ಕಾಶ್ಮೀರದ ಬಗ್ಗೆ ಇತ್ತೀಚೆಗೆ ಒಂದಲ್ಲ ಒಂದು ಸುದ್ದಿ ಇರುತ್ತದೆ. ಕೈಗೆ ಕೋವಿ ತೆಗೆದುಕೊಂಡ ಮುಸ್ಲಿಂ ಉಗ್ರಗಾಮಿಗಳು ಒಂದುಕಡೆ ಕಾಶ್ಮೀರವನ್ನು ಕೇಂದ್ರವಾಗಿಟ್ಟುಕೊಂಡು ಬೇಳೆ ಬೇಯಿಸಿ ಕೊಳ್ಳುತ್ತಿದ್ದರೆ, ಇನ್ನೊಂದು ಕಡೆ ಹಿಂದೂ ಮೂಲಭೂತವಾದಿಗಳು ಕಾಶ್ಮೀರ ಸಮಸ್ಯೆಯನ್ನು ಬಂಡವಾಳ ಮಾಡಿಕೊಳ್ಳುತ್ತಲೇ ಬಂದಿದ್ದಾರೆ. ಉಭಯ ಧರ್ಮೀಯ ಮೂಲಭೂತವಾದಿಗಳು ಮತ್ತು ರಾಜಕೀಯ ತಂತ್ರಿಗಳು ಕಾಶ್ಮೀರವನ್ನು ಸ್ವಾರ್ಥ ಸಾಧನೆಗಾಗಿ ಬಳಸಿಕೊಳ್ಳುತ್ತಾ ಬಂದ ಫಲವಾಗಿ ಸಮಸ್ಯೆಗಳ ಮೂಲ ಶೋಧ ಸೊನ್ನೆಯಾಗಿದೆ; ಕಾಶ್ಮೀರದ ಒಡಲಲ್ಲಿ ಉರಿಯುವ ಕೆಂಡದಲ್ಲಿ ಸಿಗರೇಟು ಹಚ್ಚಿಕೊಳ್ಳುವ ಸಮಯಸಾಧಕತನ ಹೆಚ್ಚಾಗಿದೆ.

ಕಾಶ್ಮೀರದ ಸುಂದರ ತಾಣಗಳನ್ನು ನಮ್ಮ ಸರ್ಕಾರ ಪ್ರವಾಸೋದ್ಯಮ ಇಲಾಖೆ ಅದೆಷ್ಟು ಸುಂದರವಾಗಿ ವರ್ಣಿಸುತ್ತ ಪ್ರವಾಸಿಗರನ್ನು ಆಕರ್ಷಿಸುತ್ತ ಬರುತ್ತಿದೆಯೆಂಬ ವಿಷಯ ಗೊತ್ತಾಗಬೇಕಾದರೆ ಕಾಶ್ಮೀರ ಒಳ ಹೊಕ್ಕು ನೋಡಬೇಕು. ಹೊರಗಿನ ಒಯ್ಯಾರ ಒಂದು ಕಡೆಯಾದರೆ ಒಳಗಿನ ವೇದನೆ ಇನ್ನೊಂದು ಕಡೆ. ಇದು ಎಲ್ಲಾ ಪ್ರವಾಸಿ ಕೇಂದ್ರಗಳ ಗೋಡೆ ಬರಹವೆಂದೇ ಹೇಳಬೇಕು. ಕೆಲವು ವರ್ಷಗಳ ಹಿಂದೆ ನಾನು ಕುಟುಂಬ ಸಮೇತ ಕಾಶ್ಮೀರಕ್ಕೆ ಹೋದಾಗ ಉಗ್ರಗಾಮಿಗಳ ಉಪಟಳ ದೊಡ್ಡ ಪ್ರಮಾಣದಲ್ಲಿ ಇರಲಿಲ್ಲ; ಪ್ರವಾಸಿಗರ ಸಂಖ್ಯೆ ಇಷ್ಟೊಂದು ತಗ್ಗಿರಲಿಲ್ಲ. ಕಾಶ್ಮೀರಕ್ಕೆ ಬರುವಾಗ ಕನಸಿನ ಕಣ್ಣು ತುಂಬಿಕೊಂಡಂತೆ ಬಂದವರಿಗೆ ಭಯದ ಛಾಯೆ ಆವರಿಸುವಂಥ ಅಪರೂಪದ ಘಟನೆಗಳು ಸಂಭವಿಸುತ್ತಿದ್ದವಾದರೂ, ಪ್ರಾಣ ಕೈಯಲ್ಲಿಟ್ಟುಕೊಂಡು ಓಡಾಡಬೇಕೆಂಬಷ್ಟು ಭಯೋತ್ಪಾದಕತೆ ಇರಲಿಲ್ಲ. ನಾನು ಜಮ್ಮುವಿನಿಂದ ಶ್ರೀನಗರ ತಲುಪಿದ ದಿನವೇ ಆಕಾಶವಾಣಿ ಕೇಂದ್ರವನ್ನು ಸ್ಫೋಟಿಸುವ ಪ್ರಯತ್ನ ನಡೆದಿತ್ತು. ಮಾರನೇ ದಿನ ಪತ್ರಿಕೆಗಳಲ್ಲಿ ಓದಿ ಕ್ಷಣಕಾಲ ಎದೆ ನಡುಗಿತು. ಆಮೇಲೆ ಎಲ್ಲವೂ ಸಲೀಸು.

ಕಾಶ್ಮೀರವೆಂದರೆ ಕನಸಿನಲೋಕವೆಂದೋ, ಭಾರತದ ಶಿಖರ ಸ್ವರ್ಗವೆಂದೊ ನಾನು ಭ್ರಮಿಸಿರಲಿಲ್ಲ. ಆದ್ದರಿಂದಲೇ ಪ್ರವಾಸಿಕೇಂದ್ರವೊಂದರ ಸುಂದರ ತಾಣಗಳನ್ನು ಮನಃಪೂರ್ವಕವಾಗಿ ಮೆಚ್ಚುತ್ತ ಮನಸ್ಸಿಗೆ ತುಂಬಿಕೊಳ್ಳುತ್ತ ಒಳಪದರಗಳನ್ನು ಪ್ರವೇಶಿಸುವ ತವಕದಿಂದ ತುಡಿಯುತ್ತಿದ್ದೆ. ಈ ನನ್ನ ತುಡಿತದಿಂದ, ಎದೆಯೊಳಗೆ ತೆರೆದುಕೊಂಡ ಕಣ್ಣು, ಕಣ್ಣೊಳಗೆ ಕಾಡಿಸುವ ಎದೆ, ಸಂಭ್ರಮವು ಭ್ರಮೆಯಾಗದಂತೆ ನೋಡಿಕೊಳ್ಳುವ ನಿರಾಕಾರ ಮನಸ್ಸು, ಮನಸ್ಸಿನ ಮೇಲುಗೈಯಲ್ಲಿ ವಿವೇಕ ಮಣ್ಣು ಮುಕ್ಕದಂತೆ ನೋಡಿಕೊಳ್ಳುವ ಮೆದುಳು-ಎಲ್ಲವನ್ನು ಒಟ್ಟಿಗೇ ಇಟ್ಟುಕೊಳ್ಳುವ ಮನೋಧರ್ಮವನ್ನು ರೂಢಿಸಿಕೊಳ್ಳುವ ಒಳ ಹೋರಾಟ ಒಂದು ಕಾಡಿಸುತ್ತಿತ್ತು. ಆದ್ದರಿಂದ ನಾವೆಲ್ಲ ಜಮ್ಮುವಿನಲ್ಲಿ ಬಸ್ಸು ಹತ್ತಿ ಪರ್ವತ ಶ್ರೇಣಿಗಳನ್ನು ಕಡಿದು, ಕೊರೆದು, ನಿರ್ಮಿಸಿದ ರಸ್ತೆಯಲ್ಲಿ ಹತ್ತಿ ಇಳಿದು, ಪ್ರಯಾಣಿಸುವಾಗ ಸುತ್ತಲ ಸೌಂದರ್ಯ ಮತ್ತು ಕಣಿವೆಯ ಅಗಾಧತೆಯಷ್ಟೇ ನನ್ನಲ್ಲಿ ತುಂಬಿಕೊಳ್ಳಲಿಲ್ಲ. ಸುಮಾರು ಮುನ್ನೂರು ಐವತ್ತು ಕಿಲೋಮೀಟರಿಗೂ ಹೆಚ್ಚು ಉದ್ದದ ರಸ್ತೆಯನ್ನು ನಿರ್ಮಿಸಿದ ಅಸಂಖ್ಯಾತ ಜನರ ಜೀವನ ಚಿತ್ರ ಕಣ್ಣೊಳಗೆ ಕಾಡುತ್ತಿತ್ತು. ಸಂತೋಷದಲ್ಲಿ ತುಂಬಿರುವ ಕಣ್ಣಲ್ಲಿ ಸಾವಿರ ಮೈಲಿಗಳ ಬೆವರು ಕೊರೆಯುತ್ತಿರುವಂತೆ ಭಾಸವಾಗುತ್ತಿತ್ತು. ಆದರೆ ಅಂಥ ಅಂತರಂಗದ ಅನುಭವದಲ್ಲಿ ಹೊರಗೆ ಕಾಣುವ ರುದ್ರ ಮನೋಹರತೆ ಕುರುಡಾಗಿ ಮನಸ್ಥಿತಿಯೂ ಇತ್ತು. ಇಂಥ ಮನಸ್ಥಿತಿಯಲ್ಲಿ ಶ್ರೀನಗರದ ಸೇಬಿನ ತೋಟಗಳನ್ನು ಪ್ರವೇಶಿಸಿದೆ. ನನ್ನ ಪತ್ನಿಗೆ ಚೆನ್ನಾಗಿ ಹಿಂದಿ ಬರುತ್ತಿದ್ದುದರಿಂದ ನನ್ನೆಲ್ಲಾ ಕುತೂಹಲದ ದುಭಾಷಿಯಾಗಿ ಕೆಲಸ ಮಾಡಿದ ಆಕೆಯೊಂದಿಗೆ, ನಾನು ಸೇಬುಗಳ ಸಂದಣಿಯನ್ನು ನೋಡಿ ಸಂತೋಷಿಸಿ ಮರುಕ್ಷಣದಲ್ಲೇ ‘ಸೇಬಿನ ದೊರೆಗಳ’ ಸೇವೆ ಸಲ್ಲಿಸುವ ಕೆಲಸಗಾರರ ಬಳಿ ಹೋದೆ. ನನ್ನ ಪತ್ನಿ ಅವರ ಸಂಬಳ ಸಾರಿಗೆ ಮತ್ತು ಕುಟುಂಬದ ಸ್ಥಿತಿಗತಿ ವಿಚಾರಿಸಿ ತಿಳಿಸಿದಾಗ ಸಂಭ್ರಮಕ್ಕೆ ಸುರಂಗ ಕೊರೆದಂತಾಯಿತು. ಬೆಂಗಳೂರಿಗೆ ದೂರ ಗಡಿ ಪ್ರದೇಶಗಳಿಂದ ಕೂಲಿಗೆ ಬಂದಂತೆ ಅವರು ಅಲ್ಲಿಗೆ ಬಂದಿದ್ದರು. ತುಂಬಿತುಳುಕುವ ಸೇಬಿನ ತೋಟದಲ್ಲಿ ಮುಖ ಹೊತ್ತು ದುಡಿಯುತ್ತಿದ್ದರು. ಕಾಶ್ಮೀರ ಭಾರತದ ಅವಿಭಾಜ್ಯ ಭಾಗ ಅನ್ನುವುದಕ್ಕೆ ಇದಕ್ಕಿಂತ ಬೇರೆ ಪುರಾವೆ ಬೇಕಾದರೂ ಯಾಕೆ?

ಶ್ರೀನಗರದ ‘ಡಾಲ್‌ಲೇಕ್’ ತುಂಬಾ ಸುಂದರವಾದದ್ದು. ಒಂದು ಬದಿಯಲ್ಲಿ ಪ್ರವಾಸಿಗರು ತಂಗುವುದಕ್ಕೆ ನಿರ್ಮಿಸಿರುವ ‘ಹೌಸ್ ಬೋಟ್’ಗಳು. ಇನ್ನೊಂದು ಕಡೆ ಈ ಸರೋವರದಲ್ಲಿ ವಿಹಾರ ಮಾಡಿಸಲು ಸಜ್ಜಾದ ಬೋಟ್‌ಗಳು. ಮೈಮರೆತ ಹೊಸ ದಂಪತಿಗಳನ್ನು ಹೊತ್ತ ದೋಣಿಗಳು ಕೆಲವಾದರೆ, ಇಡೀ ಕುಟುಂಬವನ್ನು ಕಟ್ಟಿಕೊಂಡು ಪ್ರಯಾಣಿಸುತ್ತಿದ್ದ ಓವರ್‌ಲೋಡ್ ದೋಣಿಗಳು ಮತ್ತೆ ಕೆಲವು. ಎಲ್ಲಾ ವಯೋಮಾನದವರ ಸಂಭ್ರಮ ಸಂತೋಷಗಳ ಸಾಂಕೇತಿಕ ಸರೋವರದಲ್ಲಿ ವಿಹರಿಸಿ ಹೊರಬಂದಮೇಲೆ ಅದೇ ನೆಲ; ಅದೇ ನೋವು-ನಲಿವು.

ಹೊರನೋಟಕ್ಕೆ ವಿಲಾಸಿನಿಯಂತೆ ಕಾಣುವ ಕಾಶ್ಮೀರದ ಒಳಗಿನ ಗಲ್ಲಿ ಗಲ್ಲಿ ಗಳಲ್ಲಿರುವ ಕೊಳಕು, ಮುರಿದುಬಿದ್ದ ಬೋಟುಗಳ ಬದುಕು ನನ್ನನ್ನು ಈಗಲೂ ಕಾಡಿಸುತ್ತಿದೆ. ನಗರದ ಒಳಗೆ ಸಾಕಷ್ಟು ಸುತ್ತಾಡಿದ ನನಗೆ ಡಾಲ್‌ಲೇಕ್‌ನ ಅಣಕುಗಳನ್ನು ಕಂಡಂತಾಗಿ ಚಳಿಯ ಕೊರೆತ ಒಳಗಿಳಿದು ನಡುಗಿಸಿದ್ದು ಇನ್ನೂ ನೆನಪಿದೆ. ಅಂದಿನಿಂದ ಇಂದಿನವರೆಗೆ ನನ್ನೊಳಗೆ ಮಾಸಿಹೋಗದ ಉಳಿದ ಎರಡು ಘಟನೆಗಳನ್ನು ಇಲ್ಲಿ ಹೇಳುತ್ತೇನೆ.

ಘಟನೆ ಒಂದು : ಕಾಶ್ಮೀರದಲ್ಲಿ ಪಹಲ್ ಗಾಂವ್ ಎಂಬ ಒಂದು ಸ್ಥಳ. ಅದರ ಸುತ್ತ ಇರುವ ಗಿರಿ ಪ್ರದೇಶವನ್ನು, ಅಲ್ಲಿರುವ ದೇವಾಲಯಗಳನ್ನು, ಕುದುರೆ ಮೇಲೆ ಹತ್ತಿ ಪ್ರಯಾಣಿಸಿಯೇ ನೋಡಬೇಕು ; ನಡಿಗೆಯಲ್ಲಿ ಹತ್ತಿ ಇಳಿಯುವುದು ಕಷ್ಟ. ಕುದುರೆಗಳನ್ನು ಸಾಕಿದ ಅನೇಕರು ಪ್ರವಾಸಿಗರನ್ನು ಕಂಡಕೂಡಲೆ ಓಡೋಡಿ ಹತ್ತಿರ ಬರುತ್ತಾರೆ. ಬೇಡಿಕೊಳ್ಳುತ್ತಾರೆ. ಅವರ ಮುಖಗಳಲ್ಲಿರುವ ಆತುರ ಆತಂಕಗಳಿಗೆ ಮೂಕ ಸಾಕ್ಷಿಯಂತೆ ನಿಂತಿರುವ ಕುದುರೆಗೆ ಕೆನೆಯುವುದಕ್ಕೂ ಶಕ್ತಿಯಿದ್ದಂತೆ ಕಾಣುವುದಿಲ್ಲ. ಕಾಡಿಬೇಡಿ ಸಿಕ್ಕಿದ ಸವಾರನನ್ನು ಹತ್ತಿಸಿಕೊಂಡು ಹೋಗುವ-ಬರುವ ಯಾಂತ್ರಿಕವಾದ ಕುದುರೆ ಯಾತ್ರಿಕರ ಉತ್ಸಾಹಕ್ಕೆ ಎರಚಿದ ವ್ಯಂಗ್ಯದಂತೆ ಕಾಣುತ್ತದೆ. ವ್ಯಂಗ್ಯದ ಮೇಲೆ ಹೊರಟ ಸವಾರಿಯ ಅರ್ಥ ಮತ್ತು ಅನುಭವವೇ ಒಂದು ವಿಶೇಷ.

ನಾವು ಪಹಲ್ಗಾಂವ್‌ಗೆ ಹೋದದಿನ ಕಾಡಿ ಬೇಡುತ್ತಿದ್ದ ಅನೇಕರಿಗೆ ಸವಾರರೇ ಸಿಗಲಿಲ್ಲ. ಅಂಥವರು ಮತ್ತೊಂದು ಬಸ್ಸಿನ ಬಳಿಗೆ ಓಡುತ್ತಿದ್ದರು. ಹೀಗೆ ಅತ್ತ ಇತ್ತ ಓಡುತ್ತಲೇ ಇದ್ದ ಒಬ್ಬ ವ್ಯಕ್ತಿಯನ್ನು ನಾನು ಗಮನಿಸಿದೆ. ಆತನ ಸೊರಗಿದ ಶರೀರ, ಕೊರಗಿದ ಕಣ್ಣು, ತನಗೆ ತಾನೇ ಮಾತನಾಡಿ ಕೊಳ್ಳುತ್ತಿದ್ದ ವೇದನೆಗಳು ನನ್ನನ್ನು ಸೆಳೆದಿದ್ದವು. ಬೇರೆ ಕುದುರೆಗಳ ಮೇಲೆ ಹತ್ತಿದ ನಾವು ಎರಡು-ಮೂರು ಗಂಟೆಗಳ ನಂತರ ವಾಪಸ್ ಬಂದಾಗ ಈ ವ್ಯಕ್ತಿಯ ಒಬ್ಬನೇ ಒಂದು ಕಡೆ ಕುಳಿತಿದ್ದ. ನನಗೆ ತಡೆಯಲಾಗದೆ ಆತನ ಬಳಿ ಹೋದೆ. ಹೆಸರು ಕೇಳಿದೆ. ಎಲ್ಲೋ ನೋಡುತ್ತಾ ‘ಅಬ್ದುಲ್ಲ’ ಎಂದ. ಕುಟುಂಬದ ಸ್ಥಿತಿ ಗತಿ ಕೇಳಿದೆ. ಎಲ್ಲ ಬಡವರಂತೆ ಆತನ ಸ್ಥಿತಿ. ಕಡೆಗೆ ಬರುವಾಗ ಹತ್ತು ರೂಪಾಯಿ ಕೊಡಲು ಹೋದ. ‘ಕುದುರೆ ಬೇಕಾ’ ಎಂದ. ‘ಬೇಡ ನಾವು ಆಗಲೇ ಬೆಟ್ಟ ಹತ್ತಿ ಇಳಿದೆವು’ ಎಂದೆ. ಆಗ ಆತ ಹೇಳಿದ : ‘ಬಿಟ್ಟಿ ದುಡ್ಡು ತಿಂದು ಹೊಟ್ಟೆ ಹೊರೆಯೋದ್ಯಾಕೆ ಸ್ವಾಮಿ. ಇನ್ನೂ ಕಾಯ್ತೇನೆ’.

ಆತ ಒಬ್ಬನೇ ಕಾಯುತ್ತಾ ಕೂತಾಗ ನಮ್ಮ ಬಸ್ಸು ಹೊರಟಿತು. ಅಲ್ಲಿ ಒಂಟಿಯಾಗಿದ್ದ. ತುಂಬಿದ ಬಸ್ಸಿನಲ್ಲಿ ನಾನು ಒಂಟಿಯಾಗುತ್ತಿದ್ದೆ.

ಘಟನೆ ಎರಡು : ಶ್ರೀನಗರದಲ್ಲಿ ನಾವು ಇಳಿದು ಕೊಂಡಿದ್ದ ಹೋಟೆಲಿನ ಒಬ್ಬ ಸಪ್ಲೇಯರ್ ಹೆಸರು-ಬಹದ್ದೂರ್. ಈತನ ಚಟುವಟಿಕೆ ಹೇಳತೀರದು. ಎಲ್ಲರ ಬಳಿಯೂ ಬಂದು ಬೇಕು ಬೇಡಗಳನ್ನು ವಿಚಾರಿಸುತ್ತಿದ್ದ. ಆತ ಮೈ ಮನಸ್ಸು ತುಂಬಿಕೊಂಡ ವ್ಯಕ್ತಿಯಾಗಿದ್ದ. ಎಲ್ಲರೊಂದಿಗೆ ತಮಾಷೆ ಮಾಡುತ್ತಾ, ಊಟ ಬಡಿಸುತ್ತ, ಮಕ್ಕಳ ಮುಖ ಸವರುತ್ತ ನಮ್ಮ ಮನೆಯವನೇ ಆದಂತೆ ಹತ್ತಿರವಾದ. ಆತನ ವಿವರಗಳನ್ನು ಕೇಳಿ ತಿಳಿದು ಕೊಂಡಾಗ ಹೊಟ್ಟೆಪಾಡಿಗಾಗಿ ಎಷ್ಟು ದೂರ ಬಂದಿದ್ದಾನೆ ಎನ್ನಿಸಿತು. ನೇಪಾಳದ ಅಂಚಿನಲ್ಲಿ ಇವನ ಊರು. ಹೆಚ್ಚು ಓದಿಲ್ಲ. ಹೊಟ್ಟೆ ಹೊರೆಯಲು ಏನಾದರೂ ಮಾಡಬೇಕು. ನ್ಯಾಯವಾದ ಕೆಲಸದಲ್ಲಿ ತೊಡಗಬೇಕು. ಅದಕ್ಕಾಗಿ ಬಸ್ಸಿನ ಓಡಾಟವಿಲ್ಲದ ತನ್ನೂರಿನಿಂದ ದಿನವಿಡೀ ನಡೆದು, ಬಸ್ಸು ಹಿಡಿದು, ಇಲ್ಲಿಗೆ ಬಂದು ಕೆಲಸಕ್ಕೆ ಸೇರಿದ.

ಇಷ್ಟು ವಿವರ ಹೇಳಿದವನೇ ಹಾಡೊಂದನ್ನು ಮೆಲುದನಿಯಲ್ಲಿ ಹಾಡಿಕೊಳ್ಳುತ್ತ ಊಟ ಬಡಿಸತೊಡಗಿದ. ಹಾಲಿನಲ್ಲಿದ್ದ ಎಲ್ಲರನ್ನೂ ತಮಾಷೆ ಮಾಡುತ್ತಾ ಊಟ ಬಡಿಸುತ್ತ ಹಾಡಿನ ಎರಡು ಸಾಲುಗಳನ್ನು ಮತ್ತೆ ಮತ್ತೆ ಹೇಳಿಕೊಳ್ಳುತ್ತಿದ್ದ. ನಾನು ನನ್ನ ಪತ್ನಿಯನ್ನು ಕೇಳಿ ಹಾಡಿನ ಅರ್ಥ ತಿಳಿದುಕೊಂಡೆ.

‘ಇಲ್ಲಿ ಕೂತಿರುವ ನಿಮಗೆ ಹೆಂಡರಿದ್ದಾರೆ, ಮಕ್ಕಳಿದ್ದಾರೆ
ನನ್ನ ಬಳಿ ಇಲ್ಲ ಹೆಂಡತಿ ಇಲ್ಲ ಮಕ್ಕಳು, ಬೇರೆ ಯಾರಿದ್ದಾರೆ?’
-ಹೀಗೆ ಹಾಡುತ್ತಿದ್ದ ಅವನನ್ನು ಕರೆದು ಕೇಳಿದೆ : ‘ನಿಮಗೆ ಮದುವೆ ಆಗಿದೆಯಾ’ ? ಅಂತ. ‘ಹೌದು. ಆದರೆ ಮದುವೆಯಾದ ಮೂರನೇ ದಿನವೇ ಕೆಲಸ ಹೋದೀತು ಅನ್ನೋ ಭಯದಲ್ಲಿ ಊರಿಂದ ಇಲ್ಲಿಗೆ ವಾಪಸ್ ಬಂದೆ. ಈಗ ಒಂದು ವರ್ಷವಾಯಿತು, ಹೆಂಡತಿ ಮುಖ ಸಹಿತ ನೋಡಿಲ್ಲ’ ಎಂದು ಹೇಳಿದ ಆತ ಮತ್ತೆ ಅದೇ ಹಾಡನ್ನು ಹೇಳಿಕೊಳ್ಳುತ್ತ ಓಡಾಡ ಹತ್ತಿದ್ದ.

ಒಟ್ಟಿನಲ್ಲಿ ಹೇಳುವುದಾದರೆ ಪೆಹಲ್‌ಗಾಂವ್‌ನ ಅಬ್ದುಲ್ ಮತ್ತು ಶ್ರೀನಗರದ ಬಹದ್ದೂರ್ ನನ್ನ ಮನಸ್ಸಿನ ಭಾಗವಾಗಿದ್ದಾರೆ. ಅವರಿಬ್ಬರಿಗೆ ಒಂಟಿತನವೇ ಒಂದು ಆಯಾಮವಾಗಿದೆ. ಅದೇ ರೀತಿ ಕಾಶ್ಮೀರಕ್ಕೆ ಒಂಟಿತನ ಕಾಡಿಸುತ್ತಿದೆ. ಅಬ್ದುಲ್ಲ, ಬಹದ್ದೂರ್‌ ಮತ್ತು ಕಾಶ್ಮೀರದ ಒಂಟಿತನ ಒಂದೇ ಅನಿಸುತ್ತದೆ. ಯಾಕೆಂದರೆ, ನಗುಮುಖದ ಮೂಲಕ ನೋವು ತಿನ್ನುವ ಬಹದ್ದೂರ್, ಖಿನ್ನತೆಯಲ್ಲಿ ಆತ್ಮಾಭಿಮಾನ ಒತ್ತೆಯಿಡದ ಅಬ್ದುಲ್ಲ ಮತ್ತು ಕೋವಿಗಳ ನಡುವೆಯೂ ಕಳೆದುಹೋಗದ ಕಾಶ್ಮೀರ-ಇವುಗಳ ಒಂಟಿತನದ ಅನುಭವಕ್ಕೆ ಇರುವ ಆಯಾಮ ಒಂದೇ ರೀತಿಯದು, ಅಲ್ಲವೇ?
*****
೩೧-೭-೧೯೯೪