ನಿಗೂಢ

ನಿಗೂಢ

ಚಿತ್ರ: ಪಿಕ್ಸಾಬೇ
ಚಿತ್ರ: ಪಿಕ್ಸಾಬೇ

ಏಳು ಗಂಟೆಗಳ ದೀರ್ಘ ಪ್ರಯಾಣದಲ್ಲಿ ಸಾಕಷ್ಟು ಬಳಲಿ ಹೋಗಿದ್ದ ಮನೋಜನ ಮೈ ಮನಸ್ಸು ವಿಶ್ರಾಂತಿ ಬೇಡುತ್ತಿತ್ತು. ಬಸ್ಸಿಳಿದವನೇ ಹೊಟ್ಟೆಗೊಂದಷ್ಟು ಹಾಕಿಕೊಂಡೇ ರೂಮು ಸೇರಿದ. ಇಂದು ನಾಳೆ ಸಂಪೂರ್ಣ ವಿಶ್ರಾಂತಿ, ಆಫೀಸಿಗೆ ಹೋಗುವುದು ನಾಡಿದ್ದೆ ಎಂದು ತೀರ್ಮಾನಿಸಿ ಹಾಸಿಗೆ ಮೇಲುರುಳಿದ್ದೆ ತಡ ನಿದ್ರೆ ಆವರಿಸಿಯೇ ಬಿಟ್ಟಿತು.

ಅದೆಷ್ಟು ಹೊತ್ತು ಮಲಗಿದ್ದನೋ ಫೋನ್ ಹೊಡೆದುಕೊಳ್ಳಲಾರಂಭಿಸಿತ್ತು.  ಮಂಪರಿನಲ್ಲಿಯೇ ಫೋನ್ ಎತ್ತಿಕೊಂಡ.

“ಹಲೋ ಮನೋಜ್, ಯಾವಾಗ ಬಂದೆ, ನೀನು ಅರ್ಜೆಂಟ್ ಯಾಣಕ್ಕೆ ಹೋಗಬೇಕು” ಹಾಗೆಂದ ಕೂಡಲೇ ಮನೀಜ್ ನ ಎದೆ ಧಸಕ್ಕೆಂದಿತು.

“ಸಾರ್, ಏನ್ಸಾರ್ ನೀವು ಹೇಳೋದು. ಈಗ ನಾನು ಯಾಣಕ್ಕೆ ಹೋಗುವುದೇ, ನನ್ನ ಕೈಲಿ ಮೇಲೇಳೋಕ್ಕೆ ಆಗ್ತಾ ಇಲ್ಲ. ನಾನು ತುಂಬಾ ಟೈಯರ್ಡ್ ಆಗಿದ್ದೇನೆ. ಬೇರೆ
ಯಾರನ್ನಾದರೂ ಕಳ್ಸಿ, ಪ್ಲೀಸ್.”

“ಮನೋಜ್, ವಿಷಯ ಏನು ಅಂತ ಕೇಳಲೇ ಇಲ್ಲವಲ್ಲ. ವಿಷಯ ತುಂಬಾ ಇಂಟರೆಸ್ಬಿಂಗ್, ಪಿಕ್ ನಿಕ್ ಗೆಂದು ಬಂದಿದ್ದ ಐದಾರು ವೈದ್ಯಕೀಯ ವಿದ್ಯಾರ್ಥಿಗಳ ಡೆತ್
ಆಗಿದೆಯಂತೆ. ಆಕ್ಸಿಡೆಂಟ್ ಅಂತೂ ಅಲ್ಲ. ವಿಷಯ ಏನೂ ಅಂತ ತಿಳ್ಕೊಂಡು ಬರೋಕೆ ನಿನ್ನಿಂದ ಮಾತ್ರ ಸಾಧ್ಯ.” ಸಂಪಾದಕರ ಮಾತುಗಳು ಕಿವಿಗೆ ಬಿದ್ದ ಕೂಡಲೇ
ಉತ್ಸಾಹಿತನಾದ. ಆಯಾಸವೆಲ್ಲಾ ಹಾರಿ ಹೋಯಿತು. ಕುತೂಹಲ ಗರಿಗೆದರಿ ಹೊರಡಲು ಸಿದ್ಧನಾದ.

“ಗುಡ್, ಅದಕ್ಕೆ ನನಗೆ ಮನೋಜ್ ಅಂದ್ರೆ ಅಷ್ಟೊಂದು ವಿಶ್ವಾಸ. ಲುಕ್ ಮೈ ಬಾಯ್, ಅಲ್ಲಿ ಸತ್ತಿರೋ ಮಕ್ಕಳೆಲ್ಲ ದೊಡ್ಡ ಮನುಷ್ಯರ ಮಕ್ಕಳಂತೆ. ಡೀಪಾಗಿ ಸ್ಟಡಿ
ಮಾಡು” ಎಂದರು.

ಹೊಸ ಹುರುಪಿನಿಂದ ಎದ್ದವನೇ ದಾಡಿ ಕೆರೆದುಕೊಂಡು ಸ್ನಾನ ಮುಗಿಸಿ ಕಿಟ್ ಬ್ಯಾಗಿಗೆ ಬೇಕಾದದ್ದನ್ನೆಲ್ಲ ತುಂಬಿಕೊಂಡು ಬೈಕಿನಲ್ಲಿ ಹೊರಟ. ಯಾಣದ ಹಾದಿ ಹಿಡಿದ ಮನೋಜ್ ಗೆ ತಲೆ ತುಂಬಾ ಆ ವಿದ್ಯಾರ್ಥಿಗಳದ್ದೆ ಗುಂಗು. ಇವರ್ಯಾಕೆ ಅಲ್ಲಿಗೆ ಹೋದರು.  ಗುಂಪು ಗುಂಪಾಗಿ ಹೋಗುವಂತಹ ಜಾಗವದು. ಇಷ್ಟೆ ಜನ ಹೋದದ್ಯಾಕೆ. ಹೋದವರು ಅಲ್ಲಿಯೇ ಏಕೆ ಉಳಿದರು. ಉಳಿದವರು ಏಕೆ ಸತ್ತರು. ಕೊಲೆ ಮಾಡಿಬಿಟ್ಟರೇ. ಎಲ್ಲರನ್ನೂ ಕೊಲೆ ಮಾಡುವ ಅಗತ್ಯವೇನು. ಅಕಸ್ಮಿಕವೇ, ಪ್ರಶ್ನೆಗಳ ಧಾಳಿಗೆ ಒಮ್ಮೆಲೇ ತಲೆ ಕೊಡವಿಕೊಂಡು ಹೇಗೂ ಅಲ್ಲಿಗೆ ಹೋಗುತ್ತಿದ್ದೆನಲ್ಲ.  ಸತ್ಯ ಏನೆಂದು ತಿಳಿಯಲು ತಾನೇ ಅಲ್ಲಿಗೆ ಹೋಗುತ್ತಿರುವುದು ಎಂದು ದಾರಿಯತ್ತ ಮನಸ್ಸು ನೆಟ್ಟು ಕಾಡಿನೊಳಗೆ ನುಸುಳಿದ.

ಜೀಗುಡುತ್ತಿದ್ದ ಹುಳುಗಳ ಶಬ್ಬಕ್ಕೆ ಮನ ಬೆಚ್ಚಿದರೂ ಆ ಏಕಾಂತ ಬರೀ ಮರಗಳೇ ತುಂಬಿದ ಕಾಡು. ಆಕಾಶವೆಲ್ಲ ಮೋಡಗಳಿಂದ ಮುಚ್ಚಿದಂತೆ ಕವಿದ ಕತ್ತಲೆ. ಸೂರ್ಯನ ಕಿರಣಗಳು ಕದ್ದು ಕದ್ದು ಮರಗಳ ಸಂದಿಯಿಂದ ನುಸುಳಿ ಬರುತ್ತಿರುವಂತೆ ಅಲ್ಲೊಂದು ಇಲ್ಲೊಂದು ಬೆಳಕಿನ ಕಿರಣಗಳು ಈ ಕಿರಣಗಳು ಮಂದವಾದ ಬೆಳಕು ಬೀರಿ ಕತ್ತಲೆಯ ಮಂಕು ಓಡಿಸುವಂತಿತ್ತು. ನಿಧಾನವಾಗಿ ಬೈಕನ್ನು ಮುನ್ನುಗ್ಗಿಸುತ್ತ ಹೋಗುತ್ತಿದ್ದರೆ ದಾರಿ ತಟ್ಟನೆ ನಿಂತು ಹೋಯಿತು. ಎತ್ತ ನೋಡಿದರೂ ಗಿಡ ಮರಗಳು. ಮನುಷ್ಯರ ಸುಳಿವಿಲ್ಲ ಎಲ್ಲೋ ಪ್ರಾಣಿ ಹುಯ್ಯಲಿಡಿವ ಸದ್ದು. ಬೈಕ್ ನಿಲ್ಲಿಸಿ ಹಿಂದೆ ಬಂದ. ಇನ್ನು ವಾಹನದಲ್ಲಿ ಹೋಗಲು ಸಾಧೃವಿಲ್ಲ ಎನಿಸಿ ಬ್ಯಾಗ್ ಹೆಗಲೇರಿಸಿಕೊಂಡು ಬೈಕನ್ನು ಲಾಕ್ ಮಾಡಿ ನಡೆಯಲು ಪ್ರಾರಂಭಿಸಿದ.

ಎಷ್ಟೋ ದೂರ ನಡೆದ ಮೇಲೆ ಅಲ್ಲೊಂದು ಮನೆ ಕಾಣಿಸಿತು. ಮನೆಯ ಸುತ್ತ ಜನ. ಅದೇ ಮನೆಯಲ್ಲಿ ಸತ್ತ ಆ ವಿದ್ಯಾರ್ಥಿಗಳು ತಂಗಿದ್ದು. ಏನೋ ರೀಸರ್ಚ್
ಮಾಡುತ್ತಿರುವುದಾಗಿಯೂ ಹದಿನೈದು ದಿನದ ಮಟ್ಟಿಗೆ ಮನೆ ಬಾಡಿಗೆಗೆ ಪಡೆದಿದ್ದುದು, ಅಲ್ಲಿಯವರ ಮಾತಿನಿಂದ ತಿಳಿಯಿತು. ಹೆಣಗಳನ್ನು ತಂದು ಸಾಲಾಗಿ ಮಲಗಿಸಿದ್ದರು.  ಒಟ್ಟು ಆರು ಹೆಣಗಳು. ಪ್ರಶಾಂತವಾಗಿದ್ದ ಕಾಡಿನ ಆ ಭಾಗ ಈಗ ಗದ್ದಲದ ಬೀಡಾಗಿತ್ತು.  ಹೆತ್ತವರ ಆಕ್ರಂದನ, ಪೊಲೀಸಿನವರ ಬೂಟುಗಳ ಸದ್ದು, ನೆರೆದಿದ್ದವರು ಭೀತಿ, ಅನುಕಂಪ, ಆಶ್ಚರ್ಯ ತುಂಬಿದ ಮಾತುಗಳಿಂದ ಇಡೀ ಕಾಡೇ ಪ್ರತಿಧ್ವನಿಸುತ್ತಿತ್ತು.

ಸಾಕಷ್ಟು ಶ್ರೀಮಂತರಾಗಿದ್ದ ಆ ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನವನ್ನು ವಿಲಾಸವಾಗಿಯೇ ಕಳೆಯುತ್ತಿದ್ದರೆಂಬುದು, ಆ ಗುಂಪು ಆಗಾಗ್ಗೆ ಟೂರ್
ಹೋಗುತ್ತಿದ್ದುದು, ಅದಕ್ಕೆ ಸ್ಟಡಿ ಎಂಬ ನೆಪ ಹೇಳಿ ಹೆತ್ತವರಾರಿಗೂ ಸುಳಿವು ಸಿಗದಂತೆ ಎಚ್ಚರಿಕೆಯಿಂದ ಇದ್ದು, ಪರೀಕ್ಷೆಗಳಲ್ಲಿಯೂ ಉತ್ತಮ ಅಂಕ ತೆಗೆದು ಯಾರಿಗೂ ಅನುಮಾನ ತರದಂತೆ ಇದ್ದು ಬಿಡುತ್ತಿದ್ದ ಆ ವಿದ್ಯಾರ್ಥಿಗಳ ಸಾವಿನ ಹಿಂದೆ ರೋಚಕ ಕಥೆ ಇರಬಹುದೆಂದು ಮನೋಜ್ ತಾನು ಇದ್ದ ಅಷ್ಟು ಸಮಯದಲ್ಲಿಯೇ ಸಂಗ್ರಹಿಸಿಕೊಂಡ. ಸದ್ಯಕ್ಕೆ ಅಷ್ಟೇ ಮಾಹಿತಿ ದೊರೆತದ್ದು ‘ನಿಗೂಢ ಸಾವು’ ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟವಾಯಿತು ಪತ್ರಿಕೆಯಲ್ಲಿ.

ನಿಗೂಢ ರಹಸ್ಯ ಬಯಲಿಗೆಳೆಯಲು ಉತ್ಸುಕನಾದ ಮನೋಜ್ ಬೆಂಗಳೂರು ಬಸ್ಸು ಹತ್ತಿದ. ಕಾಲೇಜಿನಲ್ಲಿ ಯಾರೂ ಬಾಯಿ ಬಿಡಲೊಲ್ಲರು. ತಮ್ಮ ಸಹಪಾಠಿಗಳ
ಸಾವಿನಿಂದ ದಿಗ್ಭ್ರಾಂತರಾಗಿದ್ದಾರೆ ಎಲ್ಲರೂ. ಭಯ ತಾಂಡವವಾಡುತ್ತಿದೆ ಅಲ್ಲಿ.  ಸತ್ತಿದ್ದವವರೆಲ್ಲ ಪ್ರಭಾವಶಾಲಿ ವ್ಯಕ್ತಿಗಳ ಮಕ್ಕಳು. ಏನು  ಮಾತನಾಡಿದರೆ ಏನಾಗುತ್ತದೆಯೋ ಎಂಬ ಭೀತಿ ಆತಂಕ. ಅಂತೂ ಯಾವ ಸುಳಿವೂ ಸಿಗದೆ ನಿರಾಶನಾಗಿ ವಾಪಸ್ಸು ಬಂದು ಬಿಟ್ಟ. ಆದರೆ ಆರೂ ವಿದ್ಯಾರ್ಥಿಗಳ ಹೆಣ ಪದೇ ಪದೇ ಕಣ್ಮುಂದೆ ಬರುತ್ತಲೇ ಇತ್ತು. ಇನ್ನಷ್ಟು ಶೋಧನೆ ನಡೆಸುವ ಮನಸ್ಸಿತ್ತು. ಅಷ್ಪರಲ್ಲಿ ತಾಯಿಯ ಅನಾರೋಗ್ಯ ಆ ಯೋಚನೆಯಿಂದ ಹೊರ ಬರುವಂತೆ ಮಾಡಿತ್ತು. ತಾಯಿಯನ್ನು ಆಸ್ಪತ್ರೆಗೆ ಸೇರಿಸಿದ. ಅಮ್ಮನ ಆರೈಕೆಯಲ್ಲಿ ಹೆಚ್ಚು ಕಡಿಮೆ ಆ ವಿಷಯ ಮರೆತೇ ಬಿಟ್ಟ.

ಅಮ್ಮನನ್ನು ನೋಡಿಕೊಳ್ಳಲು ಬರುತ್ತಿದ್ದ ನರ್ಸ್ ಇಳಾ ನಿಧಾನವಾಗಿ ತನ್ನ ರೂಪ, ನಡೆ, ನುಡಿಗಳಿಂದ ಮನೋಜ್‌ನ ಹೃದಯವನ್ನು ಅಲ್ಲಾಡಿಸ ಹತ್ತಿದಳು. ಅವಳ ಮೆದು ಮಾತು, ಸರಳ ಸ್ವಭಾವ ಮನೋಜ್‌ನ ಅಮ್ಮನನ್ನು ಗೆದ್ದು ಬಿಟ್ಟಿತು. ಮಗನ ಆಸಕ್ತಿ ಆಕೆಯೆಡೆ ಇದೆ ಎಂಬುದನ್ನು ಅರಿತ ಮನೋಜ್‌ನ ಅಮ್ಮ ಮಗ ಮದುವೆ ಆದರೆ ಸಾಕು ಎಂದು ಕಾಯುತಿದ್ದ ಆಕೆ ತಾನೇ ಆಸಕ್ತಿ ತೋರಿ ಇಳಾಳ ಅಮ್ಮನನ್ನು ಕರೆಸಿಕೊಂಡು ಮಾತಾಡಿದ್ದಳು. ಹಿರಿಯರ ಒಪ್ಪಿಗೆ ದೊರೆತ ಮೇಲೆ ಇನ್ನೇನು ಅಡ್ಡಿ.  ಮನೋಜ್ ಪ್ರೇಮ ಸಾಮ್ರಾಜ್ಯದಲ್ಲಿ ಈಜಾಡತೊಡಗಿದ. ಎರಡೂ ಮನೆಗಳಲ್ಲಿ ಮದುವೆಯ ಸಿದ್ದತೆಗಾಗಿ ಮನೋಜ್ ನ ಅಮ್ಮ ಆಸ್ಪತ್ರೆಯಿಂದ ಮರಳುವುದನ್ನು ಕಾಯ ಹತ್ತಿದರು. ಡ್ಯೂಟಿ ಮುಗಿದ ಕೂಡಲೇ ಇಳಾಳೊಂದಿಗೆ ಒಂದಿಷ್ಟು ಸುತ್ತಾಡಿ ತನ್ನ ಕನಸುಗಳನ್ನು ಹಂಚಿಕೊಳ್ಳುತ್ತಿದ್ದ ಮನೋಜ್ ನಿಗೆ ಇಳಾ ಹುಚ್ಚು ಹಿಡಿಸುತ್ತಿದ್ದಳು.  ಮನೋಜ್‌ನ ಅಮ್ಮನ ಹೃದಯವನ್ನು ಆಪರೇಶನ್ ಮಾಡಬೇಕಾಗಿರುವುದರಿಂದ ಮದುವೆ ಮುಂದೆ ಹೋಯಿತು. ಆಪರೇಶನ್ ನಂತರವೇ ಮದುವೆಯಾಗುವುದೆಂದು ಮನೋಜ್ ತೀರ್ಮಾನಿಸಿದ್ದ.

ಮನೋಜ್‌ನ ಗೆಳೆಯ ರಾಬಿ ಅಮ್ಮನನ್ನು ನೋಡಲು ಬಂದವನು ಇಳಾಳನ್ನು ನೋಡಿದ ಕೂಡಲೇ ಗೆಳೆಯನನ್ನು ಎಳೆದುಕೊಂಡು ಹೊರಗೋಡಿ ಬಂದ. ಗೆಳೆಯನ
ವಿಚಿತ್ರ ವರ್ತನೆಯಿಂದ ದಂಗಾದ ಮನೋಜ್ “ಏನಾಯ್ತು ರಾಬಿ, ಇಳಾಳನ್ನು ಯಾರೆಂದು ಕೊಂಡೆ. ನನ್ನ ಫಿಯಾನ್ಸಿ ಕಣೋ. ಅಮ್ಮನ ಆಪರೇಶನ್ ಆದ ತಕ್ಷಣ ನಮ್ಮಿಬ್ಬರ ಮದುವೆ.”

“ಬೇಡಾ, ಬೇಡಾ, ಅವಳನ್ನು ಮದ್ವೆ ಆಗಬೇಡ. ಅವಳು ಯಾರು ಗೊತ್ತಾ ಸೋನಿಕಾ. ಅವಳ ಹಿನ್ನೆಲೆ ಸರಿ ಇಲ್ಲ. ಅಲ್ಲಿ ಡಾಕ್ಟ್ರ ಓದ್ತಾ ಇದ್ದವಳು ಇಲ್ಲಿಗೆ ಹೇಗೆ
ಬಂದಳು, ಮನು, ದಯವಿಟ್ಟು ಅವಳನ್ನು ದೂರ ಇಡು. ಇಲ್ಲದಿದ್ದರೆ ನಿಂಗೆ ಅಪಾಯ ಕಣೊ.” ಕಂಪಿಸುತ್ತ ರಾಬಿ ಹೇಳುತ್ತಿದ್ದರೆ, ಅವನ ಹೆದರಿದ ಮೋರೆ ನೋಡುತ್ತ “ರಾಬಿ ನೀ ತಿಳ್ಕೊಂಡಂಗೆ ಇಳಾ ಸೋನಿಕಾ ಅಲ್ಲಾ. ಪಾಪ ಅವಳು ನರ್ಸು ಇಲ್ಲಿ. ಎಷ್ಟು ಒಳ್ಳೆಯ ಹುಡುಗಿ ಗೊತ್ತಾ. ಅಮ್ಮನ್ನ ಹೇಗೆ ನೋಡ್ಕೋತ್ತಿದ್ದಾಳೆ ಗೊತ್ತಾ.”

“ಅಯ್ಯೋ, ಮನು ನಿಂಗೆ ಹೇಗೆ ಹೇಳಲಿ. ಸೋನಿಕಾನೇ ಇವ್ಳು. ದೊಡ್ಡ ಶ್ರೀಮಂತರ ಮಗಳು. ಮೊನ್ನೆ ಸತ್ತು ಹೋದರಲ್ಲ ಆ ಹುಡುಗರ ಜೊತೆ ಸದಾ ಇರ್ತಾ ಇದ್ದಳು.
ತುಂಬಾ ಫಾಸ್ಟ್. ಎಲ್ಲಾರೀತಿಯಲ್ಲೂ ಮುಂದುವರಿದಾ ಹೆಣ್ಣು. ಅವಳಿಲ್ಲಿಗೆ ಹೇಗೆ ಬಂದಳೋ, ಯಾಕೆ ಬಂದಳೋ ಗೊತ್ತಿಲ್ಲ. ಒಟ್ಟಿನಲ್ಲಿ ನೀ ಮಾತ್ರ ಅವಳಿಂದ ದೂರ
ಇರು” ಎಂದವನೇ ಹೂರಟು ಬಿಟ್ಟ. ಅವಸರವಾಗಿ ಹೋದವನನ್ನ ಆಶ್ಚರ್ಯದಿಂದ ದಂಗಾಗಿ ನೋಡುತ್ತ ನಿಂತು ಬಿಟ್ಟ ಮನೋಜ್.

ಯಾಣದಲ್ಲಿ ಸತ್ತ ವಿದ್ಯಾರ್ಥಿಗಳ ಬಗ್ಗೆ ತಿಳಿಯಲು ಬೆಂಗಳೂರಿಗೆ ಹೋಗಿದ್ದಾಗ ಸೋನಿಕಾಳ ವಿಷಯ ಕಿವಿಗೆ ಬಿದ್ದಿತ್ತು. ಆಕೆ ಸತ್ತವರಲ್ಲಿ ಒಬ್ಬನಾದ ತಿಲಕನೊಂದಿಗೆ ಆಪ್ತಳಾಗಿದ್ದಳೆಂದು, ಮುಂದೆ ಅವರಿಬ್ಬರೂ ಮದುವೆಯಾಗಲಿದ್ದರೆಂದೂ, ತಿಲಕ್ ಸತ್ತ ನಂತರ ಬೇಸರದಿಂದ ಸೋನಿಕಾ ಬಾಂಬೆಗೆ ಹೋಗಿದ್ದಾಳೆಂದು ತಿಳಿದು ಬಂದಿತ್ತು. ಆದರೆ ಆ ಸೋನಿಕಾ ಇಲ್ಲಿ ಇಳಾಳಾಗಿ ಇದ್ದಾಳೆಂದರೆ ನಂಬಲೇ ಕಷ್ಟವೆನಿಸಿತು. ಆಗರ್ಭ ಶ್ರೀಮಂತನ ಏಕೈಕ ಪುತ್ರಿ ಸೋನಿಕಾಳಿಗೇಕೆ ಇಲ್ಲಿ ನರ್ಸಾಗಿ ದುಡಿಯುವ ಕರ್ಮ. ಇಲ್ಲಾ ಖಂಡಿತಾ ಇಳಾ ಸೋನಿಕಾ ಅಲ್ಲ. ರಾಬಿ ತಪ್ಪು ತಿಳಿದುಕೊಂಡಿದ್ದಾನೆ. ಅವನ ತಪ್ಪು
ಕಲ್ಪನೆಯನ್ನು ಸರಿಪಡಿಸಬೇಕು ಎಂದುಕೊಂಡ ಮನೋಜ್.

ರಾಬಿ ತನ್ನ ಮನೆಯಲ್ಲಿಯೇ ಸತ್ತು ಹೋಗಿದ್ದಾನೆ ಎಂಬ ವಿಚಾರ ತಿಳಿದು ದಿಙ್ಮೂಢನಾದ. ರಾಬಿ ಏಕೆ ಸತ್ತ. ಅದು ಆತ್ಮಹತ್ಯೆಯೋ, ಕೊಲೆಯೋ, ತಾನು ಸಾಯುವ
ಸುಳಿವು ಅವನಿಗೆ ದೊರತಿತ್ತೇ, ಹಾಗಾಗಿಯೇ ಗಾಬರಿಯಾಗಿದ್ದನೆ. ಇಳಾಳನ್ನು ನೋಡಿ ಸೋನಿಕಾ ಎಂದು ಹೆದರಿದನೆ. ಹಾಗಾದರೆ ಸೋನಿಕಾಳಿಗೂ ರಾಬಿಗೂ ಏನೋ
ಸಂಬಂಧವಿದೆ. ಏನು ಆ ಸಂಬಂಧ. ಇದೇ ಸಂಬಂಧ ಸತ್ತ ಆ ಹುಡುಗರಿಗೂ ಇತ್ತೇ. ಅವನಲ್ಲಿನ ಪತ್ತೆದಾರಿ ಎಚ್ಚರಗೊಂಡ. ಮೊದಲು ಇಳಾ ಸೋನಿಕಾಳಲ್ಲ ಎಂಬುದನ್ನು ದೃಢಪಡಿಸಿಕೊಂಡೇ ಮುಂದುವರಿಯೋಣ ಎಂದು ಇಳಾಳನ್ನು ಹುಡುಕಿಕೊಂಡು ಇಳಾಳ ಮನೆಗೇ ‌ಹೊರಟ ಮನೋಜ್. ಇಳಾ ಮನೆಯಲ್ಲಿ ಇರಲಿಲ್ಲ. ಅವಳಮ್ಮ ಈ ಕ್ಯಾಸೆಟ್ ನಿಮಗೆಂದು ಇಳಾ ಕೊಟ್ಟಿದ್ದಾಳೆ ತೆಗೆದುಕೊಳ್ಳಿ ಎಂದು ನೀಡಿದಾಗ ಕುತೂಹಲದಿಂದಲೇ ತೆಗೆದುಕೊಂಡ. ಇಳಾ ನಿಮಗೆ ಇದರಲ್ಲಿ ಏನೋ ಹೇಳಿದ್ದಾಳೆ. ಮನೆಗೆ ಹೋಗಿ ಕೇಳಿ ಎಂದಳು. ಕಳ್ಳಿ ಎದುರಿಗೆ ಮಾತನಾಡಲು ನಾಚಿಕೆ ಏನೋ ಅದಕ್ಕೆ ಕ್ಯಾಸೆಟ್ಟಿನಲ್ಲಿ ಮಾತನಾಡಿದ್ದಾಳೆ. ತನ್ನೊಲವಿನ ಹುಡುಗಿ ಏನು ಹೇಳಿದ್ದಾಳೆ ಕೇಳಲು ಆತುರಗೂಂಡು ಮನೆ ಸೇರಿದ. ರೂಮಿನ ಬಾಗಿಲು ಹಾಕಿಕೊಂಡು ಕ್ಯಾಸೆಟ್ ಹಾಕಿದ.

“ಮನೋಜ್ ನನ್ನ ಕ್ಷಮಿಸಿ. ಪ್ರಪಂಚದಲ್ಲಿ ಗಂಡು ಜನ್ಮವೆಂದರೆ ಅಸಹ್ಯಿಸಿಕೊಳ್ಳುವಷ್ಟು ಅನುಭವ ಪಡೆದುಕೊಂಡಿರೋ ನಾನು ನಿಮ್ಮ ಪ್ರೇಮವನ್ನಾಗಲೀ,
ನೀವು ನೀಡಬಹುದಾಗಿದ್ದ ಹೊಸ ಬದುಕನ್ನಾಗಲಿ ಸ್ವೀಕರಿಸುವ ಮನಃಸ್ಥಿತಿಯಲ್ಲಿಲ್ಲ.

ರಾಬಿ ನಿಮ್ಮೊಂದಿಗೆ ಮಾತನಾಡುತ್ತಿರುವುದನ್ನು ಕೇಳಿಸಿಕೊಂಡೆ. ಅವನು ಹೇಳಿದಂತೆ ನಾನು ಇಳಾ ಅಲ್ಲ. ನಾನು ಸೋನಿಕಾ. ಶ್ರೀಮಂತಿಕೆಯ ಅಹಂ, ಸೌಂದರ್ಯದ ಅಹಂ
ನನ್ನ ಸ್ವೇಚ್ಛಾಚಾರಿಯನ್ನಾಗಿಸಿತು. ಆ ಬದುಕು ನನ್ನನ್ನು ನುಂಗುವಷ್ಟು ಬೆಳೆದು ನಿಂತುಬಿಟ್ಟಿತು. ಮನ ಬಂದಂತೆ ಖರ್ಚು ಮಾಡುತ್ತ ರೂಪದ ಗತ್ತಿನಲ್ಲಿ ಮೆರೆದೆ.  ತಿಲಕನನ್ನು ಪ್ರೀತಿಸಿದೆ. ಅವನೂ ನನ್ನನ್ನು ಪ್ರೀತಿಸುತ್ತಿದ್ದನೆಂದು ಭ್ರಮಿಸಿದೆ.  ಅವನೊಂದಿಗೆ ಎಲ್ಲವನ್ನು ಹಂಚಿಕೊಂಡೆ. ನನ್ನೆಲ್ಲ ಪ್ರಣಯದಾಟವನ್ನು ತಿಲಕ್ ರೆಕಾರ್ಡ್ ಮಾಡಿಕೊಂಡ. ತಿಲಕ್ ನನ್ನನ್ನು ಹೆದರಿಸುತ್ತಾ ತನಗೆ ಬೇಕಾದವರೊಂದಿಗೆ ನನ್ನನ್ನು ಹಂಚಿಕೊಂಡ. ಸಾಲದೆಂಬಂತೆ ವಿಕೃತ ಮನಸ್ಸಿನ ತಿಲಕ್ ತನ್ನ ಗೆಳೆಯರೊಂದಿಗೆ ನನ್ನನ್ನು ಕಾಮಿಸುವುದನ್ನು ವಿಡಿಯೋದಲ್ಲಿ ಚಿತ್ರಿಸಿಕೊಂಡು ಅದನ್ನು ಮಾರುವ ಯೋಜನೆಯಲ್ಲಿ
ಯಾಣಕ್ಕೆ ಪಿಕ್ನಿಕ್ ಯೋಜನೆ ಹಾಕಿದ. ಪಾತಾಳಕ್ಕಿಳಿದು ಬಿಟ್ಟೆ. ನನ್ನೊಡನೆ ಅಷ್ಟು ಜನರು. ಅಬ್ಬಾ ನೆನೆದರೆ ಮೈನಡುಕ ಉಂಟಾಗುತ್ತಿತ್ತು. ತಿಲಕನನ್ನು ಬೇಡಿದೆ ಕಾಡಿದೆ.  ನನ್ನನ್ನು ಬಿಡಲು ಆತ ತಯಾರಿರಲಿಲ್ಲ. ಸ್ಟೇಚ್ಛಾಚಾರದ ಬದುಕು ಪಾಠ ಕಲಿಸಿತ್ತು.  ಆದರೆ ಬಲೆಯಲ್ಲಿ ಸಿಕ್ಕಿ ಬಿದ್ದಿದ್ದೆ. ಆದರಿಂದ ಬಿಡಿಸಿಕೊಳ್ಳವ ಯತ್ನದಲ್ಲಿ ಕಾಣದ ಕೈಯೊಂದು ಸಹಾಯ ಹಸ್ತ ಚಾಚಿತ್ತು. ಸೇಡು, ಸೇಡು ನನ್ನಲ್ಲಿ ಪ್ರಜ್ವಲಿಸಿತು. ಯಾಣದಲ್ಲಿ ಅವರೆಲ್ಲರನ್ನು ಮುಗಿಸಿದೆ. ಒಂದು ನಾಯಿ ತಪ್ಪಿಸಿಕೊಂಡಿತ್ತು. ನನ್ನೆಲ್ಲ ಬದುಕಿನ ಚಿತ್ರಣ ವೀಡಿಯೋ ಕ್ಯಾಸೆಟ್ ಆಗಿ ರಾಬಿಯಲ್ಲಿತ್ತು. ಆ ಹೇಯ ಚಿತ್ರಣಗಳ ವೀಡಿಯೋ
ತೆಗೆಯುತ್ತಿದ್ದವನೇ ರಾಬಿ. ಅವನನ್ನು ಮುಗಿಸಿ ಬಿಟ್ಟರೆ ನನ್ನೆಲ್ಲ ನಿನ್ನೆಗಳು ಅಳಿದು ಹೋಗುತ್ತವೆ ಎಂದು ಅವನನ್ನು ಹುಡುಕಿಕೊಂಡು ಇಲ್ಲಿಗೆ ಬಂದೆ. ಅನುಮಾನ
ಬಾರದಿರಲಿ ಎಂದು ನರ್ಸಾಗಿ ಕೆಲಸಕ್ಕೆ ಸೇರಿಕೊಂಡೆ ಹಣವೊಂದಿದ್ದರೆ ಯಾರು ಯಾರಿಗೆ ಬೇಕಾದರೂ ತಾಯಿ ಆಗುತ್ತಾರೆ. ಮಗಳಾಗುತ್ತಾರೆ. ಹಣವೊಂದಿದ್ದರೆ ಸೋನಿಕಾ ಇಳಾ ಆಗುವುದೇನು ಕಷ್ಟವಲ್ಲ ಅಲ್ಲವೇ ಮನೋಜ್. ಈ ಹಣದ ದಾಹವೇ ತಿಲಕನ ಅಂತ್ಯಕ್ಕೆ, ರಾಬಿಯ ಅಂತ್ಯಕ್ಕೆ ಕಾರಣವಾಯಿತು. ಇದೇ ಹಣ ನನ್ನನ್ನು ಮತ್ತೊಂದು ಬದುಕಿನತ್ತ ಹೂರಳಿಸುತ್ತಿದೆ. ನಾನು ತಪ್ಪು ಮಾಡಿದ್ದೇನೆ. ಆದರೆ ಪಾಪಿಗಳಿಗೆ ಶಿಕ್ಷೆ ನೀಡಿದ ತೃಪ್ತಿ ನನಗಿದೆ. ನನ್ನಂತೆಷ್ಟೋ ಹೆಣ್ಣುಗಳ ಬದುಕು ಇವರಿಂದ ದುರಂತವಾಗುವುದನ್ನು ತಪ್ಪಿಸಿದ್ದೇನೆ. ನನ್ನೆಲ್ಲ ಕೃತ್ಯಗಳಿಗೆ ಸಾಕ್ಷಿ ಈ ಕ್ಯಾಸೆಟ್ ಒಂದೇ. ಆದರೆ ಇಷ್ಟರೊಳಗೆ ನಾನು ಬೇರೊಂದು ಹೆಸರಿನಲ್ಲಿ ಯಾವುದೋ ದೇಶದಲ್ಲಿ ದಾಖಲಾಗಿರುತ್ತೇನೆ. ಹೊಸ ಬದುಕು, ಹೊಸ ಹೆಸರು ಹಳೆಯದನ್ನೆಲ್ಲ ಮರೆತು ಬಿಡುತ್ತೇನೆ. ಕ್ಷಮಿಸಿ. ನಿಮ್ಮನ್ನು
ಮರೆಯಲಾರೆ. ನಿಮ್ಮೊಂದಿಗೆ, ನಿಮ್ಮ ಭಾವನೆಗಳೊಂದಿಗೆ ಕೆಲಕಾಲ ಸರಸವಾಡಿದ್ದ ನನ್ನನ್ನು ಕ್ಷಮಿಸಿ ಬಿಡಿ. ನಿಮ್ಮಂತ ಒಳ್ಳೆ ಹೃದಯವಂತಿಕೆಯ ಸಜ್ಜನನಿಗೆ ನಾನು ತಕ್ಕವಳಲ್ಲ. ಒಳ್ಳೆ ಹುಡುಗಿ ನಿಮಗೆ ಸಿಗಲಿ. ಗಂಡುಗಳೆಂದರೆ ಅಸಹ್ಯಿಸಿಕೊಳ್ಳುವ ಮನ ನಿಮ್ಮ ನೆನಪಾದಾಗ ಅರಳುತ್ತದೆ. ನಿಮ್ಮ ನೆನಪು ಶಾಶ್ವತ. ಇನ್ನು ಇಳಾ ನಿಮಗೆ ನೆನಪು ಮಾತ್ರ ಭರಲೇ….. ” ಖಾಲಿ ಕ್ಯಾಸೆಟ್ ಒಡುತ್ತಲೇ ಇತ್ತು.
*****

ವರ್ಗ: ಸಣ್ಣ ಕಥೆ
ಸಂಗ್ರಹ: ಶೈಲಜಾ ಹಾಸನ
ಪುಸ್ತಕ: ದರ್ಪಣ
ಕೀಲಿಕರಣ:
ವ್ಯಕರಣ ದೋಷ ತಿದ್ದುಪಡಿ: ಕಿಶೋರ್ ಚಂದ್ರ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾ ಇಮಾಮ ಹಸನೈನ ಎನ್ನುತಲಿ
Next post ಹಿಂದ ಓಕೆ ಸಾಬರ (ಅ) ಉಸಾಬರಿ ಎಲ್ಲಾ ಯಾಕೆ?

ಸಣ್ಣ ಕತೆ

 • ದಿನಚರಿಯ ಪುಟದಿಂದ

  ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

 • ಕೇರೀಜಂ…

  ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

 • ಜೀವಂತವಾಗಿ…ಸ್ಮಶಾನದಲ್ಲಿ…

  ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

 • ಹನುಮಂತನ ಕಥೆ

  ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

 • ಕಂಬದಹಳ್ಳಿಗೆ ಭೇಟಿ

  ಪ್ರಕರಣ ೪ ಮಾರನೆಯ ದಿನ ಪ್ರಾತಃಕಾಲ ಆರು ಗಂಟೆಗೆಲ್ಲ ರಂಗಣ್ಣನು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಉಡುಪುಗಳನ್ನು ಧರಿಸುವುದಕ್ಕೆ ತೊಡಗಿದನು, ಬೈಸ್ಕಲ್ ಮೇಲೆ ಪ್ರಯಾಣ ಮಾಡಬೇಕಾದ್ದರಿಂದ ಸರ್ಜ್‍ಸೂಟು… Read more…