ಪ್ರಶ್ನೆ : ಸ್ವಾತಂತ್ರ್ಯ ಎಂದರೇನು?
ಉತ್ತರ : ಸಾಮಾನ್ಯ ಅರ್ಥದಲ್ಲಿ ಪರಾಧೀನತೆ ಇಲ್ಲದಿರುವದಕ್ಕೆ ಸ್ವಾತಂತ್ರ್ಯ ಎನ್ನುತ್ತೇವೆ. ಭಾರತ ೧೯೪೭ ಆಗಸ್ಟ್ ೧೫ ರಂದು ಸ್ವತಂತ್ರವಾಯಿತು ಎನ್ನುವುದು ಒಂದು ಚಾರಿತ್ರಿಕ ಘಟನೆ; ಅದನ್ನು ನಾವು ಸ್ವಾತಂತ್ರ್ಯ ಎನ್ನುತ್ತೇವೆ. ಹೀಗೆ ಹೇಳುವಷ್ಟು ಸರಳವೇ ಸ್ವಾತಂತ್ರ್ಯ ಎನ್ನುವುದು ?

ನನಗೆ ಅನ್ನಿಸುವಂತೆ ಸ್ವಾತಂತ್ರ್ಯವನ್ನು ಇನ್ನಿತರೆ ವಿಷಯಗಳಂತೆ ಸುಲಭೀಕರಿಸಲು ಸಾಧ್ಯವಿಲ್ಲ; ಸತ್ಯವನ್ನು ಸರಳೀಕರಿಸುವುದು ಹೇಗೆ ಸಾಧುವಲ್ಲವೋ ಹಾಗೆ ಸ್ವಾತಂತ್ರ್ಯವನ್ನು ಕೂಡ. ಮನುಷ್ಯ ಚೈತನತ್ವದ ವಿಕಾಸ ಹಾಗೂ ಪರಿಪೂರ್ಣತೆಗೆ ಒದಗುವ ಅನಿರ್ಬಂಧಿತ ಸ್ಥಿತಿಯನ್ನು ಸ್ವಾತಂತ್ರ್ಯ ಎಂದು ಸರಳೀಕರಿಸಬಹುದಾದರೂ ಸ್ವಾತಂತ್ರ್ಯ ಎಂದರೇನು ಎನ್ನುವುದರ ಪೂರ್ಣ ಅರ್ಥ ಹೇಳಲು ಸಾಧ್ಯವಾಗಿಲ್ಲ. ಏಕೆಂದರೆ ಸ್ವಾತಂತ್ರ್ಯವೂ ಸತ್ಯದಂತೆ ನಿರಂತರ ಅನ್ವೇಷಣೆಗೆ ಒಳಗಾದದ್ದು.

ಪ್ರಶ್ನೆ : ನಮ್ಮ ದೇಶದ ರೈತ ಎಷ್ಟರ ಮಟ್ಟಿಗೆ ಸ್ವತಂತ್ರ?
ಉತ್ತರ : ನಮ್ಮ ದೇಶದ ರೈತ ಎಲ್ಲರ ಶೋಷಣೆಗೆ ಒಳಗಾಗುವುದರ ಜೊತೆಗೆ ತನ್ನಿಂದ ತಾನೇ ಶೋಷಣೆಗೊಳಗಾಗುವಷ್ಟು ಹಾಗೂ ಸರ್ವರ ಸ್ವಾರ್ಥಕ್ಕೆ ಬಲಿಯಾಗುವಷ್ಟರ ಮಟ್ಟಿಗೆ ಸ್ವತಂತ್ರ.

ಪ್ರಶ್ನೆ : ಇಂಗ್ಲಿಷ್ ಭಾಷೆ ನಮ್ಮನ್ನು ಸಂಪೂರ್ಣ ಸ್ವತಂತ್ರರನ್ನಾಗಿ ಮಾಡದೆ ಇದೆಯೇ?
ಉತ್ತರ : ನಾವು ಬ್ರಿಟಿಷರಿಂದ ಬಿಡುಗಡೆ ಹೊಂದಿದರೂ ಅವರ ಭಾಷೆಯಿಂದ ಬಿಡುಗಡೆ ಹೊಂದಲಿಲ್ಲ ಎನ್ನುವುದು ಸ್ಪಷ್ಟ. ನಮಗೆ ಸಹಕಾರಿಯಾಗಿ ಬಂದ ಅವರ ಭಾಷೆ ಸರ್ವಾಧಿಕಾರಿಯಾಗಿ ಉಳಿದದ್ದು ಭಾರತದ ದುರಂತ, ನಮ್ಮ ಮೌಢ್ಯದ ಸಂಕೇತ. ನಮ್ಮ ರಾಷ್ಟ್ರದ ಇಂದಿನ ಆಡಳಿತದ ರೀತಿಯಲ್ಲಿ ನಾವು ಬ್ರಿಟಿಷರ ಭಾಷೆಗೆ ಗುಲಾಮರಾಗಿಲ್ಲ ಎಂದು ಹೇಳುವಷ್ಟು ಎದೆಗಾರಿಕೆ ನಮ್ಮದಾಗಿಲ್ಲ.

ಪ್ರಶ್ನೆ : ದೇಶದ ಎಲ್ಲ ಕ್ಷೇತ್ರಗಳಲ್ಲೂ ಉಂಟಾಗಿರುವ ನೈತಿಕ ಅಧಃಪತನಕ್ಕೆ ಇಂದಿನ ಕ್ಷೀಣಾವಸ್ಥಾ ಸಂಸ್ಕೃತಿಯೇ ಕಾರಣ. ಆದುದರಿಂದ ಸಂಸ್ಕೃತಿಯ ಪುನರುತ್ಥಾನ ಅಗತ್ಯ ಎಂದು ಹೇಳುವುದು ಸಮಂಜಸವೆ?
ಉತ್ತರ: ಸಂಸ್ಕೃತಿ ಎಂದ ತಕ್ಷಣ ಭಾರತೀಯ ಸಂಸ್ಕೃತಿ ಎಂದು ಬಿಡುವ, ಭಾರತೀಯ ಸಂಸ್ಕೃತಿ ಎಂದರೆ ಆರ್ಯ ಸಂಸ್ಕೃತಿ ಎನ್ನುವ ಅಪಾಯದ ಹಂತದಲ್ಲಿರುವ ನಮ್ಮ ಸಮಾಜದಲ್ಲಿದ್ದೇವೆ. ಇದನ್ನು ನಾವು ಸಂಸೃತಿ ಎಂದು ಅದರ ಪೂರ್ಣ ಅರ್ಥದಲ್ಲಿ ಕರೆದರೆ ಚೋದ್ಯವಾಗಿ ಬಿಡುತ್ತದೆ.

ದೇಶದ ಸಂಪನ್ಮೂಲ, ಆರ್ಥಿಕ ಅನುಕೂಲ, ಒಂದು ಜನಾಂಗವಾಗಿ ಬೆಸೆದುಕೊಂಡ ಅಂತರಿಕ ಶಕ್ತಿಯ ಸಂಘಟನೆ, ನೈತಿಕ ಪರಂಪರೆ, ಕಲೆ ಮತ್ತು ಜ್ಞಾನದ ತೀವ್ರ ಆಕಾಂಕ್ಷೆಯುಳ್ಳ ಒಂದು ನಾಗರಿಕ ಸಮಾಜದ ನಡವಳಿಕೆಯಿಂದ ಸಾಂಸ್ಕೃತಿಕ ಕ್ರಿಯಾತ್ಮಕತೆ ಮೂಡುತ್ತದೆ. ಇದಕ್ಕೆ ಪೂರಕವಾಗಿ, ಅಷ್ಟೇ ಪ್ರಮುಖವಾಗಿ ಭೌಗೋಳಿಕ ಸನ್ನಿವೇಶ ಹೆಚ್ಚಿನ ಪ್ರಭಾವವನ್ನು ಬೀರುತ್ತದೆ.

ಒಂದು ದೇಶದ ನೈತಿಕ ಅಧಃಪತನವಾಗಿದೆ ಎಂದರೆ ಅದಕ್ಕೆ ಕಾರಣವಾದದ್ದು ಕ್ಷೀಣಾವಸ್ಥಾ ಸಂಸ್ಕೃತಿಯಲ್ಲ, ಬದಲಾಗಿ ಆರ್ಥಿಕ ಮತ್ತು ರಾಜಕೀಯ ದುರ್ಬಲತೆ, ಜ್ಞಾನ ಹಾಗೂ ಕಲೆಗಳ ಉಪೇಕ್ಷೆ. ಒಂದು ನಾಗರಿಕ ಸಮಾಜದಿಂದ ತಂತಾನೆ ಸೃಷ್ಟಿಯಾಗುವ ಕ್ರಿಯಾತ್ಮಕ ಬದುಕಿಗೆ ಸಂಸ್ಕೃತಿಯ ರೂಪ ಬರುತ್ತದೆಯೆ ಹೊರತು, ಇದು ಸಂಸೃತಿ ಅದನ್ನು ಹೀಗೆ ಅಳವಡಿಸಿದರೆ ಹೀಗೇ ಆಗುತ್ತದೆ ಎಂದು ನಿಗದಿ ಪಡಿಸುವಂತಹುದಲ್ಲ. ಆದ್ದರಿಂದ ಪುನರುತ್ಥಾನದ ಅಗತ್ಯವಿರುವುದು ಯಾವುದು ಎಂದು ಅರಿತು ಅಡಿಯಿಡುವುದು ಹೆಚ್ಚು ಸಮಂಜಸ.

ಪ್ರಶ್ನೆ : ಅನ್ನ ಮತ್ತು ಸ್ವಾತಂತ್ರ್ಯ ಎರಡೂ ಪರಸ್ಪರ ವಿರುದ್ಧ ವಿಷಯಗಳು ಎಂಬ ರೀತಿಯಲ್ಲಿ ಪ್ರಚಾರ ಸಾಗಿದೆ. ನೀವೇನೆನ್ನುತ್ತೀರಾ?
ಉತ್ತರ: ಅನ್ನ ಮನುಷ್ಯನ ಅಗತ್ಯ ಹೇಗೋ ಹಾಗೆ ಸ್ವಾತಂತ್ರ್ಯ ಕೂಡ. ಅನ್ನ ಮತ್ತು ಸ್ವಾತಂತ್ರ್ಯ ಒಂದಕ್ಕೊಂದು ಪೂರಕ. ಆನ್ನವಿರದ ಸ್ವಾತಂತ್ರ್ಯಕ್ಕೂ ಸ್ವಾತಂತ್ರ್ಯವಿರದ ಅನ್ನಕ್ಕೂ ಹೆಚ್ಚಿನ ಅಂತರವಿದೆ ಅನಿಸಿದರೂ ಒಂದು ಮತ್ತೊಂದಕ್ಕೆ ಪೂರಕವಾಗಿ ಒಂದರೊಳಗೊಂದು ಬೆಸೆದುಕೊಂಡಿವೆ.

ಕ್ರಿಯಾತ್ಮಕ ಬದುಕಿನ ಚಲನೆಗೆ ಎರಡೂ ಮುಖ್ಯ ಎಂಬ ಅಂಶ ಗಮನಾರ್ಹವಾದದ್ದು. ಸ್ವಾತಂತ್ರ್ಯದ ಅಂತರಂಗದ ಅರಿವು ಆಗದಿರುವುದರಿಂದ, ಅಲ್ಲದೆ ಅದು ನಿರಂತರ ಅನ್ವೇಷಣೆಗೆ ಒಳಗಾಗಿರುವುದರಿಂದ ಬೇಜವಾಬ್ದಾರಿ ಬದುಕಿಗೆ ಬರಿಯ ಅನ್ನದ ಅಗತ್ಯಕಂಡರೆ ಆಶ್ಚರ್ಯವೇನಲ್ಲ. ಬದುಕು ಮುಖ್ಯ, ನಿಜ. ಬದುಕು ಹೇಗೆ ಮುಖ್ಯವೋ ಹಾಗೆ ಎಂಥ ಬದುಕು ಎನ್ನುವುದು ಅತಿ ಮುಖ್ಯವಾಗುತ್ತದೆ. ಎಂಥ ಬದುಕು ಎನ್ನುವ ಪ್ರಶ್ನೆ ಎದುರಾದಾಗಲೇ ಅನ್ನ ಮತ್ತು ಸ್ವಾತಂತ್ರ್ಯದ ಹಾಗೂ ಸ್ವಾತಂತ್ರ್ಯ ಮತ್ತು ಅನ್ನದ ಅರಿವಾಗುವುದು.
*****
ಆಗಸ್ಟ್ ೧೯೭೮