ವೈಟ್‌ಫೀಲ್ಡ್

ವೈಟ್‌ಫೀಲ್ಡ್

Whitefield“English men and women in India are, as it were members of one great family, aliens under one sky”
-Maud Diver
`The English Women in India’
(1909)

ಆಟೋರಿಕ್ಷಾ ಮನೆ ಮುಂದೆ ನಿಲ್ಲುತ್ತಿದ್ದಂತೆ ನನಗಾಗಿ ಬಹಳ ಹೊತ್ತಿನಿಂದಲೂ ಕಾದಿರುವಳೆಂಬಂತೆ ಗಾಬರಿ ಮುಖದ ಸೀತ, ನಾನು ಆಟೋದಿಂದಿಳಿಯುವ ಮೊದಲೇ ಹತ್ತಿರಕ್ಕೋಡಿಬಂದು: “ಜೇಕಬ್ ಅಂಕಲ್ ತೀಕೊಂಡ್‌ರಂತೆ. ನೀವು ಬಂದ ತಕ್ಷಣ ಕಳಿಸಿಕೊಡೀಂತ ಚಾರ್ಲ್ಸ್ ಫೋನ್ ಮಾಡಿದ್ದ” ಎಂದಳು ಒಂದೇ ಉಸಿರಿಗೆ! ಆ ಅನಿರೀಕ್ಷಿತ ಸುದ್ಧಿಗೆ ಯಾವ ರೀತಿಯಲ್ಲೂ ಆ ತಕ್ಷಣ ಪ್ರತಿಕ್ರಿಯಿಸಿಲಿಕ್ಕಾಗದುದರ ಜೊತೆಗೆ ಏನು ಮಾಡುವುದೆಂದು ಹೊಳೆಯಲೇ ಇಲ್ಲ. ನಿನ್ನೆ ಸಂಜಿಯಿಂದ ರೈಲು ಪ್ರಯಾಣದಲ್ಲಿ ನಜ್ಜುಗುಜ್ಜಾಗಿದ್ದೆ. ಹೋದರೆ ಮುಖವಾದರು ನೋಡಿಕೊಂಡು ಬಂದು ಬಿಡಬಹುದೆಂದು ಯೋಚಿಸಿ ಲಗೇಜಿದ್ದ ಸೂಟ್‌ಕೇಸ್‌ಗಳನ್ನು ಸೀತಳ ಕೈಗೆ ಕೊಟ್ಟು, ರಾತ್ರಿ ಎಷ್ಟೇ ಹೊತ್ತಾದರು ಹಿಂತಿರುಗುತ್ತೇನೆಂದು ತಿಳಿಸಿ ರಿಕ್ಷಾದವನಿಗೆ ವೈಟ್‌ಫೀಲ್ಡ್ ಕಡೆ ಓಡಿಸುವಂತೆ ಹೇಳಿ ರಿಕ್ಷಾದಲ್ಲೇ ಒರಗಿ ಕಣ್‌ಮುಚ್ಚಿದೆ.

ವೈಟ್‌ಫೀಲ್ಡ್ ಬಗೆಗೆ ಒಂದೆರಡು ಮಾತು ಹೇಳಿದರೆ ಅನುಚಿತವಾಗುವುದಿಲ್ಲವಾದ್ದರಿಂದ, ಬೆಂಗಳೂರು ದಕ್ಷಿಣಕ್ಕಿರುವ ಆ ಊರಿಗೆ ಆ ಹೆಸರು ಹೇಗೆ ಬಂತೆಂಬುದನ್ನು ಹೇಳಿಬಿಡುತ್ತೇನೆ. ಆ ಊರಿಗೆ ಶತಮಾನದಿಂದ ಚರಿತ್ರೆ ಇದೆಯಾದರೂ ಅದನ್ನು ಕೆದಕುವುದು ಇತಿಹಾಸಜ್ಞರ ಕೆಲಸ. ಆಗಿನ ಮಹರಾಜರು ಇಂಡಿಯನ್ ರಾಯಲ್ ಸವಿರ್ಸ್‌ನಿಂದ ನಿವೃತ್ತರಾದ ಬಿಳಿಯರಿಗೆ ಹಂಚಲು, ಬೆಂಗಳೂರಿನ ಮೂಲೆಗಿದ್ದ ಕಾಡು ಪ್ರದೇಶವನ್ನು, ಮದರಾಸಿನ ಯೂರೋಪಿಯನ್ ಅಂಡ್ ಆಂಗ್ಲೋ ಇಂಡಿಯನ್ ಅಸೋಸಿಯೇಷನ್‌ನ ಅಧ್ಯಕ್ಷನಾಗಿದ್ದ ಡಾ.ವೈಟ್‌ರವರ ಸುಪರ್ದಿಗೆ ೧೮೯೪ಕ್ಕೂ ಮುಂಚೆಯೆ ಬಿಟ್ಟುಕೊಟ್ಟರಂತೆ. ಆ ಅಸೋಸಿಯೇಷನ್ನಿನವರು ನಿವೃತ್ತರಾದ ಬಿಳಿಯರಿಗೆ ಆ ಪ್ರದೇಶವನ್ನು ನಿವೇಶನಗಳನ್ನಾಗಿ ಪರಿವರ್ತಿಸಿದಾಗ, ಬರೀ ಬಿಳಿಯರೆ ತುಂಬಿದ ಆ ಜಾಗಕ್ಕೆ ಡಾ.ವೈಟ್‌ನ್ನನುಸರಿಸಿ ‘ವೈಟ್‌ಫೀಲ್ಡ್’ ಎಂಬ ಹೆಸರು ಬಂತೆಂದು ಆ ಪ್ರದೇಶದ ಎಳೆಯರು ಆಡಿಕೊಳ್ಳುವ ಮಾತು. ಅರಣ್ಯಪ್ರದೇಶವಾದರೂ ಸೌಮ್ಯ ವಾತಾವರಣವಿದ್ದ ಆ ಪ್ರದೇಶದಲ್ಲಿ ಇಂದು ಯಾವ ದಿಕ್ಕಿಗೆ ತಿರುಗಿದರೂ ಸಣ್ಣ-ಪುಟ್ಟ- ದೊಡ್ಡ ಕಾರ್ಖಾನೆಗೆಳೆ. ಮಲೆಯಾಳಿಗಳು, ತಮಿಳರು, ತೆಲುಗರೂ ಸಹ ತುಂಬಿಹೋಗಿದ್ದಾರಾದ್ದರಿಂದ ಆ ಸ್ಥಳದ ಹೆಸರು ಬದಲಾವಣೆಯಾಗಬೇಕೆಂಬ ವಾದವೂ ಇದೆ. ಅದನ್ನು ಕಾಲವೇ ನಿರ್ಧರಿಸುತ್ತದೆ.

ಬೃಹತ್ ಕಾರ್ಖಾನೆಗಳ ಕಪ್ಪು ಹೊಗೆಯನ್ನು ಕುಡಿಯುತ್ತಲೇ ನಾನು ವೈಟ್ಫೀಳ್ಡ್‌ನ ಒಳವಲಯದಲ್ಲಿದ್ದ ಜೇಕಬ್‌ನ ಬಂಗಲೆ ಮುಂದೆ ಬಂದಾಗ ನೂರಾರು ಜನ ಸೇರಿದ್ದರು. ಇದ್ದ ಒಬ್ಬ ಮಗ ಚಾರ್ಲ್ಸ್ ಇಂಗ್ಲೆಂಡಿನಲ್ಲಿ, ಮಗಳು ಜೇನ್‌ಳು ಅಮೆರಿಕಾದಲ್ಲಿ ಇದ್ದರೂ ಅನಾಥರಂತೆ ತನ್ನ ಮುದಿ ಹೆಂಡತಿಯೊಂದಿಗೆ ಬಾಳುತ್ತಿದ್ದ ಜೇಕಬ್‌ನ ಸಾವಿಗೆ ಇಷ್ಟೊಂದು ಜನ ಸೇರಬಹುದೆಂದು ನಾನು ಊಹಿಸಿಯೇ ಇರಲಿಲ್ಲ. ಆಕೆಯೂ ಕೆಲವೇ ತಿಂಗಳುಗಳ ಹಿಂದೆ ತೀರಿಕೊಂಡಿದ್ದಳು. ಮಕ್ಕಳಿಬ್ಬರೂ ಅವಳ ಅಂತ್ಯ ಸಂಸ್ಕಾರಕ್ಕೆ ಬರಲಾಗಿರಲಿಲ್ಲ. ಮುಖವಾದರೂ ನೋಡಲು ಸಿಕ್ಕಿತು ಎಂಬ ಸಮಾಧಾನದೊಂದಿಗೆ ನಾನು ಆಟೋರಿಕ್ಷಾದಿಂದ ಇಳಿಯುತ್ತಿದ್ದಂತೆ ಕಪ್ಪು ಬಣ್ಣದ ಒಳ್ಳೇ ಸೂಟ್‌ನಲ್ಲಿದ್ದ ಚಾರ್ಲ್ಸ್ ನನ್ನನ್ನು ನೋಡುತ್ತಿದ್ದಂತೆಯೆ ಓಡಿಬಂದು ತಬ್ಬಿಕೊಂಡ ನಂತರ “ಅಪ್ಪಯ್ಯನಿಗೆ ಹುಷಾರಿಲ್ಲಾಂತ ಒಂದು ವಾರದ ಹಿಂದೇನೆ ಕೇಬಲ್ ಬಂತು. ತಕ್ಷಣ ಹೊರಟು ಬಂದೆ. ಜೇನಳೂ ಬಂದಿದ್ದಾಳೆ. ನಿನ್ನೆಯಿಂದ ನೀನು ಬತೀ ಬತೀಂತ ನಿಮ್ಮ ಮನೆ ಕಡೆ ಬಂದಿದ್ದೆ. ಫೋನೂ ಮಾಡಿದ್ದೆ..” ಎಂದ.

“ನಾನು ಹದಿನೈದು ದಿನಗಳಿಂದ ಊರಲ್ಲಿ ಇರಲಿಲ್ಲ.” ಎಂದು ಅವನಿಗೆ ಹೇಳುತ್ತಲೇ ಬಾಗಿಲಿನತ್ತ ಹೆಜ್ಜೆ ಹಾಕಿದೆ. ಬಾಗಿಲಲ್ಲೇ ಇದ್ದ ಜೇನ್‌ಳು ನನ್ನನ್ನು ನೋಡಿ ತೆಕ್ಕೆ ಹಾಕಿಕೊಂಡು “ಅಂತೂ ಬಂದ್ಯಲ್ಲ. ಅಪ್ಪಯ್ಯ ಬೆಳಿಗ್ಗೆ ಪ್ರಾಣ ಬಿಡೋವಾಗಲೂ ನಿನ್ನ ಜಪ ಮಾಡ್ತಿದ್ದ. ನೀನಿಲ್ಲದೆ – ನೀನು ಪ್ರಧಾನ ಪಾತ್ರ ವಹಿಸದೆ ಅಂತ್ಯ ಸಂಸ್ಕಾರ ನಡಿಯೋ ಹಾಗಿಲ್ಲ. ಅದು ಅಪ್ಪಯ್ಯನ ಇಚ್ಛೆ. ಹಾಗೇಳ್ತ ಹೇಳ್ತಾನೆ ಪ್ರಾಣ ಬಿಟ್ಟ.” ಎಂದಳು, ತನ್ನ ಹರಕು ಮುರುಕು ಕನ್ನಡದಲ್ಲಿ. ನನಗೆ ಅದನ್ನು ಕೇಳಿ ಆಘಾತವಾದ ಹಾಗಾಯ್ತು. ಇದೆಲ್ಲಿಯ ಸಂಬಂಧ? ಎಂದೆನ್ನಿಸುತ್ತಿದ್ದಂತೆಯೇ ಅವರಿಬ್ಬರೊಂದಿಗೆ ಒಳ ಹೊಕ್ಕೆ. ಬಂಗಲೆಯ ಉಜ್ವಲ ಬೆಳಕಿನ ಹಜಾರದಲ್ಲಿ ಮಂಚದ ಮೇಲೆ ಎಂಬತ್ತೈದು ವರ್ಷದ ಜೇಕಬ್‌ನ ಶರೀರವಿತ್ತು. ಅವನ ವ್ಯಸನಭರಿತವಾದ ಮುಖವನ್ನು, ಒಂಟಿತನದ ಭಾರವನ್ನು, ಮಂಚದ ಸುತ್ತಮುತ್ತಲೂ ಹಚ್ಚಿಟ್ಟಿದ್ದ ಮೇಣದ ಬತ್ತಿ ದೀಪಗಳು ಅಸಹ್ಯವಾಗಿ ಎತ್ತಿತೋರುತ್ತಿದ್ದವು. ಅವನ ಮೇಲೆ ಹರಡಿದ್ದ ಹೂಗಳು ಅವನನ್ನು ತೀರಾ ವಿಕೃತಗೊಳಿಸಿದ್ದವು. ಅದನ್ನೆಲ್ಲ ನೋಡುತ್ತಿದ್ದಂತೆ ಅಳು ತಡೆಯಲಾಗದೆ ಕಟ್ಟೆಯೊಡೆದಿತ್ತು.

ವಾಸ್ತವವಾಗಿ ನನಗೂ ಜೇಕಬ್‌ನಿಗೂ ಎಂತಹ ಸಂಬಧವೂ ಇರಲಿಲ್ಲ. ಸುದೀರ್ಘವಾದ ಪರಿಚಯವವಿದ್ದರೂ ಅವನ ನನ್ನ ನಡುವೆ ಸೌಹಾರ್ದ ವಾತಾವರಣ ಎಂದಿಗೂ ಇರಲಿಲ್ಲ. ಅವನು ಭಾವುಕರಹಿತನಾಗಿ ಯುವಜನಾಂಗವನ್ನು ದೂರಿ ವಾದ ಮಾಡುತ್ತ ಉದಾಹರಣೆಯಾಗಿ “ಎಲ್ಲವನ್ನೂ” ತೊರೆದು ಇಂಗ್ಲೆಡ್ ಸೇರಿಕೊಂಡ ತನ್ನ ಮಗನನ್ನು ಬೈಯುತ್ತಿದ್ದಾಗ ನಾನು ಚಾರ್ಲ್ಸ್‌ನನ್ನು ಸಮರ್ಥಿಸಿಕೊಂಡಿದ್ದೆ. ಆ ಜಗಳ ನಮ್ಮಿಬ್ಬರ ಮಧ್ಯೆ ಇಂದಿಗೂ ಬಗೆಹರಿದಿಲ್ಲ.

ನಾನು ಅಳುತ್ತಿದ್ದುದನ್ನು ನೋಡಿ ದೂರದಲ್ಲಿ ಸಂಪೂರ್ಣ ಜೀನ್ಸ್‌ನ ಒರಟು ಉಡುಗೆಯಲ್ಲಿದ್ದ ಜೇನ್‌ಳ ಅಮೆರಿಕ ಪತಿ “ತಮಾಷೆಯಾಗಿದೆ” ಎಂದು ಜೇನ್‌ಳಿಗೆ ಹೇಳುತ್ತಿದ್ದುದು ನನ್ನ ಕಿವಿಗೆ ಬಿತ್ತು. ಅದನ್ನನುಸರಿಸಿ ಜೇನ್‌ಳು ‘ಷ್’ ಎಂದು ಸನ್ನೆ ಮಾಡಿದುದನ್ನು ಗಮನಿಸದೆ ಇರಲಿಕ್ಕಾಗಲಿಲ್ಲ. ಆ ನಿಮಿಷವೇ ಹೇಸಿಗೆ ಹುಟ್ಟಿ ಜೇನ್‌ಳು ಎಂತಹ ಕೃತಘ್ನಳು ಎಂದುಕೊಂಡೆ. ಶವವಾಹಕ ತಾಯರಾಗಿತ್ತು. ಅದು ನನ್ನ ದೃಷ್ಟಿಗೆ ಬಿದ್ದೊಡನೆ ಅದರ ಬಗೆಗೆ ಜಿಗುಪ್ಸೆ ಹತ್ತಿ ಉರಿದುಬಂದು ಚಾರ್ಲ್ಸ್‌ನನ್ನು ಕರೆದು ವಾಹನವನ್ನು ಹಿಂತಿರುಗಿ ಕಳಿಸಿಬಿಡುವಂತೆ ಹೇಳಿದೆ. “ಚರ್ಚ್‌ಗೆ ದೂರವಾಗುತ್ತೆ” ಎಂದು ರಾಗವೆಳೆದ. “ಕಳಿಸ್ತೀಯೋ ಇಲ್ಲವೋ…”ಗದರಿದೆ. ಶವಪೆಟ್ಟಿಗೆಗೆ ಭುಜ ಕೊಟ್ಟು ಚರ್ಚ್‌ಗೆ ಬಂದೆವು. ವಿಧ್ಯುಕ್ತ ಕ್ರಿಯೆಗಳು ಮುಗಿದನಂತರ ಪಕ್ಕದ ಸ್ಮಶಾನದಲ್ಲಿ ಸಂಸ್ಕಾರ ಪೂರೈಸಿಬಂದೆವು.

ಸ್ಮಶಾಣದಿಂದ ಹಿಂತಿರುಗುವಾಗ ನಾನು ಚಾರ್ಲ್ಸ್‌ನನ್ನು ಕೇಳಿದೆ: “ಕ್ಯಾಥ್ಲಿ ಬಗ್ಗೆ ಏನು ನಿರ್ಧಾರ ಮಾಡಿದ್ದಿ?”- ನನ್ನ ಈ ಪ್ರಶ್ನೆಯ ಉತ್ತರಕ್ಕೆ ಅವನು ತಯಾರಿ ಮಾಡಿಕೊಂಡಿರಲಿಲ್ಲವೋ ಏನೋ- ನಾನೇನೋ ಅವನ ಮೇಲೆ ದುರಾಕ್ರಮಣ ಮಾಡಿದೆನೆಂಬಂತೆ “ಅವಳ ಹಠ ಇನ್ನೂ ಒಂದು ಚೂರು ಕಡಿಮೆಯಾಗಿಲ್ಲ. ನಿನಗೆ ಗೊತ್ತಿರೋದಕ್ಕೆ ಶಕ್ಯವಿಲ್ಲ. ನಾನು ಆರು ತಿಂಗಳ ಹಿಂದೇನೆ ಲಿವರ್‌ಪೂಲ್‌ನಲ್ಲಿ ಇನ್ನೊಂದು ಮದುವೆಯಾದೆ. ಅವಳಿಗೂ ಗೊತ್ತು..”- ನನಗೆ ಅವನು ಮರು ಮದುವೆಯಾದ ವಿಚಾರ ತಿಳಿದಿರಲೇ ಇಲ್ಲ. ಕ್ಯಾಥ್ಲಿ ನನ್ನಿಂದ ಈ ವಿಚಾರಾನ ಯಾಕೆ ಮುಚ್ಚಿಟ್ಟಳೂಂತನ್ನೋದು ಗೊತ್ತಾಗಲಿಲ್ಲ. ಚಾರ್ಲ್ಸ್‌ನಿಂದ ಈ ವಿಷಯ ತಿಳಿದಾಗ ಅವನ ಮೇಲೆ ಎಂದೂ ಇರದಿದ್ದ ಅಸಹ್ಯ ಹುಟ್ಟಿತಲ್ಲದೆ ಜೇಕಬ್‌ನ ಹತ್ತಿರ ಇವನನ್ನು ಸಮರ್ಥಿಸಿಕೊಂಡದ್ದು ಮಹಾ ತಪ್ಪೂಂತನ್ನಿಸಿತು.
“ನಿಮ್ಮಪ್ಪ ನೀನು ಕೆಲಸವಿಲ್ಲದೆ ಅಲೀತಿದ್ದಾಗ್ಲೆ ನಿನಗೂ ಕ್ಯಾತ್ಲಿಗೂ ಯಾಕೆ ಮದುವೆ ಮಾಡ್ದ ಗೊತ್ತ?”- ಎಂದು ಕೇಳಿದೆ ಸ್ವಲ್ಪ ಖಾರವಾಗಿ.
“ಗೊತ್ತಿಲ್ಲದೆ ಏನು? ನಾನು‌ ಇಂಗ್ಲೆಂಡಿಗೆ ಹೋಗದೆ ಇಲೀಂತ. ಒಂದು ಬಂಧನ ಹಾಕಬೇಕೂಂತ ಮದುವೆ ಮಾಡ್ದ. ಆದರೆ ನನ್ನ ಭವಿಷ್ಯ ಆಸೆ ಆಕಾಂಕ್ಷೆಗಳು ಮುಖ್ಯ. ಒಂದು ಹೆಣ್ಣಿಗೋಸ್ಕರ ನಾನವನ್ನೆಲ್ಲ ಬಿಟ್ಟುಕೊಡೋಕ್ಕೆ ತಯಾರಿಲ್ಲ..” ಎಂದ.

“ನಿಮ್ಮಪ್ಪಯ್ಯನ ಉದ್ದೇಶ ಗೊತ್ತಿದ್ದೂ ಕ್ಯಾಥ್ಲೀನ ಯಾಕೆ ಮದುವೆಯಾದೆ? ಹೀಗೆ ಅವಳಿಗೆ ವಂಚನೆ ಮಾಡೋಕ್ಕ?”

“ಚಂದ್ರೂ, ನಿನಗೆ ನಮ್ಮ ಕುಟುಂಬದ ವ್ಯವಹಾರಗಳಲ್ಲಿ ತಲೆ ಹಾಕೋಕ್ಕೆ ಯಾರು ಅಧಿಕಾರ ಕೊಟ್ಟರು? ನಮ್ಮಪ್ಪಯ್ಯ ಮುದಿತನದ ಮರುಳಿನಲ್ಲಿ ನಿನ್ನನ್ನ ಹಚ್ಕೊಂಡಿದ್ದ ಅಷ್ಟೆ. ಅದೇ ಭಾವುಕ ಸಂಬಂಧ ನನ್ನ ನಿನ್ನ ನಡುವೇನೂ ಇದೇಂತ ನೀನು ತಿಳಿದಿದ್ದರೆ ಅದು ನಿನ್ನ ಭ್ರಮೆಯಷ್ಟೆ. ನಿನ್ನ ಪ್ರಶ್ನೆಗೆ ಉತ್ತರ ಹೇಳಬೇಕೂಂತಿಲ್ಲದಿದ್ರೂ ಹೇಳ್ತೀನಿ ಕೇಳು. ಆಗ ನನ್ನ ಚಪಲ ತೀಸೋಕ್ಕೆ ಒಂದು ಹೆಣ್ಣು ಬೇಕಾಗೇ ಇತ್ತು. ಅದೂ ಅಲ್ಲದೀರ ಕ್ಯಾಥ್ಲಿ ಅಷ್ಟೊಂದು ಸಂಪ್ರದಾಯಸ್ಥಳೂಂತನ್ನೋದು ನನಗೆ ತಿಳಿದಿರಲಿಲ್ಲ.”- ಎಂದು ನನ್ನ ಮುಖದ ಮೇಲೆ ಹೊಡೆದಂತೆ ಹೇಳಿದವನೆ ಸರಸರ ಹೆಜ್ಜೆ ಹಾಕಿ ನನ್ನನ್ನು ದಾಟಿ ಹೋಗಿಬಿಟ್ಟ.

ನೇರವಾಗಿ ಬಂಗಲೆಗೆ ಬಂದು ಜೇನ್‌ಳು ಹಾಗು ಅವಳ ಅಮೆರಿಕನ್ ಪತಿ ನನಗಿಂತ ಮುಂಚೆಯೇ ಸ್ಮಶಾನದಿಂದ ಬಂದಿದ್ದರು. ಜೇನ್‌ಳು ನನ್ನನ್ನು ನೋಡಿ ಮುಗುಳ್ನಗುತ್ತ ತನ್ನ ಪತಿಗೆ, “ಇವನೇ ಚಂದ್ರೂಂತ. ನಮ್ಮ ಫ್ಯಾಮಿಲಿ ಫ್ರೆಂಡ್. ಮಾತ್ರವಲ್ಲ. ನಾವೆಲ್ಲರೂ ಚಿಕ್ಕಂದಿನಿಂದಲೂ ಒಂದೇ ಕಡೆ ಬೆಳೆದವರು. ಇವರು ನನ್ನ ಪತಿ- ಆರ್ಥರ್-ಸಿನಿಮಾಟೋಗ್ರಾಫರ್” ಎಂದು ಆಕೆಯ ಯಜಮಾನರಿಗೆ ಪರಿಚಯಿಸಿದಳು. ಅವಳ ಇಂಗ್ಲೀಷ್ ಭಾಷೆ ಅಮೆರಿಕನ್ ಧಾಟಿಗೆ ಬದಲಾಗಿತ್ತು. ದಿಢೀರೆಂದು ಜೇನ್‌ಳು- “ಕ್ಯಾಥ್ಲಿಗೂ ನಮ್ಮ ಕುಟುಂಬಕ್ಕೂ ಇನ್ಮೇಲೆ ಎಂಥಾ ಸಂಬಂಧಾನೂ ಇಲ್ಲ. ಅಣ್ಣಯ್ಯ ಬೇರೆ ಮದ್ವೆ ಮಾಡ್ಕೊಂಡ. ನಿನಗೂ ಗೊತ್ತಿರಬೇಕು..” ಎಂದಳು ಕನ್ನಡದಲ್ಲಿ. ಆರ್ಥರ್ ಜೇನ್‌ಳ ದಿಢೀರ್ ಭಾಷಾ ಬದಲಾವಣೆ ಅರ್ಥವಾಗದವನಂತೆ ಮಿಕಿಮಿಕಿ ನೋಡತೊಡಗಿದ. ಸದಾ ಮೇಲರಿಮೆಯಿಂದಲೇ ಎರಡಡಿ ಚಿಮ್ಮಿಕೊಂಡೇ ನಡೆಯುತ್ತಿದ್ದ ಜೇನ್‌ಳು ನನ್ನನಿಂದು ಸರಿಸಮಾನನಾಗಿ ಕಂಡು ನನ್ನೊಡನೆ ಏನೋ ಸಮಾಲೋಚಿಸುವ ಸಲುವಾಗಿಯೆಂಬಂತೆ ಮಾತಿಗಾರಂಭಿಸಿದ್ದು ಕೇಳಿ ಆಶ್ಚರ್ಯವಾಗಿತ್ತು.

“ಮ್. ಗೊತ್ತಿದೆ. ಮನುಷ್ಯತ್ವವಿಲ್ಲದ ಪಶು ಹಾಗೆ ನಿಮ್ಮಣ್ಣ ನಡ್ಕೋಬಾರದಿತ್ತು…”

ಕ್ರೂರವಾಗಿ ನನ್ನೆಡೆ ನೋಟವೆಸೆದ ಜೇನ್‌ಳು- “ಅವಳು ಇಂಗ್ಲೆಂಡಿಗೆ ಬರೋಲ್ಲ, ಭಾರತದಲ್ಲೇ ಉಳ್ಕೋತೀನಿ ಅನ್ನೋ ಅವಳ ಹಠಕ್ಕೆ ನಮ್ಮಣ್ಣಯ್ಯ ತಾನೆ ಏನ್ಮಾಡಬಹುದಿತ್ತು. ಅವಳೇ ತನ್ನ ಹಠವನ್ನ ಬಿಟ್ಟುಕೊಡಬಹುದಿತ್ತು.”- ಎಂದಳು, ಕ್ಯಾಥ್ಲಿಯ ಹಠ ಮೂಢತನದ ಪರಮಾವಧಿಯದು ಎಂಬ ಅರ್ಥದಲ್ಲಿ.

“ಚೆ, ಹುಟ್ಟಿ ಬೆಳೆದು ಆಟವಾಡಿದ ನೆಲ ಇದು. ಇಂಗ್ಲೆಂಡಲ್ಲ. ನೀನು ಅಮೆರಿಕಾಗು, ನಿಮ್ಮಣ್ಣಯ್ಯ ಇಂಗ್ಲೆಂಡಿಗೂ ಹೋದಾಗ ನಿಮ್ಮಪ್ಪಯ್ಯ ನಿನ್‌ಜೊತೆ ಯಾಕೆ ಬರಲಿಲ್ಲ ಗೊತ್ತು ತಾನೆ…” ಎಂದು ಕೇಳಿದಾಗ-

“ಭಾವುಕತೇನ ಮೀರಿ ನಿಲ್ಲೋ ವಯಸ್ಸನ್ನ ಅಪ್ಪಯ್ಯ ದಾಟಿದ್ದ. ಅದಕ್ಕೇನೆ ಅಜ್ಜಾ ಅಜ್ಜಿ ಸಮಾಧಿ ಈ ನೆಲದಲ್ಲಿದೆ. ಪವಿತ್ರವಾದ ಭೂಮಿ ಇದೂಂತ ಹಠ ಹಿಡಿದು ಅನಾಥವಾಗಿ ಸತ್ತು ನಮಗೂ ಕೆಟ್ಟ ಹೆಸರು ತಂದ. ಆಷ್ಟಲ್ಲದೆ ತನ್ನ ಆಸ್ತಿಯ ಉಸ್ತುವಾರಿ- ವಿಲೇವಾರಿ ಎಲ್ಲಾ ನಿನಗೆ ಬಿಟ್ಟಿದ್ದಾನೆ. ನಮ್ಮನ್ನು ಅಪ್ಪಯ್ಯ ಯಾವತ್ತೂ ತನ್ನ ಮಕ್ಕಳಂತೆ ಭಾವಿಸ್ಲಿಲ್ಲ. ನೀನು ನಮ್ಮ ಸ್ಥಾನಾನ್ನ ಆಕ್ರಮಿಸಿದೆ. ತನ್ನ ವಾರಸುದಾರನಾಗಿ ಅಪ್ಪಯ್ಯ ನಿನ್ನ ಆಯ್ಕೆ ಮಾಡೋದಿಕ್ಕೆ ನಿನ್ನಲೇನಂತಾ ವಿಶೇಷಾನ ಕಂಡನೋ ಗೊತ್ತಿಲ್ಲ…ಆರ್ಥವೂ ಆಗ್ತಿಲ್ಲ..” ಎಂದು ವ್ಯಂಗ್ಯವಾಗಿ ಜೇನ್‌ಳು ಇನ್ನೂ ಏನೇನೋ ಹೇಳೋದರಲ್ಲಿದ್ದಾಗ, ನಾನು ಅವಳು ಕೊಟ್ಟ ಆಸ್ತಿ ಬಗೆಗಿನ ಹೊಸ ಸುದ್ದಿಯಿಂದ ತಲೆ ಸುತ್ತಿ ಬಂದವನಂತೆ ಕುಸಿದು ಬಿದ್ದಿದ್ದೆ.

ಹೌದು, ಜೇಕಬ್ ನನ್ನಲೇನಂಥಾ ವಿಶೇಷಾನ ಕಂಡಾಂತ ಅವನ ಆಸ್ತೀನೆಲ್ಲ ನನ್ನ ಮಡಿಲಿಗೆಸೆದು ಹೋದ? ಈಗದು ಕೆಂಡವಾಗಿ ಪರಿಣಮಿಸಿದೆ. ಅವನ ಎರಡನೇ ಹೆಂಡತಿ ಸತ್ತಾಗ, [ಚಾರ್ಲ್ಸ್, ಜೇನ್‌ಳಿಂದ ತಿರಸ್ಕೃತಳಾದ ಚಿಕ್ಕಮ್ಮ-ಮಲತಾಯಿ.] ಚಾರ್ಲ್ಸ್, ಜೇನ್‌ಳ ಗೈರುಹಾಜರಿಯಲ್ಲಿ ಅಂತ್ಯಸಂಸ್ಕಾರಕ್ಕೆ ನಾನೇ ಮುಂದಾಗಿದ್ದೆ. ಕ್ಯಾಥ್ಲಿಗೂ, ಚಾರ್ಲ್ಸ್‌ಗೂ ಮದುವೆ ಮಾಡಿ ಕ್ಯಾಥ್ಲಿಯ ಬಾಳು ಹಾಳು ಮಾಡಿದೆನೆಂಬ ಅಳುಕು ಜೇಕಬ್‌ನನ್ನು ಕಾಡುತ್ತಿದ್ದಾಗ- ಕ್ಯಾಥ್ಲಿಗೆ ಒಂದು ಕಂಪನಿಯಲ್ಲಿ ಪರ್ಸನಲ್ ಸೆಕ್ರಟರಿ ಕೆಲಸ ಕೊಡಿಸೋ ಮುಖಾಂತರ ಜೇಕಬ್‌ನ ಅಳುಕು ಅದುಮಿಹೋಗಲು ಸಹಾಯ ಮಾಡಿದ್ದೆ. ಒಂಟಿತನದ ನರಕವನ್ನು ಅವನು ಅವುಭವಿಸದಿರಲೆಂದು ನಾನು ವಾರಕ್ಕೆರಡು ಬಾರಿ ಅವನನ್ನು ಹೋಗಿ ನೋಡಿಕೊಂಡು ಬರುತ್ತಿದ್ದೆ. ಅದೆಲ್ಲ ಅವನು ನಮ್ಮ ಚಿಕ್ಕಂದಿನಲ್ಲಿ ನಮ್ಮ ಕುಟುಂಬಕ್ಕೆ ಮಾಡಿರುವ ಸಹಾಯಕ್ಕೆ ಕೃತಜ್ಞತೆಯನ್ನು ತೋರುವ ಸಲುವಾಗಿಯಷ್ಟೆ.. ಇಷ್ಟಕ್ಕೆಲ್ಲ ಆಸ್ತಿ ಉಸ್ತುವಾರೀನ ನನ್ನ ಪರವಾನಗಿ ಇಲ್ಲದೆ ನನ್ನತ್ತ ಜೇಕಬ್ ಎಸೆದಿದ್ದನೆ….?

ನಾನು ಕುಸಿದುದನ್ನು ಜೇನ್‌ಳು ಉಪೇಕ್ಷಿಸಿದರೂ ಆರ್ಥರ್ ನನ್ನ ಬಳಿಗೆ ಓಡಿ ಬಂದವನೆ ತನ್ನ ಸಹಜ ಗುಣವೆಂಬಂತೆ ಸಮಾಧಾನ ಹೇಳತೊಡಗಿದ. ಚಿಕ್ಕಂದಿನಿಂದಲೂ ನಾನು ಅರಿತಿರುವ, ಜೊತೆಗೆ ಆಟವಾಡಿ ಬೆಳೆದಿರುವ ಬಿಗುಮಾನದ ಜೇನ್‌ಳಿಗಿಂತಲೂ, ನಾನು ಮನಸಾರೆ ದ್ವೇಷಿಸುತ್ತಿದ್ದ ಅಮೆರಿಕೆಯ ಆರ್ಥರ್ ದಿಢೀರನೆ ಹತ್ತಿರದವನಾದ. ಸ್ವಲ್ಪ ಹೊತ್ತು ಸುಧಾರಿಸಿಕೊಂಡು ಏನನ್ನೂ ಮಾತನಾಡದೆ ಆಚೆ ಬರುತ್ತಿದ್ದಾಗ “ನಾಡದ್ಡು ನಾನು ವಿಮಾನ ಹತ್ತಾ ಇದ್ದೀನಿ, ಅಷ್ಟರೊಳಗೆ ವಿಲೇವಾರಿ ಬಗ್ಗೆ ಒಂದು ತೀರ್ಮಾನಕ್ಕೆ ಬಂದು ಬಿಡು. ಚಾರ್ಲ್ಸ್‌ನೂ ನಾಡದ್ದೆ ಹೊರಡಬಹುದು. ನಾನು ನಿಮ್ಮ ಮನೆಗೆ ನಾಳೆ ಸಾಯಂಕಾಲ ಬತೀನಿ…” ಎಂದು ಜೇನಳು ಅಧಿಕೃತ ಧ್ವನಿಯಲ್ಲಿ, ಕನ್ನಡದಲ್ಲಿ ಜೋರಾಗಿ ಕೂಗಿ ಹೇಳಿದ್ದು ಕೇಳಿತು. ನಾನು ಕಾಂಪೌಂಡ್ ಗೇಟಿನಾಚೆ ಬರುತ್ತಿದ್ದಂತೆಯೆ ಆರ್ಥರ್ ತನ್ನದೆ ಶೈಲಿಯಲ್ಲಿ ‘ಚಂದ್ರೂ…ಚಂದ್ರೂ’ ಎಂದು ಕೂಗಿಕೊಂಡೇ ಬಂದು ನನ್ನನ್ನು ಸೇರಿಕೊಂಡ. ಸಿಗರೇಟು ತೆಗೆದು ನನಗೊಂದು ಕೊಡುವಾಗ ಕಣ್ಣಲ್ಲಿ ಆಶ್ಚರ್ಯದ ಮಿಂಚು ಹರಿಸಿ ಅನುಮಾನದಿಂದ “ನೀನು ನನಗೆ ಇವತ್ತೆ ಪರಿಚಯವಾದರೂ ನಿನ್ನ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೀನಿ. ನನ್ನಲಿಲ್ಲದ್ದು – ನನಗವಶ್ಯಕವಾದ್ದು ನಿನ್ನಲೇನೋ ಇದೆ…” ಎಂದ . ನನ್ನ ಬಗ್ಗೆ ಜೇನ್‌ಳೇನಾದರೂ ಹೇಳಿರಬೇಕೆಂದುಕೊಂಡು : “ಜೇನ್‌ಳು ಹೇಳಿದಳ…?” ಎಂದೆ. “ಊಹುಂ, ಇಲ್ಲಿಗೆ ಬಂದ ಮೇಲೆ ಜೇಕಬ್‌ನ ದಿನಚರಿ ಸಿಗ್ತು. ಅದರಲ್ಲಿ ತನ್ನ ಮಕ್ಕಳ ಬಗ್ಗೆ ಬರೆದಿರೋದಕ್ಕಿಂತಲೂ ಹೆಚ್ಚಿಗೆ ನಿನ್ನ ಬಗ್ಗೆ ಬರೆದಿದ್ದಾನೆ..” ಎಂದ. ಎಂತಹುದೇ ಸುದ್ಧಿ ನನ್ನ ಮೆದುಳನ್ನು ಹೊಕ್ಕುವಂತಿರಲಿಲ್ಲವಾದರೂ ಆಸಕ್ತಿಯಿಂದ ಕೇಳಲು ಶುರು ಮಾಡಿದೆ. “ನೀನು ಜೇನ್‌ಳ ಬಾಲ್ಯ ಸಾಂಗಾತಿಯಂತೆ. ಅವಳ ಬಗ್ಗೆ ನಿನ್ನ ಹತ್ತಿರ ಏನಾದರೂ ಮಾತನಾಡಿದರೆ ಸಮಸ್ಯೆ ಬಗೆಹರಿಯಬಹುದೇನೋ ಅನ್ನೋ ದುರಾಸೆ ನನ್ನದು..: ಎಂದ. ಆರೋಪಿಸುವ ಧ್ವನಿಯಾಗಿರಲಿಲ್ಲವಾದರೂ ಹೃದಯ ಖಾಲಿ ಮಾಡಿಕೊಳ್ಳಲು ಅವನಿಗೆ ವಿಶ್ವಾಸಿಯೊಬ್ಬ ತುರ್ತಾಗಿ ಬೇಕಿತ್ತೆಂಬುದು ಸ್ಪಷ್ಟವಿತ್ತು. “ನೀನು ಏನು ಹೇಳ್ತಿ ಅನ್ನೋದು ನನಗೆ ಗೊತ್ತು ಆರ್ಥರ್. ಅವಳ ಮೊಂಡು ಸ್ವಭಾವದ ಬಗ್ಗೆ ತಾನೆ?” ಎಂದು ಕೇಳಿದೆ.

“ಅವಳನ್ನು ಎಷ್ಟು ಚೆನ್ನಾಗಿ ಅರ್ಥಮಾಡಿಕೊಡಿದ್ದೀಯಾನ್ನೋದು ಈ ಮಾತಿನಿಂದಲೇ ಅರ್ಥವಾಗುತ್ತೆ ಚಂದ್ರು. ಅವಳು ನನ್ನ ಜೀವನದಲ್ಲಿ ಪ್ರವೇಶಿಸಿದಾಗಿನ ಆರಂಭದಲ್ಲಿ, ಉತ್ಸಾಹದ ಮಿತಿ ಅನ್ನೋದು ಏನೂನ್ನೋದೆ ಗೊತ್ತಿರಲಿಲ್ಲ. ಆದರೆ ಅವಳ ಆಸೆಗಳೆಲ್ಲ ದುರಾಸೆಯಾಗಿ ಅದಕ್ಕೂ ಒಂದು ಎಲ್ಲೆ ಇಲ್ಲಾಂತನ್ನೋದನ್ನ ನಾನು ಕಂಡ್ಕೊಳ್ಳೋ ವೇಳೆಗೆ ನನಗೆ ಬದುಕಿನಲ್ಲಿದ್ದ ಉನ್ಮಾದ ಕಳೆದು ಹೋಗಿತ್ತು. ಕೆಟ್ಟ ಹಾಲಿವುಡ್, ಲಾಸೇಂಜೆಲ್ಸ್‌ನ ಕೃತಕತೆಗಳ ಶರವೇಗದ ಬದುಕಿನಿಂದ ದೂರಾದರೆ ಸಾಕಾಗಿತ್ತು. ನಾನು ವಾಷಿಂಗ್‌ಟನ್ ಹತ್ತಿರ ಇದ್ದೆ ನಾನು ಹುಟ್ಟಿ ಬೆಳೆದ ಹಳ್ಳಿಗೆ ಹೋಗ್ತೀನೇಂದರೆ ಜೇನ್ ಆ ಹಳ್ಳಿ ಸೇರೋಕ್ಕೆ ತಯಾರಾಗಲಿಲ್ಲ. ಅವಳಂತೂ ಈಗ ಲಾಸ್ ಏಂಜೆಲ್ಸ್‌ನಲ್ಲೇ ಇದ್ದಾಳೆ. ನಾನು ಸಿಯಾಟಲ್‌ನಲ್ಲಿದ್ದೀನಿ. ನಮ್ಮಿಬ್ಬರ ಮಧ್ಯ ಅಂತರ ಭರ್ತಿಯಾಗೋದೆ ಇಲ್ವೇನೋ ಅಂತನ್ನಿಸ್ತಾ ಇದೆ. ನನ್ನ ಸ್ನೇಹಿತರ ಸುದ್ಧಿ ಪ್ರಕಾರ ಅವಳು ನನಗೆ ವಿವಾಹರದ್ದು ಕೊಡೋಕ್ಕೆ ತಯಾರಾಗ್ತಾ ಇದ್ದಾಳೇಂತ ಗೊತ್ತಾಯ್ತು…” ಒಂದೇ ಉಸಿರಿನಲ್ಲಿ ತನ್ನೊಳಗಿದ್ದನ್ನೆಲ್ಲ ಆಚೆಗೆ ಕಕ್ಕಿದ್ದ. ಅವನ ಕೆಂಪು ಮುಖ ಪೇಲವಗೊಂಡಿತ್ತು. ಜೇನಳು ನನ್ನ ಮಾತಿಗೆ – ಸಲಹೆಗಳಿಗೆ ಕಿವಿಗೊಡುತ್ತಾಳೆಂಬ ಭರವಸೆ ಇರಲಿಲ್ಲವಾದ್ದರಿಂದ ನಾನು ಆರ್ಥರನಿಗೆ ಎಂತಹ ಆಶಾಭಾವನೆಯನ್ನೂ ತುಂಬಲು ಅಶಕ್ತನಾಗಿದ್ದೆ. ಆ ವಿಚಾರವನ್ನು ಅವನಿಗೆ ಹೇಳಿದಾಗ “ನನಗೆ ಗೊತ್ತು. ಆದರೆ ಒಂದು ವಿಚಾರಾನ್ನ ಹೇಳ್ತೀನಿ ಕೇಳು. ಈಗ ಜೇನಳು ಇಲ್ಲಿಂದ ಲಾಸೇಂಜೆಲ್ಸ್‌ಗೆ ಹೋಗೋದನ್ನ ಮುಂದೂಡಿದ್ದಾಳೆ, ಯಾಕೆ ಗೊತ್ತ? ಆಸ್ತೀಲಿ ತನಗೆ ಸಿಗಬಹುದಾದ್ದನ್ನೆಲ್ಲಾ ಮಾರಿ ಹೋಗೋ ತೀಮಾನ ಅವಳದು. ಸಾಕಷ್ಟು ಹಣ ಅವಳ ಕೈ ಸೇರಿದರೆ ನನಗೆ ಅವಳು ವಿವಾಹರದ್ದು ಕೊಡೋದು ಖಂಡಿತ…” ಎಂದು ಹೇಳುತ್ತಾ ದಿಢೀರನೆ ಮಾತು ಬದಲಾಯಿಸುತ್ತ “ನಾನು ನಾಳೆಯೆ ಹೊರಡ್ತಾ ಇದ್ದೀನಿ. ಅದಕ್ಮುಂಚೆ ನಿನ್ನ ನೋಡೋಕ್ಕಾಗ್ದೆ ಇರಬಹುದು. ಕಾಗದ ಬರೀತಿತೀನಿ. ನೀನೂ ಬರೀತಾ ಇರು.” ಎಂದು ಹೇಳಿದವನೆ ನನ್ನನ್ನು ಎಷ್ಟು ಅವಸರದಲ್ಲಿ ಕೂಡಿಕೊಂಡಿದ್ದನೋ ಅದೆ ವೇಗದಲ್ಲಿ ಹೊರಟೇ ಹೋದ. ನನಗೆ ಎರಡು ದಿನದಿಂದ ನಿದ್ದೆ ಸರಿಯಾಗಿಲ್ಲದುದರಿಂದ ಏನನ್ನೂ ಯೋಚಿಸಲಿಕ್ಕಾಗದ ಮಂಕು. ಮನೆಗೆ ಬಂದೊಡನೆ ಸೀತಳ ಬಳಿಯೂ ಏನನ್ನೂ ಮಾತನಾಡದೆ ಮಲಗಿದೆ.

ಮಾರನೆ ದಿನ ಆಫೀಸಿನಿಂದ ಮನೆಗೆ ಬರುವ ವೇಳೆಗಾಗಲೆ ಚಾರ್ಲ್ಸ್ ಬಂದು ಕಾಯುತ್ತಿದ್ದ. ಸೀತಳು ಕೊಟ್ಟಿದ್ದ ಕಾಫಿಯನ್ನು ಗುಟುಕರಿಸುತ್ತಾ ಕೂತಿದ್ದ. ಅವನು ನನ್ನನ್ನು ನೋಡಿದವನೆ ಎದ್ದು ಕೈಕುಲುಕುತ್ತಾ “ನಿನ್ನೆ ಒರಟಾಗಿ ನಡೆದುಕೊಂಡದ್ದಕ್ಕೆ ಕ್ಷಮಿಸು..” ಎಂದ. “ನಾವು ಭಾರತೀಯರು ಒರಟು ಚರ್ಮದವರು.” ಎಂದೆ ಕಠಿಣವಾಗಿ. “ಕ್ಷಮಿಸು ಎನ್ನಲಿಲ್ವೆ..”ಎಂದು ಚೀರಿದ. ಅವನ ಮಾತನ್ನು ಗಮನಕ್ಕೆ ತೆಗೆದುಕೊಳ್ಳದೆ “ಕೂತ್ಕೋ ಬತೀನಿ..” ಎಂದು ಹೇಳಿ ಒಳಕ್ಕೆ ಹೋಗಿ ಮುಖ ತೊಳೆದು ಉಡುಪು ಬದಲಿಸಿ ಬಂದೆ. ಸೀತ ತಂದಿಟ್ಟ ಕಾಫಿಯನ್ನು ನಾನು ಆರಾಮಾಗಿ ಕುಡಿಯುತ್ತಾ ಕುಳಿತಿದ್ದುದನ್ನು ನೋಡಿ ಚಾರ್ಲ್ಸ್ “ಅಪ್ಪಯ್ಯನ ಉಯಿಲಿನ ಸುದ್ಧಿ ನಿನಗೂ ಬಂದಿರಬಹುದು. ಏನು ನಿರ್ಧಾರ ಮಾಡಿದ್ದೀ.?” ಎಂದು ಅವನು ಕೇಳಿದಾಗ ಅವನ ಮುಖಕ್ಕೆ ಉಗಿಯಬೇಕನ್ನಿಸಿತು.

“ಕ್ಯಾಥ್ಲಿ ಬಗ್ಗೆ ನೀನೇನು ಯೋಚಿಸಿದ್ದೀ ಮೊದಲು ಹೇಳು…” ಎಂದೆ. “ಅವಳು ಬರೋದಾದ್ರೆ ಅವಳನ್ನ ಇಂಗ್ಲೆಂಡಿಗೆ ಕಕೊಂಡು ಹೋಗ್ತೀನಿ” ಎಂದು ಅವನು ಸಮಾಧಾನ ಹೇಳಿದಾಗ ನಾನು ಸ್ವಲ್ಪ ಹೆಚ್ಚಿನ ಜೋರುಧ್ವನಿಯಲ್ಲಿ: “ನೀನೇನು ಶಾಶ್ವತವಾಗಿ ಇಂಗ್ಲೆಂಡಿನಲ್ಲಿ ಗೂಟ ಬಡ್ಕೊಂಡಿತೀಯೇನು? ನಿನಗೆ ಆ ಸರ್ಕಾರ ಪೌರತ್ವವಂತು ಕೊಡೋಲ್ಲ. ಇಟಲಿ ಮೂಲದ ಪೀಟರ್‌ಬ್ರಕೂಟಿಗೆ ಸರ್ಕಾರಿ ಕೆಲಸ ದೊರಕದೆ ಇರೋ ಸುದ್ದೀನ ನಾನು ಸಂಡೇ ಟೈಂಸ್‌ನಲ್ಲಿ ಓದಿದ್ದೀನಿ. ಯೋಚ್ನೆ ಮಾಡು, ಕ್ಯಾಥ್ಲಿ ಜತೆ ನೀನು ಇಲ್ಲೇ ಇರೋದಾದ್ರೆ ನನ್ನದೇನೂ ಅಭ್ಯಂತರವಿಲ್ಲ… ನಿಮ್ಮಪ್ಪಯ್ಯನ ಆಸೇನೂ ಅದೇ ಆಗಿತ್ತು.” ಎಂದೆ. “ರಾಸ್ಕಲ್ , ನೀನೊಬ್ಬ ನರಿ. ಬ್ಲ್ಯಾಕ್‌ಮೈಲ್ ಮಾಡ್ತಾ ಇದ್ದೀಯ..” ಎಂದು ಬಯ್ದುಕೊಳ್ಳುತ್ತಾ ಸೀತಳಿಗೆ ವಿದಾಯ ಹೇಳುವ ಸೌಜನ್ಯವನ್ನು ತೋರಿ, ಕನಿಷ್ಠ ಕರ್ತವ್ಯದ ತೃಪ್ತಿಯಿಂದ ಹೊರಟು ನಿಂತ.

ಅವನು ಹೊರಟು ಹೋದೊಡನೆ ಜೇನ್ ಬಂದಳು. ಬುಟ್ಟಿ ತುಂಬಾ ಹಣ್ಣುಗಳು, ಚೀನಿಗೆ ಆಟಿಕೆಗಳು ಎಂದು ಒಂದು ಹೊರೆಯನ್ನೆ ಹೊತ್ತು ತಂದಳು. ಮಾತುಕತೆ ಅನಿವಾರ್ಯವಾಗಿ ಆಸ್ತಿ ವಿಲೇವಾರಿ ಬಗ್ಗೆ ಹೊರಳುತ್ತದೆಂದು ಗೊತ್ತಿದ್ದ ನಾನೆ ಮಾತಿಗಾರಂಭಿಸಿ, ಬದಲಾವಣೆ ಇಲ್ಲದ ಖಚಿತ ಧ್ವನಿಯಲ್ಲಿ “ಜೇ, ಆರ್ಥರ್ ಎಲ್ಲಾ ಸಂಗತೀನು ಹೇಳಿದ. ನಿನ್ನನ್ನ ಹಚ್ಕೊಂಡಿರೋ ಅವನ ಹೃದಯ ಮುರೀಬೇಡ” ಎಂದೆ. ಅವಳು: “ಚಂದ್ರೂ, ಅದು ನಿನಗೆ ಸಂಬಂಧಿಸಿಲ್ಲದಿರೋ ಸಂಗತಿ. ಆರ್ಥರ್ ಅಪ್ಪಯ್ಯನಿಗೂ ಕಾಗ್ದ ಬದಿದ್ದದ್ದು ಅಪ್ಪಯ್ಯ ನಿನಗೂ ಹೇಳಿರಬಹುದು. ಅಪ್ಪಯ್ಯ ಬುದ್ಧಿವಾದ ಹೇಳಿ ನನಗೂ ಕಾಗ್ದ ಬದಿದ್ದ. ಆಗಲೂ ನನಗೆ ಏನೂ ಅನ್ನಿಸಿರಲಿಲ್ಲ….” ಎಂದಾಗ ಇಂಥವಳ ಬಳಿ ಮಾತನಾಡುವುದನ್ನಾದರು ಏನನ್ನು ಎಂದು ನಾನು ಚಪ್ಪಲಿ ಮೆಟ್ಟಿಕೊಂಡು ಆಚೆ ಹೊರಡಲನುವಾದೆ. ಅದನ್ನು ಗಮನಿಸಿದ ಅವಳು “ನನಗೆ ತುರ್ತು ಕೆಲಸವಿದೆ. ನಾಳೆ ಮುಂಬಯಿ ವಿಮಾನ ಹತ್ತಾ ಇದ್ದೀನಿ. ನಿನ್ನ ನಿರ್ಧಾರ ಏನೂನ್ನೋದನ್ನ ಹೇಳಿಬಿಡು… ನಾನು ಏನು ಕೇಳ್ತಿದೀನಿ ಎಂದು ನಿನಗೂ ಗೊತ್ತು..” ಎಂದಳು. “ಕಾಗದ ಬರೆದು ತಿಳಿಸ್ತೀನಿ..”ಎಂದಷ್ಟೆ ಹೇಳಿ ಸರಸರ ಆಚೆ ನಡೆದೆ.

ಮಾರನೆ ದಿನ ವಿಮಾನನಿಲ್ದಾಣದಲ್ಲಿ ಮುಂಬಯಿ ವಿಮಾನ ಹತ್ತಿದರು. ಕ್ಯಾಥ್ಲಿ ತಂದೆ ಇದ್ದೂ ಇಲ್ಲದ ಹಾಗೆ ಬೆಳೆಯುತ್ತಿದ್ದ ತನ್ನ ಮಗುವನ್ನು ಎತ್ತಿಕೊಂಡು ಮೇಲಕ್ಕೆ ನೆಗೆದಿದ್ದ ವಿಮಾನದತ್ತ ಕೈ ಬೀಸುವಂತೆ ಸೂಚಿಸುತ್ತಿದ್ದಳು. ವಿಮಾನ ಕಣ್ಮರೆಯಾದಾಗ “ಚಂದ್ರೂ , ನಾನು ಇಲ್ಲೇ ಉಳ್ಕೊಂಡು ತಪ್ಪು ಮಾಡ್ತೀದ್ದೀನ ಅನ್ನೋದು ಅರ್ಥವಾಗಲೆ ಇಲ್ಲ..” ಎಂದು ಅವಳು ಹೇಳಿದಾಗ ನಾನು ಏನನ್ನು ಹೇಳಲು ಅಶಕ್ತನಾದೆ. ಮನಸ್ಸಿನಲ್ಲಿ ಜೇಕಬ್‌ನ ಆಸ್ತಿಯೆಲ್ಲ ಕ್ಯಾಥಿಗೂ ಅವಳ ಮಗುವಿಗೂ ಸೇರಬೇಕು ಎಂದು ನಿರ್ಧರಿಸಿ ನಾನು ಆ ಮಗುವನ್ನು ನೋಡಿ ಮುಗುಳ್ನಕ್ಕೆ…
*****
ಪ್ರಜಾವಾಣಿಯಲ್ಲಿ ಪ್ರಕಟವಾದ ಕತೆ- ೨.೮.೧೯೮೧

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪೋಕ್ರಾನ್
Next post ಅವ್ವ

ಸಣ್ಣ ಕತೆ

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…