ವರ್ಷತೊಡಕು

ವರ್ಷತೊಡಕು

ಮಲೆನಾಡ ಹಸಿ ಹಸಿ ಭೀಕರತೆಯೂ ಮತ್ತು ಬಯಲು ಸೀಮೆಯ ಒಣ ಒಣ ಬಯಲೂ ಸಂಕೀರ್ಣಗೊಂಡು ಸೃಷ್ಟಿಯಾಗಿರುವ, ಅತ್ತ ನಗರದ ಸಂಸ್ಕೃತಿಯನ್ನೂ ಇತ್ತ ಹಳ್ಳಿಯ ನೇರ ನಿಷ್ಠುರ ಸತ್ಯಗಳನ್ನೂ ಹೊಂದಿರದ ವಿಕೃತ ಜನರಿರುವ ಈ ಮಂಡಲಿಗೆ ದೇಶಕ್ಕೆಲ್ಲಾ ಬಂದಂತೇ ಯುಗಾದಿಯು ಬಂದಿತು.

ಬಂದ ಯುಗಾದಿ ಸುಮ್ಮನೇ ಬಾರದೇ ಭಾನುವಾರ ಬಂತು. ಯುಗಾದಿಯ ಅಮಾವಾಸ್ಯೆಯು ಕ್ಯಾಲೆಂಡರ್ ಪ್ರಕಾರ ಎರಡು ದಿನಕ್ಕೆ ಹಂಚಿಕೊಂಡಿತ್ತು. ಈ ಹಾಳು ಅಮಾವಾಸ್ಯೆಗೆ ಬೇರೆ ಯಾವಾಗಲೂ ಬಿಡುವಿರಲಿಲ್ಲವೆಂಬಂತೆ ಸೂರಗ್ರಹಣವನ್ನೂ ಕರೆದುಕೊಂಡು ಬಂದಿತ್ತು. ಈ ಗ್ರಹಣವೂ ಪಂಚಾಗದ ಪ್ರಕಾರ ಅಮಾವಾಸ್ಯೆಯಂತೆಯೇ ಎರಡು ದಿನಕ್ಕೆ ಹಂಚಿಕೊಂಡೇ ಬರಬೇಕಿತ್ತೇ? ಶನಿವಾರದ ರಾತ್ರಿ ಅಂದರೆ ಹನ್ನೊಂದು ಗಂಟೆಗೆ ಶುರುವಾದ ಗ್ರಹಣ ಭಾನುವಾರದ ಬೆಳಗಿನ ಝಾವ ಮೂರುಗಂಟೆಯವರೆಗೂ ಮುಂದುವರೆದಿತ್ತು. ರಾತ್ರಿ ಘಟಿಸುವ ಈ ಗ್ರಹಣವನ್ನು ನೋಡಲು ಅಥವಾ ಅವರ ಸತ್ಯತೆಯನ್ನು ಪರಾಂಭರಿಸಲು ಸಾಧ್ಯವಿರಲಿಲ್ಲ ವಾದ್ದರಿಂದ ಪಂಚಾಂಗದಲ್ಲಿ ಬರೆದಿದ್ದನ್ನೇ ಒಪ್ಪಿಕೊಳ್ಳಬೇಕಾಗಿತ್ತು.

ಕಳೆದ ತಿಂಗಳು ನಡೆದಿದ್ದ ಮಂಡಲ ಪಂಚಾಯ್ತಿ ಚುನಾವಣೆಯಲ್ಲಿ ಎರಡು ಪ್ರಬಲ ಪಕ್ಷಗಳ ನಡುವಿನ ವೈಮನಸ್ಸಿನಿಂದಾಗಿ ಲಿಂಗಾಯತರು ಮತ್ತು ಒಕ್ಕಲಿಗರ ನಡುವೆ ಭೀಕರವಾದ ಕಂದಕ ಸೃಷ್ಟಿಯಾಗಿತ್ತು. ಈ ಭೇದವು ಅಲ್ಪಸಂಖ್ಯಾತರಾಗಿದ್ದ ಜಾತಿಯವರನ್ನೂ ಸುಮ್ಮನೆ ಬಿಡದೇ ಮಾಂಸತಿನ್ನುವವರ ಒಂದು ಗುಂಪು ಹಾಗೂ ತಿನ್ನದವರ ಒಂದು ಗುಂಪು ಎಂದು ವಿಭಾಗಿಸಲ್ಪಟ್ಟಿತು. ಅಷ್ಟಾಗಿದ್ದರೆ ಪರವಾಯಿರಲಿಲ್ಲ. ಆದರೆ ಸಸ್ಯಾಹಾರಿಗಳು ತಮ್ಮ ಸೇವೆ ಮಾಡಲು ಇದ್ದ ಒಂದು ಹರಿಜನ ಕುಟುಂಬವನ್ನು ತಮ್ಮ ಕಡೆಗೆ ಒಲಿಸಿಕೊಂಡಿದ್ದರು. ಇದರಿಂದಾಗಿ ಒಕ್ಕಲಿಗರಿಗೆ ಮತ್ತೊಂದು ಕುಟುಂಬದ ಅವಶ್ಯಕತೆ ಬಿತ್ತು. ಪಕ್ಕದ ಊರಿನ ತಳವಾರನಿಗೆ ಹೇಳಿದ್ದರೆ ಬೇಕಾದರೆ ಒಪ್ಪಿಬಿಡುತ್ತಿದ್ದನೇನೋ. ಆದರೆ ಒಕ್ಕಲಿಗರು ಛಾಲೆಂಜಿಗೆ ಬಿದ್ದರು. ಸಾಯುವಂತಾಗಿದ್ದ ದನ ಎಮ್ಮೆಗಳನ್ನು ಕೊಟ್ಟಿಗೆಯಲ್ಲಿ ಕಟ್ಟದೇ ಬೀದಿಗೆ ಬಿಟ್ಟರು. ಅವು ಎಲ್ಲೆಲ್ಲಿ ಕಾಲು ಸೋತು ಬಿದ್ದವೋ ಅಲ್ಲಲ್ಲೇ ಜೀವ ಕಳೆದುಕೊಂಡವು. ಮಾಂಸಾಹಾರಿಗಳ ರಾಸುಗಳಾಗಿದ್ದರಿಂದ ಲಿಂಗಾಯತರು ಹಾಗೂ ಇವರ ಕಡೆಯಿದ್ದ ತಳವಾರ ಅವನ್ನು ವಿಲೇವಾರಿ ಮಾಡುವಂತಿರಲಿಲ್ಲ.

ಊರಿನ ಮಧ್ಯೆ ಎಲ್ಲೆಲ್ಲೋ ಬಿದ್ದು ಸತ್ತ ರಾಸುಗಳು ಕೊಳೆಯಲಾರಂಭಿಸಿದವು. ತಳವಾರನ ಬಾಯಲ್ಲಿ ನೀರೂರಿತು. ಅದರ ಚರ್ಮದಿಂದ ಬರುತ್ತಿದ್ದ ಲಾಭವನ್ನು ಲೆಕ್ಕ ಹಾಕುತ್ತಿದ್ದ. ಲಿಂಗಾಯತರು ಮೂಗು ಬಿಟ್ಟು ಊರಿನಲ್ಲಿ ಓಡಾಡುವಂತಿರಲಿಲ್ಲ. ಯಾವಾಗ ಇದರ ವಾಸನೆ ತಾಳಿಕೊಳ್ಳಲು ಸಾಧ್ಯವಾಗಲಿಲ್ಲವೋ ಆವಾಗ ಪಂಚಾಯಿತಿಯನ್ನು ಏಕಪಕ್ಷೀಯವಾಗಿ ಮಂಡಲ ಕಾರ್ಯಾಲಯದಲ್ಲಿ ಕರೆದರು. ಇದಕ್ಕೆ ಪ್ರತಿವಾದಿಗಳಾಗಿದ್ದ ಒಕ್ಕಲಿಗರನ್ನು ಮನೆ ಮನೆಗೆ ಹೋಗಿ ಕರೆಯಲು ತಳವಾರನನ್ನು ಕಳುಹಿಸಿದ್ದಕ್ಕೆ ಆ ರಾಸನ್ನು ಲೋನಿನಲ್ಲಿ ತೆಗೆದು ಕೊಂಡಿದ್ದೆಂದೂ, ಬ್ಯಾಂಕಿನವರು ಬಂದು ನೋಡಿ ಇನ್ಸೂರೆನ್ಸ್ ಹಣವನ್ನು ಸಾಲಕ್ಕೆ ಸಮನ್ವಯ ಗೊಳಿಸಬೇಕಾಗಿದ್ದರಿಂದ ಅವರು ಬರುವವರೆಗೂ ಹಾಗೆಯೇ ಇರಬೇಕೆಂದು, ಏನಾದರೂ ಅದನ್ನು ಮುಟ್ಟಿದರೆ ಊರಿನಲ್ಲಿ ಹೆಣ ಬೀಳುವುದು ಖಂಡಿತ ಎಂದು ಬೆದರಿಕೆ ಹಾಕಿ ಕಳುಹಿಸಿದರು. ಅಲ್ಲದೇ ನಾಯಿ, ಹದ್ದು ತಿಂದು ಬೇಗ ಖಾಲಿಯಾಗದಂತೆ ಕಾಯ್ದಿದ್ದು, ಇನ್ನೊಂದು ನಾಲ್ಕು ದಿನ ಜಾಸ್ತಿ ಊರು ಗಬ್ಬಾಗಿರುವಂತೆ ನೋಡಿಕೊಂಡರು.

ಮಾಂಸಾಹಾರಿಗಳು ಭಾನುವಾರವೇ ಯುಗಾದಿ ಆಚರಿಸಬೇಕೆಂದು ತೀರ್ಮಾನಿಸುವ ಸಲುವಾಗಿ ಪ್ರಧಾನ ನಾಗೇಗೌಡನ ಮನೆಯಲ್ಲಿ ಸಭೆ ಸೇರಿದರು. ಅವರು ಲಿಂಗಾಯತರು ಗ್ರಹಣ ಬಿಟ್ಟ ಮಾರನೇ ದಿನ ಅಂದರೆ ಸೋಮವಾರ ಆಚರಿಸುವರೆಂದು ಹೇಗೋ ತಿಳಿದು ಕೊಂಡಿದ್ದರು. ಅವರು ಆಚರಿಸುವ ದಿನ ತಾವು ಆಚರಿಸಬಾರದೆಂಬ ಧೋರಣೆ ಒಕ್ಕಲಿಗರದು. ಇದರಿಂದಾಗಿ ಅವರು ಯಾವ ದಿನ ಹಬ್ಬ ಮಾಡುವರೆಂದು ತಿಳಿದುಕೊಳ್ಳಲು ಅರ್ಧ ದಿನ ವ್ಯಯಿಸಿದ್ದರು.

ಶುಕ್ರವಾರ ಮಧ್ಯಾಹ್ನ ಸಸ್ಯಾಹಾರಿ ಗುಂಪಿನವರ ಕಡೆ ಗರ್ಭಿಣಿ ಹೆಂಗಸೊಬ್ಬಳು ಪ್ರಸವ ವೇಳೆಯಲ್ಲಿ ಕಷ್ಟವಾಗಿ ತೀರಿಕೊಂಡಿದ್ದಳು. ಅದೇ ಮುಸ್ಸಂಜೆ ಚುಕ್ಕೆಗಳನ್ನು ನೋಡಿ ಹೆಣವನ್ನು ಹೂಳಿ ಬಂದಿದ್ದರು. ಸೂತಕದಿಂದಾಗಿ ಹಾಗೂ ಗ್ರಹಣದ ಕಳಂಕವಿರುವುದರಿಂದ ಹಬ್ಬವನ್ನು ಸೋಮವಾರ ಆಚರಿಸಬೇಕೆಂದು ನಿರ್ಧರಿಸಿದ್ದರಿಂದ ಊರ ಮುಂದಿನ ಅರಳೀ ಕಟ್ಟೆಯ ಮೇಲೆ ಕುಳಿತು ಮಧ್ಯಾಹ್ನವನ್ನು ಚೌಕಾಭಾರ, ಆನೆಘಟ್ಟ ಆಡುತ್ತ ಕಳೆಯುತ್ತಿದ್ದರು. ಈ ಸಂದರ್ಭದಲ್ಲಿ ಅದೇಗೋ ಅವರ ಮಾತಿನ ಮಧ್ಯೆ ಪ್ರತಿ ವರ್ಷ ಯುಗಾದಿಯ ಅಮಾವಾಸ್ಯೆಯ ರಾತ್ರಿ ಸ್ಮಶಾನದಲ್ಲಿ ಓಡಾಡುವ ಕೊಳ್ಳಿದೆವ್ವಗಳ ಪ್ರಸ್ತಾಪ ಬಂತು. ಕೆಲವರು ಯುವಕರು ಅದನ್ನು ಮಾಟಗಾರರ ಕೈವಾಡ ಎಂದು ತರ್ಕಿಸಿದ್ದರು. ಯುಗಾದಿಗೆ ಹತ್ತಿರದಲ್ಲಿ ಸತ್ತಿದ್ದವರನ್ನು ಹೂಳಿದ್ದ ಗುಣಿಗಳು ತಗ್ಗಾಗಿದ್ದುದನ್ನು ಈ ಹಿಂದೆ ಗಮನಿಸಿದ್ದರು, ಮತ್ತು ಮುಂಗಾರಿನಲ್ಲಿ ಮಳೆ ಮೋಡ ಹತ್ತದಿದ್ದಾಗ ತೊನ್ನಾಗಿದ್ದ ಹೆಣಗಳನ್ನು ಕಿತ್ತು ಸುಡುವ ಸಂಪ್ರದಾಯದಂತೆ ಕಿತ್ತಾಗ, ಕೆಲವು ಗುಂಡಿಗಳಲ್ಲಿ ಹೆಣಗಳೇ ಇಲ್ಲದ್ದನ್ನು ಗಮನಿಸಿದ್ದರೂ, ಕೊಳೆತುಹೋಗಿರಬಹುದೆಂದು ಸುಮ್ಮನಾಗಿದ್ದರು. ಯುಗಾದಿ ಅಮಾವಾಸ್ಯೆಯ ದಿನ ತೆಗೆದ ಮಾನವರ ಅದರಲ್ಲೂ ಗರ್ಭಿಣಿಯ ಮೂಳೆ ಹಾಗೂ ತಲೆಬುರುಡೆ ಮಾಟ, ಮಂತ್ರ, ಯಕ್ಷಿಣಿ ಮಾಡಲು ಪ್ರಶಸ್ತವೆಂದು ಕೇಳಿ ತಿಳಿದಿದ್ದರು. ಮೇಲಾಗಿ ಒಕ್ಕಲಿಗರ ಕಡೆಗೆ ಸೇರಿಕೊಂಡಿದ್ದ ಮಾಟಗಾರ ಮರಿಯಣ್ಣ ಅನುಮಾನಾಸ್ಪದವಾಗಿ ಕಂಡ. ಸರಿ ಅವತ್ತೇ ರಾತ್ರಿ ಅವನನ್ನು ಹಿಡಿಯುವ, ತನ್ಮೂಲಕ ಊರನ್ನು ಹೊಲಸಲ್ಲಿ ಮುಳುಗಿಸಿದ್ದ ಮಾಂಸಾಹಾರಿಗಳ ಗುಂಪನ್ನು ಅಪರಾಧೀ ಸ್ಥಾನದಲ್ಲಿ ನಿಲ್ಲಿಸುವ ಸನ್ನಾಹದಿಂದ ಕಾರಸ್ಥಾನ ರಚಿಸಿದರು.

ರಾತ್ರೆಗೆ ಐದಾರು ಜನ ಉತ್ಸಾಹೀ ಯುವಕರು ಕರಿ ಕಂಬಳಿ ಹೊದ್ದು ಕೈಯಲ್ಲಿ ಒಂದೊಂದು ದೊಣ್ಣೆಗಳನ್ನು ಹಿಡಿದು ತಯಾರಾಗುತ್ತಿದ್ದಂತೆಯೇ ಸ್ಮಶಾನದಲ್ಲಿ ಬೆಂಕಿಯ ಉಂಡೆಗಳು ಚಿತ್ರವಿಚಿತ್ರವಾಗಿ ಕುಣಿಯುತ್ತಿರುವಂತೆ ಕಾಣಿಸಿತು. ಜನರು ಈ ಬೆಂಕಿಯ ಉಂಡೆಗಳನ್ನು ಕಂಡು ಅದನ್ನು ಕೊಳ್ಳಿದೆವ್ವವೆಂದು ಭ್ರಮಿಸಿ ಸ್ಮಶಾನದತ್ತ ಯಾರೂ ಬರುವ ಧೈರ್ಯ ಮಾಡಲಾರರೆಂಬ ಊಹ ಮಾಟಗಾರರದು.

ಸ್ಮಶಾನಕ್ಕೆ ಹತ್ತಿರ ಹತ್ತಿರವಾಗುತ್ತಿದ್ದಂತೆಯೇ ಮನುಷ್ಯಾಕೃತಿಗಳು ಅವರ ಊಹೆಯಂತೆ ಕಾಣಲಾರಂಭಿಸಿದವು. ಇನ್ನೇನು ಅವರನ್ನು ಸುತ್ತುಗಟ್ಟಿ ಹಿಡಿಯಲೇಬೇಕೆನ್ನುವಷ್ಟರಲ್ಲಿ, ಒಬ್ಬನಿಗೆ ಅದು ನಿಜವಾದ ಕೊಳ್ಳಿದೆವ್ವವೇ ಆಗಿದ್ದರೆ ಎಂಬ ಭ್ರಮೆ ಬಂದು ಪುಕ್ಕಲುತನದಿಂದ ಮೈ ಕೈ ನಡುಗಲಾರಂಭಿಸಿತು. ಈ ಹಿಂದೆ ತೊನ್ನು ಹತ್ತಿದ್ದ ಹೆಣ ಕೀಳಲು ಬಂದಿದ್ದ ನಾಲ್ವರು ರಾತ್ರೋ ರಾತ್ರಿ ಸತ್ತುಹೋಗಿದ್ದನ್ನು ಇನ್ನೂ ವಿಶ್ಲೇಷಿಸಲು ಸಾಧ್ಯವಾಗಿರಲಿಲ್ಲವಾದ್ದರಿಂದ ಸಾವಿನ ಭಯ ಕಾಡಿತ್ತು. ಪೂರಕವಾಗಿ ಯಾರೋ ಅವನ ಕತ್ತನ್ನು ಹಿಚುಕಿದಂತೆ… ಉಸಿರುಕಟ್ಟಿದಂತೆ… ಕಿರುಚಿಬಿಟ್ಟ!

ತಕ್ಷಣ ನೆಲದತ್ತ ಬಾಗಿದ ಪಂಜುಗಳು ಆರಿಹೋದವು. ಅಂತಿಮ ಘಟ್ಟಕ್ಕೆ ಬಂದಿದ್ದ ತಮ್ಮ ಯೋಜನೆಯನ್ನು ಹಾಳು ಮಾಡಿದನೆಂದು ಎಲ್ಲರೂ ಅವನನ್ನು ಚೆನ್ನಾಗಿ ಚಚ್ಚಿದರು. ವಾಪಸ್ಸು ಬರುವಾಗ, ಇವತ್ತು ಸೂರ್ಯಗ್ರಹಣವೂ ಇದ್ದಿದ್ದರಿಂದ ಅತ್ಯಂತ ಪ್ರಸಕ್ತವಾದ ರಾತ್ರಿ, ಖಂಡಿತ ಇವತ್ತು ಅವರು ಸಿಕ್ಕೇ ಬಿಡುತ್ತಿದ್ದರು. ಹೋಗಲಿ, ನಾಳೆ ರಾತ್ರೆಯೂ ಅಮಾವಾಸ್ಯೆ ರಾತ್ರಿಯೇ ಆಗಿರುವುದರಿಂದ ಈ ಮಾಟಗಾರರು ಬಂದರೂ ಬರಬಹುದು, ನಾಳೆಯೂ ಕಾಯೋಣ’ ಎಂದು ನಿರ್ಧರಿಸಿದರು. ‘ನಾಳಿಕೆ ಈ ಪುಕ್ಕು ಸೂಳೇ ಮಗುನ್ನ ಮಕ್ಕುಗುದು ಮನೇಲೇ ಬಿಟ್ಟು ಬರ್ಬೇಕು’ ಎಂದೂ ಅಂದರು.

ಮಾರನೇ ರಾತ್ರಿ, ನಿನ್ನೆಯಂತೆ ಏಳೆಂಟು ಬೆಂಕಿಯುಂಡೆಗಳು ವಕ್ರಾಕಾರವಾಗಿ ಸುತ್ತುವ ಬದಲು ಒಂದೇ ಒಂದು ಉಂಡೆ ಮಾತ್ರ ವೃತ್ತಾಕಾರವಾಗಿ ಓಡುತ್ತಿರುವಂತೆ ಭಾಸವಾಯಿತು. ಈ ರಾತ್ರಿ ಅವನೊಬ್ಬನೇ ಬಂದಿದ್ದಾನೆ; ಹಿಡಿಯುವುದು ಸುಲಭವೆಂದು ಖುಷಿಯಾದರು.

ತಮ್ಮನ್ನು ಕಂಡೊಡನೆ ತಪ್ಪಿಸಿಕೊಂಡು ಹೋಗಲು ಅವಕಾಶವಾಗದಂತೆ ಎಲ್ಲರೂ ಸುತ್ತಲಿಂದ ಅವನನ್ನು ಆಕ್ರಮಿಸುವ ಯೋಜನೆ ರೂಪಿಸಿದರು.

ಅಂತಯೇ ಹಿಡಿದೇ ಬಿಟ್ಟರು!

ಆತ ಬೆತ್ತಲೆಯಾಗಿದ್ದ ಇಪ್ಪತ್ತರ ತರುಣ.

ಅವನನ್ನು ಹಿಡಿದು ಒಂದೊಂದು ಏಟು ಹಾಕುತ್ತಿದ್ದಂತೆಯೇ, ಅವನ ಕಿರುಚಾಟಕ್ಕೆ ಹತ್ತಾರು ನಾಯಿಗಳು ಬೊಗಳುತ್ತ ನುಗ್ಗಿ ಬಂದವು. ಜೊತೆಗೆ ಹತ್ತು ಹದಿನೈದು ಜನರು ದೊಡ್ಡದಾಗಿ ಗಲಾಟೆ ಮಾಡುತ್ತಾ, ನಾಯಿಗಳನ್ನು ಛೂ ಬಿಡುತ್ತಾ ಓಡಿಬಂದರು. ಅಷ್ಟರಲ್ಲಿ ವಾಸ್ತವದ ಅರಿವಾದ ಉತ್ಸಾಹೀ ಯುವಕರು ಕಳಾಹೀನರಾದರು. ಕುರಿಗಳನ್ನು ಕದಿಯಲು ಬಂದಿದ್ದಾರೆಂದು ಕುರಿಗಾಹಿಗಳು ಇವರನ್ನೇ ಥಳಿಸಿದರು. ಹೊದ್ದಿದ್ದ ಕರಿ ಕಂಬಳಿ ಮತ್ತು ದೊಣ್ಣೆಗಳು ಇದಕ್ಕೆ ಪುಷ್ಟಿ ನೀಡಿದ್ದವು.

ಇವರು ಹಣ್ಣುಗಾಯಿ ನೀರುಗಾಯಿಯಾಗುವಷ್ಟರಲ್ಲಿ ಎರಡು ಕಡೆಯವರೂ ಒಂದು ಸಮಾಧಾನಕ್ಕೆ ಬಂದರು ಹಾಗೂ ನಿಜವನ್ನು ಅರಿಯಲು ಪ್ರಯತ್ನಿಸಿದರು. ಕುರಿಗಾಹಿಗಳು ಅಮಾವಾಸ್ಯೆಯ ದಿನ ಇನ್ನೂ ಮದುವೆಯಾಗದ ಯುವಕನನ್ನು ಬೆತ್ತಲೆಗೊಳಿಸಿ, ತಮ್ಮ ಕುರಿಗಳಿಗೆ ಯಾವುದೇ ಕಾಯಿಲೆ ಕಸಾಲೆ ಬರದಂತೆ ಕಟ್ಟಳೆ ಮಾಡಿಸುತ್ತಾರೆ. ಅದರ ಒಂದು ಕ್ರಿಯೆಯಾಗಿ ಬೆಂಕಿಯ ಪಂಜನ್ನು ಹಿಡಿದು ಕುರಿಹಿಂಡಿನ ಸುತ್ತಲೂ ಮೂರು ಸುತ್ತು ಸುತ್ತಿ ಪೂಜೆ ಮಾಡುತ್ತಾರೆ ಹಾಗೂ ಒಂದು ಕುರಿಯನ್ನು ಬಲಿ ಕೊಡುತ್ತಾರೆ.

ಈ ಕುರಿಮಂದಿಯವರು ಯಾವ್ಯಾವತ್ತು ಎಲ್ಲಿ ಬೇಕೋ ಅಲ್ಲಲ್ಲಿ ಮಂದೆ ಹಾಕುವುದರಿಂದಾಗಿ ಈ ಪ್ರಮಾದವಾಗಿತ್ತು. ಕೆಟ್ಟ ಮುಖಮಾಡಿಕೊಂಡವರು ಊರಿನಲ್ಲಿ ಹೇಗೆ ಮುಖ ತೋರಿಸುವುದೆಂದು ಪರಿತಪಿಸುತ್ತಾ ಸದ್ದಿಲ್ಲದೇ ಮಲಗಿದರು. ಸದ್ಯ ತಮ್ಮನ್ನು ಕುರಿ ಕಳ್ಳರೆಂದು ಕಟ್ಟಿಹಾಕಿ, ಬೆಳಿಗ್ಗೆ ಊರ ಮುಂದೆ ನ್ಯಾಯಕ್ಕೆ ತಂದು ನಿಲ್ಲಿಸಿದ್ದರೆ ತಮ್ಮ ಮಾನ ಮರ್ಯಾದೆ ಮೂಡಲ ಸೀಮೆಯವರ ಮುಂದೆ ಮೂರು ಕಾಸಿಗೂ ಉಳಿಯುತ್ತಿರಲಿಲ್ಲವೆಂದು ಸಮಾಧಾನವಾಯಿತು.

ಅದು ಹೇಗೋ ಸುದ್ದಿ ಹರಡುವುದು ಮಾತ್ರ ನಿಲ್ಲಲಿಲ್ಲ. ಇವರ ಮರ್ಯಾದ ಹರಾಜಾಗುವುದನ್ನು ತಪ್ಪಿಸಲಾಗಲಿಲ್ಲ. ಊರಲ್ಲಿ ಎರಡು ಪಾರ್ಟಿಗಳಿದ್ದುದರಿಂದ ಒಕ್ಕಲಿಗರು ‘ಕದ್ದು ಮಾಂಸ ತಿನ್ನಕ್ಕೋಗೋರಿಗೆ ಇಂಗೇ ಆಗಬೇಕು. ಇವರೆಲ್ಲ ತಿನ್ನಿಂಗಾಗಿದ್ದರಿಂದಲೇ ಬಾಡಿನ ರೇಟು ಈಪಾಟಿ ಜಾಸ್ತಿಯಾದ್ದು’ ಎಂದು ತಮ್ಮ ತಮ್ಮಲ್ಲೇ ಆಡಿಕೊಂಡು ನಕ್ಕರು.

ಮಾರನೇ ದಿನ ಸಸ್ಯಾಹಾರಿಗಳು ಯುಗಾದಿ ಆಚರಿಸಲು ಮುಂದಾದರೆ, ಮಾಂಸಾಹಾರಿಗಳು ವರ್ಷ ತೊಡಕನ್ನು ಆಚರಿಸುವ – ಬಿಡುವ ಜಿಜ್ಞಾಸೆಯಲ್ಲಿದ್ದರು. ಯುಗಾದಿಯ ಮಾರನೆ ದಿನವೇ ವರ್ಷ ತೊಡಕು ಮಾಡುವುದು ಎಂದಿನ ರೂಢಿ ಭಾನುವಾರ ಹಬ್ಬ ಆಚರಿಸಿದ್ದರಿಂದ ಸೋಮವಾರ ವರ್ಷತೊಡಕು ಬಿದ್ದಿತ್ತು. ಸೋಮವಾರ ಸಂಪ್ರದಾಯದಂತೆ ಮಾಂಸ ತಿನ್ನುವಂತಿಲ್ಲ. ಏನು ಮಾಡುವುದು?

ನಾಗೇಗೌಡನ ಮನೆಯಲ್ಲಿ ಸಭೆ ಸೇರಿತು. ನಾಗೇಗೌಡ ಮಂಡಲದ ಪ್ರಧಾನನಾಗಿದ್ದರಿಂದ ಜಾತೀಯ ನಾಯಕನಾಗಿದ್ದ. ಅಲ್ಲದೇ ಅವನ ಅಪ್ಪ ಕೆಂಗೇಗೌಡ ಅನುಭವಸ್ಥ ಹಿರಿಯ. ಜೊತೆಗೆ ಅಷ್ಟು ಇಷ್ಟು ಪಂಚಾಂಗ ತಿರುವಿ ಹಾಕುವುದನ್ನು ಕಲಿತಿದ್ದ. ಪಂಚಾಂಗ ಬಿಡಿಸಿದ್ದರಿಂದ ವರ್ಷತೊಡಕು ಸೋಮವಾರವೇ ಇರುವುದು ತಿಳಿಯಿತು. ಬರೆದವರಿಗೇನು ಗೊತ್ತು ವರ್ಷತೊಡಕಿನಲ್ಲಿ ಮಾಂಸವನ್ನು ತಿನ್ನಬೇಕೆಂದೂ ಅಥವಾ ಸೋಮವಾರ ಇವರು ಮಾಂಸ ತಿನ್ನುವುದಿಲ್ಲವೆಂದು! ಇಷ್ಟು ವರ್ಷ ವರ್ಷತೊಡಕು ಸೋಮವಾರ ಬೀಳುವಂತಿದ್ದರೆ ಅದನ್ನು ಮಂಗಳವಾರಕ್ಕೆ ಮುಂದೂಡುವುದು ವಾಡಿಕೆಯಾಗಿತ್ತು. ಆದರೆ ….

ಸೋಮವಾರ ಹಬ್ಬ ಆಚರಿಸಿದ ಲಿಂಗಾಯತರು ಮಂಗಳವಾರ ‘ಕಾಲಿಗೆ ಬೀಳುವ ಹಬ್ಬ ಆಚರಿಸುತ್ತಾರೆ. ಅವತ್ತು ಹುಟ್ಟುವ ಚಂದ್ರನನ್ನು ವರ್ಷದ ಪ್ರಥಮ ಚಂದ್ರನೆಂದು ಪರಿಗಣಿಸಿ, ಹೊಸ ವರ್ಷದ ಸಂತಸವನ್ನು ಇತರರೊಂದಿಗೆ ಹಂಚಿಕೊಂಡು ಹಿಂದಿನ ದ್ವೇಷವನ್ನೆಲ್ಲ ಮರೆತು, ಮುಂದೆ ಪರಸ್ಪರ ಸ್ನೇಹದಿಂದಿರುವ ಎಂದು ನಿರ್ಧರಿಸಿ, ಹಿರಿಯರ ಕಾಲಿಗೆ ಬಿದ್ದು ಮಾಡಿದ ತಪ್ಪಿಗೆ ಕ್ಷಮೆ ಹಾಗೂ ಉತ್ತಮ ಭವಿಷ್ಯಕ್ಕೆ ಆಶೀರ್ವಾದ ಪಡೆಯುವುದು ಸಂಪ್ರದಾಯ. ಅದರಂತೆ ಮಂಗಳವಾರ ಲಿಂಗಾಯತರು ಕಾಲಿಗೆ ಬೀಳುವ ಹಬ್ಬ ಆಚರಿಸಲು ಹಿಂದಿನ ವರ್ಷಗಳಂತೇ ತಮ್ಮ ಮನೆಗೆ ಬಂದರೇ? ಆ ವೇಳೆಯಲ್ಲಿ ಮಾಂಸದ ವಾಸನೆ ಅವರ ಮೂಗಿಗೆ ಬಡಿದರೆ ಅವರಿಗೆ ಅವಮರ್ಯಾದೆ ಮಾಡಿದಂತೆ. ಹಿಂದೆ ದನ ಎಮ್ಮೆ ಊರ ಮಧ್ಯೆ ಹಾಕಿ ಕೊಳೆಸಿದ್ದು ನೆನಪಾಯಿತು. ಹಾಗೆಂದು ಬುಧವಾರಕ್ಕೆ ಮುಂದೂಡುವುದು ಸಾಧ್ಯವಿಲ್ಲ. ಏಕೆಂದರ ವರ್ಷತೊಡಕನ್ನು ಆಚರಿಸುವುದು ಯುಗಾದಿಯಲ್ಲಿ ಒಬ್ಬಟ್ಟು ಜಾಸ್ತಿ ತಿಂದು ಅಜೀರ್ಣ ವಾಗಿದ್ದರೆ ಖಾರದ ಊಟ ಮಾಡಿ ಅದನ್ನು ನೀಗಿಸಿಕೊಳ್ಳುವುದಕ್ಕೆ ಹಾಗೂ ಬಾಯಿರುಚಿಯನ್ನು ಮಾಮೂಲಿಗೆ ತರುವುದಕ್ಕೆ, ಈ ಸಂದಿಗ್ಧತೆಯನ್ನು ಬಿಡಿಸುವುದು ಕೆಂಗೇಗೌಡನಿಂದ ಸಾಧ್ಯವಾಗಲಿಲ್ಲ. ನಾಗೇಗೌಡನಂತೂ ಏನೆಂದು ಹೇಳಬೇಕೆಂದು ತಿಳಿಯದೇ ತಲೆಗೆ ಕೈಹೊತ್ತು ಕುಳಿತ. ಹಾಗೆಂದು ಕೆಂಗೇಗೌಡನಿಗೆ ಪಂಚಾಂಗವನ್ನು ತಿರಸ್ಕರಿಸುವುದೂ ಸುಲಭವಾಗಿರಲಿಲ್ಲ. ಮಧ್ಯಾಹ್ನ ಮೂರು ಗಂಟೆಯಾದರೂ ಪರಿಹಾರ ಸಿಗಲಿಲ್ಲ. ನಾಗೇಗೌಡ ಯಾವ ವಿಷಯವನ್ನು ಹಗುರವಾಗಿ ಪರಿಗಣಿಸಿದರೂ ಧಾರ್ಮಿಕ ಆಚರಣೆಗಳಿಗೆ, ನಂಬಿಕೆಗಳಿಗೆ, ಸಂಪ್ರದಾಯಕ್ಕೆ ಭಯ ಭಕ್ತಿಯಿಂದ ತಲೆಬಾಗುತ್ತಿದ್ದ.

ಅಪರಾಹ್ನ ನಾಲ್ಕು ಗಂಟೆಯ ವೇಳೆಗೆ ಒಂದು ನಿರ್ಧಾರಕ್ಕೆ ಬರಲಾಯಿತು. ಸೋಮವಾರವೇ ವರ್ಷತೊಡಕನ್ನು ಆಚರಿಸುವುದೆಂದಾಯಿತು – ‘ಚುಕ್ಕೆ ನೋಡಿ ಉಂಡರೆ ಸೋಮವಾರ ಮಾಂಸ ತಿಂದ ಕಳಂಕ ತಟ್ಟುವುದಿಲ್ಲ’ ವೆಂದು.

ವರ್ಷತೊಡಕಿನ ದಿನ ‘ಅಗ್ಸಿ ಬಾಗ್ಲು ಚೌಡಮ್ಮುಂಗೆ’ ಕಡಿಯಲೆಂದು ಅನೇಕ ಜನರು ಷೇರು ಹಾಕಿಕೊಂಡು ಬಿಟ್ಟಿದ್ದ ಕುರಿಯನ್ನು ಹಿಡಿದು ತರಲೆಂದು ಕೆಲವರನ್ನು ಓಡುಗಳಿಸಿದ. ಅಷ್ಟರಲ್ಲಿ ಯಾರೋ ಇವರತ್ತಲೇ ಓಡಿಬರುತ್ತಿರುವಂತೆ ಕಂಡಿತು. ಬಂದವನು ಕುರಿತಮ್ಮಯ್ಯನ ಮಗ ರಂಗನಾಗಿದ್ದ. ಕುರಿಹಿಂಡಿನ ಮೇಲೆ ತೋಳ ಬಿದ್ದುದರಿಂದ ಹೆದರಿ ಓಡಿಬಂದಿದ್ದ. ಜನ ಗುಂಪಲ್ಲಿ ಹೋಗಿ ನೋಡುವಷ್ಟರಲ್ಲಿ ತೋಳ ಕಾಣಲಿಲ್ಲವಾದರೂ ಚದುರಿದ್ದ ಕುರಿಗಳನ್ನೆಲ್ಲಾ ಸೇರಿಸಿಕೊಂಡು ಹುಡುಕಿದಾಗ ಮಾಯವಾಗಿದ್ದವುಗಳಲ್ಲಿ ವ್ಯಾಪಾರ ಮಾಡಿ ಬಿಟ್ಟಿದ್ದ ಕುರಿಯೂ ಸೇರಿತ್ತು. ದಾಕ್ಷಿಣ್ಯಕ್ಕಾಗಿ ಕುರಿಯನ್ನು ಆತ ಕಾಯುತ್ತಿದ್ದುದರಿಂದ ದುಡ್ಡನ್ನು ಕೇಳುವಂತಿರಲಿಲ್ಲ; ಅಥವಾ ಬದಲು ಕುರಿಯನ್ನೂ ಕೇಳುವಂತಿರಲಿಲ್ಲ. ಒಳ್ಳೆಯ ಪೀಕಲಾಟಕ್ಕೆ ಬಂದಿತೆಂದು ‘ಅವರವರ ಬಾಡಿನ ಜವಾಬ್ದಾರಿ ಅವರವರ್ದೇ’ ಎಂದು ಸಾರಿಸಿದ. ಬೇರೆಯವರದು ಹಾಗಿರಲಿ, ತನ್ನ ಮನೆಗೆ ಬಾಡು ಹೊಂಚುವುದೇ ನಾಗೇಗೌಡನಿಗೆ ದುಸ್ತರವಾಯಿತು. ‘ನಾಳೆನೋ ನಾಡಿದ್ದೋ ಮಾಡುದ್ರೆ ಆಗಾಕಿಲ್ವ?’ ಎಂದು ತಂದೆಯಲ್ಲಿ ಕೇಳಿದ್ದಕ್ಕೆ ಖಡಾಖಂಡಿತವಾಗಿ ನಿರಾಕರಿಸಿದರು.

ಹಿಂದಿನ ಮನೆ ಬೂಬಮ್ಮನಿಗೆ ಖರೀದಿಗೆ ಒಂದು ಕೋಳಿ ಕೊಡುವಂತೆ ಕೇಳಿದ ನಾಗೇಗೌಡ, ಸಾಬರು ಮಾಂಸ ತಿನ್ನುವವರಾಗಿದ್ದರೂ ಊರು ಎರಡು ಪಾರ್ಟಿಯಾದಾಗ ಸಸ್ಯಾಹಾರಿಗಳ ಕಡೆ ಸೇರಿಕೊಂಡಿದ್ದರು. ಹೀಗಾಗಿ ಆಕೆ ಸ್ವಾಮ್ಯಾರ ಕೋಳಿ ಮಾರುದ್ರೆ ಅದ್ರ್ವಂಸ ನಾಷಾಗ್ತೈತ್ರೀ’ ಅಂದು ಸುಳ್ಳು ನೆಪ ಹೇಳಿದಳು.

ಪಕ್ಕದ ಹಳ್ಳಿಯ ಅಂದಾನಪ್ಪನ ಹಂದಿ ಮಾಂಸದ ಅಂಗಡಿಗೆ ಆಳನ್ನು ಕಳುಹಿಸಿದ್ದಕ್ಕೆ ಆತ ‘ಸೋಮ್ಯಾರ ಅಂತ ರಜಾ ಮಾಡಿ ಪ್ಯಾಟಿಗೆ ಸಿನಿಮಾ ನೋಡಕ್ಕೆ ಹೋಗಿದ್ದಾನೆ’ ಎಂದು ತಿಳಿಯಿತು. ಪೇಟೆಗೆ ಹೋಗಿ ತರೋಣವೆಂದರೆ ದೂರವಿದೆ. ಏನು ಮಾಡುವುದು ಯೋಚನೆಗೆ
ಬಿದ್ದ.

ಸಾಯಂಕಾಲ ಆರು ಗಂಟೆಯಾಗುತ್ತಿತ್ತು. ಬೂಬಮ್ಮನ ಮನೆ ಕೋಳಿಗಳು ನಾಗೇಗೌಡನ ಮನೆ ಹಿತ್ತಲಲ್ಲಿ ಆಡುತ್ತಿದ್ದವು. ಹಿತ್ತಲ ಮನೆ ಜಗಲಿಯ ಮೇಲೆ ಕುಳಿತಿದ್ದವನಿಗೆ ತಟ್ಟನೇ ಹೊಳೆಯಿತು. ಸೊಂಟದಲ್ಲಿದ್ದ ಚಾಕುವನ್ನು ತೆಗೆದು ಬೀಸಿದ. ಕುತ್ತಿಗೆ ಮೇಲೆ ಕೂದಲಿರದ ಹುಂಜವೊಂದರ ಕತ್ತು ಚಾಕುವಿಗೆ ಸಿಕ್ಕು ಅರೆಬರೆ ಕತ್ತರಿಸಿ ಕಿರುಚಾಡುತ್ತಾ ಒದ್ದಾಡಲಾರಂಭಿಸಿತು. ಉಳಿದವು ಕೊಕ್ಕೋಕ್ಕೋ ಎಂದು ಕಿರುಚಾಡುತ್ತ ಓಡಿಹೋದವು. ಹತ್ತನ್ನೊಂದು ವರ್ಷದ ಮಗ ಓಡಿಹೋಗಿ ಅದನ್ನು ಒಳಗೆ ತಂದ.

ಕೋಳಿಯ ಅಬ್ಬರಕ್ಕೆ ಹಿತ್ತಲಿಗೆ ಬಂದ ಬೂಬಮ್ಮ ‘ಕಾ ಕಾ ಕಾ’ ಎಂದು ಕರೆದು ಅವು ಸುಮ್ಮನಾದ ಮೇಲೆ ಒಲೆಯ ಮೇಲೆ ಇಟ್ಟಿದ್ದ ಅಡಿಗೆಯನ್ನು ನೋಡಲು ಒಳಹೋದಳು. ಮುಂಗಸಿನೋ ನಾಯಿನೋ ಕಂಡು ಬೆದರಿರಬೇಕು ಅಂದುಕೊಂಡಿದ್ದಳು. ಅಪ್ಪಿತಪ್ಪಿ ಅವಳು
ಮನೆಗೆ ಬಂದು ನೋಡಿಬಿಟ್ಟರೆ ಕಷ್ಟ ಎಂದು ಅದನ್ನು ಇಡ್ಲಿಪಾತ್ರೆಯಲ್ಲಿ ಮುಚ್ಚಿ ಅಟ್ಟದ ಮೇಲೆ ಇಡಿಸಿದ. ಅವನ ಮಗ ಗೋಲಿ ಆಡುವ ನೆವದಲ್ಲಿ ಅಂಗಳದ ಮಣ್ಣನ್ನು ರಕ್ತದ ಮೇಲೆ ಹಾಕಿ ಕಾಣದಂತೆ ಮಾಡಿದ. ನಡುಮನೆಯ ಕಲೆಯನ್ನು ಅವನ ಹೆಂಡತಿ ಕಾಲುಚೀಲದಿಂದ ಸೀಟಿದಳು.

ಸಾಯಂಕಾಲ ಕೋಳಿ ಮುಚ್ಚುವಾಗ ಒಂದು ಹುಂಜ ಕಡಿಮೆಯಿರುವುದು ಗಮನಿಸಿದ ಬೂಬಮ್ಮ ನಾಗೇಗೌಡನ ಮನೆಗೆ ಬಂದು `ನಿಮ್ಕೋಳಿ ಜತಿಗೆ ನಮ್ಮ ಹುಂಜ ಬೆದ ಮೇಲೇನಾದ್ರು ಬಂದೈತಾ?’ ಎಂದು ಕೇಳಿದಳು. ತಿಂಗಳಿಂದ ಕಾವಿಗೆ ಕುಂತಿದ್ದ ಎರಡು ಬಂಡ ಕೋಳಿಗಳನ್ನು ತೋರಿಸಿದ ನಾಗೇಗೌಡನ ಹೆಂಡತಿ `ಬಂದಿಲ್ಲ’ ಎಂದಳು.

ಹೋದವಳು ಮತ್ತೆ ಬರಲಾರಳೆಂದು ಧೈರ್ಯದಲ್ಲಿ ನಾಗೇಗೌಡ ಬಚ್ಚಲ ಮನೆಯಲ್ಲಿ ಕೊಯ್ದು ಶುಚಿಮಾಡಿಕೊಟ್ಟ. ಒಲೆ ಮೇಲೆ ಬೇಯುತ್ತಿದ್ದಾಗ ವಾಸನೆ ಗ್ರಹಿಸಿದ ಬೂಬಮ್ಮ ಅನಿರೀಕ್ಷಿತವಾಗಿ ಬಂದು `ನಮ್ಮ ಹುಂಜುನ್ನ ಕದ್ದು ಕುಯ್ಕಂಡವಪ್ಪೋ’ ಎಂದು ಬೇಯುತ್ತಿದ್ದ ತಪ್ಪಲೆಯನ್ನೇ ಬೀದಿಗೆ ಎತ್ತಿಕೊಂಡು ಬಂದು ಅಕ್ಕಪಕ್ಕದವರನ್ನು ಸೇರಿಸಲಾರಂಭಿಸಿದಳು. ಅವಮಾನಿತನಾದ ನಾಗೇಗೌಡ ಸಲಾಮು, ದಮ್ಮಯ್ಯ ಎಂದರೂ ಅವಳು ಗಲಾಟೆ ಮಾಡುವುದನ್ನು ಕಡಿಮೆ ಮಾಡಲಿಲ್ಲ. ಕೊನೆಗೆ ಮೂವತ್ತು ರೂಪಾಯಿಯ ಹುಂಜಕ್ಕೆ ನೂರು ರೂಪಾಯಿ ನೋಟನ್ನು ಸೊಂಟಕ್ಕೆ ಸಿಕ್ಕಿಸಿಕೊಂಡ ಬೂಬಮ್ಮ ತಪ್ಪಲೆಯನ್ನೂ ಎತ್ತಿಕೊಂಡು ನಡೆದಳು. ಅದನ್ನು ಕೇಳಿದ್ದಕ್ಕೆ ಘಾಟಿಯಿದ್ದ ಬೂಬಮ್ಮ, ‘ಜನ ಕರ್ದು ಮಾನ ಹರಾಜ್ ಹಾಕ್ತೀನಿ’ ಎಂದು ಜಬರಿಸಿದಳು. ಊರ ಮುಂದಕ್ಕೆ ನ್ಯಾಯ ಹೋಗಿ ಲಿಂಗಾಯಿತರ ಎದುರಿಗೆ ಅವಮಾನಿತನಾಗಲು ಇಷ್ಟಪಡದೇ ಸುಮ್ಮನಾದ. ‘ಬೆಳಿಗ್ಗೆನೇ ಹಿಂಗಾಗುತ್ತೆ ಅಂತ ಗೊತ್ತಾಗಿದೆ ಒಂದು ಮೊಲಾನೋ, ಇಲ್ಲ ಹಂದಿಮರಿ ಬೀಜಾನೋ ಹೊಂಚಿ ವರ್ಷ ತೊಡಕಿನ ಶಾಸ್ತ್ರನಾದ್ರೂ ತೀರಿಸಬಹುದಾಗಿತ್ತು’ ಎಂದುಕೊಂಡ.

ಹಲಾಲ್ ಮಾಡದ್ದನ್ನು ಸಾಬರು ತಿನ್ನುವುದಿಲ್ಲವಾದ್ದರಿಂದ ಬೂಬಮ್ಮ ಪಕ್ಕದ ಮನೆಯವರಿಗೆ ತಪ್ಪಲೆ ವರ್ಗಾಯಿಸುತ್ತಿದ್ದುದು ಕತ್ತಲೆಯಲ್ಲಿ ಅಸ್ಪಷ್ಟವಾಗಿ ಕಾಣಿಸಿತು. ಅವರ ಹತ್ತಿರ ಅದಕ್ಕೂ ದುಡ್ಡು ಪಡೆದಿದ್ದಾಳೆಂದು ಪಾಪ ನಾಗೇಗೌಡನಿಗೆ ಹೇಗೆ ಗೊತ್ತಾಗಬೇಕು.

ಬೇರೆ ಮಾರ್ಗವೇ ಸಿಗದೇ ನಾಗೇಗೌಡನ ಮನಸ್ಸು ಪಾಪದ ಬಗ್ಗೆ ಚಿಂತಿಸುತ್ತಿತ್ತು. ಈ ಹಾಳು ಸಂಪ್ರದಾಯವನ್ನು ಅದ್ಯಾವನು ಮಾಡಿದನೋ ಏನೋ? ಅದಕ್ಕಾಗಿ ನಾವು ಈಗ ಎಷ್ಟು ಕಷ್ಟಪಡಬೇಕಾಗಿದೆ ಎಂದು ಅವರಿಗೆ ಹೇಗೆ ತಿಳಿಯಬೇಕು. ಮಾಂಸದ ಮೂಲಗಳನ್ನೆಲ್ಲ ಯೋಚಿಸುತ್ತ ಬಂದವನಿಗೆ ‘ಮಶಾಣ ಕೆರೆ’ ಮತ್ತು ಅದರ ಮೀನು ನೆನಪಾದವು. ಯೋಚನೆಯೇನೋ ಚೆನ್ನಾಗಿದ್ದರೂ ಈ ಅರ್ಧರಾತ್ರಿಯಲ್ಲಿ ಒಬ್ಬನೇ ಸ್ಮಶಾನದಲ್ಲಿರುವ ಕೆರೆಯಲ್ಲಿ ಮೀನು ಹಿಡಿಯಲು ಎರಡು ಗುಂಡಿಗೆಯಾದರೂ ಇರಬೇಕು. ನಿನ್ನೆ ಮೊನ್ನೆ ಅಮಾವಾಸ್ಯೆಯಾದ್ದರಿಂದ ಚಂದ್ರನ ಬೆಳಕೂ ಇರಲಿಲ್ಲ.

ತನ್ನ ಹಿರೇ ಮಗಳನ್ನು ಕರೆದು ‘ಮಸಾಲೆ ಅರೆದುಕೊಂಡಿರು’ ಎಂದಷ್ಟೇ ಕಿವಿಯಲ್ಲಿ ಹೇಳಿ, ತನ್ನ ಜೊತೆಯಲ್ಲಿ ಸಪೋರ್ಟಿಗೆ ಅಂತ ಮಗನನ್ನು ಕರೆದುಕೊಂಡು, ಬಲೆಯನ್ನು ಚೀಲದಲ್ಲಿ ಮುಚ್ಚಿಟ್ಟುಕೊಂಡು ಕಳ್ಳಹೆಜ್ಜೆಯಲ್ಲಿ ನಡೆದ.

ಮಳೆಯಿಲ್ಲದ ಕಾಲವಾದದ್ದರಿಂದ ನೀರೆಲ್ಲ ಬತ್ತಿ ಹೋಗಿ ಮಂಡಿ ಉದ್ದ ಮಾತ್ರ ಉಳಿದಿತ್ತು. ಸದ್ಯಕ್ಕೆ ಊರಿನ ದನಕರುಗಳಿಗೆ ನೀರಿನ ಆಶ್ರಯವಾಗಿ ಇದೊಂದೇ ಕೆರೆ ಉಳಿದಿದ್ದರಿಂದ, ಅದರಲ್ಲಿ ಯಾರೂ ಎಮ್ಮೆಗಳನ್ನು ಮೈತೊಳೆದು ಹೊಂಡು ಮಾಡಬಾರದೆಂದೂ, ಮೀನನ್ನು ಹಿಡಿಯಕೂಡದೆಂದೂ ತಾನೇ ಆಜ್ಞೆ ಮಾಡಿದ್ದ. ಒಂದು ವೇಳೆ ಯಾರದಾದರೂ ಎಮ್ಮೆಗಳು ಕೆಸರಿಗೆ ಬಿದ್ದುಕೊಂಡರೂ ದಂಡ ಹಾಕಲಾಗುತ್ತದೆಂದು ಪ್ರಧಾನವಾಗಿ ಅವನೇ ಆದೇಶ ಹೊರಡಿಸಿದ್ದ.

ಹಿಂದಿನ ಎರಡು ದಿನ ವಿಫಲರಾದ ಲಿಂಗಾಯಿತರ ಗುಂಪಿನ ಯುವಕರು ಹಬ್ಬದೂಟ ಉಂಡು ಸ್ಮಶಾನದತ್ತ ನಡೆದರು. ಎರಡೂ ದಿನ ಹೆಣ ಕೀಳಲು ಆಸ್ಪದ ಕೊಡದಿದ್ದರಿಂದ ಇಂದು ಮಾಟಗಾರರು ಬಂದೇ ಬರುತ್ತಾರೆಂದು, ಪಂಜನ್ನು ತರದೇ ಕೆಲಸ ಮುಗಿಸುತ್ತಾರೆಂದು ಅಚಲವಾಗಿ ನಂಬಿದ್ದರು.

ನಾಗೇಗೌಡ ಒಂದು ಒಡ್ಡು ಬಲೆಯನ್ನು ಬಿಟ್ಟ. ಮಗನಿಗೆ ಆ ಕಡೆಯಿಂದ ಮೀನನ್ನು ಬೆದರಿಸುವಂತೆ ಹೇಳಿದ. ಬಲೆಯನ್ನು ಸುತ್ತು ಕಟ್ಟಿ ಇನ್ನೇನು ಬಾಚಿಕೊಳ್ಳಬೇಕು; ಅಷ್ಟರಲ್ಲಿ ಏರಿಯ ಮೇಲೆ ಯಾರೋ ನಡೆದುಬರುತ್ತಿರುವಂತೆ ಭಾಸವಾಯಿತು. ದೆವ್ವದ ಕಲ್ಪನೆ ಬಂದು ನಡುಗಿದ. ಅವನ ಮಗ ಕಿರುಚಿ ಉಚ್ಚೆಹುಯ್ದುಕೊಂಡ. ಯಾವುದೋ ಕೆಲಸಕ್ಕೆ ಬಂದಿದ್ದ ಯುವಕರಿಗೆ ಬೇಕಾದ್ದೇ ಕಾಲಿಗೆ ಸಿಕ್ಕಿದಂತಾಯಿತು. ಬಲೆಗೆ ಹತ್ತಿದ ಮೀನನ್ನೆಲ್ಲ ಹಲ್ಲು ಕಿರಿದು ಬಿಡಿಸಿ ನೀರಿಗೆಸೆಯುವಂತೆ ಆಜ್ಞಾಪಿಸಿದ್ದರಿಂದ ಅಂತೆಯೇ ಮಾಡಬೇಕಾಯಿತು. ಬಲೆ ಸೀಜ್ ಮಾಡಿ ಹೊರಿಸಿಕೊಂಡು ಊರಿಗೆ ಕರೆದೊಯ್ದರು.

ದೇವಸ್ಥಾನದಲ್ಲಿ ಪಂಚಾಯಿತಿ ಸೇರಿ ಈಗಲೇ ತೀರ್ಮಾನಗೊಳಿಸುವವರೆಗೆ ತಾವು ಬಿಡುವುದಿಲ್ಲವೆಂದು ಯುವಕರು ಪಟ್ಟು ಹಿಡಿದರು. ತೀರ್ಮಾನ ಹೊರ ಬಂದಾಗ ರಾತ್ರಿ ಹನ್ನೊಂದೂವರೆ. ತಾವು ಗೆದ್ದವೆಂದು ಘೋಷಿಸಿಕೊಳ್ಳಬೇಕೆಂಬ ಆತುರದಲ್ಲಿ ನಾಗೇಗೌಡನಿಗೆ ನೂರಾಒಂದು ರೂಪಾಯಿ ದಂಡ ಹಾಕಿ, ಬಲೆಯನ್ನು ಮುಟ್ಟುಗೋಲು ಹಾಕಿಕೊಂಡರು. ಪ್ರಧಾನ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದಾಯಿತು.

ಮಶಾಣ ಕೆರೆಯಲ್ಲಿ ನೀರು ಕಡಿಮೆಯಿದ್ದುದರಿಂದ ಮತ್ತು ಮೀನುಗಳನ್ನು ಯಾರೂ ಹಿಡಿಯುವಂತಿರಲಿಲ್ಲವಾದ್ದರಿಂದ ಕೈಕಾಲಿಗೆ ಸಿಗುವಂತಿದ್ದವು. ಬಲೆಯನ್ನು ಬಿಡುವಾಗ ಕಾಲಿಗೆ
ಸಿಕ್ಕಿದ್ದ ಒಂದು ಮುರುಗೋಡು, ಮತ್ತೊಂದು ಗಿರಲು ಮೀನನ್ನು, ಅದರ ಬೆನ್ನ ಮೇಲಿನ ಮತ್ತು ಕಿವಿರಿನ ನಂಜು ಮುಳ್ಳುಗಳನ್ನು ಮುರಿದು ಹಾಕಿಕೊಳ್ಳಲು ಏನೂ ಸಿಗದಿದ್ದಾಗ ಪುಟಕೋಸಿಗೆ ಸಿಕ್ಕಿಸಿಕೊಂಡಿದ್ದ. ಹಿಂದೊಮ್ಮೆ ಕಳ್ಳರ ಕೈಗೆ ಸಿಕ್ಕಿಹಾಕಿಕೊಂಡಾಗ ದುಡ್ಡನ್ನು ಅದರೊಳಗೆ ಹಾಕಿ ಉಳಿಸಿಕೊಂಡಿದ್ದ. ಅಂತೆಯೇ ಈ ಎರಡು ಮೀನುಗಳು ಅವರ ಕಣ್ಣಿಗೆ ಕಾಣದೇ ಹಾಗೇ ಉಳಿದಿದ್ದವು. ‘ಭಲೇ ಪುಟಗೋಸಿ’ ಎಂದು ಮನಸ್ಸಿನಲ್ಲಿಯೇ ಅಂದುಕೊಂಡ.

ರಾತ್ರಿ ಹನ್ನೆರಡು ಗಂಟೆಯೊಳಗೆ ಶಾಸ್ತ್ರಕ್ಕಾದರೂ ಊಟ ಆಗಲೇಬೇಕಾದ್ದರಿಂದ ಸರಸರನೆ ತಿಕ್ಕಿ ತೊಳೆದುಕೊಟ್ಟ. ಮೊದಲೇ ಮಸಾಲೆ ರೆಡಿ ಮಾಡಿಕೊಂಡಿದ್ದರಿಂದ ಸ್ವಲ್ಪ ಹೊತ್ತಿನಲ್ಲೇ ಬೆಂದಿತು. ಮೊದಲು ತನ್ನ ಅಜ್ಜನ ಗೋರಿಯ ಮೇಲೆ ಎಡೆ ಹಾಕಿ ನಂತರ ತಿನ್ನುವುದು ಅವರ ಸಂಪ್ರದಾಯ. ಸರಿ, ತಡವಾಗುತ್ತದೆಂದು ಅರೆ ಬೆಂದದನ್ನೇ ತೆಗೆದುಕೊಂಡು ಸ್ಮಶಾನದತ್ತ ಕತ್ತಲೆಯಲ್ಲಿ ಅಂದಾಜಿನಿಂದ ಅನುಸರಿಸಿ, ತನ್ನ ಅಜ್ಜನನ್ನು ಹೂಳಿದ್ದ ಗುಂಡಿಯನ್ನು ಹುಡುಕಿ, ತಲೆಯ ಭಾಗದಲ್ಲಿ ಅನ್ನದ ಎಡೆಯಿಟ್ಟು ಸಾರನ್ನು ಸುರಿದ. ಎಲೆ ಅಡಿಕೆ ಹೊಗೆ ಸೊಪ್ಪು ಬೀಡಿ ಇವುಗಳನ್ನು ಇಡುವುದನ್ನು ಮರೆಯಲಿಲ್ಲ. ಸತ್ತವರಿಗೆ ಇದ್ದ ಚಟಗಳನ್ನು ಈ ಮೂಲಕ ತೀರಿಸುತ್ತಿದ್ದೇವೆಂದು ಅವರು ನಂಬುತ್ತಿದ್ದರು.

ವಾಪಸ್ಸು ಹೊರಟವನು ಕಡ್ಡಿ ಗೀರಿ ಬೀಡಿ ಹಚ್ಚಿಕೊಂಡ.

ಸ್ಮಶಾನದಲ್ಲಿ ಬೆಳಕು ಕಂಡ ಲಿಂಗಾಯಿತರ ಯುವಕರು ಅತ್ತ ಓಡಿದರು.

ಅರ್ಧ ದಾರಿಯಲ್ಲಿ ನಾಗೇಗೌಡ ಅಡ್ಡ ಬಂದರೂ ಯಾರೂ ಗಮನ ಕೊಡಲಿಲ್ಲ.

ನಾಗೇಗೌಡನ ಹೆಂಡತಿ ಮಾಂಸದ ಊಟದಿಂದ ಹೊಟ್ಟೆ ಕಚ್ಚದಿರಲೆಂದು ದೃಷ್ಟಿ ನಿವಾಳಿಸಿ ಹರಳು ಉಪ್ಪನ್ನು ಒಲೆಗೆ ಹಾಕಿ ಸಿಡಿಸಿದಳು. ಊಟಕ್ಕೆ ಕುಳಿತ ನಾಗೇಗೌಡನ ತಟ್ಟೆಗೆ ಬಡಿಸಬೇಕೆನ್ನುವಷ್ಟರಲ್ಲಿ ಗೌಡನ ಮಗಳು ‘ಅರ್ಜಂಟು’ ಎಂದು ಅವ್ವನನ್ನು ಕರೆದುಕೊಂಡು ಬೇಲಿ ಸಾಲಿಗೆ ಹೋದಳು. ರಾತ್ರಿ ಹನ್ನೆರಡು ದಾಟುತ್ತಿದೆಯೆಂದು ತಾನೇ ಬಡಿಸಿಕೊಂಡು, ತುತ್ತನ್ನು ಬಾಯಿಗೆ ಎತ್ತಿಡಬೇಕೆನ್ನುವಷ್ಟರಲ್ಲಿ ಬಂದ ಅವನ ಹೆಂಡತಿ `ಮಗಳು ಮೈನೆರೆದವಳೇ’ ಎಂದಳು. `ಸೂತಕವಾಯಿತಲ್ಲ’ ಎನ್ನುವಷ್ಟರಲ್ಲಿ ಬಾಯಿ ಸೇರಿದ್ದ ತುತ್ತಿನಲ್ಲಿದ್ದ ಮೀನಿನ ಮುಳ್ಳು ಗಂಟಲಲ್ಲಿ ಚುಚ್ಚಿಕೊಂಡಿತು.

ಸ್ಮಶಾನ ಸೇರಿದ ಯುವಕರ ತಂಡಕ್ಕೆ ಗರ್ಭಿಣಿ ಹೆಂಗಸನ್ನು ಮುಚ್ಚಿದ್ದ ಗುಂಡಿಯು ಕತ್ತಲಲ್ಲಿ ಯಾಕೋ ಆಳಕ್ಕಿಳಿದಿರುವಂತೆ ಭಾಸವಾಯಿತು.
*****
ಮೇ ೧೯೮೮

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೈಸೂರ ಮಲ್ಲಿಗೆ
Next post ಕೋರಿಕೆ

ಸಣ್ಣ ಕತೆ

  • ತಾಯಿ-ಬಂಜೆ

    "ಅಯ್ಯೋ! ಅಮ್ಮ!... ನೋವು... ನೋವು... ಸಂಕಟ.... ಅಮ್ಮ!-" ಒಂದೇ ಸಮನಾಗಿ ನರಳಾಟ. ಹೊಟ್ಟೆಯನ್ನು ಕಡೆಗೋಲಿನಿಂದ ಕಡದಂತಾಗುತ್ತಿತ್ತು. ಈ ಕಲಕಾಟದಿಂದ ನರ ನರವೂ ಕಿತ್ತು ಹೋದಂತಾಗಿ ಮೈಕೈಯೆಲ್ಲಾ ನೋವಿನಿಂದ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…