ಇಗೊ ಸಂಜೆ, ಸಖಿ,
ಚೆಂಬೊಗರಿಂ ರಂಗೇರಿಹ ಜಲದಾಬ್ಜಮುಖಿ
ತುಸ ತುಟಿತೆರೆದು
ಶಿಶುಚಂದ್ರನ ನಗೆ ನಗುವಳು ಸ್ವಾಗತವೊರೆದು;
ನಿನ್ನು ಸಿ‌ರ್‌ ಕಂಪ
ಕೊಳ್ಳಲು ಎಲರ್ ತರುತಿಹನೀ ಬನದಲರಿಂಪ;
ಓ ಚಪಲಾಕ್ಷಿ,
ಎನ್ನೆದೆಯಾಗಸದೊಳು ಬಿಡು ಅಕ್ಷಿಯ ಪಕ್ಷಿ,
(ಇಗೊ ಸಂಜೆ, ಸಖಿ,…)

ಆವಲು ಹೂವ
ಮುಟ್ಟಲು ಓಡುವ ತೆರೆಗಳ ನಿಟ್ಟಿಸುತಿರುವ,
ಬಾನಿಗೆ ಬೆಳೆವ
ಹಕ್ಕಿಯ ಪಟ್ಟಣವಾಗಿಹ ತರುಗಳಿಗೊಲಿವ,
ನನ್ನನೆ ಮರೆವ
ಬೇರೆಲ್ಲೆಡೆ ಬಲು ಬೆರಗಿನ ಭಾವವನಿಡುವ
ಕೊಂಕೇತಕೆಯೆ?
ಸಂಗಮದೊಳೆ ವಿರಹವ ತರುವೀ ಬಗೆ ಸರಿಯೆ!
(ಇಗೊ ಸಂಜೆ, ಸಖಿ….)

ಮೋಹದ ಮನಕೆ
ಪ್ರೇಮದ ಕಿಡಿ ಹೊತ್ತಿದವೊಲು, ಪ್ರಿಯ, ಈ ತಮಕೆ
ತಾರಗೆಯಾಯ್ತು;
ವಿರಾಗಿ ಬೈಗಿನ ಹೃದಯದಿ ವಿಷಾದ ಹೋಯ್ತು;
ನಾ ಬೈರಾಗಿ,
ಇನ್ನೆಲ್ಲಿಯು ರುಚಿ ಕಾಣದೆ ತವಿಸುತ್ತಿಹ ಯೋಗಿ;
ಓ ಎನ್ನೊಲವೇ,
ಒಳಪೊಗೆವಾಸೆಗೆ ಕಡೆಕಣ್ ಕಿಡಿ ಎಂದಿಡುವೆ?
(ಇಗೊ ಸಂಜೆ, ಸಖಿ….)
*****