ಚಿಕ್ಕದೇವರಾಜ ಒಡೆಯರು ರಾಜರಾದಮೇಲೆ ಮರಾಟೆಯವರು ದಂಡೆತ್ತಿ ಬರುವುದಕ್ಕೆ ಮೊದಲಾಯಿತು. ಪಟ್ಟಕ್ಕೆ ಬಂದ ಮೇಲೆ ರಾಜರು ತಮ್ಮ ದಳವಾಯಿ ಕುಮಾರಯ್ಯನನ್ನೂ ಆತನ ಮಗ ದೊಡ್ಡಯ್ಯನನ್ನೂ ತಿರುಚನಾಪಳ್ಳಿಯನ್ನು ಗೆಲ್ಲಲು ಕೊಟ್ಟು ಕಳುಹಿಸಿದರು. ಆಗ ಅಕಸ್ಮಾತ್ತಾಗಿ ಮರಾಟೆಯವರ ಒಂದು ದಂಡು ನುಗ್ಗಿ ಬಂದು ಶ್ರೀರಂಗಪಟ್ಟಣದ ಸಮೀಪದಲ್ಲಿ ಕಲಸಗೆರೆ ಕೊತ್ತತ್ತಿ ಎಂಬ ಗ್ರಾಮದ ಬಳಿ ಮೈದಾನದಲ್ಲಿ ಇಳಿದುಕೊಂಡರು.
ಒಡೆಯರು ಆಗಲೇ ದೊಡ್ಡಯ್ಯನನ್ನು ಕೆಲವು ಸೇನೆಯೊಡನೆ ಶ್ರೀರಂಗಪಟ್ಟಣಕ್ಕೆ ಕಳುಹಿಸುವಂತೆ ದಳವಾಯಿ ಕುಮಾರಯ್ಯನಿಗೆ ಹೇಳಿ ಕಳುಹಿಸಿದ್ದರು. ದೊಡ್ಡಯ್ಯನು ಕಾವೇರೀ ಪುರದ ಕಣಿವೆಯ ಮಾರ್ಗವಾಗಿ ಬರುತ್ತಿದ್ದನು. ಅಷ್ಟರಲ್ಲಿ ಮೊರಾಟೆಯವರ ದಂಡು ಬಂದು ಪ್ರತ್ಯಕ್ಷವಾಗಲು ರಾಜರು ದೊಡ್ಡಯ್ಯನಿಗೆ “ಈ ಕಲಸಗೆರೆ ಕೊತ್ತತ್ತಿ ಗ್ರಾಮದ ಬಳಿ ಇಳಿದಿರುವ ಮರಾಟೆಯವರ ಸೈನ್ಯದ ಸಮೀಪಕ್ಕೆ ಯಾರೂ ಅರಿಯದಂತೆ ಸಂಚರಿಸತಕ್ಕದ್ದು; ಅಲ್ಲಿ ಸೇರಿದ ಕೂಡಲೆ ನಮ್ಮ ದಂಡಿನಲ್ಲಿರುವ ೨-೩ ಸಾವಿರ ದನದ ಕೊಂಬುಗಳಿಗೆ ಅಪಾಯವಿಲ್ಲದ ಹಾಗೆ ಪಂಜುಗಳನ್ನು ಕಟ್ಟಿ ಮೂರು ಕಡೆಯಿಂದಲೂ ಸೈನ್ಯವು ತಮ್ಮನ್ನು ಸುತ್ತಿಕೊಂಡಿತೆಂಬ ಭ್ರಾಂತಿಯು ಮರಾಟೆಯವರ ಮನಸ್ಸಿನಲ್ಲಿ ಹುಟ್ಟುವಂತೆ ಅವುಗಳನ್ನು ರಾತ್ರಿಯಲ್ಲಿ ಚದರಿಸತಕ್ಕದ್ದು; ಅವರು ಭ್ರಾಂತರಾದ ವೇಳೆಯಲ್ಲಿ ನೀವು ಅವರನ್ನು ತಾಗತಕ್ಕದ್ದು. ಸಮಯಕ್ಕೆ ಸಹಾಯಮಾಡುವಂತೆ ಶ್ರೀರಂಗಪಟ್ಟಣದಿಂದ ಬೇರೊಂದು ಸೈನ್ಯವನ್ನು ಕಳುಹಿಸುತ್ತಿದ್ದೇವೆ” ಎಂದು ಆಜ್ಞೆ ಮಾಡಿದರು. ದೊಡ್ಡಯ್ಯ ಮುಂತಾದ ಸೇನಾನಾಯಕರು ಅದರಂತೆಯೇ ದನಗಳಿಗೆ ಪಂಜುಗಳನ್ನು ಕಟ್ಟಿಸಿ ಮೂರು ದಿಕ್ಕಿಗೂ ಓಡಿಸಿ, ಉಳಿದ ದಿಕ್ಕಿನಿಂದ ಸಂಚರಿಸುತ್ತ ಮರಾಟೆಯವರ ಮೇಲೆ ಬಿದ್ದರು. ಮರಾಟೆಯವರಿಗೆ ದಿಕ್ಕು ತೋಚದಂತಾಗಿ ತಾರುಮಾರಾಗಿ ಪಲಾಯನಮಾಡಿದರು. ಬೆಳಕು ಹರಿದಾಗ ಅವರ ಉಗ್ರಾಣವೆಲ್ಲವೂ ದೊಡ್ಡಯ್ಯನ ಕೈಗೆ ಬಂತು. ಮರಾಟೆಯವರ ನಾಯಕರ ತಲೆಗಳನ್ನು ಕತ್ತರಿಸಿ ಸೈನಿಕರು ದೊಡ್ಡಯ್ಯನಿಗೆ ಸಮರ್ಪಿಸಿದರು. ದೊಡ್ಡಯ್ಯನು ಆ ತಲೆಗಳನ್ನು ತೆಗೆಸಿಕೊಂಡು ದೊರೆಗಳ ಸನ್ನಿಧಿಗೆ ಬಂದು ಅಡ್ಡ ಬಿದ್ದು ಎಲ್ಲ ಸಂಗತಿಯನ್ನೂ ಬಿನ್ನಯಿಸಿದನು. ಒಡೆಯರು ಆ ತಲೆಗಳಲ್ಲಿ ಶ್ರೀರಂಗಪಟ್ಟಣದ ಕೋಟೆ ಬಾಗಲಿಗೊಂದನ್ನೂ ಮೈಸೂರು ಕೋಟೆ ಬಾಗಲಿಗೊಂದನ್ನೂ ಕಟ್ಟಿಸಿದರು. ದೊಡ್ಡಯ್ಯ ಮುಂತಾದ ಸೇನಾ ನಾಯಕರಿಗೆ ಬಹಳ ಸನ್ಮಾನವು ದೊರೆಯಿತು.
*****
[ವಂಶರತ್ನಾಕರ, ಪುಟ ೧೦೮, ವಂಶಾವಳಿ ೧೧೪-೫, ವಿಲ್ಕ್ಸ್, ಪುಟ ೬೧]


















