ಪ್ರಶ್ನೆಯೋ ಉತ್ತರವೋ?

ಪ್ರಶ್ನೆಯೋ ಉತ್ತರವೋ?

ಉತ್ತರವನ್ನು ತಿಳಿಯುವುದಕ್ಕಿಂತ ಪ್ರಶ್ನೆಯನ್ನು ಕೇಳುವುದು ಮುಖ್ಯ, ಆದರೆ ಕಷ್ಟ. ಕಳೆದ ಸುಮಾರು ಇಪ್ಪತ್ತೆಂಟು ವರ್ಷಗಳಲ್ಲಿ ನಾನು ನೋಡಿದ ನೋಡಿದ ವಿದ್ಯಾರ್‍ಥಿಗಳಲ್ಲಿ ಶೇಕಡಾ ೯೯ ಜನ ಉತ್ತರಗಳಲ್ಲಿ ಮಾತ್ರ ಆಸಕ್ತರು. ಬಹುಶಃ ನಾವು ಬೆಳೆಸಿಕೊಂಡಿರುವ ಶಿಕ್ಷಣ ಕ್ರಮವೇ ಹಾಗಿದೆ. ಒಂದು ಪ್ರಶ್ನೆಗೆ ಒಂದು, ಒಂದೇ ಒಂದು ಸರಿಯಾದ ಉತ್ತರವಿದೆ ಮತ್ತು ಅದನ್ನು ತಿಳಿದುಕೊಳ್ಳುವುದೇ ಜ್ಞಾನವೆಂಬ ನಂಬಿಕೆ ರೂಢಮೂಲವಾಗಿದೆ. ಇದೇ ನಂಬಿಕೆ ಮತ್ತೆ ನಮ್ಮ ಬದುಕಿನ ಉದ್ದಕ್ಕೂ ಗಟ್ಟಿಯಾಗುತ್ತಾ ನಮ್ಮಲ್ಲೆ ನಮಗೆ ಅಪನಂಬಿಕೆ ಅವಿಶ್ವಾಸಗಳನ್ನು ಮೂಡಿಸುತ್ತಾ, ಉತ್ತರ ಬಲ್ಲವರೆಂದು ನಾವು ತಿಳದವರನ್ನು ಆರಾಧಿಸುತ್ತಾ ಅನುಕರಿಸುತ್ತಾ ಹೋಗುವಂತೆ ಮಾಡುತ್ತದೆ.

ನಾವು ಅನೇಕ ಬಾರಿ ಕೇಳುವ ಪ್ರಶ್ನೆಗಳು ಪ್ರಶ್ನೆಗಳೇ ಆಗಿರುವುದಿಲ್ಲ. ಪ್ರಶ್ನಾರ್ಥಕವಾದ ಧ್ವನಿಯಲ್ಲಿ, ಪ್ರಶ್ನಾರ್ಥಕ ರೂಪದ ವಾಕ್ಯದಲ್ಲಿ ಸುಮ್ಮನೆ ಮಾತಾಡುತ್ತೇವೆ ಅಷ್ಟೆ. ಇದರ ಅನುಭವ ನಿಮಗೂ ಆಗಬೇಕಾದರೆ ಯಾವುದಾದರೂ ಸಾಹಿತ್ಯಕ ಸೆಮಿನಾರಿಗೆ ಹೋಗಬೇಕು. ಇತ್ತೀಚೆಗೆ ಕೇಳಿಬರುವ ಎರಡು ಪ್ರಶ್ನೆ(!)ಗಳು ಇವು: ನವ್ಯ ಸಾಹಿತ್ಯ ಈಗ ಅವಸಾನ ಹೊಂದಿದೆಯಲ್ಲವೇ? ಮತ್ತು ನವ್ಯಸಾಹಿತ್ಯ ಈಗ ಪಸ್ತುತವಲ್ಲ, ಅದು ಜೀವಂತವಲ್ಲ ಎಂದು ಹೇಗೆ ಹೇಳುತ್ತೀರಿ? ನಿಜವಾಗಿ ಇವು ಪ್ರಶ್ನೆಗಳೇ ಅಲ್ಲ. ನಿಮ್ಮ ಅಭಿಪ್ರಾಯವೇನು ಎಂದು ಮತ್ತೆ ಕೇಳಿದರೆ ನವ್ಯ ಅವಸಾನಹೊಂದಿದೆ ಎಂದೋ, ಇಂದಿಗೂ ಪ್ರಸ್ತುತವೆಂದೋ ತಾವೇ ವಿವರಿಸುತ್ತಾರೆ. ಹಾಗಾದರೆ ಅವರು ಕೇಳಿದ್ದು ಪ್ರಶ್ನೆಯೋ ಅಥವಾ ತಮ್ಮ ನಂಬಿಕೆ ಮತ್ತು ಧೋರಣೆಗಳನ್ನು ಸುಮ್ಮಸುಮ್ಮನೆ ಪ್ರಶ್ನೆಯ ರೂಪದಲ್ಲಿ ಕೇಳುತ್ತಿರುತ್ತಾರೋ? ‘ನಮಂಥ ಸಂಪ್ರದಾಯಸ್ಥರ ಮನೆಯ ಹುಡುಗಿ ಬೇರೆ ಜಾತಿಯ ಹುಡುಗನನ್ನು ಮದುವೆಯಾಗುವುದು ಸರಿ ಎನ್ನುತ್ತೀರಾ’? ಅನ್ನುವ ಪ್ರಶ್ನೆಗೂ ಹಾಗೆ ಕೇಳುವವರಲ್ಲಿ ‘ಸರಿಯಲ್ಲ’ ಎಂಬ ಉತ್ತರ ಇದ್ದೇ ಇರುತ್ತದೆ ಅಲ್ಲವೇ? ಹೀಗೆಯೇ ದೇವರಿದ್ದಾನೆಯೇ ಎಂದು ಕೇಳುವವರಲ್ಲಿ ಇಲ್ಲ ಎಂಬ ಉತ್ತರವೂ ಇರುತ್ತದೆ. ಅದೇಕೆ ಹೀಗೆ ನಮ್ಮ ನಿಲುವುಗಳನ್ನೂ ನಂಬಿಕೆಗಳನ್ನೂ ಅವು ಇರುವಂತೆಯೇ ವ್ಯಕ್ತಪಡಿಸದೆ ಸುಳ್ಳು ಪ್ರಶ್ನೆಗಳಂತೆ ವ್ಯಕ್ತಪಡಿಸುತ್ತೇವೆ? ಉತ್ತರ ತಿಳಿದಿದ್ದೂ ನಮಗ ಗೊತ್ತಿರುವ ಉತ್ತರವನ್ನೇ ಇತರರಿಂದ ಬಯಸಿ ಕೇಳುವ ಇಂಥ ಪ್ರಶ್ನೆಗಳು ನಿಜವಾದ ಪ್ರಶ್ನೆಗಳೇ ಅಲ್ಲ. ಅಂಥ ಪ್ರಶ್ನೆಗಳಿಗೆ ನಮಗೆ ತಿಳಿದಿರುವುದಕ್ಕಿಂತ ಬೇರೆಯಾದ ಉತ್ತರ ದೊರೆತರೆ ನಾವು ಅದನ್ನು ಕೇಳಿಸಿಕೂಳ್ಳುವುದೂ ಇಲ್ಲ.

ಇನ್ನು ಕೆಲವು ಬಾರಿ ನಮ್ಮಲ್ಲಿ ಉತ್ತರಗಳು ಮಾತ್ರ ಇರುತ್ತವೆ ಪ್ರಶ್ನೆ ಇರುವುದೇ ಇಲ್ಲ. ಧಾರ್‍ಮಿಕ ನಾಯಕರು, ಸಾಂಸ್ಕೃತಿಕ ಮುಖಂಡರು, ರಾಜಕೀಯ ನೇತಾರರು ಇಂಥವರೆಲ್ಲ ಸಾಮಾನ್ಯವಾಗಿ ಪ್ರಶ್ನೆಗಳೇ ಇಲ್ಲದ ಜನರು. ಮೋಕ್ಷವೆಂದರೆ ಏನು? ಸತ್ಯವೆಂದರೆ ಏನು? ಧರ್ಮವೆಂದರೆ ಏನು? ಸಂಸ್ಕೃತಿ ಎಂದರೇನು? ಇಂಥ ಪಶ್ನಿಗಳಿಗೆ ಸಿದ್ಧ ಉತ್ತರಗಳು ಸಹಸ್ರಾರು ನಮಗೆ ದೊರೆಯುತ್ತವೆ. ಅವು ನಾವು ಕಂಡುಕೊಂಡ ಉತ್ತರಗಳಲ್ಲದಿದ್ದರೂ ನಮ್ಮದೇ ಎಂಬಂತೆ ತಲೆಯಮೇಲೆ ಹೊತ್ತು, ಮನಸ್ಸಿನೊಳಗೆ ತುಂಬಿಕೊಂಡು ಓಡಾಡಿಕೊಂಡಿರುತ್ತೇವೆ. ಸಿದ್ಧ ಉತ್ತರವನ್ನು ಪರಿಣಾಮಕಾರಿಯಾಗಿ ಸುಂದರವಾಗಿ ಹೇಳಬಲ್ಲವರು. ಬಲ್ಲವರು ಜ್ಞಾನಿಗಳು ಎನಿಸಿಕೊಳ್ಳುತ್ತಾರೆ. ಅವರಿಗೆ ನಮ್ಮ ಮನಸ್ಸಿನಲ್ಲಿ ನಮ್ಮ ಬದುಕಿನಲ್ಲಿ ಮಹತ್ವ ನೀಡಿ ಅಧಿಕಾರ ನೀಡಿ ಆರಾಧಿಸತೊಡಗುತ್ತೇವೆ. ನಮಗೆ ಉತ್ತರವೂ ಮುಖ್ಯವಲ್ಲದೆ ಸಿದ್ಧ ಉತ್ತರವನ್ನು ಬಲ್ಲವರೆಂಬಂತೆ ಹೇಳಬಲ್ಲ ವ್ಯಕ್ತಿಗಳು ಮುಖ್ಯರಾಗುತ್ತಾರೆ. ಉತ್ತರವನ್ನು ಮಾತ್ರ ಬಲ್ಲ ‘ಜ್ಞಾನಿ’ಗಳನ್ನು ಅರಾಧಿಸುವುದರಿಂದ ನಮಗೆ ಜ್ಞಾನ ದೊರೆತೀತು ಅನ್ನುವುದು ಸರಿಯಲ್ಲ, ಅಲ್ಲವೇ?

ಪ್ರಶ್ನಯನ್ನೇ ಪರಿಶೀಲಿಸುವುದು ಉತ್ತರವನ್ನು ಪಡೆಯುವುದಕ್ಕಿಂತ ಮುಖ್ಯ ಎಂಬ ಮಾತನ್ನು ಇತ್ತೀಚೆಗೆ ಓದಿದೆ. ಹಾಗೆ ಪರಿಶೀಲಿಸಿ ಕಂಡುಕೊಂಡದ್ದು ಇತರರಿಗೆ ದಾಟಿಸಲಾರದ್ದೇ ಆಗಿರುತ್ತದೆ, ಅಲ್ಲವೇ? ಹಾಗಿದ್ದರೆ ನಾವು ಶಿಕ್ಷಣದ ವ್ಯವಸ್ಥೆಯನ್ನು ಮಾಡಿಕೊಂಡಿದ್ದೇವಲ್ಲ ಅದರ ಮುಖಾಂತರ ಸಾಧಿಸುತ್ತಿರುವುದಾದರೂ ಏನು? ಕೌಶಲವನ್ನು ಕಲಿಸಬಹುದು, ಕಲಿಯಬಹುದು. ಪೂರ್‍ಣ ಗಮನವಿಟ್ಟು, ನೋಡಿ ಅನುಕರಿಸುತ್ತ ಕೌಶಲವನ್ನು ನಮ್ಮದು ಮಾಡಿಕೊಳ್ಳಬಹುದು. ಆದರೆ ಜ್ಞಾನವನ್ನು ಕಲಿಸಲು, ಕಲಿಯಲು ಸಾಧ್ಯವೇ? ನಮ್ಮ ಇಡೀ ಶಿಕ್ಷಣ ವ್ಯವಸ್ಥೆ ಪ್ರೀತಿಯನ್ನಲ್ಲ ಭಯ ಮತ್ತು ಅಪನಂಬಿಕೆಗಳನ್ನೇ ಆಧರಿಸಿ ರೂಪು ಪಡೆದಿರುವಂತೆ ಕಾಣುತ್ತದೆ. ವ್ಯವಸ್ಥೆಯೇ ಮುಖ್ಯ ಮನುಷ್ಯರಲ್ಲ ಎಂದು ತಿಳಿದಿರುವಂತೆ ತೋರುತ್ತದೆ. ಶಿಕ್ಷಣದ ಆಡಳಿತ ನಡೆಸುವವರಿಗೆ ಶಿಕ್ಷಕರ ಮೇಲೆ, ಶಿಕ್ಷಕರಿಗೆ ವಿದ್ಯಾರ್ಥಿಗಳ ಮೇಲೆ, ವಿದ್ಯಾರ್ಥಿಗಳಿಗೆ ಶಿಕ್ಷಕರ ಮೇಲೆ, ಪೋಷಕರಿಗೆ ತಮ್ಮ ಮಕ್ಗಳು, ಅವರಿಗೆ ಕಲಿಸುವ ಶಿಕ್ಷಕರು ಮತ್ತು ಶಾಲೆಯ ಮೇಲೆ ಅನುಮಾನವೋ ಅನುಮಾನ. ಸಿದ್ಧ ಉತ್ತರಗಳನ್ನು ಕ್ರಮತಪ್ಪದಂತೆ ನೆನಪಿಟ್ಟುಕೊಂಡು ಒಪ್ಪಿಸುವುದೇ ಸಾರ್ಥಕ್ಯ ಎಂಬ ಕುರುಡು ವಿಶ್ವಾಸ. ಇದು ಸ್ಪಷ್ಟವಾಗಬೇಕಾದರೆ ಪಠ್ಯಕ್ರಮದ ಬದಲಾವಣೆಯಾದಾಗ ಬಹುಪಾಲು ಶಿಕ್ಷಕರು ಎತ್ತುವ ಆಕ್ಷೇಪಗಳನ್ನು ಗಮನಿಸಬೇಕು. ತಮಗೆ ತಿಳಿದಿರುವ ಉತ್ತರಗಳಿಗಿಂತ ಭಿನ್ನವಾದ ಉತ್ತರಗಳನ್ನು ಅಪೇಕ್ಷಿಸುವ ಯಾವುದೇ ಪಾಠ ಶಿಕ್ಷಕರಿಗೆ ಪಥ್ಯವಾಗುವುದಿಲ್ಲ. ಪ್ರಶ್ನೆಯನ್ನು ಕೇಳುವ ಅಧಿಕಾರ ಶಿಕ್ಷಕರದು ಪರೀಕ್ಷಕರದು ಮಾತ್ರವೇ ಹೊರತು ವಿದ್ಯಾರ್ಥಿಗಳದ್ದಲ್ಲ. ವಿದ್ಯಾರ್ಥಿಗಳ ಜವಾಬ್ದಾರಿ ಏನಿದ್ದರೂ ಶಿಕ್ಷಕರಿಗೆ, ಪರೀಕ್ಷಕರಿಗೆ ತಿಳಿದಿರುವ ಉತ್ತರವನ್ನು ಅವರು ಒಪ್ಪುವಂತೆ ನೀಡುವುದು ಅಷ್ಟೇ. ಪ್ರಶ್ನೆಗಳನ್ನು ಇಲ್ಲವಾಗಿಸಿಕೊಂಡು ತನಗೆ ದತ್ತವಾದ ಉತ್ತರಗಳನ್ನು ಯಶಸ್ವಿಯಾಗಿ ಪುನರುಕ್ತಗೊಳಿಸುವ ವಿದ್ಯಾರ್ಥಿಗಳು ಅತ್ಯಂತ ಯಶಸ್ವಿಯಾಗುತ್ತಾರೆ. ನಮ್ಮ ಶಿಕ್ಷಣ ಕ್ರಮ ಪ್ರಶ್ನೆಗಳ ನಿರಾಕರಣೆಯನ್ನೇ ತನ್ನ ಬುನೌದಿಯಾಗಿ ಹೊಂದಿದೆ.

ಆದರೆ ಮನುಷ್ಯರ ಮನಸ್ಸು ಪ್ರಶ್ನೆಗಳನ್ನಿಟ್ಲುಕೊಳ್ಳದೆ, ಪ್ರಶ್ನೆಗಳನ್ನು ಸ್ವತಃ ಪರಿಶೀಲಿಸದೆ ಬೆಳೆಯುವುದಾದರೂ ಹೇಗೆ? ಪ್ರಶ್ನೆಯ ಪರಶೀಲನೆಯೆಂದರೆ ಒಪ್ಪಿತವಾದ ದತ್ತವಾದ ಉತ್ತರವನ್ನು ಒಪ್ಪಿಕೊಳ್ಳದೆ ಪರಿಶೀಲಿಸುವುದು. ಆದರೆ ಇದು ಇರುವ ವ್ಯವಸ್ಥೆಯ ನಿರಾಕರಣೆಯ ಕ್ರಿಯೆಯಾಗಬಹುದು. ಆದ್ದರಿಂದಲೇ ಶಿಕ್ಷಣ ವಿದ್ಯಾರ್ಥಿಗಳಲ್ಲಿರುವ ಪ್ರಶ್ನೆಯ ಕುತೂಹಲವನ್ನಲ್ಲ ಈಗಾಗಲೇ ಅರಿತ ಉತ್ತರವನ್ನು ಸಮರ್‍ಪಕವಾಗಿ ನೀಡುವ ಯಾಂಕ್ರಿಕತೆಯನ್ನಷ್ಟೇ ಬೆಳೆಸುತ್ತದೆ. ಆದ್ದರಿಂದಲೇ ಬಹುಶಃ ಎಲ್ಲ ಕಾಲದ ಶಿಕ್ಷಣ ವ್ಯವಸ್ಥೆಯೂ ಸಂವೇದನಾಶೀಲ ಮನಸ್ಸುಗಳಿಗೆ ತಳಮಳವನ್ನೇ ಹುಟ್ಟಿಸುತ್ತ ಬಂದಿದೆ.

ನನ್ನಲ್ಲಿರುವ ಪ್ರಶ್ನೆಗೆ ನಾನೇ ಉತ್ತರವನ್ನು ಕಂಡುಕೊಳ್ಳಬೇಕು. ಅದಕ್ಕೆ ಇತರರು ನೀಡಿರುವ ಉತ್ತರಗಳನ್ನು ಕೇಳಿಸಿಕೊಳ್ಳುವ ಆದರೆ ಕೇಳದಿರುವ ಸ್ವಾತಂತ್ರ್ಯ ಇರಬೇಕು. ಹೇಳಿದ್ದನ್ನು ಮರುಮಾತಾಡದೆ ಕೇಳುವ ಪಾಲಿಸುವ ಕ್ರಿಯೆಯೇ ಶಿಸ್ತು ಅಂದುಕೊಂಡಿದ್ದೇವಲ್ಲ ಅಂಥ, ನಮಗ ಈಗ ಪರಿಚಿತವಾಗಿರುವ, ‘ಶಿಸ್ತು’ ಇರಕೂಡದು. ಪ್ರಶ್ನೆಗೆ ಉತ್ತರ ದೊರೆತೇ ದೊರೆಯಬೇಕೆಂಬ ಹಟವೂ ಇರಕೂಡದು. ಹಾಗೆ ಉತ್ತರ ದೊರೆಯದಿರುವಾಗ ಆಗುವ ತಳಮಳವನ್ನು ತಡೆದುಕೊಳ್ಳುವ ಗಟ್ಟಿತನ ಮನಸ್ಸಿಗೆ ಇರಬೇಕು. ಇಂಥದ್ದನ್ನೆಲ್ಲ ನಮ್ಮ ಶಿಕ್ಷಣ ಕ್ರಮ ಒದಗಿಸುತ್ತಿದೆಯೇ?

ಮತ್ತೆ ನನ್ನ ಅರಿವಿಗೆ ಬಂದಿರುವ ವಿದ್ಯಾರ್‍ಥಿಗಳ ಮನೋಧರ್ಮವನ್ನು ಪ್ರಸ್ತಾಪಿಸಬೇಕು. ‘ಸಾರ್ ಇದು ಕಷ್ಟ’, ‘ಸಾರ್ ಅದು ಸುಲಭವೇ’ ಎಂಬಂಥ ಮಾತುಗಳು ಅನೇಕಬಾರಿ ಎದುರಾಗುತ್ತವೆ. ಇದು ವಿದ್ಯಾರ್‍ಥಿಗಳಲ್ಲಿ ಮಾತ್ರವಲ್ಲ ನಮ್ಮೆಲ್ಲರಲ್ಲೂ ತಲೆ ಎತ್ತುವ ಮನೋಧರ್ಮ. ನಮಲ್ಲಿ ಇರುವುದು, ನಮಗೆ ಬೇಕಾಗಿರುವುದು ಪ್ರಶ್ನೆಯಲ್ಲ, ಪ್ರಶ್ನೆಯ ಮನೋಧರ್ಮವೂ ಅಲ್ಲ. ಬದಲಾಗಿ ನಮ್ಮಲ್ಲಿರುವುದು ಸುಲಭವಾದ ಉತ್ತರದ ಅಪೇಕ್ಷೆ. ಸುಲಭವಾಗಿ ಇಂಗ್ಲಿಶ್ ಬರಬೇಕು, ಸುಲಭವಾಗಿ ಪರೀಕ್ಷೆ ಪಾಸಾಗಬೇಕು, ಸುಲಭವಾಗಿ ಕೀರ್ತಿವಂತನಾಗಬೇಕು, ಸುಲಭವಾಗಿ ದುಡ್ಡು ಮಾಡಬೇಕು ಇತ್ಯಾದಿ. ಸುಲಭ ಉತ್ತರ ಯಾರು ದೊರೆಕಿಸಿಕೊಟ್ಟರೂ ಅವರು ‘ದೊಡ್ಡವರು’ ಆಗಿಬಿಡುತ್ತಾರೆ, ನಮ್ಮ ಕಣ್ಣಿನಲ್ಲಿ. ಮೂವತ್ತು ದಿನಗಳಲ್ಲಿ ಕಲಿಯಿರಿ, ಧ್ಯಾನದ ಸುಲಭಮಾರ್ಗ, ಬೊಜ್ಜುಕರಗಿಸುವ ಸುಲಭ ವಿಧಾನ, ಸುಲಭ ಅಡುಗೆ ಇಂಥ ಜಾಹಿರಾತುಗಳು ನಮ್ಮನ್ನು ಮರುಳುಮಾಡುತ್ತಿದ್ದವೇನು? ಸುಲಭವಾದ ಉತ್ತರದ ಅಪೇಕ್ಷೆ ನಮ್ಮ ಜ್ಞಾನವನ್ನು ಬೆಳೆಸಲಾರದು. ಉತ್ತರಗಳ ಬಗ್ಗೆ ಅತೃಪ್ತಿ, ಪ್ರಶ್ನೆಗಳ ಪರಿಶೀಲನೆ ಜ್ಞಾನಕ್ಕೂ ಬದಲಾವಣೆಗೂ ಇರುವ ದಾರಿ, ಕಷ್ಟದ ದಾರಿ ಅನಿಸುತ್ತದೆ. ಸದಾ ‘ಸುಲಭ’ವನ್ನೇ ಅಪೇಕ್ಷಿಸುವ ಮನಸ್ಸು ಮತ್ತು ಸಮಾಜ ಬದಲಾಗದು ಜ್ಞಾನವನ್ನೂ ಪಡೆಯದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನುಷ್ಯನ ಬದುಕಿನಲ್ಲಿ
Next post ಸೆಪ್ಟಂಬರ್ ೧೯೮೧

ಸಣ್ಣ ಕತೆ

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

cheap jordans|wholesale air max|wholesale jordans|wholesale jewelry|wholesale jerseys