ಚರಿತೆಯ ಚಮತ್ಕಾರದಿಂದೊಡೆಯಿತೆಮ್ಮ ಜನ
ಎರಡಾಗಿ: ಆದರೊಂದೇ, ನಿಜಕು ಜನತೆಯೊಂದೆ:
ಹೊರಗಣಿನಿಸಿನ ಭೇದ ಭೇದವೇ? ಆ ತಂದೆ
ಇಬ್ಬರಿಗು ದೈವವೆನೆ, ಒಪ್ಪದಿದೆ ಮೂಢ ಮನ.

ಒಂದು ಮುಸ್ಲಿಮರೊಂದೆ: ಇದನರಿಯಬೇಕು ಜನ:
ಮೆಲಿನಾ ಬಾನೊಂದೆ; ನಡೆವ ನೆಲ ತಾನೊಂದೆ;
ಕುಡಿಯುವಾ ನೀರೊಂದೆ;-ಬಸಿರೊಂದೆ, ಉಸಿರೊಂದೆ:
ಅರ್ತಿಯಿಂದಾರಯ್ಯೆ ಅರಿವುದೀ ಒಂದುತನ.

ಇಂತಿರಲು, ಪುಟ್ಟ ಭೇದವ ಬೆಟ್ಟದನಿತೆಣಿಸಿ,
ತಾವಣ್ಣ ತಮ್ಮದಿರು ಎಂಬ ನಂಟನು ಮರೆದು,
ತಾಯ ಸೆರೆಯನು ಬಿಡಿಪ ಕರ್ತವ್ಯವನು ತೊರೆದು,
ಆತ್ಮವನು ಮಿಸುಕಿ ಮಮಕಾರಭೂತವ ತಣಿಸಿ

ಭ್ರಾತೃವಧ ಗೈದು ಕೆನ್ನೀರಿನಲಿ ಕೈತೊಳೆಯೆ
ಫಲವೇನು? ‘ಛಿಃ!’ ಎನದೆ ಭಾರತವ ಇಳೆಗೆ ಇಳೆಯೆ?
*****