ಸಾರ್ಥಕ ಜೀವನ

ಸಾರ್ಥಕ ಜೀವನ

ಜೀವನವು ಅನಿವಾರ್ಯ

ಜೀವವಿರುವಲ್ಲೆಲ್ಲ ಜೀವನವಿದೆ. ಸನ್ಯಾಸಿಯು ಸಹ ಸಂಸಾರ ಬಿಟ್ಟವನೇ ಹೊರತು ಜೀವನ ಬಿಟ್ಟವನಲ್ಲ. ಜೀವವಿದೆಯೆಂದು ಬದುಕುವುದು ಜೀವನವೆನಿಸದು, ಜೀವಿಸಲೇಬೇಕೆಂದು ಬದುಕುವುದು ಮಾತ್ರ ಜೀವನವೆನಿಸುವುದು. ಜೀವನದಲ್ಲಿ ಬೇನೆ, ಬೇಸರಿಕೆ, ಅವಮಾನ, ತಿರಸ್ಕಾರ, ಬಡತನ, ಉಪವಾಸ, ಪ್ರತಿಕೂಲತೆ ಮೊದಲಾದವುಗಳಿಂದ ಮನಸ್ಸಿಗೂ ಶರೀರಕ್ಕೂ ವಿಫುಲವಾದ ಕಷ್ಟ ದುಃಖಗಳು ಉಂಟಾಗುತ್ತವೆ. ಅದರಂತೆ ತೃಪಿ, ಆರೋಗ್ಯ, ಯಶಸ್ಸು, ಮಾನ, ಅನುಕೂಲತೆ ಮೊದಲಾದವುಗಳೂ ಕತ್ತಲೆಯಲ್ಲಿಯ ಕೋಲ್ಕಿಂಚಿನಂತೆ ಆಗೀಗ ಮಿಂಚಿ, ಜೀವನಯಾತ್ರೆಯನ್ನು ಸಂತೈಸುತ್ತಲೂ ಬೆಳಕು ತೋರಿ ಮುಂದು ವರಿಸುತ್ತಲೂ ಇರುತ್ತವೆ. ಆದರೇನು? ಸುಖವು ಬೀದಿಯ ನೆರಳಿನಷ್ಟು, ದುಃಖವು ದೂಡುವ ಬಿಸಿಲಿನಷ್ಟು! ಜೀವನವು ಅನಿವಾರ್‍ಯ; ಆದರೆ ಬೇಸರಿಕೆಯ ಬದುಕು ಬೇಡವೆಂದರೆ ಜೀವನಕ್ಕೊಂದು ಯೋಗ್ಯ ಪಥಬೇಕಷ್ಟೇ? ಅದನ್ನು ಹುಡುಕ ಬೇಕೆಂದು ಮಾನವನ ಮನಸ್ಸು ಗಾಳಿಗಿಂತ ಹಗುರಾಗಿ ಮುಗಿಲಿಗೇರಿತು, ಸಮುದ್ರಕ್ಕಿಂತ ವಿಶಾಲವಾಗಿ ದಿಗಂತದವರೆಗೆ ಹರಡಿತು, ಕೂದಲನ್ನು ಸಹ ಇಬ್ಬಾಗಿಸುವಂತೆ ಮೊನೆಯಾಗಿ ವ್ಯಕ್ತ-ಸಾಂತಗಳನ್ನು ಪರೀಕ್ಷಿಸಿತು. ಆದರೆ ಅದೆಲ್ಲವೂ ಪಡಿನೆಳಲನ್ನು ಹಿಂಬಾಲಿಸಿದ ಹಸುಳೆಯ ಬುದ್ಧಿವಂತಿಕೆಗಿಂತ ಹೆಚ್ಚಿನದೇನಾಗಲಿಲ್ಲ. ಕೊನೆಗೆ ಮಾನವನು ಬೇಸತ್ತು ಕುಳಿತನು. ತನ್ನಿಂದ ತಾನೆ ಆತನ ದೃಷ್ಟಿ ಶೂನ್ಯವಾಯ್ತು; ಮನಸ್ಸು ಅಂತರ್‌ಮುಖವಾಯ್ತು; ಆ ಏಕಾಗ್ರತೆಯಲ್ಲಿ ಅದಕ್ಕೆ ಸುಖದ ಸುಳಿಗಾಳಿ ತಗುಲಿತು; ಅದು ಹಿಗ್ಗಿನಿಂದ ಹೊರೆಯೇರಿತು, ಹಾವು ಹೆಡೆಯ ರತ್ನವನ್ನು ಬಿಟ್ಟು ಅದು ಬೆಳಕಿನಲ್ಲಿ ಕಾಡೆಲ್ಲ ಮೇದು, ತನ್ನ ಹೋರಿಗೆ ರತ್ನ ಸಹಿತವಾಗಿ ತಂಗಿ ತಣಿಯಲು ಮರಳುವಂತೆ ಬಾಳಿನ ಗುಟ್ಟೆಂದು ಮಾನವನ ಮನಸ್ಸು ಸಾರಿ ಹೇಳಿತು. ಆ ಗುಟ್ಟರಿಯದವನ ಬಾಳು ಈಸುಬಾರದವನು ಮಡುವಿನಲ್ಲಿ ಬಿದ್ದಂತೆ. ಬಾಳಿನ ಗುಟ್ಟು ಕೈಸಾರಿದ ಮೇಲೆ ಮಾನವನು ಸಾವಿರಗಟ್ಟಲೆ ವರುಷಗಳಿಂದ ಅದನ್ನು ಕೃಷಿ ಮಾಡಿ, ಕಲಮಿಮಾಡಿ ಇಂದಿಗದನ್ನು ಒಂದು ಒಳ್ಳೆಯ ಹದಕ್ಕೆ ತಂದಿದ್ದಾನೆ; ಆ ಅಗೆಯು ಮರವಾಗಿ ನಿಂತಿದೆ. “ದೇವನಿಲ್ಲದ ಬಾಳು ದುಃಖಮಯ ಕುತ್ತು; ದೇವನೊಡನಿಹ ಬಾಳು ಆನಂದದೊಟ್ಟು.” ಆದುದರಿಂದ ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳುವುದು ಜೀವನದಲ್ಲಿ ನಮ್ಮದೊಂದು ಅವಶ್ಯಕತೆ ಆಗಿಬಿಡಬೇಕು.” ಇವೇ ಆ ಸುರಹೊನ್ನೆಯ ಹೂಗಳು.

ಜೀವನದ ನೆಲೆ

ಜೀವಿಸಲೇಬೇಕೆನ್ನುವ ಕೆಚ್ಚು, ದೇವನಲ್ಲಿ ಇಲ್ಲವೆ ಇನ್ನಾವುದೋ ಅವ್ಯಕ್ತ ಶಕ್ತಿಯಲ್ಲಿ ಶ್ರದ್ದೆಯಿಲ್ಲದೆ ಸಾಧ್ಯವಿಲ್ಲ; ಆ ಶ್ರದ್ಧೆಯು ಗಟ್ಟಿಗೊಂಡಂತೆ ಅದರ ಸ್ಪರ್ಶವು ಸ್ಪಷ್ಟವೂ ನಿಕಟವೂ ಆಗುತ್ತ ಬರುವದು. ಆಗ ಜೀವನವು ಹಿಗ್ಗಿನನೆಲೆ. ಅದಕ್ಕೆ ಸಂಸಾರದ ದುಃಖ ತಾಪತ್ರಯಗಳನ್ನು ವೀರನಂತೆ ಎದುರಿಸುವ ಸಾಮರ್ಥ್ಯ ಬರುವದು. ಶರಣರ ಭಾಷೆಯಲ್ಲಿ ಹೇಳಬೇಕಾದರೆ ‘ಮರಣವೂ ಮಾನವಮಿ’ ಆ ಜೀವನಕ್ಕೆ. ಆ ಸ್ಪರ್ಶವನ್ನು ಗಳಿಸುವ ಗುರುಯಿಲ್ಲದಿದ್ದರೆ, ಮನುಷ್ಯನು ನೂರು ವರುಷ ಬಾಳುವ ಆಶೆಯನ್ನೇಕೆ ಮಾಡಬೇಕು? ಭೂಮಿಯ ಮೇಲೆ ಇನ್ನೇನು ಕೆಲಸವಿದೆ? ಶತಾಯುವನ್ನು ಕೋರುವವನಿಗೆ ಆ ಸ್ಪರ್ಶ- ಪ್ರಾಪ್ತಿಯೇ ಜೀವನೋದ್ದೇಶವಾಗಿರತಕ್ಕದ್ದು. ಧ್ಯಾನ ಪ್ರಾರ್ಥನೆ ಪೂಜಾದಿಗಳು ಆ ಹೋರಾಟದ ವೀರನಿಗೆ ಸಾಧನಗಳೆಂದು ಬಲ್ಲವರು ಹೇಳುತ್ತಾರೆ. ಎಂತಹ ಏಕಾಗ್ರಚಿತ್ತನಿಗಾದರೂ ದಿನದ ಕೆಲವು ತಾಸು ಮಾತ್ರ ಧ್ಯಾನಪ್ರಾರ್ಥನೆಗಳಲ್ಲಿ ಕಳೆಯಲಿಕ್ಕಾಗುತ್ತದೆ; ಅದು ಸಹ ಅದಕ್ಕಾಗಿಯೇ ನಿಂತ ಯೋಗಿಗೆ ಮಾತ್ರ. ಉಳಿದವರು ಉಳಿದ ವೇಳೆಯಲ್ಲಿ ಶರೀರ ಸಂರಕ್ಷಣೆಯ ದಾರಿಯೆಂದೋ, ಧ್ಯಾನಪ್ರಾರ್ಥನೆಗಳಿಗೆ ಪೂರಕವೆಂದೋ, ರತ್ನಾಕರ ಕವಿಯಂತೆ ಧ್ಯಾನಕ್ಕೆ ಬೇಸರಾಯಿತೆಂದೋ ಕರ್ಮವನ್ನು ಕೈಕೊಳ್ಳಲೇಬೇಕು ಸಂಸಾರ ಕೋಲಾಹಲದ ನಡುವೆ ಸಿಕ್ಕಿದವನಂತೂ ದಿನದ ಬಹುಭಾಗವನ್ನೆಲ್ಲ ಕರ್ಮಮಾಡುವುದರಲ್ಲಿಯೇ ಕಳೆಯ ಬೇಕಾಗುತ್ತದೆ. ತಿರುಗಿ ಕೇಳಿದರೆ ಅವನಿಗೆ ಧ್ಯಾನ ಪ್ರಾರ್ಥನೆಗಳಿಗೆ ವೇಳೆಯೇ ಸಿಕ್ಕುವುದಿಲ್ಲ. ಅಂಥವನ ಜೀವನವು ಕಾಲುಚೆಂಡಿನಂತೆ ಒದೆದತ್ತ ಸಾಗುತ್ತಿರಬೇಕೆ? ಅಂಥ ಕರ್ಮಜೀವಿಗಳಿಗೆ ಕರ್ಮ ಮಾರ್ಗವೇ ಒಂದಿರಬೇಕಲ್ಲವೇ? “ದೇವನಿಗಾಗಿಯೇ ಮಾಡುವ ಕರ್ಮವು | ದೇಹದಿ ಮಾಡುವ ಪಠಣ ಪ್ರಾರ್ಥನವು” ಎಂದೂ, “ನಮ್ಮ ಇಡಿಯ ಜೀವನ | ದೇವನಡಿಯ ಪೂಜನ” ಎಂದೂ ಶ್ರೀ ತಾಯಿಯವರ ವರದವಾಣಿಗಳಿವೆ.

ದಿನದ ತಾಸರ್ಧತಾಸುಗಳ ಧ್ಯಾನಪ್ರಾರ್ಥನೆಗಳಿಂದ ನಮ್ಮ ಆಂತರಿಕ ಪ್ರಗತಿಯು ವಿಲಕ್ಷಣ ವೇಗಗೊಳ್ಳುತ್ತಿರಲು, ಇಡಿಯ ದಿನದ ಕರ್ಮಗಳೆಲ್ಲ ಧ್ಯಾನ ಪ್ರಾರ್ಥನೆಗಳೆಂಬ ಭಾವನೆಯಿಂದ ಸಾಗಿದಾಗ ಆಂತರಿಕ ಪ್ರಗತಿಯ ವೇಗವನ್ನಾರು ಅಳೆಯಬಲ್ಲರು? ಆದುದರಿಂದಲೇ ಪಾಂಡಿಚೇರಿಯ ಆಶ್ರಮದಲ್ಲಿ ಎಲ್ಲರಿಗೂ ಧ್ಯಾನ ಪ್ರಾರ್ಥನೆಗಳ ದಾರಿಯನ್ನೆ ಕಡ್ಡಾಯವಾಗಿ ಹೇಳಿಕೊಡದೆ, ಅವರ ಪ್ರಕೃತಿಯನ್ನರಿತು ಕೆಲವರಿಗೆ ಧ್ಯಾನಪ್ರಾರ್ಥನೆಗಳು ಅವಶ್ಯವಿಲ್ಲೆಂದು, ಕರ್ತವ್ಯತತ್ಪರತೆಯನ್ನು ವಿಧಿಸುತ್ತಾರಂತೆ.

ಬಾಳಿನ ಮುಟ್ಟುಗಟ್ಟೆ

ಕರ್ಮಪ್ರಕೃತಿಯವರಿಗೆ ಶ್ರೀ ಅರವಿಂದರು ಸುಗಮವಾದ ದಾರಿಯನ್ನೂ, ಆ ದಾರಿಗೆ ಬೇಕಾಗುವ ಸಲಕರಣೆಗಳನ್ನೂ ಬಹು ವಿಶದವಾಗಿ ತಿಳಿಯಪಡಿಸಿದ್ದಾರೆ. ಮಾನವನೊಬ್ಬ ರೋಗಿಯಿದ್ದ ಹಾಗೆ, ಕಣ್ಣುಗಳಿಗೆ ಎಲ್ಲೆಲ್ಲಿಯೂ ಹರಿಮೂರ್ತಿ ಕಾಣಿಸದಿರುವುದೂ, ಕಿವಿಗಳಿಗೆ ಎಲ್ಲೆಲ್ಲಿಯೂ ಹರಿಕೀರ್ತನೆಯು ಕೇಳಿಸದಿರುವುದೂ ಒಂದು ರೋಗವೆಂದು ಗಾಬರಿಪಟ್ಟು ದಾಸವರ್ಯರು ಆವರೋಗವೊ ನನಗೆ? ಸಾವಧಾನದಿ ಎನ್ನ ಕೈಹಿಡಿದು ನೋಡೋ” ಎಂದು ದೇವಧನ್ವಂತರಿಯನ್ನು ಕೇಳಿಕೊಂಡಿದ್ದಾರೆ. ಆ ರೋಗವಂತೂ ಆಧ್ಯಾತ್ಮ ಜೀವನದಲ್ಲಿ ಸಾರ್ವತ್ರಿಕವಾಗಿರುತ್ತದೆ. ಅದನ್ನು ಕಳೆದುಕೊಳ್ಳುವುದೇ ಆಧ್ಯಾತ್ಮ ಸಾಧನೆ. ಅದೇ ಯೋಗ, “ವಾಸನೆ ಅಹಂಕಾರಗಳ ಕಿಲ್ಬಿಷವನ್ನು ಕಳೆದು, ದೇವದೇವನ ಸತ್ಯಶುದ್ಧ ಕರ್ಮ ಮಾಡುವಂತಹ ವೀರ ಕರ್ಮಿಯಾಗಿ, ಆತನಲ್ಲಿ ಸಾಮರಸ್ಯವನ್ನು ಹೊಂದುವ ಉಪಾಯವನ್ನು ಅರವಿಂದರು ಹೇಳುತ್ತಾರೆ.

ಕರ್ಮಫಲ ಸಮರ್ಪಣ

ಅವರು ಹೇಳಿದ ಯುಕ್ತಿಯಲ್ಲಿ ಮೂರು ಮೆಟ್ಟಿಲುಗಳಿದ್ದು, ಮೊದಲನೆಯದಾಗಿ -ಕೈಗೆ ಬಂದ ಕರ್ಮ ಮಾಡುತ್ತಲೂ ಕರ್ಮಫಲವನ್ನು ಪ್ರಭುವಿಗೆ ಅರ್ಪಿಸುತ್ತಲೂ ಹೋಗುವುದು. ಶ್ರೀ ಮಾತಾಜಿಯವರ ದಿವ್ಯ ಹೇಳಿಕೆಯಂತೆ ವಿಶ್ವದ ಆಶ್ಚರ್ಯವು ನಮ್ಮೆದುರಿಗೆ ಹೆಚ್ಚು ಹೆಚ್ಚು ಪ್ರಕಟವಾಗಿ ಬರಬೇಕಾದರೆ ಅಹಂಕಾರದ ಮುಸುಕಮರೆಗಳನ್ನು ತೆಗೆಯುವ ಬಗೆ ಹೇಗೆ ಅಹಂಕಾರದ ಮೋಡಗಳು ಬಯಲಾಗಬೇಕಾದರೆ, ನಮ್ಮ ಅಭೀಪ್ಪೆಯ ಸೂರ್ಯನು ಥಳಥಳಿಸಬೇಕೆಂದೂ, ಅಭೀಪ್ಸೆಯ ಸ್ಥಿರಾಗ್ನಿಯು ಪ್ರಜ್ವಲಿಸುವುದು ಹೃದಯದ ನೀರವತೆಯಲ್ಲೆಂದೂ ಅವರೇ ಹೇಳುತ್ತಾರೆ, ಇವೆಲ್ಲಕ್ಕೂ ಮೊದಲು ವಿರೋಧಶಕ್ತಿಗಳ ನಿರಂತರ ಚಿಂತನೆಯನ್ನು ಬಿಟ್ಟುಕೊಡಬೇಕೆಂದೂ, ಯಾಕೆಂದರೆ, ಯಾವುದರ ಚಿಂತನವನ್ನು ಮಾಡುವೆವೋ ಆ ವಸ್ತುಗಳಿಂದ ನಾವು ಯಾವಾಗಲೂ ಸುತ್ತುವರಿಯಲ್ಪಟ್ಟಿರುತ್ತೇವೆಂದೂ ಶ್ರೀ ಮಾತೆಯವರು ಎಚ್ಚರಿಸುತ್ತಾರೆ. ಕರ್ಮ ಮಾಡುವವನಲ್ಲಿ “ಇದೊಂದು ಭಗವತೀ ಶಕ್ತಿಯ ಕಾರ್‍ಯ, ಇದನ್ನು ಮಾಡುವುದು ಭಗವತಿಯ ಸೇವೆಯೇ, ಈ ಸೇವೆಯನ್ನು ಮಾಡುವುದಕ್ಕೆ ನನ್ನ ಸಂಪೂರ್ಣ ಜೀವನವು ನೈವೇದ್ಯವಾಗಿದೆ. ಅದೊಂದು ನಿರಂತರ ಯಜ್ಞ- ಬಲಿದಾನ” ಎಂಬ ಭಾವನೆ ಮಾತ್ರ ಆಖಂಡವಾಗಿರತಕ್ಕದ್ದು. “ನಾನು ಭಗವತೀ ಮಾತೆಯಿಂದ ಭಿನ್ನನು, ಕರ್ಮ ಮಾಡುವವನು ನಾನು” ಎಂಬ ಅಹಂಕಾರದ ಜುಳುಕು ಇದ್ದರೂ, ನಾನು ಭಗವತಿಗಾಗಿ ಕಾರ್ಯ ಮಾಡುವವನೆಂಬ ಅರಿವಿದ್ದರೆ ಸಾಕು. ಅದರಲ್ಲಿ ಸ್ವಾರ್ಥವಿರಬೇಡವಾದರೂ ಸ್ವಹಿತವಿದೆ; ಅದು ಭಗವತೀಮಾತೆಯ ಪ್ರಸನ್ನತೆ, ಪ್ರಸನ್ನಳಾದ ಮಾತೆಯು ದೈವೀ ಚೈತನ್ಯ, ದೈವೀ ಶಾಂತಿ, ದೈವೀ ಶಕ್ತಿ, ದೈವೀ ಆನಂದಗಳನ್ನು ನಮಗೆ ಮೆಚ್ಚುಕೊಡುವಳು. ಅದನ್ನು ಬಿಟ್ಟರೂ ಸೇವೆಯ ಆನಂದವೂ, ಅಂತಃಶಕ್ತಿಯು ವೃದ್ಧಿಂಗತವಾದ ಆನಂದವೂ ಸಿಕ್ಕುವುದು ನಮ್ಮ ನಿಸ್ವಾರ್ಥಕರ್ಮಕ್ಕೆ ವಿಫುಲವಾದ ಪ್ರತಿಫಲವೇ ಸರಿ.

ಕರ್ತೃ ಅಲ್ಲ; ಕರಣ

ಈ ದಾರಿಯಲ್ಲಿ ಸಾಗಿದವನು ಭಕ್ತಿಬಲದಿಂದ ಭಗವತಿ ಮಾತೆಯನ್ನು ಹೆಚ್ಚು ಸಮೀಪಿಸುತ್ತ ಬರುತ್ತಾನೆ. ಸುತ್ತೂ ನಿಟ್ಟಿನ ಲಕ್ಷ್ಯವನ್ನು ಹಿಂದೆಳೆದುಕೊಂಡು, ಶ್ರೀಮಾತೆಯ ಪಾದದಲ್ಲಿಯೇ ಅದನ್ನಿರಿಸಿದರೆ, ಹಾಗೂ ಎಲ್ಲವನ್ನೂ ಆಕೆಯ ಕೈಯಲ್ಲಿಯೇ ಒಪ್ಪಿಸಿದರೆ, ಆಕೆಯು ತಾನಾಗಿಯೇ ನಮ್ಮ ಕರ್ಮದಲ್ಲಿ ಮಾರ್ಗತೋರಿಸಹತ್ತುವಳು; ಕೈಗೆ ಬಂದ ಕರ್ಮ ಮಾಡುವವನಿಗೆ ಮಾಡತಕ್ಕ ಕರ್ಮವನ್ನು ಹೇಳಿಕೊಡುವಳು; ಬರಿಯ ಹೇಳಿಕೊಟ್ಟು ಬಿಡದೆ, ಅದನ್ನು ಹೇಗೆ ಮಾಡಬೇಕು, ಅದರ ಪರಿಣಾಮವೇನಾಗುವುದು ಇವನ್ನು ಸಹ ತಿಳಿಸುವಳು. ಈ ಅನುಭವವು ಬರತೊಡಗಲು “ನಾನು ಕರ್ತೃ” ಎಂಬ ತರಲವಾದ ಅಹಂಕಾರವೂ ಹರಿದು, “ನಾನು ಕರಣ, ಭಗವತಿ ಶಕ್ತಿಯ ಆಯುಧ” ಎಂಬ ಭಾವನೆಯು ಬೆಂಬಲವಾಗಿರುತ್ತದೆ; ಸ್ಫೂರ್ತಿ ಆಕೆಯದೇ. ಅಂದಮೇಲೆ ಕಾರ್ಯಾರಂಭವನ್ನೂ ಕಾರ್ಯಸಮಾಪ್ತಿಯನ್ನೂ ಯಾರು ಮಾಡಿದಂತಾಯ್ತು? ನಮ್ಮ ಮನ ಪ್ರಾಣ ಶರೀರಗಳು ಆ ಭಗವತಿ ಶಕ್ತಿಯ ಚೈತನ್ಯಪೂರ್ಣ ಹಾಗೂ ಆನಂದಮಯ ಉಪಕರಣಗಳಾಗಿ, ಮಾನವನೆಂದರೆ ಆಕೆಯ ಅವ್ಯಕ್ತಶಕ್ತಿಯನ್ನು ವ್ಯಕ್ತಗೊಳಿಸುವ ಪಡಿಯಚ್ಚಾಗುತ್ತಾನೆ. ಹೃದಯಕ್ಕೆ ಪ್ರಗಾಢಕಾಂತಿಯೂ ಅತ್ಯಧಿಕ ಆನಂದವೂ ಲಭಿಸುತ್ತವೆ. ಇದೇ ದಿವ್ಯ ಜೀವನದ ವಿಕಸನ.

ಆ ಸಮಯದಲ್ಲಿ ಅಹಂಕಾರದ ಪ್ರತಿಕ್ರಿಯೆಗಳನ್ನು ತಳ್ಳುತ್ತಿರುವುದೇ ವ್ಯಕ್ತಿಯ ಪ್ರಮುಖ ಪ್ರಯತ್ನ, ಆತ್ಮಸಮರ್ಪಣಕ್ಕೂ, ಆತ್ಮಬಲಿದಾನದ ಪಾವಿತ್ರ್ಯಕ್ಕೂ ಕಲಂಕ ತರುವ ಬೇಡಿಕೆಯಾಗಲಿ, ಹಠವಾಗಲಿ ತಲೆಯೆತ್ತದಂತೆ ಅವನ್ನು ಕತ್ತರಿಸುತ್ತಿರಬೇಕು. ನಾವು ಯಾವ ಶಕ್ತಿಯ ಅಧೀನದಲ್ಲಿರಬೇಕಾಗಿದೆಯೋ ಆ ಶಕ್ತಿಯ ಶಾಸಕನಾಗಬೇಕೆನ್ನುವ ಹೋರಾಟವು ತರವಲ್ಲ. ಭಗವತಿಯ ಕೈಯಾಯುಧವಾಗಿದ್ದುದು, ನಿಜವಾದರೂ, ಆಂಥ ಮಹಾ ಆಯುಧವೆಂಬ ಹೆಮ್ಮೆ ಸಹ ಪ್ರಗತಿಗೆ ಬಾಧಕವೇ, ಮಹಾಶಕ್ತಿಯು ಬಳಸುತ್ತಿರುವ ಶರೀರ ಪ್ರಾಣ ಮನಗಳನ್ನು ನಮ್ಮ ಸ್ವಾರ್ಥಕ್ಕಾಗಿ ಬಳಸುವುದು ದುರುಪಯೋಗವೆನಿಸುವುದು. ಸಾಧಕನಿಗೆ ಬೇಕಾದುದು ಮಾತೆಯ ಪ್ರಸನ್ನತೆಯೇ. ನಮ್ಮ ಶ್ರದ್ಧೆ ಪ್ರಾಮಾಣಿಕತೆಗಳು ನಮ್ಮ ಪ್ರತಿ ಒಂದು ಕ್ಷೇತ್ರವನ್ನು ಪವಿತ್ರಗೊಳಿಸುತ್ತಿರಬೇಕು. ಇದಕ್ಕೆ ವಿರುದ್ಧವಾದ ಇನ್ನೆಂಥ ಮಹಿಮಾತಿಶಯವಿದ್ದರೂ ಅವಕ್ಕೆಲ್ಲ ಬಹಿಷ್ಕಾರ. ಅದೆಂಥ ಶ್ರೇಷ್ಠವಿದ್ದರೂ ಅದು ದೂರ ತೊಲಗಲಿ.

ಸಾಮರಸ್ಯ

ನಮ್ಮ ಪ್ರತಿ ಒಂದು ಕ್ಷೇತ್ರವು ಶ್ರದ್ಧೆ ಪ್ರಾಮಾಣಿಕತನಗಳಿಂದ ಪವಿತ್ರವಾಗುತ್ತ ಹೋದಂತೆ ಮಾತೆಯ ಸ್ಪರ್ಶವನ್ನು ಸಮೀಪಿಸುತ್ತೇವೆ. ನಾವು ಉಪಕರಣವೂ ಅಲ್ಲ; ಸೇವಕನೂ ಅಲ್ಲ; ಮಾತೆಯ ಚೈತನ್ಯಾಂಶ” ಎಂಬ ನೆಲೆಗೆ ಬರುತ್ತೇವೆ. ಈವರೆಗೂ ಮಾತೆಯಿಂದ ಚೈತನ್ಯವು ನಮಗೆ ಸಿಕ್ಕುತ್ತಿತ್ತು; ಈಗ ಮಾತೆಯ ಚೈತನ್ಯವೇ ನಾವೆಂದು ಅರಿಕೆ ಆಗುವುದು. ನಮ್ಮಲ್ಲಿ ಮಾತೆಯೂ, ಮಾತೆಯಲ್ಲಿ ನಾವೂ ಆಗಿಬಿಟ್ಟರೆ, ನಾವು ಉಸಿರು ತೆಗೆದುಕೊಂಡರೂ ಆ ಕೆಲಸ ಮಾತೆಯದೇ ಸರಿ. ನಮ್ಮ ವ್ಯಕ್ತಿತ್ವವು ಆಕೆಯ ಒಂದಂಗ; ಸಾಮರ್ಥ್ಯವು ಆಕೆಯ ಒಂದು ನಸುಮಿಸುಕು. ಮಹಾಸಮುದ್ರದ ಕೊಲ್ಲಿಯಂತೆ ವ್ಯಕ್ತಿ. ಪ್ರಕೃತಿಯ ಪ್ರತಿ ಒಂದು ಅಣು ಅಣುವೂ ಮಾತೆಯ ಸ್ಪರ್ಶಕ್ಕಾಗಿ ನಮನಶೀಲ ವಾಗಬೇಕೆಂದೂ, ಆತ್ಮಸಮರ್ಪಣ-ಚೇತನಗಳು ಅದಕ್ಕೆ ಬೆಂಬಲವಾಗಿರಬೇಕೆಂದೂ ಶ್ರೀ ಅರವಿಂದರು ಹೇಳುತ್ತಾರೆ. ಆಗ ಈ ಸಾಮರಸ್ಯವಾಗಲಿ ಮಹಾಸ್ಪರ್ಶವಾಗಲಿ ಉಂಟಾಗುವುದು. ದಾರಿಯಲ್ಲಿ ಅಡಿಯಿಟ್ಟ ಕೂಡಲೆ ಇಚ್ಛಿತ ಸ್ಥಳವನ್ನು ತಲುಪಲಿಕ್ಕಾಗದು; ಅದಕ್ಕೆ ಕಾಲಬೇಕು; ಪ್ರತಿ ಒಂದು ಅಡಿಯನ್ನು ಮುಂದೆತ್ತಿಡುವ ಸಾಮರ್ಥ್ಯ ಬೇಕು. “ಯಾರು ಪ್ರತೀಕ್ಷಿಸಲು ಬಲ್ಲರೋ ಅವರು ಕಾಲದೇವನನ್ನು ತಮ್ಮ ಪಕ್ಷಕ್ಕೆ ಇಟ್ಟುಕೊಂಡಿರುತ್ತಾರಂತೆ. ಆದುದರಿಂದ ಆಧ್ಯಾತ್ಮ ರೋಗಿಗಳು ಇಂದೇ ದೇವಧನ್ವಂತರಿಯ ಚಿಕಿತ್ಸಾಲಯವನ್ನು ಸೇರತಕ್ಕದ್ದು, ಅಲ್ಲಿ ಸಾರ್ಥಕ ಜೀವನವನ್ನು ನಾವು ಗಳಿಸುವೆವು.

“ಪ್ರಭುವಿನ ಪ್ರೇಮದ ಬಾಹುಗಳು
ಪಸರಿಸಿ ಏಗಳು ಕಾದಿಹವು |
ಪ್ರಭುವಿನ ತೋಳ್ಗಳ ಆಶ್ರಯವ
ಪಡೆದರೆ ಅಡೆತಡೆ ತೊಲಗುವವು||”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇವುಗಳ ಪಾಲಿಸು
Next post ಅಮ್ಮನ ಮಡಿಲನೇರಿ

ಸಣ್ಣ ಕತೆ

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…