ಧಾರ್ಮಿಕ ಹಿಂಸಾಚಾರಕ್ಕೆ ಕೊನೆ ಎಂದು?

ಧಾರ್ಮಿಕ ಹಿಂಸಾಚಾರಕ್ಕೆ ಕೊನೆ ಎಂದು?

ಕರ್ನಾಟಕದಲ್ಲಿ ನಡೆದ ಚರ್ಚ್ ಮೇಲಿನ ದಾಳಿಯನ್ನು ಬಿ.ಜೆ.ಪಿ. ಸರ್ಕಾರವು ಹೇಳುತ್ತಿರುವಂತೆ ‘ರಾಜಕೀಯ ಪಿತೂರಿ’ ಎಂದು ಹಣೆಪಟ್ಟಿ ಅಂಟಿಸಲು ಸಾಧ್ಯವಿಲ್ಲ. ದಾಳಿಗಳ ನಂತರ ರಾಜಕೀಯ ಪಕ್ಷಗಳ ಪ್ರವೇಶದಿಂದ ಬೇರೆ ಬಣ್ಣ ಬಂದಿರಬಹುದು. ಸಂಸದೀಯ ಪ್ರಜಾಸತ್ತೆಯಲ್ಲಿ ಇದು ಸಹಜ. ಗಲಭೆ ಅಥವಾ ದಾಳಿಗಳು ನಡೆದ ಸ್ಥಳಗಳಿಗೆ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು ಭೇಟಿ ನೀಡುವುದನ್ನು ಸಿನಿಕತನದಿಂದ ನೋಡಬಾರದು. ಒಂದು ವೇಳೆ ಅವರು ಭೇಟಿ ನೀಡದಿದ್ದರೆ ‘ಏನು ಮಾಡುತ್ತಿದ್ದಾರೆ?’ ಎಂದು ರೋಷಾವೇಶದಿಂದ ಪ್ರಶ್ನಿಸುವುದಿಲ್ಲವೆ? ಇತ್ತೀಚೆಗೆ ದೆಹಲಿಯ ನಾನಾ ಕಡೆ ಬಾಂಬ್ ಸ್ಫೋಟವಾದಾಗ, ಅದೇ ದಿನ ಕೇಂದ್ರ ಸರ್ಕಾರದ ಗೃಹಸಚಿವ ಶ್ರೀ ಶಿವರಾಜ ಪಾಟೀಲ್ ಅವರು ಮೂರು ಸಾರಿ ಉಡುಪು ಬದಲಾಯಿಸಿದರೆಂಬ ಅಂಶವು ದೊಡ್ಡ ಸುದ್ದಿಯಾಗಲಿಲ್ಲವೆ? ರಾಜಕೀಯ ನಾಯಕರು ದಾಳಿ ನಡೆದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸುವುದು, ಸಂತ್ರಸ್ತರನ್ನು ಸಂತೈಸುವುದು ಅವರ ಜವಾಬ್ದಾರಿ. ಆದರೆ ಇಂತಹ ಸನ್ನಿವೇಶಕ್ಕೆ ಅನುಚಿತ ಆಯಾಮ ಕೊಟ್ಟು ಮತ್ತಷ್ಟು ದಾಳಿಕೋರತನಕ್ಕೆ ಪ್ರಚೋದನೆ ನೀಡಿದರೆ ಅದು ಬೇಜವಾಬ್ದಾರಿ. ವಿರೋಧ ಪಕ್ಷಗಳಿಗಿಂತ ಆಡಳಿತಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಇಂತಹ ಸನ್ನಿವೇಶಗಳ ನಿರ್ವಹಣೆ ತುಂಬಾ ಸೂಕ್ಷ್ಮವಾದುದು. ಸಂವೇದನಾಶೀಲ ಸರ್ಕಾರವು ಸೂಕ್ಷ್ಮವಾಗಿ ವರ್ತಿಸುತ್ತದೆ. ಆ ಮೂಲಕ ವಿರೋಧಿಗಳನ್ನು ನಿಶ್ಯಸ್ತ್ರೀಕರಣಗೊಳಿಸುತ್ತದೆ. ಆದರೆ ಕರ್ನಾಟಕದ ಬಿ.ಜೆ.ಪಿ. ಸರ್ಕಾರದ ಮಟ್ಟಿಗೆ ದಾಳಿಯ ಆರಂಭದ ದಿನಗಳಲ್ಲಿ ಸೂಕ್ಷ್ಮತೆಯ ಸುಳಿವೇ ಇರಲಿಲ್ಲ. ಎರಡು ತಿಂಗಳ ಹಿಂದೆ ಬೆಂಗಳೂರಲ್ಲಿ ಬಾಂಬ್ ಸ್ಫೋಟ ಆದಾಗ ಮತ್ತು ಈಗ ಚರ್ಚ್ ಮೇಲಿನ ದಾಳಿ ನಡೆದಾಗ – ಸರ್ಕಾರದ ಧುರೀಣರ ಮೊದಲ ಪ್ರತಿಕ್ರಿಯೆ – “ಇದು ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ – ಪಿತೂರಿ’ ಎಂಬ ನುಡಿಸ್ಪೋಟದ ಮೂಲಕ ಬಂತು. ಎರಡೂ ಸಂದರ್ಭಗಳನ್ನು ನೋಡಿದರೆ ಈ ‘ನುಡಿಸ್ಫೋಟ’ವು ಮುತ್ಸದ್ದಿತನದಿಂದ ಕೂಡಿಲ್ಲವೆಂಬುದು ಸ್ಪಷ್ಟ.

ಕೇಂದ್ರ ಸರ್ಕಾರವು ಚರ್ಚ್ ಮೇಲಿನ ದಾಳಿ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎರಡು ಪತ್ರಗಳನ್ನು ಬರೆದದ್ದು ತಪ್ಪೆಂದು ನನಗನ್ನಿಸುವುದಿಲ್ಲ. ಯಾವುದೇ ಜವಾಬ್ದಾರಿಯುತ ಸರ್ಕಾರವು ಮಾಡಬೇಕಾದ ಕೆಲಸವಿದು. ಮಾತಿನಲ್ಲಷ್ಟೇ ತೊಡಗಿದ್ದ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಪತ್ರಗಳು ಬಂದ ನಂತರವೇ ನಿಜವಾದ ದಾಳಿ ನಿಯಂತ್ರಣ ಕ್ರಿಯೆ ಆರಂಭಿಸಿತು. ಅಷ್ಟರಮಟ್ಟಿಗೆ ಕೇಂದ್ರದ ಕ್ರಮ ಪರಿಣಾಮ ಬೀರಿತು. ಆದರೆ ಕೇಂದ್ರ ಸರ್ಕಾರವು ತರಾತುರಿಯಲ್ಲಿ ತಂಡವೊಂದನ್ನು ಕರ್ನಾಟಕಕ್ಕೆ ಕಳಿಸಿದ್ದರಲ್ಲಿ ಪಕ್ಷ ರಾಜಕೀಯ ವಾಸನೆಯಿದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರವು ಸಂಯಮ ತೋರಿಸಬೇಕಾಗಿತ್ತು. ಇಲ್ಲಿ ಕರ್ನಾಟಕದ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರು ಈ ಸಾಂಗ್ಲಿಯಾನ ಮತ್ತು ನ್ಯೂಲೈಫ್ ಸಂಸ್ಥೆಯ ಶ್ರೀ ಸ್ಯಾಮ್ಯುಯಲ್ ಮೇಲೆ ನಿಗಾ ಇಡಲಾಗುವುದೆಂದು ಘೋಷಿಸಿದ್ದು ಸಹ ಸಂಯಮ ದೂರ ನಡವಳಿಕೆ. ಸರ್ಕಾರ ಅಥವಾ ಮುಖ್ಯಮಂತ್ರಿಗಳನ್ನು ಟೀಕಿಸಿದವರ ವಿರುದ್ದವೆಲ್ಲ ವಿಶೇಷ ನಿಗಾ ಇಡಲು ನಾವು ‘ತುರ್ತು ಪರಿಸ್ಥಿತಿ’ಯಲ್ಲಿ ಇಲ್ಲವಲ್ಲ! ಕೆಲವೊಮ್ಮೆ ‘ವಿಶೇಷ ನಿಗಾ’ ಕಾರ್ಯಕ್ರಮಗಳು ಗುಟ್ಟಾಗಿ ನಡೆಯುತ್ತವೆ. ಯಡಿಯೂರಪ್ಪನವರು ತಮ್ಮ ತೀರ್ಮಾನವನ್ನು ಗುಟ್ಟಾಗಿ ಇಡಲಿಲ್ಲ! ಎಚ್ಚರಿಕೆಯ ರೂಪದಲ್ಲಿ ಬಹಿರಂಗಗೊಳಿಸಿದರು. ಇದು ಅವರ ಶೈಲಿ.

ಅದೇನೇ ಇರಲಿ; ಚರ್ಚ್‌ಗಳ ಮೇಲಿನ ದಾಳಿಯಿಂದ ಕರ್ನಾಟಕವು ಕೋಮು ಸಂಘರ್ಷಕ್ಕೆ ಮತ್ತೊಂದು ಮಾದರಿಯಾಗಹೊರಟದ್ದು ವಿಷಾದಕರ ಸಂಗತಿ. ಬಿ.ಜೆ.ಪಿ. ನೇತೃತ್ವದ ಸರ್ಕಾರ ಬಂದ ಮೇಲೆ ಭಜರಂಗದಳದಂತಹ ಸಂಘಟನೆಗಳು ಎಗ್ಗಿಲ್ಲದೆ ಹಿಂಸಾಚಾರಕ್ಕೆ ಮುಂದಾದದ್ದು ಸಾಮಾನ್ಯ ಸಂಗತಿಯಲ್ಲ. ಹಿಂದೂ-ಮುಸ್ಲಿಮರ ನಡುವೆ ನಡೆಯುತ್ತಿದ್ದ ಘರ್ಷಣೆಗಳು ಹಿಂದೂ ಕ್ರೈಸ್ತರ ಘರ್ಷಣೆಗಳಾಗುವಂತೆ ವಿಸ್ತರಿಸಿಕೊಂಡದ್ದು ಈ ವಿದ್ಯಮಾನಗಳಿಂದ ಗೊತ್ತಾದ ವಾಸ್ತವ. ಬಹುಸಂಖ್ಯಾತರೆಂಬ ಅಹಂಕಾರದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಸುವ ಯಾವುದೇ ರೀತಿಯ ದಾಳಿಯನ್ನು ನಾವು ಖಂಡಿಸಲೇಬೇಕು. ಇಂತಹ ದಾಳಿಗಳನ್ನು ತೊಡೆದು ಹಾಕದಿದ್ದರೆ ಅದು ಸಮಾಜ ಮತ್ತು ಸರ್ಕಾರ ಎರಡಕ್ಕೂ ಮರ್‍ಯಾದೆ ತರುವ ವಿಷಯವಾಗುವುದಿಲ್ಲ.

ಹಿಂದೂಗಳು ಕ್ರೈಸ್ತರ ಮೇಲೆ ನಡೆಸುತ್ತಿರುವ ದಾಳಿಯೊಂದೇ ನನ್ನನ್ನು ಕಾಡಿಸುತ್ತಿಲ್ಲ. ಎಲ್ಲ ಧರ್ಮಗಳ ಮೂಲಭೂತವಾದಿಗಳ ಹಿಂಸಾಚಾರ ಕಾಡಿಸುತ್ತಿದೆ. ನನಗನ್ನಿಸುತ್ತಿದೆ : ಯಾವುದೇ ಧರ್ಮದ ಮೂಲಭೂತವಾದಿಗಳು ನಡೆಸುವ ಹಿಂಸಾಚಾರವನ್ನು ನಾವು ನಿಸ್ಸಂದಿಗ್ಧ ಮಾತುಗಳಲ್ಲಿ ವಿರೋಧಿಸಬೇಕು. ನಿಜ, ಬಹುಸಂಖ್ಯಾತರ ಅಹಂಕಾರ ಮತ್ತು ಅಲ್ಪಸಂಖ್ಯಾತರ ಅಸಹಾಯಕತೆಗಳ ನಡುವೆ ವ್ಯತ್ಯಾಸವಿದೆ. ಬಹು ಸಂಖ್ಯಾತರು ತಮ್ಮ ಯಜಮಾನಿಕೆಯನ್ನು ಸ್ಥಾಪಿಸ ಹೊರಟರೆ, ಅಲ್ಪಸಂಖ್ಯಾತರ ಅಸಹಾಯಕತೆಯನ್ನು ಅರಾಜಕತೆಯನ್ನಾಗಿ ರೂಪಾಂತರಿಸಿ ಮೂಲಭೂತವಾದವನ್ನು ಬೆಳೆಸುವ ಶಕ್ತಿಗಳು ಅವರಲ್ಲೇ ಇರುತ್ತವೆ. ಮೂಲಭೂತವಾದವನ್ನು ಹಿಂಸಾಚಾರಕ್ಕೂ ತಿರುಗಿಸುತ್ತವೆ. ಇಂತಹ ಸನ್ನಿವೇಶ ಸೃಷ್ಟಿಗೆ ಬಹುಸಂಖ್ಯೆಯ ಭ್ರಮೆಯಲ್ಲಿ ಬೀಗುವ ಮತಾಂಧರ ಕೊಡುಗೆಯೂ ಸಾಕಷ್ಟಿದೆ. ಈಗ ನೋಡಿ : ನಮ್ಮ ದೇಶದಲ್ಲಿ ಮುಸ್ಲಿಂ ಮೂಲಭೂತವಾದಿಗಳ ಹಿಂಸಾಚಾರ ಹೆಚ್ಚಾದದ್ದು ಯಾವಾಗಿನಿಂದ? ೧೯೯೨ರಲ್ಲಿ ಬಿ.ಜೆ.ಪಿ. ಬೆಂಬಲಿತ ಹಿಂದೂ ಮೂಲಭೂತವಾದಿ ಸಂಘಟನೆಗಳು ಬಾಬರಿ ಮಸೀದಿಯನ್ನು ಧ್ವಂಸ ಗೊಳಿಸಲು ದಾಳಿ ನಡೆಸಿದ ನಂತರದಿಂದ. ಅದಕ್ಕೂ ಹಿಂದೆ ಇದ್ದ ಹಿಂಸಾಚಾರಕ್ಕೂ ಅನಂತರದ ಹಿಂಸಾಚಾರಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಶ್ರೀರಾಮನ ಜನ್ಮಸ್ಥಳವನ್ನು ಬಾಬರಿ ಮಸೀದಿಯಲ್ಲಿ ಕಂಡ ಕುರುಡು ಕಲಿಗಳು ನಮ್ಮ ದೇಶದ ಸಾಮರಸ್ಯ ಧಾರೆಯನ್ನು ಧ್ವಂಸಗೊಳಿಸಿ ಹಿಂದೂ-ಮುಸ್ಲಿಂ ಘರ್ಷಣೆಯನ್ನು ಹೆಚ್ಚಿಸಿದರು. ಆನಂತರದ ದಿನಗಳಲ್ಲಿ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚು ಸಂಘಟಿತರಾಗತೊಡಗಿದರು. ಈ ಮಧ್ಯೆ ಅಮೇರಿಕ ಸರ್ಕಾರದ ಮುಸ್ಲಿಂ ವಿರೋಧಿ ನಿಲುವುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಸ್ಲಿಂ ಮೂಲಭೂತವಾದಿಗಳ ಒಗ್ಗಟ್ಟಿಗೆ ಮತ್ತು ಹಿಂಸಾತ್ಮಕ ಹೋರಾಟಗಳಿಗೆ ಒಂದು ಪ್ರೇರಣೆಯಾದವು. ಹೀಗೆ, ರಾಷ್ಟ್ರೀಯ, ಅಂತರ ರಾಷ್ಟ್ರೀಯ ರಾಜಕೀಯ ಮತ್ತು ಧಾರ್ಮಿಕ ರಾಜಕೀಯಗಳಿಂದ ಮುಸ್ಲಿಂ ಸಮುದಾಯವು ಅಭದ್ರತೆಯಿಂದ ಆಕ್ರೋಶದ ಕಡೆಗೆ ತಿರುಗಿದರೆ, ಅಲ್ಲಿನ ಮೂಲಭೂತವಾದಿಗಳು ಹಿಂಸಾಚಾರವನ್ನು ಹೋರಾಟದ ವಿಧಾನವಾಗಿಸಿಕೊಂಡರು.

ಆದರೆ, ಗಮನಿಸಬೇಕಾದ ಅಂಶವೆಂದರೆ – ಮುಸ್ಲಿಂ ಮೂಲಭೂತವಾದಿಗಳು ಮುಖ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸ್ಫೋಟ ಮಾಡುವ ಹಿಂಸೆಗೆ ಆದ್ಯತೆ ನೀಡಿದರು; ದೇವಾಲಯಗಳನ್ನು ಸ್ಫೋಟಿಸಲಿಲ್ಲ. ಸ್ವಾಮಿ ನಾರಾಯಣ ದೇವಾಲಯದ ಮೇಲೆ ನಡೆಸಿದ ದಾಳಿ ಇದಕ್ಕೆ ಅಪವಾದ. ಉಳಿದಂತೆ ಸರ್ಕಾರಗಳನ್ನು ಅಭದ್ರಗೊಳಿಸುತ್ತೇವೆಂಬ ಭಾವನೆಯಲ್ಲಿ ಬಾಂಬ್ ಸ್ಫೋಟ ನಡೆಸಿ ಅಮಾಯಕರ ಸಾವಿಗೆ ಕಾರಣರಾದರು. ನಿಜವಾದ ಇಸ್ಲಾಂಧರ್ಮ ಇಂತಹ ಹಿಂಸೆಯನ್ನು ಖಂಡಿತ ಒಪ್ಪುವುದಿಲ್ಲ. ಮುಸ್ಲಿಂ ಮೂಲಭೂತವಾದಿಗಳ ಹಿಂಸಾಚಾರವನ್ನು ಖಂಡಿಸಲು ಮುಸ್ಲಿಂ ಬಾಂಧವರು ಇತ್ತೀಚೆಗೆ ರಾಷ್ಟ್ರಮಟ್ಟದ ಒಂದು ಸಮಾವೇಶವನ್ನೇ ನಡೆಸಿದರು.

ಒಂದೆರಡು ಅಪವಾದಗಳನ್ನು ಬಿಟ್ಟರೆ ಮುಸ್ಲಿಂ ಮೂಲಭೂತವಾದಿಗಳು ಸಾರ್ವಜನಿಕ ಸ್ಥಳಗಳ ಬಾಂಬ್ ಸ್ಫೋಟವನ್ನು ಕಾರ್ಯಸೂಚಿಯಾಗಿ ಮಾಡಿಕೊಂಡಿರುವುದರ ಹಿಂದೆ ಅರಾಜಕತೆಯನ್ನು ಸೃಷ್ಟಿಸುವ ರಾಜಕೀಯವೂ ಇರಬಹುದು. ಆದರೆ ಹಿಂದೂ ಮೂಲಭೂತವಾದವು ಅರಾಜಕತೆಯನ್ನು ಸೃಷ್ಟಿಸುವ ರಾಜಕೀಯದ ಬದಲು ‘ಅಧಿಕಾರದ ರಾಜಕೀಯ’ವನ್ನು ಒಳಗೊಂಡಿದೆ ಮತ್ತು ಸಾಮಾನ್ಯ ಹಿಂದೂಗಳ ಹಾದಿ ತಪ್ಪಿಸಿ ದ್ವೇಷವನ್ನೇ ಧಾರ್ಮಿಕಗೊಳಿಸುತಿದೆ. ದೇವರುಗಳ ಜನ್ಮಸ್ಥಾನಗಳನ್ನು ನೆಪ ಮಾಡಿಕೊಂಡು ಮಸೀದಿ ವಿರೋಧಿ ದಾಳಿಗಳನ್ನು ಯೋಜಿಸಿದ ಹಿಂದೂ ಮೂಲಭೂತವಾದ ಈಗ ಚರ್ಚುಗಳ ಕಡೆಗೆ ತಿರುಗಿದೆ. ಗುಜರಾತ್‌ನಲ್ಲಿ ಮುಸ್ಲಿಮರ ವಿರುದ್ದ, ಒರಿಸ್ಸಾದಲ್ಲಿ ಕ್ರಿಶ್ಚಿಯನ್ನರ ವಿರುದ್ಧ ನಡೆಸಿದ ‘ಹಿಂದೂ ಹಿಂಸಾಚಾರ’ವು ಹಿಂದೂ ಧರ್ಮಕ್ಕೆ ಅಪಚಾರ. ಈಗ ಹಿಂದೂ ಮೂಲಭೂತವಾದದ ಒರಿಸ್ಸಾ ಮಾದರಿಯು ಕರ್ನಾಟಕದಲ್ಲಿ ಆರಂಭವಾಗಿದೆ.

ಮಾತೆತ್ತಿದರೆ ಗುಜರಾತ್ ಮಾದರಿಯ ಅಭಿವೃದ್ಧಿ ಮಾಡುವುದಾಗಿ ಹೇಳುವ ಕರ್ನಾಟಕದ ಬಿ.ಜೆ.ಪಿ. ಸರ್ಕಾರವು ಗಮನಿಸಬೇಕಾದ ಕೆಲ ಮುಖ್ಯ ಸಂಗತಿಗಳಿವೆ. ನಿಜ, ಬಂಡವಾಳ ತೊಡಗಿಸುವಿಕೆಯಲ್ಲಿ ಗುಜರಾತ್ ಮೋದಿ ಸರ್ಕಾರ ಸಾಕಷ್ಟು ಯಶಸ್ಸು ಕಂಡಿದೆ. ಆದರೆ ಅದು ಅಭಿವೃದ್ದಿಯ ಒಂದು ಮಾದರಿಯಷ್ಟೆ, ಇದೇ ಮೋದಿ ಸರ್ಕಾರದ ಅವಧಿಯಲ್ಲಿ ಒಂದೇ ಒಂದು ಸರ್ಕಾರಿ ಶಾಲೆ ಮತ್ತು ಕಾಲೇಜು ಪ್ರಾರಂಭವಾಗಿಲ್ಲ. ಎಲ್ಲಾ ಖಾಸಗಿ ದರ್ಬಾರು! ಪರಿಶಿಷ್ಟರು ಮತ್ತು ಹಿಂದುಳಿದ ವರ್ಗಗಳಿಗಾಗಿ ಇರುವ ವಿದ್ಯಾರ್ಥಿ ನಿಲಯಗಳಲ್ಲಿ ಬಹುಪಾಲು ವಾರ್ಡನ್‌ಗಳಿಲ್ಲ. ಈ ವರ್ಗಗಳ ವಿದ್ಯಾರ್ಥಿನಿ ನಿಲಯಗಳಲ್ಲಿ ಲೈಂಗಿಕ ಕಿರುಕುಳ ಕೊಟ್ಟ ೬೪ ಪ್ರಕರಣಗಳು ದಾಖಲಾಗಿವೆ. ಕೆಲವಂತೂ ತುಂಬಾ ಸುದ್ದಿ ಮಾಡಿದ್ದುಂಟು. ಸಣ್ಣ ಕೈಗಾರಿಕೆಗಳ ವಿಷಯಕ್ಕೆ ಬಂದರೆ, ಮೋದಿ ಸರ್ಕಾರದ ಅವಧಿಯಲ್ಲಿ ಸುಮಾರು ಎಂಟು ಸಾವಿರ ಕೈಗಾರಿಕೆಗಳು ಮುಚ್ಚಿವೆ. ಈ ಬಗ್ಗೆ ವಿರೋಧ ಪಕ್ಷಗಳಿಗಿಂತ ಹೆಚ್ಚಾಗಿ ಮಲ್ಲಿಕಾ ಸಾರಾಬಾಯ್ ಒಳಗೊಂಡಂತೆ ಸಾಂಸ್ಕೃತಿಕ ವ್ಯಕ್ತಿಗಳು ಪ್ರತಿಭಟಿಸಿದರು. ರೈತರು ಹೇಗಿದ್ದಾರೆ ಎಂದರೆ – ೨ ಎಚ್.ಪಿ.ಗಿಂತ ಹೆಚ್ಚು ಶಕ್ತಿಯ ಪಂಪ್‌ಸೆಟ್ ಹಾಕಿದ ಅಪರಾಧಕ್ಕೆ ಸಾವಿರಾರು ಜನ ಜೈಲು ಸೇರಿದರು. ಭರತ್‌ ಮೂಲಾ ಎಂಬುವವರು ಎಷ್ಟು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಮಾಹಿತಿ ಕೇಳಿದಾಗ ಮೋದಿ ಸರ್ಕಾರ ಮೀನಾಮೇಷ ಎಣಿಸಿತು. ಕಡೆಗೆ ಭರತ್‌ ಮೂಲಾ ಕೋರ್ಟಿಗೆ ಹೋದರು. ನಾಲ್ಕು ವರ್ಷಗಳಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ರೈತರು ಸತ್ತಿದ್ದಾರೆಂದೂ ಇದರಲ್ಲಿ ಆತ್ಮಹತ್ಯೆಗಳೂ ಸೇರಿವೆಯೆಂದೂ ಮೋದಿ ಸರ್ಕಾರ ನುಣುಚಿಕೊಳ್ಳುವ ಉತ್ತರ ನೀಡಿತು. ಆನಂತರ ಈ ಸಾವುಗಳೆಲ್ಲ ರೈತರ ಆತ್ಮಹತ್ಯೆಯೆಂದು ಪ್ರಚುರವಾಯಿತು. ಇನ್ನು ಹಿಂದೂಗಳನ್ನು ಸುಟ್ಟರೆಂದು ಹೇಳಲಾದ ‘ಗೋದ್ರಾ ರೈಲು ಪ್ರಕರಣ’ದ ಬಗ್ಗೆ ಎರಡು ವರದಿಗಳಿವೆ. ಬ್ಯಾನರ್ಜಿ ವರದಿಯು ಅದೊಂದು ಆಕಸ್ಮಿಕ ಎಂದಿತ್ತು. ಗುಜರಾತ್ ಸರ್ಕಾರ ನೇಮಿಸಿದ ನಾನಾವತಿ ಆಯೋಗ ೨೫-೯-೨೦೦೮ ರಂದು ಮಧ್ಯಂತರ ವರದಿ ನೀಡಿ ‘ಇದು ಷಡ್ಯಂತ್ರದ ಫಲ’ ಎಂದಿತು. ಹಿಂದೂ ಮೂಲಭೂತವಾದಿಗಳು ಮುಸ್ಲಿಮರ ಮೇಲೆ ನಡೆಸಿದ ದೌರ್ಜನ್ಯ ಕುರಿತು, ‘ತೆಹಲ್ಕಾ’ ಪತ್ರಿಕೆ ನಡೆಸಿದ ಆರೋಪಿಗಳ ಸಂದರ್ಶನ ದಿಂದ ಗೊತ್ತಾದ್ದು ಏನೆಂದರೆ – ‘ಈ ಹಿಂಸಾಚಾರ ಸರ್ಕಾರಿ ಕೃಪಾಪೋಷಿತ’. ಒಂದು ವೇಳೆ ಮೋದಿ ಸರ್ಕಾರವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆಯೆಂದು ನಂಬಿದರೂ ಈ ಅಂಶಗಳನ್ನು ಮರೆಯಲಾಗದು. ಇದು ಗುಜರಾತ್ ಮಾದರಿಯ ಮುಖ್ಯಮುಖವೂ ಹೌದು. ಆದ್ದರಿಂದ ಇದು ಕರ್ನಾಟಕಕ್ಕೆ ಆದರ್ಶವಾಗಬೇಕಾಗಿಲ್ಲ.

ಈಗ ಒರಿಸ್ಸಾ ವಿಷಯಕ್ಕೆ ಬರೋಣ. ಗುಜರಾತ್ ರಾಜ್ಯ ಹಿಂದೂ-ಮುಸ್ಲಿಂ ಹಿಂಸಾಚಾರಕ್ಕೆ ಹೆಸರಾದರೆ ಒರಿಸ್ಸಾ ಹಿಂದೂ-ಕ್ರಿಶ್ಚಿಯನ್‌ ಹಿಂಸಾಚಾರಕ್ಕೆ ಪ್ರಸಿದ್ದಿ, ಎರಡೂ ಕಡೆ ‘ಹಿಂದೂ’ ಎನ್ನುವುದು ಸಾಮಾನ್ಯಾಂಶ ಎಂಬುದು ಗಮನಾರ್ಹ. ಒರಿಸ್ಸಾದಲ್ಲಿ ಕೆಲ ವರ್ಷಗಳ ಹಿಂದೆ ಆಸ್ಟ್ರೇಲಿಯಾ ಮೂಲದ ಪಾದ್ರಿಯನ್ನು ಹಿಂದೂ ಮೂಲಭೂತವಾದಿಗಳು ಜೀವಂತ ಸುಟ್ಟರು. ಇತ್ತೀಚೆಗೆ ‘ಹಿಂದೂ ಸ್ವಾಮಿ’ ಲಕ್ಷ್ಮಣಾನಂದರ ಹತ್ಯೆ ಆಯಿತು. ಇದನ್ನು ಕ್ರಿಶ್ಚಿಯನ್ನರು ಮಾಡಿರಲಿಲ್ಲ. ಮಾವೋವಾದಿಗಳು ಮಾಡಿದ್ದರು. ಹಾಗೆಂದು ಅವರೇ ಘೋಷಿಸಿದರು. ಆದರೆ ಹಿಂದೂ ಮೂಲಭೂತವಾದಿಗಳು ಪ್ರತೀಕಾರ ತೀರಿಸಿಕೊಂಡದ್ದು ಕ್ರಿಶ್ಚಿಯನ್ನರ ಮೇಲೆ. ಅದೂ ಒಂದಿಬ್ಬರನ್ನು ಜೀವಂತವಾಗಿ ಸುಡುವ ಮೂಲಕ ಮತ್ತು ಚರ್ಚ್‌ಗಳ ಮೇಲೆ ದಾಳಿ ಮಾಡುವ ಮೂಲಕ.

ಈಗ ಕರ್ನಾಟಕದಲ್ಲಿ ಮೋದಿ ಮಂತ್ರ ಪಠಿಸುವವರೂ ಇದ್ದಾರೆ. ಒರಿಸ್ಸಾದಂತೆ ಜೀವಂತ ಸುಡದಿದ್ದರೂ ಚರ್ಚ್‌ಗಳ ಮೇಲೆ ದಾಳಿ ನಡೆಸುವವರೂ ಇದ್ದಾರೆ. ಈ ದಾಳಿಗೆ ಮುಖ್ಯ ಕಾರಣ – ಮತಾಂತರದ ಆರೋಪ; ಒಂದು ಕಡೆ ಮಾತ್ರ ಹಿಂದೂ ದೇವತೆಗಳ ಅವಹೇಳನದ ಪುಸ್ತಕ ಪ್ರಕಟಣೆಯ ಆರೋಪ. ನಮ್ಮ ಆಧುನಿಕ ಪೂರ್ವ ಸಾಹಿತ್ಯದಲ್ಲೂ ಅನ್ಯ ದೈವಗಳ ಅವಹೇಳನ ಇದೆ. ಇದೇನೂ ಹೊಸದಲ್ಲ. ಆದರೆ ಅದು ಇಂದಿನ ಅವಹೇಳನಕ್ಕೆ ರಿಯಾಯಿತಿಯೂ ಅಲ್ಲ. ಆದ್ದರಿಂದ ಯಾರೇ ಹಾಗೆ ಮಾಡಿದರೂ ಅದು ತಪ್ಪು. ಆದರೆ ಮತಾಂತರದ ಬಗ್ಗೆ ಇದೇ ಮಾತನ್ನು ಹೇಳಲಾಗದು. ಒರಿಸ್ಸಾದಲ್ಲಿ ನಡೆದ ಮತಾಂತರ ಮತ್ತು ಮರು ಮತಾಂತರಗಳ ಸನ್ನಿವೇಶವನ್ನು ಗಮನಿಸಿದರೆ ಸತ್ಯದ ಸಂಕಟಗಳು ಮನವರಿಕೆಯಾಗುತ್ತವೆ. ಒರಿಸ್ಸಾದ ಅನೇಕ ಬುಡಕಟ್ಟು ಹಾಗೂ ಆದಿವಾಸಿ ಜನಾಂಗಗಳ ನಡುವೆ ಕ್ರೈಸ್ತ ಮಿಷಿನರಿಗಳು ಕೆಲಸ ಮಾಡುತ್ತಿವೆ; ಅಲ್ಲಿ ಅನೇಕರು ಕ್ರೈಸ್ತರಾಗಿದ್ದಾರೆ. ಆನಂತರ ಹಿಂದೂ ಸಂಘಟನೆಗಳ ಒತ್ತಾಯಕ್ಕೆ ಮರುಮತಾಂತರವಾದವರೂ ಇದ್ದಾರೆ. ಆದಿವಾಸಿ, ಬುಡಕಟ್ಟು ಜನಾಂಗಗಳನ್ನು ಹಿಂದೂ ಸಮಾಜ ದೂರವಿಟ್ಟಾಗ ಸುಮ್ಮನಿದ್ದ ಈ ಹಿಂದೂ ಸಂಘಟನೆಗಳು ಕ್ರೈಸ್ತರು ಹತ್ತಿರ ಕರೆದುಕೊಂಡಾಗ ‘ಧರ್ಮ ಜಾಗೃತಿ’ಗೆ ತೊಡಗಿದ್ದು ವಿಪರ್ಯಾಸವೇ ಸರಿ. ಯಾವೊಂದು ಸಾಂಸ್ಥಿಕ ಧರ್ಮದ ಅನುಯಾಯಿಗಳೂ ಆಗದೆ ತಮ್ಮದೇ ವಿಶಿಷ್ಟ ಆಚರಣೆ ಮತ್ತು ನಂಬಿಕೆಗಳಲ್ಲಿ ಬಾಳು ಸವೆಸುತ್ತಿದ್ದ ಮತ್ತು ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆಯಿಂದ ನರಳುತ್ತಿದ್ದ ಆದಿವಾಸಿ, ಬುಡಕಟ್ಟು ಜನಾಂಗಗಳ ಸಂಕಷ್ಟಗಳಿಗೆ ಸ್ಪಂದಿಸಿದವರು ಹಿಂದೂಗಳಲ್ಲ, ಕ್ರಿಶ್ಚಿಯನ್ನರು. ಆದ್ದರಿಂದ ಅವರು ಕ್ರೈಸ್ತ ಧರ್ಮದಲ್ಲಿ ನಂಬಿಕೆಯಿಟ್ಟರು. ಇದರಿಂದ ಹಿಂದೂ ಸಂಘಟನೆಗಳು ಸಿಟ್ಟಿಗೆದ್ದವು. ಕ್ರೈಸ್ತರ ವಿರುದ್ಧ ಸಮರ ಸಾರಿದವು. ಕರ್ನಾಟಕಕ್ಕೆ ಇದು ಮಾದರಿಯಾಗಬೇಕೆ?

ಕರ್ನಾಟಕದಲ್ಲಿ ವರ್ಣಾಶ್ರಮಧರ್ಮದ ದೌರ್ಜನ್ಯದಿಂದ ಬೇಸತ್ತವರು ಬೇರೆ ಧರ್ಮಕ್ಕೆ ಸೇರಿದರೆ ಅದು ಅವರ ಹಕ್ಕು; ಅವರ ಸ್ವಾತಂತ್ರ್ಯ. ಅಂತೆಯೇ ಹಿಂದೂ ಧರ್ಮವೂ ಸೇರಿದಂತೆ ಯಾವುದೇ ಧರ್ಮದವರು ತಮ್ಮ ಧರ್ಮದ ಬಗ್ಗೆ ಪ್ರಚಾರ ಮಾಡುವುದು ಸಂವಿಧಾನದ ೨೫ನೇ ವಿಧಿಯ ಪ್ರಕಾರ ಒಂದು ಹಕ್ಕು. ಹಿಂದೂ ವಿರಾಟ್ ಉತ್ಸವಗಳು ನಡೆಯಬಹುದಾದರೆ ಕ್ರೈಸ್ತರ, ಮುಸ್ಲಿಮರ ಪ್ರಚಾರ ಸಮಾವೇಶಗಳು ಯಾಕೆ ನಡೆಯಬಾರದು? ಬಲವಂತದ ಮತಾಂತರ ಬೇಡ ಎನ್ನುವುದು ಸರಿ, ಯಾರಾದರೂ ಒತ್ತಾಯದಿಂದ ಹೊತ್ತುಕೊಂಡು ಹೋಗಿ ಮತಾಂತರಗೊಳಿಸಿದ ದುಂಡಾವರ್ತನೆಯ ಉದಾಹರಣೆ ಇದೆಯೆ? ಪ್ರಚಾರ ಮಾಡುವುದು ಬಲವಂತವೆ ? ಇಷ್ಟಕ್ಕೂ ಮೇಲುಜಾತಿಯವರಾರೂ ಯಾಕೆ ಮತಾಂತರಗೊಳ್ಳುವುದಿಲ್ಲ? ವರ್ಣಾಶ್ರಮ ಧರ್ಮದಿಂದ ದೇವಾಲಯ ಪ್ರವೇಶವನ್ನೂ ಒಳಗೊಂಡಂತೆ ಧಾರ್ಮಿಕ ಸ್ವಾತಂತ್ರ್ಯದಿಂದ ವಂಚಿತರಾದ ವಿವಿಧ ಜನಾಂಗಗಳು ಯಾಕೆ ಬಸವಣ್ಣನವರ ಧಾರ್ಮಿಕ ದಾರಿಗೆ ಬಂದು ಸೇರಿದವು? ಹನ್ನೆರಡನೇ ಶತಮಾನದ ‘ಶಿವ ಸಂಸ್ಕೃತಿ’ ಚಳವಳಿಯು ವರ್ಣಾಶ್ರಮ ವಿರೋಧದ ಫಲವಲ್ಲವೆ ? ತಂತಮ್ಮ ಮೂಲಮತಗಳನ್ನು ತೊರೆದು ಅಥವಾ ಮೀರಿ ಅನೇಕ ಮತದವರು ಮತಾಂತರ ಹೊಂದಿ ಏಕಮತವಾಗಲಿಲ್ಲವೆ ? ಇದೆಲ್ಲ ಯಾಕೆ ಸಂಭವಿಸಿತು ? ಇಂದಿಗೂ ಅದೊಂದು ಅಸಾಧಾರಣ ಆಂದೋಲನವೆಂದೇ ಯಾಕೆ ಕರೆಸಿಕೊಳ್ಳುತ್ತಿದೆ ? ಈ ಪ್ರಶ್ನೆಗಳನ್ನು ಹಿಂದೂ ಧರ್ಮದ ಸಂರಕ್ಷಕರೆಂದು ಕರೆಸಿಕೊಳ್ಳುವ ಧುರೀಣರು ಮತ್ತು ಮಠಾಧೀಶರು ಹಾಕಿಕೊಳ್ಳಬೇಕು. ನಿಜ. ಹನ್ನೆರಡನೇ ಶತಮಾನಕ್ಕೂ ೨೧ನೇ ಶತಮಾನಕ್ಕೂ ಅಂತರವಿದೆ. ಆದರೆ ಅಸ್ಪೃಶ್ಯತೆ, ಅಸಮಾನತೆ ಇನ್ನೂ ಜೀವಂತವಾಗಿವೆ. ಮತಾಂತರದ ವಿರುದ್ಧ ಹೋರಾಟ ನಡೆಸುತ್ತೇವೆಂದು ಕ್ರೈಸ್ತರ ಮೇಲೆ ಕೆಂಡ ಕಾರುವ ಬದಲು ಅಸ್ಪೃಶ್ಯತೆ, ಜಾತಿವ್ಯವಸ್ಥೆ ಮತ್ತು ಎಲ್ಲ ರೀತಿಯ ಅಸಮಾನತೆಯ ವಿರುದ್ಧ ಹಿಂದೂ ಸಂಘಟನೆಗಳು ಕೆಂಡಕಾರಿ ಟೊಂಕ ಕಟ್ಟಿ ನಿಂತರೆ ಮತಾಂತರದ ಅವಾಂತರ ತಾನಾಗಿ ತಣ್ಣಗಾದೀತು. ಆಗಾಗ್ಗೆ ಸ್ವಾಮಿ ವಿವೇಕಾನಂದರ ಹೆಸರನ್ನು ಬಳಸಿಕೊಳ್ಳುವವರು ಅವರ ಈ ಮಾತನ್ನೂ ಮನನ ಮಾಡಿಕೊಳ್ಳಬೇಕು : “ಅನಾಥರ ಹೊಟ್ಟೆಗೆ ಒಂದಿಷ್ಟು ರೊಟ್ಟಿಯನ್ನು ಒದಗಿಸದ, ವಿಧವೆಯರ ಕಣ್ಣೀರನ್ನು ಹೋಗಲಾಡಿಸದ ಧರ್ಮದಲ್ಲಿ ನನಗೆ ನಂಬಿಕೆಯಿಲ್ಲ, ಬಡಬಗ್ಗರಿಗೆ ಮೊದಲು ಅನ್ನ ಕೊಡಿ; ಜಾತಿ ವ್ಯವಸ್ಥೆಯನ್ನು ಸುಡಿ, ಆಮೇಲೆ ಧರ್ಮದ ಮಾತಾಡಿ” – ಇವು ವಿವೇಕಾನಂದರ ನುಡಿಗಳು, ವಿದೇಶದ ಸಮಾವೇಶಗಳಲ್ಲಿ ಹಿಂದೂ ಧರ್ಮದ ಒಳ್ಳೆಯ ಅಂಶಗಳನ್ನು ಹೇಳಿದ ವಿವೇಕಾನಂದರು ನಮ್ಮ ದೇಶದೊಳಗೆ ಹಿಂದೂಧರ್ಮದ ಕೆಡಕುಗಳನ್ನು ಸಾಕಷ್ಟು ಹೇಳಿದರು; ಬರೆದರು. ಇದರಿಂದ ಹಿಂದೂ ಧರ್ಮ ಸಂಘಟಕರು ಕಲಿಯಬೇಕಾದ ಅನೇಕ ಪಾಠಗಳಿವೆ.

ಇದರರ್ಥ ಹಿಂದೂ ಧರ್ಮೇತರರು ಮಾಡುವುದೆಲ್ಲ ಸರಿ ಎಂದು ನಾನು ಹೇಳುವುದಿಲ್ಲ. ಮುಸ್ಲಿಂ ಮೂಲಭೂತವಾದಿಗಳು ಹದ್ದುಮೀರಿ ವರ್ತಿಸುವುದು ಹಿಂಸೆಗಿಳಿಯುವುದು ಯಾವತ್ತೂ ಖಂಡನೀಯವೆ ? ಕ್ರೈಸ್ತ ಧರ್ಮಿಯರು ಮೂಲಭೂತವಾದಿಗಳಾದರೆ ಅದನ್ನೂ ನಾವು ವಿರೋಧಿಸಬೇಕು. ಆದರೆ ಇಂಡಿಯಾದ ಮುಸ್ಲಿಮರೆಲ್ಲ ಬಿನ್ ಲಾಡೆನ್‌ಗಳಾಗಿಲ್ಲ. ಇಲ್ಲಿನ ಕ್ರೈಸ್ತರೆಲ್ಲ ಅಮೇರಿಕದ ಬುಷ್‌ಗಳಾಗಿಲ್ಲ. ಭಾರತದ ಹಿಂದೂಗಳೆಲ್ಲ ಗೋಡ್ಸೆಗಳಾಗಿಲ್ಲ. ಒಂದೊಂದು ಧರ್ಮದಲ್ಲಿರುವ ಕೆಲವೇ ಮಂದಿಯ ಮೂಲಭೂತವಾದಿ ದೌರ್ಜನ್ಯ ಆಯಾ ಧರ್ಮಗಳಿಗೆ ಕೆಟ್ಟ ಹೆಸರು ತರುತ್ತಿದೆ. ಇದನ್ನು ಹಿಂದೂ ಧರ್ಮಪರ ಕಟ್ಟಾವಾದಿಗಳು ಸಹ ಅರ್ಥಮಾಡಿಕೊಳ್ಳಬೇಕು.

ಯಾರಾದರೂ ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯಗಳ ಧಾರ್ಮಿಕ ಹಕ್ಕಿನ ಪರವಾಗಿ ಮಾತನಾಡುವ ಬುದ್ದಿಜೀವಿಗಳನ್ನು ‘ಡೋಂಗಿ ಜಾತ್ಯತೀತ ವಾದಿ’ಗಳೆಂದೂ ಇಂಥವರು ಹಿಂದೂಗಳಿಗೆ ತೊಂದರೆಯಾದಾಗ ಸುಮ್ಮನಿರುತ್ತಾರೆಂದೂ ನಿರಂತರವಾಗಿ ದೂಷಿಸುವ ‘ಬುದ್ದಿಜೀವಿ’ಗಳು ಸ್ವತಃ ತಾವೇ ತಮ್ಮ ನೀತಿಯನ್ನು ಅನುಸರಿಸಲಿಲ್ಲ. ಚರ್ಚ್‌ಗಳ ಮೇಲಿನ ದಾಳಿಯನ್ನು ಖಂಡಿಸಲಿಲ್ಲ. ನಿಜ, ಮುಸ್ಲಿಮರನ್ನೂ ಒಳಗೊಂಡಂತೆ ಯಾವುದೇ ಧರ್ಮದವರು ಹಿಂದೂಗಳ ಮೇಲೆ ದೌರ್ಜನ್ಯ ನಡೆಸಿದರೆ ಖಂಡಿಸಬೇಕು. ಹಾಗೆಂದು ಹಿಂದೂ ಧರ್ಮದವರು ಮಾಡಿದ್ದೆಲ್ಲ ಸರಿಯೆಂದು ಸಮರ್ಥಿಸಲಾಗುವುದಿಲ್ಲ. ಹಿಂದೂ ಧರ್ಮದೊಳಗಿನ ಅಸ್ಪೃಶ್ಯತೆ, ಜಾತಿ ಪದ್ಧತಿಗಳನ್ನು ವಿರೋಧಿಸದೆ ಇರಲಾಗುವುದಿಲ್ಲ. ಇಂಥ ಅಮಾನವೀಯ ಅಂಶಗಳನ್ನು ವಿರೋಧಿಸದಿದ್ದರೆ ನಾವ್ಯಾರೂ ಮನುಷ್ಯರಾಗುವುದಿಲ್ಲ. ಮುಸ್ಲಿಮರಲ್ಲಿರುವ ಜಡ ಮತ್ತು ಜೀವ ವಿರೋಧಿ ಅಂಶಗಳನ್ನು ಸಹ ಅನೇಕ ಪ್ರಗತಿಪರರು ವಿರೋಧಿಸುತ್ತ ಬಂದಿದ್ದಾರೆ. ಸಾರಾ ಅಬೂಬಕರ್, ಬಾನು ಮುಷ್ತಾಕ್‌ರಂತಹ ಲೇಖಕಿಯರು ಇಸ್ಲಾಂ ಧರ್ಮದ ಜಡ ಮೌಲ್ಯಗಳ ವಿರುದ್ಧ ದನಿ ಎತ್ತಿದ್ದಾರೆ. ಪ್ರಗತಿಪರರು ಬಹಿರಂಗವಾಗಿಯೇ ಅವರಿಗೆ ಬೆಂಬಲ ನೀಡಿದ್ದಾರೆ. ಆದ್ದರಿಂದ ಪ್ರಗತಿಪರರು ಹಾಗೂ ಜಾತ್ಯತೀತವಾದಿಗಳು ಹಿಂದೂ ವಿರೋಧಿಗಳೆಂಬ ಮಾತು ಅಸತ್ಯದ ಅಭಿಪ್ರಾಯ. ಉತ್ತಮ ಹಿಂದೂವನ್ನು ಯಾವ ಪ್ರಗತಿಪರರೂ ವಿರೋಧಿಸುವುದಿಲ್ಲ. ವಿರೋಧಿಸಬಾರದು.

ಈಗ ಎಲ್ಲ ಧರ್ಮದವರೂ ಪ್ರಶ್ನೆ ಹಾಕಿಕೊಳ್ಳಬೇಕು. ನಮಗೆ ಗಾಂಧಿ ಮಾದರಿಯ ಹಿಂದೂ ಧರ್ಮ ಬೇಕೊ? ಗೋಡ್ಸೆ ಮಾದರಿಯ ಹಿಂದೂ ಧರ್ಮ ಬೇಕೊ? ಬಿನ್ ಲಾಡೆನ್ ಮಾದರಿಯ ಇಸ್ಲಾಂ ಧರ್ಮ ಬೇಕೊ ಪೈಗಂಬರ್ ಪ್ರಣೀತ ಇಸ್ಲಾಂ ಧರ್ಮ ಬೇಕೊ ? ಬೆನ್ನಿಹಿನ್-ಬುಷ್ ಮಾದರಿಯ ಕ್ರಿಶ್ಚಿಯನ್ನರಾಗಬೇಕೊ? ಮದರ್ ತೆರೇಸಾ ಮಾದರಿಯ ಕ್ರಿಶ್ಚಿಯನ್ನರಾಗಬೇಕೊ? ಗೋಡ್ಸೆ, ಬಿನ್ ಲಾಡೆನ್, ಬೆನ್ನಿಹಿನ್, ಬುಷ್‌ಗಳು ಮಾದರಿಯಾಗುವ ಧರ್ಮ, ಧರ್ಮವೇ ಅಲ್ಲ.

ಇಂದು ಜರೂರಾಗಿ ನಾವು ತೊಡೆದು ಹಾಕಬೇಕಾಗಿರುವುದು – ಧಾರ್ಮಿಕ ಹಿಂಸಾಚಾರ. ಸದ್ಯಕ್ಕೆ ಕ್ರೈಸ್ತರು ಭಾರತದಲ್ಲಂತೂ ಹಿಂಸಾಚಾರಕ್ಕೆ ಇಳಿದಿಲ್ಲ. ಮುಸ್ಲಿಂ ಮೂಲಭೂತವಾದಿಗಳ ಬಾಂಬು ಸ್ಫೋಟಗಳು, ಹಿಂದೂ ಮೂಲಭೂತವಾದಿಗಳ ಚರ್ಚ್ ಮತ್ತು ಮಸೀದಿ ದಾಳಿಗಳು ಯಾವತ್ತೂ ಖಂಡನೀಯ. ಎಲ್ಲರೂ ಎಲ್ಲ ಧರ್ಮಗಳ ಹಿಂಸಾಚಾರವನ್ನು ವಿರೋಧಿಸುವ ಮೂಲಕ ವಿಶ್ವಾಸಾರ್ಹತೆಯನ್ನು ನೆಲೆಗೊಳಿಸಬೇಕಾಗಿದೆ. ಎಲ್ಲ ಧರ್ಮಿಯರ ನಡುವೆ ವಿಶ್ವಾಸವನ್ನು ಬೆಳೆಸಬೇಕಾಗಿದೆ.
*****
(‘ಈ ಭಾನುವಾರ’ – ವಾರಪತ್ರಿಕೆ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೊರಕೆ ಸಾಕು
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೩೫

ಸಣ್ಣ ಕತೆ

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…