಗಳು ಈ ಪದ್ಯದಲ್ಲಿ ತಲೆಹಾಕಿವೆ. ಆ್ಯಂಡ್ರೂಸ್ ಪ್ರಸ್ತಾಪಿಸಿರುವ ಪ್ರಯಾಣದ ಕಷ್ಟಗಳ ವಿವರಗಳನ್ನು ಎಲಿಯಟ್ ೬ ರಿಂದ ೨೦ನೆಯ ಸಾಲುಗಳಲ್ಲಿ ಬಳಸಿದ್ದಾನೆ.
೧. ಹಸಿರು ಮುರಿಯುತ್ತಿದ್ದ ಕಣಿವೆ ಕಡೆಗೆ : ಭಾವದೀಪ್ತವಾದ, ಆದರೂ ಅರ್ಥ ವಿವರಣೆಗೆ ಸಿಗದ ನಿಗೂಢ ಪ್ರತಿಮೆಗಳ ಬಗ್ಗೆ ಎಲಿಯಟ್ ತನ್ನ The use of Poetry ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾನೆ. ಅದಕ್ಕೆ ಅವನು ನೀಡುವ ನಿದರ್ಶನ ಇಲ್ಲಿ ಬರುವ ‘ತೆರೆದ ಬಾಗಿಲಿನತ್ತ ಬೆಳ್ಳಿ ನಾಣ್ಯಕ್ಕಾಗಿ ದಾಳ ಉರುಳಿಸುತ್ತಿರುವ ಆರು ಕೈ’ ಎಂಬ ಪ್ರತಿಮೆಗೆ ಹತ್ತಿರವಾಗಿದೆ. ಮುಂದಿನ ಎಂಟು ಸಾಲುಗಳಲ್ಲಿ ಇಂಥ ನಾಲ್ಕೈದು ಚಿತ್ರಗಳಿವೆ.
೨. ಹುಲ್ಲುಗಾವಲಿನಲ್ಲಿ ಎಲ್ಲಿಗೋ ದೌಡಾಯಿಸುತ್ತಿದ್ದ ಬಿಳಿಕುದುರೆ: ‘ರೆವಲೇಷನ್’ನಲ್ಲಿ (VI,2, ಮತ್ತು XIX, ೧೧-೧೪) ವಿಜೇತಕ್ರಿಸ್ತ ಬಿಳಿಕುದುರೆಯನ್ನು ಹತ್ತಿ ಬರುತ್ತಾನೆ.
೩. ಬೆಳ್ಳಿನಾಣ್ಯಕ್ಕಾಗಿ ದಾಳ ಉರುಳಿಸುತ್ತಿರುವ ಆರು ಕೈ: ಬೈಬಲ್ಲಿನ ಎರಡು ಪ್ರಸಂಗ ಇಲ್ಲಿ ನೆನಪಾಗುತ್ತವೆ. ಮೂವತ್ತು ಬೆಳ್ಳಿ ನಾಣ್ಯಗಳಿಗಾಗಿ ಜುದಾಸ ಏಸುವಿಗೆ ದ್ರೋಹ ಮಾಡಲು ಒಪ್ಪುವುದು; ಕ್ರಿಸ್ತನನ್ನು ಶಿಲುಬೆಗೇರಿಸಿದ ಮೇಲೆ ಅವನ ವಸ್ತ್ರಗಳಿಗಾಗಿ ಸೈನಿಕರು ತಮ್ಮ ಅದೃಷ್ಟ ಚಲಾಯಿಸುವುದು – ಇವು ಆ ಪ್ರಸಂಗಗಳು.
೪. ಆದರೂ ಬರೆದುಕೊ, ಬರೆದುಕೊ ಇದನ್ನು : ಈ ಸಾಲುಗಳು ನಾಟಕೀಯ ಸನ್ನಿವೇಶವೊಂದನ್ನು ಸೃಷ್ಟಿಸುತ್ತವೆ. ಜ್ಞಾನಿಗಳಲ್ಲಿ ಒಬ್ಬನು ತನ್ನ ಮಾತನ್ನು ಆಲಿಸುತ್ತಿರುವ ವ್ಯಕ್ತಿಗೆ ಈ ಅನುಭವಗಳನ್ನೆಲ್ಲ ಬರೆದು ದಾಖಲೆ ಮಾಡು ಎಂದು ಹೇಳಿದಂತಿದೆ. ಏಟ್ಸ್ ಕವಿಯ The Adoration of the Magi ಎಂಬ ಗದ್ಯಭಾಗವೊಂದು ಅವನ Mythologies ಸಂಪುಟದಲ್ಲಿದೆ. ಅಲ್ಲಿ ಮೂರು ಜನ ಮುದುಕರು ಕವಿಯ ಜೊತೆ ಬೆಂಕಿಗೂಡಿನ ಮುಂದೆ ಕುಳಿತು ತಮ್ಮ ಅನುಭವವನ್ನು ನಿರೂಪಿಸುತ್ತಾರೆ. ತಾವು ಹೇಳಿದ್ದನ್ನೆಲ್ಲ ಬರೆದುಕೊಳ್ಳಬೇಕೆಂದೂ ಆಗ ತಮ್ಮ ಪದಗಳೇ ಇರುತ್ತ ದಾಖಲೆ ಸಮರ್ಪಕವಾಗಿರುತ್ತದೆಂದೂ ಅವರು ತಿಳಿಸುತ್ತಾರೆ. ಈ ಗದ್ಯಭಾಗ ಎಲಿಯಟ್‌ಗೆ ಮೇಲಿನ ನಾಟಕೀಯ ಸನ್ನಿವೇಶ ಸೃಷ್ಟಿಸಲು ಪ್ರೇರಣೆ ನೀಡಿರಬಹುದು.
೫. ಹಾಗೆಲ್ಲ ನಮ್ಮನ್ನು… ಹುಟ್ಟಿಗೋ ಸಾವಿಗೋ : ಆ್ಯಂಡ್ರೆಸ್‌ನ ಉಪದೇಶದಲ್ಲಿ ಬರುವ ಕೆಲವು ಸಾಲುಗಳು ಮುಂದಿನ ಹನ್ನೊಂದು ಸಾಲುಗಳಿಗೆ ಪ್ರಚೋದನೆ ನೀಡಿವೆಯೋ ಎನ್ನಿಸುವಂತಿದೆ. ಉಪದೇಶದಲ್ಲಿ ಈ ಪ್ರಶ್ನೆ ಕಾಣಿಸಿಕೊಂಡಿದೆ. ಪಯಣ ಹೋದ ಜ್ಞಾನಿಗಳು ಅಲ್ಲಿ ಕಂಡದ್ದೇನು? ‘No right to comfort them, nor a word for which they any whit the wiser; nothing worth their travel…. Well, they will take Him as they find him, and all this not withstanding, worship Him for all that’.
ಆ್ಯಂಡ್ರಸ್‌ನ ಉಪದೇಶದಲ್ಲಿ ದೊರೆ ಸಾಲೊಮನ್ನನನ್ನು ಅವನ ಎಲ್ಲ ವೈಭವ ಸಹಿತ ನೋಡಲು ಬಂದ ಶೀಬಾಳಿಗೆ ಜ್ಞಾನಿಗಳನ್ನು ಹೋಲಿಸಲಾಗಿದೆ. ಇದು ಅಲ್ಲಿನ ಮಾತು:
Weigh what she found, and what these here – as poor and unlikely a birth as could be, ever to prove a King, or any great matter. No right to comfort them, nor a word for which they any whit the wiser; nothing worth their travel….
೬. ಆದರೂ ಅವು ಭಿನ್ನವೆಂದು ತಿಳಿದಿದ್ದೆ: ಇಲ್ಲಿನ ಸಾಲುಗಳಲ್ಲಿ ಮತ್ತೆ ಮತ್ತೆ ಬರುವ ‘ಹುಟ್ಟು’ ‘ಸಾವು’ ಪದಗಳ ಬಳಕೆಗೆ ಕನ್ನಿಂಗ್‌ಹ್ಯಾಮ್ ಗ್ರಹಾಮ್ ಬರೆದ The Fourth Magus (ನಾಲ್ಕನೆಯ ಜ್ಞಾನಿ) ಎಂಬ ಕಥೆ ಕಾರಣವಿರಬಹುದು. ಈ ಕಥೆ ೧೯೧೦ರಲ್ಲಿ ಪ್ರಕಟವಾಯಿತು. ನಿಕೊನಾರ್ ಈ ನಾಲ್ಕನೆಯ ಜ್ಞಾನಿ. ಬೆತ್ಲಹೆಮ್ಮಿಗೆ ಹೋಗುತ್ತದಾರಿಯಲ್ಲಿ ಅವನು ಶಿಲುಬೆಯೇರಿದ್ದ ಕ್ರಿಸ್ತನ ಧ್ವನಿಯನ್ನು ಕೇಳುತ್ತಾನೆ. ಆಗ ಬರುವ ಮಾತು ಇದು: Now it is time to rest. Fate has deprived me of the joy of being present at the birth of him the star announced; I am atleast be present at his death… and birth and death are not so very different at all.
೭. ಹಳೆಯ ಆಡಳಿತದಲ್ಲಿ : ಕ್ರಿಸ್ತನಿಗೆ ಮುಂಚೆ ಇದ್ದ ಕಾಲದ ಸ್ಥಿತಿ. ಕ್ರೈಸ್ತಧರ್ಮದ ಕಾಲ ಹೊಸ ಆಡಳಿತ. ಪಾಲ್ ತನ್ನ ಉಪದೇಶದಲ್ಲಿ `ಭಗವಂತನ ಅನುಗ್ರಹವಿರುವ ಆಡಳಿತ’ವನ್ನು ಮತ್ತು ಕ್ರಿಸ್ತನ ‘ಅಭೇದ್ಯತೆಯಲ್ಲಿ ತನ್ನ ನಂಬಿಕೆಯನ್ನು’ ಕುರಿತು ಹೇಳುತ್ತಾನೆ.