ತ್ರಿಪಾದ

ತ್ರಿಪಾದ

ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ ಟಾಮ್. ಪ್ರಾಜೆಕ್ಟ್ ಮೇಲೆ ಮೂರು ತಿಂಗಳು ಭಾರತಕ್ಕೆ ಬಂದ ವಿಲಿಯಮ್ ಕೋರಮಂಗಲದಲ್ಲಿ ಒಂದು ಅಪಾರ್‌ಮೆಂಟನ್ನು ಬಾಡಿಗೆಗೆ ತೆಗೆದುಕೊಂಡಿದ್ದ. ಅಲ್ಲಿಂದ ಅವನ ಕಾರ್ಯಕ್ಷೇತ್ರ ಹತ್ತಿರವಿತ್ತು. ಅವನು ಮನೆಯ ಮುಂದೆ ಟಾಕ್ಸಿ ನಿಲ್ಲಿಸಿದಾಗ ಅವನಿಗೆ ಅಮೆರಿಕಾದ ರಸ್ತೆಗಳಿಗೂ, ಅಪಾರ್‌ಮೆಂಟುಗಳಿಗೂ, ಭಾರತದ ಗಲೀಜು ಬೀದಿಗಳಿಗೂ ಮತ್ತು ಬೆಂಕಿ ಪಟ್ಟಣದ ಡಬ್ಬಗಳಂತೆ ಕಟ್ಟಿದ ಮನೆಗಳನ್ನು ನೋಡಿ ಬಹಳ ಸೋಜಿಗವೆನಿಸಿತು. ಭಾರತದ ಬಿಸಿಲಿನ ಹವಾಮಾನಕ್ಕೆ ಹೊಂದಿಕೊಂಡರು ಮನಸು ಮಾತ್ರ ಖಾಲಿ ಖಾಲಿ ಎನಿಸುತ್ತಿತ್ತು. ಒಮ್ಮೆ ಹೆಂಡತಿಯ ನೆನಪು, ಒಮ್ಮೆ ಮಕ್ಕಳ ನೆನಪು ಕಾಡಿದರೆ ವಾಯುವಿಹಾರಕ್ಕೆ ಹೋಗುವಾಗ ಟಾಮ್‌ನ ನೆನಪು ಅತೀವವಾಗಿ ಕಾಡುತ್ತಿತ್ತು.

ಅದೊಂದು ಮುಂಜಾನೆ ಪಾರ್ಕಿನಲ್ಲಿ ನಡೆದಾಡಿ ಬಂದು ಪಾರ್ಕ್ ಬೆಂಚಿನ ಮೇಲೆ ಸುಧಾರಿಸಿಕೊಳ್ಳಲೆಂದು ಕುಳಿತುಕೊಂಡ. ಒಡನೆ ಒಂದು ಕರಿ, ಕಂದು ಬಣ್ಣ ಅಲ್ಲಲ್ಲಿ ಇದ್ದ ಶ್ವೇತ ಶ್ವಾನ ಒಂದು ಬಾಲವಾಡಿಸುತ್ತ ಅವನ ಮೊಣಕಾಲ ಬಳಿ ಬಂದು ನಿಂತಿತು. ಅದರ ನೀಲಿ ಕಣ್ಣಿನಲ್ಲಿ ಪ್ರೀತಿ ತುಂಬಿ ತುಳುಕುತ್ತಿತ್ತು. ಬಿಳಿಯ ಬಣ್ಣದ ಮಧ್ಯೆ ಇದ್ದ ಕರಿಕಂದು ಬಣ್ಣ ಅದಕ್ಕೆ ಒಂದು ವಿಶೇಷ ಸೌಂದರ್ಯವನ್ನು ಕೊಟ್ಟಿದ್ದವು. ಬೆನ್ನಿನ ಮೇಲೆ ಕರಿಯ ಹೃದಯಾಕಾರ, ಬಾಲದ ಮೇಲೆ ಕರಿ ಕಂದು ಬಣ್ಣ ಜೊತೆಗೂಡಿ ಎಂಟರ ಆಕಾರದಲ್ಲಿ ಮೂಡಿರುವುದನ್ನು ಬಹು ಸೂಕ್ಷ್ಮವಾಗಿ ವಿಲಿಯಮ್ ಅವಲೋಕಿಸುತ್ತಿದ್ದರು. ಅದು ಮೈ ತುಂಬಿಕೊಂಡು, ಐದು ಆರು ವರ್ಷದ ನಾಯಿಯಂತೆ ಕಾಣುತ್ತಿತ್ತು. ಅದರ ಮಾಟವಾದ ಶರೀರ, ಸದೃಢ ಕಾಲುಗಳು ಎಲ್ಲಾ ಅದು ಒಳ್ಳೆ ಜಾತಿಯ ನಾಯಿ ಎಂದು ಸಾರುತ್ತಿತ್ತು. ಇಷ್ಟು ಸುಂದರ ನಾಯಿ ರಸ್ತೆಯಲ್ಲಿ ಅಡ್ಡಾಡುವ ನಾಯಿ ಹೇಗೆ ಆಯಿತು? ಪಾರ್ಕಿನಲ್ಲಿ ಇದ್ದ ಎಲ್ಲರ ಹತ್ತಿರವೂ ಅದರ ನಡವಳಿಕೆ ಅತಿ ಸೌಜನ್ಯ ಪ್ರೀತಿಯಿಂದ ಕೂಡಿರುತ್ತಿತ್ತು.

ಅದು ಮಕ್ಕಳು ಪಾರ್ಕಿನಲ್ಲಿ ಆಟ ಪಾಠವಾಡುತ್ತಿದ್ದರೆ ಅವರ ಹಿಂದೆ ಓಡಿ ಹೋಗಿ ಅವರಿಗೆ ಚೆಂಡು ತಂದುಕೊಡುವುದು, ವಯಸ್ಸಾದ ಮುದುಕರ ಪಕ್ಕದಲ್ಲಿ ಕುಳಿತು ಅವರನ್ನು ನೋಡಿಕೊಳ್ಳುವುದು. ಅಲ್ಲದೆ ಹೆಂಗಸರು, ಗಂಡಸರು ಯಾರಾದರು ಪಾರ್ಕಿನ ಬೆಂಚಿನ ಮೇಲೆ ತಾವು ಕೈಯಲ್ಲಿ ಹಿಡಿದು ತಂದ ಬ್ಯಾಗುಗಳನ್ನು ಮರೆತಿದ್ದರೆ ಅದನ್ನು ನಾಜೂಕಾಗಿ ಬಾಯಲ್ಲಿ ಇಟ್ಟುಕೊಂಡು ಅವರು ಗೇಟಿನ ಹೊರಗೆ ಹೋಗುವುದರಲ್ಲಿ ಅವರಿಗೆ ತಲುಪಿಸಿಬಿಡುತ್ತಿತ್ತು. ಹೀಗೆ ಅದು ನಾನಾ ರೀತಿಯ ಸೇವೆಗಳನ್ನು, ಕೆಲಸಗಳನ್ನು ಮಾಡಿ ಎಲ್ಲರ ಪ್ರೀತಿಗೂ ಪಾತ್ರವಾಗಿತ್ತು. ಅದನ್ನು ನೋಡಿದ ವಿಲಿಯಮ್‌ಗೆ ಅದೊಂದು ಸುಸಂಸ್ಕೃತ ಪ್ರಾಣಿಯಂತೆ ಕಂಡಿತು. ಅದರ ಮೇಲೆ ಒಂದು ರೀತಿಯ ಮಮತೆ ಹುಟ್ಟಿಕೊಂಡಿತು. ಇಂಗ್ಲೆಂಡಿನಲ್ಲಿ ತಾವು ಸಾಕಿದ ಟಾಮ್‌ನ ತದ್ರೂಪದಂತಿದ್ದ ಈ ಪಾರ್ಕಿನ ನಾಯಿ ಅವರಿಗೆ ಬಲು ಪ್ರಿಯವೆನಿಸಿತು. ಅದು ಹತ್ತಿರ ಬಂದಾಗಲೆಲ್ಲಾ ಅದನ್ನು ಡಾರ್ಲಿಂಗ್ ಟಾಮ್ ಎಂದು ಮೈ ಬಾಲ ಸವರುತ್ತಿದ್ದರು.

ಮನೆಗೆ ಬೇಕಾದ ಸಾಮಾನುಗಳನ್ನು ಕೊಂಡು ತರಲು ಪೇಟೆಗೆ ಹೋದಾಗ ವಿಲಿಯಂ ಒಂದು ಮೆತ್ತಗೆ ಇರುವ ನಾಯಿಯ ಕತ್ತಿನ ಬೆಲ್ಟನ್ನು ಕೊಂಡುಕೊಂಡರು. ಅದರ ಜೊತೆ ಸರಪಳಿಯನ್ನು ಖರೀದಿಸಿದರು. ಮಾರನೆಯ ದಿನ ಮುಂಜಾನೆ ವಾಯುವಿಹಾರಕ್ಕೆ ಪಾರ್ಕಿಗೆ ಹೋದಾಗ ಮೊದಲ ದೈವವಾಗಿ ಎದುರಾದದ್ದು ಅವರು ಪ್ರೀತಿಸಲು ಆರಂಭಿಸಿದ್ದ ಅವರೇ ನಾಮಕರಣ ಮಾಡಿದ ಟಾಮ್. ಪಾರ್ಕಿನ ಗೇಟಿನ ಬಳಿ ಕುಳಿತು ಅದನ್ನು ಹತ್ತು ನಿಮಿಷ ಪ್ಯಾಟ್ ಮಾಡಿ ಮುದ್ದಿಸಿದರು. ತಾವು ತಂದ ನಾಯಿ ಬಿಸ್ಕತ್‌ಗಳನ್ನು ಕೈಯಲ್ಲಿ ಇಟ್ಟುಕೊಂಡು ತಿನಿಸಿದರು. ಪಾರ್ಕಿನ ಟಾಮ್ ನಾಯಿಗೆ ಅಂದು ಹಬ್ಬದ ದಿನದಂತೆ ಕಂಡಿತು. ಇಂದು ಏನು ನನಗೆ ಜನ್ಮದಿನವೇ? ಇಲ್ಲ ನನಗೆ ಒಬ್ಬ ತಂದೆ ಸಿಕ್ಕಿದನೆ? ಎನ್ನುವಂತೆ ಹಲವಾರು ಹಾವಭಾವಗಳನ್ನು ಟಾಮ್ ತನ್ನ ಮುಖದಲ್ಲಿ ತೋರಿಸುತ್ತಿತ್ತು. ವಿಲಿಯಮ್, ಟಾಮಿನ ಕತ್ತಿಗೆ ಪ್ರೀತಿಯ ಬೆಲ್ಟು ಕಟ್ಟಿ ತನ್ನ ದತ್ತು ಪುತ್ರನಂತೆ ಟಾಮ್‌ನನ್ನು ಸ್ವೀಕರಿಸಿದರು. ಇಬ್ಬರಿಗೂ ಆದ ಸಂತಸವನ್ನು ವ್ಯಕ್ತಪಡಿಸಲು ವಿಲಿಯಮ್ ಕೊಂಡು ತಂದಿದ್ದ ಚಾಕಲೇಟ್‌ಗಳನ್ನು ಅಲ್ಲಿ ಆಡುತ್ತಿದ್ದ ಮಕ್ಕಳಿಗೆ ಹಂಚಿದರು. ಪಾರ್ಕಿನಲ್ಲಿ ಓಡಾಡುತ್ತಿದ್ದ ಇಬ್ಬರು ವೃದ್ದರು ಇದೆಲ್ಲವನ್ನು ಗಮನಿಸಿದ್ದರು.

“ನೋಡಿದಿರಾ ರಾಯರೇ! ಈ ಫಾರಿನರ್ಸೇ ಹೀಗೆ ಅವರಿಗೆ ನಾಯಿ, ಬೆಕ್ಕು ಎಲ್ಲ ಪ್ರಾಣಿಗಳ ಮೇಲೆ ಬಹಳ ಪ್ರೀತಿ” ಎಂದರು.

“ಹೌದು ಸ್ವಾಮಿ, ನಾವು ಬೀದಿ ನಾಯಿ ಅಂತ ದೂರ ತಳ್ಳುತ್ತೀವಿ. ಆತನನ್ನು ನೋಡಿ ಅದಕ್ಕೆ ಉಣಿಸಿ, ತಿನಿಸಿ, ಬೆಲ್ಟ್ ಕಟ್ಟಿ ಕತ್ತಿಗೆ, ಅದನ್ನು ಮೈ ಸವರಿ, ಮನೆಗೆ ಒಯ್ಯುತ್ತಿದ್ದಾನೆ. ಅದು ರೀ ಹೃದಯ ವೈಶಾಲ್ಯ ಅಂದರೆ” ಎಂದರು.

“ಹೌದು. ನಮಗೆ ಆ ಬುದ್ದಿ ಬರೋಲ್ಲ, ಮಡಿಮೈಲಿಗೆ, ಬೀದಿನಾಯಿ ಅಂತ ದೂರ ಸರೀತೀವಿ. ಅದು ತಗಲಿದರೆ ಹೋಗಿ ಸ್ನಾನ ಮಾಡಿಬಿಡ್ತೀವಿ. ಏನೋ ಅಸಹ್ಯ ನಮಗೆ ತಗುಲಿದ ಹಾಗೆ” ಎಂದರು.

ಅಷ್ಟರಲ್ಲಿ ವಿಲಿಯಮ್ ದೊಡ್ಡ ಮುಗುಳುನಗೆಯೊಡನೆ ಅವರಿಗೆ ಎದುರು ಆದರು.
ವೃದ್ದರನ್ನು ನೋಡಿ ಮುಗುಳುನಕ್ಕು ವಿಲಿಯಮ್ “Hope there is no objection if I take this dog home, I like it very much” ಎಂದರು.

“No afterall it is a street dog. You are at liberty to take it. No need to ask anybody” ಎಂದರು.

ವಿಲಿಯಮ್‌ಗೆ ಅಂದು ಅಪಾರ ಸಂಪತ್ತು ಸಿಕ್ಕಂತೆ ಅನಿಸಿತ್ತು. ಅವನ ಮೂರು ತಿಂಗಳ ಭಾರತದ ಜೀವನದಲ್ಲಿ ಯಾವ ರೀತಿಯ ಕೊರತೆ ಎನಿಸಲಿಲ್ಲ. ಟಾಮ್ ವಿಲಿಯಮ್‌ನ ಮನವನ್ನು ಮನೆಯನ್ನು ತುಂಬಿತ್ತು. ವಿಲಿಯಮ್ ಕಚೇರಿಗೆ ಹೋದಾಗ ಮನೆ ಕಾಯುತ್ತಿತ್ತು. ಬೆಳಿಗ್ಗೆ, ಸಾಯಂಕಾಲ ವಾಯುವಿಹಾರದಲ್ಲಿ ವಿಲಿಯಮ್‌ನೊಡನೆ ಸಂತೋಷವಾಗಿ ಕಾಲ ಕಳೆಯುತ್ತಿತ್ತು. ಈಗ ಪಾರ್ಕಿನಲ್ಲಿ ಮಕ್ಕಳು ಟಾಮ್‌ನನ್ನು ‘ಫಾರಿನ್ ಅಂಕಲ್ ನಾಯಿ’ ಎಂದೇ ಕರೆಯುತ್ತಿದ್ದರು. ಟಾಮ್ ವಿಲಿಯಮ್ ಮನೆ ಸೇರಿದರು, ಬೆಳಗಿನ ಹೊತ್ತು ಹಿಂದಿನ ತನ್ನ ಜೀವನದಂತೆ ಎರಡು ಮೂರು ರಸ್ತೆಗಳಿಗೆ ಹೋಗಿ ಅಲ್ಲಿಯ ಶಿಸ್ತನ್ನು ನೋಡಿಕೊಳ್ಳುತ್ತಿತ್ತು. ಮೊದಲಿನಂತೆ ಯಾರ ಮನೆಗೂ ಹೋಗಿ, ಊಟ ಕೇಳುತ್ತಿರಲಿಲ್ಲ. ವಿಲಿಯಮ್ ಟಾಮ್ಗಾಗಿ ಹಾಲು, ಬ್ರೆಡ್, ಮಾಂಸ, ಮೂಳೆ ಎಲ್ಲಾ ಹಾಕುತ್ತಿದ್ದ. ಅದು ತೃಪ್ತಿಯಿಂದ ಎಲ್ಲರ ಸಕಲ ಕಾರ್ಯಗಳಲ್ಲಿ ತೊಡಗುತಿತ್ತು. ಎಲರನೂ ಮೊದಲಿನಂತೆಯೇ ಬಾಲ ಆಡಿಸಿ ಪ್ರೀತಿಯಿಂದ ನೋಡಿಕೊಳ್ಳುತ್ತಿತ್ತು. “ನಾಯಿಗೆ ಎಷ್ಟು ದೊಡ್ಡ ಹೃದಯ ಇದೆ. ನಾವು ನಮ್ಮ ಮನೆ, ನಮ್ಮ ಕುಟುಂಬ ಅಂತ ಸ್ವಾರ್ಥತೆ ತೋರುತ್ತೇವೆ. ಮಾತುಬಾರದ ಮೂಕಪ್ರಾಣಿ ನಾಯಿ ಇಷ್ಟು ಜನ ಹೃದಯ ಗೆದ್ದರೂ, ವಿಲಿಯಮ್‌ನನ್ನು ಹಚ್ಚಿಕೊಂಡಿದೆಯಲ್ಲಾ” ಎಂದು ಉದ್ಗಾರ ತೆಗೆಯುತ್ತಿದ್ದರು ಜನರು.

ಮೂರು ತಿಂಗಳು ಆಗುತ್ತಾ ಬಂದು, ವಿಲಿಯಮ್ನ ಪ್ರಾಜೆಕ್ಟ್ ಮುಗಿಯುತ್ತಾ – ಬಂತು. ಮತ್ತೆ ಇಂಗ್ಲೆಂಡಿಗೆ ತೆರಳುವ ದಿನಗಳು ಹತ್ತಿರ ಬಂದಾಗ ವಿಲಿಯಮ್ಗೆ ಟಾಮ್‌ನ್ನು ಹೇಗೆ ಬಿಟ್ಟುಹೋಗಲಿ? ಎಂಬ ಯೋಚನೆ ಕಾಡುತ್ತಿತ್ತು, ಹೋಗಲೇ ಬೇಕಾದ ದಿನ ಬಂದೇ ಬಿಟ್ಟಿತು. ವಿಲಿಯಮ್ ಸೂಟುಕೇಸುಗಳನ್ನು ಪ್ಯಾಕ್ ಮಾಡುವಾಗಲೇ ಟಾಮ್ಗೆ ಎಲ್ಲ ಅರ್ಥವಾಗತೊಡಗಿತು. ತನ್ನ ಸ್ವಾಮಿ ಎಲ್ಲೋ ಹೋಗುತ್ತಿರುವ, ತನ್ನನ್ನು ಕರೆದೊಯ್ಯುವನೋ ಇಲ್ಲವೋ ಎಂಬ ಆತಂಕ ಆಗಲೇ ಅದರ ಮುಖದಲ್ಲಿ ತೋರುತ್ತಿತ್ತು, ಬೊಗಳಿ ಬೊಗಳಿ ತನ್ನ ಒಡೆಯನನ್ನು “ನನ್ನ ಬಿಟ್ಟು ಹೋಗುವೆಯಾ?” ಎಂದು ಕೇಳುತ್ತಿತ್ತು. ವಿಲಿಯಮ್‌ಗೆ ನಾಯಿಯ ಭಾವನೆಗಳು ಅರ್ಥವಾಗುತ್ತಿತ್ತು. ಆದರೂ ಅಸಹಾಯಕತೆಯಿಂದ ಕಣ್ಣೀರು ಒರೆಸಿಕೊಳ್ಳುತ್ತಿದ್ದ. “ನಾನು ಮನೆಗೆ ಟಾಮ್‌ನನ್ನು ಕರೆತಂದು ಇಷ್ಟು ಆತ್ಮೀಯತೆ ಬೆಳೆಸಬಾರದಿತ್ತು” ಎಂದು ನಾನಾ ಯೋಚನೆಗಳು ಬರುತ್ತಿತ್ತು. ವಿಮಾನ ನಿಲ್ದಾಣಕ್ಕೆ ಹೊರಡಲು ಟಾಕ್ಸಿ ಮನೆ ಮುಂದೆ ಬಂದು ನಿಂತಿತು. ಎರಡು ಸೂಟ್‌ಕೇಸನ್ನು ಇಟ್ಟು ವಿಲಿಯಮ್ ಮೇಲಿನ ಅಪಾರ್‌ಮೆಂಟ್‌ನಲ್ಲಿದ್ದ ಕುಟುಂಬಕ್ಕೆ ಟಾಮ್‌ನನ್ನು ಒಪ್ಪಿಸಿ ಟ್ಯಾಕ್ಸಿಯಲ್ಲಿ ಕುಳಿತ. ಟಾಕ್ಸಿ ಒಡನೆ ಹೊರಟುಬಿಟ್ಟಿತು. ವಿಲಿಯಮ್‌ಗೆ ದುಃಖ ಉಕ್ಕಿಬರುತ್ತಿತ್ತು. ಆದರೆ ಗತ್ಯಂತರವಿರಲಿಲ್ಲ. ಟಾಕ್ಸಿ ರಭಸದಿಂದ ವಿಮಾನ ನಿಲ್ದಾಣದ ಕಡೆಗೆ ಹೊರಟೇ ಬಿಟ್ಟಿತು. ಇತ್ತ ಟಾಮ್‌ಗೆ ಎಲ್ಲಾ ಅರ್ಥವಾಯಿತು. ತನ್ನ ಸರಪಳಿಯನ್ನು ಕಳಚಿಕೊಂಡು ಒಂದೇ ನಾಗಾಲೋಟದಲ್ಲಿ ಟಾಕ್ಸಿಯ ಹಿಂದೆ ಓಡಿತು. ಅದಕ್ಕೆ ಇತರ ವಾಹನಗಳ ಪರಿವೆಯೂ ಇರಲಿಲ್ಲ. ಅದರ ಗುರಿ ಒಂದೇ ಆಗಿತ್ತು. ಹೇಗಾದರೂ ಒಡೆಯನನ್ನು ಸೇರಬೇಕೆಂದು ಅದು ಓಟ ಮುಂದುವರಿಸಿತು. ಭರದಿಂದ ಹೋಗುತ್ತಿದ್ದ ಹತ್ತಾರು ಕಾರುಗಳು, ದೊಡ್ಡ ಲಾರಿಗಳು, ಆಟೋಗಳ ನಡುವೆ ಟಾಮ್ ಸಿಕ್ಕಿ ಹಾಕಿಕೊಂಡಿತು. ನುಸುಳಿ ಬಂದ ಒಂದು ಆಟೋ ಅದರ ಎಡಕಿವಿಯನ್ನು ಹರಿದು ಹಿಂಬದಿಯ ಎಡಕಾಲನ್ನು ಘಾಯಗೊಳಿಸಿತು. ಆಟೋ ಚಾಲಕನಿಗೆ ತನ್ನ ತಪ್ಪಿನ ಅರಿವಾಯಿತು. ಆಟೋ ನಿಲ್ಲಿಸಿ ಅದನ್ನು ಎತ್ತಿಕೊಂಡು ವೆಟರ್‌ನರಿ ಆಸ್ಪತ್ರೆಗೆ ಕರೆದೊಯ್ದ. ಅಲ್ಲಿ ತುರ್ತು ಚಿಕಿತ್ಸೆ ನೀಡಿದರು. ಅದರ ಎಡಕಿವಿ ಅರ್ಧ ಹರಿದು ಹೋಗಿ ರಸ್ತೆಯಲ್ಲಿ ಬಿದ್ದುಹೋಗಿತ್ತು. ಈಗ ಮೂಳೆ ಜಜ್ಜಿಹೋದ ಕಾಲನ್ನು ಕತ್ತರಿಸಬೇಕೆಂದಾಗ ಆಟೋ ಚಾಲಕನಿಗೆ ಬಹಳ ದುಃಖವಾಯಿತು. “ತನ್ನಿಂದ ಈ ತಪ್ಪು ಆಗಬಾರದಿತ್ತು” ಎಂದು ಪರಿತಪಿಸಿದ. ಟಾಮ್ ಹದಿನೈದು ದಿನದಲ್ಲಿ ತ್ರಿಪಾದದಲ್ಲಿ ಎದ್ದು ನಿಂತ, ಓಡಾಡಿದ, ಮತ್ತೆ ತನ್ನ ಪಾರ್ಕ್‌ಅನ್ನು ಹುಡುಕಿಕೊಂಡು ಬಂದು ಮಕ್ಕಳು, ಮುದುಕರು, ಯುವಕರೊಂದಿಗೆ ಒಂದಾದ. ಎಲ್ಲೆಲ್ಲಿ ಶ್ವೇತ ವರ್ಣದವರನ್ನು ಕಂಡರು, ಅಲ್ಲಿ ತನ್ನ ಒಡೆಯ ವಿಲಿಯಮ್‌ನನ್ನು ಹುಡುಕಲು ಆರಂಭಿಸುತ್ತಿದ್ದ. ವಿಲಿಯಮ್ ಕತ್ತಿಗೆ ಕಟ್ಟಿದ ಪಟ್ಟಿಯನ್ನು ಮಾತ್ರ ಯಾರೂ ಬಿಚ್ಚಲು ಅದು ಬಿಡಲಿಲ್ಲ. ಅದು ಟಾಮ್‌ಗೆ ಜೀವರಕ್ಷೆ ಕೊಟ್ಟಿತ್ತು. ಟಾಮ್ ಈಗ ‘ತ್ರಿಪಾದ’ ಎಂಬ ಹೊಸ ಹೆಸರಿಟ್ಟು ಕರೆದರೆ ಓಡಿ ಬರುತ್ತಿದ್ದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂಸಾರ
Next post ಹೋಗಲಾರೆ ನಾ ದೇಗುಲಕೆ

ಸಣ್ಣ ಕತೆ

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ನೆಮ್ಮದಿ

    ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಸಂಬಂಧ

    ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…