ಪ್ರಥುಲಾ

ಪ್ರಥುಲಾ

ದಕ್ಷಿಣ ಹಿಂದೂಸ್ಥಾನದ ಪ್ರಾಚೀನ ರಾಜ್ಯಗಳಲ್ಲಿ ವಿಜಯನಗರದಷ್ಟು ಲೋಕೋತ್ತರವಾದ ಕೀರ್ತಿಯನ್ನೂ, ಅಭ್ಯುದಯವನ್ನೂ ಹೊಂದಿದ ರಾಜ್ಯ ಮತ್ತೊಂದಿಲ್ಲ. ಉಷ್ಣ ಪ್ರದೇಶಗಳಲ್ಲಿ ರಂಜಿಸುವ ಸಂಧ್ಯಾ ಕಾಲದಂತೆ ಈ ರಾಜ್ಯವು ಅಲ್ಪಕಾಲ ಪ್ರಜ್ವಲಿಸಿ, ಒಡನೆಯೇ ಅಂಧಕಾರದಿಂದ ಆಚ್ಛಾದಿತವಾಯಿತು. ಪ್ರಕೃತದಲ್ಲಿ ಅದರ ದುರ್ಘಟ ದುರ್ಗಗಳು ಭಗ್ನವಾಗಿದ್ದರೂ, ಅದರ ಉನ್ನತ ಪ್ರಾಕಾರಗಳು ಬಿದ್ದು ಹೋಗಿದ್ದರೂ, ಅದರ ದಿವ್ಯ ದೇವಾಲಯಗಳು ಜೀರ್ಣವಾಗಿದ್ದರೂ ಒಂದು ಕಾಲದಲ್ಲಿ ವಿಜಯನಗರವು ಹಿಂದೂರಾಜರ ಬಲಸಂಪನ್ನವಾದ, ಮಹಿಮಾನ್ವಿತ ರಾಜ್ಯವಾಗಿತ್ತು. ಅದರ ವಿಸ್ತೀರ್ಣವು ಯುರೋಪ್ ಖಂಡದ ಒಸ್ತ್ರೀಯ ಸಂಸ್ಥಾನದಷ್ಟು ಇದ್ದಿತು. ಪ್ರಜೆಗಳು ೧೪ನೆಯ ಶತಮಾನದ ಒಸ್ತಿಯನ್ ಜನರಷ್ಟೇ ಬುದ್ಧಿವಂತರಾಗಿಯೂ ನಾಗರೀಕರಾಗಿಯೂ ಇದ್ದರು. ರಾಜಧಾನಿಯ ವೈಭವವೂ ಐಶ್ವರ್ಯವೂ ವಿಯೆನ್ನ ಎಂಬ ನಗರವನ್ನು ನೋಡಿದ ಪ್ರವಾಸಕರಿಗೆ ಬೆರಗು ಮಾಡುತ್ತಿದ್ದವು. ಫೆರಿಷ್ಠಾ ಎಂಬ ಮಹಮ್ಮದೀ ಇತಿಹಾಸಕಾರನು. ಕ್ರಿ.ಶಕೆಯ ೧೩೭೮ರಲ್ಲಿ ವಿಜಯನಗರದ ವರ್ಣನೆಯನ್ನು ಕುರಿತು ಹೀಗೆ ಬರೆದಿರುವನು:

“ಗೋವೆಯ ರೇವು, ಮಲೆಗಾವಿನ ದುರ್ಗ.. ಮತ್ತು ತುಳುಘಾಟಿಯಲ್ಲಿ ಅನೇಕ ಜಿಲ್ಲೆಗಳು ವಿಜಯ ನಗರದ ಅರಸುಗಳ ಕೈಸೇರಿದುವು. ರಾಜ್ಯವು ಪ್ರಜೆಗಳಿಂದ ಸುಖಮಯವಾಗಿದ್ದಿತು. ಪ್ರಜೆಗಳೆಲ್ಲರು ರಾಜನ ಅಧಿಕಾರವನ್ನು ಶಿರಸಾವಹಿಸುತ್ತಿದ್ದರು. ಮಲೆಯಾಳದ ಅರಸರೂ ಸಿಂಹಲ ಮೊದಲಾದ ದ್ವೀಪಗಳ ರಾಜರೂ ಕಳುಹಿಸಿದ ನಿಯೋಗಿಗಳು ವಿಜಯನಗರದ ರಾಜಸಭೆಯನ್ನು ಅಲಂಕರಿಸುತ್ತಿದ್ದರು. ಆ ದೇಶಗಳಿಂದ ಆಗಾಗ ರಾಜಾರ್ಹವಾದ ಉಡುಗೊರೆಗಳು ಕಳುಹಿಸಲ್ಪಡುತ್ತಿದ್ದವು.

ವಿಜಯನಗರವನ್ನು ಸ್ಥಾಪಿಸಿದ ಹರಿಹರ ಮತ್ತು ಬುಕ್ಕ ಎಂಬ ಅಣ್ಣತಮ್ಮಂದಿರಲ್ಲಿ ಬುಕ್ಕನು ೧೩೭೮ರಲ್ಲಿ ಆಳಿದನು. ಬುಕ್ಕರಾಯನ ಬಳಿಕ ಅವನ ಮಗನಾದ ಎರಡನೆಯ ಹರಿಹರರಾಯನ ಆಳ್ವಿಕೆಯಲ್ಲಿ ರಾಜ್ಯವು ವಿಸ್ತಾರಗೊಂಡಿತು. ಆ ರಾಜ್ಯವಿಸ್ತಾರವು ಎಷ್ಟಾಯಿತೆಂದು ಮೈಸೂರು, ಧಾರವಾಡ, ಕಂಚಿ, ಚೆಂಗಲ್ಪಟ್ಟು, ತಿರುಚಿನಾಪಳ್ಳಿ ಮೊದಲಾದ ಸ್ಥಳಗಳಲ್ಲಿ ಅವನು ಕೊರೆಯಿಸಿದ ಶಿಲಾಲೇಖಗಳಿಂದ ಈಗಲೂ ವಿಶದವಾಗುತ್ತಿದೆ. ಹರಿಹರರಾಯನ ತರುವಾಯ ಎರಡನೆಯ ಬುಕ್ಕರಾಯನು ಪಟ್ಟಕ್ಕೆ ಬಂದನು. ಆನಂತರ ಕ್ರಿ.ಶಕೆಯ ೧೪೦೬ರಲ್ಲಿ ಅವನ ತಮ್ಮನಾದ ದೇವರಾಯನು ಸಿಂಹಾಸನವನ್ನು ಏರಿದನು. ಪ್ರಸಕ್ತ ಸಮಯದಲ್ಲಿ ಈ ದೇವರಾಯನೇ ವಿಜಯನಗರವನ್ನು ಆಳುತ್ತಿದ್ದನು.
ವಿಜಯನಗರದ ಹಿಂದೂರಾಜರಿಗೂ, ಭಾಮಿನಿ ರಾಜ್ಯದ ಮುಸಲ್ಮಾನ್ ಸುಲ್ತಾನರಿಗೂ ಪೂರ್ವದಿಂದಲೂ ಮನಸ್ತಾಪವಿದ್ದಿತು. ಮತದ್ವೇಷವೇ ಮನಸ್ತಾಪದ ಮುಖ್ಯ ಕಾರಣವಾಗಿದ್ದರೂ, ತಮ್ಮ ತಮ್ಮ ರಾಜ್ಯಗಳ ಎಲ್ಲೆಯನ್ನು ಕುರಿತು ನೆವಮಾಡಿ, ಎರಡು ರಾಜ್ಯಗಳೂ ಘೋರವಾದ ಯುದ್ಧಗಳಲ್ಲಿ ಸೇರುತ್ತಿದ್ದವು. ವಿಜಯನಗರ ಸಂಸ್ಥಾನದ ಉತ್ತರ ಮೇರೆಯು ತುಂಗಭದ್ರಾ ನದಿ, ಹಾಗೂ ಭಾಮಿನಿ ರಾಜ್ಯದ ದಕ್ಷಿಣ ಮೇರೆಯು ಕೃಷ್ಣಾ ನದಿಯಾಗಿದ್ದಿತು. ಈ ಎರಡೂ ನದಿಗಳ ನಡುವೆ ಇದ್ದ ಪ್ರದೇಶದ ಅಧಿಕಾರವನ್ನು ಎರಡೂ ರಾಜ್ಯಗಳೂ ವಿವಾದಿಸುತ್ತಿದ್ದವು. ಎರಡೂ ಸಂಸ್ಥಾನಗಳ ವ್ಯಾಪಾರಕ್ಕೆ ಇದುವೇ ಹೆದ್ದಾರಿಯಾದುದರಿಂದ, ಈ ಪ್ರದೇಶದ ಅಧಿಕಾರಕ್ಕೋಸ್ಕರ ಅನೇಕ ಕಲಹಗಳು ಉಂಟಾದುವು. ಈ ಯುದ್ಧಗಳಿಂದ ಆ ಪ್ರದೇಶವು ದಿನೇ ದಿನೇ ಹೀನಗತಿಗೆ ಇಳಿದು ಹೋಯಿತಲ್ಲದೆ ರಾಜ್ಯಗಳಿಗೂ ಪ್ರಯೋಜನಾಂಶವೇನೂ ಸಿಗಲಿಲ್ಲ. ಈ ಪ್ರದೇಶದಲ್ಲಿನ ಮುಖ್ಯಸ್ಥಳವಾದ ಮುದುಗಲ್ಲು ಇಬ್ಬರನ್ನೂ ಒಡೆಯನನಾಗಿ ಸ್ವೀಕರಿಸಲಿಲ್ಲ.

ಮುದುಗಲ್ಲು ಸ್ಥಳದಲ್ಲಿ ಒಂದು ಕುಟೀರ; ಸಾಮಾನ್ಯವಾದ ಕುಟೀರ, ಕುಟೀರದ ಒಳಗೆ ಯಾರೂ ಇರಲಿಲ್ಲ. ಮನೆಯ ಅಂಗಳದಲ್ಲಿ ಒಬ್ಬ ರಮಣಿಯು ನಿಂತಿದ್ದಳು. ಮಹಾಲಯ ದಿವಸಗಳ ಕತ್ತಲಿಂದ ವ್ಯಥಿತವಾದ ಜನದೃಷ್ಟಿಗೆ ಶರತ್ಕಾಲದ ಶಶಿಲೇಖೆಯು ಯಾವ ಆನಂದವನ್ನು ಬೀರುವುದೋ, ಆ ಸುಖೋಲ್ಲಾಸವನ್ನು ಈ ಸ್ತ್ರೀಯ ದರ್ಶನವು ವಿಸ್ತರಿಸುತ್ತಿತ್ತು. ಸಮುದ್ರದಲ್ಲಿ ಉಬ್ಬರವಿಳಿತಗಳು ಸಹಜವಾಗಿರುವಂತೆ, ರಮಣೀಜನಗಳ ಅಂಗಸೌಂದರ್ಯದಲ್ಲಿಯೂ ಉಬ್ಬರವಿಳಿತಗಳು ಇರುವುವು. ಯುವತಿಯರ ಶೋಭಾರಾಶಿಯು ಇಳಿತಕ್ಕೆ ಮೊದಲು ಯಾವ ಪ್ರಾಯದಲ್ಲಿ ಉಬ್ಬರದಿಂದ ಉಕ್ಕಿಬಂದು ದೇಹವನ್ನು ಆಕ್ರಮಿಸಿ ಬಿಡುವುದೋ, ಅಂತಹ ವಯಸ್ಸಿನಲ್ಲಿ ಈ ರಮಣಿಯು ಕಾಲಿಡುವಂತಿದ್ದಳು. ಅವಿರಳವಾದ ಕೇಶದಾಮ, ದೀರ್ಘವಾದ ಸೀಮಂತ, ವಿಶಾಲವಾದ ಹಣೆ, ವಕ್ರವಾದ ಹುಬ್ಬು, ಚಂಚಲವಾದ ಕಣ್ಣು, ಪ್ರೇಮಮಯವಾದ ತುಟಿ, ಪ್ರಜ್ವಲಿಸುವ ಮುಖ ಇವೆಲ್ಲವು ಲಾವಣ್ಯ ಲಕ್ಷಣಗಳಾದರೆ ಈ ರಮಣಿಯಲ್ಲಿ ಆ ಲಕ್ಷಣಗಳು ಇಲ್ಲದೆ ಇರಲಿಲ್ಲ. ಪ್ರಾಚೀನ ಕವಿಗಳು ಸತ್ಯಭಾಮಾ, ದ್ರೌಪದಿ, ಜಾನಕಿ ಮೊದಲಾದ ಸುಂದರಿಯರನ್ನು ಅತಿಶಯೋಕ್ತಿಯಿಂದ ವರ್ಣಿಸಿರುವರು. ಈ ಯುವತಿಯು ಇವರೊಳಗೆ ಯಾರನ್ನು ಹೋಲಿದ್ದಳೋ ನಾವು ಹೇಳಲಾರೆವು. ಸತ್ಯಭಾಮೆಯ ಹುಬ್ಬುಗಂಟು, ದ್ರೌಪದಿಯ ವೀರತ್ವ, ಜಾನಕಿಯ ಸರಳತೆ ಇವಳ ಮುಖದಲ್ಲಿ ಅಂಕಿತವಾಗಿದ್ದವು. ಆದರೆ ಆ ಹುಬ್ಬುಗಂಟು ಒರಟುತನದ ಚಿಹ್ನವಾಗಿರಲಿಲ್ಲ. ಆ ವೀರತ್ವವು ಹೃದಯದ ಕಠೋರ ಭಾವದ ಮುದ್ರೆಯಾಗಿರಲಿಲ್ಲ. ಆ ಸರಳತೆಯು ಅನ್ಯರಿಂದ ವಂಚಿತಳಾಗುವಳೆಂದು ಸೂಚಿಸುತ್ತಿರಲಿಲ್ಲ. ಉಟ್ಟುಕೊಂಡ ಹರಕುಬಟ್ಟೆಯು ರಂಧ್ರಯುಕ್ತವಾಗಿದ್ದರೂ ಯುವತಿಯ ಮಂಜುಲವಾದ ದೇಹಕಾಂತಿಯಿಂದ ನೂತನ ವಾದ ಸ್ವರೂಪವನ್ನೇ ಹೊಂದಿ, ಜರಿಯ ಚುಕ್ಕೆಗಳಿಂದ ಕೂಡಿದಂತೆ ಕಂಗೊಳಿಸುತ್ತಿತ್ತು.

ಯುವತಿಯು ಯಾರನ್ನೋ ನಿರೀಕ್ಷಿಸಿಕೊಂಡಿದ್ದಂತೆ ನಿಂತಿದ್ದಳು. ಆಗಾಗ ಏನನ್ನೋ ಕಿವಿಗೊಟ್ಟು ಕೇಳುತ್ತಿದ್ದಳು; ಒಮ್ಮೊಮ್ಮೆ ಮಾರ್ಗದ ತುದಿಯವರೆಗೆ ಕಣ್ಣನ್ನು ಚಾಚುತ್ತಿದ್ದಳು. ಮಾರ್ಗದಲ್ಲಿ ಜನಗಳು ನಡೆಯುವ ಸದ್ದಾದರೆ, ಕೊರಲನ್ನು ನೀಡಿ, ಯಾರ ಆಗಮನವನ್ನೋ ಹಾರೈಸಿದಂತೆ ಇಣಿಕಿ ನೋಡುತ್ತಿದ್ದಳು. ದಾರಿಗರು ತನ್ನನ್ನೇ ದೃಷ್ಟಿಸುತ್ತಲೇ ನಾಚಿದಂತೆ ತಾನೇ ಹಿಂದೆಗೆದು ಅಲ್ಲಲ್ಲಿ ನಡೆಯುತ್ತಿದ್ದಳು. ಅರ್ಧತಾಸಿನ ಬಳಿಕ ಒಬ್ಬ ವೃದ್ಧನು ಮಾರ್ಗದಿಂದ ಅಂಗಳಕ್ಕೆ ಕಾಲಿಟ್ಟನು. ಬಂದವನು ತನ್ನ ಹಿಂದುಗಡೆಯಲ್ಲಿ ಇದ್ದುದರಿಂದ, ರಮಣಿಯು ಮೊದಲು ಅವನನ್ನು ದೃಷ್ಟಿಸಲಿಲ್ಲ. ಬಂದವನು ಕಾಲಿನ ಧೂಳು ಹಾರಿಸುವುದಕ್ಕೆ ಅಂಗಳದಲ್ಲಿ ಸಪ್ಪುಳಿಸಿದನು. ಒಡನೆ “ಮಗು! ಪ್ರಥುಲಾ! ಮನೆಯೊಳಗೆ ದೀಪ ಹಚ್ಚಲಿಲ್ಲವೇ? ಕತ್ತಲಾಗುತ್ತಾ ಬಂದಿತು” ಎಂದನು.

ರಮಣಿಯು ಹತ್ತಿರಕ್ಕೆ ಬಂದು, “ಅಪ್ಪಾ! ಹಾದಿಯಲ್ಲಿ ನೀನು ಯಾರನ್ನಾದರೂ ಕಂಡೆಯಾ? ಒಳಗೆ ದೀಪ ಹಚ್ಚಿರುವೆನು” ಎಂದು ಉತ್ತರ ಕೊಟ್ಟಳು.

ಮುದುಕನು ಜಗಲಿಯ ಮೇಲಿದ್ದ ತಂಬಿಗೆಯನ್ನು ತೆಗೆದುಕೊಂಡು, ಕಾಲು ತೊಳೆದು ಬಂದನು. ಮಗಳು ಇನ್ನೂ ಅಂಗಳದಲ್ಲಿ ತಳುವಿದುದನ್ನು ನೋಡಿ ವೃದ್ಧನು “ಮಗು! ಒಳಕ್ಕೆ ಬಾ! ನೀನು ಅಲ್ಲಿ ಸುಮ್ಮನೆ ನಿಂತಿರುವೆ ಏಕೆ?” ಎಂದನು.

ಮಗಳು ನಗುತ್ತಾ “ಅಪ್ಪಾ! ನೀನು ಜ್ಯೋತಿಷ್ಯವನ್ನು ಬಲ್ಲೆಯಷ್ಟೇ? ನಾನು ಏಕೆ ನಿಂತಿರುವೆನೆಂದು ಹೇಳು?” ಎಂದು ಪ್ರಶ್ನೆ ಮಾಡಿದಳು.

ತಂದೆಯು ಪ್ರೇಮದಿಂದ “ಅಮ್ಮಣ್ಣಿ ನನ್ನನ್ನು ಪರೀಕ್ಷಿಸಲಿಕ್ಕೆ ನಿಂತಿರುವೆಯಾ?” ಎಂದು ಹೇಳಿ ಒಂದು ನಿಮಿಷ ಯಾವುದನ್ನೋ ತನ್ನೊಳಗೆ ಗುಣಿಸಿ ನೋಡಿ “ಮಗು! ಪ್ರಥುಲಾ! ನೀನು ನಿನ್ನ ಭಾವಿ ಪತಿಯನ್ನು, ನಿನ್ನ ಹೃದಯವಲ್ಲಭನನ್ನು ನಿನ್ನ ಗುಂಡ-

ಮಾತು ಮುಗಿಯುವಷ್ಟರಲ್ಲಿ ಮಗಳು ಓಡಿಬಂದು, ತಂದೆಯ ಮುಖವನ್ನು ತನ್ನ ಎರಡೂ ಕೈಗಳಿಂದ ಮುಚ್ಚಿ, ಮನಸ್ಸಿನಲ್ಲೇ ನಗಾಡತೊಡಗಿದಳು. ವೃದ್ಧನು ಮಗಳ ಕೈ ಗಳನ್ನು ಎತ್ತಿ ಹಿಡಿದು, “ನಿನ್ನ ಗುಂಡನಾಯಕನ ಆಗಮನವನ್ನು” ಎಂದು ಪೂರೈಸಿದನು.

ವೃದ್ಧನು ಮುದುಗಲ್ಲು ಹಳ್ಳಿಯ ನಿವಾಸಕನು. ಇವನ ಪೂರ್ವಜರು ತುಂಗಭದ್ರಾ ಮತ್ತು ಕೃಷ್ಣಾ ನದಿಗಳ ನಡುವಿನಲ್ಲಿದ್ದ ಪ್ರದೇಶಕ್ಕೆ ಒಂದು ಕಾಲದಲ್ಲಿ ಅಧೀಶ್ವರರಾಗಿದ್ದರು. ವಿಜಯನಗರದ ರಾಜನಾದ ಹರಿಹರನು ಇವನ ಪೂರ್ವಜರನ್ನು ವಿಶ್ವಾಸಘಾತುಕತೆಯಿಂದ ಕೊಂದು ಆ ಪ್ರದೇಶವನ್ನು ತಾನೇ ಆಕ್ರಮಿಸಿಕೊಂಡನು. ಹಾಗೂ ಭಾಮಿನಿ ಸುಲ್ತಾನರು ಇದೇ ಸ್ಥಳಕ್ಕೆ ತಾವು ಒಡೆಯರೆಂದು ತಮ್ಮ ಅಧಿಕಾರವನ್ನು ತೋರಿಸುತ್ತಿದ್ದರು. ಇವರಿಬ್ಬರ ಪರಸ್ಪರ ಕಲಹಗಳಿಂದ ಇವನ ಪೂರ್ವಜರ ಮಹತ್ವವೆಲ್ಲವು ಹೋಗಿ, ಪ್ರಕೃತದಲ್ಲಿ ಇವನು ಅತೀ ದರಿದ್ರನಾಗಿದ್ದನು. ಆದರೂ ಮುದುಗಲ್ಲಿನ ನಿವಾಸಕರ ಮನ್ನಣೆಗೂ ಪ್ರೀತಿಗೂ ಪಾತ್ರನಾಗಿದ್ದನು. ಪತಿಪಾರಾಯಣಳಾದ ಇವನ ಹೆಂಡತಿಯು ಈ ಕಥಾಕಾಲದ ೧೦ ವರ್ಷಗಳ ಹಿಂದೆ ಮೃತಳಾದಳು. ಇವಳ ಮರಣದ ಬಳಿಕ ವೃದ್ಧನು ಪ್ರಥುಲೆಗೆ ತಂದೆಯೂ, ತಾಯಿಯೂ ಆದನು. ವೃದ್ಧನ ಧರ್ಮಪತ್ನಿಯು ತನ್ನ ಮರಣತಲ್ಪದಲ್ಲಿ ಮಗಳ ವಿವಾಹವನ್ನು ಕುರಿತು ಸೂಚಿಸಿ ಮೃತಳಾದಳು. ಪ್ರಥುಲೆಯು ಈ ಸಾಯಂಕಾಲದಲ್ಲಿ ಯಾರ ಆಗಮನವನ್ನು ಎದುರ್ನೋಡುತ್ತಿದ್ದಳೋ ಆ ಗುಂಡ ನಾಯಕನೇ ತನ್ನ ಅಳಿಯನಾಗಬೇಕೆಂದು ಅವಳ ಮರಣ ಪ್ರಾರ್ಥನೆಯಾಗಿದ್ದಿತು. ವೃದ್ಧನು ಮೊದಮೊದಲು ಈ ಪ್ರಾರ್ಥನೆಯನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಕೊನೆಗೆ ಮಗಳಿಗೂ, ನಾಯಕನಿಗೂ ಆಂತರಿಕವಾದ ಪ್ರೇಮವಿರುವುದೆಂದು ಖಚಿತ ಮಾಡಿ ಕೊಂಡು, ಮಗಳ ವಿವಾಹ ಸಂಬಂಧಕ್ಕೆ ಒಪ್ಪಿದನು. ಗುಂಡನಾಯಕನು ವಿಜಯನಗರದ ಸೈನ್ಯದಲ್ಲಿ ಒಂದು ಸಾಮಾನ್ಯವಾದ ಪದವಿಯನ್ನು ಹೊಂದಿದ್ದನು. ತನಗೆ ಅವಕಾಶ ವಿದ್ದಾಗ, ಗುಂಡನಾಯಕನು ಮುದುಗಲ್ಲಿಗೆ ಬಂದು ತನ್ನ ಪ್ರಿಯಳ ಮಧುರವಾದ ಸಹವಾಸದಲ್ಲಿ ಒಂದೆರಡು ದಿನಗಳನ್ನು ಕಳೆದುಹೋಗುತ್ತಿದ್ದನು. ಪ್ರಕೃತದಲ್ಲಿ ಗುಂಡ ನಾಯಕನು ತನ್ನ ಪ್ರಾಣೇಶ್ವರಿಯನ್ನು ವಿಜಯನಗರದಲ್ಲಿ ನಡೆಯುವ ಮಹಾರ್ನವಮಿಯ ಉತ್ಸವಕ್ಕೆ ಕೊಂಡು ಹೋಗುವೆನೆಂದು ಕೆಲವು ದಿನಗಳ ಹಿಂದೆ ಮಾತುಕೊಟ್ಟಿದ್ದನು. ಅದು ಕಾರಣದಿಂದಲೇ ಪ್ರಫುಲೆಯು ಜಾತಕಪಕ್ಷಿಯು ಮೋಡಗಳ ಆಗಮನವನ್ನೇ ನಿರೀಕ್ಷಿಸುವಂತೆ – ತನ್ನ ಭಾವೀಪತಿಯ ಹಾದಿಯನ್ನು ಎದುರ್ನೊಡುತ್ತಿದ್ದಳು.

ಸ್ವಲ್ಪ ಹೊತ್ತಿನ ಮೇಲೆ ಒಬ್ಬ ಯುವಕನು ಮನೆಗೆ ಬಂದನು. ಇವನನ್ನು ನೋಡುತ್ತಲೇ ಪ್ರಥುಲೆಯ ಕಣ್ ನೈದಿಲೆಯು ಅರಳಿತು. ಪ್ರಥುಲೆಯು ಯುವಕನ ಬಳಿಗೆ ಬಂದು, “ನಿನ್ನ ಆಗಮನವನ್ನು ಇದುವರೆಗೆ ಹಾರೈಸುತ್ತ ಇದ್ದೆವು. ನೀನು ಹಾದಿಯಲ್ಲಿ ತಳುವಿದೆಯೋ ಏನೋ ಎಂದು ಚಿಂತಿಸುತ್ತಿದ್ದೆನು” ಎಂದಳು.

ಯುವಕನು ವೃದ್ಧನಿಗೆ ಸಾಷ್ಟಾಂಗ ಪ್ರಣಾಮಗಳನ್ನು ಮಾಡಿ, ಪ್ರಥುಲೆಯನ್ನೇ ದೃಷ್ಟಿಸಿ “ಈಗ ನಾನು ಬಂದಿರುವೆನಷ್ಟೆ. ಇನ್ನೂ ಚಿಂತೆಯುಂಟೇ?” ಎಂದು ಕೇಳಿದನು.

“ವಿಜಯನಗರಕ್ಕೆ ಎಂದು ಹೋಗುವುದೆಂಬ ಚಿಂತೆಯೊಂದಲ್ಲದೆ ಬೇರೊಂದಿಲ್ಲ” ಎಂದು ಯುವತಿಯು ಉತ್ತರಕೊಟ್ಟಳು.

ವೃದ್ಧನು ಈ ಸಮಯದಲ್ಲಿ ಕವಡಿಗಳನ್ನು ಕೈಯಲ್ಲಿಕೊಂಡು ಎಂದಿನಂತೆ ಏನನ್ನೋ ಗುಣಿಸುತ್ತಿದ್ದನು.

ಯುವಕನು “ಇನ್ನೂ ವಿಳಂಬ ಮಾಡಲಾಗದು. ವಿಜಯನಗರದ ಮಹಾರ್ನವಮಿಯ ಉತ್ಸವವು ಒಂದೆರಡು ದಿನಗಳಲ್ಲೇ ಮುಗಿಯುವುದು” ಎಂದನು.

ಪ್ರಥುಲಾ:- “ನಾನು ಹೊರಡುವುದಕ್ಕೆ ಕಾಲ್ಬೆರಳ ಮೇಲೆ ನಿಂತಿರುವೆನು. ನಾಳೆ ಬೆಳಗ್ಗೆ ಪ್ರಯಾಣ ಬೆಳೆಯಿಸಿದರೆ ಆಗದೇ?”

ಯುವಕ-“ಈ ರಾತ್ರಿ ತುಂಗಭದ್ರೆಯನ್ನು ದಾಟಿದರೆ, ನಾಳೆ ಸಾವಕಾಶದಿಂದ ವಿಜಯನಗರವನ್ನು ಮುಟ್ಟಬಹುದು.”

ಪ್ರಥುಲಾ:-“ನನಗೆ ಒಪ್ಪಿಕೆ. ಆದರೆ ಅಪ್ಪನು ಏನು ಹೇಳುವನೋ ತಿಳಿಯಲಾರೆ.”

ಯುವಕ:-“ನೀನು ನನ್ನೊಡನೆ ಬರುವುದಕ್ಕೆ ಅವನು ಅಡ್ಡಿಮಾಡುವನೇ? ನಮ್ಮ ಪ್ರೇಮಪರಿಚಯವು ಅವನು ಅರಿಯದವನೇ?”

ಆ ಸಮಯದಲ್ಲಿ ವೃದ್ಧನು ತನ್ನ ಗುಣಿತವನ್ನು ತೀರಿಸಿ ಭಾವೀದಂಪತಿಗಳ ಕಡೆಗೆ ನೋಡಿ ನಿಟ್ಟುಸುರಿಟ್ಟನು. ಇವರಿಬ್ಬರ ಆಸೆಯನ್ನೂ ಅವಸರವನ್ನೂ ನೋಡಿ ಮನಸ್ಸಿನಲ್ಲೇ ಮರುಗಿದನು. ಪುನಃ ಕವಡೆಗಳನ್ನು ಹರಡಿ ಪರಿಷ್ಕಾರವಾಗಿ ಲೆಕ್ಕ ಮಾಡುವಂತಿದ್ದನು. ಮಗಳು ಮುದುಕನ ಬಳಿಗೆ ಬಂದು, “ಅಪ್ಪಾ! ನಾವು ಈ ರಾತ್ರಿಯೇ ವಿಜಯನಗರಕ್ಕೆ ಹೊರಡಬೇಕೆಂದಿರುವೆವು; ನಿನ್ನ ಅಪ್ಪಣೆಯನ್ನು ಕೇಳಲಿಚ್ಛಿಸುವೆವು” ಎಂದಳು. ಯುವಕನು ಅವನ ಸಮೀದಲ್ಲೇ ಬಂದು ಕುಳಿತನು.

ವೃದ್ಧನು ಗಣಿತವನ್ನು ಮಾಡುತ್ತಾ,

ದ್ವಿಮೂರ್ತಿರಾಶಾವುದಯಂ ಪ್ರಪನ್ನೇ ಕ್ರೂರಗ್ರಹೈಯುಕ್ತ
ನಿರೀಕ್ಷ ತೇಜ||
ಪ್ರಯಾತಿಯದ್ಯಪ್ಯಬುದಃತದಾನೀ ನಿವರ್ತತೇ ಶತ್ರು ಜನಾಭಿಭೂತ||

ಎಂದು ಶ್ಲೋಕಿಸಿದನು.

ಬಳಿಕ ಮುದುಕನು, “ದ್ವಿಸ್ವಭಾವದ ಮಿಥುನರಾಶಿಯ ಸಪ್ತಮ ಕೇಂದ್ರವಾದ ಧನುಸ್ಸಿನಲ್ಲಿ ಕ್ರೂರನಾದ, ರಾಜಗ್ರಹನಾದ, ಆಸ್ತವನೈದುವ, ಸೂರ್ಯನು ಕೇತುವಿನಿಂದ ಕೂಡಿ ಆಸ್ತಮಿಸುವುದರಿಂದ ಪ್ರಯಾಣವು ನಿಷಿದ್ದ” ಎಂದನು.

ದಂಪತಿಗಳಿಬ್ಬರೂ ತಟಸ್ಥರಾಗಿ, ವ್ಯಸನಸೂಚಕವಾದ ಪರಸ್ಪರ ಮುಖವನ್ನು ನೋಡಿದರು. ಪ್ರಥುಲೆಯು “ಅಪ್ಪಾ! ದೇವರ ಉತ್ಸವವನ್ನು ನೋಡುವುದಕ್ಕೆ ಹೋಗುವ ನಮಗೆ ವಿಪತ್ತು ಬಂದರೆ ದೇವರೇ ಮುನಿದಂತಾದಾನು. ದೇವನು ಕರುಣಾಸಾಗರನು; ಅವನು ತನ್ನ ಭಕ್ತರನ್ನು ಕೈಬಿಡಲಾರನು. ನಾವು ಹೋಗುವುದೇ ಸಿದ್ಧ” ಎಂದು ದೃಢವಾಗಿ ಹೇಳಿದಳು.

ವೃದ್ಧ ಜ್ಯೋತಿಷ್ಯಕಾರನು ಖೇದಪೂರ್ವಕವಾಗಿ, “ಅಮ್ಮಾ! ಪ್ರಥುಲಾ! ನೀನು ಇಚ್ಚಿಸಿದುದನ್ನೂ ಮಾಡಿಯೇ ಬಿಡುವೆ. ನಾನು ನಿನಗೆ ಹೆಚ್ಚು ಹೇಳಲಾರೆನು. ಗುಂಡನಾಯಕಾ! ನನ್ನ ಮಗಳಿಂದ ನಿನಗೆ ಅಪಾಯ ಬರುವ ಸಂಭವ ತೋರುತ್ತಿದೆ – ಸರಿ! ಅಮ್ಮಾ! ಬೇಡ! ಈ ರಾತ್ರಿ ಹೋಗಬೇಡ! ಹೋಗಬೇಡಮ್ಮ!” ಎಂದನು.

ಗುಂಡನಾಯಕನು “ಪ್ರಥುಲೆಯಿಂದ ನನಗೆ ವಿಪತ್ತು ಬರುವುದಾದರೆ ನಾನು ಮರಣಕ್ಕೆ ಸಿದ್ಧನಿರುವೆನು” ಎಂದು ಹೇಳಿದನು.

ಮುದುಕನು ಮೆಲ್ಲನೆ ಕಣ್ಣೀರನ್ನು ಮರೆಯಿಸಿ “ನನ್ನ ಅಡ್ಡಿಯಿಲ್ಲ! ಬುಧನು ಲಗ್ನಾಧಿಪತಿ ಯಾದುದರಿಂದ ಅಬುಧಃ ಎಂದಿರುವುದರಿಂದ ಹೊರಡಲು ಅನುಕೂಲವಿದೆ” ಎಂದು ಹೇಳಿ “ಮಗು, ಪ್ರಥುಲಾ! ನಿನ್ನ ಯಶಸ್ಸು ವಿಜಯನಗರದ ಮಹಿಮೆಗಿಂತಲೂ ಚಿರಕಾಲ ಬಾಳುವ ಹಾಗೆ ದೇವರು ಕರುಣಿಸಲಿ!” ಎಂದು ಹರಸಿದನು.

ವಿಜಯನಗರದಲ್ಲಿ ಇನ್ನು ಅರುಣೋದಯವಾಗಿರಲಿಲ್ಲ. ಅಷ್ಟಮಿಯ ರಾತ್ರಿಯ ಮಹೋತ್ಸವದಿಂದ ಆಯಾಸಗೊಂಡಿದ್ದ ಜನಗಳು ಇನ್ನೂ ಸುಖನಿದ್ರೆಯಲ್ಲಿ ವಿಶ್ರಾಂತಿಯನ್ನು ಹೊಂದುತ್ತಿದ್ದರು. ಅರಮನೆಯೊಳಗೆ ದೇವರಾಜನು ಎಂದಿನಂತೆ ಬೇಗ ಎಚ್ಚತ್ತು ತನ್ನ ದಿನಚರ್ಯೆಗಳನ್ನು ಮಾಡತೊಡಗಿದನು. ಒಂದು ಸೇರು ಎಳ್ಳೆಣ್ಣೆಯನ್ನು ಪಾತ್ರೆಯಲ್ಲಿ ಅಳೆದುಕೊಂಡು ಒಬ್ಬ ಭೃತ್ಯನು ಬಂದನು. ಇವನು ನೋಟಕ್ಕೆ ಭೃತ್ಯನಂತಿದ್ದರೂ ತನ್ನ ಚರ್ಯೆಚೇಷ್ಟೆಗಳಲ್ಲಿ ಯಜಮಾನನಂತಿದ್ದನು. ಈತನು ಅರಸನ ಗೂಢಮಿತ್ರನಾಗಿದ್ದನು. ಅನ್ಯರಿಂದ ಮಾಡಿಸಲಾಗದ ಕೃತ್ಯಗಳನ್ನು ರಾಜನು ಇವನಿಂದ ಮಾಡಿಸುತ್ತಿದ್ದನು. ಈತನ ಮೇಲೆ ಅರಸನಿಗೆ ಅತ್ಯಂತ ವಿಶ್ವಾಸ; ರಾಜ್ಯವನ್ನಾದರೂ ಬಿಡುವುದಕ್ಕೆ ಒಪ್ಪುವನು; ಈ ಭೃತ್ಯ ಸ್ನೇಹಿತನನ್ನು ಅರಸನು ತನ್ನಿಂದ ದೂರ ಮಾಡಲು ಸಿದ್ಧನಾಗಿರಲಿಲ್ಲ. ಇತಿಹಾಸದಲ್ಲಿ ಈ ಪಾಪಿಯು ತಿಮ್ಮರಸ, ತಿಮ್ಮಪ್ರಭು, ಎಂಬ ಹೆಸರು ಗಳಿಂದ ಪ್ರಖ್ಯಾತನಾಗಿರುವನು. ತಿಮ್ಮನು ತನ್ನ ಕೈಯಲ್ಲಿ ಹಿಡಿದ ಎಣ್ಣೆಯ ಪಾತ್ರೆಯನ್ನು ದೇವರಾಜನು ಕೊಂಡು ಎಣ್ಣೆಯನ್ನು ಎಂದಿನಂತೆ ಕುಡಿದು ಬಿಟ್ಟನು. ಭೃತ್ಯನು ಇನ್ನಿಷ್ಟು ಎಣ್ಣೆಯನ್ನು ಅಳೆದು ಅರಸನ ಮೈಗೆ ತಿಕ್ಕತೊಡಗಿದನು. ಇದಾದ ಬಳಿಕ ಎರಡು ಮುದ್ಗರಗಳನ್ನು ತಂದು ಅರಸನ ಕೈಗೆ ಕೊಟ್ಟನು. ದೇವರಾಜನು ಅವನ್ನು ಕೈಗಳಿಂದ ಬೀಸುತ್ತ, ದಣಿವಿನ ಬೆವರಿನಲ್ಲಿ ಎಣ್ಣೆಯನ್ನು ಆರಿಸಿಬಿಟ್ಟನು. ಅಷ್ಟರಲ್ಲಿ ತಿಮ್ಮನ ಆಜ್ಞೆಯ ಪ್ರಕಾರ ಕುದುರೆಗಾರನು ಒದಗಿಸಿದ ಬೆಳ್ಗುದುರೆಯನ್ನು ಹತ್ತಿ ಸೂರ್ಯೋದಯದ ಮೊದಲೇ ಅರಸನು ನಿತ್ಯದ ಅಭ್ಯಾಸದಂತೆ ಸವಾರಿಗೆ ಹೋದನು.

ಸೂರ್ಯನು ಪರ್ವತ ಶಿಖರಗಳ ಮರೆಯಿಂದ ನಗುನಗುತ್ತಾ ಉದಯಿಸುತ್ತಲಿದ್ದನು. ಕ್ಷಣಕಾಲ ಶಿಖರಾಗ್ರದಲ್ಲಿ ನಿಂತು ವಿಶ್ವವನ್ನೆಲ್ಲಾ ತನ್ನ ಸಹಸ್ರಕರಗಳಿಂದ ಆಲಿಂಗಿಸಿದನು. ಆಶ್ವಿಜ ಶುದ್ಧ ನವಮಿಯ ದಿನ ವಿಜಯನಗರದಲ್ಲಿ ನಡೆಯುವ ಮಹೋತ್ಸವದ ಸಂಭ್ರಮಕ್ಕೆ ಸನ್ನಾಹ ಸಿದ್ಧತೆಗಳು ಆಗತೊಡಗಿದ್ದುವು. ಮಠಗಳೂ, ಮಂದಿರಗಳೂ, ಧ್ವಜ ಪತಾಕೆಗಳಿಂದ ಅಲಂಕೃತವಾದವು. ರಾಜನ ಅಶ್ವಶಾಲೆಯಲ್ಲಿಯೂ ಗಜ ಶಾಲೆಯಲ್ಲಿಯೂ ಇದ್ದ ಪೂಜಾರ್ಹವಾದ ನಾಲ್ಕು ರಾಜಾಶ್ವಗಳೂ, ನಾಲ್ಕು ರಾಜಗಜಗಳೂ ಶೃಂಗರಿಸಲ್ಪಟ್ಟವು. ದೇವಿಪೂಜೆಗೆ ಹಿಂಡುಗೊಳಿಸಿದ ಕುರಿಕೋಣಗಳು ವಧ್ಯಸ್ಥಾನಕ್ಕೆ ತೆರಳಿದುವು. ದೇವರಾಜನು ಪ್ರಾತಃಕಾಲದ ಸವಾರಿಯನ್ನು ತೀರಿಸಿ ಅರಮನೆಗೆ ಹಿಂದಿರುಗುತ್ತಿದ್ದನು. ಹಠಾತ್ತಾಗಿ ಒಂದು ಮನೆಯ ಸಮೀಪದಲ್ಲಿ ಏನು ಕಾರಣದಿಂದಲೋ ಕುದುರೆಯನ್ನು ನಿಲ್ಲಿಸಿದನು. ಯುವತಿಯೊಬ್ಬಳು ಮನೆಯ ಬಾಗಿಲಲ್ಲಿ ರಂಗವಲ್ಲಿಯನ್ನು ಬರೆಯುತ್ತಿದ್ದಳು. ಕುದುರೆಯು ಅಕಸ್ಮಾತ್ತಾಗಿ ತಡೆದುದನ್ನು ನೋಡಿ ರಮಣಿಯು ಮುಖವನ್ನು ತಿರುಗಿಸಿ ರಾಜನನ್ನು ದಿಟ್ಟಿಸಿದಳು. ರಾಜನ ದೃಷ್ಟಿತರಂಗಗಳು ರಮಣಿಯ ಸರ್ವಾಂಗವನ್ನು ಬಡೆದು ಹೋದುವು. ರಮಣಿಯು ರಾಜನ ಹೃದಯಾರ್ಥವನ್ನು ಅವನ ನಯನ ಪುಸ್ತಕದಿಂದ ತಿಳಿದು, ಮನೆಯೊಳಕ್ಕೆ ನಡೆದುಬಿಟ್ಟಳು. ದೇವರಾಜನು ತನ್ನೊಳಗೆನೇ ಲಜ್ಜಿತನಾಗಿ ಅರಮನೆಯ ಕಡೆಗೆ ಕುದುರೆಯನ್ನು ತಿರುಗಿಸಿದನು.

ರಾಜಗೃಹದಲ್ಲಿ ಅರಸನ ಸೇವಕರೆಲ್ಲರೂ ರಾಜನ ವಿಳಂಬವನ್ನು ಚರ್ಚಿಸುತ್ತಿದ್ದರು. ಅಷ್ಟರಲ್ಲಿ ದೇವರಾಜನು ಅರಮನೆಯನ್ನು ಪ್ರವೇಶಿಸಿ, ಶುದ್ಧ ಸ್ನಾನವನ್ನು ತೀರಿಸಿದನು. ನವರಾತ್ರಿಯ ಕಡೆಯ ದಿನದ ವ್ರತಕ್ಕೆ ಪ್ರಾರಂಭವಾಯಿತು. ರಾಜಗೃಹದೊಳಗೆ ‘ವಿಜಯಮಂದಿರ’ ಎಂಬ ದೇವರ ಗುಡಿಯೊಂದಿತ್ತು. ರಾಜನು ವಿಜಯಮಂದಿರವನ್ನು ಹೊಕ್ಕು, ವಿಪ್ರರ ಸಹಾಯದಿಂದಲೂ ಮಂತ್ರಘೋಷದಿಂದಲೂ ಆರಾಧನೆಯನ್ನು ಮುಗಿಸಿ ಚಪ್ಪರಕ್ಕೆ ಬಂದನು. ಮನಸ್ಸಿನೊಳಗೆ ಯಾವುದನ್ನೋ ಯೋಚಿಸುತ್ತಿರುವಂತೆ ರಾಜನು ಸುಮ್ಮನೆ ನಿಂತಲ್ಲಿಯೇ ನಿಂತುಬಿಟ್ಟನು. ನರ್ತನಸ್ತ್ರೀಯರು ಮುಂದೆ ಬಂದು ನಾಟ್ಯವನ್ನು ಗೀತಗಳನ್ನೂ ರಾಜಸನ್ನಿಧಿಯಲ್ಲಿ ಅರ್ಪಿಸಿದರು. ಒಡನೆ ರಾಜನ ಅಂಗರಕ್ಷಕರೂ, ಮಂತ್ರಿಗಳೂ, ಬ್ರಾಹ್ಮಣರೂ ಕ್ರಮವಾಗಿ ಸಾಷ್ಟಾಂಗ ಪ್ರಣಾಮ ಮಾಡಿದರು. ಬಳಿಕ ಅರಸನು ಮುಂದುವರಿಸುವಂತೆ, ತಿಮ್ಮನು ಸೂಚಿಸಿದನು. ಅಂಗಳದಲ್ಲಿ ಹಲ್ಲಣಿಸಿದ ಹನ್ನೊಂದು ಕುದುರೆಗಳೂ ನಾಲ್ಕು ರಾಜಗಜಗಳೂ ಅರಸನ ಆಗಮನವನ್ನು ಎದುರ್ನೊಡುತ್ತಿದ್ದವು. ರಾಜನು ಸಮೀಪಸ್ಥನಾಗುತ್ತಲೇ ಕುದುರೆಗಳು ತಲೆಯೆತ್ತಿದವು; ಆನೆಗಳು ಸುಂಡಿಲೆತ್ತಿ ನಮಸ್ಕರಿಸಿದವು. ರಾಜನ ಲಕ್ಷ್ಯವೇನೋ, ಇವುಗಳ ಮೇಲೆ ಹೋಗಲಿಲ್ಲ. ಅವನ ವಿರಹಿತವಾದ ದೃಷ್ಟಿಗಳು ಜನಸ್ತೋಮದ ಕಡೆಯಲ್ಲಿ ಸಂಚರಿಸುತ್ತಿದ್ದವು. ನರ್ತಕಿಯರ ಮಂದಹಾಸ, ನಾಯಕರ ಶಸ್ತ್ರಾಸ್ತ್ರ ಝಣತ್ಕಾರ, ಬ್ರಾಹ್ಮಣರ ಸ್ವಸ್ತಿವಾಚನ, ಗಜಾಶ್ವಗಳ ಹರ್ಷಸೂಚಕ ಚಿನ್ನ, ಎಲ್ಲವೂ ರಾಜನ ಹೃದಯದ ಮೇಲೆ ನಿರರ್ಥಕವಾಗಿ ಹೋದವು. ಬ್ರಾಹ್ಮಣನೊಬ್ಬನು ಪುಷ್ಪಪಾತ್ರೆಯನ್ನು ಕೈಯಲ್ಲಿ ಹಿಡಿದುಕೊಂಡು ಅರಸನ ಸಮ್ಮುಖದಲ್ಲಿ ನಿಂತನು. ರಾಜನು ಹೂಗಳನ್ನು ಗಜಾಶ್ವಗಳ ಮೇಲೆ ಎರಚುವ ಬದಲಾಗಿ ತಿಮ್ಮನ ತಲೆಯ ಮೇಲೆ ಪುಷ್ಪಾಂಜಲಿಯನ್ನು ಸುರಿದನು. ಜನಗಳೆಲ್ಲರೂ ಆಶ್ಚರ್ಯಗೊಂಡರು; ದುಃಖಗೊಂಡರು. ಹೇಗೂ ಬ್ರಾಹ್ಮಣನು ಪುಷ್ಪಪಾತ್ರೆಯಿಂದ ತಾನೇ ಹೂಗಳನ್ನು ತೆಗೆದು ಅರಸನ ಕೈ ಮುಟ್ಟಿಸಿ ಆರಾಧಿತವಾದ ಮೃಗಗಳ ಮಸ್ತಕದ ಮೇಲೆ ಎರಚಿದನು. ಅರಸನ ಹೃದಯ ಸಂತಾಪವು ಆ ನವಮಿಯ ಮಹೋತ್ಸವದಿಂದ ಒಂದಿಷ್ಟಾದರೂ ಶಾಂತವಾಗಲಿಲ್ಲ. ಸಹಸ್ರಜನ ಪರಿಪೂರಿತವಾದ ಆ ಸ್ತೋಮದಲ್ಲಿ ಅರಸನ ಮನೋವ್ಯಥೆಯ ಕಾರಣವನ್ನು ಯಾರೂ ತಿಳಿಯಲಾರದೆ ಹೋದರು. “ವಧ್ಯಸ್ಥಾನಕ್ಕೆ ದಯ ಮಾಡುವುದು” ಎಂದು ತಿಮ್ಮನು ಸೂಚಿಸಿದನು. “ಅದುವೇ ನಮಗೆ ಒಳ್ಳೆಯದು” ಎಂಬ ಕ್ರೂರವಾದ ಮಾತು ಅರಸನ ಬಾಯಿಯಿಂದ ಬಿದ್ದಿತು. ಎಲ್ಲರೂ ಸಂಭ್ರಾಂತರಾದರು; ಎಲ್ಲರೂ ದುಃಖಿತರಾದರು. ಬ್ರಾಹ್ಮಣನು ಖಡ್ಗವನ್ನು ರಾಜನ ಕೈಯಿಂದ ಮುಟ್ಟಿಸಿ ಶೂದ್ರನ ಕೈಗಿತ್ತನು. ಬಲಿಗೋಸ್ಕರ ೨೪ ಕೋಣಗಳನ್ನೂ ೧೫೦ ಕುರಿಗಳನ್ನೂ ತರಿಯುತ್ತಿದ್ದಾಗ ದೇವರಾಜನು ತಿಮ್ಮನೊಡನೆ ರಹಸ್ಯದಲ್ಲಿ ಏನನ್ನೋ ಹೇಳಿದನು. ತಿಮ್ಮನು ಕಾರಣಾಂತರದಿಂದ ಅಲ್ಲಿಂದ ಮಾಯವಾದನು.

ಪ್ರಾತಃಕಾಲದಲ್ಲಿ ದೇವರಾಜನು ಯಾವ ಮನೆಯ ಇದಿರಿನಲ್ಲಿ ತನ್ನ ಕುದುರೆಯನ್ನು ನಿಲ್ಲಿಸಿ ಒಂದು ಮುಹೂರ್ತ ತಳುವಿದನೋ ಆ ಮನೆಯು ಗುಂಡನಾಯಕನದಾಗಿದ್ದಿತು. ಮನೆಯಲ್ಲಿ ಯಾವಾಗಲೂ ಗುಂಡನಾಯಕನು ಅಲ್ಲದೆ ಬೇರೆ ಯಾರೂ ಇರುತ್ತಿರಲಿಲ್ಲ. ಆ ದಿನ ನಾಯಕನು ತನ್ನ ಪ್ರಾಣವಲ್ಲಭೆಯನ್ನು ಮುದುಗಲ್ಲಿನಿಂದ ಕರೆದುತಂದಿದ್ದನು. ಪ್ರಥುಲೆಯ ತಂದೆಯು ಇವರಿಬ್ಬರೊಡನೆ ಬರಲು ಒಪ್ಪಲಿಲ್ಲವಾದುದರಿಂದ, ಗುಂಡ ನಾಯಕನು ತನ್ನ ಭಾವಿಪತ್ನಿಯನ್ನು ಮಾತ್ರ ಕರೆದು ತಂದಿದ್ದನು. ಗುಂಡನಾಯಕನು ತನ್ನ ವಲ್ಲಭೆಗೆ ನವಮಿಯ ಪ್ರಾತಃಕಾಲದ ಉತ್ಸವಗಳನ್ನೆಲ್ಲಾ ತೋರಿಸಿ, ಪುನಃ ಮಧ್ಯಾನ್ಹದಲ್ಲಿ ನಡೆಯುವ ಸಮಾರಂಭವನ್ನು ವಿನಂದಿಸಲಿಕ್ಕೆ ಸಂಗಡ ಕರೆದುಕೊಂಡು ಹೋಗಿ ಎಲ್ಲವನ್ನೂ ಕುರಿತು ವಿಶದವಾಗಿ ಹೇಳುತ್ತಿದ್ದನು. ಅರಮನೆಯ ಮುಂಭಾಗದಲ್ಲಿ ಸಿಂಹಾಸನವನ್ನು ಸಿದ್ಧಗೊಳಿಸಿದ್ದರು. ಒಂದು ಕಡೆಯಲ್ಲಿ ಜಟ್ಟಿಗಳ ಕಾಳಗ; ಒಂದು ಕಡೆಯಲ್ಲಿ ಡೊಂಬರ ಆಟ; ಈ ಕಡೆಯಲ್ಲಿ ಗೂಳಿ ಕಾಳಗ; ಆ ಕಡೆಯಲ್ಲಿ ಕೋಳಿಯ ಜೂಜು. ಎಲ್ಲಿ ನೋಡಿದರೂ ಗಲಭೆ; ಯಾವ ಕಡೆಗೆ ಕಣ್ಣು ತಿರುಗಿಸಿದರೂ ‘ತಮಾಷೆ’; ಎಲ್ಲರ ಮುಖದಲ್ಲಿಯೂ ಆನಂದ, ಉತ್ಸಾಹಪೂರ್ಣತೆ; ಗುಂಡನಾಯಕನು ತನ್ನ ಭಾವಿವಲ್ಲಭೆಗೆ ಇದನ್ನು ತೋರಿಸುತ್ತ ಹೃದಯದಲ್ಲಿ ಹಿಡಿಯಲಾರದಷ್ಟು ಆನಂದದಿಂದ ಉಕ್ಕುತ್ತಿದ್ದನು. ಒಡನೆ ದೇವರಾಜನು ಸಿಂಹಾಸವನ್ನು ಹತ್ತಿ ಅದರ ಮೇಲೆ ಎದ್ದು ನಿಂತು ಜನಸ್ತೋಮದಲ್ಲಿ ಯಾರೋ ಒಬ್ಬನ ಕಡೆಗೆ ಬೆರಳನ್ನು ನಿರ್ದೇಶಿಸಿ, ತಿಮ್ಮನ ಕಿವಿಯಲ್ಲಿ ಏನನ್ನೋ ಉಸಿರಿಸಿದರು. ಆಟಗಳು ಮುಗಿಯುತ್ತ ಬಂದುವು. ಸೂರ್ಯನು ಅಸ್ತಾಚಲವನ್ನು ಸೇರುವುದಕ್ಕೆ ಕಾಲಿಡುವಂತಿದ್ದನು. ರಾಜನು ಸಾಯಂಕಾಲದಲ್ಲಿ ಅರಮನೆಯನ್ನು ಪ್ರವೇಶಿಸುತ್ತಲೇ ಜನಸ್ತೋಮವು ಶಿಥಿಲವಾಗುತ್ತ ಬಂದಿತು. ಜನರೆಲ್ಲಾ ಮೆಲ್ಲಮೆಲ್ಲನೆ ಹೋಗಿಬಿಟ್ಟರು.

ಮಧ್ಯಾನ್ಹದ ಆಟಗಳನ್ನೆಲ್ಲಾ ಮುಗಿದ ಬಳಿಕ ಗುಂಡನಾಯಕನು ಪ್ರಫುಲೆಯೊಡನೆ ರಾತ್ರಿಯಲ್ಲಿ ನಡೆಯುವ ಬಾಣಬಿರುಸುಗಳ ವಿನೋದವನ್ನು ನೋಡುವುದಕ್ಕೆ ಹೊರಟನು. ಜನರೆಲ್ಲರೂ ತಂಡ ತಂಡವಾಗಿ ಬರತೊಡಗಿದರು. ಅರಮನೆಯ ಮುಂದುಗಡೆಯ ಬಯಲು ಸ್ಥಳದಲ್ಲಿ ಈ ವಿನೋದ ವಿಲಾಸಗಳನ್ನು ಒದಗಿಸಿದ್ದರು. ನಮ್ಮ ನಾಯಕ ನಾಯಕಿಯರು ಬೇಗಬೇಗ ಕಾಲಿಡುತ್ತ ಸಡಗರಿಸುತ್ತಿದ್ದರು. ಅಷ್ಟರಲ್ಲಿ ಅವರಿಗೆ ಇದಿರಾಗಿ ಮಾರ್ಗದ ಮೇಲೆ ಯಾರೋ ಒಬ್ಬನು ಬರುತ್ತಿದ್ದನು. ಗುಂಡನಾಯಕನು ಅವನನ್ನು ನೋಡುತ್ತಲೇ ಕೈಮುಗಿದು ಮಾರ್ಗದ ಒಂದು ಪಕ್ಕದಲ್ಲಿ ನಿಂತುಕೊಂಡನು. ಆಗಂತುಕನು ಮುಗುಳುನಗೆಯಿಂದ ಪ್ರತಿಯಾಗಿ ನಮಸ್ಕಾರ ಮಾಡಿದನು. ಬಳಿಕ ಇಬ್ಬರ ಸಮೀಪಸ್ಥನಾಗಿ ತಾನೇ ಸಂಭಾಷಣೆಗೆ ಮೊದಲು ಮಾಡಿದನು.

ಆಗಂತುಕ:- “ನಿಮ್ಮನ್ನು ಮಹಾರಾಜರು ನೋಡಲು ಇಚ್ಛಿಸುವುದಾಗಿ ನಿಮಗೆ ತಿಳಿಸಲು ಬಂದೆನು.”

ಇಬ್ಬರೂ ಅವಾಕ್ಕಾಗಿ ಸುಮ್ಮನೆ ನಿಂತುಕೊಂಡರು. ತಮ್ಮ ತಲೆಯ ಮೇಲೆ ಏನೋ ವಿಪರೀತವು ಬಂದಿತೆಂದು ದಂಪತಿಗಳು ಒಬ್ಬರ ಮುಖವನ್ನೊಬ್ಬರು ನೋಡುತ್ತ ನಿಂತುಕೊಂಡರು.

ಆಗಂತುಕ:- “ಭಯವೇನೂ ಇಲ್ಲ. ಪೂರ್ವಯುದ್ಧದಲ್ಲಿ ನೀವು ಶತ್ರುಗಳೊಡನೆ ತೋರಿಸಿದ ಸತ್ವ ಸಾಹಸಗಳು ರಾಜರ ರಾಜಮಾನಸಕ್ಕೆ ತಿಳಿದುಬಂದುದರಿಂದ ನಿಮ್ಮನ್ನಲ್ಲಿ ಮಹಾರಾಜರು ಮನ್ನಿಸುವಂತಿದೆ.”

ಪ್ರಥುಲೆಯ ಭೀತ ಹೃದಯವು ಶಾಂತವಾಯಿತು. ಅವಳ ಮುಖಮಂಡಲದಲ್ಲಿ ವ್ಯಂಜಕವಾಗುತ್ತಲಿದ್ದ ಭೀತಿಯ ಬದಲಾಗಿ ಸ್ವಾಭಾವಿಕವಾಗಿದ್ದ ಉಲ್ಲಾಸವೇ ಅಲಂಕರಿಸಿತ್ತು.

ಗುಂಡ:-ಸ್ವಾಮಿ! ಭೃತ್ಯನು ತಮ್ಮ ಕೃಪಾಬಲದಿಂದ ಇದಕ್ಕೆ ಪಾತ್ರನಾದನು. ಆದರೆ ಉಚಿತ ಉಡುಗೊರೆಗಳೂ ಮನ್ನಣೆ ಮರ್ಯಾದೆಗಳೂ ನಾಳೆ ಪ್ರಾತಃಕಾಲದಲ್ಲಿ ಎಲ್ಲರಿಗೂ ಕೊಡಲ್ಪಡುವುವಲ್ಲವೇ?”

ಆಗಂತುಕ:-“ನಿಜ! ಮಹಾರಾಜರು ಕಾರ್ಯ ವಿಶೇಷದಿಂದ ಎಲ್ಲವೂ ಈ ರಾತ್ರಿಯೇ ನಡೆಯಬೇಕೆಂದು ಅಪ್ಪಣೆ ಮಾಡಿರುವರು. ಕಲಶೋತ್ಸವವೂ ಈ ಇರುಳೇ ನಡೆಯುವುದು.”

ಪ್ರಥುಲೆಯು ಈ ಮಾತುಗಳಿಂದ ಸ್ವಲ್ಪ ಕುತೂಹಲಚಿತ್ತಳಾಗಿ “ಕಲಶೋತ್ಸವ ಎಂದರೇನು? ಎಂದು ತನ್ನ ಪ್ರಾಣವಲ್ಲಭನೊಂದಿಗೆ ವಿಚಾರಿಸಿದಳು. ಗುಂಡನಾಯಕನು ಪ್ರತ್ಯುತ್ತರವನ್ನು ಕೊಡುವುದಕ್ಕೆ ಬಾಯ್ದೆರೆಯುವಷ್ಟರಲ್ಲಿ ಆಗಂತುಕನು “ಅಮ್ಮಾ! ಕಲಶೋತ್ಸವವು ಎಲ್ಲಾ ಉತ್ಸವಗಳಿಗಿಂತಲೂ ಶ್ರೇಷ್ಠವಾದುದ್ದು. ಬಾಣಬಿರುಸುಗಳನ್ನೆಲ್ಲ ಸುಟ್ಟ ಬಳಿಕ ನೂರಾರು ಸ್ತ್ರೀಯರು ಜನಪೂರಿತವಾದ ಪುಷ್ಪಾಲಂಕೃತವಾದ ಕಲಶಗಳನ್ನೆತ್ತಿಕೊಂಡು ಮಹಾರಾಜರ ಸಮ್ಮುಖದಲ್ಲಿ ಒಬ್ಬೊಬ್ಬರಾಗಿ ಬಂದು ಕಲಶವನ್ನು ಎತ್ತಿ ಮುಖಕ್ಕೆ ನಿವಾಳಿಸಿ ಹೋಗುವರು. ಮಹಾರಾಜರು ಎಲ್ಲರಿಗೂ ಉಚಿತಗಳನ್ನು ಹಂಚುವರು. ಉತ್ಸವದಲ್ಲಿ ಯಾರೂ ಸೇರಬಹುದು. ನಿಮಗೆ ಮನಸ್ಸುಂಟೇ?” ಎಂದನು.

ಪ್ರಥುಲೆಯು ಮಾತಾಡಲಿಲ್ಲ. ಗುಂಡನಾಯಕನು “ಸ್ವಾಮಿ! ಉತ್ಸವದಲ್ಲಿ ರಾಣಿಯರ ದಾಸಿಯರಲ್ಲದೆ ಗರತಿಯರು ಸೇರುವರೇ?” ಎಂದು ಪ್ರಶ್ನೆ ಮಾಡಿದನು.

ತಿಮ್ಮನು “ನಿಮ್ಮಂಥವರು ಉತ್ಸವದಲ್ಲಿ ನೆರವಾಗುವುದಕ್ಕೆ ಅಡ್ಡಿ ಏನೂ ಇರಲಾರದು” ಎಂದು ಹೇಳಿ ಅರಮನೆಯ ಕಡೆಗೆ ಹಿಂದಿರುಗಿದನು. ದಂಪತಿಗಳಿಬ್ಬರೂ ಮಾತನಾಡುತ್ತಾ ಅರಮನೆಯ ಮುಂದುಗಡೆಯ ಮೈದಾನವನ್ನು ಸೇರಿದರು. ಒಡನೆ ಗುಂಡನು ತಾನು ಮಹಾರಾಜನು ಇದ್ದಲ್ಲಿಗೆ ಬೇಗನೆ ಹೋಗಿ ಬರುವೆನೆಂದು ಹೇಳಿ ಪ್ರಥುಲೆಯನ್ನು ಸುರಕ್ಷಿತವಾದ ಸ್ಥಳದಲ್ಲಿರಿಸಿ, ಹೋಗಿಬಿಟ್ಟನು.

ಗುಂಡನಾಯಕನು ಅರಮನೆಯನ್ನು ಸೇರಿದನು. ಅರಸನ ಕೋಪಕ್ಕೆ ಯಾವ ಕಾರಣದಿಂದಲೋ ಪಾತ್ರನಾದುದರಿಂದ ಸೆರೆಗೆ ಹಾಕಲ್ಪಟ್ಟನು. ಆಶ್ವಿಜ ಶುದ್ಧ ನವಮಿಯ ಮಹೋತ್ಸವದಿಂದ ವಿಜಯನಗರದ ಪ್ರಜೆಗಳೆಲ್ಲರೂ ಸಂತೋಷ ಸಂಭ್ರಮದಿಂದ ವಿನಂದಿಸುವಾಗ, ನಿರ್ಭಾಗ್ಯನಾದ ನಿರಪರಾಧಿಯಾದ ಗುಂಡನಾಯಕನು ಸೆರೆಮನೆಯಲ್ಲಿ ತನ್ನ ತಲೆಯನ್ನು ತಗ್ಗಿಸಿ ಕಣ್ಣೀರು ಬಿಡುತ್ತಿದ್ದನು. ಆ ಕಣ್ಣೀರುಗಳನ್ನು ಒರಸುವುದಕ್ಕೆ ಅಲ್ಲಿ ಯಾರೂ ಇರಲಿಲ್ಲ. ಅವನ ಗದ್ಗದಗಳನ್ನು ಸೈಪಿಡುವುದಕ್ಕೆ ಅವನ ಪ್ರಾಣೇಶ್ವರಿಯು ಸಮೀಪದಲ್ಲಿರಲಿಲ್ಲ; ಅವನ ತಗ್ಗಿದ ತಲೆಯನ್ನು ನೇರ್ಪಡಿಸುವುದಕ್ಕೆ ಸಮರ್ಥಳಾದ ಪ್ರಥುಲೆಯು ಅಲ್ಲಿ ಎಲ್ಲಿಯೂ ಇರಲಿಲ್ಲ. ಅವಳನ್ನು ಹುಡುಕಿ ಹಿಡಿಯುವುದಕ್ಕೆ ದೇವರಾಜನೇ ಮನಸ್ಸು ಮಾಡಿದರೂ ಅವಳು ಸಿಕ್ಕುತ್ತಿರಲಿಲ್ಲ. ಅರಸನು ಸಿಂಹಾಸನರೂಢನಾಗಿ ವಿನೋದವನ್ನು ನೋಡುವಂತಿದ್ದನು. ರಾಜಧಾನಿಯ ಹೊರಗೆ ನಾಲ್ಕು ದಿಕ್ಕುಗಳಲ್ಲಿಯೂ ಉತ್ಸವಸೂಚಕವಾದ ಅಗ್ನಿಕುಂಡಗಳು ಪ್ರಜ್ವಲಿಸುತ್ತಿದ್ದವು. ಬಾಣ ಬಿರುಸುಗಳೆಲ್ಲ ಉರಿಯುತ್ತಿದ್ದವು; ಅರಸನ ಹೃದಯಲ್ಲಿಯೂ ಹಾಗೆಯೇ ಆಗುತ್ತಿತ್ತು. ರಾಜನು ಕಾತರಗೊಂಡನು; ಕಳವಳಗೊಂಡನು; ಪುನಃಪುನಃ ತಿಮ್ಮನನ್ನು ಕರೆದು ಪ್ರಾರ್ಥಿಸತೊಡಗಿದನು. ಆದರೆ ಪ್ರಥುಲೆ-ಪ್ರಥುಲೆಯು ಅಲ್ಲಿಂದ ಮಾಯವಾದಳು. ಹತಭಾಗ್ಯನ ಕೈಗೆ ಸೇರಿ, ಸೇರದ ಲಕ್ಷ್ಮಿಯ ಹಾಗೆ ನವಮಿಯ ಮಹೋತ್ಸವಕ್ಕೋಸ್ಕರ ನೆರೆದಿದ್ದ ಜನಜಂಗುಳಿಯಲ್ಲಿ ಪ್ರಥುಲೆಯು ತೇಲಿಹೋದಳು. ಅವಳನ್ನು ಹಿಡಿದು ತರವುದಕ್ಕೆ ಹೋಗಿದ್ದ ಗೂಢಚಾರರು ನಿರಾಶರಾಗಿ ಬಂದು, ಅವಳು ಸಿಕ್ಕಲಿಲ್ಲವೆಂಬ ಅತ್ಯಂತ ಹೃದಯಭೇದಕವಾದ ವರ್ತಮಾನವನ್ನು ದೇವರಾಜನಿಗೆ ನಡುಗುತ್ತ ತಿಳಿಸಿದರು. ಕೂಡಲೇ ಪರಾಕ್ರಮಿಯಾದ ತಿಮ್ಮನು ಅವಳನ್ನು ತಾನೇ ಕೈಹಿಡಿದು ತಾರದೆ ಬಿಡನೆಂದು ರಾಜನಿಗೆ ನಂಬುಗೈಯಿತ್ತು, ಇಬ್ಬರು ಸಿಪಾಯರೊಡನೆ ಅಂತರಂಗದಿಂದ ನಡೆದುಬಿಟ್ಟನು.

ಅರಮನೆಯ ಕತ್ತಲಾದ ಕೊಟ್ಟಡಿಯಲ್ಲಿ ಏಕಾಕಿಯಾದ ಗುಂಡನಾಯಕನು ಕಣ್ಣಿಗೆ ನಿದ್ದೆ ಬಾರದೆ, ತನ್ನ ದುರವಸ್ಥೆಯನ್ನು ಕುರಿತು ಚಿಂತಿಸುತ್ತಿದ್ದನು. ರಾಣಿಯ ದಾಸಿಯರೆಲ್ಲರೂ ರಾತ್ರಿಯ ಕಲಶೋತ್ಸವಕ್ಕೆ ಸಿದ್ಧರಾಗತೊಡಗಿದರು. ಎಲ್ಲರೂ ತಂತಮ್ಮ ವಸ್ತ್ರಾಲಂಕಾರಗಳನ್ನು ಅಳವಡಿಸಿಕೊಂಡು ಹೊರಕ್ಕೆ ಬಂದರು. ಓಲಗದ ಚಾವಡಿಯಲ್ಲಿ ಸಾಲಾಗಿ ಇಟ್ಟಿದ್ದ ಕಲಶಗಳನ್ನು ನೋಡಿ, ತಮ್ಮ ತಮ್ಮ ಯೋಗ್ಯತಾನುಸಾರವಾಗಿ ಚಿನ್ನದ, ಬೆಳ್ಳಿಯ, ತಾಮ್ರದ ಕುಂಭಗಳನ್ನು ಕೈಯಲ್ಲಿಕೊಂಡರು. ಗುಂಡನಾಯಕನು ಇದನ್ನು ಕಿಟಕಿಯ ಬಳಿಯಿಂದ ನೋಡುತ್ತಲೇ ಇನ್ನೂ ದುಃಖಗೊಂಡನು. ತನ್ನ ಪ್ರಾಣಪ್ರಿಯಳಾದ ಪ್ರಥುಲೆಯಿಂದ ಈ ಹೀನ ಕೃತ್ಯವನ್ನು ರಾಜನು ಬಲಾತ್ಕಾರದಿಂದ ಮಾಡಿಸುವನೋ ಎಂದು ಶಂಕಿತನಾಗಿ ನಾಯಕನು ನಿಟ್ಟುಸಿರಿಟ್ಟನು. ದಾಸಿಯರ ಮೈಗಾವಲಿಗೆ ಸಿಪಾಯರು ಸನ್ನದ್ಧರಾಗಿ ಬಂದು ನಿಂತರು. ನವರತ್ನಭೂಷಣಗಳಿಂದ ಒಪ್ಪುತ್ತಿರುವ, ಅಮೂಲ್ಯವಾದ ವಸ್ತ್ರದಿಂದ ಕಂಗೊಳಿಸುತ್ತಿರುವ ರಾಣಿಯು ಆ ದಾಸಿಯರ ಮಧ್ಯದಲ್ಲಿ “ನಕ್ಷತ್ರಮಯ ಮಾದ ದಿವಿಜಪದದೊಳ್ ಶಾರ್ವರೀ ಚಂದ್ರನುದಯಿಪಂತೆ” ಬಂದಳು. ದಾಸಿಯೊಬ್ಬಳು ಪರಿಮಳ ಜನಪೂರಿತವಾಗಿ ಪರಿಮಳಿತ ಪುಷ್ಪಾಲಂಕೃತವಾಗಿ ಪರಿಶೋಭಿಸುವ ಸುವರ್ಣ ಕಲಶವನ್ನು ಅವಳ ಕೈಗಿತ್ತಳು. ರಾಣಿಯು ಅದನ್ನು ದಂಡಿಗೆಯಲ್ಲಿ ಇಟ್ಟಳು. ಚಿನ್ನದ ತೆಂಗಾಯವನ್ನು, ರತ್ನನಿರ್ಮಿತವಾದ ಮಾವಿನೆಲೆಗಳನ್ನು ಕೊಂಡು ಅದರ ಮೇಲೆ ಇಟ್ಟಳು. ರಾಣಿಯು ಪಲ್ಲಕ್ಕಿಯಲ್ಲಿ ಕುಳಿತುಕೊಳ್ಳುತ್ತಲೇ ಎಂಟುಜನ ದಾಸಿಯರು ಅದನ್ನು ತಮ್ಮ ಕೋಮಲವಾದ ಸ್ಕಂಧಗಳಿಂದ ಆಧರಿಸಿದರು. ಸುವರ್ಣದ ತರುಣಿಯು ಯಮುನಾ ನದಿಯಲ್ಲಿ ತೇಲಿ ಹೋಗುವಂತೆ ಆ ದಂಡಿಗೆಯು ಸಖೀಜನ ಮಸ್ತಕಗಳ ಮೇಲೆ ತೋರುತ್ತ ಅರಮನೆಯ ಹೊರಕ್ಕೆ ಹೋಯಿತು. ಕೂಡಲೇ ಅರಸನಿದ್ದ ಎಡೆಯಿಂದ ಕಹಳೆಗಳು ಭೋರ್ಗರೆದುವು; ನಗಾರಿಗಳು ಮೊಳಗಿದುವು. ರಾಜಮಂದಿರದಲ್ಲಿ ಇದುವರೆಗೆ ಕೇಳಿಸುತ್ತಿದ್ದ ಕಲಕಲವು ದೂರವಾಗುತ್ತ ಬಂದಿತು. ಅರಮನೆಯ ಕಾವಲುಗಾರರಲ್ಲಿ ಒಬ್ಬಿಬ್ಬರಲ್ಲದೆ ಮಿಕ್ಕವರೆಲ್ಲರೂ ನಡೆದುಬಿಟ್ಟರು.

ಗುಂಡನಾಯಕನು ಇದೆಲ್ಲವನ್ನು ನೋಡುತ್ತಿದ್ದನು. ಮೆರವಣಿಗೆಯ ಸಂಭ್ರಮವು ಅದೃಶ್ಯವಾಗುತ್ತಲೇ ಕಿಟಕಿಯ ಬಳಿಯಿಂದ ಹಿಂದಿರುಗಿದನು. ಅವನು ಹಿಂದಿರುಗುತ್ತಿದ್ದ ಹಾಗೆ ಒಬ್ಬ ಯುವಕನು ರಾಜಾಂಗಣದ ಬಲಪಕ್ಕದಲ್ಲಿ ಸುಳಿಯುತ್ತಿದ್ದನು. ಗುಂಡ ನಾಯಕನು ಅವನು ಪಹರೆಯವನೆಂದು ಸುಮ್ಮನಾದನು. ಯುವಕನು ಮೆಲ್ಲಮೆಲ್ಲನೆ ಕಾಲಿಡುತ್ತಿದ್ದನು; ಆಗಾಗ ಸುತ್ತೆಲ್ಲ ನೋಡುತ್ತಿದ್ದನು. ಯುವಕನು ಚಂದ್ರೋದಯವು ಹಾಸಿದ್ದ ರಾಜಾಂಗಣದ ಮಾರ್ಗವನ್ನು ಬಿಟ್ಟು ಅರಮನೆಯ ಬಳಿಯಲ್ಲಿದ್ದ ಸಣ್ಣ ಸಾಲ್ಮರಗಳ ನೆರಳ ಹಾದಿಯನ್ನು ಹಿಡಿದು ಬರುತ್ತಿದ್ದನು. ಇದ್ದಕ್ಕಿದ್ದ ಹಾಗೆ ಯುವಕನು ಸೆರೆಮನೆಯ ಕೆಳಗಡೆಗೆ ಬಂದನು. ಅಲ್ಲಿಂದ ಮೇಲೆ ಹತ್ತಲು ದಾರಿಯಿಲ್ಲವೆಂದು ತಿಳಿದು ಪುನಃ ಹಿಂತಿರುಗಿದನು. ತನ್ನ ಆಗಮನವನ್ನು ಯಾರೂ ಅರಿಯಲಿಲ್ಲವೆಂದು ತರುಣನು ಧೈರ್ಯಗೊಂಡು, ಅರಮನೆಯ ಒಳಗಡೆಯಿದ್ದ ಭವಂತಿಯನ್ನು ಸೇರಿದನು. ಯುವಕನು ಎಲ್ಲಿಗೆ ಹೋದನೆಂದು ಗುಂಡನಾಯಕನಿಗೆ ಒಮ್ಮೆ ತಿಳಿಯಲಿಲ್ಲ. ನಾಯಕನು ಕಿಟಕಿಯ ಬಳಿಗೆ ಬಂದು ನೋಡುತ್ತಿರಲಾಗಿ, ಯುವಕ ಆ ಕಿಟಕಿಯ ಇದಿರಾಗಿ ಬರುತ್ತಿದ್ದನು. ಯುವಕನು ಅಲ್ಲಿಯೇ ಸ್ವಲ್ಪ ತಡೆದನು. ನಿದ್ದೆಹೋದ ಪಹರೆಯವನ ಮುಂಡಾಸನ್ನು ಮೆಲ್ಲಗೆ ಮುಟ್ಟಿ ನೋಡಿ ಅದರಿಂದ ಏನನ್ನೋ ಎತ್ತಿಕೊಂಡನು. ಬಳಿಕ ಕಾಲ ಸದ್ದಾಗದಂತೆ ನಡೆದು ಕೊಟಡಿಯ ಬೀಗವನ್ನು ತೆರೆದು, ಗುಂಡನಾಯಕನಿಗೆ ಹೊರಕ್ಕೆ ಬರುವಂತೆ ಕೈಸನ್ನೆ ಮಾಡಿದನು. ಇಬ್ಬರೂ ಮಾತಾಡಲಿಲ್ಲ. ಗುಂಡನಾಯಕನು ಹೊರಕ್ಕೆ ಬಂದನು. ಯುವಕನು ಅವನ ಕೈಯನ್ನು ತನ್ನ ಕೈಯಲ್ಲಿ ತೆಗೆದುಕೊಂಡು, ಗುಂಡನಾಯಕನು ಯುವಕನನ್ನು ಗುರುತಿಸಿದಂತೆ ನಗಾಡಿದನು. ಇಬ್ಬರೂ ಮೆಲ್ಲನೆ ಭವಂತಿಯನ್ನು ದಾಟಿ ಅರಮನೆಯ ಹಿಂದುಗಡೆಯಲ್ಲಿ ಇಳಿದರು. ಚಂದ್ರನು ಅಸ್ತಮಿಸುತ್ತಿದ್ದನು. ಕಲಶೋತ್ಸವವು ಸಮಾಪ್ತವಾಯಿತೆಂದು ಕಹಳೆಗಳು ಕೂಗಿದವು. ಜನಗಳು ತಂತಮ್ಮ ಮನೆಗಳಿಗೆ ಹೋಗುತ್ತಿದ್ದರು. ಯುವಕರಿಬ್ಬರು ಅವಸರದಿಂದ ಕಾಲಿಡುತ್ತ ಅರಮನೆಯ ಗೋಡೆಯನ್ನು ರಹಸ್ಯ ಮಾರ್ಗದಿಂದ ದಾಟಿ ನಿರ್ಜನವಾದ ಸ್ಥಳಕ್ಕೆ ಬಂದರು.

ಯುವಕರಿಬ್ಬರು ಮಾತೆತ್ತದೆ ಬಹಳ ದೂರಕ್ಕೆ ಮುಟ್ಟಿದರು; ಮನುಷ್ಯನ ಸುಳಿವಿಲ್ಲದ ಹಾದಿಗಳನ್ನು ಹಿಡಿದು ಹೋಗುತ್ತಿದ್ದರು. ಇದುವರೆಗೆ ಮರಗಳ ಎಲೆಗಳಿಂದ ನೆಲಕ್ಕೆ ಉದುರಿ ಬಿದ್ದ ಚಂದ್ರಕಿರಣಗಳ ಬದಲಾಗಿ ಅಂಧಕಾರದ ಛಾಯೆಯು ಆವರಿಸುತ್ತಿದ್ದಿತು. ಇಬ್ಬರು ಕಳ್ಳರಂತೆ ಹಿಂದುಮುಂದೆ ನೋಡುತ್ತ, ಎಲೆಗಳ ಮರ್ಮರ ಶಬ್ದಕ್ಕೆ ಸುತ್ತಲೆಲ್ಲಾ ನೋಡುತ್ತಾ, ಬೇಗ ಬೇಗನೆ ಕಾಲಿಡುವಂತಿದ್ದರು. ಗುಂಡನಾಯಕನು ಮೌನವನ್ನು ತ್ಯಜಿಸಿ ಮಾತನಾಡತೊಡಗಿದನು.

ಗುಂಡ:- “ನಿನ್ನ ಸಾಹಸದಿಂದ ನನ್ನ ಪ್ರಾಣವುಳಿಯಿತು. ನನಗೆ ಬಂಧನ ಪ್ರಾಪ್ತಿಯಾಯಿತೆಂದು ನೀನು ಹೇಗೆ ತಿಳಿದೆ?”

ಯುವಕ:- ರಾಜನು ನನ್ನನ್ನು ನೋಡಿದಂದಿನಿಂದ ನಮಗೆ ಯಾವುದೋ ಅಪಾಯ ಸಂಭವಿಸುವುದೆಂದು ನನಗೆ ಶಂಕೆ ಇದ್ದಿತು. ಅಪ್ಪನು ಹೇಳಿದ ಮಾತು ಪದೇ ಪದೇ ನನ್ನ ಸ್ಮರಣೆಗೆ ಬರುತ್ತಿತ್ತು. ತಿಮ್ಮನು ನಿನ್ನನ್ನು ಕರೆದುಕೊಂಡು ರಾಜಸನ್ನಿಧಿಗೆ ಹೋದ ಬಳಿಕ ಈ ಸಂಶಯವು ಇನ್ನೂ ಬಲಗೊಂಡಿತು.”

ಗುಂಡ:-“ನಿನ್ನ ಮನಸ್ಸಿನ ಶಂಕೆಯನ್ನು ನೀನು ಮೊದಲೇ ನನಗೆ ತಿಳಿಸಿರುತ್ತಿದ್ದರೆ ಈ ತೊಂದರೆಗಳನ್ನೆಲ್ಲಾ ತಪ್ಪಿಸಬಹುದಾಗಿತ್ತು. ನೀನು ಹೇಳಲಿಲ್ಲವೇಕೆ?”

ಯುವಕ:-“ಹಾಗೆ ನಾನು ತಿಳಿಸಿದ್ದರೆ ನೀನು ಅರಮನೆಗೆ ಹೋಗುವುದಕ್ಕೆ ಒಪ್ಪುತ್ತಿರಲಿಲ್ಲ. ರಾಜನು ಮೋಸದಿಂದ ಕಾರ್ಯ ಸಾಧನೆ ಆಗಲಿಲ್ಲವೆಂದು ತಿಳಿದು, ಕೂಡಲೇ ಬಲಾತ್ಕಾರವನ್ನು ಉಪಯೋಗಿಸುತ್ತಿದ್ದನು. ಇದರಿಂದ ಕಾರ್ಯವು ಕೆಟ್ಟುಹೋಗಿ, ನೀನು ಬಂಧನಕ್ಕೆ ಒಳಗಾಗುತ್ತಿದ್ದೆ; ನಾನು ಉಪಾಯವಿಲ್ಲದೆ ರಾಜನಿಗೆ ಬಲಿ ಬೀಳಬೇಕಾಗುತ್ತಿತ್ತು.”

ಅಷ್ಟರಲ್ಲಿ ದೂರಕ್ಕೆ ಜನರ ಮಾತುಗಳ ಕಲಕಲವನ್ನು ಕೇಳಿದಂತೆ, ಇಬ್ಬರೂ ತಟಸ್ಥರಾಗಿ ಹಿಂದೆ ನೋಡಿದರು. ಹತ್ತಿರದಲ್ಲಿ ಯಾರ ಸುಳಿವೂ ಇರಲಿಲ್ಲ. ಇಬ್ಬರೂ ಮುಂದೆ ನಡೆಯತೊಡಗಿದರು.

ಗುಂಡ:- ನಾನು ಸೆರೆಯಲ್ಲಿ ಹಾಕಲ್ಪಟ್ಟೆನೆಂದು ನೀನು ಹೇಗೆ ತಿಳಿದೆ?”

ಯುವಕ:-“ನೀನು ಅರಮನೆಗೆ ನಡೆದ ಬಳಿಕ ನಾನು ಅರ್ಧತಾಸು ನೀನು ನನ್ನನ್ನು ಇರಿಸಿದಲ್ಲೇ ತಳುವಿದೆನು. ಆದರೂ ನೀನು ಬರುವ ಹಾಗೆ ತೋರಲಿಲ್ಲ. ಅದಕ್ಕೋಸ್ಕರ ನಾನು ಮೆಲ್ಲಮೆಲ್ಲನೆ ಜನಸ್ತೋಮದಿಂದ ಹಿಂಜರಿದು ಜಾರತೊಡಗಿದಾಗ, “ಪ್ರಥುಲೆಯನ್ನು ಅರಸರು ನೋಡಬೇಕೆಂದಿರುವರಂತೆ” ಯಾರೋ ಮಾತಾಡುವುದು ನನ್ನ ಕಿವಿಗೆ ಬಿದ್ದಿತು. ಇದನ್ನು ಕೇಳಿದೆನೋ ಇಲ್ಲವೋ ನಾನು ಮನೆಗೆ ಓಡಿಹೋಗಿ ನನ್ನ ಉಡುಪನ್ನು ಬದಲಾಯಿಸಿ ಈ ವೇಷದಿಂದ ಬಂದೆನು. ಪುನಃ ಮೈದಾನಿಗೆ ಬರುತ್ತಲೇ ನಿನ್ನನ್ನು ಹುಡುಕ ತೊಡಗಿದೆನು. ಕೊನೆಗೆ ನೀನು ಅರಮನೆಯಲ್ಲಿ ಸೆರೆಯಾಗಿರಬಹುದೆಂದು ಊಹಿಸಿ…” ಮಾತು ಮುಗಿಯುವಷ್ಟರಲ್ಲಿ ಗುಂಡನಾಯಕನು ಹಿಂದುಗಡೆ ನೋಡಿದನು. ಅಲ್ಲಿ ಯಾರೂ ಇರಲಿಲ್ಲ. ಯುವಕನು ಅವನಂತೆಯೇ ನೋಡಿ “ಯಾರಾದರೂ ನಮ್ಮನ್ನು ಬೆಂಬತ್ತಿ ಬರುವರೆಂದು ಹೆದರಿಕೆಯೇ?” ಎಂದು ಕೇಳಿದನು.

ಗುಂಡನಾಯಕ:-ನಾನು ಸೆರೆಯಿಂದ ತಪ್ಪಿಸಿಕೊಂಡ ಸಂಗತಿಯು ಅರಮನೆಯವರಿಗೆ ಇಷ್ಟರಲ್ಲಿ ತಿಳಿದಿರಬಹುದು. ಇನ್ನು ಈ ರಾಜ್ಯವನ್ನು ಬಿಟ್ಟ ಹೊರತು ನನ್ನ ಹೃದಯದಿಂದ ಭೀತಿಯು ಹೋಗಲಾರದು.”

ಯುವಕನು:-“ಇನ್ನೂ ಹೆದರುವೆಯೇ?” ಎಂದು ಹೇಳಿ, ಸೊಂಟದಲ್ಲಿ ಅಡಗಿಸಿಟ್ಟ ಖಡ್ಗವನ್ನು ಈಚೆಗೆ ಹಿರಿದು “ಇಕೋ! ಇದರ ಸಹಾಯದಿಂದ ನಮ್ಮ ಆಪತ್ತನ್ನು ಪರಿಹರಿಸಿ, ಈ ರಾಜ್ಯದಿಂದ ನಾವು ಹೋಗಿ ಭದ್ರವಾದ ಸ್ಥಳವನ್ನು ಸೇರಬಹುದು” ಎಂದು ಗಂಭೀರವಾಗಿ ಹೇಳಿದನು.

ಗುಂಡನಾಯಕನು ಒಂದು ನಿಮಿಷ ಅವಾಕ್ಕಾಗಿ “ಪ್ರಿಯೆ! ನಿನ್ನ ಸಾಹಸವನ್ನೂ ಪ್ರತ್ಯುತ್ಪನ್ನ ಬುದ್ಧಿಯನ್ನೂ ಮೆಚ್ಚಿದೆ. ಇನ್ನು ಶತ್ರುಗಳು ನಮ್ಮ ಮಾರ್ಗವನ್ನು ಆತಂಕಿಸಿದರೂ ನಿನ್ನ ಖಡ್ಗದ ಸಹಾಯದಿಂದ – ಪುನಃ ಯುವಕನು ಬೆಚ್ಚಿಬಿದ್ದಂತಾಗಿ ಮುಖವನ್ನು ಹಿಂದಿರುಗಿಸಿದನು. ದೂರದಲ್ಲಿ ಪದಸಂಚಾರದ ಶಬ್ದದಂತೆ ಕೇಳಿಸಿತು. ಇಬ್ಬರು ಬೇಗಬೇಗನೆ ಕಾಲಿಟ್ಟರು. ಅವರು ಮುಂದುವರಿಸುವಷ್ಟಕ್ಕೆ ಸಪ್ಪಳು ಹಿಂದಿನಿಂದ ಅಟ್ಟಿಕೊಂಡು ಬಂದಂತೆ ಕೇಳಿಸಿತು. ವಿಜಯನಗರದ ಕೋಟೆಯ ಗೋಡೆಗಳು ಸಮೀಪಿಸಿದುವು. ಗುಂಡನಾಯಕನು ಪ್ರಥುಲೆಯೊಡನೆ ಆ ಹಾದಿಯನ್ನು ಬಿಟ್ಟು ಎಡಕ್ಕೆ ತಿರುಗಿದನು. ಹಿಂದಿನಿಂದ ಕೇಳಿಸುತ್ತಿದ್ದ ಶಬ್ದವು ಸ್ವಲ್ಪ ಸ್ತಬ್ಧವಾಯಿತು. ಇಬ್ಬರು ಕೋಟೆಯ ರಹಸ್ಯಮಾರ್ಗದಲ್ಲಿದ್ದ ಒಂದು ರಂಧ್ರದಿಂದ ನುಸುಳಿ ಹೊರಕ್ಕೆ ಬಂದು ಸ್ವಲ್ಪ ಉಸಿರನ್ನು ತೆಗೆದುಕೊಳ್ಳುವುದಕ್ಕೆ ಅಲ್ಲಿಯೇ ತಡೆದರು.
ಅಷ್ಟರಲ್ಲಿ ಅದೇ ರಂಧ್ರದಿಂದ ಒಬ್ಬ ಸಿಪಾಯನು ಕೆಳಕ್ಕೆ ಧುಮುಕಿದನು; ಒಡನೆ ಇನ್ನೊಬ್ಬನು ಹಾರಿದನು. ಕಡೆಯವನು ಸಿಪಾಯನಾಗಿರಲಿಲ್ಲ. ಅವನು ತಿಮ್ಮನಾಗಿದ್ದನು. ಅವನನ್ನು ನೋಡುತ್ತಲೇ ಗುಂಡನಾಯಕನು ರೌದ್ರಾಕಾರವನ್ನು ಧರಿಸಿದನು. ತಿಮ್ಮನು ಗುಂಡನನ್ನು ಗುರುತಿಸಿ “ಈ ರಾಜದ್ರೋಹಿಯನ್ನು ಬಂಧಿಸಿಬಿಡಿರಿ” ಎಂದು ಸಿಪಾಯರಿಗೆ ಆಜ್ಞೆ ಮಾಡಿದನು. ಸಿಪಾಯರಲ್ಲಿ ಒಬ್ಬನು ಅವನನ್ನು ಸಮೀಪಿಸುತ್ತಲೇ ಗುಂಡನಾಯಕನು ಫಕ್ಕನೆ ಅವನ ಸಮ್ಮುಖಕ್ಕೆ ಹಾರಿ, ತನ್ನ ಕೈಯಲ್ಲಿದ್ದ ಖಡ್ಗದಿಂದ ಅವನನ್ನು ನೆಲಕ್ಕೆ ಕೆಡವಿದನು. ಒಡನೆ ತಿಮ್ಮನ ಬಳಿಗೆ ರೋಷಾವೇಶದಿಂದ ಬರುತ್ತಿರಲಾಗಿ ಮತ್ತೊಬ್ಬನು ಅವನನ್ನು ಇದಿರಾದನು. ಸಿಪಾಯನು ಬರುವುದನ್ನು ನೋಡಿ ಯುವಕ ವೇಷದಲ್ಲಿದ್ದ ಪ್ರಥುಲೆಯನ್ನು ಹಿಂದುಗಡೆಯಿಂದ ಹೋಗಿ ಆತನು ಎತ್ತಿ ಹಿಡಿದಿದ್ದ ಕೈಯನ್ನು ಬಿಗಿದು ಹಿಡಿದಳು. ಅಕಸ್ಮತ್ತಾಗಿ ಬಂದ ಆತಂಕವನ್ನು ತಿಳಿಯದೆ ಸಿಪಾಯನು ಹಿಂದಿರುಗಿದನು. ಅಷ್ಟರಲ್ಲಿ ಗುಂಡನಾಯಕನು ಸಿಪಾಯಿಯನ್ನು ತನ್ನ ಖಡ್ಗಕ್ಕೆ ಆಹುತಿಯನ್ನಾಗಿ ಮಾಡಿದನು. ಪ್ರಾಣೋತ್ಕ್ರಮಣ ಕಾಲದಲ್ಲಿ ಸಿಪಾಯನು ತನ್ನ ಖಡ್ಗವನ್ನು ಬೀಸಿಟ್ಟನು. ಅದು ಪ್ರಥುಲೆಗೆ ತಗಲುವುದೆಂದು ಬೆದರಿ “ಪ್ರಥುಲಾ! ನೀನು ಹಿಂತೆಗೆ! ಅಲ್ಲಿ ಬಿದ್ದ ಖಡ್ಗದಿಂದ ಆ ಪಾಪಿಯ ತಲೆ ಕಡಿದುಬಿಡು!” ಎಂದು ಹೇಳಿ ಸಿಪಾಯನ ಪೆಟ್ಟನ್ನು ತಾನೇ ತೆಗೆದು ಕೊಂಡನು. ಪ್ರಥುಲೆಯು ಮೊದಲು ಬಿದ್ದ ಸಿಪಾಯನ ಕೈಯಿಂದ ಜಾರಿದ ಖಡ್ಗವನ್ನು ಹೆಕ್ಕಿ ತೆಗೆದು ತಿಮ್ಮನಿಗೆ ಇದಿರಾಗಿ ಬಂದಳು. ತನ್ನ ಪ್ರಾಣವಲ್ಲಭ ಏನಾದನೆಂದು ಲೆಕ್ಕಿಸದೆ ತಿಮ್ಮನನ್ನು ಬೆಂಬತ್ತಿ ಹೋದಳು. ತಿಮ್ಮನು ಗುಂಡನು ಪ್ರಥುಲೆಗೆ ಹೇಳಿದ ಮಾತನ್ನು ಕೇಳುತ್ತಲೇ ಆಯುಧರಹಿತನಾದುದರಿಂದಲೂ, ರಣಭೀರುವಾದುದರಿಂದಲೂ ರಂಧ್ರ ದೊಳಗಿಂದ ಒಳಕ್ಕೆ ಜಾರಲಿದ್ದನು. ಪ್ರಥುಲೆಯು ಖಡ್ಗವನ್ನು ಕೊಂಡು ಓಡಿ ಬಂದು, ರಂಧ್ರದೊಳಗೆ ತಿವಿದು ಬಿಟ್ಟಳು. ಆ ಏಟು ರಂಧ್ರಕ್ಕೆ ತಗಲಿ ಕಣಕಣಿಸಿತು. ತಿಮ್ಮನು ತಪ್ಪಿಸಿಕೊಂಡು ಹೋದನು. ಅವಳು ಹತಾಶಳಾಗಿ ತನ್ನ ಪ್ರಾಣವಲ್ಲಭನಿದ್ದ ಕಡೆಗೆ ಹಿಂದಿರುಗಿದಳು. ಅವಳ ಪ್ರಾಣೇಶ್ವರನು ರಕ್ತಸಾಗರದಲ್ಲಿ ಅಸ್ತಮಿಸುವಂತಿದ್ದನು. ಪ್ರಥುಲೆಯನ್ನು ದೃಷ್ಟಿಸುತ್ತಲೇ ಗುಂಡನಾಯಕನು “ಪ್ರಥುಲಾ! ತಿಮ್ಮನು ಇನ್ನೂ ಬದುಕಿರುವನೇ?” ಎಂದು ಕೇಳಿದನು. ಪ್ರಥುಲೆಯ ಉತ್ತರವನ್ನು ಕೇಳುವುದಕ್ಕೆ ಅವನ ದೇಹದಲ್ಲಿ ಪ್ರಜ್ಞೆ ಉಳಿದಿರಲಿಲ್ಲ. ಅವನ ಜೀವನ ನೌಕೆಯು ರಕ್ತಪ್ರಳಯದಲ್ಲಿ ಮುಳುಗಿ ಹೋಯಿತು. ಪ್ರಥುಲೆಯು ವ್ಯಾಕುಲಿತ ಮನಸ್ಸಿನಿಂದ ನಾಯಕನ ಉದರದಲ್ಲಿದ್ದ ಖಡ್ಗವನ್ನು ಈಚೆಗೆ ಸೆಳೆದು, ಆತ್ಮಹತ್ಯೆಯನ್ನು ಮಾಡಿಕೊಳ್ಳುವ ಯೋಚನೆಯಿಂದ ಒಂದು ಮುಹೂರ್ತ ಖಡ್ಗವನ್ನು ಎತ್ತಿ ಹಿಡಿದಳು. ಪುನಃ ತನ್ನ ಪ್ರಾಣನಾಯಕನ ಅಂತಿಮಕಾಲದ ಮಾತುಗಳಿಂದ ಉದ್ರೇಕಿತಳಾಗಿ ಖಡ್ಗವನ್ನು ಬಿಸುಟಳು. “ಆತ್ಮಹತ್ಯೆಗೆ ಇದು ಸಮಯವಲ್ಲ! ಪ್ರಿಯನ ಮರಣಕಾಲದ ಆಸೆಯನ್ನು ಪೂರೈಸುವುದರಲ್ಲಾದರೂ ಈ ದೇಹವನ್ನು ವಿನಿಯೋಗಿಸುವೆನು” ಎಂದು ದೃಢಚಿತ್ತಳಾಗಿ ಅಲ್ಲಿಯೇ ಒಂದು ಗಳಿಗೆ ತಡೆದಳು.

ರಾಜಧಾನಿಯ ಬಡಗಣ ಕಡೆಯಲ್ಲಿ ನವಮಿಯ ಉತ್ಸವವನ್ನು ಸೂಚಿಸುವ ಅಗ್ನಿಕುಂಡವು ಎಲ್ಲಿ ಪ್ರಜ್ವಲಿಸುತ್ತಿತ್ತೋ ಅದರ ಸಮೀಪದಲ್ಲೇ ಮೇಲೆ ಹೇಳಿದ ಕಲಹವು ನಡೆಯಿತು. ಪ್ರಥುಲೆಯು ಗಂಭೀರವಾದ ಏಕಾಂತವಾದ ರಾತ್ರಿಯಲ್ಲಿ ಏನು ಮಾಡಬೇಕೆಂದು ತಿಳಿಯಲಾರದೆ ವಲ್ಲಭನ ಮೃತಶರೀರದ ಬಳಿಯಲ್ಲಿ ಕುಳಿತು ದುಃಖಿಸುತ್ತಿದ್ದಳು. ಇದ್ದಕ್ಕಿದ್ದ ಹಾಗೆ ದೂರ ಒಬ್ಬ ಮನುಷ್ಯನು ಬರುತ್ತಿದ್ದನು. ಪ್ರಥುಲೆ ಮೊತ್ತಮೊದಲು ಅವನನ್ನು ದೃಷ್ಟಿಸಲಿಲ್ಲ. ಅವನು ಸಮೀಪಸ್ಥನಾಗುತ್ತಲೇ ಕೆಳಗಿದ್ದ ಖಡ್ಗವನ್ನು ಕೈಯಲ್ಲಿ ಹಿಡಿದು ಎದ್ದುನಿಂತಳು. ಕತ್ತಲು ಬಲವಾದುದರಿಂದಲೂ ಪತಿಶೋಕವು ಅಪಾರವಾದುದರಿಂದಲೂ ಅವಳು ಆಗಂತುಕನನ್ನು ಗುರುತಿಸಲಿಲ್ಲ. ಬಂದವನು ಅಲ್ಲಿಯೇ ತಡೆದು “ಇದೇನು ಪ್ರಮಾದ?” ಎಂದು ಆಶ್ಚರ್ಯದಿಂದಲೂ, ಭೀತಿಯಿಂದಲೂ, ಖೇದದಿಂದಲೂ ಕೇಳಿದನು. ಪ್ರಥುಲೆಯು ಈ ಮಾತುಗಳನ್ನು ಕೇಳಿದಳೋ ಇಲ್ಲವೋ ಬೇಗಬೇಗನೆ ಮುಂದರಿಸಿ ಆಗಂತುಕನ ಚರಣತಲದಲ್ಲಿ ತನ್ನ ಮಸ್ತಕವನ್ನು ಅರ್ಪಿಸಿದಳು; ತನ್ನ ಭಾಷ್ಪಗಳಿಂದ ಅವನ ಅಡಿಗಳನ್ನು ನೆನೆಯಿಸಿದಳು. ಆಗಂತುಕನು ಪ್ರಥುಲೆಯ ಸಮೀಪದಲ್ಲಿ “ಮಗು! ರೋದಿಸಬೇಡ! ಎಲ್ಲವು ವಿಧಿಕೃತ. ವಿಧಿಕಾರ್ಯಗಳು ವಿಚಿತ್ರವಾದವುಗಳು. ಸುಮ್ಮನೆ ಅಳಬೇಡಮ್ಮ!” ಎಂದನು.

ಪ್ರಥುಲೆಯು ಬಿಕ್ಕಿಬಿಕ್ಕಿ ಅಳುತ್ತಾ, “ಅಪ್ಪಾ! ನಿನ್ನ ಮಾತು ಮೀರಿ ಬಂದು, ಈ ದುರವಸ್ಥೆಯನ್ನು ತಂದುಕೊಂಡೆನು. ನೀನು ಬುದ್ಧಿ ಹೇಳಿದಂತೆ ನಾನು ಮನೆಯಲ್ಲೇ ಇರುತ್ತಿದ್ದರೆ ಚೆನ್ನಾಗಿತ್ತು! ನನ್ನ ಕುಂಕುಮವನ್ನು ನಾನೇ ಅಳಿಸಿಬಿಟ್ಟೆನಲ್ಲ!” ಎಂದು ಹಂಬಲಿಸಿದಳು.
ವೃದ್ಧನು ಮಗಳ ರೋದನವನ್ನು ನೋಡುತ್ತಾ “ಅಮ್ಮಾ! ಇನ್ನು ಗೋಳಿಡಬೇಡ! ನೀನು ಮನೆಯಲ್ಲಿ ಇದ್ದರೂ ಈ ಮೃತ್ಯುವನ್ನು ತಪ್ಪಿಸುವುದು ಅಶಕ್ಯವಾಗಿದ್ದಿತು. ನಿನ್ನ ಜನನಿಯ ನಿರ್ಬಂಧದಿಂದ ಅವನು ನನ್ನ ಅಳಿಯನಾಗಲು ಒಪ್ಪಿದನು. ಆಗಲೇ ನಾನು ಈ ದುರ್ಘಟನೆಯು ಬರುವುದೆಂದು ಎಣಿಸಿದ್ದೆನು. ಪ್ರಥುಲಾ! ಇನ್ನು ಅತ್ತು ಪ್ರಯೋಜನವಿಲ್ಲ. ನಿನಗೆ ಅಪಾಯ ಸಂಭವಿಸುವುದೆಂದು ತಿಳಿದು ನಾನು ಮುದುಗಲ್ಲಿನಿಂದ ಹೊರಟು ಬಂದೆನು. ಅಳಬೇಡಮ್ಮ! ಅಳಬೇಡ! ಆದರೆ ನಿಮ್ಮನ್ನು ಮನೆಯಲ್ಲಿ ಕಾಣದೆ ಇದ್ದುದರಿಂದ ರಾಜಧಾನಿಯಲ್ಲಿ ಹುಡುಕಿದೆನು. ಬಳಿಕ ನಿಮ್ಮಿಬ್ಬರನ್ನು ಅರಸನು ಬಂಧಿಸಿರುವನೆಂದು ಕೇಳಿ ನಿಮ್ಮ ಬಂಧನ ಪರಿಹಾರಾರ್ಥವಾಗಿ ಹಂಪಿಯ ವಿರೂಪಾಕ್ಷ ದೇವಾಲಯಕ್ಕೆ ಹೋಗುತ್ತಿದ್ದೆನು. ಕಾರ್ಯವೆಲ್ಲಾ ಕೆಟ್ಟು ಹೋಯಿತು. ಈಗ ಚಿಂತೆಯಿಲ್ಲ; ಈ ಶವಕ್ಕೆ ತಕ್ಕ ಸಂಸ್ಕಾರಗಳನ್ನು ಮಾಡದೆ ಇರುವುದು ನ್ಯಾಯವಲ್ಲ; ಈ ಶವವು ಇಲ್ಲಿಯೇ ಬಿದ್ದಿದ್ದರೆ ನಾಳೆ ರಾಜನು ಅದನ್ನು ಕೋಟೆಯ ಬಾಗಿಲಿಗೆ ತೂಗಿಸಿ ಅವಮಾನಗೊಳಿಸುವನು” ಎಂದನು.

ಕಡೆಯ ಮಾತನ್ನು ಕೇಳುತ್ತಲೇ ಪ್ರಥುಲೆಯು ಸ್ವಲ್ಪ ಸಮಾಧಾನಗೊಂಡು “ಅಪ್ಪಾ! ಹಾಗೆ ಆಗದಂತೆ ಸಂಸ್ಕಾರಗಳನ್ನು ಮಾಡಲು ಉಪಾಯವುಂಟೇ?” ಎಂದು ಕೇಳಿದಳು.

ತಂದೆಯು ಮಗಳನ್ನು ಕನಿಕರದಿಂದ ನೋಡಿ, “ಮಗು, ನೀನು ಶೋಕ ಬಿಡುವುದಾದರೆ ಕೆಲಸ ಶೀಘ್ರದಲ್ಲಾಗುವುದು. ನೀನು ಇನ್ನೂ ದುಃಖದಿಂದ ಇಲ್ಲಿಯೇ ಬೀಳುವುದಾದರೆ, ನಮ್ಮ ಅವಸ್ಥೆ ಇನ್ನೊಂದು ಗಳಿಗೆಯಲ್ಲಿ ಏನಾಗುವುದೋ ಹೇಳಲಾರೆನು” ಎಂದನು.

ಪ್ರಥುಲೆಯು “ಅಪ್ಪಾ! ಆ ನೀಚ ತಿಮ್ಮನನ್ನು ಸಂಹರಿಸದೆ ನಾನು ಇಲ್ಲಿಂದ ಏಳಲಾರೆನು” ಎಂದಳು.

ತಂದೆಯು “ಅಮ್ಮಾ! ಅದಕ್ಕೆ ತಕ್ಕ ಪ್ರತೀಕಾರವನ್ನು ಮಾಡುವ! ಈಗ ಇಲ್ಲಿರುವುದು ಒಳ್ಳೆಯದಲ್ಲ” ಎಂದನು.

ಬಳಿಕ ಇಬ್ಬರೂ ಎದ್ದು ನಿಂತರು. ವೃದ್ಧನಾದ ತಂದೆಯು ಗುಂಡನಾಯಕನ ಶವದ ಗಾಯಕ್ಕೆ ತನ್ನ ತಲೆಬಟ್ಟೆಯನ್ನು ಬಿಗಿದು. ನೆತ್ತರನ್ನು ತಡಿಸಿ, ಅದನ್ನು ಹೊತ್ತುಗೊಂಡು ಹೋಗುವುದಕ್ಕೆ ಮಗಳೊಡನೆ ಸೂಚಿಸಿದನು. ಮಗಳು ಮುಂದುಗಡೆಯಲ್ಲಿಯೂ ತಂದೆಯು ಹಿಂದುಗಡೆಯಲ್ಲಿಯೂ ಅದನ್ನು ಹಿಡಿದು ಸಮೀಪದಲ್ಲಿ ಉರಿಯುತ್ತಿದ್ದ ಅಗ್ನಿಕುಂಡದಲ್ಲಿ ಅದನ್ನು ಸಮರ್ಪಿಸಿಬಿಟ್ಟರು. ಗುಂಡನಾಯಕನ ದೇಹವು ಅನ್ಯರ ಹಸ್ತದಿಂದ ಕಳಂಕಿತವಾಗದೆ ಪವಿತ್ರವಾದ ಅಗ್ನಿಮುಖದಲ್ಲಿ ವಿಲೀನವಾಗಿ ಹೋಯಿತು. ತತ್‌ಕ್ಷಣವೇ ವೃದ್ಧನು ಮಗಳೊಡನೆ ಅಲ್ಲಿಂದ ಅದೃಶ್ಯನಾದನು.

ಇತ್ತ ದೇವರಾಜನು ರಾತ್ರಿಯ ವೃತ್ತಾಂತವನ್ನೆಲ್ಲಾ ತಿಮ್ಮನಿಂದ ಕೇಳಿ ಪಶ್ಚಾತ್ತಾಪ ಗೊಂಡನು. ಪ್ರಥುಲೆಯು ಹೇಗೋ ತಪ್ಪಿಸಿಕೊಂಡುದಕ್ಕೆ ಬಹಳವಾಗಿ ವ್ಯಥೆಗೊಂಡನು. ತಿಮ್ಮನ ಮಾತುಗಳಿಂದ ಗುಂಡನಾಯಕನು ಸತ್ತನೋ ಎಂಬುದು ಅರಸನಿಗೆ ನಿಶ್ಚಯಿಸಲು ಆಗಲಿಲ್ಲ. ಪ್ರಾತಃಕಾಲದಲ್ಲಿ ತಿಮ್ಮನನ್ನು ರಾಜನು ನೋಡಿ, “ಹಕ್ಕಿಗಳು ಎಲ್ಲಿ ಓಡಿರ ಬಹುದು?” ಎಂದು ಕೇಳಿದನು. ತಿಮ್ಮನು “ಗೂಡಿಗೆ” ಉತ್ತರಕೊಟ್ಟನು. “ಹಾಗಾದರೆ ನಾವು ಬೇಟೆಗಾದರೂ ಹೋಗಿ ಅವನ್ನು ಹಿಡಿಯಬೇಕು” ಎಂದು ಸೂಚಿಸಿದನು. ಹಾಗೆಯೇ ಮಧ್ಯಾನ್ಹದಲ್ಲಿ ವಿಜಯನಗರದ ಮಹಾಸೈನ್ಯವು ಈ ಎರಡು ಅಥವಾ ಒಂದು ಹಕ್ಕಿಯನ್ನು ಹಿಡಿಯಲೋಸುಗ ಸರ್ವಸನ್ನಾಹತೆಗಳನ್ನು ಒದಗಿಸಿ ಕೊಂಡು, ವಿದ್ಯಾದಶಮಿಯ ಮಧ್ಯಾಹ್ನದಲ್ಲಿ ರಾಜಧಾನಿಯನ್ನು ಬಿಟ್ಟು ಮುದುಗಲ್ಲಿಗೆ ತೆರಳಿತು. ದಾರಿಯಲ್ಲಿ ಸಿಕ್ಕಿದವರನ್ನು ಸೈನಿಕರು ವಿಚಾರಿಸುತ್ತ, ಕಂಡ ಮನೆಗಳನ್ನು ಹುಡುಕುತ್ತ ದ್ವಾದಶಿಯ ಮಧ್ಯಾನ್ಹದಲ್ಲಿ ಮುದುಗಲ್ಲನ್ನು ಮುಟ್ಟಿದರು. ನಿವಾಸಕರನ್ನು ಹಿಡಿದು ತಂದು ವಿಚಾರಿಸಿ ಪ್ರಥುಲೆಯ ಮನೆಯನ್ನು ಕಂಡುಹಿಡಿದರು. ಒಡನೆ ೧೦೦ ಮಂದಿ ಸೈನಿಕರು ಬಡ ಗುಡುಸಲನ್ನು ಮುತ್ತಿದರು. ಗುಡುಸಲಿಗೆ ಬೀಗ ಹಾಕಿತ್ತು. “ಗುಡುಸಲನ್ನು ಹುಡುಕಿ ನೋಡಿದೆವು. ಪ್ರಥುಲೆ ಇಲ್ಲ. ಏನು ಮಾಡಬೇಕು?” ಎಂದು ಸೈನಿಕರು ಬಂದು ಕೇಳಿದರು. ತಿಮ್ಮನು “ಅದಕ್ಕೆ ಬೆಂಕಿ ಹಚ್ಚಿಬಿಡಿ” ಎಂದು ಆಜ್ಞೆಕೊಟ್ಟನು. ನಿಮಿಷಮಾತ್ರದಲ್ಲಿ ಹುಲ್ಲುಗುಡುಸಲು ಸುಟ್ಟು ಬೂದಿಯಾಯಿತು. ರಾಜನ ಕೋಪವು ಈ ಕಾರ್ಯದಿಂದ ಸ್ವಲ್ಪ ಆರಿತು.

ಅರ್ಧರಾತ್ರಿ ದೇವರಾಜನ ಶಿಬಿರವು ವಿಲಾಸಮಯವಾಗಿತ್ತು. ವಿಲಾಸಮಂಟಪದ ನಾಲ್ಕು ಕಡೆಗಳಲ್ಲಿಯೂ ಪಟ್ಟೆಯ ವಸ್ತ್ರ ಹೊದಿಸಿತ್ತು. ಇದರ ಹೊರಗಡೆಯಲ್ಲಿ ಪರ್ಣತೋರಣಗಳು ತೂಗಾಡುತ್ತಿದ್ದವು. ಇವುಗಳ ಇಕ್ಕಡೆಗಳಲ್ಲಿಯೂ ಪುಷ್ಪಸರಗಳು ಅಲೆದಾಡುತ್ತಿದ್ದವು. ಚಪ್ಪರದ ಮೇಲ್ ಹೊದಿಕೆಯಿಂದ ಸಹಸ್ರದೀಪಗಳು ಜ್ವಲಿಸುತ್ತಿದ್ದವು. ಈ ದೀಪಗಳ ಕಾಂತಿಯಿಂದ ಅಲ್ಲಿ ನೆರೆದಿದ್ದ ನರ್ತನ ಸ್ತ್ರೀಯರ ರತ್ನಾಭರಣಗಳು ಉಜ್ವಲವಾಗಿ ಥಳಥಳಿಸುತ್ತಿದ್ದವು. ಗಾಯಕರ ಕರ್ಣಮಧುರವಾದ ಗಾನ, ವಾರಸ್ತ್ರೀಯರ ನಾಟ್ಯ ಪರಿಪಾಟ್ಯ, ವಿವಿಧ ಪುಷ್ಪಗಳ ಸುಗಂಧ, ಗಗನ ಶೋಭಿಯಾದ ಚಂದ್ರನ ಪ್ರಶಾಂತವಾದ ಚಂದ್ರಿಕೆ, ವಿಧವಿಧವಾದ ಪಾನಗಳ ಆಮೋದ-ಇವುಗಳಿಂದ ಆ ವಿಲಾಸ ಶಿಬಿರವು ಮನ್ಮಥನ ನಾಟ್ಯರಂಗದಂತೆ ಕಂಗೊಳಿಸುತ್ತಿತ್ತು. ದೇವರಾಜನು ಅಗ್ರಾಸನವನ್ನು ಅಲಂಕರಿಸಿದ್ದನು. ಅವನ ಉಭಯ ಪಾರ್ಶ್ವಗಳಲ್ಲಿಯೂ ಚಾಮರಗಳು ಚಿಮ್ಮಿಸಲ್ಪಡುತ್ತಿದ್ದುವು. ಆಗಾಗ ತಿಮ್ಮನು ಕೈಬಳಿ ಇದ್ದ ತಾಂಬೂಲ ಕರಂಡದಿಂದ ಎಲೆಯನ್ನು ಮಡಚಿ ರಾಜನ ಕೈಗೆ ಕೊಡುತ್ತಿದ್ದನು. ರಾಜನ ಹಿಂದುಗಡೆಯ ಅರ್ಧಚಂದ್ರಾಕೃತಿಯಲ್ಲಿದ್ದ ಆಸನದ ಮೇಲೆ ರಾಜಕುಲದವರೂ, ರಾಜಮಿತ್ರರೂ ಮಂಡಿಸಿದ್ದರು. ನವವಿಕಸಿತವಾದ ಕಮಲಪತ್ರದ ದರ್ಶನದಿಂದ ಉತ್ಸಾಹಿತವಾದ ಭ್ರಮರವು ಮಧುರವಾದ
ಝೇಂಕೃತಿಯನ್ನು ಎತ್ತುವಂತೆ, ವಸಂತನ ಆಗಮನದಿಂದ ಸಂತೋಷಗೊಂಡ ಕೋಗಿಲೆಯು ಸುರಸವಾದ ಕುಕಿಲವನ್ನು ಹಾಡುವಂತೆ, ಸಂಗೀತಕಲಾ ನಿಪುಣವಾದ ವೈಣಿಕನ ಬೆರಲಿಂದ ಮೀಟಲ್ಪಟ್ಟ ಬೀಣೆಯು ಕೋಮಲವಾದ ರಾಗತರಂಗಗಳನ್ನು ಪಸರಿಸುವಂತೆ, ನರ್ತನಸ್ತ್ರೀಯರು ಒಬ್ಬೊಬ್ಬರಾಗಿ ತಮ್ಮ ಮೃದು ಮಧುರವಾದ ಕಂಠಗಳಿಂದ ಗೀತಗಳನ್ನು ಹಾಡುತ್ತ, ಶ್ರಾವಕರ ಉದ್ವಿಗ್ನ ಹೃದಯವನ್ನು ಶಾಂತಗೊಳಿಸುತ್ತಿದ್ದರು. ಬಂಧುಳರು ಬಡಿಯುತ್ತಿರುವ ಮೃದಂಗದ ತಾಳಕ್ಕೆ ತಮ್ಮ ಪದವಿನ್ಯಾಸವನ್ನು ಇಡುತ್ತ ತಂತೀವಾದ್ಯಗಳ ಮಂಜುಳವಾದ ಝೇಂಕಾರದಲ್ಲಿ ತಮ್ಮ ಹೃದಯಂಗಮವಾದ ಕಂಠಸ್ವರವು ಸಮ್ಮಿಲಿತವಾಗುವಂತೆ ಹಾಡುತ್ತ, ಶ್ರಾವಕರ ಮನಸ್ಸನ್ನು ಆಕರ್ಷಿಸುವಂತೆ ಅಧರಗಳಿಂದ ಹಾರಿ ಬರುತ್ತಲಿರುವ ಮಧುರ ಗೀತಗಳ ಅರ್ಥವನ್ನು ತಮ್ಮ ಹಸ್ತಾಭಿನಯಗಳಿಂದಲೂ, ನಯನ ಸಂಚಲನದಿಂದಲೂ, ದೇಹ ವಿಕಾರದಿಂದಲೂ, ಪರಿಸ್ಪುಟ ಮಾಡುತ್ತ ವಾರಾಂಗನೆಯರು ನರ್ತಿಸತೊಡಗಿದರು. ನಡುನಡುವೆ ರಾಜನು ಒಬ್ಬೊಬ್ಬರನ್ನೇ ತನ್ನ ಬಳಿಗೆ ಕರೆದು ಕೈತುಂಬಾ ಹಣವನ್ನು ಉಚಿತವಾಗಿ ಕೊಡುತ್ತಿದ್ದನು. ಉಚಿತವನ್ನು ಸ್ವೀಕರಿಸಿದವರು ಬೇರೊಂದೆಡೆಯಲ್ಲಿ ಕುಳಿತು ವಿಲಾಸವನ್ನು ನೋಡುತ್ತಿದ್ದರು. ಅರ್ಧರಾತ್ರಿ ಕಳೆದುಹೋಯಿತು. ಶ್ರಾವಕರಲ್ಲಿ ಅನೇಕರು ತಮ್ಮ ಪೀಠಗಳನ್ನು ಅವಲಂಬಿಸಿ ತೂಕಡಿಸುತ್ತಿದ್ದರು. ದೀಪಗಳು ಮೆಲ್ಲಮೆಲ್ಲನೆ ಬೆಳಕು ಕುಂದತೊಡಗಿದವು. ಆಸನಕ್ಕೆ ಒರಗಿದ್ದ ದೇವರಾಜನ ರೆಪ್ಪೆಗಳು ಅಲ್ಲಿಯೇ ಸೆರೆಗೊಳ್ಳುವಂತಿದ್ದುವು. ಒಮ್ಮೊಮ್ಮೆ ತೆರೆದಂತೆ ತೋರಿ ಮೆಲ್ಲನೆ ಮುಚ್ಚಿ ಹೋಗುತ್ತಲಿದ್ದುವು. ಅಷ್ಟರಲ್ಲಿ ಮತ್ತೊಬ್ಬಳು ಮುಂದೆ ಬಂದು ನರ್ತನವನ್ನು ಪ್ರಾರಂಭಿಸಿದಳು. ಇವಳು ಯಥಾರ್ಥವಾಗಿ ನಾಟ್ಯರಂಗದಲ್ಲಿ ಕಾಲಿಡುವಂತಿದ್ದಳು. ಆ ಸಭಾಮಂಡಲಿಯಲ್ಲಿ ಭರತ ವಿದ್ಯಾವಿಶಾರದರು ಯಾರಾದರೂ ಇರುತ್ತಿದ್ದರೆ, ಆ ನರ್ತಕಿಯ ಚರಣವಿನ್ಯಾಸವು ಸರಿಯಾಗಿಲ್ಲವೆಂದು ಹೇಳುತ್ತಿದ್ದರು. ಯುವತಿಯು ಹಾಡತೊಡಗಿದಳು. ಆ ಹಾಡಿನಲ್ಲಿಯೂ ಸಂಗೀತ ಪಾಂಡಿತ್ಯದ ಚಿನ್ನೆಗಳೇನೂ ತೋರುತ್ತಿರಲಿಲ್ಲ. ಚಂದ್ರೋದಯದಲ್ಲಿ ವಿರಹಿತವಾದ ಚಕ್ರವಾಕವು ನೆಲದ ಮೇಲೆ ಹೊರಳಾಡಿ ಚಂದ್ರನ ಇದಿರಾಗಿ ಹೇಗೆ ಮೆಲ್ಲುಲಿಗೈವುದೋ ಆ ಪ್ರಕಾರದಲ್ಲಿ ರಮಣಿಯು ಹಾಡುತ್ತಿದ್ದಳು. ಆಗಾಗ ಮುಂದೆ ಬರುತ್ತ, ಹಿಂದೆ ಹೋಗುತ್ತ, ಉಂಗುರದ ಬೆರಳನ್ನು ಅಭಿನಯಿಸುತ್ತ, ಉಡಿಯನ್ನು ತನ್ನ ಎಡಗೈಯಿಂದ ಮುಚ್ಚುತ್ತ, ಜಮಾವನ ಮುಕ್ತಾಯಕ್ಕೆ ಸುತ್ತು ಸುತ್ತು ತಿರುಗುತ್ತ, ತೀಕ್ಷ್ಣವಾದ ದೃಷ್ಟಿಗಳ ಮಿಂಚನ್ನು ನಾಲ್ಕು ಕಡೆಗಳಲ್ಲಿಯೂ ಪಸರಿಸುತ್ತ ನಾಟ್ಯವಾಡಿದಳು. ದೇವರಾಜನು ರೆಪ್ಪೆ ತೆರೆದು ಕಣ್ಣೆತ್ತಿದನು. ರಮಣಿಯು ಹಾಡುತ್ತಿದ್ದಳು.

ರಾಗ ಶಹಾನ್, ಆದಿತಾಳ

ಸಾರಿ ಹೇಳುವೆ ನಾನು ಸೈರಿಪಾಲಿಸು ನೀನು! |
ವೀರ ಲಕ್ಷ್ಮೀಮುಖ ಕಮಲ ಸಾದ್ಭಾನು!||ಪಲ್ಲ||
ಮಾನವ ಮೂಢನೆ! ಮಾನಿನಿ ಮಣಿಯನು
ಸಾನುರಾಗದಿ ತಾನೆ ಸಾಧಿಸಬೇಕೈ ||
ಮಾನಿತ ಸ್ತ್ರೀಯನ್ನು | ಹಾನಿಗೈಯಲು ನೋಳ್ಪ
ಹೀನರಾಜನು ರಾಜ್ಯಹೃದಯದ ಶೂಲಂ || ಸಾರಿ ಹೇಳುವೆ ||೧||

ಉರಿವುದು ಪ್ರಣಯವು| ಸುರಿದಂತೆ ತೈಲವ;
ಅರರೇ! ಎಚ್ಚರಗೊಳ್ಳು! ನಿಸ್ನೇಹನಾಗು||
ಸಿರಿಸಂಪತ್ತನ್ನು ಸುಟ್ಟು ನರಕಮಾರ್ಗವ ತೋರಿ
ನರನ ಜನ್ಮದಿ ಮುಚ್ಚುವುದು ಕತ್ತಲನ್ನು || ಸಾರಿ ಹೇಳುವೆ ||೨||

ಒಂದೊಂದು ಹೂವೊಳು| ನಿಂದು ಪಾರುವ ತುಂಬಿ
ಯಂದದ ಪ್ರಣಯವು ಪ್ರಣಯವೆನಿಸದೈ||
ಸುಂದರಿಯೋರ್ವಳಂ| ಚಂದದಲಿ ನಂಬಿ,
ಒಂದಾಗಿ ಬಾಳ್ಪುದೆ ನಿಜದನುರಾಗಂ || ಸಾರಿ ಹೇಳುವೆ ||೩||

ಗೆಲ್ಲು ನೀನಿಂದ್ರಿಯ| ನೆಲ್ಲವ, ರಾಜ್ಯದ
ಫುಲ್ಲಾಕ್ಷಿಯರ ಧರ್ಮವನು ರಕ್ಷಿಸೈಯ್ಯಾ! ||
ಎಲ್ಲರ ಕಾಯ್ವನೇ। ಮೆಲ್ಲನೆ ಮೋಸದಿ
ಕೊಲ್ಲಲು ನಿಂದರೆ ಸೊಲ್ಲಿಪಾರಾರೈ? || ಸಾರಿ ಹೇಳುವೆ ||೪||

ಜನರ ಹೆಂಗಳನೆಲ್ಲಾ | ಜನನಿಯೆಂದರಿದು ಸ
ದ್ವನಿತಾ ಸನ್ಮಾನರಕ್ಷಕನಾಗಿ ಬಾಳ್ವೆ!||
ಜನಕಜೆ, ದೃಪದನ| ತನುಜೆಯ ಬಯಸಿರ್ದ
ಘನಪಾಪಿಗಳ ಗತಿಯನು ಯೋಚಿಸೈಯ್ಯಾ || ಸಾರಿ ಹೇಳುವೆ ||೫||

ಸ್ತ್ರೀ ಜನ ಧರ್ಮವು| ಓಜೆ ತಪ್ಪುತಲೆ, ಸ
ಮಾಜದ ಚ್ಯುತಿಯಹುದೆಂಬುದ ನಂಬು! ||
ರಾಜನ ಬಳಿಯಣ| ದುರ್ಜನರ ಕೊಲ್ಲಲ್
ಮೂಜಗದೊಳು ಕೀರ್ತಿ ಪಸರಿಪುದಯ್ಯಾ ಸಾರಿ ಹೇಳುವೆ ||೬||

ಈ ಗೀತವನ್ನು ಕೇಳುತ್ತಲೇ ರಾಜನು ಸ್ವಲ್ಪ ಸಂಭ್ರಾಂತನಾದಂತೆ ನೋಡಿದನು; ರಮಣಿಯ ಮುಂದುಗಡೆಯಲ್ಲಿದ್ದ ದೀಪವು ಕಾಂತಿಹೀನವಾದುದರಿಂದ ಅದನ್ನು ಜ್ವಲಿಸುವಂತೆ ತಿಮ್ಮನೊಡನೆ ಸೂಚಿಸಿದನು. ರಮಣಿಯು ಇನ್ನೂ ಹಾಡುತ್ತಲಿದ್ದಳು.

ಸ್ತ್ರೀ ಜನಧರ್ಮವು| ಓಜೆ ತಪ್ಪುತಲೆ, ಸ
ಮಾಜದ ಚ್ಯುತಿಯಹುದೆಂಬುದ ನಂಬು! ||

ತಿಮ್ಮನು ರಮಣಿಯ ಹತ್ತಿರ ಬರುತ್ತಿದ್ದನು

ರಾಜನು ಬಳಿಯಣ| ದಂರ್ಜನರನು ಕೊಲ್ಲಲ್

ತಿಮ್ಮನು ಊರ್ಧ್ವಮುಖನಾಗಿ ದೀಪವನ್ನು ಸರಿಮಾಡುತ್ತಿದ್ದನು. ರಮಣೀಯು

“ಮೂಜಗದೊಳು ಕೀರ್ತಿ ಪಸರಿಪುದಯ್ಯಾ”
ಸಾರಿ ಹೇಳುವೆನು ನಾನು! ಸೈರಿಪಾಲಿಸು ನೀನು
ವೀರಲಕ್ಷ್ಮೀಮುಖ ಕಮಲ ಸದ್ಭಾನ||

ಎಂದು ಪೂರೈಸಿದಳು. ಒಡನೆ ಮುದುಕನೊಬ್ಬನು ಮೃದಂಗವನ್ನು ಗಂಭೀರವಾಗಿ ಬಡಿಯುತ್ತಲೇ ಯುವತಿಯು ಕೆರಳಿದಂತಾಗಿ ಮುಕ್ತಾಯಕ್ಕೆ ಸುತ್ತುಮುತ್ತು ತಿರುಗುತ್ತ, ಉಡಿಯ ಮೇಲಿದ್ದ ಕೈಯನ್ನು ಸೆಳೆದು ಜಳಪಿಸುತ್ತ, ತಿಮ್ಮನನ್ನು ಎಡವಿದಂತೆ ಉಚ್ಛಳಿಸಿ ಬೆರಳಿನ ಉಂಗುರವನ್ನು ಮುದ್ದಿಟ್ಟು ಹಿಂಜರಿದಳು. ತತ್‌ಕ್ಷಣವೇ ತಿಮ್ಮನು “ಅಯ್ಯೋ!” ಎಂದು ನೆಲಕ್ಕೆ ಬಿದ್ದುಬಿಟ್ಟನು. ದೇವರಾಜನು ಉರಿಯವ ದೀಪದ ಕಾಂತಿಯಿಂದ ಯುವತಿಯನ್ನು ಕಂಡುಹಿಡಿದು ಕೆಳಕ್ಕೆ ಧುಮಿಕಿದನು. ತಿಮ್ಮನ ದೇಹವು ರಕ್ತಮಯವಾಗಿತ್ತು; ಭರ್ಜಿಯೊಂದು ಅವನ ಉದರಸ್ಥವಾಗಿತ್ತು. ದೇವರಾಜನು ಅದನ್ನು ನೋಡುತ್ತಲೇ ‘ಯುವತಿಯನ್ನು ಹಿಡಿಯಿರಿ’ ಹಿಡಿಯಿರಿ!” ಎಂದು ಕೂಗಿದನು. ಸಿಪಾಯರು ಯುವತಿಯನ್ನು ಬಂಧಿಸಲು ಮುಂದೆ ಬಂದರು. ಜನಗಳೆಲ್ಲಾ ವಿಸ್ಮಯಗೊಂಡು ಎದ್ದು ನಿಂತರು. ವಿಲಾಸಮಂಟಪವೆಲ್ಲಾ ಅಲ್ಲೋಲಕಲ್ಲೋಲವಾಯಿತು. ಗಲಭೆಯು ವಿಪರೀತವಾಯಿತು. ಮದ್ದಳೆ ಬಾರಿಸುವವನು ಈ ಗಲಭೆಯಲ್ಲಿ ಮೆಲ್ಲಮೆಲ್ಲನೆ ಹಿಂದಕ್ಕೆ ಸರಿದು ಅಲ್ಲಿಂದ ಕಾಲ್ತೆಗೆದನು. ಆಗ ಪ್ರಥುಲೆಯು ಉನ್ಮತ್ತಳಾಗಿ ತನ್ನ ಬೆರಳಿನ ಉಂಗುರವನ್ನು ಚುಂಬಿಸಿ ಹೀಗೆಂದಳು.

“ರಾಜಾಧಿರಾಜ, ವಿಜಯನಗರ ಸಾಮ್ರಾಜ್ಯ ಪ್ರಭು! ಮೃತ್ಯುವು ಅನಾಥಳಾದ ಅಬಲೆಯ ಅಂಗವನ್ನು ಆಶಿಸಿದವನ ಆಯಸ್ಸನ್ನು ಅಕಾಲದಲ್ಲಿ ಅಳೆದುಬಿಡುವುದು ನಿಮ್ಮಲ್ಲಿ ದೃಷ್ಟಾಂತಕ್ಕೆ ಬಂದಿತು. ವಿಜಯನಗರದ ಪ್ರಾಚೀನ ಮಹಾರಾಜರು ನಮ್ಮ ಹಿರಿಯರನ್ನು ನಿಷ್ಕಾರಣವಾಗಿ ಗಡೀಪಾರು ಮಾಡಿಸಿ ಪೀಡಿಸಿ, ಝಾಡಿಸಿ ಬಿಟ್ಟುದು ಸಾಲದೆ, ನೀವು-ಸಾಕ್ಷಾತ್ ಮಹಾರಾಜರಾದ ನೀವು ಬಡವಾದ ಹೆಂಗಸಿನ ಧರ್ಮವನ್ನು ಹಾಳುಮಾಡುವುದಕ್ಕೆ ಮನಮಾಡಿದಿರೇ? ಸ್ತ್ರೀಯರ ಮಾನರಕ್ಷಿಸುವುದಕ್ಕೆ ಬದಲಾಗಿ, ದುರುಪಾಯದಿಂದ ನನ್ನ ದೇಹವನ್ನು ಕಲುಷಿತವನ್ನಾಗಿ ಮಾಡುವುದಕ್ಕೆ ಕೈನೀಡಿದಿರೇ? ಅನುಚಿತ ಕಾರ್ಯಕ್ಕೆ ಇಷ್ಟು ದೂರ ಓಡಿದಿರೇ?”

ಪ್ರಥುಲೆಯು ನೆಲಕ್ಕೆ ಬಿದ್ದುಬಿಟ್ಟಳು. ಪುನಃ ತನ್ನ ಬಿರುಗಣ್ಣುಗಳಿಂದ ಅರಸನ ಮೊಗವನ್ನು ನೋಡುತ್ತ ಉಂಗುರದ ಬೆರಲನ್ನು ತೋರಿಸುತ್ತ,

“ಈ ಉಂಗುರವು ತನ್ನ ಪಾತಿವ್ರತ್ಯವನ್ನು ರಕ್ಷಿಸಿತು. ಇದು ವಿಷಮಯವಾದ ಉಂಗುರವಾದುದರಿಂದ, ನಾನು ಇನ್ನು ಬದುಕಲಾರೆನೆಂದು ತಿಳಿ! ಸ್ತ್ರೀಲೋಲುಪನಾದ ನಿನ್ನ ದೂಷಿತ ಹಸ್ತದಿಂದ ಅಪವಿತ್ರವಾಗುವ ಮೊದಲೇ ಈ ದೇಹವು ಮಣ್ಣಾಗಿ ಹೋಗುವುದೆಂದು ತಿಳಿ! ನಿನ್ನ ದುರ್ವಿಲಾಸ ಭವನದ ಬಂದಿಯಾಗುವುದಕ್ಕೆ ಮುಂಚೆಯೇ ಈ ಪ್ರಾಣವು ನನ್ನ ಪತಿಯ ಚರಣದಲ್ಲಿ ಐಕ್ಯತೆಯನ್ನು ಹೊಂದಿತೆಂದು ತಿಳಿ! ಮಹಾರಾಜ! ನೀವು ಸ್ವಾಭಾವಿಕವಾಗಿ ಸರಳರು; ಧರ್ಮರಕ್ಷಕರು; ಅಲ್ಪರ ವಚನವನ್ನು ಸಾಧಿಸಿ ನಿಮ್ಮ ರಾಜ್ಯಕ್ಕೆ ನೀವೇ ಚಿತಿಯನ್ನು ಕಟ್ಟುವಿರಲ್ಲಾ! ರಾಜಾಧಿರಾಜ! ತಾವು ದೇವಾಂಶಸಂಭೂತರು! ರಾಜದ್ರೋಹವನ್ನು ಮಾಡಿದ ಪಾಪಿಗೆ ನರಕದಲ್ಲಿಯೂ ಸ್ಥಳವಿಲ್ಲವೆಂದು ಹೇಳುವರು. ಅದಕ್ಕೋಸ್ಕರವೇ ತಮ್ಮ ಮೇಲೆ ಕೈಎತ್ತಲಿಲ್ಲ! ಆದರೆ………

ಈ ಮಾತನ್ನು ಕೇಳುತ್ತಲೇ ದೇವರಾಜನು ಪ್ರಥುಲೆಯನ್ನು ನೋಡುವುಕ್ಕೆ ಮುಂದೆ ಬಂದನು. ಪ್ರಥುಲೆಯ ಹೃದಯಪಂಜರದಿಂದ ಪ್ರಾಣಪಕ್ಷಿಯು ಹಾರುವಂತಿತ್ತು.

“ಅದಕ್ಕೋಸ್ಕರವೇ ಆ ಅಧಮ ತಿಮ್ಮನನ್ನು ಕೊಂದುಬಿಟ್ಟೆನು. ಹಾಗೆ ಕೊಂದು ನನ್ನ ಪ್ರಾಣವಲ್ಲಭನ ಕಡೆಯ ಆಜ್ಞೆಯನ್ನು ಪರಿಪಾಲಿಸಿದೆನೆಂದು ನಾನು ಸಂತೋಷದಿಂದ ಪ್ರಾಣಬಿಡುವೆನು.”

ರಾಜನು ಸಮೀಪಕ್ಕೆ ಬಂದು ಅವಳ ಬಳಿಯಲ್ಲಿ ಕುಳಿತನು. ಅವನು ಏನು ಕಾರಣ ಬಂದನೆಂದು ಮೂರ್ಛಿತಳಾದ ಪ್ರಥುಲೆಯು ಅರಿಯದೆ ನೆಲದ ಮೇಲೆ ತೆವಳುತ್ತ, ದೂರಕ್ಕೆ ಸಾರಿ

“ರಾಜಾಧಮನೇ! ನಿನಗೆ ಧಿಕ್ಕಾರವಿರಲಿ! ನಿನ್ನ ರಾಜ್ಯಕ್ಕೆ ಧಿಕ್ಕಾರವಿರಲಿ! ನನ್ನನ್ನು ನಿನ್ನ ಮಗಳಂತೆ ನೋಡುವ ಬದಲಾಗಿ ನನ್ನ ಅಂತಿಮಕಾಲದಲ್ಲಿ ಎರಡನ್ನು ಬಗೆದ ನೀನು ನಿನ್ನ ಮಗಳ ಅವಸ್ಥೆಯನ್ನು ಕಣ್ಣಾರೆ ಕಂಡು, ತಕ್ಕ ಪ್ರತಿಫಲ ಹೊಂದುವೆ. ನಿನ್ನ ಮಗಳು ನಿನ್ನ ಶತ್ರುಗಳ ಹಸ್ತಗತಳಾಗಿ ಮುಸಲ್ಮಾನರ ಅಂತಃಪುರದಲ್ಲಿ ಕಳಂಕಿತಳಾಗಿ ಹೋಗಲಿ! ಸ್ತ್ರೀಯರ ಪಾತಿವ್ರತ್ಯಕ್ಕೆ ಆಶ್ರಯವಿಲ್ಲದ ನಿನ್ನ ರಾಜ್ಯವು ಭಾಮಿನಿ ಸುಲ್ತಾನರ ವಶವಾಗಿ, ನಿರ್ನಾಮವಾಗಿ, ಭೂಲೋಕ ಚರಿತ್ರೆಯಲ್ಲಿ ಲುಪ್ತವಾಗಿ ಹೋಗಲಿ! ನೀನು ರಾಜಕೀಟನಾದ… ನೀನು, ಇನ್ನು… ಯುದ್ಧ…”

ಕಡೆಯ ಮಾತಿನೊಡನೆ ಪ್ರಥುಲೆಯು ಪ್ರಾಣವಾಯುವು ಹಾರಿ ಹೋಯಿತು. ಅಭಿನವ ದ್ರೌಪದಿಯ ವೀರಚರಿತೆಯ ಪರಿಸಮಾಪ್ತವಾಯಿತು. ನಾವು ದ್ರೌಪದಿಯೆಂದು ಹೇಳಿದೆವೋ? ದ್ರೌಪದಿಯಲ್ಲಿ ದೋಷವೊಂದಿತ್ತು. ದ್ರೌಪದಿಯ ವೀರತ್ವಕ್ಕೆ ಹೃದಯ ಕಠೋರತೆಯೂ ದೃಢಕೋಪವು ಆಯುಧಗಳಾಗಿದ್ದವು. ಪ್ರಥುಲೆಯ ಹೃದಯವು ಕ್ರೂರವಾಗಿರಲಿಲ್ಲ; ಪ್ರಥುಲೆಯ ಕೋಪವು ಶೀಘ್ರವಾಗಿತ್ತು. ಅದು ಶೀಘ್ರದಲ್ಲಿ ಶಾಂತಿಯನ್ನೈದಿತು. ದ್ರೌಪದಿಯು ತನ್ನನ್ನು ಬಯಸಿದ ದುರ್ಯೋಧನನನ್ನು ತಮ್ಮಂದಿರೊಡನೆ ಸಂಹಾರಗೈಸಿದಳು. ಪ್ರಥುಲೆಯು ಪತಿಯನುಜ್ಞೆಗೆ ಅನುಸಾರವಾಗಿ ತಿಮ್ಮನನ್ನು ಮಾತ್ರ ಸಂಹರಿಸಿದಳು. ಈ ಕೃತ್ಯವನ್ನು ಮಾಡಿದ ಮೇಲೆ ಅವಳಿಗೆ ಜೀವಿಸುವ ಆಸೆಯಿರಲಿಲ್ಲ. ದೇವರಾಜನಿಂದ ಕಲುಷಿತಳಾಗದೆ ಕಲಿಯುಗದ ಅಹಲ್ಯೆಯು ಮಾನವಲೀಲೆಯನ್ನು ತ್ಯಜಿಸಿದಳು.

ಪ್ರಥುಲೆಯ ಅಂತಿಮಕಾಲದ ವಚನಗಳಿಂದ ದೇವರಾಜನು ಬುದ್ದಿ ಕಲಿತನು. ಅಂದಿನಿಂದ ಅವನ ಮಾತು ಮಾತುಗಳಲ್ಲಿಯೂ ಕಂಬನಿಗಳು ಸುರಿಯುತ್ತಿದ್ದುವು. ಅಂದಿನಿಂದ ಪರಸ್ತ್ರೀ ಮುಖಾವಲೋಕನವನ್ನು ಅವನು ಮಾಡಲಿಲ್ಲ. ನರ್ತನಸ್ತ್ರೀಯ ವೇಷದ ಪ್ರಥುಲೆಯೊಡನೆ ಮೃದಂಗವನ್ನು ಬಾರಿಸುವುದಕ್ಕೆ ಬಂದಿದ್ದ ಮುದುಕನನ್ನು ಹುಡುಕಿ ತರುವುದಕ್ಕೆ ಅವನು ಎಷ್ಟೋ ಪ್ರಯತ್ನಗಳನ್ನು ಮಾಡಿದನು ಎಷ್ಟೋ ಹಣವನ್ನು ವೆಚ್ಚಮಾಡಿದನು. ಅವನು ಎಲ್ಲಿಗೆ ಹೋದನೆಂದು ಇದುವರೆಗೆ ತಿಳಿದು ಬರಲಿಲ್ಲ. ಪ್ರಥುಲೆಯು ತನ್ನ ಮರಣಕಾಲದಲ್ಲಿ ಇಟ್ಟಮಾತುಗಳು ಫಲಿಸಿದುವು. ಭಾಮಿನಿ ರಾಜ್ಯದ ಸುಲ್ತಾನನಾದ ಫಿರೋಜಶಹನು ದೇವರಾಜನು ತನ್ನ ರಾಜ್ಯವನ್ನು ಆಕ್ರಮಿಸುವುದಕ್ಕೆ ಬಂದನೆಂಬ ನೆವವನ್ನು ಮಾಡಿಕೊಂಡು ಅಸಂಖ್ಯಾತ ಸೈನ್ಯದೊಡನೆ ಯುದ್ಧಕ್ಕೆ ಹೊರಟನು. ಯುದ್ಧದ ಸಂಧಿ ಪ್ರಕಾರ ದೇವರಾಜನು ತನ್ನ ಮಗಳನ್ನು ಸುಲ್ತಾನನಿಗೆ ಮದಿವೆ ಮಾಡಿಕೊಡುವ ದುರ್ಗತಿಗೆ ಇಳಿದನು. ಈ ಯುದ್ಧಕ್ಕೆ ಕಾರಣೀಭೂತಳಾದವಳನ್ನು ಸುಲ್ತಾನನ ಮಗನಾದ ಹಸನ್‌ ಖಾನನು `ನಿಕ್ಕಾ ಮಾಡಿಕೊಂಡನು’ ಎಂದು ಫೆರಿಷ್ಟನು ಹೇಳುವನು. ಈ ಸ್ತ್ರೀಯು ಯಾರೆಂದು ತಿಳಿದು ಬರಲಿಲ್ಲ. ಇತಿಹಾಸಕಾರನು ‘ಪೆರ್ತಾಲ್, ಪೆರ್ತಾಲ್’ ಎಂದು ಹೇಳುವುದರಿಂದ ಬಹುಶಃ ಪ್ರಥುಲೆಯ ದೇಹವು ಮ್ಲೇಚ್ಛರ ಹಸ್ತಸ್ಪರ್ಶದಿಂದ ಮಲಿನವಾಗಲಿಲ್ಲ. ಆದರೆ ಪ್ರಥುಲೆಯು ಹೇಳಿದಂತೆ ಒಂದು ಕಾಲದಲ್ಲಿ ದಕ್ಷಿಣ ಹಿಂದೂಸ್ಥಾನದಲ್ಲೆಲ್ಲಾ ವಿಸ್ತಾರವಾಗಿದ್ದ ಬಲವತ್ತಾದ ವಿಜಯನಗರ ಸಾಮ್ರಾಜ್ಯವು ನವೀನ ಭೂಪಠದಿಂದ ವಿಲುಪ್ತವಾಗಿ ಹೋಯಿತು.
*****
(ಸುವಾಸಿನಿ ೧೯೦೩)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೫೧
Next post ಕನ್ನಡದ ಕಂದ

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…