ಇಳಾ – ೯

ಇಳಾ – ೯

ಚಿತ್ರ: ರೂಬೆನ್ ಲಗಾಡಾನ್

ಕಾಲೇಜಿಗೆ ಹೋಗಿ ಎರಡು ಪ್ರಾಸ್ಪೆಕ್ಟ್ ಕೊಂಡು ಸೀದಾ ಆಟೋ ಹತ್ತಿ ಪರಿಷತ್ತು ಭವನದ ಮುಂದೆ ಇಳಿದಳು. ಇದೇ ಮೊದಲ ಬಾರಿ ಸಾಹಿತ್ಯ ಪರಿಷತ್ತು ಭವನ ನೋಡುತ್ತ ಇರುವುದು. ಅದರ ಪಕ್ಕದಲ್ಲಿದ್ದ ಕಲಾಭವನವನ್ನು ನೋಡಿದ್ದಳು. ಆದರೆ ಸಾಹಿತ್ಯ ಪರಿಷತ್ತು ಭವನ ಇದೆ ಎಂಬುದೇ ಅವಳಿಗೆ ತಿಳಿದಿರಲಿಲ್ಲ. ಗೇಟು ತರೆದಿತ್ತು ಸೀದಾ ಒಳ ಬಂದಳು. ಆಷ್ಟರಲ್ಲಾಗಲೇ ಸುಮಾರು ಜನ ಒಳಗೆ ಕುಳಿತು ಮಾತನಾಡುತ್ತಿದ್ದರು. ಬಾಗಿಲಲ್ಲಿಯೇ ಅನುಮಾನಿಸುತ್ತ ನಿಂತವಳನ್ನು ನಿವಾಸ್ ಗಮನಿಸಿ ಎದ್ದುಬಂದು ‘ಬನ್ನಿ ಇಳಾ, ಯಾಕೆ ತಡವಾಯ್ತು?’ ಎಂದು ಒಳಗೆ ಕರೆದನು.

ಸಂಕೋಚಿಸುತ್ತ ಅವನಿಗೇನೂ ಉತ್ತರಿಸದೆ ಖಾಲಿ ಇರುವ ಕುರ್ಚಿ ಮೇಲೆ ಕುಳಿತುಕೊಂಡಳು. ಇನ್ನು ಚರ್ಚೆ ಪ್ರಾರಂಭವಾಗಿರಲಿಲ್ಲ. ಬರುವವರು ಇದ್ದರು ಅಂತ ಕಾಣುತ್ತೆ. ಅಲ್ಲಿ ನಿವಾಸನನ್ನು ಬಿಟ್ಟರೆ ಬೇರೆ ಯಾರೂ ಪರಿಚಿತರಿರಲಿಲ್ಲ. ಪಕ್ಕದಲ್ಲಿದ್ದಾಕೆಯ ಕಡೆ ನೋಡಿದಳು. ಆಕೆಯೂ ಅವಳತ್ತ ತಿರುಗಿ ನೋಡಿತ್ತಿದ್ದವಳು ಇವಳು ನೋಡಿದೊಡನೆ ಕಿರುನಗೆ ಬೀರಿದಳು. ಇಳಾ ಕೂಡ ನಕ್ಕಳು.

‘ನಾನು ಸ್ಪೂರ್ತಿ ಅಂತ, ಚನ್ನರಾಯಪಟ್ಟಣ ನಮ್ಮದು, ಸೆಕೆಂಡ್ ಡಿಗ್ರಿ ಓದ್ತಾ ಇದ್ದೀನಿ’ ಅಂತ ಪರಿಚಯಿಸಿಕೊಂಡಳು.

‘ನಾನು ಇಳಾ’ ಅಂತ ಹೇಳುವಷ್ಟರಲ್ಲಿ ‘ನಿವಾಸ್ ನಿಮ್ಮ ಬಗ್ಗೆ ಹೇಳಿದ್ದಾರೆ. ನಿಮ್ಮೂರು ಸಕಲೇಶಪುರದ ಹತ್ತಿರದ ಹಳ್ಳಿ, ನೀವು ಡಾಕ್ಟರಾಗಬೇಕಾಗಿತ್ತು. ಈಗ ತೋಟ ನೋಡಿಕೊಳ್ಳುವ ಆಸಕ್ತಿ ಬೆಳೆದಿದೆ ಸರೀನಾ’ ನಕ್ಕಳು. ಅವಳ ಆತ್ಮೀಯತೆ ಇಷ್ಟವಾಗಿತ್ತು ಇಳಾಗೆ. ‘ಸರಿ’ ಎನ್ನುವಂತೆ ತಾನೂ ನಗು ಬೆರೆಸಿದಳು.

ಅಷ್ಟರಲ್ಲಿ ನಿವಾಸ್ ‘ಸ್ನೇಹಿತರೇ, ನಾವೆಲ್ಲ ಯಾಕೆ ಇಲ್ಲಿ ಸೇರಿದ್ದೇವೆ ಅಂತ ನಮ್ಮ ಸ್ನೇಹಿತರೂ, ಹಿತೈಷಿಗಳೂ ಆದ ಮೂರ್ತಿಯವರು ನಿಮಗೆ ತಿಳಿಸುತ್ತಾರೆ’ ಎಂದು ಅನೌನ್ಸ್ ಮಾಡಿದ.

ಮೂರ್ತಿಯವರು ಐವತ್ತು ವರ್ಷದ ಆಸುಪಾಸಿನವರು. ಒಳ್ಳೆ ಎತ್ತರ ಹೊಂದಿದ್ದು ಪ್ರಸನ್ನ ಮುಖ ಅವರ ಪ್ಲಸ್ ಪಾಯಿಂಟ್ ಆಗಿತ್ತು. ಎದ್ದುನಿಂತ ಮೂರ್ತಿಯವರು ‘ಸ್ನೇಹಿತರೆ ನಾವೆಲ್ಲ ಯಾಕೆ ಇಲ್ಲಿ ಸೇರಿಕೊಂಡಿದ್ದೇವೆ ಎಂದರೆ ನಮ್ಮ ದೇಶದ ಬೆನ್ನೆಲುಬಾಗಿರುವ ರೈತ ಇವತ್ತು ಹತಾಶನಾಗ್ತ ಇದ್ದಾನೆ. ಬೆಳೆದದ್ದು ಕೈಗೆ ಬಾರದೆ, ಮಾಡಿರುವ ಸಾಲ ಹೆಚ್ಚಾಗಿ ಬಡ್ಡಿ ಕಟ್ಟಲಾರದೆ ಪ್ರಾಣ ತೆರ್ತ ಇದ್ದಾನೆ. ದಿನ ಬೆಳಗಾದರೆ ಎಲ್ಲಿಯಾದರೂ ಒಬ್ಬ ರೈತ ಸಾಯ್ತನೇ ಇದ್ದಾನೆ. ಈ ಸಾವು ಸಹಜವೇ? ಅನಿವಾರ್ಯವೇ? ಇದನ್ನು ತಡೆಯಲು ಸಾಧ್ಯವಿಲ್ಲವೇ, ಹಾಗಾದ್ರೆ ಏನು ಮಾಡಬೇಕು, ಏನು ಮಾಡಿ ಈ ಆತ್ಮಹತ್ಯಾ ಸರಣಿಯನ್ನು ನಿಲ್ಲಿಸೋಕೆ ಸಾಧ್ಯ ಎಂಬುದರ ಬಗ್ಗೆ ಚರ್ಚೆ ನಡೆಯಬೇಕು. ಚರ್ಚೆಯಲ್ಲಿ ನೀವೆಲ್ಲರೂ ಭಾಗವಹಿಸಬೇಕು. ನಿಮ್ಮ ಅನಿಸಿಕೆಗಳನ್ನು ಹೇಳಬೇಕು. ಎಲ್ಲರ ಅಭಿಪ್ರಾಯ ತಗೊಂಡು ಮುಂದಿನ ಹೆಜ್ಜೆ ಇಡೋಣ’ ಎಂದು ಹೇಳಿದರು.

ಮತ್ತೊಬ್ಬಾತ ಎದ್ದು ನಿಂತು ‘ನನ್ನ ಹೆಸರು ವಿನೋದ್, ನಾನೂ ಕೂಡ ಒಬ್ಬ ರೈತನ ಮಗ, ರೈತರ ಆತ್ಮಹತ್ಯೆ ನನ್ನನ್ನು ಕೆರಳಿಸುತ್ತ ಇದೆ. ಮೊದಲು ನಾವು ರೈತರಲ್ಲಿ ಜಾಗೃತಿ ಮೂಡಿಸಬೇಕು. ನಾವೆಲ್ಲರು ತಂಡಗಳಾಗಿ ಮಾಡಿಕೊಂಡು ಒಂದೊಂದು ತಂಡ ಒಂದೊಂದು ಹಳ್ಳಿಯಲ್ಲಿ ರೈತರನ್ನು ಸೇರಿಸಿ ಅವರ ಆತ್ಮವಿಶ್ವಾಸ ಹೆಚ್ಚಿಸಬೇಕು- ಸಾವೊಂದೇ ಸಮಸ್ಯೆಗೆ ಪರಿಹಾರವಲ್ಲ ಅನ್ನೊಂದನ್ನು ಮನದಟ್ಟು ಮಾಡಬೇಕು.’

‘ಒಳ್ಳೆ ಸಲಹೆ’ ಎಂದು ಮೂರ್ತಿಯವರು ತಲೆದೂಗಿದರು. ಮತ್ತೊಬ್ಬಾಕೆ ಎದ್ದುನಿಂತು ‘ನನ್ನ ಹೆಸರು ರಾಗಿಣಿ, ಕೃಷಿ ಕಾಲೇಜಿನಲ್ಲಿ ಓದ್ತ ಇದ್ದೇನೆ. ಮೊದಲು ರೈತರ ಸಾಲ ಯಾಕೆ ಮಾಡ್ತಾರೆ. ಅದನ್ನ ಹೇಗೆ ಉಪಯೋಗಿಸುತ್ತಿದ್ದಾರೆ ಅಂತ ತಿಳ್ಕೋಬೇಕು, ಸಾಮಾನ್ಯವಾಗಿ ಒಬ್ಬ ರೈತ ಒಂದು ಬೆಳೆ ಬೆಳೆದು ಯಶಸ್ವಿಯಾದ್ರೆ, ಲಾಭಗಳಿಸಿದ್ರೆ, ಎಲ್ಲರೂ ಮುಂದಿನ ವರ್ಷದಿಂದ ಅದೇ ಬೆಳೆಗೆ ಜೋತುಬೀಳ್ತಾರೆ. ಪೂರೈಕೆ ಜಾಸ್ತಿ ಆದಾಗ ರೇಟು ಬಿದ್ದುಹೋಗುತ್ತದೆ. ರೇಟು ಸಿಗದ ರೈತ ಹತಾಶನಾಗ್ತಾನೆ, ಆತ ಬುದ್ಧಿ ಕಲಿಯದೆ, ಎಚ್ಚತ್ತುಗೊಳ್ಳದೆ, ಬೇರೆ ಬೆಳೆ ಬಗ್ಗೆ ಮನಸ್ಸು ಮಾಡದೇ ಮತ್ತೆ ಅದೇ ಬೆಳೆ ಬೆಳೆಯುತ್ತಾನೆ. ಅದೃಷ್ಟಕ್ಕಾಗಿ ಕಾಯುತ್ತಾನೆ, ಎಲ್ಲಾ ರೈತರು ಇದೇ ತಪ್ಪು ಮಾಡ್ತಾ ಇದ್ದಾರೆ. ಈ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಬೇಕು’ ಎಂದಳು.

ಸ್ಫೂರ್ತಿ ನಿಂತುಕೊಂಡು ‘ನಮ್ಮ ತಂದೆನೂ ರೈತರೇ. ಅವರು ಪದವಿಪಡ್ಕೊಂಡಿದ್ದರೂ ಕೆಲಸಕ್ಕೆ ಹೋಗದೆ ಭೂಮಿ ಮುಟ್ಟಿ ಕೆಲಸ ಮಾಡ್ತ ನೆಮ್ಮದಿಯಿಂದ ಬದುಕ್ತಾ ಇದ್ದಾರೆ. ಅವರ ಆಸಕ್ತಿನೇ ನಂಗೂ ಬಂದಿದೆ. ನಮ್ಮ ತಂದೆ ಭೂಮಿ ಮೇಲೆ ಪ್ರತಿ ವರ್ಷ ಪ್ರಯೋಗ ಮಾಡ್ತಾ ಬರ್ತಾ ಇದ್ದಾರೆ. ಒಂದೇ ಬೆಳೇನಾ ಅವರು ಯಾವಾಗಲೂ ನೆಚ್ಚಿಕೊಂಡಿಲ್ಲ. ಮಿಶ್ರ ಬೆಳೆ ಬೆಳೀತಾರೆ. ಒಂದ್ರಲ್ಲಿ ರೇಟು ಬಿದ್ದುಹೋಗಿ ನಷ್ಟವಾದರೂ, ಮತ್ತೊಂದರಲ್ಲಿ ಲಾಭ ಬರೋ ಹಾಗೆ ಮಾಡಿಕೊಳ್ಳುತ್ತಾರೆ. ಪ್ರತಿದಿನ ಆದಾಯ ಬರೋ ಹಾಗೆ ತರಕಾರಿ ಬೆಳೀತಾರೆ. ಬರೀ ಬೋರೊಂದೇ ನಂಬಿಕೊಳ್ಳದೆ ಮಳೆ ನೀರೂ ಸಂಗ್ರಹಿಸುತ್ತಾರೆ. ಬೋರು ಬತ್ತದ ಹಾಗೆ ನೋಡಿಕೊಂಡಿದ್ದಾರೆ. ಜೊತೆಗೆ ತಾವು ಬೆಳೆದದ್ದನ್ನು ಯಾವ ಮಧ್ಯವರ್ತಿಗೂ ನೀಡದೆ ನೇರವಾಗಿ ವ್ಯಾಪಾರ ಮಾಡುತ್ತಾರೆ. ಮಾರುವಾತ ಕೊಳ್ಳುವಾತ ಇವರಿಬ್ಬರ ನಡುವೆ ಮಧ್ಯವರ್ತಿಗೆ ಜಾಗವಿಲ್ಲ. ಕೊಳ್ಳುವವರು ನೇರವಾಗಿಯೇ ನಮ್ಮಲ್ಲಿಗೆ ಬಂದು ಕೊಂಡು ಪಟ್ಟಣಗಳಲ್ಲಿ ತಂದು ಮಾರುತ್ತಾರೆ. ಹಾಗಾಗಿ ನಮಗೆ ಒಳ್ಳೆಯ ಲಾಭವಿದೆ. ಇಂತಹವುಗಳನ್ನು ನಾವು ಎಲ್ಲಾ ರೈತರಿಗೂ ತಿಳಿಸಿ ಮನವರಿಕೆ ಮಾಡಬೇಕು’ ಎಂದಳು.

ಹೀಗೆ ಸುಮಾರು ಜನ ಮಾತನಾಡಿ ತಮ್ಮ ತಮ್ಮ ಅನಿಸಿಕೆಗಳನ್ನು ತಿಳಿಸಿದರು. ಇಳಾ ಮೌನವಾಗಿ ಕುಳಿತು ಎಲ್ಲವನ್ನು ಕೇಳಿಸಿಕೊಂಡಳು. ಕೊನೆಯಲ್ಲಿ ನಿವಾಸ್ ಎದ್ದು ನಿಂತು ‘ಗೆಳೆಯರೇ, ನಿಮ್ಮ ಮಾತೂ, ಅಭಿಪ್ರಾಯ ಕೇಳುತ್ತಿದ್ದರೆ ತುಂಬಾ ಸಂತೋಷವಾಗ್ತಾ ಇದೆ. ಖಂಡಿತಾ ನಾವೊಂದು ಪಡೆ ಕಟ್ಟಿ ಕ್ರಾಂತಿ ಮಾಡುವ ಹುಮ್ಮಸ್ಸು ನಮ್ಮಲ್ಲಿದೆ. ನಿಮ್ಮೆಲ್ಲರ ಒಟ್ಟಾರೆ ಅಭಿಪ್ರಾಯದಂತೆ ನಾವು ಬೇಗನೆ ಕಾರ್ಯೋನ್ಮುಖರಾಗೋಣ. ತಂಡಗಳಾಗಿ ಮಾಡಿಕೊಳ್ಳೋಣ. ಒಂದೊಂದು ತಂಡ ಒಂದೊಂದು ಹಳ್ಳಿಗೆ ಹೋಗಿ ಹಳ್ಳಿಯ ರೈತರನ್ನು ಒಟ್ಟುಗೂಡಿಸಿ ಜಾಗೃತಿ ಮಾಡೋಣ. ಕೃಷಿ ಹೊರೆಯಾಗದ ಹಾಗೆ, ನಷ್ಟವಾಗದಂತೆ ದುಡಿಯುವ ಕ್ರಮಗಳನ್ನು ತಿಳಿಸೋಣ. ಈಗಾಗಲೇ ಸಾಲ ಮಾಡಿ ಸೋತಿರುವ ರೈತರನ್ನು ಹತಾಶೆ ಕಾಡಿ ಅನಾಹುತ ಮಾಡಿಕೊಳ್ಳದಂತೆ, ಸಾಲ ತೀರಿಸಿ ಹೇಗೆ ಬದುಕಬಹುದು ಅನ್ನುವುದನ್ನು ಮನದಟ್ಟು ಮಾಡೋಣ. ತಿಂಗಳಲ್ಲಿ ಒಂದು ದಿನ ನಾವು ಇದಕ್ಕಾಗಿಯೇ ಮೀಸಲಿಡೋಣ. ರೈತರ ಆತ್ಮಹತ್ಯೆ ತಪ್ಪಿಸಲು ಕೈಲಾದಷ್ಟು ಹೋರಾಡೋಣ. ಅವರು ನೆಮ್ಮದಿಯಿಂದ ಬದುಕಲು ಸಹಾಯ ಮಾಡೋಣ’ ಎಂದು ಕರೆ ನೀಡಿ ಅಲ್ಲಿದ್ದವರಲ್ಲಿ ತಂಡ ಮಾಡಿ ಒಬ್ಬೊಬ್ಬನನ್ನು ತಂಡದ ನಾಯಕನನ್ನಾಗಿ ಮಾಡಿದರು. ಅಲ್ಲಿ ಹೆಚ್ಚಾಗಿ ಯುವಕ ಯುವತಿಯರೇ ಇದ್ದರು. ಇಳಾಳನ್ನು ಒಂದು ತಂಡಕ್ಕೆ ಸೇರಿಸಿದರು. ಆ ತಂಡದಲ್ಲಿ ಸ್ಫೂರ್ತಿ ಇದ್ದದ್ದು ಇಳಾಗೆ ಸಮಾಧಾನ ತರಿಸಿತು.

ಸಭೆಯನ್ನು ಮುಗಿಸಲಾಯಿತು. ಮುಂದಿನ ತಿಂಗಳು ಮತ್ತೆ ಸಭೆ ಸೇರಲಾಗುವುದು. ಅಷ್ಟರೊಳಗೆ ಒಂದೊಂದು ತಂಡ ಒಂದೊಂದು ಹಳ್ಳಿಯಲ್ಲಿ ರೈತರನ್ನು ಸೇರಿಸಿ ತಿಳುವಳಿಕೆ ನೀಡಿರಬೇಕು. ಬೇಕಾದರೆ ಆ ಕಾರ್ಯಕ್ರಮಗಳಿಗೆ ಪ್ರಗತಿಪರ ರೈತರನ್ನೂ, ಕೃಷಿತಜ್ಞರನ್ನೊ, ಕೃಷಿ ಇಲಾಖೆಯವರನ್ನೋ ಕರೆಸಬಹುದು. ಅವರಿಂದಲೂ ತಿಳುವಳಿಕೆ ನೀಡಿಸಬಹುದು. ಅವುಗಳ ಮಾಹಿತಿ ತೆಗೆದುಕೊಂಡು ಮುಂದಿನ ಮೀಟಿಂಗ್‌ಗೆ ಹಾಜರಾಗಬೇಕು ಎಂದು ನಿವಾಸ್ ಹೇಳಿದ. ಮೀಟಿಂಗ್ ಬೇಗ ಮುಗಿದಿದ್ದು ಇಳಾಗೆ ಬೇಗ ಊರು ತಲುಪಲು ಒಳ್ಳೆಯದಾಯಿತು ಎಂದುಕೊಳ್ಳುತ್ತ ಹೊರಬರಬೇಕು ಎನ್ನುವಷ್ಟರಲ್ಲಿ- ‘ಇಳಾ ನಿಂತ್ಕೊಳ್ಳಿ, ಬಸ್‌ಸ್ಟಾಂಡಿಗೆ ಅಲ್ವಾ… ನಾನೂ ಬರ್ತೀನಿ’ ಎಂದು ನಿಲ್ಲಿಸಿದ. ಮೂರ್ತಿಯವರಿಗೆ ಇಳಾಳನ್ನು ಪರಿಚಯಿಸಿ ‘ತುಂಬಾ ಟ್ಯಾಲೆಂಟ್ ಇದೆ ಈಕೆಗೆ. ಕಾಫಿ ತೋಟ ಇದೆ. ತೋಟದ ಬಗ್ಗೆ ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದ.

‘ವೆರಿಗುಡ್, ನಿಮ್ಮಂತ ಯಂಗ್‌ಸ್ಟರ್ಸ್ ಈ ಫೀಲ್ಡ್‌ಗೆ ಬರಬೇಕು ಆಗಲೇ ಏನಾದರೂ ಸಾಧಿಸುವುದು ಸಾಧ್ಯ’ ಎಂದರು. ಮತ್ತ್ಯಾವ ವಿವರಣೆಯನ್ನು ನಿವಾಸ್ ಹೇಳಿಲ್ಲ ಎಂದುಕೊಂಡು ಸದ್ಯ ಎಲ್ಲರ ಕನಿಕರದ ನೋಟ ಎದುರಿಸುವುದು ತಪ್ಪಿತಲ್ಲ ಎಂದುಕೊಂಡು ನಿವಾಸನ ಸ್ವಭಾವಕ್ಕೆ ಮೆಚ್ಚಿಕೊಂಡಳು.

ಸ್ಫೂರ್ತಿ ಇವಳಿಗಾಗಿ ಹೊರಗಡೆ ಕಾಯುತ್ತ ನಿಂತಿದ್ದಳು. ಇಳಾ ಒಬ್ಬಳೆ ಬರುತ್ತಿರುವುದನ್ನು ಕಂಡು ತಾನೂ ಅವರ ಜೊತೆ ಸೇರಿಕೊಂಡಳು.

‘ಸ್ಫೂರ್ತಿ ಊರಿಗೆ ಬರ್ತೀಯಾ? ಇಲ್ಲೇ ಇರ್ತೀಯಾ?’ ಸ್ಫೂರ್ತಿಯನ್ನು ನಿವಾಸ್ ಕೇಳಿದ.

‘ಇವತ್ತು ಬರ್ತೀನಿ. ನಾಳೆ ಕಾಲೇಜಿಲ್ಲ ನಂಗೆ. ಊರಲ್ಲಿ ಕೆಲ್ಸ ಇತ್ತು’ ಉತ್ತರಿಸಿದಳು.

ಸ್ಫೂರ್ತಿ ಇಲ್ಲಿ ಮನೆಯೊಂದರಲ್ಲಿ ಪೇಯಿಂಗ್ ಗೆಸ್ಟ್ ಆಗಿ ಇದ್ದಳು. ಚನ್ನರಾಯಪಟ್ಟಣದಿಂದ ಬಸ್ಸು ಇಳಿದು ಅವಳು ಇರೋ ಊರಿಗೆ ಹೋಗಿ ಬಂದು ಮಾಡುವುದು ಕಷ್ಟವಾದ್ದರಿಂದ ಹಾಸನದಲ್ಲೇ ಇದ್ದು ವಾರಕ್ಕೊಮ್ಮೆ ಊರಿಗೆ ಹೋಗುತ್ತಿದ್ದಳು.

‘ಇಳಾ ನೀವು…’ ಕೇಳಿದ.

‘ನಾನೂ ಹೋಗ್ತಾ ಇದ್ದೀನಿ, ಇಲ್ಲೇನು ಕೆಲ್ಸ ಇಲ್ಲ’ ಎಂದಳು.

‘ಸರಿ, ಊಟ ಮಾಡಿಕೊಂಡು ಹೋಗೋಣ. ಊರು ಸೇರೋ ಹೊತ್ತಿಗೆ ಊಟದ ಸಮಯ ಮೀರಿಹೋಗಿರುತ್ತೆ’ ಎಂದಾಗ ಇಬ್ಬರೂ ಸರಿ ಎಂದು ತಲೆಯಾಡಿಸಿ ಅವನ ಜೊತೆ ಹೆಜ್ಜೆ ಹಾಕಿದರು.’

ಸ್ಫೂರ್ತಿ, ಇಳಾ ಮಾತನಾಡದೆ ಬರುತ್ತಿರುವುದನ್ನು ಕಂಡು- ‘ಯಾಕೆ ಸ್ಫೂರ್ತಿ, ಮಾತಾಡ್ತಾನೆ ಇಲ್ಲ, ಇಬ್ರೂ ಹುಡುಗೀರು ಸೇರಿಕೊಂಡರೆ ಮಾತಿಗೇನು ಬರ’ ಎಂದು ಸ್ಫೂರ್ತಿಯನ್ನು ಕೇಳಿದ.

‘ಹೊಟ್ಟೆ ಹಸೀತಾ ಇದೆಯಲ್ಲ, ಮಾತು ಬರ್ತಾ ಇಲ್ಲಾ. ಹೊಟ್ಟೆ ತುಂಬಿದ ಮೇಲೆ ಶಕ್ತಿ ಬರುತ್ತೆ ನೋಡಿ, ಆವಾಗ ನೀವು ಸಾಕು ನಿಲ್ಸಿ ಅನ್ನುವ ತನಕ ಮಾತಾಡ್ತೀವಿ, ಅಲ್ವಾ ಇಳಾ?’ ಇಳಾಳೆಡೆ ನೋಡಿ ನಕ್ಕಳು.

ಅಷ್ಟರೊಳಗೆ ಹೋಟೆಲ್ ಸಮೀಪ ಬಂದಿದ್ದರು. ಊಟದ ಸಮಯವಾದ್ದರಿಂದ ಜನಸಬಂದಣಿ ಇತ್ತು. ಟೇಬಲ್‌ಗಾಗಿ ಕಾದು ಜನ ಎದ್ದ ಕೂಡಲೇ ಕುಳಿತುಕೊಂಡರು. ಊಟದ ಟೋನ್ ಅನ್ನು ನಿವಾಸನೇ ತೆಗೆದುಕೊಂಡಿದ್ದ.

ಊಟ ಮಾಡುತ್ತ ನಿವಾಸ್ ‘ಸ್ಫೂರ್ತಿ, ಇಳಾ ಒಂದೇ ತಂಡದಲ್ಲಿರುವುದು ಅನುಕೂಲವಾಗಿದೆ. ನೀವು ಯಾವಾಗ ಎಲ್ಲಿ ಸಭೆ ಸೇರಿಸುತ್ತೀರಾ ಅಂತ ಇಳಾಗೆ ಮೆಸೇಜ್ ಕಳಿಸಿಬಿಡು. ಸಾಧ್ಯವಾದಷ್ಟು ಬೆಳಿಗ್ಗೆಯೇ ಪ್ರೊಗ್ರಾಂ ಹಮ್ಮಿಕೊಂಡರೆ ಸಂಜೆ ಒಳಗೆ ಊರಿಗೆ ಹೋಗಬಹುದು ಅಲ್ವಾ’ ಎಂದಾಗ ಒಪ್ಪಿಗೆ ಎಂಬಂತೆ ಇಬ್ಬರೂ ತಲೆಯಾಡಿಸಿದರು.

‘ಇಳಾ ನೀವು ಬಾಯೇ ಬಿಡಲಿಲ್ಲ. ಮುಂದೆ ಹೀಗಾಗಬಾರದು. ನಿಮ್ಮಿಂದ ಏನಾದರೂ ಸಲಹೆ ಸೂಚನೆಗಳು ಬರ್ತಾ ಇರಬೇಕು’ ಎಂದು ನಿವಾಸ್ ಹೇಳಿದಾಗ – ‘ನಂಗೇನು ಗೊತ್ತಾಗುತ್ತೆ ಸಾರ್, ನಾನಿನ್ನೂ ಈಗ ಈ ಫೀಲ್ಡಿಗೆ ಇಳಿಯುತ್ತ ಇದ್ದೀನಿ. ನಾನೇ ಒಂದೊಂದಾಗಿ ಕಲಿಯುತ್ತಾ ಇದ್ದೇನೆ. ಇನ್ನು ನಾನೇನು ಹೇಳಬಲ್ಲೆ’ ಎಂದಳು.

‘ಇರಲಿ ಈ ಬಾರಿ ಪರವಾಗಿಲ್ಲ, ಮುಂದಿನ ಬಾರಿ ಮೀಟಿಂಗ್‌ನಲ್ಲಿ ನೀವು ಮಾತಾಡೊ ಹಾಗಾಗಬೇಕು. ನಿಮ್ಗೆ ಅನುಭವ ಆಗಬೇಕು ಅಂತ ಏನೂ ಇಲ್ಲ. ಕೇಳಿ ತಿಳಿದದ್ದನ್ನು, ಓದಿ ಅಥವಾ ನೋಡಿ ತಿಳಿದದ್ದನ್ನು ನೀವು ಹೇಳಬಹುದು- ಒಟ್ಟಿನಲ್ಲಿ ನಿಮ್ಮ ಇನ್ವಾಲ್‌ಮೆಂಟ್ ಇರಬೇಕು ಅಷ್ಟೆ’ ಸಲಹೆ ನೀಡಿದ.

‘ಸರಿ ಸಾರ್’, ಮುಂದಿನ ಸಲ ಪ್ರಯತ್ನಿಸುತ್ತೇನೆ. ಆದರೆ ಸ್ಫೂರ್ತಿಯಷ್ಟು ದೈರ್ಯ ನಂಗಿಲ್ಲ. ಸ್ಫೂರ್ತಿ ಚೆನ್ನಾಗಿ ಮಾತಾಡ್ತಾರೆ’ ಅಭಿಮಾನದಿಂದ ಸ್ಫೂರ್ತಿಯತ್ತ ನೋಡಿದಳು.

‘ಸರಿ ಸರಿ. ಅಷ್ಟೊಂದು ಹೊಗಳಬೇಡಿ. ನಾನೂ ನಿಮ್ಮ ಹಾಗೆ ಮಾತಾಡೋಕೆ ಅಂಜತಾ ಇದ್ದೆ. ನಿವಾಸ್ ಸರ್ ನಂಗೆ ಧೈರ್ಯ ತುಂಬಿ ಮಾತಾಡೋದು ಕಲಿಸಿದ್ದು. ಅವರು ಹೋಗೋ ಪ್ರೋಗ್ರಾಂಗಳಿಗೆಲ್ಲ ನನ್ನ ಕರ್ಕೊಂಡು ಹೋಗ್ತಾರೆ, ನಮ್ಮ ಅಪ್ಪ ಮಾಡ್ತ ಇರೋ ಕೃಷಿ ಬಗ್ಗೆ ನನ್ನಿಂದ ಹೇಳಿಸ್ತಾರೆ. ಹಾಗೆ ಮಾತಾಡಿ ಮಾತಾಡಿ ನಂಗೆ ಧೈರ್ಯ ಬಂದು ಬಿಟ್ಟದೆ. ಆ ಕ್ರೆಡಿಟ್ ಎಲ್ಲಾ ನಿವಾಸ್ ಸಾರ್‌ಗೆ ಸೇರಬೇಕು’ ನಿವಾಸನನ್ನು ಹೊಗಳಿದಳು.

‘ಇಳಾ ಈಗ ಹೇಳಿ, ತೋಟದ ಕೆಲಸ ಹೇಗೆ ನಡೆಯುತ್ತಾ ಇದೆ, ಎಷ್ಟು ಎಕರೆ ತೋಟ ಇದೆ, ಏನೇನು ಬೆಳೆದಿದ್ದೀರಿ’ ಎಂದು ಕೇಳಿದ ನಿವಾಸ್.

ಜಮೀನು ಎಷ್ಟಿದೆ, ಅಪ್ಪನ ಸಾಲ ತೀರಿಸಲು ಮಾರಿದ್ದು ಎಷ್ಟು, ಅಲ್ಲೊಂದು ಶಾಲೆ ಈಗ ಪ್ರಾರಂಭವಾಗಿರುವುದು, ಶಾಲೆಯು ಕೂಡ ಹೊಸ ರೀತಿಯ ಬೋಧನೆಯಿಂದ, ಪಠ್ಯವಸ್ತುವಿನಿಂದ ಈಗಾಗಲೇ ಗಮನ ಸೆಳೆಯುತ್ತಿರುವುದು, ಪ್ರತಿಯೊಂದು ಮಗುವೂ ಪಾಠದ ಜೊತೆ ಕೃಷಿ, ಮರಗೆಲಸ, ಟೈಲರಿಂಗ್, ಎಲೆಕ್ಟ್ರಿಕಲ್ ರಿಪೇರಿ, ವಾಹನ ರಿಪೇರಿ… ಹೀಗೆ ಯಾವುದಾದರೊಂದನ್ನು ಕಡ್ಡಾಯವಾಗಿ ಕಲಿಯಲೇಬೇಕಿರುವುದು, ಓದು ಮುಗಿಯುವಷ್ಟರಲ್ಲಿ ಯಾವುದಾದರೊಂದು ವಿಚಾರದಲ್ಲಿ ಪರಿಣತಿ ಪಡೆದು ಮಗು ತನ್ನ ಕಾಲ ಮೇಲೆ ನಿಲ್ಲಲು ಶಕ್ತನಾಗುವಂತೆ ಮಾಡುವ ವಿಧಾನವನ್ನು ಆ ಶಾಲೆಯಲ್ಲಿ ಅಳವಡಿಸಿದ್ದು- ಎಲ್ಲವನ್ನೂ ಹೇಳಿದಳು. ಇದು ಪೋಷಕರನ್ನು ಹೆಚ್ಚಾಗಿ ಸೆಳೆಯುತ್ತಿದೆ ಎಂದೂ ತಿಳಿಸಿದಳು.

ತೋಟವನ್ನು ಸಾವಯವ ತೋಟವನ್ನಾಗಿ ಮಾಡಲು ನಿರ್ಧರಿಸಿದ್ದು: ಅದಕ್ಕಾಗಿ ದೇಶಿಯ ತಳಿಗಳ ಹಸುಗಳನ್ನು ಕೊಂಡಿರುವುದು, ಹಾಲು ಈಗಾಗಲೇ ಮಾರುತ್ತಿದ್ದು ಲಾಭ ಬರುತ್ತಿರುವುದು, ಮುಂದೆ ತೋಟದಲ್ಲಿ ಎರೆಹುಳು ಸಾಕಿ ಗೊಬ್ಬರ ತಯಾರಿಸಲು ಎಲ್ಲಾ ಸಿದ್ದತೆ ಮಾಡಿಕೊಂಡಿರುವುದು, ತೋಟದಲ್ಲಿ ಕಾಫಿ ಜೊತೆಗೆ ಇನ್ನಿತರೆ ಲಾಭ ತರುವ ಬೆಳೆ ಬೆಳೆಯುವ ಯೋಚನೆ ಮಾಡುತ್ತಿರುವುದು-ಹೀಗೆ ಎಲ್ಲವನ್ನೂ ಸಾಧ್ಯಂತವಾಗಿ ವಿವರಿಸಿದಾಗ ಈ ಪುಟ್ಟ ಹುಡುಗಿಯಲ್ಲಿ ಇಷ್ಟೆಲ್ಲ ಶಕ್ತಿ ಇದೆಯೇ ಎಂದು ಆಶ್ಚರ್ಯ ಮತ್ತು ಅಭಿಮಾನದಿಂದ ಅವಳೆಡೆ ನೋಡಿದ ನಿವಾಸ್.

‘ಗುಡ್, ವೆರಿಗುಡ್, ಹೆಣ್ಣುಮಕ್ಕಳು ಹೀಗಿರಬೇಕು. ಆಗಿಹೋದ ವಿಚಾರಕ್ಕೆ ಕೊರಗಿ ಕೂರುವ ಬದಲು ಬಂದದ್ದನ್ನು ಎದುರಿಸಿ ಧೈರ್ಯವಾಗಿ ಮುಂದೆ ಹೆಜ್ಜೆ ಇಡುವ ಮನೋಧಾಢ್ಯ ಬೆಳೆಸಿಕೊಳ್ಳಬೇಕು. ಆಗಲೇ ಈ ದೇಶ ಮುಂದುವರಿಯುವುದು. ಸಾವಿನತ್ತ ಹೊರಳುವ ಮನಸ್ಸನ್ನು ಹಿಂದೆ ಸರಿಸಿ ಬದುಕುವ ಕೆಚ್ಚದೆ ನಿಮ್ಮಂತವರನ್ನು ನೋಡಿದಾಗ ಬರಬೇಕು. ಹಾಗೆ ಬದುಕಬೇಕು. ಇಳಾ ನಿಜಕ್ಕೂ ನಂಗೆ ಸಂತೋಷವಾಗ್ತಾ ಇದೆ. ನೀವು ಕೃಷಿಯಲ್ಲಿ ಆಸಕ್ತಿ ತೋರುತ್ತಿರುವುದು ಆಶ್ಚರ್ಯ ಕೂಡ ಅನ್ನಿಸುತ್ತದೆ. ಕೃಷಿ ಕುಟುಂಬದಲ್ಲಿ ಹುಟ್ಟಿದ್ರೂ ನಿಮ್ಮಗುರಿ, ನಿಮ್ಮ ಕನಸೇ ಬೇರೆ ಇತ್ತು. ಆದರೆ ಎಷ್ಟು ಬೇಗ ಗುರಿಯನ್ನು ಬದಲಾಯಿಸಿಕೊಂಡು, ಬದುಕು ಬಂದಂತೆ ಸ್ವೀಕರಿಸಬೇಕು ಅನ್ನುವುದನ್ನು ತೋರಿಸಿಬಿಟ್ಟಿರಿ. ನಿಜಕ್ಕೂ ನಿಮ್ಮ ಬದುಕು ಬೇರೆಯವರಿಗೆ ಮಾದರಿಯಾಗಿದೆ, ಸ್ಫೂರ್ತಿಯಾಗಿದೆ ಹ್ಯಾಟ್ಸಾಫ್ ಇಳಾ’ ಮನಃಪೂರ್ವಕವಾಗಿ ಮೆಚ್ಚುಗೆ ಸೂಚಿಸಿದ ನಿವಾಸ್. ಸ್ಫೂರ್ತಿಗೂ ಅಭಿಮಾನ ತುಂಬಿ ಬಂತು. ಮೊದಲ ನೋಟದಲ್ಲಿ ಏನೂ ತಿಳಿಯದ ಸಾಮಾನ್ಯ ಹುಡುಗಿ ಅಂತ ಅಂದುಕೊಂಡಿದ್ದಳು. ಇಷ್ಟೊಂದು ಗಂಭೀರವಾಗಿ ಕೃಷಿ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದಾಳೆ ಅನ್ನೋದು ತಿಳಿದ ಮೇಲೆ ಅವಳ ಮೇಲಿನ ಸ್ನೇಹ ಇನ್ನೂ ಹೆಚ್ಚಾಗಿ, ಮೆಲ್ಲನೆ ಅವಳ ಕೈ ಅದುಮಿದಳು. ನೂರು ಮಾತು ಹೇಳಲಾರದ್ದನ್ನು ಆ ಒಂದು ಸ್ಪರ್ಶ ಹೇಳಿತು. ಇಳಾ ಕೂಡ ಅದೇ ವಿಶ್ವಾಸದಿಂದ ಅವಳ ಸ್ನೇಹವನ್ನು ಸ್ವೀಕರಿಸಿದಳು.

ಊಟ ಮುಗಿಸಿ ಬಸ್ಟಾಂಡಿಗೆ ಬಂದರು. ಸಕಲೇಶಪುರದ ಬಸ್ಸು ರೆಡಿಯಾಗಿತ್ತು. ಅವಳನ್ನು ಬಸ್ ಹತ್ತಿಸಿ ಕೈ ಬೀಸಿ, ನಿವಾಸ್, ಸ್ಫೂರ್ತಿ ಚನ್ನರಾಯಪಟ್ಟಣದ ಬಸ್ಸು ನಿಲ್ಲುವ ಕಡೆ ಹೆಜ್ಜೆ ಹಾಕಿದರು.

‘ಸ್ಫೂರ್ತಿ, ಇಳಾನ ನೋಡಿದ್ರೆ ಅಯ್ಯೋ ಅನಿಸುತ್ತೆ. ಆದ್ರೆ ಹಾಗೇನಾದ್ರೂ ತೋರಿಸಿಬಿಟ್ಟರೆ, ಅವಳು ನಮ್ಮಜೊತೆ ಸೇರೋದೆ ಬಿಟ್ಟುಬಿಡುತ್ತಾಳೇನೋ. ಮಹಾ ಸ್ವಾಭಿಮಾನಿ ಹುಡುಗಿ. ಅಪ್ಪ ಶುಂಠಿ ಬೆಳೆದು ನಷ್ಟ ಹೊಂದಿ ಆತ್ಮಹತ್ಯೆ ಮಾಡಿಕೊಂಡ ಮೇಲೆ ಅವಳ ಬದುಕಲ್ಲಿ ಏನೇನು ನಡೆದು ಹೋಗಿ- ಅಪ್ಪ ಸೋತಲ್ಲಿ ತಾನು ಗೆಲ್ಲಬೇಕು ಅನ್ನೋ ಹಠ ಹಿಡಿದು ತೋಟದಲ್ಲಿ ನಿಂತಿದ್ದಾಳೆ. ಪ್ರಾಯಶಃ ಅವಳಿಗೆ ಯಾವ ಸೇಹಿತೆಯರೂ ಹತ್ತಿರದಲ್ಲಿಲ್ಲ ಅಂತ ಕಾಣುತ್ತೆ. ನೀನು ಅವಳಿಗೆ ಒಳ್ಳೆ ಗೆಳತಿಯಾಗಿದ್ದು ಅವಳ ಮನಸ್ಸಿಗೆ ಸಮಾಧಾನ ತರೋ ಕೆಲ್ಸ ಮಾಡಬೇಕು. ಅವಳಿಂದ ನಮ್ಮ ಸಂಘಟನೆಗೂ ಒಂದು ಒಳ್ಳೆಯ ಕೊಡುಗೆ ಸಿಗಬಹುದು. ನಿಂಗೂ ಅವಳು ಒಳ್ಳೆ ಫ್ರೆಂಡಾಗ್ತಾಳೆ. ತುಂಬಾ ಒಳ್ಳೆ, ಹುಡುಗಿ. ಯಾವುದೇ ರೀತಿ ಅವಳಿಗೆ ಬೇಸರ ಆಗದೆ ಇರೊ ರೀತಿ ನೀನು ನೋಡಿಕೊಳ್ಳಬೇಕು’ ನಿವಾಸ್ ಕಳಕಳಿಯಿಂದ ಹೇಳಿದಾಗ

‘ಹೌದು ಸಾರ್. ನಂಗೂ ಹಾಗೇ ಅನ್ನಿಸಿದೆ. ತುಂಬಾ ಒಳ್ಳೆ ಹುಡುಗಿ, ನಂಗೆ ತುಂಬಾ ಇಷ್ಟವಾಗಿದ್ದಾಳೆ. ನೋಡ್ತಾ ಇರಿ ನಾವಿಬ್ಬರೂ ಹೇಗೆ ಬೆಸ್ಟ್‌ಫ್ರೆಂಡ್ ಆಗ್ತೀವಿ ಅಂತಾ. ನಂಗೋಸ್ಕರನಾದ್ರೂ ಅವಳು ಈ ಸಂಘಟನೆಯಲ್ಲಿ ಉಳಿಬೇಕು ಹಾಗೆ ಮಾಡ್ತೇನೆ. ನಾವು ಮಾಡ್ತ ಇರೋದು ಒಳ್ಳೆ ಕೆಲಸ ಅಲ್ಲಾ ಸಾರ್. ಅವಳ ತಂದೆ ಮಾಡಿಕೊಂಡ ಹಾಗೆ ಬೇರೆಯವರು ಮಾಡಿಕೊಳ್ಳಬಾರದು ಅಂತ ತಾನೇ ಅವಳ ಆಲೋಚನೆ. ಯಾವ ಕಾರಣಕ್ಕೂ ಅವಳಿಗೆ ಇಲ್ಲಿ ಬೇಸರ ಆಗೋ ಹಾಗೆ ಮಾಡಲ್ಲ, ನೀವೇ ನೋಡ್ತೀರಲ್ಲ’ ಭರವಸೆ ನೀಡಿದಳು.

ಸ್ಫೂರ್ತಿಗೆ ನಿವಾಸನನ್ನು ಕಂಡರೆ ತುಂಬಾ ಅಭಿಮಾನ. ಅಷ್ಟೊಂದು ಓದಿಕೊಂಡು ಒಳ್ಳೆ ಸಂಬಳ ಕೊಡುವ ಕೆಲಸವನ್ನು ಬಿಟ್ಟು ಕೃಷಿ ನಂಬಿ ಬದುಕುತ್ತ, ಹೊಸ ಹೊಸ ಅವಿಷ್ಕಾರಗಳನ್ನು ಕೃಷಿ ಭೂಮಿಯಲ್ಲಿ ಕಂಡುಹಿಡಿಯುತ್ತ ಇತರರಿಗೆ ಮಾದರಿಯಾಗಿ ನಿಂತು ಪ್ರಗತಿಪರ ರೈತನೆಂದು ಅನೇಕ ಪ್ರಶಸ್ತಿ ಪಡೆದರೂ, ಅಹಂಕಾರ ಪಡದೆ ತನ್ನಂತಹ ಸಾಮಾನ್ಯರೊಂದಿಗೊ ಸರಳವಾಗಿ ಇರುವುದು ಅವಳು ಮೆಚ್ಚುವ ವಿಚಾರವಾಗಿತ್ತು. ತಮ್ಮೂರಿನ ಪಕ್ಕದ ಊರಿನಲ್ಲಿಯೇ ನಿವಾಸ ಜಮೀನು ಕೊಂಡು ಪಕ್ಕಾ ರೈತನಂತೆ ಹೊಲಕ್ಕಿಳಿದು ಕೆಲಸ ಮಾಡುತ್ತಿರುವುದು ಅವಳು ಅವನನ್ನು ಮೆಚ್ಚಲು ಮತ್ತೊಂದು ಕಾರಣವಾಗಿತ್ತು. ತಾನು ಹೋಗುವ ಕಾರ್ಯಕ್ರಮದಲ್ಲೆಲ್ಲ ತನ್ನ ತಂದೆಯನ್ನು ಕರೆದುಕೊಂಡು ಹೋಗುವುದು, ಅವರು ಬಾರದಿದ್ದ ದಿನ ತನ್ನನ್ನು ಕರೆದುಕೊಂಡು ಹೋಗಿ ಮಾತನಾಡಲು ಅವಕಾಶ ಕಲ್ಪಿಸಿಕೊಡುವುದು, ಇದೆಲ್ಲ ಅವನ ಒಳ್ಳೆಯತನವೇ ಆಗಿದೆ. ತಾನೊಬ್ಬನೇ ಬೆಳೆಯದೆ ತನ್ನ ಸುತ್ತ ಇರುವವರನ್ನು ಬೆಳೆಸಿ, ಆ ಮೂಲಕ ತ್ರುಪ್ತಿಪಡುವ ನಿವಾಸ ಸ್ಫೂರ್ತಿಗೆ ಬಹಳ ಇಷ್ಟ.

ನಿವಾಸ ಸ್ಫೂರ್ತಿಗೆ ಹತ್ತಿರವಾಗಲು ಮತ್ತೊಂದು ಕಾರಣವಿತ್ತು. ವ್ಯವಸಾಯ ಮಾಡಿ ಸೋತು ಬಸವಳಿದಿದ್ದ ಸ್ಫೂರ್ತಿಯ ತಂದೆಗೆ ಹೂಸ ಆಲೋಚನೆಗಳನ್ನು ನೀಡಿ ಮಿಶ್ರ ಬೆಳೆ ಬೆಳೆಯುವಂತೆ ಪ್ರೋತ್ಸಾಹಿಸಿ ಅದಕ್ಕಾಗಿ ಧನ ಸಹಾಯ ಕೂಡ ಮಾಡಿದ್ದ. ನಾಲ್ಕೈದು ವರ್ಷಗಳಲ್ಲಿಯೇ ಮನೆಯ ಸಂಕಷ್ಟಗಳೆಲ್ಲ ತೀರಿ ನಾವೂ ಕೂಡ ಅನುಕೂಲಸ್ಥ ಮನೆಯವರು ಎನಿಸಿಕೊಂಡಿದ್ದು ನಿವಾಸನಿಂದಲೇ ಎಂದು ಸ್ಫೂರ್ತಿಯ ಮನೆಯವರಿಗೆಲ್ಲ ಅಭಿಮಾನ, ಪ್ರೀತಿ, ವಿಶ್ವಾಸ, ಹಾಗೆಂದೇ ನಿವಾಸ ಎಲ್ಲಿ ಕರೆದರೂ ಸ್ಫೂರ್ತಿಯನ್ನು ಹಿಂದೆ ಮುಂದೆ ಯೋಚಿಸದೆ ಕಳುಹಿಸಿಕೊಡುತ್ತಿದ್ದರು. ನಿವಾಸನೂ ಅಷ್ಟೆ, ಜೋಪಾನವಾಗಿ ಕಾಳಜಿಯಿಂದ ಕರೆದುಕೊಂಡು ಹೋಗಿ ಕರೆತರುತ್ತಿದ್ದ. ಅವನ ಒಡನಾಟದಲ್ಲಿ ಅವನ ಬಗ್ಗೆ ವಿಶೇಷ ಭಾವನೆಯೊಂದು ಅವಳಲ್ಲಿ ಬೆಳೆಯುತ್ತಿತ್ತು. ಅದರ ಅರಿವಿರದ ನಿವಾಸ್ ಅವಳೊಂದಿಗೆ ಸಹಜವಾಗಿಯೇ ಇರುತ್ತಿದ್ದ. ಸ್ಫೂರ್ತಿ ಕೂಡ ತನ್ನ ಮನದ ಭಾವನೆ ಎಲ್ಲಿಯೂ ತೋರದಂತಿರುತ್ತಿದ್ದಳು. ಎಲ್ಲೋ ದೂರದಲ್ಲಿ ಆಸೆಯ ಮಿಣುಕೊಂದು ಮಿನುಗುತ್ತಿತ್ತು. ಆ ಮಿಣುಕಿನ ಬೆಳಕಿನಲ್ಲಿ ಇರುವುದೇ ಅವಳಿಗೆ ಖುಷಿ ಕೊಡುತ್ತಿತ್ತು.

‘ಹಲೋ ಸ್ಫೂರ್ತಿ. ಎಲ್ಲಿ ಹೊರಟುಹೋದೆ. ನಾನು ಮಾತಾಡ್ತಾನೇ ಇದ್ದೇನೆ, ನೀನು ಎಲ್ಲೋ ಕಳೆದುಹೋಗಿದ್ದೀಯಾ’ ನಿವಾಸ ಎಚ್ಚಿರಿಸಿದಾಗ ಮೆಲ್ಲನೆ ನಕ್ಕಳು. ಸುಮ್ಮನೆ ನಕ್ಕ ಅವಳನ್ನು ಕಂಡು ‘ಏನಾಯ್ತು ಹುಡುಗಿ, ಸುಮ್ನೆ ನಗ್ತಾ ಇದ್ದೀಯಾ. ಹಾಗೆಲ್ಲ ಸುಮ್ಮಸುಮ್ನೆ ನಗಬಾರದಮ್ಮ. ಅದು ಮನಸ್ಸಿನ ಆರೋಗ್ಯಕ್ಕೆ ಒಳ್ಳೆಯದಲ್ಲ’ ರೇಗಿಸಿದ.

‘ಹೋಗಿ ಸಾರ್, ಹಾಗೇನು ಇಲ್ಲ. ನೀವು ಹೇಳೋ ಹಾಗೆ ನಾನೇನು ಸುಮ್ಮಸುಮ್ನೆ ನಕ್ಕು ಮೆಂಟಲ್ ಥರ ಆಡ್ತ ಇಲ್ಲ. ಏನೋ ನೆನಪಾಗಿ ನಕ್ಕಿದ್ದು ಅಷ್ಟೆ’ ಸಮರ್ಥಿಸಿಕೊಂಡಳು.

‘ಅದ್ರೆ ಇಳಾ ನೋಡು.. ಎಷ್ಟೊಂದು ಗಂಭೀರವಾದ ಹುಡುಗಿ. ನಿನಗಿಂತ ಚಿಕ್ಕವಳು. ಈ ವಯಸ್ಸಿನಲ್ಲಿ ಅದೇನು ಗಾಂಭೀರ್ಯ. ರಿಯಲಿ ಐ ಲೈಕ್ ಹರ್, ಬೇರೆ ಯಾವುದೇ ಹುಡುಗಿ ಆಗಿದ್ರೂ ಏನಾಗಿಬಿಡ್ತ ಇದ್ರೋ?… ಬದುಕನ್ನ ಛಾಲೆಂಜ್ ಆಗಿ ತಗೊಂಡು ಬದುಕಿ ತೋರಿಸ್ತೀನಿ ಅಂತ ಹೊರಟಿದ್ದಾಳೆ. ವಯಸ್ಸಿಗೆ ಮೀರಿದ ತಿಳುವಳಿಕೆ. ಒಂದು ಕೆಲ್ಸ ಹಿಡಿದ ಮೇಲೆ ಅದಕ್ಕೆ ಬದ್ದಳಾಗಿರೋ ನಿಯತ್ತು. ಅದರ ಆಳಕ್ಕೆ ಇಳಿಯೋ ಪರಿಶ್ರಮ. ಒಟ್ಟಿನಲ್ಲಿ ಇಳಾ ವಿಶೇಷ ವ್ಯಕ್ತಿತ್ವ ಇರೋ ಹುಡುಗಿ. ಖಂಡಿತಾ ಅವಳು ಸಾಧನೆ ಮಾಡುತ್ತಾಳೆ. ಆ ವಿಶ್ವಾಸ ನಂಗಿದೆ’ ಎನ್ನುತ್ತ ಇಳಾಳನ್ನು ಹೊಗಳುತ್ತ ಮೈಮರೆತ ನಿವಾಸನನ್ನ ಸ್ಫೂರ್ತಿ ನೋಡಿಯೇ ನೋಡಿದಳು.

ಅರೆ, ಇಷ್ಟು ಬೇಗ ಇಳಾ ನಿವಾಸನನ್ನು ಮೆಚ್ಚಿಸಿಬಿಟ್ಟಳೇ, ಅಂತಹ ಗುಣಗಳೇನಪ್ಪ ಅವಳಲ್ಲಿ ಇದೆ ಎಂದು ಚಿಂತಿಸುವಂತಾಯಿತು ಸ್ಫೂರ್ತಿಗೆ. ಈ ನಿವಾಸ್ ಇರುವುದೇ ಹೀಗೆ. ಮೆಚ್ಚುವ ಗುಣ ಅವನಲ್ಲಿ ಸಹಜವಾಗಿಯೇ ಇದೆ. ಇನ್ನು ಇಳಾಳಂತ ಹುಡುಗಿಯರ ಬಗ್ಗೆ ಮೆಚ್ಚದೆ ಇರಲು ಸಾಧ್ಯವೆ? ಎಂದು ತನ್ನನ್ನು ತಾನು ಸಮಾಧಾನ ಮಾಡಿಕೊಂಡಳು. ಅಷ್ಟರಲ್ಲಿ ಬಸ್ಸು ಬಂತು. ಬೇರೆ ಬೇರೆ ಕಡೆ ಸೀಟು ಸಿಕ್ಕಿದ್ದರಿಂದ ಮಾತನಾಡಲಾಗಲಿಲ್ಲ. ಇಳಾಗೂ ಕೂಡ ನಿವಾಸನ ಬಗ್ಗೆ ಅಪಾರ ಮೆಚ್ಚುಗೆ ಅಭಿಮಾನ ಇರುವುದು ಗೋಚರಿಸಿತ್ತು ಎಲ್ಲೊ ಒಂದು ಕಡೆ ಹೃದಯ ಚುಳ್ ಎನಿಸಿದರೂ ಅದನ್ನೇನು ಗಂಭೀರವಾಗಿ ತೆಗೆದುಕೊಳ್ಳುವ ಹುಡುಗಿಯಾಗಿರಲಿಲ್ಲ ಸ್ಫೂರ್ತಿ. ಬಸ್ಸಿನಿಂದ ಇಳಿಯುವಷ್ಟರಲ್ಲಿ ಸ್ಫೂರ್ತಿಯ ಅಪ್ಪ ಕಾಯುತ್ತ ಇದ್ದರು. ಮಗಳು ಇಂದು ಬರುವ ವಿಚಾರ ತಿಳಿದಿದ್ದರಿಂದ ಮನೆಗೆ ಕರೆದೊಯ್ಯಲು ಬೈಕ್ ತೆಗೆದುಕೊಂಡು ಬಂದಿದ್ದರು. ಇವರು ಬಾರದೆ ಇದ್ದರೂ ನಿವಾಸ್ ಸ್ಫೂರ್ತಿಯನ್ನು ತನ್ನ ಬೈಕಿನಲ್ಲಿಯೇ ಮನೆ ತಲುಪಿಸುತ್ತಿದ್ದ. ಆದರೆ ಅದು ಯಾಕೋ ಬೇಡವೆನಿಸಿ ತಾವೇ ಬಂದಿದ್ದರು. ಅವರನ್ನು ಸೋಡಿ ಆಚರ್ಯದಿಂದ ನಿವಾಸ್ ‘ಗೌಡ್ರೆ ನೀವು ಯಾಕೆ ಬರೋಕೆ ಹೋದ್ರಿ. ನಾನೇ ನಿಮ್ಮ ಮಗಳನ್ನು ಕರ್ಕೊಂಡು ಬರುತ್ತಿದ್ದನಲ್ಲ’ ಎಂದು ಹೇಳಿದಾಗ-

‘ನಾನು ತರಕಾರಿ ತಗೊಂಡು ಬಂದಿದ್ದೆ. ಹಾಗೇ ಇವಳನ್ನು ಕರ್ಕೊಂಡು ಹೋಗೋಣ ಅಂತ ಬಂದಿದ್ದೀನಿ’ ಅಂತ ಹೇಳಿ ಮಗಳನ್ನು ಕರ್ಕೊಂಡು ಹೊರಟರು. ಅಪ್ಪ ಬಂದಿದ್ದು, ಅಪ್ಪನ ಜೊತೆಯಲ್ಲಿ ಹೋಗಬೇಕಾದದ್ದು ಕೊಂಚ ಬೇಸರ ಎನಿಸಿದರೂ, ಅದನ್ನು ತೋರಿಸಿಕೊಳ್ಳದೆ ನಿವಾಸ್‌ಗೆ ಬರ್ತೀನಿ ಅಂತ ಹೇಳಿ ಕೈ ಬೀಸಿದಳು.

ಇವತ್ತು ಸಂಜೆ ಸ್ಫೂರ್ತಿಯನ್ನು ನೋಡಲು ಗಂಡಿನ ಕಡೆಯವರು ಬರುವವರಿದ್ದರು. ಸಂಬಂಧ ಸರಿ ಎನಿಸಿದರೆ ಮದುವೆ ಮಾಡೇಬಿಡುವ ಮೂಡ್‌ನಲ್ಲಿದ್ದರು. ಸ್ಫೂರ್ತಿ ಮನೆಗೆ ಬಂದ ಮೇಲೆಯೇ ಈ ವಿಚಾರ ತಿಳಿದಿದ್ದು. ತಾನು ಇನ್ನೂ ಓದುತ್ತಿರುವಾಗಲೇ ಗಂಡು ಬರೋಕೆ ಯಾಕೆ ಒಪ್ಕೊಂಡೆ ಅಂತ ಕೂಗಾಡಿದಳು. ಅವರಪ್ಪ ನಕ್ಕು ಸುಮ್ಮನಾಗಿಬಿಟ್ಟರು. ಮನೆಗೆ ಬಂದರೂ ಮುಖ ದುಮ್ಮಿಸಿಕೊಂಡೇ ಇದ್ದಳು. ಬಂದವರ ಮುಂದೆ ಮನೆಯವರಿಗೆ ಅವಮಾನವಾಗಬಾರದೆಂದು ಬೇಕಾಬಿಟ್ಟಿ ಡ್ರೆಸ್ ಮಾಡಿಕೊಂಡು ಕಾಫಿ ತಿಂಡಿ ಕೊಟ್ಟು ಬಂದಳು. ಹುಡುಗನನ್ನು ಕತ್ತೆತ್ತಿಯೂ ನೋಡಲಿಲ್ಲ. ಬಂದವರು ಒಪ್ಪಿದರೋ ಬಿಟ್ಟರೋ ಒಂದೂ ಕೇಳದೆ ಬೆಳಗಾಗುವುದನ್ನೆ ಕಾಯುತ್ತಿದ್ದು ಕಾಲೇಜಿಗೆ ಹೊರಟುಬಿಟ್ಟಳು.

ತಾನಿನ್ನು ಈ ಊರಿಗೆ ಬರಬಾರದು, ಬೇಗ ಡಿಗ್ರಿ ಮುಗಿಸಿ ಒಂದು ಕೆಲಸ ಹಿಡಿಯಬೇಕು. ಯಾರೋ ಒಬ್ಬನಿಗೆ ಕಟ್ಟಿ ಮುಗಿಸಿಬಿಟ್ಟರೆ ಆಗಿಹೋಯಿತು ಅಲ್ಲಿಗೆ ಜವಾಬ್ದಾರಿ ಮುಗಿಸಿದಂತೆ. ಮಕ್ಕಳ ಮನಸ್ಸು ಹೇಗಿದೆ ಎಂದು ತಿಳಿದುಕೊಳ್ಳುವ ಗೋಜಿಗೆ ಹೋಗುವುದಿಲ್ಲ ಈ ಹೆತ್ತವರು. ಛೇ ಏನು ಜನ್ಮವೋ ಈ ಹೆಣ್ಣಿನದ್ದು. ಮೊದಲ ಬಾರಿಗೆ ತಾನು ಹೆಣ್ಣಾಗಿ ಹುಟ್ಟಿದ್ದಕ್ಕೆ ನೊಂದುಕೊಂಡಳು. ಏನೇ ಆಗಲಿ ತನ್ನ ಮನಸ್ಸಿನ ವಿರುದ್ದ ತಾನು ನಡೆದುಕೊಳ್ಳಲಾರೆ. ಎಲ್ಲಾ ಹೆಣ್ಣು ಮಕ್ಕಳಂತೆ ಮದುವೆಯೇ ಸರ್ವಸ್ವ ಎಂದು ಭಾವಿಸಿ ವಿವಾಹ ಬಂಧನಕ್ಕೆ ಕೊರಳೊಡ್ಡಲಾರೆ ಎಂದು ಶಪಥ ಮಾಡಿದಳು. ಮದುವೆಯಾಗುವುದೇ ಆದರೆ ತನ್ನಂತೆಯೇ ಅಭಿರುಚಿ ಉಳ್ಳವರು ಆಗಿರಬೇಕು. ತನ್ನ ಆಸೆ, ಅಸಕ್ತಿ, ಅಭಿರುಚಿಗೆ ಹೊಂದುವ ವ್ಯಕ್ತಿ ಎಂದರೆ ನಿವಾಸನಂತಿರಬೇಕು. ಅಥವಾ ನಿವಾಸನೇ ಆಗಬಾರದೇಕೆ?… ದೂರದಲ್ಲೆಲ್ಲೋ ಮಿನುಗುತ್ತಿದ್ದ ಆಸೆಯ ದೀಪ ಈಗ ಹತ್ತಿರದಲ್ಲಿಯೇ ಪ್ರಕಾಶಮಾನವಾಗಿ ಉರಿಯತೊಡಗಿದಾಗ ಬೆಚ್ಚಿದಳು. ಇದು ಸಾಧ್ಯವೇ ಎನಿಸಿ ಅವಳ ಹೃದಯ ಒದ್ದಾಡಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜನತೆಯೊಂದೆ
Next post ಮಿಂಚುಳ್ಳಿ ಬೆಳಕಿಂಡಿ – ೪೭

ಸಣ್ಣ ಕತೆ

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

cheap jordans|wholesale air max|wholesale jordans|wholesale jewelry|wholesale jerseys