ಕೆಂಪು ಲುಂಗಿ

ಕೆಂಪು ಲುಂಗಿ

ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ… ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ…. ಯಾರಾದರೂ ಬಿದ್ದರೆ, ಕೈಕಾಲು ಮುರಿದುಕೊಂಡರ? ಅಷ್ಟೇ ಅಲ್ಲ ಅವರದೇ ಲೋಕದಲ್ಲಿ ಅವರದೇ ನ್ಯಾಯ ದಂಡದ ಆಧಾರದ ಮೇಲೆ ಅಳು, ನಗು ಶಿಕ್ಷೆ… ಇವೆಲ್ಲಾ ಇದ್ದದ್ದೇ. ಹೀಗಾಗಿ ಬೇಸಿಗೆ ರಜಾ ಬಂದದ್ದರಿಂದ ರಜಿಯಾಗೆ ತಲೆ ನೋವು ಕೂಡ ಹೆಚ್ಚಿತ್ತು. ಹಣೆಯ ಇಕ್ಕೆಲಗಳ ನರಗಳು ಪಟಪಟನೆ ಹೊಡೆದುಕೊಳ್ಳುವಷ್ಟೇ ಅಲ್ಲದ ನೆತ್ತಿ ಬಿಸಿಯಾಗಿ ಸಿಡಿದು ಹೋದಂತಾಗಿದ್ದು, ಕತ್ತಿನ ಹಿಂಭಾಗದ ನರಗಳು ಕಿತ್ತು ಬರುವಷ್ಟು ಜೋರಾಗಿ ಬಡಿದುಕೊಳ್ಳುತ್ತಿದ್ದವು. ಒಬ್ಬರ ಮೇಲೆ ಮತ್ತೊಬ್ಬರ ದೂರು ನಡುವೆ ಅರಚಾಟ, ಅಳು… ಇವುಗಳ ನಡುವೆ ಅವರಾಡುವ ಆಟಗಳೋ…. ಅಬ್ಬಬ್ಬಾ ಕತ್ತಿವರಸೆ, ಮಷಿನ್‌ಗನ್, ಬಾಂಬ್ ಧಾಳಿಗಳು… ‘ಸಾಕಪ್ಪಾ ಸಾಕು..’ ಎಂದು ಅವಳು ತಲೆಗೆ ಬಟ್ಟೆಯನ್ನು ಬಿಗಿದುಕೊಂಡು ಹಾಲ್‌ನಲ್ಲಿದ್ದ ದಿವಾನ್ ಕಾಟ್‌ನ ಮೇಲೆ ಅಡ್ಡಾಗಿದ್ದಳು. ಯಾವುದೇ ಶಬ್ದವನ್ನು ಸಹಿಸುವ ಸ್ಥಿತಿಯಲ್ಲಿರಲಿಲ್ಲ. ಆದರೂ ಟೀವಿಯನ್ನು ಸಣ್ಣಗೆ ಟ್ಯೂನ್ ಮಾಡಿ ಎಲ್ಲಾ ಮಕ್ಕಳಿಗೂ ತೀವ್ರವಾದ ಎಚ್ಚರಿಕೆಯನ್ನಿತ್ತು ಇನ್ನೇನು ಸ್ವಲ್ಪ ಹಾಯಾಗಿರಲು ಕಾಲು ನೀಡಬಹುದು ಎಂದುಕೊಂಡಾಗಲೇ ಒಬ್ಬ ಬೊಬ್ಬೆ ಹೊಡದ ‘ದೊಡ್ಡಮ್ಮಾ… ದೊಡ್ಡಮ್ಮಾ ಇವಳು ನನಗೆ ಚಿವುಟುತ್ತಿದ್ದಾಳೆ’ ಅವಳಿಗೆ ಎಲ್ಲಿಲ್ಲದ ರೋಷವೇರಿತು ಮನಸ್ಸಿನಲ್ಲಿಯೇ ಬಯ್ದು ಕೊಂಡು ಅವಳು ಜಗ್ಗನೆದ್ದಳು.

‘ಹಾಳಾದವು ಇಲ್ಲೇ ಆರಿವೆ. ಇನ್ನು ಒಬ್ಬೊಬ್ಬ ಮೈದುನಂದಿರದ್ದು ಎರಡೆರಡು… ಮೂರು ಮೂರು… ರಜೆಗೆಂದು ವಕ್ಕರಿಸಿವೆ. ಮೇಲಾಗಿ ಇಬ್ಬರು ತಂಗಿಯರ ಮಕ್ಕಳು ಬೇರ, ಏನು ಮಾಡಲಪ್ಪಾ… ದೇವರೇ’ ಎಂದು ಅವಳು ಏಳುವುದಕ್ಕೂ, ಅವಳ ಗಂಡ ಲತೀಫ್ ಅಹಮದ್ ಕಾಲಿಡುವುದಕ್ಕೂ ಸರಿಹೋಯಿತು. ಹೆಂಡತಿಯ ಅವತಾರವನ್ನು ನೋಡುತ್ತಿದ್ದಂತೆಯೇ ಅವನು ಹುಶಾರಾದ; ಅವಳಿಗೆ ಮಕ್ಕಳೆಂದರೆ ಎಂದಿನಿಂದಲೂ ಅಲರ್ಜಿಯೇ. ಅವಳ ತೀವ್ರ ತಲೆನೋವು; ಮೇಲೆ ಈ ಮಕ್ಕಳು ಮಸಾಲೆ ಅರೆಯುತ್ತಿವೆ ಎಂದುಕೊಂಡು ಅಸಾಹಾಯಕತೆಯ ನಡುವೆಯೇ ಕಣ್ಣ ಕೊನೆಯಲ್ಲಿಯೇ ನಿರುಕಿಸುತ್ತಾ ಅವನು ಲೆಕ್ಕಹಾಕಿದ… ಒಂದು, ಎರಡು, ಮೂರು, ನಾಲ್ಕು…. ಒಟ್ಟು ಹದಿನೆಂಟು ಮಕ್ಕಳು.. ಅವೂ ಹನ್ನೆರಡರಿಂದ ಮೂರರ ಒಳಗಿನ ವಯಸ್ಸಿನವು. ಅವಳು ಬಾಯಿ ಬಿಡುವುದಕ್ಕೆ ಮೊದಲೇ ಅವನು ಗದರಿಸಿದ, “ಏಯ್…. ಎಲ್ಲಾ ತೆಪ್ಪಗೆ ಕೂತ್ಕಳ್ಳಿ… ಗಲಾಟೆ ಮಾಡಿದವರಿಗೆ ಏನೂ ಕೊಡೂದಿಲ್ಲ” ಎಂದು ಹೇಳುವಷ್ಟರಲ್ಲಿಯೇ ಅವನ ಹಿಂದೆ ತೋಟದಿಂದ ಬಂದ ಹುಸೇನ್ ಒಂದು ಕುಕ್ಕೆ ಮಾವಿನ ಹಣ್ಣನ್ನಿಟ್ಟ. ಮಕ್ಕಳೆಲ್ಲಾ ಒಕ್ಕೊರಲಿನಿಂದ ಕಿರುಚಾಡಿಕೊಂಡು ಹಣ್ಣಿನ ಬುಟ್ಟೆಯ ಮೇಲೆ ಬಿದ್ದವು ಈಗ ಬೆಚ್ಚುವ ಸರದಿ ಅವನದಾಗಿತ್ತು. ಹೆಂಡತಿಯೆಡೆ ಅಸಹಾಯಕ ನೋಟ ಬೀರಿ ಅವನು ಬಚ್ಚಲು ಮನೆಯತ್ತ ನಡೆದ. ರಜಿಯಾಳಾದರೋ ತಲೆಸಿಡಿತವನ್ನು ತಡೆಯಲಾರದೆ ಕೈಗೆ ಸಿಕ್ಕಿದ ಒಂದಿಬ್ಬರನ್ನು ಹಿಡಿದು ಪಟಪಟನ ಬಾರಿಸಿದಳು. ಹೀಗಾಗಿ ಕೊನೆಗೂ ಗತ್ಯಂತರವಿಲ್ಲದೆ ಅತೀವ ಸಂಕಟದಿಂದ ಪಾರಾಗಲೋಸುಗ ಅವಳು ತೀರ್ಮಾನಿಸಿಯೇ ಬಿಟ್ಟಳು. ಅವರಲ್ಲಿ ಕೆಲವರನ್ನಾದರೂ ಈ ಬೇಸಿಗೆ ಕಳೆಯುವವರೆಗಾದರೂ ಮಲಗಿಸಿಯೇ ಬಿಡಬೇಕು…. ಅದೂ ಕೂಡ ಖತ್ನಮಾಡಿ….

ಅವಳ ಲೆಕ್ಕದ ಪ್ರಕಾರ ಹದಿನೆಂಟರಲ್ಲಿ ಎಂಟುಜನ ಹೆಣ್ಣುಮಕ್ಕಳು; ಹೇಗೋ ಪಾರಾದವು. ಇನ್ನುಳಿದ ಹತ್ತರಲ್ಲಿ ಸಮವಯಸ್ಸಿನವು ಅಂದರೆ…. ನಾಲ್ಕು, ಆರು, ಎಂಟು ಈ ವಯಸ್ಸಿನವು ನಾಲ್ಕು ಜನ…. ಅವೂ ಬದುಕಿಕೊಂಡವು ಪಿಶಾಚಿಗಳು… ಇನ್ನುಳಿದ ಆರು ಜನರ ಖತ್ನ ನಡೆಸುವ ಅವಳ ತೀರ್ಮಾನವನ್ನು ಲತೀಫ್ ಅಹಮದ್ ಕೂಡ ಮರು ಮಾತಿಲ್ಲದೆ ಒಪ್ಪಬೇಕಾಯಿತು.

ಅವರದ್ದು ಆ ತಾಲ್ಲೂಕು ಕೇಂದ್ರಕ್ಕೆ ಶ್ರೀಮಂತವಾದ ಕುಟುಂಬ. ಲತೀಫ್ ಅಹಮದ್‌ನ ನಾಲ್ವರು ತಮ್ಮಂದಿರೂ ಕೂಡ ಸರ್ಕಾರಿ ಕೆಲಸದ ಮೇಲೆ ಬೇರೆ ಬೇರೆ ಊರುಗಳಲ್ಲಿದ್ದರೂ ಕೂಡ ಅವರ ಮನೆಯ ಸಕಲ ಸಮಾರಂಭಗಳು ಅಣ್ಣನ ಮನೆಯಲ್ಲೇ ನಡೆಯಲೇ ಬೇಕು. ರಜಿಯಾ ಕೂಡ ಖರ್ಚಿಗೆ ಅಂಜುವವಳಲ್ಲ. ಅದೆಲ್ಲಾ ತಮ್ಮ ಕರ್ತವ್ಯವೆಂದೇ ಭಾವಿಸಿದ್ದಳು. ಅಷ್ಟೇ ಅಲ್ಲದೆ ಅವಳ ತಂಗಿಯರ ಇಬ್ಬರು ಗಂಡು ಮಕ್ಕಳು ಕೂಡಾ ಈ ಆರರ ಗುಂಪಿನಲ್ಲಿ ಶಾಮೀಲಾಗಿದ್ದುದು ಅವಳಿಗೆ ಖಷಿಯನ್ನು ತಂದಿತ್ತು.

ಅವಳ ಆದೇಶದಂತೆ ಏರ್ಪಾಡೆಲ್ಲಾ ಆರಂಭವಾಯಿತು. ಗಜಗಟ್ಟಲೆ ಕೆಂಪು ಅಲ್ವಾನಿನ ಬಟ್ಟೆ ಬಂದಿತು. ಈಗ ಮಕ್ಕಳು ಕೂಡ ದೊಡ್ಡಮ್ಮನ ಜೊತೆಯಲ್ಲಿ ಕೆಲಸ ಕಾರ್ಯಗಳಲ್ಲಿ ಪಾಲ್ಗೊಳ್ಳಲಾರಂಭಿಸಿದರು… ಕಂಡ ಆಲ್ವಾನನ್ನು ಹರಿದು ಅವಳು ಅಳತೆಗೆ ತಕ್ಕಂತೆ ಒಂದೊಂದು ಲುಂಗಿಯನ್ನು ತಯಾರು ಮಾಡಿದಳು.. . ಹೆಣ್ಣು ಮಕ್ಕಳಿಗೆಲ್ಲಾ ಕೈ ತುಂಬಾ ಕೆಲಸ. ಆ ಲುಂಗಿಗಳಿಗೆ ನಕ್ಕಿ ಹೊಲೆದು ಚಿತ್ತಾರ ಬಿಡಿಸಿ ತಯಾರು ಮಾಡಲು… ಆರು ಜನರ ಲುಂಗಿಗಳಿಗೆ ಒಂದು ಥಾನ್ ಬಟ್ಟೆಯ ಅಗತ್ಯವಿರಲಿಲ್ಲ. ತುಂಬಾ ಬಟ್ಟೆ ಉಳಿದುಹೋಯಿತು. ಇದನ್ನೇನು ಮಾಡುವುದು? ಎಂಬ ಯೋಚನೆ ಅವಳಿಗೆ ಹತ್ತಿಕೊಂಡಾಗಲೇ ಚಕ್ಕನೆ ಉತ್ತರ ಹೊಳೆಯಿತು ‘ಅರೆ! ನಮ್ಮ ಅಡಿಗೆಯ ಫಾತಿಮಾ ಬೀಯ ಮಗ ಆರೀಫ್ ಇದಾನೆ… ತೋಟದಾಳಿನ ಮಗ ಫರೀದ್ ಇದ್ದಾನೆ…. ಇನ್ನೂ ಕೆಲವು ಬಡಮಕ್ಕಳ ಖತ್ನ ಮಾಡಿಸಿ ಬಿಡೋಣ’ ಎಂದು ಕೊಂಡವಳೇ ಯೋಜನೆಯನ್ನು ಕಾರ್ಯಗತಗೊಳಿಸಿಬಿಟ್ಟಳು. ಆ ಪಟ್ಟಣದಲ್ಲಿ ಇದ್ದಂತಹವು ಐದು ಮಸೀದಿಗಳು… ಜಾಮಿಯ ಮಸೀದಿ, ಮಸ್ಜಿದೆ ನೂರ್ ಆದಿಯಾಗಿ ಎಲ್ಲಾ ಮಸೀದಿಗಳಲ್ಲೂ ಶುಕ್ರವಾರದ ನಮಾಜ್ ಮುಗಿದ ನಂತರ ಮೈಕ್ ಹಿಡಿದು ನಿಂತ ಆಯಾ ಮಸೀದಿಗಳ ಸೆಕ್ರಟರಿಗಳು ಈ ಸಂದೇಶವನ್ನು ಬಿತ್ತರಿಸಿದವು. ‘ಲತೀಫ್ ಅಹಮದ್ ಸಾಹೇಬರು ದೇವರ ಪ್ರೀತ್ಯರ್ಥವಾಗಿ ಮುಂದಿನ ಶುಕ್ರವಾರ ಮಧ್ಯಾಹ್ನ ನಮಾಜ್ ಮುಗಿದ ನಂತರ ಸಾಮೂಹಿಕವಾಗಿ ಸುನ್ನತೆ – ಇಬ್ರಾಹಿಂ ಮಾಡಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಅಗತ್ಯವಿರುವವರು ತಮ್ಮ ಮಕ್ಕಳ ಹೆಸರನ್ನು ಮುಂಚಿತವಾಗಿಯೇ ನೊಂದಾಯಿಸಿ ಕೊಳ್ಳತಕ್ಕದ್ದು.’

ಆಡು ಭಾಷೆಯಲ್ಲೇನೋ ಖತ್ನ ಎಂದು ಹೇಳಿ ಬಿಡಬಹುದು. ಆದರೆ ವೇದಿಕೆಯ ಮೇಲಿನಿಂದ ಮೈಕ್ ಮೂಲಕ ಹೇಳುವುದರಲ್ಲಿ ಬಹಳ ಶಿಷ್ಟ ಸಂಭೋಧನೆ ಇರಬೇಕಾದ್ದರಿಂದ ಖತ್ನ ಎಂದು ಉಚ್ಚರಿಸದೆ ಸೆಕ್ರಟರಿಯವರು ಸುನ್ನತೆ ಇಬ್ರಾಹಿಮ್ ಅಥವಾ ಇಬ್ರಾಹಿಮ್ ಪ್ರವಾದಿಯವರ ಆಚರಣೆ ಎಂದು ಸೂಚ್ಯವಾಗಿ ಬಳಸಿದ್ದರು. ಅದರೆ ಎರಡೂ ಒಂದೇ… ಮಕ್ಕಳು ಸಡಗರದಿಂದ ಎದುರು ನೋಡಿ ಬೊಬ್ಬೆ ಹೊಡೆಯುವ ಸಾಮೂಹಿಕ ಪ್ರಕರಣ.

ರಜಿಯಾ ನಿರೀಕ್ಷಿಸಿದಂತಯೇ ಆಯಿತು. ಬಹಳಷ್ಟು ಬಡವರು ತಮ್ಮ ಮಕ್ಕಳನ್ನು ಕರೆತಂದು ಹೆಸರು ಬರೆಸಿ ಹೋದರು. ರಜಿಯಾಳಂತೂ ಲುಂಗಿಗಳ ಮೇಲೆ ಲುಂಗಿಗಳನ್ನು ಹರಿದಳು, ಮನೆಯ ಮಕ್ಕಳ ಕೆಂಪು ಲುಂಗಿಗಳಿಗೆ ಮಾತ್ರ ನಕ್ಕಿ, ಜರಿ ಮೊದಲಾದವು…. ಉಳಿದವರಿಗೆ ಸಾದಾ ಕೆಂಪು ಲುಂಗಿ, ಅದರಲ್ಲೂ ಅವಳ ಮಗ ಸಮದ್‌ನ ಲುಂಗಿಗಂತೂ ಕೆಂಪು ಬಣ್ಣ ಕಾಣದಷ್ಟು ನಕ್ಕಿ ಕೆಲಸ ನಡೆದಿತ್ತು. ಮೂಟೆಗಟ್ಟಲೆ ಗೋಧಿ ಮತ್ತು ಕೊಬರಿ ಗಿಟಕುಗಳು ಬಂದು ಬಿದ್ದವು. ಮನೆಯ ಮಕ್ಕಳಿಗೆಂದು ಹಸುವಿನ ಬೆಣ್ಣೆ, ಬಾದಾಮಿ, ದ್ರಾಕ್ಷಿ, ಉತ್ತುತ್ತೆ, ಮೊದಲಾದವು ಸಂಗ್ರಹಿಸಲ್ಪಟ್ಟಿತು.

ಮಕ್ಕಳಿಗಾದರೋ ವಿಚಿತ್ರ ಉದ್ವೇಗ, ಕಾತುರ, ಎಲ್ಲರಿಗೂ ಖುಷಿ, ಸಂಭ್ರಮಸಡಗರ ನೋಡುವಷ್ಟರಲ್ಲಿಯೇ ಶುಕ್ರವಾರ ಬಂದೇ ಬಿಟ್ಟಿತು. ಮಧ್ಯಾಹ್ನದ ನಮಾಜ್ ಮುಗಿದ ನಂತರ ಲತೀಫ್ ಅಹಮದ್ ಲಗುಬಗನೆ ಊಟ ಮುಗಿಸಿ ಮಸೀದಿಯ ಪಕ್ಕದ ಕಾಂಪೌಂಡಿನಲ್ಲಿ ಹಾಜರಾದರು. ಬೇಕಾದಷ್ಟು ಜನ ಸೇರಿದ್ದರು ಅಲ್ಲಿ. ಮಕ್ಕಳನ್ನು ಕರೆತಂದ ತಂದೆತಾಯಿಗಳು, ಸ್ವತಃ ಖತ್ನಾ ಮಾಡಿಸಿಕೊಳ್ಳುವ ಮಕ್ಕಳು ಸಾಲಿನಲ್ಲಿ ನಿಂತಿದ್ದರು. ಎಲ್ಲಕ್ಕಿಂತಲೂ ಹೆಚ್ಚಾಗಿ ಯುವಕರ ಪಡೆ ಸ್ವಯಂ ಸೇವಕರಾಗಿ ಹಾಜರಿತ್ತು. ಎಲ್ಲರೂ ಬಿಳಿಯ ಪೈಜಾಮ ಜುಬ್ಬಾ ಧರಿಸಿದ್ದು, ಬಿಳಿಯ ಟೋಪಿ ಅಥವ ಕರವಸ್ತ್ರವನ್ನು ತಲೆಗೆ ಬಿಗಿದಿದ್ದರು. ಶುಕ್ರವಾರದಂದು ನಮಾಜ್‌ಗೆಂದು ಸ್ನಾನ ಕೂಡ ಮಾಡಿದ್ದರಿಂದ ಅವರೆಲ್ಲಾ ಶುಭ್ರವಾಗಿಯೇ ಹೊಳೆಯುತ್ತಿದ್ದರು. ಕಣ್ಣಿಗೆ ಸುರ್ಮ ಹಚ್ಚಿ ಧಾರಾಳವಾಗಿ ಸೆಂಟ್ ಬಳಿದಿದ್ದರಿಂದ ವಾತಾವರಣವೆಲ್ಲಾ ಸುವಾಸನೆಯಿಂದ ಕೂಡಿತ್ತು. ಪಕ್ಕದಲ್ಲಿಯೇ ಇದ್ದ ಅರಾಬಿಕ್ ಪಾಠಶಾಲೆ ‘ಮದರಸಾ’ದ ಒಳ ಭಾಗದಲ್ಲಿ ಖತ್ನಗೆ ಬೇಕಾದ ತಯಾರಿಯೆಲ್ಲಾ ನಡೆದಿತ್ತು. ಪೈಲ್ವಾನನಂತಿದ್ದ ಇಬ್ರಾಹಿಮ್ ಆ ದಿನದ ವಿಶೇಷ ವ್ಯಕ್ತಿಯಾಗಿದ್ದ. ಬಿಳಿಯ ಮಲ್‌ನ ತೆಳುವಾದ ಜುಬ್ಬಾದಲ್ಲಿ ಆತನ ತೋಳಿನ ಮಾಂಸಖಂಡಗಳು ಎದ್ದು ಕಾಣುತ್ತಿದ್ದವು. ಖತ್ನ ಮಾಡುವುದು ಆತನ ವಂಶಪಾರಂಪರ್ಯವಾದ ವೃತ್ತಿಯಾಗಿತ್ತು. ಉಳಿದ ವೇಳೆಯಲ್ಲಿ ಆತ ಕ್ಷೌರಿಕ ವೃತ್ತಿಯನ್ನು ಅವಲಂಬಿಸಿದ್ದ. ಆತ ವಿಶಾಲವಾಗಿದ್ದ ಮದ್ರಸಾದ ಹಾಲಿನ ಒಂದು ಮೂಲೆಯಲ್ಲಿ ಅಗತ್ಯವಾದ ಸಿದ್ಧತೆಗೆ ತೊಡಗಿದ್ದ. ಅವನು ತರಾತುರಿಯಲ್ಲಿ ಓಡಾಡುತ್ತ ತಾಮ್ರದ ಬಿಂದಿಗೆಯೊಂದನ್ನು ಬೋರಲಾಗಿ ಇಟ್ಟ, ಖತ್ನಗೆಂದು ತರಿಸಿದ್ದ. ಆ ಬಿಂದಿಗೆಯನ್ನು ರಜಿಯಾ ಅಮಿನಾಗೆ ಹೇಳಿ ಎರಡೆರಡು ಬಾರಿ ಹುಣಸೆ ಹುಳಿ ಹಾಕಿ ಹೊಳೆಯುವಂತೆ ಬೆಳಿಗಿಸಿದ್ದಳು. ಬಿಂದಿಗೆಯ ಮುಂಭಾಗದಲ್ಲಿ ನೆಲದ ಮೇಲೆ ತಟ್ಟೆಯೊಂದನ್ನು ಇಟ್ಟಿದ್ದರು. ಅದರಲ್ಲಿ ಜರಡಿಯಾಡಿಸಿದ ನುಣ್ಣನೆಯ ಬೂದಿ ಯನ್ನಿಡಲಾಗಿತ್ತು.

ಎಲ್ಲಾ ವ್ಯವಸ್ಥೆಯನ್ನು ಒಮ್ಮೆ ಇಬ್ರಾಹಿಮ್ ತೃಪ್ತಿಕರವಾಗಿ ನೋಡಿದ. ಅವನದು ಈ ವಿಷಯದಲ್ಲಿ ತುಂಬಾ ಪಳಗಿದ ಕೈ. ಒಮ್ಮೆ ಅವನು ಕತ್ತಿ ಆಡಿಸಿದರಾಯಿತು, ಸರಿಯಾದಂತಹ ಖತ್ನ ಆಗಿ ಕೀವು ಕೂಡ ಉಂಟಾಗದೆ ಅವನ ಕೈ ಗುಣದಿಂದಲೇ ವಾಸಿಯಾಗುವುದೆಂಬ ಪ್ರತೀತಿ ಆತನದು. ಮದ್ರಸದ ಇನ್ನೊಂದು ಮೂಲೆಯಲ್ಲಿ ಕೆಲ ಯುವಕರು ಸೇರಿಕೊಂಡು ವಿಶಾಲವಾದ ಜಮಖಾನವನ್ನು ಎಳೆದು ಸುಕ್ಕುಗಳಿಲ್ಲದೆ ಬಿಡಿಸುತ್ತಿದ್ದರು. ಎಲ್ಲಾ ವಿದ್ಯಾಮಾನಗಳನ್ನು ಒಮ್ಮೆ ಇಬ್ರಾಹಿಮ್ ನಿರುಕಿಸಿ, ವಿರಾಮವಾಗಿ ಎದ್ದು ನಿಂತು ಜೇಬಿನಿಂದ ಕ್ಷೌರದ ಕತ್ತಿಯನ್ನು ತೆಗೆದು ಒಮ್ಮೆ ಎಡಗೈ ಮೇಲೆ ಆಡಿಸಿ ಕೊಂಡು ‘ಒಬ್ಬೊಬ್ಬರನ್ನಾಗಿ ಕರೆದುಕೊಂಡು ಬನ್ನಿ’ ಎಂದು ಆದೇಶ ನೀಡಿದ. ಅವನ ಬಳಿಯಲ್ಲಿಯೇ ನಿಂತಿದ್ದ ಒಬ್ಬ ಸ್ವಯಂಸೇವಕ ಅಬ್ಬಾಸ್ ಅವನ ಎಲ್ಲಾ ಚರ್ಯಗಳನ್ನು ಗಮನಿಸುತ್ತಿದ್ದು, ಆತಂಕದಿಂದ ನೋಡಿದ ಕೂನೆಗೆ ತಡೆಯಲಾರದೆ ಕೇಳಿಯೇಬಿಟ್ಟ.

“ನೀವು ಆ ಕತ್ತಿಯನ್ನು ಕೊಟ್ಟರೆ ಕುದಿಯುವ ನೀರಿನಲ್ಲಿ ಅದ್ದಿ ತರ್ತಿನಿ, ಸ್ವಲ್ಪ ಡೆಟಾಲ್ ಕೂಡ ಹಾಕಬಹುದೂಂತ ಅನ್ಸುತ್ತೆ.” ಎಂದ ಅಬಾಸ್‌ನತ್ತ ಒಮ್ಮೆ ಕಿರುಗಣ್ಣಿನಿಂದ ನೋಡಿ ‘ಓಹೋ! ಇದು ಕಾಲೇಜು ಹತ್ತಿದ ಮೆದುಳು…’ ಎಂದು ತರ್ಕಿಸಿದ ಇಬ್ರಾಹಿಮ್, ಅವನನ್ನು ಕ್ರಿಮಿಯಂತೆ ಕೇವಲವಾಗಿ ನೋಡುತ್ತ, “ಯಾಕೆ…?” ಎಂದು ಕಣಕುವವನಂತೆ ಪ್ರಶ್ನಿಸಿದ. ತಬ್ಬಿಬ್ಬಾದ ಅಬ್ಬಾಸ್ “ಸೆಪ್ಟಿಕ್ ಏನೂ ಆಗದ ಹಾಗೆ…” ಅರ್ಧದಲ್ಲಿಯೇ ಮಾತನ್ನು ತುಂಡರಿಸಿದ. ಇಬ್ರಾಹಿಮ್ ಇನ್ನಷ್ಟು ಕೆಣಕುವವನಂತೆ “ಯಾಕೆ ನಿನಗೆ ಸೆಪ್ಟಿಕ್ ಆಗಿತ್ತ…?” ಎಂದು ಅಮಾಯಕನಂತೆ ಪ್ರಶ್ನಿಸಿದ. ಅಬ್ಬಾಸ್‌ನ ಜೊತೆಯಲ್ಲಿ ನಿಂತಿದ್ದ ಅವನ ಸ್ನೇಹಿತರೆಲ್ಲಾ ‘ಖಿ… ಖಿ…’ ಎಂದು ನಗಲಾರಂಭಿಸಿದರು. ಅಬ್ಬಾಸ್‌ಗೆ ರೇಗಿ ಹೋಯಿತು, “ನೀವೆಲ್ಲಾ ಎಂತಹ ಅನಾಗರಿಕರು” ಎಂದು ಬೈದು ಅವನು ಅಲ್ಲಿಂದ ಪಕ್ಕಕ್ಕೆ ಸರಿದನು. ಇಬ್ರಾಹಿಮ್ ವಿಜಯದ ನಗೆಯನ್ನು ಬೀರುತ್ತ ಮತ್ತೊಮ್ಮೆ ಕೂಗು ಹಾಕಿದ, “ಒಬ್ಬೊಬ್ಬರೇ ಬರಲಿ ಎಲ್ಲರೂ” ಎಂದು.

ಹೊರಗಡೆ ಇದ್ದ ಸ್ವಯಂಸೇವಕರು ನಿಂತಿದ್ದ ಹುಡುಗರಿಗೆ “ಎಲ್ಲರೂ ಚಡ್ಡಿ ಕಳಚಿರೋ” ಎಂದು ಆದೇಶ ನೀಡಿದರು. ಮೊದಲನೆಯದಾಗಿ ನಿಂತಿದ್ದವನೇ ಆರಿಫ್. ಅವನು ಬೆಳೆದಿದ್ದ ಹುಡುಗ ಸುಮಾರು ಹದಿಮೂರು ವರ್ಷವಾಗಿತ್ತವನಿಗೆ. ಸಾಮಾನ್ಯವಾಗಿ ಒಂಭತ್ತು ವರ್ಷದೊಳಗೇ ಬಹುತೇಕ ಹುಡುಗರ ಖತ್ನ ಆಗಿರಬೇಕು. ಆದರೆ ಅಮಿನಾಳ ಕೈಯಲ್ಲಿ ಹಣವಿಲ್ಲದೆ ಇದ್ದುದರಿಂದ ಅವನು ಹಾಗೆಯೇ ಉಳಿದಿದ್ದ. ಅವನು ಪಾಯಿಜಾಮ ಕಳಚಿ ಎರಡೂ ಕೈಯಲ್ಲಿ ಷರ್ಟನ್ನು ಮುಂದೆ ಜಗ್ಗಿಕೊಳ್ಳುತ್ತಿದ್ದುದ್ದನ್ನು ನೋಡಿ ಸುತ್ತಲಿನ ಜನರೆಲ್ಲಾ ನಕ್ಕರು. ಆ ಸಂದರ್ಭದ ನಗುವನ್ನೆಲ್ಲಾ ತನ್ನ ತುಟಿಯೊಳಗೆಯ ಕಷ್ಟಪಟ್ಟು ಅದುಮಿಟ್ಟುಕೊಳ್ಳುತ್ತಿದ್ದ ಯುವಕನೊಬ್ಬ ಮೆಲುವಾಗಿ ಅವನ ಬೆನ್ನ ಮೇಲೆ ಗುದ್ದಿ ಒಳಗೆ ದೂಡಿದ, ಫಕ್ಕನೆ ಅವನನ್ನು ನಾಲ್ಕಾರು ಜನರು ಹಿಡಿದುಕೊಂಡು ತಾಮ್ರದ ಬಿಂದಿಗೆಯ ಮೇಲೆ ಕೂರಿಸಿದರು. ತಬ್ಬಿಬ್ಬಾಯಿತವನಿಗೆ. ಇದೇನಾಗುತ್ತಿದೆ ಎಂದುಕೊಳ್ಳುವಷ್ಟರಲ್ಲಿಯ ಹಿಂದಿನಿಂದ ಸುತ್ತುವರೆದ ಬಲಾಢ ಬಾಹುಗಳು ಅವನ ಬೆನ್ನಿನ ಮೇಲಿನಿಂದ ಹಾದು ತೊಡೆಗಳ ಬಳಿ ಬಂದು ಎರಡೂ ತೊಡೆಗಳನ್ನು ಅಗಲಿಸಿದವು ಅವನು ಭಯಗ್ರಸ್ತನಾಗಿ ಚಿರುವಷ್ಟರಲ್ಲಿ ಒಂದಿಬ್ಬರು ಅವನ ಎಡಬಲ ರಟ್ಟೆಗಳನ್ನು ಬಲವಾಗಿ ಅದುಮಿ ಹಿಡಿದರು. ಅವನ ಗುಂಡಿಗೆ ಬಲವಾಗಿ ಹೊಡೆದುಕೊಳ್ಳುತ್ತಿತ್ತು…. ಅವನು ಹೇಗಾದರೂ ಮಾಡಿ ತಪ್ಪಿಸಿಕೊಂಡು ಓಡಲು ಸನ್ನದ್ದನಾಗುತ್ತಿದ್ದ. ಅವನನ್ನು ಆವರಿಸಿ ಹಿಡಿದುಕೊಂಡಿದ್ದವರು ಅವನಿಗಿಂತ ಚಾಲಾಕಿಗಳಾಗಿದ್ದರು. ಬಲಶಾಲಿಗಳಾಗಿದ್ದರು. ಅವನು ಮಿಸುಕಲೂ ಸಾಧ್ಯವಾಗದಂತೆ ಹಿಡಿದಿದ್ದರು…. ಅವನು ಬಿಡಿಸಿಕೊಳ್ಳಲು ತನ್ನೆಲ್ಲಾ ಬಲವನ್ನು ಪ್ರಯೋಗಿಸಿ ಸಾಧ್ಯವಾಗದೆ ಸೋತು ಗಂಟಲು ಹರಿದುಹೋಗುವಂತೆ ಚೀರಿದ “ಬಿಡ್ರೀ… ನನ್ನ ಬಿಡ್ರೀ… ಅಯ್ಯೋ… ಅಮ್ಮಾ…. ಅಲ್ಲಾ…” ನಾಲ್ಕಾರು ಕೊರಳುಗಳು ಅದಕ್ಕೇ ಕಾದಿದ್ದವಂತೆ ಹೇಳಿದವು. “ಏಯ್… ಹಾಗೆಲ್ಲಾ ಕಿರುಚಬಾರದು… ದೀನ್ ದೀನ್ ಅಂತಾ ಹೇಳು” ಅವನು ಬಿಕ್ಕುತ್ತಾ ಹೇಳಿದ, “ದೀನ್… ದೀನ್… ಅಲ್ಲಾ… ಅಲ್ಲಾ… ಅಮ್ಮಾ… ಅಯ್ಯೋ…”

ಇಷ್ಟೆಲ್ಲಾ ಪ್ರಹಸನ ನಡೆಯುವ ವೇಳೆಗೆ ಇಬ್ರಾಹಿಮ್ ವಿರಾಮವಾಗಿ ಕಾಗದದಷ್ಟು ತಳುವಾದ ಬಿದುರಿನ ತುಂಡನ್ನು ಕ್ಲಿಪ್‌ನಂತೆ ಆರಿಫ್‌ನ ಶಿಶ್ನಕ್ಕೆ ಸಿಲುಕಿಸಿ ಮುಂದೊಗಲು ಮಾತ್ರ ಬಿದಿರಿನ ಕ್ಲಿಪ್‌ನ ಹೊರಗಡೆ ಉಳಿಯುವಂತೆ ಏರ್ಪಡಿಸಿದ್ದ ಒಬ್ಬ ಆರಿಫ್‌ನ ಮುಖವನ್ನು ಪಕ್ಕಕ್ಕೆ ತಿರುಗಿಸಿ, “ಬೋಲ್ ರೇ… ದೀನ್ ಬೋಲ್.. ಹಾಂ ಜಲ್ದಿ… ಜಲ್ದಿ…” ಎಂದು ಅವಸರಿಸಿದ. ದೀನ್ ಎಂದರೆ ನಂಬಿಕೆ, ಧರ್ಮ, ಹೀಗೆಯೇ ಅನೇಕ ಅರ್ಥಗಳು… ಬಾವುದೇ ಆ ಅರ್ಥಗಳನ್ನು ತಿಳಿಯದೇ ಆರಿಫ್ ಗಂಟಲು ಹರಿಯುವಂತೆ ಕಿರುಚಿದ, “ದೀನ್… ದೀನ್…” ಅವನ ನಾಲಿಗೆಯ ದ್ರವ ಆರಿತು, ಬೆನ್ನಿನ ಗುಂಟ ಹರಿಯುತ್ತಿದ್ದ ಬೆವರು ತೊಟ್ಟಿಕ್ಕುತ್ತಿತ್ತು. ಮೈ ಬಿಸಿಯೇರಿ ಭಯದಿಂದ ಅವನ ಕೈಕಾಲೆಲ್ಲಾ ತಣ್ಣಗಾದವು. ಅವನು ಕೂನೆಯ ಬಾರಿ ಎಂಬಂತೆ ಕೈಗಳನ್ನು ಬಿಡಿಸಿಕೊಳ್ಳುವ ವ್ಯರ್ಥ ಪ್ರಯತ್ನ ನಡೆಸಿದ.

“ಯಾಕ್ಲಾ…?” ಎಂದ ಅದುಮಿಕೊಂಡಿದ್ದ ಯುವಕನೊಬ್ಬ… “ಬಿಡ್ರೀ… ಬಿಡ್ರೀ… ನಾನು ಒಂದಕ್ಕೊಬೇಕೂ…” ಎಂದು ಅವ ಗೋಗರೆದ ‘ಹೋಗುವಿಯಂತೆ ತಡೆಯೋ ಮಗನೇ’ ಎಂದು ಅವನನ್ನು ಬಿಡದಂತೆ ಅದುಮಿಕೊಂಡರು. ಅದೇ ವೇಳೆಗೆ ಇಬ್ರಾಹಿಮ್ ಸರಿಯಾಗಿ ಬೆನ್ನ ಹಿಂದೆ ಇಟ್ಟುಕೊಂಡಿದ್ದ ರೇಜರನ್ನು ಆ ಕ್ಲಿಪ್ಪಿನ ಮುಂಭಾಗಕ್ಕೆ ತಂದು ಛಕ್ಕೆಂದು ಸವರಿದ. ಮುಂದೊಗಲು ಹರಿದು ಕೆಳಗಿದ್ದ ಬೂದಿಯ ತಟ್ಟೆಗೆ ಬಿದ್ದಿತು. ರಕ್ತ ಛಿಲ್ಲೆಂದು ಹಾರಿತು. ಇಬ್ರಾಹಿಮ್ ತಟ್ಟೆಯಲ್ಲಿದ್ದ ಬೂದಿಯನ್ನು ಕೈಗೆತ್ತಿಕೊಂಡು ಆ ಗಾಯದ ಮೇಲೆ ಹಗುರವಾಗಿ ಉದುರಿಸಿದ. ತೊಟ್ಟಿಕ್ಕುತ್ತಿದ್ದ ರಕ್ತ ಬೂದಿಯೊಡನೆ ತೊಯ್ಯುತ್ತಾ… ಅದರ ಹರಿವು ಕಡಿಮೆಯಾಗತೊಡಗಿತು. ಆರಿಫ್‌ನ ಮೋರೆ ಬಿಳುಪೇರಿತ್ತು. ಬೆವರಿನಲ್ಲಿ ಅವನು ತೊಯ್ದು ಹೋಗಿದ್ದ. ಬಿಕ್ಕಳಿಕೆ ಇನ್ನೂ ಅವನ ಬಾಯಿಂದ ತಡೆದು ತಡೆದು ಬರುತ್ತಿತ್ತು. ಇಬ್ಬರು ಯುವಕರು ಅವನನ್ನು ಎತ್ತಿಕೊಂಡು ಬಂದು ಅನಾಮತ್ತಾಗಿ ಹಾಲಿನ ತುದಿಗೆ ತಂದು ನೆಲದ ಮೇಲೆ ಮಲಗಿಸಿದರು.

ತಣ್ಣನೆಯ ಗಾರೆ ನೆಲದ ಮೇಲೆ ಮಲಗಿಸಿದ್ದರಿಂದ ಅವನ ಬೆನ್ನಿಗೂ ಪೃಷ್ಟ ಭಾಗಕ್ಕೂ ಒಂದಿಷ್ಟು ತಂಪೆನಿಸತೊಡಗಿತು. ಆದರೂ ಉರಿ ನೋವು…. ನಾಲ್ಕಾರು ಯುವಕರು ಮತ್ತೊಬ್ಬ ಹುಡುಗನನ್ನು ಹಿಡಿದುಕೊಂಡು ಇಬ್ರಾಹಿಮ್ ನತ್ತ ಓಡಿದರು. ಅಬ್ಬಾಸ್ ಅವನತ್ತ ಬರುತ್ತಿದ್ದ. ಅವನು ತನ್ನ ಕೈಯಲ್ಲಿದ್ದ ಲೋಟದಿಂದ ಅವನ ಬಾಯಿಗೆ ನೀರನ್ನು ಹೊಯ್ದು ಬೀಸಣಿಗೆಯಿಂದ ಗಾಳಿ ಹಾಕಲಾರಂಭಿಸಿದ. ಆಗಲೇ ಇನ್ನೊಮ್ಮೆ ಧ್ವನಿ ಮೊಳಗಿತು.

“ದೀನ್… ದೀನ್….” ಆರಿಫ್ ಹೊಟ್ಟೆ ಹಿಡಿದುಕೊಂಡು ನುಲಿಯುತ್ತಿದ್ದಂತೆಯೇ ಮತ್ತೊಬ್ಬನನ್ನು ತಂದು ಮಲಗಿಸಿದರು.

“ದೀನ್… ದೀನ್…” ಮೊಳಗುತ್ತಲೇ ಹೋಯಿತು. ಅಲ್ಲಲ್ಲಿಯೇ ದೇಹಗಳು ನುಲಿಯುತ್ತಲೇ ಇದ್ದವು. ಆರೀಫ್‌ಗೆ ಮಾತ್ರ ಆ ನೋವಿನಲ್ಲೂ ಅದ್ಯಾವ ಮಾಯದಲ್ಲೋ ಕಣ್ಣು ಸೆಳೆಯುವಂತಹ ನಿದ್ರೆ… ಹೀಗೆ ಬಂದು ಹಾಗೆ ಹೊರಟುಹೋಯಿತು. ಇದೇನಾಗುತ್ತಿದೆ ಎನ್ನುವಷ್ಟರಲ್ಲಿಯೇ ಅವನಿಗೆ ಎಚ್ಚರವೇ ಆಗಿಬಿಟ್ಟಿತು. ಅಂತಹ ನಿದ್ರೆಯ ಒಂದೆರಡು ಸೆಳಕುಗಳು ಬಂದು ಹೋದನಂತರ ಈಗ ಅವನಿಗೆ ನಿಜವಾಗಿಯೂ ಜೋಂಪು ಹತ್ತಿತ್ತು. ಆಗಲೇ ಅವನನ್ನು ಯಾರೋ ಮೆಲುವಾಗಿ ಅಲುಗಿಸಿದ್ದು, ಇನ್ನೂ ಅವನಿಗೆ ನೋವು ಉರಿ ಇದ್ದೇ ಇತ್ತು. ಆದರೆ ತಡೆಯಲು ಅಸಾಧ್ಯವಾದಷ್ಟೇನೂ ಇರಲಿಲ್ಲ. ಹೀಗಾಗಿ ಅವನು ನಿಧಾನವಾಗಿ ಕಣ್ಣು ಬಿಟ್ಟ. ಎದುರಿಗೆ ನಿಂತಿದ್ದ ಅಬ್ಬಾಸ್ ಕರುಣೆ ತುಂಬಿದ ಕಣ್ಣುಗಳಿಂದ ಅವನನ್ನು ನೋಡುತ್ತ ಕೇಳಿದ. ‘ಆರೀಫ್, ನಡೆಯೋಕಾಗುತ್ತ ನಿನಗೆ…? ಅಲ್ಲಿ ನೋಡು ನಿಮ್ಮ ತಾಯಿ ಬಂದಿದಾರೆ.”

ಅವನು ಮಲಗಿದಂತಯೇ ಕಣ್ಣು ಹೊರಳಿಸಿದ, ಅವನ ತಾಯಿ ಅಲ್ಲಿ ಸೇರಿದ್ದ ಗಂಡಸರ ಎದುರಿಗೆ ಬರಲು ಸಾಧ್ಯವಾಗದೆ, ಮಗನನ್ನು ಈ ಪರಿಸ್ಥಿತಿಯಲ್ಲಿ ಒಂಟಿಯಾಗಿ ಬಿಡಲೂ ಆಗದೆ…. ಅಲಲ್ಲಿ, ಹರಿದಿದ್ದ, ತೂತು ಬಿದ್ದಿದ್ದ ಬುರ್ಖವನ್ನು ಸುತ್ತಿಕೊಂಡು ಬಾಗಿಲಿನ ಹೊರಗೆ ನಿಂತುಕೊಂಡು ತುಸುವೇ ಇಣುಕುತ್ತಿದ್ದಳು. ಬೇರೆಯವರಿಗಂತೂ ಏನೂ ಕಾಣುತ್ತಿರಲಿಲ್ಲ. ಆದರೆ ಆರೀಫ್‌ನ ಕಣ್ಣುಗಳಿಗಂತೂ ಅವನ ತಾಯಿಯ ಹರಿದ ಮಾಸಲು ಬಣ್ಣದ ಬುರ್ಖದ ದರ್ಶನವೇ ನವಚೈತನ್ಯವನ್ನೊದಗಿಸಿತು. ಅವಳನ್ನು ಕಂಡೊಡನೆಯೇ ಏಳಲು ಪ್ರಯತ್ನಿಸಿದ ಆರಿಫ್‌ನ ಸೊಂಟಕ್ಕೆ ಆಸರೆಯನ್ನಿತ್ತು ನಿಲ್ಲಲು ಸಹಾಯ ಮಾಡಿದ ಅಬ್ಬಾಸ್, ಅವನನ್ನು ನಿಧಾನವಾಗಿ ನಡೆಸಿಕೊಂಡು ತಾಯಿಯತ್ತ ಕರೆದುಕೊಂಡು ಬಂದ.

ಆರೀಪ್ ಬಾಗಿಲ ಬಳಿ ಬರುತ್ತಿದ್ದಂತೆಯೇ ಅಲ್ಲಿಯೇ ಒಂದು ಸ್ಟೂಲಿನ ಮೇಲೆ ಕುಳಿತಿದ್ದ ಲತೀಫ್ ಸಾಹೇಬರು ಅವನ ಕೈಗೆ ಒಂದು ಬ್ಯಾಗನ್ನಿತ್ತರು. ಆರೀಫ್ ಆ ನೋವಿನಲ್ಲೂ ಬಾಗಿ ನೋಡಿದ. ಆ ಬ್ಯಾಗಿನ ತುಂಬಾ ಗೋಧಿ, ಎರಡು ಕೊಬರಿ ಗಿಟುಕುಗಳು, ಒಂದು ಪೊಟ್ಟಣ ತುಂಬಾ ಸಕ್ಕರೆ, ಇನ್ನೊಂದು ಪ್ಲಾಸ್ಟಿಕ್ಕಿನಲ್ಲಿ ಬೆಣ್ಣೆ… ಅವನ ನಾಲಿಗೆಯಲ್ಲಿ ನೀರೂರಿತು. ಆಗ ತಾನೆ ಒಳ ಹೋಗುತ್ತಿದ್ದ ಹುಡುಗನೊಬ್ಬ ಹೊಸಿಲಲ್ಲಿಯೇ ಬಿದ್ದು, ಬೋರಾಡಿ ಅಳುತ್ತಿದ್ದ, ಆರೀಫ್ ಇದ್ದುದರಲ್ಲಿಯೇ ನೇರವಾಗಿ ನಿಂತು ಸ್ವಲ್ಪ ಹೀರೋ ಪೋಜನ್ನು ಬೀರುತ್ತ ಆ ಹುಡುಗನನ್ನು ನೋಡಿ ಕೂಗಿದ, “ಏ… ಸುಬಾನ್ ಹೆದರ್‍ಕೋಬೇಡ ಕಣೋ… ದೀನ್…. ಹೇಳೋ… ಏನೂ ಆಗೊಲ್ಲ….” ಈಗಾಗಲೇ ಅವನು ಸ್ವಲ್ಪ ಸಿನಿಯಾರಿಟಿ ಗಳಿಸಿಬಿಟ್ಟಿದ್ದ. ಆರಿಫ್ ಕುಂಟುತ್ತಲೇ ಹೊರಬಂದ. ಫಾತಿಮ ಬೀ ಬಂದವಳೇ ಮೊದಲು ಅವನ ಕೈಯಲ್ಲಿದ್ದ ಬ್ಯಾಗನ್ನು ತೆಗೆದುಕೊಂಡು ಮಗನನ್ನು ಕರೆತಂದು ಹೊರ ಜಗುಲಿಯ ಮೇಲೆ ಕೂರಿಸಿದಳು. ಕಾಲನ್ನು ಅಗಲಗೊಳಿಸುತ್ತ, ಲುಂಗಿಯು ಎಲ್ಲೂ ತಾಗದಂತೆ ಅವನು ಎಚ್ಚರಿಕೆಯಿಂದ ಕುಳಿತ. ಸಾಲಿನಲ್ಲಿ ನಿಂತಿದ್ದ ಹುಡುಗನೊಬ್ಬ ಕೂಗಿ ಕೇಳಿದ, ‘ಲೋ… ಆರೀಫ್ ನೋವಾಗುತ್ತೇನೋ…?” ನೋವಿನ ಯಾವ ಗುರುತನ್ನೂ ಮುಖದ ಮೇಲೆ ತೋರಗೊಡದಂತೆ ಎಚ್ಚರಿಕೆಯಿಂದ ಆರೀಫ್ ‘ಇಲ್ಲ… ಕಣೋ… ಒಂಚೂರು ನೋವಾಗೋಲ್ಲ…” ಎಂದ.

ಅವನ ಬಳಿಯಲ್ಲಿಯೇ ನಿಂತಿದ್ದ ಗಡ್ಡಧಾರಿ ಮಧ್ಯವಯಸ್ಕನೊಬ್ಬ ‘ಶಭಾಷ್… ಶಭಾಷ್… ಬೇಟೇ… ತಗೋ ನನ್ನ ಕಡೆಯಿಂದಲೂ ಆರೈಕೆ ಮಾಡಿಕೊ…” ಎಂದು ಐವತ್ತು ರೂಪಾಯಿಯ ನೋಟೊಂದನ್ನು ಕೊಟ್ಟ. ಸಾಲಿನಲ್ಲಿ ನಿಂತಿದ್ದ ಹುಡುಗರೆಲ್ಲಾ ಕರುಬುತ್ತ ಅವನತ್ತ ನೋಡಿದರು. ಒಳಗಡೆಯಿಂದ ಬೊಬ್ಬೆ ಕೇಳಿಬಂದಿತು. ‘ದೀನ್…. ದೀನ್…. ಅಯ್ಯೋ… ಅಲ್ಲಾ…’ ಇನ್ನೊಬ್ಬ ಒಳಗೆ ದಬ್ಬಲ್ಪಟ್ಟ!

ಹುಡುಗರೆಲ್ಲಾ ಒಬ್ಬೊಬ್ಬರಾಗಿ ಒಳಗೆ ಹೋಗಿ ಕೆಂಪು ಲುಂಗಿಯನ್ನು ಕಟ್ಟಿಕೊಂಡು ಹೊರಬರುತ್ತಲೇ ಇದ್ದರು. ಆಗಲೇ… ಆಕೆ ಅಲ್ಲಿಗೆ ಬಂದದ್ದು. ತುಂಬಾ ಬಡಕಲಾಗಿದ್ದಳು ಆಕೆ, ಕಣ್ಣುಗಳು ಆಳಕ್ಕಿಳಿದಿದ್ದವು, ಸೊಂಟವೇ ಕಂಡು ಬರುತ್ತಿರಲಿಲ್ಲ… ಆದರೂ ಆಶ್ಚರ್ಯಕರವಾಗಿ ಅದರ ಮೇಲೆ ಒಂದು ಕೈಗೂಸನ್ನು ಏರಿಸಿದ್ದಳು. ಜೂಲು ಜೂಲಾಗಿದ್ದ ಹರಿದ ಸೀರೆಯೊಳಗೆ ತೇಪೆ ಹಾಕಿದ್ದ ರವಿಕೆ ಅಡಗಿಕೊಂಡಿತ್ತು. ಅವಳು ಇನ್ನೊಂದು ಕೈಯಲ್ಲಿ ಆರೇಳು ವರ್ಷದ ಹುಡುಗನನ್ನು ಎಳೆದುಕೊಂಡು ಬರುತ್ತಿದ್ದಳು. ಹುಡುಗ ಸಾಕಷ್ಟು ಕೊಸರಾಡುತ್ತಿದ್ದ… ಆದರೆ ಅವಳ ಹಿಡಿತವೂ ಬಲವಾಗಿದ್ದಿತು, ಹುಡುಗ ದಯ ನೀಯವಾಗಿ ಬಿಕ್ಕುತ್ತಿದ್ದ. ಆ ಹೆಂಗಸು ಹರಿದ ಸೀರೆಯ ಸೆರಗನ್ನು ಇನ್ನಷ್ಟು ತಲೆಯ ಮೇಲೆ ಎಳೆಯುವ ವ್ಯರ್ಥ ಪ್ರಯತ್ನದಲ್ಲಿ ಅದನ್ನು ಇನ್ನಷ್ಟು ಹರಿಯುತ್ತ, ತನಗೇ ಕೇಳಿಸದಷ್ಟು ಕೆಳ ದನಿಯಲ್ಲಿ “ಭಯ್ಯ…” ಎಂದಳು. ಯಾರೊಡನೆಯೋ ಮಾತಿನಲ್ಲಿ ಮಗ್ನರಾಗಿದ್ದ ಲತೀಫ್ ಸಾಹೇಬರು ಹಿಂತಿರುಗಿ ನೋಡಿ, ‘ಏನಮ್ಮ…’ ಎಂದರು.

ಹುಡುಗ ಇನ್ನೂ ಹೆಚ್ಚಾಗಿ ಬಿಕ್ಕಳಿಸುತ್ತಿದ್ದ. “ಇವನಿಗೂ ಸುನ್ನತ್ ಮಾಡಿಸಿ ಭಯ್ಯ ….” ಎಂದಳು. ಹುಡುಗ “ಬೇಡ… ಬೇಡ… ನನಗೆ ಬೇಡ.” ಎಂದು ಓಡಲು ಉದ್ಯುಕ್ತನಾದ. ತಾಯಿ ಅವನ ತೋಳನ್ನು ಬಿಗಿಯಾಗಿ ಹಿಡಿದಳು. ಆ ಜಗ್ಗಾಟದಲ್ಲಿ ಅವಳ ತಲೆಯ ಮೇಲಿನ ಸೆರಗು ಜಾರಿತು. ಅವಳ ಬತ್ತಿದ ಹೊಟ್ಟೆ, ಮೇಲಕ್ಕೆದ್ದಿದ್ದ ಕತ್ತಿನ ಮೂಳೆಗಳು, ಗುಳಿಬಿದ್ದ ಕಣ್ಣುಗಳು ತೇಪೆ ಹಾಕಿದ ರವಿಕೆ ಎಲ್ಲವೂ ಒಮ್ಮಗೆ ಅವರ ಕಣ್ಣಗಳಿಗೆ ರಾಚಿದವು. ಅವರು ಅಪ್ರಯತ್ನವಾಗಿ ದೃಷ್ಟಿಯನ್ನು ನೆಲಕ್ಕೆ ಕೀಲಿಸುತ್ತ ಆ ಹುಡುಗನಿಗೆ ಗದರಿದರು, “ಏಯ್ ಸುಮ್ನೆ ನಿಂತ್ಕೊಳೋ. ನೀನೇನು ದೀನ್‌ಗೆ ಸೇರುವುದಿಲ್ಲವ…. ಖತ್ನ ಅಗೋವರ್ಗೆ ನೀನು ಇಸ್ಲಾಮಿಗೆ ಸೇರೋದಿಲ್ಲ… ಹಾಗೆ ಇರ್ತಿಯೇನೋ…” ಹುಡುಗ ಅಳುವಿನ ನಡುವೆಯೇ ಸತ್ಯ ಹೊರಗೆಡವಿದ. “ನನಗೆ ಖತ್ನ ಆಗಿದೆ.”

ತಾಯಿ ಕೂಡಲೇ ಗಾಬರಿಯಿಂದ ನುಡಿದಳು, “ಆದರೆ ಭಯ್ಯ… ಸರಿಯಾಗಿ ಆಗಿಲ್ಲ… ಇನ್ನೊಂದ್ಸಾರಿ ಮಾಡಬಹುದು. “ಲತೀಫ್ ಅಹಮದ್‌ಗೆ ಏನೋ ವಿಷಯ ಹೊಳೆಯದಂತಾದರೂ ಸ್ಪಷ್ಟವಾಗಲಿಲ್ಲ. ತಮ್ಮನ್ನು ಸುತ್ತುವರೆದು ನಿಂತಿದ್ದ ಯುವಕರ ಪೈಕಿ ಒಬ್ಬನಿಗೆ ಹೇಳಿದರು. “ಏಯ್… ಸಮಿ.. ಅವನನ್ನು ಹಿಡ್ಕೊಂಡು ಅವನ ಕಥೆ ಏನಾಗಿದೆ ನೋಡು…” ಈ ಎಲ್ಲಾ ಮನೋರಂಜನೆಗಾಗಿಯೇ ಕಾದಿದ್ದ ಕೀಟಲೆಯ ಹುಡುಗರು ಅವನನ್ನು ಅನಾಮತ್ತಾಗಿ ಮೇಲೆತ್ತಿಕೊಂಡರು. ಒಬ್ಬ ಅವನ ಚಡ್ಡಿಯನ್ನು ಜಾರಿಸಿದ ಯಾವುದೋ ಅಳತೆಯ ಜೀರ್ಣವಾದ ಚಡ್ಡಿ ಒಮ್ಮಲೇ ಕಳಚಿಕೊಂಡಿತು. ಎಲ್ಲರೂ ತುಟಿಗಳಲ್ಲೇ…. ಕಣ್ಣಗಳಲ್ಲೇ ನಗುವನ್ನು ಒತ್ತಿ ಹಿಡಿದು ಕುತೂಹಲದಿಂದ ನೋಡಿದರು.

“ಚೆನ್ನಾಗಿ ಖತ್ನ ಆಗಿದೆ” ಹುಡುಗರೆಲ್ಲಾ ಅದುಮಿಟ್ಟಿದ್ದ ನಗುವನ್ನೆಲ್ಲಾ ಒಮ್ಮೆಲೆ ಹೊರಚೆಲ್ಲಿದರು. ಯಾವನೋ ಕಿಡಿಗೇಡಿಯೊಬ್ಬ ಉರಿದು ಕಾರಿಕೊಂಡ, “ನಿನ್ನ ಗಂಡನನ್ನೂ ಕರೆದುಕೊಂಡು ಬಾರಮ್ಮಾ… ಅವನ್ಗೂ ಮುಂಜಿ ಮಾಡಿ ನಿಂಗೆ ಗೋಧಿ, ಗಿಟಕು ಎಲ್ಲಾ ಕೊಡೋಣ…” ಮತ್ತೊಮ್ಮೆ ನಗೆಯ ಅಲೆ.

ಕೈ ಬಿಟ್ಟೊಡನೆಯೇ ಆ ಹುಡುಗ ಚಡ್ಡಿಯನ್ನೇರಿಸಿಕೊಳ್ಳುತ್ತಾ ಮಾಯವಾದ. ಅವನ ತಾಯಿ ತಲೆಯ ಮೇಲೆ ಜೀರ್ಣವಾದ ಸೆರಗನ್ನಳೆದುಕೊಳ್ಳುತ್ತಾ ಭಾರವಾದ ಹೆಜ್ಜೆಗಳನ್ನಿಡುತ್ತಾ ಹೋದಳು. ಒಬ್ಬ ಅತ್ಯಂತ ಹೀನಾಯ ಭಾವದಿಂದ ಗಂಟಲಲ್ಲಿ ಏನೋ ಸಿಕ್ಕಿಕೊಂಡಂತ ಉಗುಳಿದ, “ಹೂ! ಎಂಥೆಂಥಾ ಜನರಿರುತ್ತಾರೆ ಪ್ರಪಂಚದಲ್ಲಿ… ಯಾವುದಕ್ಕೂ ಹೇಸುವುದಿಲ್ಲ.”

ಆಕ ಹೋದ ಕೆಲ ಹೊತ್ತಿನ ನಂತರ ಲತಿಫ್ ಸಾಹೇಬರಿಗೆ ಯಾಕೋ ದುಗುಡವೆನಿಸತೊಡಗಿತು. ಇಷ್ಟೊಂದು ಬಡತನ, ದೀನತೆ, ಅದರೊಂದಿಗೆ ಅಮಾನವೀಯತೆ ಸಾಧ್ಯವೇ…? ಮತ್ತೆ ಮತ್ತೆ ಆಕೆ ಕಣ್ಣೆದುರಿಗೆ ಸುಳಿಯ ತೊಡಗಿದಳು. ಛೇ, ಅವಳನ್ನು ಬರಿಗೈಯಲ್ಲಿ ಕಳುಹಿಸಬಾರದಾಗಿತ್ತು… ಅವರಿಗ್ಯಾಕೋ ತೀವ್ರ ಸಂಕಟವೆನಿಸತೊಡಗಿತು. ದೂರ ದೂರದವರೆಗೂ ಕಣ್ಣು ಹಾಯಿಸಿದರು… ಆಕೆ ಬಂದಂತೆಯೇ ಮಾಯವಾಗಿ ಬಿಟ್ಟಿದ್ದಳು.

ಸಾಲು ಮುಂದುವರೆಯುತ್ತಲೇ ಇತ್ತು, ಕೆಂಪು ಲುಂಗಿಗಳು ಹೊರಬರುತ್ತಲೇ ಇದ್ದವು, ಲತೀಫ್ ಅಹಮದ್ ಒಮ್ಮೆ ಅಸಹನೆಯಿಂದ ಗಡಿಯಾರವನ್ನು ನೋಡಿಕೊಂಡರು. ಈಗಾಗಲೇ ಐದು ಘಂಟೆಯಾಗಿದೆ. ಆರು ಗಂಟೆಗೆಲ್ಲಾ ಅವರ ಮನೆಯ ಮಕ್ಕಳಿಗೆ ಖತ್ನ ಮಾಡಲು ಕರೆತರುವಂತೆ ಅಲ್ಲಿನ ಖ್ಯಾತ ಸರ್ಜನ್ ಡಾ| ಪ್ರಕಾಶ್ ಹೇಳಿದ್ದರು. ಇದೀಗ ಆ ಮಕ್ಕಳೆಲ್ಲಾ ಏನು ಮಾಡುತ್ತಿರಬಹುದು? ಆ ದಿನ ಬೆಳಿಗ್ಗೆ ರಝಿಯಾ ಆ ಮಕ್ಕಳಿಗೆಲ್ಲಾ ಎರೆದಿದ್ದಳು… ಸಮದ್‌ಗಂತೂ ವಿಶೇಷ ಆಸ್ಥೆಯಿಂದ. ಅವನು ಅವಳ ಹಿರಿಯ ಮಗ. ಅವಳಾದರೋ ಕಳೆದ ಆರು ವರ್ಷಗಳಿಂದ ಅಂದರೆ ಅವನು ಐದು ವರ್ಷದವನಾಗಿದ್ದಾಗಿನಿಂದಲೂ ಅವಳ ಗಂಡನಿಗೆ ಹೇಳುತ್ತಲೇ ಬಂದಿದ್ದಾಳೆ…. ಮಗನಿಗೆ ಖತ್ನ ಮಾಡಿಸೋಣ… ತುಂಬಾ ಸೊರಗಿ ಹೋಗಿದ್ದಾನೆ… ಅಮೇಲೆ… ಸ್ವಲ್ಪ ಮೈ ತುಂಬಬಹುದು ಆಶಾ ಭಾವನೆ ಆಕೆಯದು. ಆದರೆ ಲತೀಫ್ ಆಹಮದ್ ಅಂತೂ ಯಾಕೋ ಧೈರ್ಯ ಸಾಲದೆ ತಳ್ಳುತ್ತಲೇ ಬಂದಿದ್ದಾರೆ. ಇಂದೇನೋ ಗಳಿಗೆ ಕೂಡಿಬಂದಿದೆ…. ಆದರೂ ಒಳಗೊಳಗೆಯೇ ಅಧೈರ್ಯ.

ಖತ್ನದ ಸಲುವಾಗಿ ಅವಳ ಮೈದುನಂದಿರು ಬಂದಿದ್ದರು. ಅವಳ ತಂಗಿಯರು ಕೂಡ ದೂರದೂರುಗಳಿಂದ ಬಂದಿದ್ದರು. ಮನೆ ತುಂಬಾ ನೆಂಟರಿಷ್ಟರು, ಹೊಸ ಬಟ್ಟೆ ತೊಟ್ಟ ಮಕ್ಕಳು, ಮೆರೆದಾಡುತ್ತಿದ್ದ ಖತ್ನದ ಗಂಡುಗಳು, ಗಂಡಸರು ಮತ್ತು ಯುವಕರೆಲ್ಲಾ ಮಸೀದಿಯಲ್ಲಿ ಸಾಮೂಹಿಕ ಖತ್ನಕ್ಕೆ ಸೇರಿದ್ದಂತೆ ಆ ಪಟ್ಟಣದ ಬಹುತೇಕ ಮಹಿಳೆಯರು ಯುವತಿಯರೂ ಲತೀಫ್ ಅಹಮದ್‌ರವರ ಮನೆಯಲ್ಲಿ ಸೇರಿದ್ದರು.

ಮಧ್ಯಾಹ್ನದ ಊಟದ ನಂತರ, ಶೇರ್‌ವಾನಿ ಅಂದರೆ ನೆಹರು ಕೋಟನ್ನು ತೊಟ್ಟು ಜರಿ ಟೋಪಿಯಿಂದ ಅಲಂಕೃತರಾದ ಗಂಡುಗಳನ್ನು ಸಾಲಾಗಿ ಕೂರಿಸಿದ್ದರು. ಅವರ ಪಾದ ಮುಟ್ಟುವಂತಹ ಹಾರಗಳು ಕೊರಳಲ್ಲಿ ಇಳಿಬಿದ್ದಿದ್ದವು. ಕೈಯಲ್ಲಿ ಹೂವಿನ ಗಜ್ರ, ಆಪ್ತೇಷ್ಟರು ಬಂದರು. ಮಕ್ಕಳನ್ನು ಮುದ್ದಿಕ್ಕಿದರು. ಯಾರೋ ಚಿನ್ನದ ಉಂಗುರಗಳನ್ನು ಅವರ ಬೆರಳಿಗೆ ತೊಡಿಸಿದರೆ, ಮತ್ಯಾರೋ ಚಿನ್ನದ ಸರಗಳನ್ನು ಬಳುವಳಿಯಾಗಿತ್ತರು. ಐನೂರು, ನೂರರ ನೋಟಿಗಂತೂ ಲೆಕ್ಕವೇ ಇರಲಿಲ್ಲ. ಬಂದವರೆಲ್ಲಾ ಆ ಮಕ್ಕಳ ನೆಟಿಗೆ ತೆಗೆದು “ರಸಮ್” ಮಾಡಿದ್ದೂ ಆಯಿತು. ವೀಳ್ಯದೆಲೆ, ಬಾಳೆಹಣ್ಣ, ಕರ್ಜಿಕಾಯಿ ವಿತರಣೆಯಾಯಿತು. ಯಾರಿಗೂ ಯಾರೊಡನೆಯೂ ಮಾತಾಡಲು ಪುರುಸೊತ್ತಿಲ್ಲ… ಗಬಿಡಿ… ಆತಂಕ… ಧಾವಂತ..

…ಲತೀಫ್ ಅಹಮದ್‌ರ ಎದುರಿಗೆ ಅವಳು ಎದ್ದಳು… ನಿಂತೂ ನಿಂತು ಸಾಕಾಗಿ ಅವರು ಒಂದು ಕುರ್ಚಿಯನ್ನು ತಂದು ಹಾಕಿಸಿ ಕುಳಿತುಕೊಂಡು ಸಾಮೂಹಿಕ ಖತ್ನದ ಮೇಲ್ವಿಚಾರಣೆಯನ್ನು ನೋಡುತ್ತಿದ್ದರು. ಆಕಳಿಕೆಯಿಂದ ‘ಆ..’ ಎಂದು ತೆರೆಯುತ್ತಿದ್ದಂತೆಯೇ ಅವಳು ಎದುರಿಗೆ ಕಾಣಿಸಿಕೊಂಡಳು. ತೆಳುವಾಗಿದ್ದಳು… ಆದರೆ ಬತ್ತಿರಲಿಲ್ಲ ಉಬ್ಬಿದ್ದ ಎದೆಯನ್ನು ಹಳೆಯ ಸ್ವೆಟರೊಂದು ಮರೆಮಾಡಿತ್ತು. ತಲೆಗೆ ಹಳೆಯ ಸ್ಕಾರ್ಫೊಂದನ್ನು ಕಟ್ಟಿದ್ದಳು. ಮುಖ ಬಿಳಿಚಿಕೊಂಡಿತ್ತು. ಎರಡೂ ಕೈಯಲ್ಲಿ ಏನನ್ನೋ ಹಿಡಿದು… ಬಟ್ಟೆಯ ಗಂಟೊಂದನ್ನು ಹಿಡಿದು ಎದೆಗವಚಿಕೊಂಡಿದ್ದಳು.

“ಭಯ್ಯಾ! ಇದಕ್ಕೂ ಸುನ್ನತ್ ಮಾಡಿಸಿ…” ಲತೀಫ್ ಅಹಮದ್ ನೋಡಿದರು… ಅದನ್ನು ಬಟ್ಟೆಯಲ್ಲಿ ಸುತ್ತಿದ್ದ ಒಂದು ತಿಂಗಳಿನ ಎಳೆಯ ಬತ್ತಿಯನ್ನು ಆ ತಾಯಿಯನ್ನೊಮ್ಮೆ ದೀರ್ಘವಾಗಿ ನೋಡಿದರು. ಅತ್ತಿತ್ತ ಚದುರಿದ್ದ ಯುವಕರು ಮತ್ತೊಮ್ಮೆ ಬಂದು ತಮ್ಮನ್ನು ಸುತ್ತುವರೆದು, ಆಕೆಯನ್ನು ಕುರಿತು ತಲೆಗೊಂದು ಮಾತನಾಡಬಹುದೆಂದು ಆತಂಕವಾಯಿತು ಅವರಿಗೆ ಮರು ಮಾತಾಡದೆ ಕೂಡಲೇ ಜೇಬಿನಲ್ಲಿ ಕೈ ಹಾಕಿ ನೂರರ ನೋಟೊಂದನ್ನು ಆಕೆಯ ಕೈಗಿತ್ತರು. ಸಮದ್‌ನನ್ನೆತ್ತಿಕೊಂಡು ರಝಿಯಾ ಅವರ ಮುಂದೆ ನಿಂತಂತೆ ಅನ್ನಿಸತೊಡಗಿತು ಅವರಿಗೆ ಆಕೆ ಒಂದು ಕ್ಷಣವೂ ನಿಲ್ಲದೆ, ಹಿಂದೆ ತಿರುಗಿ ಕೂಡ ನೋಡದೆ ಬಿರಬಿರನೆ ನಡೆದು ಹೋದಳು. ಮೊದಲು ಬಂದಾಕೆಗೂ ಸ್ವಲ್ಪ ಹಣ ಕೊಡಬೇಕಾಗಿತ್ತೆಂದು ಅವರಿಗೆ ಈಗ ಅನಿಸತೊಡಗಿತು. ಹಾಗಾದರೆ… ಇನ್ನೊಬ್ಬಳು… ಮತ್ತೊಬ್ಬಳು… ಬರುತ್ತಲೇ ಇರುತ್ತಾಳೆ… ಇದಕ್ಕೆ ಕೊನೆ ಎಲ್ಲಿ…? ಕೊನೆಯವನ ಖತ್ನ ಮುಗಿದು ಎಲ್ಲರನ್ನೂ ಅವರವರ ಮನೆಗೆ ಕಳುಹಿಸಿದ ನಂತರ ಲತೀಫ್ ಅಹಮದ್‌ಗೆ ನಿರಾಳವೆನಿಸತೊಡಗಿತು. ಇನ್ನು ಮನೆಯ ಮಕ್ಕಳ ವ್ಯವಸ್ಥೆಯನ್ನು ನೋಡಬೇಕಿತ್ತು. ಅವರು, ಮನೆಯ ಬಳಿ ಬರುವ ವೇಳೆಗೆ ಎಲ್ಲರೂ ಸರ್ಜನ್ ಬಳಿ ಹೋಗಲು ಸಿದ್ಧರಾಗಿದ್ದರು. ಡಾ|| ಪ್ರಕಾಶ್ ಲತೀಫ್ ಅಹಮದ್‌ಗೆ ಹೇಳಿದ್ದರು.

“ನೀವು ಸಂಜೆ ಆರು ಘಂಟೆಗೆ ಬಂದು ಬಿಡಿ, ಮಕ್ಕಳಿಗೆ ಲೋಕಲ್ ಅನಸ್ತೇಷಿಯಾ ಕೊಟ್ಟು ಹೆಚ್ಚೇನೂ ನೋವಾಗದ ಹಾಗೆ ಆಪರೇಷನ್ ಮಾಡಿಬಿಡೋಣ. ಮಕ್ಕಳು ರಾತ್ರಿ ನಿದ್ರೆ ಮಾಡಿ ಬಿಟ್ಟರೆ ಬೆಳಿಗ್ಗೆ ಫ್ರೆಷ್ ಆಗಿರ್‍ತಾರೆ… ಎಂದು ಹೇಳಿದ್ದರು. ಅದರಂತೆಯೇ ಅವರ ಇಡೀ ಕುಟುಂಬ ಸಂಜೆ ಹೊತ್ತಿಗೆ ಡಾ|| ಪ್ರಕಾಶ್‌ರವರ ನರ್ಸಿಂಗ್ ಹೋಮ್‌ನ ಆಪರೇಷನ್ ಥಿಯೇಟರಿನ ಎದುರಿಗೆ ನೆರೆಯಿತು. ಹೆಚ್ಚೇನೂ ಆತಂಕಗಳಿಲ್ಲದೆ, ಮಕ್ಕಳ ಅಳು, ಗಲಾಟೆಗಳ ನಡುವೆಯೂ ಹೆಚ್ಚಿನ ಆತಂಕವಿಲ್ಲದೆ ಎಲ್ಲರ ಆಪರೇಷನ್ ಮುಗಿಯಿತು.

ಮಕ್ಕಳನ್ನು ಮನೆಗೆ ಕರೆತಂದ ನಂತರ ಮೃದುವಾದ ಹಾಸಿಗೆಗಳ ಮೇಲೆ ಮಲಗಿಸಿ ಫ್ಯಾನ್‌ಗಳನ್ನು ತಿರುಗಿಸಿದ್ದಾಯಿತು. ಆ ಮಕ್ಕಳ ಸುತ್ತಾ ಕೈಗೊಬ್ಬರು ಕಾಲಿಗೊಬ್ಬರು ತಯಾರಾದರು. ಎಲ್ಲೊ ಮಧ್ಯ ಒಮ್ಮೊಮ್ಮೆ ಒಬ್ಬೊಬ್ಬ ಮಗುವು ಯಾವಾಗಲಾದರೊಮ್ಮೆ ನರಳುವುದನ್ನು ಬಿಟ್ಟರೆ ಬೇರೆ ಯಾವ ಗೋಳೂ ಇರಲಿಲ್ಲ. ಹೀಗಾಗಿ ಆ ಮನೆಯಲ್ಲಿ ನಗು ಮಾತುಕತೆ, ಸಂಭ್ರಮಗಳಿಗೆ ಕೊರತೆ ಇರಲಿಲ್ಲ. ಎಂಟು ಗಂಟೆಗೊಮ್ಮೆ ಆ ಮಕ್ಕಳನ್ನು ಎಬ್ಬಿಸಿ ಬಾದಾಮಿ ಅರದು ತಯಾರಿಸಿದ್ದ ಹಾಲನ್ನು ಕುಡಿಸಿ ನೋವು ನಿವಾರಕ ಗುಳಿಗೆಗಳನ್ನು ನುಂಗಿಸಿ ಮಲಗಿಸಲಾಯಿತು. ಮಾರನೆಯ ದಿನ ಬಹುತೇಕ ಎಲ್ಲಾ ಮಕ್ಕಳೂ ಕೂಡ ಚೇತರಿಸಿಕೊಂಡಿದ್ದವು. ಅವುಗಳಿಗೆ ಪೌಷ್ಟಿಕ ಆಹಾರಕ್ಕೇನೂ ಕೊರತೆ ಇರಲಿಲ್ಲ. ಹಾಲು, ತುಪ್ಪ, ಬಾದಾಮಿ, ಉತ್ತುತ್ತೆ… ಇವುಗಳೆಲ್ಲಾ ಅವರು ತಿಂದು ಬಿಸಾಡುವಷ್ಟು ಸಿದ್ಧವಾಗಿದ್ದವು.

ಖತ್ನಾ ನಡೆದ ಐದನೆಯ ದಿನ ಅಂಗಳದಲ್ಲಿ ಗಲಾಟೆಯಾಗುತ್ತಿತ್ತು. ರಝಿಯಾ ಮಹಡಿಯ ಮೆಟ್ಟಿಲುಗಳನ್ನಿಳಿದು ಕೆಳಗೆ ಬಂದು ಅಂಗಳದತ್ತ ಇಣುಕಿ ನೋಡಿದಳು. ಅವಳಿಗೆ ಆಶ್ಚರ್ಯವಾಗಿಹೋಯಿತು. ಅಡಿಗೆಯ ಹೆಂಗಸು ಅಮಿನಾಳ ಮಗ ಆರೀಫ್ ಸೀಬೆ ಮರದ ಮೇಲೆ ಹತ್ತಿ ಹೀಚುಕಾಯಿಗಳನ್ನು, ದೋರ್‌ಗಾಯಿಗಳನ್ನು ಕಿತ್ತು ತಿನ್ನುತ್ತಿದ್ದಾನೆ. ಇಬ್ಬರು ಆಳುಗಳು ಅವನನ್ನು ಕೆಳಗೆ ಬರುವಂತೆ ಬೆದರಿಸಿ ವಾಚಾಮಗೋಚರವಾಗಿ ಬಯ್ಯುತ್ತಿದ್ದಾರೆ. ಅವನ ತಾಯಿ ಕೆಳಗೆ ನಿಂತು ಆಳುಗಳನ್ನು ಬೇಡಿಕೊಳ್ಳುತ್ತಿದ್ದರೆ, ಇನ್ನೊಮ್ಮೆ ಮಗನನ್ನು ಕೆಳಗಿಳಿಯುವಂತೆ ಗೋಗರೆಯುತ್ತಿದ್ದಾಳೆ. ಏನೇ ಆದರೂ ಸ್ವಲ್ಪ ಕೂಡ ಬೆದರದೆ ಸಾಕಷ್ಟು ಸೀಬೆಕಾಯಿಗಳನ್ನು ತಿಂದಾದ ಮೇಲೆ ವಿರಾಮವಾಗಿ ಕೆಳಗಿಳಿದ ಆರೀಫನನ್ನು ಆಳುಗಳು ಹಿಡಿದುಕೊಂಡರು. ರಝಿಯಾ ಹತ್ತಿರ ಬಂದಾಗ ಅವನು ಬಹಳ ಆರಾಮವಾಗಿ ಷರ್ಟಿನ ಜೇಬಿನಲ್ಲಿಟ್ಟಿದ್ದ ಇನ್ನೊಂದು ಸೀಬೆ ಕಾಯಿಯನ್ನು ಕರಕರನೆ ಕಡಿದ. ರಝಿಯಾ ಆಳಿನ ಕೈಯಿಂದ ಅವನನ್ನು ಬಿಡಿಸಿಕೊಂಡು ಆಶ್ಚರ್ಯದಿಂದ ಕೇಳಿದಳು.

“ನಿನ್ನ ಗಾಯ ಮಾಯ್ತೇನೋ…”

“ಹೂಂ… ಹೌದು… ಚಿಕ್ಕಮ್ಮ…” ಎಂದು ಅವನು ಯಾವುದೇ ಹಿಂಜರಿಕ ಇಲ್ಲದೆ, ಸಂಕೋಚಗಳಿಲ್ಲದೆ ಲುಂಗಿಯನ್ನು ಸರಿಸಿದ.

ರಝಿಯಾ ತನ್ನ ಕಣ್ಣನ್ನೇ ನಂಬದಾದಳು. ಅವನ ಗಾಯಕ್ಕೆ ಬ್ಯಾಂಡೇಜ್ ಕೂಡ ಇರಲಿಲ್ಲ. ಗಾಯ ವಾಸಿಯಾಗಿತ್ತು. ಕೀವು ಕೂಡ ಇರಲಿಲ್ಲ. ಗಾಯ ವಾಸಿಯಾಗಿತ್ತು! ಅವಳ ಮಗ ಸಮದ್ ಇನ್ನೂ ಕಾಲನ್ನು ನಿಡಿದಾಗಿಯೂ ಚಾಚುತ್ತಿರಲಿಲ್ಲ. ಅಷ್ಟೊಂದು ಅಂಟಿಬಯಾಟಿಕ್‌ಗಳ ನಡುವೆಯೂ ಗಾಯದಲ್ಲಿ ಕೀವು ತುಂಬಿಕೊಂಡಿತ್ತು. ಆ ದಿನ ಬೆಳಿಗ್ಗೆ ತಾನೇ ಅವನನ್ನು ಸ್ನಾನ ಮಾಡಿಸಬೇಕಾಗಿದ್ದು, ಒಂದು ಹೆಜ್ಜೆಯನ್ನು ಎತ್ತಿಟ್ಟು ಅವನು ನಡೆಯದಿದ್ದುದರಿಂದ ಅವನನ್ನು ಅನಾಮತ್ತಾಗಿ ಎತ್ತಿಕೊಂಡು ಬಂದು ಬಚ್ಚಲು ಮನೆಯ ಸ್ಟೂಲಿನ ಮೇಲೆ ಕೂರಿಸಿ ಆಪರೇಷನ್ನಿನಿಂದ ಆದ ಗಾಯಕ್ಕೆ ನೀರು ತಾಗದಂತೆ ಸ್ಟರಿಲೈಜ್ ಮಾಡಿದ ಒಂದು ಸ್ಟೀಲ್ ಲೋಟವನ್ನು ಅವನ ದೇಹಕ್ಕೆ ಕಿಬ್ಬೊಟ್ಟೆಗೆ ತಾಗುವಂತೆ ಇಟ್ಟು ಬಿಸಿನೀರನ್ನು ಹೋಯ್ದಿದ್ದರು. ಅವನು ಅಷ್ಟಕ್ಕೇ ಸುಸ್ತಾಗಿದ್ದನು. ನಾಜೂಕಾಗಿ ಮೈಯೊರೆಸಿ ಡಾ| ಪ್ರಕಾಶ್ ಕಳುಹಿಸಿದ್ದ ನರ್ಸೊಬ್ಬಳು ಬಂದು ಅವನ ಗಾಯಕ್ಕೆ ಹೊಸದಾಗಿ ಬ್ಯಾಂಡೇಜ್ ಹಾಕಿ ಇಂಜೆಕ್ಷನ್ ಕೊಟ್ಟು ಹೋಗಿದ್ದಳು. ಇಲ್ಲಿ ನೋಡಿದರೆ ಈ ಹುಡುಗ ಮರ ಹತ್ತಿ ಮಂಗನಾಟ ಆಡುತ್ತಿದ್ದಾನೆ. ತಡೆಯಲಾರದೆ ಕೇಳಿಯೇ ಬಿಟ್ಟಳು.

“ನೀನು ಯಾವ ಔಷಧಿ, ಗುಳಿಗೆ ತಗೊಳ್ತಿದೀಯಾ, ಆರೀಫ್…?”

“ನಾನು… ಯಾವ ಔಷಧಿಯನ್ನೂ ತಗೋತಿಲ್ಲ ಚಿಕ್ಕಮ್ಮ… ಅವತ್ತು ರಕ್ತ ಬಂದಾಗ ಅದರ ಮೇಲೆ ಬೂದಿ ಹೊಯ್ದರಲ್ಲ ಅಷ್ಟೇ…”

ನಿಜ ಹೇಳಬೇಕೆಂದರೆ ರಝಿಯಾಗೆ ಆ ಬಡ ಮಕ್ಕಳಿಗೆ ಹೇಗೆ ಖತ್ನ ಮಾಡಿದರೆಂದು ಗೊತ್ತಿರಲಿಲ್ಲ. ಗಾಯದ ಮೇಲೆ ಬೂದಿ ಹೊಯ್ದದ್ದು ಸುದ್ದಿ ಕೇಳಿ ಅವಳಿಗೆ ಈಗ ನಿಜವಾಗಿಯೂ ಆತಂಕವಾಗತೊಡಗಿತು. ಆ ಬಡ ಮಕ್ಕಳಲ್ಲಿ ಯಾರಾದರೂ ಸತ್ತರೆ ಏನಪ್ಪಾ ಗತಿ ಎಂದು ಚಿಂತಿತಳಾಗಿಯೇ ಅವಳು ಒಳ ಬಂದಳು. ಮೇಲಿನ ಕೋಣೆಗಳಲ್ಲಿ ಮಲಗಿದ್ದ ಎಲ್ಲಾ ಮಕ್ಕಳನ್ನು ಒಮ್ಮೆ ನೋಡಿಕೊಂಡು ಮಗನ ಬಳಿ ಬಂದಳು. ಸಮದ್ ಕೂಡ ಮಲಗಿದ್ದ. ಪಕ್ಕದಲ್ಲಿದ್ದ ಟೀಪಾಯಿಯ ಮೇಲೆ ಹಣ್ಣುಗಳು, ನಾಲ್ಕಾರು ಬಗೆಯ ಸಿಹಿ ತಿಂಡಿಗಳು, ಬಿಸ್ಕತ್ತಿನ ಪೊಟ್ಟಣಗಳು ಒಣ ಹಣ್ಣುಗಳು ಧಾರಾಳವಾಗಿ ಬಿದ್ದಿದ್ದವು ಅವಳು ಮೇಲಿನಿಂದ ಬಗ್ಗಿ ಅಂಗಳದತ್ತ ದೃಷ್ಟಿ ಹಾಯಿಸಿದಳು. ಆರಿಫ್ ಇದ್ದರೆ ಅವನನ್ನು ಕರೆದು ಒಂದು ಬಿಸ್ಕತ್ ಪೊಟ್ಟಣವನ್ನಾರೂ ಅವನ ಕೈಗಿಡಬಹುದೆಂದು… ಅವನೆಲ್ಲೂ ಕಾಣಲಿಲ್ಲ. ಅವಳು ಮಗನ ಮೈಮೇಲೆ ತೆಳುವಾದ ಚಾದರವೊಂದನ್ನು ಹೊದಿಸಿ ಕೆಳಗಿಳಿದು ಬಂದು ಅಡುಗೆ ಮನೆಯ ಉಸ್ತುವಾರಿಗೆಂದು ಹೋದಳು.

ಮಧ್ಯಾಹ್ನಕ್ಕೆ ಈ ಖತ್ನಾ ಆದ ಮಕ್ಕಳಿಗಾಗಿ ಕೋಳಿಯ ಸೂಪ್ ತಯಾರಿಸ ಬೇಕಾಗಿತ್ತು. ಮನೆಯಲ್ಲಿದ್ದ ನೆಂಟರಿಗೋಸ್ಕರವಾಗಿ ಪಲಾವ್ ಖುರ್ಮ ತಯಾರಾಗಬೇಕಿತ್ತು. ಅವಳು ಅಡುಗೆ ಮನೆಗೆ ಹೋಗಿ ಹತ್ತು ನಿಮಿಷವೂ ಕಳೆದಿರಲಿಲ್ಲ ಯಾಕೋ ಅವಳಿಗೆ ಆತಂಕವನಿಸತೊಡಗಿತು. ಫಾತಿಮ ಎಷ್ಟೇ ಚಕಚಕನೆ ಕೆಲಸ ಮಾಡುತ್ತಿದ್ದರೂ ತಾನು ನಿಗಾವಹಿಸದಿದ್ದರೆ ಅಂದು ವೇಳೆಗೆ ಸರಿಯಾಗಿ ಅಡುಗೆ ಆಗುವುದಿಲ್ಲವೆಂದೆನಿಸಿದರೂ ಅವಳಿಗೆ ಅಲ್ಲಿ ನಿಲ್ಲಲು ಮನಸ್ಸಾಗಲಿಲ್ಲ. ಚೆನ್ನಾಗಿ ಕ್ಲೀನಾಗಿದೆಯೋ ಇಲ್ಲವೋ ಎಂದು ಕೈಯಲ್ಲಿ ಹಿಡಿದು ಪರೀಕ್ಷಿಸುತ್ತಿದ್ದ ಕೋಳಿಯನ್ನು ಅಲ್ಲಿಯೇ ಬಿಟ್ಟು ಅವಳು ಧಡಧಡನೆ ಮಹಡಿ ಮೆಟ್ಟಿಲುಗಳನ್ನೇರಿದಳು… ಅವಳು ಅಡುಗೆಮನೆಗೆ ಹೋಗುವಾಗ ಸಮದ್ ನಿರಾತಂಕವಾಗಿ ನಿದ್ರೆ ಮಾಡಲೆಂದು ಅವನ ಕೋಣೆಯ ಬಾಗಿಲನ್ನು ಮುಂದಕ್ಕೆಳೆದು ಕೊಂಡು ಬಂದಿದ್ದಳು. ಮೇಲಕ್ಕೆ ಹೋಗಿ ಬಾಗಿಲನ್ನು ದೂಡಿದೊಡನೆಯೇ ಅವಳ ಬಾಯಿಂದ ಹೃದಯವಿದ್ರಾವಕವಾದ ಚೀತ್ಕಾರವೊಂದು ಹೊರಬಿದ್ದಿತು ಅಷ್ಟೇ. ಅವಳ ಕಣ್ಣ ಮುಂದೆ ಕಪ್ಪನೆಯ ತರೆಯೊಂದು ಇಳಿದಂತಾಯಿತು. ಅವಳ ಚೀತ್ಕಾರವನ್ನು ಕೇಳಿ ಕೋಣೆಗಳಿಂದ ಹೊರಬಿದ್ದ ನೆಂಟರಿಷ್ಟರು ಕಂಡದ್ದು ಪ್ರಜ್ಞೆ ತಪ್ಪಿ ಬಿದ್ದ ರಝಿಯಾಳನ್ನು ಮತ್ತು ರಕ್ತಸ್ರಾವವಾಗುತ್ತಿದ್ದ ಸಮದ್‌ನನ್ನು, ಮಂಚದಿಂದಿಳಿದ ಸಮದ್ ತಾಯಿ ಅಲ್ಲಿಲ್ಲದೆ ಇರುವುದನ್ನು ಕಂಡು ಬಾಗಿಲ ಬಳಿ ಬರುವಷ್ಟರಲ್ಲಿಯೇ ತಲೆ ಸುತ್ತಿದಂತಾಗಿ ಬಿದ್ದಿದ್ದ. ತಲೆ ಗೋಡೆಗೆ ಬಡಿದು ತಲೆಯಿಂದ ರಕ್ತ ಹರಿದಿತ್ತು. ಆಪರೇಷನ್ ಆದ ಗಾಯಕ್ಕೂ ಪೆಟ್ಟಾಗಿ ಹಸಿಗಾಯದಿಂದ ನೆತ್ತರು ತೊಟ್ಟಿಕ್ಕುತ್ತಿತ್ತು. ಕೊನೆಗೆ ಅವನನ್ನು ಆಸ್ಪತ್ರೆಗೆ ಸೇರಿಸಿದರು.

ಹನ್ನೊಂದನೆಯ ದಿನ ಲತೀಫ್ ಅಹಮದ್‌ರ ಕುಟುಂಬದ ಮಕ್ಕಳಿಗೆ ಮಂಗಳ ಸ್ನಾನ, ಸಮದ್ ಆ ದಿನವೇ ಆಸ್ಪತ್ರೆಯಿಂದ ಮನೆಗೆ ಮರಳಿದ್ದ. ಸಂಜೆ ಆ ಮನೆಯಲ್ಲಿ ದೊಡ್ಡ ಸಮಾರಂಭ. ಊರಿಗೆಲ್ಲಾ ಔತಣ, ಹತ್ತಾರು ಕುರಿಗಳನ್ನು ಕಡಿದಿದ್ದರು. ಔತಣದ ತಯಾರಿ ಜೋರಾಗಿ ನಡೆದಿತ್ತು. ಮನೆ ಮುಂಭಾಗದಲ್ಲಿ ಮತ್ತು ಮಹಡಿಯ ಮೇಲೆ ಶಾಮಿಯಾನ ಹಾಕಲಾಗಿತ್ತು. ಹಿಂಭಾಗದಲ್ಲಿದ್ದ ಅಂಗಳದಿಂದ ಬಿರ್ಯಾನಿ ಸುವಾಸನೆ ಅಲೆ ಅಲೆಯಾಗಿ ಹರಡಿತ್ತು. ಗೌಜು ಗದ್ದಲವೂ ಸಾಕಷ್ಟಿತ್ತು, ಸಮದ್‌ಗೆ ಇನ್ನೂ ತುಂಬಾ ನಿತ್ರಾಣವಿತ್ತು; ರಝಿಯಾ ಅವನನ್ನು ಒಂದು ಕ್ಷಣವೂ ತನ್ನಿಂದ ದೂರ ಹೋಗಲು ಅವಕಾಶ ನೀಡಿರಲಿಲ್ಲ. ಮಡಿಲಿನಲ್ಲಿ ತಲೆ ಇರಿಸಿಕೊಂಡು ಸಮದ್‌ನನ್ನು ಮಲಗಿಸಿಕೊಂಡು ಮಂಚದ ಮೇಲೆ ಕುಳಿತಿದ್ದಂತೆಯೇ ಎಲ್ಲರನ್ನೂ ಅವಳು ವಿಚಾರಿಸಿಕೊಳ್ಳುತ್ತಿದ್ದಳು.

ಅವಳು ಹಾಗೆ ಕುಳಿತಿದ್ದಂತೆಯೇ ಹಜಾರದ ಮೂಲೆಯಿಂದ ಯಾರೋ ಹಾದು ಹೋದುದನ್ನು ಗಮನಿಸಿ ಅವಳು ಕೂಗಿ ಕರೆದಳು, “ಏಯ್… ಯಾರದು ಬನ್ನಿ ಇಲ್ಲಿ….” ಅವಳ ಕರೆಗೆ ಹೋಗುತ್ತಿದ್ದವ ವಾಪಸ್ಸು ಬಂದು ಹಾಜರಾದ “ನಾನು ಚಿಕ್ಕಮ್ಮ… ನಾನು…” ರಝಿಯಾ ಕಣ್ಣಗಲಿಸಿ ನೋಡಿದಳು… ಆರಿಫ್! ಹರಿದ ಕಾಲರಿನ ಜೀರ್ಣವಾದ ಷರ್ಟನ್ನು ತೊಟ್ಟಿದ್ದರೂ ಮುಖದಲ್ಲಿ ಆರೋಗ್ಯವಂತ ಕಳೆ ಇತ್ತು. ಅದಾಗಲೇ ಅವನು ಕೆಂಪುಲುಂಗಿ ಕಿತ್ತೆಸೆದು ಪ್ಯಾಂಟ್ ಏರಿಸಿದ್ದ.. ಅಂದರೆ ಅವನ ಗಾಯ ಸಂಪೂರ್ಣವಾಗಿ ಗುಣವಾಗಿದೆ ಎಂದರ್ಥ. ಅವಳೊಮ್ಮೆ ಸಮದ್‌ನತ್ತ ತಿರುಗಿ ನೋಡಿದಳು. ಅವಳ ಕಣ್ಣುಗಳು ತುಂಬಿ ಬಂದವು, ತನ್ನಷ್ಟಕ್ಕೆ ತಾನೇ ಗೊಣಗಿಕೊಂಡಳು. ‘ಖಾರ್ ಕು ಖುದಾ ಕ ಯಾರ್, ಗರೀಬ್ ಕು ಪರ್‌ವರ್‌ದಿಗಾರ್’ (ಹಣವಂತರಿಗೆ ಜನರ ಸಹಾಯವಾದರೆ, ಬಡವನಿಗೆ ದೇವರ ನೆರವು)

ಹಾಗೆಯೇ ಅವಳ ದೃಷ್ಟಿ ಅವನ ಪ್ಯಾಂಟಿನತ್ತ ಹರಿಯಿತು. ಜೂಲು ಜೂಲಾದ ಪ್ಯಾಂಟು ಮಂಡಿ ಮೇಲೆ ಹರಿದು ನೇತಾಡುತ್ತಿತ್ತು. ರಝಿಯಾ ಏನನ್ನೂ ನುಡಿಯದೆ ತನ್ನಲ್ಲಿ ತಾನೇ ಮಗ್ನಳಾಗಿರುವುದನ್ನು ಕಂಡು ಆರಿಫ್ ಹೊರಗಡಿ ಇಡಲು ಉದ್ಯುಕ್ತನಾದ. ಅವ ಹಿಂತಿರುಗಿದೊಡನೆಯೇ ಕಂಡದ್ದು ಅವನ ಪ್ಯಾಂಟ್, ಷರ್ಟಿನ ಕೆಳಭಾಗದಿಂದ ಎರಡು ದೊಡ್ಡ ಕಿಂಡಿಗಳು ಕಂಡುಬರುತ್ತಿದ್ದವು. ಅವಳಿಗ್ಯಾಕೋ ಕರುಳಿಗಿರಿದಂತಾಯಿತು.

“ನಿಲ್ಲೋ ಆರೀಫ್” ಎಂದು ಹೇಳಿ ಮೇಲೆದ್ದು ಬೀರುವಿನ ಬಾಗಿಲನ್ನು ತೆರೆದು ನೀಟಾಗಿ ಜೋಡಿಸಿದ್ದ ಸಮದ್‌ನ ಬಟ್ಟೆಗಳತ್ತ ಒಮ್ಮೆ ಕಣ್ಣು ಹಾಯಿಸಿದಳು. ಅವನಿಗೆ ಉಡುಗೊರ ಬಂದಿದ್ದ ಹತ್ತು ಹನ್ನೆರಡು ಜೊತೆ ರೆಡಿಮೇಡ್ ಬಟ್ಟೆಗಳು ಇನ್ನೂ ಡಬ್ಬ ದಿಂದ ಹೊರಬಂದಿರಲಿಲ್ಲ. ಸಮದ್ ಅಳತೆಗಿಂತ ದೊಡ್ಡದಿದ್ದ ಒಂದು ಜೊತೆ ಬಟ್ಟೆಯ ಡಬ್ಬವನ್ನು ಆರಿಫ್‌ನ ಕೈಗಿಡುತ್ತ “ತಗೋ… ಇದನ್ನು… ಈಗ ಹೋಗಿ ಈ ಬಟ್ಟೆಗಳನ್ನು ಹಾಕ್ಕೊಂಡು ಬಾ… ಊಟಕ್ಕೆ ಬರುವಾಗ ಈ ಬಟ್ಟೇಲೆ ಬರೇಕು… ತಿಳಿತಾ…” ಎಂದಳು.

ಆ ಪ್ಯಾಕೆಟ್‌ನ ಮೇಲು ಹೊದಿಕೆಯನ್ನು ಸರಿಸಿದ ಆರಿಫ್‌ನ ಕಣ್ಣುಗಳು ಮಿನುಗ ತೊಡಗಿದವು. ಅವನು ರಝಿಯಾಳನ್ನು ನೋಡಿದ ನೋಟದಲ್ಲಿ ಕೃತಜ್ಞತೆಯನ್ನು ಮೀರಿದ ಆರಾಧನಾ ಭಾವ ಕಂಡುಬರುತ್ತಿತ್ತು. ತನ್ನ ಕೈಯಲ್ಲಿದ್ದ ಟೀಷರ್‍ಟಿನ ಮೇಲೆ ಮೆಲುವಾಗಿ ಕೈಯಾಡಿಸಿದ. ರಝಿಯಾ ಕೂಡ ಮುಗುಳು ನಗೆಯನ್ನು ಬೀರುತ್ತಿದ್ದಳು. ಸಮದ್ ಆಕೆಯ ಮಡಿಲಿನಿಂದ ತುಸುವೇ ಎದ್ದು ಆಕೆಯ ಭುಜಕ್ಕೆ ತಲೆಯಾನಿಸಿಕೊಂಡು ಕುಳಿತ. ಆರೀಫ್ ಅವರಿಬ್ಬರನ್ನೂ ಬಾರಿ ಬಾರಿಗೆ ನೋಡುತ್ತ, ಅವಳು ನೀಡಿದ ಬಟ್ಟೆಗಳನ್ನು ಎದೆಗಾನಿಸಿ… ಕೊಂಡು ಒಂದೊಂದೇ ಹೆಜ್ಜೆಯನ್ನಿಡುತ್ತ ಬಾಗಿಲಿನತ್ತ ಸರಿಯತೊಡಗಿದ….
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪುಲ್‌ಸ್ಟಾಪ್
Next post ಪರಿಣಾಮ

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಸಂಬಂಧ

    ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…